Government of Karnataka

Department of Information

Tuesday 13/09/2016

ಜಿಲ್ಲಾ ವಾರ್ತೆ 01-03-2016

Date : ಮಂಗಳವಾರ, ಮಾರ್ಚ 1st, 2016

ಹಿರಿಯ ನಾಗರಿಕರಿಗೆ ಕಾನೂನು ನೆರವು ಅಗತ್ಯ

ಬೆಂಗಳೂರು, ಮಾರ್ಚ್ 1: ಹಿರಿಯ ನಾಗರಿಕರ ಜೀವ ಮತ್ತು ಆಸ್ತಿಯನ್ನು ಸಂರಕ್ಷಿಸಿ ಅವರು ಸಾಮಾಜಿಕ ಭದ್ರತೆ ಮತ್ತು ಘನತೆಯಿಂದ ಜೀವಿಸಲು ನ್ಯಾಯಾಲಯಗಳು ಆದ್ಯತೆ ಮೇಲೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸೆಲ್ವಕುಮಾರ್ ಅವರು ಹೇಳಿದರು.

ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯಿದೆ ಕುರಿತ ವಿಭಾಗೀಯಮಟ್ಟದ ಅರಿವು ಮೂಡಿಸುವ ಕಾರ್ಯಾಗಾರವನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಮಾಜ ಹಾಗೂ ಕಿರಿಯರಿಂದ ಸಮಸ್ಯೆಗಳಿಗೆ ಸಿಲುಕಿದ ಹಿರಿಯ ನಾಗರಿಕರ ರಕ್ಷಣೆಗಾಗಿ ಪ್ರತಿ ಕಂದಾಯ ವಿಭಾಗದಲ್ಲಿ ಒಂದು ನಿರ್ವಹಣಾ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿದೆ. ಈ ನ್ಯಾಯಮಂಡಳಿಗಳಲ್ಲಿ ಜೀವನ ನಿರ್ವಹಣೆಗಾಗಿ ತೊಂದರೆಗೊಳಗಾದ ಹಿರಿಯರು ಜೀವನಾಂಶವನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಹಿರಿಯ ನಾಗರಿಕರ ರಕ್ಷಣಾ ಕಾಯಿದೆ ಜಾರಿಗೊಂಡ ಬಳಿಕ ಆಸ್ತಿ ವರ್ಗಾವಣೆ ಮಾಡಬಹುದು. ಆಸ್ತಿ ವರ್ಗಾಯಿಸಿದಲ್ಲಿ ಆಸ್ತಿ ಪಡೆದುಕೊಂಡವರು ಮೂಲಭೂತ ಸೌಕರ್ಯ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಲು ಒಪ್ಪದಿದ್ದಲ್ಲಿ ಅಥವಾ ವಿಫಲರಾದಲ್ಲಿ ನ್ಯಾಯಮಂಡಳಿ ಆಸ್ತಿ ಹಸ್ತಾಂತರವನ್ನು ಅಸಿಂಧು ಎಂದು ಘೋಷಿಸಲಾಗುತ್ತದೆ. ಈ ಕಾಯಿದೆಯಡಿ ಹಿರಿಯ ನಾಗರಿಕರಿಗೆ ಜೀವನ ಭದ್ರತೆಗಾಗಿ ನಿರ್ವಹಣಾ ಮಂಡಳಿಯನ್ನು ರಚಿಸಲಾಗಿರುತ್ತದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲಾಧಿಕಾರಿ ಶ್ರೀ ಅಂಜನಕುಮಾರ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷ್ಯ, ಅನಾಧಾರ ಹೆಚ್ಚುತ್ತಿದೆ. ಸಾಂಸ್ಕøತಿಕ ಮೌಲ್ಯಗಳು ಕುಸಿದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಹಿರಿಯರು ಆಶ್ರಮಗಳನ್ನು ಸೇರಿಕೊಳ್ಳುವ ಪರಿಸ್ಥಿತಿ ಒದಗಿ ಬಂದಿದೆ. ಉದಾರೀಕರಣ, ಖಾಸಗೀಕರಣ, ಜಾಗತೀಕರಣದಿಂದ ಸಾಮಾಜಿಕ ಮೌಲ್ಯಗಳು ಕುಸಿದಿವೆ. ಮಕ್ಕಳು ವೃದ್ಧ ತಂದೆತಾಯಿಗಳಿಗೆ ಆಹಾರ, ಬಟ್ಟೆ, ವಸತಿ ಹಾಗೂ ವೈದ್ಯಕೀಯ ಶುಶ್ರೂಷೆ ಮಾಡುವುದನ್ನು ತಮ್ಮ ಕರ್ತವ್ಯವೆಂದು ಭಾವಿಸದೆ ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳಿಗೆ ಸೇರಿಸುವುದು ಅವರ ಅನಾಗರಿಕತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀ ಎಫ್.ಪಾಲಯ್ಯ, ದಾವಣಗೆರೆ ಜಿಲ್ಲಾಧಿಕಾರಿ ಶ್ರೀ ಅಂಜನಕುಮಾರ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಎನ್.ಮಂಜುಶ್ರೀ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಶ್ರೀ ಗೋವಿಂದರಾಜು ಅವರು ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಶ್ರೀಮತಿ ರತ್ನಕಲಂದಾನಿ ಅವರು ಸ್ವಾಗತಿಸಿದರು.