Government of Karnataka

Department of Information

Monday 16/10/2017

ಮುಖ್ಯಮಂತ್ರಿಯವರಿಂದ ರೈತರ ಬೆಳೆ ವಿಮೆಗೆ ಆನ್‍ಲೈನ್ ನೋಂದಣಿ ಸೌಲಭ್ಯ ಕಲ್ಪಿಸುವ ಸಂರಕ್ಷಣಾ ತಂತ್ರಾಂಶ ಬಿಡುಗಡೆ

Date : ಗುರುವಾರ, ಜೂನ್ 30th, 2016

ಬೆಂಗಳೂರು, ಜೂನ್ 30 (ಕರ್ನಾಟಕ ವಾರ್ತೆ) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬೆಳೆ ವಿಮೆಗೆ ಆನ್‍ಲೈನ್ ನೋಂದಣಿ ಸೌಲಭ್ಯ ಕಲ್ಪಿಸುವ ಸಂರಕ್ಷಣಾ ತಂತ್ರಾಂಶವನ್ನು ನಗರದಲ್ಲಿ ಗುರುವಾರ ಬಿಡುಗಡೆ ಮಾಡಿದರು.

ಬೆಳೆ ವಿಮೆಗಾಗಿ ರೈತರ ಆನ್ ಲೈನ್ ನೊಂದಣಿ ( ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ (ಪಿ.ಎಂ.ಎಫ್.ಬಿ.ವೈ) ಮತ್ತು ಪುನಾರಚಿತ ಹವಾಮಾನ-ಆಧಾರಿತ ಬೆಳೆ ವಿಮೆ ಯೋಜನೆ (ಡಬ್ಲ್ಯೂ.ಬಿ.ಸಿ.ಐ.ಎಸ್ ) ) ಯ ಸಂಯೋಜನೆ ಇದಾಗಿದೆ.

ಅನಿರೀಕ್ಷಿತ ಘಟನೆಗಳಿಂದ ಮತ್ತು ದುರಂತಗಳಿಂದ ಉಂಟಾಗುವ ಬೆಳೆ ನಷ್ಟ ಅಥವಾ ಹಾನಿಯಿಂದ ಸಂಭವಿಸುವ ಸಂಕಷ್ಟದಲ್ಲಿ ರೈತರಿಗೆ ಆರ್ಥಿಕವಾಗಿ ನೆರವಾಗಲು ಭಾರತ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಪುನಾರಚಿತ ಹವಾಮಾನ-ಆಧಾರಿತ ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತಂದಿದೆ.

ರಾಜ್ಯದ ಮುಖ್ಯಮಂತ್ರಿ 2016-17 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳೂ ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದಾಗ ರೈತನ ನೆರವಿಗೆ ಬರಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಾರಿಗೆ ತರಲಾಗುವುದು. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದ ವಂತಿಗೆಯಾಗಿ 675.38 ಕೋಟಿ ರೂ ನಿಗದಿಪಡಿಸಲಾಗಿದೆ.

