Government of Karnataka

Department of Information

Tuesday 23/01/2018

ರಾಜ್ಯ ವಾರ್ತೆ 20-01-2017

Date : ಶುಕ್ರವಾರ, ಜನವರಿ 20th, 2017

ಪತ್ರಿಕಾ ಆಮಂತ್ರಣ

1. ಪತ್ರಿಕಾಗೋಷ್ಠಿ:
ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ 2017 ಕುರಿತು.

ದಿನಾಂಕ: 21-01-2017 ಶನಿವಾರ, ಮಧ್ಯಾಹ್ನ 12.00 ಗಂಟೆಗೆ
ಸ್ಥಳ: ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಕಚೇರಿ ಸಭಾಂಗಣ, ಬಿಎಂಟಿಸಿ ಕಟ್ಟಡ, ಶಾಂತಿನಗರ, ಬೆಂಗಳೂರು.

2. ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಉದ್ಫಾಟನಾ ಸಮಾರಂಭ:

ಉದ್ಫಾಟನೆ : ಶ್ರೀಮತಿ ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವರು.

ದಿನಾಂಕ: 21-01-2017 ಶನಿವಾರ, ಮಧ್ಯಾಹ್ನ 2.30 ಗಂಟೆಗೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.

3. “ಮನೆಯಂಗಳದಲ್ಲಿ ಮಾತುಕತೆ”

ತಿಂಗಳ ಅತಿಥಿ:
ವೈಜನಾಥ್ ಬಿರಾದರ್
ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಟ,

ದಿನಾಂಕ: 21-01-2017 ಶನಿವಾರ, ಸಂಜೆ 4.00 ಗಂಟೆಗೆ
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು.

ಪತ್ರಿಕಾ ಪ್ರಕಟಣೆ

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ): ದೇಶದಲ್ಲೇ ಕರ್ನಾಟಕ ರಾಜ್ಯದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಕೇಂದ್ರ ಸರ್ಕಾರದ ಉದ್ಯಮವಾದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ರಾಜ್ಯ ಚಾನ್‍ಲೈಸಿಂಗ್ ಏಜೆನ್ಸಿಗಳಿಗೆ ನೀಡುವ ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿಯನ್ನು ಭಾರತ ಸರ್ಕಾರದ ಸಾಮಾಜಿಕ, ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ತಾವರ್ ಚಂದ್ ಗೆಲ್ಹೋಟ್ ಅವರು ನೀಡಿದ್ದಾರೆ ಎಂದು ನಿಗಮದ ಅಧ್ಯಕ್ಷ ಜೆ. ಹುಚ್ಚಪ್ಪ ಅವರು ತಿಳಿಸಿದರು.

ಇಂದು ನಗರದ ನಿಗಮದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಹಿಂದುಳಿದ ವರ್ಗಗಳಿಗೆ ಸರ್ಕಾರ ಘೋಷಿಸಿರುವಂತಹ ಯೋಜನೆಗಳನ್ನು ಉತ್ತಮ ರೀತಿ ಫಲಾನುಭವಿಗಳಿಗೆ ತಲುಪುವ ಕಾರ್ಯವನ್ನು ಮಾಡಿದೆ. ಆದ್ದರಿಂದ ಕೇಂದ್ರ ಸರ್ಕಾರವು ದೇಶದಲ್ಲಿಯೇ ನಮ್ಮ ಕರ್ನಾಟಕ ರಾಜ್ಯದ ನಿಗಮವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿರುವುದು ನಮಗೆ ಸಂತಸ ತಂದಿದೆ ಎಂದರು.

