Government of Karnataka

Department of Information

Tuesday 12/12/2017

ಜಿಲ್ಲಾ ವಾರ್ತೆ 19-01-2017

Date : ಗುರುವಾರ, ಜನವರಿ 19th, 2017

ಜಿಲ್ಲಾ ಸುದ್ದಿಗಳು:

ಬಾಲ್ಯ ವಿವಾಹ ತಡೆ ಆಂದೋಲನಕ್ಕೆ ಜಾಥಾ

ಉಡುಪಿ, ಜನವರಿ 19 (ಕರ್ನಾಟಕ ವಾರ್ತೆ):- ಬಾಲ್ಯ ವಿವಾಹ ತಡೆಯುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಜನವರಿ 21ರಂದು ಬೆಳಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದೇ ದಿನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

21ರಂದು ಬೆಳಗ್ಗೆ ನಗರದ ಬೋರ್ಡ್ ಹೈಸ್ಕೂಲ್‍ನಿಂದ ಬಾಲಕಿಯರ ಜೂನಿಯರ್ ಕಾಲೇಜುವರೆಗೆ ಜಾಥಾವನ್ನು ಆಯೋಜಿಸಲಾಗಿದ್ದು, ಬೆಳಗ್ಗೆ 9 ಗಂಟೆಗೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ವನಿತಾ ತೊರವಿ ಚಾಲನೆ ನೀಡಲಿದ್ದಾರೆ. 10 ಗಂಟೆಗೆ ಜೂನಿಯರ್ ಗಲ್ರ್ಸ್ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಸಂಬಂಧ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ಇಂದು ತಾಲೂಕು ಪಂಚಾಯತ್‍ನಲ್ಲಿ ನಡೆಯಿತು.

ಮತದಾರರ ಪಟ್ಟಿ ಪರಿಷ್ಕರಣೆ

ಉಡುಪಿ, ಜನವರಿ 19 (ಕರ್ನಾಟಕ ವಾರ್ತೆ) ಜನವರಿ 2017 ಕ್ಕೆ 18 ವರ್ಷ ಪೂರ್ಣಗೊಳಿಸಿರುವ ಉಡುಪಿ ಜಿಲ್ಲೆಯಲ್ಲಿ ವಾಸವಿರುವ ಅರ್ಹ ಭಾರತೀಯ ನಾಗರೀಕರಿಂದ ಮತದಾರರ ಪಟ್ಟಯಲ್ಲಿ ಹೆಸರು ನೊಂದಣಿ , ತಿದ್ದುಪಡಿ ಮತ್ತು ತೆಗೆದುಹಾಕಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಬಗಗೆ ನಿಗಧಿತ ನಮೂನೆಯ ಅಜಿಯಲ್ಲಿ ಪೂರಕ ಮಾಹಿತಿ ತುಂಬಿ ದಾಖಲೆಗಳೊಂದಿಗೆ ಆಯಾ ಕ್ಷೇತ್ರದ ಮತಗಟ್ಟೆ ಅಧಿಕಾರಿ ಅಥವಾ ಆಯಾ ತಲೂಕಿನ ತಹಸೀಲ್ದಾರ್/ವಿಶೇಷ ತಹಸೀಲ್ದಾರ್ ರಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತಗಟ್ಟೆ ಅಧಿಕಾರಿ, ಸ್ಥಳೀಯ ತಹಸೀಲ್ದಾರ್/ವಿಶೇಷ ತಹಸೀಲ್ದಾರ್ ಮತ್ತು ಸಹಾಯಕ ಕಮೀಷನರ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಅರ್ಜಿಗಳನ್ನು www.voterreg.kar.nic.in ರಲ್ಲಿ ಆನ್ ಲೈನ್ ನಲ್ಲಿ ಸಲ್ಲಿಸಿ, ಅವುಗಳ ಪ್ರಿಂಟ್ ಔಟ್ ಗಳನ್ನು ಡೌನ್ ಲೋಡ್ ಮಾಡಿ, ಪೂರಕ ದಾಖಲೆಗಳೊಂದಿಗೆ 7 ದಿನಗಳ ಒಳಗೆ ಜಿಲ್ಲಾ ಚುನಾವಣಾಧಿಕಾರಿ, ರಜತಾದ್ರಿ ಮಣಿಪಾಲ ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಉಚಿತ ಆಯುಷ್ ಶಿಬಿರ

ಉಡುಪಿ, ಜನವರಿ 19 (ಕರ್ನಾಟಕ ವಾರ್ತೆ) ಜಿಲ್ಲಾ ಪಂಚಾಯತ್ ಉಡುಪಿ, ಆಯುಷ್ ಇಲಾಖೆ ಇವರ ವತಿಯಿಂದ ಎಸ್.ಸಿ.ಪಿ ಯೋಜನೆಯಡಿಯಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿದ್ದು, ಜನವರಿ 22 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ತಾನದ ಸಭಾಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಲಕಾನಂದ ರಾವ್ ತಿಳಿಸಿದ್ದಾರೆ.

ಮಲೆಶಂಕರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ

ಶಿವಮೊಗ್ಗ, ಜನವರಿ 19 (ಕರ್ನಾಟಕ ವಾರ್ತೆ): ಕುವೆಂಪು ವಿಶ್ವವಿದ್ಯಾನಿಲಯ, ದೇಶೀಯ ವಿದ್ಯಾಶಾಲಾ ಸಮಿತಿ, ಡಿ.ವಿ.ಎಸ್.ಕಲಾ ಮತ್ತು ವಿಜ್ಞಾನ ಕಾಲೇಜು ಸಂಯುಕ್ತಾಶ್ರಯದಲ್ಲಿ ಜ. 18 ರಿಂದ 24 ರವರೆಗೆ ಮಲೇಶಂಕರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ “ವಿಜ್ಞಾನ ಮತ್ತು ವೈಜ್ಞಾನಿಕ ಮನೋಧಮಕ್ಕಾಗಿ ಯುವಜನತೆ” ಎಂಬ ಘೋಷಣೆಯಡಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ 2016-17ನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಕಾನೂನು ನೆರವು-ಅರಿವು ಕಾರ್ಯಕ್ರಮ, ವಿವಿಧ ಕ್ಷೇತ್ರದ ತಜ್ಞರಿಂದ ಉಪನ್ಯಾಸ, ವ್ಯಕ್ತಿತ್ವ ವಿಕಸನ, ಸಾಂಸ್ಕøತಿಕ ವಿನಿಮಯ, ಏಡ್ಸ್ ಬಗ್ಗೆ ಅರಿವು ಮೂಡಿಸುವುದು, ಶಾಲಾ ಆವರಣ ಸ್ವಚ್ಛತೆ, ಶೌಚಾಲಯ ನಿರ್ಮಾಣ ಮತ್ತು ಇಂಗುಗುಂಡಿ ನಿರ್ಮಾಣ, ಪಶು ಆರೋಗ್ಯ ತಪಾಸಣೆ-ಲಸಿಕಾ ಶಿಬಿರ, ಗ್ರಾಮದ ಆರ್ಥಿಕ ಸಮೀಕ್ಷೆ ಮತ್ತು ಐತಿಹಾಸಿಕ ಸ್ಥಳದ ವೀಕ್ಷಣೆ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9141633477/9448796265 ಗಳನ್ನು ಸಂಪರ್ಕಿಸಬಹುದಾಗಿದೆ.

ಹೊಸೂಡಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ

ಶಿವಮೊಗ್ಗ, ಜನವರಿ 19 (ಕರ್ನಾಟಕ ವಾರ್ತೆ): ಕುವೆಂಪು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಜ. 21 ರಿಂದ 27 ರವರೆಗೆ ಹೊಸೂಡಿ ಗ್ರಾಮದಲ್ಲಿ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ “ವಿಜ್ಞಾನ ಮತ್ತು ವೈಜ್ಞಾನಿಕ ಮನೋಧಮಕ್ಕಾಗಿ ಯುವಜನತೆ” ಎಂಬ ಘೋಷಣೆಯಡಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ 2016-17ನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಕಾನೂನು ನೆರವು-ಅರಿವು ಕಾರ್ಯಕ್ರಮ, ವಿವಿಧ ಕ್ಷೇತ್ರದ ತಜ್ಞರಿಂದ ಉಪನ್ಯಾಸ, ವ್ಯಕ್ತಿತ್ವ ವಿಕಸನ, ಸಾಂಸ್ಕøತಿಕ ವಿನಿಮಯ, ಏಡ್ಸ್ ಬಗ್ಗೆ ಅರಿವು ಮೂಡಿಸುವುದು, ಶಾಲಾ ಆವರಣ ಸ್ವಚ್ಛತೆ, ಶೌಚಾಲಯ ನಿರ್ಮಾಣ ಮತ್ತು ಇಂಗುಗುಂಡಿ ನಿರ್ಮಾಣ, ಪಶು ಆರೋಗ್ಯ ತಪಾಸಣೆ-ಲಸಿಕಾ ಶಿಬಿರ, ಗ್ರಾಮದ ಆರ್ಥಿಕ ಸಮೀಕ್ಷೆ ಮತ್ತು ಐತಿಹಾಸಿಕ ಸ್ಥಳದ ವೀಕ್ಷಣೆ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-272164/9448181492/9480543222 ಗಳನ್ನು ಸಂಪರ್ಕಿಸಬಹುದಾಗಿದೆ.

