Government of Karnataka

Department of Information

Sunday 18/02/2018

ಜಿಲ್ಲಾ ವಾರ್ತೆ 29-12-2016

Date : ಗುರುವಾರ, ದಶಂಬರ 29th, 2016

ಜಿಲ್ಲಾ ಸುದ್ದಿಗಳು

ಕುವೆಂಪುರವರು ಶ್ರೇಷ್ಠ ಸಮಾಜ ಕಟ್ಟಲು ಶ್ರಮಿಸಿದ ಸಾಂಸ್ಕೃತಿಕ ನಾಯಕರು- ಡಾ. ರಹಮತ್ ತರೀಕರೆ

ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ) : ಕುವೆಂಪು ಅವರು ಕೇವಲ ಶ್ರೇಷ್ಠ ಸಾಹಿತ್ಯ ರಚನೆ ಅಷ್ಟೇ ಅಲ್ಲ ಶ್ರೇಷ್ಠ ಸಮಾಜ ಕಟ್ಟಲು ಶ್ರಮಿಸಿದ ಸಾಂಸ್ಕೃತಿಕ ನಾಯಕರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಬಣ್ಣಿಸಿದರು.

ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಗುರುವಾರದಂದು ಏರ್ಪಡಿಸಲಾದ ವಿಶ್ವ ಮಾನವ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕುವೆಂಪು ಮತ್ತು ಕಾರಂತರು, ಈ ನಾಡಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಪ್ರಮುಖರು. ಕುವೆಂಪು ಅವರನ್ನು ಬರೀ ಗದ್ಯ, ಸಾಹಿತ್ಯಕ್ಕಷ್ಟೇ ಲೇಖಕರೆಂದು ಅವರನ್ನು ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ, ಇವರು ಈ ನಾಡು, ಮತ್ತು ಶ್ರೇಷ್ಠ ಸಮಾಜವನ್ನು ಕಟ್ಟಲು ಶ್ರಮಿಸಿದ ಶ್ರೇಷ್ಠ ಸಾಂಸ್ಕೃತಿಕ ನಾಯಕರು. ಕುವೆಂಪು ಅವರು ಬರೀ ಪದ್ಯ, ಗದ್ಯ, ಸಾಹಿತ್ಯವನ್ನು ಬರೆದುಕೊಂಡು ನೆಮ್ಮದಿಯಿಂದ ಇರಬಹುದಿತ್ತು. ಶ್ರೇಷ್ಠ ನಾಡು ಯಾವ ರೀತಿ ಇರಬೇಕು ಎನ್ನುದನ್ನು ತಮ್ಮ ಸಾಹಿತ್ಯದಲ್ಲಿಯೂ ಬಿಂಬಿಸಿದರು. ಸ್ವಾತಂತ್ರ್ಯಾ ನಂತರದ ಗಣರಾಜ್ಯದಲ್ಲಿ ಭಾರತೀಯರು, ಕನ್ನಡಿಗರು ಹೇಗೆ ಇರಬೇಕು ಎಂದು ಬರವಣಿಗೆ ಮೂಲಕ ಸಜ್ಜುಗೊಳಿಸಲು ಮುಂದಾಗಿದ್ದು ವಿಶೇಷ. ಕುವೆಂಪು ಅವರು ಹುಟ್ಟಿದ ಸ್ಥಳವನ್ನು ಬಹುತೇಕರು ಕುಪ್ಪಳ್ಳಿ ಎಂಬುದಾಗಿ ಉಚ್ಛರಿಸುತ್ತಾರೆ. ಆದರೆ ಕುಪ್ಪಳಿ ಎಂಬುದು ಸರಿಯಾದ ಪದವಾಗಿದೆ. ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಆದರೆ ಬೆಳೆದಂತೆಲ್ಲ ಅಲ್ಪ ಮಾನವರಾಗುತ್ತಾರೆ.

ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ಸಾಹಿತ್ಯದ ಕರ್ತವ್ಯವಾಗಬೇಕು ಎಂಬುದು ಕುವೆಂಪು ಅವರ ಶ್ರೇಷ್ಠ ನುಡಿಯಾಗಿತ್ತು. ಕರ್ನಾಟಕ ರಾಜ್ಯದಲ್ಲಿ ನಾಡಗೀತೆಯಾಗಿ ಅಳವಡಿಸಿಕೊಳ್ಳಲಾಗಿರುವ ‘ಭಾರತ ಜನನಿಯ ತನುಜಾತೆ’ ಎಂಬ ಹಾಡನ್ನು ಕುವೆಂಪು ಅವರು ರಚಿಸಿದ್ದು, ಈ ಹಾಡು ಇಡೀ ಭಾರತದ ಪರಿಕಲ್ಪನೆಯನ್ನು ಮುಂದಿಡುತ್ತದೆ. ಕುವೆಂಪು ಅವರು ಭಾರತವನ್ನು ಹಲವು ಮರಗಳಿರುವ ಉದ್ಯಾನ ಎಂದು ಕಲ್ಪಿಸಿಕೊಳ್ಳುತ್ತಾರೆ. ಅವರು ರಚಿಸಿರುವ ‘ಮಲೆಗಳಲ್ಲಿ ಮದುಮಗಳು’ ಈ ನಾಡಿನ ಶ್ರೇಷ್ಠ ಕೃತಿ. ಒಂದು ವೇಳೆ ಇದೇ ಕೃತಿ ಇಂಗ್ಲಿಷ್ ಭಾಷೆಯಲ್ಲಿ ಇದ್ದಿದ್ದರೆ ಈ ಕೃತಿಗೆ ವಿಶ್ವ ಮಾನ್ಯವಾಗಿರುವ ನೋಬೆಲ್ ಪ್ರಶಸ್ತಿಯೇ ದೊರಕುತ್ತಿತ್ತು. ಕುವೆಂಪು ಅವರು, ಇಂಗ್ಲೀಷ್ ಭಾಷೆಯನ್ನು ಕಲಿಕೆಯ ಭಾಷೆಯನ್ನಾಗಿ ಸ್ವೀಕರಿಸಿದರೇ ಹೊರತು, ಕನ್ನಡ ಭಾಷೆಯನ್ನು ಮಾತ್ರ ಅಭಿವ್ಯಕ್ತಿಯ ಭಾಷೆಯನ್ನಾಗಿಸಿಕೊಂಡರು. ಮನಸ್ಸನ್ನು ನಿಯಂತ್ರಿಸಲು ಹಲವಾರು ಅಂಕುಶಗಳಿವೆ. ಆದರೆ ಮಾನವರು ಆತ್ಮ ಶುದ್ಧಿಗಾಗಿ ನಿರಂಕುಶಮತಿಗಳಾಗಬೇಕು ಎಂದು ಕರೆ ನೀಡಿದವರು ಕುವೆಂಪು ಅವರು ಎಂದು ಡಾ. ರಹಮತ್ ತರೀಕರೆ ಅವರು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ‘ವಿಶ್ವ ಮಾನವ ಕುವೆಂಪು’ ಕಿರುಹೊತ್ತಿಗೆ ಹಾಗೂ ಜಿಲ್ಲಾಡಳಿತದಿಂದ ಪ್ರಕಟಿಸಿರುವ ಕ್ಯಾಲೆಂಡರ್ ಬಿಡುಗಡೆ ನೆರವೇರಿಸಿ ಮಾತನಾಡಿದ ಸಂಸದ ಕರಡಿ ಸಂಗಣ್ಣ ಅವರು, ಕುವೆಂಪು ಅವರು 20 ನೇ ಶತಮಾನದ ಅಗ್ರಮಾನ್ಯ ಕವಿಶ್ರೇಷ್ಠರು, ಅವರು ತಮ್ಮ ಸಾಧನೆಯಿಂದ ಜಗತ್ತಿನಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಎಲ್ಲರನ್ನೂ ಪ್ರೀತಿಸಬೇಕು ಎನ್ನುವುದು ಅವರ ಆಶಯವಾಗಿದ್ದು, ಅವರ ಪ್ರತಿಯೊಂದು ಸಾಹಿತ್ಯಕ್ಕೂ ಆಳವಾದ ಅರ್ಥವಿದೆ. ಚುಟುಕು ಸಾಹಿತ್ಯಕ್ಕೂ ಅವರು ಸೈ ಎನಿಸಿಕೊಂಡಿದ್ದರು. ಮಕ್ಕಳು ಕುವೆಂಪು ಅವರ ಸಾಹಿತ್ಯವನ್ನು ಓದಬೇಕು. ಅವರ ಸಾಹಿತ್ಯವನ್ನು ಆದರ್ಶವಾಗಿಸಿಕೊಳ್ಳಬೇಕು. ಕುವೆಂಪು ಅವರ ಜನ್ಮದಿನದ ಕಾರ್ಯಕ್ರಮಕ್ಕೆ ‘ವಿಶ್ವ ಮಾನವ ಕುವೆಂಪು’ ಕಿರುಹೊತ್ತಿಗೆಯನ್ನು ಸಕಾಲದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿ, ಒದಗಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರ, ಮಹಾಂತೇಶ್ ಮಲ್ಲನಗೌಡರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿ, ವಂದಿಸಿದರು. ಸಿ.ವಿ. ಜಡಿಯವರ್ ನಿರೂಪಿಸಿದರು. ಸದಾಶಿವ ಪಾಟೀಲ್ ತಂಡದವರು ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿದರು.

ಕುವೆಂಪು ಅವರು, ವಿಶ್ವ ಮಾನವರಾಗಲು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ವ ಪ್ರಣಾಳಿಕೆಯಡಿ ಸಾರಿರುವ ಸಪ್ತಸೂತ್ರಗಳನ್ನು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ಇದೇ ಸಂದರ್ಭದಲ್ಲಿ ವಾಚಿಸಿದರು.

ಕುವೆಂಪು ಅವರು ರಚಿಸಿರುವ ವಿಶ್ವ ಮಾನವ ಗೀತೆ ‘ಓ ನನ್ನ ಚೇತನ ಆಗು ನೀ ಅನಿಕೇತನ’ ಹಾಡಿಗೆ ಭಾಗ್ಯನಗರದ ದೀಕ್ಷಾ ತಂಡದ ಮಕ್ಕಳು ನೃತ್ಯ ರೂಪಕದ ಮೂಲಕ ಎಲ್ಲರ ಗಮನ ಸೆಳೆದರು. ರಾಮಚಂದ್ರಪ್ಪ ಉಪ್ಪಾರ ಅವರ ತಂಡವು ಕುವೆಂಪು ಅವರು ರಚಿಸಿರುವ ಹಲವು ಗೀತೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷೆ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ನಾಮಫಲಕ ಅಳವಡಿಸಲು ಸೂಚನೆ

ಕೊಪ್ಪಳ ಡಿ. 29 :(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳಿಗೆ ನಾಮಫಲಕ ಅಳವಡಿಸುವಂತೆ ಆದೇಶಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲ ವಕ್ಫ್ ಸಂಸ್ಥೆಗಳ ಮೇಲೆ ನಾಮಫಲಕ ಅಳವಡಿಸುವಂತೆ ಸಂಸ್ಥೆಗಳ ಅಧ್ಯಕ್ಷರು ಹಾಗೂ ಮುತುವಲ್ಲಿಗಳಿಗೆ ಸೂಚನೆ ನೀಡಲಾಗಿದೆ.

