Government of Karnataka

Department of Information

Wednesday 04/11/2015

ಜಿಲ್ಲಾ ವಾರ್ತೆ 31-08-2015

Date : ಸೋಮವಾರ, ಆಗಸ್ತು 31st, 2015

ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ

ಕೊಪ್ಪಳ, ಆ.31(ಕರ್ನಾಟಕ ವಾರ್ತೆ) : ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆ.03 ರಂದು ಬೆಳಿಗ್ಗೆ 09 ಗಂಟೆಗೆ ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.

ಇಂಡೋ-ಎಮ್‍ಐಎಮ್ ಟೆಕ್ ಪ್ರೈವೇಟ್. ಲಿಮಿಟೆಡ್. ಬೆಂಗಳೂರು-562114 ಎಂಬ ಕಂಪನಿಯು ಈ ಸಂದರ್ಶನವನ್ನು ಏರ್ಪಡಿಸಿದ್ದು, ಫಿಟ್ಟರ್, ಮಷಿನಿಷ್ಟ್ ಮತ್ತು ಟರ್ನರ್ ವೃತ್ತಿಗಳಲ್ಲಿ ಐ.ಟಿ.ಐ ಪಾಸಾದ, ಹಾಗೂ ಫಲಿತಾಂಶಕ್ಕಾಗಿ ಕಾಯುತ್ತಿರುವ ಹಾಗೂ 18 ರಿಂದ 21 ವರ್ಷದೊಳಗಿನ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡಾಟಾ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಸಂದರ್ಶದಲ್ಲಿ ಹಾಜರಾಗಬಹುದಾಗಿದೆ ಎಂದು ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಮಹಾನಗರಪಾಲಿಕೆ 12ನೇ ವಾರ್ಡ್ ಉಪಚುನಾವಣೆ: 1 ನಾಮಪತ್ರ ಸಲ್ಲಿಕೆ

ಬಳ್ಳಾರಿ.ಆ.31(ಕರ್ನಾಟಕ ವಾರ್ತೆ): ಮಹಾನಗರಪಾಲಿಕೆ 12ನೇ ವಾರ್ಡ್‍ನ ಸದಸ್ಯರ ಮರಣದಿಂದ ತೆರವಾಗಿರುವ ಸದಸ್ಯರ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಆಗಸ್ಟ್ 31 ರಂದು ಕಾಂಗ್ರೆಸ್  ಅಭ್ಯರ್ಥಿ ಕೆ.ಲಕ್ಷ್ಮಿ ಅವರಿಂದ  ಒಂದು ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಡಳಿತದಿಂದ ಸೆಪ್ಟೆಂಬರ್ 5 ರಂದು ಶ್ರೀ ಕೃಷ್ಣಜನ್ಮಾಷ್ಠಮಿ ಆಚರಣೆ

ಚಿಕ್ಕಬಳ್ಳಾಪುರ : ಸೆಪ್ಟೆಂಬರ್ 5 ರಂದು ಶ್ರೀ ಕೃಷ್ಣಜನ್ಮಾಷ್ಠಿಮಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಆಚರಿಸಲು ಸಕಲ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜ್ ರವರು ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ  ಶ್ರೀ ಕೃಷ್ಣಜನ್ಮಾಷ್ಠಮಿ ಆಚರಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡುತ್ತಾ, ಸರ್ಕಾರದ ಆದೇಶದಂತೆ ಈ ಬಾರಿಯು ಸಹ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ  ಸಂಬಂಧಪಟ್ಟ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದರು.

ಸಭೆಯಲ್ಲಿ ಜಿಲ್ಲಾ ಯಾದವ  ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಮತ್ತು  ತಾಲ್ಲೂಕು ಮಟ್ಟದ ಯಾದವ ಕ್ಷೇಮಾಭಿವೃದ್ಧಿ ಸಂಘಗಳ ವತಿಯಿಂದ ಸೆಪ್ಟೆಂಬರ್ 5 ರಂದು ಯಾದವ ಕುಲಬಾಂಧವರು ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 8.30 ಗಂಟೆಗೆ ಎಲ್ಲಾ ಯಾದವ ಕುಲಬಾಂಧವರು ತಪ್ಪದೇ ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮನ್ನು ಯಶಸ್ವಿಗೊಳಿಸಬೇಕಾಗಿ ಕೋರಿದರು.  ಅಂದು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ದೇವರನ್ನು ಬೆಳ್ಳಿ ಪಲ್ಲಕ್ಕಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ವೀರಗಾಸೆ, ವಾಲಗ, ಕೀಲುಕುದುರೆ, ವಾದ್ಯಗಳೊಂದಿಗೆ ದೇವರ ಮೆರವಣಿಗೆಯನ್ನು ಸಭಾ ಕಾರ್ಯಕ್ರಮದ ನಂತರ  ನಡೆಸಲಾಗುವುದು ಎಂದರು.

ಸಭೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಯಾದವ ಕ್ಷೇಮಾಭಿವೃದ್ಧಿ ಸಂಘದ  ಕಾರ್ಯದರ್ಶಿ ಸುಬ್ರಮಣ್ಯ ಮಾತನಾಡಿ 2014-15ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.85 ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದ ಚಿಕ್ಕಬಳ್ಳಾಪುರ ತಾಲ್ಲೂಕಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಾಲ್ಲೂಕು ಯಾದವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು  ಹಾಗೂ ಯಾದವ ಸಮುದಾಯದ 3 ಜನ ಹಿರಿಯ ಸಮಾಜ ಸೇವಕ ಗಣ್ಯರಿಗೆ ಸನ್ಮಾನ ಸಮಾರಂಭವಿದ್ದು, ಆಸಕ್ತ ಯಾದವ ಸಮುದಾಯದ ಹಿರಿಯರು ಮತ್ತು  ಯಾದವ ವಿದ್ಯಾರ್ಥಿಗಳು ದೂರವಾಣಿ ಸಂ : 9845370574, 9986461938 ಹಾಗೂ 7829185530ಗೆ ಕರೆಮಾಡಿ ಮಾಹಿತಿ ನೀಡಬಹುದು. ಮಾಹಿತಿ  ನೀಡಲು ಕೊನೆಯ ದಿನಾಂಕ : 3.9.2015 ರ ಸಂಜೆ 4 ಗಂಟೆಯ ವರೆಗೆ ಸಮಯವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ  ಕಛೇರಿ ವಿಳಾಸ : ಕೆನರಾ ಬ್ಯಾಂಕ್ ಎದುರು ಡಿ.ಸಿ.ಸಿ. ಬ್ಯಾಂಕ್ ಪಕ್ಕ, 2ನೇ ಮಹಡಿ, ಬಿ.ಬಿ.ರಸ್ತೆ , ಚಿಕ್ಕಬಳ್ಳಾಪುರ ಇಲ್ಲಿ ಸಂಪರ್ಕಿಸಬಹುದು ಎಂದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಚಲಪತಿ, ಯಾದವ ಕ್ಷೇಮಾಭಿವೃದ್ಧಿ ಸಂಘಗಳ ಮುಖಂಡರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಆಧಾರ್ ನೋಂದಣಿಗೆ ಹೆಚ್ಚುವರಿ ಕೇಂದ್ರಗಳು ಆರಂಭ

ಚಿಕ್ಕಬಳ್ಳಾಪುರ : ಭಾರತ ಸರ್ಕಾರದ ನಿರ್ದೇಶನದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಧಾರ್ ನೋಂದಣಿಗಾಗಿ 26 ನಾಡಕಛೇರಿಗಳಲ್ಲಿ ಶಾಶ್ವತ ಆಧಾರ್ ನೋಂದಣಿ ಕಾರ್ಯವನ್ನು ಉಚಿತವಾಗಿ ನಡೆಸಲಾಗುತ್ತಿದೆ. ಅಲ್ಲದೇ ಹೆಚ್ಚುವರಿಯಾಗಿ 9 ಮೊಬೈಲ್ ಕಿಟ್‍ಗಳ ಮುಖಾಂತರ ಹೊಸದಾಗಿ ಆಧಾರ್ ನೋಂದಣಿಯನ್ನು ಗ್ರಾಮ ಪಂಚಾಯ್ತಿ ಕಾರ್ಯಾಲಯ ಪುಲಗಲ್ ಬಾಗೇಪಲ್ಲಿ ತಾಲ್ಲೂಕು, ಶ್ರೀ ಸರ್.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆ ಚಿಕ್ಕಬಳ್ಳಾಪುರ, ರಾಯಲ್ ವಿದ್ಯಾಸಂಸ್ಥೆ ಚಿಂತಾಮಣಿ, ಸರಸ್ವತಿ ವಿದ್ಯಾಸಂಸ್ಥೆ ಶಿಡ್ಲಘಟ್ಟ ಹಾಗೂ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ, ಚಿಂತಾಮಣಿ ಕೇಂದ್ರಗಳಲ್ಲಿ ಆಧಾರ್ ನೋದಣಿ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಇವರ ಪ್ರಕಟಣೆ ತಿಳಿಸಿದೆ.

