Government of Karnataka

Department of Information

Sunday 18/02/2018

ಜಿಲ್ಲಾ ವಾರ್ತೆ 30-12-2016

Date : ಶುಕ್ರವಾರ, ದಶಂಬರ 30th, 2016

ಆರ್.ಟಿ.ಇ.ಕಾಯ್ದೆಯಡಿ ಶಾಲೆಗಳಿಗೆ ಮಾನ್ಯತೆ ಕಡ್ಡಾಯ

ಕಲಬುರಗಿ,ಡಿ.30.(ಕ.ವಾ.)-ಆರ್.ಟಿ.ಇ. ಕಾಯ್ದೆಯಡಿಯಲ್ಲಿ ಶಾಲೆಗಳನ್ನು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ. ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರಿಂದ ಮಾನ್ಯತೆ ಪಡೆದುಕೊಳ್ಳದೇ ಶಾಲೆ ನಡೆಸುತ್ತಿದ್ದಲ್ಲಿ ಅಥವಾ ಉಪನಿರ್ದೇಶಕರು ಮಾನ್ಯತೆ ಹಿಂಪಡೆದುಕೊಂಡ ನಂತರವೂ ಶಾಲೆ ನಡೆಸುತ್ತಿದ್ದಲ್ಲಿ ಅಂತಹ ಶಾಲಾ ಆಡಳಿತ ಮಂಡಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009ರ ಸೆಕ್ಷನ್ 18(5) ರನ್ವಯ 1 ಲಕ್ಷ ರೂ.ಗಳ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ತಿಳಿಸಿದ್ದಾರೆ.

ಈ ಆದೇಶದ ವಿಫಲತೆಯ ಪ್ರತಿದಿನಕ್ಕೆ ಹತ್ತು ಸಾವಿರ ರೂ.ಗಳ ದಂಡ ವಿಧಿಸಬಹುದಾಗಿದೆ. ಕಲಬುರಗಿ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಎಲ್ಲ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲೆಗಳ ಆಡಳಿತ ಮಂಡಳಿಯವರು ಪೂರಕ ದಾಖಲೆಗಳೊಂದಿಗೆ ನಮೂನೆ-1ರಲ್ಲಿ ಅರ್ಜಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ 2017ರ ಜನವರಿ 5ರೊಳಗಾಗಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಮಕ್ಕಳ ಹಕ್ಕು ಕಾಯ್ದೆ 2009ರ ಸೆಕ್ಷನ್ 18(1)ರ ಪ್ರಕಾರ ಮತ್ತು ಕರ್ನಾಟಕ ಸರಕಾರದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮ 2012ರ 11ರಲ್ಲಿ ತಿಳಿಸಿದಂತೆ, ಸೆಕ್ಷನ್ 2(ಓ) (II)(Iಗಿ)ರಡಿಯಲ್ಲಿ ಬರುವ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಮೂನೆ-1ರಲ್ಲಿ ಅರ್ಜಿಯನ್ನು ಸಲ್ಲಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ (ಆಡಳಿತ) ಉಪ ನಿರ್ದೇಶಕರಿಂದ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ. ಅದೇ ರೀತಿ ನಮೂನೆ-3ರಲ್ಲಿ ಅರ್ಧ ವಾರ್ಷಿಕ ಅನುಸರಣಾ ವರದಿಯನ್ನು ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕ್ರೋಢೀಕರಿಸಿ ಮಾಹಿತಿ ಕೊಡುವ ಅಗತ್ಯವಿಲ್ಲ- ಡಾ. ಸುಚೇತನ ಸ್ವರೂಪ