ಸರಕಾರದ ಆದೇಶದಂತೆ ವಕ್ಫ್ ಸಂಸ್ಥೆಯ ಹೆಸರು ಮತ್ತು ವಕ್ಫ್ ಸಂಸ್ಥೆ ಎಂದು ನಮೂದಿಸಿದ ನಾಮಫಲಕವನ್ನು ಸಂಸ್ಥೆಗಳ ಮೇಲೆ ಅಳವಡಿಸಬೇಕು. ಹಾಗೂ ನಾಮಫಲಕದಲ್ಲಿ ‘ವಕ್ಫ್ ಆಸ್ತಿಯು ಗೇಜೆಟ್ ಮತ್ತು 1995 ರ ವಕ್ಫ್ ಕಾಯ್ದೆಯ ಕಲಂ 36 ರಂತೆ ನೋಂದಣಿಯಾದ ವಕ್ಫ್ ಸಂಸ್ಥೆಯಾಗಿದ್ದು, ಯಾರೊಬ್ಬರೂ ಈ ವಕ್ಫ್ ಸಂಸ್ಥೆಗಳ ಆಡಳಿತ ಮತ್ತು ಇನ್ನಿತರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಎಲ್ಲಾ ವಕ್ಫ್ (ಧಾರ್ಮಿಕ ಹಾಗೂ ಸಾಮಾಜಿಕ) ಸಂಸ್ಥೆಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು ಇವರು ಸಕ್ಷಮ ಪ್ರಾಧಿಕಾರಿಗಳಾಗಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ’ ಎಂಬುದಾಗಿ ನಮೂದಿಸುವಂತೆ ಸೂಚನೆ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಷ್ಟಗಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ಡಿ.29 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಕುಷ್ಟಗಿ ಪುರಸಭೆ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆಯರ 07 ಹುದ್ದೆ ಹಾಗೂ ಅಂಗನವಾಡಿ ಸಹಾಯಕಿಯರ 16 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಯ ಸ್ಥಳ ಹಾಗೂ ಮೀಸಲಾತಿ ವಿವರ ಇಂತಿದೆ : ಟಕ್ಕಳಕಿ 1ನೇ ಕೇಂದ್ರ(ಇತರೆ), ಶಿರಗುಂಪಿ 2ನೇ ಕೇಂದ್ರ(ಇತರೆ), ಹಡಗಲಿ(ಇತರೆ), ಹಿರೇತೆಮ್ಮಿನಾಳ 2ನೇ ಕೇಂದ್ರ(ಇತರೆ), ಟಕ್ಕಳಕಿ 2ನೇ ಕೇಂದ್ರ(ಇತರೆ), ತುಮರಿಕೊಪ್ಪ 3ನೇ ಕೇಂದ್ರ(ಪ.ಪಂಗಡ), ಅಮರಾಪೂರ ತಾಂಡಾ(ಪ.ಜಾತಿ) ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಸಹಾಯಕಿಯರ ಹುದ್ದೆ ಸ್ಥಳ ಹಾಗೂ ಮೀಸಲಾತಿ ವಿವರ ಇಂತಿದೆ : ಕುಷ್ಟಗಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.2 ರ 20 ನೇ ಕೇಂದ್ರ -(ಇತರೆ), ಹೂಲಗೇರಾ ತಾಂಡಾ (ಪ.ಜಾತಿ), ಬಳೂಟಗಿ 1 ನೇ ಕೇಂದ್ರ-(ಇತರೆ), ಕೆ.ಬೋದೂರು 1ನೇ ಕೇಂದ್ರ-(ಇತರೆ), ಅಮರಾಪೂರ 2ನೇ ಕೇಂದ್ರ-(ಇತರೆ), ಶಿರಗುಂಪಿ 2ನೇ ಕೇಂದ್ರ-(ಇತರೆ), ಹಿರೇಮೂಕರ್ತಿನಾಳ 2ನೇ ಕೇಂದ್ರ-(ಇತರೆ), ಹಿರೇತೆಮ್ಮಿನಾಳ 2ನೇ ಕೇಂದ್ರ-(ಇತರೆ), ಹಿರೇಮನ್ನಾಪೂರ 7ನೇ ಕೇಂದ್ರ-(ಪ.ಪಂಗಡ), ಟಕ್ಕಳಕಿ 2ನೇ ಕೇಂದ್ರ-(ಇತರೆ), ಗೊರೆಬಿಹಾಳ 2ನೇ ಕೇಂದ್ರ-(ಪ.ಪಂಗಡ), ವಿರುಪಾಪೂರ 2ನೇ ಕೇಂದ್ರ-(ಇತರೆ), ಗಂಗನಾಳ 1ನೇ ಕೇಂದ್ರ-(ಪ.ಪಂಗಡ), ಯರಗೇರಾ 2ನೇ ಕೇಂದ್ರ-(ಪ.ಪಂಗಡ), ಹುಲಿಯಾಪೂರ 3ನೇ ಕೇಂದ್ರ-(ಮುಸ್ಲಿಂ), ಹನುಮನಾಳ 3ನೇ ಕೇಂದ್ರ-(ಪ.ಪಂಗಡ) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ನಿಗದಿತ ಅರ್ಜಿ ನಮೂನೆಯನ್ನು ಶಿಶು ಅಭಿವೃದ್ಧಿಯೋಜನಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿ 2017 ರ ಜನೇವರಿ.26 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಲಯ ಕುಷ್ಟಗಿ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಜಿಮ್ ಸಲಕರಣೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ ಡಿ.29 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಕ್ರೀಯಾಶೀಲ ಸಂಘ ಸಂಸ್ಥೆಗಳಿಗೆ ಜಿಮ್ ಸಲಕರಣೆ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಪ್ರಸಕ್ತ ಸಾಲಿನ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡದ ಸಂಘ ಸಂಸ್ಥೆಗಳು ಜಿಮ್ ಸ್ಥಾಪಿಸಲು ರೂ.2 ಲಕ್ಷಗಳ ಜಿಮ್ ಸಲಕರಣೆ ಒದಗಿಸಲಾಗುವುದು. ರಾಜ್ಯ/ ರಾಷ್ಟ್ರ/ ಅಂತರರಾಷ್ಟ್ರೀಯ ಮಟ್ಟದ ನಿರುದ್ಯೋಗಿ ಕ್ರೀಡಾಪಟುಗಳು ಹಾಗೂ ಸಂಘ ಸಂಸ್ಥೆಗಳು ಇದರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು.

ಮಾರ್ಗಸೂಚಿ ಮತ್ತು ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರಲ್ಲಿ ಪಡೆದು ಭರ್ತಿ ಮಾಡಿ, ಜಿಮ್ ಸ್ಥಾಪಿಸುವ ಕುರಿತ ಸಂಪೂರ್ಣ ದಾಖಲೆಗಳೊಂದಿಗೆ 3 ಪ್ರತಿಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜ.10 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ :08539-201400 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೂರು ತಿಂಗಳಲ್ಲಿ ಚಿತ್ರದುರ್ಗ ನಗರದ ಸಮಗ್ರ ಅಭಿವೃದ್ದಿ ಕಾಮಗಾರಿಗೆ ಚಾಲನೆ ಸಿಗಲಿದೆ; ಉಸ್ತುವಾರಿ ಸಚಿವರಾದ ಹೆಚ್.ಆಂಜನೇಯ

ಚಿತ್ರದುರ್ಗ,ಡಿಸೆಂಬರ್-29- : ಚಿತ್ರದುರ್ಗ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಹಲವಾರು ಕಡೆ ರಸ್ತೆಗಳು ಹಾಳಾಗಿದ್ದು ಇವುಗಳ ನಿರ್ಮಾಣಕ್ಕೆ ನಗರೋತ್ಥಾನ ಸೇರಿದಂತೆ ವಿಶೇಷ ಘಟಕ, ಗಿರಿಜನ ಉಪಯೋಜನೆ ಹಾಗೂ ರಾಜ್ಯ ಹಣಕಾಸು ಯೋಜನೆ ಅನುದಾನದಡಿ ಸಮಗ್ರ ಅಭಿವೃದ್ದಿಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ದೊರೆಯಲಿದೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಆಂಜನೇಯ ತಿಳಿಸಿದರು.

