Government of Karnataka

Department of Information

Saturday 21/01/2017

ಜಿಲ್ಲಾ ವಾರ್ತೆ 11-01-2017

Date : ಬುಧವಾರ, ಜನವರಿ 11th, 2017

ಜಿಲ್ಲಾ ಸುದ್ದಿಗಳು:

ಜ.15 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ

ಶಿವಮೊಗ್ಗ: ಜನವರಿ 11 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜ.15ರಂದು ನಡೆಯುವ 2016-17ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಾ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ|| ಎಂ. ಲೋಕೇಶ್ ಅದೇಶಿಸಿದ್ದಾರೆ.

ಜನವರಿ 15, ಭಾನುವಾರದಂದು ಶಿವಮೊಗ್ಗ ನಗರದ 17 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುತ್ತಿದು,್ದ ಈ ಪರೀಕ್ಷಾ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 7.30 ರಿಂದ ಸಂಜೆ 5-30 ಗಂಟೆವರೆಗೆ ಸಿಆರ್‍ಪಿಸಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆದೇಶಿಸಲಾಗಿದೆ.

ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಸುತ್ತಳತೆಯಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಸೇರುವುದು, ಮೊಬೈಲ್ ಬಳಸುವುದನ್ನು, ಟೈಪಿಂಗ್, ಜೆರಾಕ್ಸ್ ಹಾಗೂ ಫ್ಯಾಕ್ಸ್ ಅಂಗಡಿಗಳನ್ನು ಈ ಅವಧಿಯಲ್ಲಿ ತೆರೆಯುವುದನ್ನು ನಿಷೇಧಿಸಲಾಗಿದೆ. ಹಾಗೂ ಕೇಂದ್ರದ ಮುಖ್ಯದ್ವಾರದಲ್ಲಿ ಕಡ್ಡಾಯವಾಗಿ ಆರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿ ಅನಗತ್ಯ ವ್ಯಕ್ತಿಗಳ ಚಲನವಲನಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಠಾಣಾ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ಯಾವುದೇ ಶಾಂತಿ ಭಂಗ ಬಾರದಂತೆ 200 ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಸಚಿವೆ ಉಮಾಶ್ರೀ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಬಾಗಲಕೋಟೆ: ಜನವರಿ, 11 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಉಮಾಶ್ರೀಯವರು ಜನವರಿ 12 ರಂದು ಬೆಳಿಗ್ಗೆ 7.10 ಗಂಟೆಗೆ ಬೆಂಗಳೂರಿನಿಂದ ಬಾಗಲಕೋಟೆಗೆ ಆಗಮಿಸುವರು.

ಬೆಳಿಗ್ಗೆ 7.10 ರಿಂದ ಬಾಗಲಕೋಟೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, 11ಕ್ಕೆ ನವನಗರದ ಕಲಾಭವನದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಸಂಜೆ 4 ಗಂಟೆಗೆ ಬದಾಮಿ ಬನಶಂಕರಿಯಲ್ಲಿ ಜರಗುವ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 7.30ಕ್ಕೆ ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಇಂದು ರಾಷ್ಟ್ರೀಯ ಯುವ ದಿನಾಚರಣೆ

ಬಾಗಲಕೋಟೆ: ಜನವರಿ, 11 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾಲೇಜು ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಸಾರ್ವಜನಿಕ ಶಿಕ್ಷಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಜನವರಿ 12 ರಂದು ಸ್ವಾಮಿ ವಿವೇಕಾನಂದರ 154ನೇ ಜಯಂತ್ಯೋತ್ಸವ ನಿಮಿತ್ಯವಾಗಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 11 ಗಂಟೆಗೆ ನವನಗರದ ಕಲಾಭವನದಲ್ಲಿ ಜರುಗುವ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕøತಿ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಎಚ್.ವಾಯ್.ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ.ಗದ್ದಿಗೌಡರ, ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿದಂತೆ ಜಿಲ್ಲೆಯ ವಿವಿಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರ ಗಣ್ಯಮಾನ್ಯರು ಆಗಮಿಸಲಿದ್ದಾರೆ. ಹುನ್ನೂರು-ಮಧುರಖಂಡಿಯ ಜ್ಞಾನಯೋಗಾಶ್ರಮದ ಅಧ್ಯಕ್ಷ ಡಾ.ಈಶ್ವರ ಮಂಟೂರ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಶಿಶುಕ್ಷು ತರಬೇತಿಗೆ ಅರ್ಜಿ ಆಹ್ವಾನ

ಬಾಗಲಕೋಟೆ: ಜನವರಿ, 11 (ಕರ್ನಾಟಕ ವಾರ್ತೆ) : ಬೆಂಗಳೂರಿನ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ಅವರು ಏಪ್ರೀಲ್-17 ರಿಂದ ಪ್ರಾರಂಭವಾಗುವ ಶಿಶುಕ್ಷು ತರಬೇತಿಗಾಗಿ ವಿವಿಧ ವೃತ್ತಿಗಳಲ್ಲಿ ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 600 ಹುದ್ದೆಗಳಿದ್ದು, ಪಿಟ್ಟರ, ಟರ್ನರ್, ಮಷಿನಿಸ್ಟ್, ಎಲೇಕ್ಟ್ರಿಷಿಯನ್, ವೆಲ್ಡರ, ಕೋಪಾ ವೃತ್ತಿಯವರಿಗೆ ಒಂದು ವರ್ಷ ಹಾಗೂ ಶೀಟ್‍ಮೆಟಲ್ ವರ್ಕರ್, ಫೌಂಡ್ರಿಮನ್ ಮತ್ತು ಕಾರ್ಪೆಂಟರ್ ವೃತ್ತಿಯವರಿಗೆ ಎರಡು ವರ್ಷದ್ದಾಗಿರುತ್ತದೆ. ತರಬೇತಿ ಅವಧಿಯಲ್ಲಿ ಸರ್ಕಾರದ ನಿಯಮಾನುಸಾರ ಸ್ಟೈಫಂಡ ಮತ್ತು ಇತರ ಸೌಲಭ್ಯಗಳೂ ಲಭ್ಯವಿರುತ್ತದೆ. ಆಸಕ್ತರು ತಮ್ಮ ಮೂಲ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಅಂಗವಿಕಲವಿದ್ದಲ್ಲಿ ಅಂಗವಿಕಲ ಪ್ರಮಾಣ ಪತ್ರಗಳ ಝರಾಕ್ಸ್ ಪ್ರತಿ ಮತ್ತು ಪಾಸ್ ಪೋರ್ಟ ಸೈಜಿನ ಭಾವಚಿತ್ರದೊಂದಿಗೆ ಜನವರಿ 31 ರೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟ ಅವರಿಗೆ ಖುದ್ದಾಗಿ ಬಂದು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಜ. 15 ರಂದು ಟಿಇಟಿ ಪರೀಕ್ಷೆ : ಅಕ್ರಮಗಳಿಗೆ ಅವಕಾಶವಿಲ್ಲದಂತೆ ಪರೀಕ್ಷೆ ನಡೆಸಿ- ಎಂ. ಕನಗವಲ್ಲಿ

ಕೊಪ್ಪಳ ಜ. 11 (ಕರ್ನಾಟಕ ವಾರ್ತೆ): ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಪೂರ್ವದಲ್ಲಿ ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಜ. 15 ರಂದು ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.

ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜಿಲ್ಲೆಯಲ್ಲಿ ಪತ್ರಿಕೆ 01 ಕ್ಕೆ 3427 ಅಭ್ಯರ್ಥಿಗಳು ಹಾಗೂ ಪತ್ರಿಕೆ 02 ಕ್ಕೆ 5885 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪತ್ರಿಕೆ 01 ರ ಪರೀಕ್ಷೆ ಜ. 15 ರಂದು ಬೆಳಿಗ್ಗೆ 09 ರಿಂದ 12 ರವರೆಗೆ ಕೊಪ್ಪಳದ 05 ಮತ್ತು ಗಂಗಾವತಿಯ 05 ಸೇರಿದಂತೆ ಒಟ್ಟು 10 ಪರೀಕ್ಷಾ ಕೇಂದ್ರದಲ್ಲಿ ಜರುಗಲಿದೆ. ಪತ್ರಿಕೆ 02 ರ ಪರೀಕ್ಷೆ ಜ. 15 ರಂದು ಮಧ್ಯಾಹ್ನ 01 ಗಂಟೆಯಿಂದ ಸಂಜೆ 04-30 ರವರೆಗೆ ಕೊಪ್ಪಳದ 12 ಮತ್ತು ಗಂಗಾವತಿಯ 08 ಸೇರಿದಂತೆ 20 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಪರೀಕ್ಷೆ ಸುಗಮವಾಗಿ ಹಾಗೂ ಕಟ್ಟುನಿಟ್ಟಾಗಿ ಜರುಗಬೇಕು. ಪ್ರಶ್ನೆಪತ್ರಿಕೆಯನ್ನು ಖಜಾನೆಯಲ್ಲಿ ಸಮರ್ಪಕವಾಗಿ ಭದ್ರತೆಯಲ್ಲಿ ಇರಿಸಬೇಕು. ಅಲ್ಲದೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ಸರಿಯಾಗಿ ಭದ್ರತಾ ಸಿಬ್ಬಂದಿ ಹಾಗೂ ಜವಾಬ್ದಾರಿ ವಹಿಸಿರುವ ಅಧಿಕಾರಿಗಳೊಂದಿಗೆ ತಲುಪಿಸುವ ವ್ಯವಸ್ಥೆ ಆಗಬೇಕು. ಪ್ರಶ್ನೆಪತ್ರಿಕೆಯ ಭದ್ರತೆ ಬಗ್ಗೆ ಸಂಬಂಧಪಟ್ಟವರು ಎಲ್ಲ ರೀತಿಯ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಸಮರ್ಪಕ ಆಸನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಇರಬೇಕು. ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಪ್ರಶ್ನೆಪತ್ರಿಕೆಗಳನ್ನು ಖಜಾನೆಗೆ ತರುವುದು, ಠೇವಣಿ ಇರಿಸುವುದು, ನಂತರ ಪರೀಕ್ಷಾ ಕೇಂದ್ರಗಳಿಗೆ ಸಾಗಿಸುವುದು, ಪರೀಕ್ಷಾ ಕೇಂದ್ರದಲ್ಲಿನ ಎಲ್ಲ ಚಟುವಟಿಕೆಗಳನ್ನು ತಪ್ಪದೆ ವಿಡಿಯೋ ಚಿತ್ರೀಕರಣ ಮಾಡಬೇಕು. ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರೀಕ್ಷೆ ಕುರಿತು ವಿವರಣೆ ನೀಡಿದ ಶಿಕ್ಷಣ ಇಲಾಖೆಯ ಅಧಿಕಾರಿ ಎಂ. ಬಡದಾನಿ ಅವರು, ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಒಟ್ಟು 06 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷೆಗೆ ರಾಜ್ಯ ಮಟ್ಟದ ಪರೀಕ್ಷಾ ವೀಕ್ಷಕರನ್ನಾಗಿ ಬಳ್ಳಾರಿಯ ಡಯಟ್ ಉಪನಿರ್ದೇಶಕ ರಾಯಪ್ಪ ರಡ್ಡಿ ಅವರನ್ನು ಇಲಾಖೆ ನೇಮಿಸಿದೆ. ಅಲ್ಲದೆ ಸ್ಥಳೀಯ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಾಗೃತ ದಳವನ್ನು ರಚಿಸಲಾಗುವುದು ಎಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್, ಖಜಾನೆ ಇಲಾಖೆ ಅಧಿಕಾರಿ ಎಂ.ಎಚ್. ಕಳ್ಳೇರ್, ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಶಾಲಾ ಕಾಲೇಜು ಮುಖ್ಯಸ್ಥರು/ಪ್ರಾಂಶುಪಾಲರು ಉಪಸ್ಥಿತರಿದ್ದರು.

ಜ. 12 ರಂದು ಎಪಿಎಂಸಿ ಚುನಾವಣೆ : 60 ಕ್ಷೇತ್ರಗಳು, 329549 ಮತದಾರರು

ಕೊಪ್ಪಳ ಜ. 11 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ 60 ಕ್ಷೇತ್ರಗಳಿಗೆ ಜ. 12 ರಂದು ಮತದಾನ ನಡೆಯಲಿದ್ದು, ಚುನಾವಣೆಯನ್ನು ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

