Government of Karnataka

Department of Information

Wednesday 15/06/2016

District News 09-01-2012

Date : ಸೋಮವಾರ, ಜನವರಿ 9th, 2012

ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್, ಗೈಡ್ಸ್ ಕಡ್ಡಾಯ-ಶಾಸಕ ಶ್ರೀ ಸೋಮಶೇಖರ ರೆಡ್ಡಿ

ಬಳ್ಳಾರಿ. ಜ.9( ಕರ್ನಾಟಕ ವಾರ್ತೆ): ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯನ್ನು ಕಡ್ಡಾಯಗೊಳಿಸಬೇಕೆಂದು ಶಾಸಕರು ಹಾಗೂ ಕೆಎಂಎಫ್ ರಾಜ್ಯಾಧ್ಯಕ್ಷ ಶ್ರೀ ಜಿ. ಸೋಮಶೇಖರ ರೆಡ್ಡಿ ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ನಗರದ ಬಿಡಿಎಎ ಮೈದಾನದಲ್ಲಿರುವ  ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿಂದು ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಮೇಳವನ್ನು ಉದ್ಘಾಟಿಸಿ ಅವರು ಮತಾನಾಡಿದರು.  ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಕೊಂಡರೆ ಶಿಸ್ತು, ಸಂಯಮ, ಸಮಯಪಾಲನೆ, ಕ್ರಿಯಾಶೀಲತೆ ಬೆಳೆಯುತ್ತದೆ.  ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವುದರೊಂದಿಗೆ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿಯಾಗಲಿದೆ.  ಸ್ಕೌಟ್ಸ್ ಮತ್ತು ಗೈಡ್ಸ್ ಮೇಳಗಳನ್ನು ನಡೆಸಲು ಅಗತ್ಯವಿರುವ ಧನಸಹಾಯವನ್ನು ಮಹಾನಗರ ಪಾಲಿಕೆ ಬಜೆಟ್‌ನಲ್ಲಿ  ಒದಗಿಸಲು ಕ್ರಮ ಕೈಗೊಳ್ಳಲಾಗುವುದು.  ಅಲ್ಲದೆ ತಾವು ವೈಯಕ್ತಿಕವಾಗಿಯೂ ಸಹಕಾರ ನೀಡುವುದಾಗಿ ತಿಳಿಸಿದರು.

ಉಪಮೇಯರ್ ಶ್ರೀಮತಿ ಶಶಿಕಲಾ ಅವರು ಮಕ್ಕಳು ಓದಿನೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಭಾಗಿಯಾದರೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಹಾಗೂ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಶ್ರೀ ಎನ್. ವಿಜಯಸಿಂಹ ಅವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಮಕ್ಕಳು ತಮ್ಮ ಭವಿಷ್ಯದ ದಿನಗಳಲ್ಲಿ ಯಾವುದೇ ಸಮಾಜ ಘಾತುಕ ಶಕ್ತಿಗಳಾಗದೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಯಾವುದೇ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಆರ್. ವೆಂಕಣ್ಣ, ಜಿಲ್ಲಾ ಆಯುಕ್ತ ಶ್ರೀ ಕೆ. ವೀರೇಶ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಶ್ರೀ ಎಂ. ಶಿವಾಜಿರಾವ್, ಶ್ರೀಮತಿ ಕೆ. ಸಂಧ್ಯಾ ಮತ್ತಿತರರು ಮಾತನಾಡಿದರು.  ಶಿಬಿರದ ನಾಯಕ ಶ್ರೀ ಎಂ. ನಾಗರಾಜ್ ವರದಿ ವಾಚನ ಮಾಡಿದರು.

ಸಮಾರಂಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಖಜಾಂಚಿ ಶ್ರೀ ವಿ. ಪ್ರಭಾಕರ್, ಜಿಲ್ಲಾ ಸಹಾಯಕ ಆಯುಕ್ತ ಡಾ|| ಎಂ.ಟಿ. ಮಲ್ಲೇಶ್, ಶ್ರೀ ಪಾರ್ಥಸಾರಥಿ ಮತ್ತಿತರರು ಉಪಸ್ಥಿತರಿದ್ದರು.  ಶ್ರೀ ಎಂ.ಟಿ. ಮಲ್ಲೇಶ್ ಸ್ವಾಗತಿಸಿದರು.

ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ

ಬಳ್ಳಾರಿ. ಜ.9( ಕರ್ನಾಟಕ ವಾರ್ತೆ):  ಕರ್ನಾಟಕ ಜಾನಪದ ಅಕಾಡೆಮಿಯು 2011ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಕೃತಿಗಳನ್ನು ಆಹ್ವಾನಿಸಿದೆ.  ಜಾನಪದ ಪದ್ಯ, ಜಾನಪದ ಗದ್ಯ, ಜಾನಪದ ವಿಚಾರ ವಿಮರ್ಶೆ ಸಂಶೋಧನೆ, ಜಾನಪದ ಸಂಕೀರ್ಣ ಪ್ರಕಾರದ ಹಾಗೂ 2011ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಪ್ರಥಮವಾಗಿ ಮುದ್ರಣಗೊಂಡಿರುವ ಕೃತಿಗಳು ಬಹುಮಾನಕ್ಕಾಗಿ ಅರ್ಹವಾಗಿರುತ್ತವೆ.

ಆಸಕ್ತ ಲೇಖಕರು, ಪ್ರಕಾಶಕರು, ಸಂಪಾದಕರು ತಲಾ 4 ಪ್ರತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2 ಇವರಿಗೆ ಫೆಬ್ರುವರಿ 10ರೊಳಗಾಗಿ ಕಳುಹಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22215509 ಅನ್ನು ಸಂಪರ್ಕಿಸಬೇಕೆಂದು ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಬಿ.ಎನ್. ಪರೆಡ್ಡಿ ತಿಳಿಸಿದ್ದಾರೆ.

ಮಾನಸಿಕ ಅಸ್ವಸ್ಥ ವಾಸೀಂ ಅಕ್ರಂ ಕಾಣೆ

ಬಳ್ಳಾರಿ. ಜ.9( ಕರ್ನಾಟಕ ವಾರ್ತೆ):  ನಗರದ ಮುಕ್ತುಂ ಜಾನಿ ದರ್ಗಾ ಹಿಂದಿನ ಕಾಟೇಗುಡ್ಡ ನಿವಾಸಿ ಶ್ರೀ ಹಾರೂನ್ ಬಾಷ ಅವರ 16 ವರ್ಷದ ಮಗ ವಾಸೀಂ ಅಕ್ರಂ ಮಾನಸಿಕ ಅಸ್ವಸ್ಥನಾಗಿದ್ದು, ಡಿಸೆಂಬರ್ 25 ರ ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ ಎಂದು ಬ್ರೂಸ್‌ಪೇಟೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಕಾಣೆಯಾದ ವಾಸೀಂ 5.1 ಅಡಿ ಎತ್ತರ, ತೆಳುವಾದ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ಅಗಲವಾದ ಕಿವಿ ಹೊಂದಿರುತ್ತಾನೆ.  ಕನ್ನಡ, ಉರ್ದು ಮಾತನಾಡಲು ಬರುತ್ತದೆ.  ಆರೆಂಜ್ ಬಣ್ಣದ ಫುಲ್ ಟೀ ಶರ್ಟ್ ಹಾಗೂ ಕ್ರೀಂ ಕಲರ್ ಜೀನ್ಸ್ ಪ್ಯಾಂಟ್ ಧರಿಸಿದ್ದು, ಈತನ ಕುರಿತು ಮಾಹಿತಿ ತಿಳಿದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂ. 9008713554 ಅನ್ನು ಸಂಪರ್ಕಿಸಬೇಕೆಂದು ಅವರು ಕೋರಿದ್ದಾರೆ.

ಸಾವಯವ ಕೃಷಿ ಹಾಗೂ ಕೈತೋಟ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಬಳ್ಳಾರಿ. ಜ.9( ಕರ್ನಾಟಕ ವಾರ್ತೆ):  ಹಗರಿ ಕೃಷಿ ವಿಜ್ಞಾನ ಕೇಂದ್ರ ಬಳ್ಳಾರಿ ಹಾಗೂ ಹಗರಿ ಬೊಮ್ಮನಹಳ್ಳಿ ಶಿಶು ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಎರಡು ದಿನದ ಸಾವಯವ ಕೃಷಿ ಹಾಗೂ ಕೈತೋಟ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಾವಯವ ಕೃಷಿ ಪಂಡಿತರಾದ ಶ್ರೀ ಎಸ್.ಎಸ್.ಎತ್ತಿನಮನೆ ಅವರು ನೆರವೇರಿಸಿ, ಸಾವಯವ ಗೊಬ್ಬರ ರೈತರು/ರೈತಮಹಿಳೆಯರು ತಾವೆ ಉತ್ಪಾದಿಸಿ ತಮ್ಮ ತಮ್ಮ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರ/ಎರೆಗೊಬ್ಬರ ಬಳಸಬೇಕು.  ರಾಸಾಯನಿಕ ಗೊಬ್ಬರ ಬಳಸುವುದನ್ನು ರೈತರು ಕಡಿಮೆ ಮಾಡಿ ಕೃಷಿ ಉತ್ಪಾದನೆ ಹೆಚ್ಚಿಸಿ ಸ್ವಾವಲಂಬಿಗಳಾಗಬೇಕೆಂದರು.

ಕಾರ್ಯಕ್ರಮದ ಅದ್ಯಕ್ಷತೆವಹಿಸಿದ್ದ ಮಲ್ಲಿಗೆ ಸಾವಯವ ಕೃಷಿ ಅಧ್ಯಕ್ಷರಾದ ಶ್ರೀ. ಬಿ.ವಿ. ಆವಜಿ  ಮಾತನಾಡಿ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸ್ವಾವಲಂಬಿ ಜೀವನ ಸಾಗಿಸಲು ಪರಿಸರದಲ್ಲಿರುವ ನೈಸರ್ಗಿಕ ಸಂಪತ್ತನ್ನು ಉಳಿಸಿ, ಸಾವಯವ ಗೊಬ್ಬರ ಬಳಸಿ, ಕೃಷಿ ಬೆಳೆಯನ್ನು ಬೆಳೆದು ಉತ್ತಮ ಗುಣಮಟ್ಟದ ಆಹಾರ ಬಳಸುವುದರಿಂದ ಮನುಕುಲದ ಆರೋಗ್ಯ ಕಾಪಾಡಬಹುದು ಅಲ್ಲದೆ ದೇಸಿ ತಳಿಗಳಾದ ನವಣೆ, ಸಜ್ಜೆ, ರಾಗಿ, ಜೋಳ, ಬೆಳೆಗಳನ್ನು ಬೆಳೆದು ಸಂರಕ್ಷಿಸಿ ಅವುಗಳನ್ನು ಆಹಾರವಾಗಿ ಬಳಸಬೇಕೆಂದರು.

ಬೇಸಾಯ ತಜ್ಞ ಡಾ|| ಸಿ.ಎಮ್. ಕಾಲಿಬಾವಿ  ಹಳ್ಳಿಗಳಲ್ಲಿರುವ ಸಗಣಿ ಗೊಬ್ಬರವನ್ನು ವೈಜ್ಞಾನಿಕವಾಗಿ ಕಾಂಪೋಸ್ಟ್ ಪಿಟ್ ತಯಾರಿಸಿ, ಎರೆಗೊಬ್ಬರ ಬಳಸುವುದರಿಂದ ಉತ್ಕೃಷ್ಟವಾದ ಸಾವಯವ ಗೊಬ್ಬರದೊಂದಿಗೆ ಎನ್‌ರಿಚ್ ಪೋಷಕಾಂಶವಾಗಿ ಕೃಷಿ ಬೆಳೆಗಳಲ್ಲಿ ಬಳಸುವುದರಿಂದ ಮಣ್ಣಿನ ಭೌತಿಕ ರಸಾಯನಿಕ ಹಾಗೂ ಜೈವಿಕ ಕ್ರಿಯೆಯಿಂದ ಉತ್ತಮ ಮಣ್ಣಿನ ಫಲವತ್ತತೆಯೊಂದಿಗೆ ಸುಸ್ತಿರ ಇಳುವರಿ ಪಡೆಯಬಹುದು ಅಲ್ಲದೆ ಸಾವಯವ ಕೈತೋಟದಿಂದ ಅಧಿಕ ಇಳುವರಿ ಹಾಗೂ ಆದಾಯ ಪಡೆಯಬಹುದೆಂದರು

ಮುಖ್ಯ ಅತಿಥಿಗಳಾಗಿ ಕೃಷಿ ಮಾರುಕಟ್ಟೆ ಅಧ್ಯಕ್ಷರಾದ ಶ್ರೀ.ಕೆ. ರೋಹಿತ್ ರೈತರಿಗೆ ಬರುವ ದಿನಗಳಲ್ಲಿ ಇ-ಟೆಂಡರ್, ಎಲೆಕ್ಟ್ರಾನಿಕ್ಸ್ ತೂಕ ಅಳವಡಿಸಿ ಉತ್ತಮ ಬೆಲೆ ದೊರಕಲು ಸಹಾಯ ಮಾಡುವುದಾಗಿ ಹೇಳಿದರು. ಮುಂಬರುವ ದಿನಗಳಲ್ಲಿ ರೈತ ಮಹಿಳೆಯರಿಗೆ ಕೃಷಿಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ದೊರೆಯಲಿದೆ ಎಂದರು. ಗೃಹ ವಿಜ್ಞಾನಿ ಶ್ರೀಮತಿ ಕವಿತ ಉಳ್ಳಿಕಾಶಿ ಅವರು ಸ್ತ್ರೀಗುಂಪುಗಳಿಗೆ ಆದಾಯ ವೃದ್ಧಿಸುವ ಚಟುವಟಿಕೆ ಕಾರ್ಯಕ್ರಮ ಕುರಿತು ತಿಳಿಸುದವರ ಜೊತೆಗೆ ಆಹಾರ ಸಂಗ್ರಹಣೆಯನ್ನು ಮೌಲ್ಯಾಧಾರಿತವಾಗಿ ಸಾವಯವವಾಗಿ ಬಳಸಲು ತಿಳಿಸಿದರು. ಬೀಜ ತಜ್ಞ ಶ್ರೀ. ಪ್ರಶಾಂತ್ ಬೀಜಗಳ ಕೊಯ್ಲೋತ್ತರ ತಾಂತ್ರಿಕತೆ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ. ಚೆನ್ನಪ್ಪ, ಶ್ರೀ ಕುದುರಿ ಬಸವರಾಜ ಭಾಗವಹಿಸಿದ್ದರು.   ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ರೈತ ಮಹಿಳೆಯರು ಭಾಗವಹಿಸಿದ್ದರು.   ಶ್ರೀ ಶರಣಪ್ಪನವರು ವಂದಿಸಿದರು.

