Government of Karnataka

Department of Information

Saturday 21/10/2017

District News 20-01-2017

Date : Friday, January 20th, 2017

ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

ಉಡುಪಿ, ಜನವರಿ 20 (ಕರ್ನಾಟಕ ವಾರ್ತೆ):-ಹಿಂದೂಸ್ತಾನ ಏರಾನಾಟಿಕ್ಸ್ ಲಿಮಿಟೆಡ್, ಬೆಂಗಳೂರು(H.A.L Bamgalore), ಇವರಿಂದ ಐಟಿಐ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಅಕ್ಟೋಬರ್ 2017ನೇ ತಂಡದ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆ ಜೊತೆಗೆ ಫಿಟ್ಟರ್, ಟರ್ನರ್, ಇಲೆಕ್ಟ್ರಿಶಿಯನ್ ಮತ್ತು ಮಶಿನಿಸ್ಟ್, ಕೋಪಾ, ವೆಲ್ಡರ್ ಇತ್ಯಾದಿ ಟ್ರೇಡ್‍ಗಳಲ್ಲಿ ಐ.ಟಿ.ಐ ವಿದ್ಯಾರ್ಹತೆಯನ್ನು ತೇರ್ಗಡೆಯಾಧವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪಾಸಾ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಸಲ್ಲಿಸಬಯಸುವವರು ಪಿಯುಸಿ ಮತ್ತು ಐಟಿಐ ಪರೀಕ್ಷೆಗಳನ್ನು ತೇರ್ಗಡೆಯಾಗಿರಬೇಕಾಗಿರುತ್ತದೆ.

ಉಡುಪಿ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ತಮ್ಮ ಎಸ್‍ಎಸ್‍ಎಲ್‍ಸಿ ಮತ್ತು ಐ.ಟಿ.ಐ (ಎನ್‍ಸಿವಿಟಿ ಮಾತ್ರ) ಅಂಕಪಟ್ಟಿಗಳ ಮತ್ತು ಅನ್ವಯವಾಗುವ ಮೀಸಲಾತಿ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿಗಳ ಸಹಿತವಾಗಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಉಡುಪಿ ಇವರನ್ನು ಸಂಪರ್ಕಿಸಿ ನಿಗದಿತವಾದ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯದಿನಾಂಕವಾಗಿದ್ದು, ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಸಲ್ಲಿಸ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಪ್ರೆಂಟೀಸ್ ಪೋರ್ಟಲ್ www.apprenticeship.gov.inಟಿ ನಲ್ಲಿ ಕಡ್ಡಾಯವಾಗಿ ತಮ್ಮ ಹೆಸರನ್ನು ರಿಜಿಸ್ಟ್ರೇಶನ್ ಮಾಡಿರತಕ್ಕದ್ದು ಹಾಗೂ ಅರ್ಜಿ ನಮೂನೆಯಲ್ಲಿ ಈ ರಿಜಿಸ್ಟ್ರೇಶನ್ ನಂಬರ್‍ನ್ನು ತಪ್ಪದೇ ನಮೂದಿಸಿರತಕ್ಕದ್ದು.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ದೂರವಾಣಿ.0820-2574869 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಕಷ್ಟಕ್ಕೊಳಗಾದ ಮಕ್ಕಳ ಕುರಿತು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಲು ಮನವಿ

