Government of Karnataka

Department of Information

Saturday 21/01/2017

ಜಿಲ್ಲಾ ವಾರ್ತೆ 28-12-2016

Date : ಬುಧವಾರ, ದಶಂಬರ 28th, 2016

ಜಿಲ್ಲಾ ಸುದ್ದಿಗಳು:

ಕಾರವಾರ ಕಡಲತೀರದಲ್ಲಿ ಡಾಲ್ಫಿನ್ ಬೋಟಿಂಗ್ ರೈಡಿಂಗ್ ಆರಂಭ

ಕಾರವಾರ ಡಿಸೆಂಬರ್ 20: ಕಾರವಾರದ ಕೂರ್ಮಗಢ ದ್ವೀಪದ ಸುತ್ತಲೂ ಅಪಾರ ಸಂಖ್ಯೆಯಲ್ಲಿರುವ ಅಪರೂಪದ ಡಾಲ್ಫಿನ್‍ಗಳನ್ನು ಅತ್ಯಂತ ಸಮೀಪದಿಂದ ನೋಡುವ ಅವಕಾಶ ಇದೀಗ ಪ್ರವಾಸಿಗರಿಗೆ ಲಭಿಸಿದೆ.

ಕಾರವಾರ ಕಡಲತೀರದಿಂದ ಡಾಲ್ಫಿನ್ ರೈಡ್ ಬೋಟಿಂಗ್ ಸೌಲಭ್ಯವನ್ನು ಬುಧವಾರ ಆರಂಭಿಸಲಾಗಿದ್ದು, ಆರಂಭಿಕ ಹಂತದಲ್ಲಿ ಪ್ರತಿದಿನ ಬೆಳಿಗ್ಗೆ 7ಗಂಟೆಗೆ ಬೋಟಿಂಗ್ ಸಮಯ ನಿಗಧಿಪಡಿಸಲಾಗಿದೆ.

ಗೋವಾ ಕಡಲ ತೀರದಲ್ಲಿ ಡಾಲ್ಫಿನ್ ವೀಕ್ಷಣೆ ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ. ಗೋವಾದ ಕಣಕೊಣ ಕಡಲತೀರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಡಾಲ್ಫಿನ್‍ಗಳು ಕಾರವಾರ ಕೂರ್ಮಗಢ ಸುತ್ತಮುತ್ತ ಕಾಣಸಿಗುತ್ತವೆ. ಡಾಲ್ಫಿನ್ ವೀಕ್ಷಣೆ ನಮ್ಮ ರಾಜ್ಯದಲ್ಲಿ ಹೆಚ್ಚು ಪ್ರಚಲಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಕಾರವಾರದಲ್ಲಿ ಡಾಲ್ಫಿನ್ ವೀಕ್ಷಣೆಗೆ ಬೋಟಿಂಗ್ ಆರಂಭಿಸಲಾಗಿದೆ’ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ತಿಳಿಸಿದ್ದಾರೆ.

ಸುಮಾರು ಒಂದು ತಾಸುಗಳ ಕಾಲದ ಬೋಟ್ ಯಾನ ಇದಾಗಿದೆ. ಕೂರ್ಮಗಢ ದ್ವೀಪ, ಕಾಳಿ ಸೇತುವೆಯ ಮನಮೋಹಕ ದೃಶ್ಯ, ದೂರದಿಂದ ಕಾಣುವ ಲೈಟ್‍ಹೌಸ್, ಕಾರವಾರ ನಗರವನ್ನು ಆವರಿಸಿರುವ ಗುಡ್ಡ ಬೆಟ್ಟಗಳು, ವಿಶಾಲ ನೀಲ ಸಮುದ್ರ, ಕೆಲವೆಡೆ ಅಪ್ಪಳಿಸುವ ಅಲೆಗಳು, ನೀರಿನ ಮೇಲೆ ಫಳಫಳನೇ ಹೊಳೆಯುವ ಸೂರ್ಯ ಕಿರಣಗಳು, ನೀರಿನಲ್ಲಿ ಆಗಿಂದಾಗ್ಗೆ ಹಾರುವ ಸಣ್ಣಪುಟ್ಟ ಮೀನುಗಳು, ಮೀನುಗಳನ್ನು ಬೇಟೆಯಾಡುವ ಕಡಲಹಕ್ಕಿಗಳು ಬೋಟ್‍ಯಾನಿಗಳನ್ನು ಮುದಗೊಳಿಸುತ್ತವೆ.

ಎಲ್ಲಕ್ಕಿಂತ ಹೆಚ್ಚಾಗಿ ಕ್ಷಣಾರ್ಧದಲ್ಲಿ ನೀರಿನಿಂದ ಮೇಲೆದ್ದು ಹಾರಿ ಕಣ್ಣುಮುಚ್ಚಾಲೆಯಾಡುವ ಮುದ್ದುಮೊಗದ ಡಾಲ್ಫಿನ್‍ಗಳು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತವೆ. ಈ ಭಾಗದಲ್ಲಿ ಹಲವಾರು ಡಾಲ್ಫಿನ್‍ಗಳಿದ್ದು ಕನಿಷ್ಟ ಐದಾರು ಡಾಲ್ಫಿನ್‍ಗಳು ಪ್ರವಾಸಿಗರ ನೋಟಕ್ಕೆ ಲಭಿಸುತ್ತವೆ.

ಪ್ರಸ್ತುತ ಬೆಳಿಗ್ಗೆ 7ಗಂಟೆಗೆ ಮಾತ್ರ ಡಾಲ್ಫಿನ್ ವೀಕ್ಷಣೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಬೇಡಿಕೆಯನ್ನು ಗಮನಿಸಿ ಬೋಟಿಂಗ್ ಹೆಚ್ಚಳ ಮಾಡಲಾಗುವುದು. ಪ್ರವಾಸಿಗರಿಗಾಗಿ ಈಗಾಗಲೇ ಕಡಲತೀರದಲ್ಲಿ ವಿವಿಧ ಜಲಸಾಹಸ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಕಾರವಾರ ಕಡಲತಡಿಯ ಸುತ್ತಮುತ್ತಲಿನ ದ್ವೀಪಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ವೀಕ್ಷಣೆಗೆ ಸಹ ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗುವುದು’ ಎಂದು ಜಲಸಾಹಸ ಕ್ರೀಡೆಗಳನ್ನು ಆಯೋಜಿಸುತ್ತಿರುವ ಗಣಪತಿ ಉಳ್ವೇಕರ್ ಹೇಳಿದ್ದಾರೆ.

ಪ್ರವಾಸಿಗರನ್ನು ಆಕರ್ಷಿಸಲು ಹಲವಾರು ಜಲಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಠಾಗೋರ್ ಕಡಲತೀರದಲ್ಲಿ ವಿವಿಧ ರೀತಿಯ ಬೋಟಿಂಗ್ ಚಟುವಟಿಕೆ ಆರಂಭಿಸಲಾಗಿದೆ. ವ್ಯವಸ್ಥಿತವಾದ ಫುಡ್‍ಕೋರ್ಟ್ ನಿರ್ಮಿಸಲಾಗಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದೆ. ಕೋಡಿಭಾಗ್ ಕಾಳಿ ತೀರದಲ್ಲಿ ಸಹ ಪ್ರವಾಸಿಗರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲು ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದೊಂದು ಪ್ರಮುಖ ಆಕರ್ಷಣೆ ಕೇಂದ್ರವಾಗಲಿದೆ’ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಎಂ.ಎಲ್.ದೊಡ್ಮನಿ ಅವರು ಡಾಲ್ಫಿನ್ ರೈಡ್ ಬೋಟಿಂಗ್‍ಗೆ ಚಾಲನೆ ನೀಡಿ ಶುಭ ಹಾರೈಸಿದರು.

ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣ: ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚನೆ

ಯಾದಗಿರಿ: ಡಿಸೆಂಬರ್,28 (ಕರ್ನಾಟಕ ವಾರ್ತೆ): ಜಿಲ್ಲೆಯ ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣಗಳ ಕುರಿತು ತನಿಖೆ ನಡೆಸಲು ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚಿಸಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿದ್ದು, 6 ಜನ ಸದಸ್ಯರಿರುತ್ತಾರೆ.

ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಸಂಜೀವರಾವ ಕುಲಕರ್ಣಿ, ವಿಜಯ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಶ್ರೀ ಮಲ್ಲಪ್ಪ ಸಂಕೀನ್, ಶರಣಾರ್ಥಿ ಕನ್ನಡಿಗರೆ ಪತ್ರಿಕೆಯ ಸಂಪಾದಕ ಶ್ರೀ ಶರಣು ಗದ್ದುಗೆ, ಪತ್ರಕರ್ತರಲ್ಲದ ಸಾರ್ವಜನಿಕ ಗಣ್ಯ ವ್ಯಕ್ತಿಯಾದ ಶ್ರೀ ಶರಣು ನಾಟೇಕರ್ ಅವರು ಸದಸ್ಯರಾಗಿರುತ್ತಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದೇಶ್ವರಪ್ಪ ಜಿ.ಬಿ. ಅವರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ.

ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣಗಳ ಕುರಿತಂತೆ ದೂರುಗಳಿದ್ದಲ್ಲಿ, ತಮಗೆ ಸಲ್ಲಿಸುವಂತೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಆದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮ ವಾಸ್ತವ್ಯದಲ್ಲಿ ತಂಗುವ ಪತ್ರಕರ್ತರು ವಿವರ ನೀಡಿ

ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ ಇವರು ಡಿಸೆಂಬರ್ 31 ರಂದು ರಾತ್ರಿ ಕುಂದಾಪುರ ತಾಲೂಕು ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರೂರು ಕೊರಗರ ಕಾಲನಿ ಯಲ್ಲಿ ವಾಸ್ತವ್ಯ ಮಾಡಲಿದ್ದು, ಅಂದು ಸಚಿವರ ಕಾರ್ಯಕ್ರಮದಲ್ಲಿ ರಾತ್ರಿ ತಂಗಲು ಇಚ್ಚಿಸುವ ಪತ್ರಕರ್ತರಿಗೆ, ಸೂಕ್ತ ವಾಸ್ತವ್ಯ ಒದಗಿಸಲು ಕ್ರಮ ಕೈಗೊಳ್ಳಬೇಕಿದ್ದು , ತಂಗಲು ಇಚ್ಚಿಸುವ ಪತ್ರಕರ್ತರು ಡಿಸೆಂಬರ್ 29 ರ ಒಳಗೆ ತಮ್ಮ ವಿವರಗಳನ್ನು ನೀಡುವಂತೆ ಕೋರಿದೆ.

ಬೆಳೆ ವಿಮೆ ನೊಂದಣಿಗೆ ಬರುವ ರೈತರ ನೆರವಿಗಾಗಿ ಬ್ಯಾಂಕ್‍ಗಳಲ್ಲಿ ಸಿಬ್ಬಂದಿ ನಿಯೋಜನೆ- ಡಿ.ಸಿ. ಕನಗವಲ್ಲಿ

ಕೊಪ್ಪಳ ಡಿ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಯೋಜನೆಗಾಗಿ ಎಲ್ಲ ರೈತರನ್ನು ನೋಂದಾಯಿಸಲು ಆಂದೋಲನವನ್ನು ಪ್ರಾರಂಭಿಸಲಾಗಿದ್ದು, ಬೆಳೆ ವಿಮೆ ನೋಂದಣಿಗೆ ಬರುವ ರೈತರ ನೆರವಿಗಾಗಿ ಬ್ಯಾಂಕ್‍ಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಈ ಸಿಬ್ಬಂದಿಗಳು ರೈತರಿಗೆ ಬೆಳೆ ವಿಮೆ ನೋಂದಣಿಗಾಗಿ ಫಾರಂ ತುಂಬುವುದರಿಂದ ಹಿಡಿದು, ದಾಖಲೆಗಳ ಸಲ್ಲಿಕೆಯಂತಹ ಎಲ್ಲ ರೀತಿಯ ನೆರವು ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

ಪ್ರಸಕ್ತ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ನೋಂದಣಿಯ ಪ್ರಗತಿ ಪರಿಶೀಲನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಈಗಾಗಲೆ ಹಿಂಗಾರು ಮಳೆ ವಿಫಲವಾಗಿದ್ದು, ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ನೋಂದಾಯಿಸಲು ಡಿ. 31 ಕೊನೆಯ ದಿನಾಂಕವಾಗಿದೆ. ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ & ಪಂಚಾಯತ್ ರಾಜ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಬ್ಯಾಂಕಿನ ಅಧಿಕಾರಿಗಳು, ಉಳಿದಿರುವ ಕೆಲವೇ ದಿನಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಿ ಹಿಂಗಾರು ಹಂಗಾಮಿನ ಎಲ್ಲ ರೈತರು ಬೆಳೆ ವಿಮೆ ವ್ಯಾಪ್ತಿಯಡಿ ಬರುವಂತಾಗಬೇಕು. ಇದಕ್ಕಾಗಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ರೈತರ ನೆರವಿಗೆ ಬ್ಯಾಂಕ್‍ಗಳಲ್ಲಿ ಸಿಬ್ಬಂದಿ ನಿಯೋಜನೆ : ಬೆಳೆ ವಿಮೆ ನೋಂದಣಿಗಾಗಿ ಬ್ಯಾಂಕ್‍ಗೆ ಆಗಮಿಸುವ ರೈತರಿಗೆ, ಸರ್ಕಾರದ ವತಿಯಿಂದ ನೆರವಿನ ಹಸ್ತ ಚಾಚಲು ಜಿಲ್ಲಾಡಳಿತ ಮುಂದಾಗಿದೆ. ಬ್ಯಾಂಕ್‍ಗಳ ಮುಂದೆ ಕೃಷಿ, ತೋಟಗಾರಿಕೆ ಅಥವಾ ಕಂದಾಯ ಇಲಾಖೆ ಅಧಿಕಾರಿಗಳು/ ಸಿಬ್ಬಂದಿಗಳು ಹಾಜರಿರಬೇಕು. ರೈತರಿಗೆ ಬೆಳೆ ವಿಮೆ ನೋಂದಣಿ ಫಾರಂ ಭರ್ತಿ ಮಾಡುವುದರಿಂದ ಮೊದಲುಗೊಂಡು, ವಿಮಾ ಕಂತು ತುಂಬಲು ಸಹಾಯ, ದಾಖಲೆಗಳನ್ನು ಸಿದ್ಧಪಡಿಸುವುದು ಸೇರಿದಂತೆ ಎಲ್ಲ ನೆರವನ್ನು ಈ ಅಧಿಕಾರಿ, ಸಿಬ್ಬಂದಿಗಳೇ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ಯಾವುದೇ ರೈತರನ್ನು ಹಿಂದಕ್ಕೆ ಕಳುಹಿಸುವಂತಿಲ್ಲ, ಬದಲಾಗಿ, ಅವರೇ ರೈತರಿಗೆ ನೋಂದಣಿಗಾಗಿ ನೆರವನ್ನು ನೀಡಬೇಕು. ದಾಖಲೆಗಳ ಎಂಟ್ರಿಗಾಗಿ ಬ್ಯಾಂಕ್‍ಗಳಿಗೆ ನೆರವಾಗಲು ತಾತ್ಕಾಲಿಕವಾಗಿ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್‍ಗಳನ್ನು ನಿಯೋಜಿಸಲಾಗುವುದು. ಬ್ಯಾಂಕಿನ ವ್ಯಸ್ಥಾಪಕರು / ಸಿಬ್ಬಂದಿಗಳು ತಮ್ಮ ಬ್ಯಾಂಕ್‍ಗಳಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿ ರೈತರು ನೊಂದಾಯಿಸಿಕೊಳ್ಳಲು ಅನುವು ಮಾಡಿಕೊಡಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರನ್ನು ವಾಪಾಸು ಕಳುಹಿಸಬಾರದು ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‍ಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಾಕೀತು ಮಾಡಿದರು.

