Government of Karnataka

Department of Information

Wednesday 13/12/2017

District News 02-02-2012

Date : ಶುಕ್ರವಾರ, ಫೆಬ್ರವರಿ 3rd, 2012

ಜನಸ್ಪಂದನ ಸಭೆ

ಚಿತ್ರದುರ್ಗ,ಫೆಬ್ರವರಿ.02-

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 6 ಹೋಬಳಿಗಳಲ್ಲಿ ಫೆಬ್ರವರಿ 4 ರಂದು ಹೋಬಳಿ ಮಟ್ಟದ ಜನಸ್ಪಂದನ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದ್ದಾರೆ.

ಚಿತ್ರದುರ್ಗ ತಾ; ಹಿರೇಗುಂಟನೂರು, ಚಳ್ಳಕೆರೆ ತಾ; ನಾಯಕನಹಟ್ಟಿ ಹೋಬಳಿ ಪಿ.ಮಹದೇವಪುರ, ಮೊಳಕಾಲ್ಮುರು ಕಸಬಾ ಪಟ್ಟಣ, ಹಿರಿಯೂರು ತಾ; ಐಮಂಗಲ ಹೋಬಳಿ ಬಸಪ್ಪನಮಾಳಿಗೆ, ಹೊಸದುರ್ಗ ಕಸಬಾ ಬೀಸನಹಳ್ಳಿ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿಯ ಚಿಕ್ಕಜಾಜೂರು ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಯಲಿದೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅಹವಾಲುಗಳನ್ನು ಸಭೆಗೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

==========

ಬಸ್ ಪಾಸ್ ನವೀಕರಣಕ್ಕೆ ಫೆ.29 ಕೊನೆ ದಿನ

ಚಿತ್ರದುರ್ಗ,ಫೆಬ್ರವರಿ.02-

ವಿಕಲಚೇತನರಿಗೆ ನೀಡಲಾಗುವ ಕೆ.ಎಸ್.ಆರ್.ಟಿ.ಸಿ. ರಿಯಾಯಿತಿ ದರದ ಬಸ್ ಪಾಸ್‌ಗಳನ್ನು ಇದೇ ಫೆಬ್ರವರಿ 29 ರೊಳಗಾಗಿ ನವೀಕರಿಸಿಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗಿರಿಜಾಂಬ ತಿಳಿಸಿದ್ದಾರೆ.

ರಿಯಾಯಿತಿ ದರದ ಬಸ್ ಪಾಸ್ ಪಡೆಯಲು 550 ರೂ.ಗಳ ಡಿ.ಡಿ.ಯನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ. ದಾವಣಗೆರೆ ಇವರ ಹೆಸರಿಗೆ ತೆಗೆದು ಪೂರ್ಣ ನಿಲುವಿನ ಪಾಸ್ ಪೋಟೋ ಅಳತೆಯ 3 ಭಾವಚಿತ್ರ, ಅಂಗವಿಕಲರ ಗುರುತಿನ ಪತ್ರ, ಆದಾಯ ಪ್ರಮಾಣ ಪತ್ರದೊಂದಿಗೆ ಕಚೇರಿಯಲ್ಲಿ ಅರ್ಜಿ ಪಡೆದು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನವೀಕರಿಸಿಕೊಳ್ಳಲು ಕೋರಲಾಗಿದೆ.

==========

ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ

ಚಿತ್ರದುರ್ಗ,ಫೆಬ್ರವರಿ.02-

ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ವೃತ್ತಿಪರ ಪದವಿಯನ್ನು ಹೊರತುಪಡಿಸಿ ಬಿ.ಎ., ಬಿ.ಕಾಂ, ಬಿ.ಎಸ್ಸಿ, ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಜಿಗಳನ್ನು ಕಚೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಫೆಬ್ರವರಿ 8 ರೊಳಗಾಗಿ ಸಲ್ಲಿಸಲು ಬಿ.ಸಿ.ಎಂ. ಇಲಾಖೆ ಜಿಲ್ಲಾ ಅಧಿಕಾರಿ ಆರ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.

==========

ಫಲ ಪುಷ್ಪ ಪ್ರದರ್ಶನ

ಚಿತ್ರದುರ್ಗ,ಫೆಬ್ರವರಿ.02-

ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 10 ರಿಂದ 12 ರ ವರೆಗೆ ತೋಟಗಾರಿಕೆ ಕಚೇರಿ ಆವರಣದಲ್ಲಿ 21 ನೇ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಫಲ ಪುಷ್ಪ ಪ್ರದರ್ಶನದ ಮುಂಚೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಾರ್ವಜನಿಕ ಉದ್ಯಾನವನ, ಸಂಘ, ಸಂಸ್ಥೆಗಳ ಉದ್ಯಾನವನಗಳು, ವಿವಿಧ ಇಲಾಖೆಗಳ ಆವರಣದ ಉದ್ಯಾನವನಗಳು, ಮನೆ ಮುಂದೆ ವಿವಿಧ ಜಾತಿಯ ಅಲಂಕಾರಿಕೆ ಕುಂಡಗಳ ಜೋಡಣೆ, ಮನೆ ಆವರಣದಲ್ಲಿ ಉದ್ಯಾನವನಗಳನ್ನು ಸಿದ್ದಪಡಿಸುವ ಸ್ಪರ್ಧೆ ಏರ್ಪಡಿಸಲಾಗಿದೆ.

ಫಲ ಪುಷ್ಪ ಪ್ರದರ್ಶನದ ಅವಧಿಯಲ್ಲಿ ವಿವಿಧ ಜಾತಿಯ ಅಲಂಕಾರಿಕ ಎಲೆ, ವಿವಿಧ ಜಾತಿಯ ಹೂ ಕುಂಡಗಳ ಜೋಡಣೆ, ತರಕಾರಿ ಕೆತ್ತನೆ, ಇಕೆಬಾನ, ರಂಗೋಲಿ, ಲ್ಯಾಂಡ್‌ಸ್ಕೇಪಿಂಗ್ ಸೇರಿದಂತೆ ವಿವಿಧ ಜೋಡಣೆಗಳು ಮತ್ತು ಶಾಲಾ ಮಕ್ಕಳಿಗೆ ಹಣ್ಣು ತರಕಾರಿಗಳನ್ನು ಗುರುತಿಸುವ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸ್ಥಳದಲ್ಲೆ ವರ್ಣಚಿತ್ರ ಬರೆಯುವ ಸ್ಪರ್ಧೆ, ಭಾವಗೀತೆ, ಜಾನಪದ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಸಾರ್ವಜನಿಕರು ಪ್ರದರ್ಶನದ ಅಂಗವಾಗಿ ಏರ್ಪಡಿಸಿರುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಸ್ಪರ್ಧಿಸುವವರು ಫೆಬ್ರವರಿ 4 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಬೇಕೆಂದು ಮತ್ತು ಹೆಚ್ಚಿನ ಮಾಹಿತಿಗಾಗಿ 9739355749, 9901920075 ಮೊಬೈಲ್‌ಗೆ ಸಂಪರ್ಕಿಸಲು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಹೆಚ್.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

 

ಕೇರೂರಗೆ ಸಚಿವ ಶ್ರಿ ಕಾರಜೋಳ ಭೆಟ್ಟಿ

ಬೆಳಗಾವಿ, ಫೆ.2- ರಾಜ್ಯ ಸಣ್ಣ ನೀರಾವರಿ ಹಾಗು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರು ಫೆಬ್ರುವರಿ 4 ರಂದು ಸಂಜೆ 6 ಗಂಟೆಗೆ ಚಿಕ್ಕೊಡಿ ತಾಲೂಕಿನ ಕೆರೂರದಲ್ಲಿ ಕೃಷಿ ಇಲಾಖೆ ಹಾಗು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಏರ್ಪಡಿಸಲಾದ ಭವ್ಯ ಕೃಷಿಮೇಳ ಪ್ರದರ್ಶನ ಮತ್ತು 2012 ರ ಜಾನಪದ ಜಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 7.30 ಗಂಟೆಗೆ ಕೆರೂರದಿಂದ ಮುಧೋಳಕ್ಕೆ ಪ್ರಯಣ ಬೆಳೆಸುವರು.

ಬೆಳಗಾವಿಗೆ ಸಚಿವ ಶ್ರೀ ಸಿ.ಸಿ.ಪಾಟೀಲ ಭೆಟ್ಟಿ

ಬೆಳಗಾವಿ, ಫೆ.2- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಶ್ರೀ ಸಿ.ಸಿ.ಪಾಟೀಲ ಅವರು ಫೆಬ್ರುವರಿ 3 ರಂದು ಬೆಳಗಾವಿಗೆ ಆಗಮಿಸಿ ಸಂಜೆ 5 ಗಂಟೆಗೆ ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಗೆ ಭೆಟ್ಟಿ ನೀಡುವರು. ಸಂಜೆ 5.30 ಗಂಟೆಗೆ ಕೆಎಲ್‌ಇ ಕಾಲೇಜಿನ ಆರ್ಥೋಪೆಡಿಕ್ ವಿಭಾಗದ ವತಿಯಿಂದ ಏರ್ಪಡಿಸಲಾದ ವ್ಯದ್ಯರ ರಾಷ್ಟ್ರ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ರಾತ್ರಿ 8 ಗಂಟೆಗೆ ಬೆಳಗಾವಿಯಿಂದ ನರಗುಂದಕ್ಕೆ ಪ್ರಯಾಣ ಬೆಳೆಸುವರು.

ಘನತ್ಯಾಜ್ಯ ವಿಲೇವಾರಿ ಸಮರ್ಪಕ ನಿರ್ವಹಣೆಗೆ ಕೆ.ಎಂ.ಚಂದ್ರೇಗೌಡ ನಿರ್ದೇಶನ

ಮಡಿಕೇರಿ ಫೆ.02(ಕರ್ನಾಟಕ ವಾರ್ತೆ):-ಕೊಡಗು ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕ ನಿರ್ವಹಣೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.

ಕೊಡಗು ಜಿಲ್ಲೆಯ ನಗರ, ಪಟ್ಟಣ ಹಾಗೂ ದೇವರಕಾಡು ಪ್ರದೇಶಗಳಲ್ಲಿ ಘನ ತ್ಯಾಜ್ಯ ವಿಲೇವಾರಿಯನ್ನು ಎಷ್ಟರ ಮಟ್ಟಿಗೆ ನಿರ್ವಹಿಸಲಾಗುತ್ತಿದೆ ಎಂಬ ಬಗ್ಗೆ ಸ್ಲೈಡ್ ಶೋ ಮೂಲಕ ಕೆ.ಎಂ.ಚಂದ್ರೇಗೌಡ ಅವರು ಮಾಹಿತಿ ಪಡೆದರು.

ಜಿಲ್ಲೆಯಲ್ಲಿ ಘನ ತ್ಯಾಜದ ವಸ್ತುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಯಾವುದೇ ಕಾರಣಕ್ಕೆ ಕಸ ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡಬಾರದು. ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಅವರು ಪೌರಾಡಳಿತ, ಆರೋಗ್ಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಘನತ್ಯಾಜ್ಯ್ತಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿದರೆ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಬಹುದು. ಆ ದಿಸೆಯಲ್ಲಿ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಮನೆಯಿಂದ ಕಸ ಬೇರ್ಪಡಿಸಿ ಸಂಗ್ರಹಿಸುವುದು, ಸಂಗ್ರಹಿಸಿದ ಕಸವನ್ನು ವಿಂಗಡಿಸುವುದು. ಘನತ್ಯಾಜ್ಯ ಜಾಗದಲ್ಲಿ ಕಸವನ್ನು ಸಂಸ್ಕರಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಕ್ರಮವಹಿಸುವುದು, ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ವಹಣೆ, ಪ್ಲಾಸ್ಟಿಕ್ ಬಳಸದಿರುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮತ್ತಿತರ ವಿಷಯಗಳ ಬಗ್ಗೆ ನಗರಾಭಿವೃದ್ಧಿ ಕೋಶದ ಅಭಿಯಂತರರಾದ ಸತ್ಯನಾರಾಯಣರಾವ್ ಅವರು ಮಾಹಿತಿ ನೀಡಿದರು.

ಜಿಲ್ಲೆಯ ಜಿಲ್ಲಾಸ್ಪತ್ರೆ, ಎರಡು ತಾಲ್ಲೂಕು ಆಸ್ಪತ್ರೆಗಳು, 6 ಸಮುದಾಯ ಮತ್ತು 30 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸತೀಶ್ ಅವರು ತಿಳಿಸಿದರು. ಮಡಿಕೇರಿ ನಗರದಲ್ಲಿ ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜು ಹಾಗೂ ಸ್ವಚ್ಚತೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತರಾದ ಎನ್.ಎಂ.ಶಶಿಕುಮಾರ್ ಮತ್ತು ದೇವರಕಾಡುಗಳಲ್ಲಿ ಪರಿಸರ ಸಂರಕ್ಷಣೆ ಕಾಪಾಡುವ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಅವರು ಮಾಹಿತಿ ನೀಡಿದರು. ಪಶುಪಾಲನ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣಮೂರ್ತಿ, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ವಿದ್ಯಾಧರ, ಜಿಲ್ಲಾಧಿಕಾರಿ ಕಚೇರಿಯ ಷಣ್ಮುಗ, ಮಂಜುಳ ಇದ್ದರು.