ಸರ್ಕಾರವು ವಿಮಾ ಕಂತಿನ ಮಿತಿಯನ್ನು ತೆಗೆದು ಹಾಕಿದೆ. ರೈತರು ಪಾವತಿಸಬೇಕಾದ ವಿಮಾ ಕಂತಿನ ಹೊರೆಯನ್ನು ಕಡಿಮೆ ಮಾಡಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಪಾವತಿಸಬೇಕಾದ ವಿಮಾ ಕಂತಿನ ಪ್ರಮಾಣವನ್ನು ಆಹಾರ ಧಾನ್ಯಗಳು ಮತ್ತು ಎಣ್ಣೆಗಳು ಬೆಳೆಗಳಿಗೆ ಶೇಕಡಾ 1.5 ರಿಂದ ಶೇಕಡಾ ಎರಡ ರವರೆಗೆ ಮತ್ತು ವಾರ್ಷಿಕ ವಾಣಿಜ್ಯ ಅಥವಾ ವಾರ್ಷಿಕ ತೋಟಗಾರಿಕಾ ಬೆಳೆಗಳಿಗೆ ಶೇಕಡಾ ಐದಕ್ಕೆ ನಿಗಧಿಪಡಿಸಿದೆ. ರಾಜ್ಯ ಸರ್ಕಾರವು ಶೇಕಡಾ 50 ರಷ್ಟು ರೈತರನ್ನು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಉತ್ಸುಕವಾಗಿದೆ. ರೈತರು ಪಾವತಿಸಬೇಕಾದ ವಿಮಾ ಕಂತಿನ ಪ್ರಮಾಣವು ಕಡಿಮೆ ಇರುವುದರಿಂದ ಅಧಿಕ ಸಂಖ್ಯೆಯ ರೈತರು ನೊಂದಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಫಸಲಿನ ಬೆಳವಣಿಗೆಯ ವಿವಿಧ ಹಂತಗಳಿಂದ ಹಿಡಿದು ಅಂತಿಮವಾಗಿ ವಿಮಾ ಮೊತ್ತವನ್ನು ಪಾವತಿಸುವವರೆಗೆ ಪ್ರತಿಯೊಬ್ಬ ರೈತನಿಗೆ ಸಂಬಂಧಿಸಿದ ಅಂಕಿ-ಅಂಶಗಳ ನಿಗಾ ವಹಿಸಿ ನಿರ್ವಹಿಸಬೇಕಾಗಿದೆ. ಈ ಕಾರಣಗಳಿಂದಾಗಿ ಬೆಳೆ ವಿಮೆ ಪ್ರಕ್ರಿಯೆಯನ್ನು ಆದಿಯಿಂದ ಅಂತ್ಯದವರೆಗೆ ಗಣಕೀಕೃತಗೊಳಿಸುವ ಸಲುವಾಗಿ ಸಂರಕ್ಷಣೆ ತಂತ್ರಾಂಶವನ್ನು ಸರ್ಕಾರವು ಅಭಿವೃದ್ಧಿಪಡಿಸಿದೆ.

ಗಣಕೀಕರಣ ಕಾರ್ಯಕ್ರಮದ ಉದ್ದೇಶ ಮತ್ತು ಕಾರ್ಯಸೂಚಿ ಏನೆಂದರೆ ವಿಮೆ ಯೋಜನೆಯ ವ್ಯಾಪ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಳಪಡಿಸುವುದು ಮತ್ತು ದಕ್ಷ, ಪಾರದರ್ಶಕ ಹಾಗೂ ಜವಾಬ್ದಾರಿಯುತ ವ್ಯವಸ್ಥೆಯನ್ನು ಜಾರಿಗೆ ತಂದು ರೈತ ಸಮುದಾಯಕ್ಕೆ ತ್ವರಿತಗತಿಯಲ್ಲಿ ಸೌಲಭ್ಯಗಳನ್ನು ವಿತರಿಸಲು ಮತ್ತು ಅಪಾಯ ಪರಿಹಾರವನ್ನು ಒದಗಿಸಲು ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದಾಗಿದೆ.

ರೈತರಿಗೆ ಲಾಭಗಳು

ಒಮ್ಮೆ ರೈತನ ಅರ್ಜಿ ಅಥವಾ ಪ್ರಸ್ತಾವನೆಯನ್ನು ಗಣಕೀಕೃತ ವ್ಯವಸ್ಥೆಗೆ ಭರ್ತಿ ಮಾಡಿದ ತಕ್ಷಣವೇ ನಿರ್ದಿಷ್ಠ ಅರ್ಜಿ ಸಂಖ್ಯೆ ಸೃಷ್ಟಿಯಾಗಲಿದೆ. ಈ ಸಂಖ್ಯೆಯನ್ನು ಬಳಸುವುದರ ಮೂಲಕ ರೈತನು ವಿಮಾ ಮೊತ್ತ ಪಾವತಿ ತನ್ನ ವಿಮಾ ಪ್ರಸ್ತಾವನೆಯ ವಿವಿಧ ಹಂತಗಳನ್ನು ಎಸ್ ಎಂ ಎಸ್ ಮೂಲಕ ಅಥವಾ ಅಂತರ್ಜಾಲ ತಾಣವನ್ನು ಸಂದರ್ಶಿಸಿ ತಿಳಿದುಕೊಳ್ಳಬಹುದು. ಅಲ್ಲದೆ, ಇದು ‘ಆಧಾರ್’ ಗೆ ಸಂಪರ್ಕ ಕಲ್ಪಿಸಲಿದೆ. ವಿಮಾ ಮೊತ್ತವನ್ನು ನೇರವಾಗಿ `ಆಧಾರ್’ಗೆ ಜೋಡಿಸಲಾದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಇದರಿಂದ ಅರ್ಹ ಘಲಾನುಭವಿಗೆ ನೇರವಾಗಿ ಹಾಗೂ ಖಚಿತವಾಗಿ ಹಣ ಪಾವತಿಯಾಗಲಿದೆ.