2016-17ನೇ ಸಾಲಿಗೆ ರಾಜ್ಯ ಸರ್ಕಾರವು ಒದಗಿಸಿದ ಒಟ್ಟು ಮೊತ್ತ 229.67 ಕೋಟಿ ರೂ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಒದಗಿಸಿದ ಮೊತ್ತ 30 ಕೋಟಿ ರೂ. ಅಲೆಮಾರಿ ಹಾಗೂ ಅರೆಅಲೆಮಾರಿ ಅಭಿವೃದ್ಧಿ ಮಂಡಳಿಯು ಒದಗಿಸಿದ ಮೊತ್ತ 15 ಕೋಟಿ ರೂ. ಹಾಗೂ ಕಳೆದ ಸಾಲಿನ ಉಳಿಕೆ ಮೊತ್ತ ಮತ್ತು ಮರುಪಾವತಿ ಪುನರ್ ವಿನಿಯೋಗದ ಮೊತ್ತ 49.16 ಕೋಟಿ ರೂ. ಹೀಗೆ ಒಟ್ಟು ಮೊತ್ತ 323.83 ಕೋಟಿ ಗಳಲ್ಲಿ ಒಟ್ಟು 50,037 ಹಿಂದುಳಿದ ವರ್ಗಗಳ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ಸಾಂಪ್ರದಾಯಿಕ ವೃತ್ತಿ ನಿರ್ವಹಿಸಲು ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ನಮ್ಮ ನಿಗಮದ ವತಿಯಿಂದ ಚೈತನ್ಯ ಸಬ್ಸಿಡಿ ಕಮ್ ಸಾಫ್ಟ್ ಲೋನ್ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಸ್ವಯಂ ಉದ್ಯೋಗಕ್ಕೆ ವೈಯಕ್ತಿಕ ನೇರ ಸಾಲ ಯೋಜನೆ, ಕಿರುಸಾಲ ಯೋಜನೆ, ಗಂಗಾಕಲ್ಯಾಣ ನೀರಾವರಿ ಯೋಜನೆ, ಮಹಿಳಾ ಸಮೃದ್ಧಿ ಯೋಜನೆ ಹಾಗೂ ಇನ್ನಿತರೆ ಜನಪರ ಯೋಜನೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಆರ್. ಏಕಾಂತಪ್ಪ, ನಿಗಮದ ಸದಸ್ಯರು ಮತ್ತು ನಿಗಮದ ಅಧಿಕಾರಿ ವರ್ಗದವರು ಹಾಜರಿದ್ದರು.

ಹೆಣ್ಣು ಮಕ್ಕಳಿಗೆ ಉತ್ತಮ, ಸುರಕ್ಷಿತ ಪರಿಸರ ನಿರ್ಮಿಸುವುದು ನಮ್ಮೆಲ್ಲರ ಹೊಣೆ-ಡಾ.ಶಾಲಿನಿ ರಜನೀಶ್

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ): ಹೆಣ್ಣು ಮಕ್ಕಳಿಗೆ ಉತ್ತಮ ಸುರಕ್ಷಿತ ಪರಿಸರವನ್ನು ನಿರ್ಮಿಸುವುದು ಸಮಾಜದ ಎಲ್ಲರ ಹೊಣೆಗಾರಿಕೆಯಾಗಿದೆ. ಎಲ್ಲರಂತೆ ಹೆಣ್ಣುಮಕ್ಕಳೂ ಸಹ ಉತ್ತಮ ಶಿಕ್ಷಣ, ಆಹಾರ, ಆರೋಗ್ಯ ಸೇರಿದಂತೆ ಮೂಲಭೂತ ಹಕ್ಕುಗಳನ್ನು ಪಡೆಯಲು ಅಧಿಕಾರ ಹೊಂದಿರುತ್ತಾಳೆ ಎಂಬುದನ್ನು ಅರಿತು ಸಮಾಜದ ಪ್ರತಿಯೊಬ್ಬರೂ ಹೆಣ್ಣುಮಗುವಿನ ರಕ್ಷಣೆಯ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ)-ಮಹಿಳಾ ಘಟಕ ಮತ್ತು ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಕಾಲೇಜು ಸಂಯುಕ್ತಾಶ್ರಯದಲ್ಲಿ ಇಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ “ನನ್ಹೀ ಸೀ ಕಲೀ-ಹೆಣ್ಣುಮಕ್ಕಳ ಪಾಲನೆ ಪೋಷಣೆ ಮತ್ತು ಸರ್ವಾಂಗೀಣ ಬೆಳವಣಿಗೆ ‘ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನ್ನಾಡುತ್ತಿದ್ದ ಅವರು, ಹೆಣ್ಣು ಮಕ್ಕಳು ಶಿಕ್ಷಣ, ಕಾನೂನು ಹಕ್ಕುಗಳನ್ನು ಪಡೆಯುವಲ್ಲಿ, ರಕ್ಷಣೆಯ ವಿಷಯದಲ್ಲಿ, ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ, ಗೌರವಾನ್ವಿತ ಜೀವನೋಪಾಯ ಕಂಡುಕೊಳ್ಳುವಲ್ಲಿ ಹಿಂದುಳಿದು ಅಸಮತೋಲನದ ಬದುಕು ಬದುಕುತ್ತಿದ್ದಾರೆ. ಈ ರೀತಿಯ ಅಸಮತೋಲನವನ್ನು ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.