ಜಿಲ್ಲೆಯ 3105 ಜೇನುಕುರುಬ ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಣೆ

ಮಡಿಕೇರಿ ಫೆ.02(ಕರ್ನಾಟಕ ವಾರ್ತೆ):-ಬಡತನ, ಹಸಿವು, ನಿರುದ್ಯೋಗ, ಅನಕ್ಷರತೆ, ಆರೋಗ್ಯ ಎಟುಕದಿರುವುದು ಮತ್ತಿತರ ಕಾರಣಗಳಿಂದ ಅಪೌಷ್ಟಿಕತೆಗೆ ಒಳಗಾಗಿ ಸಾಕಷ್ಟು ಜನರು ಜೀವನ ಸವೆಸುತ್ತಿರುವವರನ್ನು ಕಾಣುತ್ತೇವೆ.

ಆ ದಿಸೆಯಲ್ಲಿ ಸರ್ಕಾರ ಪರಿಶಿಷ್ಟ ಪಂಗಡದ ಕೊರಗ ಜನಾಂಗಕ್ಕೆ ಪೌಷ್ಟಿಕ ಆಹಾರ ನೀಡಲು 2008-09 ನೇ ಸಾಲಿನಲ್ಲಿಯೇ ಜಾರಿಗೊಳಿಸಿದ್ದು, ಈ ಯೋಜನೆಯನ್ನು ಮೂಲನಿವಾಸಿ ಜೇನುಕುರುಬ ಜನಾಂಗದವರಿಗೂ 2011-12ನೇ ಸಾಲಿನಲ್ಲಿ ವಿಸ್ತರಿಸಿದೆ. ಈ ನಿಟ್ಟಿನಲ್ಲಿ ಜೇನುಕುರುಬ ಜನಾಂಗಕ್ಕೆ ಪೌಷ್ಟಿಕ ಆಹಾರವನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆಯಿಂದ ವಿತರಿಸಲಾಗುತ್ತಿದೆ.

ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ಮೂಲನಿವಾಸಿ ಜೇನುಕುರುಬ ಜನಾಂಗದವರು ಜೀವನೋಪಾಯಕ್ಕಾಗಿ ಜೇನು ಸಂಸ್ಕರಣೆ ಮತ್ತು ಬಿದಿರು ಬೆತ್ತಗಳಿಗಾಗಿ ಅರಣ್ಯವನ್ನು ಅವಲಂಬಿಸಿದ್ದು ಈ ಜನರು ಮಳೆಗಾಲದಲ್ಲಿ ಜೀವನ ನಡೆಸುವುದು ಕಷ್ಟವಾಗಿದ್ದು ರಕ್ತಹೀನತೆಯಿಂದ ಬಳಲುವುದರಿಂದ ಮಳೆಗಾಲದ ಅವಧಿಯಲ್ಲಿನ 6 ತಿಂಗಳ ಕಾಲ ಜೇನುಕುರುಬ ಜನಾಂಗ ಕುಟುಂಬಗಳಿಗೆ ಪ್ರತಿ ತಿಂಗಳು 15 ಕೆ.ಜಿ.ರಾಗಿ, 2 ಕೆ.ಜಿ.ತೊಗರಿ ಬೇಳೆ, 1 ಕೆ.ಜಿ. ಹುರುಳಿಕಾಳು, 2 ಕೆ.ಜಿ. ಬೆಲ್ಲ, ಒಂದು ಲೀಟರ್ ಕಡ್ಲೆಕಾಯಿ ಎಣ್ಣೆ ಮತ್ತು 30 ಮೊಟ್ಟೆಯನ್ನು ವಿತರಿಸಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಸುಮಾರು 3105 ಜೇನುಕುರುಬ ಕುಟುಂಬಗಳಿದ್ದು ವಿರಾಜಪೇಟೆಯ ತಾಲ್ಲೂಕಿನಲ್ಲಿ 2064 ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 1041 ಜೇನುಕುರುಬ ಕುಟುಂಬಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಕಳೆದ ವಾರ ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನಕೋಟೆಯಲ್ಲಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಮತ್ತು ಸೋಮವಾರಪೇಟೆ ತಾಲ್ಲೂಕಿನ ಯಡವನಾಡುವಿನಲ್ಲಿ ಶಾಸಕರಾದ ಅಪ್ಪಚ್ಚು ರಂಜನ್ ಅವರು ಪೌಷ್ಟಿಕ ಆಹಾರ ವಿತರಣೆಗೆ ಚಾಲನೆ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 3105 ಜೇನುಕುರುಬ ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಣೆಗಾಗಿ ತಿಂಗಳಿಗೆ ಸುಮಾರು 23 ಲಕ್ಷ ರೂ.ವೆಚ್ಚವಾಗಲಿದ್ದು, ಒಂದು ಕುಟುಂಬಕ್ಕೆ 713 ರೂ. ಖರ್ಚಾಗಲಿದೆ. ಜಿಲ್ಲೆಯ ಎಲ್ಲಾ ಜೇನುಕುರುಬ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಕಾರ್ಡ್ ನೀಡಿ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಗಂಟಿ ಅವರು ಮಾಹಿತಿ ನೀಡಿದ್ದಾರೆ.

ವಾಹನ ಸಂಚಾರ ನಿಷೇಧ

ಮಡಿಕೇರಿ ಫೆ.02(ಕರ್ನಾಟಕ ವಾರ್ತೆ):-ಮೈಸೂರು-ಬಂಟ್ವಾಳ ರಸ್ತೆ ಕಿ.ಮೀ.88.30ರಿಂದ 148.50ರವರೆಗೆ ಪ್ಯಾಕೇಜ್ ‘ಬಿ’ಯಂತೆ ಜನರಲ್ ತಿಮ್ಮಯ್ಯ ವೃತ್ತದಿಂದ ಭಾಗಮಂಡಲದ 1ನೇ ಕ್ರಾಸ್‌ವರೆಗೆ ರಸ್ತೆ ಕಾಮಗಾರಿಗೆ ನಡೆಯುತ್ತಿರುವ ಹಿನ್ನೆಲೆ ಫೆಬ್ರವರಿ, 1 ರಿಂದ ಮಾರ್ಚ್ 1 ರವರೆಗೆ ಮಡಿಕೇರಿ ಪಟ್ಟಣದ ಜನರಲ್ ತಿಮ್ಮಯ್ಯ ವೃತ್ತದಿಂದ ಭಾಗಮಂಡಲದ 1ನೇ ಕ್ರಾಸ್‌ವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಈ ಮಾರ್ಗದಲ್ಲಿ ಚಲಿಸುವ ವಾಹನಗಳು ಜನರಲ್ ತಿಮ್ಮಯ್ಯ ವೃತ್ತದಿಂದ ವಿರಾಜಪೇಟೆ ರಸ್ತೆಯ ಮೇಕೇರಿ ಮೂಲಕ ಮಂಗಳೂರು ರಸ್ತೆಗೆ ಹಾದು ಹೋಗಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ.

ಮೈಸೂರಿನಿಂದ ಮಂಗಳೂರಿಗೆ ಬರುವ ಮತ್ತು ಹೋಗುವ ವಾಹನಗಳ ಸಂಚಾರವನ್ನು ನಿಷೇದಿಸುವಂತೆ ಜಿಲ್ಲಾಧಿಕಾರಿಯವರಿಗೆ ಮೈಸೂರಿನ ಕೆ.ಆರ್.ಡಿ.ಸಿ.ಎಲ್‌ನ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಹಿರಿಯ ಮೋಟಾರು ವಾಹನ ನಿರೀಕ್ಷಕರು, ಮಾರ್ಗ ತಪಾಸಣೆ ಮಾಡಿ ವಾಹನ ನಿಷೇದಾಜ್ಞೆ ಅವಶ್ಯಕತೆ ಇದೆ ಎಂದು ಮನವಿ ಮಾಡಿರುವುದರಿಂದ ಜನರಲ್ ತಿಮ್ಮಯ್ಯ ವೃತ್ತದಿಂದ ಭಾಗಮಂಡಲ 1ನೇ ಕ್ರಾಸ್‌ವರೆಗೆ ಇರುವ ಮಾರ್ಗವು ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ಹಾದು ಹೋಗುವ ಎಲ್ಲಾ ವಾಹನಗಳನ್ನು ಜನರಲ್ ತಿಮ್ಮಯ್ಯ ವೃತ್ತದಿಂದ ವಿರಾಜಪೇಟೆ ಮಾರ್ಗದ ಮೂಲಕ ಮೇಕೇರಿ ಮುಖಾಂತರ ಮಂಗಳೂರು ರಸ್ತೆಗೆ ಹೋಗಲು ಬದಲಿ ಮಾರ್ಪಾಡು ಮಾಡುವಂತೆ ವರದಿ ನೀಡಿರುತ್ತಾರೆ. ಈ ಮನವಿಗಳನ್ನು ಪರಿಶೀಲಿಸಿ ರಸ್ತೆಯ ಕಾಮಗಾರಿಗೆ ಯಾವುದೇ ಅಡಚಣೆಯುಂಟಾಗಬಾರದೆಂಬ ಹಿನ್ನೆಲೆಯಲ್ಲಿ 1988ರ ಕರ್ನಾಟಕ ಮೋಟಾರು ವಾಹನ ನಿಯಮ 221(ಎ)(5) (6)ರ ಪ್ರಕಾರ ಮತ್ತು 1988ರ ಮೋಟಾರು ವಾಹನ ಕಾಯ್ದೆ ವಿಧಿ 115 ಮತ್ತು 1963ರ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 31(1)(ಬಿ) ನಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಎನ್.ವಿ. ಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ.

ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ

ಮಡಿಕೇರಿ ಫೆ.02(ಕರ್ನಾಟಕ ವಾರ್ತೆ):-ಮಡಿಕೇರಿ ಪಟ್ಟಣದ ಇಂದಿರಾಗಾಂಧಿ ವೃತ್ತದಿಂದ ಗಣಪತಿ ರಸ್ತೆ ಮೂಲಕ ಬಸವೇಶ್ವರ ವೃತ್ತದವರೆಗೆ ಹಾದುಹೋಗುವ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ.

ಮಡಿಕೇರಿ ನಗರವು ಭೌಗೋಳಿಕವಾಗಿ ತೀವ್ರವಾದ ಇಳಿಜಾರು ಮತ್ತು ಗುಡ್ಡಗಾಡುಗಳಿಂದ ಆವರಿಸಲ್ಪಟ್ಟಿರುವ ಪಟ್ಟಣವಾಗಿರುವುದರಿಂದ ಸ್ವಾಭಾವಿಕವಾಗಿ ರಸ್ತೆಗಳು ಅತೀ ಕಿರಿದಾಗಿದ್ದು, ವಾಹನಗಳ ಮತ್ತು ಪಾದಾಚಾರಿಗಳ ಓಡಾಟಕ್ಕೆ ತುಂಬಾ ತೊಂದರೆ ಆಗುತ್ತಿದೆ. ಹಾಗೆಯೇ ನಗರದಲ್ಲಿ ವಾಹನಗಳ ಓಡಾಟದ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕ ಹಾಗೂ ವಾಹನಗಳ ಸುರಕ್ಷಿತ ಚಾಲನೆಗಾಗಿ, ಪಟ್ಟಣದ ಮಧ್ಯೆ ಭಾಗದಲ್ಲಿರುವ ಇಂದಿರಾಗಾಂಧಿ ವೃತ್ತದ ಬಳಿಯ ಗಣಪತಿ ಬೀದಿ ಎಂಬ ನಾಮಾಂಕಿತದ ರಸ್ತೆಯು ಬಸವೇಶ್ವರ ವೃತ್ತದ ವರೆಗೆ ಅತೀ ಚಿಕ್ಕದಾಗಿದೆ. ಅಲ್ಲದೆ ರಸ್ತೆಯ ಎರಡೂ ಬದಿಯ ನಿವಾಸಿಗಳು ತಮ್ಮ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಈ ರಸ್ತೆ ಮೂಲಕ ಹಾದು ಹೋಗುವ ವಾಹನಗಳ ಸಂಚಾರಕ್ಕೆ ಸ್ಥಳಾವಕಾಶ ಇಲ್ಲದಿರುವುದರಿಂದ ಈ ರಸ್ತೆಯನ್ನು ಏಕಮುಖ ಸಂಚಾರ ಮಾಡಬೇಕೆಂದು ಜಿಲ್ಲಾ ಆರಕ್ಷಕ ಅಧೀಕ್ಷಕರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ ಹೋರಡಿಸಿದ್ದಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಹಿರಿಯ ಮೋಟಾರು ವಾಹನ ನಿರೀಕ್ಷಕರು ಮಾರ್ಗ ಸಮೀಕ್ಷೆ ನಡೆಸಿ, ಏಕಮುಖ ಸಂಚಾರ ಜಾರಿಗೊಳಿಸುವ ಅವಶ್ಯಕತೆ ಇದೆ ಎಂದು ಸಹ ವರದಿ ನೀಡಿರುತ್ತಾರೆ. ಮತ್ತು ಬಸವೇಶ್ವರ ವೃತ್ತದಿಂದ ಇಂದಿರಾಗಾಂಧಿ ರಸ್ತೆಯವರೆಗೆ ಮಹದೇವಪೇಟೆಯ ಮುಖೇನ ಇರುವ ರಸ್ತೆಯು ಹಾಲಿ ಏಕಮುಖ ಸಂಚಾರದ ರಸ್ತೆಯಾಗಿದ್ದು, ಇದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಈ ಎಲ್ಲಾ ವರದಿಗಳನ್ನು ಪರಿಶೀಲಿಸಿ ಸಾರ್ವಜನಿಕರ ಪ್ರಯಾಣ ಮತ್ತು ಸುರಕ್ಷತೆ ಹಿತದೃಷ್ಟಿಯಿಂದ ಈ ಮಾರ್ಗವನ್ನು ಏಕಮುಖ ಸಂಚಾರವನ್ನಾಗಿ ಮಾಡುವುದು ಸೂಕ್ತ ಎಂದು ಪರಿಗಣಿಸಿ 1988ರ ಕರ್ನಾಟಕ ಮೋಟಾರು ವಾಹನ ನಿಯಮ 221(ಎ)(5) (6) ಪ್ರಕಾರ ಮತ್ತು 1988ರ ಮೋಟಾರು ವಾಹನ ಕಾಯ್ದೆ ವಿಧಿ 115 ಮತ್ತು 1963 ಕರ್ನಾಟಕ ಪೊಲೀಸ್ ಕಾಯ್ದೆ ಕಲಂ31(1)(ಬಿ)ಯಂತೆ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಆದೇಶ ಮಾಡಿದ್ದಾರೆ.