ಕೊಪ್ಪಳ ಜ. 20 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಕಾರ್ಯ ಮಾಡುತ್ತಿದ್ದು ಯಾವುದೇ ಬಗೆಯ ಸಂಕಷ್ಟಕ್ಕೆ ಸಿಲುಕಿದ ಮಕ್ಕಳು ಕಂಡುಬಂದಲ್ಲ್ಲಿ ಮಕ್ಕಳ ಸಹಾಯವಾಣಿ-1098 ಕ್ಕೆ ಉಚಿತ ಕರೆ ಮಾಡಿ ಮಾಹಿತಿ ನೀಡುವಂತೆ ಮಕ್ಕಳ ಸಹಾಯವಾಣಿ ತಂಡದ ಸದಸ್ಯ ರಾಘವೇಂದ್ರ ಕುಲಕರ್ಣಿ ಮನವಿ ಮಾಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಇವರ ಸಹಯೋಗದಲ್ಲಿ ಗಂಗಾವತಿ ತಾಲೂಕು ಸಾಣಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಶುಕ್ರವಾರದಂದು ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಾಲಕಾರ್ಮಿಕ, ಚಿಂದಿ ಆರಿಸುವ ಮಕ್ಕಳು, ಬಿಕ್ಷಾಟನೆ ಮಕ್ಕಳು ಮತ್ತು ಯಾವುದೇ ತೊಂದರೆಗೆ ಅಥವಾ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳು ಕಂಡುಬಂದಲ್ಲಿ, ಮಕ್ಕಳ ಸಹಾಯವಾಣಿ-1098 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಇದೊಂದು ಉಚಿತ ಕರೆಯಾಗಿದ್ದು ದಿನದ 24*7 ರೀತಿಯಲ್ಲಿ ಕಾರ್ಯ ಮಾಡುತ್ತಿದೆ. ಅಂತಹ ಮಕ್ಕಳನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗುವುದು ಇದರ ಸದುಪಯೋಗ ಆಗಬೇಕು. ಸಂಕಷ್ಟದಿಂದ ಮಕ್ಕಳನ್ನು ಪಾರು ಮಾಡಲು ಎಲ್ಲ ಸಾರ್ವಜನಿಕರು ಇಂತಹ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ರಾಘವೇಂದ್ರ ಕುಲಕರ್ಣಿ ಮನವಿ ಮಾಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿ ಬಡಿಗೇರ ಮಾತನಾಡಿ ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಮತ್ತು ಅಭಿವೃದ್ಧಿ ಹೊಂದುವ ಹಕ್ಕು, ಮತ್ತು ಭಾಗವಹಿಸುವ ಹಕ್ಕುಗಳನ್ನು ಮಕ್ಕಳು ತಮ್ಮ ಬಾಲ್ಯದಲ್ಲಿ ಅನುಭವಿಸುವಂತಾಗಬೇಕು ಎಂದು ತಿಳಿಸಿದರು. ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕ ಹೆಚ್ಚಾಗುತ್ತಿದ್ದು, ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹೆಚ್ಚಿನ ಜವಾಬ್ದಾರಿ ಮೂಲತಃ ಕುಟುಂಬದ್ದು. ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಪಡಿಸಬಹುದಾಗಿದೆ ಎಂದು ತಿಳಿಸಿದರು. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ, 21 ವರ್ಷದೊಳಗಿನ ಗಂಡು ಮಕ್ಕಳಿಗೆ ಬಾಲ್ಯವಿವಾಹ ಮಾಡುವುದು ಅಪರಾಧ. ಒಂದು ವೇಳೆ ಮಾಡಿದಲ್ಲಿ ಕಾನೂನಿನಡಿ 1 ಲಕ್ಷ ರೂ ದಂಡ ಅಥವಾ 2 ವರ್ಷ ಜೈಲು ಶಿಕ್ಷ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು. ಮಕ್ಕಳ ರಕ್ಷಣೆಗಾಗಿ ಸರ್ಕಾರವು ಹಲವಾರು ಕಾನೂನು ಮತ್ತು ಯೋಜನೆಗಳನ್ನು ಜಾರಿಗೊಳಿಸಿದೆ ಜಿಲ್ಲೆಯಲ್ಲಿ ಗುರುತಿಸಿದ ತೀವ್ರ ಸಂಕಷ್ಠದಲ್ಲಿರುವ ಎಚ್.ಐ.ವಿ ಭಾದಿತ ಹಾಗೂ ಸೋಂಕಿತ ಮಕ್ಕಳಿಗೆ ಆರೈಕೆ ಮತ್ತು ಪೋಷಣೆಗಾಗಿ ರೂ 650 ರಿಂದ ರೂ 750 ರವರೆಗೆ ಪ್ರತಿ ತಿಂಗಳು ಮಗುವಿಗೆ 18 ವರ್ಷ ಪೂರ್ಣಗೊಳ್ಳುವವರೆಗೂ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. . ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ ಸಂಪರ್ಕಿಸಬಹುದಾಗಿದೆ ಎಂದರು.

ಮುಖ್ಯ ಶಿಕ್ಷಕ ಸೈಯದ್ ಮೆಹಬೂಬ ಹುಸೇನ್ ಮಾತನಾಡಿ, ಇತ್ತೀಚೆಗೆ ಮಕ್ಕಳ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರಲಾಗಿದೆ ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಿ ಎಂದು ಹೇಳಿದರು. ಸಹ ಶಿಕ್ಷಕ ಕೊಟ್ರೇಶ ನಿರೂಪಿಸಿದರು. ಅನ್ನಪೂರ್ಣ ವಂದಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಪರಿಷ್ಕøತಗೊಂಡಿದೆ.

ಪರಿಷ್ಕøತ ಪ್ರವಾಸದನ್ವಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜ. 23 ರಂದು ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಳಿಗ್ಗೆ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು. ನಂತರ ಜಿಲ್ಲೆಯಲ್ಲಿನ ಬರ ಪರಿಹಾರ ಕಾಮಗಾರಿಗಳ ಪರಿವೀಕ್ಷಣಾ ಪ್ರವಾಸ ಕೈಗೊಂಡು, ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು. ಜ. 24 ರಂದು ಮಂತ್ರಿಗಳು ಜಿಲ್ಲೆಯಲ್ಲಿನ ಬರ ಪರಿಹಾರ ಕಾಮಗಾರಿಗಳ ಪರಿವೀಕ್ಷಣಾ ಪ್ರವಾಸ ಕೈಗೊಂಡು, ವಾಸ್ತವ್ಯ ಮಾಡುವರು. ಜ. 25 ರಂದು ಬೆಳಿಗ್ಗೆ 10 ಗಂಟೆಗೆ ಸಾರಿಗೆ ಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬೆ. 11 ಗಂಟೆಗೆ ಬರ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ, ವಾಸ್ತವ್ಯ ಮಾಡುವರು. ಜ. 26 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ಮಧ್ಯಾಹ್ನ 02 ಗಂಟೆಗೆ ಇಟಗಿ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮ. ಮ. 04 ಗಂಟೆಗೆ ಬೆಣಕಲ್ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯ ಶಂಕುಸ್ಥಾಪನೆ. ಸಂಜೆ 05 ಗಂಟೆಗೆ ಗುತ್ತೂರು ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಯಾತ್ರಿ ನಿವಾಸ ಉದ್ಘಾಟನೆ, 5-30 ಗಂಟೆಗೆ ವಣಗೇರಿ, 6-15 ಗಂಟೆಗೆ ಬೇವೂರು, ರಾತ್ರಿ 07 ಗಂಟೆಗೆ ಹುಣಸಿಹಾಳ ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಂತ್ರಿಗಳು ಅಂದು ರಾತ್ರಿ 8 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಕೊಪ್ಪಳ : ನೀರು ಸರಬರಾಜು ಕುರಿತು ಸಹಾಯವಾಣಿ ಪ್ರಾರಂಭ

ಕೊಪ್ಪಳ ಜ. 20 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಹಾಯವಾಣಿ ಸೌಲಭ್ಯ ಪ್ರಾರಂಭಿಸಲಾಗಿದೆ.

ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ದೂರುಗಳನ್ನು ಸಹಾಯವಾಣಿ ಸಂ: 08539-231165 ಕ್ಕೆ ಕರೆ ಮಾಡಿ, ದೂರು ದಾಖಲಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣ್ಣು ಬೆಳೆಗಳ ತರಬೇತಿ ಶಿಬಿರ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ಇವರಿಂದ ಮಾವು, ಬಾಳೆ, ಪಪ್ಪಾಯ, ಪೇರು ಮತ್ತು ಚಿಕ್ಕು(ಸಪೋಟಾ) ಹಣ್ಣು ಬೆಳೆಗಳ ಕುರಿತು ಉಚಿತ ತರಬೇತಿ ಶಿಬಿರವನ್ನು ಫೆಬ್ರುವರಿ ತಿಂಗಳಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.

ಹಣ್ಣು ಬೆಳೆಗಳ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಸಂಸ್ಕರಣಾ ಕ್ರಮಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ಮೂರು ದಿನಗಳ ಕಾಲ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಇತರರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಜ.31 ರೊಳಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-587103 ಮೊ-9482630790 ಇಲ್ಲಿ ನೋಂದಾಯಿಸಬಹುದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎಸ್ ಹಾಲಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಫೋನ್-ಇನ್ ಕಾರ್ಯಕ್ರಮ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ಫೋನ್-ಇನ್ ಕಾರ್ಯಕ್ರಮವನ್ನು ಜ.20 ರಿಂದ ಮಾರ್ಚ್ 25 ರವರಗೆ ಜಿಲ್ಲಾ ಹಂತದಲ್ಲಿ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗೆ ವಿಷಯವಾರು ಕಲಿಕೆಯಲ್ಲಿ ಉಂಟಾಗುವ ಕಠಿಣ ಅಂಶಗಳು ಹಾಗೂ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳೇ ನೇರವಾಗಿ ಕಚೇರಿಯ ದೂರವಾಣಿ ಸಂಖ್ಯೆ 08539-221303 ಅಥವಾ ಜಿಲ್ಲಾ ಕಚೇರಿಯಲ್ಲಿ ವ್ಯವಸ್ಥೆಗೊಳಿಸಲಾಗಿರುವ ವಿಷಯವಾರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಂಡು ಕಲಿಕೆಯನ್ನು ಉತ್ತಮ ಪಡಿಸಿಕೊಳ್ಳಬಹುದು.

ಫೋನ್-ಇನ್ ಕಾರ್ಯಕ್ರಮದ ವಿವರ ಹಾಗೂ ವಿಷಯವಾರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಯ ವಿವರ ಇಂತಿದೆ: ಜ.20 ರಂದು ಕನ್ನಡ (8971418313), ಜ.21 ರಂದು ಗಣಿತ (9448988588), ಫೆ.03 ರಂದು ವಿಜ್ಞಾನ (9886383275), ಫೆ.04 ರಂದು ಸಮಾಜ ವಿಜ್ಞಾನ (8762983361), ಫೆ.09 ರಂದು ಇಂಗ್ಲೀಷ್ (8749045865), ಫೆ.10 ರಂದು ಹಿಂದಿ (9972699073), ಫೆ.17 ರಂದು ಕನ್ನಡ, ಫೆ.18 ರಂದು ಗಣಿತ, ಫೆ.23 ರಂದು ವಿಜ್ಞಾನ, ಫೆ.25 ರಂದು ಸಮಾಜ ವಿಜ್ಞಾನ, ಮಾ.03 ರಂದು ಇಂಗ್ಲೀಷ್, ಮಾ.04 ರಂದು ಹಿಂದಿ, ಮಾ.09 ರಂದು ಗಣಿತ, ಮಾ.10 ರಂದು ಕನ್ನಡ, ಮಾ.17 ರಂದು ವಿಜ್ಞಾನ, ಮಾ.18 ರಂದು ಸಮಾಜ ವಿಜ್ಞಾನ, ಮಾ.24 ರಂದು ಇಂಗ್ಲಿಷ್, ಮಾ.25 ರಂದು ಹಿಂದಿ ವಿಷಯಗಳ ಕುರಿತು ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ.

ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಎಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ವಿಷಯ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಹಾಗೂ ಜಿಲ್ಲೆಯ ಎಲ್ಲಾ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕು ಹಂತದಲ್ಲಿ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿ ಕಚೇರಿಗೆ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.21 ರಂದು ಕೊಪ್ಪಳದಲ್ಲಿ ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಕಾರ್ಯಕ್ರಮ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜಿನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಬೃಹತ್ ಜಾಗೃತಿ ಕಾರ್ಯಕ್ರಮ ಜ.21 ರಂದು ಬೆಳಿಗ್ಗೆ 9 ಗಂಟೆಗೆ ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ದಶರಥ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಅಧ್ಯಕ್ಷತೆ ವಹಿಸುವರು. ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ತ್ಯಾಗರಾಜನ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ಜಿ ರಾಮತ್ನಾಳ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಾಮರಾವ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ ವಿ, ಕೊಪ್ಪಳ ತಹಸೀಲ್ದಾರ ಗುರು ಬಸವರಾಜ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ತರಬೇತಿ ಸಂಯೋಜಕ ಹರೀಶ್ ಜೋಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್ ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಜ.21 ರಂದು ಕೊಪ್ಪಳ ತಾಲೂಕ ಮಟ್ಟದ ಯುವಜನ ಮೇಳ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಂದೇ ಮಾತರಂ ಯುವ ಗ್ರಾಮೀಣಾಭಿವೃದ್ಧಿ ಸಾಂಸ್ಕøತಿಕ ಮತ್ತು ಶಿಕ್ಷಣ ಸೇವಾ ಸಂಸ್ಥೆ, ಬುಡಶೆಟ್ನಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕ ಮಟ್ಟದ ಯುವಜನ ಮೇಳ ಜ.21 ರಂದು ಬೆಳಿಗ್ಗೆ 10 ಗಂಟೆಗೆ ಬುಡಶೆಟ್ನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿ.ಪಂ ಅಧ್ಯಕ್ಷ ಎಸ್.ಬಿ ನಾಗರಳ್ಳಿ ಅಧ್ಯಕ್ಷತೆ ವಹಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ತಾ.ಪಂ ಉಪಾಧ್ಯಕ್ಷೆ ಶಂಕ್ರಮ್ಮ ಅಮರೇಶ ಉಪಲಾಪೂರ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಆಗಲಿ ಬಿಡಿ ಹೆಣ್ಣಿಗೆ ಹದಿನೆಂಟು, ಈಗಲೇ ಏಕೆ ತಾಳಿಯ ನಂಟು