ಬಾಲ್ಯವಿವಾಹ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಗಳಿಗೆ ತುತ್ತಾಗಿ ಬದುಕುವಂತಹ ಅಸಹಾಯಕ ಪರಿಸ್ಥಿತಿ ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಎದುರಾಗಿದೆ ಎಂದ ಅವರು, ಹೆಣ್ಣು ಭ್ರೂಣಹತ್ಯೆಯಂತಹ ಹೀನ ಕೃತ್ಯಗಳಿಂದ ಇಂದು ಪ್ರತಿ 1000 ಗಂಡುಮಕ್ಕಳಿಗೆ 957 ಹೆಣ್ಣುಮಕ್ಕಳು ಮಾತ್ರ ಇದ್ದಾರೆ. ಈ ರೀತಿಯ ಪ್ರಾಕೃತಿಕ ಅಸಮತೋಲನ ಮುಂದೆ ಗಂಭೀರ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಅದ್ದರಿಂದ ಈಗಲೇ ಎಚ್ಚೆತ್ತುಕೊಂಡು ನಾವುಗಳು ಹೆಣ್ಣುಮಕ್ಕಳ ಸಂರಕ್ಷಣೆಗೆ ಸುಧಾರಿತ ಕ್ರಮಗಳನ್ನು ಕೈಗೊಳ್ಳುವುದು ಒಳಿತು ಎಂದು ಅವರು ಅಭಿಪ್ರಾಯಪಟ್ಟರು.

ವರದಕ್ಷಿಣೆಯಂತಹ ಕೆಟ್ಟ ಪಿಡುಗನ್ನು ನಾವುಗಳು ಇಂದು ತೊಡೆದುಹಾಕಲೇಬೇಕಿದೆ ಎಂದ ಅವರು, ವರದಕ್ಷಿಣೆಯಿಂದ ಆವೃತಗೊಂಡ ವಿವಾಹ ಬಂಧನ ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಆದ ಕಾರಣ ಹೆಣ್ಣುಮಕ್ಕಳು ಈ ಕುರಿತು ತಮ್ಮ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಕರೆ ಕೊಟ್ಟರು.

ಉತ್ತಮ ವಿದ್ಯಾಭ್ಯಾಸ, ಉತ್ತಮ ಸುರಕ್ಷತೆ ಮತ್ತು ಪೂರಕ ಪರಿಸರ ನಿರ್ಮಾಣವಾದಲ್ಲಿ ಹೆಣ್ಣುಮಕ್ಕಳು ಯಾವ ಗಂಡು ಮಗುವಿಗೆ ಕಡಿಮೆಯಿಲ್ಲದಂತೆ ಸಾಧನೆಗೈಯಬಲ್ಲಳು.ಇದನ್ನರಿತು ನಾವೆಲ್ಲರೂ ಹೆಣ್ಣುಮಕ್ಕಳ ಸರ್ವಾಂಗೀಣ ಅಭಿವೃದ್ದಿ ಬಗ್ಗೆ ಚಿಂತಿಸಬೇಕಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ 24ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಅವರು, ಈ ದಿನಾಚರಣೆ ರಾಷ್ಟ್ರೀಯ ಹೆಣ್ಣುಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿರಲಿದ್ದು, ಇದರಿಂದಾಗಿ ದೇಶಾದ್ಯಂತ ಹೆಣ್ಣುಮಕ್ಕಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಸಹಾಯಕವಾಗುತ್ತದೆ ಎಂದು ಶಾಲಿನಿ ರಜನೀಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕಿ ಡಾ. ರಜನಿ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಕುಮಾರಿ, ಐಎಪಿ(ಕೇಂದ್ರ) ಅಧ್ಯಕ್ಷರಾದ ಡಾ. ಸಂತೋಷ್ ಸೋನ್ಸ್, ರಾಷ್ಟ್ರೀಯ ಅಧ್ಯಕ್ಷರಾದ ಡಾ. ನೀಲಂ ಗ್ರೊವರ್, ರಾಷ್ಟ್ರೀಯ ವಕ್ತಾರರಾದ ಡಾ. ಹಿಮಬಿಂದು ಸಿಂಗ್ ಮತ್ತು ಕಾಲೇಜಿನ ಅಧಿಕಾರಿ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು, ಜನವರಿ 20, (ಕರ್ನಾಟಕ ವಾರ್ತೆ): ಬೆಂಗಳೂರಿನ ವಿಶ್ವವಿಖ್ಯಾತ ಲಾಲ್‍ಬಾಗ್‍ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 205ನೇ ಫಲಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಪಿತಾಮಹ ಡಾ. ಎಂ. ಎಚ್. ಮರಿಗೌಡರ ಜನ್ಮಶತಮಾನೋತ್ಸವ ವರ್ಷಾಚರಣೆಯನ್ನು ತೋಟಗಾರಿಕಾ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಇಂದು ಉದ್ಫಾಟಿಸಿದರು.