ಕ್ಷೇತ್ರಗಳು ಹಾಗೂ ಸ್ಪರ್ಧಿಗಳು : ಕುಷ್ಟಗಿ ಎಪಿಎಂಸಿಯಲ್ಲಿ 12 ಕ್ಷೇತ್ರಗಳಿದ್ದು 27 ಅಭ್ಯರ್ಥಿಗಳು ಸ್ಪರ್ಧೆ ಎದುರಿಸಲಿದ್ದಾರೆ. ಕೊಪ್ಪಳ ಎಪಿಎಂಸಿ ಯಲ್ಲಿ 12 ಕ್ಷೇತ್ರಗಳಿದ್ದು 26 ಅಭ್ಯರ್ಥಿಗಳು, ಗಂಗಾವತಿ ಎಪಿಎಂಸಿ ಯಲ್ಲಿ 13 ಕ್ಷೇತ್ರಗಳಿದ್ದು, 29 ಅಭ್ಯರ್ಥಿಗಳು ಸ್ಪರ್ಧೆ ಕೈಗೊಂಡಿದ್ದಾರೆ. ಯಲಬುರ್ಗಾ ಎಪಿಎಂಸಿಯಲ್ಲಿ 12 ಕ್ಷೇತ್ರಗಲಿದ್ದು, 28 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾರಟಗಿ ಎಪಿಎಂಸಿ ನಲ್ಲಿ 12 ಕ್ಷೇತ್ರಗಳಿದ್ದು, 29 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 60 ಕ್ಷೇತ್ರಗಳಿಗೆ 139 ಅಭ್ಯರ್ಥಿಗಳು ಸ್ಪರ್ಧೆ ಕೈಗೊಂಡಿದ್ದಾರೆ.
329549 ಮತದಾರರು : ಜಿಲ್ಲೆಯಲ್ಲಿ ಸದ್ಯ ನಡೆಯುತ್ತಿರುವ ಎಪಿಎಂಸಿ ಚುನಾವಣೆಯಲ್ಲಿ 254948 ಪುರುಷ ಮತ್ತು 74601 ಮಹಿಳೆ ಸೇರಿದಂತೆ ಒಟ್ಟು 329549 ಮತದಾರರು ಮತ ಚಲಾವಣೆ ಹಕ್ಕು ಪಡೆದುಕೊಂಡಿದ್ದಾರೆ. ಕುಷ್ಟಗಿಯಲ್ಲಿ 60439-ಪುರುಷ, 13857 ಮಹಿಳೆ, ಒಟ್ಟು 74296 ಮತದಾರರಿದ್ದಾರೆ. ಕೊಪ್ಪಳ ಎಪಿಎಂಸಿ ಸಂಬಂಧಿಸಿದಂತೆ 49830-ಪುರುಷ, 12092-ಮಹಿಳೆ, ಒಟ್ಟು -61922 ಮತದಾರರಿದ್ದಾರೆ. ಗಂಗಾವತಿ ಎಪಿಎಂಸಿನಲ್ಲಿ 59314-ಪುರುಷ, 21982-ಮಹಿಳೆ, ಒಟ್ಟು- 82196 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಯಲಬುರ್ಗಾ ಎಪಿಎಂಸಿ- 58049- ಪುರುಷ, 15638- ಮಹಿಳೆ, ಒಟ್ಟು- 73687 ಮತದಾರರಿದ್ದಾರೆ. ಕಾರಟಗಿ ಎಪಿಎಂಸಿ- 27316-ಪುರುಷ, 11032-ಮಹಿಳೆ ಸೇರಿದಂತೆ ಒಟ್ಟು 38348 ಮತದಾರರು ಮತ ಚಲಾಯಿಸಲಿದ್ದಾರೆ.

501 ಮತಗಟ್ಟೆ, 2004 ಚುನಾವಣಾ ಸಿಬ್ಬಂದಿ : ಜಿಲ್ಲೆಯಲ್ಲಿ ನಡೆಯುತ್ತಿರುವ ಎಪಿಎಂಸಿ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 501 ಮತಗಟ್ಟೆಗಳಿದ್ದು, 2004 ಜನ ಅಧಿಕಾರಿ/ಸಿಬ್ಬಂದಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಪಿಆರ್‍ಓ, ಎಪಿಆರ್‍ಒ, ಪಿಒ ಹಾಗೂ ಗ್ರೂಪ್-ಡಿ ಸಿಬ್ಬಂದಿಗಳು ಇರುವರು. ಕುಷ್ಟಗಿ ಎಪಿಎಂಸಿಗೆ 95 ಮತಗಟ್ಟೆಗಳಿದ್ದರೆ 380 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಕೊಪ್ಪಳ ಎಪಿಎಂಸಿ- 84 ಮತಗಟ್ಟೆಗಳು 336 ಸಿಬ್ಬಂದಿಗಳು. ಗಂಗಾವತಿ ಎಪಿಎಂಸಿ- 148 ಮತಗಟ್ಟೆಗಳು, 592 ಸಿಬ್ಬಂದಿಗಳು. ಕಾರಟಗಿ ಎಪಿಎಂಸಿ- 66 ಮತಗಟ್ಟೆಗಳು, 264 ಸಿಬ್ಬಂದಿಗಳು ಹಾಗೂ ಯಲಬುರ್ಗಾ ಎಪಿಎಂಸಿಗೆ 108 ಮತಗಟ್ಟೆಗಳಿದ್ದು, 432 ಸಿಬ್ಬಂದಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು.

166 ವಾಹನಗಳ ಬಳಕೆ : ಜಿಲ್ಲೆಯಲ್ಲಿನ ಎಪಿಎಂಸಿ ಚುನಾವಣೆ ಮತದಾನ ಪ್ರಕ್ರಿಯೆಗಾಗಿ 44 ಬಸ್, 82- ಕ್ರೂಸರ್, 40- ಸರ್ಕಾರಿ ಜೀಪುಗಳು ಸೇರಿದಂತೆ ಒಟ್ಟು 166 ವಾಹನಗಳನ್ನು ಬಳಸಲಾಗುತ್ತಿದೆ. ಗಂಗಾವತಿ ತಾಲೂಕು- 13 ಬಸ್, 37 ಕ್ರೂಸರ್, 16- ಸರ್ಕಾರಿ ಜೀಪುಗಳು, ಒಟ್ಟು 66 ವಾಹನಗಳು ಬಳಕೆಯಾಗಲಿವೆ. ಕೊಪ್ಪಳ ತಾಲೂಕು- 09 ಬಸ್, 12- ಕ್ರೂಸರ್, 06- ಸರ್ಕಾರಿ ಜೀಪು, ಒಟ್ಟು 27 ವಾಹನಗಳು. ಕುಷ್ಟಗಿ ತಾಲೂಕು- 13 ಬಸ್, 08 ಕ್ರೂಸರ್, 10- ಸರ್ಕಾರಿ ಜೀಪುಗಳು, ಒಟ್ಟು 31 ವಾಹನಗಳು. ಯಲಬುರ್ಗಾ ತಾಲೂಕು- 09 ಬಸ್, 25 ಕ್ರೂಸರ್, 8 ಸರ್ಕಾರಿ ಜೀಪುಗಳು ಸೇರಿದಂತೆ ಒಟ್ಟು 42 ವಾಹನಗಳನ್ನು ನಿಯೋಜಿಸಲಾಗಿದೆ.

