Government of Karnataka

Department of Information

Saturday 21/01/2017

ಜಿಲ್ಲಾ ವಾರ್ತೆ 26-12-2016

Date : ಸೋಮವಾರ, ದಶಂಬರ 26th, 2016

ಜಿಲ್ಲಾ ಸುದ್ದಿಗಳು:

ಡಿ. 29 ರಂದು ಕೊಪ್ಪಳದಲ್ಲಿ ಅರ್ಥಪೂರ್ಣ ವಿಶ್ವ ಮಾನವ ದಿನ ಆಚರಣೆ- ಡಾ. ರುದ್ರೇಶ್ ಘಾಳಿ

ಕೊಪ್ಪಳ, ಡಿ.26 (ಕರ್ನಾಟಕ ವಾರ್ತೆ): ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಡಿ. 29 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ವಿಶ್ವ ಮಾನವ ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.

ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಕೊಪ್ಪಳದಲ್ಲಿ ವಿಶ್ವ ಮಾನವ ದಿನ ಆಚರಣೆ ಸಂಬಂಧ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ರಾಜ್ಯ ಸರ್ಕಾರದ ವತಿಯಿಂದ ಡಿ. 29 ರ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ. ಕನ್ನಡ ನಾಡಿನ ಹಿರಿಮೆಯನ್ನು ತಮ್ಮ ಅದ್ಭುತ ಸಾಹಿತ್ಯ ಮತ್ತು ಕವನಗಳ ಮೂಲಕ ಜಗತ್ತಿಗೆ ಪರಿಚಯಿಸಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿರುವುದು ಅರ್ಥಪೂರ್ಣವಾಗಿದೆ. ಕಾರ್ಯಕ್ರಮವನ್ನು ಡಿ. 29 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಅಂದು ಕುವೆಂಪು ಅವರು ರಚಿಸಿರುವ ಕವನಗಳ ಗೀತಗಾಯನ ಕಾರ್ಯಕ್ರಮ ಅಲ್ಲದೆ ಕುವೆಂಪು ರಚಿತ ‘ಓ ನನ್ನ ಚೇತನ’ ಮತ್ತು ‘ವಿಶ್ವ ಮಾನವ ಗೀತೆ’ ಗಳಿಗೆ ಕಲಾವಿದರಿಂದ ನೃತ್ಯ ರೂಪಕವನ್ನು ಏರ್ಪಡಿಸಲಾಗುವುದು. ಖ್ಯಾತ ಸಾಹಿತಿ ಡಾ. ರಹಮತ್ ತರೀಕರೆ ಹಾಗೂ ಕೊಪ್ಪಳದ ವಿಶ್ರಾಂತ ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ ಅವರಿಂದ ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸಲಾಗುವುದು. ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ವಿಶ್ವ ಮಾನವ ದಿನವನ್ನು ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ ಆಚರಿಸುವಂತೆ ಸೂಚನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತಾಗಬೇಕು. ಅಲ್ಲದೆ ಎಲ್ಲ ಸಾರ್ವಜನಿಕರು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಕೋರಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಗೊಂಡಬಾಳ, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಗಣ್ಯರಾದ ಬಸವರಾಜ ಶೀಲವಂತರ, ಶಿವಾನಂದ ಹೊದ್ಲೂರ, ಸಂತೋಷ ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ತಿಳುವಳಿಕೆ ಮೂಲಕ ಜನರನ್ನು ಆರೋಗ್ಯವಂತರನ್ನಾಗಿ ಮಾಡಬೇಕು – ಶಾಸಕ ಡಾ|| ಎ.ಬಿ.ಮಾಲಕರೆಡ್ಡಿ

ಯಾದಗಿರಿ:ಡಿಸೆಂಬರ್,26(ಕರ್ನಾಟಕ ವಾರ್ತೆ): ಭೌತಿಕ ಮತ್ತು ಮಾನಸಿಕವಾಗಿ ಜನರ ಸಮಗ್ರ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಶಾಸಕರಾದ ಡಾ|| ಎ.ಬಿ. ಮಾಲಕರೆಡ್ಡಿ ಅವರು ತಿಳಿಸಿದರು.

ಸೋಮವಾರ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಟ್ರಸ್ಟ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿಶೇಷ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕಾಯಿಲೆ ಇರಲಿ, ಜನರಿಗೆ ಅರಿವು ಮೂಡಿಸಿ, ಅವರನ್ನು ಆರೋಗ್ಯವಂತರನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ಕೆಲಸ ಬಹಳ ಮುಖ್ಯವಾದುದು. ಆಸ್ಪತ್ರೆ, ವೈದ್ಯಾಧಿಕಾರಿಗಳು ಹಾಗೂ ರೋಗಿಗಳ ನಡುವೆ ಟ್ರಸ್ಟ್ ಸೇತುವೆಯಾಗಿ ಕೆಲಸ ನಿರ್ವಹಿಸಬೇಕು ಎಂದು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರವೂ ಗುರುತರವಾದುದು ಎಂದು ಅವರು ಅಭಿಪ್ರಾಯಪಟ್ಟರು.

ಕಿಡ್ನಿ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯುಳ್ಳ ರೋಗಿಗಳಿಗೆ ತಿಳುವಳಿಕೆ ನೀಡಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಕರೆತಂದು ತಜ್ಞ ವೈದ್ಯರಿಂದ ಸೂಕ್ತ ಸಲಹೆ ನೀಡಿಸಬೇಕು ಎಂದು ಶಾಸಕ ಡಾ|| ಎ.ಬಿ ಮಾಲಕರೆಡ್ಡಿ ಹೇಳಿದರು.