ಗ್ರಾಮಗಳಲ್ಲಿ ಡಂಗುರ ಹಾಕಿಸಿ : ರೈತರು ಬೆಳೆ ವಿಮೆಗೆ ಡಿ. 31 ರ ಒಳಗಾಗಿ ಬ್ಯಾಂಕ್‍ಗಳಿಗೆ ತೆರಳಿ, ನೋಂದಣಿ ಮಾಡುವುದರ ಬಗ್ಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾದಿಕಾರಿಗಳು, ಪಿಡಿಓ ಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಡಿ. 30 ರ ರಾತ್ರಿವರೆಗೂ ನಿತ್ಯ ಡಂಗುರ ಹಾಕಿಸಬೇಕು. ರೈತರಲ್ಲಿ ಬೆಳೆ ವಿಮೆ ಯೋಜನೆಯ ಅರಿವು ಮೂಡಿಸಬೇಕು. ಅಲ್ಲದೆ ರೈತರು ತಮ್ಮ ಖಾತೆ ಹೊಂದಿರುವ ಬ್ಯಾಂಕ್‍ಗಳಿಗೆ ತೆರಳಿ ಬೆಳೆ ವಿಮಾ ಕಂತು ತುಂಬಿಸಲು ಪ್ರೇರೇಪಣೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.

ನಿತ್ಯ ವರದಿ ಸಲ್ಲಿಸಿ : ಹಿಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಡಿ. 31 ಕೊನೆಯ ದಿನಾಂಕವಾಗಿದ್ದು, ಈ ಅವಧಿಯಲ್ಲಿ, ತಮ್ಮ ತಮ್ಮ ಗ್ರಾಮ, ತಾಲೂಕು ವ್ಯಾಪ್ತಿಯಲ್ಲಿ ಎಷ್ಟು ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲಾಗಿದೆ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ನಿತ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು. ತಹಸಿಲ್ದಾರರು ಮತ್ತು ಸಹಾಯಕ ಕೃಷಿ ನಿರ್ದೇಶಕರು, ಆಯಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್‍ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ರೈತರು ಯಾವುದೇ ತೊಂದರೆ ಇಲ್ಲದೆ ವಿಮಾ ಕಂತು ಪಾವತಿಸುವ ವ್ಯವಸ್ಥೆಯ ಕುರಿತು ಮೇಲುಸ್ತುವಾರಿ ನೋಡಿಕೊಳ್ಳಬೇಕು. ಅಲ್ಲದೆ ಆಯಾ ದಿನದಲ್ಲಿ ನೋಂದಾಯಿಸಲಾದ ಅರ್ಜಿಗಳ ಸಂಖ್ಯೆಯನ್ನು ಎಸ್‍ಎಂಎಸ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಹಸಿಲ್ದಾರರು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಬಾಬುರಾವ್, ಸೇರಿದಂತೆ ಎಲ್ಲ ತಾಲೂಕುಗಳ ತಹಸಿಲ್ದಾರರು, ಸಹಾಯಕ ಕೃಷಿ ನಿರ್ದೇಶಕರುಗಳು, ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿ. 30ರಂದು ನಗರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ

ಚಾಮರಾಜನಗರ, ಡಿ. 28 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಸ್ಥೆ, ಸಮಿತಿ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಡಿಸೆಂಬರ 30 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 9.30 ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯ ಬಳಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಜಾಥಾ ಉದ್ಘಾಟಿಸುವರು. ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮವನ್ನು ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗ ಶೆಟ್ಟಿ ಅಧ್ಯಕ್ಷತೆ ವಹಿಸುವರು.

ವಿಧಾನ ಪರಿಷತ್ ಉಪ ಸಭಾಪತಿಯವರಾದ ಮರಿತಿಬ್ಬೇಗೌಡ, ಲೋಕಸಭಾ ಸದ್ಯಸರಾದ ಆರ್.ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಆರ್.ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್.ನಾಗರಾಜು, ಆರ್.ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಚಿನ್ನಸ್ವಾಮಿ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್.ಜೈನ್ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.

ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ಉಚಿತ ಖಾಸಗಿ ಬಸ್ ಸೌಲಭ್ಯ

ಚಾಮರಾಜನಗರ, ಡಿ. 28 (ಕರ್ನಾಟಕ ವಾರ್ತೆ):- ಚಾಮರಾಜನಗರದಲ್ಲಿ ಡಿಸೆಂಬರ್ 30 ರಂದು ಆಯೋಜಿಸಲಾಗಿರುವ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ವಿಕಲಚೇತನರು ಪಾಲ್ಗೊಳ್ಳಲು ಅನೂಕೂಲವಾಗುವಂತೆ ಉಚಿತವಾಗಿ ಖಾಸಗಿ ಬಸ್‍ನಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.

ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದ ವತಿಯಿಂದ ಅಂದು ವಿಕಲಚೇತನರು ಉಚಿತವಾಗಿ ಖಾಸಗಿ ಬಸ್‍ನಲ್ಲಿ ಪ್ರಯಾಣಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ವಿಕಲಚೇತನರ ಸಹಾಯವಾಣಿ ದೂರವಾಣಿ ಸಂಖ್ಯೆ 08226-224688 ಅಥವಾ ವಿವಿದ್ದೊದ್ದೇಶ ಪುನರ್ವಸತಿ ಕಾರ್ಯಕರ್ತರಾದ ರಾಜೇಶ್ ಚಾಮರಾಜನಗರ ಮೊ.9611436675, ಕವಿರತ್ನ ಕೊಳ್ಳೇಗಾಲ ಮೊ.9739598574, ಮಂಜುಳ ಗುಂಡ್ಲುಪೇಟೆ ಮೊ. 8150978441, ಮಹದೇವಮ್ಮ ಯಳಂದೂರು ಮೊ.9740164149 ಸಂರ್ಪಕಿಸುವಂತೆ ಪ್ರಕಟಣೆ ತಿಳಿಸಿದೆ.

ಡಿ. 30ರಂದು ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಸಚಿವರ ಪ್ರವಾಸ

ಚಾಮರಾಜನಗರ, ಡಿ. 28 (ಕರ್ನಾಟಕ ವಾರ್ತೆ):- ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರು ಡಿಸೆಂಬರ್ 30 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಅಂದು ಬೆಳಗ್ಗೆ 11 ಗಂಟೆಗೆ ಸಚಿವರು ನಗರಕ್ಕೆ ಆಗಮಿಸುವರು. 11.30 ಗಂಟೆಗೆ ಕೆಲ್ಲಂಬಳ್ಳಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಹೊಸ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮದ್ಯಾಹ್ನ 2.30 ಗಂmಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬದನೆಯಲ್ಲಿ ಕಾಯಿ ಕೊರೆಯುವ ಹುಳುವಿನ ಬಾಧೆ ನಿಯಂತ್ರಣ

ಬದನೆಯನ್ನು ವರ್ಷದಾದ್ಯಂತ ಬೆಳೆಯಬಹುದು. ಇದರಲ್ಲಿ ಹೆಚ್ಚಾಗಿ ಎ ಮತ್ತು ಬಿ ಜೀವ ಸತ್ವಗಳಿದ್ದು ಈ ತರಕಾರಿಯು ಮಧುಮೇಹ ರೋಗಗಳಿಗೆ ಒಳ್ಳೆಯದಾಗಿದೆ. ಬದನೆಯಲ್ಲಿ ಅತಿ ಹೆಚ್ಚಾಗಿ ಕಾಯಿ ಕೊರೆಯುವ ಹುಳು ಕಂಡು ಬರುತ್ತದೆ. ಮರಿಹುಳು ಎಲೆಯ ದಂಟು ಹಾಗೂ ಮಧ್ಯ ನರಗಳನ್ನು ಕೊರೆದು ತಿನ್ನುತ್ತದೆ. ಇದರಿಂದ ಕುಡಿ ಜೋತು ಬಿದ್ದು ಒಣಗುತ್ತದೆ. ಹೂ ಮೊಗ್ಗುಗಳನ್ನು ಕೊರೆದು ತಿನ್ನುವುದರಿಂದ ಮೊಗ್ಗುಗಳು ಕೆಳಗೆ ಬೀಳುತ್ತದೆ. ಕಾಯಿಯನ್ನು ಕೊರೆದು ಒಳಸೇರಿ ತಿನ್ನುತ್ತದೆ. ಕಾಯಿಗಳ ಮೇಲೆ ತೂತುಗಳನ್ನು ಮತ್ತು ಒಳಗಡೆ ಹಿಕ್ಕೆಯಿಂದ ಮುಚ್ಚಿದ ಕಪ್ಪಾದ ಸುರಂಗವನ್ನು ಕಾಣಬಹುದು.