ಜನವರಿ 21 ರಂದು ಸಮಯ ಬೆಳಗ್ಗೆ 9 ಗಂಟೆಗೆ ಗೌರಿಬಿದನೂರಿನ ಬೆಂಗಳೂರು-ಹಿಂದೂಪುರ ರಸ್ತೆಯಲ್ಲಿರುವ ಶನಿಮಹಾತ್ಮ ದೇವಸ್ಥಾನದ ಎದುರಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿ.ಆರ್.ಸಿ) ಮೈದಾನದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಸೂಚನೆಯಂತೆ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸೇರಿ ಬೃಹತ್ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿ-ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಾಗಬೇಕೆಂದು ಗೌರಿಬಿದನೂರಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ತಿಳಿಸಿದ್ದಾರೆ.

ಹನಿ ನೀರಾವರಿಗೆ ಸಹಾಯಧನ

ತೋಟಗಾರಿಕೆ ಇಲಾಖೆಯಿಂದ 2016-17 ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳಿಗೆ ಸೂಕ್ಷ್ಮ ಹನಿ ನೀರಾವರಿ (ಡ್ರಿಪ್) ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಕಾರ್ಯಾದೇಶ ನೀಡುವ ಪ್ರಕ್ರಿಯ ಚಾಲನೆಯಲ್ಲಿದ್ದು ಜಿಲ್ಲಾದ್ಯಂತ ಈಗಾಗಲೇ ಹನಿ ನೀರಾವರಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಕಾರ್ಯಾದೇಶ ನೀಡಲಾಗುತ್ತಿದ್ದು, ಆರ್ಥಿಕ ವರ್ಷ ಅಂತ್ಯಕ್ಕೆ ಬಂದಿರುವುದರಿಂದ ರೈತರು ಬಾಂದವರು ಈ ಕೂಡಲೇ ತಾಕಿನಲ್ಲಿ ಹನಿ ನೀರಾವರಿ ಅಳವಡಿಸಿ ಪೂರ್ಣ ಕಡತವನ್ನು ಕಛೇರಿಗೆ ಸಹಾಯಧನಕ್ಕೆ ಸಲ್ಲಿಸಲು ಹಾಗೂ ಹೊಸದಾಗಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತ ರೈತರು ಅವಶ್ಯಕ ದಾಖಲಾತಿಗಳೊಂದಿಗೆ ಕಾರ್ಯಾದೇಶ ಪಡೆಯಲು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸಹಾಯಧನಕ್ಕೆ ಆಧಾರ್ ಸೀಡಿಂಗ್ ಬ್ಯಾಂಕ್ ಖಾತೆ ಕಡ್ಡಾಯ

ಚಿಕ್ಕಬಳ್ಳಾಪುರ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ 2016-17ನೇ ಸಾಲಿನಡಿ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳನ್ನು ಅಷ್ಠಾನಗೊಳಿಸುತ್ತಿದ್ದು, ಈಗಾಗಲೇ ಇಲಾಖೆಯ ಎಲ್ಲಾ ಯೋಜನೆಗಳಡಿ ಸಹಾಯಧನವನ್ನು ನೇರವಾಗಿ ಫಲಾನುಭವಿ ಖಾತೆಗೆ ವರ್ಗಾಯಿಸುತ್ತಿದ್ದು, ಸರ್ಕಾರವು ಆಧಾರ್ ಸೀಡಿಂಗ್ ಬ್ಯಾಂಕ್ ಖಾತೆಯನ್ನು ಕಡ್ಡಾಯಗೊಳಿಸಿರುವುದರಿಂದ, ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ರೈತರು ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ವಿತರಿಸಿರುವ ಆಧಾರ್ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಕಡ್ಡಾಯವಾಗಿ ಸೀಡಿಂಗ್ ಮಾಡಿಸಿ ವಿವರಗಳನ್ನು ದಿನಾಂಕ ಜನವರಿ 31 ರೊಳಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗಳಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ವಿಧಾನ ಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ ಪ್ರವಾಸ

ಧಾರವಾಡ ( ಕರ್ನಾಟಕ ವಾರ್ತೆ) ಜ.20: ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರೂ, ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಉಪಸಮಿತಿ ಅಧ್ಯಕ್ಷರು ಆಗಿರುವ ಐವಾನ್ ಡಿಸೋಜಾ ಅವರು, ಶನಿವಾರ ಜ.21 ರಂದು ಸಂಜೆ ಧಾರವಾಡಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ರವಿವಾರ ಜ.22ರ ಬೆಳಿಗ್ಗೆ 11 ಗಂಟೆಗೆ ಧಾರವಾಡ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸುವರು.