ಕೊಪ್ಪಳ ಡಿ. 30 (ಕರ್ನಾಟಕ ವಾರ್ತೆ): ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ವಿವಿಧ ಮಾಹಿತಿಗಳನ್ನು ಹಲವು ಪ್ರಾಧಿಕಾರಗಳಿಂದ ಪಡೆದು, ಕ್ರೋಢೀಕರಿಸಿ ಕೊಡುವ ಅಗತ್ಯವಿಲ್ಲ ಎಂದು ರಾಜ್ಯ ಕರ್ನಾಟಕ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ಮಾಹಿತಿ ಆಯೋಗದ ವತಿಯಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳ ಜೊತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ಕಾರಿ ಕಚೇರಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಉದ್ದೇಶಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಅರ್ಜಿದಾರರು ಹಾಗೂ ಮಾಹಿತಿ ಅಧಿಕಾರಿಗಳಲ್ಲಿ ಕಾಯ್ದೆಯ ಬಗ್ಗೆ ಇನ್ನೂ ಕೆಲವು ಗೊಂದಲಗಳಿದ್ದು, ಇದರಿಂದಾಗಿ ಆಯೋಗದಲ್ಲಿ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಚಿಕ್ಕಬಳ್ಳಾಪುರ, ಬಳ್ಳಾರಿ, ಬೀದರ್, ಕಲಬುರಗಿ ಮುಂತಾದ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚು ಇವೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿ ಜಾರಿಗೆ ತಂದ ಕಾಯ್ದೆ ಇದಾಗಿರುವುದರಿಂದ, ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿ ತರುವುದು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಒಂದೆಡೆ ಕೆಲಸದ ಒತ್ತಡ ಹೆಚ್ಚುತ್ತಿದೆ, ಇನ್ನೊಂದೆಡೆ ಸಿಬ್ಬಂದಿ ಕೊರತೆಯೂ ಇದೆ. ಇದರ ನಡುವೆಯೂ ಕೆಲಸ ಸಮರ್ಪಕವಾಗಿ ಆಗಬೇಕಿದೆ. ಇಲಾಖೆಗಳ ಮೇಲ್ಮಟ್ಟದ ಕಚೇರಿಗಳಲ್ಲಿ ಅರ್ಜಿಗಳಿಗೆ ಮಾಹಿತಿ ವರ್ಗಾವಣೆ ಮಾಡುತ್ತಿಲ್ಲ, ಬದಲಿಗೆ ಜವಾಬ್ದಾರಿಯನ್ನು ಕೆಳ ಹಂತದ ಕಚೇರಿಗಳಿಗೆ ವರ್ಗಾಯಿಸುತ್ತಿರುವುದು ಸಮಂಜಸ ಕ್ರಮವಲ್ಲ. ಅರ್ಜಿದಾರರು ಇಡೀ ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೋರಿದಾಗ, ನಿಯಮ 6(3) ರಡಿ ವರ್ಗಾಯಿಸುವುದು ಕಂಡುಬರುತ್ತಿದ್ದು, ಆದರೆ ಇದು ಸರಿಯಾದ ಕ್ರಮವಲ್ಲ. ನಿಯಮದಡಿ, ಅರ್ಜಿಯನ್ನು ಒಂದಕ್ಕಿಂತ ಹೆಚ್ಚಿನ ಪ್ರಾಧಿಕಾರಗಳಿಗೆ ನಿಯಮ 6(3) ರಡಿ ವರ್ಗಾಯಿಸುವಂತಿಲ್ಲ. ಅರ್ಜಿದಾರರು ಸಂಬಂಧಿಸಿದ ಪ್ರಾಧಿಕಾರಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆ ಹೊರತು, ಒಂದೇ ಪ್ರಾಧಿಕಾರದವರು, ಮಾಹಿತಿಯನ್ನು ಕ್ರೋಢೀಕರಿಸಿ ಕೊಡುವಂತಿಲ್ಲ. ಕಚೇರಿಯಲ್ಲಿನ ಮಾಹಿತಿಯನ್ನು ಯಥಾವತ್ತಾಗಿ ಕೊಡಬೇಕೆ ಹೊರತು, ಹೊಸದಾಗಿ ಸೃಷ್ಟಿಮಾಡಿ, ಅಥವಾ ಸಂಗ್ರಹಿಸಿ ಕೊಡುವ ಅಗತ್ಯವಿಲ್ಲ. ಬೇರೆ ಯಾವುದೋ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿ ಇನ್ಯಾವುದೋ ಇಲಾಖೆಯ ಕಚೇರಿಗೆ ಅರ್ಜಿ ಕೊಡುವುದು ಸಹ ಕಂಡುಬರುತ್ತಿದ್ದು, ಇದೂ ಸಹ ಸರಿಯಾದ ಕ್ರಮವಲ್ಲ. ಸರ್ಕಾರಿ ನೌಕರರ ಸೇವಾ ಪುಸ್ತಕದಲ್ಲಿನ ಮಾಹಿತಿ, ನೌಕರರ ಚರ ಮತ್ತು ಸ್ಥಿರಾಸ್ತಿ ವಿವರ ಅಥವಾ ಜಾತಿ ಪ್ರಮಾಣಪತ್ರ, ವ್ಯಾಸಂಗ ಪ್ರಮಾಣ ಪತ್ರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೊಡುವಂತಿಲ್ಲ ಎಂದು ಸುಪ್ರಿಂಕೋರ್ಟ್ ಈಗಾಗಲೆ ಸ್ಪಷ್ಟಪಡಿಸಿದೆ. ಆದರೂ ಇಂತಹ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಕಂಡುಬರುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯು ಸಾರ್ವಜನಿಕ ಹಿತಾಸಕ್ತಿಗಾಗಿ ಜಾರಿಗೊಂಡ ಉತ್ತಮ ಕಾಯ್ದೆಯಾಗಿದ್ದು, ಕೆಲವರಿಗೆ ಇದೇ ಜೀವನಕ್ಕೆ ಮಾರ್ಗೋಪಾಯವಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇರುವ ವ್ಯವಸ್ಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸುಧಾರಿಸಬೇಕಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕಾಯ್ದೆಯನ್ನು ಸರಿಯಾಗಿ ತಿಳಿದುಕೊಂಡು, ಅರ್ಜಿದಾರರನ್ನು ಅನಗತ್ಯವಾಗಿ ಅಲೆದಾಡಿಸದೆ, ಲಭ್ಯವಿರುವ ಮಾಹಿತಿಯನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸಿದರೆ, ಅಧಿಕಾರಿ/ಸಿಬ್ಬಂದಿಗಳು ತೊಂದರೆಗೆ ಒಳಗಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಹೇಳಿದರು.