ಹತೋಟಿ ಕ್ರಮ: ಕಾಯಿ ಬಿಡುವ ಸಮಯದಲ್ಲಿ 15 ದಿವಸಗಳ ಅಂತರದಲ್ಲಿ 2-3 ಸಾರಿ 4 ಗ್ರಾಂ ಕಾರ್ಬರಿಲ್ ಶೇ 50 ಡಬ್ಯೂ.ಪಿ ಅಥವಾ 2 ಮಿ.ಲೀ. ಮೇಲಾಥಿಯಾನ್ 50 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಮಾಹಿತಿ : ಹಾರ್ಟಿಕ್ಲಿನಿಕ್, ತೋಟಗಾರಿಕೆ ಇಲಾಖೆ ತುಮಕೂರು (ದೂರವಾಣಿ 9986773346)

ಮಾಹಿತಿ ವಿಳಂಬ ದಂಡ-ಪರಿಹಾರಕ್ಕೆ ಆಸ್ಪದ ನೀಡಬೇಡಿ

ಬಾಗಲಕೋಟೆ: ಡಿಸೆಂಬರ, 28 (ಕರ್ನಾಟಕ ವಾರ್ತೆ) : ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಥಮ ಮೇಲ್ಮನವಿ ಪ್ರಾಧಿಕಾರ ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಅರ್ಜಿಗಳನ್ನು ವಿಳಂಬ ಮಾಡದೇ ವಿಲೇವಾರಿ ಮಾಡತಕ್ಕದೆಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತರಾದ ಡಾ.ಸುಚೇತನ ಸ್ವರೂಪ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಎಲ್ಲ ಅಧಿಕಾರಿಗಳು 30 ದಿನಗಳೊಳಗಾಗಿ ಅರ್ಜಿಗಳನ್ನು ವಿಲೇವಾರಿ ಮಾಡತಕ್ಕದ್ದು. ವಿಳಂಬ ಮಾಡಿದಲ್ಲಿ ದಂಡ ತೆತ್ತಬೇಕಾಗುತ್ತದೆಯಲ್ಲದೇ ಪರಿಹಾರವು ಸರಕಾರಕ್ಕೆ ಹೊರೆಯಲಾಗುತ್ತದೆ ಎಂದರು. ಅಧಿಕಾರಿಗಳು ಒಂದು ಅರ್ಜಿಯನ್ನು ಒಂದು ಇಲಾಖೆಗೆ ಮಾತ್ರ ವರ್ಗಾವಣೆ ಮಾಡಬಹುದು. ತಮ್ಮ ವ್ಯಾಪ್ತಿಗೆ ಸಂಬಂದಪಡದೇ ಇದ್ದಲ್ಲಿ ಸಂಬಂದಪಟ್ಟ ಒಂದು ಪ್ರಾಧಿಕಾರಕ್ಕೆ ಮಾತ್ರ ಅರ್ಜಿಯನ್ನು ವರ್ಗಾಯಿಸಬಹುದೆಂದರು.

ಅರ್ಜಿಗಳಲ್ಲಿ ಕೇಳಿದ ಮಾಹಿತಿಗೆ ಲಭ್ಯವಿದ್ದ ಮಾಹಿತಿಯನ್ನು ನೀಡಬೇಕು. ಆದರೆ ಕ್ರೋಢೀಕರಿಸಿ ಮಾಹಿತಿ ನೀಡಬಾರದು. ಮಾಹಿತಿಯನ್ನು ಸಾದಾ ಅಂಚೆಯಲ್ಲಿ ಕಳುಹಿಸದೇ ರಜಿಷ್ಟರ ಪೊಸ್ಟ ಮಾಡುವಂತೆ ತಿಳಿಸಿದರು. ಸಹಕಾರಿ ಸಂಘಗಳು, ಕೆ.ಎಂ.ಎಫ್‍ಗಳು ಮಾಹಿತಿ ಹಕ್ಕು ಕಾಯ್ದೆಯಡಿ ಬರುವದಿಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಮಾಹಿತಿ ಅಧಿಕಾರಿಗಳನ್ನಾಗಿ ಮಾಡಕೂಡದು ಎಂದು ತಿಳಿಸಿದರು. ಒಂದು ಮಾಹಿತಿ ಜಿಲ್ಲಾಧಿಕಾರಿಗಳಿಗೆ ಬಂದರೆ ಮಾಹಿತಿಗಾಗಿ ಅರ್ಜಿಯನ್ನು ಎಲ್ಲ ಇಲಾಖೆಗಳಿಗೆ ಕಳಿಹಿಸುವಂತಿಲ್ಲ ಎಂದರು.

ಬಿಪಿಎಲ್ ಕಾರ್ಡದಾರರಿಗೆ ನೂರು ಪುಟದಷ್ಟು ಉಚಿತ ಮಾಹಿತಿ ನೀಡಬೇಕು. ನಂತರದ ಪ್ರತಿ ಪುಟಕ್ಕೆ 2 ರೂ.ಗಳಂತೆ ಹಣ ಪಡೆದು ಮಾಹಿತಿ ನೀಡತಕ್ಕದೆಂದರು. ಮಾಹಿತಿ ಪರಿಶೀಲನೆಗೆ ಪ್ರತಿ ಗಂಟೆಗೆ 20 ರೂ. ಆಗಲಿದೆ ಎಂದರು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎನ್.ರುದ್ರೇಶ್ ಸೇರಿದಂತೆ ವಿವಿಧ ಇಲಾಖೆಯ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

ಅರ್ಹ ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆ

ಗದಗ(ಕರ್ನಾಟಕ ವಾರ್ತೆ) ಡಿಸೆಂಬರ್ 28: 2017-18 ನೇ ಸಾಲಿಗೆ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ ಅರ್ಹ ಕ್ರೀಡಾ ಪಟುಗಳನ್ನು ಗದಗ ಜಿಲ್ಲೆಯ ತಾಲೂಕುಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಡಿಸೆಂಬರ್ 30 ರಂದು ಬೆ. 10 ಗಂಟೆಗೆ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ನೇರವಾಗಿ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ನಡೆಸಲಾಗುವುದು. ಜನೆವರಿ 3 ರಂದು ಬೆ. 9-30 ರಿಂದ ತಾಲೂಕು ಕ್ರೀಡಾಂಗಣ, ನರಗುಂದ ಮತ್ತು ತಾಲೂಕು ಕ್ರಿಡಾಂಗಣ ರೋಣದಲ್ಲಿ; ಜನೆವರಿ 4 ರಂದು ಬೆ. 9.30 ರಿಂದ ತಾಲೂಕು ಕ್ರೀಡಾಂಗಣ, ಶಿರಹಟ್ಟಿ ಮತ್ತು ತಾಲೂಕು ಕ್ರೀಡಾಂಗಣ ಮುಂಡರಗಿಯಲಿ ; ಜನೆವರಿ 5 ರಂದು ಬೆ. 9.30 ರಿಂದ ಗದಗ ತಾಲೂಕು ಆಯ್ಕೆ ನಂತರ ಜಿಲ್ಲಾ ಮಟ್ಟದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಆಯ್ಕೆಗೊಂಡ ಕ್ರೀಡಾ ಪಟುಗಳಿಗೆ ಕ್ರೀಡಾ ಶಾಲೆ/ ವಸತಿ ನಿಲಯಗಳಲ್ಲಿ ಉಚಿತ ಊಟೋಪಹಾರ , ಕ್ರೀಡಾ ಗಂಟು ( ಟೀ ಶರ್ಟ , ಶೂ, ಕಾಲುಚೀಲ, ಸಮವಸ್ತ್ರ ನೀಡಲಾಗುವುದು. ಬೆ. ಮತ್ತು ಸಂಜೆ ಪರಿಣಿತ ತರಬೇತುದಾರರಿಂದ ಕ್ರೀಡಾ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಗದಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 238345 ಮತ್ತು 9880037735 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಸಚಿವ ಆಂಜನೇಯ ಗ್ರಾಮ ವಾಸ್ತವ್ಯ- ಜಿಲ್ಲಾ ಉಸ್ತುವಾರಿ ಸಚಿವರಿಂದ ಪೂರ್ವಭಾವಿ ಸಭೆ