ಆಹಾರ ಮೇಳ : ಮಳಿಗೆಗಳಿಗೆ ಅರ್ಜಿ ಆಹ್ವಾನ

ಧಾರವಾಡ ( ಕರ್ನಾಟಕ ವಾರ್ತೆ) ಜ.20 ಬರುವ ಫೆ.3 ರಿಂದ 10 ರವರೆಗೆ ರಾಜ್ಯ ಓಲಂಪಿಕ್ ಕ್ರೀಡಾಕೂಟದ ಅಂಗವಾಗಿ, ಆಹಾರ ಮೇಳವನ್ನು ಆಯೋಜಿಸಲಾಗಿದೆ. ಧಾರವಾಡದ ಕಲಾಭವನ ಆವರಣದಲ್ಲಿ 20 ಹಾಗೂ ಆರ್ ಎನ್ ಶೆಟ್ಟಿ ಕ್ರೀಡಾಂಗಣದ ಮುಖ್ಯದ್ವಾರದ ಬಳಿ 25 ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗಗಳ ಸಿರಿಧಾನ್ಯಗಳಿಂದ ತಯಾರಿಸಿದ ಸ್ವಾದಿಷ್ಟ ತಿನಿಸುಗಳು, ಚಾಟ್ಸ್‍ಗಳು ಹಾಗೂ ಇತರ ಪದಾರ್ಥಗಳನ್ನು ತಯಾರಿಸುವ ಮಳಿಗೆಗಳಿಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲಾ ಆಡಳಿತದಿಂದ 10×10 ಅಡಿ ಅಳತೆಯ ಮಳಿಗೆ ಹಾಗೂ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಅರ್ಜಿ ನಮೂನೆಯನ್ನು ಧಾರವಾಡ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ 500 ರೂ.ಗಳ ಡಿಡಿ ಸಲ್ಲಿಸಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ 0836-244594 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ರಾಜ್ಯ ಓಲಂಪಿಕ್ ಕ್ರೀಡಾಕೂಟದ ಆಹಾರ ಸಮಿತಿ ಸಂಚಾಲಕ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ಸದಾಶಿವ ಮರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಶಿಬಿರ 70 ಜನರ ಆರೋಗ್ಯ ತಪಾಸಣೆ

ಧಾರವಾಡ ( ಕರ್ನಾಟಕ ವಾರ್ತೆ) ಜ.20 ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಅಸಂಕ್ರಾಮಿಕ ರೋಗಗಳ ( ಎನ್.ಸಿ.ಡಿ) ಘಟಕಗಳ ಸಂಯುಕ್ತ ಆಶ್ರಯದಲ್ಲಿಂದು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ, ರಕ್ತದೊತ್ತಡ ಹಾಗೂ ಕ್ಯಾನ್ಸರ ತಪಾಸಣೆ ಶಿಬಿರ ಜರುಗಿತು. ಇಂದಿನ ಶಿಬಿರದಲ್ಲಿ ಈ ರೋಗಗಳಿಗೆ ಸಂಬಂಧಿಸಿದಂತೆ 70 ಜನರ ಆರೋಗ್ಯ ತಪಾಸಣೆ ಮಾಡಿ ವೈದ್ಯಕೀಯ ಸಲಹೆಗಳನ್ನು ಹಾಗೂ ಔಷಧಿಗಳನ್ನು ನೀಡಲಾಯಿತು. ಜಿಲ್ಲಾ ಅಸಾಂಕ್ರಮಿಕ ರೋಗಗಳ ಘಟಕದ ತಜ್ಞ ವೈದ್ಯರಾದ ಡಾ.ಶಶಿಧರ ಕಟಕೋಳ ರೋಗಿಗಳನ್ನು ತಪಾಸಣೆ ಮಾಡಿ, ವೈದ್ಯಕೀಯ ಸಲಹೆಗಳನ್ನು ನೀಡಿದರು. ಒಂದು ದಿನದ ಶಿಬಿರದಲ್ಲಿ 54 ಮಧುಮೇಹ, ರಕ್ತದೊತ್ತಡ ಹಾಗೂ 16 ಜನರ ಕ್ಯಾನ್ಸರ್ ರೋಗ ಸಂಬಂಧಿಸಿದಂತೆ ತಪಾಸಣೆ ಮಾಡಲಾಯಿತು.

ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಆರ್.ಎಂ.ದೊಡ್ಡಮನಿ, ಜಿಲ್ಲಾ ಸರ್ಜನ್ ಡಾ. ಗಿರಿಧರ ಕೂಕನೂರ, ಡಾ.ಸುಜಾತಾ.ವ್ಹಿ.ಹಸವಿಮಠ ಡಾ.ಶಶಿಧರ ಕಟಕೋಳ ಅವರ ನೇತ್ರತ್ವದಲ್ಲಿ ಶಿಬಿರ ನಡೆಯಿತು. ಶಿಬಿರದಲ್ಲಿ ಜಿಲ್ಲಾ ಎನ್‍ಸಿಡಿ ಸೆಲ್‍ನ ಕಾರ್ಯಕ್ರಮ ಸಂಯೋಜಕರಾದ ಡಾ.ವಿ.ಎನ್.ಹಿರೇಮಠ, ಡಾ.ವಿಜಯ ಲಕ್ಷ್ಮಿ ಹಾನಗಲ್, ಡಾ.ಸ್ವರೂಪ ಬಿರಾದಾರ, ಡಾ.ರವಿ, ಡಾ.ರಾಜಶೇಖರ್, ಡಾ.ಅಶ್ರಪುಲ್ಲಾ, ಡಾ.ಕದಂ ಹಾಗೂ ಡಾ.ಕಟ್ಟಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ಟೆಕ್ನಾಲಾಜಿಸ್ಟರಾದ ಎಚ್.ವಾಯ್ ಜಾಧವ, ಶ್ರೀಮತಿ ಸಾವಿತ್ರಿ ಕಂದಲಿ ಹಾಗೂ ಕುಮಾರಿ ಫರೀದಾ ತಹಶೀಲ್ದಾರ ಅವರು ಆರೋಗ್ಯ ತಪಾಸಣೆಗೆ ನೆರವಾದರು.

