Government of Karnataka

Department of Information

Saturday 21/01/2017

District News 26-04-2012

Date : ಶುಕ್ರವಾರ, ಏಪ್ರಿಲ್ 27th, 2012

ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ ಕಾರ್ಯಕ್ರಮ

     ಚಾಮರಾಜನಗರ ಏಪ್ರಿಲ್26 (ಕರ್ನಾಟಕ ವಾರ್ತೆ):- ಮಾನ್ಯ ಮುಖ್ಯಮಂತ್ರಿಯವರಾದ ಡಿ.ವಿ ಸದಾನಂದಗೌಡ ಅವರು ಏಪ್ರಿಲ್,27 ಹಾಗೂ 28 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್, 27 ರಂದು ಮಧ್ಯಾಹ್ನ 3-15 ಗಂಟೆಗೆ ಕೊಳ್ಳೇಗಾಲದ ಎಂ.ಜಿ.ಎಸ್.ವಿ ಹೆಲಿಪ್ಯಾಡ್‌ಗೆ  ಆಗಮಿಸಲಿರುವ ಮುಖ್ಯಮಂತ್ರಿಯವರು 3-30 ಗಂಟೆಗೆ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ರಸ್ತೆ ಮೂಲಕ ಬೇಟಿ ನೀಡಲಿರುವರು. ಸಂಜೆ 6-00ಗಂಟೆಗೆ ಶ್ರೀ ಮಲೆ ಮಹದೇಶ್ವರ ಬೆಟ್ಟದ ಅತಿಥಿ ಗೃಹದಲ್ಲಿ ತಂಗಲಿರುವರು. ನಂತರ 6-30 ಗಂಟೆಗೆ ಜಿಲ್ಲೆಯ ಬರ ಪರಿಸ್ಥಿತಿ ಮತ್ತು ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಶಾಸಕರು, ಸಂಸತ್ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅಂದು ರಾತ್ರಿ 8-00 ಗಂಟೆಗೆ ಶ್ರೀ ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಿರುವರು.

    ಏಪ್ರಿಲ್, 28 ರಂದು ಬೆಳಿಗ್ಗೆ 6-00 ಗಂಟೆಗೆ ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಬೆಳಿಗ್ಗೆ 8-00 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ| ಕೆ. ಎ ಅಪ್ಪಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನಗರದಲ್ಲಿ ಶಂಕರಚಾರ್ಯರ ಜಯಂತಿ ಆಚರಣೆ

ಚಾಮರಾಜನಗರ ಏಪ್ರಿಲ್ 26 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಶಂಕರಚಾರ್ಯ ಜಯಂತಿ ಅಂಗವಾಗಿ ತತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮವು ಏಪ್ರಿಲ್ 26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಿತು.

   ಶ್ರೀ ಶಂಕರಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಆರ್. ಸುಂದರ್ ಅವರು ಶಂಕರಚಾರ್ಯರು ಅದ್ವೈತದ ಆಧ್ಯಾತ್ಮದಲ್ಲಿ ನಂಬಿಕೆವುಳ್ಳ ವ್ಯಕ್ತಿಯಾಗಿದ್ದರು. ಅವರ ತತ್ವಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡರೆ ತನ್ನತನವನ್ನು ಗುರುತಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

  ಶಂಕರಚಾರ್ಯರು ಅದ್ವೈತವು ಸಿದ್ಧಾಂತ ಪ್ರತಿಪಾದಿಸಿದ ಬ್ರಹ್ಮ ಸತ್ಯ ಅಂದರೆ ಅದನ್ನು ವಿವರಿಸಲು ಸಾಧ್ಯವಿಲ್ಲ. ಅದು ಅಪರಿಮಿತವಾಗಿದ್ದು, ಜಗತ್ ಸುಳ್ಳು ಮಾಯೇ ಆತ್ಮ ಬ್ರಹ್ಮನ ಒಂದು ಅಂಶ. ಜೀವಾತ್ಮ ಅವನ ಅಧೀನ, ಪ್ರತ್ಯೇಕ ಅಸ್ತಿತ್ವವಿಲ್ಲ ಅವರೆಡು ಒಂದೇ ಎಂದು ಶಂಕರರು ಪ್ರತಿಪಾದಿಸಿದರು ಎಂದು ಕೆ. ಸುಂದರ್ ತಿಳಿಸಿದರು.

   ಪ್ರಪಂಚದಲ್ಲಿರುವ ಎಲ್ಲ ಶಕ್ತಿಗಳಿಗೆ ನಮ್ಮೊಳಗಿನ ಶಕ್ತಿಯು ಸಮಾನವಾಗಿರುತ್ತದೆ. ಧಾರ್ಮಿಕ ನೆಲೆಗಟ್ಟನ್ನು ಅವಲೋಕಿಸಿದಾಗ ಆತ್ಮದ ಮೋಕ್ಷ, ಸಾಕ್ಷಾತ್ಕಾರ ಸಾಧನೆಗೆ ಕಂಡುಕೊಂಡ ಸರಳ ಮಾರ್ಗ, ತತ್ವ ಭೋದನೆ ಸಿದ್ಧಾಂತ ಪ್ರತಿಪಾದಿಸಿದವರಲ್ಲಿ  ಶಂಕರಚಾರ್ಯರು ಒಬ್ಬರಾಗಿದ್ದರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜ್ಞಾನ  ಅರಿತರೆ ಮಾಯೆಯಿಂದ ಹೊರ ಬರಲು ಸಾಧ್ಯ. ಅಜ್ಞಾನದಿಂದ ಮುಕ್ತಿ ಪ್ರಾಪ್ತಿಯಾಗದು ಎಂದು ಹೇಳಿದ ಶಂಕರಚಾರ್ಯರು ಅದ್ವೈತವು ಕರ್ಮ ಭಕ್ತಿ ಜ್ಞಾನದ ನೆಲಗಟ್ಟಿನಲ್ಲಿ ಅವಲಂಬಿತವಾಗಿದೆ ಎಂದು ಸಾರಿದ್ದಾರೆ ಎಂದರು. ವಿದ್ವಾನ್ ಎಂ.ಎಸ್. ನವೀನ್ ಮತ್ತು ಅವರ ತಂಡದಿಂದ ಶಂಕರಚಾರ್ಯರ ಕುರಿತು ಭಕ್ತಿಗೀತೆಗಳನ್ನು ಹಾಡಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.  

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರುಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ ಏಪ್ರಿಲ್ 26 (ಕರ್ನಾಟಕ ವಾರ್ತೆ):- ಚಾಮರಾಜನಗರ ಜಿಲ್ಲೆಯಲ್ಲಿ ಖಾಲಿ ಇರುವ ಸಮೂಹ ಸಂಪನ್ಮೂಲ ವ್ಯಕ್ತಿ(ಸಿ.ಆರ್.ಪಿ) ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ(ಬಿ.ಆರ್.ಪಿ) ಹುದ್ದೆಗಳನ್ನು ಭರ್ತಿ ಮಾಡಲು ಸೇವೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳಿಂದ ಅರ್ಜಿ ಆಹ್ವಾನಿಸಿದೆ. ನಿಗಧಿತ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪಡೆಯುವುದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಮೇ 5 ರ ಒಳಗೆ ಸಂಜೆ 5 ಗಂಟೆಗೆ ಒಳಗೆ ಸಲ್ಲಿಸಬಹುದು.

  ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು(ಅಭಿವೃದ್ದಿ) ಅಥವಾ ವೆಬ್ ಸೈಟ್ www.ssakaranataka.gov.in ನೋಡಬಹುದು ಎಂದು ಸರ್ವ ಶಿಕ್ಷಣ ಅಭಿಯಾನ, ಜಿಲ್ಲಾ ಸಾರ್ವಜನಕ ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದವಿ ಪೂರ್ವ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಚಾಮರಾಜನಗರ ಏಪ್ರಿಲ್ 26 (ಕರ್ನಾಟಕ ವಾರ್ತೆ):- ಪದವಿ ಪೂರ್ವ ಶಿಕ್ಷಣ ಇಲಾಖೆಯು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 1764 ಉಪನ್ಯಾಸಕರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್  www.schooleducation.kar.nic.in ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 10 ರ ಒಳಗೆ ಸಲ್ಲಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆ ತಿಳಿಸಿದೆ.

ನಗರ ನೈರ್ಮಲೀಕರಣ ಕಾರ್ಯಪಡೆ ಸಭೆ

ಮಂಗಳೂರು ,ಏಪ್ರಿಲ್.26 (ಕರ್ನಾಟಕ ವಾರ್ತೆ):-ಯೋಜನಾ ವರದಿಗಳು ಸಲಹೆಗಳಿಗಿಂತ ಮುಖ್ಯವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಪೂರಕವಾಗಿರಬೇಕು ಎಂದು ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಹೇಳಿದರು. ಇಂದು ಮಹಾನಗರಪಾಲಿಕೆಯಲ್ಲಿ ನಡೆದ ರಾಷ್ಟ್ರೀಯ ನಗರ ನೈರ್ಮಲೀಕರಣ ಯೋಜನಾ ವರದಿಯನ್ನು ಅಂತಿಮಗೊಳಿಸಲು ಮಹಾನಗರಪಾಲಿಕೆ ಮಹಾಪೌರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತರು ಮಾತನಾಡುತ್ತಿದ್ದರು.

ಯೋಜನಾ ವರದಿಗಳನ್ನು ಅನುಷ್ಠಾನಕ್ಕೆ ತರುವ ಹೊಣೆ ಪಾಲಿಕೆಯ ಜೊತೆ ನಾಗರೀಕ ಸಮಾಜಕ್ಕೂ ಇದೆ. ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಮಂಗಳೂರು ನಗರದಲ್ಲಿ ನೈರ್ಮಲ್ಯದ ಬಗ್ಗೆ ಪಾಲಿಕೆಯಷ್ಟೇ ಹೊಣೆ ನಾಗರೀಕರದ್ದು; ಎಲ್ಲಿಯವರೆಗೆ ನಾಗರೀಕರಿಗೆ ಈ ಬಗ್ಗೆ ಅರಿವು ಮೂಡುವುದಿಲ್ಲ ಅಲ್ಲಿಯವರೆಗೆ ಸ್ವಚ್ಛ, ಸುಂದರ ನಗರ ನಿರ್ಮಾಣ ಕಷ್ಟ ಎಂದರು. ಒಬ್ಬ ಅಧಿಕಾರಿ ಆರುಲಕ್ಷ ನಾಗರೀಕರಿರುವ ನಗರದ ನೈರ್ಮಲ್ಯಕ್ಕೆ ಯೋಜನೆಗಳನ್ನು ನೀಡಿ ಅನುಷ್ಠಾನಕ್ಕೆ ತರಬಹುದು; ಆದರೆ ನಿರ್ವಹಣೆ ಮತ್ತು ಜವಾಬ್ದಾರಿ ಜನರಿಗಿರಿಬೇಕು. ನಮ್ಮ ಮನೆಯಷ್ಟೆ ಹಾದಿ ಬೀದಿಗಳನ್ನು ಸ್ವಚ್ಛವಾಗಿಡಬೇಕೆಂಬ ಜ್ಞಾನ ಜನರಲ್ಲೂ ಮೂಡಬೇಕು ಎಂದರು.

ಎಲ್ಲ ನಾಗರೀಕ ಪ್ರಜ್ಞೆ ಮತ್ತು ಕರ್ತವ್ಯಗಳನ್ನು ದಂಡ ವಿಧಿಸಿ ಜಾರಿಗೆ ತರುವುದು ಅಸಾಧ್ಯದ ಕೆಲಸ ಎಂದ ಅವರು, %50 ಸಿಬ್ಬಂದಿ ಕೊರತೆಯ ಹೊರತಾಗಿಯೂ ತನ್ನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು  ಪಾಲಿಕೆ ಅನುಷ್ಠಾನಕ್ಕೆ ತರುತ್ತಿದೆ ಎಂದರು. ನಗರದ ಒಳಚರಂಡಿ ವ್ಯವಸ್ಥೆ, ಕೊಳಚೆ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ, ಸಾರ್ವಜನಿಕ ಶೌಚಾಲಯ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಗಹನ ಚರ್ಚೆ ನಡೆಯಿತು. ಯೋಜನಾ ವರದಿಯ ಕರಡು ಪ್ರತಿಯನ್ನು ಆಡ್ಮಿನಿಸ್ಟ್ರೇಷನ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದ ಶ್ರೀಮತಿ ವಾಸುಕಿ ನರಾಲಾ ಅವರು ಪ್ರಸ್ತುತಪಡಿಸಿದರು. ಈ ವರದಿಯ ಹಲವು ಅಂಶಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತಲ್ಲದೆ, ಅವರೊಂದಿಗೆ ನಾಳೆ ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಸದಸ್ಯರಿಗೆ ಆಯುಕ್ತರು ಸೂಚನೆ ನೀಡಿದರು.

ನಗರ ನೈರ್ಮಲೀಕರಣದಡಿ ನಗರ ಯೋಜನೆ, ಸಾರ್ವಜನಿಕ ಆರೋಗ್ಯ, ನೀರು ಮತ್ತು ನೈರ್ಮಲ್ಯ, ನೀರು ಶುದ್ದೀಕರಿಸಿ ಪುನರ್ ಬಳಕೆ ಮಾಡುವ ಬಗ್ಗೆ, ಇದೆಲ್ಲದರ ಪರಿಣಾಮ ಸಾರ್ವಜನಿಕ ಆರೋಗ್ಯ ಎಂಬುದರ ಕುರಿತು ಕರಡು ಯೋಜನೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಶಾಲೆಗಳಲ್ಲಿ ನಿರ್ಮಲ ಶೌಚಾಲಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವ ಕುರಿತ ಪ್ರಸ್ತಾಪಗಳು ಯೋಜನೆಯಲ್ಲಿ ಅಡಕವಾಗಿದೆ.  ಈ ವರದಿ ಮಹಾನಗರಪಾಲಿಕೆಯಿಂದ ಒಂದೂವರೆ ವರ್ಷದ ಹಿಂದೆ ಪಡೆದ ಅಂಕಿ ಸಂಖ್ಯೆಗಳ ಮೇಲೆ ಅವಲಂಬಿತವಾಗಿದ್ದು, ಇದನ್ನು ಇನ್ನಷ್ಟು ಉತ್ತಮ ಪಡಿಸಬೇಕಿದೆ ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಯೋಜನೆಯನ್ನು ಇನ್ನಷ್ಟು ಸ್ಥಳೀಯವಾಗಿಸುವ ಬಗ್ಗೆಯೂ ಸದಸ್ಯರು ಒತ್ತಾಯಿಸಿದರು. ಎಲ್ಲರ ಅಭಿಪ್ರಾಯ ಹಾಗೂ ಮಾಹಿತಿಗಳನ್ನು ವರದಿಯಲ್ಲಿ ಅಳವಡಿಸಿ ಪ್ರಸ್ತುತ ಪ್ರಡಿಸುವುದಾಗಿ ಶ್ರೀಮತಿ ವಾಸುಕಿಯವರು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಮೇಯರ್ ಗುಲ್ಜಾರ್ ಭಾನು ವಹಿಸಿದ್ದರು.  ಕಾರ್ಪೊರೇಟರ್ ಶ್ರೀ ಭಾಸ್ಕರ ಚಂದ್ರ ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಿಂದ ನಿರ್ಮಿತಿ ಕೇಂದ್ರ ಕಟ್ಟಡ ಉದ್ಘಾಟನೆ