ಕುರ್ತಕೋಟಿ ಬಳಿ ಗೋಶಾಲೆ ಪ್ರಾರಂಭ

ಗದಗ (ಕರ್ನಾಟಕ ವಾರ್ತೆ) ಜನೆವರಿ 19: ಹುಲಕೋಟಿ ಹರ್ತಿ ರಸ್ತೆಯಲ್ಲಿ ಕುರ್ತಕೋಟಿ ಬಳಿ ತಾತ್ಕಾಲಿಕ ಗೋಶಾಲೆಯನ್ನು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಮಾನವ ಸಮುದಾಯಕ್ಕೆ ಪರಿಸರ ಎಷ್ಟು ಮುಖ್ಯವೋ ರೈತರಿಗೆ ಪಶು ಸಂಪತ್ತು ಬಹು ಮುಖ್ಯ. ಕಳೆದ ಎರಡು ಮೂರು ವರ್ಷಗಳಿಂದ ಕಾಲಕಾಲಕ್ಕೆ ಮಳೆಯಾಗದೇ ಇಂದು ರೈತಾಪಿ ಜನ ಸಂಕಷ್ಟದಲ್ಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮುಂಗಾರಿನ ಜೊತೆ ಹಿಂಗಾರು ಮಳೆ ಬರದೇ ಜಾನುವಾರುಗಳ ಸಾಕಣಿ ತೊಂದರೆದಾಯಕವಾಗಿದೆ. ಈ ನಿಟ್ಟಿನಲ್ಲಿ ಗದಗ ತಾಲೂಕಿನಲ್ಲಿ ಇಂದು ಗೋಶಾಲೆಯನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿದೆ. ಸುತ್ತಲಿನ ರೈತರು ತಮ್ಮ ಜಾನುವಾರುಗಳ ಸಂರಕ್ಷಣೆಗೆ ಈ ಸೌಲಭ್ಯವನ್ನು ಬಳಸಿಕೊಳ್ಳಲು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಬರ ಪರಿಸ್ಥಿತಿಯಲ್ಲಿ ಗೋಶಾಲೆ ಇಲ್ಲಿ ಪ್ರಾರಂಭಿಸಲಾಗಿರುವುದು ತಾತ್ಕಾಲಿಕ ಕ್ರಮ ಆದರೆ ಇದು ಪುಣ್ಯಕೋಟಿ ಗೋಶಾಲೆಯಾಗಿ ಖಾಯಂ ಆಗಿ ಗೋ ಸೇವಾ ಕೇಂದ್ರವಾಗಿ ಬೆಳೆಯಲಿದೆ. ಈ ಕಾರ್ಯಕ್ಕಾಗಿ ಕುರ್ತಕೋಟಿಯ ಮೈಲಾರಪ್ಪ ಹಾಗೂ ಗೋವಿಂದಪ್ಪ ಯಾವಗಲ್ ಕುಟುಂಬ ಎರಡು ಎಕರೆ ಜಮೀನು ಬಿಟ್ಟು ಕೊಟ್ಟಿರುವುದು ಅತ್ಯಂತ ಪ್ರಶಂಸನೀಯ ಕಾರ್ಯ. ಈ ಪುಣ್ಯಕೋಟಿ ಗೋ ಸೇವಾ ಹಾಗೂ ಆಯುರ್ವೇದ ಕೇಂದ್ರದ ಮೂಲಭೂತ ಸೌಲಭ್ಯಗಳ ಸಂವರ್ಧನೆಗೆ ತಮ್ಮ ಶಾಸಕ ನಿಧಿಯಿಂದ 5 ಲಕ್ಷ ರೂ. ಅನುದಾನ ಒದಗಿಸುವುದಾಗಿ ಸಚಿವರು ತಿಳಿಸಿದರು. ಈ ಕೇಂದ್ರ ಮೈಸೂರಿನ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಈ ಭಾಗದ ಎಲ್ಲ ವರ್ಗದ ಜನರಿಗೆ ವಿಶೇಷವಾಗಿ ರೈತರಿಗೆ ಮಾರ್ಗದರ್ಶಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಇಡೀ ದೇಶದಲ್ಲಿ ಇದೊಂದಿಗೆ ಮಾದರಿ ಗೋಸೇವಾ ಕೇಂದ್ರವಾಗಿ ರೂಪುಗೊಳ್ಳಲಿ ಎಂದ ಅವರು ಈ ಕೇಂದ್ರಕ್ಕೆ ಬರುವ ಪಶುಗಳಿಗೆ ನೀರು ಪೂರೈಕೆಗೆ ಬಾವಿ ಇದ್ದು ಪಕ್ಕದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿ ನೀರು ಸಂಗ್ರಹಣೆಗೆ ಕ್ರಮ ಜರುಗಿಸುವಂತೆ ಜಿ.ಪಂ. ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಮಲ್ಲಾಡಿ ಹಳ್ಳಿ ರಾಘವೆಂದ್ರ ಸ್ವಾಮಿಗಳ ಶಿಷ್ಯ ಬಹು ಬಾಷೆ ಹಾಗೂ ವಿಷಯ ಅರಿತ ಆಯುರ್ವೇದ ತಜ್ಞ ನಾರಾಯಣ ಸ್ವಾಮಿ ಮಾತನಾಡಿ ಸದ್ಯ ಬರ ಪರಿಸ್ಥಿತಿಯಲ್ಲಿ ಗೋಶಾಲೆಯಾಗಿ ಕಾರ್ಯನಿರ್ವಹಿಸುವದ ಇದು ಮುಂದೆ ಯೋಗ ಗೋಮೂತ್ರ ವನೌಷಧಿ ಹಾಗೂ ರೈತರಿಗೆ ಸಾವಯವ ಕೃಷಿ ಮಾರ್ಗದರ್ಶಿ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಕಪ್ಪತಗುಡ್ಡದ ಆನಂದವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ ಇಂದು ಒಕ್ಕಲುತನ ಮಾಡುವುದು ಅಪರಾಧವಾಗಿದೆ ಎನ್ನುವಂತಹ ಪರಿಸ್ಥಿತಿ ಇದೆ. ನಿಸರ್ಗ ಹಾಗೂ ಮಾನವ ನಿರ್ಮಿತ ತಪ್ಪುಗಳಿಂದ ಕೃಷಿ ಆತಂಕಗಳ ಸರಮಾಲೆಯಾಗಿದೆ. ಅದರ ಜೊತೆಗೆ ದೇಸಿ ಪಶು ತಳಿಗಳು ಕಡಿಮೆಯಾಗುತ್ತಿವೆ. ಕೃಷಿಯ ವ್ಯವಸ್ಥೆ ಪುನಶ್ಚೇತನ ದೇಸಿ ಪಶುಗಳ ಉಳಿವಿಯುವಿಕೆ ಇಂದಿನ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಈ ಪುಣ್ಯಕೋಟಿ ಗೋ ಸೇವಾ ಕೇಂದ್ರ ಎಲ್ಲರಿಗೂ ರ್ಮಾದರ್ಶಿಯಾಗಲಿದ ಎಂದರು.