ಸಂವಾದ ಕಾರ್ಯಕ್ರಮಕ್ಕೂ ಪೂರ್ವದಲ್ಲಿ, ಆಯೋಗದ ವತಿಯಿಂದ ನೋಟೀಸ್ ಜಾರಿಯಾದ, ಕೊಪ್ಪಳ ಜಿಲ್ಲೆಗೆ ಸಂಬಂಧಿತ ಇಲಾಖಾ ಪ್ರಕರಣಗಳ ವಿಚಾರಣೆಯನ್ನು, ಆಯಾ ಅಧಿಕಾರಿಗಳು-ಅರ್ಜಿದಾರರ ಸಮಕ್ಷಮ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ನಡೆಸಿದರು. ಒಟ್ಟು 52 ಪ್ರಕರಣಗಳ ವಿಚಾರಣೆ ನಡೆದು, 26 ಅರ್ಜಿಗಳು ಇದೇ ಸಂದರ್ಭದಲ್ಲಿ ವಿಲೇವಾರಿಗೊಂಡವು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಕಲಚೇತನರ ಬಸ್ ಪಾಸ್ ನವೀಕರಣ: ಅವಧಿ ವಿಸ್ತರಣೆ

ಕೊಪ್ಪಳ ಡಿ. 30 :(ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೊಪ್ಪಳ ವಿಭಾಗವು ವಿಕಲಚೇತನರಿಗೆ 2016 ನೇ ಸಾಲಿನಲ್ಲಿ ನೀಡಿರುವ ರಿಯಾಯಿತಿ ದರದ ಬಸ್ ಪಾಸ್‍ಗಳ ನವೀಕರಣ ಅವಧಿಯನ್ನು ಫೆ.28 ರವರೆಗೆ ವಿಸ್ತರಿಸಿದೆ.

2016 ನೇ ಸಾಲಿನಲ್ಲಿ ವಿತರಿಸಲಾಗಿರುವ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‍ಗಳನ್ನು 2017 ರ ಫೆ.28 ರವರೆಗೆ ಪ್ರಯಾಣಿಸಲು ಅನುಮತಿಸಲಾಗಿದೆ. ವಿಕಲಚೇತನರಿಗೆ 2016 ರ ಡಿ.31 ರವರೆಗೆ ಮಾನ್ಯತೆ ಇರುವ ಬಸ್‍ಪಾಸ್‍ಗಳನ್ನು ವಿತರಿಸಲಾಗಿತ್ತು. ನವೀಕರಣಕ್ಕೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ, ಇದೀಗ ಬಸ್‍ಪಾಸ್ ನವೀಕರಿಸಿಕೊಳ್ಳಲು ಫೆ.28 ರವರೆಗೆ ಅವಧಿ ವಿಸ್ತರಿಸಲಾಗಿದೆ. ನವೀಕರಣ ಅಭ್ಯರ್ಥಿಗಳು ರೂ.660 ಗಳನ್ನು ನಗದು ರೂಪದಲ್ಲಿ (ಡಿ.ಡಿ.ಅವಶ್ಯವಿರುವುದಿಲ್ಲ) ಪಾವತಿಸಿ ಹಾಗೂ ಪಾಸ್‍ಗಳನ್ನು ನವೀಕರಿಸಿಕೊಳ್ಳಲು ಗುರುತಿನ ಚೀಟಿ ಪಡೆದಿರುವ ಇಲಾಖೆಯಿಂದ, ಗುರುತಿನ ಚೀಟಿ ನೀಡಿರುವ ಕುರಿತು ದೃಢೀಕರಣ ಪಡೆದು, ದಾಖಲೆಗಳನ್ನು ಕಡ್ಡಾಯವಾಗಿ ನೀಡಿ, ಜ.1 ರಿಂದ ಪಾಸ್‍ಗಳನ್ನು ನವೀಕರಿಸಿಕೊಳ್ಳಬಹುದು ಎಂದು ಈ.ಕ.ರ.ಸಾ.ಸಂಸ್ಥೆ, ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲಾ ಕಾಲೇಜು ಹಂತದಲ್ಲಿ ಜಾನಪದ ವಿಷಯ ಪಠ್ಯವಾಗಲಿ; ಶಂಕರಯ್ಯ