ವಿಶೇಷ ತಪಾಸಣಾ ಶಿಬಿರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಂಗವಿಕಲರು ಮತ್ತು ನೇತ್ರ(ಕಣ್ಣು) ದೋಷವಿರುವವರಿಗೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು(ಪ್ರಭಾರಿ)ಡಾ|| ಭಗವಂತ ಅನವಾರ ಅವರು ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ದೈಹಿಕ ಅಂಗವಿಕಲರಿಗಾಗಿ ಮತ್ತು ಗುರುವಾರ ನೇತ್ರ ದೋಷವಿರುವವರಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಮಂಗಳವಾರ ಶಹಾಪೂರ ತಾಲೂಕು ಆಸ್ಪತ್ರೆ ಮತ್ತು ಶುಕ್ರವಾರ ಸುರಪೂರ ಆಸ್ಪತ್ರೆಗಳಲ್ಲಿ ಶಿಬಿರಗಳನ್ನು ಆಯೋಜಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಸುಭಾಷಚಂದ್ರ ಕಂದಕೂರ ಅವರು ಆರೋಗ್ಯ ಶಿಬಿರವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ತಾ.ಪಂ. ಅಧ್ಯಕ್ಷರಾದ ಶ್ರೀ ಭಾಷು ರಾಠೋಡ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ನಿರ್ದೇಶಕರಾದ ಶ್ರೀ ಸನ್ನತ್ ಕುಮಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರಾಮರಡ್ಡಿ ಗೌಡ ತಂಗಡಗಿ, ನಗರ ಸಭೆ ಅಧ್ಯಕ್ಷರಾದ ಶ್ರೀ ಶಶಿಧರರೆಡ್ಡಿ ಹೊಸಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದೇಶ್ವರಪ್ಪ.ಜಿ.ಬಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ನೀಲಮ್ಮ, ಐಡಿಎಸ್‍ಪಿ ಅಧಿಕಾರಿಗಳಾದ ಡಾ.ಲಕ್ಷ್ಮಣ, ಸುವರ್ಣ ಆರೋಗ್ಯ ಟ್ರಸ್ಟ್‍ನ ಜಿಲ್ಲಾ ಸಂಯೋಜಕರಾದ ಶ್ರೀ ಶರಣಬಸ್ಸಪ್ಪ, ಹಿರಿಯ ಆರೋಗ್ಯ ಸಹಾಯಕರಾದ ಸಿದ್ರಾಮರೆಡ್ಡಿ ಸೇರಿದಂತೆ ಆರೋಗ್ಯ ಮಿತ್ರರು, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಮಲ್ಲಪ್ಪ ಪಾಟೀಲ ನಾಯ್ಕಲ್ ಅವರು ಸ್ವಾಗತಿಸಿದರು.ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಶ್ರೀ ನಂದಣ್ಣ ಅವರು ವಂದಿಸಿದರು, ಆರೋಗ್ಯ ಮಿತ್ರರಾದ ಬಸವರಾಜ ಶಕಲಾಸಪಲ್ಲಿ ಅವರು ವಿವಿಧ ಸರ್ಕಾರಿ ಆರೋಗ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬೀರಾದಾರ ಶಂಕರ ಅವರು ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ

ಧಾರವಾಡ ( ಕರ್ನಾಟಕ ವಾರ್ತೆ) ಡಿ.26 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ಅಡಿಯಲ್ಲಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಜನರಿಗಾಗಿ ಏರ್ಪಡಿಸಿರುವ ವಿಶೇಷ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಇಂದು ( ಸೋಮವಾರ ಡಿ.26) ಧಾರವಾಡ ತಾಲ್ಲೂಕಿನ ಸಲಕಿನಕೊಪ್ಪ ಗ್ರಾಮದಲ್ಲಿ ಚಾಲನೆ ದೊರೆಯಿತು.

ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಂದ್ರ ಎಂ.ದೊಡ್ಡಮನಿ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಅವುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ,ವಾಜಪೇಯಿ ಆರೋಗ್ಯಶ್ರೀ,ರಾಜೀವ ಆರೋಗ್ಯ ಭಾಗ್ಯ,ಜ್ಯೋತಿ ಸಂಜೀವಿನಿ,ಮುಖ್ಯಮಂತ್ರಿಗಳ ಸಾಂತ್ವನ ಹರೀಶ ಯೋಜನೆ,ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ,ಇಂದಿರಾ ಸುರಕ್ಷಾ ಯೋಜನೆ ಸೇರಿದಂತೆ ಸರಕಾರದ ಎಲ್ಲ ಕಾರ್ಯಕ್ರಮಗಳ ಬಗೆಗೆ ವಾರ್ತಾ ಇಲಾಖೆಯು ನಿರಂತರವಾಗಿ ಸಾರ್ವಜನಿಕರಿಗೆ ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ ನೀಡುತ್ತಿರುತ್ತದೆ.ನೇರವಾಗಿ ಗ್ರಾಮೀಣ ಭಾಗಗಳಿಗೆ ಪ್ರದರ್ಶನ ವಾಹನದ ಮೂಲಕ ತೆರಳಿ,ಕಲಾ ತಂಡಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸುವದರಿಂದ ಹಳ್ಳಿಗಳಲ್ಲಿನ ಎಲ್ಲ ಜನರನ್ನು ತಲುಪಲು ಸಾಧ್ಯವಾಗುತ್ತದೆ.ಸಾರ್ವಜನಿಕರು ವಿವಿಧ ಆರೋಗ್ಯ ಯೋಜನೆಗಳ ಬಗೆಗೆ ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮನಸೂರ ಗ್ರಾ.ಪಂ.ಉಪಾಧ್ಯಕ್ಷ ರಿಯಾಜ್ ನಿಪ್ಪಾಣಿ,ಸದಸ್ಯರಾದ ಮಂಜುನಾಥ ಓಬಣ್ಣವರ್,ಕಿರಣ್ ಕಲ್ಲೂರ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಲ್.ಎಸ್.ಅಂಬಲಿ, ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ.ತೊಂಡಿಹಾಳ,ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ಜಿಲ್ಲಾ ಸಂಯೋಜಕ ನಾಗರಾಜ ಹೊನ್ನಪ್ಪಗೌಡ್ರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುಂದಗೋಳ ತಾಲ್ಲೂಕು ಹರ್ಲಾಪುರ ಗ್ರಾಮದ ಸಿವೈಸಿಡಿ ಕಲಾತಂಡದ ಈಶ್ವರ್ ಅರಳಿ,ಶಿವು ಡಂಬಳ,ಶರೀಫ್ ದೊಡ್ಡಮನಿ,ಚಂದ್ರಶೇಖರ್ ಕಾಳೆ,ಪ್ರಕಾಶ ದೊಡ್ಡೂರ,ಮಲ್ಲೇಶ ಮುಳಗುಂದ ಮತ್ತಿತರರು ಜಾಗೃತಿ ಗೀತೆ,ಬೀದಿ ನಾಟಕಗಳನ್ನು ಪ್ರದರ್ಶಿಸಿದರು.

2017 ರ ಜನವರಿ 1 ರವರೆಗೆ ವಿಶೇಷ ಜಾಗೃತಿ ಅಭಿಯಾನವು ಸಲಕಿನಕೊಪ್ಪ,ಕಣವಿ ಹೊನ್ನಾಪುರ, ವರನಾಗಲಾವಿ, ಅರಳಿಹೊಂಡ, ನಾಗನೂರ, ನೆಹರೂ ನಗರ, ರಾಜಾಜಿ ನಗರ, ರಾಮನಾಳ, ಶಿವನಗರ, ಶಿವನಾಪುರ, ಸಿಂಗನಳ್ಳಿ, ಸೋಲಾರಕೊಪ್ಪ, ಬೆಳ್ಳಿಗಟ್ಟಿ, ಚಿಕ್ಕಗುಂಜಳ, ಚಿಕ್ಕ ಹರಕುಣಿ, ಗೌಡಗೇರಿ, ಹರ್ಲಾಪುರ, ಕೊಡ್ಲಿವಾಡ, ಕೋಳಿವಾಡ ಗ್ರಾಮಗಳಲ್ಲಿ ಸಂಚರಿಸಲಿದೆ.ಜನವರಿ 2 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ

ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ ಅಳವಡಿಕೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಶಿವಮೊಗ್ಗ, ಡಿಸೆಂಬರ್ 26 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆಯು ಹನಿ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗೆ ಶೇ. 90ರಷ್ಟು ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತ ರೈತರು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹನಿ ನೀರಾವರಿ ಅಳವಡಿಕೆಗೆ ರೈತ ಫಲಾನುಭವಿಗಳು ಸಂಪೂರ್ಣ ವೆಚ್ಚ ಭರಿಸಲು ಸಾಧ್ಯವಾಗದೇ ಇದ್ದಲ್ಲಿ ಫಲಾನುಭವಿಯು ತನ್ನ ಪಾಲನ್ನು ಮಾತ್ರ ಕಂಪನಿಗಳಿಗೆ ನೀಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಹನಿ ನೀರಾವರಿ ಅಳವಡಿಸಿಕೊಳ್ಳಲು ಕಾರ್ಯಾದೇಶ ಪಡೆದ ರೈತರು ತೋಟಕ್ಕೆ 30 ದಿನದೊಳಗಾಗಿ ಅಳವಡಿಸಿಕೊಂಡ ಕಡತವನ್ನು ಕಚೇರಿಗೆ ಸಲ್ಲಿಸಿವುದು.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ತಾಲೂಕು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತೋಟಗಾರಿಗೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಡಿ.31ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತುಮಕೂರಿಗೆ

ತುಮಕೂರು (ಕ.ವಾ.) ಡಿ.26: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು ಡಿಸೆಂಬರ್ 31ಕ್ಕೆ ತುಮಕೂರು ನಗರಕ್ಕೆ ಭೇಟಿ ನೀಡುವರು. ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಸಾಹಿತಿಗಳು, ಚಿಂತಕರು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವರು.

ಮ.12 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆಡಳಿತದಲ್ಲಿ ಕನ್ನಡ ಅನುಷ್ಟಾನ ಕುರಿತು ಪ್ರಗತಿ ಪರಿಶೀಲನೆ ನಡೆಸುವರು.

ಜನವರಿ 1ರಂದು ಎಸ್.ಐ.ಟಿ.ಯಲ್ಲಿ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ವಿತರಣೆ

ತುಮಕೂರು (ಕ.ವಾ.) ಡಿ.26: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜನವರಿ 01 ರಂದು ಬೆಳಿಗ್ಗೆ 10.30ಕ್ಕೆ ತುಮಕೂರು ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿರ್ಲಾ ಆಡಿಟೋರಿಯಂನಲ್ಲಿ ಬೆಂಗಳೂರು ವಿಭಾಗದ 580 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿಗಳ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ.

ಉದ್ಘಾಟನೆಯನ್ನು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ. ಜಯಚಂದ್ರ ನೆರವೇರಿಸುವರು. ಪ್ರಶಸ್ತಿಗಳನ್ನು ಗೃಹ ಸಚಿವರಾದ ಡಾ: ಜಿ. ಪರಮೇಶ್ವರ ಅವರು ವಿತರಿಸುವರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯರವರು ಪ್ರಾಸ್ತಾವಿಕ ನುಡಿಗಳನ್ನಾಡುವರು.

ಸಾಹಿತಿಗಳು ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಹಿತನುಡಿಗಳನ್ನಾಡುವರು. ಅಧ್ಯಕ್ಷತೆಯನ್ನು ತುಮಕೂರು ನಗರ ವಿಧನಸಭಾ ಕ್ಷೇತ್ರದ ಶಾಸಕರಾದ ಡಾ: ಎಸ್. ರಫೀಕ್ ಅಹ್ಮದ್ ಅವರು ವಹಿಸುವರು. ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮುಂತಾದ ಚುನಾಯಿತ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸುವರು.

ಬ್ಯೂಟಿಪಾರ್ಲರ್ ಮ್ಯಾನೇಜ್‍ಮೆಂಟ್ ಮತ್ತು ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ ಆಹ್ವಾನ

ತುಮಕೂರು (ಕ.ವಾ.) ಡಿ.26: ತುಮಕೂರು ಹಿರೇಹಳ್ಳಿಯಲ್ಲಿರುವ ಮಿಪ್‍ಸೆಡ್ ತರಬೇತಿ ಸಂಸ್ಥೆ (ಮೈ-ಬ್ಯಾಂಕ್ ಸ್ವ-ಉದ್ಯೋಗ ಮತ್ತು ಅಭಿವೃದ್ಧಿ ನಿರತ ತರಬೇತಿ ಸಂಸ್ಥೆ) ನಿರುದ್ಯೋಗಿ ಯುವಕ, ಯುವತಿಯರಿಗಾಗಿ ವಸತಿಯುತ ಉಚಿತ 30 ದಿನಗಳ ಬ್ಯೂಟೀ ಪಾರ್ಲರ್ ಮ್ಯಾನೇಜ್‍ಮೆಂಟ್ ಮತ್ತು ಕಂಪ್ಯೂಟರ್ ಟ್ಯಾಲಿ ತರಬೇತಿಯನ್ನು ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಬ್ಯೂಟಿ ಪಾರ್ಲರ್ ಮ್ಯಾನೇಜರ್ ಮತ್ತು ಕಂಪ್ಯೂಟರ್ ಟ್ಯಾಲಿ ತರಬೇತಿಗಾಗಿ ಕನ್ನಡ ಓದಲು ಮತ್ತು ಬರೆಯಲು ಬರುವ 18 ರಿಂದ 45 ವಯೋಮಿತಿಯೊಳಗಿನ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವವರು ಮಿಪ್‍ಸೆಡ್ ತರಬೇತಿ ಸಂಸ್ಥೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತರಹಳ್ಳಿ ಗೇಟ್, ನಿರ್ಮಿತಿ ಕೇಂದ್ರದ ಹತ್ತಿರ, ತುಮಕೂರು ಇವರಿಗೆ 30-12-2016 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅರ್ಜಿಯೊಂದಿಗೆ ದೂ.ವಾ. ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ 0816-2243386 ಸಂಪರ್ಕಿಸಲು ಕೋರಿದೆ.

ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ-ಸಚಿವ ಎ.ಮಂಜು

ಹಾಸನ. ಡಿಸೆಂಬರ್ 26-ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಕೃಷಿ ತೋಟಗಾರಿಕೆ, ಪಶುಪಾಲನೆ, ಗ್ರಾಮೀಣಾಭಿವೃದ್ಧಿ, ಹಾಗೂ ಕಂದಾಯ ಇಲಾಖೆಗಳು ಸಂಘಟಿತ ಹಾಗೂ ಸಮನ್ವಯದ ಪ್ರಯತ್ನ ಮುಂದುವರೆಸಬೇಕು ಎಂದು ಜಿಲ್ಲಾ ಸಚಿವರು ಹಾಗೂ ರಾಜ್ಯ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದ ಎ.ಮಂಜು ಅವರು ತಿಳಿಸಿದರು.

ಚನ್ನರಾಯಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲ್ಲೂಕಿನ ಬರ ಪರಿಸ್ಥಿತಿ ಹಾಗೂ ಕೈಗೊಳ್ಳಲಾಗಿರುವ ಪರಿಹಾರಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು ಯಾವುದೇ ಗ್ರ್ರಾಮವು ಕುಡಿಯುವ ನೀರಿನಿಂದ ವಂಚಿತವಾಗಬಾರದು ಹಾಗೂ ದನಕರುಗಳು ಮೇವು ನೀರಿಲ್ಲದೆ ಬಳಲಬಾರದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದರು.

