Government of Karnataka

Department of Information

Tuesday 15/11/2016

500 ರೂ ಹಾಗೂ 1000 ರೂ ನೋಟು ನಿಷೇಧ, ಕಪ್ಪು ಹಣ ಇಟ್ಟುಕೊಂಡವರಿಗೆ ಮಾತ್ರ ಕಷ್ಟ : ಸಿದ್ದರಾಮಯ್ಯ

Date : ಬುಧವಾರ, ನವೆಂಬರ 9th, 2016

ಬೆಂಗಳೂರು, ನವೆಂಬರ್ 9 ( ಕರ್ನಾಟಕ ವಾರ್ತೆ ) : ಐದು ನೂರು ರೂ ಹಾಗೂ ಒಂದು ಸಾವಿರ ರೂ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮದಿಂದ ಕಪ್ಪು ಹಣ ಇಟ್ಟುಕೊಂಡವರಿಗೆ ಮಾತ್ರ ಕಷ್ಟ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಅಭಿಪ್ರಾಯಪಟ್ಟರು.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದ ನಾಡ ಪ್ರಭು ಕೆಂಪೇಗೌಡ ಬಡವಾಣೆಯಲ್ಲಿ ಗಣಕೀಕೃತ ವ್ಯವಸ್ಥೆಯ ಮೂಲಕ ನಿವೇಶನಗಳ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡುತ್ತಿದ್ದರು.

ರಾಷ್ಟ್ರದಲ್ಲಿ ಕಪ್ಪು ಹಣ ಹಾವಳಿಯನ್ನು ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸುತ್ತಿದ್ದರು.

ಟಿಪ್ಪೂ ಜಯಂತಿ : ಅಹಿತಕರ ಘಟನೆ ನಡೆದರೆ ಅವರೇ ಕಾರಣ !

ಟಿಪ್ಪೂ ಜಯಂತಿ ಆಚರಣೆಗೆ ಇದೀಗ ವಿರೋಧ ವ್ಯಕ್ತಪಡಿಸುತ್ತಿರುವ ಭಾರತೀಯ ಜನತಾ ಪಕ್ಷದ ಮುಖಂಡರಾದ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಆರ್ ಅಶೋಕ್ ಅವರು ಅಧಿಕಾರದಲ್ಲಿದ್ದಾಗ ಏನೇನು ಮಾತನಾಡಿದ್ದರು ಎಂಬುದನ್ನು ದಾಖಲೆಗಳನ್ನು ಪರಿಶೀಲಿಸಿ ತಿಳಿದುಕೊಳ್ಳಿ. ಕೋಮು ಸಾಮರಸ್ಯ ಕದಡುವ ಅವರ ಕುಟಿಲ ತಂತ್ರಕ್ಕೆ ಯಾರೂ ಸೊಪ್ಪು ಹಾಕಬಾರದು. ಯಾವುದೇ ಅಹಿತಕರ ಘಟನೆ ನಡೆದರೂ ಅವರೇ ಕಾರಣ ಎಂದು ಮಾಧ್ಯಮದವರ ಮತ್ತೊಂದು ಪ್ರಶ್ನೆಗೆ ಸಿದ್ದರಾಮಯ್ಯ ಅವರು ಉತ್ತರಿಸಿದರು.