Government of Karnataka

Department of Information

Sunday 18/02/2018

ಜಿಲ್ಲಾ ವಾರ್ತೆ 31-12-2016

Date : ಶನಿವಾರ, ದಶಂಬರ 31st, 2016

ತೋಟಗಾರಿಕೆ ಬೆಳೆ ವಿಮೆ ಯೋಜನೆಯ ವಿಮಾ ಕಂತು ಪಾವತಿಸುವ ಕೊನೆಯ ದಿನಾಂಕ ವಿಸ್ತರಣೆ

ಬೆಳಗಾವಿ, ಡಿಸೆಂಬರ್ 31 (ಕರ್ನಾಟಕ ವಾರ್ತೆ): 2016-17ನೇ ಸಾಲಿನ ಹಿಂಗಾರು ಹಂಗಾಮಿಗೆ ಜಿಲ್ಲೆಯ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕಾಗವಾಡ, ತೇಲಸಂಗ ಹೋಬಳಿಗಳಿಗೆ ಈರುಳ್ಳಿ (ನೀರಾವರಿ), ಬೈಲಹೊಂಗಲ ತಾಲ್ಲೂಕಿನ ಬೈಲಹೊಂಗಲ, ನೇಸರಗಿ, ಕಿತ್ತೂರ ಹೋಬಳಿಗಳಿಗೆ ಟೊಮ್ಯಾಟೊ, ಬೆಳಗಾವಿ ತಾಲ್ಲೂಕಿನ ಹಿರೇಬಾಗೆವಾಡಿ ಮತ್ತು ಬೆಳಗಾವಿ ಹೋಬಳಿಗಳಿಗೆ ಟೊಮ್ಯಾಟೊ ಹಾಗೂ ಉಚಗಾಂವ ಹೋಬಳಿಗೆ ಆಲೂಗಡ್ಡೆ (ನೀರಾವರಿ), ಸವದತ್ತಿ ತಾಲ್ಲೂಕಿನ ಮುರಗೋಡ ಹೋಬಳಿಗೆ ಟೊಮ್ಯಾಟೊ ಬೆಳೆಗಳಿಗೆ ವಿಮಾ ಅಧಿಸೂಚನೆ ಹೊರಡಿಸಿದ್ದು, ಸಂಬಂಧಪಟ್ಟ ಹೋಬಳಿಗಳ ರೈತರು ಸಂಬಂಧಿಸಿದ ಅಧಿಸೂಚಿತ ಬೆಳೆಗಳಿಗೆ ವಿಮೆ ಪಾವತಿ ಮಾಡಲು ಕೊನೆಯ ದಿನಾಂಕವನ್ನು : 10.01.2017 ರವರೆಗೆ ವಿಸ್ತರಿಸಲಾಗಿರುತ್ತದೆ. ಆಲೂಗಡ್ಡೆ (ನೀರಾವರಿ) ಬೆಳೆಗೆ ರೂ. 6700/-, ಟೊಮ್ಯಾಟೊ ರೂ. 5650/- ಹಾಗೂ ಈರುಳ್ಳಿ (ನೀರಾವರಿ) ರೂ. 3550/-ರಂತೆ ಪ್ರತಿ ಹೆಕ್ಟೇರ್‍ಗೆ ವಿಮಾ ಕಂತಿನ ಮೊತ್ತವಾಗಿರುತ್ತದೆ. ಜಿ.ಪಂ, ಬೆಳಗಾವಿಯ ತೋಟಗಾರಿಕೆ ಉಪನಿರ್ದೇಶಕರು ರೈತರು ಈ ಯೋಜನೆಯ ಸದುಪಯೋಗ ಪಡೆಯಲು ಮತ್ತು ವಿಮಾ ಕಂತು ಪಾವತಿಸಲು ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಹೋಬಳಿ/ ತಾಲ್ಲೂಕುಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ

ಶಿವಮೊಗ್ಗ, ಡಿಸೆಂಬರ್ 31 (ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆಯು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ 18ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ, ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಉದ್ದೇಶಿಸಿದೆ.