ಕುಡಿಯುವ ನೀರು ಪೂರೈಕೆ ಕಾಮಗಾರಿಗಳಿಗೆ ಯಾವುದೇ ರೀತಿಯಲ್ಲಿ ಅನುದಾನದ ಕೊರತೆ ಇಲ್ಲ. ಅದೇ ರೀತಿ ದನಕರುಗಳ ಮೇವಿನ ಖರೀದಿ ಹಾಗೂ ಮೇವಿನ ಬೀಜದ ಕಿಟ್ ವಿತರಣೆ, ಹಸಿರು ಮೇವು ಉತ್ಪಾದನೆ, ಖರೀದಿಗೂ ಸಾಕಷ್ಟು ಹಣ ಒದಗಿಸಲಾಗಿದೆ. ಹೆಚ್ಚುವರಿ ದುಡ್ಡಿನ ಅಗತ್ಯವಿದ್ದಲ್ಲಿ ಅದನ್ನು ಪೂರೈಸಲಾಗುವುದು. ಆದರೆ ಸಕಾಲದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತಾಗಬೇಕು ಎಂದು ಸಚಿವರು ಹೇಳಿದರು.

ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕ್ ಮೂಲಕ ಪೂರೈಸಿ 91 ದಿನಗಳೊಳಗಾಗಿ ಶಾಶ್ವತ  ಪರಿಹಾರವನ್ನು ಕಂಡುಕೊಳ್ಳಬೇಕು. ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 90 ಲಕ್ಷ ರೂ.ಗಳಷ್ಟು ಅನುದಾನವನ್ನು ಬರ ಪರಿಹಾರ ಕಾಮಗಾರಿ ಮತ್ತು ಕುಡಿಯುವ ನೀರಿನ ಯೋಜನೆಗೆ ಒದಗಿಸಲಾಗಿದೆ. 14ನೇ ಹಣಕಾಸು ಯೊಜನೆಯಡಿ ಜಿಲ್ಲೆಗೆ 58 ಕೋಟಿ ರೂ. ಬಿಡುಗಡೆ ಮಾಡಿದೆ, ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆಗಳಿಗಾಗಿ ಐ.ಎಂ.ಎಸ್. ಯೊಜನೆಯಲ್ಲಿ 76 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸದ್ಭಳಕೆ ಮಾಡಿಕೊಂಡು ಎಲ್ಲಾ ಗ್ರಾಮಗಳಿಗೂ ನೀರನ್ನು ಸರಿಯಾಗಿ ಪೂರೈಸಬೇಕು. ಈಗಾಗಲೇ ಕೊರೆದಿರುವ ಬೋರ್‍ವೆಲ್‍ಗಳಲ್ಲಿ ನೀರಿನ ಲಭ್ಯತೆಗನುಗುಣವಾಗಿ ಪೈಪ್ ಲೈನ್ ಅಳವಡಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಇಚ್ಚಾಶಕ್ತಿಯಿಂದ ಕೆಲಸ ಮಾಡಿದಾಗ ಬರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬಹುದಾಗಿದೆ ಎಂದು ಸಚಿವ ಎ.ಮಂಜು ಅಭಿಪ್ರಾಯಪಟ್ಟರು.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟವನ್ನು ಅಂದಾಜಿಸಿ ರೈತರ ದಾಖಲೆಗಳನ್ನು ಸಂಗ್ರಹಿಸಿ ಗಣಕೀಕೃತಗೊಳಿಸಿ ಹಿಂಗಾರು ಬೆಳೆ ವಿಮೆ ಕಂತು ಪಾವತಿಗೆ ಇನ್ನೂ 4-5 ದಿನ ಬಾಕಿ ಇದ್ದು ರೈತರಿಗೆ ಅಗತ್ಯವಿರುವ ದೃಡೀಕರಣ ಪತ್ರಗಳನ್ನು ಶೀಘ್ರವೇ ಒದಗಿಸಿ ಸಹಕರಿಸಿ ಎಂದು ಸಚಿವರು ಕಂದಾಯ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ದನಕರುಗಳಿಗೆ ಕೇವಲ ಆರು ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹ ಲಭ್ಯವಿರುವುದರಿಂದ ಈಗಲೇ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ ಕೊಡಗು, ಮೈಸೂರು, ಶಿವಮೊಗ್ಗ ಮತ್ತಿತರ ಜಿಲ್ಲೆಗಳಿಂದ ಒಣ ಹುಲ್ಲನ್ನು ಖರೀದಿಸಿ ಸಂಗ್ರಹಿಸಿಟ್ಟು ಅಗತ್ಯವಿರುವ ಗ್ರಾಮಗಳಿಗೆ ವಿತರಿಸಿ ಜೊತೆಗೆ ರೈತರ ಸಹಕಾರ ಪಡೆದು ಮೇವಿನ ಬೀಜದ ಪೊಟ್ಟಣಗಳನ್ನು ವಿತರಿಸಿ ಹಸಿರು ಮೇವನ್ನು ಬೆಳೆಸಿ ನಿಗಧಿತ ದರ ಪಾವತಿಸಿ ಖರೀದಿ ಮಾಡಿ ಒಟ್ಟಾರೆ ಜನರ ಜೊತೆಗೆ ದನಕರುಗಳ ಹಿತವನ್ನೂ ಕಾಯಿರಿ ಎಂದು ಸಚಿವ ಎ.ಮಂಜು ಪಶುಪಾಲನೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚನ್ನರಾಯಪಟ್ಟಣ ತಾಲ್ಲ್ಲೂಕಿನಲ್ಲಿ ಅಗತ್ಯವಿರುವ ಪ್ರದೇಶಗಳಲ್ಲಿ ಗೋಶಾಲೆಗಳನ್ನು ತೆರೆಯಿರಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿಕೊಂಡು ದನಕರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಇದಕ್ಕಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ ಎಂದು ಹೇಳಿದರು.

ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ದನಕರುಗಳ ಮೇವಿನ ಕೊರತೆ ಬಗ್ಗೆ ವಿವರ ಒದಗಿಸಿದರು. ಹಿಂಗಾರು ಬೆಳೆ ಬೆಳೆದ ರೈತರು ಡಿಸೆಂಬರ್ 30 ರೊಳಗಾಗಿ ವಿಮಾ ಪಾವತಿ ಮಾಡಬೇಕಾಗಿರುವುದರಿಂದ ನಾಡ ಕಚೇರಿಗಳಲ್ಲಿ ಆದಷ್ಟೂ ತ್ವರಿತವಾಗಿ ಅಗತ್ಯವಿರುವ ದೃಢೀಕೃತ ದೃಡೀಕರಣಗಳನ್ನು ನೀಡಬೇಕೆಂದು ಕೋರಿದರು.

