Government of Karnataka

Department of Information

Tuesday 12/12/2017

Make Karnataka child marriage-free State within five years: Chief Minister gives strict instruction to officers

Date : Saturday, January 21st, 2017

ಬೆಂಗಳೂರು, ಜನವರಿ 21 (ಕರ್ನಾಟಕ ವಾರ್ತೆ): ಮುಂದಿನ ಐದು ವರ್ಷಗಳೊಳಗೆ ಕರ್ನಾಟಕವು ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ರೂಪಿಸಲು ಎಲ್ಲಾ ಅಗತ್ಯ ಹಾಗೂ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಬಾಲ್ಯ ವಿವಾಹ ತಡೆಗಟ್ಟುವ ಕುರಿತಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಿಧಾನ ಸೌಧದ ಔತಣ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಬೃಹತ್ ಜಾಗೃತಿ ಆಂದೋಲನದ ಉದ್ಘಾಟನೆ ನೆರವೇರಿಸಿ ಹಾಗೂ ವಿನೂತನವಾಗಿ ವಿನ್ಯಾಸಗೊಳಿಸಿರುವ ಆಯೋಗದ ಕರೆ ಅಂತರ್ಜಾಲಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಕಾನೂನಿನ ಚೌಕಟ್ಟಿನಲ್ಲಿ ಮದುವೆಗೆ ನಿಗದಿಪಡಿಸಿರುವ ವಯೋಮಿತಿಯ ನಂತರವೇ ವಿವಾಹಗಳನ್ನು ನೆರವೇರಿಸಬೇಕು. ಮಕ್ಕಳ ಬೆಳವಣಿಗೆಯ ಕಾಲದಲ್ಲಿಯೇ, ಅದರಲ್ಲೂ ಜ್ಞಾನ ಸಂಪಾದನೆಯ ಕಾಲದಲ್ಲಿ, ಬಾಲ್ಯ ವಿವಾಹಗಳನ್ನು ಮಾಡಬಾರದು. ಬಾಲ್ಯ ವಿವಾಹಗಳನ್ನು ಮಾಡಿದಲ್ಲಿ, ಮಕ್ಕಳ ಭವಿಷ್ಯವೇ ಮಸುಕಾಗುತ್ತದೆ ಹಾಗೂ ಅವರ ಬದುಕು ನಾಶವಾಗುತ್ತದೆ. ಆದಕಾರಣ, ಸಂಬಂಧಿತ ಇಲಾಖಾ ಅಧಿಕಾರಿಗಳು ಹಿಂದುಳಿದ ಪ್ರದೇಶಗಳಲ್ಲಿನ ಹೆಣ್ಣು ಮಕ್ಕಳ ಪಾಲಕರು ಹಾಗೂ ಪೋಷಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕರೂ ಕೂಡಾ ಬಾಲ್ಯ ವಿವಾಹಗಳು ಕಂಡುಬಂದಲ್ಲಿ ಕೂಡಲೇ ಆಯೋಗದ ಕರೆ ಅಂತರ್ಜಾಲಕ್ಕೆ ದೂರು ನೀಡಿದರೆ ಆಯೋಗವು ಕೂಡಲೇ ಕ್ರಮ ಕೈಗೊಳ್ಳಲಿದೆ. ಆಯೋಗ ಏರ್ಪಡಿಸಿರುವ ಈ ಜಾಗೃತಿ ಆಂದೋಲನವು ನಿರಂತರವಾಗಿ ನಡೆದು ಕರ್ನಾಟಕವು ಬಾಲ್ಯವಿವಾಹ ಮುಕ್ತ ರಾಜ್ಯವಾಗಬೇಕು ಎಂದು ಸಿದ್ದರಾಮಯ್ಯ ಅವರು ಆಶಿಸಿದರು.

ರಾಷ್ಟ್ರೀಯ ಸಮೀಕ್ಷೆ ಪ್ರಕಾರ ಹತ್ತು ವರ್ಷಗಳ ಹಿಂದೆ ಬಾಲ್ಯ ವಿವಾಹವು ಶೇಕಡಾ 41.2 ರಷ್ಟಿತ್ತು. ಇದೀಗ ಅದರ ಪ್ರಮಾಣ ಶೇಕಡಾ 23.2 ಕ್ಕೆ ಇಳಿದಿದೆ. ಐದು ವರ್ಷಗಳಲ್ಲಿ ಇದು ಸಂಪೂರ್ಣ ನಿರ್ಮೂಲನೆ ಆಗಬೇಕು. ಪುರುಷ ಮತ್ತು ಮಹಿಳೆಯರ ಸಂಖ್ಯೆಯ ಅನುಪಾತದಲ್ಲಿ ಒಂದು ಸಾವಿರಕ್ಕೆ 64 ಮಹಿಳೆಯರ ಪ್ರಮಾಣ ಕಡಿಮೆ ಇದೆ. ಈ ಅನುಪಾತ ಸಮ ಪ್ರಮಾಣದಲ್ಲಿರಬೇಕು. ಅದು ಪ್ರಕೃತಿ ನಿಯಮ. ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹಗಳು ಸಂಪೂರ್ಣ ನಿಲ್ಲಬೇಕು. ಕಾನೂನಿನಲ್ಲಿ ಮಹಿಳೆಯರಿಗೂ ಆಸ್ತಿಯಲ್ಲಿ ಸಮ ಪಾಲಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಮುಖ್ಯಮಂತ್ರಿ ಹೇಳಿದರು.

ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ, ಶಾಸಕ ಎನ್. ಎ. ಹ್ಯಾರಿಸ್, ರಾಜ್ಯ ವಿಧಾನ ಪರಿಷತ್ ಸದಸ್ಯ ಹೆಚ್. ಎಂ. ರೇವಣ್ಣ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವಾ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೊಹಮದ್ ಮೊಹಿಸಿನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ದೀಪಾ ಚೋಳನ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಅವರೂ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.