23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2012

ಮಂಗಳೂರು ಜನವರಿ 9(ಕರ್ನಾಟಕ ವಾರ್ತೆ):-ಜಿಲ್ಲಾ ಆಡಳಿತ ,ಸಾರಿಗೆ ಇಲಾಖೆ ಮತ್ತು ಪೋಲೀಸ್ ಇಲಾಖೆ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2012 ರ ಉದ್ಘಾಟನಾ ಸಮಾರಂಭವನ್ನು ರಸ್ತೆ ಸುರಕ್ಷತಾ ಸಪ್ತಾಹವು ಅಪಘಾತದಿಂದ ಸಂತಾಪ,ಸುರಕ್ಷತೆಯಿಂದ ಸಂತಸ ಎಂಬ ಧ್ಯೇಯದೊಂದಿಗೆ  ದಿನಾಂಕ 10-1-2 ರಿಂದ  16-1-12ರ ವರೆಗೆ ಏರ್ಪಡಿಸಲಾಗಿದೆ. ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನಾ ಸಮಾರಂಭವನ್ನು ದಿನಾಂಕ 10-1-12 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಪಿ.ಯು.ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೆರವೇರಿಸುವರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಅಲೋಶಿಯಸ್ ಪೌಲ್ ಡಿ ಸೋಜಾ ಇವರ ಗೌರವ ಉಪಸ್ಥಿತಿ.ಅಧ್ಯಕ್ಷತೆಯನ್ನು ವಿಧಾನಸಭೆ ಉಪ ಸಭಾಧ್ಯಕ್ಷರಾದ ಶ್ರೀ ಎನ್. ಯೋಗೀಶ್ ಭಟ್ ವಹಿಸುವರು.ಮುಖ್ಯ ಅತಿಥಿಗಳಾಗಿ ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ  ಸಚಿವರಾದ ಶ್ರೀ ಜೆ.ಕೃಷ್ಣಪಾಲೇಮಾರ್,ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್, ಪೋಲೀಸ್ ಮಹಾ ನಿರೀಕ್ಷಕರಾದ ಶ್ರೀ ಸಿ.ಎಚ್.ಪ್ರತಾಪ್ ರೆಡ್ಡಿ,ಜಿಲ್ಲಾಧಿಕಾರಿಗಳಾದ ಡಾ.ಎನ್.ಎಸ್.ಚನ್ನಪ್ಪ ಗೌಡ,ಸಾರಿಗೆ ಇಲಾಖೆ,ಜಂಟಿ ಆಯುಕ್ತರಾದ ಶ್ರೀ ವಿಜಯ ವಿಕ್ರಮ್‌ರವರು ಭಾಗಹಿಸಲಿದ್ದಾರೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿರುತ್ತಾರೆ.

ಯುವಜನೋತ್ಸವ ಸ್ಪರ್ಧೇತರ ಕಾರ್ಯಕ್ರಮಗಳ ವಿವರ

ಮಂಗಳೂರು ಜನವರಿ 9(ಕರ್ನಾಟಕ ವಾರ್ತೆ):-17ನೇ ರಾಷ್ಟ್ರೀಯ  ಯುವಜನೋತ್ಸವ 2012 ರ ಅಂಗವಾಗಿ ಏರ್ಪಡಿಸಿರುವ ಸ್ಪರ್ಧೇತರ ಕಾರ್‍ಯಕ್ರಮಗಳು ದಿನಾಂಕ 13-1-12 ರಿಂದ 15-1-12 ರ ವರೆಗೆ ಪ್ರತೀದಿನ ಸಾಯಂಕಾಲ 4.30 ಗಂಟೆಯಿಂದ 7.30 ಗಂಟೆಯ ವರೆಗೆ ಮಂಗಳೂರು ನಗರದ ಉರ್ವ ಗೋಕರ್ಣನಾಥೇಶ್ವರ ಕಾಲೇಜು,ಮಣ್ಣಗುಡ್ಡೆ ಕೆನರಾ ಹೈಸ್ಕೂಲ್,ಪಾಂಡೇಶ್ವರ ಪೋಲೀಸ್ ಮೈದಾನ,ಬಿಜೈ ಲೂರ್ಡ್ಸ್ ಹೈಸ್ಕೂಲ್,ಹ್ಯಾಟ್‌ಹಿಲ್ ಆಫೀಸರ್‍ಸ್ ಕ್ಲಬ್,ಪಣಂಬೂರಿನ ಸಮುದ್ರ ಕಿನಾರೆಯಲ್ಲಿ ವಿವಿಧ ತಂಡಗಳಿಂದ ಸ್ಪರ್ಧೇತರ ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಏರ್ಪಡಿಸಲಾಗಿದೆ.ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸಬೇಕೆಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಓ.ಪಾಲಯ್ಯ ಅವರು  ತಿಳಿಸಿರುತ್ತಾರೆ.

ಕಾಣೆಯಾಗಿದ್ದಾರೆ

ಮಂಗಳೂರು ಡಿಸೆಂಬರ್ 9: (ಕರ್ನಾಟಕ ವಾರ್ತೆ):-ಮಂಗಳೂರು ತಾಲೂಕು ಕೋಣಾಜೆ ಗ್ರಾಮದ ಅಸೈಗೋಳಿ ವಸತಿ ಗೃಹದಲ್ಲಿ ವಾಸಿಸುವ ದೀಪಕ್ ದತ್ತಾರ ಪತ್ನಿ 40 ವರ್ಷದ ದೀಪಾ ಡಿ.ಕೊಳಂಬ್‌ಕರ್ ಎಂಬವರು ದಿನಾಂಕ 6-1-12 ರಂದು ಕೋಣಾಜೆ  ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಅವರ ಗಂಡ ದೀಪಕ್ ದತ್ತಾ ಕೊಳಂಬ್ ಕರ್ ಎಂಬವರು ದಿನಾಂಕ 4-1-12 ರಂದು ಬೆಳಿಗ್ಗೆ 5.30 ಗಂಟೆಯಿಂದ ಮನೆಯಿಂದ ಹೊರಟು ಕ್ಯಾಂಪ್‌ಗೆ ಹೋದವರು ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ.

ಕಾಣೆಯಾದ ದೀಪಕ್ ದತ್ತಾ ಕೊಳಂಬಕರ್ 45 ವರ್ಷ, ಎಣ್ಣೆಕಪ್ಪು ಮೈಬಣ್ಣ,ಸುಮಾರು 5.4 ಅಡಿ ಎತ್ತರ,ಕಾಣೆಯಾದಾಗ ಗ್ರೇ ಬಣ್ಣದ ಪ್ಯಾಂಟ್ ನಸುಹಸಿರು ಬಣ್ಣದ ಶರ್ಟ್ ಧರಿಸಿದ್ದು,ಕನ್ನಡ,ಕೊಂಕಣಿ,ಹಿಂದಿ,ಮರಾಠಿ ಭಾಷೆ ಮತಾನಾಡುವ ಇವರನ್ನು ಕಂಡವರುಕೋಣಾಜೆ ಪೋಲೀಸ್ ಠಾಣೆ ಅಥವಾ ಪೋಲೀಸ್ ವೃತ್ತ ನಿರೀಕ್ಷಕರು ,ಉಳ್ಳಾಲ ಗ್ರಾಮಾಂತರ (ದೂ.ಸಂ.0824-2220536,2465803)  ಇವರಿಗೆ ತಿಳಿಸಬಹುದಾಗಿದೆ.

ವಿವಾದಿತ ಪಕ್ಷಕಾರರ ನಡುವೆ ಗೌಪ್ಯತೆ ಕಾಪಾಡಲು ನ್ಯಾಯಾಧೀಶರ ಕರೆ 

ತುಮಕೂರು ಜ.9: ವ್ಯಾಜ್ಯಗಳ ಸಂಬಂಧ ವಿವಾದವೆತ್ತಿರುವ ಇಬ್ಬರ ಪಕ್ಷಕಾರರೊಂದಿಗೆ ನಡೆಸಿದ ಚರ್ಚೆಯ ವಿಷಯವನ್ನು ಗೌಪ್ಯವಾಗಿಡಲು ಕರ್ನಾಟಕ ಉಚ್ಚ ನ್ಯಾಯಲಯದ ನ್ಯಾಯಾಧೀಶ ಹೆಚ್.ಎಸ್. ಕೆಂಪಣ್ಣ ಅವರು ಮಧ್ಯಸ್ಥಿಕೆಗಾರರಿಗೆ ಕರೆ ಇತ್ತರು.

            ನಗರದ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ಸತ್ರನ್ಯಾಯಾಲಯ, ಜಿಲ್ಲಾ ವಕೀಲರ ಸಂಘ ಇವರ ಸಹಯೋಗದೊಂದಿಗೆ ಮಧ್ಯಸ್ಥಿಕೆಗಾರರಿಗೆ ಏರ್ಪಡಿಸಿದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

            ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಬಂದ ವ್ಯಾಜ್ಯದ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ಮಧ್ಯಸ್ಥಿಕೆಗಾರರಾಗಿ ನೇಮಕಗೊಂಡಿರುವ ವಕೀಲರು ಕ್ರೀಯಾಶೀಲರಾಗಿ, ಆತ್ಮವಂಚನೆಗೆ ಒಳಗಾಗದೆ ಪ್ರಾಮಾಣಿಕವಾಗಿ ಪ್ರೇರಕಶಕ್ತಿಯಂತೆ ಕೆಲಸ ಮಾಡಬೇಕು ಹಾಗೂ ವಿವಾದಕ್ಕೊಳಗಾಗಿರುವ ಪ್ರಕರಣವನ್ನು ಕಾನೂನಿನಡಿ ಪಕ್ಷಕಾರರಿಬ್ಬರ ನಡುವ ಚರ್ಚಿಸಿ ಶೀಘ್ರವಾಗಿ ಪರಿಹರಿಸಲು ಸಹಾಯ ಮಾಡಬೇಕು ಎಂದರು.

            ವಿವಾದ ಮತ್ತು ವ್ಯಾಜ್ಯಗಳನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಧ್ಯಸ್ಥಿಕೆ ಕೇಂದ್ರಗಳನ್ನು ಸ್ಥಾಪಿಸಿದೆ.  ಸಿವಿಲ್ ಪ್ರಕ್ರಿಯೆ ಸಂಹಿತೆ ಕಲಂ 89ರಡಿ ಉದ್ದೇಶಿತ ಪರ್ಯಾಯ ವಿವಾದ ಇತ್ಯರ್ಥ ವಿಧಾನಗಳಲ್ಲಿ ಮಧ್ಯಸ್ಥಿಕೆಯೂ ಒಂದಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.

            ಯಾವುದೇ ವ್ಯಾಜ್ಯದಲ್ಲಿನ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಗೆ ಹೋಗದೆ ಅಲ್ಲಿನ ವ್ಯಾಜ್ಯಕ್ಕೆ ಸಂಬಂಧಿಸಿದ ಪಕ್ಷಕಾರರಿಬ್ಬರು ತಮ್ಮ ನಡುವಿನ ವಿವಾದಗಳನ್ನು ಮಾತುಕತೆಯ ಮೂಲಕ ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಳು ವ್ಯವಸ್ಥೆ ಮಾಡುವ ಒಂದು ಪ್ರಕ್ರಿಯೆಯೇ ಮಧ್ಯಸ್ಥಿಕೆಯಾಗಿರುತ್ತದೆ.  ಅಲ್ಲದೆ ಈ ಮಧ್ಯಸ್ಥಿಕೆಯೂ ವಿವಾದಗಳ ಇತ್ಯರ್ಥದ ಪ್ರಕ್ರಿಯೆಯಲ್ಲಿ ಪಕ್ಷಕಾರರು ನಿರ್ಭೀತಿಯಿಂದ, ಸ್ನೇಹಮಯ ವಾತಾವರಣದಲ್ಲಿ ಮದ್ಯಸ್ಥಿಕೆಗಾರರಾಗಿ ನೇಮಕಗೊಂಡಿರುವ ವಕೀಲರೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಒಂದು ವಿಶಿಷ್ಟ ಅವಕಾಶವನ್ನು ಕಲ್ಪಿಸುತ್ತಿದೆ ಎಂದರು.

            ಮಧ್ಯಸ್ಥಿಕೆಗಾರನೆಂದು ಕರೆಯಲ್ಪಡುವ ಮೂರನೇ ತಟಸ್ಥ ವ್ಯಕ್ತಿ (ವಕೀಲರು)ಯನ್ನು ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರದ ಆಡಳಿತ ಮಂಡಳಿ ಆಯ್ಕೆ ಮಾಡುತ್ತದೆ.  ಈ ಮಧ್ಯಸ್ಥಿಕೆಗಾರರು ಪಕ್ಷಕಾರರಿಬ್ಬರ ಜೊತೆ ಅಗತ್ಯವಿರುವಷ್ಟು ಸಮಯವನ್ನು ವ್ಯಯಮಾಡಿ (ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ) ಸಂವಾದದ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.  ಈ ಸಂದರ್ಭದಲ್ಲಿ ಪಕ್ಷಕಾರರಿಬ್ಬರು ಒಪ್ಪಿ ರಾಜಿ ಸಂಧಾನಕ್ಕೆ ಬಂದರೆ ಅಂತಹ ವ್ಯಾಜ್ಯಗಳ ಇತ್ಯರ್ಥದ ನಿಬಂಧನೆಗಳನ್ನು ಬರೆದು ಸಹಿ ಮಾಡಿ ಅನುಮೋದನೆ ಹಾಗೂ ಡಿಕ್ರಿಗಾಗಿ ನ್ಯಾಯಾಲಯಕ್ಕೆ ಒಪ್ಪಿಸಬೇಕು, ಒಂದು ವೇಳೆ ಇತ್ಯರ್ಥವಾಗದಂತ ವಿವಾದದ ಪ್ರಕರಣಗಳನ್ನು ಮಧ್ಯಸ್ಥಿಕೆಗಾಗಿ ಕಳುಹಿಸಿದ ನ್ಯಾಯಾಲಯಕ್ಕೆ ಹಿಂತಿರುಗಿಸಬೇಕು ಎಂದರು.