ಹಾವೇರಿ ಏ26: ಜಿಲ್ಲಾ ಆಡಳಿತ ಭವನದ ಪಕ್ಕದಲ್ಲಿ  52 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಿಸಲಾದ ಜಿಲ್ಲಾ ನಿರ್ಮಿತಿ ಕೇಂದ್ರದ ನೂತನ ಕಟ್ಟಡವನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಅವರು ಇಂದು ಬೆಳಿಗ್ಗೆ ಉದ್ಘಾಟಿಸಿದರು. ಕಳೆದ 8 ವರ್ಷಗಳ ಹಿಂದೆ ಜಿಲ್ಲೆಯಲ್ಲಿ  ಅಸ್ತಿತ್ವಕ್ಕೆ ಬಂದ ನಿರ್ಮಿತಿ ಕೇಂದ್ರ ಈ ಅವಧಿಯ ತ ಲಾಭಾಂಶದ (ಉಳಿತಾಯ) ಹಣದಲ್ಲಿ ಸುಂದರ ಕಟ್ಟಡ ನಿರ್ಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಚಿವರು, ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.

            ಜಿಲ್ಲಾ ಆಡಳಿತ ಭವನದ ಪಕ್ಕದ 4800 ಚದರು ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ಅಲ್ಪವೆಚ್ಚದ ನಿರ್ಮಾಣ ಸಾಮಗ್ರಿಗಳನು ಬಳಸಲಾಗಿದ್ದು, ಕಟ್ಟಡದಲ್ಲಿ ಗಾಳಿ-ಬೆಳಕು ಯಥೇಚ್ಛವಾಗಿ ಹಾಗೂ ಸಹಜವಾಗಿ ದೊರೆಯುವಂತೆ ಯೋಜಿಸಲಾಗಿದೆ. ಕಟ್ಟಡದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಕೊಠಡಿ, ಸಭಾಗೃಹ, ಸ್ವಾಗತಕಾರರ ಕೊಠಡಿ ಸೇರಿದಂತೆ ವಿವಿಧ ವಿಭಾಗಗಳನ್ನು  ಸಿಬ್ಬಂದಿಯ ಆಡಳಿತಾತ್ಮಕ ಅನುಕೂಲಕ್ಕೆ ತಕ್ಕಂತೆ ರೂಪಿಸಲಾಗಿದೆಯೆಂದು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಎಸ್.ಹೆಚ್.ತಿಮ್ಮೇಶಕುಮಾರ ಈ ಸಂದರ್ಭದಲ್ಲಿ ತಿಳಿಸಿದರು.

             ಕಟ್ಟಡಕ್ಕೆ ಸಾಲಿಡ್ ಬ್ಲಾಕ್‌ಗಳನ್ನು ಬಳಸಲಾಗಿದ್ದು, ಈ ಬ್ಲಾಕ್‌ಗಳನ್ನು ಶೇಕಡ 45 ರಷ್ಟು ಔದ್ಯಮಿಕ ತ್ಯಾಜ್ಯವಸ್ತುವಾದ ಹಾರುಬೂದಿಯಿಂದ, ಶೇ.50 ರಷ್ಟು ಮರಳು ಹಾಗೂ ಕೇವಲ ಶೇಕಡಾ 5 ರಷ್ಟು ಮಾತ್ರ ಸಿಮೆಂಟ್‌ನ್ನು ಬಳಸಿ ತಯಾರಿಸಲಾಗಿದೆ.  ಕಟ್ಟಡದ ಬಾಗಿಲುಗಳನ್ನು ಆರ್‌ಸಿಸಿ ಮತ್ತು ಪಿವಿಸಿ (ಪಾಲಿ ವಿನೈಲ್ ಕ್ಲೋರೈಡ್) ಬಾಗಿಲುಗಳನ್ನು ಬಳಸಲಾಗಿದ್ದು, ಕಟ್ಟಿಗೆ ಬಳಕೆಯನ್ನು ಮಿತಿಗೊಳಿಸುವಿಕೆ ಮೂಲಕ  ಕಟ್ಟಡವನ್ನು ಪರಿಸರ ಸ್ನೇಹಿ ಕಟ್ಟಡವನ್ನಾಗಿಸಲಾಗಿದೆ. ಈ ಕಟ್ಟಡಕ್ಕೆ ನಿರ್ಮಿತಿ ಕೇಂದ್ರದ ಕಾಮಗಾರಿಗಳಲ್ಲಿ ಲಾಭಾಂಶವಾಗಿ ಬಂದ ಹಣ ಅಂದರೆ ಉಳಿಕೆ ಹಣದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆಂದು ಸರ್ಕಾರದಿಂದ ಅನುದಾನ ಪಡೆದಿರುವುದಿಲ್ಲ ಎಂದು ತಿಮ್ಮೇಶಕುಮಾರ್ ತಿಳಿಸಿದರು.

            ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಅರುಣ್‌ಕುಮಾರ ಅವರು, ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದಲ್ಲೂ ಸುಮಾರು ಒಂದು ಕೋಟಿ ರೂ. ಉಳಿತಾದ ಹಣವಿದ್ದು, ಅಲ್ಲಿಯೂ ಸರ್ಕಾರದ ಅನುದಾನ ಪಡೆಯದೇ ಉಳಿತಾಯದ ಹಣದಲ್ಲಿಯೇ ಇಂಥದೇ ಕಟ್ಟಡ ನಿರ್ಮಿಸಲಾಗುವುದೆಂದು ತಿಳಿಸಿದರು.

             ಸಮಾರಂಭದಲ್ಲಿ ಜಿಲ್ಲಾಧಿಕಾರಿ ಹೆಚ್.ಜಿ.ಶ್ರೀವರ, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಎಂ.ಅಗಡಿ, ಅಪರ ಜಿಲ್ಲಾಧಿಕಾರಿ ಜಿ.ಜಗದೀಶ, ಹಾನಗಲ್ ಎ.ಪಿ.ಎಂ.ಸಿ.ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ಜನತಾ ಸೌಹಾರ್ದ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್.ಬಳ್ಳಾರಿ, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಭ ಕುಂದಾಪುರ, ಜಿ.ಪಂ.ಸದಸ್ಯ ರಾಜೇಂದ್ರ ಹಾವೇರಣ್ಣವರ ಹಲವಾರು ಗಣ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಕಾರಿಗಳು ಪಾಲ್ಗೊಂಡಿದ್ದರು.

ಕರಡು ಮತದಾನ ಕೇಂದ್ರಗಳ ಪಟ್ಟಿ ಪ್ರಕಟಣೆ

ದಾವಣಗೆರೆ, ಏ.26- ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ಕರಡು ಮತದಾನ ಕೇಂದ್ರಗಳ ಪಟ್ಟಿಯನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸಲಾಗಿದೆ.  ಕರಡು ಮತದಾನ ಕೇಂದ್ರಗಳ ಪಟ್ಟಿಯನ್ನು ಕೆಳಕಂಡ ಕಾರ್ಯಾಲಯದಲ್ಲಿ ಪರಿಶೀಲಿಸಬಹುದು.

1.         ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ದಾವಣಗೆರೆ ಜಿಲ್ಲೆ.

2.         ಉಪ ವಿಭಾಗಾಧಿಕಾರಿಗಳ ಕಚೇರಿ, ದಾವಣಗೆರೆ.

3.         ತಹಶೀಲ್ದಾರ್, ಕಚೇರಿ, ಹೊನ್ನಾಳಿ ಮತ್ತು ಚನ್ನಗಿರಿ.