ಸಾಲ ಚುಕ್ತ ಮಾಡಿಕೊಳ್ಳಲು ಅವಕಾಶ

ಮಡಿಕೇರಿ ಫೆ.02(ಕರ್ನಾಟಕ ವಾರ್ತೆ):-ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಡಿಕೇರಿ ಈ ಕಚೇರಿಯಿಂದ ಶ್ರಮಶಕ್ತಿ, ಸ್ವಾವಲಂಬನಾ (ಮಾರ್ಜನ್ ಹಣ), ನೇರಸಾಲ ಮತ್ತು ಅರಿವು ಈ ನಾಲ್ಕು ಯೋಜನೆಗಳಲ್ಲಿ ವಿವಿಧ ಉದ್ದೇಶಕ್ಕಾಗಿ ಸಾಲ ಪಡೆದ ಫಲಾನುಭವಿಗಳು ಒಂದೇ ಬಾರಿ ಸಾಲವನ್ನು ಚುಕ್ತ ಮಾಡಿದರೆ ಅವರಿಗೆ ಬಡ್ಡಿಯನ್ನು ಕಡಿಮೆ ಮಾಡಿ ಸಾಲವನ್ನು ಚುಕ್ತ ಮಾಡಲಾಗುವುದು. ಈ ಸುವರ್ಣಾವಕಾಶವು ಮಾರ್ಚ್ 31 ರವರೆಗೆ ಮಾತ್ರ ಇರುತ್ತದೆ. ಆದ್ದರಿಂದ ಫಲಾಭವಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಂಡು ನಿಗಮಕ್ಕೆ ಸಾಲವನ್ನು ಚುಕ್ತ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಫೆ.3ರಂದು ಕೊಡಗರಹಳ್ಳಿಯಲ್ಲಿ ಗ್ರಾಮಸಭೆ

ಮಡಿಕೇರಿ ಫೆ.02(ಕರ್ನಾಟಕ ವಾರ್ತೆ):-ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯು ಫೆಬ್ರವರಿ 3ರಂದು ಬೆಳಗ್ಗೆ 11 ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ದಿವ್ಯಕುಮಾರಿ ಅವರ ಅಧ್ಯಕ್ಷತೆಯಲ್ಲಿ ಕೊಡಗರಹಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ಸೋಮವಾಪೇಟೆ ಪಶುಪಾಲನಾ ಹಾಗೂ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರು ಪಂಚಾಯಿತಿ ನೋಡೆಲ್ ಅಧಿಕಾರಿಯಾದ ಡಾ.ಲಕ್ಷ್ಮಿಕಾಂತ್ ಅವರು ನೇತೃತ್ವ ವಹಿಸಲಿದ್ದಾರೆ ಎಂದು ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ತಿಳಿಸಿದ್ದಾರೆ.

ಫೆ.8ರಂದು ಮಿನಿ ಉದ್ಯೋಗ ಮೇಳ

ಮಡಿಕೇರಿ ಫೆ.02(ಕರ್ನಾಟಕ ವಾರ್ತೆ):- ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಫೆಬ್ರವರಿ, 8ರಂದು ಬೆಳಗ್ಗೆ 10 ರಿಂದ ಅಪರಾಹ್ನ 3 ಗಂಟೆಯವರೆಗೆ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಗಿIಗಿಂಓಖಿಂ ಃಥಿ ಖಿಂಎ, ಒಚಿಜiಞeಡಿi, ಏoಜಚಿgu ಇವರು ಹೌಸ್ ಕೀಪಿಂಗ್ ಅಸಿಸ್ಟೆಂಟ್-10, ಪುಡ್ ಮತ್ತು ಬೇವರೇಜ್ ಅಸೋಸಿಯೇಷನ್-10 ಮತ್ತು ಪ್ರೆಂಟ್ ಆಪೀಸ್ ಅಸೋಸಿಯೇಷನ್-5 ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

ಯಾವುದೇ ಪದವಿ, ಡಿಪ್ಲಮೋ, ಪ್ರೆಸರ್, ಅನುಭವ ಹೊಂದಿರಬೇಕು.; 25ವರ್ಷದೊಳಗಿನವರಾಗಿಬೇಕು. ಆದ್ದರಿಂದ ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳು ಹಾಗೂ ಸ್ವ-ವಿವರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ ಅವರು ತಿಳಿಸಿದ್ದಾರೆ.

ತುಮಕೂರು ಜಿಲ್ಲೆ: ಉಳಿದ 4 ತಾಲ್ಲೂಕುಗಳು ಬರಪೀಡಿತ

ತುಮಕೂರು ಫೆ.2: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರರವರ ವರದಿ ಆಧಾರದ ಮೇರೆಗೆ 15ನೇ ಅಕ್ಟೋಬರ್ 2011ರಿಂದ 31-12-2011ರವರೆಗಿನ ಮಳೆ ಪ್ರಮಾಣದ ಕೊರತೆ ಮತ್ತು ಸತತ ಆರು ವಾರಗಳು ಮತ್ತು ಅಧಿಕ ಅವಧಿಗೆ ಒಣ ವಾತಾವರಣ ಮತ್ತು ತೇವಾಂಶದ ಪರಿಸ್ಥಿತಿ ಆಧರಿಸಿ, 2011-12ನೇ ಸಾಲಿಗೆ ತುಮಕೂರು ಜಿಲ್ಲೆಯ ಉಳಿದ ಈ ಕೆಳಕಂಡ ನಾಲ್ಕು ತಾಲ್ಲೂಕುಗಳನ್ನೂ ಸಹ ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದೆ.

ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ಕೊರಟಗೆರೆ, ತುರುವೇಕೆರೆ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ತಾಲ್ಲೂಕುಗಳಲ್ಲಿ ಭೂರಹಿತ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸುವ ಕ್ರಮ, ಕುಡಿಯುವ ನೀರು ಸರಬರಾಜು, ಮೇವು ಸರಬರಾಜು, ಜಾನುವಾರು ಸಂರಕ್ಷಣೆ ಇತ್ಯಾದಿ ಬರಪರಿಹಾರ ಕಾಮಗಾರಿಗಳನ್ನು ಹಾಲಿ ಇರುವ ನಿಯಮಾವಳಿಯನ್ವಯ ತ್ವರಿತವಾಗಿ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ನೀರಾವರಿ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ, ರಾಜ್ಯದ 10 ಜಿಲ್ಲೆಗಳ 24 ತಾಲ್ಲೂಕುಗಳನ್ನು 2011-12ನೇ ಸಾಲಿನಲ್ಲಿ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

****************

ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಕಾಮಗಾರಿ 4-5 ವರ್ಷದಲ್ಲಿ ಪೂರ್ಣ

ತುಮಕೂರು ಫೆ.2: ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಕಾಮಗಾರಿ ಇನ್ನು 4-5 ವರ್ಷದ ಒಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಾಜ್ಯ ರೈಲ್ವೆಮಂತ್ರಿ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದರು.

ನಗರದ ರಾಮಕೃಷ್ಣ ನಗರದಲ್ಲಿ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ ಜರುಗಿದ ಶ್ರೀ ಶಿರಡಿ ಸಾಯಿಬಾಬ ದಿವ್ಯ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಈಗಾಗಲೇ ಈ ರೈಲ್ವೆ ಮಾರ್ಗ ಕಾಮಗಾರಿಯನ್ನು ರಾಯದುರ್ಗದಿಂದ ಆರಂಭಿಸಲಾಗಿದ್ದು, ಕಾಮಗಾರಿ ನಡೆಯುತ್ತಿದೆ. ಇನ್ನು 3 ತಿಂಗಳಲ್ಲಿ ತುಮಕೂರಿನಿಂದ ಈ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕರ್ನಾಟಕದಲ್ಲಿ 15 ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಎಂದ ಸಚಿವರು ಇನ್ನು 5ವರ್ಷದಲ್ಲಿ ದೇಶದ ಇತರೆ ರಾಜ್ಯಗಳಿಗೆ ಕಡಿಮೆ ಇಲ್ಲದಂತೆ ರೈಲ್ವೆ ಯೋಜನೆಗಳನ್ನು ಅಭಿವೃದ್ದಿ ಪಡಿಸಲಾಗುತ್ತದೆ ಎಂದರು.

ಇದುವರೆಗೆ ದಕ್ಷಿಣ ರಾಜ್ಯದಲ್ಲಿ ಕರ್ನಾಟಕ ಮತ್ತು ಆಂದ್ರ ರಾಜ್ಯಗಳು ರೈಲ್ವೆ ಯೋಜನೆಗಳು ಕಡಿಮೆ ಇವೆ ಎಂಬ ಅಪವಾದ ಕೇಳಿ ಬರುತ್ತಿತ್ತು. ಈ ನಿಟ್ಟಿನಲ್ಲಿ ಇನ್ನು ಐದು ವರ್ಷಗಳಲ್ಲಿ ಈ ಭಾಗದಲ್ಲಿ ರೈಲ್ವೆ ಯೋಜನೆಗಳನ್ನು ಅಭಿವೃದ್ದಿಪಡಿಸಿ ಈ ಅಪವಾದ ಸುಳ್ಳು ಮಾಡಲಾಗುವುದು ಎಂದು ನುಡಿದರು.

ಕರ್ನಾಟಕ ಸರ್ಕಾರ ಕರ್ನಾಟಕದಲ್ಲಿ ರೈಲ್ವೆ ಯೋಜನೆ ಅಭಿವೃದ್ದಿಗೆ ಸಂಬಂಧಿಸಿದಂತೆ ಅಗತ್ಯ ಅನುದಾನ ಮತ್ತು ಭೂಮಿ ನೀಡುವ ಮೂಲಕ ಸಹಕಾರ ನೀಡುತ್ತಿದೆ ಎಂದು ಪ್ರಶಂಶಿಸಿದರು.

ರೈಲ್ವೆ ಯೋಜನೆಗಳ ಅಭಿವೃದ್ದಿ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಸಹಕಾರ ನೀಡಬೇಕು. ಕೇಂದ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿ, ಹಿಂದಿನ ರೈಲ್ವೆ ಮಂತ್ರಿ ಮಮತ ಬ್ಯಾನರ್ಜಿ ಹಾಗೂ ಹಾಲಿ ರೈಲ್ವೆ ಮಂತ್ರಿಗಳು ರೈಲ್ವೆ ಯೋಜನೆಗಳ ಅನುಷ್ಟಾನಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದ ಅವರು, ಒಟ್ಟಾರೆ ರಾಜ್ಯ ಸರ್ಕಾರದ ಎಲ್ಲಾ ಪ್ರಸ್ತಾವನೆಗಳಿಗೆ ಕೇಂದ್ರ ಸಮ್ಮತಿ ನೀಡುವ ಮೂಲಕ ಅಗತ್ಯ ಹಣ ಬಿಡುಗಡೆ ಮಾಡಿದೆ ಎಂದರು.

ಸಮಾರಂಭದಲ್ಲಿ ಡಾ: ಶ್ರೀ ಶಿವಕುಮಾರ ಸ್ವಾಮಿಗಳು ನೊಣವಿನಕೆರೆ, ಕಾಡಸಿದ್ದೇಶ್ವರ ಸ್ವಾಮಿಗಳು ಕರಿಬಸವ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು, ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು, ದಿವ್ಯ ಸಾನಿಧ್ಯ ವಹಿಸಿದ್ದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸಾದ ನಿಲಯ ಉದ್ಘಾಟಿಸಿದರು. ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಅವರು ಅಧ್ಯಕ್ಷತೆ ವಹಿಸಿದ್ದರು.

ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಯಿನಾಥ ಸೇವಾ ಸಮಿತಿ ಸದಸ್ಯರು ಹಾಗೂ ಭಕ್ತ ಜನರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರಗಳಿಗೆ ಅರ್ಜಿ ಆಹ್ವಾನ

ತುಮಕೂರು ಫೆ.2: ತುಮಕೂರು ಗ್ರಾಮಾಂತರ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಗ್ರಾಮಗಳಲ್ಲಿ ಗೌರವಧನ ಆಧಾರಿತ ತಾತ್ಕಾಲಿಕ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಯು ಖಾಲಿ ಇದ್ದು, ಸದರಿ ಕೇಂದ್ರಕ್ಕೆ ಈ ಕೆಳಕಂಡ ನಿಬಂಧನೆಗೊಳಪಟ್ಟು ಅರ್ಜಿ ಆಹ್ವಾನಿಸಲಾಗಿದೆ.

ಕ್ರ.ಸಂ. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಕೇಂದ್ರದ ಹೆಸರು ಖಾಲಿ ಇರುವ ಅಂಗನವಾಡಿ ಸಹಾಯಕಿ ಕೇಂದ್ರದ ಹೆಸರು

1. ನಿಡುವಳಲು ಕಾಗ್ಗೆರೆ

2. ಕೆಂಚಯ್ಯನ ಪಾಳ್ಯ ಕೊಟ್ಟನಹಳ್ಳಿ

3. ದೊಮ್ಮನಕುಪ್ಪೆ ಬೆಳ್ಳಾವಿ-4

4. ಜಕ್ಕೇನಹಳ್ಳಿ-1 ಅರಿಯೂರು-1

ತಾತ್ಕಾಲಿಕ ಹುದ್ದೆಗೆ ಅರ್ಜಿಯನ್ನು ಫೆಬ್ರವರಿ 25ರವರೆಗೆ ಶಿಶು ಅಭಿವೃದ್ದಿ ಯೋಜನಾ ಕಛೇರಿ, ಬಿಹೆಚ್.ರಸ್ತೆ, ಇಂಡಸ್ಟ್ರೀಯಲ್ ಏರಿಯಾ, ತುಮಕೂರು ಗ್ರಾಮಾಂತರ, ಇಲ್ಲಿ ಸಲ್ಲಿಸಬಹುದಾಗಿದೆ.

***********

ಉಚಿತ ವೃತ್ತಿಪರ ತರಬೇತಿ

ತುಮಕೂರು ಫೆ.2: ನೆಹರು ಯುವಕೇಂದ್ರ ಹಾಗೂ ಸಿ.ಎಸ್.ಐ.ವಿ.ಸಿ.-ಕೈಗಾರಿಕಾ ತರಬೇತಿ ಕೇಂದ್ರ ಸಂಯುಕ್ತಾ ಆಶ್ರಯದಲ್ಲಿ ತುಮಕೂರು ಜಿಲ್ಲೆಯ ಯುವಕ, ಯುವತಿಯರಿಗಾಗಿ ಉಚಿತ ವೃತ್ತಿಪರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

15ರಿಂದ 35ವರ್ಷದೊಳಗಿನ ಯುವಕ, ಯುವತಿಯರಿಗಾಗಿ ಭಾರತ ಸರ್ಕಾರದ ಎನ್.ಸಿ.ವಿ.ಟಿ.ಯಿಂದ ಮಾನ್ಯತೆ ಪಡೆದಿರುವ ಈ ಕೆಳಕಂಡ ಎಂ.ಇ.ಎಸ್. ಸರ್ಟಿಫಿಕೇಟ್‌ನ ವೃತ್ತಿಪರ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಲೆಕ್ಟ್ರೀಷಿಯನ್ ತರಬೇತಿ, ಪ್ಯಾಬ್ರಿಕೇಟರ್‍ಸ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಕಾರ್ಪೆಂಟರ್ ತರಬೇತಿ ನೀಡಲಿದ್ದು, ತರಬೇತಿ ಅವಧಿಯು 2ತಿಂಗಳಿನದ್ದಾಗಿರುತ್ತದೆ.

ಮೇಲ್ಕಂಡ ವೃತ್ತಿಪರ ತರಬೇತಿ ಪಡೆದವರಿಗೆ ಸರ್ಕಾರೇತರ ಕೈಗಾರಿಕಾ ಉದ್ದಿಮೆಗಳ ಸಂಸ್ಥೆಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ತುಮಕೂರು ಜಿಲ್ಲೆಯ ಯುವಕ, ಯುವತಿಯರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ತರಬೇತಿಗೆ ಸಂಪರ್ಕಿಸಬೇಕಾದ ವಿಳಾಸ ಪ್ರಾಚಾರ್ಯರು, ಸಿ.ಎಸ್.ಐ.ವಿ.ಸಿ. ಕೈಗಾರಿಕಾ ತರಬೇತಿ ಕೇಂದ್ರ, ಸಿ.ಎಸ್.ಐ. ಒಕೇಷನಲ್ ಸೆಂಟರ್, ಗಾಯತ್ರಿ ಟಾಕೀಸ್ ಹಿಂಭಾಗ, ತುಮಕೂರು. ಮೊ:9880657749. ತರಬೇತಿ ತರಗತಿಗಳು ಫೆಬ್ರವರಿ 15ರಿಂದ ಪ್ರಾರಂಭವಾಗುತ್ತದೆ.

ಫೆಬ್ರುವರಿ 19ರಿಂದ ಜಿಲ್ಲೆಯಾದ್ಯಂತ ಒಂದನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ

ಗುಲಬರ್ಗಾ,ಫೆ.02.(ಕ.ವಾ.)-ಗುಲಬರ್ಗಾ ಜಿಲ್ಲೆಯಾದ್ಯಂತ 2012ರ ಫೆಬ್ರುವರಿ 19 ರಿಂದ 22ವರೆಗೆ ಒಂದನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ 7 ತಾಲೂಕುಗಳ ಐದು ವರ್ಷದೊಳಗಿನ ಒಟ್ಟು 386705 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಇವರಲ್ಲಿ ನಗರ ಪ್ರದೇಶದ 158980 ಹಾಗೂ ಗ್ರಾಮೀಣ ಪ್ರದೇಶದ 227725 ಮಕ್ಕಳು ಸೇರಿದ್ದಾರೆ. ಇದಕ್ಕಾಗಿ ವ್ಯಾಪಕ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ತಿಳಿಸಿದ್ದಾರೆ.

ಅವರು ಗುರುವಾರ ಗುಲಬರ್ಗಾದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಕಮಿಟಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಲು ಅಂಗನವಾಡಿ ಕಾರ್ಯಕರ್ತರ ಮತ್ತು ಆರೋಗ್ಯ ಇಲಾಖೆ ದಾದಿಯರ ಪಾತ್ರ ಅತೀ ಮುಖ್ಯವಾಗಿದ್ದು, ಇವರ ಸೇವೆ ಮತ್ತು ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ಈಗ ಸುಗ್ಗಿಯ ಕಾಲ ಇರುವುದರಿಂದ ಹೊಲಗದ್ದೆಗಳಲ್ಲಿ, ಸಕ್ಕರೆ ಕಾರ್ಖಾನೆಗಳಲ್ಲಿ, ಬಸ್ ಮತ್ತು ರೈಲು ನಿಲ್ದಾಣ, ಇತರ ಜನನಿಬಿಡ ಸ್ಥಳಗಳಲ್ಲಿರುವ ಜನಸಂಖೆ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಲಸಿಕೆ ಹಾಕುವ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ಜರುಗುವ ಎಲ್ಲ ಸಂತೆ ಮತ್ತು ಜಾತ್ರೆಗೆ ಬರುವ ಹಾಗೂ ತಾಂಡಾಗಳಲ್ಲಿ ವಾಸಿಸುವ ಜನರ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಈ ಕಾರ್ಯಕ್ರಮದಲ್ಲಿ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ಕಟ್ಟೆಚ್ಚರ ವಹಿಸಬೇಕು. ಇದಕ್ಕಾಗಿ ಆರೋಗ್ಯ ಇಲಾಖೆಯು ಎಲ್ಲ ಇಲಾಖೆಗಳೊಂದಿಗೆ ವಿಶೇಷವಾಗಿ ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ ಇಲಾಖೆ, ಸ್ಥಳೀಯ ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ 2004ರಲ್ಲಿ ಕೇವಲ ಒಂದು ಹಾಗೂ 2007ರಲ್ಲಿ ಒಂದು ಪೋಲಿಯೋ (ಹೊರ ರಾಜ್ಯದಿಂದ ವಲಸೆ ಬಂದಿರುವ) ಪ್ರಕರಣ ಹೊರತುಪಡಿಸಿದರೆ ಈವರೆಗೆ ಯಾವುದೇ ಹೊಸ ಪೋಲಿಯೋ ಪ್ರಕರಣ ವರದಿಯಾಗಿಲ್ಲ. ಅದೇ ರೀತಿ ಗುಲಬರ್ಗಾ ಜಿಲ್ಲೆಯಲ್ಲಿಯೂ 2004ರಿಂದ ಯಾವುದೇ ಹೊಸ ಪೋಲಿಯೋ ಪ್ರಕರಣ ವರದಿಯಾಗಿಲ್ಲ. ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು 1995ರ ಡಿಸೆಂಬರ್ ಮಾಹೆಯಲ್ಲಿ ಪ್ರಾರಂಭಗೊಂಡಿದ್ದು, 2011ರ ಫೆಬ್ರುವರಿವರೆಗೆ ಒಟ್ಟು 48 ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮಗಳು ಜರುಗಿವೆ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತಿದೆ.

ಈಗ 2012ರ ಫೆಬ್ರುವರಿ 19 ರಿಂದ 22ವರೆಗೆ ನಡೆಯುವ ಒಂದನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಫೆಬ್ರುವರಿ 19 ರಂದು ಸಾರ್ವಜನಿಕರೆಲ್ಲರೂ ತಮ್ಮ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆತಂದು ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಅಂಗವೈಕಲ್ಯ ಉಂಟುಮಾಡುವ ಪೋಲಿಯೋ ರೋಗದಿಂದ ಮಕ್ಕಳನ್ನು ರಕ್ಷಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಅವರು ಕೋರಿದ್ದಾರೆ.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಸುಲೋಚನಾ ಎಸ್. ಮಿಂಚ್, ಪಲ್ಸ್ ಪೋಲಿಯೋ ಜಿಲ್ಲಾ ನೋಡಲ್ ಅಧಿಕಾರಿ ಅಧಿಕಾರಿ ಡಾ. ಅನೀಲ್ ಕುಮಾರ ತಾಳಿಕೋಟಿ, ಗುಲಬರ್ಗಾ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಶ್ಯಾಮರಾವ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಗುಲಬರ್ಗಾ,ಫೆ.02.(ಕ.ವಾ.)-ಗುಲಬರ್ಗಾ ಮಹಾನಗರ ಪಾಲಿಕೆಯಿಂದ ಶೇ. 7.25ರ ಅಡಿಯಲ್ಲಿ ವಿವಿಧ ವೈಯಕ್ತಿಕ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು 2012ರ ಫೆಬ್ರುವರಿ 7ರವರೆಗೆ ವಿಸ್ತರಿಸಲಾಗಿದೆ. ಈ ಮುಂಚೆ ರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31 ನಿಗದಿಯಾಗಿದ್ದು, ಸಾರ್ವಜನಿಕರ ಮನವಿ ಮೇರೆಗೆ ಈ ಅವಧಿಯನ್ನು ವಿಸ್ತರಿಸಲಾಗಿದೆ.

ಫೆಬ್ರುವರಿ 5ರಂದು ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ

ಗುಲಬರ್ಗಾ,ಫೆ.02.(ಕ.ವಾ.)-ಜಿಲ್ಲಾಡಳಿತ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂಗದ ಸಂಯುಕ್ತಾಶ್ರಯದಲ್ಲಿ ಗುಲಬರ್ಗಾ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ 2012ರ ಫೆಬ್ರುವರಿ 5ರಂದು ಬೆಳಗಿನ 10ರಿಂದ ಮಾನಸಿಕ ಆರೋಗ್ಯದ ಅರಿವು ಕುರಿತು ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಹೈಕೋರ್ಟಿನ ನ್ಯಾಯಾಧೀಶ ನ್ಯಾಯಮೂರ್ತಿ ಎನ್. ಕುಮಾರ ಅವರು ಉದ್ಘಾಟಿಸಲಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಸ್. ಬಿಳ್ಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಮನೋರೋಗ ತಜ್ಞರು ಹಾಗೂ ಇತರ ತಜ್ಞರಾದ ಡಾ.ಬಿ.ವಿ. ಕರೂರ, ಡಾ.ಡಿ.ವಿ. ಪತಂಗೆ, ಡಾ. ವಿ.ವಿ. ಮಾಲೀಪಾಟೀಲ್, ಡಾ. ಎನ್.ಜಿ. ಘನಾತೆ, ಡಾ. ಎಚ್. ಚಂದ್ರಶೇಖರ್, ಡಾ. ಮಹೇಶಗೌಡ, ಡಾ. ರಾಜೇಂದ್ರಕುಮಾರ ಕಟ್ಟಿ, ಡಾ. ಶಿವಶಂಕರ ಪೋಳ್ ಅವರು ಮಾನಸಿಕ ಕಾಯಿಲೆ ಮತ್ತು ಲಕ್ಷಣ, ದಾಂಪತ್ಯ ಸಮಸ್ಯೆ, ಮದ್ಯಪಾನ ದುಶ್ಚಟದಿಂದಾಗುವ ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡುವರು. ಕೊನೆಯಲ್ಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎನ್. ಕುಮಾರ ಅವರ ಅಧ್ಯಕ್ಷತೆಯಲ್ಲಿ ತಜ್ಞ ಸಮಿತಿಯ ಚರ್ಚೆ ನಡೆಯುವುದು.

