Government of Karnataka

Department of Information

Saturday 21/01/2017

ರಾಜ್ಯ ವಾರ್ತೆ 11-01-2017

Date : ಬುಧವಾರ, ಜನವರಿ 11th, 2017

ಪತ್ರಿಕಾ ಆಮಂತ್ರಣ

1) ಸ್ವಾಮಿ ವಿವೇಕಾನಂದರ 154 ನೇ ಜನ್ಮದಿನ ಆಚರಣೆ ಹಾಗೂ “ರಾಷ್ಟ್ರೀಯ ಯುವ ಸಪ್ತಾಹ”
ಉದ್ಘಾಟನೆ:
ಕೆ.ಜೆ. ಜಾರ್ಜ್
ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು

ಯುವ ಸಪ್ತಾಹದ ಚಾಲನೆ:
ಬಸವರಾಜ ರಾಯರೆಡ್ಡಿ,
ಉನ್ನತ ಶಿಕ್ಷಣ ಸಚಿವರು

ಘನ ಉಪಸ್ಥಿತಿ:
ಎಚ್.ಎನ್. ಅನಂತಕುಮಾರ್,
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರು

ಡಿ.ವಿ. ಸದಾನಂದ ಗೌಡ,
ಕೇಂದ್ರ ಯೋಜನಾ ಮತ್ತು ಸಾಂಖ್ಯಿಕ ಸಚಿವರು

ಶ್ರೀಮತಿ ನಿರ್ಮಲಾ ಸೀತಾರಾಮನ್,
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು

ದಿನಾಂಕ: 12-01-2017 ಗುರುವಾರ
ಸಮಯ: ಬೆಳಿಗ್ಗೆ 11-00 ಗಂಟೆಗೆ
ಸ್ಥಳ : ಜ್ಞಾನಜ್ಯೋತಿ ಸಭಾಂಗಣ, ಅರಮನೆ ರಸ್ತೆ, ಬೆಂಗಳೂರು

2) ಪ್ರಾದೇಶಿಕ ತೋಟಗಾರಿಕೆ ಮೇಳ – ಕುರಿತು ಪತ್ರಿಕಾಗೋಷ್ಠಿ
ದಿನಾಂಕ: 12-1-2017 ಗುರುವಾರ
ಸಮಯ: ಬೆಳಿಗ್ಗೆ 11-30 ಗಂಟೆಗೆ
ಸ್ಥಳ: ಬೆಂಗಳೂರು ಪ್ರೆಸ್‍ಕ್ಲಬ್, ಕಬ್ಬನ್ ಪಾರ್ಕ್, ಬೆಂಗಳೂರು
3) 2016-17 ನೇ ಸಾಲಿನ ರಾಜ್ಯಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ವರ್ಧೆಯ ಬಹುಮಾನ ವಿತರಣಾ ಸಮಾರಂಭ:
ಅಧ್ಯಕ್ಷತೆ:
ತನ್ವೀರ್ ಸೇಠ್,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು
ಉದ್ಘಾಟನೆ:
ಟಿ.ಬಿ. ಜಯಚಂದ್ರ,
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು
ದಿನಾಂಕ: 12-1-2017 ಗುರುವಾರ
ಸಮಯ: ಮಧ್ಯಾಹ್ನ 3.00 ಗಂಟೆಗೆ
ಸ್ಥಳ: ಶ್ರೀ ಚನ್ನಬಸಪ್ಪ ಸಭಾಂಗಣ, ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್, ಕಬ್ಬನ್‍ಪಾರ್ಕ್,
ಕೆ.ಆರ್. ವೃತ್ತ, ಬೆಂಗಳೂರು

4) ವಸತಿ ಇಲಾಖೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ
ವಿಡಿಯೋ ಸಂವಾದ:
ಎಂ. ಕೃಷ್ಣಪ್ಪ,
ವಸತಿ ಸಚಿವರು
ದಿನಾಂಕ: 12-01-2017 ಸಮಯ: ಮಧ್ಯಾಹ್ನ 3-00 ಗಂಟೆಗೆ
ಸ್ಥಳ: ಕೊಠಡಿ ಸಂಖ್ಯೆ 122, ಮೊದಲನೇ ಮಹಡಿ, ವಿಕಾಸ ಸೌಧ, ಬೆಂಗಳೂರು

ಪತ್ರಿಕಾ ಪ್ರಕಟಣೆ

ದಿವಂಗತ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 51ನೇ ಪುಣ್ಯ ತಿಥಿ

ಬೆಂಗಳೂರು, ಜನವರಿ 11(ಕರ್ನಾಟಕ ವಾರ್ತೆ): ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 51 ನೇ ಪುಣ್ಯ ತಿಥಿ ಅಂಗವಾಗಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ವಿಧಾನ ಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸರ್ಕಾರದ ಪರವಾಗಿ ಗೌರವ ಸಲ್ಲಿಸಿದರು.

