Government of Karnataka

Department of Information

Saturday 21/01/2017

ಹಿರಿಯ ವಕೀಲ ಫಯಾಜ್ ಮೊಹಮದ್ ಅವರ ನಿಧನಕ್ಕೆ ಮುಖ್ಯಮಂತ್ರಿ ಶೋಕ

Date : ಬುಧವಾರ, ಜನವರಿ 11th, 2017

ಬೆಂಗಳೂರು, ಜನವರಿ 11 (ಕರ್ನಾಟಕ ವಾರ್ತೆ) : ಮೈಸೂರಿನ ಹಿರಿಯ ವಕೀಲ ಫಯಾಜ್ ಮೊಹಮದ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ತಾವು ಶಾರದಾ ವಿಲಾಸ ಮಹಾವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡುವಾಗ ತಮ್ಮ ಸಹಪಾಠಿಯಾಗಿದ್ದ ಫಯಾಜ್ ಮೊಹಮದ್ ಅವರು ಪ್ರತಿಭಾಶಾಲಿಯಾಗಿದ್ದರು. ತದ ನಂತರವೂ ಕೂಡಾ ವಕೀಲ ವೃತ್ತಿಯನ್ನು ಒಟ್ಟಿಗೆ ಪ್ರಾರಂಭಿಸಿ ನ್ಯಾಯಾಲಯದ ಕಲಾಪಗಳಲ್ಲಿ ಫಯಾಜ್ ಮೊಹಮದ್ ಅವರೊಂದಿಗೆ ಒಟ್ಟಾಗಿ ಪಾಲ್ಗೊಳ್ಳುತ್ತಿದ್ದದ್ದು ಇದೀಗ ನೆನಪು ಮಾತ್ರ. ಕಕ್ಷಿದಾರರ ಜೊತೆಯಲ್ಲಿ ಸುಮಧುರ ಒಡನಾಟವನ್ನು ಇರಿಸಿಕೊಳ್ಳುತ್ತಿದ್ದ ಫಯಾಜ್ ಅಹಮದ್ ಅವರು ದಿನದ ತಮ್ಮ ಪ್ರಕರಣಗಳ ವಾದ-ಪ್ರತಿವಾದಗಳನ್ನು ಪೂರ್ಣಗೊಳಿಸಿ, ಮನೆಗೆ ಮರಳುವ ಮುನ್ನವೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ನ್ಯಾಯಾಲಯದ ಆವರಣದಲ್ಲೇ ಕುಸಿದು ಬಿದ್ದು ಮೃತರಾದರು ಎಂಬುದು ನನ್ನಲ್ಲಿ ಅತೀವ ದುಃಖ ಮತ್ತು ನೋವನ್ನು ಉಂಟು ಮಾಡಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಫಯಾಜ್ ಅಹಮದ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.