ಜಿಲ್ಲಾ ನ್ಯಾಯಾಲಯ ; ಮಳಿಗೆಗಳಿಗೆ ಅರ್ಜಿ ಆಹ್ವಾನ

ಧಾರವಾಡ ( ಕರ್ನಾಟಕ ವಾರ್ತೆ) ಜ.20 ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಲಾ-ಚೇಂಬರ್‍ಗೆ ಹೊಂದಿಕೊಂಡಿರುವ ಮಳಿಗೆ ಸಂಖ್ಯೆ 2,3 ಹಾಗೂ 4 ನ್ನು ಟೈಪಿಂಗ್, ಝರಾಕ್ಸ್, ಬ್ಯಾಂಕ್ ವಿಸ್ತರಣಾ ಕೌಂಟರ್, ಹಾಲಿನ ಕೇಂದ್ರ ಮತ್ತಿತರ ಚಟುವಟಿಕೆಗಳಿಗೆ ಬಾಡಿಗೆ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಫೆ.18 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿ.ಶ್ರೀಶಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಪ್ರವಾಸ

ಧಾರವಾಡ ( ಕರ್ನಾಟಕ ವಾರ್ತೆ) ಜ.20 ವಿಧಾನ ಸಭೆಯ ಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರು, ಶನಿವಾರ ಜ.21ರಂದು ಸಂಜೆ 4:30ಕ್ಕೆ ಧಾರವಾಡ ಸಕ್ರ್ಯೂಟ್ ಹೌಸಿಗೆ ಆಗಮಿಸುವರು. ಸಂಜೆ 5:10ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಭವನಲ್ಲಿ ಜರುಗುವ ಡಾ.ಬಿ.ಎಸ್.ಗದ್ದಗಿಮಠ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಸಂಜೆ 7 ಗಂಟೆಗೆ ರಾಣೆಬೆನ್ನೂರಿಗೆ ಪ್ರಯಾಣ ಬೆಳೆಸುವರು.

ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ

ಬೆಂಗಳೂರು:ಜ,20 :- ಪದವಿ ಪೂರ್ವ ಶಿಕ್ಷಣ ನಿಯಮಗಳು 2006ರ ನಿಯಮ 4 ರನ್ವಯ 2017-18ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಛಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ / ಟ್ರಸ್ಟ್‍ಗಳಿಂದ ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆ ಫಾರಂ 1 ರಲ್ಲಿ ದಿನಾಂಕ: 31-01-2017 ರೊಳಗೆ ಜಂಟಿ ನಿರ್ದೇಶಕರು (ಮಾನ್ಯತೆ ಮತ್ತು ಅನುದಾನ), ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರಿಗೆ ಅರ್ಜಿಯನ್ನು ಸಲ್ಲಿಸಲು ಕೋರಿದೆ.

ಆನ್‍ಲೈನ್ ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳನ್ನು ಇಲಾಖೆಯ ವೆಬ್‍ಸೈಟ್ www.pue.kar.nic.in ನೋಡಬಹುದಾಗಿದೆ.

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

ತುಮಕೂರು (ಕ.ವಾ.) ಜ.20: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ 9, 10ನೇ ತರಗತಿ, ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಜನವರಿ 21ರಂದು ಬೆಳಿಗ್ಗೆ 10.30 ಗಂಟೆಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “Every Vote Counts” ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ತಿಳಿಸಿದ್ದಾರೆ.

ಚಿತ್ರಕಲಾ ಸ್ಪರ್ಧೆಗೆ ಅವಶ್ಯಕವಿರುವ ಲೇಖನ ಸಾಮಗ್ರಿ ಹಾಗೂ ಇತರೆ ಎಲ್ಲಾ ವಸ್ತುಗಳನ್ನು ವಿದ್ಯಾರ್ಥಿಗಳೇ ತರತಕ್ಕದ್ದು. ಆಯ್ಕೆಯಾದ 2 ಅತ್ಯುತ್ತಮ ಚಿತ್ರಗಳನ್ನು ಬರೆದ ವಿದ್ಯಾರ್ಥಿಗಳಿಗೆ ದಿನಾಂಕ:25-1-2017ರಂದು ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೊಸ ನ್ಯಾಯ ಬೆಲೆ ಅಂಗಡಿಗಾಗಿ ಅರ್ಜಿ ಕರೆ

ತುಮಕೂರು (ಕ.ವಾ.) ಜ.20: ನಗರ ವ್ಯಾಪ್ತಿಯ ಅನೌಪಚಾರಿಕ ಪಡಿತರ ಪ್ರದೇಶ ಪುಟ್ಟಶಾಮಯ್ಯನಪಾಳ್ಯದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಹ ಸಂಸ್ಥೆಗಳಿಂದ ಅರ್ಜಿ ಕರೆಯಲಾಗಿದೆ.