ಶಹಾಬಾದ : ಶೇ. 7.25 ಯೋಜನೆಯಡಿ ನೆರವು ಮತ್ತು ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಫೆ.02.(ಕ.ವಾ.)-ಗುಲಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಹಾಬಾದ ನಗರಸಭೆ ವ್ಯಾಪ್ತಿಯಲ್ಲಿ ಬರುವ ಇತರೆ ವರ್ಗಗಳ ಜನಾಂಗದವರಿಗೆ 2010-11 ಹಾಗೂ 2011-12ನೇ ಸಾಲಿನಲ್ಲಿ ಶೇ. 7.25 ಅನುದಾನದಡಿಯಲ್ಲಿ ವಿವಿಧ ಕಾರ್ಯಕ್ರಮಗಳಡಿ ನೆರವು ಮತ್ತು ಸೌಲಭ್ಯ ಕಲ್ಯಾಣ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಶಹಾಬಾದ ನಗರಸಭೆ ಪೌರಾಯುಕ್ತರ ಕಚೇರಿಯಿಂದ ಪಡೆದು 2012ರ ಫೆಬ್ರುವರಿ 21ರ ಸಾಯಂಕಾಲ 5 ಗಂಟೆಯೊಳಗಾಗಿ ಸಲ್ಲಿಸಬೇಕು.

ಕಾರ್ಯಕ್ರಮಗಳ ವಿವರ ಹಾಗೂ ಸಲ್ಲಸಬೇಕಾದ ದಾಖಲೆಗಳ ವಿವರ ಈ ಮುಂದೆ ತೋರಿಸಿದೆ. ಆರೋಗ್ಯ: ಇತರೆ ಬಡ ಕುಟುಂಬದ ಜನಾಂಗದವರಿಗೆ ಭಾರಿ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳಿಗೆ ಧನ ಸಹಾಯ ನೀಡಲು- ಇತರೆ ಕುಟುಂಬದವರ ಜಾತಿ ಪ್ರಮಾಣಪತ್ರ, ಆದಾಯ, ವಾಸಸ್ಥಳ, ರೇಶನ್ ಕಾರ್ಡ್, ಗುರುತಿನ ಚೀಟಿ, ವೈದ್ಯಕೀಯ ಚಿಕಿತ್ಸೆ ಪಡೆದ ದಾಖಲಾತಿಗಳು ಮತ್ತು ಫೋಟೋ. ಶಿಕ್ಷಣ: ಇತರೆ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಾಗೂ ಹಾರ್ಡ್‌ವೇರ್-ಸಾಫ್ಟವೇರ್ ತರಬೇತಿ ಕೊಡುವುದಕ್ಕೆ ಮತ್ತು ಪದವಿ ಪೂರ್ವ ಹಾಗೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ವಿಶೇಷ ನೆರವು ನೀಡುವ ಪ್ರಯುಕ್ತ ಪುಸ್ತಕ ಖರೀದಿ ಸಲುವಾಗಿ ಧನ ಸಹಾಯ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ, ಆದಾಯ, ವಾಸಸ್ಥಳ, ರೇಶನ್ ಕಾರ್ಡ್ ಗುರಿತಿನ ಚೀಟಿ ಮತ್ತು ಅಂಕಪಟ್ಟಿ ಹಾಗೂ ಭಾವಚಿತ್ರ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ (ಬಿಸಿಎಂ): ಸಾಲ ಪಡೆದ ಉದ್ಯೋಗಿಗಳಿಗೆ ಸಹಾಯಧ ನೀಡುವುದು ಬಿ.ಸಿ.ಎಂ. ಇಲಾಖೆಗೆ- ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ (ಬಿಸಿಎಂ) ಸಾಲ ಪಡೆದ ಫಲಾನುಭವಿಗಳು ಜಾತಿ ಪ್ರಮಾಣಪತ್ರ, ಆದಾಯ, ವಾಸ್ಥಳ, ರೇಶನ್ ಕಾರ್ಡ್, ಗುರುತಿನ ಚೀಟಿ ಹಾಗೂ ಭಾವಚಿತ್ರ. ಮೂಲಭೂತ ಸೌಕರ್ಯಗಳು: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ಆರ್ಥಿಕ ಸಹಾಯಧನ ನೀಡಲು-ಫಲಾನುಭವಿಗಳು ಜಾತಿ ಪ್ರಮಾಣಪತ್ರ, ಆದಾಯ, ವಾಸಸ್ಥಳ, ರೇಶನ್ ಕಾರ್ಡ್, ಗುರುತಿನ ಚೀಟಿ ಹಾಗೂ ಭಾವಚಿತ್ರ ಶೌಚಾಲಯ ನಿರ್ಮಾಣದ ನಕಾಶೆ, ಮನೆ ಹಕ್ಕುಪತ್ರ ಇತರೆ ದಾಖಲೆಗಳು.

ಸರ್ಕಾರದ ಸುತ್ತೋಲೆಯಂತೆ ಶೇ. 7.25ರಷ್ಟು ಇತರರ ಬಡ ಕುಟುಂಬಗಳ ಕಲ್ಯಾಣ ಕಾರ್ಯಕ್ರಮಕ್ಕಾಗಿ ಫಲಾನುಭವಿಗಳನ್ನು ಪ್ರತಿ ಕಾರ್ಯಕ್ರಮದಡಿ ಆಯ್ಕೆ ಮಾಡಲಾಗುವುದು. ನಿಗದಿತ ದಿನಾಂಕದಂದು ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶಹಾಬಾದ ನಗರಸಭೆ ಕಾರ್ಯಾಲಯದಿಂದ ಪಡೆಯಬಹುದು.

ಎಂಪಿಲ್ಯಾಡ ಯೋಜನೆ: 3.08 ಕೋಟಿ ರೂ. ಖರ್ಚು

ಗುಲಬರ್ಗಾ,ಫೆ.02.(ಕ.ವಾ.)-ಗುಲಬರ್ಗಾ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃಧ್ಧಿ ನಿಧಿ ಯೋಜನೆಯಡಿ ಭಾರತ ಸರ್ಕಾರ 2009-10 ರಿಂದ 2011ರ ಡಿಸೆಂಬರ್ 13(15ನೇ ಲೋಕಸಭೆಗಾಗಿ)ರವರೆಗೆ ಒಟ್ಟು 3.80 ಕೋಟಿ ರೂ. ಬಿಡುಗಡೆ ಮಾಡಿದ್ದು, 3.08 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಅವರು ತಿಳಿಸಿದ್ದಾರೆ. ವರ್ಷವಾರು ಬಿಡುಗಡೆಯಾದ ಮತ್ತು ಖರ್ಚಾದ ವಿವರ ಇಂತಿದೆ. 2009-10: ಬಿಡುಗಡೆ-2 ಕೋಟಿ ರೂ. ಮತ್ತು ಖರ್ಚು-1.88 ಕೋಟಿ ರೂ. 2010-11: ಬಿಡುಗಡೆ-1 ಕೋಟಿ ರೂ., ಖರ್ಚು-97.80 ಲಕ್ಷ ರೂ. 14ನೇ ಲೋಕಸಭೆಯ ಖರ್ಚಾಗದ ಹಣ: 80.29 ಲಕ್ಷ ರೂ., ಖರ್ಚು-23.08 ಲಕ್ಷ ರೂ.

ಈ ಯೋಜನೆಯಡಿ ಒಟ್ಟು 1.33 ಕೋಟಿ ರೂ. ವೆಚ್ಚದ 34 ರಸ್ತೆ ಮತ್ತು ಸೇತುವೆ, 1.89 ಕೋಟಿ ರೂ. ವೆಚ್ಚದ 42 ಸಮುದಾಯ ಭವನ/ ಶಾದಿ ಮಹಲ್ ಮತ್ತು 57.10 ಲಕ್ಷ ರೂ. ವೆಚ್ಚದ 16 ಇತರೆ ಕಾಮಗಾರಿಗಳು ಸೇರಿದಂತೆ ಒಟ್ಟು 3.80 ಕೋಟಿ ರೂ. ವೆಚ್ಚದ 92 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿತ್ತು. ಈ ಪೈಕಿ 2.49 ಕೋಟಿ ರೂ. ವೆಚ್ಚದಿಂದ 64 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 1.21 ಕೋಟಿ ರೂ. ವೆಚ್ಚದ 27 ಕಾಮಗಾರಿಗಳು ಪ್ರಗತಿಯಲ್ಲಿವೆ ಮತ್ತು 9.58 ಲಕ್ಷ ರೂ. ವೆಚ್ಚದ ಒಂದು ಕಾಮಗಾರಿಯ ಅಂದಾಜು ಪಟ್ಟಿ ತಯಾರಿಕೆ ಹಂತದಲ್ಲಿದೆ. ಇದರಿಂದ ಶೇ. 81ರಷ್ಟು ಆರ್ಥಿಕ ಪ್ರಗತಿಯಾಗಿದೆ. ಭಾರತ ಸರ್ಕಾರವು 2011ರ ಡಿಸೆಂಬರ್ 14ರಂದು ಆರ್.ಟಿ.ಜಿ.ಎಸ್. ಮೂಲಕ 3.50 ಕೋಟಿ ರೂ. ಬಿಡುಗಡೆ ಮಾಡಿದೆ. ಶೇಕಡಾವಾರು ಪ್ರಗತಿಯ ಲೆಕ್ಕಾಚಾರ ಮಾಡುವಾಗಿ ಈಚೆಗೆ ಬಿಡುಗಡೆಯಾದ ಹಣವನ್ನು ಸೇರಿಸಿದ್ದರಿಂದ ಶೇ. 39 ಪ್ರಗತಿ ಎಂದು ತೋರಿಸಲಾಗಿದೆ.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆ ಮಾರ್ಗಸೂಚಿಯ ಪ್ರಕಾರ ಭಾರತ ಸರ್ಕಾರ ಅನುದಾನ ಬಿಡುಗಡೆ ಮಾಡಿದ ಬಳಿಕ ಸಂಬಂಧಿಸಿದ ಸಂಸದರು ಕಾಮಗಾರಿಗನ್ನು ಗುರುತಿಸಿ ಪ್ರಸ್ತಾವನೆಗಳನ್ನು ಸಂಬಂಧಿಸಿದ ಜಿಲ್ಲಾ ನೋಡಲ್ ಪ್ರಾಧಿಕಾರಕ್ಕೆ ಅನುಷ್ಠಾನಗೊಳಿಸಲು ಕಳುಹಿಸುವರು. ಜಿಲ್ಲಾ ನೋಡಲ್ ಪ್ರಾಧಿಕಾರವು ಪ್ರತಿ ಕಾಮಗಾರಿಯ ಅರ್ಹತೆ ಮತ್ತು ತಾಂತ್ರಿಕ ಸಾಧ್ಯತೆ(ಫಿಜಿಬಿಲಿಟಿ)ಯನ್ನು ಪರಿಶೀಲಿಸಿ 45 ದಿನದೊಳಗೆ ಮಂಜೂರಾತಿ ನೀಡುವರು. ನಂತರ ಹಣ ಬಳಸಿ ಪ್ರಗತಿ ಸಾಧಿಸಲಾಗುವುದೆಂದು ತಿಳಿಸಿದ್ದಾರೆ.