ಏಕಲವ್ಯ ಪ್ರಶಸ್ತಿ ಜೀವಮಾನ ಸಾಧನೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ: ಕರ್ನಾಟಕ ಸರ್ಕಾರದ ಉಚ್ಛ ನ್ಯಾಯಾಲಯದ ಆದೇಶದಂತೆ, ಉಲ್ಲೇಖ ಪತ್ರದಂತೆ ದಿನಾಂಕ: 07-07-2015 ಏಕಲವ್ಯ ಪ್ರಶಸ್ತಿಗಾಗಿ ಪತ್ರಿಕಾ ಪ್ರಕಟಣೆ ಈಗಾಗಲೇ ನೀಡಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಪ್ರತಿ ವರ್ಷ ರಾಷ್ಟ್ರೀಯ ಮತ್ತು  ಅಂತರಾಷ್ಟ್ರಿಯ ಕರ್ನಾಟಕ ಏಕಲವ್ಯ ಪ್ರಶಸ್ತಿಗಾಗಿ ರೂಪಿಸಿರುವ ಮಾರ್ಗಸೂಚಿಗಳಲ್ಲಿ ಕೆಲವೊಂದು ಮಾರ್ಪಾಡು ಮಾಡಿ ಮಾರ್ಗಸೂಚಿಗಳನ್ನು ಪುನರ್ ರಚಿಸಿದೆಯೆಂದು ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಇವರು ಉಲ್ಲೇಖದಂತೆ-2 ರಲ್ಲಿ ಆದೇಶಿಸಲಾಗಿದೆ. ಆದ್ದರಿಂದ ಅಂಗೀಕೃತ ಕ್ರೀಡೆಗಳಲ್ಲಿ ಪ್ರತಿ ವರ್ಷದಂತೆ 2014ನೇ ವರ್ಷದಲ್ಲಿ ಹಾಗೂ ಅದರ ಹಿಂದಿನ 4 ವರ್ಷಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ಅರ್ಹತೆಯುಳ್ಳ ಪುರುಷ/ಮಹಿಳಾ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದು ಕಿರಿಯರ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳ ಸಾಧನೆಯನ್ನು ಪರಿಗಣಿಸಿ ಏಕಲವ್ಯ ಪ್ರಶಸ್ತಿಯನ್ನು ನೀಡಲಾಗುವುದು. ಅರ್ಹ ಕ್ರೀಡಾಪಟುಗಳು ಸೆಪ್ಟೆಂಬರ್ 2 ರೊಳಗೆ ಅರ್ಜಿಗಳನ್ನು ಕಛೇರಿ ವೇಳೆಯಲ್ಲಿ ಪಡೆದು,  ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 4 ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಇಲ್ಲಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ರವರ ಕಛೇರಿ ದೂರವಾಣಿ ಸಂಖ್ಯೆ: 08156-270054 ನ್ನು ಸಂಪರ್ಕಿಸಬಹುದೆಂದು  ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಇವರ ಪ್ರಕಟಣೆ ತಿಳಿಸಿದೆ.

ರಾಜೀವ್ ಗಾಂಧಿ ಖೇಲ್ ಅಭಿಯಾನ್ (ಆರ್‍ಜಿಕೆಎ) ಹಾಗೂ ದಸರಾ  ಕ್ರೀಡಾಕೂಟ

ಚಿಕ್ಕಬಳ್ಳಾಪುರ: 2015-16ನೇ ಸಾಲಿನ ಗುಡಿಬಂಡೆ ತಾಲ್ಲೂಕಿನ ತಾಲ್ಲೂಕು ಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನ್ (ಆರ್‍ಜಿಕೆಎ) ಕ್ರೀಡಾಕೂಟವನ್ನು ಸೆಪ್ಟೆಂಬರ್ 3 ಹಾಗೂ 4  ರಂದು ದಸರಾ ಕ್ರೀಡಾಕೂಟವನ್ನು ಸಂಘಟಿಸಲಾಗುವುದೆಂದು ಉಲ್ಲೇಖಿತ ಪತ್ರದಲ್ಲಿ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು.  ಗುಡಿಬಂಡೆ ತಾಲ್ಲೂಕಿನಲ್ಲಿ ರಾಜೀವ್ ಗಾಂಧಿ ಖೇಲ್ ಅಭಿಯಾನ್ (ಆರ್.ಜಿ.ಕೆ.ಎ) ಕ್ರೀಡಾಕೂಟವನ್ನು ಅದೇ ದಿನ ಅಂದರೆ ಸೆಪ್ಟೆಂಬರ್ 3  ರಂದೆ ನಿಗಧಿತ ಅವಧಿ ಹಾಗೂ ನಿಗಧಿತ ಸ್ಥಳದಲ್ಲೇ ಸಂಘಟಿಸಲಾಗುತ್ತಿದೆ.

ಸೆಪ್ಟೆಂಬರ್ 4 ರಂದು ನಡೆಸಬೇಕಾಗಿದ್ದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವು ಕಾರಾಣಾಂತರದಿಂದ ಮುಂದೂಡಲಾಗಿದ್ದು, ಸದರಿ ಕ್ರೀಡಾಕೂಟವು ಸೆಪ್ಟೆಂಬರ್ 7 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಘಟಿಲಾಗುತ್ತಿದೆ. ಈ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳು ಸಹಕರಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08156-270054ನ್ನು ಸಂಪರ್ಕಿಸಬಹುದೆಂದು  ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಇವರ ಪ್ರಕಟಣೆ ತಿಳಿಸಿದೆ.

ಗಾಂಧಿ ಭವನದಲ್ಲಿ ವಿವಿಧ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ

ಬಳ್ಳಾರಿ.ಆ.31(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ನಗರದ ರಾಯಲ್‍ವೃತ್ತ ಹತ್ತಿರವಿರುವ ಗಾಂಧಿ ಭವನದಲ್ಲಿ ಖಾದಿ ಮಾರಾಟ ಮೇಳವನ್ನು ಸೆಪ್ಟೆಂಬರ್ 8 ರವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗಾಧಿಕಾರಿ ಜಿ.ಎಸ್.ದತ್ತಾತ್ರೆಯ ಅವರು ತಿಳಿಸಿದ್ದಾರೆ.

ಖಾದಿ ಮಾರಾಟ ಮೇಳವು ಆಗಸ್ಟ್ 30 ರಿಂದ ಸೆಪ್ಟೆಂಬರ್ 08 ರವರಗೆ 10 ದಿನಗಳ ನಡೆಯಲಿದ್ದು ಉಚಿತ ಪ್ರವೇಶವಿರುತ್ತದೆ. ಮೇಳದಲ್ಲಿ   18 ಖಾದಿ ಮಳಿಗೆ ಹಾಗೂ 26 ಗ್ರಾಮ ಕೈಗಾರಿಕಾ ಮಳಿಗೆಗಳಿವೆ. ಕರ್ನಾಟಕದ 36, ಹೊರರಾಜ್ಯಗಳಾದ  ಆಂಧ್ರಪ್ರದೇಶದಿಂದ 4, ಮಹಾರಾಷ್ಟ್ರದಿಂದ 1, ಮಧ್ಯಪ್ರದೇಶದಿಂದ 2, ತಮಿಳುನಾಡುನಿಂದ 1 ಮಳಿಗೆಗಳು ಸೇರಿ ಒಟ್ಟು 44 ಮಳಿಗೆಗಳಿವೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಸ್ಥೆಯಾದ ಸಂಡೂರಿನ ಕುಶಲ ಕಲಾ ಕೇಂದ್ರ ಈ ಮೇಳದಲ್ಲಿ ಭಾಗವಹಿಸಿದ ಆಕರ್ಷಣೆಹೊಂದಿದೆ. ಮೇಳದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಪ್ರಾರಂಭದಿನವಾದ ಆ.30 ರಂದು ಒಟ್ಟು 4.9 ಲಕ್ಷ ವಹಿವಾಟು ಆಗಿದೆ. ಹಿಂದಿನ ಮೇಳದಲ್ಲಿ 69 ಲಕ್ಷ ವಹಿವಾಟು ಆಗಿದ್ದು, ಈ ವರ್ಷ ಇದನ್ನು 1 ಕೋಟಿಗಿಂತ ಹೆಚ್ಚು ವಹಿವಾಟು ಆಗುವ ನೀರಿಕ್ಷೆಯಲ್ಲಿದೆ. ಮೇಳದಲ್ಲಿ ಅರಳೆ ಖಾದಿ, ಉಣ್ಣೆಖಾದಿ, ರೇಷ್ಮೆ ಖಾದಿ ಮತ್ತು ಪಾಲಿವಸ್ತ್ರಗಳು, ಖಾದಿ ರೆಡಿಮೇಡ್ ಉತ್ಪನ್ನಗಳು, ಟವೆಲ್, ಕರವಸ್ತ್ರ, ಜಮಖಾನ, ಬೆಡ್‍ಶೀಟ್, ಶಾಲುಗಳು, ಚರ್ಮದ ಉತ್ಪನ್ನಗಳಾದ ಶೂ, ಚಪ್ಪಲಿ, ಬೆಲ್ಟ್, ಪ್ಯಾಕೆಟ್, ವ್ಯಾನಿಟಿ ಬ್ಯಾಗ್ ಇತ್ಯಾದಿ., ಜೂಟ್ (ನಾರಿನ) ಉತ್ಪನ್ನಗಳು, ಆಯುರ್ವೇದಿಕ್ ಉತ್ಪನ್ನಗಳು, ನೈಸರ್ಗಿಕವಾದ ಜೇನುತುಪ್ಪ, ಗೋಡಂಬಿ, ಉತ್ತರ ಕರ್ನಾಟಕದ ರೊಟ್ಟಿ, ಚಟ್ನಿಪುಡಿ ಮತ್ತು ಸಿಹಿ ತಿಂಡಿಗಳು, ಶ್ರೀಗಂಧದ ಉತ್ಪನ್ನಗಳು ಅಲಂಕಾರಿಕ ವಸ್ತುಗಳು ಯೋಗ್ಯ ಬೆಲೆಯಲ್ಲಿ ದೊರೆಯಲಿದೆ ಎಂದು ತಿಳಿಸಿದ್ದಾರೆ.