ಈ ಬಗ್ಗೆ ಆಕ್ಷೇಪಣೆಗಳು ಅಥವಾ ಸಲಹೆಗಳೇನಾದರೂ ಇದ್ದಲ್ಲಿ 2012ರ ಏ.30 ಸಂಜೆ 5.30 ರೊಳಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ದಾವಣಗೆರೆ ಜಿಲ್ಲೆ, ದಾವಣಗೆರೆ ಇವರಿಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಸ್.ಎಸ್. ಪಟ್ಟಣಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿ ತಾತ್ಕಾಲಿಕ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ, ಏ.26- ಹೊನ್ನಾಳಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ 2011-12ನೇ ಸಾಲಿನಲ್ಲಿ ಸಹಾಯಕಿಯರ ನಿವೃತ್ತಿಯಿಂದ ಹಾಗೂ ಅಕಾಲ ಮರಣದಿಂದ ಖಾಲಿಯಾದ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಸರ್ಕಾರ ನಿಗಧಿಪಡಿಸಿದ ಗೌರವಧನ ಆಧಾರದ ಮೇಲೆ ಸಹಾಯಕಿಯರನ್ನು ಗುರುತಿಸಲು ಆಸಕ್ತ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಹತೆ ಮತ್ತು ಮಾನದಂಡಗಳಿಗೊಳಪಟ್ಟು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗೆ ಅಗತ್ಯವಿರುವ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಡೀಕರಿಸಿ, ದ್ವಿಪ್ರತಿಯಲ್ಲಿ ಪ್ರಕಟಣೆಯ ಕೊನೆಯ ದಿನಾಂಕ 2012ರ ಮೇ.18 ರ ಸಂಜೆ 5.30 ರೊಳಗೆ ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿ, ಕೋಟೆ ರಸ್ತೆ, ಹೊನ್ನಾಳಿ ಇಲ್ಲಿ ಸಲ್ಲಿಸಬಹುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ:

            ಜನನ ದಾಖಲೆ ದೃಢೀಕರಣ ಪತ್ರ (ವರ್ಗಾವಣೆ ಪ್ರಮಾಣ ಪತ್ರ/ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಶಾಲಾ ದಾಖಲಾತಿ), ವಾಸಸ್ಥಳ ದೃಢೀಕರಣ ಪತ್ರ, ತಹಶೀಲ್ದಾರ್‌ರವರಿಂದ ಪ್ರಕಟಣೆ ದಿನಾಂಕದ ನಂತರ ಪಡೆದ ಮೂಲ ವಾಸಸ್ಥಳದ ನಿವಾಸಿ ದೃಢೀಕರಣ ಪತ್ರವನ್ನು ಲಗತ್ತಿಸುವುದು. ಹಾಗೂ ಪಡಿತರ ಚೀಟಿ ಮತ್ತು ಚುನಾವಣಾ ಗುರುತಿನ ಚೀಟಿ ಲಭ್ಯವಿದ್ದಲ್ಲಿ ಲಗತ್ತಿಸುವುದು, ವಿದ್ಯಾರ್ಹತೆ ಪ್ರಮಾಣ ಪತ್ರ, ವಿಧವೆ/ಪರಿತ್ಯಕ್ಕೆ ಪ್ರಮಾಣ ಪತ್ರ ಪ್ರಮಾಣಿಕೃತ ಅಧಿಕಾರಿ ಇವರಿಂದ ಪಡೆದ ವಿಧವಾ ಪ್ರಮಾಣ ಪತ್ರ ಲಗತ್ತಿಸುವುದು, ಬಿ.ಪಿ.ಎಲ್. ಅಭ್ಯರ್ಥಿಗಳಾಗಿದ್ದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯವರಿಂದ ಪಡೆದ ಅಂಗೀಕೃತ ಜೆರಾಕ್ಸ್ ದೃಢೀಕರಿಸಿ ಲಗತ್ತಿಸುವುದು, ಪ.ಜಾತಿ/ಪ.ಪಂಗಡಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಈ ಎಲ್ಲಾ ವಿವರಗಳನ್ನೊಳಗೊಂಡ ಅರ್ಜಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಪ್ರಕಟಣೆ ತಿಳಿಸಿದೆ.

ಅಕ್ರಮ ಮರಳು ಸಾಗಾಣಿಕೆ ದೂರು ಸಲ್ಲಿಸಲು ಸಹಾಯವಾಣಿ ಸ್ಥಾಪನೆ ಇಂಡಿ ಭಾಗದಲ್ಲಿ ಮೇ 1ರಿಂದ ತಾತ್ಕಾಲಿಕ ಚೆಕ್ ಪೋಸ್ಟ್ ಆರಂಭಿಸಲು ಜಿಲ್ಲಾಧಿಕಾರಿ ಸೂಚನೆ

ವಿಜಾಪುರ ಏ,26- ಅಕ್ರಮ ಮರಳುಗಾರಿಕೆ ಹಾಗೂ ಶೇಖರಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದು, ಇಂಡಿ ಭಾಗದಲ್ಲಿ ಎರಡು ಚೆಕ್ ಪೋಸ್ಟ್‌ಗಳ ಸ್ಥಾಪನೆ ಹಾಗೂ ಅಕ್ರಮವಾಗಿ ಮರಳು ಗಣಿಗಾರಿಕೆ, ಸಾಗಾಣಿಕೆ ಹಾಗೂ ದಾಸ್ತಾನು ಮಾಡಿಕೊಂಡವರ ವಿರುದ್ಧ ಸಾರ್ವಜನಿಕರು ಮಾಹಿತಿ ಒದಗಿಸಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಸೂಚಿಸಿದರು.

ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರು, ಅಕ್ರಮ ಮರಳು ಸಾಗಾಣಿಕೆ ಹಾಗೂ ಓವರ್ ಲೋಡ್ ಮರಳು ಸಾಗಾಣಿಕೆ ಮೇಲೆ ತೀವ್ರ ನಿಗಾ ವಹಿಸಿ ತಪಾಸಣೆ ಮಾಡುವ ನಿಟ್ಟಿನಲ್ಲಿ ಇಂಡಿ ಮತ್ತು ಹೊರ್ತಿಯಲ್ಲಿ ಎರಡು ತಾತ್ಕಾಲಿಕ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲು ಲೋಕೋಪಯೋಗಿ ಇಲಾಖೆಯ ಅಭಿಯಂತರ ರಾಜಶೇಖರ ಯಡಹಳ್ಳಿ ಅವರಿಗೆ ಸೂಚಿಸಿದರು.

ಓವರ್ ಲೋಡ್ ಕುರಿತಂತೆ ತಪಾಸಣೆ ನಡೆಸಲು ಸಂಚಾರಿ ನಿಗಾದಳವನ್ನು ನಿಯೋಜಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡ ದಾಸ್ತಾನು ಘಟಕಗಳನ್ನು ಪತ್ತೆಮಾಡಿ ದಂಡ ಹಾಗೂ ಕೇಸಗಳನ್ನು ದಾಖಲಿಸಲು ಭೂಗರ್ಭ ಇಲಾಖಾಧಿಕಾರಿ ನಂಜುಂಡಸ್ವಾಮಿ ಅವರಿಗೆ ಸೂಚಿಸಿದರು. ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಪೋಲಿಸ್ ಇಲಾಖೆಯು ಜಾಗೃತಿ ವಹಿಸಬೇಕು. ಹಾಗೂ ಇಂತಹ ಪ್ರಕಣಗಳನ್ನು ಪತ್ತೆ ಹಚ್ಚಿ ದೂರು ದಾಖಲಿಸಲು ಸಭೆಯಲ್ಲಿ ಉಪಸ್ಥಿತರಿದ್ದ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.

