Government of Karnataka

Department of Information

Wednesday 14/09/2016

ಭ್ರಷ್ಟಾಚಾರ ನಿಗ್ರಹ ದಳ ರಚನೆಯಿಂದ ಲೋಕಾಯುಕ್ತ ಬಲಹೀನ ಎಂಬುದು ಕೇವಲ ಅಪ ಪ್ರಚಾರ : ಸಿದ್ದರಾಮಯ್ಯ

Date : ಶುಕ್ರವಾರ, ಏಪ್ರಿಲ್ 1st, 2016

ತುಮಕೂರು, ಏಪ್ರಿಲ್ 1 (ಕರ್ನಾಟಕ ವಾರ್ತೆ) : ಭ್ರಷ್ಟಾಚಾರ ನಿಗ್ರಹ ದಳ ( ಎ ಸಿ ಬಿ ) ರಚನೆಯಿಂದ ಲೋಕಾಯುಕ್ತ ಬಲಹೀನವಾಗುತ್ತದೆ ಎಂಬುದು ಕೇವಲ ಅಪ ಪ್ರಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತುಮಕೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಲೋಕಾಯುಕ್ತದ ಬಲ ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಸಿಬಿ ರಚನೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಭ್ರಷ್ಪಾಚಾರ ನಿಗ್ರಹ ಮಾಡುತ್ತೇವೆ ಎಂದರೆ ವಿರೋಧವೇಕೆ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು ಲೋಕಾಯುಕ್ತ ಬಲ ಕಡಿಮೆ ಮಾಡುವ ಅಥವಾ ಅದರ ಕಾಯಿದೆಗೆ ತಿದ್ದುಪಡಿ ತರುವ ಕಾರ್ಯವನ್ನು ಸರ್ಕಾರ ಮಾಡಿಲ್ಲ. ಅಲ್ಲಿರುವ ಅಧಿಕಾರಿಗಳನ್ನೂ ಎತ್ತಂಗಡಿ ಮಾಡಿಲ್ಲ ಎಂದು ತಿಳಿಸಿದರು.

ಲೋಕಾಯುಕ್ತ ಕಾಯಿದೆ ರಾಜ್ಯ ಸರ್ಕಾರ ರಚನೆ ಮಾಡಿದ್ದು, ಭ್ರಷ್ಟಚಾರ ನಿಯಂತ್ರಣ ಕಾಯಿದೆ ಕೇಂದ್ರ ಸರ್ಕಾರದ್ದು. ಕೇಂದ್ರದಲ್ಲಿ ಹಿಂದೆ ಯು ಪಿ ಎ ಸರ್ಕಾರ ಇದ್ದಾಗ ಲೋಕಪಾಲ ಮಸೂದೆ ಜಾರಿಗೆ ಮುಂದಾಗಿತ್ತು. ಹಾಗೆಂದ ಮಾತ್ರಕ್ಕೆ ಸಿ ಬಿ ಐ ತೆಗೆಯಲಿಲ್ಲ. ಅದೇ ರೀತಿ ನಮ್ಮಲ್ಲೂ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಎರಡೂ ಸಂಸ್ಥೆಗಳು ಇರಲಿವೆ. ಈ ವ್ಯವಸ್ಥೆ ಈಗಾಗಲೇ 15 ರಾಜ್ಯಗಳಲ್ಲಿವೆ ಎಂದರು.

ಲೋಕಾಯುಕ್ತದಲ್ಲಿ 18 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ಭ್ರಷ್ಟಾಚಾರವನ್ನು ಸಮರ್ಥವಾಗಿ ಎದುರಿಸಲು, ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ನ್ಯಾಯ ಕೊಡಿಸಲು ಎಸಿಬಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ದ್ವಿತೀಯ ಪದವಿಪೂರ್ವ ಪರೀಕ್ಷೆಯ ರಸಾಯನ ಶಾಸ್ತ್ರದ ಪ್ರಶ್ನೆ ಪತ್ರಿಕೆ ಎರಡನೇ ಬಾರಿ ಸೋರಿಕೆಯಾಗಿದೆ. ಇದರಿಂದ ತಪ್ಪಾಗಿದೆ ಎಂದು ಈಗಾಗಲೇ ಹೇಳಿದ್ದೇನೆ. ಈ ಬಗ್ಗೆ ಸಿ ಐ ಡಿ ತನಿಖೆಗೆ ಆದೇಶಿಸಲಾಗಿದೆ. ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿ ಐ ಡಿ ತನಿಖೆ ಮತ್ತಷ್ಟು ಚುರುಕುಗೊಳ್ಳಬೇಕು ಎಂದು ಸೂಚಿಸಲಾಗಿದೆ. ಅಧಿಕಾರಿಗಳ ಉಸ್ತುವಾರಿ ಸಮಿತಿಯನ್ನೂ ರಚಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಪಶ್ನೆಯೊಂದಕ್ಕೆ ಉತ್ತರಿಸಿದರು.

ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ. ಅಹಿಂದ ವರ್ಗಕ್ಕೆ ಯಾವುದೇ ಅನುಕೂಲ ಮಾಡುತ್ತಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಆರೋಪ ಮಾಡಬೇಕು ಎಂಬ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷವು ಸಾಮಾಜಿಕ ನ್ಯಾಯಕ್ಕೇ ವಿರುದ್ಧ. ಅಹಿಂದ ವರ್ಗಗಳ ಬಗ್ಗೆ ಆ ಪಕ್ಷದ ನಾಯಕರು ಮಾತನಾಡುತ್ತಿರುವುದೇ ಸೋಜಿಗ ಎಂದರು.

ಬರ ಪೀಡಿತ ಜಿಲ್ಲೆಗಳಲ್ಲಿ ಬರ ಪರಿಹಾರ ಕಾಮಗಾರಿಗಳಿಗೆ ಉದ್ಯೋಗ ಭರವಸೆ ಯೋಜನೆಯಲ್ಲಿ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿಗೆ ಅಗತ್ಯ ಅನುದಾನ ಒದಗಿಸಲಾಗಿದೆ. ಟಾಸ್ಕ್‍ಫೋರ್ಸ್‍ಗಳಿಗೆ ಪ್ರತಿ ಕ್ಷೇತ್ರಕ್ಕೆ 50 ಲಕ್ಷ ರೂ ನೀಡಲಾಗಿದೆ. ಮೇವು ಬ್ಯಾಂಕ್, ಗೋಶಾಲೆ ತೆರೆಯಲು ಸೂಚಿಸಲಾಗಿದೆ. ಅಲ್ಲದೆ, 385 ಹಳ್ಳಿಗಳಿಗೆ 882 ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜನರಿಗೆ ಉದ್ಯೋಗ, ಜಾನುವಾರುಗಳಿಗೆ ಮೇವು, ನೀರು ಒದಗಿಸುವುದೂ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ 137 ತಾಲೂಕುಗಳಲ್ಲಿ ಬರ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಪರಿಸ್ಥಿತಿ ಸುಧಾರಿಸುವತ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಪಟ್ಟಿ ತಯಾರಾಗುತ್ತಿದೆ. ಅದನ್ನು ಸಧ್ಯದಲ್ಲಿಯೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದರು.