Government of Karnataka

Department of Information

Tuesday 23/01/2018

ಭಾರತದ 68 ನೇ ಗಣರಾಜ್ಯೋತ್ಸವ: ರಾಜ್ಯದ ಜನತೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಮುಖ್ಯಮಂತ್ರಿಯವರ ಸಂದೇಶ

Date : ಗುರುವಾರ, ಜನವರಿ 26th, 2017

ಭಾರತದ 68 ನೇ ಗಣರಾಜ್ಯೋತ್ಸವ
ಸನ್ಮಾನ್ಯ ಮುಖ್ಯಮಂತ್ರಿಯವರ ಸಂದೇಶ
26-01-2017 / ಬೆಳಿಗ್ಗೆ 8-30 ಗಂಟೆ / ದೂರದರ್ಶನ ಚಂದನ ವಾಹಿನಿ, ಬೆಂಗಳೂರು

ನಾಡಬಾಂಧವರೇ, ನಿಮಗೆಲ್ಲರಿಗೂ 68 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

1. ಭಾರತವು ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2017 ರ ಜನವರಿ 26 ಕ್ಕೆ 67 ವರ್ಷಗಳು ತುಂಬುತ್ತಿದೆ. ಭಾರತೀಯರಿಗೆ ಸ್ವಾತಂತ್ರ್ಯ ಪಡೆದ ದಿನವಾದ ಆಗಸ್ಟ್ 15 ರಷ್ಟೇ ಮಹತ್ವದ ದಿನ ಇದಾಗಿದೆ.

2. ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿ ಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ.

3. ವಿಶ್ವಕ್ಕೇ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

4. ಸಾವಿರಾರು ಜಾತಿಗಳು, ನೂರಾರು ಭಾಷೆಗಳು, ಹತ್ತಾರು ಮತ-ಧರ್ಮಗಳಿಂದ ತುಂಬಿ ಕೊಂಡಿರುವ ಭಾರತದಲ್ಲಿ ಕರ್ನಾಟಕ ತನ್ನದೇ ಆದ ವಿಶಿಷ್ಠ ಚರಿತ್ರೆ ಹಾಗೂ ಪರಂಪರೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಸಾಮಾಜಿಕ ಅಸಮಾನತೆಗಳ ವಿರುದ್ಧ ನಿರಂತರ ಹೋರಾಟ ನಡೆಸಿದ ದೀರ್ಘ ಪರಂಪರೆಯೂ ನಮ್ಮ ಕರ್ನಾಟಕಕ್ಕಿದೆ.

5. ಜಾತಿ-ಧರ್ಮಗಳ ಭೇದವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಸಿಗಬೇಕೆಂಬ ಸರ್ವೋದಯದ ಉದಾತ್ತ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಜಾರಿಗೊಳಿಸಿದ ಯೋಜನೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಈ ಯೋಜನೆಗಳು ಸಂವಿಧಾನದ ಆಶಯಗಳೇ ಆಗಿವೆ.

6. ನಮ್ಮ ಸಾಧನೆಯ ಮುಖ್ಯಾಂಶಗಳನ್ನು ಈ ಸಂದರ್ಭದಲ್ಲಿ ನಮ್ಮ ಪ್ರಭುಗಳಾದ ನಿಮ್ಮ ಮುಂದಿಡುವುದು ಮುಖ್ಯಮಂತ್ರಿಯಾಗಿ ನನ್ನ ಉತ್ತರದಾಯಿತ್ವ ಎಂದು ನಾನು ನಂಬಿದ್ದೇನೆ.

7. ಶಿಕ್ಷಣ ನಮ್ಮ ಆದ್ಯತೆಯ ಕ್ಷೇತ್ರಗಳಲ್ಲೊಂದು. ನಮ್ಮ ಸರ್ಕಾರ 62.59 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, 47.45 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, 4.92 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್, 61.45 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಹಾಲು ನೀಡುತ್ತಿದೆ.

8. ಶಿಕ್ಷಣದ ಹಕ್ಕು ಕಾಯಿದೆಯಡಿ ಬಡ ಕುಟುಂಬಗಳಿಗೆ ಸೇರಿರುವ 4.46 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗಿದ್ದು, ಅವರ ಶಿಕ್ಷಣ ಶುಲ್ಕವನ್ನು ಸರ್ಕಾರ ಪಾವತಿಸಿದೆ. ಇದರ ಜೊತೆ ಶಾಲೆಗಳಲ್ಲಿನ ಮೂಲ ಸೌಕರ್ಯದ ಅಭಿವೃದ್ದಿ, ಬೋಧನಾ ಕೌಶಲದ ಸುಧಾರಣೆಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.

9. ನಮ್ಮ ಸರ್ಕಾರ ಈ ವರ್ಷ 1400 ಅಂಗನವಾಡಿಗಳನ್ನು ತೆರೆದಿದ್ದು, ಈ ಮೂಲಕ ರಾಜ್ಯದ ಅಂಗನವಾಡಿಗಳ ಒಟ್ಟು ಸಂಖ್ಯೆ 66,000ಕ್ಕೆ ಏರಿಕೆಯಾಗಿದೆ. 11,500 ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆಯನ್ನು ಸಧ್ಯದಲ್ಲೇ ಅನುಷ್ಠಾನಗೊಳಿಸಲಾಗುವುದು. ಮಹಿಳೆಯರ ಸಬಲೀಕರಣದ ಉದ್ದೇಶದಿಂದ ರಾಜ್ಯದಲ್ಲಿ 30 ಸ್ತ್ರೀ ಶಕ್ತಿ ಜಿಲ್ಲಾ ಒಕ್ಕೂಟಗಳನ್ನು ಸ್ಥಾಪಿಸಲಾಗಿದೆ.

10. ಹಸಿವು-ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿಯಾಗಿದೆ. ರಾಜ್ಯದ ಒಂದು ಕೋಟಿ ಕುಟುಂಬಗಳ ಸದಸ್ಯರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ವರ್ಷ ಅಕ್ಕಿಯ ಜೊತೆಯಲ್ಲಿ ವಿಟಮಿನ್ ಎ ಮತ್ತು ಡಿ ಉಳ್ಳ ಪೌಷ್ಠಿಕಾಂಶಗಳನ್ನೊಳಗೊಂಡ ತಾಳೆಎಣ್ಣೆ ಹಾಗೂ ಕಬ್ಬಿಣಾಂಶವುಳ್ಳ ಉಪ್ಪನ್ನು ಕೂಡಾ ನೀಡಲಾಗುತ್ತಿದೆ.

11. ಈ ವರ್ಷದ ಫೆಬ್ರವರಿಯಿಂದ ಶೇಕಡಾ 50 ರ ದರದಲ್ಲಿ ಬೇಳೆಯನ್ನು ನೀಡಲು ಕೂಡಾ ನಿರ್ಧರಿಸಲಾಗಿದೆ.

12. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸತತವಾಗಿ ಬರಗಾಲಕ್ಕೀಡಾಗಿದ್ದರೂ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದೆ ಎನ್ನುವ ತೃಪ್ತಿ ನನಗಿದೆ. ಈ ವರ್ಷ 139 ತಾಲ್ಲೂಕುಗಳು ಬರಗಾಲಕ್ಕೀಡಾಗಿವೆ.

13. ಬರಪೀಡಿತ ಪ್ರದೇಶಗಳಿಗೆ ನಾನು ಮತ್ತು ನಮ್ಮ ಸಚಿವರು ಭೇಟಿ ನೀಡಿ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ರೈತರಿಗೆ ನೀಡುತ್ತಿರುವ ಸಾಲದ ಪ್ರಮಾಣ ಶೇಕಡಾ 50 ರಷ್ಟು ಹೆಚ್ಚಾಗಿದೆ. ಈವರ್ಷದ ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಸಾಲದ ಅಸಲು ಪಾವತಿಸಿದರೆ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ.

14. ಈಗಾಗಲೇ 1800 ಕೋಟಿ ರೂ ಗಳಷ್ಟು ಬಾಕಿ ಬಡ್ಡಿಯನ್ನು ಸರ್ಕಾರವೇ ಭರಿಸಿದೆ. ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸುಮಾರು 29,000 ಕೋಟಿ ರೂ. ಸಾಲ ಪಡೆದಿದ್ದಾರೆ. ಇದರ ಅರ್ಧದಷ್ಟನ್ನಾದರೂ ಕೇಂದ್ರ ಸರ್ಕಾರ ಮನ್ನಾ ಮಾಡಬೇಕೆಂಬುದು ನಮ್ಮ ಕೋರಿಕೆಯಾಗಿದೆ.

15. ಈ ವರ್ಷ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 330.06 ಕೋಟಿ ರೂ ಗಳನ್ನು ಬಿಡುಗಡೆ ಮಾಡಿ ಪರಿಹಾರ ಕಾರ್ಯಕ್ಕೆ ಹಣದ ಕೊರತೆಯಾಗದಂತೆ ನೋಡಿ ಕೊಂಡಿದೆ. ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ 4,072 ಕೋಟಿ ರೂಪಾಯಿ ನೆರವು ಕೇಳಿದ್ದೇವೆ. ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯ ಸಮಿತಿ 1,782 ಕೋಟಿ ರೂ ಬಿಡುಗಡೆಗೆ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಆ ಹಣದ ನಿರೀಕ್ಷೆಯಲ್ಲಿದೆ.

16. ನಮ್ಮದು ರೈತಪರ ಸರ್ಕಾರ ಎನ್ನುವುದು ಘೋಷಣೆಯಲ್ಲ, ಕಾರ್ಯಕ್ರಮಗಳ ಮೂಲಕ ಇದನ್ನು ಸಾಬೀತು ಪಡಿಸಿದ್ದೇವೆ. ರೈತರಿಗೆ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಬೆಲೆ ಕುಸಿತದ ಸಂದರ್ಭದಲ್ಲಿ ಮಾರುಕಟ್ಟೆ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆಯ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಿಸಿ ರೈತರಿಗೆ ಯೋಗ್ಯಬೆಲೆ ಸಿಗುವಂತೆ ಮಾಡಿದ್ದೇವೆ.

17. ಕೃಷಿಭಾಗ್ಯ ಅತ್ಯಂತ ಜನಪ್ರಿಯವಾದ ಕಾರ್ಯಕ್ರಮವಾಗಿದ್ದು ಇದರನ್ವಯ ಒಂದು ಲಕ್ಷ ಕೃಷಿ ಹೊಂಡಗಳು ಮತ್ತು 2450 ಪಾಲಿಹೌಸ್ ನಿರ್ಮಿಸಿದ್ದೇವೆ. ಮಳೆಯಾಶ್ರಿತ 129.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 63.71 ಲಕ್ಷ ಹೆಕ್ಟೇರ್ ಪ್ರದೇಶವನ್ನು ಜಲಾನಯನ ಅಭಿವೃದ್ದಿ ಯೋಜನೆಯಡಿ ಅಭಿವೃದ್ದಿಪಡಿಸಲಾಗಿದ್ದು, ಉಳಿದ 65.99 ಹೆಕ್ಟೇರ್ ಪ್ರದೇಶವನ್ನು ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುವುದು.

18. ರಾಜ್ಯದ 158 ಎಪಿಎಂಸಿಗಳ ಪೈಕಿ 153 ಎಪಿಎಂಸಿಗಳಲ್ಲಿ ಎಲೆಕ್ಟ್ರಾನಿಕ್ ಕೃಷಿ ಮಾರುಕಟ್ಟೆ ಸೌಲಭ್ಯ ಅಳವಡಿಸಲಾಗಿದೆ. ಇದು ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ರೈತರ ಹಾಲಿಗೆ ನೀಡುತ್ತಿದ್ದ ಸಹಾಯ ಧನವನ್ನು ಪ್ರತಿ ಲೀಟರ್‍ಗೆ ನಾಲ್ಕು ರೂ. ಗಳಿಂದ ಐದು ರೂ. ಗಳಗೆ ಶೀಘ್ರವೇ ಏರಿಸಲಾಗುವುದು. ಇದರಿಂದಾಗಿ 8.61 ಲಕ್ಷ ರೈತರಿಗೆ ಅನುಕೂಲವಾಗಲಿದೆ.