            ಕಾರ್ಯಾಗಾರದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಹೆಚ್.ಬಿ.ಪ್ರಭಾಕರಶಾಸ್ತ್ರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಸಿ.ಜೆ.ಎಂ. ನ್ಯಾಯಾಧೀಶ ಸದಾನಂದ ಎಂ.ದೊಡ್ಡಮನಿ, ವಕೀಲರು ಹಾಗೂ ತರಬೇತುದಾರರಾದ ಶೋಭಾಪಾಟೀಲ್, ಸುಧಾ ಎಸ್.ಎನ್., ಎಂ.ಎ.ಹೂಮಾಯೂನ್ ಮತ್ತಿತರರು ಉಪಸ್ಥಿತರಿದ್ದರು.

 ನಾಡಿನಲ್ಲಿ ಜ್ಞಾನದ ಪುನರುತ್ಥಾನವಾಗಿದೆ ಆದರೆ ಸಮಾಧಾನವಿಲ್ಲ ಕವಿವಿ ಘಟಿಕೋತ್ಸವದಲ್ಲಿ ಪ್ರೊ.ಸಿ.ಆರ್.ರಾವ್

 ಧಾರವಾಡ (ಕರ್ನಾಟಕ ವಾರ್ತೆ)ಜ 09: ಎಷ್ಟೇ ಆದರೂ ತೌರೂರಿನ ಬಾಗೀನ ಯಾವಾಗಲೂ ವಿಶೇಷ ಎನ್ನುವುದಕ್ಕೆ ಖ್ಯಾತ ವಿಜ್ಞಾನಿ ಪದ್ಮವಿಭೂಷಣ ಪ್ರೊ ಸಿ.ಆರ್. ರಾವ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ ಪಡೆದ ಸಂದರ್ಭದಲ್ಲಿ ಉಲ್ಲೇಖಿಸಿದ ಮಾತುಗಳೇ ಸಾಕ್ಷಿ. ಜಗತ್ತು ಸುತ್ತಿದರೆ ಭಾರತ ದೇಶ, ದೇಶ ಸುತ್ತಿದರೆ ಕನ್ನಡ ನಾಡೇ ಹೆಚ್ಚು ನೆಮ್ಮದಿಯ ತಾಣವೆನ್ನುವಂತೆ ಅನೇಕ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದ ಹೂವಿನ ಹಡಗಲಿಯ ಪ್ರೊ. ರಾವ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಹೊಸ ವರ್ಷದ ಕೊಡುಗೆಯಾಗಿ ಸಂತೃಪ್ತಿಭಾವ ನೀಡಿದ್ದಲ್ಲಿ ಅಚ್ಚರಿಯೇನಿಲ್ಲ.

ನಂತರ ಭಾಷಣ ಮಾಡಿದ ಘಟಿಕೋತ್ಸವದ ಭಾಷಣದಲ್ಲಿ ಮಾನವ ಇತಿಹಾಸದ ಅನೇಕ ಸಂಗತಿಗಳ ಭಂಡಾರ ಭಾರತವಾಗಿದೆ ಎಂಬ ಖ್ಯಾತ ಸಾಹಿತಿ ಮಾರ್ಕ್ ಟ್ವೇನ ಅವರ ಮಾತು, ಜ್ಞಾನ ಹಾಗೂ ಜ್ಞಾನಿಗಳಿಗೆ ಎತ್ತರದ ಸ್ಥಾನ ನೀಡಿದ್ದರಿಂದ ಇಂದು ಭಾರತದ ಬೌದ್ಧಿಕ ರಾಜಧಾನಿ ಆಗಲು ಸಾಧ್ಯವಾಗಿದೆ ಎಂಬ ಋಗ್ವೇದದ ಮಾತನ್ನು ಉಲ್ಲೇಖಿಸಿದ ಪ್ರೊ.ಸಿ.ಆರ್. ರಾವ್, 17 ರ ಶತಮಾನದ ಆರಂಭದಿಂದ ವಿದೇಶಿ ದಾಳಿಕೋರರ ಹೊಡೆತಕ್ಕೆ ಸಿಕ್ಕು ನಲುಗಿದ ಸಾಂಸ್ಕೃತಿಕ ಹಿರಿಮೆ ಗರಿಮೆಯನ್ನು 20ನೇ ಶತಮಾನದಲ್ಲಿ ಪುನರುತ್ಥಾನ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು. ಆದರೆ ಪ್ರಸ್ತುತ ವಿಶ್ವಮಟ್ಟದ ಜ್ಞಾನ ಸಮಾಜದಲ್ಲಿ ಭಾರತ ಯಾವ ಶ್ರೇಣಿಯಲ್ಲಿದೆ ಎಂಬುದು ಕಳವಳ ಪಡುವ ಸಂಗತಿಯಾಗಿದೆ ಎಂಬುದು ಸತ್ಯ. ಸಂಶೋಧನೆಯಲ್ಲಿ ಅಗ್ರಸ್ಥಾನ ಪಡೆಯಲು ಹತ್ತಿಪ್ಪತ್ತು ವರ್ಷಗಳ ವೇಳಾಪಟ್ಟಿಯೊಂದಿಗೆ ಯುದ್ಧೋಪಾದಿಯಲ್ಲಿ ನಾವು ಕಾರ್ಯನಿರ್ವಹಿಸಬೇಕು. ಗಾತ್ರದಲ್ಲಿ ಸಣ್ಣದಾದ ಜಪಾನದಲ್ಲಿ ಒಂದು ಮಿಲಿಯನ್ ಜನರಲ್ಲಿ 5573, ಅರ್ಜೆಂಟೀನಾದಲ್ಲಿ 980, ಮೆಕ್ಸಿಕೋದಲ್ಲಿ 353 ಸಂಶೋಧಕರ ಅನುಪಾತವಿದ್ದರೆ ಭಾರತದಲ್ಲಿ ಅದು ಕೇವಲ 137 ಆಗಿದೆ. ಈ ಸ್ಥಿತಿಯ ಬದಲಾವಣೆಗೆ ಯುವ ಪದವೀಧರರು ಶ್ರಮಿಸಬೇಕು. ಉತ್ತಮ ಸಂಶೋಧಕರ ಪಡೆಗೆ ಸೇರ್ಪಡೆ ಆಗಬೇಕು ಎಂದು ಪ್ರೊ. ರಾವ್ ವಿದ್ಯಾರ್ಥಿಗಳನ್ನು ಆಗ್ರಹಿಸಿದರು.ಇಡೀ ವಿಶ್ವದಲ್ಲಿ ಅತೀ ಹೆಚ್ಚಿನ ಅಂದರೆ 90 ಮಿಲಿಯನ್ ಯುವಶಕ್ತಿ ಭಾರತದಲ್ಲಿದೆ. ಆದರಲ್ಲಿ ಬಹುಪಾಲು ಸಂಖ್ಯೆ ಯವಜನತೆಗೆ ಉನ್ನತ ಶಿಕ್ಷಣ ಸಾಧ್ಯವಾಗುತ್ತಿಲ್ಲ ಎಂದ ಪ್ರೊ. ರಾವ್ ವಿವಿಗಳ ಪದವಿ ಅಧ್ಯಯನಗಳು ಸಮಕಾಲೀನ ಪರಿಸ್ಥಿತಿಗಳಿಗೆ ಒಗ್ಗುತ್ತಿಲ್ಲ. ರೂಢಿಗತ ಕಂಠಪಾಠದ ಮಾದರಿ ಶಿಕ್ಷಣ ಜಾರಿಯಲ್ಲಿದೆ ಎಂದು ವಿಷಾದಿಸಿ ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಜ್ಞಾನಗಳ ಅರಿವು, ಚಿಕಿತ್ಸ ಪ್ರಜ್ಞೆ ಹೇಗೆ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರು. ಸಂಶೋಧನೆಗಳನ್ನು ಆಹಾರೋತ್ಪಾದನೆ ಹಾಗೂ ನ್ಯೂಕ್ಲಿಯರ್ ಇಂಧನ ರಂಗಗಳಲ್ಲಿ ಭಾರತವು ಇನ್ನು ದ್ವಂದ್ವ ನಿಲುವಿನಲ್ಲೇ ಕಾಲ ಕಳೆಯುತ್ತಿದೆ ಎಂಬ ಮಾತಿದೆ ಆದಾಗ್ಯೂ ಚರ್ಚೆ ಹಾಗೂ ಸಂವಾದಗಳ ಮೂಲಕ ಯೋಗ್ಯ ದಾರಿ ಹುಡುಕಲು ಯುವ ಪದವೀಧರರ ತಮ್ಮ ಕಾಣಿಕೆ ನೀಡಬೇಕು. ಇಚ್ಛೆ ಇದ್ದಲ್ಲಿ ಶಕ್ತಿ ಇದೆ, ಶಕ್ತಿ ಇದ್ದಲ್ಲಿ ಚಲನೆಯಿದೆ, ಚಲನೆಯಿದ್ದಲ್ಲಿ ಶೋಧವಿದೆ, ಶೋಧವಿದ್ದಲ್ಲಿ ಪ್ರಗತಿ ಸಹಜ ಹಾಗೂ ಆ ಪ್ರಗತಿ ಇಡೀ ನಾಡಿನ ಸಮೃದ್ಧಿಗೆ ಸಮಾಧಾನಕ್ಕೆ ತಳಹದಿಯಾಗಿರುತ್ತದೆ ಎಂದು ಪ್ರೊ.ಸಿ.ಎನ್. ರಾವ್ ನುಡಿದರು.

ಇದೇ ಸಂದರ್ಭದಲ್ಲಿ ಖ್ಯಾತ ಸಂಖ್ಯಾ ಶಾಸ್ತ್ರಜ್ಞ, ಪದ್ಮವಿಭೂಷಣ ಪ್ರೊ|| ಸಿ.ಆರ್.ರಾವ್, ಖ್ಯಾತ ವಿಮರ್ಶಕ ಡಾ|| ಜಿ.ಎಸ್. ಅಮೂರ, ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ  ಡಾ|| ಎ.ಎಂ. ಪಠಾಣ (ಅನುಪಸ್ಥಿತಿ), ಶಿಕ್ಷಣ ತಜ್ಞ ಹೈದ್ರಾಬಾದಿನ ಕತಿ ಕನ್ಹೇರಿ ತಾಹೀರ ಮಹಿ, ಕನ್ನಡ ಹಿರಿಯ ಚಿತ್ರನಟ ಶ್ರೀ ರಾಜೇಶ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ       ಶ್ರೀ ಮನು ಬಳಿಗಾರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು. ಇದರೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯ ವಿವಿಧ ವಿಷಯಗಳಲ್ಲಿ ಒಟ್ಟು 118 ಪಿ.ಹೆಚ್.ಡಿ. ಪ್ರಧಾನಿಸಿದ್ದು, ಘಟಿಕೋತ್ಸವದಲ್ಲಿ 111 ಜನರು ವೈಯಕ್ತಿಕವಾಗಿ ಪಾಲ್ಗೊಂಡು ತಮ್ಮ ಡಾಕ್ಟರೇಟ್ ಪಡೆದುಕೊಂಡರು. ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ ಎಚ್.ಬಿ. ವಾಲೀಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಘಟಿಕೋತ್ಸವದ ಮೂಲಕ ಡಾಕ್ಟರೇಟ್, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳಲ್ಲಿ ಒಟ್ಟು 40,976 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಘಟಿಕೋತ್ಸವದಲ್ಲಿ  ಕುಲಸಚಿವರುಗಳಾದ ಪ್ರೊ.ಎಸ್.ಬಿ. ಹಿಂಚಿಗೇರಿ, ಡಾ|| ಜೆ.ಎಸ್. ಭಟ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ನಾಡೋಜ ಡಾ|| ಪಾಟೀಲ ಪುಟ್ಟಪ್ಪ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಚಂದ್ರಕಾಂತ ಬೆಲ್ಲದ, ವಿಧಾನ ಪರಿಷತ್ತಿನ ಸದಸ್ಯ ಶ್ರೀ ಶಿವರಾಜ ಸಜ್ಜನರ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಸೇರಿದಂತೆ ಸಿಂಡೆಕೇಟ್, ವಿದ್ಯಾವಿಷಯಕಾ ಪರಿಷತ್, ವಿವಿಧ ವಿಷಯಗಳ ಮುಖ್ಯಸ್ಥರು, ಗಣ್ಯರು ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

ಸೈನ್ಯಕ್ಕೆ ಭರ್ತಿ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

 ಧಾರವಾಡ (ಕರ್ನಾಟಕ ವಾರ್ತೆ)ಜ 09: ಜಿಲ್ಲೆಯ ವ್ಯಾಪ್ತಿಯಲ್ಲಿ 17 ರಿಂದ 23 ರ ವಯೋಮಿತಿಯಲ್ಲಿರುವ ಹಾಗೂ ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಆಂಗ್ಲ ಭಾಷೆಯಲ್ಲಿ ಪಾಸಾಗಿರುವ 165 ಸೆಂಟಿ ಮೀಟರ್ ಎತ್ತರವಿರುವ ಹಾಗೂ 77/82 ಸೆಂಟಿ ಮಿಟರ್ ಎದೆ ಸುತ್ತಳತೆಯಿರುವ ಯುವಕರಿಗೆ ಸೈನ್ಯದಲ್ಲಿ ಭರ್ತಿಯಾಗಲು ಉಚಿತ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ. ಆಸಕ್ತ ಯುವಕರು ಉಪನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಇವರಿಗೆ ಒಂದು ಭಾವಚಿತ್ರದೊಂದಿಗೆ ಜನೇವರಿ 1 ರೊಳಗಾಗಿ ಅರ್ಜಿ ಪಡೆದು ಸಲ್ಲಿಸಲು ತಿಳಿಸಲಾಗಿದೆ.