ಬೆಳೆ ಕಟಾವು ಮೊಬೈಲ್ ತಂತ್ರವನ್ನು ಅಳವಡಿಸಿ ವಿಡಿಯೋ ಚಿತ್ರೀಕರಣದ ಮೂಲಕ ಬೆಳೆ ಕಟಾವು ಪ್ರಯೋಗ ಕೈಗೊಂಡ ತಕ್ಷಣ ಅಂಕಿ ಅಂಶಗಳನ್ನು ದಾಖಲಿಸಿ ರವಾನಿಸುವುದರಿಂದ ಮಾಹಿತಿಯನ್ನು ತಿದ್ದುವ ಸಂಭವ ಕಡಿಮೆಯಾಗಲಿದೆ. ಹಿಂದಿನ ವ್ಯವಸ್ಥೆಗೆ ಹೋಲಿಸಿದಲ್ಲಿ ಸಕಾಲದಲ್ಲಿ ಕ್ಲೇಮು ಇತ್ಯರ್ಥಪಡಿಸಲಾಗುತ್ತದೆ, ಈ ಹಿಂದೆ ಇದಕ್ಕಾಗಿ 12 ರಿಂದ 18 ತಿಂಗಳ ಕಾಲಾವಕಾಶದ ಅವಶ್ಯಕತೆ ಇತ್ತು. ಇದರಿಂದ ಸುಲಭವಾಗಿ ಸುಳ್ಳು ವಿಮಾ ಪ್ರಕರಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಅಲ್ಲದೆ, `ರಿಡಕ್ಷನ್ ಫ್ಯಾಕ್ಟರ್’ ಅಳವಡಿಕೆ ಸಂಭವ ಕಡಿಮೆಯಾಗಲಿದೆ. ‘ಭೂಮಿ ತಂತ್ರಾಂಶವು’ `ಜಿಯೋ ಆಧಾರಿತ’ ಮಾಹಿತಿಯೊಂದಿಗೆ ಸಂಪರ್ಕ ಹೊಂದಿದೆ. ಅಂತೆಯೇ, `ಉಪಗ್ರಹ ಬೆಳೆ ಸಹಿ’ ಗಳನ್ನು `ಜಿಐಸ್ ನಕ್ಷೆ’ ಯೊಂದಿಗೆ ಹೋಲಿಕೆ ಮಾಡುವುದರಿಂದ ಸುಳ್ಳು ಕ್ಲೇಮುಗಳನ್ನು ಪತ್ತೆ ಹಚ್ಚಲು ನೆರವಾಗಲಿದೆ.

ರೈತರು ಈ ನೂತನ ವಿಮಾ ಯೋಜನೆಯಡಿ ಮಧ್ಯಂತರ ಪ್ರತಿಕೂಲತೆ ಮತ್ತು ಸ್ಥಳೀಯ ಆಪತ್ತುಗಳ ವಿಮೆಗೂ ಒಳಪಡಲಿದ್ದಾರೆ. ಈ ರೀತಿಯ ಪರಿಸ್ಥಿತಿ ಘಟಿಸಿರುವುದನ್ನು ವರದಿ ಮಾಡಲು ಸರ್ಕಾರವು ಮೊಬೈಲ್ ತಂತ್ರಾಂಶವನ್ನು ಸಂರಕ್ಷಣೆ ತಂತ್ರಾಂಶದ ಭಾಗವಾಗಿ ಅಭಿವೃದ್ಧಿಪಡಿಸುತ್ತಲಿದೆ.