ಮೇ 1ರಿಂದ ಆರಂಭ :  ಇಂಡಿ ಮತ್ತು ಹೊರ್ತಿ ಗ್ರಾಮದಲ್ಲಿ ಮೇ 1 ರಿಂದ ತಾತ್ಕಾಲಿಕವಾಗಿ ಚೆಕ್ ಪೋಸ್ಟ್ ಆರಂಭಿಸಬೇಕು. ದಿನದ 24 ಗಂಟೆಯೂ ಚೆಕ್ ಪೋಸ್ಟ್‌ನಲ್ಲಿ ನಿಗಾವಹಿಸಿ ವಾಹನಗಳ ಓಡಾಡದ ದಾಖಲೆ, ವಾಹನ ಸಂಖ್ಯೆ ಕುರಿತಂತೆ ದಾಖಲೀಕರಣ ಮಾಡಬೇಕು. ಓರ್ವ ಪೋಲಿಸ್ ಸೇರಿದಂತೆ ಆರ್.ಟಿ.ಓ. ಅಧಿಕಾರಿಗಳು ಸಹ ಚೆಕ್ ಪೋಸ್ಟ್‌ಗಳಲ್ಲಿ ನಿಗಾ ವಹಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಇ-ಟಂಡರ್ : ಮರಳು ಮಾರಾಟಕ್ಕೆ ಈಗಿರುವ ಟೆಂಡರ್  ವ್ಯವಸ್ಥೆಯ ಬದಲು ಇ-ಟೆಂಡರ್ ಪ್ರಕ್ರಿಯೆ ನಡೆಸಿದರೆ ಹೆಚ್ಚು ಜನ ಟೆಂಡರ್‌ನಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಈ ಕುರಿತಂತೆ ಕ್ರಮ ವಹಿಸಲು ಸೂಚಿಸಿದರು.

ಗ್ರಾ.ಪಂ.ಗೆ ಪಾಲು :  ಮರಳು ಗಣಿಗಾರಿಕೆ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ಲಾಭಾಂಶವನ್ನು ನಿಯಮಾನುಸಾರ ನೀಡಬೇಕು. ಇದರಿಂದ ಗ್ರಾಮ ಪಂಚಾಯತ್‌ಗಳಿಗೆ  ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಅನುಕೂಲವಾಗುತ್ತದೆ. ನಿಯಮಾನುಸಾರ ಭೂಗರ್ಭ ಇಲಾಖೆ ನಡೆಸುವ ಗಣಿಗಾರಿಕೆಯ ಲಾಭಾಂಶದಲ್ಲಿ ಶೇ.50ರಷ್ಟು ಪಾಲು ಹಾಗೂ ಲೋಕೋಪಯೋಗಿ ಇಲಾಖೆ ನಡೆಸುವ ಮರಳು ಗಣಿಗಾರಿಕೆ ಲಾಭಾಂಶದಲ್ಲಿ ಶೆ.25ರಷ್ಡು  ಪಾಲನ್ನು ಗ್ರಾಮ ಪಂಚಾಯತಿಗಳಿಗೆ ನೀಡುವ ನಿಯಮವಿದ್ದು, ಸದರಿ ನಿಯಮವನ್ನು ಪಾಲಿಸುವಂತೆ ಸೂಚಿಸಿದರು. ಸಹಾಯವಾಣಿ : ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ಹಾಗೂ ದಾಸ್ತಾನು ಮಾಡುವವರ ವಿರುದ್ಧ ಮಾಹಿತಿ ನೀಡುವ ಕುರಿತಂತೆ ಸಾರ್ವಜನಿಕರಿಗೆ ಅನುಕೂಲವಾಗಲು ಸಹಾಯವಾಣಿಗಳನ್ನು ಸ್ಥಾಪಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಈ ಕುರಿತಂತೆ ಮಾಹಿತಿ ಒದಗಿಸಲು ಭೂಗರ್ಭ ಇಲಾಖೆಯ ದೂರವಾಣಿ ಸಂಖ್ಯೆ : 08352-252546, ಅಥವಾ ಮೋ: 9901632573, (ನಂಜುಂಡಸ್ವಾಮಿ)  ಹಾಗೂ ಮೋ: 9916451176 (ಮೂರ್ತಿ), 9686043620 (ಶ್ರೀನಿವಾಸ) ಇವರನ್ನು ಸಂಪರ್ಕಿಸಿ ಸಾರ್ವಜನಿಕರು ಮರಳು ಅಕ್ರಮ ಕುರಿತಂತೆ ಮಾಹಿತಿ ನೀಡಲು ಸಭೆಯ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಹೊಸ ಬ್ಲಾಕ್ : ವಿಜಾಪುರ ತಾಲೂಕಿನ ಕೃಷ್ಣಾ ನದಿ ಪಾತ್ರದ ಬಬಲಾದ ಮತ್ತು ಶಿರಬೂರ ಗ್ರಾಮಗಳಲ್ಲಿ ಐದು ಹೊಸ ಮರಳು ನಿಕ್ಷೇಪಗಳನ್ನು ಗುರುತಿಸಲಾಗಿದ್ದು, ಈ ಕುರಿತಂತೆ ಜಂಟಿ ನಿರ್ದೇಶಕರು ಉತ್ತರ ವಲಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬಳ್ಳಾರಿ ಇವರಿಗೆ ಅಧಿಸೂಚನೆ ಹೊರಡಿಸಲು ಸಲ್ಲಿಸಲಾಗಿದೆ ಎಂದು ಸಭೆಗೆ ಭೂವಿಜ್ಞಾನ ಇಲಾಖೆಯ ಅಧಿಕಾರಿ ನಂಜುಂಡಸ್ವಾಮಿ ಸಭೆಗೆ ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡುವವರೆಗೆ ತಾತ್ಕಾಲಿಕವಾಗಿ ಪಿಡಬ್ಲ್ಯೂಡಿಯಿಂದ ಮರಳುಗಾರಿಕೆ ನಡೆಸಲು ಸೂಚಿಸಿದರು. 84ಸಾವಿರ ರೂ. ದಂಡ : ಭೀಮಾ ಮತ್ತು ಕೃಷ್ಣಾ ನದಿಯ ಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದವರ ಮೇಲೆ ಜಂಟಿ ಕಾರ್ಯಾಚಣೆ ನಡೆಸಿ 20 ವಾಹನಗಳಿಂದ 84 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಭೆಗೆ ಭೂವಿಜ್ಞಾನಿಗಳು ವಿವರಿಸಿದರು.

ಹೊಸ ಮರಳು ನೀತಿಯನ್ವಯ ಲೋಕೋಪಯೋಗಿ ಇಲಾಖೆ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಹೊಣೆಯನ್ನು ನಿರ್ವಹಿಸುತ್ತಿದ್ದು, ಏಪ್ರೀಲ್ 4 ರವರೆಗೆ ಇಂಡಿ ತಾಲೂಕಿನ 83 ಬ್ಲಾಕ್‌ಗಳ ಪೈಕಿ 29ಕಡೆ ಮಶಿನರಿ ಮತ್ತು 36ಕಡೆ ಸಿಬ್ಬಂದಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, 54 ಕಡೆ ಮಶಿನರಿ ಮತ್ತು 47 ಕಡೆ ಸಿಬ್ಬಂದಿ ಗಣಿಗಾರಿಕೆಗೆ ಯಾವುದೇ ಗುತ್ತಿಗೆದಾರರು ಭಾಗವಹಿಸಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಪ್ರತಿ ಕ್ಯೂಬ್ ಮೀಟರ್‌ಗೆ 400 ರೂ.ರಂತೆ ಮರಳು ಮಾರಾಟ ನಿಗದಿಪಡಿಸಿ ಇಂಡಿ ತಾಲೂಕಿನಲ್ಲಿ 791 ಪರವಾನಿಗೆಯನ್ನು ವಿತರಿಸಿ 4031.00 ಕ್ಯೂಬ್ ಮೀಟರ್ ಮರಳು ಮಾರಾಟ ಮಾಡಿ 1612400.00 ಗಳ ರಾಜಧನ ಸಂಗ್ರಹಿಸಲಾಗಿದೆ.