ಗದಗ ತಾಲೂಕಾ ಪಂಚಾಯತ್ ಅಧ್ಯಕ್ಷ ರವಿ ಮನೋಹರ ಇನಾಮತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸಿ.ಇ.ಓ ಮಂಜುನಾಥ ಚವ್ಹಾಣ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಉಪಕಾರ್ಯದರ್ಶಿ ಎಸ್.ಸಿ. ಮಹೇಶ, ಯೋಜನಾ ನಿರ್ದೇಶಕ ಟಿ. ದಿನೇಶ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಜಯರಾಜ್ , ಗದಗ ತಹಶೀಲ್ದಾರ ಎಂ.ಬಿ. ಬಿರಾದಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಿನಗಾ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಅಲ್ಲದೇ ಗಣ್ಯರಾದ ಗುರಣ್ಣ ಬಳಗಾನೂರ, ಶ್ರೀಮತಿ ಸುಜಾತಾ ದೊಡ್ಡಮನಿ, ರಾಮಣ್ಣ ಬಲದೊಡ್ಡಿ, ವೀರನಗೌಡ ಪಾಟೀಲ, ಗೀರೀಶ ಡಬಾಲಿ ಹಾಗೂ ರೈತರು ಉಪಸ್ಥಿತರಿದ್ದರು. ಪ್ರಕಾಶ ಸ್ವಾಗತಿಸಿದರು. ಅಪ್ಪಣ್ಣ ಇನಾಮತಿ ವಂದಿಸಿದರು.

