Government of Karnataka

Department of Information

Sunday 18/02/2018

ಜಿಲ್ಲಾ ವಾರ್ತೆ 05-01-2017

Date : ಗುರುವಾರ, ಜನವರಿ 5th, 2017

ಜಿಲ್ಲಾ ಸುದ್ದಿಗಳು:

ಜ. 08 ನವೋದಯ ಪ್ರವೇಶ ಪರೀಕ್ಷೆ

ಶಿವಮೊಗ್ಗ : ಜನವರಿ 05 (ಕರ್ನಾಟಕ ವಾರ್ತೆ): ಗಾಜನೂರು ಜವಾಹರ ನವೋದಯ ವಿದ್ಯಾಲಯವು ಜ. 08 ರಂದು ಬೆಳಿಗ್ಗೆ 11.30 ರಿಂದ 1.30 ರವರೆಗೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ 2017-18 ನೇ ಸಾಲಿನ ಪ್ರವೇಶ ಪರೀಕ್ಷೆಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ.

ಪರೀಕ್ಷೆಯು ನಿಗಧಿತ ದಿನಾಂಕದಂದು ಭದ್ರಾವತಿ ಹಳೇ ನಗರ ಜವಾಹರಲಾಲ್ ನೆಹರು ಇಂಗ್ಲೀಷ್ ಸ್ಕೂಲ್, ಕನಕ ಹೈಸ್ಕೂಲ್ ಮತ್ತು ವಿಶ್ವೇಶ್ವರಯ್ಯ ಹೈಸ್ಕೂಲ್, ಹೊಸನಗರದ ಸರ್ಕಾರಿ ಪಿಯು ಕಾಲೇಜು, ಸಾಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮತ್ತು ಸರ್ಕಾರಿ ಹೆಣ್ಣುಮಕ್ಕಳ ಜ್ಯೂನಿಯರ್ ಕಾಲೇಜು. ಶೀಕಾರಿಪುರದ ಬನಸಿರಿ ಲಯನ್ಸ್ ಹೈಸ್ಕೂಲ್, ಕೊಟ್ಟೂರೇಶ್ವರ ಹೈಸ್ಕೂಲ್, ಸರ್ಕಾರಿ ಗಂಡು ಮಕ್ಕಳ ಜ್ಯೂನಿಯರ್ ಕಾಲೇಜು ಮತ್ತು ಸರ್ಕಾರಿ ಹೆಣ್ಣುಮಕ್ಕಳ ಜ್ಯೂನಿಯರ್ ಕಾಲೇಜು, ಶಿವಮೊಗ್ಗದ ದುರ್ಗಿಗುಡಿ ಸರ್ಕಾರಿ ಹೈಸ್ಕೂಲ್, ಕಸ್ತೂರಿಬಾ ಹೆಣ್ಣುಮಕ್ಕಳ ಹೈಸ್ಕೂಲ್, ಬಿಹೆಚ್ ರಸ್ತೆ ಸರ್ಕಾರಿ ಜ್ಯೂನಿಯರ್ ಕಾಲೇಜ್, ಸೊರಬದ ಸರ್ಕಾರಿ ಪ್ರ.ದ ಕಾಲೇಜ್ ಹಾಗೂ ತೀರ್ಥಹಳ್ಳಿಯ ಡಾ|| ಯು.ಆರ್. ಅನಂತಮೂರ್ತಿ ಸರ್ಕಾರಿ ಹೈಸ್ಕೂಲ್ ಮತ್ತು ಸರ್ಕಾರಿ ಹೆಣ್ಣುಮಕ್ಕಳ ಜ್ಯೂ. ಕಾಲೇಜ್‍ಗಳಲ್ಲಿ ನಡೆಯುತ್ತಿದ್ದು, ಪರೀಕ್ಷಾರ್ಥಿಗಳು ನಿಗಧಿತ ಕೇಂದ್ರಗಳಲ್ಲಿ ನಿಗಧಿತ ಸಮಯಕ್ಕೆ ಹಾಜರಾಗು ಪರೀಕ್ಷೆಯಲ್ಲಿ ಪಾಲ್ಗೋಳ್ಳುವಂತೆ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನ

ಶಿವಮೊಗ್ಗ : ಜನವರಿ 05 (ಕರ್ನಾಟಕ ವಾರ್ತೆ): ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ನಿರುದ್ಯೋಗಿ ಪುರುಷ/ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ಅಧೀನಕ್ಕೊಳಪಟ್ಟಿರುವ ಬೆಂಗಳೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಓIಈಖಿ) ತರಬೇತಿ ಸಂಸ್ಥೆಯ ಮೂಲಕ 1. Garment Manufacturing Technology. 2. Apparel quality control product analysis and assurance. 3. Industrial Pattern makingಕೋರ್ಸ್‍ಗಳಿಗೆ 6 ತಿಂಗಳ ಅವಧಿಯ ಉಚಿತ ತರಬೇತಿಯನ್ನು ತರಬೇತಿ ಭತ್ಯೆಯೊಂದಿಗೆ ನೀಡಲು 18 ರಿಂದ 35 ವಯೋಮಿತಿಯುಳ್ಳ ಎಸ್‍ಎಸ್‍ಎಲ್‍ಸಿ, ಪಿಯುಸಿ ಉತ್ತೀರ್ಣರಾಗಿರುವ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ನಿಗಧಿತ ನಮೂನೆಯ ಅರ್ಜಿಗಳನ್ನು ಜಿಲ್ಲಾ ಅಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಂ. 145, ಬಸವಚೇತನ, 100 ಅಡಿ ರಸ್ತೆ, ರವೀಂದ್ರನಗರ, ಶಿವಮೊಗ್ಗ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜ. 17ರೊಳಗಾಗಿ ಇದೇ ಕಚೇರಿಗೆ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಂತರ್ಜಾಲ ತಾಣ www.backwardclasses.kar.nic.in ಅಥವಾ ದೂ.ವಾ.ಸಂ; 08182-222129ನ್ನು ಸಂಪರ್ಕಿಸಬಹುದಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ

ಉಡುಪಿ, ಜನವರಿ 5 (ಕರ್ನಾಟಕ ವಾರ್ತೆ) :- ಬಾಲನ್ಯಾಯ ಕಾಯ್ದೆಯಡಿ ನೋಂದಾಯಿಸಿ ನವೀಕರಿಸಲು ಸಿದ್ಧಮಾಡಿಟ್ಟಿರುವ 8 ಸಂಸ್ಥೆಗಳ ಅರ್ಜಿಗಳನ್ನು ಜನವರಿ 15ರೊಳಗೆ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಆದೇಶಿಸಿದರು.

ಅವರು ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ಜಿಲ್ಲಾ ಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈಗಾಗಲೇ ನೋಂದಾಯಿಸಲ್ಪಟ್ಟಿರುವ 25 ಸಂಸ್ಥೆಗಳ ಪ್ರಸ್ತಾವನೆಯ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಎಲ್ಲ ದಾಖಲೆ ಸಲ್ಲಿಸಿರುವ 8 ಸಂಸ್ಥೆಗಳ ಪ್ರಸ್ತಾವನೆಯನ್ನು ತಕ್ಷಣವೇ ಕಳುಹಿಸಿ ಉಳಿದ ಸಂಸ್ಥೆಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಜನವರಿ 15ರೊಳಗೆ ಕಳುಹಿಸಿಕೊಡಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ವಿಶೇಷ ಪಾಲನಾ ಯೋಜನೆಯಡಿ 8 ಲಕ್ಷ ರೂ. ಬಿಡುಗಡೆಯಾಗಿದ್ದು, ಅನುದಾನವನ್ನು ಫಲಾನುಭವಿಗಳಿಗೆ ಆರ್ ಟಿ ಜಿ ಎಸ್ ಮೂಲಕ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರಾಯೋಜಕತ್ವದ ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿದ್ದು, ಬೇಡಿಕೆ ಪಟ್ಟಿಯನ್ನು ಸಿದ್ಧಪಡಿಸಿ ಅನುದಾನ ಬಿಡುಗಡೆ ಬಳಕೆ ಮಾಡಲು ಸಜ್ಜಾಗಿ ಎಂದೂ ಜಿಲ್ಲಾಧಿಕಾರಿಗಳು ಹೇಳಿದರು.