ಸಿಂದಗಿ ತಾಲೂಕಿನಲ್ಲಿ 558 ಪರವಾನಿಗೆಯನ್ನು ವಿತರಿಸಿ, 2454.62 ಕ್ಯೂಬ್ ಮೀಟರ ಮರಳು ಮಾರಾಟದಿಂದ 981814.00 ರೂ. ರಾಜಧನ ಸಂಗ್ರಹಿಸಲಾಗಿದೆ. ಒಟ್ಟಾರೆ 1309 ಪರವಾನಿಗೆದಾರರಿಗೆ 6485.62 ಕ್ಯೂಬ್ ಮೀಟರ ಮರಳು ಮಾರಾಟ ಮಾಡಿ ರೂ. 2594248.00 ರೂ.ಗಳ ರಾಜಧನ ಸಂಗ್ರಹಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಯಡಹಳ್ಳಿ ಮಾಹಿತಿ ಒದಗಿಸಿದರು. ಸಭೆಯಲ್ಲಿ ವಿಜಾಪುರ ತಹಶೀಲ್ದಾರ ಶ್ರೀಮತಿ ರಾಜಶ್ರೀ ಜೈನಾಪುರ, ಇಂಡಿ ತಹಶೀಲ್ದಾರ ಜಿ.ಎಲ್.ಮೇತ್ರಿ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ವಿಜಯಕುಮಾರ ಹಲಕುಡೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಏ.28ರಂದು ಡ್ಯಾಬೇರಿ ಗ್ರಾಮದಲ್ಲಿ ಗೋಶಾಲೆ ಆರಂಭ

ವಿಜಾಪುರ ಏ,26- ಬರಗಾಲ ನಿಮಿತ್ಯ ವಿಜಾಪುರ ತಾಲೂಕಿನ ನಾಗಠಾನ ಮತಕ್ಷೇತ್ರದ ಡ್ಯಾಬೇರಿ ಗ್ರಾಮದ ಸರ್ಕಾರಿ ಕೆರೆ ಹತ್ತಿರ ಏ.28ರಿಂದ ಹೊಸದಾಗಿ ಗೋಶಾಲೆಯನ್ನು ತಾಲೂಕಾಡಳಿತದಿಂದ ಆರಂಭಿಸಲಾಗುವುದು. ಅಂದು ಬೆಳಿಗ್ಗೆ 10 ಗಂಟೆಗೆ ಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೊಂಡ ಗೋಶಾಲೆಯನ್ನು ಉದ್ಘಾಟಿಸಲಿದ್ದಾರೆ. ಡ್ಯಾಬೇರಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಈ ಗೋಶಾಲೆಯ ಸದುಪಯೋಗಪಡೆದುಕೊಳ್ಳಲು ತಹಶೀಲ್ದಾರ ಶ್ರೀಮತಿ ರಾಜಶ್ರೀ ಜೈನಾಪುರ ಮನವಿ ಮಾಡಿಕೊಂಡಿದ್ದಾರೆ.

ಏ.28ರಂದು ಕುದುರೆಗೆ ಟೆಟಾನಸ್ ನಾಯಿಗಳಿಗೆ ಹುಚ್ಚು ನಾಯಿ ಲಸಿಕೆ ಕಾರ್ಯಕ್ರಮ

ವಿಜಾಪುರ ಏ,26- ವಿಶ್ವ ಪಶುವೈದ್ಯರ ದಿನದ ಅಂಗವಾಗಿ ದಿ:28-4-2012ರಂದು ಬೆಳಿಗ್ಗೆ 8-30ರಿಂದ ವಿಜಾಪುರ ನಗರದ ವಿವಿಧೆಡೆ ಕುದುರೆಗಳಿಗೆ ಟೆಟಾನಸ್(ಧರ್ನುವಾಯು) ಹಾಗೂ ನಾಯಿಗಳಿಗೆ ಹುಚ್ಚು ನಾಯಿ ಲಸಿಕೆ ಹಾಗೂ ಜಂತು ನಾಶಕ ಔಷಧಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಗಾಂಧಿಚೌಕ ಟಾಂಗಾ ಸ್ಟ್ಯಾಂಡ್, ನೌಬಾಗ ಟಾಂಗಾ ಸ್ಟ್ಯಾಂಡ್, ಹಕೀಮ ಚೌಕ, ಗೋಲಗುಮ್ಮಟ ಹತ್ತಿರ, ಪಶು ಆಸ್ಪತ್ರೆ ಆವರಣ ಶಿಕಾರಖಾನೆಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಲು ಪಶುಪಾಲನೆ ಇಲಾಖೆಯ ಪಶುವೈದ್ಯರ ಸಂಘ ಕೋರಿದೆ. 

ಬಿ.ಸಿ.ಎಂ. ವಿದ್ಯಾರ್ಥಿನಿಲಯಕ್ಕೆ ವಿಜಾಪುರ ತಾಲೂಕಿನಲ್ಲಿ ಬಾಡಿಗೆ ಕಟ್ಟಡ ಬೇಕಾಗಿದೆ

ವಿಜಾಪುರ ಏ,26- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕಾಗಿ ಕನಿಷ್ಠ 50 ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಾಗುವ ಹಾಗೂ ಕನಿಷ್ಠ ನಾಲ್ಕು ಶೌಚಾಲಯ ಮತ್ತು ನಾಲ್ಕು ಸ್ನಾನಗೃಹಗಳನ್ನು ಹೊಂದಿರುವ ಕಟ್ಟಡಗಳು ವಿಜಾಪುರ ತಾಲೂಕಿನ ವಿವಿಧ ಸ್ಥಳಗಲ್ಲಿ  ಬಾಡಿಗೆಗೆ ಬೇಕಾಗಿವೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸುವಂತೆ ಬಾಡಿಗೆ ಪಾವತಿಸಲಾಗುವುದು. ಆಸಕ್ತ ಕಟ್ಟಡದ ಮಾಲೀಕರು ವಿವರಗಳೊಂದಿಗೆ  ತಾಲೂಕಾ ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನಕದಾಸ ಬಡಾವಣೆ, ದೇವರಾಜ ಅರಸ ಭವನ, ಜಾಪುರ ಇವರಿಗೆ ದಿ: 15-5-2012 ರೊಳಗೆ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಮಿಕರಿಗೆ ಸರ್ಕಾರದಿಂದ ಹಲವು ಯೋಜನೆ : ಅಪ್ಪು ಪಟ್ಟಣಶೆಟ್ಟಿ

