Government of Karnataka

Department of Information

Saturday 21/01/2017

ಮುಂದಿನ ಐದು ವರ್ಷಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಸಿದ್ಧ : ಸಿದ್ದರಾಮಯ್ಯ

Date : ಮಂಗಳವಾರ, ಜನವರಿ 10th, 2017

ಬೆಂಗಳೂರು, ಜನವರಿ 10 (ಜನವರಿ): ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿಯ ದೃಷ್ಠಿಯಿಂದ ಮುಂದಿನ ಐದು ವರ್ಷಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಇಲ್ಲಿ ಇಂದು ತಿಳಿಸಿದರು.

ನಗರದ ವಿಧಾನ ಸೌಧದ ಸಮಿತಿಯ ಕೊಠಡಿಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀರಣ ಯೋಜನೆ ಹಾಗೂ ಅಭಿವೃಧ್ಧಿ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮ ಪಂಚಾಯಿತಿಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಸಿದ್ದಪಡಿಸಿರುವ ಈ ಯೋಜನೆಯನ್ನು ತಾಲ್ಲೂಕು ಹಾಗೂ ಜಿಲ್ಲಾ ಸಮಿತಿಗಳು ಪರಿಶೀಲಿಸಿ, ಸಂಯೋಜಿತ ವರದಿಯನ್ನು ತಮ್ಮ ನೇತೃತ್ವದ ರಾಜ್ಯ ಸಮಿತಿಗೆ ಸಲ್ಲಿಸಲಿವೆ. ಅಲ್ಲದೆ, ಈ ವರದಿಯನ್ನು ರಾಜ್ಯ ಮಟ್ಟದ ಸಮಿತಿಯು ಪರಿಶೀಲಿಸಿ ಯೋಜನಾ ಇಲಾಖೆಗೆ ಸಲ್ಲಿಸಲಿದೆ. ಅಂತೆಯೇ, ತಳ ಹಂತದ ಶಿಫಾರಸ್ಸುಗಳನ್ನು ಮೇಲಿನ ಹಂತದ ಸಮಿತಿಗಳು ಯಾವುದೇ ಕಾರಣಕ್ಕೂ ಬದಲಾಯಿಸದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಇಡೀ ರಾಜ್ಯದ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲು ತಳ ಹಂತದ ಗ್ರಾಮ ಸಭೆಯಿಂದ ಚರ್ಚೆ ನಡೆಸಿ ಸೂಕ್ತ ಶಿಫಾರಸ್ಸುಗಳನ್ನು ಮೇಲಿನ ಹಂತದವರೆಗೂ ಸಲ್ಲಿಸಲಾಗುವ ಹೊಸ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿದೆ. ರಾಜ್ಯದಲ್ಲಿ ಸ್ವಯಂ ಸ್ಥಳೀಯ ಸರ್ಕಾರವಾಗಿ ಕಾರ್ಯನಿರ್ವಹಿಸುವ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ನಗರಾಡಳಿತ ವ್ಯಾಪ್ತಿಯ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಹೆಚ್ಚಿನ ಅನುದಾನ, ಅಧಿಕಾರ ಮತ್ತು ಅನುಷ್ಠಾನಗೊಳಿಸುವ ಕಾರ್ಯ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಸಭೆಗೆ ವಿವರಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನಾ ಸಮಿತಿಗೆ ತಾಲ್ಲೂಕಿನ ಹೆಚ್ಚಿನ ಭಾಗವನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಹಾಗೂ ಜಿಲ್ಲಾ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿದ್ದು, ಗ್ರಾಮೀಣಾಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯನ್ನು ತಳಹಂತದ ಸಂಸ್ಥೆಗಳಾದ ಜನ ವಸತಿ ಸಭೆ, ವಾರ್ಡ್‍ಸಭೆ ಮತ್ತು ಗ್ರಾಮ ಸಭೆಗಳಿಗೆ ವಹಿಸಲಾಗಿದೆ. ಇದನ್ನು ಮುಂದಿನ ಐದು ವರ್ಷಗಳ ಅವಧಿಗೆ ಸಿದ್ಧಪಡಿಸಲಾಗಿದೆ. ಸಮಾಜದಿಂದ ಬದಿಗೊತ್ತಿರುವ ಹಾಗೂ ನಿರ್ಲಕ್ಷ್ಯಕ್ಕೆ ಒಳಪಟ್ಟ ಗ್ರಾಮಗಳಿಂದ ದೂರದಲ್ಲಿ ವಸತಿ ವ್ಯವಸ್ಥೆ ಮಾಡಿ ಜೀವಿಸುತ್ತಿರುವ ದುರ್ಬಲ ವರ್ಗದವರು ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಅನುವಾಗುವಂತೆ ಜನ ವಸತಿ ಸಭೆ ನಡೆಸಲು ಹಾಗೂ ಗ್ರಾಮಗಳಲ್ಲಿ ವಾಸಿಸುವ ದುರ್ಬಲ ವರ್ಗದವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ತಳಹಂತದಿಂದಲೇ ಯೋಜ£ಯನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್ ಅವರು ಇದೇ ಸಂದರ್ಭದಲ್ಲಿ ಸಭೆಗೆ ತಿಳಿಸಿದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಟಿ. ಎಂ. ವಿಜಯ ಭಾಸ್ಕರ್, ಯೋಜನಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ನಾಗಲಾಂಬಿಕಾ ದೇವಿ, ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.