ಹೃದಯ ಸಂಬಂಧಿ ಕಾಯಿಲೆ, ಹುಟ್ಟು ಕಿವುಡುತನ, ನರರೋಗ, ಹುಟ್ಟು ಕಿವುಡುತನ, ನರರೋಗ, ಹುಟ್ಟುಕಣ್ಣಿನ ಪೊರೆ, ಮೂತ್ರಪಿಂಡದ ಸಮಸ್ಯೆ, ಕ್ಯಾನ್ಸರ್, ಡೌನ್‍ಸಿಂಡ್ರೋಮ್ ಮತ್ತು ಸೀಳುತುಟಿ ಮುಂತಾದ ಜನ್ಮಜಾತ ಸಮಸ್ಯೆಗಳನ್ನು ಹೊಂದಿರುವವರಿಗೆ, ರಕ್ತ ಹೀನತೆ, ವಿಟಮಿನ್-ಎ ಕೊರತೆ, ವಿಟಮಿನ್-ಡಿ ಕೊರತೆ, ಅಪೌಷ್ಠಿಕತೆ, ಸ್ಥೂಲಕಾಯ ಮತ್ತು ಗಳಲೆ ಸೇರಿದಂತೆ ಪೋಷಣಾ ನ್ಯೂನತೆಗಳಿರುವವರಿಗೆ, ಚರ್ಮಕಾಯಿಲೆ, ಕಿವಿ ಸೋರುವಿಕೆ, ದಮ್ಮು, ಹಲ್ಲುಹುಳುಕು ಮತ್ತು ಅಪಸ್ಮಾರ ಸೇರಿದಂತೆ ಮಕ್ಕಳಲ್ಲಿನ ಸಾಮಾನ್ಯ ಕಾಯಿಲೆಗಳನ್ನು ಹೊಂದಿರುವವರು ಹಾಗೂ ಕಣ್ಣಿನ ಸಮಸ್ಯೆ, ಕಿವಿಯ ಸಮಸ್ಯೆ, ತೊದಲುವಿಕೆ, ನರದ ತೊಂದರೆಗಳು ಮತ್ತು ಕಲಿಯುವಿಕೆಯ ತೊಂದರೆ ಸೇರಿದಂತೆ ಕುಂಠಿತ ಬೆಳವಣಿಗೆ ಹೊಂದಿರುವವರು ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.

ಅರ್ಹರಾದ ಸೂಚಿತ ಕಾಯಿಲೆಗಳಿಂದ ಬಳಲುತ್ತಿರುವವರನ್ನು ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಅಥವಾ ಸುವರ್ಣ ಆರೋಗ್ಯ ಸುರಕ್ಷಾಟ್ರಸ್ಟ್ ಹಾಗೂ ಯಶಸ್ವಿನಿ ಯೋಜನೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುವುದು ಹಾಗೂ ಚಿಕಿತ್ಸೆಯನ್ನು ನೀಡಲಾಗುವುದು. ಪೌಷ್ಠಿಕಾಂಶ ಕೊರತೆಯಿಂದ ನರಳುವ ಮಕ್ಕಳಿಗೆ ಸರ್ಕಾರಿ ಪೌಷ್ಠಿಕ ಆಹಾರ ಪುನರ್ವಸತಿ ಕೇಂದ್ರದ ಮುಖಾಂತರ ಪೋಷಕಾಂಶಯುಕ್ತ ಔಷಧೋಪಚಾರ ನೀಡಲಾಗುವುದು.

ಈ ಸಂಬಂಧ ಈಗಾಗಲೇ ಪ್ರತಿ ತಾಲೂಕಿನಲ್ಲಿ ಇಬ್ಬರು ವೈದ್ಯಾಧಿಕಾರಿಗಳು, ಒಬ್ಬರು ಶುಶ್ರೂಷಕರು, ಒಬ್ಬರು ನೇತ್ರಾಧಿಕಾರಿಗಳನ್ನೊಳಗೊಂಡಂತೆ ತಂಡವನ್ನು ರಚಿಸಿ ಪ್ರತಿ ತಾಲೂಕಿಗೆ 02 ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಗಳು, ಸೀಳುತುಟಿ, ಕಣ್ಣು, ವಕ್ರಪಾದ, ಹರ್ನಿಯಾ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿದೆ.

ಸಾರ್ವಜನಿಕರು ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ಕುರಿತ ವಿವರಗಳಿಗಾಗಿ ತಾಲೂಕು ಆರೋಗ್ಯಾಧಿಕಾರಿಗಳು, ಆರ್.ಬಿ.ಎಸ್.ಕೆ.ವೈದ್ಯಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ, ಕಿರಿಯ ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-222382, 270777, 271282ನ್ನು ಸಂಪರ್ಕಿಸಬಹುದಾಗಿದೆ.