ವಿಜಾಪುರ ಏ,26- ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಯೋಜನೆಗಳ ಕುರಿತು ಮಾಹಿತಿ ಪಡೆಯುವುದರೊಂದಿಗೆ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು. ಅವರು ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಹಾಗೂ ಕಾರ್ಮಿಕ ಇಲಾಖೆ ಮತ್ತು ವಿಜಾಪುರ ಅಟೋ ವಕ್ಸ್ ಸೋಸಿಯಲ್ ವೆಲ್‌ಫೇರ್ ಅಸೋಸಿಯೇಶನ್ ಇವರ ಸಹಯೋಗದಲ್ಲಿ ಇಂದಿರಾ ಆಟೋ ನಗರದಲ್ಲಿ ಆಯೋಜಿಸಲಾದ ಅಸಂಘಟಿತ ವಲಯದ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಲ್.ಸುಬ್ರಮಣ್ಯಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಬಡಜನರಿಗೆ ದುಡಿಮೆ ಎಷ್ಟು ಮುಖ್ಯವೋ ಸರ್ಕಾರ ಅವರಿಗಾಗಿ ರೂಪಿಸಿರುವ ಯೋಜನೆಗಳನ್ನು ಅರಿತು ಅದರ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಅಷ್ಟೇ ಮುಖ್ಯ. ಕಾರ್ಮಿಕ ಕಾನೂನಿನ ತಿಳುವಳಿಕೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಜಿ.ಸಿದ್ಧಲಿಂಗಪ್ಪ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಎಸ್.ಸೊರಗಾಂವಿ, ನಗರಸಭೆ ಆಯುಕ್ತ ಎಸ್.ಜಿ.ರಾಜಶೇಖರ, ನಿವೃತ್ತ ಪ್ರಾಚಾರ್ಯ ಡಿ.ಬಿ.ನಾಡಗೌಡ, ಕಾರ್ಮಿಕ ಮುಖಂಡರಾದ ಸತ್ತಾರ ಇನಾಂದಾರ, ಕಾರ್ಮಿಕ ಅಧಿಕಾರಿ ಎ.ಎಸ್.ಪಾಟೀಲ, ನಿಂಗಪ್ಪ ಧಣಿಹಾಳ, ಭರತ ಕೋಳಿ, ಹಸನ ಕೊಲ್ಹಾರ, ರಮೇಶ ಚಿಕ್ಕದಾನಿ, ರಮೇಶ ಸಣ್ಣಕಿ, ಮೂಸಾ ದಖನಿ, ಫರೀದಾ ಸೋನಾರ, ಸಾಜೀದ ಜಮಾದಾರ, ಕೇಶುದರಾಜ ಇನಾಂದಾರ, ಅಮೀನುದ್ದಿನ ದರ್ಗಾ, ರಾಜು ನಾಯಕ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಹೊಸ ಪಿಂಚಣಿ ಯೋಜನೆ ಎಂದು ಕರೆಯು ಕಾಂಟ್ರಿಬ್ಯೂಟರಿ ಪಿಂಚಣಿ ಯೋಜನೆ ಕುರಿತು ಪುಸ್ತಕ ಬಿಡುಗಡೆಗೊಳಿಸಲಾಯಿತು.

ಜೋಯಡಾ ಕುಗ್ರಾಮಗಳಿಗೆ ಆರೋಗ್ಯ ಸೇವೆ ಆರಂಭಗೊಂಡ ಅಭಿವೃದ್ಧಿ ಪರ್ವದ ಪ್ರಥಮ ಮೆಟ್ಟಿಲು

 ಕಾರವಾರ-26 : ರಾಜ್ಯದ ಎರಡನೇ ದೊಡ್ಡ ತಾಲೂಕೆಂಬ ಹೆಮ್ಮೆ ಇದ್ದರೂ ಸಹ ಕಳೆದೆರಡು ದಶಕಗಳಿಂದ ಜೋಯಡಾ ತಾಲೂಕಿನ ಕುಗ್ರಾಮಗಳ ದುಸ್ಥಿತಿ ಬಗ್ಗೆ ವ್ಯಾಪಕ ಮಾತುಗಳು ಕೇಳಿ ಬರುತ್ತಿವೆಯಾದರೂ ಅಭಿವೃದ್ಧಿಯ ಪರ್ವ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.  ಮಳೆಗಾಲದಲ್ಲಿ ಕಾಳಿ ಹಿನ್ನೀರಿನಿಂದ ಹಾಗೂ ಹಳ್ಳ ಕೊಳ್ಳಗಳಿಂದ ರಸ್ತೆ ಸಂಪರ್ಕವನ್ನೇ ಸಂಪೂರ್ಣವಾಗಿ ಕಳೆದುಕೊಳ್ಳುವ ಅನೇಕ ಗ್ರಾಮಗಳ ಆರೋಗ್ಯ ಸೇವೆಗೆ ಯುವಕರಿಂದ ರಚಿಸಲ್ಪಟ್ಟ ಜೋಯಡಾದ ಸಂಜೀವಿನಿ ಸೇವಾ ಟ್ರಸ್ಟ ಸಿದ್ಧಗೊಂಡಿದೆ. ಯಾವುದೇ ಪ್ರಚಾರದ ಗೀಳಿಲ್ಲದೇ ಅನೇಕ ವರ್ಷಗಳಿಂದ ಅನಾಥ ಹಾಗೂ ದುರ್ಬಲ ವರ್ಗದ ಮಕ್ಕಳಿಗಾಗಿ ಹಾಗೂ ಸಾರ್ವಜನಿಕರಿಗೆ ಆಧಾರ ಸ್ಥಂಬವಾಗಿ ಸೇವೆ ಸಲ್ಲಿಸುತ್ತಿರುವ ಕಾರವಾರದ ಕ್ರೂಗರ್ ಫೌಂಡೇಶನ್ ಹಿರಿಯ ನ್ಯಾಯವಾದಿಗಳಾದ ಎಸ್.ಪಿ.ಕಾಮತ ಹಾಗೂ ದೆಹಲಿ ಸುಪ್ರಿಂ ಕೋರ್ಟ ನ್ಯಾಯವಾದಿಗಳಾದ ದೇವದತ್ತ ಕಾಮತ ಇವರು ಜೋಯಡಾದ ಕುಗ್ರಾಮಗಳಿಗೆ ತಮ್ಮ ಸೇವೆಯ ಪ್ರಥಮ ಹಂತವಾಗಿ ಉಚಿತ ಸುಸಜ್ಜಿತ ಸಂಚಾರಿ ಆರೋಗ್ಯ ಸೇವಾ ಘಟಕ(ಅಂಬುಲೆನ್ಸ) ವನ್ನು ಇದೇ ಏಪ್ರಿಲ್ 28 ರಂದು ಅರ್ಪಿಸಲಿದ್ದಾರೆ.

        15 ಗ್ರಾಮ ಪಂಚಾಯ್ತಿ 120 ಕಂದಾಯ ಗ್ರಾಮಗಳನ್ನು ಹೊಂದಿರುವ ಜೋಯಡಾ ತಾಲೂಕಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇನ್ನು ಅನೇಕ ದಶಕಗಳೇ ಬೇಕಾಗಬಹುದು. ಕೃಷಿ ವ್ಯವಸಾಯವನ್ನೇ ನಂಬಿರುವ ಈ ಜನರೆಲ್ಲರು ಚಿಕ್ಕ ಹಿಡುವಳಿದಾರರಾಗಿದ್ದು ಪಾರಂಪರಿಕ ಬೀಜ-ಗೊಬ್ಬರವನ್ನೇ ಬಳಸುತ್ತಾರೆ. ಕೆಸುಗಡ್ಡೆ, ಕೋನ, ಮುಡ್ಲಿ, ಹೆಸರಿನ ಗಡ್ಡೆ ಗೆಣಸುಗಳನ್ನು ಹಾಗೂ ಅರಣ್ಯ ಉತ್ಪನ್ನಗಳನ್ನೇ ನಂಬಿ ಬದುಕುವ ಈ ಜನರಿಗೆ ಮಹಾನಗರಗಳ ಕನಸು ಅದೆಷ್ಟೋ ದೂರದ ಮಾತು. ರಸ್ತೆ ಸಂಪರ್ಕವಿರದ ಹಾಗೂ ವಿದ್ಯುತ್ ಸಂಪರ್ಕವಿರದ ಅದೆಷ್ಟೋ ಗ್ರಾಮಗಳ ಅಭಿವೃದ್ಧಿಗೆ ಈವರೆಗೆ ಯಾವ ಸಂಘ-ಸಂಸ್ಥೆಯೂ ಕೋಟ್ಯಾಧೀಶ ಜನರು ವೈಯಕ್ತಿಕವಾಗಿ ಸೌಕರ್ಯಗಳನ್ನು ನೀಡಿದ ಕುರುಹುಗಳಿಲ್ಲ. ಇಂಥ ಸಂಪರ್ಕದಿಂದ ಕುಗ್ರಾಮಗಳಿಗೆ ಅರೋಗ್ಯ ಸೇವೆ ನೀಡಲು ಸಂಜಿವಿನಿ ಟ್ರಸ್ಟ ಮುಂದಾಗಿದೆ. ಸಂಜೀವಿನಿ ಟ್ರಸ್ಟ ಮೂಲಕ ನುರಿತ ತಜ್ಞ ವೈದ್ಬರು ಹಾಗೂ ಯುವಕರ ಪಡೆ ಸೇವೆ ಸಲ್ಲಿಸಲಿದೆ. ಪ್ರತಿವರ್ಷ ಏಳೆಂಟು ಲಕ್ಷ ರೂ. ವೆಚ್ಚದ ಔಷಧಿಗಳನ್ನು ಸಹ ಕೇಂದ್ರದಲ್ಲಿ ಲಭ್ಯವಿದ್ದು, ಮೋಬೈಲ್ ಘಟಕದಲ್ಲಿ ಎಲ್ಲ ತುರ್ತು ಸಲಕರಣಗಳ ವ್ಯವಸ್ಥೆಯಿದೆ.