2016-17ನೇ ಸಾಲಿನ ಸಾಂತ್ವನ ಯೋಜನೆಯಡಿ 80 ಮಹಿಳೆಯರು ನೆರವು ಕೋರಿ ಬಂದಿದ್ದು, ಸೂಕ್ತ ಸ್ಪಂದನೆ ನೀಡಲಾಗಿದೆ. ಕೌಟುಂಬಿಕ ಸಲಹೆಗಳನ್ನು ನೀಡಲಾಗಿದ್ದು, ಪ್ರತಿಯೊಂದು ಪ್ರಕರಣದ ಬಗ್ಗೆ ಗಮನಹರಿಸಲಾಗಿದೆ ಎಂದು ಸಾಂತ್ವನ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಉಡುಪಿಯಲ್ಲಿ 33 ಮಹಿಳೆಯರು, ಕಾರ್ಕಳದಲ್ಲಿ 30 ಮತ್ತು ಕುಂದಾಪುರದಲ್ಲಿ 17 ಮಹಿಳೆಯರು ನೆರವು ಪಡೆದಿರುತ್ತಾರೆ. ಕುಂದಾಪುರ ಮತ್ತು ಕಾರ್ಕಳ ಸಾಂತ್ವನ ಕೇಂದ್ರದ ಪ್ರತಿನಿಧಿಗಳು ಮಾತನಾಡಿ ಈ ಸಂದರ್ಭದಲ್ಲಿ ಕೋಟಾ ಮತ್ತು ಕಾರ್ಕಳದಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸುವುದು ಸೇರಿದಂತೆ ದೂರಿನೊಂದಿಗೆ ಹೋದರೆ ಸಹಕಾರ ನೀಡದೆ ಸತಾಯಿಸುತ್ತಾರೆ. ಗರ್ಭಿಣಿ, ಬಾಣಂತಿಯುರ ದೂರು ನೀಡಲು ಹೋದರೆ ಸ್ಪಂದಿಸುವುದಿಲ್ಲ ಎಂಬ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಪೊಲೀಸ್ ಇಲಾಖೆ ಇಂತಹ ಸಂದರ್ಭಗಳಲ್ಲಿ ಸ್ಪಂದಿಸಬೇಕಲ್ಲದೆ ಸಿಬ್ಬಂದಿಗಳಿಗೆ ಈ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸುವಂತೆಯೂ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಯವರಿಗೆ ಸೂಚಿಸಿದರು. ಇಂತಹ ಸಂದರ್ಭಗಳಲ್ಲಿ ಸಾಂತ್ವನ ಕೇಂದ್ರದವರು ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಗಮನಕ್ಕೆ ತರಲೂ ಜಿಲ್ಲಾಧಿಕಾರಿಗಳು ಹೇಳಿದರು.

ಮಹಿಳೆಯರು ನೀಡುವ ದೂರು ದಾಖಲಿಸುವುದು ಸೇರಿದಂತೆ ಪೊಲೀಸ್ ಠಾಣೆಯಲ್ಲಿರುವ ಮಹಿಳಾ ಸಿಬ್ಬಂದಿಗಳು ನೊಂದ ಮಹಿಳೆಯರಿಗೆ ದೂರು ದಾಖಲಿಸಲು ನೆರವಾಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆ ಜನವರಿ 31ರೊಳಗೆ ಸಂಪೂರ್ಣಗೊಳಿಸಿ ಇದಕ್ಕೆ ಪಂಚಾಯಿತಿಗಳ ನೆರವನ್ನು ಪಡೆಯಿರಿ ಎಂದೂ ಸಿಇಒ ಅವರು ಸೂಚನೆಯನ್ನು ನೀಡಿದರು. ಮಣಿಪಾಲ ವ್ಯಾಪ್ತಿಯಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಬಗ್ಗೆ ಮಣಿಪಾಲ ಪೊಲೀಸ್ ಸ್ಟೇಷನ್ ವ್ಯಾಪ್ತಿಯವರು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್, ವಿವಿಧ ಇಲಾಖೆಯ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು. ಜಿಲ್ಲೆಯಲ್ಲಿ ವರದಕ್ಷಿಣೆ ಪಿಡುಗು, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ ಮುಂತಾದ ಪಿಡುಗುಗಳ ಬಗ್ಗೆ, ಮಹಿಳೆಯರ ಮತ್ತು ಮಕ್ಕಳ ಸಾಗಾಣೆ ಮತ್ತು ಮಾರಾಟ ನಿಷೇಧ, ಕೋಟ್ಪಾ ಮುಂತಾದ ಕಾನೂನುಗಳ ಬಗ್ಗೆ ಜನನಿಬಿಡ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಮಾಹಿತಿ ಕಾರ್ಯಾಗಾರ ಡೆಸಿ ನಿರಂತರ ಅರಿವು ಮೂಡಿಸುವ ಯತ್ನವಾಗಬೇಕೆಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿರುವ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭೆ – ಜಾಹೀರಾತು ಪ್ರಚಾರ ಫಲಕಗಳಿಗೆ ಅನುಮತಿ ಕಡ್ಡಾಯ

ಉಡುಪಿ, ಜನವರಿ 05 (ಕರ್ನಾಟಕ ವಾರ್ತೆ):- ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಖಾಯಂ ಹಾಗೂ ತಾತ್ಕಾಲಿಕ ಜಾಹೀರಾತುದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಎಲ್ಲಾ ಜಾಹೀರಾತು ಪ್ರಚಾರ ಫಲಕಗಳಿಗೆ ನಗರಸಭೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದು ಅನುಮತಿ ಸಂಖ್ಯೆ ಮತ್ತು ಅವಧಿಯನ್ನು ದಾಖಲಿಸಿ ಅಳವಡಿಸತಕ್ಕದ್ದು ಎಂಬುದಾಗಿ ಹಲವು ಬಾರಿ ಪ್ರಕಟಣೆ ಮೂಲಕ ತಿಳಿಸಿದಾಗ್ಯೂ, ಕೆಲವೊಂದು ಜಾಹೀರಾತು ಪ್ರಚಾರ ಬ್ಯಾನರ್ ಮತ್ತು ಫಲಕಗಳನ್ನು ಅನಧಿಕೃತವಾಗಿ ಹಾಗೂ ಅನುಮತಿ ಸಂಖ್ಯೆ, ದಿನಾಂಕ ಮುದ್ರಿಸದೇ ಅಳವಡಿಸುತ್ತಿರುವುದು ಕಂಡುಬರುತ್ತದೆ. ಇದು ಕಾನೂನಿಗೆ ವಿರುದ್ಧವಾಗಿರುತ್ತದೆ. ಇನ್ನು ಮುಂದೆ ಎಲ್ಲಾ ಜಾಹೀರಾತುದಾರರು ಕಡ್ಡಾಯವಾಗಿ ಅನುಮತಿ ಪಡೆದು, ಅನುಮತಿ ವಿವರ ತಪ್ಪದೆ ಮುದ್ರಿಸಿ ಅಳವಡಿಸುವಂತೆಯೂ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಆಗಿರುವುದರಿಂದ ಬಟ್ಟೆ ಬ್ಯಾನರ್‍ಗಳನ್ನು ಮಾತ್ರ ಅಳವಡಿಸುವಂತೆ ಉಡುಪಿ ನಗರಸಭಾ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬೆಳೆ ವಿಮೆ ನೊಂದಾವಣಿ- ದಿನಾಂಕ ವಿಸ್ತರಣೆ

ಉಡುಪಿ, ಜನವರಿ 05 (ಕರ್ನಾಟಕ ವಾರ್ತೆ):– ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಅಧಿಸೂಚಿಸಲಾದ ಹಿಂಗಾರು ಹಂಗಾಮಿನ ಬೆಳೆಗಳಲ್ಲಿ ಬೆಳೆ ವಿಮೆ ನೊಂದಾವಣೆಗೆ ಈ ಮೊದಲು ನಿಗದಿಪಡಿಸಲಾದ ಕೊನೆಯ ದಿನಾಂಕ 31.12.2016 ನ್ನು ಪರಿಷ್ಕರಿಸಿ 10.01.2017ರವರೆಗೆ ವಿಸ್ತರಿಸಲಾಗಿರುತ್ತದೆ. ರೈತರು ಇದರ ಪ್ರಯೋಜನವನ್ನು ಪಡೆದು ಬೆಳೆ ವಿಮೆಗೆ ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗೆ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ

ಗದಗ ಜಿಲ್ಲೆಯಲ್ಲಿ 61 ಸ್ಥಾನಗಳಿಗೆ 151 ಅಭ್ಯರ್ಥಿಗಳು ಕಣದಲ್ಲಿ

ಗದಗ(ಕರ್ನಾಟಕ ವಾರ್ತೆ ) ಜ. 5 : ಗದಗ ಜಿಲ್ಲೆಯ ಐದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಒಟ್ಟು 70 ಸ್ಥಾನಗಳ ಪೈಕಿ 9 ಅವಿರೋಧ ಆಯ್ಕೆಯಾಗಿದ್ದು 61 ಸ್ಥಾನಗಳಿಗೆ 22 ಮಹಿಳೆಯರು ಸೇರಿದಂತೆ ಒಟ್ಟು 151 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಸೋಮವಾರ ದಿ. 9 ರಂದು ಮುಂಜಾನೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು ಮತ ಎಣಿಕೆ ಬುಧವಾರ ದಿ. 11 ರಂದು ಮುಂಜಾನೆ 8 ಗಂಟೆಗೆ ನಡೆಯಲಿದೆ. ಆಯಾ ತಾಲೂಕಿನ ತಹಶೀಲ್ದಾರಗಳಾದ ಚುನಾವಣಾಧಿಕಾರಿಯಾಗಿದ್ದು ಗದಗ ಹೊರತುಪಡಿಸಿ ಉಳಿದೆಡೆ ತಾಲೂಕಿನ ಎಪಿಎಂಸಿ ಕಾರ್ಯದರ್ಶಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿದ್ದಾರೆ.

ಗದಗ ತಹಶೀಲ್ದಾರ ಎಂ.ಬಿ. ಬಿರಾದಾರ , ಶಿರಹಟ್ಟಿಯ ಎ.ಡಿ. ಅಮರವಾಡಗಿ, ರೋಣದ ಎಸ್.ಸಿ. ವಸ್ತ್ರದ , ನರಗುಂದ ಪ್ರಕಾಶ ಹೊಳೆಪ್ಪಗೋಳ ಹಾಗೂ ಮುಂಡರಗಿ ತಹಶೀಲ್ದಾರ ಕೆ.ಬಿ. ಕೋರಿಶೆಟ್ಟರ ಚುನಾವಣಾಧಿಕಾರಿಗಳಾಗಿದ್ದಾರೆ. ಜಿಲ್ಲೆಯ ಐದು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 11 ಕೃಷಿಕರ ಕ್ಷೇತ್ರ ಅಲ್ಲದೇ ವರ್ತಕರ , ಕೃಷಿ ಉತ್ಪನ್ನ ಮಾರಾಟ, ಕೃಷಿ ಹುಟ್ಟುವಳಿ ಸಂಸ್ಕರಣ ಸಂಘಗಳ ತಲಾ ಓರ್ವ ಸದಸ್ಯರಂತೆ ಒಟ್ಟು 14 ಸದಸ್ಯರು ಪ್ರತಿ ಕೃಷಿ ಉತ್ಪನ್ನ ಮಾರಾಟ ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ.

ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು 11 ಸ್ಥಾನಗಳಿಗೆ 4 ಮಹಿಳೆಯರು ಸೇರಿದಂತೆ ಒಟ್ಟು 28 ಅಭ್ಯರ್ಥಿ ಕಣದಲ್ಲಿದ್ದಾರೆ. ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಕೃಷಿ ಉತ್ಪನ್ನ ಮಾರಾಟ ಸಮಿತಿಯ ಎಲ್ಲ 14 ಸ್ಥಾನಗಳಿಗೆ ನಾಲ್ಕು ಮಹಿಳೆಯರು ಸೇರಿದಂತೆ 33 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಂಡರಗಿಯಲ್ಲಿ 2 ಅವಿರೋಧ ಆಯ್ಕೆಯಾಗಿದ್ದು 12 ಸ್ಥಾನಗಳಿಗೆ 6 ಜನ ಮಹಿಳೆಯರು ಸೇರಿ ಒಟ್ಟು 35 ಜನ ಅಭ್ಯರ್ಥಿಗಳಿದ್ದಾರೆ. ರೋಣ ( ಹೊಳೆ ಆಲೂರು) ಹಾಗೂ ನರಗುಂದ ಸಮಿತಿಗಳ ತಲಾ 2 ಸ್ಥಾನ ಅವಿರೋಧ ಆಯ್ಕೆಯಾಗಿದ್ದು ತಲಾ 12 ಸ್ಥಾನಗಳಿಗೆ ತಲಾ 4 ಜನ ಮಹಿಳೆಯರು ಸೇರಿದಂತೆ ಕ್ರಮವಾಗಿ 29 ಹಾಗೂ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ವರ್ತಕ, ಕೃಷಿ ಉತ್ಪನ್ನ ಸಂಸ್ಕರಣ ಮೂರು ಕ್ಷೇತ್ರಗಳ 1890 ಮತದಾರರು ಸೇರಿದಂತೆ ಒಟ್ಟು 3,27,730 ಮತದಾರರಿದ್ದು ಇದರಲ್ಲಿ 71,090 ಮಹಿಳಾ ಮತದಾರರಿದ್ದಾರೆ. ಒಟ್ಟು 415 ಮತಗಟ್ಟೆಗಳು ಇರಲಿದ್ದು ಗದಗ ಕ್ಷೇತ್ರದಲ್ಲಿ 95 , ಮುಂಡರಗಿಯಲ್ಲಿ 66, ಲಕ್ಷ್ಮೇಶ್ವರ 78, ನರಗುಂದ 45 ಹಾಗೂ ರೋಣ ( ಹೊಳೆಆಲೂರ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ 131 ಮತಗಟ್ಟೆಗಳು ಇರಲಿವೆ. 1889 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅವಶ್ಯಕ ತರಬೇತಿ ನೀಡಿ ನಿಯಮಿಸಲಾಗಿದೆ. 415 ಮತಗಟ್ಟೆಗಳಲ್ಲಿ 121 ಸೂಕ್ಷ್ಮ ಹಾಗೂ 92 ಅತೀ ಸೂಕ್ಷ್ಮ ಮತಗಟ್ಟೆಗಳಿದ್ದು ಅವಶ್ಯಕ ಭದ್ರತೆ ಕ್ರಮ ಜರುಗಿಸಲಾಗಿದೆ.
ಮತದಾನ ದಿನದಂದು ಗದುಗಿನ ನಗರಸಭೆ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ಹಾಗೂ ಮೈಲಾರಪ್ಪ ಮೆಣಸಗಿ ಪದವಿ ಪೂರ್ವ ಕಾಲೇಜ್, ಕಳಸಾಪೂರ ರಸ್ತೆ, ಗದಗ ಇಲ್ಲಿ ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ನಡೆಯಲಿದೆ. ಉಳಿದೆಡೆಯ ಸ್ಥಳಗಳು ಇಂತಿವೆ. ಶಿರಹಟ್ಟಿಯ ಎಫ್.ಎಂ. ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯ , ಮುಂಡರಗಿಯ ಹಳೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ, ರೋಣ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ನರಗುಂದದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯಾಲಯ ಇಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕಾರ್ಯಗಳು ನಡೆಯಲಿವೆ.

ಕುಡಿಯುವ ನೀರು ಮೇವು ಸಮಸ್ಯೆ ದೂರು ಸ್ವೀಕಾರಕ್ಕೆ ಸಹಾಯವಾಣಿ

ಗದಗ(ಕರ್ನಾಟಕ ವಾರ್ತೆ) ಜನೆವರಿ 5: ಗದಗ ಜಿಲ್ಲೆಯ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಕೊಳ್ಳುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಮನೋಜ ಜೈನ್ ತಿಳಿಸಿದ್ದಾರೆ. ಈ ವಿಷಯಗಳ ಕುರಿತು ಸಮಸ್ಯೆ ಹಾಗೂ ದೂರು ಸ್ವೀಕಾರಕ್ಕೆ ಪ್ರತಿ ತಾಲೂಕಿನ ತಹಶೀಲ್ದಾರ ಹಾಗೂ ಗದಗನಲ್ಲಿ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿರಂತರ ದೂರು ಸ್ವೀಕಾರಕ್ಕೆ ಸಹಾಯವಾಣಿ ಆರಂಭಿಸಲಾಗಿದೆ. ಕಚೇರಿ ಹೆಸರು ಹಾಗೂ ದೂರವಾಣಿ ವಿವರ ಇಂತಿದೆ:

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಗದಗ – 08372-239177, ಸಹಾಯಕ ಆಯುಕ್ತರ ಕಾರ್ಯಾಲಯ,ಗದಗ- 08372-238506, ತಹಶೀಲ್ದಾರ ಕಾರ್ಯಾಲಯ, ಗದಗ- 08372-277770, ತಹಶೀಲ್ದಾರ ಕಾರ್ಯಾಲಯ- ಮುಂಡರಗಿ- 08371- 262237, ತಹಶೀಲ್ದಾರರ ಕಾರ್ಯಾಲಯ, ನರಗುಂದ-08377-245243, ತಹಶೀಲ್ದಾರರ ಕಾರ್ಯಾಲಯ, ರೋಣ-08381-267239, ತಹಶೀಲ್ದಾರ ಕಾರ್ಯಾಲಯ, ಶಿರಹಟ್ಟಿ- 08487-242430.
ಸಾರ್ವಜನಿಕರು ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು/ ಮೇವಿನ ಸಮಸ್ಯೆ ಇದ್ದಲ್ಲಿ ಮೇಲ್ಕಾಣಿಸಿದ ಸಹಾಯವಾಣಿ ಸಂಖ್ಯೆಗಳಿಗೆ ಅಹವಾಲು/ ದೂರುಗಳನ್ನು ದಾಖಲಿಸಿ ಸಹಕರಿಸಲು ತಿಳಿಸಲಾಗಿದೆ.

ಸರ್ವೋತ್ತಮ ಸೇವಾ ಪ್ರಶಸ್ತಿಗೆ ಪ್ರಸ್ತಾವನೆ ಆಹ್ವಾನ

ಧಾರವಾಡ ( ಕರ್ನಾಟಕ ವಾರ್ತೆ) ಜ.5 ರಾಜ್ಯ ಸರ್ಕಾರಿ ನೌಕರರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

ಕರ್ತವ್ಯದಲ್ಲಿ ವಿನೂತನ ಕಾರ್ಯರೂಪ ತರುವ, ಮುಂದಾಳತ್ವ ವಹಿಸುವ, ಪ್ರಸ್ತುತ ಇರುವ ಅಡೆತಡೆಗಳಿಗೆ ಮಾಹಿತಿ ಪರಿಶೋಧನೆ ಮುಖಾಂತರ ಪರಿಹಾರ ಒದಗಿಸಿದ ಹಿನ್ನೆಲೆ. ಫಲಿತಾಂಶ ಸಾಧನೆಗೆ ಯೋಜನೆ ರೂಪಿಸಿ ಕಾರ್ಯಕ್ಷಮತೆ ಮತ್ತು ಸೇವಾ ವೃದ್ಧಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸಿರುವದು. ಸರಳೀಕೃತ ಕಾರ್ಯ ವಿಧಾನದ ಮೂಲಕ ಗುಣಾತ್ಮಕ ಫಲಿತಾಂಶ ಪಡೆದಿರುವದು. ಸಾರ್ವಜನಿಕರಿಗೆ, ನಾಗರಿಕರಿಗೆ ಅನುಕೂಲ ಕಲ್ಪಿಸಿ ಸರಕಾರದ, ಸಾರ್ವಜನಿಕ ಹಣದ ಉಳಿತಾಯ ಮಾಡಿರುವವÀರು ಸೇರಿದಂತೆ ಇತರ ಮಹತ್ವದ ಸಾಧನೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.

ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಹಾಗೂ ಗೃಹ ಇಲಾಖೆಗಳನ್ನು ಹೊರತುಪಡಿಸಿ, ಎಲ್ಲ ಇಲಾಖೆಗಳ ಎ.ಬಿ.ಸಿ ಮತ್ತು ಡಿ. ವೃಂದಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಪ್ರಶಸ್ತಿಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಬಹುದು. ಶಿಕ್ಷಣ ಮತ್ತು ಗೃಹ ಇಲಾಖೆಗಳ ಲಿಪಿಕ ಸಿಬ್ಬಂದಿಯೂ ಸಹ ಅರ್ಜಿ ಸಲ್ಲಿಸಬಹುದು. ಆಸಕ್ತರು ನೇರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಜ.15 ರೊಳಗಾಗಿ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಬಹುದು. ನಾಮನಿರ್ದೇಶನದ ಅರ್ಜಿ ನಮೂನೆ-2ನ್ನು ಡಿಡಿಪಿಐ ಕಚೇರಿಯಿಂದ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಓಲಂಪಿಕ್ ಕ್ರೀಡೆಗಳಿಗೆ ಮೈದಾನ, ಸ್ಥಳ ನಿಗದಿ

ಧಾರವಾಡ ( ಕರ್ನಾಟಕ ವಾರ್ತೆ) ಜ.5 ಬರುವ ಫೆ.3 ರಿಂದ 10 ರವರೆಗೆ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಕನಾಟಕ ರಾಜ್ಯ ಓಲಂಪಿಕ್ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರುವ ರಾಜ್ಯ ಓಲಂಪಿಕ್ ಕ್ರೀಡೆಗಳ ಏರ್ಪಾಡಿಗೆ ಅವಳಿ ನಗರದ ವಿವಿಧ ಕ್ರೀಡಾಂಗಣ, ಆಟದ ಮೈದಾನ ಹಾಗೂ ಸ್ಥಳಗಳನ್ನು ಗುರುತಿಸಲಾಗಿದೆ.

ಧಾರವಾಡದ ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ಫೆ.3 ರಿಂದ 5 ರವರೆಗೆ ವೇಟ್ ಲಿಫ್ಟಿಂಗ್, ಜೆ.ಎಸ್.ಎಸ್.ಕಾಲೇಜು ಆವರಣದಲ್ಲಿ ಫೆ.3 ರಿಂದ 10ರವರೆಗೆ ಹಾಕಿ, ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ಫೆ.4 ಮತ್ತು 5 ರಂದು ಆರ್ಚರಿ, ಹುಬ್ಬಳ್ಳಿಯಲ್ಲಿ ಫೆ.4 ಮತ್ತು 5 ರಂದು ಸೈಕ್ಲಿಂಗ್, ಹುಬ್ಬಳ್ಳಿಯ ಮಹಾನಗರ ಪಾಲಿಕೆ ಈಜುಗೊಳದಲ್ಲಿ ಫೆ.4 ರಿಂದ 6ರವರೆಗೆ ಸ್ವಿಮ್ಮಿಂಗ್, ಧಾರವಾಡದ ಆರ್.ಎನ್.ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.4 ರಿಂದ 6ರವರೆಗೆ ಟೇಕ್ವಾಂಡೊ, ಧಾರವಾಡದ ಆದರ್ಶ ಶಾಲೆಯಲ್ಲಿ ಫೆ.4 ರಿಂದ 7ರವರೆಗೆ ಬಾಕ್ಸಿಂಗ್. ಬಾಲ ಮಾರುತಿ ವ್ಯಾಯಾಮ ಶಾಲೆಯಲ್ಲಿ ಫೆ.4 ರಿಂದ 7ರವರೆಗೆ ಜಿಮ್ನ್ಯಾಸ್ಟಿಕ್. ಹುಬ್ಬಳ್ಳಿಯ ನೆಹರೂ ಮ್ಯದಾನದಲ್ಲಿ ಫೆ.4 ರಿಂದ 7ರವರೆಗೆ ಕಬಡ್ಡಿ, ಧಾರವಾಡದ ಮಲ್ಲಸಜ್ಜನ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಫೆ.4 ರಿಂದ 8ರವರೆಗೆ ಹ್ಯಾಂಡ್‍ಬಾಲ್ ಕರ್ನಾಟಕ ಕಾಲೇಜು ಆವರಣದಲ್ಲಿ ಫೆ.4 ರಿಂದ 10 ರವರೆಗೆ ಫುಟ್‍ಬಾಲ್ . ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಮೈದಾನದಲ್ಲಿ ಫೆ.5 ರಿಂದ 9ರವರೆಗೆ ಲಾನ್‍ಟೆನಿಸ್ .ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.5 ರಿಂದ 9ರವರೆಗೆ ನೆಟ್‍ಬಾಲ್, ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಫೆ.5 ರಿಂದ 9ರವರೆಗೆ ವ್ಹಾಲಿಬಾಲ್, ಸತ್ತೂರಿನ ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಫೆ.6 ರಿಂದ 9 ರವರೆಗೆ ಬ್ಯಾಡ್ಮಿಂಟನ್, ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಫೆ. 6 ರಿಂದ 9 ರವರೆಗೆ ಬಾಸ್ಕೆಟ್‍ಬಾಲ್.