ಅವರು (ಡಿ.29) ಚಿತ್ರದುರ್ಗ ನಗರದಲ್ಲಿ ಜೋಗಿಮಟ್ಟಿ ರಸ್ತೆ, ಸ್ವಾಮಿವಿವೇಕಾನಂದ ನಗರ, ಸುಣ್ಣದಗುಮ್ಮಿ, ದೊಡ್ಡಪೇಟೆ, ಚಿಕ್ಕಪೇಟೆ, ಧರ್ಮಶಾಲಾ ರಸ್ತೆ, ಲಕ್ಷ್ಮೀಬಜಾರ್, ನೆಹರು ನಗರ, ಅಗಸನಕಲ್ಲು, ಹಳೆ ಮಂಡಕ್ಕಿ ಭಟ್ಟಿ, ಅಗಸನಕಲ್ಲು ಎ.ಕೆ.ಕಾಲೋನಿ ವೀಕ್ಷಣೆ ಕೈಗೊಂಡು ಸಾರ್ವಜನಕರಿಂದ ಅಹವಾಲು ಸ್ವೀಕರಿಸಿ ರಸ್ತೆ, ಚರಂಡಿ ಸ್ಥಿತಿಗತಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿತ್ರದುರ್ಗ ನಗರಕ್ಕೆ ನಗರೋತ್ಥಾನದ ಎರಡನೇ ಹಂತದಲ್ಲಿ 35 ಕೋಟಿ ಬಿಡುಗಡೆಯಾಗಿದೆ ಮತ್ತು ಮೊದಲ ಹಂತದಲ್ಲಿ ಉಳಿದ 15 ಕೋಟಿ ಹಾಗೂ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ 5 ಕೋಟಿ ಅನುದಾನ ಲಭ್ಯವಾಗಿದ್ದು ಬರುವ ಜನವರಿಯಲ್ಲಿ ನಗರೋತ್ಥಾನ ಸಮಿತಿ ಸಭೆಯನ್ನು ಕರೆದು ಕಾಮಗಾರಿಗಳಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆದು ಸ್ಥಳೀಯವಾಗಿ ಗುತ್ತಿಗೆಯನ್ನು ನೀಡುವ ಮೂಲಕ ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.

ಚಿತ್ರದುರ್ಗ ನಗರದಲ್ಲಿ ಒಳಚರಂಡಿ ಕಾಮಗಾರಿಯಿಂದ ಹಿಂದೆ ಇದ್ದ ರಸ್ತೆಗಳಲ್ಲಿ ಯು.ಜಿ.ಡಿ.ಪೈಪ್‍ಲೈನ್ ತೆಗೆಯಲಾಗಿದ್ದರಿಂದ ನಗರದ ರಸ್ತೆಗಳು ಬಹುತೇಕ ಗುಂಡಿಬಿದ್ದಿವೆ. ಇವೆಲ್ಲಾ ರಸ್ತೆಗಳನ್ನು ಅಭಿವೃದ್ದಿಪಡಿಸಲು ಸಮಗ್ರ ಅಭಿವೃದ್ದಿ ಯೋಜನೆಯು ಸಿದ್ದಪಡಿಸಲಾಗಿದೆ. ಮತ್ತು ನಗರದ ಕೆಲವು ಪ್ರದೇಶಗಳು ಕೊಳಚೆಪ್ರದೇಶಗಳಾಗಿದ್ದರೂ ಇವುಗಳ ಘೋಷಣೆಯಾಗಿಲ್ಲ, ಈ ಬಗ್ಗೆ ಪೌರಾಡಳಿತ ಸಚಿವರ ಗಮನಕ್ಕೆ ತಂದು ಅಭಿವೃದ್ದಿಗೆ ಬರಬೇಕಾದ ಅನುದಾನವನ್ನು ಪಡೆದು ಈ ಪ್ರದೇಶಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರ ಸಕ್ರಮ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

ಚಿತ್ರದುರ್ಗ ನಗರದಲ್ಲಿನ ಸೂರು ಮತ್ತು ನಿವೇಶನ ರಹಿತರ ಪಟ್ಟಿಯು ಸಿದ್ದವಾಗಿದ್ದು ಅನರ್ಹರು ಸೇರದಂತೆ ಇದನ್ನು ಇನ್ನೊಮ್ಮೆ ಸಮೀಕ್ಷೆ ಮಾಡಿ ಅಂತಿಮಗೊಳಿಸಲು ಆಯುಕ್ತರಿಗೆ ಸೂಚಿಸಲಾಗಿದೆ. ಯಾರಿಗೆ ನಿವೇಶನ ಇಲ್ಲ, ಅವರಿಗೆ ನಿವೇಶನ ಮತ್ತು ಮನೆ ಇಲ್ಲದವರಿಗೆ ಮನೆಯನ್ನು ನೀಡಲಾಗುತ್ತದೆ. ಡಾ;ಬಿ.ಆರ್.ಅಂಬೇಡ್ಕರ್ ಆವಾಸ್ ಯೋಜನೆಯಡಿ ನಗರ ಪ್ರದೇಶದ ಪರಿಶಿಷ್ಟ ಜಾತಿಯವರಿಗೆ 1.80 ಲಕ್ಷ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ. ಇತರೆಯವರಿಗೆ 1.50 ಲಕ್ಷ ನೀಡಲಾಗುತ್ತಿದೆ. ಇದರ ಲಾಭವನ್ನು ಜನರು ಪಡೆಯಬೇಕೆಂದರು.