ಮುಕ್ತ ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮ

ಧಾರವಾಡ (ಕರ್ನಾಟಕ ವಾರ್ತೆ)ಜ 09: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಿಂದಿ ಎಂ.ಎ. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ವಿ.ವಿ.ಯ ಪ್ರಾದೇಶಿಕ ಕೇಂದ್ರ (0836-2441199) ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್‌ನಲ್ಲಿ ದಿನಾಂಕ: 13 ರ ವರೆಗೆ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜೇಷ್ಠತಾ ಪಟ್ಟಿ ಪ್ರಕಟ

ಧಾರವಾಡ (ಕರ್ನಾಟಕ ವಾರ್ತೆ)ಜ 09: ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಗ್ರೂಪ್ ‘ಡಿ’ ನೌಕರರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ಹಾರ್ಡ್‌ವೇರ್ ನೆಟ್‌ವರ್ಕಿಂಗ್ ತರಬೇತಿಗೆ ಅರ್ಜಿ ಆಹ್ವಾನ

 ಧಾರವಾಡ (ಕರ್ನಾಟಕ ವಾರ್ತೆ)ಜ 09: ಕುಮಟಾದ ಸಿಂಡ್ ಗ್ರಾಮೀಣ ಸ್ವ ಉದ್ಯೋಗ್ ತರಬೇತಿ ಸಂಸ್ಥೆಯು (08386-220530) ಜನೇವರಿ 16 ರಿಂದ 45 ದಿನಗಳ ಉಚಿತ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿಯನ್ನು ಹಮ್ಮಿಕೊಂಡಿದೆ.  ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ತಾಲ್ಲೂಕು ನಿರುದ್ಯೋಗಿ ಯುವಕ/ಯುವತಿಯರಿಂದ ಇದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಆರಿಸಲಾಗುವುದು.  ಊಟ ಮತ್ತು ವಸತಿ ಸಹಿತಿ ತರಬೇತಿಯು ಉಚಿತವಾಗಿರುತ್ತದೆ. ಕನಿಷ್ಟ ವಿದ್ಯಾರ್ಹತೆ ಓದು ಬರೆಯಲು ಬರುವುದರ ಜೊತೆಗೆ ಕಂಪ್ಯೂಟರ್ ಬಗ್ಗೆ ಪ್ರಾಥಮಿಕ ಜ್ಞಾನ ಉಳ್ಳವರಿಗೆ ಪಾಶಸ್ತ್ಯ ನೀಡಲಾಗುವುದು.

ಆಸಕ್ತರು ತಮ್ಮ ಹತ್ತಿರದ ಸಿಂಡಿಕೇಟ್ ಅಥವಾ ಕೆವಿಜಿಬಿ ಶಾಖೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಸಂತಾನ ಶಕ್ತಿ ಹರಣ ಶಿಬಿರ : ಜನವರಿ ಮಾಹೆಯ ಕಾರ್ಯಕ್ರಮ

ಧಾರವಾಡ (ಕರ್ನಾಟಕ ವಾರ್ತೆ) ಜ.09: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ಉದರದರ್ಶಕ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಎನ್.ಎಸ್.ವಿ. ಶಿಬಿರಗಳನ್ನು ಜನೇವರಿ ಮಾಹೆಯಲ್ಲಿ  06 ರಿಂದ 27 ರ ವರೆಗೆ ಏರ್ಪಡಿಸಿದೆ. ಈ ಕೇಂದ್ರಗಳಲ್ಲಿ ಜರುಗುವ ಶಿಬಿರದ ವೈದ್ಯಾಧಿಕಾರಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ನಿಯಮಿಸಿದ್ದು ಆಸಕ್ತರು ಧಾರವಾಡದಲ್ಲಿನ ಪಾಲಿಕೆಯ ಹೆರಿಗೆ ಆಸ್ಪತ್ರೆ, ಹುಬ್ಬಳ್ಳಿಯಲ್ಲಿನ ಚಿಟಗುಪ್ಪಿ ಆಸ್ಪತ್ರೆ,  ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ  ಆರೋಗ್ಯ ಕೇಂದ್ರವನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಅಂತಿಮ ಮತದಾನದ ಪಟ್ಟಿ ಪ್ರಕಟ     

ಶಿವಮೊಗ್ಗ, ಜನವರಿ 9(ಕರ್ನಾಟಕ ವಾರ್ತೆ):- ಜಿಲ್ಲಾ ವ್ಯಾಪ್ತಿಗೊಳಪಡುವ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಮತದಾನ ಕೇಂದ್ರಗಳಲ್ಲಿ ಭಾವಚಿತ್ರವಿರುವ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರ ನೋಂದಣಾಧಿಕಾರಿಗಳಾದ ಶಿವಮೊಗ್ಗ ಹಾಗೂ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ, ಪೌರಾಯುಕ್ತರು, ನಗರಸಭೆ, ಜಿಲ್ಲೆಯ ಎಲ್ಲಾ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರರ ಕಚೇರಿಯಲ್ಲಿಯು ಸಹ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಮೇಲ್ಕಂಡ ಕಚೇರಿಗಳಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳ- ಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದ್ದಾರೆ.

ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ 

 ಶಿವಮೊಗ್ಗ, ಜನವರಿ 9(ಕರ್ನಾಟಕ ವಾರ್ತೆ):- ಕರ್ನಾಟಕ ಜಾನಪದ ಅಕಾಡೆಮಿಯು 2011ನೇ ಸಾಲಿನಲ್ಲಿ ಅಂದರೆ 2011ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಪ್ರಥಮವಾಗಿ ಮುದ್ರಣಗೊಂಡಿರುವ ಜಾನಪದ ಪದ್ಯ, ಜಾನಪದ ಗದ್ಯ,ಜಾನಪದ ವಿಚಾರ ವಿಮರ್ಶೆ ಸಂಶೋಧನೆ, ಜಾನಪದ ಸಂಕೀರ್ಣ ಪ್ರಕಾರದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ. ಲೇಖಕರು, ಪ್ರಕಾಶಕರು, ಸಂಪಾದಕರು ತಲಾ ಪ್ರಕಾರದ 4 ಪ್ರತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560 002, ಇವರಿಗೆ ದಿ.10.2.2012ರೊಳಗೆ ತಲುಪುವಂತೆ ಕಳುಹಿಸಿಕೊಡಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ದೂ. 080-22215509 ಗೆ ಸಂಪರ್ಕಿಸಬಹುದಾಗಿದೆ.

ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ 

               ಶಿವಮೊಗ್ಗ, ಜನವರಿ 9(ಕರ್ನಾಟಕ ವಾರ್ತೆ):- ಫೆಬ್ರವರಿ 07ರಂದು ನಡೆಯಲಿರುವ ಶಿವಮೊಗ್ಗದ ಶ್ರೀ ಕೋಟೆ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗೆ ಕುಸ್ತಿ ಪೈಲ್ವಾನರುಗಳು ಮತ್ತು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ತಹಶೀಲ್ದಾರ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಉದ್ಯೋಗಕ್ಕಾಗಿ 9920 ಜನರ ಹೆಸರು ನೋಂದಣಿ

            ಶಿವಮೊಗ್ಗ, ಜನವರಿ 9 (ಕರ್ನಾಟಕ ವಾರ್ತೆ)-  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಡಿಸೆಂಬರ್ ಮಾಹೆಯಲ್ಲಿ ಜಿಲ್ಲೆಯ 148 ಪುರುಷರು ಮತ್ತು 72 ಮಹಿಳೆಯರು ಸೇರಿದಂತೆ ಒಟ್ಟು 220 ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.  ಇವರಲ್ಲಿ  ಎಸ್.ಎಸ್.ಎಲ್.ಸಿ. ಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿದ 12, ಎಸ್.ಎಸ್.ಎಲ್.ಸಿ. ಹಾಗೂ ಪದವೀಧರರಲ್ಲದ 56, ಪದವೀಧರರು-18, ಹಾಗೂ ತಾಂತ್ರಿಕ ಪದವೀಧರರು 134 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.  ಇದರಿಂದಾಗಿ ಜಿಲ್ಲೆಯಲ್ಲಿ 3,948 ಮಹಿಳೆಯರು ಸೇರಿದಂತೆ ಒಟ್ಟು 9920 ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿಕೊಂಡಂತಾಗಿದೆ.

ಸುಸ್ಥಿರ ಕೃಷಿಗೆ ವೈಜ್ಞಾನಿಕ ಪಶು ಸಂಗೋಪನೆ

            ಶಿವಮೊಗ್ಗ, ಜನವರಿ 9 (ಕರ್ನಾಟಕ ವಾರ್ತೆ)- ನವಿಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜನವರಿ 16 ರಿಂದ 18ರವರೆಗೆ ಸುಸ್ಥಿರ ಕೃಷಿಗೆ ವೈಜ್ಞಾನಿಕ ಪಶುಸಂಗೋಪನೆ ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ವೈಜ್ಞಾನಿಕ ಹೈನುಗಾರಿಕೆ, ಕುರಿ ಹಾಗೂ ಕೋಳಿ ಸಾಕಾಣಿಕೆ, ಮೇವಿನ ಬೆಳೆಗಳ ಉತ್ಪಾದನಾ ತಾಂತ್ರಿಕತೆ, ಸಾವಯವ ಕೃಷಿ ಮತ್ತು ಪಶು ಸಂಗೋಪನೆ, ಸುಸ್ಥಿರ ಕೃಷಿಯಲ್ಲಿ ಪಶು ಸಂಗೋಪನೆಯ ಪಾತ್ರ ಇತ್ಯಾದಿ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲಾಗುವುದು. ಆಸಕ್ತಿ ಯುಳ್ಳವರು ದಿ.14.1.12ರಂದು ಬೆಳಿಗ್ಗೆ 11.30 ಗಂಟೆಯೊಳಗೆ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ. ಈ ತರಬೇತಿಯಲ್ಲಿ ಮೂರು ದಿನ ಸಕ್ರಿಯವಾಗಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡಾ. ಅಶೋಕ್ ಎಂ., ವಿಷಯ ತಜ್ಞರು (ಪಶು ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ ಇವರನ್ನು ಸಂಪರ್ಕಿಸಲು ಕೋರಲಾಗಿದೆ. ದೂ.08182-227946, 295516.

ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಪಡೆಯುವ ಪದವೀಧರರಿಗೆ ಸೂಚನೆ    

ಶಿವಮೊಗ್ಗ, ಜನವರಿ 9 (ಕರ್ನಾಟಕ ವಾರ್ತೆ)-ಕುವೆಂಪು ವಿಶ್ವವಿದ್ಯಾನಿಲಯದ 22ನೇ ವಾರ್ಷಿಕ ಘಟಿಕೋತ್ಸವವು ಫೆಬ್ರವರಿ 08ರಂದು ಬೆಳಿಗ್ಗೆ 11.00 ಗಂಟೆಗೆ ಜ್ಞಾನ ಸಹ್ಯಾದ್ರಿಯ ಘಟಿಕೋತ್ಸವ ಸಭಾಂಗಣದಲ್ಲಿ ನಡೆಯಲಿದೆ. ಈ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿರುವ ರ್‍ಯಾಂಕ್ ಅಭ್ಯರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಕಾಲೇಜಿನ ಪ್ರಾಂಶುಪಾಲರು ನೀಡಿರುವ ಗುರುತಿನ ಪತ್ರವನ್ನು ಹಾಜರುಪಡಿಸಿ ಫೆಬ್ರವರಿ 08ರಂದು ಮಧ್ಯಾಹ್ನ 12.30 ರಿಂದ ಸಂಜೆ 4.30ರೊಳಗಾಗಿ ಅನ್ವಯಿಕ ಭೂವಿಜ್ಞಾನ ವಿಭಾಗದಲ್ಲಿ ಪದವಿ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಪದಕ, ನಗದು ಬಹುಮಾನ ವಿಜೇತರುಗಳಿಗೆ, ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಿಹೆಚ್‌ಡಿ., ಅಭ್ಯರ್ಥಿಗಳಿಗೆ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು. ಘಟಿಕೋತ್ಸವದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಶುಭ್ರವಾದ ಇಸ್ಥ್ರಿ ಮಾಡಿದ ಬಿಳಿ ಉಡುಪನ್ನು ಧರಿಸಿರಬೇಕು ಎಂದು ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ. ಎಸ್.ಎ. ಜಾವೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯಾಚಾರಿಗೆ 7ವರ್ಷ ಕಠಿಣ ಶಿಕ್ಷೆ   

                        ಶಿವಮೊಗ್ಗ, ಜನವರಿ 9 (ಕರ್ನಾಟಕ ವಾರ್ತೆ)- ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಆರಗ ವಿರಕ್ತಮಠದ ಜಯ ಅಲಿಯಾಸ್ ಜಯಣ್ಣ ಎಂಬುವವರಿಗೆ ಶಿವಮೊಗ್ಗದ 2ನೇ ಶೀಘ್ರ ವಿಲೇವಾರಿ ನ್ಯಾಯಾಲಯವು 7ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5,000/- ರೂ.ಗಳ ದಂಡ ವಿಧಿಸಿದೆ. 2011ನೇ ಮಾರ್ಚ್ 15ರಂದು ಪ್ರಕರಣದ ಆರೋಪಿ ಜಯಣ್ಣ ಅವರು ಆರಗ ವಿರಕ್ತ ಮಠದ ವಾಸಿಯೊಬ್ಬರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ 25 ವರ್ಷದ ಅವಿವಾಹಿತ ಯುವತಿ ಮೇಲೆ ಅತ್ಯಾಚಾರ ವೆಸಗಿರುವ ಪ್ರಕರಣದ ವಿರುದ್ಧ ತೀರ್ಥಹಳ್ಳಿ ಪೊಲೀಸರು ಸಲ್ಲಿಸಿದ್ಧ ಚಾರ್ಜ್‌ಶೀಟ್ ಮೇಲೆ ನ್ಯಾಯಾಧೀಶರಾದ ಶ್ರೀಮತಿ ಕೋಮಲತ ಅವರು ವಿಚಾರಣೆ ನಡೆಸಿ ಆರೋಪಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕರಾದ ಶ್ಯಾಮಲಾಶಾಸ್ತ್ರಿ ಸರ್ಕಾರದ ಪರ ವಾದ ಮಂಡಿಸಿದ್ದರು.

