Government of Karnataka

Department of Information

Sunday 31/12/2017

ಮಹದಾಯಿ ಯೋಜನೆ : ಮಧ್ಯಸ್ಥಿಕೆ ವಹಿಸುವಂತೆ ಮುಖ್ಯಮಂತ್ರಿ ನೇತೃತ್ವದಿಂದ ಪ್ರಧಾನಿಗೆ ಮನವಿ ಸಲ್ಲಿಕೆ

Date : ರವಿವಾರ, ಆಗಸ್ತು 23rd, 2015

ಬೆಂಗಳೂರು, ಆಗಸ್ಟ್ 23 ( ಕರ್ನಾಟಕ ವಾರ್ತೆ ) :  ಮಹದಾಯಿ ಯೋಜನೆ ಕುರಿತ ಅಂತಾರಾಜ್ಯ ಜಲ ವಿವಾದವನ್ನು ನ್ಯಾಯಾಲಯದ ಹೊರಗೆ ರಾಜೀ ಸಂಧಾನದ ಮೂಲಕ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದ ಸರ್ವ ಪಕ್ಷಗಳ ಮುಖಂಡರ ನಿಯೋಗ ಆಗಸ್ಟ್ 24 ರಂದು ಸಂಜೆ 4-00 ಗಂಟೆಗೆ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಿದೆ.
ಭಾರತದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಅಂತಾರಾಜ್ಯ ಜಲ ವಿವಾದ ಕಾಯಿದೆ-1956ರ   ಅಡಿಯಲ್ಲಿ ರಚಿಸಿರುವ ನ್ಯಾಯಾಧಿಕರಣದ ಮುಂದೆ ಗೋವಾ ಸರ್ಕಾರವು ಸಲ್ಲಿಸಿರುವ ತಕರಾರು ಅರ್ಜಿಯನ್ನು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಮಾತುಕತೆಯ ಮೂಲಕ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ನಡೆದ ಸರ್ವ ಪಕ್ಷಗಳ ಮುಖಂಡರು, ಮಠಾಧೀಶರು, ರೈತ ನಾಯಕರು, ಹೋರಾಟಗಾರರು ಹಾಗೂ ಕಾನೂನು ತಜ್ಞರ ಸಭೆಯಲ್ಲಿ ಒಕ್ಕೊರಲ ನಿರ್ಧಾರ ಕೈಗೊಳ್ಳಲಾಯಿತು.

ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ 7.56 ಟಿ ಎಂ ಸಿ ಕುಡಿಯುವ ನೀರು ಪೂರೈಸಲಿರುವ ಈ ಯೋಜನೆಯನ್ನು ಮಾನವೀಯತೆಯ ದೃಷ್ಠಿಯಿಂದ ಪರಿಗಣಿಸಬೇಕು. ಕಳೆದ ಮೂರೂವರೆ ದಶಕಗಳಿಂದಲೂ ನೆನಗುದಿಗೆ ಬಿದ್ದಿರುವ ಈ ಯೋಜನೆಗೆ ಆಧ್ಯತೆಯ ಮೇರೆಗೆ ಪರಿಗಣಿಸಿ ಚಾಲನೆ ನೀಡಬೇಕು ಎಂಬುದು ಸಭೆಯಲ್ಲಿ ಹಾಜರಿದ್ದ ಎಲ್ಲರ ಒಮ್ಮತದ ಅಭಿಪ್ರಾಯವಾಗಿತ್ತು.

ವಿಷಯವು ನ್ಯಾಯಾಧಿಕರಣದಲ್ಲಿ ವಿಚಾರಣಾ ಹಂತದಲ್ಲಿದ್ದರೂ, ರಾಜೀ ಸಂಧಾನಕ್ಕೆ ಯಾವುದೇ ಕಾನೂನು ತೊಡಕುಗಳಿಲ್ಲ. ತೆಲುಗು ಗಂಗಾ ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಮಧ್ಯಸ್ಥಿಕೆಯಿಂದ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಕೃಷ್ಣಾ ನದಿಯಿಂದ ಚನ್ನೈ ಮಹಾನಗರಕ್ಕೆ ಕುಡಿಯುವ ನೀರು ಒದಗಿಸುವ ಮಹತ್ವದ ನಿರ್ಧಾರ ಕೈಗೊಂಡಿರುವ  ಉತ್ತಮ ಉದಾಹರಣೆ ನಮ್ಮ ಮುಂದಿದೆ. ಅದೇ ಮಾದರಿಯಲ್ಲಿ, ಪ್ರಧಾನ ಮಂತ್ರಿಯವರು ಮನಸ್ಸು ಮಾಡಿದಲ್ಲಿ ಈ ಯೋಜನೆಗೂ ಹಸಿರು ನಿಶಾನೆ ದೊರಕಿಸಿಕೊಡಬಹುದು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ  ಶ್ರೀ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ, ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಲೋಕಸಭಾ ಸದಸ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಮಹದಾಯಿ ಯೋಜನೆಯ ವ್ಯಾಪ್ತಿಗೊಳಪಡುವ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮಾತ್ರವಲ್ಲದೆ, ಅಲ್ಲಿನ ಪ್ರತಿಪಕ್ಷಗಳ ಮುಖಂಡರ ಮನ ಒಲಿಸಿದಲ್ಲಿ ಸಮಸ್ಯೆಗೆ ಮತ್ತಷ್ಟು ಸುಲಭವಾಗಿ ಪರಿಹಾರ ಕಂಡು ಹಿಡಿಯಬಹುದು ಎಂದು ಅಭಿಪ್ರಾಯಪಟ್ಟರು.