ನಗರದಲ್ಲಿ ರಾಜಕಾಲುವೆ ಒತ್ತುವರಿ, ರಸ್ತೆ, ಚರಂಡಿಗಳ ಒತ್ತುವರಿಯಾಗಿದೆ. ಇವುಗಳ ತೆರವಿಗೆ ಸೂಚಿಸಲಾಗಿದೆ. ಮುಖ್ಯ ರಸ್ತೆಯಲ್ಲಿ ಗಾಂಧಿ ವೃತ್ತದ ಸಮೀಪ ರಸ್ತೆಯ ಅಗಲೀಕರಣವಾಗಿರುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ನಗರಸಭೆ ಆಯುಕ್ತರಿಗೆ ಸೂಚಿಸಲಾಗಿದೆ. ಮತ್ತು ಜೋಗಿಮಟ್ಟಿ ರಸ್ತೆಯಿಂದ ಕೋಟೆಯ ಮುಂಭಾಗಕ್ಕೆ ನೇರವಾದ ರಸ್ತೆ ಇದ್ದು ಇದರ ಒತ್ತುವರಿಯನ್ನು ತೆರವು ಮಾಡಿ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಯಾರು ಒತ್ತುವರಿ ಮಾಡಿ ಕಟ್ಟಿಕೊಂಡಿದ್ದಾರೆ, ಅಂತಹವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದ ಅವರು ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಗರೋತ್ಥಾನದಡಿ ಹಿಂದಿನಂತೆ ಪ್ಯಾಕೇಜ್ ಕಾಮಗಾರಿ ಬದಲಾಗಿ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಸ್ಥಳೀಯರು ಟೆಂಡರ್‍ನಲ್ಲಿ ಭಾಗವಹಿಸುವ ಅವಕಾಶ ಲಭಿಸುತ್ತದೆ. ಮತ್ತು ಇದರಿಂದ ಕಾಮಗಾರಿ ವೇಗವು ಹೆಚ್ಚುತ್ತದೆ ಎಂದರು.

ಸಚಿವರ ನಗರ ಸಂಚಾರ ಜೋಗಿಮಟ್ಟಿ ರಸ್ತೆಯಿಂದ ಆರಂಭವಾಗಿ ಸ್ವಾಮಿವಿವೇಕಾನಂದ ನಗರ, ಸುಣ್ಣದಗುಮ್ಮಿ ವೀಕ್ಷಣೆ ವೇಳೆ ಜೋಗಿಮಟ್ಟಿ ರಸ್ತೆಯಿಂದ ಕೋಟೆ ಮುಂಭಾಗಕ್ಕೆ ಸಂಪರ್ಕಿಸುವ ರಸ್ತೆಯ ವೀಕ್ಷಣೆ ಮಾಡಿ ಸ್ಥಳದಲ್ಲಿ ಮಹಿಳೆಯೊಂದಿಗೆ ಮಾತನಾಡಿ ಇಲ್ಲಿಂದ ನೇರವಾಗಿ ರಸ್ತೆ ಬೇಕೆ ಎಂದಾಗ ರಸ್ತೆ ಮಾಡಿ ಕೊಡಿ ಸ್ವಾಮಿ ಇಲ್ಲಿಂದ ನೇರವಾಗಿ ಕೋಟೆಗೆ ಹೋಗಬಹುದು ಎಂದರು. ನಂತರ ದೊಡ್ಡಪೇಟೆ ಮೈಸೂರು ಕೆಫೆ ಮುಂಭಾಗದಿಂದ ಚಿಕ್ಕಪೇಟೆ ಬೆಳಗಿನ ಸಂತೆಯಲ್ಲಿ ತೆರಳಿ ತರಕಾರಿ ಮಾರಾಟಗಾರರೊಂದಿಗೆ ಮಾತನಾಡಿ ಚಿಲ್ಲರೆ ಸಮಸ್ಯೆ ಬಗ್ಗೆ ವಿಚಾರಿಸಿದರು. ಅಲ್ಲಿದ್ದ ನಾಗರೀಕರು ಇಲ್ಲಿನ ಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸಿದಲ್ಲಿ ಮಾರಾಟಗಾರರಿಗೆ ಮತ್ತು ನಾಗರೀಕರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಈ ರಸ್ತೆಯ ಮೂಲಕ ಧರ್ಮಶಾಲಾ ರಸ್ತೆ, ಎಸ್.ಬಿ.ಎಂ. ವೃತ್ತಕ್ಕೆ ಸಂಪರ್ಕಿಸುವ ರಸ್ತೆ ಮೂಲಕ ಕೃಷ್ಣ ನರ್ಸಿಂಗ್ ಹೋಂ ಮುಂಭಾಗದ ರಸ್ತೆಯಲ್ಲಿ ಸಂಚರಿಸಿ ನೇರವಾಗಿ ಕೋಟೆಗೆ ಹೋಗುವ ಗಾಂಧಿ ವೃತ್ತದ ರಸ್ತೆವರೆಗೆ ತೆರಳಿ ಗಾಂಧಿ ವೃತ್ತದ ಮೂಲಕ ನೆಹರು ನಗರಕ್ಕೆ ತೆರಳಿದರು. ಅಲ್ಲಿಂದ ಅಗಸನಕಲ್ಲು, ಹಳೆ ಮಂಡಕ್ಕಿಭಟ್ಟಿ ಏರಿಯಾ, ಎ.ಕೆ.ಕಾಲೋನಿಗೆ ತೆರಳಿ ವೀಕ್ಷಣೆ ಮಾಡಿ ಅಲ್ಲಿದ್ದ ಸಾರ್ವಜನಿಕರು ರಸ್ತೆ, ಚರಂಡಿ, ಮನೆಗಳನ್ನು ನೀಡಲು ಹಾಗೂ ಡಾ; ಬಿ.ಆರ್.ಅಂಬೇಡ್ಕರ್ ಅಥವಾ ಜಗಜೀವನ್ ರಾಂ ಭವನ ನಿರ್ಮಾಣ ಮಾಡಿಕೊಡಲು ಮನವಿ ಮಾಡಿದರು. ಇದಕ್ಕೆ ಸಚಿವರು ಕನಿಷ್ಠ 12 ಲಕ್ಷದ ಭವನವನ್ನಾದರೂ ನಿರ್ಮಿಸಿಕೊಡಲಾಗುತ್ತದೆ ಎಂದರು. ನಂತರ ಗಾರೇಹಟ್ಟಿ ಮುಖ್ಯರಸ್ತೆಯ ಮೂಲಕ, ಕವಾಡಿಗರಹಟ್ಟಿಗೆ ಸಂಚರಿಸಿ ವೀಕ್ಷಣೆ ಮಾಡಿದರು.