ಮಡಿಕೇರಿ ಡಿ.30(ಕರ್ನಾಟಕ ವಾರ್ತೆ):-ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತಾಗಲು ಶಾಲಾ ಕಾಲೇಜು ಹಂತದಲ್ಲಿ ಜಾನಪದವನ್ನು ಕಲಿಕಾ ವಿಷಯವಾಗಿ ಅಳವಡಿಸುವಂತಾಗಬೇಕು ಎಂದು ಬಿ.ಸಿ.ಶಂಕರಯ್ಯ ಅವರು ಸಲಹೆ ಮಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶ ವಿದೇಶಗಳಲ್ಲಿ ಸ್ಥಳೀಯ ಸಂಸ್ಕೃತಿ, ಸಾಹಿತ್ಯಗಳನ್ನು ಒಳಗೊಂಡ ಜಾನಪದ ಕಲೆಗಳು ಹೆಚ್ಚು ಪ್ರಸಿದ್ದಿ ಪಡೆಯುತ್ತಿದೆ. ಹಾಗಾಗಿ ಜನಪದ ಕಲೆಗಳ ಅಧ್ಯಯನ ಕೂಡ ಅಗತ್ಯವಾಗಿದೆ. ಆದ್ದರಿಂದ ಶಾಲಾ ಕಾಲೇಜುಗಳ ಹಂತದಲ್ಲಿ ಕಲಿಕಾ ವಿಷಯವಾಗಿ ಜಾನಪದ ಕಲೆಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ಬಿ.ಸಿ.ಶಂಕರಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾನಪದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಜಿಲ್ಲೆಯಲ್ಲಿಯೂ ಜಾನಪದ ಆಚಾರ ವಿಚಾರಗಳು ಪ್ರಖ್ಯಾತಿವಾಗಿವೆ. ಇಲ್ಲಿಯ ಸಂಸ್ಕೃತಿಯ ವೇóಷ-ಭೂಷಣ, ನೃತ್ಯಗಳು ವಿಶಿಷ್ಟವಾಗಿದ್ದು ಇಂತಹ ಜಾನಪದ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸುವಂತಾಗಬೇಕು ಎಂದು ಅವರು ತಿಳಿಸಿದರು.

ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಕಲೆ, ಸಾಹಿತ್ಯ, ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ. ಕಲೆ, ಸಾಹಿತ್ಯ, ಪರಂಪರೆಗಳು ಆಡಳಿತದ ಅವಿಭಾಜ್ಯ ಅಂಗವಾಗಿದ್ದು, ಕಲೆ, ಸಂಸ್ಕೃತಿಗೆ ಒತ್ತು ನೀಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಟಿ.ವಿ.ಮೊಬೈಲ್‍ಗಳ ಬಳಕೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಇದರಿಂದ ಯುವ ಪ್ರತಿಭೆಗಳಲ್ಲಿ ಅಡಗಿರುವ ಜಾನಪದ ಕಲೆಗಳನ್ನು ಪರಿಚಯಿಸಲು ಸಾದ್ಯವಿಲ್ಲದಂತಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದು ಕಾವೇರಮ್ಮ ಸೋಮಣ್ಣ ಅವರು ಹೇಳಿದರು.

ಜಾನಪದ ಪರಿಷತ್ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಚ್.ಟಿ.ಅನಿಲ್ ಅವರು ಮಾತನಾಡಿ ಸಾಂಸ್ಕøತಿಕವಾಗಿ ಕೊಡಗನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕಿದೆ. ಆ ದಿಸೆಯಲ್ಲಿ ಜಾನಪದ ಕಲೆಗಳ ಅನಾವರಣ ಆಗಬೇಕಿದೆ ಎಂದರು.