ಉಡುಪಿ, ಡಿಸೆಂಬರ್ 28 (ಕರ್ನಾಟಕ ವಾರ್ತೆ):- ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಗ್ರಾಮ ವಾಸ್ತವ್ಯಕ್ಕಾಗಿ ಉಡುಪಿ ಜಿಲ್ಲೆಗೆ ಭೇಟಿ ನೀಡುವ ಹಿನ್ನಲೆಯಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಇಂದು ಅಧಿಕಾರಿಗಳ ಹಾಗೂ ಕೊರಗ ಸಮುದಾಯದ ಮುಖಂಡರ ಸಭೆ ನಡೆಸಿದರು.

ಇಂದು ಜಿಲ್ಲಾ ಪಂಚಾಯಿತಿಯ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಚಿವರ ಭೇಟಿ ವೇಳೆ ಜಿಲ್ಲೆಯ ಅತ್ಯಂತ ಹಿಂದುಳಿದ ಸಮುದಾಯದವರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಇದನ್ನು ಗಮನದಲ್ಲಿರಿಸಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಕೊರಗರ ಪ್ರಮುಖ ಬೇಡಿಕೆಗಳ ಮನವಿಯನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಅವರ ಜನಸಂಖ್ಯೆ ಕುಂಠಿತ ಗೊಳ್ಳಲು ಮತ್ತು ಆರೋಗ್ಯ ಸಮಸ್ಯೆಯನ್ನು ಅಧ್ಯಯನ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಜೊತೆಯಲ್ಲಿ ಮಣಿಪಾಲದ ಸಮುದಾಯ ಆರೋಗ್ಯ ವಿಭಾಗದ ಸಹಕಾರದೊಂದಿಗೆ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ.

ಇದೇ ಮಾದರಿಯಲ್ಲಿ ಶೈಕ್ಷಣಿಕ ಸಮಿತಿಯೊಂದನ್ನು ಕೊರಗ ಜನಾಂಗದ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ರಚಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿ ವರ್ಷಾಂತ್ಯವನ್ನು ಬುಡಕಟ್ಟು ಜನರ ಹಾಡಿಯಲ್ಲಿ ಕಳೆಯುತ್ತಿರುವ ಸಚಿವ ಹೆಚ್ ಆಂಜನೇಯ ಅವರು ಡಿಸೆಂಬರ್ 31 2016 ರಂದು ಉಡುಪಿಯಿಂದ 80 ಕಿ,ಮೀ ದೂರವಿರುವ ಮೂರೂರು ಕೊರಗರ ಹಾಡಿಯಲ್ಲಿನ ಶ್ರೀಮತಿ ಮರ್ಲಿ ಕೋಂ ಮರ್ಲ ಕೊರಗ ಎಂಬವರ ಮನೆಯಲ್ಲಿ ವಾಸ್ತವ್ಯ ಮಾಡಲಿರುವರು.

ಈ ಹಿನ್ನಲೆಯಲ್ಲಿ ಕೊರಗರ ಹಾಡಿಯ ಮೂಲಭೂತ ಅಗತ್ಯಗಳನ್ನು ಗುರುತಿಸಿ ಪರಿಹರಿಸಲು ಸಚಿವರೇ ಖುದ್ದು ಆಗಮಿಸುವ ಹಿನ್ನಲೆಯಲ್ಲಿ ಬೇಡಿಕೆಗಳನ್ನು ಸಮಗ್ರವಾಗಿ ಹಾಗೂ ನಿರಂತರ ಪರಿಹಾರ ಗಮನದಲ್ಲಿರಿಸಿ ನೀಡಲು ಮನವಿಯನ್ನು ಕೊರಗ ಸಮುದಾಯದ ಪರವಾಗಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸಿದರು.

ಜಿಲ್ಲೆಯಲ್ಲಿ ಎರಡು ಸಾವಿರ ಕುಟುಂಬಗಳ 9000 ಜನರಿದ್ದು ಈಗಾಗಲೇ ಜಿಲ್ಲೆಯಲ್ಲಿ ಇವರ ಆರೋಗ್ಯ ಹಾಗೂ ಉನ್ನತಿಗಾಗಿ ಕ್ರಮಗಳನ್ನು ಐಟಿಡಿಪಿ ಇಲಾಖೆಯ ಮುಖಾಂತರ ಕೈಗೊಳ್ಳಲಾಗಿದೆ. ಕಾರ್ಯಕ್ರಮಗಳು ಇನ್ನಷ್ಟು ವಿಶೇಷವಾಗಿ ಕೊರಗ ಮತ್ತು ಮಲೆಕುಡಿಯ ಸಮುದಾಯಕ್ಕೆ ತಲುಪಿಸುವ ಹೊಣೆಗಾರಿಕೆ ಇದೆ ಸಚಿವರು ಹೇಳಿದರು.

ಕೊರಗ ಸಮುದಾಯದ ಪ್ರತಿನಿಧಿಗಳೇ ವೈದ್ಯಕೀಯ ಸೇವೆಗೆ ಆಸ್ಪತ್ರೆಗಳ ಹೆಸರನ್ನು ನೀಡಲಿ; ಅದೇ ರೀತಿ ಸಮೀಕ್ಷೆ ಸಮಿತಿಯಲ್ಲೂ ಕೊರಗ ಮುಖಂಡರಿರಲಿ ಎಂದು ಸಚಿವರು ಕೊರಗ ಪ್ರತಿನಿಧಿಗಳಿಗೆ ಹೊಣೆಯನು ್ನ ವಹಿಸಿದರು. ಕೌಶಲ್ಯ ತರಬೇತಿ, ಭೂಮಿ, ನಿವೇಶನ ಹಕ್ಕು ಎಲ್ಲ ಅಭಿವೃದ್ಧಿಗೆ ಐಟಿಡಿಪಿ ಇಲಾಖೆ ಸಿಂಗಲ್ ವಿಂಡೋ ಏಜೆನ್ಸಿಯಂತೆ ಕೆಲಸ ಮಾಡಲಿ ಎಂದು ಸಚಿವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ಸರ್ಕಾರ ನೀಡುವ ಸೌಲಭ್ಯಗಳಿಗಾಗಿ ಕೊರಗರು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಅಲೆಯುವಂತಿರಬಾರದು; ಅವರಿಗೆ ಕೊಡಮಾಡಿದ ಸೌಲಭ್ಯಗಳು ಅವರಿಗೆ ಸುಲಭವಾಗಿ ಎಟುಕಬೇಕು. ತಾಂತ್ರಿಕ ಕಾರಣಗಳಿಂದ ಉದ್ಭವಿಸಿದ ಎಪಿಎಲ್ ಕಾರ್ಡ್ ಸಮಸ್ಯೆ ಶೀಘ್ರ ಇತ್ಯರ್ಥವಾಗಬೇಕು ಎಂದು ಸಚಿವರು ನುಡಿದರು.

ಬಳಿಕ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅಧ್ಯಕ್ಷತೆಯಲ್ಲ್ಲಿ 31ರ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ, ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ನೋಡಲ್ ಅಧಿಕಾರಿ ಯೋಗೇಶ್ವರ್ ಎಲ್ಲ ಅಧಿಕಾರಿಗಳು ಪಾಲ್ಗೊಂಡರು.

ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿ ಹರೀಶ್ ಗಾಂವ್ಕರ್, ಸಮಾಜ ಕಲ್ಯಾಣಾಧಿಕಾರಿ ರಮೇಶ್, ಎಲ್ಲ ತಹಸೀಲ್ದಾರ್ ಉಪಸ್ಥಿತರಿದ್ದರು.