ಅಲೆಮಾರಿ- ಅರೆ ಅಲೆಮಾರಿ ಸಮುದಾಯಗಳ ಸೌಲಭ್ಯ ಅರ್ಹರಿಗೆ ತಲುಪಿಸಿ ಜಿಲ್ಲಾಧಿಕಾರಿ ಮನೋಜ ಜೈನ್

ಗದಗ (ಕರ್ನಾಟಕ ವಾರ್ತೆ) ಜನೆವರಿ 19: ರಾಜ್ಯ ಸರ್ಕಾರದಿಂದ ಜಾರಿಯಾಗುತ್ತಿರುವ ಯೋಜನೆಗಳ ಸೌಲಭ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಅರ್ಹರಿಗೆ ಪೂರ್ಣಪ್ರಮಾಣದಲ್ಲಿ ದೊರಕುವಂತಾಗಬೇಕು ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ನುಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಅಲೆಮಾರಿ ಸಮುದಾಯದವರನ್ನು ಗುರುತಿಸಿ ಅರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ವರ್ಗದ ನಿವೇಶನ ರಹಿತ, ಶಾಲೆಗೆ ಹೋಗುವ ಮಕ್ಕಳನ್ನು ಗುರ್ತಿಸಬೇಕು. ಅವರು ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸ್ಥಳೀಯ ಸಂಸ್ಥೆಗಳು ಕ್ರಮ ಜರುಗಿಸಲು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಅಲೆಮಾರಿಗಳ ಅಭಿವೃದ್ಧಿಗೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ, ಪ್ರತಿಷ್ಟಿತ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಬೋಧನಾ ಹಾಗೂ ವಸತಿ ನಿಲಯದ ನವೀಕರಣ ಶುಲ್ಕ ಪಾವತಿ, ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಜಮೀನು ಖರೀದಿ , ವಸತಿ ಸೌಲಭ್ಯ, ಸಮುದಾಯ ವಾಸದ ಪ್ರದೇಶಗಳಿಗೆ ಮೂಲ ಭೂತ ಸೌಕರ್ಯ ಒದಗಿಸುವ ಯೋಜನಾ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ ವರಗಪ್ಪನವರ ಸಭೆಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐ.ಜೆ. ಗದ್ಯಾಳ, ಜಿ.ಪಂ. ಉಪಕಾರ್ಯದರ್ಶಿ ಎಸ್.ಸಿ. ಮಹೇಶ, ಗದಗ ತಹಶೀಲ್ದಾರ ಎಂ.ಬಿ. ಬಿರಾದಾರ, ಜಿ.ಪಂ. ಯೋಜನಾ ನಿರ್ದೇಶಕ ಟಿ. ದಿನೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅಲೆಮಾರಿ ಸಮುದಾಯದ ಮುಖ್ಯಸ್ಥರು, ಅಲೆಮಾರಿ ಜನಾಂಗದ ಅಭಿವೃದ್ಧಿ ಒಕ್ಕೂಟ ಪ್ರಧಾನ ಕಾರ್ಯದರ್ಶಿಗಳು, ಅರೆ ಅಲೆಮಾರಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿಗಳು, ಉಪಸ್ಥಿತರಿದ್ದರು.

ಜ.21 ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

ಕೋಲಾರ, ಜನವರಿ 19 (ಕರ್ನಾಟಕ ವಾರ್ತೆ) : ನಂ.48-737 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವವನ್ನು ಜ.21 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಆರ್.ರಮೇಶ್ ಕುಮಾರ್ ಅವರು ಉದ್ಘಾಟಿಸಲಿದ್ದು ಕೋಲಾರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ವರ್ತೂರು ಆರ್.ಪ್ರಕಾಶ್ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರು ಹಾಗೂ ಮಾಜಿ ಕೇಂದ್ರ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಘನ ಉಪಸ್ಥಿತಿ ವಹಿಸುವರು.

ಜ.22 ರಂದು ಜಿಲ್ಲಾ ಮಟ್ಟದ ಜನಪದ ಉತ್ಸವ

ಕೋಲಾರ, ಜನವರಿ 19 (ಕರ್ನಾಟಕ ವಾರ್ತೆ) : ನಂ.49-738 ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಜಿಲ್ಲಾ ಮಟ್ಟದ ಜನಪದ ಉತ್ಸವವನ್ನು ಜ.22 ರಂದು ಮಧ್ಯಾಹ್ನ 2 ಗಂಟೆಗೆ ತಾಲ್ಲೂಕಿನ ನರಸಾಪುರದ ಕೆ.ಇ.ಬಿ.ಕಚೇರಿಯ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಆರ್.ರಮೇಶ್ ಕುಮಾರ್ ಅವರು ಉದ್ಘಾಟಿಸಲಿದ್ದು ಕೋಲಾರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ವರ್ತೂರು ಆರ್.ಪ್ರಕಾಶ್ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರು ಹಾಗೂ ಮಾಜಿ ಕೇಂದ್ರ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಘನ ಉಪಸ್ಥಿತಿ ವಹಿಸುವರು.