ನಿಗದಿಯಂತೆ ನಗರದ ಹಲವು ಬಡಾವಣೆಗಳಿಗೆ ತೆರಳಬೇಕಾಗಿದ್ದು ಜನವರಿ 2 ರಂದು ಮತ್ತೆ ನಗರ ಸಂಚಾರವನ್ನು ಕೈಗೊಂಡು ಬಾಕಿ ಇರುವ ಬಡಾವಣೆಗಳ ವೀಕ್ಷಣೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಸಚಿವರೊಂದಿಗೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿಯವರು ನಗರ ಸಂಚಾರದಲ್ಲಿ ಪಾಲ್ಗೊಂಡು ಜನರ ಅಹವಾಲು ಸ್ವೀಕರಿಸಿದರು. ಮತ್ತು ಸಂಸದರಾದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ನಗರಸಭೆ ಅಧ್ಯಕ್ಷರಾದ ಮಂಜುನಾಥ್ ಗೊಪ್ಪೆ, ಉಪಾಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಪೌರಾಯುಕ್ತ ಚಂದ್ರಪ್ಪ ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ನೇರ ನೇಮಕಾತಿ ಮೂಲಕ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಯಾದಗಿರಿ: ಡಿಸೆಂಬರ್ 29, (ಕರ್ನಾಟಕ ವಾರ್ತೆ): ಕರ್ನಾಟಕ ಲೋಕಸೆವಾ ಆಯೋಗ, “ಉದ್ಯೋಗಸೌಧ” ಬೆಂಗಳೂರು ಇವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು 442 ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ 381 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

ಕರ್ನಾಟಕ ಲೋಕ ಸೇವಾ ಆಯೋಗ, ಉದ್ಯೋಗ ಸೌಧ ಬೆಂಗಳೂರು ಇವರು ಸ್ಫರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆನ್ ಲೈನ್ ಮುಖಾಂತರ ಆಹ್ವಾನಿಸಿದ್ದಾರೆ. ಅರ್ಜಿ ಸಲ್ಲಿಸಲು ಕೂನೆಯ ದಿನಾಂಕ 4-01-2017 ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಂತರರ್ಜಾಲ http//kpsc.kar.nic.in ನಲ್ಲಿ ನೋಡಬಹುದು ಮತ್ತು ಪರೀಕ್ಷಾ ವೇಳಾಪಟ್ಟಿಯನ್ನು http//kpsc.kar.nic.in/timetable ನಲ್ಲಿ ನೋಡಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳಾದ ಭಾರತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಉಡುಪಿ, ಡಿಸೆಂಬರ್ 29 (ಕರ್ನಾಟಕ ವಾರ್ತೆ):- ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಡಿಸೆಂಬರ್ 30 ರಿಂದ ಜನವರಿ 1 ರವರೆಗೆ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರವಾಸದ ವಿವರಗಳು ಈ ಮುಂದಿನಂತಿವೆ.

ಡಿಸೆಂಬರ್ 30 ರಂದು ಬೆಳಗ್ಗೆ 9.30 ಗಂಟೆಗೆ ನೀಲಾವರ ಎಳ್ಳಂಪಳ್ಳಿಯಲ್ಲಿ ನೀಲಾವರ-ಎಳ್ಳಂಪಳ್ಳಿ ರಸ್ತೆ ಗುದ್ದಲಿ ಪೂಜೆ ಕಾರ್ಯಕ್ರಮ, 10 ಗಂಟೆಗೆ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, 11 ಗಂಟೆಗೆ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ, 11.30 ಗಂಟೆಗೆ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಮೀನುಗಾರರಿಗೆ ಹೊಸ ಬೋಟಿನ ನಿರ್ಮಣಕ್ಕೆ ಸಾಧ್ಯತಾ ಪತ್ರ ವಿತರಣೆ, ಮಧ್ಯಾಹ್ನ 3 ಗಂಟೆಗೆ ಕರ್ಜೆ ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನದಲ್ಲಿ ಹೊಸೂರು ಗ್ರಾಮದ ಜನಸಂಪರ್ಕ ಸಭೆ, 5.30 ಗಂಟೆಗೆ ನಾಲ್ಕೂರು ಇಲ್ಲಿ ನಾಲ್ಕೂರು ಕಜ್ಕೆ ಕೊಳ-ಕುಮ್ಕಿ ಮತ್ತು ಕಣ್ಣನಬೆಟ್ಟು ಕಿಂಡಿ ಅಣೆಕಟ್ಟು ಉದ್ಘಾಟನೆ, ಸಂಜೆ 6 ಗಂಟೆಗೆ ಉಪ್ಪೂರು ಜಿಲ್ಲಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ, 7 ಗಂಟೆಗೆ ಕುಕ್ಕಿಕಟ್ಟೆ ಮಾರ್ಪಳ್ಳಿ ಶ್ರಿ ಅಯ್ಯಪ್ಪ ಸ್ವಾಮಿ ಭಕ್ತ ವೃಂದ(ರಿ) ಇದರ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಕಟಪಾಡಿ ಸುಭಾಷ್‍ನಗರ-ಸರಕಾರಿಗುಡ್ಡೆ ಯೂತ್ ಬೆಸ್ಟ್ ಫ್ರೆಂಡ್ಸ್(ರಿ) ಇದರ 15ನೇ ವರ್ಷದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ, ನಂತರ ಉಡುಪಿಯಲ್ಲಿ ವಾಸ್ತವ್ಯ.

ಡಿಸೆಂಬರ್ 31 ರಂದು ಬೆಳಗ್ಗೆ 9 ಗಂಟೆಗೆ ಮಲ್ಪೆ ಶ್ರೀ ಚನ್ನಬಸವೇಶ್ವರ ಭಜನಾ ಮಂದಿರ ಮಲ್ಪೆ-ನೆರ್ಗಿ ಇಲ್ಲಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ಉದ್ಘಾಟನೆ, 9.30 ಗಂಟೆಗೆ ಮಲ್ಪೆ ತೊಟ್ಟಂ ಇಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೊಂದಿಗೆ ಪರಿಶಿಷ್ಟ ಜಾತಿ ಮಹಿಳಾ ಮೀನುಗಾರರ ವಿವಿದ್ದೋದ್ದೇಶ ಪ್ರಾಥಮಿಕ ಸಹಕಾರ ಸಂಘ(ರಿ) ಇದರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ, 11 ಗಂಟೆಗೆ ಹೆರಂಜಾಲು ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ, 11.30 ಗಂಟೆಗೆ ಮೂರೂರಿನಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೊಂದಿಗೆ ಆದಿವಾಸಿ ಬುಡಕಟ್ಟು ಸಮುದಾಯಗಳವರೊಂದಿಗೆ ಸಮಾಲೋಚನಾ ಸಭೆ, ಸಂಜೆ 6 ಗಂಟೆಗೆ ಉಡುಪಿ ಪುತ್ತೂರು ಸುಬ್ರಹ್ಮಣ್ಯ ನಗರದಲ್ಲಿ ಮೆಘಾ ಫ್ರೆಂಡ್ಸ್(ರಿ) ಇದರ ವಾರ್ಷಿಕೋತ್ಸವ ಕಾರ್ಯಕ್ರಮ, ಸಂಜೆ 7 ಗಂಟೆಗೆ ಉಡುಪಿ ಕೊಳಂಬೆ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಕೊಳಂಬೆ ಶಾಂತಿನಗರ ಅಭಿವೃದ್ಧಿ ಸಮಿತಿ(ರಿ), ಮಹಾತ್ಮಗಾಂಧಿ ಉದ್ಯಾನವನ ಕೊಳಂಬೆ ಉಡುಪಿ ಇದರ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ, 8 ಗಂಟೆಗೆ ಚೇರ್ಕಾಡಿ ಆದರ್ಶ ನಗರ, ಮಡಿ ಇಲ್ಲಿ ಆದರ್ಶ ಸಂಘ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ನಂತರ ಉಡುಪಿಯಲ್ಲಿ ವಾಸ್ತವ್ಯ.