19. ರಾಜ್ಯದ ನೀರಾವರಿ ಯೋಜನೆಗಳಿಗೆ ಐದು ವರ್ಷಗಳ ಅವಧಿಯಲ್ಲಿ 50,000 ರೂಪಾಯಿ ನೀಡುವುದಾಗಿ ನಮ್ಮ ಸರ್ಕಾರ ಘೋಷಿಸಿತ್ತು. ನಾಲ್ಕೇ ವರ್ಷಗಳ ಅವಧಿಯಲ್ಲಿ 42,540.30 ಕೋಟಿ ರೂ ನೀರಾವರಿಗೆ ನೀಡಲಾಗಿದ್ದು ಕೃಷ್ಣಾ ಮತ್ತು ಕಾವೇರಿ ನದಿ ಕೊಳ್ಳದಲ್ಲಿ ಹಲವಾರು ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿವೆ.

20. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಪ್ರಸಕ್ತ ವರ್ಷ 19,542 ಕೋಟಿ ರೂ. ಖರ್ಚು ಮಾಡಲಾಗಿದೆ. ಡಾ ಬಿ. ಆರ್. ಅಂಬೇಡ್ಕರ್ 125ನೇ ಜನ್ಮದಿನದ ಅಂಗವಾಗಿ 125 ಹೊಸ ವಸತಿ ಶಾಲೆ ಮತ್ತು 100 ಮೆಟ್ರಿಕ್ ನಂತರದ ಹಾಸ್ಟೆಲ್ ಗಳನ್ನು ತೆರೆಯಲಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗಾಗಿ ಡಾ ಅಂಬೇಡ್ಕರ್ ಆವಾಸ್ ಯೋಜನೆಯಡಿ 2.5 ಲಕ್ಷ ವಸತಿಗಳನ್ನು ನಿರ್ಮಾಣಮಾಡಲಾಗಿದೆ. 13 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

21. ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯದಲ್ಲಿ ರಾಜ್ಯ ಸರ್ಕಾರ ದಾಪುಗಾಲು ಇಟ್ಟಿದೆ. ರಾಜ್ಯದಲ್ಲಿ 8,972 ಕಿ. ಮೀ. ಉದ್ದದ ರಾಜ್ಯ ಹೆದ್ದಾರಿ, 17,163 ಕಿ.ಮೀ. ಉದ್ದದ ಪ್ರಮುಖ ಜಿಲ್ಲಾ ರಸ್ತೆಗಳನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಇದು ಕೂಡಾ ರಾಜ್ಯದ ಇತಿಹಾಸದಲ್ಲಿ ದಾಖಲೆಯಾಗಿದೆ.

22. ಪ್ರತಿ ವರ್ಷ ಕನಿಷ್ಠ ಮೂರು ಲಕ್ಷ ಮನೆಗಳನ್ನು ನಿರ್ಮಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು 10,24,972 ಮನೆಗಳನ್ನು ನಿರ್ಮಿಸಿದ್ದು ಪ್ರಸಕ್ತ ವರ್ಷ 1,40,193 ಮನೆಗಳನ್ನು ನಿರ್ಮಿಸಿದ್ದೇವೆ ಮತ್ತು 8311 ನಿವೇಶನಗಳನ್ನು ಹಂಚಿದ್ದೇವೆ.