ಮತದಾನಕ್ಕೆ ಪರ್ಯಾಯ ದಾಖಲೆ : ಜ. 12 ರಂದು ನಡೆಯಲಿರುವ ಮತದಾನಕ್ಕೆ ಭಾರತ ಚುನಾವಣಾ ಆಯೋಗದಿಂದ ನೀಡಲಾದ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಇತರೆ 22 ಪರ್ಯಾಯ ದಾಖಲೆಯ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ರಾಜ್ಯ/ಕೇಂದ್ರ ಹಾಘೂ ಸಾರ್ವಜನಿಕ ಉದ್ದಿಮೆಗಳು/ಖಾಸಗಿ ಔದ್ಯಮಿಕ ಸಂಸ್ಥೆಗಳು ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಸಾರ್ವಜನಿಕ ವಲಯದ ಬ್ಯಾಂಕ್/ಕಿಸಾನ್, ಅಂಚೆ ಕಚೇರಿ ನೀಡಿರುವ ಭಾವಚಿತ್ರ ಸಹಿತದ ಪಾಸ್‍ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೀಡಿರುವ ಗುರುತಿನ ಚೀಟಿ, ನೋಂದಾಯಿತ ಭಾವಚಿತ್ರವಿರುವ ಡೀಡ್/ಪಟ್ಟಾ, ಆಸ್ತಿ ದಾಖಲೆಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಎಸ್‍ಸಿ/ಎಸ್‍ಟಿ/ಓಬಿಸಿ ಪ್ರಮಾಣಪತ್ರಗಳು, ಪಿಂಚಣಿ ಪಾವತಿ ಆದೇಶ, ಯೋಧರಿ ಪಿಂಚಣಿ ಪುಸ್ತಕ, ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶ, ವಿಧವಾ ವೇತನ ಆದೇಶಗಳು, ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿ, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಸಂಧ್ಯಾ ಸುರಕ್ಷಾ ಯೋಜನೆಯ ಗುರುತಿನ ಚೀಟಿ, ಉದ್ಯೋಗಖಾತ್ರಿ ಯೋಜನೆಯಡಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಯಶಸ್ವಿನಿ ಕಾರ್ಡ್, ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಹಿರಿಯ ನಾಗರೀಕರ ಗುರುತಿನ ಚೀಟಿ, ಭಾವಚಿತ್ರವಿರುವ ಪಡಿತರ ಚೀಟಿ, ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ, ಆಧಾರ್ ಕಾರ್ಡ್. ಈ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ, ಮತದಾನ ಮಾಡಬಹುದಾಗಿದೆ.

ಮತ ಎಣಿಕೆ ಸ್ಥಳ ಹಾಗೂ ಸಿಬ್ಬಂದಿ ನಿಯೋಜನೆ: ಎಪಿಎಂಸಿ ಚುನಾವಣೆ ನಿಮಿತ್ಯ ಜ. 14 ರಂದು ಬೆಳಿಗ್ಗೆ 08 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಕುಷ್ಟಗಿ ಎಪಿಎಂಸಿ ಸಂಬಂಧಿಸಿದ ಮತಗಳ ಎಣಿಕೆ ಕುಷ್ಟಗಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಕೊಪ್ಪಳ- ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಗಂಗಾವತಿ ಮತ್ತು ಕಾರಟಗಿ ಎಪಿಎಂಸಿ- ಗಂಗಾವತಿಯ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು. ಯಲಬುರ್ಗಾ- ಸರ್ಕಾರಿ ಪ.ಪೂ. ಕಾಲೇಜು, ಪ್ರೌಢಶಾಲೆ ವಿಭಾಗ.

ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಸಲು 60 ಕ್ಷೇತ್ರಗಳಿಗೆ 60 ಟೇಬಲ್‍ಗಳು, 10 ಕೊಠಡಿಗಳು, 60 ಎಣಿಕೆ ಮೇಲ್ವಿಚಾರಕರು ಹಾಗೂ 60 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಕುಷ್ಟಗಿ- 12 ಕ್ಷೇತ್ರಗಳು, 12 ಟೇಬಲ್‍ಗಳು, 02 ಕೊಠಡಿಗಳು, 12 ಎಣಿಕೆ ಮೇಲ್ವಿಚಾರಕರು, 12 ಎಣಿಕೆ ಸಹಾಯಕರು. ಕೊಪ್ಪಳ- 11 ಕ್ಷೇತ್ರಗಳು, 11 ಟೇಬಲ್‍ಗಳು, 02 ಕೊಠಡಿಗಳು, 11 ಎಣಿಕೆ ಮೇಲ್ವಿಚಾರಕರು, 11 ಎಣಿಕೆ ಸಹಾಯಕರು. ಗಂಗಾವತಿ- 13 ಕ್ಷೇತ್ರಗಳು, 13 ಟೇಬಲ್‍ಗಳು, 02 ಕೊಠಡಿಗಳು, 13 ಎಣಿಕೆ ಮೇಲ್ವಿಚಾರಕರು, 13 ಎಣಿಕೆ ಸಹಾಯಕರು. ಕಾರಟಗಿ- 12 ಕ್ಷೇತ್ರಗಳು, 12 ಟೇಬಲ್‍ಗಳು, 02 ಕೊಠಡಿಗಳು, 12 ಎಣಿಕೆ ಮೇಲ್ವಿಚಾರಕರು, 12 ಎಣಿಕೆ ಸಹಾಯಕರು. ಯಲಬುರ್ಗಾ- 12 ಕ್ಷೇತ್ರಗಳು, 12 ಟೇಬಲ್‍ಗಳು, 02 ಕೊಠಡಿಗಳು, 12 ಎಣಿಕೆ ಮೇಲ್ವಿಚಾರಕರು, 12 ಎಣಿಕೆ ಸಹಾಯಕರುಗಳನ್ನು ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಸದ್ಯ ನಡೆಯುತ್ತಿರುವ ಎಪಿಎಂಸಿ ಚುನಾವಣೆಯನ್ನು ಮುಕ್ತವಾಗಿ, ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆಯಲು ಎಲ್ಲ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಭ್ರಷ್ಟಾಚಾರ ನಿಗ್ರಹದಳ: ಸಾರ್ವಜನಿಕರ ಕುಂದು-ಕೊರತೆ ಸಭೆ

ಶಿವಮೊಗ್ಗ: ಜನವರಿ 11 (ಕರ್ನಾಟಕ ವಾರ್ತೆ) : ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯಿಂದ ಪೊಲೀಸ್ ಉಪಾಧೀಕ್ಷಕರು ಇವರ ಅಧ್ಯಕ್ಷತೆಯಲ್ಲಿ ಜನವರಿ 2017 ರ ಮಾಹೆಯಲ್ಲಿ ತಾಲೂಕು ಮಟ್ಟದ ಸಾರ್ವಜನಿಕರಿಂದ ಕುಂದು-ಕೊರತೆಗಳನ್ನು, ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಾರ್ವಜನಿಕರ ಕುಂದು-ಕೊರತೆ ಸಭೆಯನ್ನು ಏರ್ಪಡಿಸಲಾಗಿದೆ.