ಇಂದಿನಿಂದ ಜನವರಿ 29 ರವರೆಗೆ 10 ದಿನಗಳ ಕಾಲ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಈ ವರ್ಷ ಅತ್ಯಂತ ವಿಶೇಷವಾಗಿದ್ದು ತೋಟಗಾರಿಕೆ ಪಿತಾಮಹ ಡಾ. ಎಂ. ಎಚ್. ಮರಿಗೌಡರ ಜನ್ಮಶತಮಾನೋತ್ಸವ ವರ್ಷಾಚರಣೆಯನ್ನು ಸಹ ಆಚರಿಸಲಾಗುತ್ತಿದೆ. ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ 4 ಲಕ್ಷ ವಿವಿಧ ಬಣ್ಣಧ ಗುಲಾಬಿಗಳನ್ನು ಬಳಸಿ ಗೋಲ್‍ಗುಂಬಜ್‍ನ್ನು ನಿರ್ಮಿಸಿರುವುದು ಈ ಪ್ರದರ್ಶನದ ವಿಶೇಷ ಎಂದು ಸಚಿವರು ತಿಳಿಸಿದರು.

ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಫಲಪುಷ್ಪ ಪ್ರದರ್ಶನದಲ್ಲಿ ದೇಶ ವಿದೇಶ ಸೇರಿದಂತೆ ಭಾರತದ ಅನೇಕ ರಾಜ್ಯಗಳ ವಿವಿಧ ಜಾತಿಯ ಹೂವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಮೇಯರ್ ಶ್ರೀಮತಿ ಜಿ ಪದ್ಮಾವತಿ, ಶಾಸಕ ಆರ್.ವಿ. ದೇವರಾಜ್, ತೋಟಗಾರಿಕಾ ಇಲಾಖಾ ಆಯುಕ್ತ ಪ್ರಭಾಶ್‍ಚಂದ್ರ ರೇ ಅವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಮತದಾರರ ದಿನಾಚರಣೆ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗವು ಜನವರಿ 25 ರಂದು ಮಧ್ಯಾಹ್ನ 12.30 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‍ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ಘನತೆವೆತ್ತ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಹಾಗೂ ಸರ್ಕಾರದ ಪದನಿಮಿತ್ತ ಪ್ರಧಾನ ಕಾರ್ಯದರ್ಶಿ ಸಿ.ಆ.ಸು.ಇ. (ಚುನಾವಣೆಗಳು) ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಚುನಾವಣಾ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಪ್ರಶಸ್ತಿ ಪತ್ರ, ಇಪಿಐಸಿ ಹೊಸ ಕಾರ್ಡ್ ವಿತರಣೆ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.

ಮಾಜಿ ಯೋಧರ ಪತ್ನಿಯರಿಗೆ ಹಾಲಿ ನೀಡಲಾಗುತ್ತಿರುವ ಮಾಸಿಕ ಗೌರವಧನ ಏರಿಕೆ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ): ಎರಡನೇ ಮಹಾ ಯುದ್ಧದಲ್ಲಿ ಭಾಗವಹಿಸಿ ಪಿಂಚಣಿಯಿಲ್ಲದೇ ಬಿಡುಗಡೆಗೊಂಡ ಮಾಜಿ ಯೋಧರಿಗೆ ಹಾಗೂ ಮೃತ ಮಾಜಿ ಯೋಧರ ಪತ್ನಿಯರಿಗೆ ಹಾಲಿ ನೀಡಲಾಗುತ್ತಿರುವ ಮಾಸಿಕ ಗೌರವಧನವನ್ನು ರೂ 3,000 ದಿಂದ ರೂ 6,000/- ಗಳಿಗೆ ಹೆಚ್ಚಿಸಿ ಡಿಸೆಂಬರ್ 26 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದೆ.

ಹೆಚ್ಚಿನ ವಿವರಗಳೀಗೆ ಸಂಬಂಧಪಟ್ಟ ಜಂಟಿ/ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್‍ವಸತಿ ಇಲಾಖೆ ಹಾಗೂ ಮಾಸಿಕ ಗೌರವಧನ ಪಡೆಯುತ್ತಿರುವ ಸಂಬಂಧಿಸಿದ ಖಜಾನಾಧಿಕಾರಿ ಅಥವಾ ಬ್ಯಾಂಕ್‍ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗುತ್ತಿಗೆ ಆಧಾರದ ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧಾರ – ಹೆಚ್ ಆಂಜನಯ್ಯ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ)
ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನಯ್ಯ ಅವರು ತಿಳಿಸಿದರು.