ತಾಲ್ಲ್ಲೂಕಿನ ಅನೇಕ ಗ್ರಾಮಗಳಲ್ಲಿ ನೀರಿನ ಕೊರತೆ ಇರುವುದರಿಂದ ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಹೆಚ್ಚಿನ ಅನುದಾನ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಮೇವಿನ ಖರೀದಿಗೆ ಇನ್ನಷ್ಟು ರಚನಾತ್ಮಕ ಪ್ರಯತ್ನಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿಯವರು ಸಹಾ ಚರ್ಚೆಯಲ್ಲಿ ಪಾಲ್ಗೊಂಡರು.

ಜಿಲ್ಲಾಧಿಕಾರಿ ವಿ.ಚೈತ್ರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್ ಕುಮಾರ್ ಅವರು ಮಾತನಾಡಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳು, ಬಿಡುಗಡೆ ಮಾಡಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸೌಮ್ಯ ಚಂದ್ರೇಗೌಡ, ಉಪ ವಿಭಾಗಾಧಿಕಾರಿ ಡಾ: ಹೆಚ್.ಎಲ್.ನಾಗರಾಜ್ ಉಪಸ್ಥಿತರಿದ್ದರು.

ವಾಹನ ಚಾಲಕ ಹುದ್ದೆಗೆ ಅರ್ಜಿ ಆಹ್ವಾನ

ಯಾದಗಿರಿ:ಡಿಸೆಂಬರ್,26(ಕರ್ನಾಟಕ ವಾರ್ತೆ): ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ವಾಹನ ಚಾಲಕ( ಪರಿಶಿಷ್ಟ ಪಂಗಡ) ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 23ರ ಸಾಯಂಕಾಲ 4 ಗಂಟೆಯ ವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ www.yadgir.nic.in ನಿಂದ ಪಡೆಯಬಹುದು ಎಂದು ಅಬಕಾರಿ ಇಲಾಖೆಯ ಡೆಪ್ಯೂಟಿ ಕಮೀಷನರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲ ಮಂದಿರ ಮಕ್ಕಳಿಗೆ ಸಮವಸ್ತ್ರ, ಸಿಹಿ ತಿಂಡಿ ವಿತರಣೆ

ಯಾದಗಿರಿ:ಡಿಸೆಂಬರ್,26(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಯೋಜನೆಯಡಿ ಬರುವ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ 45 ಮಕ್ಕಳಿಗೆ ಯಾದಗಿರಿಯ ಜೈನ್ ಸಮುದಾಯದ ಶ್ರೀ ತುಳಸಿದಾಸ ಹಣಚೆಟ್ಟಿ ಮತ್ತು ರಾಮಕೃಷ್ಣ ಹಣಚೆಟ್ಟಿ ಕುಟುಂಬದವರು ಬೆಲೆಬಾಳುವ ಸಮವಸ್ತ್ರ ಮತ್ತು ಸಿಹಿ ತಿಂಡಿಯನ್ನು ಉಚಿತವಾಗಿ ದಾನಮಾಡಿರುವುದಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಶ್ರೀ ಗೋವಿಂದ್ ರಾಠೋಡ ಅವರು ತಿಳಿಸಿದ್ದಾರೆ.

ಅನಾಥ, ನಿರ್ಗತಿಕ, ತ್ಯಜಿಸಲ್ಪಟ್ಟಿರುವ, ಏಕ ಪೋಷಕ, ಬಡತನ ರೇಖೆಗಿಂತ ಕೆಳಗಿರುವ ಮತ್ತು ಬಾಲ್ಯ ವಿವಾಹಕ್ಕೆ ಒಳಾಗದ, ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ಸಂಸ್ಥೆಯಲ್ಲಿ ಇರುವ ಮಕ್ಕಳನ್ನು ಗುರುತಿಸಿ ದಾನಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸರಕಾರಿ ಬಾಲಕಿಯರ ಬಾಲ ಮಂದಿರದ ಪ್ರಭಾರಿ ಅಧೀಕ್ಷಕರಾದ ಶ್ರೀಮತಿ ನಾಗಮ್ಮ ಹಿರೇಮಠ ಅವರು ಮಾತನಾಡಿ, ಇದುವರೆಗೆ 10 ಕುಟುಂಬದವರು ಮಕ್ಕಳಿಗೆ ಸಮವಸ್ತ್ರವನ್ನು ನೀಡಿರುತ್ತಾರೆ. ಇಂತಹ ಮಕ್ಕಳನ್ನು ಗುರುತಿಸಿ ಇನ್ನೂ ದಾನಿಗಳು ದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದ್ದಾರೆ.
ದಾನ ಮಾಡುವವರು ಸರಕಾರಿ ಬಾಲಕಿಯರ ಬಾಲ ಮಂದಿರ, ಮಾತೃಛಾಯಾ ನಿಲಯ, ಮಹಾವಿದ್ಯಾ ಮಂದಿರ ಶಾಲೆ, ಬಸವೇಶ್ವರ ನಗರ ಯಾದಗಿರಿ, ದೂ.ಸಂ: 08473-253803, 08473-250047 ಗೆ ಸಂಪರ್ಕಿಸಬೇಕೆಂದು ಕೋರಿದ್ದಾರೆ.

ಅರ್ಜಿ ಆಹ್ವಾನ

ಗದಗ(ಕರ್ನಾಟಕ ವಾರ್ತೆ) ಡಿಸೆಂಬರ್ 26: ಗದಗ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 46 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದ್ವೀತಿಯ ಪಿ.ಯು.ಸಿ. ಅಥವಾ ಸಿ.ಬಿ.ಎಸ್.ಸಿ ಅಥವಾ ಐ.ಸಿ.ಎಸ್.ಇ ಮಂಡಳಿಗಳು ಕರ್ನಾಟಕದಲ್ಲಿ ನಡೆಸುವ 12ನೇ ತರಗತಿ ಪರೀಕ್ಷೇಯಲ್ಲಿ ತೇರ್ಗಡೆ ಹೊಂದಿದ ಅರ್ಹ ಅಭ್ಯರ್ಥಿಗಳು ದಿನಾಂಕ:27-12-2016 ರಿಂದ 25-01-2017ರ ವರೆಗೆ ವೆಬಸೈಟ http://gadag-va.kar.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನಾಳೆ ದಿ. 27 ರಂದು ದಿಶಾ ಸಮಿತಿ ಸಭೆ

ಗದಗ(ಕರ್ನಾಟಕ ವಾರ್ತೆ) ಡಿಸೆಂಬರ್ 26: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯನ್ನು ಸಂಸದ ಶಿವಕುಮಾರ ಉದಾಸಿಯವರ ಅಧ್ಯಕ್ಷತೆಯಲ್ಲಿ ದಿ:27-12-2016 ರಂದು ಮಧ್ಯಾಹ್ನ 3 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.

ನಾಳೆ ದಿ. 27 ರಂದು ಜಿ.ಪಂ. ಸಾಮಾನ್ಯ ಸಭೆ

ಗದಗ(ಕರ್ನಾಟಕ ವಾರ್ತೆ) ಡಿಸೆಂಬರ್ 26: ಗದಗ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಜಿ.ಪಂ. ಸಭಾಂಗಣದಲ್ಲಿ ಡಿಸೆಂಬರ್ 27 ರಂದು ಬೆ. 11 ಗಂಟೆಗೆ ಜಿ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಣ್ಣು ಮಗುವಿನ ರಕ್ಷಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ

ಚಿಕ್ಕಮಗಳೂರು,ಡಿ.26:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕೀಲರ ಸಂಘ, ವಾರ್ತಾ ಇಲಾಖೆ ಚಿಕ್ಕಮಗಳೂರು ಹಾಗೂ ಅಂಬಳೆ ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ “ಹೆಣ್ಣು ಮಗುವಿನ ರಕ್ಷಣೆ ಕುರಿತು ಕಾನೂನು ಅರಿವು”ಕಾರ್ಯಕ್ರಮ’’ವನ್ನು ಡಿಸೆಂಬರ್ 28 ರಂದು ಬೆಳಗ್ಗೆ 10 ಗಂಟೆಗೆ ಅಂಬಳೆಯ ಸಮುದಾಯ ಭವನದಲ್ಲ್ಲಿ ಹಮ್ಮಿಕೊಳ್ಳಲಾಗಿದೆ.

ಗೌರವಾನ್ವಿತ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರ.ದ.ನ್ಯಾ.ದಂ.ಗಳಾದ ಪದ್ಮಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಂಬಳೆ ಗ್ರಾ.ಪಂ. ಅಧ್ಯಕ್ಷ ಓಂಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಹೆಚ್.ಇ ಆಜಾದ್ ಅಲಿಖಾನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್.ಎಲ್ ಮಂಜಯ್ಯ, ಅಂಬಳೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಾಂತಿ ಮತ್ತಿತರರು ಭಾಗವಹಿಸಲಿದ್ದಾರೆ.

ವಕೀಲರಾದ ಡಿ.ಬಿ ಸುಜೇಂದ್ರ “ಹೆಣ್ಣು ಮಗುವಿನ ರಕ್ಷಣೆಯಲ್ಲಿ ಕಾನೂನು ಮತ್ತು ಸರ್ಕಾರದ ಯೋಜನೆಗಳು ಹಾಗೂ ಬಾಲ್ಯ ವಿವಾಹ ನಿಷೇಧ ನಿಯಮ-2014 ”, ಪ್ಯಾನಲ್ ವಕೀಲರಾದ ಕೆ.ಎಸ್ ಅನಂತೇಶ್ ರವರು “ ಭಾರತದ ನಾಗರೀಕರ ಮೂಲಭೂತ ಕರ್ತವ್ಯಗಳು ಹಾಗೂ ಪೊಲೀಸ್ ದೂರು ಪ್ರಾಧಿಕಾರದ ಅಸ್ಥಿತ್ವ ಮತ್ತು ಅದರ ಕಾರ್ಯಗಳು” ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಯುವ ಪರಿವರ್ತಕರ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ, ಡಿ. 26 (ಕರ್ನಾಟಕ ವಾರ್ತೆ):- ಬೆಂಗಳೂರಿನ ನಿಮ್ಹಾನ್ಸ್‍ನ ಎಪಿಡೀಮಿಯಾಲಜಿ ವಿಭಾಗದ ಜನ ಆರೋಗ್ಯ ಸಂಸ್ಥೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ “ಯುವ ಜನ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಟಾನ ಯೋಜನೆ” ಯಡಿ ಯುವ ಪರಿವರ್ತಕರ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತಾ ಮಾನದಂಡಗಳು: ಪ್ರತಿ ಜಿಲ್ಲೆಗೆ ಯುವ ಪರಿವರ್ತಕರ ಸಂಖ್ಯೆ 05, ಯಾವುದೇ ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 25 ರಿಂದ ಗರಿಷ್ಠ 35 ವರ್ಷಗಳ ವಯೋಮಿತಿ ಹೊಂದಿರಬೇಕು. ಸ್ಥಳೀಯ ಭಾಷೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ, ಹುಮ್ಮಸ್ಸು ಹಾಗೂ ಉತ್ತಮ ಅಂತವ್ರ್ಯಕ್ತಿಯ ಸಂವಹನ ಕೌಶಲ್ಯದ ಜತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು. ಸಮುದಾಯದಲ್ಲಿ ಯುವ ಜನರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿ ಪ್ರಯಾಣಿಸುವುದು ಅವಶ್ಯವಿರುತ್ತದೆ. ಸಮುದಾಯದಲ್ಲಿ ಕೆಲಸ ಮಾಡಿರುವವರಿಗೆ ಆದ್ಯತೆ ನೀಡಲಾಗುವುದು. ಅದೇ ಜಿಲ್ಲೆಯಲ್ಲಿ ವಾಸಿಸುತ್ತಿರುವ ಖಾಯಂ ನಿವಾಸಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಹತಾ ಮಾನದಂಡಗಳನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದಲ್ಲಿ ಒಂದು ಬಿಳಿ ಹಾಳೆಯಲ್ಲಿ ತಮ್ಮ ಪೂರ್ಣ ವಿಳಾಸ, ವಯಸ್ಸು, ಅರ್ಜಿ ಸಲ್ಲಿಸಿದ ಜಿಲ್ಲೆ, ಸದಸ್ಯದಲ್ಲಿ ವಾಸಿಸುತ್ತಿರುವ ವಿಳಾಸ ಹಾಗೂ ವಯಕ್ತಿಕ ಮಾಹಿತಿಯ ಪ್ರಸ್ತಾವನೆಯನ್ನು ಖುದ್ದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದೇರ್ಶಕರ ಕಚೇರಿಯಗೆ ಡಿ.30ರ ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು. ಕಿರು ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂರವಾಣಿ ಸಂಖ್ಯೆ 080-27274655 ಮೊಬೈಲ್ ಸಂಖ್ಯೆ 9900989936ಗೆ ಸಂಪರ್ಕಿಸಬಹುದು ಎಂದು ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ಡಾರ್ಮೇಂಟರಿ ವ್ಯವಸ್ಥೆ

ರಾಮನಗರ, ಡಿ. 26 (ಕರ್ನಾಟಕ ವಾರ್ತೆ):- ಸರಕಾರಿ ಆಸ್ಪತ್ರೆಗಳಿಗೆ ರೋಗಿಗಳೊಟ್ಟಿಗೆ ಬರುವ ಕುಟುಂಬ ಸದಸ್ಯರು ಉಳಿದುಕೊಳ್ಳಲು ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಸುಸಜ್ಜಿತ ಡಾರ್ಮೇಂಟರಿ (ನಿಲಯಗಳು)ಗಳನ್ನು ಇಸ್ರೋ ಸಹಕಾರದೊಂದಿಗೆ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಆರ್. ಮಮತಾ ಹೇಳಿದರು.

ಸೋಮವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ಉಚಿತ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಆಸ್ಪತ್ರೆಗಳಿಗೆ ರೋಗಿಗಳೊಂದಿಗೆ ಬರುವ ಕುಟುಂಬ ಸದಸ್ಯರು ಆಸ್ಪತ್ರೆಗಳಲ್ಲಿ ಉಳಿದುಕೊಳ್ಳಲು ಸೂಕ್ತ ಸ್ಥಳಾವಕಾಶವಿಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರೋಗಿಗಳ ಸಂಬಂಧಿಕರುಗಳ ವಾಸ್ತವ್ಯಕ್ಕಾಗಿ ಡಾರ್ಮೇಂಟರಿ ನಿರ್ಮಿಸಲು ಇಸ್ರೋದ ಅಂಗ ಸಂಸ್ಥೆಯಾದ ಯಾಂತ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್‍ನ ಸಿಎಸ್‍ಆರ್ ನಿಧಿ ಹಾಗೂ ಜಿಲ್ಲಾಡಳಿತದಿಂದ ನಿರ್ಮಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಆರೈಕೆಗೆಂದು ಅವರ ಜತೆಯಲ್ಲಿ ಉಳಿಯುವವರಿಗೆ ಈ ಡಾರ್ಮೇಟರಿಗಳು ಉಪಯೋಗಕ್ಕೆ ಬರಲಿವೆ. ಯಾವುದೇ ಶುಲ್ಕಗಳಿಲ್ಲದೆ ವಿಶ್ರಾಂತಿ, ಶೌಚಾಗೃಹ, ಅಡುಗೆ ಮನೆ ಸೌಲಭ್ಯ ಕಲ್ಪಿಸುವುದು ಈ ಡಾರ್ಮೇಟರಿಗಳ ಉದ್ದೇಶವಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ ಕುಟುಂಬಗಳು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯದಿಂದ ವಂಚಿತವಾಗಬಾರದು. ಮುಂದಿನ ದಿನಗಳಲ್ಲಿ ಎಸ್ಸಿ/ಎಸ್ಟಿ ವರ್ಗಗಳ ಜನರಿಗಾಗಿ ಸೂಪರ್ ಸ್ಪೆಷಾಲಿಟಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಮಮತಾ ತಿಳಿಸಿದರು.

ಎಸ್ಟಿ/ಎಸ್ಟಿ ವರ್ಗಗಳ ಗ್ರಾಮೀಣ ಬಡ ಜನರಿಗೆ ಇಂದು ಆಯೋಜಿಸಿರುವ ವಿಶೇಷ ಆರೋಗ್ಯ ಶಿಬಿರದ ಅವಶ್ಯಕತೆ ಇತ್ತು. ಇದಕ್ಕಾಗಿ ಸಾಕಷ್ಟು ಪ್ರಚಾರ ನೀಡಲಾಗಿದೆ. ಯಾರೊಬ್ಬರು ಯಾವುದೇ ಕಾರಣಕ್ಕೂ ಚಿಕಿತ್ಸೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗದೊಂದಿಗೆ ಉನ್ನತ ಮಟ್ಟದ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್, ಉಪಾಧ್ಯಕ್ಷ ಸಮೀನಾ ತಾಜ್, ತಾಲೂಕು ಪಂಚಾಯತ್ ಉಪಾಧ್ಯಕ್ಷಕ್ಷೆ ಲಕ್ಷಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ಸದಸ್ಯೆ ವರಲಕ್ಷ್ಮೀ ಪ್ರಕಾಶ್, ಡಿಎಚ್‍ಒ ಡಾ. ಶಿವರಾಜ್ ಹೆಡೆ, ಡಿಎಸ್ ಡಾ.ಮುನಿರಾಜ್, ಟಿಎಚ್‍ಒ ಶಶಿಕಲಾ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಅನಧಿಕೃತ ಕೇಬಲ್ ಆಪರೇಟರ್‍ಗಳ ವಿರುದ್ದ ಕಠಿಣ ಕ್ರಮ

ಬಾಗಲಕೋಟೆ: ಡಿಸೆಂಬರ, 26 (ಕರ್ನಾಟಕ ವಾರ್ತೆ) : ಗ್ರಾಮೀಣ ಪ್ರದೇಶದಲ್ಲಿ ಸೆಟ್‍ಟಾಪ್ ಬಾಕ್ಸ ಅಳವಡಿಕೆಗೆ ಡಿಸೆಂಬರ 31 ಕೊನೆಯ ದಿನವಾಗಿದ್ದು, ಎಲ್ಲ ಕೇಬಲ್ ಆಪರೇಟರ್‍ಗಳು ಕಡ್ಡಾಯವಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಎಸ್.ಎನ್.ರುದ್ರೇಶ ತಿಳಿಸಿದರು.

ಇಂದು ಜಿಲ್ಲಾಡಳಿತದ ಆಡಿಟೋರಿಯಂನಲ್ಲಿ ಜಿಲ್ಲೆಯ ಎಲ್ಲ ಕೇಬಲ್ ಆಪರೇಟರ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಸುಪ್ರೀಂಕೋರ್ಟ ಆದೇಶದ ಹಿನ್ನಲೆಯಲ್ಲಿ ಸೆಟ್‍ಟಾಪ್ ಬಾಕ್ಸ್ ಅಳವಡಿಕೆಗೆ ಡಿಸೆಂಬರ 31 ಕೊನೆಯದಿನವಾಗಿದ್ದು, ಯಾರು ಈ ಆದೇಶವನ್ನು ಉಲ್ಲಂಘಿಸದೇ ಕಡ್ಡಾಯವಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸತಕ್ಕದ್ದು. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದೆಂದರು. ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಆಪರೇಟರ್‍ಗಳಿದ್ದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ದಾರ ಹಾಗೂ ಪೊಲೀಸ್ ಇಲಾಖೆಗೆ ತಿಳಿಸಲಾಗುವುದು ಎಂದರು.

ಕೇಬಲ್ ಆಪರೇಟರ್‍ಗಳು ಕಡ್ಡಾಯವಾಗಿ ಅಧಿಕೃತವಾಗಿ ಅಂಚೆ ಇಲಾಖೆಯಲ್ಲಿ ನೋಂದಣಿ ಮಾಡಿಸತಕ್ಕದ್ದು. ಇಲ್ಲವಾದಲ್ಲಿ ಪ್ರಕರಣ ದಾಖಲಿಸಲಾಗುವುದು. ಬಾಗಲಕೋಟೆ ಉಪವಿಭಾಗದಲ್ಲಿ 52 ಹಾಗೂ ಜಮಖಂಡಿ ಉಪವಿಭಾಗದಲ್ಲಿ 69 ಕೇಬಲ್‍ಗಳು ಅಧಿಕೃತವಾಗಿ ನೋಂದಣಿಯಾಗಿವೆ. ಉಳಿದವರು ನೋಂದಾಯಿಸಿಕೊಳ್ಳತಕ್ಕದ್ದು. ಎಲ್ಲೆಡೆ ಡಿಜಿಟಲ್ ಆಗಬೇಕು. ಆನ್‍ಲೈನ್ ಎಂಟ್ರಿ ಆಗಬೇಕು. ಕೇಬಲ್ ಆಪರೇಟರ್‍ಗಳು ಸೆಟ್‍ಟಾಪ್ ಬಾಕ್ಸ್ ಅಳವಡಿಸಿದ ಪ್ರತಿಯನ್ನು ತಪ್ಪದೇ ಪ್ರತಿ ಶನಿವಾರ ಜಿಲ್ಲಾಡಳಿತಕ್ಕೆ ತಲುಪಿಸಬೇಕೆಂದರು. ಪೋರ್ಟಲ್ ವಿಳಾಸ ಅಥವಾ ಮಾಹಿತಿಗಳನ್ನು ಕಳಿಸತಕ್ಕದ್ದು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಎನ್‍ಐಸಿ ಅಧಿಕಾರಿ ಗಿರಿಯಾಚಾರ ಹಾಗೂ ಇತರರು ಉಪಸ್ಥಿತರಿದ್ದರು.