         ಜೋಯಡಾ ಸುತ್ತಲಿನ ನಗರ ಹಾಗೂ ತಾಲ್ಲೂಕುಗಳಲ್ಲಿ ಅದೆಷ್ಟೋ ಜನರು ಕೋಟ್ಯಾಧೀಶರಾಗಿದ್ದಾರೆ. ಈ ಶ್ರೀಮಂತ ಜನರು, ಉದ್ಯಮಿಗಳು ಸಮಾಜ ಸೇವಕರು ಅಥವಾ ಯಾವುದೇ ಒಂದು ಸಂಘ-ಸಂಸ್ಥೆಗಳು ಜೋಯಡಾದ ಕುಣಬಿ  ಜನರಿಗೆ ನಿರೀಕ್ಷಿತ ಸೇವೆಗಳನ್ನು, ಈವರೆಗೂ ನೀಡದೇ ಇರುವುದು ಸಹ ವಿಷಾದನೀಯ. ದಟ್ಟ ಕಾನನ, ಕಾಳಿ ಹಿನ್ನೀರು, ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಜೋಯಡಾ ತಾಲೂಕಿನ ಕುಗ್ರಾಮಗಳ ದುಸ್ಥಿತಿಯನ್ನು ಕಂಡು ಈವರೆಗೆ ಮರುಕ ವ್ಯಕ್ತಪಡಿಸಿದ ಅನೇಕ ಶ್ರೀಮಂತರು ಜೋಯಡಾದ ಸೇವೆಗೆ ವೈಯಕ್ತಿಕವಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿದ ಉದಾಹರಣೆಗಳು ಇಲ್ಲಿ ಕಾಣುವುದಿಲ್ಲ. ಮಳೆಗಾಲದಲ್ಲಿ ಈ ಜನರ ಅಸ್ತವ್ಯಸ್ತ ಜೀವನವನ್ನು ಕಂಡು ಅದೆಷ್ಟೋ ಜನರು ಪಾಪ ಎಂಬ ಉದ್ಗಾರ ಹೊರತೆಗೆದರೆ ಹೊರತು ವೈಯಕ್ತಿಕವಾಗಿ ಯಾರೂ ಕಾಲುಸಂಕಗಳನ್ನೇನು ನಿರ್ಮಿಸಿ ಕೊಡದೇ ಇರುವುದು ದುರ್ದೈವದ ಸಂಗತಿ. ಆದರೆ ಈಗಷ್ಟೇ ಸಂಜೀವಿನಿ ಟ್ರಸ್ಟ ತನ್ನ ಸೇವಾಕಾರ್ಯವನ್ನು ಆರಂಭಿಸಿದೆ. ಆರೋಗ್ಯ ಸೇವೆಯ ನಂತರ ಇನ್ನೂ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲು ಚಿಂತನೆ ಈ ಟ್ರಸ್ಟ ಹೊಂದಿದೆ.

        ಈ ಆರೋಗ್ಯ ಸೇವೆಯ ಪ್ರಥಮ ಹೆಜ್ಜೆಯಾಗಿ ಉಚಿತ ಸಂಚಾರಿ ಆರೋಗ್ಯ ಸೇವಾ ಘಟಕವು ತಾಲೂಕಿನ ಕುಗ್ರಾಮಗಳಿಗೆ ಆರಂಭಿಸಲಾಗುವುದು. ಇದೇ ಏಪ್ರಿಲ್ 28 ರಂದು ಡೇರಿಯಾ ಗ್ರಾಮದ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ವೈದ್ಯಕೀಯ ಸೇವೆಯ ಅಭಾವವಿರುವ ಹಳ್ಳಿಗಳಲ್ಲಿ ಈ ಘಟಕವು ಸಂಚಾರ ಮಾಡಿ ಅಲ್ಲಿಯ ರೋಗಿಗಳಿಗೆ ಸ್ಥಳದಲ್ಲೇ ಪ್ರಥಮೋಚಾರ ನೀಡಲಿದ್ದು ವಿವಿಧ ಶಿಬಿರಗಳ ಮೂಲಕ ತಜ್ಞ ವೈದ್ಯರ ಹಾಗೂ ಸರಕಾರದ ಯೋಜನೆಗಳ ಸೇವೆ ಒದಗಿಸಲಾಗುವುದು. ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ದೇವದತ್ತ ಕಾಮತ, ಕೆನರಾ ವೆಲ್‌ಫೇರ್ ಟ್ರಸ್ಟನ ಅಧ್ಯಕ್ಷ ಎಸ್.ಪಿ.ಕಾಮತ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ: ಅಶೋಕ ಕುಮಾರ, ಧಾರವಾಡದ ಮನೋರೋಗ ತಜ್ಞ ಡಾ: ಆನಂದ ಪಾಂಡುರಂಗಿ, ಡಿ.ವಾಯ್.ಎಸ್.ಪಿ ಸಾರಾಫಾತಿಮಾ, ನಾಟಿ ವೈದ್ಯ ಶ್ರೀಧರ ದೇಸಾಯಿ ತಾಲೂಕಾ ವೈದ್ಯಾಧಿಕಾರಿ ಡಾ: ರಾಜೇಶ ಪ್ರಸಾದ, ಡಾ: ಎಸ್.ಕೆ.ನಾಯ್ಕ, ಡಾ: ಸಂಗಪ್ಪಾ ಗಾಬಿ, ಡಾ: ಬಿ.ಪಿ.ಶ್ರೀಕಾಂತ,ಡಾ: ಮುಕುಂದ ಕಾಮತ, ನ್ಯಾಯವಾದಿ ಕೆ.ಆರ್.ದೇಸಾಯಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕಾಂತ ರಾu, ಗುರುನಾಥ ಕಾಮತ ರವಿ ರೇಡಕರ, ಜಯಾನಂದ ಡೇರೇಕರ , ಸುನಿಲ ದೇಸಾಯಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಎಲ್ಲ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಎಲ್ಲ ಯುವ ಸಂಘಟನೆಗಳು, ಸಂಘ-ಸಂಸ್ಥೆಗಳು, ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು ಈ ಸಂಚಾರಿ ಘಟಕದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