ವಿಕಾಸಸೌಧದಲ್ಲಿ ಸಫಾಯಿ ಕರ್ಮಚಾರಿಗಳ ಸಭೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ನಿವೇಶನ ನೀಡುವ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ಪೌರಕಾರ್ಮಿಕರಿಗೆ ಆಗುತ್ತಿರುವ ಶೋಷಣೆಗಳನ್ನು ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳಲಿದೆ, ಅಲ್ಲದೆ ಪೌರಕಾರ್ಮಿಕರನ್ನು ಶೋಷಣೆ ಮುಕ್ತರನ್ನಾಗಿ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಲಿದೆ ಎಂದರು.

ಮ್ಯಾನ್‍ಹೋಲ್‍ನಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣ ಕಳೆದುಕೊಂಡ ಪೌರ ಕಾರ್ಮಿಕರ ಕುಟುಂಬದ ಅವಲಂಭಿತರಿಗೆ ಪರಿಹಾರ ಹಾಗೂ ಅನುಕಂಪದ ಆಧಾರದ ನೌಕರಿ ನೀಡಲು ಚಿಂತನೆ ನಡೆಸಲಾಗಿದೆ ಎಂದ ಸಮಾಜ ಕಲ್ಯಾಣ ಸಚಿವರು ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಕೊಡಿಸಿ ಅದರ ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆವತಿಯಿಂದ ಭರಿಸಲು ಉದ್ದೇಶಿಸಲಾಗಿದೆ ಮತ್ತು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ವೇತನ, ಸವಲತ್ತು ಹಾಗೂ ಖಾಂಯಾತಿಗೆ ಸರ್ಕಾರ ಆದಷ್ಟು ಬೇಗ ಸರ್ಕಾರ ಕ್ರಮ ಜರುಗಿಸಲಿದೆ ಎಂದು ಸಚಿವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರ ಮುಖಂಡರು ಸಭೆಯಲ್ಲಿ ಹಾಜರಿದ್ದರು.

ಮುಂದಿನ ಜಂಟಿ ಅಧಿವೇಶನದಲ್ಲಿ ಕೆರೆ ಒತ್ತುವರಿ ಸಮಿತಿ ವರದಿ ಮಂಡನೆಗೆ ಇಚ್ಚೆ – ಕೆ.ಬಿ. ಕೋಳಿವಾಡ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ): ಮುಂಬರುವ ಜಂಟಿ ಅಧಿವೇಶನದಲ್ಲಿ ಕೆರೆ ಒತ್ತುವರಿ ಸದನ ಸಮಿತಿ ವರದಿಯನ್ನು ಸದನದಲ್ಲಿ ಮಂಡಿಸಲು ಇಚ್ಚಿಸಿದ್ದೇನೆ ಎಂದು ವಿಧಾನಸಭಾಧ್ಯಕ್ಷರು ಹಾಗೂ ಕರೆ ಒತ್ತುವರಿ ಜಂಟಿ ಸದನ ಸಮಿತಿಯ ಅಧ್ಯಕ್ಷರೂ ಆದ ಕೆ.ಬಿ. ಕೋಳಿವಾಡ ಅವರು ತಿಳಿಸಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಭೇಟಿಮಾಡಿದ ವರದಿಗಾರರೊಂದಿಗೆ ಮಾತನಾಡಿದ ಕೆ.ಬಿ. ಕೋಳಿವಾಡ ಅವರು ವರದಿ ಮಂಡಿಸಲು ಸದನ ಸಮಿತಿಯ ಸದಸ್ಯರು ಸಹಮತ ನೀಡಬೇಕು ಎಂದರು.

ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನ ಮಂತ್ರಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾತನಾಡಿದ ವಿಧಾನಸಭಾಧ್ಯಕ್ಷರು ಈ ಸಂಬಂಧ ಈಗಾಗಲೇ ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಕಬ್ಬನ್ ಉದ್ಯಾನವನದಲ್ಲಿ ಈ ಭಾನುವಾರ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ) : ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್ ಪಾರ್ಕ್) ಒಳರಸ್ತೆಗಳಲ್ಲಿ ಭಾನುವಾರದ ದಿನಗಳಂದು ಸಾರ್ವಜನಿಕ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಉದ್ಯಾನವನದ ಆವರಣದಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರ ಅನುಕೂಲಕ್ಕಾಗಿ ಪ್ರತಿ ಭಾನುವಾರದ ದಿನಗಳಂದು ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿರುತ್ತದೆ.