ಜಿಲ್ಲೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷೆ ಅಕಾಡೆಮಿಗಳು ಸಾಂಸ್ಕøತಿಕವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಜಿಲ್ಲಾ ಕೇಂದ್ರದಲ್ಲಿ ಉತ್ತಮ ಕಲಾ ಭವನವಿದ್ದಲ್ಲಿ ಮತ್ತಷ್ಟು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕಲಾಶಿಬಿರಗಳು, ಜಾನಪದ ಕಲಾವಿದರನ್ನು ಗುರುತಿಸುವುದು, ತರಬೇತಿಯನ್ನು ನೀಡುವುದು ಹಾಗೂ ಜಾನಪದ ಉತ್ಸವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಜಿಲ್ಲೆಯಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲಾ-ಸಂಸ್ಕೃತಿಗಳಿಗೆ ಜೀವ ತುಂಬುವ ಕೆಲಸ ಆಗಲಿದೆ ಎಂದು ಅವರು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿಗಳು ವಾಟ್ಸ್ ಆಫ್, ಪೇಸ್‍ಬುಕ್ ನೋಡುವಲ್ಲಿಯೇ ತಮ್ಮ ಕಾಲಹರಣ ಮಾಡುತ್ತಿದ್ದಾರೆ. ಜನಪದ ಕಲೆಗಳ ಬಗ್ಗೆಯು ಹೆಚ್ಚು ಆಸಕ್ತಿ ವಹಿಸಿ ಜನಪದವನ್ನು ಉಳಿಸಿಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಅಗತ್ಯವಾಗಿದೆ. ಮಡಿಕೇರಿಯಲ್ಲಿ ಕಲಾ ಭವನ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಅಗತ್ಯ ಸಹಕಾರಗಳು ಇಲಾಖೆ ಮಟ್ಟದಿಂದ ಆಗಬೇಕು ಎಂದು ಎಚ್.ಟಿ.ಅನಿಲ್ ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಮಾತನಾಡಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ನಾಟಕ ಮತ್ತು ಜನಪದ ನೃತ್ಯ ಕಲೆಗಳು ಸಹಕಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಾಟಕ, ಕಲೆ, ಸಂಗೀತ, ನೃತ್ಯ ಕಲೆಗಳು ಹೀಗೆ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದು, ಅವುಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆಯನ್ನು ಸರ್ಕಾರ ಕಲ್ಪಿಸಿದೆ ಎಂದರು.

ಭಾರತೀಯ ವಿದ್ಯಾಭವನ ವ್ಯವಸ್ಥಾಪಕರಾದ ಪಿ.ಪಿ.ಸೋಮಣ್ಣ ಜಾನಪದ ನೃತ್ಯ-ನಾಟಕಗಳ ಮುಖಾಂತರ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಅವರು ಸ್ವಾಗತಿಸಿದರು. ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ ಜಿಲ್ಲಾ ಸಂಚಾಲಕರಾದ ಇ.ರಾಜು ನಿರೂಪಿಸಿ, ವಂದಿಸಿದರು.

ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿರಾಜಪೇಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರಿಂದ ಸಿ.ಎಸ್.ಪೂಣಚ್ಚ ಅವರ ನಿರ್ದೆಶನದಲ್ಲಿ ಜಾಗೃತಿ ನಾಟಕ ಹಾಗೂ ಎಂ.ಎನ್. ವನಿತ್ ಕುಮಾರ್ ನಿರ್ದೇಶನ ಕುಡಿಯ ನೃತ್ಯ ಪ್ರದರ್ಶನ, ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಅಮ್ಮೆಣಿಚಂಡ ಪ್ರವೀಣ್ ಅವರ ನಿರ್ದೇಶನದಲ್ಲಿ ಸುಂದರತಾಣ ನಾಟಕ ಹಾಗೂ ಸಿ.ಎಸ್. ಪೂಣಚ್ಚ ನಿರ್ದೇಶನದಲ್ಲಿ ಕತ್ತಿಯಾಟ್, ಸುಂಟಿಕೊಪ್ಪ ಸ.ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ ಡಾ. ಸುಕನ್ಯಾ ಎಸ್.ಡಿ ಅವರ ನಿರ್ದೇಶನದಲ್ಲಿ ಕಫನ್ ನಾಟಕ ಹಾಗೂ ಜಯಶ್ರಿ ಎಸ್ ಅವರ ನಿರ್ದೇಶನದಲ್ಲಿ ಜಾನಪದ ನೃತ್ಯ ಹಾಗೂ ಕೂಡಿಗೆ ಸ.ಪ.ಪೂ ಕಾಲೇಜು ವಿದ್ಯಾರ್ಥಿಗಳಿಂದ ಪ್ರಕಾಶ್ ಬಿ. ನಿರ್ದೇಶನದ ಆಷಾಢಭೂತಿ ನಾಟಕ ಮತ್ತು ಎಂ.ಸಿ.ರಮೇಶ್ ಅವರ ನಿರ್ದೇಶನದಲ್ಲಿ ಜಾನಪದ ನೃತ್ಯ ನೆರವೇರಿತು.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ರಂಗಾಯಣ, ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎರಡನೇ ದಿನವಾದ ಡಿಸೆಂಬರ್ 31 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