ಬರ ಪರಿಹಾರ ಕಾಮಗಾರಿಗಳಲ್ಲಿ ರಾಜಕೀಯ ಸಲ್ಲದು : ಜಿಲ್ಲಾ ಉಸ್ತುವಾರಿ ಸಚವರ ಎಚ್ಚರಿಕೆ

ಬೆಳಗಾವಿ, ಡಿಸೆಂಬರ್ 26 (ಕರ್ನಾಟಕ ವಾರ್ತೆ): ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದ್ದು, ಬರ ಪರಿಹಾರ ಕಾಮಗಾರಿಗಳ ಅನುಷ್ಠಾನದಲ್ಲಿ ಪಿ.ಡಿ.ಓ ಸೇರಿದಂತೆ ಯಾವುದೇ ಅಧಿಕಾರಿ ರಾಜಕೀಯ ಮಾಡಿದರೆ ತಕ್ಷಣವೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರು ಹೇಳಿದರು.

ಅವರು ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೆಳಗಾವಿ ತಾಲೂಕಿನ ಬರಗಾಲ ಪರಿಸ್ಥಿತಿ ಬಗೆಗೆ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಬರದ ಸಮರ್ಪಕ ನಿರ್ವಹಣೆಗಾಗಿ ಸರ್ಕಾರದಿಂದ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು, ಅವು ಜನರಿಗೆ ತಲುಪಿ ಬರದ ಪರಿಸ್ಥಿತಿಯಲ್ಲಿ ಕುಡಿಯಲ್ಲು ನೀರು, ಧನಗಳಿಗೆ ಮೇವು ಮತ್ತು ಬೆಳೆವಿಮೆ ಕುರಿತು ಮುಂಜಾಗೃತಾ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು. ಯಾವುದೇ ರೀತಿ ರಾಜಕೀಯ ಮಾಡಿ ಜನರಿಗೆ ತೊಂದರೆ ಉಂಟಾದಲ್ಲಿ ಸಹಿಸುವುದಿಲ್ಲ. ಅಂತವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಸಭೆಯಲ್ಲಿ ಕೃಷಿ, ಪಶುವೈದ್ಯಕೀಯ, ಹೆಸ್ಕಾಂ ಹಾಗೂ ಕುಡಿಯುವ ನೀರು ಸರಬರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದುರು. ಬರ ಎದುರಿಸಲು ಕೈಗೊಂಡ ಕ್ರಮಗಳನ್ನುಕುರಿತು ಸಚಿವರು ವಿವರಿಸಿದರು.

ಅಧಿಕಾರಿಗಳು ಸ್ಥಳೀಯವಾಗಿ ಯಾವುದೇ ಅಭಿವೃದ್ದಿ ಕಾಮಗಾರಿಯನ್ನು ಮಾಡುವಾಗ ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ವಿಸ್ವಾಸ ತೆಗೆದುಕೊಳ್ಳಬೇಕು. ಈ ಕುರಿತು ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಪಿ.ಡಿ.ಓ ಗಳಿಗೆ ಮಾಹಿತಿ ಕಳುಹಿಸುವಂತೆ ತಿಳಿಸಿದರು.

ಬೆಳಗಾವಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಸಚಿವರು, ಜನಪ್ರತಿನಿಧಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೆ, ರಾಜಕೀಯ ಮಾಡಿದರು ಸೂಕ್ತ ಕ್ರಮ ಜರಿಗಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ಬರ ಪರಿಹಾರ ಕಾಮಗಾರಿಗಳ ಕುರಿತು ನಿರಂತರ ಪರಿಶೀಲನಾ ಸಭೆಗಳನ್ನು ನಡಸಿ ಪ್ರಗತಿ ಪರಿಶೀಲಿಸಲಾಗುವುದು. ಅಧಿಕಾರಿಗಳು ಸ್ಥಳೀಯವಾಗಿ ಜನರಿಗೆ ಲಭ್ಯವಿದ್ದು, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ರಾಜಶ್ರೀ ಜೈನಾಪೂರ, ಜಿಲ್ಲಾ ಪಂಚಾಯತ ಅಧ್ಯಕ್ಷ ಶ್ರೀಮತಿ ಆಶಾ ಐಹೊಳೆ, ಉಪಾಧ್ಯಕ್ಷರಾದ ಶ್ರೀ ಅರುಣ ಕಟಾಂಬಳೆ, ತಾಲೂಕು ಪಂಚಾಯತ ಅಧ್ಯಕ್ಷ ಶ್ರೀ ಶಂಕರಗೌಡ ಪಾಟೀಲ, ಉಪಾಧ್ಯಕ್ಷ ಶ್ರೀ ಮಾರುತಿ ಸನದಿ, ಕೃಷಿ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಶ್ರೀ ಎಸ್.ಬಿ.ಮುಳ್ಳಳಿ ಉಪಸ್ಥಿತರಿದ್ದರು.

ವಿಶ್ವಮಾನವ ದಿನಾಚರಣೆ: ಡಿ.29ರಂದು

ಬೆಳಗಾವಿ, ಡಿಸೆಂಬರ್ 26 (ಕರ್ನಾಟಕ ವಾರ್ತೆ): ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಿಸೆಂಬರ್ 29ರಂದು ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ವಿಶ್ವಮಾನವ ದಿನಾಚರಣೆಯ ಸಭಾ ಕಾರ್ಯಕ್ರಮ ನಡೆಯಲಿದೆ. ಹಿಂದೂ, ಮುಸಲ್ಮಾನ, ಕ್ರಿಶ್ಚಿಯನ್, ಜೈನ ಸೇರಿದಂತೆ ಸರ್ವಧರ್ಮಗಳ ಗುರುಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ಕೂಡ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ತಿಳಿಸಿದ್ದಾರೆ.

ಅದೇ ದಿನ ಸಂಜೆ 7 ಗಂಟೆಗೆ ಕಿಲ್ಲಾ ಕೆರೆ ಸಮೀಪದ ಬುಡಾ ಕಚೇರಿ ಹತ್ತಿರದ ಬಯಲು ರಂಗಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಗೀತೆಗಳ ಗಾಯನ ಕಾರ್ಯಕ್ರಮವನ್ನು ವಿವಿಧ ಕಲಾವಿದರು ನಡೆಸಿಕೊಡಲಿದ್ದಾರೆ.

ಸಾರ್ವಜನಿಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.