ವಿಶ್ವ ಹಿರಿಯ ನಾಗರೀಕರ ದಿನಾಚರಣೆ : ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ

ಬಳ್ಳಾರಿ.ಆ.31(ಕರ್ನಾಟಕ ವಾರ್ತೆ): ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರೀಕರಿಗೆ ಕ್ರೀಡೆ, ಪ್ರಬಂಧ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಹಿರಿಯ ನಾಗರೀಕರು ಸೆಪ್ಟೆಂಬರ್ 5 ರೊಳಗಾಗಿ ತಾಲೂಕು ಪಂಚಾಯತ್‍ಯಲ್ಲಿರುವ ಎಂ.ಆರ್.ಡಬ್ಲ್ಯೂ (ಅಂಗವಿಕಲರ ವಿಭಾಗದಲ್ಲಿ) ಇವರನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಬಹುದು. ಪುರುಷರ ವಿಭಾಗದಲ್ಲಿ 60 ರಿಂದ 70 ವರ್ಷ ವಯೋಮಿತಿದವರಿಗೆ 100 ಮೀಟರ್ ಓಟ, 5 ಕೆ.ಜಿ. ಭಾರದ ಶಾಟ್‍ಪುಟ್, 71 ರಿಂದ 80 ವರ್ಷ ವಯೋಮಿತಿದವರಿಗೆ 75 ಮೀಟರ್ ಓಟ, ಬ್ಯಾಂಚಿಂಗ್ ದಿ ಸಿಟಿ, 81 ವರ್ಷ ಮೇಲ್ಪಟ್ಟವರಿಗೆ 75 ಮೀಟರ್ ನಡೆಗೆ, ಬ್ಯಾಂಚಿಂಗ್ ದಿ ಸಿಟಿ. ಮಹಿಳೆಯರ ವಿಭಾಗದಲ್ಲಿ 60 ರಿಂದ 80 ಹಾಗೂ 81 ವರ್ಷ ಮೇಲ್ಪಟ್ಟ ವಯೋಮಿತಿದವರಿಗೆ ಲೆಮೆನ್ & ಸ್ಪೂನ್, ಬ್ಯಾಂಚಿಂಗ್ ದಿ ಸಿಟಿ ಕ್ರೀಡೆಗಳು ನಡೆಯಲಿವೆ. ಸಾಂಸ್ಕøತಿ ವಿಭಾಗದಲ್ಲಿ ಜಾನಪದ ಗೀತೆ, ಏಕಪಾತ್ರ ಅಭಿನಯ, ಪಿಕ್ & ಸ್ಪೀಕ್ ಯಾವುದೇ ವಿಷಯದ ಬಗ್ಗೆ 3 ನಿಮಿಷ ಸ್ಪರ್ಧೆ ಮತ್ತು ಕುಟುಂಬ ಹಾಗೂ ಸಮಾಜದಿಂದ ಹಿರಿಯ ನಾಗರೀಕರ ನಿರೀಕ್ಷೆ ಕನಿಷ್ಠ 3 ಪುಟ ಮೀರದಂತೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂ.ಸಂ.99729 83185 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಲೋಕಸಭಾ ಸದಸ್ಯರಿಂದ ಡಿಜಿಟಲ್ ವೈ-ಫೈ ಉದ್ಘಾಟನೆ

ಕರ್ನಾಟಕವಾರ್ತೆ, ಆ. 31 ರಾಮನಗರ: ರಾಮನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಅವರಣದಲ್ಲಿ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಅವರಿಂದ ಸಾರ್ವಜನಿಕರು ಹಾಗೂ ವಿಧ್ಯಾರ್ಥಿಗಳಿಗೆ ಉಚಿತ 5ಜಿ ಡಿಜಿಟಲ್ ವೈ-ಫೈ ಸೇವೆಗಳ ಕಾರ್ಯಕ್ರಮ ಉದ್ಘಾಟಿಸಿದರು.

ಈ ತಂತ್ರಜ್ಞಾನ ಎಲ್ಲಾ ನಾಗರೀಕರಿಗೆ ತಲುಪಬೇಕು. ಈ ಯೋಜನೆಯನ್ನು ರಾಮನಗರ ಜಿಲ್ಲಾದ್ಯಂತ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ಮುಂದಿನ ದಿನಗಳಲ್ಲಿ ದೊರೆಯುತ್ತದೆ. ಈ ಯೋಜನೆಯಡಿ ಪ್ರತೀ ನಿತ್ಯ ಗ್ರಾಮ ಪ್ರದೇಶದಿಂದ ಬಂದಿರುವ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರ ಉಪಯೋಗದ ದೃಷ್ಠಿಯಿಂದ ಇದೊಂದು ಪರಿಣಾಮಕಾರಿಯಾದ ಯೋಜನೆ ಎಂದು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಿಜಿಟಲ್ ಇಂಡಿಯಾದ ಪ್ರಯುಕ್ತ ಬಿ.ಎಸ್.ಎನ್.ಎಲ್. ವೈ-ಪೈ ಹಾಟ್ ಸ್ಪಾಟ್ ಮೂಲಕ  ಸಾರ್ವಜನಿಕರಿಗೆ ಇಂಡರ್ನೆಟ್ ಸೇವೆಯನ್ನು ನೀಡುತ್ತಿದೆ. ಈ ಹಣಕಾಸಿನ ವರ್ಷದಲ್ಲಿ ಕರ್ನಾಟಕ ವೃತ್ತವು 30 ನಗರಗಳ 330 ಸ್ಥಳಗಳಲ್ಲಿ ಈ ಸೇವೆಯನ್ನು ನೀಡಲು ಯೋಜನೆಯನ್ನು ತಯಾರಿಸಿದೆ. ಡಿಜಿಟಲ್ ಇಂಡಿಯಾದ ಆಚರಣೆಯ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್. ಕರ್ನಾಟಕ ವೈ-ಫೈ ಸೇವೆಯನ್ನು 3 ಸ್ಥಳಗಳಾದ ಹಂಪಿ ವಿರೂಪಾಕ್ಷಿ ದೇವಾಲಯ, ಬೆಂಗಳೂರಿನ 1 ಎಂಜಿ ಮಾಲ್ ಮತ್ತು ಕಬ್ಬನ್ ಪಾರ್ಕ್ ಹಾಗೂ ನಾಲ್ಕನೆಯದಾಗಿ ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ.

ಸಾರ್ವಜನಿಕರಿಗಾಗಿ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾನ್ಯ ಲೋಕಸಭಾ ಸದಸ್ಯರು ತಮ್ಮ ಕ್ಷೇತ್ರದ 9 ಪ್ರಮುಖ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ವೈ-ಫೈ ಹಾಟ್ ಸ್ಪಾಟ್‍ನ್ನು ಸ್ಥಾಪಿಸಲು ತಮ್ಮ ನೆರವನ್ನು ನೀಡಿದ್ದಾರೆ.

ಇದರ ಪ್ರಯುಕ್ತ ಮೊಟ್ಟ ಮೊದಲು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳಾದ ರಾಮನಗರ ಮತ್ತು ಕನಕಪುರಗಳಲ್ಲಿ ಮೂರು ಎಕ್ಸೆಸ್ ಪಾಯಿಂಟ್‍ಗಳೊಂದಿಗೆ ವೈ-ಫೈ ಸೇವೆಯನ್ನು ಉದ್ಘಾಟಿಸಲಾಗುತ್ತಿದೆ. ಸದ್ಯದಲ್ಲಿ ಈ ಸೇವೆಯನ್ನು ಇತರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳಾದ ಹಾರೋಹಳ್ಳಿ, ಅನೆಕಲ್, ಜಿಗಣಿ, ಮಾಗಡಿ, ಬಿಡದಿ, ಚನ್ನಪಟ್ಟಣ ಹಾಗೂ ಕುಣಿಗಲ್‍ನಲ್ಲಿ ಪ್ರಾರಂಭಿಸಲಾಗುವುದು.