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಗುಲಬರ್ಗಾ,ಫೆ.02.(ಕ.ವಾ.)-ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ವೃಂದದ ಕೆಎಸ್‌ಆರ್‌ಪಿ/ಐಆರ್‌ಬಿ/ಕೆಎಸ್‌ಐಎಸ್‌ಎಫ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದಿನಾಂಕ: 16-01-2012 ರಿಂದ 15-02-2012ರವರೆಗೆ ಎಲ್ಲ ಕೆಲಸದ ದಿನಗಳಂದು ( ಕಚೇರಿ ಸಮಯದಲ್ಲಿ) 150 ರೂ. ಎಸ್.ಸಿ./ಎಸ್.ಟಿ./ಪ್ರವರ್ಗ-1 ಮತ್ತು 300 ರೂ. ಇತರೆ ಅಭ್ಯರ್ಥಿಗಳು ಶುಲ್ಕ ನೀಡಿ ನಿಗದಿತ ಅರ್ಜಿಗಳನ್ನು ತಾಜಸುಲ್ತಾನಪೂರದಲ್ಲಿರುವ 6ನೇ ಪಡೆ ಕೆಎಸ್‌ಆರ್‌ಪಿ ಬೆಟಾಲಿಯನ್ ಕಚೇರಿಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ತಿತಿತಿ.ಞsಠಿ.gov.iಟಿ <hಣಣಠಿ://ತಿತಿತಿ.ಞsಠಿ.gov.iಟಿ> ನ್ನು ಮತ್ತು ಈ ಕಚೇರಿಯ ದೂರವಾಣಿ ಸಂಖ್ಯೆ 08472-212336ಗೆ ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 15-2-2012ರಂದು ಸಾಯಂಕಾಲ 6 ಗಂಟೆಯೊಳಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಅರ್ಜಿ ಪಡೆದ ಕಚೇರಿಯಲ್ಲಿಯೇ ಸಲ್ಲಿಸಬಹುದಾಗಿದೆ. ನೇಮಕಾತಿಯ ಮೊದಲ ಹಂತವಾಗಿ ಘಟಕಗಳಲ್ಲಿ ಸಹಿಷ್ಣುತೆ: ದೇಹದಾರ್ಢ್ಯತೆ ಪರೀಕ್ಷೆಯನ್ನು ಏಪ್ರಿಲ್ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಕೆ.ಎಸ್.ಆರ್.ಪಿ. ಕಮಾಂಡೆಂಟ್ ಅವರು ತಿಳಿಸಿದ್ದಾರೆ.

ಜಿ.ಬಿ.ಸಿಂಡ್ರೋಮ ಬಾಧಿತರಿಗೆ ಸೂಕ್ತ ಚಿಕಿತ್ಸೆ : ಮುಖ್ಯಮಂತ್ರಿ ಭರವಸೆ

ಕಾರವಾರ-2 : ಜೋಯಡಾ ತಾಲೂಕಿನ ಅರಣ್ಯ ಗ್ರಾಮಗಳಲ್ಲಿ ಇತ್ತೀಚೆಗೆ ಕಂಡು ಬಂದ ಜಿ.ಬಿ.ಸಿಂಡ್ರೋಮ್ ಕಾಯಿಲೆ ಬಾಧಿತರಿಗೆ ಸೂಕ್ತ ಉಚಿತ ಚಿಕಿತ್ಸ್ಸೆ ನೀಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡರು ತಿಳಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ನಿನ್ನ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ಮುಖ್ಯಮಂತ್ರ್ರಿಗಳು ಜೋಯಡಾದಲ್ಲಿ ಕಂಡು ಬಂದಿರುವ ಜಿ.ಬಿ.ಸಿಂಡ್ರೋಮ ಕಾಯಿಲೆಯ ಮೂವರಿಗೂ ಈಗಾಗಲೇ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಮುಂದೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಬೆಂಗಳೂರಿನ ನಿಮ್ಹಾನ್ಸ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ವೈದ್ಯ ಡಾ: ಗಾಬಿಯಿಂದ ಮತ್ತೇ ಸಹಾಯಧನ : ಜಿ.ಬಿ.ಸಿಂಡ್ರೋಮ ಕಾಯಿಲೆಗೆ ತುತ್ತಾಗಿರುವ ಧೋನಪಾ ಗ್ರಾಮದ ಸವಿತಾ ಲಕ್ಷ್ಮಣ ದೇಸಾಯಿ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಆಕೆಗೆ ಉತ್ತಮ ಆಹಾರ ದೊರೆಯಲೆಂಬ ಸದುದ್ದೇಶದಿಂದ ತಾಲೂಕಾ ಆರೋಗ್ಯಾಧಿಕಾರಿಯಾಗಿದ್ದ ಡಾ: ಸಂಗಪ್ಪ ಗಾಬಿ ಅವರು ಆಕೆಯ ಗಂಡನಿಗೆ ಐದು ಸಾವಿರ ಸಹಾಯಧನವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಊರುಗೋಲಿನ ಸಹಾಯದಿಂದ ಹೆಜ್ಜೆಯಿಡಲು ಆರಂಭಿಸಿರುವ ಸವಿತಾಳ ಆರೋಗ್ಯ ಸ್ಥಿತಿ ಸುಧಾರಣೆಗೆ ಉತ್ತಮ ಆಹಾರ ಹಾಗೂ ಸೂಕ್ತ ಆರೈಕೆಯ ಅಗತ್ಯವಿದೆಯೆನ್ನುತ್ತಾರೆ ಡಾ: ಗಾಬಿ. ಸವಿತಾಳ ಕಾಯಿಲೆಯನ್ನು ಹುಬ್ಬಳ್ಳಿಯ ನರರೋಗ ತಜ್ಞ ಡಾ: ದತ್ತಾ ನಾಡಗೇರ ಅವರಿಂದ ಪರೀಕ್ಷಿಸಿ ಜಿ.ಬಿ.ಸಿಂಡ್ರೋಮ ಕಾಯಿಲೆ ಖಚಿತಪಡಿಸಿಕೊಂಡು ವರದಿ ಪಡೆಯಲಾಗಿದೆ.

ತಾಯಿ ಮರಣ ಇಳಿಮುಖ : ಅರಣ್ಯ ಹಳ್ಳ-ಕೊಳ್ಳದಿಂದಾವ್ರತವಾಗಿರುವ ಜೋಯಡಾ ತಾಲೂಕಿನ ಗ್ರಾಮಗಳಲ್ಲಿ ಕಳೆದೊಂದು ದಶಕದಿಂದ ತಾಯಿಮರಣ ಪ್ರಕರಣಗಳು ತೀವ್ರ ಕಡಿಮೆಯಾಗಿದ್ದು, ವಿವಿಧ ಗ್ರಾಮಗಳಲ್ಲಿ ಹೆರಿಗೆ ಪ್ರಕರಣಗಳು ಕಳೆದ ಐದಾರು ವರ್ಷಗಳಲ್ಲಿ ಈವರೆಗೆ ಕೇವಲ ಮೂರು ಸಾವು ಸಂಭವಿಸಿದೆ ಯೆನ್ನುತ್ತಾರೆ ಡಾ: ಗಾಬಿ.

ಅಂಚೆ ಪ್ರಕಟಣೆ

ಕಾರವಾರ-2 : ಇತ್ತೀಚಿನ ದಿನಗಳಲ್ಲಿ ಭಾರತೀಯ ಅಂಚೆ ಇಲಾಖೆಯು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಸಲುವಾಗಿ ಇತರೇ ಸರಕಾರದ ಹಾಗೂ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಭಾರತೀಯ ಅಂಚೆ ಇಲಾಖೆಯು ಕರ್ನಾಟಕ ಸರಕಾರದ ಜೊತೆಗೆ ನಾಗರಿಕರಿಗೆ ಸ್ಟಾಂಪ್ ಕಾಗದಗಳನ್ನು ಒದಗಿಸುವ ಸಲುವಾಗಿ ಒಪ್ಪಂದವನ್ನು ಮಾಡಿಕೊಂಡಿರುತ್ತದೆ. ಆದ್ದರಿಂದ ಮಾರಾಟಗಾರರು, ಭೂಮಿ/ಕಟ್ಟಡ ಖರೀದಿಮಾಡುವವರು ಕಾರವಾರ ಅಂಚೆ ಕಚೇರಿಯಲ್ಲಿ ಕೇವಲ ಕೆಲವೇ ನಿಮಿಷಗಳಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಂಚೆ ಪಾಲಕರು, ಮುಖ್ಯ ಅಂಚೆ ಕಚೇರಿ ಕಾರವಾರ 08382-221237 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

*****

ಸಾರ್ವಜನಿಕ ಕುಂದುಕೊರತೆ ಸಭೆ

ಗದಗ(ಕರ್ನಾಟಕ ವಾರ್ತೆ) ಜನೆವರಿ 2: ಸಾರ್ವಜನಿಕ ಕುಂದುಕೊರತೆಗಳ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಸರಕಾರದ ಆಹಾರ ಭದ್ರತೆ ಯೋಜನೆಯಡಿ ಸಾರ್ವಜನಿಕ ವಿತರಣಾ ಪದ್ಧತಿ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಹಾಗೂ ಮಧ್ಯಾಹ್ನ ಬಿಸಿ ಊಟ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 04-02-2012 ರಂದು 01 ನೇ ಶನಿವಾರರಂದು ಜಿಲ್ಲಾ ಅಧಿಕಾರಿಗಳ ಕಾರ್‍ಯಾಲಯದಲ್ಲಿ ಬೆಳಿಗ್ಗೆ 10-30 ಗಂಟೆಗೆ ಸಭೆ ಜರುಗಿಸಲಾಗುವುದು. ಪ್ರತಿ ಮಾಹೆಯ 1 ನೇ ಮತ್ತು 3 ನೇ ಶನಿವಾರದಂದು ದೂರು ಸ್ವೀಕರಿಸಿ ವಿಚಾರಣೆ ನಡೆಸಲಾಗುವುದು. ಕಾರಣ ಜಿಲ್ಲೆಯ ಸಾರ್ವಜನಿಕರು ಈ ದಿಸೆಯಲ್ಲಿ ಮೇಲ್ಕಾಣಿಸಿದ ಆಹಾರ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳು ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರು ಮನವಿ ಸಲ್ಲಿಸಿದಲ್ಲಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು, ಗದಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾಕೂಟ ಯಶಸ್ವಿ

ಗದಗ(ಕರ್ನಾಟಕ ವಾರ್ತೆ) ಜನೆವರಿ 2: ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ 2011-12 ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಗದಗ ವಿ.ಡಿ.ಎಸ್.ಟಿ. ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನಡೆದ ಈ ಕ್ರೀಡಾಕೂಟವು ಮೊದಲ ಬಾರಿ ಗದಗ ಜಿಲ್ಲೆಯಲ್ಲಿ ನಡೆದಿರುವುದು ವಿಶೇಷವಾಗಿತ್ತು. ಬಾಲಕರ ಕ್ರಿಕೆಟ್ ನಲ್ಲಿ ಹುಲಕೋಟಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದವರು ಪ್ರಥಮ ಸ್ಥಾನ ಪಡೆದರು ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು, ಗದಗ ಇವರು ದ್ವಿತೀಯ ಸ್ಥಾನ ಪಡೆದರು.

ವಿದ್ಯಾರ್ಥಿನಿಯರ ಥ್ರೋ ಬಾಲ್ ಪಂದ್ಯದಲ್ಲಿ ನರಗುಂದದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದವರು ಪ್ರಥಮ ಸ್ಥಾನ ಪಡೆದರು. ದ್ವಿತೀಯ ಸ್ಥಾನವನ್ನು ಮೊರಾರ್ಜಿ ದೇಸಾಯಿ ವಿದ್ಯಾರ್ಥಿನಿಯರು ಗದಗ ಇವರು ಪಡೆದರು. ಗದಗ ಜಿಲ್ಲೆಯ ಎಲ್ಲಾ ವಿಸ್ತೀರ್ಣಾಧಿಕಾರಿಗಳು ಜಿಲ್ಲೆಯ ಎಲ್ಲ ವಸತಿ ನಿಲಯದ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಥ್ರೋಬಾಲ್ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದು ಶೀಲ್ಡ ತಂದುದಕ್ಕಾಗಿ ಕಾಲೇಜಿನ ಪ್ರಾಚಾರ್‍ಯರು ಎಸ್.ಬಿ. ವಕ್ರದ ಹಾಗೂ ನಿಲಯ ಮೇಲ್ವಿಚಾರಕರು ಹಾಗೂ ಸಂಘಟನೆಗೆ ಶ್ರಮಿಸಿದ ಬಸವರಾಜ ವಿ. ಬಳ್ಳಾರಿ ಇವರು ಸ್ಪರ್ಧಾಳುಗಳನ್ನು ಅಭಿನಂದಿಸಿದ್ದಾರೆ.