ಜನವರಿ 1 ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಕೊರಂಗ್ರಪಾಡಿ ಬೈಲೂರಿನಲ್ಲಿ ಪಶು ವೈದ್ಯಕೀಯ ಕಟ್ಟಡದ ಉದ್ಘಾಟನೆ, 11.30 ಗಂಟೆಗೆ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಮತ್ತು ಉದ್ಘಾಟನೆ ನಂತರ ಮಂಗಳೂರು ಮಾರ್ಗವಾಗಿ ಬೆಂಗಳೂರು ಪ್ರಯಾಣ.

ಕೊಡವ ನಾಟಕ ಕಲಿಕಾ ಶಿಬಿರ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತನ್ನ ಪೂರ್ವ ಕಾರ್ಯ ಯೋಜನೆಯಂತೆ ಕೊಡವ ರಂಗಭೂಮಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿದ್ದು, ಅದರಂತೆ ಪ್ರಸಕ್ತ ಸಾಲಿನಲ್ಲಿ ಪೊನ್ನಂಪೇಟೆ ಹಾಗೂ ಮೂರ್ನಾಡು ಇಲ್ಲಿ ಎರಡು ಕೊಡವ ನಾಟಕ ಕಲಿಕಾ ಶಿಬಿರವನ್ನು ಏರ್ಪಡಿಸಿತ್ತು.

ಒಂದು ತಿಂಗಳ ಕಾಲ ನಡೆದ ಈ ಶಿಬಿರದಲ್ಲಿ ಎರಡು ಕೊಡವ ನಾಟಕ ತಯಾರಾಗಿದೆ. ಪೊನ್ನಂಪೇಟೆಯಲ್ಲಿ ಕಲಾತಂಡಕ್ಕೆ ರಂಗಭೂಮಿ ಕಲಾವಿದ ಮದ್ರೀರ ಸಂಜು ಬೆಳ್ಯಪ್ಪ ವಿರಚಿತ “ತೆಳ್‍ಂಗನ ಕಾವೇರಿ”(ಮೂಲ: ದ ಪೆಗ್ಮೇಲಿಯನ್, ಜಾರ್ಜ್ ಬರ್ನಾರ್ಡ್ ಷಾ. ಕನ್ನಡಾನುವಾದ: ಸೇವಂತಿ ಪ್ರಸಂಗ , ಜಯಂತ್ ಕಾಯ್ಕಿಣಿ) ಯನ್ನು ರಂಗಭೂಮಿ ಕಲಾವಿದ ಕೋಳೆರ ಸನ್ನು ಕಾವೇರಪ್ಪ ಇವರ ನಿರ್ದೇಶನದಲ್ಲಿ ತಯಾರು ಮಾಡಿದೆ. ಮೂರ್ನಾಡುವಿನಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿ ಕಲಾವಿದ ಹಾಗೂ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಇವರು ರಚಿಸಿ ನಿರ್ದೇಶಿಸಿರುವ “ಬಂಡಾಟ” ಎಂಬ ಕೊಡವ ನಾಟಕ ತಯಾರಾಗಿದೆ.

ಈ ತಯರಾದ ಎರಡು ನಾಟಕಗಳ ಪ್ರದರ್ಶನಕೋಸ್ಕರ ಕೊಡವ ನಾಟಕೋತ್ಸವವನ್ನು 2017ರ ಜನವರಿ, 03 ರಂದು ಮಧ್ಯಾಹ್ನ 1.30 ಗಂಟೆಗೆ ಮೂರ್ನಾಡು ಜೂನಿಯರ್ ಕಾಲೇಜಿನ ಬಯಲು ರಂಗಮಂದಿರ ಇಲ್ಲಿ ವಿಶೇಷ ಗಣ್ಯರ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದೆ. ಕೊಡಗಿನಲ್ಲಿ ಪಕೊಡವ ರಂಗಭೂಮಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೊಡವ ನಾಟಕೋತ್ಸವವನ್ನು ಯಶಸ್ವಿಗೊಳಿಸಿಕೊಟ್ಟು ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಡಿಸೆಂಬರ್, 30ರ ಕಾರ್ಯಕ್ರಮ

ಡಿ.30 ರಂದು ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ರಂಗಾಯಣ, ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಿಸೆಂಬರ್ 30 ಮತ್ತು 31 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್ 30 ರಂದು ಬೆಳಗ್ಗೆ 10.30 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮಡಿಕೇರಿ ತಾಲೂಕು ಘಟಕದ ಜಾನಪದ ಪರಿಷತ್ ಅಧ್ಯಕ್ಷರಾದ ಎಚ್.ಟಿ.ಅನಿಲ್, ಕುಶಾಲನಗರ ಸಂಗೀತ ನೃತ್ಯ ಕಲಾಕೇಂದ್ರ ಹಿರಿಯ ಕಲಾವಿದರಾದ ಬಿ.ಸಿ.ಶಂಕರಯ್ಯ, ಭಾರತೀಯ ವಿದ್ಯಾಭವನ ವ್ಯವಸ್ಥಾಪಕರಾದ ಪಿ.ಪಿ. ಸೋಮಣ್ಣ, ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಳ್ಳಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.

ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ

ತುಮಕೂರು (ಕ.ವಾ.) ಡಿ.29: ರಸ್ತೆ ಅಪಘಾತಗಳು ಸಂಭವಿಸಿದ ಸಂಕಷ್ಟ ಪರಿಸ್ಥಿತಿಯಲ್ಲಿ ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ಕೊಡಿಸಲು ನೆರವಾಗುವವರಿಗೆ ಜೀವರಕ್ಷಕ ಪ್ರಶಸ್ತಿ ನೀಡಿ ಗೌರವಿಸಲು ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಮಬ ಕಲ್ಯಾಣಾಧಿಕಾರಿ ಡಾ: ರಂಗಸ್ವಾಮಿ ತಿಳಿಸಿದ್ದಾರೆ.

ಸಮೀಕ್ಷೆ ಪ್ರಕಾರ ಅಪಘಾತ ಹಾಗೂ ಸಾವುಗಳ ಸಂಖ್ಯೆಯಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದ್ದು, ಇದನ್ನು ತಗ್ಗಿಸುವ ಸಲುವಾಗಿ ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವ ವ್ಯಕ್ತಿಗಳು ಯಾವುದೇ ವಿಳಂಬವಿಲ್ಲದೆ ಗಾಯಾಳುಗಳನ್ನು ರಕ್ಷಿಸಲು ತಕ್ಷಣವೇ ಆಸ್ಪತ್ರೆಗಳಿಗೆ ಸಾಗಿಸುವುದು ಹಾಗೂ ಚಿಕಿತ್ಸೆ ಕೊಡಿಸಲು ನೆರವಾಗುವಂತೆ ಪ್ರೋತ್ಸಾಹಿಸಲು ಈ ಪ್ರಶಸ್ತಿ ನೀಡಲಾಗುತ್ತಿದೆ. ಯಾವುದೇ ಬಹುಮಾನ ಅಥವಾ ಲಾಭದ ನೀರಿಕ್ಷೆಗಳಿಲ್ಲದೆ, ವಿಶೇಷ ಸಂಬಂಧಗಳಿಲ್ಲದೆ ಸ್ವಯಂ ಪ್ರೇರಿತರಾಗಿ ಬಂದು ಗಾಯಾಳುಗಳಿಗೆ ಸಹಾಯ ಮಾಡುವ ದಯಾಳು ಹಾಗೂ ಉಪಕಾರಿ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

ಕರ್ನಾಟಕ ರಾಜ್ಯ ವ್ಯಾಪ್ತಿಯೊಳಗಿನ ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಶ್ರಮಿಸುವ ಯಾವುದೇ ವಯಸ್ಸಿನ, ಯಾವುದೇ ರಾಷ್ಟ್ರೀಯತೆಯ ವ್ಯಕ್ತಿ, ರಸ್ತೆ ಅಪಘಾತ ಗಾಯಾಳುಗಳಿಗೆ ನೆರವಾದ ಅಥವಾ ಜೀವ ಉಳಿಸಲು ಶ್ರಮಿಸಿದ ವ್ಯಕ್ತಿಯು ಪ್ರಶಸ್ತಿಗಾಗಿ ಸ್ವಯಂ ರೂಪದಲ್ಲಿ ಅಥವಾ ಸಾಕ್ಷಿಯಾದ ವ್ಯಕ್ತಿಯಿಂದ ನಾಮಕರಣಗೊಳ್ಳಬಹುದಾಗಿದೆ.

ಎಲ್ಲಾ ನಾಮಕರಣ ಅರ್ಜಿಗಳನ್ನು ಜಿಲ್ಲಾ ಜೀವರಕ್ಷಕ ಪ್ರಶಸ್ತಿ ಸಮಿತಿಯು ಪರೀಶೀಲಿಸಿ ಮಾರ್ಗಸೂಚಿಯ ಅನ್ವಯ ಮೌಲ್ಯಮಾಪನ ನಡೆಸಿ, ವ್ಯಕ್ತಿಗಳು ನೀಡಿದ ಸಹಾಯ ಹಾಗೂ ಸದರಿ ಸಹಾಯದಿಂದ ಉಂಟಾದ ಉತ್ತಮ ಪರಿಣಾಮ, ಮುಂತಾದವುಗಳನ್ನು ಆಧರಿಸಿ, ಪ್ರಶಸ್ತಿಗಳನ್ನು ಪ್ರಥಮ, ದ್ವೀತೀಯ ಹಾಗೂ ತೃತೀಯ ಎಂದು ವಿಭಾಗಿಸಿ ಘೋಷಿಸಲಾಗುತ್ತದೆ. ಪ್ರಥಮ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಹಾಗೂ ಇನ್ನುಳಿದ ಪ್ರಶಸ್ತಿಗಳನ್ನು ಸಂಬಂಧಿಸಿದ ಜಿಲ್ಲೆಗಳಲ್ಲಿ ಪ್ರಧಾನ ಮಾಡಲಾಗುವುದು. ಪ್ರಶಸ್ತಿಯನ್ನು ಪ್ರತಿ ವರ್ಷ ಎರಡು ಬಾರಿ ನೀಡಲಾಗುವುದು. ನಾಮಕರಣ ಅರ್ಜಿಗಳನ್ನು ಜನವರಿಯಿಂದ ಜುಲೈವರೆಗೆ ಹಾಗೂ ಆಗಸ್ಟ್‍ನಿಂದ ಡಿಸೆಂಬರ್ ವರೆಗೆ ಸ್ವೀಕರಿಸಲಾಗುವುದು. ಪ್ರಶಸ್ತಿಗಳನ್ನು ಪ್ರತಿ ವರ್ಷ ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆ ಮತ್ತು ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವುದು.

ಅರ್ಜಿಯನ್ನು 2017ರ ಜನವರಿ 04ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತುಮಕೂರು ಅಥವಾ ದೂರವಾಣಿ ಸಂಖ್ಯೆ-7349254649 ಅನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.

ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಕರೆ

ತುಮಕೂರು (ಕ.ವಾ.) ಡಿ.29: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪದವಿ/ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿ/ವೃತ್ತಿಪರ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಸರಾಸರಿ ಶೇಕಡ 75 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ವರ್ಗಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ “ಡಿ ದೇವರಾಜ ಅರಸು ಪ್ರತಿಭಾ ಪುರಸ್ಕಾರ” ನೀಡಲು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಯನ್ನು 2017ರ ಜನವರಿ 10 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್ www.backwardclasses.kar.nic.in ಅಥವಾ ಸಹಾಯವಾಣಿ ಸಂಖ್ಯೆ 080-65970004 ಅನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.