ಈ ಸಭೆಯು ಜ. 13 ರಂದು ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1.00ರವರೆಗೆ ಭದ್ರಾವತಿ ಪ್ರವಾಸಿ ಮಂದಿರ, ಜ.17 ರಂದು ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1.00 ರವರೆಗೆ ಶಿಕಾರಿಪುರ ಪ್ರವಾಸಿ ಮಂದಿರ, ಜ.21 ರಂದು ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1.00 ರವರೆಗೆ ತೀರ್ಥಹಳ್ಳಿ ಪ್ರವಾಸಿ ಮಂದಿರ, ಜ.24 ರಂದು ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1.00 ರವರೆಗೆ ಹೊಸನಗರ ಪ್ರವಾಸಿ ಮಂದಿರ, ಜ.28 ರಂದು ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1.00 ರವರೆಗೆ ಸಾಗರ ಪ್ರವಾಸಿ ಮಂದಿರ, ಜ.30 ರಂದು ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1.00 ರವರೆಗೆ ಸೊರಬ ಪ್ರವಾಸಿ ಮಂದಿರಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು.

ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳ ಕುರಿತು ಆಗುತ್ತಿರುವ ಅನಗತ್ಯ ವಿಳಂಬ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾಹಿತಿಗಳಿದ್ದಲ್ಲಿ ನಿಗದಿತ ದಿನಾಂಕ, ಸಮಯ ಮತ್ತು ಸ್ಥಳಗಳಲ್ಲಿ ಖುದ್ದಾಗಿ ಹಾಜರಿದ್ದು, ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ

ಶಿವಮೊಗ್ಗ: ಜನವರಿ 11 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜ. 12 ರಿಂದ 19 ರವರೆಗೆ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಜ. 12 ರಂದು ಬೆಳಿಗ್ಗೆ 11.00ಕ್ಕೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ರವರ ಗೌರವ ಉಪಸ್ಥಿತಿಯಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸುವರು. ವಿಧಾನ ಸಭಾ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನಸಭಾ ಸದಸ್ಯ ಕಿಮ್ಮನೆ ರತ್ನಾಕರ್, ಜಿಲ್ಲಾಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್. ಕುಮಾರ್, ವಿಧಾನಸಭಾ ಸದಸ್ಯರುಗಳಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಎಂ.ಜೆ.ಅಪ್ಪಾಜಿ, ಬಿ.ವೈ.ರಾಘವೇಂದ್ರ, ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಭಾನುಪ್ರಕಾಶ್, ಆರ್. ಪ್ರಸನ್ನಕುಮಾರ್, ಮಹಾನಗರಪಾಲಿಕೆ ಮಹಾಪೌರ ಎಸ್.ಕೆ.ಮರಿಯಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಉಸ್ಮಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವೇದಾ ವಿಜಯಕುಮಾರ್, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ, ಮಹಾನಗರಪಾಲಿಕೆ ಉಪ ಮಹಾಪೌರರಾದ ಶ್ರೀಮತಿ ಮಂಗಳ ಅಣ್ಣಪ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾಧಿಕಾರಿ ಎಂ. ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಇವರುಗಳು ಉಪಸ್ಥಿತರಿರುವರು.
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿನಯಾನಂದ ಸರಸ್ವತಿ ಸ್ವಾಮೀಜಿರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.

ಶೀಘ್ರಲಿಪಿ, ಬೆರಳಚ್ಚುಗಾರ ಮತ್ತು ಜಾರಿಕಾರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ, ಜನವರಿ 11 (ಕರ್ನಾಟಕ ವಾರ್ತೆ) : ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ-02, ಬೆರಳಚ್ಚುಗಾರ-04 ಮತ್ತು ಜಾರಿಕಾರ-10 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಹುದ್ದೆಗೆ ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜಾರಿಕಾರ ಹುದ್ದೆಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಮೀಸಲಾತಿ ಹಾಗೂ ಅಂಕಗಳ ಜೇಷ್ಠತೆಯ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಯು ಹುದ್ದೆಗೆ ತಕ್ಕ ವಿದ್ಯಾರ್ಹತೆ ಹೊಂದಿದ್ದು, ನಿಗಧಿಪಡಿಸಿದ ವಯೋಮಿತಿಯೊಳಗಿನವರಾಗಿರಬೇಕು. ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಯು ಜನವರಿ 28ರೊಳಗಾಗಿ ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ನ್ಯಾಯಾಲಯದ ಅಂತರ್ಜಾಲತಾಣ www.ecourts.gov.in/shivamogga/online-recruitment ನ್ನು ವೀಕ್ಷಿಸಬಹುದಾಗಿದೆ ಎಂದು ನ್ಯಾಯಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೌಟುಂಬಿಕ ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ, ಜನವರಿ 11 (ಕರ್ನಾಟಕ ವಾರ್ತೆ) : ಶಿವಮೊಗ್ಗದ ವಿದ್ಯಾಭಾರತಿ ಎಜುಕೇಶನ್ ಟ್ರಸ್ಟ್ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಇವರ ಸಹಯೋಗದೊಂದಿಗೆ ಶಿವಮೊಗ್ಗದ ಬಸವೇಶ್ವರ ಕಾಲೇಜು ಎದುರು, ಹಳೇ ತಾಲೂಕು ಕಚೇರಿ ರಸ್ತೆಯಲ್ಲಿರುವ ಮಹಿಳಾ ಸಮಾಜದ ಕಟ್ಟಡದಲ್ಲಿ ಸಮರಸ ಕೌಟುಂಬಿಕಾ ಸಲಹಾ ಕೇಂದ್ರವನ್ನು ನಡೆಸುತ್ತಿದೆ.