ಬಿ.ಸಿ.ಎಂ. ಇಲಾಖಾ ಜಿಲ್ಲಾ ಮಟ್ಟದ ಪ್ರಪ್ರಥಮ ಕ್ರೀಡಾಕೂಟ ಯಶಸ್ವಿ

ಗದಗ(ಕರ್ನಾಟಕ ವಾರ್ತೆ) ಜನೆವರಿ 2 : ಬಿ.ಸಿ.ಎಂ.ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ/ನಿಯರಿಗೆ 2011-12 ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಕ್ರಿಕೆಟ್ ( ಹುಡುಗರಿಗೆ) ನಲ್ಲಿ ಹುಲಕೋಟಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರಥಮ ಸ್ಥಾನ, ಗದಗನ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ದ್ವಿತೀಯ ಸ್ಥಾನ ಪಡೆದುಕೊಂಡರು. ಥ್ರೋಬಾಲ್

( ಹುಡುಗಿಯರಿಗೆ) : ನರಗುಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರಥಮ ಸ್ಥಾನವನ್ನು, ಗದಗ ಮೆಟ್ರಿಕ್ ನಂತರದ ಮೊರಾರ್ಜಿ ದೇಸಾಯಿ ವಸತಿ ನಿಲಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಬಿ.ಸಿ.ಎಂ. ಇಲಾಖೆಯ ಜಿಲ್ಲಾ ಅಧಿಕಾರಿ ಡಿ. ಮೋಹನ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ವಿಸ್ತೀರ್ಣಾಧಿಕಾರಿಗಳು, ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಸಂಘಟನೆಗೆ ಶ್ರಮಿಸಿದ ರವಿ ಎಲ್ ಗುಂಜೀಕರ್ ಮತ್ತು ಬಸವರಾಜ ವಿ ಬಳ್ಳಾರಿ ಹಾಗೂ ಸ್ಪರ್ಧಾಳುಗಳನ್ನು ಅಭಿನಂದಿಸಲಾಯಿತು. ಬಸವರಾಜ ಬಳ್ಳಾರಿ ಕಾರ್‍ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

********

ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧಾ ವಿಜೇತರು

ಗದಗ(ಕರ್ನಾಟಕ ವಾರ್ತೆ) ಜನೆವರಿ 2 : ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು ಇವರ ವತಿಯಿಂದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟಕ್ಕಾಗಿ ಗದಗ ಜಿಲ್ಲೆಯ ಮಕ್ಕಳ ಆಯ್ಕೆಗಾಗಿ ದಿನಾಂಕ 28-1-2012 ರಂದು ನಡೆದ ಕ್ರಿಯಾತ್ಮಕ ಬರವಣೆಗೆಯಡಿ ನಡೆದ ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧಾ ವಿಜೇತರ ಹೆಸರುಗಳು ಇಂತಿವೆ:

ಪ್ರಬಂಧ ಸ್ಪರ್ಧೆ: ಪ್ರಥಮ ಅಶ್ವಿನಿ ಸಂ. ಉಮಚಗಿ ಸರಕಾರಿ ಪ್ರಾಥಮಿಕ ಶಾಲೆ, ಹೊಂಬಳ, ದ್ವಿತೀಯ ಕೃಷ್ಣಾ ಈರಪ್ಪ ಲಮಾಣಿ, ಮಹಾರಾಣಾ ಪ್ರತಾಪಸಿಂಗ ಪ್ರೌಢಶಾಲೆ, ಬೆಟಗೇರಿ, ತೃತೀಯ ಸ್ಥಾನ ಕನ್ಯಾಕುಮಾರಿ ಶಿ ಬಂಡಿವಾಡ ಸರಕಾರಿ ಪ್ರೌಢಶಾಲೆ, ಲಿಂಗದಾಳ ಸಮಾಧಾನಕರ ಬಹುಮಾನ ಶಾಹಿರಾಬಾನು ಬಿಂಕದಕಟ್ಟಿ ಬಾಲಕಿಯರ ಸರಕಾರಿ ಪ್ರೌಢಶಾಲೆ, ಹುಲಕೋಟಿ ಹಾಗೂ ಪ್ರಗತಿ ನಿಂ. ಮುದ್ದಿಕೋಲ ತೋಂಟದಾರ್‍ಯ ಪ್ರಾಥಮಿಕ ಶಾಲೆ, ಗದಗ.

ಕಥಾ ಸ್ಪರ್ಧೆ: ಪ್ರಥಮ ಕೀರ್ತಿ ಹಾಳಕೇರಿ, ಲೋಯೋಲಾ ಪ್ರಾಥಮಿಕ ಶಾಲೆ, ಗದಗ ದ್ವಿತೀಯ ಐಶ್ವರ್ಯ ಬಂಡಿ, ವಿ.ಡಿ.ಎಸ್.ಬಾಲಿಕೆಯರ ಪ್ರೌಢಶಾಲೆ, ಗದಗ ತೃತೀಯ ಫಕೀರಪ್ಪ ರಾಜಣ್ಣವರ, ಸರಕಾರಿ ಪ್ರೌಢಶಾಲೆ, ಬೆಳಹೋಡ ಸಮಾಧಾನಕರ ಬಹುಮಾನ ರಾಣಿ ಶ್ಯಾವಿ. ಕೆ.ಜಿ.ಎಸ್. ನಂ. 3 ಬೆಟಗೇರಿ ಆಫ್ರೀನ್ ವಾಲಿಕಾರ ಸರಕಾರಿ ಪ್ರೌಢಶಾಲೆ ಎಸ್.ಎಂ. ಕೃಷ್ಣಾ ನಗರ,ಗದಗ.

ಕವನ ಸ್ಪರ್ಧೆ: ಪ್ರಥಮ ಎಸ್.ಎ. ದೊಡಮನಿ, ಸರಕಾರಿ ಬಾಲಕಿಯರ ಪ್ರೌಢಶಾಲೆ ಲಕ್ಕುಂಡಿ, ದ್ವಿತೀಯ ಎಸ್.ಬಿ. ಶೇಡದ. ಸರಕಾರಿ ಬಾಲಕಿಯರ ಪ್ರೌಢಶಾಲೆ, ಲಕ್ಕುಂಡಿ, ತೃತೀಯ ಎಸ್.ಕೆ. ಪರಸಪ್ಪನವರ ಸರಕಾರಿ ಪ್ರೌಢಶಾಲೆ ಹೊಂಬಳ ಹಾಗೂ ಸಮಾಧಾನಕರ ಬಹುಮಾನ ವಿಜಯಲಕ್ಷ್ಮೀ ಘೋರ್ಪಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 19 ಗದಗ ಪಿ.ಎಸ್. ಕರಮಡಿ, ವಿ.ಡಿ.ಎಸ್. ಹೆಣ್ಣುಮಕ್ಕಳ ಶಾಲೆ,ಗದಗ.

ವಿಜೇತ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸ್ಪರ್ಧಾ ಕಾರ್‍ಯಕ್ರಮಕ್ಕೆ ಸಹಕರಿಸಿದ ಸಕಲರಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆಯವರಿಗೂ , ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಇವರು ಅಭಿನಂದನೆ ಸಲ್ಲಿಸಿದ್ದಾರೆ.

ಸಚಿವ ಬಸವರಾಜ ಬೊಮ್ಮಾಯಿ ಪ್ರವಾಸ ಕಾರ್ಯಕ್ರಮ

ಹಾವೇರಿ ಫೆ.2: ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಫೆಬ್ತುವರಿ 4 ರಂದು ಬೆಳಿಗ್ಗೆ 7.30ಕ್ಕೆ ಬೆಂಗಳೂರಿನಿಂದ ವಿಮಾನ ಮೂಲಕ ಹೊರಟು, 8.45ಕ್ಕೆ ಹುಬ್ಬಳ್ಳಿಗೆ ಆಗಮಿಸುವರು. ಅಲ್ಲಿಂದ ಶಿಗ್ಗಾಂವಿಗೆ ಆಗಮಿಸಿ, 10.30ಕ್ಕೆ ಸರ್ಕಾರಿ ಕನ್ನಡ ಪ್ರೌಢಶಾಲಾ ನೂತನ ಕಟ್ಟಡದ ಶಂಕುಸ್ಥಾಪನೆ, ಸರ್ಕಾರಿ ಉರ್ದು ಪ್ರೌಢಶಾಲೆ, ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು.

ಮಧ್ಯಾಹ್ನ 12.30ಕ್ಕೆ ಶಿಗ್ಗಾಂವಿಯ ಶರಿಫ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿದ ಜನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. 1.15ಕ್ಕೆ ನಳಂದಾ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವ, ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಕಂಕಣವಾಡಿಗೆ ಆಗಮಿಸಿ, ಬಸವೇಶ್ವರ ಸಭಾ ಭವನ ಶಂಕುಸ್ಥಾಪನೆ ಹಾಗೂ ಹನಮಂತದೇವರ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸಾಯಂಕಾಲ 4ಕ್ಕೆ ಚಿಕ್ಕಮಲ್ಲೂರಿಗೆ ಆಗಮಿಸಿ, ದುಂಡಿಬಸವೇಶ್ವರ ಸಭಾಭವನ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಕೊಠಡಿ, ವಾಲ್ಕೀಕಿ ಸಂಘದ ಉದ್ಘಾಟನೆ ಹಾಗೂ ಕಾಂಕ್ರೀಟ್ ರಸ್ತೆ, ಕುಡಿಯುವ ನೀರು ಪೈಪಲೈನ್ ಬದಲಾವಣೆ ಕಾಮಗಾರಿಗೆ ಶಂಕುಸ್ಥಾನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸಾಯಂಕಾಲ 5ಕ್ಕೆ ಕ್ಯಾಲಕೊಂಡ ಗ್ರಾಮಕ್ಕೆ ತೆರಳಿ, ಸಾರ್ವಜನಿಕ ಭೇಟಿ ನಡೆಸುವರು. ರಾತ್ರಿ 8ಕ್ಕೆ ಕುಂದಗೋಳಕ್ಕೆ ಆಗಮಿಸಿ, ವ್ಯಾಪಾರಸ್ಥ ಸಂಘ ಏರ್ಪಡಿಸಿದ ನಗೆ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾತ್ರಿ 9.30ಕ್ಕೆ ಹುಬ್ಬಳ್ಳಿಗೆ ತೆರಳಿ ವಾಸ್ತವ್ಯ ಮಾಡುವರು.

ಫೆ.5 ರಂದು ಸಚಿವರು 10ಕ್ಕೆ ಹುಬ್ಬಳ್ಳಿಯಿಂದ ಹೊರಟು, 11ಕ್ಕೆ ಶಿಗ್ಗಾಂವ ತಾಲೂಕ ಅಂದಲಗಿ ಗ್ರಾಮಕ್ಕೆ ಆಗಮಿಸಿ, ವೀರಭದ್ರೇಶ್ವರ ಪ್ರೌಢಶಾಲಾ ಕೊಠಡಿಗಳ, ಸರ್ಕಾರಿ ಪ್ರಾಥಮಿಕ ಮುಖ್ಯೋಪಾಧ್ಯಾಯರ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 1ಕ್ಕೆ ಅಂದಲಗಿಯಿಂದ ಹೊರಟು, ರಾತ್ರಿ 8 ಕ್ಕೆ ಬೆಂಗಳೂರು ತಲುಪುವುರು.

ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ ಫೆ.2: ಹಳಿಯಾಳ ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಂ.ಟ್ರಸ್ಟನಿಂದ ಪ್ರಾಯೋಜಿತ-ದೇಶಪಾಂಡೆ ರುಡ್‌ಸೆಟ್ ಸಂಸ್ಥೆ ಹಾಗೂ ಟೆಲಕನಾ ಇವರ ಸಂಯುಕ್ತ ಆಶ್ರಯದಲ್ಲಿ ಮತ್ತು ಮಶೀನಗಳ ಚಾಲನೆ ಮತ್ತು ರಿಪೇರಿ ತರಬೇತಿಯನ್ನು ಆಯೋಜಿಸಲಾಗಿದೆ. ಈ ತರಬೇತಿಯು ಫೆಬ್ರುವರಿ 21 ತಾರೀಖಿನಿಂದ ಪ್ರಾರಂಭವಾಗುವುದು. ಈ ತರಬೇತಿಯು ಉ.ಕ.ಜಿಲ್ಲೆಯ ಹಳಿಯಾದ ದೇಶಪಾಂಡೆ ರುಡ್‌ಸೆಟ್ ಸಂಸ್ಥೆಯಲ್ಲಿ ಜರುಗಲಿದ್ದು, ಆಸಕ್ತ ಪುರುಷರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಕರ್ನಾಟಕ ರಾಜ್ಯದ ಯಾವುದೇ ಪ್ರದೇಶದಿಂದ ಪುರುಷ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಹಾಕಬಹುದು. ಅಪೇಕ್ಷಿತ ಅಭ್ಯರ್ಥಿಗಳು ಸಾಮಾನ್ಯ ವರ್ಗದವರು ಕನಿಷ್ಠ 10ನೇ ತರಗತಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು(ಎಸ್.ಸಿ./ಎಸ್.ಟಿ) ಕನಿಷ್ಠ 8ನೇ ತರಗತಿಯವರೆಗೆ ಕಲಿತಿರಬೇಕು. ಕನಿಷ್ಠ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು, ದೈಹಿಕ ಹಾಗೂ ಮಾನಸಿಕವಾಗಿ ಸಬಲರಾಗಿರಬೇಕು.