ಜಿಮ್ ಸಲಕರಣೆ ಒದಗಿಸಲು ಸಹಾಯಧನ

ಕೋಲಾರ, ಜನವರಿ 19 (ಕರ್ನಾಟಕ ವಾರ್ತೆ) :
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2016-17 ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಮ್ ಸ್ಥಾಪಿಸಲು ಕ್ರಿಯಾಶೀಲವಾಗಿರುವ ಸಂಘ-ಸಂಸ್ಥೆಗಳಿಗೆ ಜಿಮ್ ಸಲಕರಣೆ ಒದಗಿಸುವ ಸಂಬಂಧ 2 ಲಕ್ಷ ರೂ ಸಹಾಯಧನ ಮಂಜೂರು ಮಾಡುವ ಯೋಜನೆಯನ್ನು ಅನುಷ್ಟಾನಗೊಳಿಸಿದೆ.

ಈ ಕುರಿತು ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕಚೇರಿ ಸಮಯದಲ್ಲಿ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 08152-222320, 9480886531 ನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಾರ್ಮಸಿಸ್ಟ್‍ಗಳ ನೇಮಕಕ್ಕೆ ನೇರ ಸಂದರ್ಶನ

ಕೋಲಾರ, ಜನವರಿ 19 (ಕರ್ನಾಟಕ ವಾರ್ತೆ) : ನಂ.51- ಜಿಲ್ಲೆಯ ಎಸ್.ಎನ್.ಆರ್. ಆಸ್ಪತ್ರೆ, ಮಾಲೂರು, ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರದ ಸಾರ್ವಜನಿಕ ಆಸ್ಪತ್ರೆಗಳು, ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲ, ಶ್ರೀನಿವಾಪುರ ತಾಲ್ಲೂಕಿನ ಗೌನಪಲ್ಲಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ.

ಈ ಸಂಬಂಧ ಪ್ರತಿ ಜನೌಷಧಿ ಮಳಿಗೆಗೆ ಒಬ್ಬರಂತೆ ಕನಿಷ್ಠ ವಿದ್ಯಾರ್ಹತೆ ಡಿ-ಫಾರ್ಮ್ ಹೊಂದಿದ ಹಾಗೂ ಕರ್ನಾಟಕ ರಾಜ್ಯ ಫಾರ್ಮಸಿ ಕೌನ್ಸಿಲ್‍ನಲ್ಲಿ ನೋಂದಣಿ ಮಾಡಿಕೊಂಡಿರುವ ಫಾರ್ಮಸಿಸ್ಟ್‍ಗಳನ್ನು ಗುತ್ತಿಗೆ ಆಧಾರದಲ್ಲಿ ಮಾಸಿಕಭತ್ಯೆ 20 ಸಾವಿರ ರೂಗಳಂತೆ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ.
ಶ್ರೀನಿವಾಸಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ಜನೌಷಧಿ ಮಳಿಗೆಗೆ ತುರ್ತಾಗಿ ಗುತ್ತಿಗೆ ಆಧಾರದಲ್ಲಿ ಫಾರ್ಮಸಿಸ್ಟ್‍ನ್ನು ನೇಮಿಸಿಕೊಳ್ಳಲಾಗುತ್ತಿದ್ದು ಕಾಮಗಾರಿಗಳು ಪೂರ್ಣಗೊಂಡ ನಂತರ ಇತರೆ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆಗಳಿಗೆ ಆದ್ಯತೆಯ ಮೇಲೆ ಗುತ್ತಿಗೆ ಆಧಾರದಲ್ಲಿ ಫಾರ್ಮಸಿಸ್ಟ್‍ಗಳನ್ನು ನೇಮಿಸಿಕೊಳ್ಳಲಾಗುವುದು.

ಆನೌಷಧಿ ಮಳೆಗೆಗಳಲ್ಲಿ ಕೆಲಸ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳೊಂದಿಗೆ ಜ.23 ರಂದು ನೇರ ಸಂದರ್ಶನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಕಚೇರಿಗೆ ಹಾಜರಾಗುವಂತೆ ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ಶಿವಮೊಗ್ಗ, ಜನವರಿ 19 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜನವರಿ 20ರಂದು ಬೆಳಿಗ್ಗೆ 22ರಂದು 11ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸುವರು. ಅಂದು ಬೆಳಿಗ್ಗೆ 11ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಧ್ಯಾಹ್ನ 12ಗಂಟೆಗೆ ಮಹಾನಗರಪಾಲಿಕೆ ಆವರಣದಲ್ಲಿ ಡಾ.ಬಿ.ಆರ್.ಅಂಬೇಢ್ಕರ್‍ರವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಪಾಲ್ಗೊಳ್ಳುವರು. 12.30ಕ್ಕೆ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಶಿವಮೊಗ್ಗ ನಗರದಲ್ಲಿನ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸುವರು. ಅಂದು ಸಂಜೆ 4ಗಂಟೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಹಿಂದಿರುಗುವರು.

ಸಾಗರದಲ್ಲಿ ಮಲೆನಾಡು ಗಿಡ್ಡ ತಳಿಯ ರಾಸುಗಳ ಮೇಳ

ಶಿವಮೊಗ್ಗ, ಜನವರಿ 19 (ಕರ್ನಾಟಕ ವಾರ್ತೆ): ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಹಾಲು ಒಕ್ಕೂಟ ಹಾಗೂ ಮಲೆನಾಡು ಗಿಡ್ಡ ತಳಿ ಗೋಸಂವರ್ಧನ ಸಂಸ್ಥೆ, ಸಾಗರ ಇವರ ಸಂಯುಕ್ತಾಶ್ರಯದಲ್ಲಿ ಜನವರಿ 22ರಂದು ಬೆಳಿಗ್ಗೆ 10ಗಂಟೆಗೆ ಸಾಗರ ತಾಲೂಕು ಸಿರಿವಂತೆಯ ತ್ರಿಪುರಾಂತಕೇಶ್ವರ ಸಭಾಭವನದಲ್ಲಿ ಮಲೆನಾಡುಗಿಡ್ಡ ತಳಿಯ ರಾಸುಗಳ ಮೇಳವನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಪರಿಷತ್ ಸಭಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿಯವರ ಉಪಸ್ಥಿತಿಯಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರು ಉದ್ಘಾಟಿಸುವರು. ಶಾಸಕ ಮಧುಬಂಗಾರಪ್ಪ, ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿರುವರು.

ಜನವರಿ 23ರಂದು ಕೆ.ಡಿ.ಪಿ. ತ್ರೈಮಾಸಿಕ ಸಭೆ

ಶಿವಮೊಗ್ಗ, ಜನವರಿ 19 (ಕರ್ನಾಟಕ ವಾರ್ತೆ): ಜನವರಿ 23ರಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.

ಈ ಸಭೆಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಗೊಳಪಡುವ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯೋಗ ಖಾತರಿ ಪ್ರಗತಿ ಸಾಧನೆಗೆ ಜಿ.ಪಂ. ಅಧ್ಯಕ್ಷರ ಸೂಚನೆ

ಚಾಮರಾಜನಗರ, ಜ. 19 (ಕರ್ನಾಟಕ ವಾರ್ತೆ):- ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಿಲ್ಲ. ಕಾಮಗಾರಿಗಳು ವಿಳಂಬ ಗತಿಯಲ್ಲಿ ಸಾಗುತ್ತಿದ್ದು ಅಧಿಕಾರಿಗಳು ನಿಗದಿತ ಗುರಿ ತಲುಪಲು ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೆರಡು ತಿಂಗಳು ಮಾತ್ರ ಬಾಕಿ ಇದೆ. ಹೀಗಿದ್ದರೂ ಪ್ರಗತಿ ಹೆಚ್ಚಳವಾಗಿಲ್ಲ. ಕಳೆದ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರು, ಇತರೆ ಜನಪ್ರತಿನಿಧಿಗಳು ಕೆಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸಗಳು ನಡೆಯುತ್ತಿಲ್ಲವೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರೂ ಸಹ ಉದ್ಯೋಗ ಖಾತರಿ ಯೋಜನೆ ಪ್ರಗತಿ ಕುಂಠಿತ ಬಗ್ಗೆ ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ರಾಮಚಂದ್ರ ಅವರು ಜನರು ಗುಳೇ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಡಿ ಸಾಮೂಹಿಕ ಹಾಗೂ ಸಮುದಾಯಕ್ಕೆ ಅನುಕೂಲವಾಗುವ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಯೋಜನೆಯ ಉದ್ದೇಶ ಸಫಲವಾಗಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಮಾತನಾಡಿ ಬರಗಾಲ ಹಿನ್ನೆಲೆಯಲ್ಲಿ ಹೆಚ್ಚುವರಿ ದಿನಗಳ ಕಾಲ ಉದ್ಯೋಗ ನೀಡಲು ಅವಕಾಶ ಕಲ್ಪಿಸಲಾಗಿದೆ, ಹೀಗಾಗಿ ಹೆಚ್ಚುವರಿ ಕ್ರಿಯಾ ಯೋಜನೆ ತಯಾರು ಮಾಡಿ ಡಿಸೆಂಬರ್ ಕೊನೆಯ ವಾರದಿಂದ ಕಾಮಗಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ನಿರ್ವಹಿಸಲಾಗುತ್ತಿದೆ. ಮಾರ್ಚ್ ಒಳಗೆ ನಿಗದಿ ಮಾಡಿರುವ ಗುರಿ ಮುಟ್ಟಲು ಸೂಚನೆ ನೀಡಲಾಗಿದೆ ಎಂದರು.

ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಜಿ.ಪಂ. ಅಧ್ಯಕ್ಷರು ತ್ವರಿತವಾಗಿ ಕುಡಿಯುವ ನೀರು ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೂ ವಿಳಂಬ ಮಾಡದಂತೆ ಸೂಚನೆ ನೀಡಿದರು.

ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗಂಗಾ ಕಲ್ಯಾಣ, ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಸಾಮಾಜಿಕ ಮತ್ತು ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ. ಮಾದೇಶು, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜ. 22ರಂದು ಸಂತೆಮರಹಳ್ಳಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಜ. 19 (ಕರ್ನಾಟಕ ವಾರ್ತೆ):- ಸಂತೆಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯು ಜನವರಿ 22ರಂದು ನಡೆಯಲಿದೆ. ಹೀಗಾಗಿ ಹೊನ್ನೂರು, ಸಂತೆಮರಹಳ್ಳಿ, ನವಿಲೂರು, ಆಲ್ದೂರು, ಕುದೇರು, ಮಂಗಲ ವಾಟರ್ ಸಪ್ಲೈ, ಕೆಂಪನಪುರ, ದುಗ್ಗಟ್ಟಿ, ಅಂಬಳೆ, ಚುಂಗಡೀಪುರ ಗ್ರಾಮಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನಾಗರಿಕರು ಸಹಕರಿಸಬೇಕೆಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಅಭಿಜಾತ ಕನ್ನಡ ಪಠ್ಯವಾಚನ, ಅಧ್ಯಯನ ಶಿಬಿರ : ಹೆಸರು ನೋಂದಾಯಿಸಲು ಅವಕಾಶ

ಚಾಮರಾಜನಗರ, ಜ. 19 (ಕರ್ನಾಟಕ ವಾರ್ತೆ):- ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಆಶ್ರಯದಲ್ಲಿ ಅಭಿಜಾತ ಕನ್ನಡ ಪಠ್ಯವಾಚನ ಹಾಗೂ ಅಧ್ಯಯನ ಶಿಬಿರವನ್ನು ಐದು ದಿನಗಳ ಕಾಲ ಆಯೋಜಿಸಲಾಗುತ್ತಿದ್ದು ಆಸಕ್ತರು ಹೆಸರು ನೊಂದಾಯಿಸಬಹುದಾಗಿದೆ.
ಫೆಬ್ರವರಿ ತಿಂಗಳಿನಲ್ಲಿ ಶಿಬಿರ ಆಯೋಜನೆ ಮಾಡಲಾಗುತ್ತಿದ್ದು ನಾಡಿನ ಖ್ಯಾತ ವಿದ್ವಾಂಸರು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು.

ಉಪನ್ಯಾಸಕರು, ಸಂಶೋಧಕರು, ಸಮಶೋಧನಾ ವಿದ್ಯಾರ್ಥಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರು, ಕನ್ನಡವನ್ನು ವಿಶೇಷವಾಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಇತರೆ ಆಸಕ್ತ ನಾಗರಿಕರು ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.

ಶಿಬಿರಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸುವುದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಗುತ್ತದೆ. ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎಸ್. ವಿನಯ್ (ಮೊ.ಸಂ. 948004933) ಅವರನ್ನು ಸಂಪರ್ಕಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.