ಪ್ರಗತಿ ಪರಿಶೀಲನಾ ಸಭೆ

     ಮಂಡ್ಯ ಜ9 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಡಿಸೆಂಬರ್ 2011 ರ ಅಂತ್ಯದವರೆಗಿನ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜನವರಿ 13 ರಂದು ಪೂರ್ವಾಹ್ನ 11.00 ಗಂಟೆಗೆ ಮಂಡ್ಯ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಕರೆಯಲಾಗಿದೆ. ಇಲಾಖಾ ಮುಖ್ಯಸ್ಥರೇ ಖುದ್ದಾಗಿ ಇಲಾಖಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ  ಡಿಸೆಂಬರ್ 2011 ರವರೆಗಿನ ಮಾಹಿತಿಗಳೊಂದಿಗೆ ಸಭೆಗೆ ತಪ್ಪದೇ ಹಾಜರಾಗಬೇಕೆಂದು ಮಂಡ್ಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಿಳಿಸಿರುತ್ತಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2500 ಕ್ಲರ್ಕ್‌ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ-2012

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಅದೀನ ಬ್ಯಾಂಕುಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ (ಕೇಂದ್ರ) ವರ್ಗದವರಿಗೆ ಮೀಸಲಾದ ಕ್ಲರ್ಕ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ (ವಿಶೇಷ ನೇಮಕಾತಿ) ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಅರ್ಜಿ ಸಲ್ಲಿಸುವವರು ದಿನಾಂಕ 1-12-2011 ಕ್ಕೆ 10+2 (ಪಿ.ಯು.ಸಿ) ರಲ್ಲಿ ಶೇಕಡ 60 ಅಂಕ ಗಳಿಸಿ ಪಾಸಾಗಿರಬೇಕು. ಅಥವಾ ಯಾವುದಾದರೂ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಸಹ ಪಿಯುಸಿ ಅಂಕಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ದಿನಾಂಕ 1-12-2011 ಕ್ಕೆ ಕನಿಷ್ಠ 28 ವರ್ಷ ಮೀರಿರಬಾರದು. ಸಂಸ್ಥೆಯ ವೆಬ್‌ಸೈಟ್ www.statebankofindia.com ಮೂಲಕ ಜನವರಿ 20 ರೊಳಗಾಗಿ ಅರ್ಜಿ ಸಲ್ಲಿಸಿ ಜನವರಿ 25 ರೊಳಗೆ ಬ್ಯಾಂಕಿನಲ್ಲಿ ಶುಲ್ಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು (ದೂರವಾಣಿ 0821-25166844/9449686641)ಇವರನ್ನು ಸಂಪರ್ಕಿಸುವುದು.

ಇಂಟರ್‌ನೆಟ್ ಹೊಂದಿರುವ ಫೋಟೋ ಸ್ಟುಡಿಯೋದಿಂದ ಅರ್ಜಿ ಆಹ್ವಾನ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಮಂಡ್ಯ ಜಿಲ್ಲೆಯ ನಗರ/ಪಟ್ಟಣ ಪ್ರದೇಶಗಳಲ್ಲಿ ಹೊಸದಾಗಿ ಪಡಿತರ ಚೀಟಿಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.  ಅರ್ಜಿದಾರರ ಕುಟುಂಬದ ಸದಸ್ಯರುಗಳ ಭಾವಚಿತ್ರ ಹಾಗೂ ಬೆರಳಚ್ಚು) ಬಯೋಮೆಟ್ರಿಕ್ ಸೆರೆ ಹಿಡಿಯುವ ಕಾರ್ಯವನ್ನು ತ್ವರಿತವಾಗಿ ಮಾಡುವ ಅಗತ್ಯವಿರುತ್ತದೆ. ಸದರಿ ಕಾರ್ಯವನ್ನು ಇಂಟರ್‌ನೆಟ್ ಹೊಂದಿರುವ ಫೋಟೋ ಸ್ಟುಡಿಯೋ, ನೆಟ್ ಕೆಫೆ, ನೆಟ್ ಪಾರ್ಲರ್ ಅಥವಾ ಸೈಬರ್ ಕಫೆ ಹೊಂದಿರುವ ಖಾಸಗಿ ವ್ಯಕ್ತಿಗಳನ್ನು ಫ್ರಾಂಚೈಸೀಗಳನ್ನಾಗಿ ನೇಮಿಸಲು ತೀರ್ಮಾನಿಸಲಾಗಿದೆ. ಆಸಕ್ತಿ ಇರುವವರು ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, (ದೂರವಾಣಿ ಸಂಖ್ಯೆ 08232-220285 / ಮೊ. 9886665934) ಮಂಡ್ಯ ಇವರನ್ನು ಕಛೇರಿ ವೇಳೆಯಲ್ಲಿ  ಖುದ್ದಾಗಿ ಜನವರಿ 13 ರೊಳಗೆ ಸಂಪರ್ಕಿಸಲು ಕೋರಿದೆ.

ಹಂದಿ ಸಾಕಾಣಿಕ ಮಾಲೀಕರುಗಳಿಗೆ ಸೂಚನೆ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಮಂಡ್ಯ ನಗರಸಭಾ ವ್ಯಪ್ತಿಯಲ್ಲಿ ಹಂದಿಗಳು ಅಡ್ಡಾದಿಟ್ಟಿಯಾಗಿ ಒಡಾಡುತ್ತಾ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ತೊಂದರೆಯುಂಟು ಮಾಡುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆಯು ಹೆಚ್ಚಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಹಂದಿಗಳನ್ನು ಕೂಡಲೆ ನಗರಸಭಾ ಹೊರಸಾಗಿಸತಕ್ಕದ್ದು. ತಪ್ಪಿದ್ದಲ್ಲಿ ಕರ್ನಾಟಕ ಪುರಸಭಾ ಕಾಯ್ದೆ 1964 ಸೆಕ್ಷನ್ 223 ರ ರೀತ್ಯಾ ದಂಡ ವಿಧಿಸಿ, ಮೊಕದ್ದಮೆ ಹೂಡಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಪ್ರಕಾಶ್ ತಿಳಿಸಿದ್ದಾರೆ. ಸಾರ್ವಜನಿಕರು ದೂರುಗಳನ್ನು ನೀಡಲು ನಗರಸಭೆಯ ಸಹಾಯವಾಣಿ 08232-228719 ಯನ್ನು ಸಂಪರ್ಕಿಸಲು ಕೋರಿದೆ.

 ಬಹಿರಂಗ ಹರಾಜು

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೆ.ಆರ್.ಪೇಟೆ ಇಲ್ಲಿನ ಉಗ್ರಾಣದಲ್ಲಿರುವ ವಿವಿಧ ನಿಯುಪಯುಕ್ತ ವಸ್ತುಗಳನ್ನು ಜನವರಿ 30 ರಂದು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು. ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವವರು ನಿಬಂಧನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೆ.ಆರ್.ಪೇಟೆ ಇವರನ್ನು ಸಂಪರ್ಕಿಸುವುದು.

ಅಪರಿಚಿತ ಶವ ಪತ್ತೆ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಮಂಡ್ಯ ರೈಲ್ವೆ ನಿಲ್ದಾಣದ ವೇದಿಕೆ ನಂ 2ರಲ್ಲಿ ಸುಮಾರು 50 ರಿಂದ 55 ವಯಸ್ಸಿನ ಅಪರಿಚಿತ ಗಂಡಸಿನ ಶವ ಮಂಡ್ಯ ಉಪ ಪೊಲೀಸ್ ಠಾಣೆ (ರೈಲ್ವೆ) ಇವರಿಗೆ ದೊರೆತಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ. ಮೃತರಾದ ವ್ಯಕ್ತಿ ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು  ಬಣ್ಣ, ದುಂಡು ಮುಖ, ಗಿಡ್ಡ ಮೂಗು, ಬೊಕ್ಕ ತಲೆ ಇರುವ ಸ್ವಲ್ಪ ಕೂದಲಿನ ಚಹರೆ ಹೊಂದಿರುವ ಇವರು ತುಂಬು ತೋಳಿನ ತಿಳಿನೀಲಿ ಬಣ್ಣದ ಟೆರಿಕಾಟ್ ಶರ್ಟ್, ಬಿಳಿ ಪಂಚೆ, ಖಾಕಿ ನಿಕ್ಕರ್ ಧರಿಸಿದ್ದು, ತಲೆಗೆ ಟವಲ್ ಸುತ್ತಿರುತ್ತಾರೆ.   ಈ ಶವದ ಬಗ್ಗೆ ಮಾಹಿತಿ ಇರುವವರು ಅಥವಾ ವಾರಸುದಾರರು ಸಹಾಯಕ ಆರಕ್ಷಕ ಉಪ ನಿರೀಕ್ಷಕರು, ಮಂಡ್ಯ ಉಪ ಪೊಲೀಸ್ ಠಾಣೆ (ರೈಲ್ವೆ) ದೂರವಾಣಿ ಸಂಖ್ಯೆ 08232-222340 ಅಥವಾ ಮೈಸೂರು ಪೊಲೀಸ್ ಠಾಣೆ (ರೈಲ್ವೆ) ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸಲು ಕೋರಿದೆ.

ಕಾಣೆಯಾದ  ಹುಡುಗಿ ಪತ್ತೆಗೆ ಸಹಕರಿಸಲು ಮನವಿ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಮಂಡ್ಯ ಸಿಟಿ 100 ಅಡಿ ರಸ್ತೆಯಲ್ಲಿರುವ ಜ್ಞಾನನಂದ ಸ್ವಾಧಾರ ಕೇಂದ್ರದಿಂದ 16 ವರ್ಷದ ಎಸ್. ಉಮಾ ಎಂಬ ಹುಡುಗಿ ದಿನಾಂಕ 8-1-2012 ರಿಂದ ನಾಪತ್ತೆಯಾಗಿರುವುದಾಗಿ ನಿಲಯದ ಮೇಲ್ವಿಚಾರಕಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಪಶ್ವಿಮ ಪೊಲೀಸ್ ಠಾಣೆ, ಮಂಡ್ಯ ಇವರಿಗೆ ದೂರು ಸಲ್ಲಿಸಿರುತ್ತಾರೆ. ಕಾಣೆಯಾದ ಉಮಾರವರ  ಚಹರೆ ಇಂತಿದೆ.  ವಯಸ್ಸು 16 ವರ್ಷ,  ಎಣ್ಣೆಗೆಂಪು ಬಣ್ನ,    ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ.  ಕನ್ನಡ, ಭಾಷೆ ಮಾತನಾಡುತ್ತಾಳೆ.  ಈ ಚಹರೆ ಪಟ್ಟಿಯುಳ್ಳ ಹುಡುಗಿ ಪತ್ತೆಯಾದಲ್ಲಿ ಕೂಡಲೆ ಸಬ್‌ಇನ್ಸ್‌ಪೆಕ್ಟರ್ ಆಫ್ ಪೊಲೀಸ್, ಪಶ್ವಿಮ ಪೊಲೀಸ್ ಠಾಣೆ, ಮಂಡ್ಯ ಇವರನ್ನು ಸಂಪರ್ಕಿಸಲು ಕೋರಿದೆ.

ನ್ಯೂ ಆಕಾಂಕ್ಷ ಶೈಕ್ಷಣಿಕ ಸಾಲ ಯೋಜನೆ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಆಭಿವೃದ್ಧಿ ನಿಗಮದ ನ್ಯೂ ಆಕಾಂಕ್ಷ ಶೈಕ್ಷಣಿಕ ಸಾಲ ಯೋಜನೆಯ ಆರ್ಥಿಕ ನೆರವಿನೊಂದಿಗೆ ವ್ಯದ್ಯಕೀಯ, ಇಂಜಿನಿಯರಿಂಗ್, ಹೋಟೆಲ್ ಮ್ಯಾನೇಜ್ ಮೆಂಟ್, ಪಶುವೈದ್ಯಕೀಯ, ಕಾನೂನು, ದಂತ ವೈದ್ಯಕೀಯ, ಕಂಪ್ಯೂಟರ್, ಐ.ಸಿ.ಡಬ್ಲ್ಯೂ.ಎ. ಚಾರ್ಟೆಡ್ ಅಕೌಂಟೆಂಟ್ ಮುಂತಾದ ವೃತ್ತಿಪರ ಕೋರ್ಸ್‌ಗಳಲ್ಲಿ ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರಿಸಲು ಪ್ರತಿ ವರ್ಷ ಗರಿಷ್ಠ ರೂ. 2.50 ಲಕ್ಷಗಳಂತೆ ಕೋರ್ಸ್‌ನ ಅವಧಿಗೆ ಒಟ್ಟು 10.00 ಲಕ್ಷ ರೂ.ಗಳನ್ನು ವಾರ್ಷಿಕ ಶೇ. 4 ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಆಭಿವೃದ್ಧಿ ನಿಗಮ, (ದೂರವಾಣಿ ಸಂಖ್ಯೆ 08232-231804) ಜಿಲ್ಲಾ ಪಂಚಾಯತ್ ಕಛೇರಿ ಪಕ್ಕ, ಮಂಡ್ಯ ಇಲ್ಲಿ ಸಂಪರ್ಕಿಸುವುದು.

ಕಂಪ್ಯೂಟರ್ ತರಬೇತಿಗಾಗಿ ಮಹಿಳೆಯರಿಂದ ಅರ್ಜಿ ಆಹ್ವಾನ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಂಡ್ಯ ಶಾಖೆಯಿಂದ ಮಹಿಳಾ ತರಬೇತಿ ಯೋಜನೆಯಡಿ 2011-12ನೇ ಸಾಲಿನಲ್ಲಿ 3 ತಿಂಗಳ ಅವಧಿಯ ಕಂಪ್ಯೂಟರ್ ಹಾರ್ಡ್‌ವೇರ್ ಅಂಡ್ ಕಮ್ಯೂನಿಕೇಷನ್ ಸ್ಕಿಲ್ಸ್ ತರಬೇತಿಯನ್ನು ಮಂಡ್ಯ, ಮದ್ದೂರು ಮತ್ತು ಮಳವಳ್ಳಿ ತಾಲ್ಲೂಕು ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು.  ಕನಿಷ್ಠ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿರುವ  18 ರಿಂದ 35 ವರ್ಷಗಳ ಒಳಗಿರುವ ಹಾಗೂ ವಾರ್ಷಿಕ ಆದಾಯ ರೂ. 40,000/- ಗಳಿಗಿಂತ ಕಡಿಮೆ ಇರುವ ಅರ್ಹ ಮಹಿಳಾ ಅಭ್ಯರ್ಥಿಗಳು ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ  ಜನವರಿ 20 ರೊಳಗೆ ರೊಳಗೆ ದ್ವಿಪ್ರತಿಯಲ್ಲಿ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ಅಥವಾ ಉಪ ನಿರ್ದೇಶಕರ ಕಛೇರಿ, (ದೂರವಾಣಿ ಸಂಖ್ಯೆ: 08232-227336) ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಛೇರಿ, ಮಂಡ್ಯ ಇವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು.