ಅವಶ್ಯಕತೆಗಳಿಗನುಸಾರವಾಗಿ ಸಾಮಥ್ರ್ಯವನ್ನು ಬದಲಾಯಿಸುವಂತಹ ವ್ಯವಸ್ಥೆಯನ್ನು ಹೊಂದಿರುವಂತೆ ಈ ವೈ-ಫೈಗಳ ಎಕ್ಸೆಸ್ ಪಾಯಿಂಟ್‍ಗಳಿಗೆ 4 ಎಂಬಿಪಿಸ್ ಬ್ಯಾಂಡ್‍ವಿಡ್ತನ್ನು ಫೈಬರ್ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು/ಎಲ್ಲ ಪ್ರಯಾಣಿಕರು ಪ್ರತಿ ದಿನ 30 ನಿಮಿಷ ಉಚಿತವಾಗಿ ಮಿತಿಯಲ್ಲದಷ್ಟು ಇಂಟರ್ನೆಟ್‍ನ್ನು “QFI-BSNL” ಎಕ್ಸೆಸ್ ಪಾಯಿಂಟ್ ಮೂಲಕ ಮೊಬೈಲ್ ಹಾಗೂ ಇತರೆ ವೈ-ಫೈ ಸಾಧನಗಳಾದ ಲ್ಯಾಪ್ ಟಾಪ್, ಟ್ಯಾಬ್ ಇತ್ಯಾದಿಗಳ ಮೂಲಕ ಪಡೆಯಬಹುದಾಗಿದೆ. ಸಂಪರ್ಕ ಪಡೆದ ನಂತರ ಬ್ರೌಸರ್ ತೆರೆದಾಗ ಲಾಗ್ ಇನ್ ಪುಟ ಮೂಡುವುದು. ಲಾಗ್ ಇನ್ ಆಗಲು ಮೊಬೈಲ್ ಸಂಖ್ಯೆ, ಹೆಸರು ಹಾಗೂ ಇ-ಮೇಲ್ ಐಡಿ ಅವಶ್ಯ. ತದನಂತರ ಪರಿಶೀಲನಾ ಸಂಖ್ಯೆಯು ಮೊಬೈಲ್‍ಗೆ ಬರುತ್ತದೆ. ಬಳಕೆದಾರರು ಪರಿಶೀಲನಾ ಸಂಖ್ಯೆಯನ್ನು ಲಾಗ್ ಇನ್ ಪುಟದಲ್ಲಿ ನಮೂದಿಸುವ ಮೂಲಕ ಯಶಸ್ವಿಯಾಗಿ ಈ ಸೇವೆಯನ್ನು ಉಪಯೋಗಿಸಬಹುದು. ಎಲ್ಲಾ ಟೆಲಿಕಾಮ್ ಆಪರೇಟರ್‍ಗಳ ಗ್ರಾಹಕರು ಬಿ.ಎಸ್.ಎನ್.ಎಲ್. ಹಾಟ್ ಸ್ಪಾಟ್‍ನ ಮೂಲಕ ಇಂಟರ್ನೆಟ್‍ನ್ನು ಪಡೆಯಬಹುದು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಇಕ್ಬಾಲ್ ಹುಸೇನ್, ಉಪಾಧ್ಯಕ್ಷೆ ಸೌಭಾಗ್ಯಮ್ಮ, ಮಾಜಿ ಶಾಸಕರು ಸಿ.ಎಂ.ಲಿಂಗಪ್ಪ, ನಗರಸಭೆ ಅಧ್ಯಕ್ಷ ಚೇತನ್ ಕುಮಾರ್, ರಾಮನಗರ ಚನ್ನಪಟ್ಟಣ ಪ್ರಾಧಿಕಾರದ ಅಧ್ಯಕ್ಷೆ ಶಾರದಾಗೌಡ, ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್, ಬಿ.ಎಸ್.ಎನ್.ಎಲ್. ಛೇರ್‍ಮೆನ್ ಅನುಪಮ್ ಶ್ರೀವಾತ್ಸವ, ಬಿ.ಎಸ್.ಎನ್.ಎಲ್. ಮುಖ್ಯ ವ್ಯವಸ್ಥಾಪಕರು ನಾಗರಾಜು, ಕೆ. ಜಯರಾಂ, ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್ ಕೃಷ್ಣಯ್ಯ ಶೆಟ್ಟಿ ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಮೀನುಗಾರರಿಗೆ ಎಚ್ಚರಿಕೆ

ಉಡುಪಿ, ಆಗಸ್ಟ್ 31 (ಕರ್ನಾಟಕ ವಾರ್ತೆ):- ಮುಂದಿನ 24 ಗಂಟೆಯಲ್ಲಿ ಸಮುದ್ರ ತೀರದಲ್ಲಿ 45 ರಿಂದ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು  ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಿರುದ್ಯೋಗಿ ಯುವಕರಿಗೆ ಸೂಚನೆ

ಶಿವಮೊಗ್ಗ : ಆಗಸ್ಟ್ 31 (ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರ ಪ್ರಾಯೋಜಿತ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯು ಪ್ರಸಕ್ತ ಸಾಲಿಗೆ ಅನುಷ್ಠಾನಗೊಳಿಸುವ ಕುರಿತು ಈವರೆಗೆ ಸರ್ಕಾರದಿಂದ ಯಾವುದೇ ಸರ್ಕಾರಿ ಆದೇಶವು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಬಂದಿರುವುದಿಲ್ಲ.

ಪ್ರಸ್ತುತ ಕೆಲವು ಅನಧಿಕೃತ ವ್ಯಕ್ತಿಗಳು ನಿರುದ್ಯೋಗಿ ಯುವಕ-ಯುವತಿಯರಿಗೆ ಭೇಟಿ ಮಾಡಿ ಯೋಜನೆಗೆ ಸಂಬಂಧಪಟ್ಟ ಯೋಜನಾ ವರದಿ ಹಾಗೂ ದಾಖಲೆಗಳನ್ನು ಸಿದ್ಧಪಡಿಸಿಕೊಡುವುದಾಗಿ ಆಮಿಷ ಒಡ್ಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಇಲಾಖೆಯ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಈ ಯೋಜನೆಯ ಬಗ್ಗೆ ಅನಧಿಕೃತ ವ್ಯಕ್ತಿಗಳು ನೀಡುವ ಯಾವುದೇ ಮಾಹಿತಿಗೆ ಸ್ಪಂದಿಸದೇ ಯೋಜನೆಯ ಮಾಹಿತಿ ವಿವರಗಳಿಗಾಗಿ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಅಥವಾ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಪ್ಪನಾಯಕ ಸಂಕೀರ್ಣ, 3ನೇ ಮಹಡಿ, ನೆಹರು ರಸ್ತೆ, ಶಿವಮೊಗ್ಗ ಇವರನ್ನು ಅಥವಾ ದೂರವಾಣಿ ಸಂಖ್ಯೆ 08182-222802ನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕೂಡಲೇ ಸಕ್ಕರೆ ಕಾರ್ಖಾನೆಗಳ ಆರಂಭಿಸಲು ನಿರ್ಣಯ: ಮಹದೇವ ಪ್ರಸಾದ್

ಮಂಡ್ಯ, ಆ. 31. (ಕ.ವಾ.) – ಮಾನ್ಯ ಸಹಕಾರ ಹಾಗೂ ಸಕ್ಕರೆ ಸಚಿವರಾದ ಮಹದೇವ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ಮಂಡ್ಯ, ಮೈಸೂರು, ಹಾಸನ ಸೇರಿದಂತೆ ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ, ಕೂಡಲೇ ಕಬ್ಬು ಅರೆಯುವಿಕೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ.

ಈ ಭಾಗದ ಕಾರ್ಖಾನೆಗಳು ಕೂಡಲೇ ಕಾರ್ಯಾರಂಭಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸೆಪ್ಟೆಂಬರ್ 1ರಿಂದ 8 ವರೆಗೆ ಕೊಪ್ಪದ ಎನ್‍ಎಸ್‍ಎಲ್ ಕಾರ್ಖಾನೆ, ಕೆ.ಆರ್.ಪೇಟೆ ತಾಲ್ಲೂಕಿನ ಮಾಕವಳ್ಳಿ ಐಸಿಎಲ್ ಕಾರ್ಖಾನೆ ನಂಜನಗೂಡಿನ ಬನ್ನಾರಿ ಅಮ್ಮನ್ ಕಾರ್ಖಾನೆ ಹಾಗೂ ಕೆ.ಎಂ. ದೊಡ್ಡಿಯಲ್ಲಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಮಾನ್ಯ ಸಚಿವರಾದ ಮಹದೇವ ಪ್ರಸಾದ್ ಅವರು ತಿಳಿಸಿದ್ದಾರೆ.

ಸಭೆಯ ನಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ತೆರಳಿ, ಈ ನಿರ್ಣಯದ ಬಗ್ಗೆ ಅವರ ಗಮನಕ್ಕೆ ತರಲಾಯಿತು. ಮುಖ್ಯಮಂತ್ರಿಗಳು ಮಾತನಾಡಿ, ಈ ನಿರ್ಣಯದಂತೆ ಎಲ್ಲಾ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು ಎಂದು ಮುಖ್ಯಮಂತ್ರಿಗಳು ಸಹ ಸೂಚನೆ ನೀಡಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಖಾನೆಗಳ ಆರಂಭಕ್ಕೆ ಸೂಕ್ತ ಕ್ರಮ ವಹಿಸಲಾಗಿದೆ. ಹಾಗಾಗಿ ಕಬ್ಬು ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಮೈಷುಗರ್ಸ್ ಕಾರ್ಖಾನೆಯ ಎರಡು ಬಾಯ್ಲರ್‍ಗಳ ದುರಸ್ಥಿ ಕಾರ್ಯ ಭರದಿಂದ ಸಾಗಿದೆ. ಅಕ್ಟೋಬರ್‍ನಲ್ಲಿ ಕೆಲಸ ಆರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೈಷುಗರ್ಸ್ ಕಾರ್ಖಾನೆ ಪ್ರಾರಂಭಕ್ಕೆ ಮೊದಲ ಮೂರು ತಿಂಗಳ ಕಬ್ಬನ್ನು ಇತರೆ ಕಾರ್ಖಾನೆಗಳಲ್ಲಿ ಅರೆಸಲು ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಕ್ಷೇತ್ರವಾರು ಈ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಸಕ್ಕರೆ ಆಯುಕ್ತರಾದ ಎಂ.ಕೆ. ಅಯ್ಯಪ್ಪ, ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಅಜಯ್ ನಾಗಭೂಷಣ್, ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ವಿಶೇಷ-1:

ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗುವ ಪರಿಶಿಷ್ಟರಿಗೆ ಆರ್ಥಿಕ ನೆರವು

ಸಾಮೂಹಿಕವಾಗಿ ಆಯೋಜಿಸುವ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ.ಗಳ ಆರ್ಥಿಕ ನೆರವು ಲಭಿಸಲಿದೆ.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಸೇರಿದ ಬಡಕುಟುಂಬದ ಹೆಣ್ಣುಮಕ್ಕಳಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಡಲು, ಒಡವೆ - ವಸ್ತ್ರಗಳನ್ನು ಕೊಂಡುಕೊಳ್ಳಲು ಸಾಮಥ್ರ್ಯವಿಲ್ಲದ ಸಂದರ್ಭದಲ್ಲಿ ಮದುವೆ ವಿಳಂಬವಾಗಿ ಸಾಮಾಜಿಕ ಅಸಮತೋಲಕ್ಕೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸಾಮೂಹಿಕ ಸರಳ ವಿವಾಹಕ್ಕೆ ಪ್ರೋತ್ಸಾಹಿಸಿದಲ್ಲಿ ವರದಕ್ಷಿಣೆ ಪಿಡುಗು ಹಾಗೂ ದುಂದುವೆಚ್ಚ ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬ ಪ್ರಸ್ತಾವದ ಹಿನ್ನೆಲೆಯಲ್ಲಿ ಸರಳ ವಿವಾಹವಾದ ಆದರ್ಶ ದಂಪತಿಗಳಿಗೆ 50 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ.

ಸರಳ ವಿವಾಹ ಯೋಜನೆಯಡಿ ಆರ್ಥಿಕ ನೆರವು ಒದಗಿಸುವ ಸಂಬಂಧ 2015ರ ಆಗಸ್ಟ್ 11ರಂದು ಸರ್ಕಾರ ಆದೇಶ ಹೊರಡಿಸಿದೆ. ಆ ಪ್ರಕಾರ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗೆ ಸರಳ ವಿವಾಹ ಯೋಜನೆಯಡಿ ಒಂದೆÉೀ ಬಾರಿಗೆ 50 ಸಾವಿರ ರೂ. ಆರ್ಥಿಕ ನೆರವನ್ನು ಕೆಲ ಷರತ್ತುಗಳಿಗೆ ಒಳಪಟ್ಟು ಮಂಜೂರಾತಿ ನೀಡುವಂತೆ ಆದೇಶಿಸಿದೆ.

ಆರ್ಥಿಕ ಸೌಲಭ್ಯಕ್ಕೆ ತಗಲುವ ವೆಚ್ಚವನ್ನು ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ರಾಜಸ್ವ ಲೆಕ್ಕ ಶೀರ್ಷಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ರಾಜಸ್ವ ಲೆಕ್ಕಶೀರ್ಷಿಕೆಯಡಿ ಒದಗಿಸಿರುವ ಅನುದಾನದ ಮಿತಿಯಲ್ಲಿ ಭರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಅರ್ಜಿದಾರ ದಂಪತಿ ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಒಳಪಟ್ಟಿರಬೇಕು. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 10 ಜೋಡಿ ಭಾಗವಹಿಸಿರಬೇಕು. ಸೌಲಭ್ಯ ಪಡೆಯಲು ಬಯಸುವ ವಧುವಿಗೆ ಕನಿಷ್ಟ 18 ವರ್ಷವಾಗಿರಬೇಕು. ಗರಿಷ್ಟ ವಯೋಮಿತಿ 42 ವರ್ಷಗಳಾಗಿವೆ. ವರನಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು. ಗರಿಷ್ಟ ವಯೋಮಿತಿ 45 ವರ್ಷಗಳೆಂದು ನಿಗದಿ ಮಾಡಲಾಗಿದೆ.

ಜಿಲ್ಲಾ ನೋಂದಣಿ ಕಚೇರಿಯಲ್ಲಿ ಸಾಮಾಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್, ದೇವಸ್ಥಾನ ಟ್ರಸ್ಟ್, ಸಂಘ, ಸೊಸೈಟಿ ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದವರು ಮಾತ್ರ ಆರ್ಥಿಕ ನೆರವು ಪಡೆಯಲು ಅರ್ಹರಾಗಲಿದ್ದಾರೆ. ಆದರೆ ಸದರಿ ಸಂಸ್ಥೆಗಳು ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು.

ಯೋಜನೆಯಡಿ ಧನಸಹಾಯ ಪಡೆಯಲು ವಧು ಮತ್ತು ವರನ ಒಟ್ಟಾರೆ ವಾರ್ಷಿಕ ಆದಾಯ 2 ಲಕ್ಷ ರೂ. ಮೀರುವಂತಿಲ್ಲ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಯಾವುದೇ ತರಹದ ಬಾಲ್ಯ ವಿವಾಹ ಅಥವಾ ಅಪ್ರಾಪ್ತ ವಯಸ್ಸಿನ ವಿವಾಹ ಜರಗದಿರುವಂತೆ ಖಾತ್ರಿಪಡಿಸಿಕೊಳ್ಳಬೇಕಿದೆ. ಈ ಪ್ರಕ್ರಿಯೆ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಮನ ಹರಿಸಬೇಕಿದೆ.

ಪ್ರೋತ್ಸಾಹಧನವನ್ನು ವಧು ಮತ್ತು ವರನಿಗೆ ಜಂಟಿಯಾಗಿ ಮಂಜೂರು ಮಾಡಲಾಗುತ್ತದೆ. ಮಂಜೂರಾದ ಮೊತ್ತವನ್ನು ಅವರ ಹೆಸರಿನಲ್ಲಿರುವ ಜಂಟಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಪ್ರೋತ್ಸಾಹಧನ ಪಡೆಯಲು ಬಯಸುವವರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹವಾದ 3 ತಿಂಗಳೊಳಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಗೆ ಜಂಟಿಯಾಗಿ ನಿಗದಿತ ನಮೂನೆಯಲ್ಲಿ ವಿವಾಹ ಕಾರ್ಯಕ್ರಮದ ಫೋಟೋ ಹಾಗೂ ವಧು-ವರನ ಭಾವಚಿತ್ರ ಇತರೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿದೆ. ವಧು-ವರ ವಿವಾಹವಾದ ಬಳಿಕ ವಾಸ್ತವ್ಯವಿರುವ ಜಿಲ್ಲೆಯಲ್ಲೇ ಅರ್ಜಿ ಸಲ್ಲಿಸಬೇಕು.

ರಾಜ್ಯ ಸರ್ಕಾರ ಘೋಷಣೆ ಮಾಡಿ ಅನುಷ್ಠಾನಕ್ಕೆ ತರುತ್ತಿರುವ ಈ ನೂತನ ಸರಳ ವಿವಾಹ ಯೋಜನೆಯಡಿ ಇರುವ ಆರ್ಥಿಕ ಪ್ರೋತ್ಸಾಹಧನವನ್ನು ಜಿಲ್ಲೆಯ ಜನತೆ ಸದುಪಯೋಗ ಮಾಡಿಕೊಳ್ಳಬೇಕೆಂಬ ಆಶಯ ಹೊಂದಲಾಗಿದೆ.

ವಾರ್ತಾ ವಿಶೇಷ-2:

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪ್ರೋತ್ಸಾಹಧನ ಗಣನೀಯ ಹೆಚ್ಚಳ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅವರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಉತ್ತೇಜಿಸುವ ಸಲುವಾಗಿ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಭಾರಿ ಹೆಚ್ಚಳ ಮಾಡಿ ಅನುಕೂಲ ಮಾಡಿಕೊಟ್ಟಿದೆ.

ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ಹಿಂದಿನಿಂದಲೂ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತಿದೆ.

ದ್ವಿತೀಯ ಪಿಯುಸಿ ತೇರ್ಗಡೆಯಾದವರಿಗೆ 750 ರೂ., ಪದವೀಧರ ವಿದ್ಯಾರ್ಥಿಗೆ 1000 ರೂ., ಸ್ನಾತಕೋತ್ತರ ಅಭ್ಯರ್ಥಿಗೆ 1250 ಕೃಷಿ, ಎಂಜಿನಿಯರಿಂಗ್, ವೈದ್ಯಕೀಯ, ಪಶುವೈದ್ಯಕೀಯ ಪದವಿಯಲ್ಲಿ ತೇರ್ಗಡೆಯಾದವರಿಗೆ 1500 ರೂ.ಗಳನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತಿತ್ತು.