ಈ ಕೇಂದ್ರದಲ್ಲಿ ಖಾಲಿ ಇರುವ ಕೌಟುಂಬಿಕ ಸಲಹೆಗಾರರ ಒಂದು ಹುದ್ದೆಗೆ ಸಮಾಜಕಾರ್ಯ ವಿಷಯದಲ್ಲಿ ಅಥವಾ ಮನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪದವೀಧರರು ಜನವರಿ 16ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಮಾಹಿತಿಗಾಗಿ ಅಧ್ಯಕ್ಷರು/ಕಾರ್ಯದರ್ಶಿ, ಸಮರಸ ಕೌಟುಂಬಿಕಾ ಸಲಹಾ ಕೇಂದ್ರ, ವಿದ್ಯಾಭಾರತಿ ಎಜುಕೇಶನ್ ಟ್ರಸ್ಟ್, ಹಳೇ ತಾಲೂಕು ಕಚೇರಿ ರಸ್ತೆ, ಮಹಿಳಾ ಸಮಾಜದ ಕಟ್ಟಡ, ಶಿವಮೊಗ್ಗ ದೂರವಾಣಿ ಸಂಖ್ಯೆ 08182-275820ನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲೆಯಲ್ಲಿ 1561 ಮತಗಟ್ಟೆ; 10.38 ಲಕ್ಷ ಮತದಾರರು ಎಪಿಎಂಸಿ ಚುನಾವಣೆ: ಮತದಾನ ಜ.12ರಂದು

ಬೆಳಗಾವಿ, ಜನವರಿ 11(ಕರ್ನಾಟಕ ವಾರ್ತೆ): 140 ಕ್ಷೇತ್ರಗಳ ಪೈಕಿ 28 ಮತಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಒಟ್ಟು 105 ಮತಕ್ಷೇತ್ರಗಳಲ್ಲಿ ಗುರುವಾರ(ಜನವರಿ 12) ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ತಿಳಿಸಿದ್ದಾರೆ.

ಎಪಿಎಂಸಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮತದಾರರು ನಿರ್ಭಯವಾಗಿ ಮತವನ್ನು ಚಲಾಯಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಮತಗಟ್ಟೆಗಳಲ್ಲಿ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಯರಾಮ್ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮತಗಟ್ಟೆಗಳ 100 ಮೀಟರ್ ಸುತ್ತಳತೆಯಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಹಾಗೂ ಮತಗಟ್ಟೆ ಇರುವ ಶಾಲಾ-ಕಾಲೇಜುಗಳಿಗೆ ಎರಡು ದಿನ (ಜ.11 ಹಾಗೂ 12) ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.
ಜನವರಿ 12ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಒಂದು ವೇಳೆ ಅಗತ್ಯಬಿದ್ದರೆ ಮಾರನೇ ದಿನ ಅಂದರೆ ಜನವರಿ 13ರಂದು ಮರುಮತದಾನ ನಡೆಸಲಾಗುವುದು.

ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಜನವರಿ 14ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

1561 ಮತಗಟ್ಟೆಗಳು:

ಜಿಲ್ಲೆಯಲ್ಲಿ ಒಟ್ಟು 1561 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ ಹಾಗೂ ಇಬ್ಬರು ಮತಗಟ್ಟೆ ಸಿಬ್ಬಂದಿಗಳಂತೆ ಒಟ್ಟು 6870 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮತಗಟ್ಟೆ ಸಿಬ್ಬಂದಿ ಹಾಗೂ ಮತದಾನ ಸಲಕರಣೆಗಳ ಸಾಗಾಣಿಕೆಗಾಗಿ 139 ಬಸ್, 41 ಮಿನಿ ಬಸ್, 91 ಕ್ರೂಸರ್ ಹಾಗೂ 28 ಜೀಪ್‍ಗಳನ್ನು ಒದಗಿಸಲಾಗಿದೆ.
ಹತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಒಟ್ಟು 10.38 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಯರಾಮ್ ತಿಳಿಸಿದರು.
ಮತದಾನಕ್ಕೆ ಆಗಮಿಸುವ ಮತದಾರರು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಅಥವಾ ಇತರೆ 22 ಗುರುತಿನ ಚೀಟಿಗಳ ಪೈಕಿ ಯಾವುದಾದರು ಒಂದನ್ನು ತರಬೇಕಾಗುತ್ತದೆ ಎಂದು ಹೇಳಿದರು.

ಚುನಾವಣೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮತದಾರರು ಯಾವುದೇ ಆತಂಕವಿಲ್ಲದೇ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.

ಎಲ್ಲೆಡೆ ಬಿಗಿಭದ್ರತೆ:

ಬೆಳಗಾವಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್ಟ ತಿಳಿಸಿದರು.

ಇಬ್ಬರು ಡಿಸಿಪಿ ನೇತೃತ್ವದಲ್ಲಿ 4 ಎಸಿಪಿ, 250 ಹೆಡ್ ಕಾನ್ಸ್‍ಟೇಬಲ್ ಹಾಗೂ 100 ಗೃಹರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಅದೇ ರೀತಿ ಜಿಲ್ಲೆಯ 12 ಪೊಲೀಸ್ ವೃತ್ತಗಳ ವ್ಯಾಪ್ತಿಯಲ್ಲಿ 1435 ಮತಗಟ್ಟೆಗಳಲ್ಲಿ ಎಪಿಎಂಸಿ ಚುನಾವಣೆ ನಡೆಯುತ್ತಿದ್ದು, ಒಟ್ಟು 9 ಡಿವೈಎಸ್‍ಪಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದರು.

12 ಇನ್ಸಪೆಕ್ಟರ್‍ಗಳು, 36 ಪಿಎಸ್‍ಐ, 50ಎಎಸ್‍ಐ ಹಾಗೂ 1028 ಕಾನ್ಸಟೇಬಲ್‍ಗಳನ್ನು ನಿಯೋಜಿಸಲಾಗಿದ್ದು, ಮತಗಟ್ಟೆಯ ಸೂಕ್ಷ್ಮತೆಗೆ ಅನುಗುಣವಾಗಿ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಳಂದ ವಿವಿಗೆ ಭೂಮಿ : ಮುಖ್ಯ ಮಂತ್ರಿಯವರಿಗೆ ಧ್ರುವನಾರಾಯಣ ಕೃತಜ್ಞತೆ

