Government of Karnataka

Department of Information

Friday 01/04/2016

ಜಿಲ್ಲಾ ವಾರ್ತೆ 29-01-2016

Date : ಶುಕ್ರವಾರ, ಜನವರಿ 29th, 2016

ಹೂಡಿಕೆದಾರರ ಸಮಾವೇಶ : ವಿಪ್ಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸರ್ವ ಸಿದ್ಧತೆ - ಜಿಲ್ಲಾಧಿಕಾರಿ

ಬೆಂಗಳೂರು:ಜ, 29: ‘ಇನ್ವೆಸ್ಟ್ ಕರ್ನಾಟಕ – 2016’ ಸಮಾವೇಶದಲ್ಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆದಾರರು ಮತ್ತು ಪ್ರವಾಸಿಗರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಯಾವುದೇ ತೆರನಾದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮುಂಜಾಗೃತಾ ಕ್ರಮವಾಗಿ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರವು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪ್ಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರೂ ಆದ ವಿ.ಶಂಕರ್ ಅವರು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಂದು ವಿಪ್ಪತ್ತು ನಿರ್ವಹಣೆ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಾ, ಕಾಲ್ತುಳಿತ, ಅಗ್ನಿ ಅನಾಹುತ, ಬಾಂಬ್ ಬೆದರಿಕೆ, ಅಪಘಾತ ಇತ್ಯಾದಿ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆನ್‍ಸೈಟ್ (ಅರಮನೆ ಆವರಣ) ಮತ್ತು ಆಫ್ ಸೈಟ್ (ಗಣ್ಯ ವ್ಯಕ್ತಿಗಳು ಉಳಿದುಕೊಳ್ಳುವ ವಾಸ್ತವ್ಯಗಳ ಸುತ್ತಮುತ್ತ) ಯೋಜನೆಗಳನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ರೂಪಿಸಲಾಗಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಅವರು ಸೂಚಿಸಿದರು.

ಆನ್‍ಸೈಟ್ ಮತ್ತು ಆಫ್ ಸೈಟ್ ವಿಪ್ಪತ್ತು ನಿರ್ವಹಣಾ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಕಂದಾಯ, ಬೆಂಗಳೂರು ನಗರ ಪೊಲೀಸ್, ಸಂಚಾರ ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿಶಾಮಕ ದಳ, ಬಿ.ಬಿ.ಎಂ.ಪಿ., ಬೆಸ್ಕಾಂ, ಬಿ.ಡಬ್ಲ್ಯೂ.ಎಸ್.ಎಸ್.ಬಿ. ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆಯನ್ನು ನಡೆಸಲಾಗಿದ್ದು, ವಿಪ್ಪತ್ತು ನಿರ್ವಹಣಾ ಪ್ರಾಧಿಕಾರದ ಯೋಜನೆಯನ್ವಯ ಅಧಿಕಾರಿಗಳು ತಮಗೆ ವಹಿಸಲಾಗಿರುವ ಕೆಲಸ ಕಾರ್ಯಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿಭಾಯಿಸುವಂತೆ ಅವರು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮುಖ್ಯ ನೋಡಲ್ ಅಧಿಕಾರಿಯಾಗಿ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಯೂನಿಫೈಡ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಲಿದ್ದು, ವಿಪ್ಪತ್ತು ನಿರ್ವಹಣಾ ಘಟಕದ ಶ್ರೀ ಪ್ರದೀಪ್ ಕೆ.ಕೆ. ಅವರು ತುರ್ತು ಪರಿಸ್ಥಿತಿಯ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಉಳಿದಂತೆ ಬೆಂಗಳೂರು ಕೇಂದ್ರ ವಿಭಾಗದ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್, ಸಂಚಾರಿ ಪಶ್ಚಿಮ ವಿಭಾಗದ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್, ಬಿ.ಬಿ.ಎಂ.ಪಿ.ಯ ಜಂಟಿ ಆಯುಕ್ತರು, ಬೆಂಗಳೂರು ಪಶ್ಚಿಮ ಮುಖ್ಯ ಅಗ್ನಿಶಾಮಕ ಅಧಿಕಾರಿ, ಜಿ.ಪಂ. ಸಿ.ಇ.ಓ., ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಬೆಂಗಳೂರು ನಗರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರು ಮತ್ತು ಬಿ.ಡಬ್ಲ್ಯೂಎಸ್‍ಎಸ್‍ಬಿ ಉಪ ಮುಖ್ಯ ಅಭಿಯಂತರರು ಆನ್‍ಸೈಟ್ ಮತ್ತು ಆಫ್‍ಸೈಟ್ ನೋಡಲ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಎ.ಸಿ.ಪಿ. ಕಂಟ್ರೋಲ್ ರೂಂ. ವತಿಯಿಂದ ವ್ಯವಸ್ಥಿತ ಸಂಪರ್ಕ, ಡಿ.ಸಿ.ಪಿ. ಪಶ್ಚಿಮ ಸಂಚಾರ ಇವರಿಂದ ಸಂಚಾರ ನಿರ್ವಹಣೆ, ಅಗ್ನಿಶಾಮಕ ದಳದವರಿಂದ ಅಗ್ನಿ ನಿಯಂತ್ರಣ ಮತ್ತು ನಿರ್ವಹಣೆ ಬೆಸ್ಕಾಂ ವತಿಯಿಂದ ವಿದ್ಯುತ್ ಉಪಕರಣಗಳ ನಿರ್ವಹಣೆ ಮತ್ತು ನಿರಂತರ ವಿದ್ಯುತ್ ಸರಬರಾಜು, ಆರೋಗ್ಯ ಇಲಾಖೆ ವತಿಯಿಂದ ವೈದ್ಯಕೀಯ ಸಹಾಯ ಮತ್ತು ನಿಗದಿತ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಸಂದರ್ಭ, ಹಾಸಿಗೆಗಳನ್ನು ಕಾಯ್ದಿರಿಸುವಿಕೆ, ವಾರ್ತಾ ಇಲಾಖೆ ವತಿಯಿಂದ ಮಾಹಿತಿ ಕೇಂದ್ರ, ಕೈಗಾರಿಕಾ ಇಲಾಖೆ ವತಿಯಿಂದ ಆಹಾರ, ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವಿಕೆ, ಬಿ.ಬಿ.ಎಂ.ಪಿ. ವತಿಯಿಂದ ಪ್ರಹಾರಿ ತಂಡ ಇತ್ಯಾದಿ ಕರ್ತವ್ಯಗಳನ್ನು ನಿಭಾಯಿಸುವಂತೆ ಅವರು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ತಿಳಿಸಿದರು.

ಸಭೆಯಲ್ಲಿ ವಿಪ್ಪತ್ತು ನಿರ್ವಹಣಾ ಸಮನ್ವಯಾಧಿಕಾರಿ, ಪ್ರದೀಪ್ ಕೆ.ಕೆ. ಅವರು ಉಪಸ್ಥಿತರಿದ್ದರು.