ರಾಷ್ಟ್ರೀಯ ಗ್ರಾಹಕರ ದಿನಾಚರಣೆ -2016

ಶಿವಮೊಗ್ಗ, ಡಿಸೆಂಬರ್ 28; (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಜಿಲ್ಲಾ ಬಳಕೆದಾರರ ವೇದಿಕೆ,ಶಿವಮೊಗ್ಗ ಇವರುಗಳ ಸಂಯುಕ್ರಾಶ್ರಯದಲ್ಲಿ ಡಿ. 31 ರಂದು ಬೆಳಿಗ್ಗೆ 11.00 ಕ್ಕೆ ನಗರದ ಸಿಟಿ ಕ್ಲಬ್ ಹಿಂಭಾಗದಲ್ಲಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ “ಗ್ರಾಹಕ ವ್ಯಾಜ್ಯಗಳ ತ್ವರಿತ ಪರಿಹಾರಕ್ಕಾಗಿ ಪರ್ಯಾಯ ವ್ಯಾಜ್ಯ ನಿವಾರಣಾ ವ್ಯವಸ್ಥೆ” ಎಂಬ ಘೋಷಣೆಯೊಂದಿಗೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಡಾ|| ಲೋಕೇಶ್ ಎಂ. ಉದ್ಘಾಟಿಸುವರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಡಿ.ಆರ್. ವೆಂಕಟಸುದರ್ಶನ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಬಳಕೆದಾರರ ವೇದಿಕೆ ಅಧ್ಯಕ್ಷ ಬಿ.ವಿ. ಗೋಪಾಲಕೃಷ್ಣ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಎಂ. ಶಂಕ್ರಪ್ಪ, ಬಳಕೆದಾರರ ವೇದಿಕೆ ಕಾರ್ಯದರ್ಶಿ ಬಿ.ಎಸ್. ನಾಗರಾಜ್ ಮತ್ತು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಸಂಚಾಲಕ ಎಂ.ಎಂ. ಜಯಸ್ವಾಮಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿ. ಸ. ನಿರ್ದೇಶಕ ಹಿಮಂತರಾಜು.ಜಿ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಸ್.ಓ. ಜಯಕುಮಾರ್ ಮತ್ತು ಆ.ನಾ.ಗ್ರಾ.ವ್ಯ. ಇಲಾಖೆಯ ಉಪನಿರ್ದೇಶಕ ಆರ್. ಸದಾಶಿವಪ್ಪ ಇವರುಗಳು ಉಪಸ್ಥಿತರಿರುವರು.

ಈ ಸಮಾರಂಭದಲ್ಲಿ ಬಳಕೆದಾರರ ವೇದಿಕೆ ಕಾರ್ಯದರ್ಶಿ ಕೆ.ಎನ್. ವೆಂಕಟಗಿರಿ ಮತ್ತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ಕೆ.ಎನ್. ಮಂಜುನಾಥ ಇವರುಗಳು ಉಪನ್ಯಾಸ ನೀಡುವರು. ಕಾನೂನು ಮಾಪನ ಶಾಸ್ತ್ರ ಇಲಾಖೆಯವರು ಪ್ರಾತ್ಯಕ್ಷತೆ ನಡೆಸಿಕೊಡುವರು.

ಡಿ.29 ರಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ.

ಮಂಡ್ಯ ಡಿಸೆಂಬರ್ 28 (ಕರ್ನಾಟಕ ವಾರ್ತೆ):- ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಕೃಷ್ಣಪ್ಪ ಅವರು ಡಿಸೆಂಬರ್ 29 ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಅಂದು ಬೆಳಿಗ್ಗೆ 9.30 ಗಂಟೆಗೆ ಮಂಡ್ಯ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿ, ಬೆಳಿಗ್ಗೆ 9.45 ಗಂಟೆಗೆ ವಿಶ್ವಮಾನವ ದಿನಾಚರಣೆ ಅಂಗವಾಗಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.15 ಗಂಟೆಗೆ ಮಂಡ್ಯ ಎಸ್.ಬಿ.ಸಮುದಾಯ ಭವನದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಶೈಕ್ಷಣಿಕ ಕಾರ್ಯಗಾರದಲ್ಲಿ ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ಕೆರಗೋಡು ರಸ್ತೆ ಕಾಮಗಾರಿ ವೀಕ್ಷಿಸಿ ನಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸುವರು. ಸಂಜೆ 5 ಗಂಟೆಗೆ ಸುಗಮ ಸಂಗೀತ ಸಮ್ಮೇಳನ ಹಾಗೂ ಗೀತೋತ್ಸವ-2016ರ ಸಿದ್ಧತೆ ಮತ್ತು ಕೆ.ಆರ್.ಪೇಟೆಯ ಸಿರಿಗೆರೆ ಕೆರೆ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸುವರು. ಸಂಜೆ 6 ಗಂಟೆಗೆ ಮಂಡ್ಯ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘ, ಮಂಡ್ಯ ಇವರಿಂದ ಏರ್ಪಡಿಸಿರುವ ಕುವೆಂಪು ಜನ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು ನಂತರ ಸಂಜೆ 7 ಗಂಟೆಗೆ ರಸ್ತೆ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

ತಾ.ಪಂ ಸಾಮಾನ್ಯ ಸಭೆ

ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಡಿಸೆಂಬರ್ 30 ರಂದು ಬೆಳಿಗ್ಗೆ 11.00 ಗಂಟೆಗೆ ಅಧ್ಯಕ್ಷರಾದ ಮಂಜುಳ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.29 ರಂದು ಕಾರ್ಯಾಗಾರ

ಜಿಲ್ಲಾಡಳಿತ-ಜಿಲ್ಲಾ ಪಂಚಾಯತ್, ಮಂಡ್ಯ, ಮಹಿಳೆಯರು ಮತ್ತು ಮಕ್ಕಳ ಅಭಿವೃದಿ ಇಲಾಖೆ,ಮಂಡ್ಯಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಬಡ್ರ್ಸ್ ಸಂಸ್ಥೆ ಮತ್ತು ವಿಕಸನ ಸಂಸ್ಶೆ, ಮಂಡ್ಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 29 ರಂದು ಬೆಳಿಗ್ಗೆ 10 ಗಂಟೆಗೆ “ಬಾಲನ್ಯಾಯ ಕಾಯ್ದೆ-2015, ಪೋಕ್ಸೋ ಕಾಯ್ದೆ-2012 ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಬಾಲ್ಯವಿವಾಹ ನಿಷೇಧ (ಕರ್ನಾಟಕ) ನಿಯಮಗಳು 2014, ಮತ್ತು ಮಕ್ಕಳ ದೈನಂದಿನ ಸಮಸ್ಯೆಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜ.02 ರಿಂದ ಪಿಂಚಣಿ ಅದಾಲತ್

ಮಡಿಕೇರಿ ಡಿ.28(ಕರ್ನಾಟಕ ವಾರ್ತೆ):-ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ ಪಿಂಚಣಿ ಅದಾಲತ್ ನಡೆಸವ ಬಗ್ಗೆ 2017ರ ಜನವರಿ ತಿಂಗಳಲ್ಲಿ ದಿನಾಂಕ ನಿಗಧಿಪಡಿಸಿ ಈ ಹಿಂದೆ ನಿಗಧಿಪಡಿಸಿದ ದಿನಾಂಕಗಳನ್ನು ರದ್ದುಪಡಿಸಿ ದಿನಾಂಕವನ್ನು ನಿಗದಿಪಡಿಸಿದ್ದು, ಪಿಂಚಣಿ ಅದಾಲತ್ ನಡೆಸಲು ಎಲ್ಲಾ ಪೂರ್ವಭಾವಿ ಸಿದ್ದತೆಗಳೊಂದಿಗೆ ಕಡತ ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳಲು ಈ ದಿನ ಸ್ಥಳದಲ್ಲಿ ಸಂಬಂಧಿಸಿದ ಅಧಿಕಾರಿಗಳು ನೌಕರರುಗಳೊಂದಿಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದೆ.

