Government of Karnataka

Department of Information

Wednesday 14/09/2016

ಸ್ಯಾಂಕಿ ಕೆರೆ ಸುತ್ತ ಮುತ್ತಲ ಸರ್ಕಾರಿ ಭೂ ಒತ್ತುವರಿ ತೆರವಿಗೆ ಕ್ರಮ : ಸಿದ್ದರಾಮಯ್ಯ

Date : ಶುಕ್ರವಾರ, ಏಪ್ರಿಲ್ 1st, 2016

ಬೆಂಗಳೂರು, ಏಪ್ರಿಲ್ 1 (ಕರ್ನಾಟಕ ವಾರ್ತೆ) : ಸ್ಯಾಂಕಿ ಕೆರೆಯ ಸುತ್ತಮತ್ತ ಆಗಿರುವ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ್ದ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರ ನೇತೃತ್ವದ ನಿಯೋಗಕ್ಕೆ ಮುಖ್ಯಮಂತ್ರಿ ಈ ಭರವಸೆ ನೀಡಿದ್ದಾರೆ.

ಸ್ಯಾಂಕಿ ಕೆರೆಯ ಸುತ್ತಮುತ್ತ ಅರಣ್ಯ ಇಲಾಖೆಗೆ ಸೇರಿದ ಜಾಗವಿದೆ. ಆದರೆ ಖಾಸಗಿ ವ್ಯಕ್ತಿಗಳು ಅದನ್ನು ಒತ್ತುವರಿ ಮಾಡಿ ಕೊಂಡು ಕಟ್ಟಡ ನಿರ್ಮಿಸುತ್ತಿದ್ದಾರೆ. ಜೊತೆಗೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಕೆಲ ಅಧಿಕಾರಿಗಳೂ ಸರ್ಕಾರಿ ಜಾಗದ ಅಕ್ರಮ ಪರಭಾರೆಗೆ ಸಹಕಾರ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶೆಟ್ಟರ್ ನೇತೃತ್ವದ ನಿಯೋಗ ಒತ್ತಾಯಿಸಿತು.

ಒತ್ತುವರಿ ತೆರವುಗೊಳಿಸುವುದರ ಜೊತೆಗೆ ಈ ಕುರಿತು ಸಮಗ್ರ ತನಿಖೆ ಆಗಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಪರಾಭರೆಗೆ ಕುಮ್ಮಕ್ಕು ನೀಡಿರುವ ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು ಅಮಾನತುಗೊಳಿಸಬೇಕು ಎಂದು ಶೆಟ್ಟರ್ ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಈ ಕುರಿತು ಸಭೆ ಕರೆದು ಚರ್ಚಿಸುವ ಜೊತೆಗೆ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡುವುದಾಗಿ ತಿಳಿಸಿದರು.