ಗಣಕೀಕೃತ ವ್ಯವಸ್ಥೆಯಿಂದಾಗಿ ನಿರ್ದಿಷ್ಟ ಪ್ರದೇಶದಲ್ಲಿ ಬೆಳೆವಿಮೆ ಮಾಡಿದ ರೈತರ ವರದಿಯನ್ನು ಪಡೆಯಬಹುದು. ಇದರಿಂದ ಆ ಪ್ರದೇಶದ `ರಿಡಕ್ಷನ್ ಫ್ಯಾಕ್ಟರ್’ ಅಳವಡಿಸುವುದು ತಪ್ಪಲಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಇದು ಹಿಂದಿನ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿರಲಿಲ್ಲ.

ಅಲ್ಲದೆ, ಬ್ಯಾಂಕ್ ಮತ್ತು ವಿಮಾ ಕಂಪನಿಗಳ ನಡುವಿನ ವ್ಯವಹಾರವು ಪಾರದರ್ಶಕವಾಗಿರಲಿಲ್ಲ. ಆದ್ದರಿಂದ ರೈತರಿಗೆ ಹಣ ಪಾವತಿಯು ತಡವಾಗುತ್ತಿತ್ತು. ಹಲವು ಸಂದರ್ಭಗಳಲ್ಲಿ ರೈತನು ಬ್ಯಾಂಕ್‍ಗೆ ವಿಮಾ ಕಂತನ್ನು ಪಾವತಿಸಿದ್ದಾಗ್ಯೂ ವಿಮಾ ಕಂಪನಿಗೆ ಜಮೆ ಆಗುವುದರಲ್ಲಿ ತಡವಾಗುತ್ತಿತ್ತು. ಹೊಸದಾದ ಗಣಕೀಕೃತ ವ್ಯವಸ್ಥೆಯಲ್ಲಿ ಬ್ಯಾಂಕ್ ಮತ್ತು ವಿಮಾ ಕಂಪನಿಗಳು ಒಂದೇ ತಂತ್ರಾಂಶ ವೇದಿಕೆಯನ್ನು ಬಳಸಿ ಕಾರ್ಯನಿರ್ವಹಿಸುವುದರಿಂದ ಮತ್ತು ಎಲ್ಲಾ ಮಾಹಿತಿಯು ಸಾರ್ವಜನಿಕರಿಗೆ ಲಭ್ಯವಾಗುವುದರಿಂದ ರೈತರ ಕ್ಲೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬಹುದು ಹಾಗೂ ಮತ್ತಷ್ಟು ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಬಹುದು.

ಈ ತಂತ್ರಾಂಶವು `ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ’ ದ ಮಾಹಿತಿಯೊಂದಿಗೆ ಸಂಪರ್ಕ ಹೊಂದಿದೆ. ಹವಾಮಾನ ಮಾಹಿತಿಯನ್ನು ಪ್ರತಿದಿನದ ಆಧಾರದ ಮೇರೆಗೆ ಪಡೆದುಕೊಳ್ಳಲಿದೆ. ಟರ್ಮಷೀಟ್‍ಗಳು ಗಣಕೀಕೃತಗೊಳ್ಳುತ್ತಿರುವುದರಿಂದ, ಪ್ರತಿಯೊಂದು ಹಂತದ ಕೊನೆಯಲ್ಲಿ ಪಾವತಿಯಾಗ ಬೇಕಾದ ಮೊತ್ತವನ್ನು ಲೆಕ್ಕಹಾಕಬಹುದು ಮತ್ತು ವಿಮಾ ಅವಧಿ ಮುಗಿಯುವವರೆಗೆ ಕಾಯುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ, ಪಾವತಿ ಮೊತ್ತವನ್ನು ಲೆಕ್ಕ ಹಾಕುವಲ್ಲಿ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಬಹುದು. ಇದರಿಂದ ಹವಾಮಾನ-ಆಧಾರಿತ ಬೆಳೆ ವಿಮೆ ಯೋಜನೆಯಡಿ ಸಂಭವನೀಯ ದೃಷ್ಕೃತ್ಯಗಳನ್ನು ತಡೆಯಬಹುದು.

