Government of Karnataka

Department of Information

Saturday 14/11/2015

ಶಾಂತಿ ಕಾಪಾಡಲು ಸಹಕರಿಸಿ, ವದಂತಿಗಳಿಗೆ ಕಿವಿಗೊಡಬೇಡಿ: ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಮನವಿ

Date : ಮಂಗಳವಾರ, ನವೆಂಬರ 10th, 2015

ಬೆಂಗಳೂರು, ನವೆಂಬರ್ 10 (ಕರ್ನಾಟಕ ವಾರ್ತೆ):
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ 265 ನೇ ಜಯಂತಿಯ ಸಂದರ್ಭದಲ್ಲಿ ಕೋಮು ಸೌಹಾರ್ಧಕ್ಕೆ ಧಕ್ಕೆ ತರಲು ಯತ್ನಿಸಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ದುಷ್ಕøತ್ಯದ ಬಗ್ಗೆ ಖೇದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯನ್ನು ಕಾಪಾಡಲು ಸಹಕರಿಸುವಂತೆ ರಾಜ್ಯದ ಜನತೆಯಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಅಲ್ಲದೆ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪರ ಹಾಗೂ ವಿರೋಧಕ್ಕೆ ಅವಕಾಶವಿದೆ. ಆದರೆ, ಕೆಲವರು ರಾಜಕೀಯ ದುರ್ಲಾಭ ಪಡೆಯಲು ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಠಿಸುತ್ತಾರೆ. ಬ್ರಿಟಿಷರ ವಿರುದ್ಧ ನಾಲ್ಕು ಬಾರಿ ಹೋರಾಟ ನಡೆಸಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವುದು ತಪ್ಪೇ ? ಎಂದು ಪ್ರಶ್ನಿಸಿರುವ ಶ್ರೀ ಸಿದ್ದರಾಮಯ್ಯ ಅವರು ಟಿಪ್ಪು ಆಡಳಿತದಲ್ಲಿ ಪ್ರಮುಖ ಹಾಗೂ ಪ್ರಬಲ ಹುದ್ದೆಗಳಲ್ಲಿ ಹಿಂದೂಗಳೇ ಇದ್ದದ್ದು ಎಂಬುದನ್ನು ಅರಿತೂ ಟಿಪ್ಪು ಅವರನ್ನು ಧರ್ಮಾಂಧ ಹಾಗೂ ಮತಾಂಧ ಎಂದು ಬಣ್ಣಿಸುವುದು ಸಮಂಜಸವೇ ? ಎಂದಿದ್ದಾರೆ.
ಕೇವಲ ಮುಸಲ್ಮಾನ ಸಂಘಟನೆಗಳು ಮಾತ್ರವಲ್ಲ, ಹಿಂದೂ ಸಂಘ-ಸಂಸ್ಥೆಗಳೂ ಸೇರಿದಂತೆ ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಪರಿಗಣಿಸಿ, ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಮತ್ತಷ್ಟು ಗಟ್ಟಿಗೊಳಿಸಲು ಟಿಪ್ಪು ಜಯಂತಿಯನ್ನು ಆಚರಿಸಲು ಸರ್ಕಾರ ಮುಂದಾಯಿತು. ಸಮಾಜವನ್ನು ಒಂದುಗೂಡಿಸುವ ಸರ್ಕಾರದ ಈ ಸದಾಶಯಕ್ಕೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿ ಸಮಾಜವನ್ನು ಒಡೆಯಲು ಹೊರಟಿರುವುದು ದುರದೃಷ್ಠಕರ. ಇಂತಹವರ ಬಗ್ಗೆ ನಾಡ ಜನತೆ ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.