2015-16ನೇ ಸಾಲಿನ ಆಯವ್ಯಯದಲ್ಲಿ ರಾಜ್ಯಸರ್ಕಾರ ಪ್ರಥಮ ಪ್ರಯತ್ನದಲ್ಲಿ ಪ್ರಥಮದರ್ಜೆಯಲ್ಲಿ ಉತ್ತಿರ್ಣರಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡುವ ಘೋಷಣೆ ಮಾಡಿತ್ತು. ಅದರಂತೆ ದ್ವಿತೀಯ ಪಿಯುಸಿ ತೇರ್ಗಡೆಯಾದವರಿಗೆ 20 ಸಾವಿರ ರೂ., ಪದವಿ ತೇರ್ಗಡೆಯಾದವರಿಗೆ 25 ಸಾವಿರ, ಎಂಎ, ಎಂಎಸ್ಸಿ, ಎಂಕಾಂ, ಎಂಬಿಎ, ಎಂಸಿಎ, ಎಂಎಫ್‍ಎ ನಂತಹ ಇತರೆ ಸ್ನಾತಕೋತ್ತರ ಪದವಿ ಉತ್ತೀರ್ಣರಾದವರಿಗೆ 30 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಕೃಷಿ, ಎಂಜಿನಿಯರಿಂಗ್, ವೈದ್ಯಕೀಯ, ಪಶುವೈದ್ಯಕೀಯ ಪದವಿ ತೇರ್ಗಡೆಯಾದವರು 35 ಸಾವಿರ ರೂ. ಪ್ರೋತ್ಸಾಹಧನ ಪಡೆಯಲಿದ್ದಾರೆ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಲಿ ನೀಡುತ್ತಿರುವ ಬಹುಮಾನ ಹಣದ ಹೆಚ್ಚಳ ಸಂಬಂಧ ಸರ್ಕಾರಿ ಆದೇಶವು 2015ರ ಆಗಸ್ಟ್ 10ರಂದು ಹೊರಬಿದ್ದಿದೆ. ಪ್ರೋತ್ಸಾಹಧನ ಹಣದ ಪರಿಷ್ಕರಣೆಯಿಂದ ತಗಲುವ ಹೆಚ್ಚುವರಿ ವೆಚ್ಚವನ್ನು 2015-16ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ರಾಜ್ಯವಲಯದ ಯೋಜನಾ ಲೆಕ್ಕ ಶೀರ್ಷಿಕೆಯಡಿ ಒದಗಿಸಿರುವ ಅನುದಾನ ಮಿತಿಯಲ್ಲಿಯೇ ಅನುಷ್ಠಾನಗೊಳಿಸಬೇಕು. 2016-17ನೇ ಸಾಲಿನಿಂದ ಜಿಲ್ಲಾ ವಲಯದ ಯೋಜನೆ ಮತ್ತು ಯೋಜನೇತರ ಲೆಕ್ಕಶೀರ್ಷಿಕೆ (ಕಾಲೇಜು ವಿದ್ಯಾರ್ಥಿಗಳಿಗೆ ಪುರಸ್ಕರ, ಇತರೆ ರಿಯಾಯಿತಿಗಳು, ಶ್ರೇಷೃತೆ ಪಡೆದ ಪ.ಜಾತಿಯ ವಿದ್ಯಾರ್ಥಿಗಳಿಗೆ ಸಹಾಯ) ಯಡಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 2015-16ನೇ ಸಾಲಿನಲ್ಲಿ ರಾಜ್ಯವಲಯದ ಯೋಜನಾ ಲೆಕ್ಕಶೀರ್ಷಿಕೆಯಡಿ ಒದಗಿಸಿರುವ ಅನುದಾನದ ಮಿತಿಯಲ್ಲೇ ಅನುಷ್ಠಾನಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. 2016-17ನೇ ಸಾಲಿನಿಂದ ಜಿಲ್ಲಾವಲಯದ ಯೋಜನೆ ಮತ್ತು ಯೋಜನೇತರ ಲೆಕ್ಕಶೀರ್ಷಿಕೆಯಡಿ ಅನುದಾನ ಒದಗಿಸಿಕೊಂಡು ಕಾರ್ಯಕ್ರಮ ಅನುಷ್ಠಾನ ಮಾಡುವಂತೆ ಆದೇಶಿಸಲಾಗಿದೆ.

ಅಂತಿಮ ವರ್ಷದ ಪಿಯುಸಿ, ಸಿಬಿಎಸ್ಸಿ, ಐಸಿಎಸ್‍ಇಯಿಂದ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದವರೂ ಸಹ ಪ್ರೋತ್ಸಾಹಧನ ಪಡೆಯಲು ಅರ್ಹರಾಗಲಿದ್ದಾರೆ. ಉಳಿದಂತೆ ಪದವಿ, ಸ್ನಾತಕೋತ್ತರ ಪದವಿ, ಕೃಷಿ, ಪಶುಸಂಗೋಪನೆ, ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸುಗಳಿಗೆ ಸಂಬಂಧಿಸಿದಂತೆ ಪ್ರತಿವರ್ಷ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಅಂತಿಮವಾಗಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾಗಿರಬೇಕು. ಸೆಮಿಸ್ಟರ್ ಪದ್ಧತಿ ಇದ್ದಲ್ಲಿ ಎಲ್ಲಾ ಸೆಮಿಸ್ಟರ್‍ಗಳಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿರಬೇಕು. ಅಂತಿಮವಾಗಿ ಪ್ರಥಮದರ್ಜೆಯಲ್ಲೇ ತೇರ್ಗಡೆಯಾಗಿರಬೇಕು. ಪ್ರತೀ ವರ್ಷದ ಪರೀಕ್ಷೆ ಅಥವಾ ಸೆಮಿಸ್ಟರ್‍ಗಳಲ್ಲಿ ಕಂಪಾರ್ಟ್‍ಮೆಂಟಲ್ ಅಥವಾ ಕ್ಯಾರಿಓವರ್ ಪದ್ದತಿಯಲ್ಲಿ ತೇರ್ಗಡೆಯಾಗಿದ್ದರೆ ಅಂತಹವರು ಪ್ರೋತ್ಸಾಹಧನ ಪಡೆಯಲು ಅವಕಾಶ ಇರುವುದಿಲ್ಲ.

ರಾಜ್ಯದ ಅಭ್ಯರ್ಥಿಗಳು ಸದರಿ ಕೋರ್ಸುಗಳನ್ನು ಹೊರರಾಜ್ಯದಲ್ಲಿ ವ್ಯಾಸಂಗ ಮಾಡಿದ್ದರೂ ಸಹ ಪ್ರೋತ್ಸಾಹಧನ ಪಡೆಯಲು ಅವಕಾಶವಿದೆ. ರಾಜ್ಯ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಯುಜಿಸಿಯಿಂದ ಮಾನ್ಯತೆ ಪಡೆದ ಡೀಮ್ಡ್ ವಿವಿಗಳಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ ಹಾಗು ಸ್ವಾಯತ್ತ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಪ್ರೋತ್ಸಾಹಧನ ಪಡೆಯಬಹುದಾಗಿದೆ.

ಪ್ರೋತ್ಸಾಹಧನ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಂದ ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿ ಅನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸಲಿದ್ದಾರೆ. ಸ್ವೀಕರಿಸಲಾದ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದು ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಬಹುಮಾನದ ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವಂತೆಯೂ ಆದೇಶ ಹೊರಡಿಸಲಾಗಿದೆ.

ಸ್ಥಿರಾಸ್ತಿಗಳ ಪುರಷ್ಕøತ ದರಪಟ್ಟಿ ಪ್ರಕಟ

ಬಾಗಲಕೋಟ : ಆ.31 (ಕರ್ನಾಟಕ ವಾರ್ತೆ) : ಜಮಖಂಡಿ ತಾಲೂಕಿನ ಜಮಖಂಡಿ ಹಾಗೂ ತೇರದಾಳ ಉಪನೋಂದಣಿ ಕಾರ್ಯಾಲಯದ ವ್ಯಾಪ್ತಿಯೊಳಗಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳನ್ನು ಪರಿಷ್ಕರಿಸಿ, ಪರಿಷ್ಕøತ ಬೆಲೆಗಳ ಕರಡು ಪಟ್ಟಿಯನ್ನು  ಪ್ರಕಟಿಸಲಾಗಿದೆ ಎಂದು ತೇರದಾಳ ಉಪನೋಂದಣಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರುಕಟ್ಟೆ ಮೌಲ್ಯಮಾಪನ ಉಪ ಸಮಿತಿಯು ಪ್ರಸಕ್ತ ಸಾಲಿಗೆ ಜಮೀನು ಮತ್ತು ನಿವೇಶನಗಳಿಗೆ ಶೇ 10 ರಿಂದ 15 ರಷ್ಟು ಹಾಗೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ದರ ಶೇ.20 ರಷ್ಟು ಹೆಚ್ಚಳ ಮಾಡಿ ಪರಿಷ್ಕರಿಸಿದ್ದು, ಪರಿಷ್ಕøತ ದರ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕರ ಅವಗಾಹನೆಗೆ ತೇರದಾಳ ಉಪನೋಂದಣಿ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ಪ್ರಕಟಣೆಗೊಂಡ 15 ದಿನಗಳೊಳಗಾಗಿ ಕಾರ್ಯದಾರ್ಶಿಗಳು, ಮಾರುಕಟ್ಟೆ ಮೌಲ್ಯ ಮಾಪನ ಉಪಸಮಿತಿ ತೇರದಾಳ ಹಾಗೂ ಉಪನೋಂದಣಾಧಿಕಾರಿಗಳು, ಜಮಖಂಡಿ ಮತ್ತು ತೇರದಾಳ ಇವರಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ವೀರ ಯೋದನಿಗೆ 3 ಲಕ್ಷ ಪರಿಹಾರ

ಬಾಗಲಕೋಟ : ಆ.31 (ಕರ್ನಾಟಕ ವಾರ್ತೆ) : ಜಿಲ್ಲೆಯ ಮುಧೋಳ ತಾಲೂಕಿನ ಕೆಡಿ ಬುದ್ನಿ ಗ್ರಾಮದ ರಮೇಶ ಹರಿಜನ ಎಂಬ ಯೋಧ 19ನೇ ಮದ್ರಾಸ್ ರೆಜಿಮೆಂಟ್‍ದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮೇ 11, 2000ರಲ್ಲಿ ಜಮ್ಮು ಮತ್ತು ಕಾಶ್ಮೀರ, ರಜೋರಿ ಮತ್ತು ಪುಂಚ ಪ್ರದೇಶದಲ್ಲಿ ಆಪರೇಶನ್ ರಕ್ಷಕದಲ್ಲಿ ಪಾಲ್ಗೊಂಡಿದ್ದಾಗ ಮುಗ್ರಗಾಮಿಗಳು ಅಡಗಿಸಿಟ್ಟ ಮೈನ್ ಬ್ಲಾಸ್ಟ್ ಸಿಡಿದ ಪರಿಣಾಮ ಹೈಹಿಕವಾಗಿ ಶೇ.80 ರಷ್ಟು ಗಾಯಗೊಂಡು ಎಡಗಾಲನ್ನು ಪೂರ್ಣ ಕಳೆದುಕೊಂಡ ಇತನಿಗೆ ಕರ್ನಾಟಕ ಸರಕಾರದ ನಿಧಿಯಿಂದ 3 ಲಕ್ಷ ರೂ.ಗಳ ಚೆಕ್ ಮತ್ತು ಉಚಿತವಾಗಿ ಮನೆ ಖರೀದಿಸಿ ನಿರ್ದೇಶನಾಲಯ, ಸೈನಿಕ ಮತ್ತು ಪುನರ್ವಸತಿ ಇಲಾಖೆಯಿಂದ ಮಂಜೂರಾಗಿರುತ್ತದೆ. ಜಿಲ್ಲೆಯಲ್ಲಿ ಆಗಸ್ಟ 19, 2015 ರಂದು ಅಪರ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರು ಸೈನಿಕನಿಗೆ ಪರಿಹಾರಧನ ವಿತರಿಸಿದರು. ಈ ಸಂದರ್ಬದಲ್ಲಿ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾಜಿ ತುಕ್ಕಾರ ಉಪಸ್ಥಿತರಿದ್ದರು.

ಪರ್ಯಾಯ ಕೃಷಿಯಿಂದ ಬರಗಾಲ ಎದುರಿಸಲು ನಾರಾಯಣ ಕರೆ

ಬಾಗಲಕೋಟ : ಆ.31 (ಕರ್ನಾಟಕ ವಾರ್ತೆ) : ಸಾಂಪ್ರದಾಯಿಕ ಕೃಷಿಯಿಂದ ರೈತರು ಹೊರ ಬಂದು ಕೃಷಿಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಹೆಚ್ಚು ಲಾಭದಾಯಿಕ ಬೆಳೆ ಬೆಳೆಯಲು ಕೆ.ವಿ.ಜಿ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕ ನಾರಾಯಣ ಯಾಜಿ ಕರೆ ರೈತರಿಗೆ ಕರೆ ನೀಡಿದರು.

ಶಿಕ್ಕೇರಿ ಗ್ರಾಮದಲ್ಲಿ ಜರುಗಿದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಹೈನುಗಾರಿಕೆ, ಕುರಿ ಸಾಗಾಣಿಕೆ, ಕೋಳಿ ಸಾಗಾಣಿಕೆಗಳಂತ ಪರ್ಯಾಯ ಕೃಷಿಗಳನ್ನು ಕೈಗೊಂಡು ಬರಗಾಲ ಎದುರಿಸಬೇಕೆಂದರು. ಹಸಿರು ಮನೆ ಕಡಿಮೆ ಸ್ಥಳದಲ್ಲಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಹೆಚ್ಚು ಲಾಭದಾಯಕ ಬೆಳೆ ಬೆಳೆಯಲು ನಮ್ಮ ಕರ್ನಾಟಕ ವಿಕಾಸ ಬ್ಯಾಂಕ್ ಸಹಾಯ ನೀಡುತ್ತದೆ. ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶಾಖಾಧಿಕಾರಿ ಎಚ್.ಬಿ.ಶಿರೋಳ ಅವರು ಬ್ಯಾಂಕಿನ ಠೇವಣಿ, ಸಾಲಗಳ ಬಗ್ಗೆ ವಿವರಿಸಿದರು. ಅಲ್ಲದೇ ಬ್ಯಾಂಕಿನಲ್ಲಿ ದೊರೆಯುವ ಪ್ರಧಾನಮಂತ್ರಿ ಜೀನವ ಸುರಕ್ಷಾ, ಜೀವನ ಜ್ಯೋತಿ ಹಾಗೂ ಎಲ್‍ಐ.ಸಿ ಪಾಲಸಿಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕಡಿಮೆ ಜಮೀನಿನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಲಾಭ ಗಳಿಸಿದ ಕರಿಯಪ್ಪ ಯಲ್ಲಪ್ಪ ಕಲ್ಲಹೊದ್ಲೂರ ರೈತನನ್ನು ಪ್ರಾದೇಶಿಕ ವ್ಯವಸ್ಥಾಪಕ ನಾರಾಯಣ ಯಾಜಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಎಸ್.ಜಿ.ಗಂಗಾಧರಮಠ, ಎಚ್.ಬಿ.ಹಲಗಲಿ, ಎಚ್.ಬಿ.ಶೇಬನ್ನವರ, ಹಿರೇಮಠ, ರವಿ ನಾಗರಾಳ ಸೇರಿದಂತೆ ಶಿಕ್ಕೇರಿ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ವಿ.ಡಿ.ಮಠ ಕಾರ್ಯಕ್ರಮ ನಿರೂಪಿಸಿದರು.

ಬೀಳಗಿ : ಗ್ರಾಮೀಣ ಕ್ರೀಡಾಕೂಟ ನಾಳೆ

ಬಾಗಲಕೋಟ : ಆ.31 (ಕರ್ನಾಟಕ ವಾರ್ತೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೆಪ್ಟಂಬರ 2 ರಿಂದ 4 ವರೆಗೆ ಬೀಳಗಿ ತಾಲೂಕ ಮಟ್ಟದ ಗ್ರಾಮೀಣ, ದಸರಾ ಹಾಗೂ ಮಹಿಳಾ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ.

ಕ್ರೀಡಾಕೂಟಗಳು ಕುಂದರಗಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜರುಗಲಿದ್ದು, ಸೆಪ್ಟಂಬರ 2 ಮತ್ತು 3 ರಂದು ಗ್ರಾಮೀಣ ಕ್ರೀಡಾಕೂಟ ಹಾಗೂ 3 ಮತ್ತು 4 ರಂದು ದಸರಾ ಮತ್ತು ಮಹಿಳಾ ಕ್ರೀಡಾಕೂಟಗಳು ಜರುಗಲಿವೆ. ಕ್ರೀಡಾಕೂಟ ಸಮಾರಂಭದಲ್ಲಿ ಬೀಳಗಿ ಶಾಸಕ ಜೆ.ಟಿ.ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ತಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಗಣ್ಯಮಾನ್ಯರು ಉಪಸ್ಥಿತರಿರುವರು.

ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟಗಳು 16 ವರ್ಷದೊಳಗಿರಬೇಕು. ಗ್ರಾಮೀಣ ಕ್ರೀಡಾಕೂಟದಲ್ಲಿ ಕೇವಲ 5 ಕ್ರೀಡೆಗಳಲ್ಲಿ ಭಾಗವಹಿಸತಕ್ಕದ್ದು. ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವವರು ಮುಕ್ತವಾಗಿ ಭಾಗವಹಿಸಬಹುದಾಗಿದೆ. ಆಯಾ ದಿನದಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟಗಳು ಪ್ರಾರಂಭವಾಗಲಿವೆ ಹೆಚ್ಚಿನ ಮಾಹಿತಿಗಾಗಿ ಹನಮಂತ ಲಮಾಣಿ ಮೊನಂ.8971888095 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಹಿರಿಯ ನಾಗರಿಕರಿಗೆ ಪ್ರಬಂಧ ಸ್ಪರ್ಧೆ ಆಹ್ವಾನ