ವಿಧಾನ ಸೌಧದ ಆವರಣದಲ್ಲಿ ಇಂದು ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ದಿ: ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ದೇಶ ಸಂಕಷ್ಟದಲ್ಲಿ ಇದ್ದಾಗಲೂ ಹಾಗೂ ಬೇರೆ ದೇಶಗಳಿಂದ ನಮ್ಮ ಮೇಲೆ ಒತ್ತಡ ಹಾಗೂ ಬಿಕ್ಕಟ್ಟು ಇದ್ದ ಸಂದರ್ಭಗಳಲ್ಲೂ ದೇಶವನ್ನು ಮುನ್ನೆಡೆಸಿದವರು ದಿ: ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ಎಂದು ಸ್ಮರಿಸಿದರು.

ದೇಶದಲ್ಲಿನ ರೈತರು ಹಾಗೂ ಸೈನಿಕರ ಗೌರವನ್ನು ಹೆಚ್ಚಿಸಿದವರು ದಿ: ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ಎಂದ ಕೃಷ್ಣ ಭೈರೇಗೌಡ ಅವರು ಸಾರ್ವಜನಿಕ ಜೀವನದಲ್ಲಿ ಸರಳತೆಯಿಂದ ಜೀವನ ನಡೆಸಿದರು. ಅವರ ಆದರ್ಶಗಳನ್ನು ಇಂದು ನಾವೆಲ್ಲರು ಪಾಲಿಸುವುದು ಅಗತ್ಯ ಎಂದು ತಿಳಿಸಿದರು.

ಹಿಂಗಾರು ಹಂಗಾಮಿನಲ್ಲೂ ರಾಜ್ಯದ 160 ತಾಲ್ಲೂಕುಗಳಲ್ಲಿ ಮಳೆ ಕೊರತೆ -ಕೃಷ್ಣಭೈರೇಗೌಡ

ಬೆಂಗಳೂರು, ಜನವರಿ 11(ಕರ್ನಾಟಕ ವಾರ್ತೆ): ರಾಜ್ಯದ 160 ತಾಲ್ಲೂಕುಗಳು ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಸಾಮಾನ್ಯ ವರ್ಷದಲ್ಲಿ ಸರಾಸರಿ 33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಜ್ಯದಲ್ಲಿ ಭಿತ್ತನೆ ಕಾರ್ಯ ನಡೆಯುತ್ತಿತ್ತು. ಆದರೆ ಈ ಬಾರಿ 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭಿತ್ತನೆ ಕಾರ್ಯ ನಡೆದಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.

ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 51 ನೇ ಪುಣ್ಯ ತಿಥಿ ಅಂಗವಾಗಿ ವಿಧಾನ ಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹಿಂಗಾರು ಬೆಳೆ ನಷ್ಠ ಕುರಿತಂತೆ ಜಂಟಿ ಸರ್ವೆ ಕಾರ್ಯ ನಡೆಸಿ ಜನವರಿ 20ರ ಒಳಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮುಂಗಾರು ಹಂಗಾಮಿನಲ್ಲಿ ರಾಜ್ಯದ 139 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಮುಂಗಾರು ಹಂಗಾಮಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ 4702 ಕೋಟಿ ರೂ. ಪರಿಹಾರದ ಹಣ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ 1782 ಕೋಟಿ ರೂ. ಹಣ ನೀಡುವುದಾಗಿ ಹೇಳಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋಷಣೆ ಮಾಡಿರುವ ಪರಿಹಾರದ ಹಣ ತುಂಬಾ ಕಡಿಮೆಯಾಗಿದ್ದು, ಕಳೆದ ಸಾರಿ ಮಹಾರಾಷ್ಟ್ರ ಸರ್ಕಾರಕ್ಕೆ ಹಣ ನೀಡಿದಂತೆ ರಾಜ್ಯಕ್ಕೂ ಕನಿಷ್ಠ ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು, ಬರಪರಿಹಾರದ ಹಣ ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿ ಅವರಿಗೆ ನಮ್ಮ ಮುಖ್ಯಮಂತ್ರಿ ಅವರು ಈಗಾಗಲೇ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಬರ ನಿರ್ವಹಣೆ ಮತ್ತು ಮೇಲುಸ್ತುವಾರಿಗಾಗಿ ನಾಲ್ಕು ಸಚಿವರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿದ್ದು ಈಗಾಗಲೇ ಸಮಿತಿಗಳು ರಾಜ್ಯ ಪ್ರವಾಸ ಮಾಡಿ ಬರ ಅಧ್ಯಯನ ನಡೆಸಿವೆ, ರಾಜ್ಯದಲ್ಲಿ 46 ವರ್ಷಗಳ ನಂತರ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಸುಭಾಷ್ ಕುಂಠಿಯಾ, ಆಡಳಿತ ಮತ್ತು ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನಿಂದ ಇದುವರೆಗೆ 1005.79 ಕೋಟಿ ರೂ. ಬಿಡುಗಡೆ