ಯಾವುದೇ ಖಾಸಗಿ ವ್ಯಕ್ತಿಗಳು ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ನಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ)., ತೋಟಗಾರಿಕಾ ಉತ್ಪನ್ನ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ (ನಿ), ಕೆ.ಎಂ.ಎಫ್., ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮತ್ತು ಮಾರುಕಟ್ಟೆ ಸಂಘ ನಿಯಮಿತ, ಗ್ರಾಮ ಪಂಚಾಯ್ತಿ ಅಥವಾ ಪಟ್ಟಣ ಪಂಚಾಯತಿಯಂತಹ ಸ್ಥಳೀಯ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಲ್ಲದೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಹಿಂದಿನ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ರೂ.ಗಳ ಮೂಲ ಬಂಡವಾಳ ಹೊಂದಿರುವ ಸರ್ಕಾರದ ಮಹಿಳಾ ಮತ್ತು ಕಲ್ಯಾಣ ಯೋಜನಾ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅಥವಾ ಸಹಕಾರ ಇಲಾಖೆಯಿಂದ ಅಧಿಕೃತವಾಗಿ ಮಾನ್ಯತೆ ಪಡೆದು ಉದ್ದೇಶಿತ ನ್ಯಾಯಬೆಲೆ ಅಂಗಡಿ ತೆರೆಯಲ್ಪಡುವ ಗ್ರಾಮದಲ್ಲಿ ಸ್ಥಾಪಿಸಲ್ಪಟ್ಟಿರುವ ಸ್ತ್ರೀಶಕ್ತಿ ಗುಂಪುಗಳು/ ಮಹಿಳಾ ಸ್ವಸಹಾಯ ಸಂಘಗಳು ಇವುಗಳಿಗೆ ಮಾತ್ರ ಅವಕಾಶಗಳಿರುತ್ತವೆ.

ಆಸಕ್ತ ಸಂಸ್ಥೆಗಳು ಅರ್ಜಿ ಸಲ್ಲಿಸುವ ಅವಧಿಯಲ್ಲಿ ಮಾನ್ಯತೆ ಹೊಂದಿರಬೇಕು. ಸದರಿ ಸಂಸ್ಥೆಗಳ ಅಸ್ತಿತ್ವ ಕನಿಷ್ಟ ಮೂರು ವರ್ಷ ಅವಧಿ ಚಾಲ್ತಿಯಲ್ಲಿರಬೇಕು ಹಾಗೂ 3 ವರ್ಷದ ವಹಿವಾಟಿನ ಬಗ್ಗೆ ಆಡಿಟ್ ವರದಿ ಸಲ್ಲಿಸಬೇಕು. ಸಂಘದ ಉಳಿತಾಯ/ಚಾಲ್ತಿ ಖಾತೆಯಲ್ಲಿ ಕನಿಷ್ಟ ಒಂದು ಲಕ್ಷ ರೂಪಾಯಿಗಳ ಬ್ಯಾಂಕ್ ಬ್ಯಾಲೆನ್ಸ್ ಇರಬೇಕು. ಪಡಿತರ ಸಂಗ್ರಹಣೆಗೆ 20×30 ಅಡಿ ಅಳತೆಯ ಅಗತ್ಯ ಗೋದಾಮು ಸೌಲಭ್ಯವನ್ನು ಹೊಂದಿರಬೇಕು. ಇಲ್ಲವೆ ಖಾಸಗಿ ಗೋದಾಮು ಬಾಡಿಗೆಗೆ ಪಡೆದಿದ್ದಲ್ಲಿ ಬಾಡಿಗೆ ಕರಾರು ಪತ್ರ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಬೇಕು. ಪಂಚಾಯಿತಿ/ಪುರಸಭೆಯಿಂದ ಅಧಿಕೃತ ಲೈಸೆನ್ಸ್ ಹೊಂದಿರುವ ಕಟ್ಟಡವಾಗಿರಬೇಕು. ಅಗತ್ಯ ವಸ್ತುಗಳ ಕಾಯಿದೆ 1955ರಡಿ ಸದರಿ ಸಂಸ್ಥೆಯ ವಿರುದ್ಧ ಯಾವುದೇ ಮೊಕದ್ದಮೆ ದಾಖಲಾಗಿರಬಾರದು ಹಾಗೂ ಈ ಹಿಂದೆ ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದು ರದ್ದಾಗಿರಬಾರದು. ಸದರಿ ಸಂಘ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿಯವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲದ ಬಗ್ಗೆ ಸ್ಥಳೀಯ ಆರಕ್ಷಕ ಠಾಣೆಯಿಂದ ಪಡೆದ ದೃಢೀಕರಣ ಪತ್ರವನ್ನು ಹಾಜರುಪಡಿಸಬೇಕು. ಪಡಿತರ ಎತ್ತುವಳಿ ಮತ್ತು ನಿರ್ವಹಣೆಗೆ ಸಂಘದಲ್ಲಿ ಲಭ್ಯವಿರುವ ಅಗತ್ಯ ಸಿಬ್ಬಂದಿ ನೇಮಕಾತಿ ವಿವರ (ವಿದ್ಯಾರ್ಹತೆ ಮಾಹಿತಿ) ಸಲ್ಲಿಸಬೇಕು.

ಅರ್ಹ ಸಂಸ್ಥೆಗಳು ತಮ್ಮ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 5 ರೊಳಗಾಗಿ ಜಿಲ್ಲಾಧಿಕಾರಿಗಳ ಕಛೇರಿ (ಆಹಾರ ಶಾಖೆ), ತುಮಕೂರು ಜಿಲ್ಲೆ ಇವರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ತಿಳಿಸಿದ್ದಾರೆ.