ಧಾರವಾಡದ ಎಸ್.ಡಬ್ಲು.ಆರ್ ಸಮುದಾಯ ಭವನದಲ್ಲಿ ಫೆ.6 ರಿಂದ 10 ರವರೆಗೆ ವುಶು, ಆರ್.ಎನ್.ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.7 ರಿಂದ 9 ರವರೆಗೆ ಜುಡೋ, ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ಫೆ.7 ರಿಂದ 9 ರವರೆಗೆ ಖೋ-ಖೋ. ಡಾ ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಫೆ.7 ರಿಂದ 10 ರವರೆಗೆ ಕುಸ್ತಿ. ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಫೆ.7 ರಿಂದ 10 ರವರೆಗೆ ಅಥ್ಲೆಟಿಕ್ಸ್. ಆರ್.ಎಲ್‍ಎಸ್ ಕಾಲೇಜು ಆವರಣದಲ್ಲಿ ಫೆ.8 ಹಾಗೂ 9 ರಂದು ಫೆನ್ಸಿಂಗ್, ಕಾಸ್ಮೋಸ್ ಕ್ಲಬ್‍ನಲ್ಲಿ ಫೆ.9 ಮತ್ತು 10 ರಂದು ಟೇಬಲ್ ಟೆನಿಸ್ ಸ್ಪರ್ಧೆಗಳನ್ನು ಆಯೋಜಿಸಲಾಗುವದು. ರೈಫಲ್ ಶೂಟಿಂಗ್ ಮತ್ತು ಟ್ರಯಥ್ಲಾನ್ ಕ್ರೀಡೆಗಳನ್ನು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಒಟ್ಟು 23 ಕ್ರೀಡಾ ಸ್ವರ್ಧೆಗಳಲ್ಲಿ ಸುಮಾರು 4500 ಕ್ರೀಡಾ ಪಟುಗಳು, ತಂತ್ರಜ್ಞರು ಭಾಗವಹಿಸುವ ನಿರೀಕ್ಷೆ ಇದೆ.
ಜೀವರಕ್ಷಕ ಪ್ರಶಸ್ತಿ

ಕರ್ನಾಟಕ ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯು ರಾಜ್ಯದ ವ್ಯಾಪ್ತಿಯಲ್ಲಿ ಘಟಿಸುವ ರಸ್ತೆ ಅಪಘಾತದ ಯಾವುದೇ ಗಾಯಾಳುಗಳಿಗೆ 48 ಗಂಟೆಗಳವರೆಗೆ ಗರಿಷ್ಠ ರೂ 25,000ಗಳ ವರೆಗೆ ಉಚಿತ ತುರ್ತು ಚಿಕಿತ್ಸೆ ಒದಗಿಸಲಾಗುತ್ತದೆ.

ಈ ಯೋಜನೆಯು ಮಾರ್ಚ್ 8, 2016 ರಿಂದ ಜಾರಿಯಲ್ಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ನ ಮೂಲಕ ಅನುಷ್ಠಾನಗೊಳ್ಳುತ್ತಿದೆ. ಈ ಪ್ರಶಸ್ತಿಯನ್ನು ಸ್ಥಾಪಿಸುವ ಬಹುಮುಖ್ಯ ಉದ್ದೇಶ ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವ ವ್ಯಕ್ತಿಗಳು ಯಾವುದೇ ವಿಳಂಬವಿಲ್ಲದೆ ಗಾಯಾಳುಗಳನ್ನು ರಕ್ಷಿಸಲು ತಕ್ಷಣವೇ ಆಸ್ಪತ್ರೆಗಳಿಗೆ ಸಾಗಿಸುವುದು ಹಾಗೂ ಚಿಕಿತ್ಸೆ ಕೊಡಿಸಲು ನೆರವಾಗುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುವಂತೆ ಪ್ರೋತ್ಸಾಹಿಸುವುದಾಗಿದೆ. ಈ ರೀತಿ ಸಹಾಯ ನೀಡಿದ ದಯಾಳುಗಳು ಅಥವಾ ಉಪಕಾರಿ ವ್ಯಕ್ತಿಗಳನ್ನು ಗುರುತಿಸಿ ಈ ಅತ್ಯುನ್ನತ ಮಟ್ಟದ ಜೀವ ರಕ್ಷಕ ಪ್ರಶಸ್ತಿಯನ್ನು ನೀಡಲಾಗುವುದು. ಯಾವುದೇ ಬಹುಮಾನ ಅಥವಾ ಲಾಭದ ನೀರಿಕ್ಷೆಗಳಿಲ್ಲದೆ, ವಿಶೇಷ ಸಂಬಂಧಗಳಿಲ್ಲದೆ ಸ್ವಯಂ ಪ್ರೇರಿತವಾಗಿ ಬಂದು ಅಪಘಾತದ ಗಾಯಾಳುಗಳಿಗೆ ನೆರವಾಗುವ ಅಥವಾ ಸಹಾಯ ಮಾಡುವ ದಯಾಳು ಹಾಗೂ ಉಪಕಾರಿ ವ್ಯಕ್ತಿ ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೀವ ರಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲು ದಯಾಳು ಮತ್ತು ಉಪಕಾರಿ/ ನಾಮಕರಣ ವ್ಯಕ್ತಿಗಳಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜನವರಿ 10 ರೊಳಗೆ ಸಲ್ಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಯವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-7259003382ನ್ನು ಸಂಪರ್ಕಿಸಬಹುದು.

24ಗಂಟೆಯೊಳಗೆ ಆಧಾರ ನೋಂದಣಿ ಅನಾರೋಗ್ಯ ಪೀಡಿತ ಮಹಿಳೆ ನೋವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ

ಕಾರವಾರ ಜನವರಿ 5 : ಆಧಾರ್ ಕಾರ್ಡ್ ಇಲ್ಲದ ಕಾರಣ ನಿವೃತ್ತಿ ವೇತನ ಪಡೆಯಲು ಸಮಸ್ಯೆ ಎದುರಿಸುತ್ತಿದ್ದ ಅನಾರೋಗ್ಯ ಪೀಡಿತ ವೃದ್ಧೆಯ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಮನವಿ ಸ್ವೀಕರಿಸಿದ 24ಗಂಟೆ ಒಳಗಾಗಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿ ಶ್ಲಾಘನೆಗೆ ಪಾತ್ರವಾಗಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಎಲ್.ಆರ್.ನಗರದ ನಿವಾಸಿ ಕವಿಯಿತ್ರಿ ಹಾಗೂ ಅಂಚೆ ಇಲಾಖೆ ನಿವೃತ್ತ ನೌಕರರಾಗಿರುವ ಕನ್ನಿಕಾ ಈಶ್ವರ ಹೆಗಡೆ ಕಳೆದ ಆರು ವರ್ಷಗಳಿಂದ ಪಾಶ್ರ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಕಣ್ಣುಗಳ ಸಹ ಸಂಪೂರ್ಣ ಕಾಣದಾಗಿದ್ದು ಅವರು ಅತ್ತಿತ್ತ ಚಲಿಸಲಾರದ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಅಂಚೆ ಇಲಾಖೆಯಲ್ಲಿ ಬರುತ್ತಿದ್ದ ನಿವೃತ್ತಿ ವೇತನ ಪಡೆಯಲು ಖಾತೆಗೆ ಇದೀಗ ಆಧಾರ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕಾಗಿದ್ದು, ಅವರ ಬಳಿ ಆಧಾರ ಕಾರ್ಡ್ ಇಲ್ಲ. ಈ ಹಿನ್ನೆಲೆಯಲ್ಲಿ ನಿವೃತ್ತಿ ವೇತನ ಪಡೆಯುವುದು ದುಸ್ತರವಾಗಿತ್ತು.

ಈ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ನೌಕರಿಯಲ್ಲಿರುವ ಅವರ ಮಗ ರವಿ ಹೆಗಡೆ ಎಂಬವರು ಎಸ್‍ಎಂಎಸ್ ಮೂಲಕ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ಮುನೀಷ್ ಮೌದ್ಗಿಲ್ ಅವರ ಗಮನ ಸೆಳೆದಿದ್ದರು. `ನನ್ನ ತಾಯಿಯವರು ನಿರಂತರ ಪಾಶ್ರ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದು, ಮನೆಯಿಂದ ಹೊರ ಹೋಗುವುದು ಅಸಾಧ್ಯವಾಗಿದೆ. ಹೊನ್ನಾವರ ಉಪ ಅಂಚೆಕಚೇರಿಯಲ್ಲಿ ಅವರ ನಿವೃತ್ತಿ ವೇತನದ ಖಾತೆಯಿದ್ದು, ಇದೀಗ ಅದಕ್ಕೆ ಆಧಾರ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆಧಾರ ನೋಂದಣಿಗೆ ನೆರವಾಗುವಂತೆ’ ಅವರು ಮನವಿ ಮಾಡಿದ್ದರು.

ಈ ಎಸ್‍ಎಂಎಸ್ ಮನವಿಯನ್ನು ಜಿಲ್ಲಾಡಳಿತಕ್ಕೆ ಫಾರ್ವರ್ಡ್ ಮಾಡಿದ್ದ ಮುನೀಷ್ ಮೌದ್ಗಿಲ್ ಅವರು ವೃದ್ಧೆಗೆ ನೆರವಾಗುವಂತೆ ಸೂಚನೆ ನೀಡಿದ್ದರು. ವೃದ್ಧೆಯ ಮನೆಗೆ ತಕ್ಷಣ ತೆರಳಿ ಆಧಾರ ಕಾರ್ಡ್ ನೋಂದಣಿ ಮಾಡಿಸುವಂತೆ ಅಟಲ್‍ಜಿ ಜನಸ್ನೇಹಿ ಕೇಂದ್ರಕ್ಕೆ ಜಿಲ್ಲಾಡಳಿತ ನೀಡಿದ ಸೂಚನೆಯಂತೆ ಸಿಬ್ಬಂದಿಗಳು ಹೊನ್ನಾವರದ ಆಕೆಯ ಮನೆಗೆ ತೆರಳಿ 24ಗಂಟೆಗಳ ಒಳಗಾಗಿ ನೋಂದಣಿ ಕಾರ್ಯ ಮುಗಿಸಿದ್ದಾರೆ.

ನನ್ನ ತಾಯಿಗೆ ಆಧಾರ ಕಾರ್ಡ್ ಮಾಡಿಸಲು ಆಡಳಿತ ವ್ಯವಸ್ಥೆ ತೋರಿಸಿದ ಮುತುವರ್ಜಿಗೆ ಅಭಾರಿಯಾಗಿದ್ದೇವೆ. ಅತ್ತಿತ್ತ ಚಲಿಸಲು ಸಾಧ್ಯವಿಲ್ಲದ ಆಕೆಗೆ ಆಧಾರ ಕಾರ್ಡ್ ಮಾಡಿಸುವುದು ಹೇಗೆ ಎಂಬುವುದೇ ದೊಡ್ಡ ಸಮಸ್ಯೆಯಾಗಿತ್ತು’’ ಎಂದು ರವಿ ಹೆಗಡೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ 21ಸಂಚಾರಿ ಆಧಾರ್ ಕಿಟ್‍ಗಳಿದ್ದು, ತುರ್ತು ಸಂದರ್ಭಗಳಲ್ಲಿ ಮನೆಗಳಿಗೆ ತೆರಳಿ ಆಧಾರ ನೋಂದಣಿ ಕಾರ್ಯವನ್ನು ಸಿಬ್ಬಂದಿ ಮಾಡುತ್ತಿದ್ದಾರೆ’ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಹೇಳಿದ್ದಾರೆ.

ಹೊಲಿಗೆ ಮತ್ತು ಎಂಬ್ರಾಯಿಡರಿ ತರಬೇತಿ

ಕಾರವಾರ ಜನವರಿ 5: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನಲ್ಲಿ ಆಯೋಜಿಸಲಾಗಿದ್ದ ಮೂರು ತಿಂಗಳ ಎಂಬ್ರಾಯಿಡರಿ ಮತ್ತು ಆರು ತಿಂಗಳ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಸರ್ಕಾರವು ರೂಪಿಸಿದ ವಿವಿಧ ಯೋಜನೆಗಳನ್ನು ಮತ್ತು ಬ್ಯಾಂಕುಗಳಲ್ಲಿ ಸಿಗುವ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಆರ್ಥಿಕ ಅಭಿವೃದ್ಧಿ ಹೊಂದಬೇಕು. ಮಹಿಳೆಯರು ಡಿಜಿಟಲ್ ಇಂಡಿಯಾದ ಅಂಗವಾಗಿ ನಗದು ರಹಿತವಾಗಿ ವ್ಯವಹಾರದ ಬಗ್ಗೆ ತಿಳಿದುಕೊಳ್ಳುವದೂ ಕೂಡಾ ಅವಶ್ಯವಾಗಿದೆ ಎಂದು ಕಟ್ಟಾ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕ ಪ್ರಕಾಶ ಹೆಗಡೆ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ಪಾಲಿಟೆಕ್ನೀಕ್ ಪ್ರಾಂಶುಪಾಲರಾದ ವ್ಹಿ.ಎಮ್.ಹೆಗಡೆ ಮಾತನಾಡಿ ಮಹಿಳೆಯರು ಇಂತಹ ತರಬೇತಿಗಳ ಸದುಪಯೋಗವನ್ನು ಪಡೆದುಕೊಂಡು ಸ್ವ-ಉದ್ಯೋಗಿಗಳಾಗಿ ಸ್ವಾಲಂಬಿಗಳಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಾಸುದೇವ ಕೃಷ್ಣ ಗೌಡ ಸ್ವಾಗತಿಸಿದರು. ಕವಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮತ್ತು ವಂದನಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 65ಕ್ಕೂ ಅಧಿಕ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಜ.9 ರಂದು ಸಾರಿಗೆ ಪ್ರಾಧಿಕಾರದ ಸಭೆ

ಕಾರವಾರ ಜನವರಿ 5 : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನವರಿ 9 ರಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಹಾಗೂ 11.30 ಗಂಟೆಗೆ ರಸ್ತೆ ಸುರಕ್ಷತಾ ಸಭೆ ಆಯೋಜಿಸಿಲಾಗಿದೆ ಎಂದು ಕಾರವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ.

ಜೀವರಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಾರವಾರ ಜನವರಿ 5 : ಅಪಘಾತ ಗಾಯಾಳುಗಳಿಗೆ ನೆರವು ನೀಡಿದ ಪ್ರಕರಣಗಳಲ್ಲಿ ಗಮನೀಯ ಸಾಧನೆ ಮಾಡಿದ ವ್ಯಕ್ತಿಗಳಿಗೆ ಜೀವರಕ್ಷಕ ಪ್ರಶಸ್ತಿ ನೀಡಲಾಗುತ್ತಿದ್ದು ಅರ್ಜಿ ಆಹ್ವಾನಿಸಲಾಗಿದೆ.

ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವ ವ್ಯಕ್ತಿಗಳು ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ಗಾಯಾಳುಗಳನ್ನು ರಕ್ಷಿಸಲು ತಕ್ಷಣ ಆಸ್ಪತ್ರೆಗಳಿಗೆ ಸಾಗಿಸುವುದು ಹಾಗೂ ಚಿಕಿತ್ಸೆ ನೀಡಲು ನೆರವಾಗವುದನ್ನು ಪ್ರೋತ್ಸಾಹಿಸಲು ಪ್ರಶಸ್ತಿ ಆರಂಭಿಸಲಾಗಿದೆ. ಯಾವುದೇ ಬಹುಮಾನ ಅಥವಾ ಲಾಭದ ನಿರೀಕ್ಷೆಗಳಿಲ್ಲದೆ, ವಿಶೇಷ ಸಂಬಂಧಗಳಿಲ್ಲದೆ ಸ್ವಯಂ ಪ್ರೇರಿತವಾಗಿ ಅಪಘಾತದ ಗಾಯಾಳುಗಳಿಗೆ ನೆರವಾಗುವ ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಜನವರಿ 10ಕಡೆ ದಿನಾಂಕವಾಗಿದೆ. ಅರ್ಜಿ ನಮೂನೆಯನ್ನು ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉತ್ತರಕನ್ನಡ, ದೂರವಾಣಿ 8861005501 ಸಂಪರ್ಕಿಸಿ ಪಡೆಯಬಹುದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪ್ರವಾಸ

ಕಲಬುರಗಿ,ಜ.05.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಜನವರಿ 7ರಂದು ರಾತ್ರಿ 10 ಗಂಟೆಗೆ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.