ವಸತಿಗೆ ಸರ್ಕಾರದಿಂದ ಜಾಗ ಖರೀದಿ

ಮಡಿಕೇರಿ ಡಿ.30(ಕರ್ನಾಟಕ ವಾರ್ತೆ):-ಅಮ್ಮತಿ ಹೋಬಳಿ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮಗಳಲ್ಲಿ ವಸತಿ ಉದ್ದೇಶಕ್ಕೆ ಜಾಗ ಖರೀದಿಸಲು ಸರ್ಕಾರ ಉದ್ದೇಶಿಸಿದೆ. ಆ ದಿಸೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಸತಿ ಸೌಕರ್ಯಕ್ಕೆ ಸೂಕ್ತವಾದ ಜಮೀನನ್ನು ಸರ್ಕಾರಕ್ಕೆ ಮಾರಾಟ ಮಾಡಲು ಆಸಕ್ತಿ ಇರುವವರು ಜಮೀನಿನ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಕಂದಾಯ ಪರಿವೀಕ್ಷಕರು, ನಾಡ ಕಚೇರಿ, ಅಮ್ಮತ್ತಿ ಹೋಬಳಿ ಇವರನ್ನು ಸಂಪರ್ಕಿಸಲು ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರು ಕೋರಿದ್ದಾರೆ.

ಪರೀಕ್ಷಾ ಪೂರ್ವ ತರಬೇತಿ

ಮಡಿಕೇರಿ ಡಿ.29(ಕರ್ನಾಟಕ ವಾರ್ತೆ):-ಕರ್ನಾಟಕ ಲೋಕಸೇವಾ ಆಯೋಗ ವತಿಯಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ನಡೆಸುವ ಸಾಮಾನ್ಯ ಲಿಖಿತ ಪರೀಕ್ಷೆಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಯು 2017ರ ಜನವರಿ, 8 ರಿಂದ 21 ರವರೆಗೆ ನಗರದಲ್ಲಿ ನಡೆಯಲಿದೆ.

ಪರೀಕ್ಷಾ ಪೂರ್ವ ತರಬೇತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಿಗಧಿಪಡಿಸಿರುವ ಪಠ್ಯಕ್ರಮಕ್ಕೆ ಅನುಗುಣವಾಗಿ ಗುಣಮಟ್ಟದ ತರಬೇತಿಯನ್ನು ನೀಡಲಾಗುವುದು. ಪರೀಕ್ಷಾ ಪೂರ್ವ ತರಬೇತಿ ಪಡೆಯಲಿಚ್ಛಿಸುವ, ಅಭ್ಯರ್ಥಿಗಳು ತಮ್ಮ ಹೆಸರನ್ನು ಖುದ್ದಾಗಿ ಅಥವಾ ಅಂಚೆ ಕಾರ್ಡಿನ ಮುಖಾಂತರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸುವಂತೆ ಜಿಲ್ಲಾ ಉದ್ಯೋಗ ವಿನಮಯಾಧಿಕಾರಿ ಸಿ.ಜಗನ್ನಾಥ ಅವರು ತಿಳಿಸಿದ್ದಾರೆ.