ಮೆಂಟಲ್ ಎಬಿಲಿಟಿ ತರಬೇತಿ ಶಿಬಿರ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸ್ಟಡಿ ಸರ್ಕಲ್ ವಿಭಾಗದ ವತಿಯಿಂದ ಮೆಂಟಲ್ ಎಬಿಲಿಟಿಯ ಬಗ್ಗೆ ಉಚಿತ ತರಬೇತಿ ಶಿಬಿರವನ್ನು ಜನವರಿ 16 ರಂದು ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆ. ಆಸಕ್ತ ವಿದ್ಯಾವಂತ ಅಭ್ಯರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಉದ್ಯೋಗಾಧಿಕಾರಿ ಡಿ.ಎಂ. ರಾಣಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಪ್ರಾದೇಶಿಕ ಸಾರಿಗೆ ಕಛೇರಿ ಎದುರು, ಮಂಡ್ಯ ಇಲ್ಲಿ (ದೂರವಾಣಿ ಸಂಖ್ಯೆ 08232-220126)ನ್ನು ಸಂಪರ್ಕಿಸುವುದು.

ಮದ್ಯ ಮಾರಾಟ ನಿಷೇಧ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ನಾಗಮಂಗಲ ಪಟ್ಟಣ ಪಂಚಾಯಿತಿಯ ವಾರ್ಡ್ ನಂ 11 ರಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ    10-1-2012 ರಂದು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮತದಾನ ಮತ್ತು ದಿನಾಂಕ 13-1-2012 ರಂದು ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯವು ನಡೆಯಲಿದೆ. ಚುನಾವಣೆಯು ಮುಕ್ತ, ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಯಲು ದಿನಾಂಕ 9-1-2012 ರ ಬೆಳಿಗ್ಗೆ 7.00 ಗಂಟೆಯಿಂದ ದಿನಾಂಕ 10-1-2012ರ  ಮಧ್ಯರಾತ್ರಿ 12.00 ಗಂಟೆಯವರೆಗೆ ಮತ್ತು ಮತ ಎಣಿಕೆ ಕಾರ್ಯವು ಸಮರ್ಪಕ ಹಾಗೂ ಶಾಂತಿಯುತವಾಗಿ ನಡೆಯಬೇಕೆಂಬ ಉದ್ದೇಶದಿಂದ ದಿನಾಂಕ 12-1-2012 ರಂದು ಮಧ್ಯರಾತ್ರಿಯಿಂದ ದಿನಾಂಕ 13-1-2012 ರಂದು ರಾತ್ರಿ 10.00 ಗಂಟೆಯವರೆಗೆ ಮಂಡ್ಯ ಜಿಲ್ಲೇ ನಾಗಮಂಗಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ  ಎಲ್ಲಾ ರೀತಿಯ ಮದ್ಯದ ಅಂಗಡಿ/ಬಾರ್‌ಗಳನ್ನು ಮುಚ್ಚಲು (ಬಂದು ಮಾಡಲು) ಹಾಗೂ ಈ ಅವಧಿಯಲ್ಲಿ ಮದ್ಯಮಾರಾಟ ಸಾಗಾಣಿಕೆ ಮತ್ತು ಶೇಖರಣೆಯನ್ನು ಮಾಡುವುದನ್ನು ನಿಷೇಧಿಸಿ ಈ ದಿನಗಳನ್ನು ಪಾನನಿರೋಧ ದಿನವೆಂದು ಘೋಷಿಸಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮದ್ಯದ ಅಂಗಡಿ, ಹೋಟೆಲ್ ಬಾರ್ ರೆಸ್ಟೋರೆಂಟ್‌ಗಳು ಇತರೆ ಮದ್ಯಮಾರಾಟ ಸರಬರಾಜಿನಲ್ಲಿ ತೊಡಗಿರುವ ಇತರೆ ಸಂಸ್ಥೆಗಳು ಮದ್ಯ ಮಾದಕ ವಸ್ತುಗಳನ್ನು ಯಾರಿಗೆ ಆಗಲಿ ಮಾರಾಟ ಮಾಡುವಂತಿಲ್ಲ. ಪಾನನಿರೋಧ ದಿನವೆಂದು ಘೋಷಿಸಿರುವ ಅವಧಿಯಲ್ಲಿ ಅಬಕಾರಿ ಪರವಾನಗಿದಾರರು ಯಾವುದೇ ರೀತಿಯ ಪರಿಹಾರಕ್ಕೆ ಅರ್ಹರಲ್ಲ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಅಬಕಾರಿ ನಿಯಮಾವಳಿ ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು  ಆದೇಶದಲ್ಲಿ ತಿಳಿಸಿದ್ದಾರೆ.

ಬೆಳೆ ಇಂದೀಕರಣಕ್ಕೆ ಅಲ್ಪಾವಧಿ-ಟೆಂಡರ್ ಆಹ್ವಾನ

ಮಂಡ್ಯ ಜ9 (ಕರ್ನಾಟಕ ವಾರ್ತೆ):- ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳಲ್ಲಿನ ಭೂಮಿ ವ್ಯವಸ್ಥೆಯಲ್ಲಿ 2011-12ನೇ ಸಾಲಿನ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಬೆಳೆ ಇಂದೀಕರಣ ಕಾರ್ಯವನ್ನು ಮಾಡಿಕೊಡಲು ನೋಂದಾವಣೆಯಾಗಿರುವ ಅರ್ಹ ಸಂಸ್ಥೆಗಳಿಂದ ಮಂಡ್ಯ ಉಪವಿಭಾಗ (ಮಂಡ್ಯ, ಮದ್ದೂರು ಮತ್ತು ಮಳವಳ್ಳಿ) ಮತ್ತು ಪಾಂಡವಪುರ ಉಪವಿಭಾಗಗಳಿಗೆ (ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲ) ದರಪಟ್ಟಿಯನ್ನು ಟೆಂಡರ್ ಮೂಲಕ ಆಹ್ವಾನಿಸಲಾಗಿದೆ. ಜನವರಿ 13 ರಿಂದ 17 ರವರೆಗೆ ಟೆಂಡರ್ ಫಾರಂ ವಿತರಣೆ ಮಾಡಲಾಗುತ್ತಿದ್ದು, ಭರ್ತಿ ಮಾಡಿದ ಫಾರಂಗಳನ್ನು ಜನವರಿ 20 ರಂದು ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು. ಜನವರಿ 21 ರಂದು ಬೆಳಿಗ್ಗೆ 11 ಗಂಟೆಗೆ ಟೆಕ್ನಿಕಲ್ ಬಿಡ್ ಪರಿಶೀಲನೆ ಹಾಗೂ ವಾಣಿಜ್ಯ ಬಿಡ್ ಪರಿಶೀಲನೆ ಮಾಡಲಾಗುತ್ತದೆ. ವಾಣಿಜ್ಯ ಬಿಡ್ ಮತ್ತು ಟೆಕ್ನಿಕಲ್ ಬಿಡ್ ಇದ್ದು, ಟೆಕ್ನಿಕಲ್ ಬಿಡ್‌ನಲ್ಲಿ ಉತ್ತೀರ್ಣವಾದ ಸಂಸ್ಥೆಗಳ ವಾಣಿಜ್ಯ ಬಿಡ್ ಅನ್ನು ಮಾತ್ರ ತೆರೆಯಲಾಗುವುದು. ಕನಿಷ್ಠ 5 ವರ್ಷಗಳ (ಮಂಡ್ಯ ಜಿಲ್ಲೆಯಲ್ಲಿ ಈ ಮೊದಲು ಬೆಳೆ ಇಂದೀಕರಣ ಮಾಡಿದ ಸಂಸ್ಥೆಗಳಿಗೆ ಆದ್ಯತೆಯನ್ನು ಕೊಡಲಾಗುವುದು) ಬೆಳೆ ಇಂದೀಕರಣ ಮಾಡಿದ ಅನುಭವವನ್ನು ಹೊಂದಿರುವ ಸಂಸ್ಥೆಗಳು ಇಎಂಡಿ ರೂ. 50,000/- ಗಳನ್ನು ಜಿಲ್ಲಾಧಿಕಾರಿಗಳು, ಮಂಡ್ಯ ಇವರ ಹೆಸರಿನಲ್ಲಿ ಸಲ್ಲಿಸುವುದು ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ತಿಳಿಸಿರುತ್ತಾರೆ.

ಸಾರ್ವಜನಿಕರಿಗೆ ತಿಳುವಳಿಕೆ

ದಾವಣಗೆರೆ, ಜ.09- ದಾ-ಹ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿ ಮತ್ತು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಗೊಂಡಿರುವ ದಾವಣಗೆರೆ ತಾಲ್ಲೂಕು ಆವರಗೆರೆ ಗ್ರಾಮ ರಿಸನಂ: 301/1 ರಿಂದ 5 (2ಎ-15ಗು), ಬಸಾಪುರ ಗ್ರಾಮದ ರಿಸನಂ: 93, ಯರಗುಂಟೆ ಗ್ರಾಮದ ರಿಸನಂ: 16/ಪಿ, (13ಎ-02ಗು), ಪಾಮೇನಹಳ್ಳಿ ಗ್ರಾಮದ ರಿಸನಂ: 49(2ಎ-00ಗುಂ) ಮತ್ತು ರಿಸನಂ: 57 (1ಎ-29ಗುಂ) ಖಾಸಗಿ ಜಮೀನುಗಳಲ್ಲಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆಯೇ ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ-1961, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ-1987 ರ ಸೆಕ್ಷನ್-32 ಮತ್ತು ಸರ್ಕಾರದಿಂದ ಅಂತಿಮ ಅನುಮೋದನೆಯಾಗಿರುವ ದಾ-ಹ ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನಾ ಪ್ರದೇಶದ ಮಹಾಯೋಜನೆ (ಪ-1) ರ ವಲಯ ನಿಯಮಾವಳಿ ಹಾಗೂ ಭೂ ಉಪಯೋಗಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ರೆವಿನ್ಯೂ ನಿವೇಶನಗಳನ್ನು ರಚಿಸುತ್ತಿರುವುದು ಕಂಡು ಬಂದಿರುತ್ತದೆ.

            ಆದ್ದರಿಂದ ಸದರಿ ಅನಧಿಕೃತ ವಿನ್ಯಾಸದಲ್ಲಿನ ನಿವೇಶನಗಳನ್ನು ಖಾಸಗಿ ಜಮೀನುಗಳ ಮಾಲೀಕರ ಆಮಿಷಗಳಿಗೆ ಒಳಗಾಗಿ ಖರೀದಿಸದಿರಲು ಈ ಮೂಲಕ ಸಾರ್ವಜನಿಕರಿಗೆ ಈ ಪ್ರಕಟಣೆ ಮೂಲಕ ಎಚ್ಚರಿಸಲಾಗಿದೆ. ಇದನ್ನು ಮೀರಿ ನಿವೇಶನಗಳನ್ನು ಖರೀದಿಸಿದಲ್ಲಿ ಪ್ರಾಧಿಕಾರವು ಜವಾಬ್ದಾರಿಯಾಗುವುದಿಲ್ಲ ನಿಯಮಗಳನ್ನು ಉಲ್ಲಂಘಿಸಿ ರಚಿಸಿರುವ ಅನಧಿಕೃತ ವಿನ್ಯಾಸಗಳನ್ನು ಯಾವುದೇ ಮುನ್ಸೂಚನೆ ನೀಡದೆ ಪ್ರಾಧಿಕಾರದಿಂದ ತೆರವುಗೊಳಿಸಿ ಮತ್ತು ಸಂಬಂಧಿಸಿದ ಜಮೀನಿನ ಮಾಲೀಕರುಗಳ ಮೇಲೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು/ವಿದ್ಯಾರ್ಥಿಗಳು/ಸಾಹಿತಿ/ ಕಲಾವಿದರು/ಲೇಖಕರು ಮತ್ತು ಆಸಕ್ತರ ಗಮನಕ್ಕೆ

ದಾವಣಗೆರೆ, ಜ.09- ದಾವಣಗೆರೆ ಜಿಲ್ಲಾ ಉತ್ಸವವನ್ನು 2012 ಫೆಬ್ರವರಿ 11 ರಿಂದ 13ರವರೆವಿಗೆ ನಡೆಸಲು ತೀರ್ಮಾನಿಸಲಾಗಿದ್ದು ಅದರ ಅಂಗವಾಗಿ ಜಿಲ್ಲೆಯ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ವಾಣಿಜ್ಯ ವ್ಯವಹಾರ, ಸಾಹಿತ್ಯ, ಕೃಷಿ, ಕೈಗಾರಿಕೆ ಮತ್ತು ಪ್ರಚಲಿತ ವಿಷಯಗಳ ಕುರಿತು ಸ್ಮರಣ ಸಂಚಿಕೆಯನ್ನು ಹೊರತರಲು ಉದ್ದೇಶಿಸಲಾಗಿದೆ.

1. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಲೇಖಕರುಗಳಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಲೇಖಕರು ಜಿಲ್ಲೆಗೆ ಸಂಬಂಧಿಸಿದ ವಿಷಯಗಳ ಕುರಿತು ತಾವು ಬರೆದಿರುವ ಸ್ವತಂತ್ರ ಲೇಖನಗಳನ್ನು ಸ್ಮರಣ ಸಂಚಿಕೆಗೆ ಕಳುಹಿಸಬಹುದು. ಲೇಖನವು ಡಿ.ಟಿ.ಪಿ. ಆದ ನಂತರ ಎ4 ಅಳತೆಯಲ್ಲಿ 3 ಪುಟಗಳಷ್ಠಿರಬೇಕು.

2. ಅಂತೆಯೇ ಜಿಲ್ಲೆಯ ವಿಷಯಗಳನ್ನೊಳಗೊಂಡ ಅಪರೂಪದ ಛಾಯಾಚಿತ್ರಗಳು/ಚಿತ್ರ ಕೃತಿಗಳನ್ನು ಸಹ ಕಲಾವಿದರು ಅಥವಾ ಸಂಗ್ರಹಕಾರರು/ ಛಾಯಾಗ್ರಾಹಕರುಗಳಿಂದ ಸ್ಮರಣ ಸಂಚಿಕೆಗೆ ಕಳುಹಿಸಬಹುದು.