ಪ್ರಣಾಳಿಕೆಯ 125 ಭರವಸೆಗಳು ಈಡೇರಿವೆ: ಮುಖ್ಯಮಂತ್ರಿ

ಶಿವಮೊಗ್ಗ, ಜ.20 (ಕರ್ನಾಟಕ ವಾರ್ತೆ)- ಅಧಿಕಾರಕ್ಕೆ ಬರುವಾಗ ಜನರಿಗೆ ನೀಡಿದ ಆಶ್ವಾಸನೆಯ 165 ಭರವಸೆಗಳಲ್ಲಿ ಈಗಾಗಲೇ 125 ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಸೇರಿದಂತೆ ವಿವಿಧ ಇಲಾಖೆಗಳಿಂದ ಶುಕ್ರವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಜನರಿಗೆ ನೀಡಲಾಗಿತ್ತು. ಅದರಂತೆ ಈವರೆಗೆ 125 ಭರವಸೆಗಳನ್ನು ಈಡೇರಿಸಲಾಗಿದ್ದು ಇನ್ನುಳಿದ ಅವಧಿಯಲ್ಲಿ ಇನ್ನು ಹಲವು ಜನಪರ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.

ಪ್ರತಿ ವರ್ಷದ ಬಜೆಟ್ ಮಂಡಿಸುವ ಮುನ್ನ ಪ್ರಣಾಳಿಕೆಯ ಭರವಸೆಗಳನ್ನು ಮುಂದಿಟ್ಟುಕೊಂಡೇ ಸಿದ್ಧತೆ ಮಾಡಲಾಗುವುದು. ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಚಾಚೂ ತಪ್ಪದೆ ಈಡೇರಿಸಿದ ಹೆಗ್ಗಳಿಕೆ ನಮ್ಮದು. ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಹೇಳಿದರು.
ಎಲ್ಲಾ ಜಾತಿ ವರ್ಗದ ಬಡವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಎಲ್ಲ ಸಮುದಾಯದ ದುರ್ಬಲರಿಗೆ ಸಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆ ಸಿಕ್ಕಾಗ ಮಾತ್ರ ಆ ಸರ್ಕಾರದ ಉದ್ದೇಶ ಈಡೇರುತ್ತದೆ. ಅದರಂತೆ ನಾವು ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಸಮಾಜದಲ್ಲಿ ಸಮಾನತೆ ಬರಬೇಕು ಎಂಬುದು ಹೊಸ ವಿಚಾರವಲ್ಲ. ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಅದರಂತೆ ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸುವುದು ಎಲ್ಲ ಸರ್ಕಾರಗಳ ಜವಾಬ್ದಾರಿ ಅದರಂತೆ ನಾವು ನಡೆದುಕೊಂಡಿದ್ದೇವೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂ ಹಲವಾರು ಅಭಿವೃದ್ಧಿಗಳು ಆಗಬೇಕಿದೆ. ಸ್ಥಳೀಯ ಶಾಸಕರು ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ತಂದಿದ್ದಾರೆ. ಅವರ ಬೇಡಿಕೆಯಂತೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಂತ ಹಂತವಾಗಿ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಈ ಭಾಗದ ರೈತರ ಬಗ್ಗೆ ಅಪಾರ ಕಾಳಜಿ. ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನ ಆಗಬೇಕು, ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆನಿರ್ಮಿಸಿಕೊಂಡವರಿಗೆ ಹಕ್ಕು ಪತ್ರ ನೀಡಬೇಕು, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ವೈದ್ಯರ ನೇಮಕಾತಿ ಆಗಬೇಕು, ಅರಣ್ಯ ಇಲಾಖೆಯಿಂದ ರೈತರಿಗೆ ತೊಂದರೆ ಆಗಬಾರದು ಎಂಬುದು ಅವರ ಕಳಕಳಿ. ಅದಂತೆ ಅವರ ಎಲ್ಲ ಆಶಯದಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಇತ್ತೀಚೆಗೆ ಗೋಮಾಳದ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ತಾವು ಸಚಿವರಾಗಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಗ್ರಾಮಾಂತರ ಪ್ರದೇಶದ 94ಸಿ 5367 ಹಾಗೂ ನಗರ ಭಾಗದ 94ಸಿಸಿ 2 ಸಾವಿರ ಅರ್ಜಿದಾರರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಫೆ.21ರವರೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದೆ. ಅಲ್ಲದೆ 12 ಸಾವಿರ ಬಗರ್‍ಹುಕುಂ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಅರಣ್ಯ ಹಕ್ಕು ಕಾಯ್ದೆಯ 89 ಸಾವಿರ ಅರ್ಜಿ ಬಾಕಿ ಇದ್ದು ಇವರಿಗೂ ಹಕ್ಕುಪತ್ರಗಳನ್ನು ಕೊಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ದುಡಿಯುವ ಕೈಗೆ ಉದ್ಯೋಗ ಕೊಡಬೇಕು. ಈ ನಿಟ್ಟಿನಲ್ಲಿ ಯುವಕರಿಗಾಗಿ ಜಿಲ್ಲೆಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯೋಗ ಮೇಳದ ಲಾಂಚನ ಬಿಡುಗಡೆಗೊಳಿಸಿದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮುಖ್ಯ ಅತಿಥಿಯಾಗಿದ್ದರು, ಸ್ಥಳೀಯ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಚಿವ ಪ್ರಮೋದ ಮದ್ವರಾಜ್, ಶಾಸಕರಾದ ಆರ್.ಪ್ರಸನ್ನಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಕಾಡಾ ಅಧ್ಯಕ್ಷ ಸುಂದರೇಶ್, ಸೂಡಾ ಅಧ್ಯಕ್ಷ ಕೆ.ಎಂ.ಉಸ್ಮಾನ್, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್.ಕೆ.ಮರಿಯಪ್ಪ, ಜಿಲ್ಲಾಧಿಕಾರಿ ಎಂ.ಲೋಕೇಶ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ ಖರೆ ಮತ್ತಿತರರು ಉಪಸ್ಥಿತರಿದ್ದರು.