ಹೋಂ ಸ್ಟೇ ನೋಂದಣಿ ಮಾಡಲು ಅವಧಿ ವಿಸ್ತರಣೆ

ಮಡಿಕೇರಿ ಡಿ.29(ಕರ್ನಾಟಕ ವಾರ್ತೆ):-ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕದಲ್ಲಿರುವ ಹೋಂ ಸ್ಟೇಗಳನ್ನು ಆನ್‍ಲೈನ್ ನೋಂದಣಿ ಮಾಡಿಸಲು ಸಾಧ್ಯವಾಗುವಂತೆ ಹೊಸದಾಗಿ ತಿತಿತಿ.ಞಚಿಡಿಟಿಚಿಣಚಿಞಚಿಣouಡಿism.oಡಿg ಆನ್‍ಲೈನ್ ಪೋರ್ಟಲ್ ಅನಾವರಣಗೊಳಿಸಿದೆ.
ನವೆಂಬರ್, 15 ರೊಳಗೆ ಪತ್ರಿಕಾ ಪ್ರಕಟಣೆ ಹೊರಡಿಸುವುದರ ಮೂಲಕ ಈ ಪೋರ್ಟಲ್‍ನಲ್ಲಿ ರಾಜ್ಯದಲ್ಲಿರುವ ಎಲ್ಲಾ ಹೋಂ ಸ್ಟೇಗಳು 2016ರ ಡಿಸೆಂಬರ್, 01 ರೊಳಗೆ ನೋಂದಣಿ ಮಾಡಿಸಿಕೊಳ್ಳಲು ತಿಳಿಸಲಾಗಿತ್ತು. ಬಹುತೇಕ ಹೋಂಸ್ಟೇ ಮಾಲೀಕರುಗಳ ಅಸೋಸಿಯೇಶನ್ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಾಲಮಿತಿಯನ್ನು ವಿಸ್ತರಿಸಲು ಕೋರಿದ್ದು, 2017ರ ಜನವರಿ 26 ರವರೆಗೆ ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಪ್ರವಾಸಿಗರಿಗೆ ಉತ್ತಮ, ಸುರಕ್ಷಿತ ಹೋಂಸ್ಟೇ ವಾತಾವರಣ ನಿರ್ಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಕರಿಸಲು ರಾಜ್ಯದಲ್ಲಿರುವ ಎಲ್ಲಾ ಹೋಂಸ್ಟೇ ಮಾಲೀಕರನ್ನು ಕೋರಲಾಗಿದೆ. ಜನವರಿ, 26 ರೊಳಗೆ ಹೋಂಸ್ಟೇ ನೋಂದಣಿ ಮಾಡಿಸದೇ ಕಾರ್ಯ ನಿರ್ವಹಿಸುವ ಹೋಂಸ್ಟೇ ಮಾಲೀಕರನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಡಿ.29(ಕರ್ನಾಟಕ ವಾರ್ತೆ):-ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2016 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಗೌರವ ಪ್ರಶಸ್ತಿ ಯೋಜನೆ:-ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2016ನೇ ಸಾಲಿನ ‘ಗೌರವ ಪ್ರಶಸ್ತಿ’ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದು, ಅರೆ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ ಮತ್ತು ಅಧ್ಯಯನ ಮುಂತಾದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರಿಗೆ 2016 ನೇ ಸಾಲಿನ ‘ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಅರ್ಜಿಗಳನ್ನು ಸಾಧಕರು ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸ್ಸುಮಾಡಬಹುದು. ಪ್ರಶಸ್ತಿಗೆ ಅರ್ಹರಾಗಿರುವವರ ಕುರಿತಾಗಿ ಹೆಚ್ಚಿನ ಅಥವಾ ವಿಶೇಷ ಮಾಹಿತಿಗಳಿದ್ದಲ್ಲಿ ಅದನ್ನು ಅಕಾಡೆಮಿಗೆ ಒದಗಿಸಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಜೊತೆ ಎಲ್ಲಾ ಮಾಹಿತಿಗಳನ್ನು ಅಕಾಡೆಮಿಯ ನಿಗದಿತ ಅರ್ಜಿ ನಮೂನೆಯಲ್ಲಿಯೇ ಕಳುಹಿಸಬೇಕು. ಇದಕ್ಕೆ ಸಂಬಂಧಿಸಿ ನಿಗದಿತ ಅರ್ಜಿ ನಮೂನೆಯನ್ನು ಅಕಾಡೆಮಿಯ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಇತ್ತೀಚಿನ ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಯೊಂದಿಗೆ ಕೊನೆ ದಿನಾಂಕದ ಮೊದಲು ತಲುಪುವಂತೆ ಅಂಚೆ ಮೂಲಕ ಅಥವಾ ಖುದ್ದಾಗಿ ಬಂದು ಸಲ್ಲಿಸಬಹುದು.