ದಿನಾಂಕ: 22-01-2017ರ ಭಾನುವಾರದಂದು ಶ್ರೀ ಚಾಮರಾಜೇಂದ್ರ ಉದ್ಯಾನವನದ (ಕಬ್ಬನ್ ಉದ್ಯಾನವನ) ಬ್ಯಾಂಡ್ ಸ್ಟ್ಯಾಂಡ್ ಆವರಣ ಹಾಗೂ ಮುಂಭಾಗದ ರಸ್ತೆಯಲ್ಲಿ ಮತ್ತು ಶ್ರೀ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಕೆಳಕಂಡ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸದರಿ ಕಾರ್ಯಚಟುವಟಿಕೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಈ ಮೂಲಕ ಕೋರಲಾಗಿದೆ.

1) ಬೆಳಿಗ್ಗೆ 06.00 ಗಂಟೆಯಿಂದ ಬೆಳಿಗ್ಗೆ 07.00 ಗಂಟೆಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ “ಉದ್ಯಾನವನದಲ್ಲಿ ಉದಯರಾಗ” ಎಂಬ ಶೀರ್ಷಿಕೆಯಡಿ ಶ್ರೀ ಕೆ.ಹೆಚ್. ನಡುವಿನಮನೆ ಮತ್ತು ತಂಡ, ಗದಗ ಜಿಲ್ಲೆ ರವರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

2) ಸಂಜೆ 05.00 ಗಂಟೆಯಿಂದ ಸಂಜೆ 06.00 ಗಂಟೆಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ “ಉದ್ಯಾನವನದಲ್ಲಿ ಸಂಧ್ಯಾರಾಗ” ಎಂಬ ಶೀರ್ಷಿಕೆಯಡಿ ಶ್ರೀ ಎಂ.ಎನ್. ಸುನೀಲ್ ಕುಮಾರ್ ಮತ್ತು ತಂಡ , ಗುಂಡ್ಲುಪೇಟೆ, ಚಾಮರಾಜನಗರ ಜಿಲ್ಲೆ ರವರಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

3) ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಉದ್ಯಾನವನದಲ್ಲಿರುವ ಒಳರಸ್ತೆಗಳಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯರವರ ಸಹಯೋಗದೊಂದಿಗೆ ಬಾಡಿಗೆ ರಹಿತ ಸೈಕಲ್ ಸವಾರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

4) ಕಬ್ಬನ್ ಉದ್ಯಾನವನದ ಒಳರಸ್ತೆಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ವಯೋವೃದ್ಧರ ಅನುಕೂಲಕ್ಕಾಗಿ ಎರಡು ಸಂಖ್ಯೆಯ ಪರಿಸರ ಸ್ನೇಹಿ ವಿದ್ಯುತ್‍ಚಾಲಿತ ವಾಹನಗಳ ಸೇವೆಯನ್ನು ನಿಗಧಿತ ಶುಲ್ಕ ನೀಡಿ ಸಾರ್ವಜನಿಕರು ಪಡೆಯಬಹುದು.

ಈ ಭಾನುವಾರದ ವಿಶೇಷ ಕಾರ್ಯಕ್ರಮಗಳು:

I.ಸ್ಥಳ: ಬ್ಯಾಂಡ್ ಸ್ಟ್ಯಾಂಡ್ ಆವರಣ

ಬೆಳಿಗ್ಗೆ 7.00 ಗಂಟೆಯಿಂದ 8.00 ಗಂಟೆಯವರೆಗೆ ಯೂನಿವರ್ಸ್ ಆರ್ಟ್ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ಡಾ: ಸುರೇಶ್.ಎಸ್ ಕೌಶಿಕ್ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ 8.00 ಗಂಟೆಯಿಂದ 9.00 ಗಂಟೆಯವರೆಗೆ ಶ್ರೀವಾಣಿ ವಿದ್ಯಾ ಕೇಂದ್ರ , ರಾಜಾಜಿನಗರ, ಬೆಂಗಳೂರು ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಭವನ ಸೊಸೈಟಿ, ಬೆಂಗಳೂರು ರವರ ಸಹಯೋಗದೊಂದಿಗೆ ಶ್ರೀಮತಿ ಮಂಜುಳ ಮಂಜುನಾಥ್, ಸಪ್ತಸ್ವರ ವಿದ್ಯಾಲಯ, ಬೆಂಗಳೂರು ರವರಿಂದ ಸಮೂಹ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