23. ಬೆಂಗಳೂರು ಎನ್ನುವುದು ಬಂಡವಾಳ ಹೂಡಿಕೆದಾರರ ಸ್ವರ್ಗ ಎಂಬ ಖ್ಯಾತಿಗೆ ಒಳಗಾಗಿದೆ. ಐಟಿ-ಬಿಟಿ ಕ್ಷೇತ್ರ ಪ್ರತಿ ವರ್ಷ ಶೇಕಡಾ ಹತ್ತರಷ್ಟು ಬೆಳವಣಿಗೆಯಾಗುತ್ತಿದೆ. ಈ ಕ್ಷೇತ್ರಗಳಲ್ಲಿ 70,000 ಉದ್ಯೋಗ ಸೃಷ್ಟಿಯಾಗಿದೆ. ನವೋದ್ಯಮದಲ್ಲಿ ನಾವು ಮೊದಲಿಗರಾಗಿದ್ದು, ರಾಜ್ಯದಲ್ಲಿ ಸುಮಾರು 4,000 ನವೋದ್ಯಮಗಳಿದ್ದು, ಎರಡು ವರ್ಷಗಳ ಅವಧಿಯಲ್ಲಿ ಒಂದು  ಬಿಲಿಯನ್ ರೂ. ಗಳಷ್ಟು ಬಂಡವಾಳ ಹರಿದು ಬಂದಿದೆ.

24. ಬೆಂಗಳೂರು ಎನ್ನುವುದು ಇಡೀ ಜಗತ್ತಿನಲ್ಲಿ ಅತ್ಯಂತ ಕ್ರಿಯಾಶೀಲ ನಗರಿ (ಡೈನಾಮಿಕ್ ಸಿಟಿ) ಎಂದು ವಿಶ್ವ ಆರ್ಥಿಕ ವೇದಿಕೆ ಘೋಷಿಸಿರುವುದು ನಾಡಿನ ಜನತೆ ಹೆಮ್ಮೆಯಿಂದ ಬೀಗುವಂತಾಗಿದೆ.

25. ಕೇಂದ್ರ ಸರ್ಕಾರವೇ ಇತ್ತೀಚೆಗೆ ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ ಕಳೆದ ವರ್ಷದ ಅವಧಿಯಲ್ಲಿ ಕರ್ನಾಟಕ ಹೂಡಿಕೆ ಉದ್ದೇಶದ 1,49,587 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ. ಇದಕ್ಕೆ ರಾಜ್ಯಸರ್ಕಾರದ ಉದ್ಯಮಸ್ನೇಹಿ ನಿಲುವು, ಹೊಸ ಕೈಗಾರಿಕಾ ನೀತಿ ಕೂಡಾ ಕಾರಣವಾಗಿದೆ.

26. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಮೊದಲ ಹಂತ ಪೂರ್ಣಗೊಳ್ಳುವ ಹಂತದಲ್ಲಿದ್ದು 42.38 ಕಿ. ಮೀ. ನಷ್ಟು ಮೆಟ್ರೋ ಮಾರ್ಗ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

27. ಸರ್ಕಾರದ ಯೋಜನೆಗಳು ನೂರಾರು. ಆದರೆ ಅವುಗಳ ಹಿಂದಿನ ಸದಾಶಯ ಮಾತ್ರ ಒಂದೇ. ಅದು ಸಮ ಸಮಾಜದ ನಿರ್ಮಾಣ, ಸರ್ವರಿಗೂ ಸಮಪಾಲು ಸಮಬಾಳು. ಸರ್ವರನ್ನು ಸಶಕ್ತರನ್ನಾಗಿಸಿ ಶಕ್ತಿಶಾಲಿ ರಾಜ್ಯಕಟ್ಟುವ ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ, ಬೆಂಬಲ, ಆಶೀರ್ವಾದ ಇರಲಿ ಎಂಬ ಮನವಿಯೊಂದಿಗೆ ತಮ್ಮೆಲ್ಲರಿಗೂ ಮತ್ತೊಮ್ಮೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಗಿಸುತ್ತೆನೆ.

ಜೈ ಹಿಂದ್ ! ಜೈ ಕರ್ನಾಟಕ !!