3. ಆಸಕ್ತ ಬರಹಗಾರರು/ ಛಾಯಾಗ್ರಾಹಕರು/ ಕಲಾವಿದರು ತಮ್ಮ ಲೇಖನಗಳನ್ನು ಮತ್ತು ಚಿತ್ರಗಳನ್ನು ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಮುಖ್ಯಸ್ಥರು, ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ-4 (ಮೊಬೈಲ್ ನಂ: 9449974058) ಇವರಿಗೆ ದಿ: 15.01.2012 ರೊಳಗೆ ಹಾರ್ಡ್ ಮತ್ತು ಸಾಪ್ಟ್ ಕಾಫಿಗಳನ್ನು ಕಳುಹಿಸಿಕೊಡಲು ಕೋರಿದೆ.

4. ಸ್ಮರಣ ಸಂಚಿಕೆಗೆ ಆಯ್ಕೆಯಾಗುವ ಲೇಖನ/ ಚಿತ್ರಗಳಿಗೆ ಸೂಕ್ತ ಗೌರವ ಸಂಭಾವನೆ ನೀಡಲಾಗುವುದು. ಎಂದು ಸ್ಮರಣ ಸಚಿಚಿಕೆ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಡಾ.ಕಾ. ರಾಮೇಶ್ವರಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಧನೆ ಗೈದ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ

            ದಾವಣಗೆರೆ, ಜ.09- 2011-12ನೇ ಸಾಲಿನಲ್ಲಿ (01-01-2011 ರಿಂದ 31-12-2011ರ) ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ, ಅಸಾಧರಣ ಸಾಧನೆ ಗೈದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸನ್ಮಾನಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಕ್ರೀಡಾಪಟುಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜ.17 ರೊಳಗೆ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಇಲ್ಲಿಗೆ ಸಲ್ಲಿಸುವಂತೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ: 17-1-2012 ರಂದು ತ್ರೈಮಾಸಿಕ ಕೆ.ಡಿ.ಪಿ.ಸಭೆ

ಗದಗ(ಕರ್ನಾಟಕ ವಾರ್ತೆ) ಜನೆವರಿ 9: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಸಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 17-1-2012 ರಂದು ಮಧ್ಯಾಹ್ನ 2-00 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್‍ಯಕ್ರಮಗಳ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲ್ಯ ವಿವಾಹ ನಿಷೇದಾಧಿಕಾರಿಗಳ ನೇಮಕ

ಗದಗ(ಕರ್ನಾಟಕ ವಾರ್ತೆ) ಜನೆವರಿ 9:  ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ದಿನಾಂಕ 16-11-2011 ರ ಅಧಿಸೂಚನೆಯಂತೆ ಹೆಚ್ಚುವರಿಯಾಗಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಗಳನ್ನಾಗಿ ಗುರುತಿಸಿ ಆದೇಶ ಸ್ವೀಕೃತವಾಗಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳು, ಬಾಲ ನ್ಯಾಯ ಪೊಲೀಸ ಘಟಕ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿ, ಜಿ. ಪಂ. ಮುಖ್ಯ ಕಾರ್‍ಯನಿರ್ವಹಣಾಧಿಕಾರಿಗಳೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಐ.ಟಿ.ಡಿ.ಪಿ. ಪ್ರೊಜೆಕ್ಟ್ ಡೆವಲಪ್ ಮೆಂಟ್ ಆಫೀಸರ್ ಟ್ರಾಯಬಲ್ ವೆಲಫೇರ,   ಐ.ಸಿ.ಪಿ. ಎಸ್. ಯೋಜನೆಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು   ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನಾಗಿ ನೇಮಕ ಮಾಡಿದೆ.

       ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತಿಯ ಕಾರ್‍ಯನಿರ್ವಾಹಕ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳೂ, ಸರ್ಕಲ್ ಇನ್ಸಪೆಕ್ಟರ್ , ಮಹಿಳೆಯ ಸಂರಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಹಿಂದುಳಿದ  ವರ್ಗಗಳ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿಗಳನ್ನು  ಬಾಲ್ಯ ವಿವಾಹ ನಿಷೇಧಾದಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

        ನಗರಸಭೆ/ಮುನ್ಸಿಪಾಲಿಟಿ, ಗ್ರಾಮ ಪಂಚಾಯತ್ ಹಾಗೂ ಗ್ರಾಮ ಮಟ್ಟದಲ್ಲಿ ಪಂಚಾಯತ್ ಡೆವಲಪಮೆಂಟ್ ಆಫೀಸರನ್ನು, ಪೊಲೀಸ ಸಬ್ ಇನ್ಸಪೆಕ್ಟರ್, ಶಾಲಾ ಮುಖ್ಯೋಪಾಧ್ಯಾಯರು, ಕಂದಾಯ ಇಲಾಖೆ ರೆವಿನ್ಯೂ ಇನ್ಸಪೆಕ್ಟರ್, ಹೆಲ್ತ್  ಇನ್ಸಪೆಕ್ಟರ್, ಹಿರಿಯ ಕಾರ್ಮಿಕ ನಿರೀಕ್ಷಣಾಧಿಕಾರಿಗಳನ್ನು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳನ್ನಾಗಿ  ಗುರುತಿಸಲಾಗಿದೆ.

ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ

ಗದಗ(ಕರ್ನಾಟಕ ವಾರ್ತೆ) ಜನೆವರಿ 9:  ಕರ್ನಾಟಕ ಜಾನಪದ ಅಕಾಡೆಮಿಯು 2011 ನೇ ಸಾಲಿನಲ್ಲಿ ( 2011 ರ ಜನೆವರಿ 1 ರಿಂದ 2011 ರ ಡಿಸೆಂಬರ್ 31 ರವರೆಗೆ) ಪ್ರಥಮವಾಗಿ ಮುದ್ರಣಗೊಂಡಿರುವ ‘ ಜಾನಪದ ಪದ್ಯ’ , ‘ ಜಾನಪದ ಗದ್ಯ’,   ‘ಜಾನಪದ ವಿಚಾರ ವಿಮರ್ಶೆ ಸಂಶೋಧನೆ’, ‘ಜಾನಪದ ಸಂಕೀರ್ಣ’, ಪ್ರಕಾರದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ.

          ಲೇಖಕರು/ ಪ್ರಕಾಶಕರು/ಸಂಪಾದಕರು ತಲಾ ಪ್ರಕಾರದ 4 ಪ್ರತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್ ,ಕರ್ನಾಟಕ ಜಾನಪದ ಅಕಾಡೆಮಿ, 2 ನೇ ಮಹಡಿ , ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560 002, ಇವರಿಗೆ ದಿನಾಂಕ 10-2-2012 ರೊಳಗೆ ತಲುಪುವಂತೆ ಕಳುಹಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ದೂರವಾಣಿ ಸಂಖ್ಯೆ 080-22215509 ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿಗೆ ಅರ್ಜಿ ಆಹ್ಹಾನ

ಗದಗ(ಕರ್ನಾಟಕ ವಾರ್ತೆ) ಜನವರಿ 9; ಕೆನರಾ ಬ್ಯಾಂಕ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟನಿಂದ ಪ್ರಾಯೋಜಿತ- ದೇಶಪಾಂಡೆ ರುಡ್ಸೆಸೆಟ್ ಸಂಸ್ಥೆ (ರಿ), ಹಳಿಯಾಳ ಇವರು ಫೆಬ್ರುವರಿ ತಿಂಗಳಲ್ಲಿ 30 ದಿನಗಳ ನಾಲ್ಕು ಚಕ್ರ ವಾಹನ ರಿಪೇರಿ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಯು ಉ.ಕ.ಜಿಲ್ಲೆಯ ಹಳಿಯಾಳದ ದೇಶಪಾಂಡೆ ರುಡ್ಸೆಸೆಟ್ ಸಂಸ್ಥೆಯಲ್ಲಿ ಜರುಗಲಿದೆ. ತರಬೇತಿಯು ಊಟ, ವಸತಿಯೊಂದಿಗೆ, ಸಂಪೂರ್ಣ ಉಚಿತವಾಗಿರುತ್ತದೆ. 18 ರಿಂದ 45 ವರ್ಷದೊಳಗಿನ ಕರ್ನಾಟಕದ ಯಾವುದೇ ಪ್ರದೇಶದಿಂದ ಆಸಕ್ತ ಯುವಕರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.  ನೂರಿತ ತಾಂತ್ರಿಕ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವದು. ಅರ್ಜಿ ಸಲ್ಲಿಸಲು ಇಚ್ಚಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ, ಪಡೆಯಲಚ್ಚಿಸುವರು ತರಬೇತಿ, ವಿದ್ಯಾರ್ಹತೆ, ತರಬೇತಿಯ  ವಿಷಯದಲ್ಲಿ ಅನುಭವ, ಮುಂತಾದ ವಿವರಗಳನ್ನೊಳಗೊಂಡ ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಬರೆದು ಕೂಡಲೇ ನಿರ್ದೇಶಕರು, ದೇಶಪಾಂಡೆ ರುಡ್‌ಸೆಟ್ ಸಂಸ್ಥೆ, ದಾಂಡೇಲಿ ರಸ್ತೆ, ಹಳಿಯಾಳ (ಉ.ಕ) ಇವರಿಗೆ ದಿ ; 25-01-2012 ರ ಒಳಗೆ ಸಂಸ್ಥೆಗೆ ವೈಯಕ್ತಿಕವಾಗಿ ಬಂದು ಅಥವಾ ದೂರವಾಣಿ ಮೂಲಕ ಅವಶ್ಯಕ ಮಾಹಿತಿ ನೀಡಿ  ನೊಂದಣೆ ಮಾಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಸ್ಥೆಗೆ ಬರುವಾಗ ತರಬೇಕಾದ ದಾಖಲಾತಿಗಳ ಬಗೆಗೆ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807,9482188780/9483485489 ನ್ನು  ಕಛೇರಿಯ ವೇಳೆಯಲ್ಲಿ ಸಂಪರ್ಕಿಸಲು  ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿ ವಿಜ್ಞಾನಿ  ನೇರ ಸಂವಾದ ಕಾಂiiಕ್ರಮ

ಗದಗ(ಕರ್ನಾಟಕ ವಾರ್ತೆ)  ಜನವರಿ 9: ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ  ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ನೆರವಿನಲ್ಲಿ ಹಾಗೂ  ಡಿ.ಎಸ್.ಇ.ಆರ್.ಟಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗದಗ ಜಿಲ್ಲಾ ಘಟಕದ ಆಶ್ರಯದಲ್ಲಿ ಕಳೆದೆರಡು ವರ್ಷಗಳಿಂದ ಹಮ್ಮಿಕೊಂಡು ಬಂದಂತಹ ಜಿಲ್ಲಾ ಮಟ್ಟದ ವಿದ್ಯಾರ್ಥಿ ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮವನ್ನು ದಿನಾಂಕ 10 ಹಾಗೂ 11 ಜನೇವರಿ 2012 ರಂದು ಗದುಗಿನ ಜಗದ್ಗುರು ಪಂಚಾಚಾರ್‍ಯ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ನಮ್ಮ ದೇಶದ ಪ್ರಖ್ಯಾತ ವಿಜ್ಞಾನಿಗಳು ಹಾಗೂ ಪ್ರಧಾನ ಮಂತ್ರಿಗಳ  ವೈಜ್ಞಾನಿಕ  ಸಲಹಾ ಮಂಡಳಿಯ ಅಧ್ಯಕ್ಷರಾದ ಪ್ರೊ. ಸಿ.ಎನ್.ಆರ್.ರಾವ್ ರೂಪಿಸಿದ್ದು, ಇದು ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡಲು ಪ್ರೇರಣೆ ಮತ್ತು ಮಾರ್ಗದರ್ಶನವನ್ನು ನೀಡುವುದು.

           ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಸಿ. ಪಾಟೀಲರು ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಬಸವರಾಜೇಶ್ವರಿ ಚ. ಪಾಟೀಲ, ಜಿಲ್ಲಾಧಿಕಾರಿಗಳಾದ ಶ್ರೀ ಎಸ್. ಶಂಕರನಾರಾಯಣ  ಮತ್ತು ಗದಗ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳಾದ ಶ್ರೀ ರವಿಕುಮಾರ ನಾಯಕ ಅವರು ಆಗಮಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಗದಗ ಶಾಸಕರಾದ ಶ್ರೀ  ಶ್ರೀಶೈಲಪ್ಪ ಬಿದರೂರ ವಹಿಸಲಿರುವರು.

            ಎರಡು  ದಿನಗಳ ಕಾಲ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ 36 ಫ್ರೌಢಶಾಲೆಗಳ ಹಾಗೂ 10 ಪದವಿ ಪೂರ್ವ ಕಾಲೇಜುಗಳ ಸುಮಾರು 300 ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ 4 ವಿಜ್ಞಾನಿಗಳು ಪ್ರಚಲಿತ ವಿಜ್ಞಾನ ವಿಷಯಗಳ ಕುರಿತು ವಿವರಗಳನ್ನು ಮಂಡಿಸುತ್ತಾರೆ. ನಂತರ ವಿದ್ಯಾರ್ಥಿಗಳು ಆಯಾ ವಿಷಯಗಳನ್ನು ಆಧರಿಸಿ ಆ ವಿಜ್ಞಾನಿಗಳೊಂದಿಗೆ ನೇರ ಸಂವಾದದಲ್ಲಿ ಭಾಗವಹಿಸಿ ಪ್ರಶ್ನೆಗಳನ್ನು ಕೇಳಿ ಸೂಕ್ತ ಉತ್ತರ ಪಡೆಯುತ್ತಾರೆ. ಖ್ಯಾತ ವಿಜ್ಞಾನಿಗಳು ಪ್ರೊ. ಕೃಷ್ಣಮೂರ್ತಿ, ಪ್ರೊ ಎಂ.ಆರ್.ಎನ್. ಮೂರ್ತಿ ಡಾ.ವಿ ರಘೋತ್ತಮ ಮತ್ತು ಡಾ ವಿನೋದ ಲಕ್ಕೆಪ್ಪನ್ ಸಂವಾದದಲ್ಲಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಸವದತ್ತಿಯ ರಾಜು ಬದಾಮಿಯವರಿಂದ   ಪವಾಡ ರಹಸ್ಯ ಬಯಲು ಕಾರ್ಯಕ್ರಮ ಜರುಗಲಿದೆ.

           ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಉದಯಕುಮಾರ ನಾಯಕ, ಪದವಿ ಪೂರ್ವ ಶಿಕ್ಷಣ  ಉಪನಿರ್ದೇಶಕರಾದ ಶ್ರೀ ಬಿ.ಎಸ್. ಗೌಡರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶ್ರೀ ಎಂ.ಎಫ್. ನಾಯ್ಕರ ಹಾಗೂ ಆರ್.ಎಸ್. ಪಾಟೀಲ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಚಾಲಕರಾದ ಪ್ರಾ. ಎಸ್.ವ್ಹಿ. ಸಂಕನೂರ ಹಾಗೂ ಸಹ ಸಂಚಾಲಕರುಗಳಾದ ಪ್ರೊ. ವಿ.ವ್ಹಿ ಹಿರೇಮಠ ಮತ್ತು ಶ್ರೀ ಎನ್.ವ್ಹಿ. ಜೋಶಿ ತಿಳಿಸಿದ್ದಾರೆ.

ಜವರಿ 11 ರಂದು ವಿದ್ಯುತ್ ನಿಲುಗಡೆ

ಗದಗ(ಕರ್ನಾಟಕ ವಾರ್ತೆ) ಜನವರಿ 9 : 110 ಕೆವ್ಹಿ ಮುಂಡರಗಿ/ಡಂಬಳ ವಿದ್ಯುತ್ ಕೇಂದ್ರಗಳಲ್ಲಿ  ದಿನಾಂಕ: 11-01-2012 ರಂದು ಮುಂಜಾನೆ 10.00 ಗಂಟೆಯಿಂದ  ಸಾಯಂಕಾಲ 5.00 ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವೇಳೆಯಲ್ಲಿ  110 ಕೆವ್ಹಿ ಮುಂಡರಗಿ, ಡಂಬಳ, ಉಪ್ಪಿನ ಬೆಟಗೇರಾ, 110 ಕೆವ್ಹಿ ಗಂಗಾಪೂರ ಹಾಗೂ 33 ಕೆವ್ಹಿ ಶಿಂಗಟಾಲೂರ ದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳ 33 ಕೆವ್ಹಿ ಹಾಗೂ 11 ಕೆವ್ಹಿ ವಿತರಣಾ ಮಾರ್ಗಗಳಲ್ಲಿ ವಿದ್ಯತ್ ವ್ಯತ್ಯಯವಾಗಲಿದೆ. ಕಾರಣ ಸಾರ್ವಜನಿಕರು ಸದರಿ ಪ್ರಕಟಣೆ ಗಮನಿಸಿ ಕಂಪನಿಯೊಂದಿಗೆ ಸಹಕರಿಸಬೆಕೆಂದು  ಕಾರ್ಯ ಮತ್ತು ಪಾಲನೆ ವಿಭಾಗ ಹು.ವಿ.ಸ.ಕಂ.ನಿ ಗದಗ ಕಾರ್ಯನಿವಾಹಕ ಇಂಜನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

18 ವರ್ಷ ವಯಸ್ಸಿನ ಮತದಾರರ ನೋಂದಣಿಗೆ ವಿಶೇಷ ಆಂದೋಲನ

ಚಾಮರಾಜನಗರ ಜನವರಿ 09 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೇ ಇರುವ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವ ಉದ್ದೇಶದಿಂದ ಜನವರಿ 15 ರವರೆಗೆ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು 18 ವರ್ಷ ವಯಸ್ಸಿನ ಯುವ ಮತದಾರರು ನಮೂನೆ 6 ರಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ, ವಯಸ್ಸು, ವಾಸಸ್ಥಳ, ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಆಯಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿ, ಉಪವಿಭಾಗಾಧಿಕಾರಿ ಕೊಳ್ಳೇಗಾಲ, ತಹಶೀಲ್ದಾರ್, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಆರ್. ಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನವರಿ 11 ರಂದು ಜಿ.ಪಂ. ಕೆ.ಡಿ.ಪಿ ಸಭೆ

ಚಾಮರಾಜನಗರ ಜನವರಿ 09 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್‌ನ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಅಧ್ಯಕ್ಷರಾದ ಕೆ. ರಾಜೇಶ್ವರಿ ಅವರ ಅಧ್ಯಕ್ಷತೆಯಲ್ಲಿ ಜನವರಿ 11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಜಿ.ಪಂ. ಕೆ.ಡಿ.ಪಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂಚಾಯತ್ ಉಪ ಚುನಾವಣೆ: ಮತದಾನಕ್ಕೆ ಅನುಮತಿ ನೀಡಲು ಸೂಚನೆ

ಚಾಮರಾಜನಗರ ಜನವರಿ 09 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ತಾಲ್ಲೂಕಿನ ಹನೂರು ಪಟ್ಟಣ ಪಂಚಾಯಿತಿಯ 8ನೇ ವಾರ್ಡ್‌ನ ಸದಸ್ಯ ಸ್ಥಾನಕ್ಕೆ ಜನವರಿ 10 ರಂದು ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ವಾರ್ಡ್ ವ್ಯಾಪ್ತಿಗೆ ಬರುವ ಎಲ್ಲ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು ಮತದಾನದ ಹಕ್ಕು ಹೊಂದಿರುವ ಕಾರ್ಮಿಕರಿಗೆ ಮತದಾನ ಮಾಡಲು   ಅನುವು ಮಾಡಿಕೊಡುವಂತೆ ಕಂಪನಿ, ಸಂಸ್ಥೆ ಮಾಲೀಕರು ಮತ್ತು  ನಿಯೋಜಕರಿಗೆ ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ವೈನಾಡು-ಕೋಝೀಕೋಡ್ ರಸ್ತೆ ಸಂಚಾರ ತಾತ್ಕಾಲಿಕ ನಿಷೇಧ

ಚಾಮರಾಜನಗರ ಜನವರಿ 09 (ಕರ್ನಾಟಕ ವಾರ್ತೆ):- ಜಿಲ್ಲೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 212 ರಲ್ಲಿನ ವೈನಾಡು -ಕೋಝೀಕೋಡ್ ರಸ್ತೆಯನ್ನು  ತುರ್ತು ಕೆಲಸಗಳ ಕಾಮಗಾರಿ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಯವರೆಗೆ ಮುಚ್ಚಲಾಗಿದೆ. ಈ ರಸ್ತೆಯ  ಬದಲು ಇತರ 5  ಮಾರ್ಗಗಳಲ್ಲಿ ಸಂಚರಿಸುವಂತೆ ಆದೇಶಿಸಲಾಗಿದೆ. ವೈನಾಡು-ಕೋಝೀಕೋಡ್ ರಸ್ತೆಯ ಬಹುತೇಕ ಭಾಗವು ಮಳೆ ಹಾಗೂ ಅಧಿಕ ವಾಹನ ಸಂಚಾರದಿಂದ ಹದಗಟ್ಟಿದೆ. ಈ ಕಾರಣದಿಂದ  ತುರ್ತು ಕಾಮಗಾರಿ ಕೈಗೊಳ್ಳಲು ಜನವರಿ 2 ರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಕೋಝೀಕೋಡ್ ಜಿಲ್ಲಾ ಕಲೆಕ್ಟ್ರ್‌ರ್ ಪಿ.ಬಿ.ಸಲೀಂ ಆದೇಶ ಹೊರಡಿಸಿದ್ದಾರೆ. ಸದರಿ ಮಾರ್ಗದ ಬದಲು ಮೈಸೂರು-ಗೋಣಿಕೊಪ್ಪ-ತಲಚೇರಿ, ಬಾವಲಿ-ಮಾನಂದವಾಡಿ-ತಲಚೇರಿ, ಕಲ್ಪೆಟ್ಟ-ನಿಲಂಬೂರ್, ಗುಂಡ್ಲುಪೇಟೆ-ಪಾಲಕ್ಕಾಡ್, ಕಲ್ಪೆಟ್ಟ-ವೈತಿರಿ-ತರಿವಣ-ಕುಟ್ಟಿಯಾಡಿ ಮಾರ್ಗದಲ್ಲಿ ಸಂಚರಿಸುವಂತೆ ಕೋಝೀಕೋಡ್ ಜಿಲ್ಲಾ ಕಲ್ಟ್ರೆಕರ್ ಆದೇಶದಲ್ಲಿ  ತಿಳಿಸಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಜನವರಿ 16 ರಂದು ಬಿಳಿಗಿರಿರಂಗನಬೆಟ್ಟದಲ್ಲಿ ಸಂಕ್ರಾಂತಿ ರಥೋತ್ಸವ

ಚಾಮರಾಜನಗರ ಜನವರಿ 09 (ಕರ್ನಾಟಕ ವಾರ್ತೆ):- ಯಳಂದೂರು ತಾಲ್ಲೂಕಿನ ಪುರಾಣ ಪ್ರಸಿದ್ದ ಯಾತ್ರ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದಲ್ಲಿ ಜನವರಿ 13 ರಿಂದ 18 ರವರೆಗೆ ಚಿಕ್ಕಜಾತ್ರಾ ಮಹೋತ್ಸವ ಜರುಗಲಿದೆ. ಜನವರಿ 16 ರಂದು ಮಧ್ಯಾಹ್ನ 12-40 ರಿಂದ 12-50 ರೊಳಗೆ ರಥಾರೋಹಣ  ಮಹೋತ್ಸವ ಬಿಳಿಗಿರಿರಂಗನಾಥಸ್ವಾಮಿ ಸಂಕ್ರಾಂತಿ ರಥೋತ್ಸವ  ನೆರವೇರಲಿದೆ. ಜನವರಿ 13 ರಂದು ರಾತ್ರಿ ಕೊಠಾರೋತ್ಸವ ನಂತರ ಅಂಕುರಾರ್ಪಣ,  14 ರಂದು ಅಭಿಷೇಕ ಧ್ವಜಾರೋಹಣ ರಾತ್ರಿಕೊಠಾರೋತ್ಸವ,  15 ರಂದು ರಾತ್ರಿ 7-30 ಗಂಟೆಗೆ ಸ್ವರ್ಗದ ಬಾಗಿಲು ತೆರೆಯುವುದು ನಂತರ ಕೊಠಾಕೋತ್ಸವ ನಡೆಯಲಿದೆ. 17 ರಂದು ಗರುಡೋತ್ಸವ, ರಾತ್ರಿ ರಂಗ ಮಂಟಪೋತ್ಸವ ಶಯನೋತ್ಸವ, 18 ರಂದು ಸಂಧಾನಸೇವೆ, ಅವಭೃತಮಂಗಳಸ್ನಾನ, ಧ್ವಜಾಅವರೋಹಣ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ ವಿಶೇಷ ಆಹ್ವಾನಿತರಾಗಿ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು   ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆಗೆ ಆಹ್ವಾನ

ಚಾಮರಾಜನಗರ ಜನವರಿ 09 (ಕರ್ನಾಟಕ ವಾರ್ತೆ):- ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ  ಯುವ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆಯನ್ನು ಜನವರಿ 25 ರಂದು ಆಯೋಜಿಸಲಾಗಿದೆ. ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ವಸ್ತು ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ಮೂವರು ಮಹಿಳೆಯರಿಗೆ ನಗದು ಬಹುಮಾನ ನೀಡಲಾಗುತ್ತದೆ. ಆಸಕ್ತರು ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ ಕಚೇರಿ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಇಲ್ಲವೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಯನ್ನು ಸದರಿ ಕಚೇರಿಗಳಿಂದ ಪಡೆಯುವಂತೆ ಜಿಲ್ಲಾಧಿಕಾರಿ ಕೆ.ಆರ್. ಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನವರಿ 10 ರಂದು ಶಿಕ್ಷಣ ಅದಾಲತ್: ಕಡತ ವಿಲೇವಾರಿ

ಚಾಮರಾಜನಗರ ಜನವರಿ 09 (ಕರ್ನಾಟಕ ವಾರ್ತೆ):- ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು   ಜನವರಿ 10 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ  ಕಡತ ವಿಲೇವಾರಿ ಹಾಗೂ ಶಿಕ್ಷಣ ಅದಾಲತ್ ನಡೆಸಲಿದ್ದಾರೆ. ಇದೇ ವೇಳೆ ಸಾರ್ವಜನಿಕರಿಂದ ಆಯುಕ್ತರು ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು, ಖಾಸಗಿ ಶಾಲಾ ಆಡಳಿತ ಮಂಡಳಿ, ಸಂಸ್ಥೆಗಳು  ಕುಂದು ಕೊರತೆಗಳಿದ್ದಲ್ಲಿ ಅರ್ಜಿಗಳ ಮೂಲಕ ಆಯುಕ್ತರಿಗೆ ನೀಡಬಹುದಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೆಳ್ಳಶೆಟ್ಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೈಗಾರಿಕೆ ಸಂಬಂಧಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ ಜನವರಿ 09 (ಕರ್ನಾಟಕ ವಾರ್ತೆ):- ಚಾಮರಾಜನಗರ ನಗರಸಭೆಯು ಎಸ್‌ಜೆಎಸ್‌ಆರ್‌ವೈ ಯೋಜನೆಯ ಉಪಘಟಕದ ಕಾರ್ಯಕ್ರಮದಡಿ ಕೈಗಾರಿಕೆಗೆ ಸಂಬಂದಿಸಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲು  ಪಟ್ಟಣ ವ್ಯಾಪ್ತಿಯಲ್ಲಿರುವ ಬಡತನರೇಖೆಗಿಂತ ಕೆಳಗಿರುವ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವೆಲ್ಡಿಂಗ್, ಮೋಟಾರ್ ರೀವೈಂಡಿಂಗ್, ಎಲೆಕ್ಟ್ರಾನಿಕ್‌ಅಸೆಂಬಲ್, ಫ್ಯಾಷನ್ ಡಿಸೈನಿಂಗ್, ಮೊಬೈಲ್ ರಿಪೇರಿ, ಆಹಾರ ಸಂಸ್ಕರಣೆ ತರಬೇತಿಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ನೀಡಲಾಗುವುದು. ಅಭ್ಯರ್ಥಿಗಳು 8 ರಿಂದ 10ನೇ ತರಗತಿ ವ್ಯಾಸಂಗ ಮಾಡಿರಬೇಕು. ಅರ್ಜಿ ಸಲ್ಲಿಕೆ ಜನವರಿ 13 ಕಡೆಯದಿನ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿ ಅಥವಾ ದೂರವಾಣಿ ಸಂಖ್ಯೆ: 8453570950 ಸಂಪರ್ಕಿಸುವಂತೆ ಎಂದು ನಗರಸಭೆ ಪೌರಾಯುಕ್ತರಾದ ವಿ.ಹೆಚ್. ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.