II. ಸ್ಥಳ: ಶ್ರೀ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಆವರಣ

ದಿ ಪ್ಯಾರಾಚ್ಯೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್, ಬೆಂಗಳೂರು ರವರ ವತಿಯಿಂದ ಬೆಳಿಗ್ಗೆ 6.30 ಗಂಟೆಯಿಂದ ಬೆಳಿಗ್ಗೆ 8.30 ಗಂಟೆಯವರೆಗೆ ರಾಷ್ಟ್ರೀಯ ಏಕತಾ ಓಟ ಎಂಬ ಶೀರ್ಷಿಕೆಯಡಿ ಓಟದ ಕಾರ್ಯಕ್ರಮ ಮತ್ತು ಭಾರತೀಯ ಸೇನೆಯಲ್ಲಿ ಬಳಸಲಾಗುವ ಶಸ್ತ್ರಾಸ್ತ್ರಗಳ ಪ್ರದರ್ಶನ ಹಾಗೂ ಮಿಲಿಟರಿ ಬ್ಯಾಂಡ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ 6.00 ಗಂಟೆಯಿಂದ 8.00 ಗಂಟೆಯವರೆಗೆ ಅಕ್ಷರ ಪವರ್ ಯೋಗಾ ಅಕಾಡೆಮಿ ರವರ ವತಿಯಿಂದ ಮಹಿಳೆಯರಿಗಾಗಿ ಸ್ವ ಆತ್ಮ ರಕ್ಷಣೆ (Self Defence) ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಈ ವಾರದ ಬೆಳ್ಳಿ ಸಿನಿಮಾ – ಕೃಷ್ಣಲೀಲಾ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ): ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಜನವರಿ 21 ರ ಶನಿವಾರದಂದು ಸಂಜೆ 4.00 ಗಂಟೆಗೆ ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಈ ವಾರದ ಬೆಳ್ಳಿ ಸಿನಿಮಾ “ಕೃಷ್ಣಲೀಲಾ” ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ಅವರು ತಿಳಿಸಿದ್ದಾರೆ.

ಅಂದು “ಕೃಷ್ಣಲೀಲಾ” ಚಲನಚಿತ್ರದ ನಿರ್ದೇಶಕ ಶಶಾಂಕ್ ಅವರು ಬೆಳ್ಳಿಮಾತು ಅತಿಥಿಯಾಗಿದ್ದು, ಈ ಸಂದರ್ಭದಲ್ಲಿ ನಟರು ಹಾಗೂ ನಿರ್ಮಾಪಕರೂ ಆದ ಅಜೇಯ ರಾವ್ ಪಾಲ್ಗೊಳ್ಳಲಿದ್ದಾರೆ.

ಗಣರಾಜ್ಯೋತ್ಸವ – 5 ರಿಂದ 16 ವರ್ಷದ ಮಕ್ಕಳಿಗೆ ವಿವಿಧ ಸ್ಪರ್ಧೆ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ): ಗಣರಾಜ್ಯೋತ್ಸವ ಅಂಗವಾಗಿ ಬಾಲಭವನ ಸೊಸೈಟಿ ಬೆಂಗಳೂರು ಇವರು 5 ರಿಂದ 16 ವರ್ಷದ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಜನವರಿ 24 ರೊಳಗಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತ ಮಕ್ಕಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ದೇಶಭಕ್ತಿ ಗೀತೆ, ಸ್ಥಳದಲ್ಲೇ ಚಿತ್ರಬಿಡಿಸುವ ಚಿತ್ರಕಲೆ ಸ್ಪರ್ಧೆಗಳು ನಡೆಯಲಿದ್ದು, ಹೆಚ್ಚಿನ ವಿವರಗಳಿಗಾಗಿ ಹಾಗೂ ನೋಂದಣಿಗಾಗಿ ಕಾರ್ಯದರ್ಶಿಗಳ ಕಚೇರಿ, ಬಾಲಭವನ ಸೊಸೈಟಿ, ಕಬ್ಬನ್ ಪಾರ್ಕ್, ಬೆಂಗಳೂರು ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080 – 22861423/080-22864189 ಮೂಲಕ ಅಥವಾ Email Id:secybalbhavan.bng@gmail.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬಾಲಭವನದ ಪ್ರಕಟಣೆ ತಿಳಿಸಿದೆ.