ಚಾಮರಾಜನಗರ, ಜ. 11 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲ್ಳೂಕಿನ ಉತ್ತುವಳ್ಳಿಯಲ್ಲಿ ನಳಂದ ಬೌದ್ದ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಟ್ರಸ್ಟ್‍ಗೆ 25 ಎಕರೆ ಭೂಮಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಮುಖ್ಯ ಮಂತ್ರಿಯವರಾದ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪರವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಲ್ಲೂಕಿನ ಉತ್ತುವಳ್ಳಿ ಗ್ರಾಮದ ಸ.ನಂ.117 ರಲ್ಲಿ 464.36 ಎಕರೆ ಪೈಕಿ 25ಎಕರೆ ಜಮೀನನ್ನು ಬೌದ್ದ ವಿವಿ ಸ್ಥಾಪನೆಗೆ ಮಂಜೂರು ಮಾಡಲು ಜನವರಿ 10 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಜಿಲ್ಲೆಯ ಸಮಗ್ರ ಅಭಿವೃದ್ದಿಯ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯನವರಿಗೆ ಹಾಗೂ ಕಂದಾಯ ಸಚಿವರಾದ ಕಾಗೋಡುತಿಮ್ಮಪ್ಪರವರಿಗೆ ವೈಯಕ್ತಿಕವಾಗಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿರುವುದಾಗಿ ಧ್ರುವನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ಬಜೆಟ್‍ನಲ್ಲಿ ಜಿಲ್ಲೆಗೆ ಅನುಕೂಲತೆಗಳನ್ನು ಕಲ್ಪಿಸುವಂತೆ ಕೋರಿ ಸಂಸದ ಧ್ರುವನಾರಾಯಣ ಅವರಿಂದ ಕೇಂದ್ರ ಸಚಿವರಿಗೆ ಪತ್ರ

ಚಾಮರಾಜನಗರ, ಜ. 11 (ಕರ್ನಾಟಕ ವಾರ್ತೆ):- ಮುಂಬರುವ 2017-18ನೇ ಸಾಲಿನ ರೈಲ್ವೆ ಬಜೆಟ್‍ನಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ರೈಲ್ವೆ ಅನುಕೂಲತೆಗಳನ್ನು ಕಲ್ಪಿಸುವಂತೆ ಕೋರಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರಿಗೆ ವಿವರವಾದ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ನಂಜನಗೂಡು ಪಟ್ಟಣದ ಎಲ್.ಸಿ. 20ಬಿ2 ಕ್ಲಾಸ್ (ಟ್ರಾಫಿಕ್) ಕಿ.ಮೀ. 25/600-700ರಲ್ಲಿ ರೈಲ್ವೆ ಮೇಲುಸೇತುವೆ ಅಥವಾ ಕೆಳ ಸೇತುವೆಯನ್ನು ನಿರ್ಮಾಣ ಮಾಡಬೇಕು. ಏಕೆಂದರೆ ನಂಜನಗೂಡು ಪಟ್ಟಣದ ಪ್ರಮುಖ ಮಾರುಕಟ್ಟೆ ಪ್ರದೇಶವೂ ಸಹ ಇದೇ ವ್ಯಾಪ್ತಿಯಲ್ಲಿ ಇದ್ದು ಅಪಾಯಕಾರಿಯಾದ ಈ ಜಾಗದಲ್ಲಿ ಬಹಳಷ್ಟು ಜನರು ಹಾದುಹೋಗುತ್ತಿದ್ದಾರೆ. ಹೀಗಾಗಿ ರೈಲ್ವೆ ಮೇಲು ಸೇತುವೆ ಅಥವಾ ಕೆಳ ಸೇತುವೆಯನ್ನು ತುರ್ತಾಗಿ ನಿರ್ಮಾಣ ಮಾಡಬೇಕಿದೆ ಎಂದು ಲೋಕಸಭಾ ಸದಸ್ಯರು ಪ್ರಸ್ತಾಪಿಸಿದ್ದಾರೆ.
ಕವಲಂದೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಮತ್ತು ಕವಲಂದೆಯಲ್ಲಿ ರೈಲ್ವೆ ಕ್ರಾಸಿಂಗ್ ಪಾಯಿಂಟ್ ಮಾಡಬೇಕು. ಚಾಮರಾಜನಗರ ಜಿಲ್ಲೆಯಿಂದ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಇಜ್ಜತ್ ಪಾಸ್ ಉಳ್ಳ 8 ಸಾವಿರ ಕಾರ್ಮಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಿಗಳು ಸೇರಿದಂತೆ ಇತರೆ ವರ್ಗದ ಜನರು ಚಾಮರಾಜನಗರ ಹಾಗೂ ಮೈಸೂರಿಗೆ ನಂಜನಗೂಡು ಮಾರ್ಗವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಚಾಮರಾಜನಗರ ರೈಲು ನಿಲ್ದಾಣದಿಂದ ಮೈಸೂರು ರೈಲುನಿಲ್ದಾಣಕ್ಕೆ 65 ಕಿ.ಮೀ. ಇದೆ. ಮೈಸೂರಿನಿಂದ ನಂಜನಗೂಡು ರೈಲು ನಿಲ್ದಾಣದ ನಡುವೆ ಅಶೋಕಪುರಂ, ಕಡಕೊಳ ಹಾಗೂ ನಂಜನಗೂಡು ರೈಲು ನಿಲ್ದಾಣದಲ್ಲಿ ರೈಲ್ವೆ ಕ್ರಾಸಿಂಗ್ ಪಾಯಿಂಟ್‍ಗಳಿವೆ. ಆದರೆ ನಂಜನಗೂಡು ಚಾಮರಾಜನಗರ ನಡುವೆ 35 ಕಿ.ಮೀ. ದೂರವಿದ್ದು ಇಲ್ಲಿ ಯಾವುದೇ ರೈಲ್ವೆ ಕ್ರಾಸಿಂಗ್ ಪಾಯಿಂಟ್ ಇಲ್ಲ. ಹೀಗಾಗಿ ರೈಲು ತಡವಾಗಿ ಹೊರಟ ಸಂದರ್ಭ ಇಲ್ಲವೇ ರೈಲ್ವೆ ವೇಗನ್ ಸಂಚರಿಸುವ ವೇಳೆ ಇನ್ನಿತರ ಸಂದರ್ಭದಲ್ಲಿ ಪ್ರಯಾಣಿಕರು 45 ನಿಮಿಷದಿಂದ 1 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಕವಲಂದೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಜತೆಗೆ ರೈಲ್ವೆ ಪಾಯಿಂಟ್ ಮಾಡಬೇಕು. ಇದಕ್ಕಾಗಿ ಅಗತ್ಯವಿರುವ ಜಾಗ ಸಹ ಲಭ್ಯವಿದೆ ಎಂದು ಧ್ರುವನಾರಾಯಣ ಪ್ರಸ್ತಾಪಿಸಿದ್ದಾರೆ.