ತರಬೇತಿ ಪಡೆದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಇರುವುದರಿಂದ ಈ ಪ್ರಯೋಜನ ಪಡೆಯಲು ಕೋರಲಾಗಿದ್ದು, ಅರ್ಜಿ ಸಲ್ಲಿಸಲು ಇಚ್ಛಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ, ಪಡೆಯಲಿಚ್ಚಿಸುವ ತರಬೇತಿ, ವಿದ್ಯಾರ್ಹತೆ, ತರಬೇತಿಯ ವಿಷಯದಲ್ಲಿ ಅನುಭವ ಮುಂತಾದ ವಿವರಗಳನ್ನೊಳಗೊಂಡ, ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಬರೆದು ಕೂಡಲೇ ನಿರ್ದೇಶಕರು, ದೇಶಪಾಂಡೆ ರುಡ್‌ಸೆಟ್ ಸಂಸ್ಥೆ, ದಾಂಡೇಲಿ ರಸ್ತೆ, ಹಳಿಯಾಳ(ಉ.ಕ) ಇವರಿಗೆ ದಿನಾಂಕ: 15-02-2012ರೊಳಗಾಗಿ ವೈಯಕ್ತಿವಾಗಿ ಬಂದು ಅಥವಾ ಅವಶ್ಯಕ ಮಾಹಿತಿ ನೀಡಿ ನೊಂದಣಿ ಮಾಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಸ್ಥೆಗೆ ಬರುವಾಗ ತರಬೇಕಾದ ದಾಖಲಾತಿಗಳ ಬಗ್ಗೆ ಸಂಸ್ಥೆಯ ದೂರವಾಣಿ ಸಂಖ್ಯೆ:08284-220807, 9482188780, 9483485489ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

ವಾ.ವಿ.ಸಂ:115

ತಜ್ಞ ವೈದರ ಹುದ್ದೆಗೆ ನೇರ ನೇಮಕಾತಿ

ಹಾವೇರಿ ಫೆ.2: ಜಿಲ್ಲಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರಿನ್ಲಲ್ಲಿ, ಎಲುವು ಕೀಲು ತಜ್ಞರು, ಅರವಳಿಕೆ ತಜ್ಞರು ಹಾಗೂ ಜನರಲ್ ಸರ್ಜನ್ ಹುದ್ದೆಗಳು ಖಾಲಿ ಇದ್ದು, ಗುತ್ತಿಗೆ ಆಧಾರದ ಮೇಲೆ ಭರ್ತಿಮಾಡಲು ನೇರ ನೇಮಕಾತಿ ದಿ.13-2-12 ರಂದು ಸೋಮವಾರ ಬೆಳಿಗ್ಗೆ 11ಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಛೇರಿಯಲ್ಲಿ ಸಂದರ್ಶನಕ್ಕೆ ಕರೆಯಲಾಗಿದೆಯೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ತಿಳಿಸಿದ್ದಾರೆ. ಅರ್ಹತೆ ಹೊಂದಿದ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಅವರ ಸ್ವಂತ ಖರ್ಚಿನಲ್ಲಿ ಶೈಕ್ಷಣಿಕ ವಿದ್ಯಾರ್ಹತೆಗಳ ಮತ್ತು ಅನುಭವದ ಪ್ರಮಾಣಪತ್ರಗಳ ಮೂಲಕ ದಾಖಲಾತಿ ಹಾಗೂ ಒಂದು ಪ್ರತಿ ನಕಲು ದಾಖಲಾತಿಗಳೊಂದಿಗೆ ಹಾಜರಾಗತಕ್ಕದ್ದು. ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಾರ್ಯಾಲಯದಲ್ಲಿ ಕಚೇರಿ ವೇಳೆಯಲ್ಲಿ ಪಡೆಯಬಹುದು.

ಹಿರಿಯ ಸಹಾಯಕ ನಿರ್ದೇಶಕರ ಕಛೇರಿ, ವಾರ್ತಾ ಇಲಾಖೆ, ರೂ.ನಂ.214, 2ನೇ ಮಹಡಿ,(ಪೂರ್ವ)ಜಿಲ್ಲಾಡಳಿತ ಭವನ, ಜೋಡಿರಸ್ತೆ, ಚಾಮರಾಜನಗರ ದೂರವಾಣಿ ಸಂಖ್ಯೆ: 08226-224731, 223382

ದಿನಾಂಕ: 02-02-2012.

ವಾರ್ತಾ ವಿಶೇಷ:

ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ, ಸಂಸ್ಕರಣೆ ಉತ್ತೇಜನಕ್ಕೆ ಕಾವೇರಿ ವ್ಯಾಲಿ ಘೋಷಣೆ: ಬೆಳೆಗಾರರು ಉದ್ಯಮಿಗಳಿಗೆ ನೆರವು

ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆ ಉತ್ತಮವಾದ ಮಣ್ಣು ಹಾಗೂ ಹವಾಗುಣ ಸೇರಿದಂತೆ ಪೂರಕ ವಾತವರಣವಿರುವುದನ್ನು ಗಮನಿಸಿ ದ್ರಾಕ್ಷಿ ಸಂಸ್ಕರಣೆ ಮತ್ತು ದ್ರಾಕ್ಷ ರಸ(ವೈನ್) ನೀತಿ ಅನುಸಾರ ರಾಜ್ಯ ಸರ್ಕಾರ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು ಜಿಲ್ಲೆಗಳನ್ನೊಳಗೊಂಡ ಪ್ರದೇಶವನ್ನು ಕಾವೇರಿ ವ್ಯಾಲಿ ಎಂದು ಘೋಷಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಪ್ರೋತ್ಸಾಹಿಸಲು ಮುಂದಾಗಿದೆ.

ದ್ರಾಕ್ಷಿ ಬೆಳೆ ಹಾಗೂ ದ್ರಾಕ್ಷ ರಸ ಘಟಕಗಳ ಉತ್ತೇಜನಕ್ಕೆ ಅನುಕೂಲವಾಗುವ ಹಾಗೆ 2011 ರ ನವೆಂಬರ್ 30 ರಂದು ಸರ್ಕಾರ ಕಾವೇರಿ ವ್ಯಾಲಿ ಎಂದು ಘೋಷಿಸಿ ಆದೇಶ ಹೊರಡಿಸಿದೆ.

ರೈತರ ಹಿತದೃಷ್ಠಿಯಿಂದ ದ್ರಾಕ್ಷಾ ರಸ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸುವ ದಿಸೆಯಲ್ಲಿ ಸೂಕ್ತ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಕರ್ನಾಟಕ ದ್ರಾಕ್ಷಿ ಸಂರಕ್ಷಣೆ ಮತ್ತು ದ್ರಾಕ್ಷಾ ರಸ(ವೈನ್) ನೀತಿಯನ್ನು 2007ರಲ್ಲಿ ಜಾರಿಗೆ ತಂದಿತು. ಈ ಆದೇಶದನ್ವಯ ದ್ರಾಕ್ಷಾ ರಸ ತಳಿಗಳನ್ನು ಬೆಳೆಯಲು ಸೂಕ್ತವಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳನ್ನೊಳಗೊಂಡ ಪ್ರದೇಶವನ್ನು ಕೃಷ್ಣಾ ವ್ಯಾಲಿ ಎಂದು ಘೋಷಿಸಿದೆ. ನಂತರ 2010ರಲ್ಲಿ ನಂದಿ ವ್ಯಾಲಿ ವ್ಯಾಪ್ತಿಯಡಿ ರಾಮನಗರ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳನ್ನು ಹಾಗೂ ಕೃಷ್ಣಾ ವ್ಯಾಲಿ ವ್ಯಾಪ್ತಿಯಡಿ ಗುಲ್ಬರ್ಗಾ, ರಾಯಚೂರು, ಗದಗ್, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಸೇರ್ಪಡೆ ಮಾಡಿದೆ.

ನಂದಿ ವ್ಯಾಲಿ, ಕೃಷ್ಣಾ ವ್ಯಾಲಿ ಪ್ರಾಂತ್ಯಗಳ ರೀತಿ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳು ರೆಡ್ ವೈನ್, ವೈಟ್ ವೈನ್ ದ್ರಾಕ್ಷಾ ತಳಿಗಳನ್ನು ಬೆಳೆಯಲು ಹಾಗೂ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ಸೂಕ್ತ ವಾತವರಣ ಹೊಂದಿರುವುದನ್ನು ಗಮನಿಸಿ ಕಾವೇರಿ ವ್ಯಾಲಿ ಎಂದು ಘೋಷಣೆ ಮಾಡುವ ಮೂಲಕ ದ್ರಾಕ್ಷಾ ರಸ ಉತ್ಪಾದನೆ ಮತ್ತು ಮಾರುಕಟ್ಟೆ ಅಭಿವೃದ್ದಿ ಪಡಿಸುವ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಘೋಷಿತ ಕಾವೇರಿ ವ್ಯಾಲಿ ಪ್ರದೇಶದ ಬೌಗೋಳಿಕ ವಿಶಿಷ್ಟಿತೆಗೆ ಮಾನ್ಯತೆ ದೊರೆತು. ದ್ರಾಕ್ಷಿ ಉತ್ಪನ್ನಗಳು

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತದೆ. ಉತ್ಪನ್ನಗಳ ರಫ್ತಿಗೆ ವಿಪುಲ ಅವಕಾಶಗಳು ದೊರೆಯಲಿವೆ. ಕಾವೇರಿ ವ್ಯಾಲಿ ಪ್ರಾಂತ್ಯದಲ್ಲಿ ವೈನ್ ತಳಿಯ ದ್ರಾಕ್ಷಿ ಬೆಳೆಯ ವಿಸ್ತ್ರೀರ್ಣ ಹೆಚ್ಚಾಗಲಿದೆ. ಒಪ್ಪಂದ ಕೃಷಿಯ ಮೂಲಕ ರೈತರು ಉತ್ತಮ ಮತ್ತು ನಿಶ್ಚಿತ ಆದಾಯವನ್ನು ಪಡೆಯಲು ಸಾಧ್ಯವಾಗಲಿದೆ. ಉದ್ಯಮಿಗಳು ದ್ರಾಕ್ಷಿ ಬೆಳೆ ಬೆಳೆಯಲು ಎಲ್ಲಾ ತಾಂತ್ರಿಕ ಮಾಹಿತಿಯನ್ನು ನೀಡಲು ಸಾಧ್ಯವಾಗುತ್ತದೆ. ಹೆಚ್ಚಿನ ಉದ್ಯೋಗ ಸೃಷ್ಟಿಸಲು ಅವಕಾಶ ದೊರೆಯಲಿದೆ. ಗುಚ್ಚ ಗ್ರಾಮಗಳಲ್ಲಿ ಯೋಜನೆ, ಅನುಷ್ಠಾನಗೊಳಿಸುವುದರಿಂದ ಅಗತ್ಯವಿರುವ ಸೌಲಭ್ಯ ಮತ್ತು ತಾಂತ್ರಿಕ ಮಾಹಿತಿಯನ್ನು ನೀಡಲು ಅನುಕೂಲವಾಗಲಿದೆ.

ಹೊಸದಾಗಿ ದ್ರಾಕ್ಷಾರಸ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಉದ್ಯಮಿಗಳ ಪ್ರದೇಶಗಳನ್ನು ಗುರುತಿಸಲು ಆಗುತ್ತಿದ್ದ ತೊಂದರೆ ಮತ್ತು ಸಮಯ ಉಳಿತಾಯವಾಗಲಿದೆ. ದ್ರಾಕ್ಷಾರಸ ಘಟಕಕ್ಕೆ ಬೇಕಾದ ಕಚ್ಚಾವಸ್ತುಗಳು ಲಭ್ಯವಾಗಲಿದೆ. ತಾಂತ್ರಿಕ ಮಾಹಿತಿ ಕೂಡ ಸಿಗಲಿದೆ. ದ್ರಾಕ್ಷಿ ಬೆಳೆಯನ್ನು ಅಭಿವೃದ್ದಿಗೊಳಿಸಲು ಸಾಧ್ಯವಾಗುತ್ತದೆ. ಬೆಳೆದ ದ್ರಾಕ್ಷಿ ಹಾಳಾಗದಂತೆ ಸಂಸ್ಕೃರಣೆ ಘಟಕಗಳು ತಲೆಎತ್ತಲಿವೆ. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹೊಂದಲು ನೆರವಾಗಲಿದೆ.

ದ್ರಾಕ್ಷಿ ಬೆಳೆ, ಸಂಸ್ಕರಣೆ ಘಟಕಗಳು ರೈತರು, ಉದ್ಯಮಿಗಳ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿವೆ ಎಂಬ ನಿರೀಕ್ಷೆ ಹೊಂದಲಾಗಿದೆ. ಜಿಲ್ಲೆಯ ರೈತರು, ಉದ್ಯಮಿಗಳಿಗೆ ದ್ರಾಕ್ಷಿ ಬೆಳೆಯಲು ಹಾಗೂ ಸಂಸ್ಕರಣೆ ಘಟಕ ಸ್ಥಾಪನೆಗೆ ಸಲಹೆ ನೆರವು ನೀಡಲು ಬೆಂಗಳೂರಿನ ದ್ರಾಕ್ಷಾ ಮಂಡಳಿ, ಜಿಲ್ಲೆಯ ತೋಟಗಾರಿಕೆ ಇಲಾಖೆ ಮುಂದಾಗಿದೆ. ಆಸಕ್ತರು ಬೆಂಗಳೂರಿನ ದ್ರಾಕ್ಷಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಅಥವಾ ಚಾಮರಾಜನಗರ ಜಿಲ್ಲೆಯ ತೋಟಗಾರಿಕಾ ನಿರ್ದೇಶಕರಿಂದ ಸಂಪೂರ್ಣ ವಿವರವನ್ನು ಪಡೆಯಬಹುದಾಗಿದೆ.