ರಾಜ್ಯದ ನೆಲ-ಜಲ ಮತ್ತು ಭಾಷೆಯ ವಿಚಾರದಲ್ಲಿ ನಾವೆಲ್ಲರೂ ಒಂದೇ ಎಂದು ತಿಳಿಸಿದ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಹೆಚ್. ಎನ್. ಅನಂತ ಕುಮಾರ್ ಹಾಗೂ ಕೇಂದ್ರ ಕಾನೂನು ಮತ್ತು ನ್ಯಾಯಿಕ ಸಚಿವ ಶ್ರೀ ಡಿ. ವಿ. ಸದಾನಂದ ಗೌಡ ಅವರು ರಾಜ್ಯಕ್ಕೆ ನ್ಯಾಯದೊರಕಿಸಿಕೊಡಲು ತಾವು ಸದಾ ಸಿದ್ದ ಎಂದರು.

ರಾಜ್ಯದ ಸಮಸ್ಯೆಗಳತ್ತ ಬೆಳಕು

ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಮಾತನಾಡಿ ಪ್ರಧಾನ ಮಂತ್ರಿಯವರ ಜೊತೆಗಿನ ಭೇಟಿಯ ಪೂರ್ಣ ಲಾಭ ಪಡೆಯಲು ಮಹದಾಯಿ ಯೋಜನೆಯ ಜೊತೆಗೆ  ರಾಜ್ಯವು ಎದುರಿಸುತ್ತಿರುವ ಭೀಕರ ಬರಗಾಲ, ಕಬ್ಬು ಬೆಳೆಗಾರರ ಸಮಸ್ಯೆ, ದ್ರಾಕ್ಷಿ-ದಾಳಿಂಬೆ ಬೆಳೆಗಾರರ ಸಮಸ್ಯೆ ಹಾಗೂ ರೇಷ್ಮೆ ಬೆಲೆ ಕುಸಿತದಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಕುರಿತೂ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಮನವಿಗಳನ್ನು ಸಿದ್ದಪಡಿಸಿ, ರಾಜ್ಯದ ಪ್ರಮುಖ ಸಮಸ್ಯೆಗಳತ್ತಲೂ ಬೆಳಕು ಚೆಲ್ಲಿ ಅವುಗಳ ಪರಿಹಾರಕ್ಕೆ ಕೆಂದ್ರದ ನೆರವು ಮತ್ತು ಸಹಕಾರವನ್ನು ಅಪೇಕ್ಷಿಸಲು ತೀರ್ಮಾನಿಸಲಾಗಿದೆ ಎಂದರು.

ಜಲ ಸಂಪನ್ಮೂಲ ಸಚಿವ ಶ್ರೀ ಎಂ. ಬಿ. ಪಾಟೀಲ್, ಸಣ್ಣ ನೀರಾವರಿ ಸಚಿವ ಶ್ರೀ ಶಿವರಾಜ ಸಂಗಪ್ಪ ತಂಗಡಗಿ, ಪಶುಸಂಗೋಪನಾ ಮತ್ತು ಮುಜರಾಯಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಹೆಚ್. ಕೆ. ಪಾಟೀಲ್,  ಸಣ್ಣ ಕೈಗಾರಿಕಾ ಸಚಿವ ಶ್ರೀ ಸತೀಶ್ ಎಲ್ ಜಾರಕಿಹೊಳಿ, ಸಹಕಾರ ಮತ್ತು ಸಕ್ಕರೆ ಸಚಿವ ಶ್ರೀ ಹೆಚ್. ಎಸ್. ಮಹದೇವ ಪ್ರಸಾದ್, ರಾಜ್ಯ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಶ್ರೀ ಜಗದೀಶ್ ಶೆಟ್ಟರ್, ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಶ್ರೀ ಕೆ. ಎಸ್. ಈಶ್ವರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ ಎಂ. ವೀರಪ್ಪ ಮೊಯಿಲಿ, ಶ್ರೀ ಆಸ್ಕರ್ ಫರ್ನಾಂಡೀಸ್, ಶ್ರೀ ಕೆ. ಹೆಚ್. ಮುನಿಯಪ್ಪ ಮತ್ತು ಶ್ರೀ ಬಿ. ಕೆ. ಹರಿಪ್ರಸಾದ್, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶ್ರೀ ಪ್ರಹ್ಲಾದ್ ಜೋಶಿ, ಪಕ್ಷದ ಮುಖಂಡರಾದ ಶ್ರೀ ಪ್ರಭಾಕರ ಕೋರೆ, ಶ್ರೀ ಸುರೇಶ್ ಅಂಗಡಿ ಮತ್ತು ಶ್ರೀ ಪಿ. ಸಿ. ಗದ್ದೀಗೌಡರ್, ಜಾತ್ಯಾತೀತ ಜನತಾದಳದ ಮುಖಂಡರಾದ ಶ್ರೀ ಸಿ. ಎಸ್. ಪುಟ್ಟರಾಜು, ಶ್ರೀ ಬಸವರಾಜ ಹೊರಟ್ಟಿ, ಶ್ರೀ ಕೋನರೆಡ್ಡಿ, ಹಲವು ಸಂಸದರು ಹಾಗೂ ಶಾಸಕರು, ಕೂಡಲ ಸಂಗಮದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ಕಾನೂನು ತಜ್ಞರಾದ ಶ್ರೀ ಮೋಹನ್ ಕಾತರಕಿ, ಅಡ್ವೋಕೇಟ್ ಜನರಲ್ ಪ್ರೊ ರವಿ ವರ್ಮ ಕುಮಾರ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಶ್ರೀ ತುಷಾರ್ ಗಿರಿನಾಥ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು, ರೈತ ಮುಖಂಡರು ಮತ್ತು ಹೋರಾಟಗಾರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.