ಚಾಮರಾಜನಗರದಿಂದ ಬೆಂಗಳೂರಿಗೆ ಮತ್ತೊಂದು ಎಕ್ಸ್‍ಪ್ರೆಸ್ ರೈಲನ್ನು ಚಾಲನೆ ಮಾಡಬೇಕು. ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಈಗಾಗಲೇ ಪ್ರಾರಂಭವಾಗಿದೆ. ನೆರೆಯ ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ಜಿಲ್ಲೆಯು ಹೊಂದಿಕೊಂಡಿದೆ. ಹೀಗಾಗಿ ವಾಣಿಜ್ಯ ಉದ್ಯಮ ಸರಕುಗಳ ಸಾಗಣೆ ಮತ್ತು ಸಕಾಲದಲ್ಲಿ ಬೆಂಗಳೂರನ್ನು ತಲುಪಲು ಎಕ್ಸ್‍ಪ್ರೆಸ್ ರೈಲು ಅಗತ್ಯವಿರುವ ಬಗ್ಗೆ ಜಿಲ್ಲೆಯ ಜನತೆಯ ಒತ್ತಾಯವಿದೆ. ಹೀಗಾಗಿ ಮತ್ತೊಂದು ಎಕ್ಸ್‍ಪÉ್ರಸ್ ರೈಲು ಸೌಲಭ್ಯವನ್ನು ಒದಗಿಸುವಂತೆ ಧ್ರುವನಾರಾಯಣ ವಿವರಿಸಿದ್ದಾರೆ.

ಚಾಮರಾಜನಗರಕ್ಕೆ ಮೈಸೂರು – ಹುಬ್ಬಳ್ಳಿ ಮತ್ತು ಮೈಸೂರು – ಶಿವಮೊಗ್ಗ ರೈಲು ಸಂಚಾರವನ್ನು ವಿಸ್ತರಿಸುವಂತೆಯೂ ಕೋರಿರುವ ಧ್ರುವನಾರಾಯಣ ಅವರು ಇದರಿಂದ ನಂಜನಗೂಡು, ತಾಂಡವಪುರ, ಕಡಕೊಳ ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗಲಿದೆ. ಜತೆಗೆ ಚಾಮರಾಜನಗರಕ್ಕೂ ಸಂಚಾರವನ್ನು ವಿಸ್ತರಣೆ ಮಾಡುವುದರಿಂದ ಇಲ್ಲಿನ ಜನರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಸ್ಥಳೀಯ ಜನರ ಬೇಡಿಕೆಯಾಗಿದೆ ಎಂದಿದ್ದಾರೆ.

ಚಾಮರಾಜನಗರ ರೈಲುನಿಲ್ದಾಣದಲ್ಲಿ ರೈಲ್ವೆ ಕ್ಲೀನಿಂಗ್ ಘಟಕವನ್ನು ಸ್ಥಾಪಿಸಬೇಕು. ಮೈಸೂರಿನಲ್ಲಿ ಈಗಾಗಲೇ ಇರುವ ಕ್ಲೀನಿಂಗ್ ಘಟಕದಲ್ಲಿ ಹೆಚ್ಚು ಸಂಖ್ಯೆಯ ರೈಲುಗಳು ನಿಗದಿತ ಸಮಯದಲ್ಲಿ ಇರಲು ಕಷ್ಟವಾಗಲಿದೆ. ಹೀಗಾಗಿ ಮೈಸೂರಿಗೆ ಹತ್ತಿರವಿರುವ ಚಾಮರಾಜನಗರ ರೈಲು ನಿಲ್ದಾಣದಲ್ಲಿ ಕ್ಲೀನಿಂಗ್ ಘಟಕವನ್ನು ಸ್ಥಾಪಿಸುವುದು ಅತಿ ಅವಶ್ಯವಾಗಿದೆ.

ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯ ಅವಧಿಯಲ್ಲಿ ಮತ್ತೊಂದು ರೈಲು ಸಂಚಾರ ಆರಂಭಿಸಬೇಕು. ಏಕೆಂದರೆ ಬೆಳಗಿನಿಂದ ಮಧ್ಯಾಹ್ನದ ಅವಧಿಯ ಒಟ್ಟು ನಾಲ್ಕೂವರೆ ಗಂಟೆಯ ಅವಧಿಯಲ್ಲಿ ಯಾವುದೇ ರೈಲು ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಂದು ರೈಲು ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ವಿವರಿಸಿದ್ದಾರೆ.

ಆಹಾರ ಪದಾರ್ಥಗಳ ಸಾಗಾಣಿಕೆ, ಇತರೆ ಸರಕು ರವಾನೆಗೆ ಚಾಮರಾಜನಗರ ರೈಲ್ವೆ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಜಿಲ್ಲಾ ಕೇಂದ್ರವಾದ ಚಾಮರಾಜನಗರ ರೈಲು ನಿಲ್ದಾಣ ಆವರಣದಲ್ಲಿ ವಾಣಿಜ್ಯ ಸಮುಚ್ಛಯವನ್ನು ನಿರ್ಮಾಣ ಮಾಡುವುದು ತುಂಬಾ ಅಗತ್ಯವಿದೆ ಎಂದು ಮನವರಿಕೆ ಮಾಡಿದ್ದಾರೆ.

ಪ್ರಯಾಣಿಕರ ಸುಗಮ ಹಾಗೂ ತ್ವರಿತ ಸಂಚಾರಕ್ಕೆ ಮೈಸೂರು ಚಾಮರಾಜನಗರ ನಡುವಿನ 65 ಕಿ.ಮೀ. ಇರುವ ಪ್ರಸ್ತುತ ಟ್ರಾಕನ್ನು ಡಬ್ಬಲ್ ಟ್ರಾಕ್ ಆಗಿ ಪರಿವರ್ತಿಸಬೇಕು. ಕೃಷ್ಣಗಿರಿ – ಚಾಮರಾಜನಗರ ಮತ್ತು ತಲಚೆರಿ – ಮೈಸೂರು (ಗುಂಡ್ಲುಪೇಟೆ ಮಾರ್ಗ) ಯೋಜನೆಯು ಈಗಾಗಲೇ ಬಜೆಟ್‍ನಲ್ಲಿ ಸೇರ್ಪಡೆಯಾಗಿದೆ. ಆದರೆ ಸರ್ವೆ ಕಾರ್ಯ ಮತ್ತು ಅನುಷ್ಠಾನ ಪ್ರಕ್ರಿಯೆ ಬಾಕಿ ಉಳಿದಿದ್ದು ಶೀಘ್ರವೇ ಈ ಕಾರ್ಯ ಪೂರ್ಣವಾಗಬೇಕು ಎಂದು ಧ್ರುವನಾರಾಯಣ ಅವರು ಪತ್ರದಲ್ಲಿ ಕೋರಿದ್ದಾರೆ.