‘ಕಿಸಾನ್ ವಾಹಿನಿ’ ಕಡ್ಡಾಯ ಪ್ರಸಾರಕ್ಕೆ ಸೂಚನೆ

ಬೆಂಗಳೂರು, ಜನವರಿ 20 (ಕರ್ನಾಟಕ ವಾರ್ತೆ): ದೂರದರ್ಶನ ಕೇಂದ್ರದ ಕೃಷಿ ಚಟುವಟಿಕೆಗಳ ಕುರಿತು ರೈತ ಸ್ನೇಹಿ ಹಾಗೂ ಮಾರ್ಗದರ್ಶಿ ಕಾರ್ಯಕ್ರಮಗಳನ್ನು ಬಿತ್ತರಿಸುವ ವಿಶೇಷ ವಾಹಿನಿಯಾದ “ದೂರದರ್ಶನ ಕಿಸಾನ್ ವಾಹಿನಿಯನ್ನು” ಕಡ್ಡಾಯವಾಗಿ ಎಲ್ಲಾ ಕೇಬಲ್ ಆಪರೇಟರ್ ಮತ್ತು ಎಂ.ಎಸ್.ಓ. ಗಳವರು ಪ್ರಸಾರ ಮಾಡಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯವು ಸೂಚಿಸಿದೆ.

ರೈತರಿಗಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿರುವ ಕಿಸಾನ್ ವಾಹಿನಿಯನ್ನು ದೂರದರ್ಶನ ವಾಹಿನಿಯ ನಂತರದಲ್ಲೇ ಪ್ರಸಾರವಾಗುವಂತೆ ನೋಡಿಕೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಮಹಿಳಾ ಉದ್ದೇಶಿತ ಆಯವ್ಯಯದಲ್ಲಿ 66,694 ಕೋಟಿ ರೂ. ಅನುದಾನ ನಿಗದಿ

ಬೆಂಗಳೂರು, ಜ. 20 (ಕರ್ನಾಟಕ ವಾರ್ತೆ)-: ರಾಜ್ಯದಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದಲ್ಲಿ 2016-17ನೇ ಸಾಲಿಗೆ 66,694 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದ್ದು, ವೆಚ್ಚವಾಗಿರುವ ಅನುದಾನದ ಬಗ್ಗೆ ಮಾರ್ಚ್ ಅಂತ್ಯದ ವೇಳೆಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅವರು ತಿಳಿಸಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರಿಗೆ ಈ ಮಾಹಿತಿ ನೀಡಿದರು.

ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ 14 ಲಕ್ಷ ಮಹಿಳೆಯರು ಪಹಣಿ ಹೊಂದಿದ್ದಾರೆ. ಅಂತೆಯೇ ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಪಹಣಿ ವಿತರಿಸುವ ಗುರಿ ಇದೆ ಎಂದು ಅವರು ಮಾಹಿತಿ ನೀಡಿದರು.

ಮೀನುಗಾರಿಕಾ ಇಲಾಖೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ. ರೈತರ ಆತ್ಮಹತ್ಯೆ ಕುರಿತಂತೆ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಭೆಗೆ ಮಾಹಿತಿ ನೀಡದ ಹಾಗೂ ಅಪೂರ್ಣ ಮಾಹಿತಿ ನೀಡಿದ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಆಸಿಡ್ ಸಂತ್ರಸ್ತೆಯರಿಗೆ ಮಹಿಳಾ ಆಯೋಗದಿಂದ ಮಾಸಿಕ 3 ಸಾವಿರ ರೂ.ಗಳ ಮಾಸಾಶನ ನೀಡಲಾಗುತ್ತಿದೆ. ಈ ವರೆಗೆ 189 ಸಂತ್ರಸ್ತೆಯರಲ್ಲಿ 12 ಮಂದಿ ಮಾತ್ರ ಈ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದವರಿಗೆ ಈ ಸೌಲಭ್ಯ ಪಡೆದುಕೊಳ್ಳುವಂತೆ ಮತ್ತೊಮ್ಮೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಸರ್ಕಾರ ಎರಡು ಸದಸ್ಯ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಜೊತೆಗೆ ಪ್ರತಿ ಎಪಿಎಂಸಿಗೆ ಒಬ್ಬ ಮಹಿಳೆಯನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಲಾಗುತ್ತಿದೆ. ಇದರಿಂದಾಗಿ ರಾಜ್ಯದ 131 ಎಪಿಎಂಸಿಗಳಲ್ಲಿ ಮಹಿಳಾ ಸದಸ್ಯರ ಸಂಖ್ಯೆ 393ಕ್ಕೇರಲಿದೆ ಎಂದು ಸಚಿವೆ ಉಮಾಶ್ರೀ ಅವರು ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ದೀಪಾ ಚೋಳನ್, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ವಸುಂಧರಾ ದೇವಿ, ಮಹಿಳಾ ಆಯೋಗದ ಕಾರ್ಯದರ್ಶಿ ಕವಿತಾ ಮನ್ನಿಕೇರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

DSCN5354

DSCN5359