ಜನವರಿ, 2 ರಂದು ಬೆಳಗ್ಗೆ 10.30 ಗಂಟೆಗೆ ಸುಂಟಿಕೊಪ್ಪ, ಬೆಳಗ್ಗೆ 11.30 ಗಂಟೆಗೆ ಕುಶಾಲನಗರ, ಮಧ್ಯಾಹ್ನ 12.30 ಗಂಟೆಗೆ ಕೊಡ್ಲಿಪೇಟೆ, ಮಧ್ಯಾಹ್ನ 1 ಗಂಟೆಗೆ ಶನಿವಾರಸಂತೆ, ಜನವರಿ, 03 ರಂದು ಮಧ್ಯಾಹ್ನ 12.30 ಗಂಟೆಗೆ ಮಡಿಕೇರಿ, ಜನವರಿ, 04 ರಂದು ಬೆಳಗ್ಗೆ 10.30 ಗಂಟೆಗೆ ಬಾಳೆಲೆ, ಬೆಳಗ್ಗೆ 11 ಗಂಟೆಗೆ ಪೊನ್ನಂಪೇಟೆ, ಮಧ್ಯಾಹ್ನ 12 ಗಂಟೆಗೆ ಹುದಿಕೇರಿ, ಮಧ್ಯಾಹ್ನ 1 ಗಂಟೆಗೆ ಶ್ರೀಮಂಗಲ, ಜನವರಿ, 05 ರಂದು ಮಧ್ಯಾಹ್ನ 1 ಗಂಟೆಗೆ ಸಂಪಾಜೆ, ಜನವರಿ, 07 ರಂದು ಮಧ್ಯಾಹ್ನ 2.30 ಗಂಟೆಗೆ ನಾಪೋಕ್ಲು, ಮಧ್ಯಾಹ್ನ 3.30 ಗಂಟೆಗೆ ಭಾಗಮಂಡಲ, ಜನವರಿ, 09ರಂದು ಬೆಳಗ್ಗೆ 11 ಗಂಟೆಗೆ ಶಾಂತಳ್ಳಿ, ಮಧ್ಯಾಹ್ನ 12 ಗಂಟೆಗೆ ಸೋಮವಾರಪೇಟೆ, ಜನವರಿ, 11 ರಂದು ಬೆಳಗ್ಗೆ 10.30 ಗಂಟೆಗೆ ಅಮ್ಮತ್ತಿ, ಬೆಳಗ್ಗೆ 11.30 ಗಂಟೆಗೆ ವಿರಾಜಪೇಟೆಯಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ ಎಂದು ಮಡಿಕೇರಿ ಉಪವಿಭಾಗದ ಉಪ ವಿಭಾಗಾಧಿಕಾರಿ ಅವರು ತಿಳಿಸಿದ್ದಾರೆ.

ಮಾ.09ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಮಡಿಕೇರಿ ಡಿ.28(ಕರ್ನಾಟಕ ವಾರ್ತೆ):-2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್, 09 ರಿಂದ 27 ರವರೆಗೆ ನಡೆಯಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 2017ರ ಮಾರ್ಚ್ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಇಂತಿದೆ. ಮಾರ್ಚ್, 09 ರಂದು ಜೀವಶಾಸ್ತ್ರ ಮತ್ತು ಇತಿಹಾಸ, ಮಾರ್ಚ್, 10 ರಂದು ಎಲೆಕ್ಟ್ರಾನಿಕ್ಸ್ ಮತ್ತು ಗಣಕ ವಿಜ್ಞಾನ, ಮಾರ್ಚ್, 11 ರಂದು ತರ್ಕಶಾಸ್ತ್ರ, ಶಿಕ್ಷಣ, ಬೇಸಿಕ್ ಮ್ಯಾಥ್ಸ್, ಮಾರ್ಚ್, 13 ರಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಮಾರ್ಚ್, 14 ರಂದು ಗಣಿತ, ಮಾರ್ಚ್, 15 ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮಾರ್ಚ್, 16 ರಂದು ಅರ್ಥಶಾಸ್ತ್ರ ಮತ್ತು ಭೂಗರ್ಭಶಾಸ್ತ್ರ, ಮಾರ್ಚ್, 17 ರಂದು ಭೌತಶಾಸ್ತ್ರ, 18 ರಂದು ಮನಃಶಾಸ್ತ್ರ, ಮಾರ್ಚ್, 20 ರಂದು ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಐಚ್ಚಿಕ ಕನ್ನಡ, ಮಾ.21 ರಂದು ರಾಜ್ಯಶಾಸ್ತ್ರ, ಮಾ.22 ರಂದು ಹಿಂದಿ ಮತ್ತು ತೆಲುಗು, ಮಾ.23 ರಂದು ಕನ್ನಡ, ತಮಿಳು, ಮಲಯಾಳಂ, ಅರೇಬಿಕ್, ಮಾ.24 ರಂದು ಸಂಸ್ಕøತ, ಮರಾಠಿ, ಉರ್ದು, ಪ್ರೆಂಚ್, ಮಾ.25 ರಂದು ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಗೃಹ ವಿಜ್ಞಾನ, ಮಾರ್ಚ್, 27 ರಂದು ಇಂಗ್ಲೀಷ್ ಪರೀಕ್ಷೆಗಳು ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಸಿ.ಶಿಖಾ ಅವರು ತಿಳಿಸಿದ್ದಾರೆ.

ಡಿ.30 ಮತ್ತು 31 ರಂದು ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ

ಮಡಿಕೇರಿ ಡಿ.28(ಕರ್ನಾಟಕ ವಾರ್ತೆ):- ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಬೆಂಗಳೂರು, ರಂಗಾಯಣ, ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡಿಸೆಂಬರ್ 30 ಮತ್ತು 31 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್ 30 ರಂದು ಬೆಳಗ್ಗೆ 10.30 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮಡಿಕೇರಿ ತಾಲೂಕು ಘಟಕ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಎಚ್.ಟಿ.ಅನಿಲ್, ಕುಶಾಲನಗರ ಸಂಗೀತ ನೃತ್ಯ ಕಲಾಕೇಂದ್ರ ಹಿರಿಯ ಕಲಾವಿದರಾದ ಬಿ.ಸಿ.ಶಂಕರಯ್ಯ, ಭಾರತೀಯ ವಿದ್ಯಾಭವನ ವ್ಯವಸ್ಥಾಪಕರಾದ ಪಿ.ಪಿ. ಸೋಮಣ್ಣ, ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ ಇತರರು ಭಾಗವಹಿಸಲಿದ್ದಾರೆ.

ಅರ್ಜಿ ಆಹ್ವಾನ

ಮಡಿಕೇರಿ ಡಿ.28(ಕರ್ನಾಟಕ ವಾರ್ತೆ):- 2016ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ, ವೃತಿಪರ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದು, ಸರಾಸರಿ ಶೇ. 75 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ಜಿಲ್ಲೆಯ ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ.ದೇವರಾಜು ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ www.backwardclasses.kar.nic.in ವೆಬ್‍ಸೈಟ್‍ನಲ್ಲಿ ಪಡೆಯಬಹುದು. ಮಾಹಿತಿಗೆ 080-44554444 ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡು ಹತ್ತಿರ, ಮಡಿಕೇರಿ, ದೂ.ಸಂ 08272-225628 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ವಿ.ಸುರೇಶ್ ಅವರು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಬೆಳಗಾವಿ, ಡಿಸೆಂಬರ್ 28 (ಕರ್ನಾಟಕ ವಾರ್ತೆ): ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರು ಡಿಸೆಂಬರ್ 29 ರಿಂದ 2017ರ ಜನೇವರಿ 3ರವರೆಗೆ ಬೆಳಗಾವಿ ಜಿಲ್ಲೆಯ ಜಿಲ್ಲಾ ಪ್ರವಾಸ ಕೈಗೊಳ್ಳುವರು ಎಂದು ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಡಿಸೆಂಬರ್ 29 ರಂದು ಬೆಳಿಗ್ಗೆ 11.45 ಗಂಟೆಗೆ ಬೆಳಗಾವಿಗೆ ಆಗಮಿಸಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಧ್ಯಾಹ್ನ 3 ಗಂಟೆಗೆ ಗೋಕಾಕ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೋಕಾಕ ವಾಸ್ತವ್ಯ ಮಾಡುವರು.