ಸಚಿವರು ಜನವರಿ 8ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ಎಸ್.ಬಿ. ಲೇಕ್ ಅಡಿಟೋರಿಯಂನಲ್ಲಿ ವಂದಿತಾ ಆಫಿಸರ್ಸ್ ಲೇಡಿಜ್ ಕ್ಲಬ್‍ದಿಂದ ಏರ್ಪಡಿಸಿರುವ ಮಹಿಳಾ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 1 ಗಂಟೆಗೆ ಕಲಬುರಗಿಯಿಂದ ತೇರದಾಳಕ್ಕೆ ಪ್ರಯಾಣಿಸುವರು.

ಜನವರಿ 7ರಂದು ಭೀಮಳ್ಳಿಯಲ್ಲಿ ಜನಸ್ಪಂದನ

ಕಲಬುರಗಿ,ಜ.05.(ಕ.ವಾ.)-ಕಲಬುರಗಿ ತಾಲೂಕಿನ ಪಟ್ಟಣ ಹೋಬಳಿಯ ಭೀಮಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿ ಜನವರಿ 7ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಗ್ರೇಡ್-2 ತಹಸೀಲ್ದಾರ್ ದೇವೀಂದ್ರಪ್ಪ ನಾಡಗಿರಿ ತಿಳಿಸಿದ್ದಾರೆ. ಭೀಮಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಡುವ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕೆಂದು ಕೋರಿದ್ದಾರೆ.

ಜನವರಿ ಅಂತಯದೊಳಗೆ ಆಟೋಗಳಲ್ಲಿ ಮೀಟರ್ ಅಳವಡಿಸಿಕೊಳ್ಳಲು ಸೂಚನೆ

ಕಲಬುರಗಿ,ಜ.05.(ಕ.ವಾ.)-ಕಲಬುರಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ 2017ರ ಜನವರಿ ಅಂತ್ಯದೊಳಗೆ ಕಲಬುರಗಿ ನಗರದಲ್ಲಿರುವ ಎಲ್ಲ ಆಟೋರಿಕ್ಷಾ ಕ್ಯಾಬ್ ವಾಹನಗಳಿಗೆ ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳಾಗಿರುವ ಹಾಗೂ ಉಪ ಸಾರಿಗೆ ಆಯುಕ್ತ ಸಿದ್ದಪ್ಪ ಹೆಚ್. ಕಲ್ಲೇರ್ ಸೂಚಿಸಿದ್ದಾರೆ.

ಈ ಹಿಂದೆ 2016ರ ಮೇ ಅಂತ್ಯದೊಳಗೆ ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಳ್ಳಲು ಸೂಚಿಸಲಾಗಿದ್ದರೂ ಇನ್ನೂ ಅನೇಕ ಆಟೋರಿಕ್ಷಾ ಕ್ಯಾಬ್ ವಾಹನಗಳು ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಂಡಿರುವುದಿಲ್ಲ. ಇದಕ್ಕಾಗಿ ಪುನಃ ಬರುವ ಜನವರಿ ಅಂತ್ಯದೊಳಗೆ ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಳ್ಳಲು ಗಡುವು ನೀಡಲಾಗಿದೆ. ಈ ಗಡುವಿನ ಬಳಿಕ ನಗರದಲ್ಲಿ ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಳ್ಳದೆ ಸಂಚರಿಸುವ ಆಟೋರಿಕ್ಷಾ ಕ್ಯಾಬ್ ವಾಹನಗಳ ರಹದಾರಿಯನ್ನು ರದ್ದುಪಡಿಸಲಾಗುವುದು ಎಂದು ಉಪ ಸಾರಿಗೆ ಆಯುಕ್ತರು ತಿಳಿಸಿದ್ದಾರೆ.

24ರಂದು ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ

ರಾಮನಗರ ಜ. 05 (ಕರ್ನಾಟಕ ವಾರ್ತೆ):- ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಇದೇ ಮಾಹೆಯ 24ರಂದು ನಗರದ ಗುರುಭವನದಲ್ಲಿ ಭಕ್ತಿಭಾವದಿಂದ ಆಚರಿಸಲು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೇರಿದ್ದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ ಅವರ ಅಧ್ಯಕ್ಷತೆಯಲ್ಲಿ ಜ.4ರ ಬುಧವಾರ ನಗರದ ನೂತನ ಜಿಲ್ಲಾ ಸಂಕಿರ್ಣದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಣೆಯ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಮೇಲಿನಂತೆ ನಿರ್ಣಯ ಕೈಗೊಳ್ಳಲಾಯಿತು.

ಜ.24ರಂದು ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಎಲ್ಲರ ಸಹಭಾಗಿತ್ವದಲ್ಲಿ ಭಕ್ತಿಭಾವದಿಂದ ಆಚರಿಸಲಾಗುವುದು ಇದಕ್ಕಾಗಿ ವಿವಿಧ ರೀತಿಯ ಸಿದ್ದತೆಗಳನ್ನು ಕೈಗೊಳ್ಳಬೇಕಿದ್ದು, ಕನ್ನಡ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ ನಿರ್ದೇಶನ ನೀಡಿದರು.

ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಕರಪತ್ರಗಳ ಮುದ್ರಣ, ವಿತರಣೆ, ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆಯ ಬ್ಯಾನರ್ ಸಿದ್ದಪಡಿಸುವುದು ಸೇರಿದಂತೆ ವಿವಿಧ ರೀತಿಯ ಸಿದ್ದತೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಸ್ಥರು ನಿರ್ವಹಿಸುವಂತೆ ಜಿಲ್ಲಾಧಿಕಾರಿಯವರು ಸಹಾಯಕ ನಿರ್ದೇಶಕ ರಾಜು ಅವರಿಗೆ ತಿಳಿಸಿದರು.

ವೇದಿಕೆಯ ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರರ ವಚನಗಳ ಗಾಯನವನ್ನು ಸಹ ಏರ್ಪಾಡು ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಕಾರ್ಯಕ್ರಮ ನಡೆಯಲಿರುವ ಗುರುಭವನವನ್ನು ಸ್ಪಚ್ಚಗೊಳಿಸುವುದು, ಕುಡಿಯುವ ನೀರು ಪೂರೈಕೆ ಹಾಗೂ ಬಂದೋಬಸ್ತ್ ವ್ಯವಸ್ಥೆಯನ್ನು ಸಂಬಂಧಿಸಿದ ಇಲಾಖೆಗಳು ಸೂಕ್ತವಾಗಿ ನಿರ್ವಹಿಸಬೇಕು ಎಂದರು.

ಅಂದಿನ ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಪರಿಚಯ, ತತ್ವಾದರ್ಶಗಳ ಬಗ್ಗೆ ಅರಿವು ಮೂಡಬೇಕು, ಒಟ್ಟಾರೆ ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಶಿವಯೋಗಿ ಸಿದ್ದರಾಮೇಶ್ವರರ ಬಗ್ಗೆ ಉಪನ್ಯಾಸ ನೀಡಲು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಉಪನ್ಯಾಸಕ ಡಾ. ರವಿಕುಮಾರ್ ಬಾಗಿ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ. ಶೈಲಜಾ, ಅಪರ ಜಿಲ್ಲಾಧಿಕಾರಿ ಡಾ. ಪ್ರಶಾಂತ್, ನಗರಸಭೆಯ ಪೌರಾಯುಕ್ತರಾದ ಮಾಯಾಣ್ಣಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಸಮುದಾಯದ ಮುಖಂಡರು, ಶಿವಯೋಗಿ ಸಿದ್ದರಾಮೇಶ್ವರರ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಆಂದೋಲನ ಜಾಗೃತಿ ಜಾಥಾ

ಚಿತ್ರದುರ್ಗ,ಜನ.5-; ಏಪ್ರಿಲ್ 2017 ರಿಂದ ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ತತ್ಸಂಬಂಧ ಈ ಕಚೇರಿ ವ್ಯಾಪ್ತಿಯ ವರ್ತಕರುಗಳಿಗೆ/ತೆರಿಗೆ ಸಲಹೆಗಾರರಿಗೆ ಜಾಗೃತಿ ನೀಡಿ ಈ ಕಾಯ್ದೆಯ ವ್ಯಾಪ್ತಿಗೆ ತರುವುದಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು(ಕರ್ನಾಟಕ), ಬೆಂಗಳೂರು ಮತ್ತು ಮಾನ್ಯ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು(ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ ಇವರ ನಿರ್ದೇಶನದಂತೆ ದಿ: 6-1-2017 ರಂದು ಬೆ.10-30 ಕ್ಕೆ ಚಿತ್ರದುರ್ಗ ಪ್ರವಾಸಿ ಮಂದಿರ ವೃತ್ತದಿಂದ “ಜಾಗೃತಿ ಜಾಥಾ“ ವನ್ನು ವಾಣಿಜ್ಯ ತೆರಿಗೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಂಸ್ಟೇ ಮಾಲೀಕರ ನೋಂದಣಿಗೆ ಅವಧಿ ವಿಸ್ತರಣೆ

ಚಿಕ್ಕಮಗಳೂರು,ಜ.5:- ಪ್ರವಾಸೋದ್ಯಮ ಇಲಾಖೆ ವತಿಯಿಂದ ಈಗಾಗಲೇ ಅನುಮತಿ ಪಡೆದು ನಡೆಸುತ್ತಿರುವ ಹೋಂಸ್ಟೇಗಳ ಮಾಲೀಕರು ಹಾಗೂ ನೂತನವಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಹೋಂಸ್ಟೇಗಳ ಮಾಲೀಕರು ಆನ್‍ಲೈನ್ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಅವಧಿ ವಿಸ್ತರಿಸಲಾಗಿದೆ.