ಬೆಂಗಳೂರು, ಜನವರಿ 11(ಕರ್ನಾಟಕ ವಾರ್ತೆ) : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2009 ರಿಂದ ಇಲ್ಲಿಯವರೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್.ಎ.ಎಸ್.ಟಿ.) ನಿಂದ 1,95,529 ಪ್ರಕರಣಗಳಿಗೆ ಒಟ್ಟು 1,005.79 ಕೋಟಿಗಳ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿ, ಯಶಸ್ವಿನಿ ಯೋಜನೆ ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯನ್ನು (2015-16 ರಿಂದ) ಹೊರತುಪಡಿಸಿ ರೂ. 1,005.79 ಕೋಟಿಗಳ ವೆಚ್ಚವನ್ನು ಬಿಡುಗಡೆ ಮಾಡಲಾಗಿದೆ.

ವಾಜಪೇಯಿ ಆರೋಗ್ಯ ಶ್ರೀ ಯೋಜನೆಗೆ 164307 ಪ್ರಕರಣಗಳಿಗೆ ಸಂಬಂಧಿಸಿದಂತೆ 931.17 ಕೋಟಿ ರೂ.ಗಳು, ರಾಜೀವ್ ಆರೋಗ್ಯ ಭಾಗ್ಯ ಯೋಜನೆಯ 4022 ಪ್ರಕರಣಗಳಿಗೆ 19.24 ಕೋಟಿ ರೂ. ಗಳು, ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ 2549 ಪ್ರಕರಣಗಳಿಗೆ ಸಂಬಂಧಿಸಿದಂತೆ 20.20 ಕೋಟಿ ರೂ.ಗಳು, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯ 21787 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 13.41 ಕೋಟಿ ರೂ.ಗಳು ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯ ಒಟ್ಟು 2864 ಪ್ರಕರಣಗಳಿಗೆ 21.79 ಕೋಟಿ ರೂ.ಗಳನ್ನು ಒಟ್ಟಾರೆ 1,95,529 ಪ್ರಕರಣಗಳಿಗೆ ಸಂಬಂಧಿಸಿದಂತೆ 1,005.79 ಕೋಟಿ ರೂ.ಗಳನ್ನು ಇದುವರೆವಿಗೆ ಬಿಡುಗಡೆ ಮಾಡಲಾಗಿದೆ.

ಈಗಾಗಲೇ ಸರ್ಕಾರಿ ಆಸ್ಪತ್ರೆಗಳು/ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಒಳಗೊಂಡು ಎಲ್ಲಾ ಸಾರ್ವಜನಿಕರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಲು ಕ್ರಮ ಜರುಗಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಪಡುವ ಅವಶ್ಯಕತೆ ಇರುವುದಿಲ್ಲ. ಇದುವರೆಗೆ 1000 ಕೋಟಿ ರೂ. ಮೇಲ್ಪಟ್ಟು ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ಜಮೆ ಮಾಡಿದ್ದು, ಬಾಕಿ ಇರುವ ಕೇವಲ ಅಂದಾಜು ರೂ. 100 ಕೋಟಿ ಗೆ ಖಾಸಗಿ ಆಸ್ಪತ್ರೆಗಳು ಉಚಿತ ಸೇವೆಯನ್ನು ನಿಲ್ಲಿಸಿರುವುದು ಸಮಂಜಸವಾಗಿದೆಯೇ ಎಂದು ಜನ ತೀರ್ಮಾನ ಮಾಡಲಿ.

ಜನವರಿ 10 ರಂದು 186 ಆಸ್ಪತ್ರೆಗಳಿಗೆ ರೂ. 34.25 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಬಾಕಿ ಪಾವತಿಗೂ ಕೂಡ ಕ್ರಮ ಜರುಗಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್‍ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಪ್ರೊ. ಯಶ್‍ವಂತ್ ಡೊಂಗ್ರೆ

ಬೆಂಗಳೂರು, ಜನವರಿ 11(ಕರ್ನಾಟಕ ವಾರ್ತೆ) : ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಹಾಸನ ಸ್ನಾತಕೋತ್ತರ ಕೇಂದ್ರದ ಡೀನ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಯಶ್‍ವಂತ್ ಡೊಂಗ್ರೆ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.