ಡಿಸೆಂಬರ್ 30 ರಂದು ಬೆಳಿಗ್ಗೆ 9 ಗಂಟೆಗೆ ಬೆಳಗಾವಿಯಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕರನ್ನು ಭೇಟಿ ಹಾಗೂ ವಿವಿಧ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಡಿಸೆಂಬರ್ 31 ರಂದು ಬೆಳಿಗ್ಗೆ 9 ಗಂಟೆಗೆ ಗೋಕಾಕ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕರನ್ನು ಭೇಟಿ ಮಾಡುವರು. ನಂತರ ಮಧ್ಯಾಹ್ನ 12 ಗಂಟೆಗೆ ಸವದತ್ತಿ ನವಿಲು ತೀರ್ಥ ಐ.ಬಿ.ಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವರು.

ಜನೇವರಿ 1 ರಂದು ಬೆಳಿಗ್ಗೆ 10 ಗಂಟೆಗ ಗೋಕಾಕ ಸ್ಥಳೀಯ ಕಾರ್ಯಕ್ರಮ, ವಿಧಾನ ಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಭೇಟಿ ಹಾಗೂ ವಿವಿಧ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಜನೇವರಿ 2 ರಂದು ಬೆಳಿಗ್ಗೆ 10 ಗಂಟೆಗೆ ಅಥಣಿ ತಾಲೂಕಿನ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಲಿರುವರು. ಜನೇವರಿ 3 ರಂದು ಬೆಳಿಗ್ಗೆ 9 ಗಂಟೆಗೆ ಗೋಕಾಕ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30 ಗಂಟೆಗೆ ಬೆಳಗಾವಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವಮಾನವ ದಿನಾಚರಣೆ-2016

ಬೆಳಗಾವಿ, ಡಿಸೆಂಬರ್ 28 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರ ಕವಿ ಕುವೆಂಪು ಜನ್ಮ ದಿನದ ಅಂಗವಾಗಿ ವಿಶ್ವ ಮಾನವ ದಿನಾಚರಣೆ ” ಯನ್ನು ಡಿಸೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಶ್ರೀ ಮ.ನಿ.ಪ್ರ.ಸ್ವ. ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು. ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಸರ್ಕಾರದ ಮುಖ್ಯ ಸಚೇತಕರಾದ ಶ್ರೀ ಅಶೋಕ ಪಟ್ಟಣ, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ಚಿಕ್ಕೋಡಿ ಶಾಸಕಾರದ ಶ್ರೀ ಗಣೇಶ ಹುಕ್ಕೇರಿ ಅವರು ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿರುವರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಬೆಳಗಾವಿ ಉತ್ತರ ಶಾಸಕರಾದ ಶ್ರೀ ಫಿರೋಜ್ ಶೇಠ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.

ಬೆಳಗಾವಿ ಕ್ಯಾಥೋಲಿಕ್ ಡಯಾಸಿಸ್ ಬಿಶಪ್ ಪಿಟರ್ ಮಚಾಡೋ, ಮುಪ್ತಿ ಅಬ್ದುಲ್ ಅಜಿ ಖಾಜಿ, ಭಂತೆ ಮಾತ ಮೈತ್ರಿಮ ಪರಮಪೂಜ್ಯ 105 ಧರ್ಮ ಸೇನಾ ಭಟ್ಟಾಚಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ಗುರ್ಪಿತ್ ಸಿಂಗ್, ಡಾ. ಸಿದ್ದನಗೌಡ ಪಾಟೀಲ, ಶ್ರೀ ಜಗದೀಶ ಕುಂಟೆ, ಶ್ರೀ ಬಸವರಾಜ ಮಳಲಿ ಇವರುಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿಶೇಷ ಗೌರವಾನ್ವಿತರು ಉಪಸ್ಥಿತರಿರುವರು.

ಬೆಳಗಾವಿ ಜೈನ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೆ.ಎನ್.ದೊಡಮನಿ, ಅವರು ಕುವೆಂಪು ವೈಚಾರಿಕ ನೆಲೆ ಮತ್ತು ವಿಶ್ವಮಾನವ ಪ್ರಜ್ಞೆ ವಿಷಯವಾಗಿ ಉಪನ್ಯಾಸವನ್ನು ಮಂಡಿಸುವರು. ಬೆಳಗಾವಿ ಶ್ರೀ ಸುರೇಶ ಚಂದರಿಗಿ ಸಂಗೀತಗಾರರು, ಬೆಳಗಾವಿ (ಬುಡಾ ಕಚೇರಿ ಹತ್ತಿರ) ಕೋಟೆ ಕೆರೆ ಆವರಣದಲ್ಲಿ ಕುವೆಂಪು ಗೀತ ಗಾಯನವನ್ನು ಸಂಜೆ 6 ಗಂಟೆಗೆ ವೀಣಾ ಬಡಿಗೇರ ಮತ್ತು ತಂಡ ಬೆಳಗಾವಿ ಹಾಗೂ ಶ್ರೀರಾಮ ಕಾಸರ ಧಾರವಾಡ. ಬೆಳಗಾವಿ ಶ್ರೀಮತಿ ರೇಖಾ ಹೆಗಡೆ ಅವರಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಉಡುಪಿ, ಡಿಸೆಂಬರ್ 28 (ಕರ್ನಾಟಕ ವಾರ್ತೆ) :- ರಾಜ್ಯ ಮೀನುಗಾರಿಕೆ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಡಿಸೆಂಬರ್ 29 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಬೆಳಗ್ಗೆ 9 ಗಂಟೆಗೆ ಕೋಟ ಹಳೆಯ ಸಂತೆ ಸ್ಥಳದ ಮೀನು ಮಾರುಕಟ್ಟೆ ವಠಾರದಲ್ಲಿ ಕೋಟ ಸಂತೆ ಮಾರುಕಟ್ಟೆ ಉದ್ಘಾಟನೆ, 10 ಗಂಟೆಗೆ ಹಂದಿಕಲ್ಲು ಚಾರ ಜೋಮ್ಲು ಕ್ಷೇತ್ರದಲ್ಲಿ ಎಳ್ಳಮವಾಸ್ಯೆ-ಜೋಮ್ಲು ತೀರ್ಥೋತ್ಸವದ ಸಭಾ ಕಾರ್ಯಕ್ರಮ, 10.30 ಗಂಟೆಗೆ ಉಡುಪಿ ಸಂತ ಸಿಸಿಲೀಸ್ ಪದವಿ ಪೂರ್ವ ಕಾಲೇಜಿನಲ್ಲಿ ‘ವಿಶ್ವ ಮಾನವ ದಿನಾಚರಣೆ’, 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಪ್ರಾರಂಭವಾಗುತ್ತಿರುವ ‘ಸ್ಪಂದನ ಕೇಂದ್ರ’(ಏಕ ಗವಾಕ್ಷಿ ಸೇವಾ ಕೇಂದ್ರ) ಉದ್ಘಾಟನೆ, ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಉಡುಪಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ, 7 ಗಂಟೆಗೆ ಕನ್ನರಪಾಡಿ ಸೈಂಟ್ ಮೆರಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಂಪೌಂಡ್‍ನಲ್ಲಿ ಕ್ರಿಸ್‍ಮಸ್ ಪ್ರಯುಕ್ತ ಆಯೋಜಿಸಿರುವ ಕಾರ್ಯಕ್ರಮ, 7.30 ಗಂಟೆಗೆ ಮಣಿಪಾಲ ಸರಳೇಬೆಟ್ಟು ಶ್ರೀ ಕೃಷ್ಣಪ್ಪ ಸಾಮಂತ್ ಸ್ಮಾರಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಂತರ ಉಡುಪಿಯಲ್ಲಿ ವಾಸ್ತವ್ಯ.