ಸಹಕಾರ ಸಚಿವರ ಪ್ರವಾಸ

ಚಿಕ್ಕಮಗಳೂರು,ಡಿ.31:– ಮಾನ್ಯ ಸಹಕಾರ ಮತ್ತು ಸಕ್ಕರೆ ಸಚಿವರಾದ ಹೆಚ್.ಎಸ್ ಮಹದೇವ ಪ್ರಸಾದ್ ರವರು ಜನವರಿ 3 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಜನವರಿ 2 ರಂದು ಸಂಜೆ 8 ಗಂಟೆಗೆ ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಜ.3 ರಂದು ಬೆಳಿಗ್ಗೆ 9 ಗಂಟೆಗೆ ಚಿಕ್ಕಮಗಳೂರಿನಿಂದ ಹೊರಟು, 10.30 ಕ್ಕೆ ಕೊಪ್ಪದ ಟ್ರಾನ್ಸ್‍ಪೋರ್ಟ್ ಕೋ-ಆಪರೇಟಿವ್ ಸೊಸೈಟಿ ಲಿ, ಸಹಕಾರ ಸಾರಿಗೆ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಧ್ಯಾಹ್ನ 2 ಗಂಟೆಗೆ ಕೊಪ್ಪದಿಂದ ನಿರ್ಗಮಿಸಲಿದ್ದಾರೆ.

ಪ್ರೋತ್ಸಾಹಧನಕ್ಕಾಗಿ ಅರ್ಜಿ

ಚಿಕ್ಕಮಗಳೂರು,ಡಿ.31:- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿರುವ ಕ್ರೀಡಾ ಕೂಟದಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತ ಕ್ರೀಡಾ ಪಟುಗಳಿಗೆ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಯುವ ಜನೋತ್ಸವ / ಯುವ ಜನಮೇಳದಲ್ಲಿ ಭಾಗವಹಿಸಿ ವಿಜೇತರಾದ ಕಲಾ ಸ್ಪರ್ಧಿಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಕ್ರೀಡಾ ಪಟುಗಳು ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜ್ಯೋತಿ ನಗರ, ಚಿಕ್ಕಮಗಳೂರು ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಜನವರಿ 16 ರೊಳಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜ್ಯೋತಿ ನಗರ, ಚಿಕ್ಕಮಗಳೂರು ಅಥವಾ ದೂ.ಸಂ: 08262-220324 ಅನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

ಕನ್ನಡ ಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳ ವಾಪಸಾತಿಗೆ ಕ್ರಮ-ಪ್ರೊ.ಎಸ್.ಜಿ.ಸಿದ್ದರಾಮಯ್ಯ

ತುಮಕೂರು (ಕ.ವಾ.) ಡಿ.31: ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕಾಗಲೀ, ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ವಿಚಾರವಾಗಲೀ, ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಜಾರಿಗಾಗಲೀ ಇನ್ನಿತರೆ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಮೇಲೆ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಲು ಪಟ್ಟಿಯೊಂದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿಂದು ನಡೆದ ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕನ್ನಡ ಚಿಂತಕರ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಕುರಿತು ಸರೋಜಿನಿ ಮಹಿಷಿ ಪರಿಷ್ಕøತ ವರದಿಯನ್ನು ಇನ್ನು ಹದಿನೈದು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ವರದಿಯನ್ನು ಕಡ್ಡಾಯ ಅನುಷ್ಠಾನಕ್ಕಾಗಿ ಹಾಗೂ ಐಟಿ/ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಗಡಿ ಮತ್ತು ಗ್ರಾಮಾಂತರ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಕನ್ನಡ ಶಾಲೆಗಳಲ್ಲಿ ಹಾಜರಾತಿ ಕುಂಠಿತವಾಗುತ್ತಿರುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಶಿಕ್ಷಕಿಯೊಬ್ಬರು ಅಧ್ಯಕ್ಷರ ಗಮನ ಸೆಳೆದರು. ಮತ್ತೊಬ್ಬರು ಸರ್ಕಾರದ ಜನಪರ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಇನ್ನಿತರ ಭಾಗ್ಯಗಳ ಫಲಾನುಭವಿಗಳಾಗಿದ್ದರೂ ಅವರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಾರೆ ಇದರಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಕುತ್ತಾಗಿದೆ ಎಂದರು.

ಕನ್ನಡ ಶಾಲೆಗಳ ಉಳಿವಿಗೆ ಕಡ್ಡಾಯವಾಗಿ ಪ್ರೌಢಶಾಲೆತನಕ ಕನ್ನಡ ಮಾಧ್ಯಮವೇ ಇರಲಿ, ಆದರೆ ಇಂಗ್ಲೀಷ್ ಒಂದು ಭಾಷೆಯಾಗಿ ಮಾತ್ರ ಕಲಿಸುವಂತಹ ನೀತಿ ನಮ್ಮಲ್ಲಿ ಜಾರಿಗೆ ಬರಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ತಿಳಿಸಿದರು.

ರಾಜ್ಯ ಸರ್ಕಾರ ಕಛೇರಿ, ನಿಗಮ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು, ಅಧಿಕಾರಿಗಳ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಸರ್ಕಾರ ಕಾನೂನು ತರಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಅಧ್ಯಕ್ಷರನ್ನು ಕೋರಿದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮುರುಳೀಧರ್, ಸದಸ್ಯರಾದ ದಿನೇಶ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬಸವರಾಜಪ್ಪ ಆಪಿನಕಟ್ಟೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ಮಂಜುನಾಥ್, ಪತ್ರಕರ್ತರಾದ ಉಗಮಶ್ರೀನಿವಾಸ್ ಮುಂತಾದವರು ಹಾಜರಿದ್ದರು.

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ:-ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇಂದು ನಡೆದ ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ಆಡಳಿತ ಭಾಷೆಯಾಗಿ ಪೂರ್ಣ ಜಾರಿಗೊಳಿಸಲು ಈಗಿರುವ ಎಲ್ಲಾ ಕಛೇರಿಗಳ ತಂತ್ರಾಂಶವನ್ನು ಬದಲಾಯಿಸಿಕೊಳ್ಳಲು ಪ್ರಾಧಿಕಾರವು ಎಲ್ಲರಿಗೂ ಪತ್ರ ಬರೆದಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೆಲವು ಇಲಾಖೆಗಳು ಪ್ರಾಧಿಕಾರಕ್ಕೆ ಕಳುಹಿಸಿರುವ ಮಾಸಿಕ ವರದಿಗಳು ಸಹ ಆಂಗ್ಲಭಾಷೆಯಲ್ಲಿದ್ದು, ಇದು ಅಕ್ಷಮ್ಯ ಅಪರಾಧವಾಗಿದ್ದು, ಸದರಿ ಇಲಾಖೆಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಇದು ಮುಂದುವರೆದಲ್ಲಿ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಅವರು ನೀಡಿದರು.

ಕನ್ನಡದಲ್ಲಿ ಎಂಫಿಲ್ ಮತ್ತು ಪಿಎಚ್‍ಡಿಗಳನ್ನು ಮಾಡುವವರು ತಮ್ಮ ಸಂಶೋಧನಾ ಪ್ರಬಂಧವನ್ನು ಇಂಗ್ಲೀಷಿನಲ್ಲಿಯೇ ಬರೆಯಬೇಕೆಂಬ ವಿಶ್ವವಿದ್ಯಾನಿಲಯಗಳ ನಿಯಮವನ್ನು ಬದಲಾಯಿಸಿ ಕನ್ನಡದಲ್ಲಿಯೂ ಸಂಶೋಧನಾ ಪ್ರಬಂಧಗಳನ್ನು ಬರೆಯಲು ಅವಕಾಶ ಕಲ್ಪಿಸಬೇಕೆಂದು ವಿಶ್ವವಿದ್ಯಾನಿಲಯಗಳ ಕುಲಪತಿಗಳೊಂದಿಗೆ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದ್ದು, ಈ ಬಗ್ಗೆ ಕೂಲಂಕುಷ ವರದಿಗಳನ್ನು ಜಿಲ್ಲಾಡಳಿತಕ್ಕೆ ಹಾಗೂ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಿದ್ದರೂ ಕೆಲವು ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವ ಕಾರಣ ಜಿಲ್ಲೆಯ ಶಾಲೆಯೊಂದರಲ್ಲಿ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ಮಾರಣಾಂತಿಕ ತೊಂದರೆಯಾದ ಬಗ್ಗೆ ಪ್ರಸ್ತಾಪಿಸಿದ ಅಧ್ಯಕ್ಷರು, ಇನ್ನು ಮುಂದೆ ಈ ರೀತಿಯಾಗದಂತೆ ಹಾಗೂ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಶಾಂತಾರಾಮ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ್, ಸದಸ್ಯ ದಿನೇಶ್, ಮುಂತಾದವರು ಹಾಜರಿದ್ದರು.