ಈ ತಂತ್ರಾಂಶವು ಯಾವುದೇ ಒಂದು ವಿಮಾ ಘಟಕದಲ್ಲಿ ಅಧಿಸೂಚಿತವಾಗದೇ ಇರುವ ಬೆಳೆಯನ್ನು ವಿಮೆ ಮಾಡಲು ಅವಕಾಶ ನೀಡುವುದಿಲ್ಲ. ಕೈಬರಹದ ಪದ್ಧತಿಯಲ್ಲಿ ಈ ಹಿಂದೆ ಬ್ಯಾಂಕ್ ಶಾಖೆಗಳು ಅಧಿಸೂಚಿತವಲ್ಲದ ಬೆಳೆಗಳಿಗೂ ಕೂಡಾ ವಿಮಾ ಕಂತು ಪಡೆದ ಪ್ರಕರಣಗಳಿವೆ.

ಸರ್ಕಾರಕ್ಕೆ ಏನು ಲಾಭ ?

ಯಾವುದೇ ಸಂದರ್ಭದಲ್ಲಿ ಸರ್ಕಾರವು ವಿಮಾ ವ್ಯಾಪ್ತಿಗೆ ಒಳಪಟ್ಟ ರೈತರ ಮಾಹಿತಿಯನ್ನು ಪಡೆಯಬಹುದು. ಈ ಹಿಂದೆ ಕೈಯಾರೆ ಸಿದ್ಧಪಡಿಸುತ್ತಿದ್ದ ಅವಧಿಗಳಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ‘ಭೂಮಿ’ ತಂತ್ರಾಂಶದ ಮೂಲಕ ಹಿಡುವಳಿ ಅಂಕಿ ಅಂಶಗಳ ಮಾಹಿತಿಗೆ ಸಂಪರ್ಕ ಕಲ್ಪಿಸುತ್ತದೆ. ವಿಮಾ ವಿಸ್ತೀರ್ಣದ ಪುನರಾವರ್ತನೆ, ವಿಶೇಷವಾಗಿ ರೈತ ತನ್ನ ಜಮೀನನ್ನು ಒಂದಕ್ಕಿಂತಲೂ ಹೆಚ್ಚು ಬಾರಿ ವಿಮಾ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ವಿಮೆ ವ್ಯಾಪ್ತಿಗೆ ಒಳಪಡದ ರೈತರನ್ನು ಗುರುತಿಸಲು ಸರ್ಕಾರ ಹಾಗೂ ವಿಮಾ ಕಂಪನಿಗಳಿಗೆ ಸಾಧ್ಯವಾಗಲಿದೆ. ಯಾವುದೇ ರೈತ ತಾನು ಹೊಂದಿದ ಜಮೀನಿನ ವಿಸ್ತೀರ್ಣಕ್ಕಿಂತಾ ಹೆಚ್ಚಿನ ಪ್ರದೇಶಕ್ಕೆ ವಿಮೆ ಮಾಡಲು ಸಾಧ್ಯವಾಗುವುದಿಲ್ಲ.