ಪುಸ್ತಕ ಬಹುಮಾನ ಯೋಜನೆ:-ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಲೇಖಕರು ಅಥವಾ ಪ್ರಕಾಶಕರು ಅರ್ಜಿ ಸಲ್ಲಿಸಬಹುದಾಗಿದೆ. ದಿನಾಂಕ 01-01-2016 ರಿಂದ 31.12.2016 ರ ಅವಧಿಯ ಮಧ್ಯೆ ಪ್ರಕಟಗೊಂಡ ಪುಸ್ತಕಗಳನ್ನು 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪರಿಗಣಿಸಲು ಅವಕಾಶವಿರುತ್ತದೆ. ಹಿಂದಿನ ವರ್ಷಗಳಲ್ಲಿ ಒಮ್ಮೆ ಪುಸ್ತಕ ಬಹುಮಾನ ಪಡೆದ ಲೇಖಕರ ಕೃತಿಗಳನ್ನು ಮುಂದಿನ ಮೂರು ವರ್ಷಗಳಿಗೆ ಪರಿಗಣಿಸಲಾಗುವುದಿಲ್ಲ. ಪುಸ್ತಕ ಬಹುಮಾನ ಯೋಜನೆಯಡಿ, ಹೆಚ್ಚು ಸ್ವೀಕರಿಸುವ ಪುಸ್ತಕದ ಮೂರು ಪ್ರಕಾರಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. ಪುಸ್ತಕಗಳ ತಲಾ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
ಇತರೆ ಭಾಷೆಯಿಂದ ಅರೆಭಾಷೆಗೆ ಅನುವಾದಗೊಂಡ ಭಾಷಾಂತರ/ಅನುವಾದ ಕೃತಿಗಳು, ಅರೆಭಾಷೆ ಕವನ ಸಂಕಲನ, ಅರೆಭಾಷೆ ಕಥಾ ಸಂಕಲನ, ಅರೆಭಾಷೆ ಕಾದಂಬರಿ, ಅರೆಭಾಷೆ ನಾಟಕ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ಗೌರವ ಪ್ರಶಸ್ತಿ-2016 ಯೋಜನೆ” ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಮೇಲೆ ನಮೂದಿಸಲಾದ ಪ್ರಕಾರಗಳಲ್ಲಿ 2016 ರಲ್ಲಿ ಪ್ರಕಟವಾದ ಪುಸ್ತಕಗಳ ನಾಲ್ಕು ಪ್ರತಿಗಳನ್ನು ಲಕೋಟೆಯ ಮೇಲೆ “ಪುಸ್ತಕ ಬಹುಮಾನ ಯೋಜನೆ 2016” ಎಂದು ಬರೆದು, ಅರ್ಜಿ ವಿವರಗಳನ್ನು ಅಧ್ಯಕ್ಷರು/ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ-ಕೃಪ ಕಟ್ಟಡ, 1ನೇ ಮಹಡಿ,ರಾಜಾಸೀಟ್ ರಸ್ತೆ, ಮಡಿಕೇರಿ-571 201. ಈ ವಿಳಾಸಕ್ಕೆ ಕಳುಹಿಸಿಕೊಡುವುದು. ಅರ್ಜಿ ಸಲ್ಲಿಸಲು 2017ರ ಜನವರಿ, 31 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಕ್ಕೆ ಅಕಾಡೆಮಿಯನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ತಿಳಿಸಿದ್ದಾರೆ.

ಜನವರಿ 4 ರಿಂದ ಉದರ ಶಸ್ತ್ರ ಚಿಕಿತ್ಸಾ ಶಿಬಿರ

ಮಂಡ್ಯ, ಡಿಸೆಂಬರ್ 30 (ಕರ್ನಾಟಕ ವಾರ್ತೆ):- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನವರಿ 4 ರಿಂದ 25 ರವರೆಗೆ ಮಂಡ್ಯ ಜಿಲ್ಲೆಯ ವಿವಿಧೆಡೆ ಉದರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 4 ರಂದು ಬೆಳಿಗ್ಗೆ 10 ಗಂಟೆಗೆ ನಾಗಮಂಗಲ ತಾಲ್ಲೂಕು ಆಸ್ಪತ್ರೆ, ಜನವರಿ 6 ರಂದು ಬೆಳಿಗ್ಗೆ 9.30 ಗಂಟೆಗೆ ಕೆ.ಆರ್.ಪೇಟೆ ತಾಲ್ಲೂಕು ಆಸ್ಪತ್ರೆ, ಜನವರಿ 7 ರಂದು ಬೆಳಿಗ್ಗೆ 10 ಗಂಟೆಗೆ ಕೆರಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಜನವರಿ 13 ರಂದು ಬೆಳಿಗ್ಗೆ 10 ಗಂಟೆಗೆ ಅರಕೆರೆ ಸಮುದಾಯ ಆರೋಗ್ಯ ಕೇಂದ್ರ, ಜನವರಿ 16 ರಂದು ಬೆಳಿಗ್ಗೆ 9:30 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಆಸ್ಪತ್ರೆ, ಜನವರಿ 17 ರಂದು ಬೆಳಿಗ್ಗೆ 9:30 ಗಂಟೆಗೆ ಕ್ಯಾತಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಜನವರಿ 18 ರಂದು ಬೆಳಿಗ್ಗೆ 10 ಗಂಟೆಗೆ ನಾಗಮಂಗಲ ತಾಲ್ಲೂಕು ಆಸ್ಪತ್ರೆ, ಜನವರಿ 20 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಆರ್.ಪೇಟೆ ತಾಲ್ಲೂಕು ಆಸ್ಪತ್ರೆ, ಜನವರಿ 21 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರ, ಜನವರಿ 24 ರಂದು ಬೆಳಿಗ್ಗೆ 10 ಗಂಟೆಗೆ ಗೆಜ್ಜಲಗೆರೆÀ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜನವರಿ 25 ರಂದು ಬೆಳಿಗ್ಗೆ 10 ಗಂಟೆಗೆ ಕಿರುಗಾವಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉದರ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಂಡುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.