ಧಾರವಾಡ (ಕರ್ನಾಟಕ ವಾರ್ತೆ) ಆ.31 : ದಿನಾಂಕ:01-10-2015ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ತತ್ಸಂಬಂಧವಾಗಿ ಧಾರವಾಡ ಜಿಲ್ಲೆಯ ಹಿರಿಯ ನಾಗರಿಕರಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಹಿರಿಯ ನಾಗರಿಕರು “ಸಮಾಜದಿಂದ / ಕುಟುಂಬದ ಸದಸ್ಯರಿಂದ ಹಿರಿಯ ನಾಗರಿಕರ ನಿರೀಕ್ಷೆ” ಈ ವಿಷಯದ ಕುರಿತು ಪ್ರಬಂಧವನ್ನು ಬರೆದು ದಿನಾಂಕ: 07-09-2015 ರೊಳಗಾಗಿ ದ್ವಿ-ಪ್ರತಿಯಲ್ಲಿ ಕಂಪ್ಯೂಟರ್ ಮಾಡಿಸಿ  ಧಾರವಾಡ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿ, ಜಿಲ್ಲಾ ಬಾಲಭವನ ಕಚೇರಿಗೆ ಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0836-2435749, 9844579971 ಗಳನ್ನು ಸಂಪರ್ಕಿಸಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಅಮರನಾಥ ಕೆ.ಎಂ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ರಾಜ್ಯಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಧಾರವಾಡ (ಕರ್ನಾಟಕ ವಾರ್ತೆ) ಆ.31 : ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವಿಕಲರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ, ಸಂಸ್ಥೆ ಹಾಗೂ ವಿಶೇಷ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿಗಳನ್ನು ನೀಡುವ ಕುರಿತು ಅರ್ಜಿಗಳನ್ನು ಅಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರು ಹಾಗೂ ವಿಶೇಷ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ನಿಗದಿತ ಅರ್ಜಿ ನಮೂನೆಗಳನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ವಿಕಲಚೇತನರ ವಿಭಾಗ), ಧಾರವಾಡ ಇಲ್ಲಿ ಕಛೇರಿ ಸಮಯದಲ್ಲಿ ಪಡೆದು ದಿನಾಂಕ: 15-09-2015 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ದೂರವಾಣಿ ಸಂಖ್ಯೆ: 0836-2435749, 9844579971 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಅಮರನಾಥ ಕೆ.ಎಂ. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕಾರ ಸ್ವೀಕಾರ

ಧಾರವಾಡ (ಕರ್ನಾಟಕ ವಾರ್ತೆ) ಆ.31: ಧಾರವಾಡ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಆರ್. ಹೆಚ್. ನಾಯಕ್ ರವರು ದಿನಾಂಕ:29-08-2015 ರಂದು, ಪೊಲೀಸ್ ಅಧೀಕ್ಷಕರು,  ಕರ್ನಾಟಕ  ಲೋಕಾಯುಕ್ತ,  ಧಾರವಾಡ  ಹುದ್ದೆಯ  ಪೂರ್ಣ   ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ. ಸಾರ್ವಜನಿಕರು ತಮ್ಮ ದೂರು ಕುಂದು ಕೊರತೆಗಳಿಗಾಗಿ ಆರ್. ಹೆಚ್. ನಾಯಕ್, ಪ್ರಭಾರ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಧಾರವಾಡ ರವರನ್ನು ಖುದ್ದಾಗಿ ಅಥವಾ ಕಛೇರಿ ದೂರವಾಣಿ ಸಂಖ್ಯೆ: 0836-2447651 ಕ್ಕೆ ಸಂಪರ್ಕಿಸಬೇಕೆಂದು ಧಾರವಾಡ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆರ್.ಹೆಚ್. ನಾಯಕ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಧಾರವಾಡ (ಕರ್ನಾಟಕ ವಾರ್ತೆ) ಆ.31: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ದಿನಾಂಕ: 03-09-2015 ರಂದು ಬೆಳಿಗ್ಗೆ 10-10 ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಹೊರಟು ಬೆಳಿಗ್ಗೆ 11-25 ಕ್ಕೆ ಬೆಳಗಾವಿಗೆ ತಲುಪಿ, ಬೆಳಗಾವಿಯಿಂದ ರಸ್ತೆ ಮೂಲಕ ಧಾರವಾಡಕ್ಕೆ ಮಧ್ಯಾಹ್ನ 12-30 ಗಂಟೆಗೆ ಆಗಮಿಸುವರು. ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತರ ಸಮಸ್ಯೆಗಳು ಮತ್ತು ಬರ ಪರಿಹಾರ ಕಾರ್ಯದ ಬಗ್ಗೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3-30 ಗಂಟೆಗೆ ಧಾರವಾಡದಿಂದ ರಸ್ತೆ ಮೂಲಕ ಹುಬ್ಬಳ್ಳಿಗೆ ತೆರಳಿ ಸಂಜೆ 4 ಗಂಟೆಗೆ ಗಿರಣಿಚಾಳ, ವಾರ್ಡ್ ನಂ.45, ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ,45 ರಲ್ಲಿ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಸಂಜೆ 5 ಗಂಟೆಗೆ ರಾಜನಗರ್ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ರಸ್ತೆ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮರುಪ್ರಯಾಣಿಸುವರೆಂದು ಸಚಿವರ ಆಪ್ತಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತ ತರಬೇತಿ

ವಿಜಯಪುರ: (ಕರ್ನಾಟಕ ವಾರ್ತೆ) ಆ.31- ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಕಾನೂನು ಪದವಿಧರರಿಗೆ ನ್ಯಾಯಾಂಗ ಆಡಳಿತಾತ್ಮಕ ತರಬೇತಿ ನೀಡಲು ಉದ್ದೇಶಿಸಿದ್ದು, ಆಸಕ್ತ ಕಾನೂನು ಪದವಿಧರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ದಿನಾಂಖ : 30-09-2015 ಕೊನೆಯ ದಿನಾಂಕವಾಗಿದ್ದು, ಅರ್ಜಿ ನಮೂನೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ವಿಜಯಪುರ ದೂರವಾಣಿ : 08352-276124 ಸಂಖ್ಯೆಗೆ ಸಂಪರ್ಕಿಸಲು ಕೋರಿದೆ.

ಸೆ.5ರಂದು ಜಿಲ್ಲಾಡಳಿತದಿಂದ ಶ್ರೀ ಕೃಷ್ಣ ಜಯಂತಿ

ವಿಜಯಪುರ: (ಕರ್ನಾಟಕ ವಾರ್ತೆ) ಆ.31- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಆಶ್ರಯದಲ್ಲಿ ಸೆ.5ರಂದು ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ನಗರ ಶಾಸಕ ಡಾ: ಮಕ್ಬೂಲ್ ಬಾಗವಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ, ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ, ಎಸ್ಸಿ/ಎಸ್ಟಿ ಆಯೋಗದ ಅಧ್ಯಕ್ಷ ಬಸಣ್ಣ ಚಲವಾದಿ, ಜಿ.ಪಂ. ಅಧ್ಯಕ್ಷ ಉಮೇಶ ಕೋಳಕೂರ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಜಿಲ್ಲೆಯ ವಿವಿಧ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿ ಪಂಡಿತ ಮಧ್ವಾಚಾರ್ಯ ಮೊಕಾಶಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶ್ರೀಮತಿ ಸೀಮಾ ಮಹಿಂದ್ರಕರ ಹಾಗೂ ಸಂಗಡಿಗರಿಂದ ನೃತ್ಯರೂಪಕ ಹಾಗೂ ವಿ.ಜಿ.ಉಪಾಧ್ಯ ಹಾಗೂ ಸಂಗಡಿಗರಿಂದ ಭಕ್ತಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಿಇಡಿ-ಡಿಪಿಇಡಿ ಪ್ರವೇಶ: ಆ.29ರಿಂದ ಸೆ.4ರವರೆಗೆ ದಾಖಲೆಗಳ ಪರಿಶೀಲನೆ

ವಿಜಯಪುರ: (ಕರ್ನಾಟಕ ವಾರ್ತೆ) ಆ.31- ಪ್ರಥಮ ವರ್ಷದ ಡಿಇಡಿ-ಡಿಪಿಇಡಿ ಕೋರ್ಸಿನ ಸರಕಾರಿ ಕೋಟಾದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಆ.29ರಿಂದ ಸೆ.4ರವರೆಗೆ ಡಯಟ್ ವಿಜಯಪುರದಲ್ಲಿ ತಮ್ಮ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿಕೊಂಡು ದಾಖಲಾತಿ ಪಡೆಯಲು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯರು ತಿಳಿಸಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳಾದ ಎಂ.ವಾಯ್.ಹೊನ್ನಕಸ್ತೂರಿ ಮೊ: 9036207147 ಅಥವಾ www.schooleducation.kar.nic.in ವೆಬ್‍ಸೈಟ್ ಸಂಪರ್ಕಿಸಲು ಕೋರಿದೆ.

ಹಿರಿಯ ನಾಗರಿಕರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಜಿ ಕರೆ

ವಿಜಯಪುರ: (ಕರ್ನಾಟಕ ವಾರ್ತೆ) ಆ.31- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಸೆ.9ರಂದು ಬೆಳಿಗ್ಗೆ 10 ಗಂಟೆಗೆ ಹಿರಿಯ ಬಾಲಕರ ಸರಕಾರಿ ಬಾಲಮಂದಿರದಲ್ಲಿ ಹಿರಿಯ ನಾಗರಿಕರಿಗಾಗಿ ವಿವಿಧ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಭಾಗವಹಿಸಲಿಚ್ಚಿಸುವ ಹಿರಿಯ ನಾಗರಿಕರು ಸೆ.8ರೊಳಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಆವರಣ, ವಿಜಯಪುರ ಇವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 08352-278369 ಸಂಪರ್ಕಿಸಲು ಕೋರಿದೆ.