ಹಿಂದಿನ ವ್ಯವಸ್ಥೆಯಲ್ಲಿ ಸರ್ಕಾರಿ ಅಥವಾ ಬ್ಯಾಂಕ್‍ನ ಹಿರಿಯ ಅಧಿಕಾರಿಗಳು ಬ್ಯಾಂಕ್‍ನ ಕಾರ್ಯನಿರ್ವಹಣಾ ಪ್ರಗತಿಯನ್ನು ಪರಿಶೀಲಿಸುವುದು ಸಾಧ್ಯವಾಗುತ್ತಿರಲಿಲ್ಲ. ತಂತ್ರಾಂಶ ಅಳವಡಿಸುವುದರಿಂದ ಪ್ರತಿ ಬ್ಯಾಂಕ್ ಶಾಖೆಯ ಪ್ರಗತಿಯನ್ನು ಪರಿಶೀಲಿಸಬಹುದು. ಈ ಹಿಂದಿನ ವ್ಯವಸ್ಥೆಯಲ್ಲಿ ಯೋಜನೆಯ ಅನುಷ್ಠಾನದ ಅವಧಿಯಲ್ಲಿ ತೋಟಗಾರಿಕೆ ಇಲಾಖೆಗಾಗಲೀ ಅಥವಾ ಕೃಷಿ ಇಲಾಖೆಗಾಗಲೀ ವಿಮೆ ವ್ಯಾಪ್ತಿಗೆ ಒಳಪಟ್ಟ ರೈತರು ಅಥವಾ ವಿಮೆ ವ್ಯಾಪ್ತಿಗೆ ಒಳಪಡದ ರೈತರ ಮಾಹಿತಿ ಲಭ್ಯವಾಗದ ಕಾರಣ ಯೋಜನೆಯ ಕಳಪೆ ಸಾಧನೆಗೆ ಕಾರಣವಾಗಿತ್ತು. ಗಣಕೀಕೃತ ವ್ಯವಸ್ಥೆಯಿಂದಾಗಿ ಇಲಾಖೆ ಅಧಿಕಾರಿಗಳು, ವಿಮೆ ವ್ಯಾಪ್ತಿಗೆ ಒಳಪಟ್ಟ ಬೆಳೆ ಮತ್ತು ರೈತರ ಯಾವುದೇ ಸಂದರ್ಭದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಈ ತಂತ್ರಾಂಶದಿಂದ ಸರ್ಕಾರಕ್ಕೆ ಬೆಳೆ ವಿಮೆಗೆ ಒಳಪಟ್ಟ ಅಂದರೆ ಸಾಲ ಪಡೆಯದ ರೈತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇದರಿಂದ ಅಂತಹ ರೈತರನ್ನು ಹಣಕಾಸಿನ ಸಂಸ್ಥೆಗಳ ಸಾಲದ ವ್ಯಾಪ್ತಿಗೆ ತರಲು ನೆರವಾಗಲಿದೆ.

ಬ್ಯಾಂಕರ್‍ಗಳಿಗೂ ಅನುಕೂಲ

ತಂತ್ರಾಂಶವು ತನ್ನಿಂದ ತಾನೇ ವಿಮಾ ಕಂತನ್ನು ಲೆಕ್ಕಹಾಕಲಿದೆ. ಇದರಿಂದ ವಿಮಾ ಕಂತಿನ ತಪ್ಪು ಲೆಕ್ಕಹಾಕುವಿಕೆ ಮತ್ತು ರೈತರಿಂದ ಸಂದಾಯವಾದ ವಿಮಾ ಕಂತಿನಲ್ಲಿ ವ್ಯತ್ಯಾಸಗಳು ಆಗುವುದು ತಪ್ಪಲಿದೆ. ಪ್ರತಿಯೊಬ್ಬ ರೈತನ ಮಾಹಿತಿಯನ್ನು ಈ ತಂತ್ರಾಂಶವು ಭಾರತ ಸರ್ಕಾರದ ಅಂತರ್ಜಾಲ ಮಾಹಿತಿಗೆ ರವಾನಿಸಲಿದೆ. ಇಲ್ಲವಾದಲ್ಲಿ ಬೃಹತ್ ಪ್ರಮಾಣದ ಮಾಹಿತಿಯನ್ನು ಪ್ರತ್ಯೇಕವಾಗಿ ನಮೂದಿಸಿ ರವಾನಿಸಬೇಕಾಗುತ್ತಿತ್ತು.

ಈ ತಂತ್ರಾಂಶ ಬಿಡುಗಡೆ ಸಮಾರಂಭದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ಹಿರಿಯ ಅಧಿಕಾರಿಗಳೂ ಹಾಗೂ ರೈತರ ಪ್ರತಿನಿಧಿಗಳೂ ಹಾಜರಿದ್ದರು.