ಅರ್ಜಿ ಸಲ್ಲಿಸಲು ಜನವರಿ 26 ಕೊನೆಯದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿಣouಡಿism.oಡಿg ಅಥವಾ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಡಾ|| ಬಿ.ಆರ್ ಅಂಬೇಡ್ಕರ್ ರಸ್ತೆ, ಚಿಕ್ಕಮಗಳೂರು ದೂ.ಸಂ: 08262-228493 ಅನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

ಫಲಪುಷ್ಟ ಪ್ರದರ್ಶನ

ಚಿಕ್ಕಮಗಳೂರುಜ.5:- ತೋಟಗಾರಿಕೆ ಇಲಾಖೆ ವತಿಯಿಂದ 2016-17 ನೇ ಸಾಲಿನ ಫಲಪುಷ್ಪ ಪ್ರದರ್ಶನವನ್ನು ಜನವರಿ 26 ರಿಂದ 28 ರವರೆಗೆ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ವೈಶಿಷ್ಟತೆ ಹಾಗೂ ವೈವಿದ್ಯಮಯ ಮತ್ತು ಹೊಸ ಆಕರ್ಷಣೆಗಳೊಂದಿಗೆ ಏರ್ಪಡಿಸಲಾಗುವುದು.

ಎಸ್ಟೇಟ್ ಹಾಗೂ ನಗರ ಅಲಂಕಾರಿಕ ಉದ್ಯಾನವನಗಳ ಸ್ಪರ್ಧೆ, ಪ್ರದರ್ಶನದ ಆವರಣದಲ್ಲಿ ಅಲಂಕಾರಿಕ ಹೂವಿನ ಕುಂಡಗಳ ಜೋಡಣೆ, ತರಕಾರಿ/ಹಣ್ಣುಗಳ ಹಾಗೂ ಹೂವುಗಳ ಪ್ರದರ್ಶನ, ಹಾಗೂ ಜೋಡಣೆ ಸ್ಪರ್ಧೆಗಳಿಗೆ ಜಿಲ್ಲೆಯ ರೈತ ಬಾಂಧವರು, ನಾಗರೀಕರು, ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಚಿತ್ರಮಂದಿರಗಳು ತಮ್ಮ ತಮ್ಮ ತೋಟ ಹಾಗೂ ಉದ್ಯಾನವನಗಳ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರುಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08262-232858/235334 ಅನ್ನು ಸಂಪರ್ಕಿಸಬಹುದಾಗಿದೆ.

ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಮಿನಲ್ ಮೊಕದ್ದಮೆ-ಜಿಲ್ಲಾಧಿಕಾರಿ ಎಚ್ಚರಿಕೆ

ಬೆಳಗಾವಿ: ಜನೇವರಿ 05 (ಕರ್ನಾಟಕ ವಾರ್ತೆ): ಪ್ರತಿವರ್ಷ ಧ್ವಜಾರೋಹಣ ಸಂದರ್ಭದಲ್ಲಿ ನಿರ್ಲಕ್ಷ್ಯತೆ ಹಾಗೂ ಅಚಾತುರ್ಯ ಪ್ರಕರಣಗಳು ಕಂಡುಬರುತ್ತಿವೆ. ಆದ್ದರಿಂದ ಈ ಬಾರಿ ಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಆಗಿರುವುದು ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಎಚ್ಚರಿಕೆ ನೀಡಿದ್ದಾರೆ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಗುರುವಾರ(ಜ.5) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾರೂ ಉದ್ದೇಶಪೂರ್ವಕವಾಗಿ ಧ್ವಜಕ್ಕೆ ಅವಮಾನಿಸುವುದಿಲ್ಲ; ಆದರೆ ಧ್ವಜಾರೋಹಣ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರುವುದರಿಂದ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೇ ಖಾಸಗಿ ಸಂಸ್ಥೆಗಳು ಕೂಡ ಎಚ್ಚರಿಕೆ ವಹಿಸಬೇಕು. ಧ್ವಜಾರೋಹಣ ವೇಳೆ ಲೋಪದೋಷ ಉಂಟಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಬೆಳಗಾವಿ ಮಹಾನಗರ ಉಪ ಪೊಲೀಸ್ ಆಯುಕ್ತರಾದ ರಾಧಿಕಾ ಉಪಸ್ಥಿತರಿದ್ದರು.

ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಉಚಿತ ತರಬೇತಿ

ಬೆಳಗಾವಿ: ಜನೇವರಿ 05 (ಕರ್ನಾಟಕ ವಾರ್ತೆ): ಪಂಚಾಯ ಅಭಿವೃದ್ದಿ ಅಧಿಕಾರಿ (ಪಿ.ಡಿ.ಓ) ಈ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸದಾಶಿವನಗರ ಬೆಳಗಾವಿಯಲ್ಲಿ ಜನೇವರಿ 9 ರಿಂದ 14ರವರೆಗೆ ಮುಂಜಾನೆ 10-30 ರಿಂದ ಸಾಯಂಕಾಲ 5-30 ಗಂಟೆಯವರೆಗೆ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.

ಅರ್ಹ ಅಬ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತರಬೇತಿ ಮಾತ್ರ ಉಚಿತವಾಗಿದ್ದು. ಇನ್ನುಳಿದ ಯಾವುದೇ ಸೌಲಭ್ಯ ರುವುದಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಪರೀಕ್ಷೆಗಳು

ಮ0ಗಳೂರು ಜನವರಿ 05 ಕರ್ನಾಟಕ ವಾರ್ತೆ:- 2016-17ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ರಾಜ್ಯದ 18 ಕೇಂದ್ರಗಳಲ್ಲಿ ಹಾಗೂ ಗಡಿನಾಡ ಘಟಕದ 1 ಕೇಂದ್ರದಲ್ಲಿ 2017, ಜನವರಿ 20, 21 ಹಾಗೂ 27ರಂದು ಒಟ್ಟು ಮೂರು ದಿನ ನಡೆಯಲಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪರೀಕ್ಷಾ ಕೇಂದ್ರವು ಮಂಗಳೂರಿನ ಕೊಡಿಯಾಲ್‍ಬೈಲ್‍ನಲ್ಲಿರುವ ಶಾರದಾ ವಿದ್ಯಾಲಯವಾಗಿರುತ್ತದೆ. ಬೆಳಿಗ್ಗೆ ಗಂಟೆ 10ರಿಂದ 1 ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ಪರೀಕ್ಷಾ ಸಮಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಾರದಾ ವಿದ್ಯಾಲಯದ ಉಪ ಪ್ರಾಂಶುಪಾಲ ದಯಾನಂದ ಕಟೀಲು (9448545578) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಇಂದು ಅಧಿಕಾರ ಸ್ವೀಕಾರ

ಮ0ಗಳೂರು ಜನವರಿ 05 ಕರ್ನಾಟಕ ವಾರ್ತೆ:– ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಂಗಳೂರು ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ವಲಯದ ಪೋಲಿಸ್ ಮಹಾನಿರೀಕ್ಷಕರಾಗಿ ಪಿ.ಹರಿಶೇಖರನ್, ಐಪಿಎಸ್, ಅವರು ಜ.6ರಂದು ಅಧಿಕಾರ ಸ್ವೀಕರಿಸಲಿದ್ದಾರೆ.