District News 06-09-2012

Friday, September 7th, 2012

ಫಲಪುಷ್ಪ ಪ್ರದರ್ಶನ ಭಾಗವಹಿಸುವವರಿಗೆ ಸೂಚನೆ

ಧಾರವಾಡ (ಕರ್ನಾಟಕ ವಾರ್ತೆ) ಸೆ. 06: ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನವು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರ ವರೆಗೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ನಡೆಯಲಿದೆ. ಇಲ್ಲಿ ಮಾರಾಟ ಮಳಿಗೆ ತೆರೆಯುವವರು ಹಾಗೂ ಹೂ ಹಣ್ಣುಗಳ ಮಾದರಿ ನಿರ್ಮಿಸುವವರು ಸೆಪ್ಟೆಂಬರ್ 20 ರ ಒಳಗಾಗಿ ಹೆಸರನ್ನು ನೊಂದಾಯಿಸಬೇಕು.

ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 24 ರಿಂದ 26 ರ ವರೆಗೆ ಅವಳಿ ನಗರದಲ್ಲಿ ಉದ್ಯಾನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತಿಯುಳ್ಳವರು ಸೆಪ್ಟೆಂಬರ್ 15 ರ ಒಳಗಾಗಿ ಹೆಸರನ್ನು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹುಬ್ಬಳ್ಳಿ ಅಥವಾ ಧಾರವಾಡ (0836-2447801) ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ದೌರ್ಜನ್ಯ ಪುನರ್ವಸತಿ: ಮುಖ್ಯಮಂತ್ರಿಗಳಿಂದ ಫಲಾನುಭವಿಗೆ ಸೌಲಭ್ಯ ವಿತರಣೆ

ಧಾರವಾಡ (ಕರ್ನಾಟಕ ವಾರ್ತೆ) ಸೆ. 06. ದೌರ್ಜನ್ಯ ಪುನರ್ವಸತಿ ಯೋಜನೆಯಡಿ ನವಲಗುಂದ ತಾಲೂಕಿನ ಶಿರೂರ ಗ್ರಾಮದ ಶ್ರೀ ಭೀಮಪ್ಪ ಡಿ. ಬಸಣ್ಣವರ ಅವರಿಗೆ ಡಾ|| ಬಿ.ಆರ್. ಅಂಬೇಡ್ಕರ ಅಭಿವೃದ್ದಿ ನಿಗಮವು 6.57 ಲಕ್ಷ ರೂ.ಗಳ ನೇರ ಸಾಲ ಒದಗಿಸಿದೆ. ಇದರಲ್ಲಿ ಖರೀದಿಸಿದ ಟ್ರ್ಯಾಕ್ಟರ್ ಹಾಗೂ ಟ್ರೇಲರನ್ನು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಜಗದಿಶ ಶೆಟ್ಟರ್ ಅವರು ವಾಹನದ ಕೀಯನ್ನು ನೀಡುವ ಮೂಲಕ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಶಂಕರ ಪಾಟೀಲ ಮುನೇನಕೊಪ್ಪ, ಸಂಸದ ಶ್ರೀ ಪ್ರಲ್ಹಾದ ಜೋಶಿ ಹಾಗೂ ಶಾಸಕ     ಶ್ರೀ ವೀರಭದ್ರಪ್ಪ ಹಾಲಹರವಿ ಉಪಸ್ಥಿತರಿದ್ದರು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀ ಎ.ಬಿ. ಜಂಗಣ್ಣವರ ತಿಳಿಸಿದ್ದಾರೆ.

ಪ್ರತಿಭಾವಂತ ಕ್ರೀಡಾಪಟು ಗಿರೀಶ್ ಅವರಿಗೆ ಅಭಿನಂದನೆ

                   ಶಿವಮೊಗ್ಗ, ಸೆಪ್ಟಂಬರ್ 6(ಕರ್ನಾಟಕ ವಾರ್ತೆ)- ಆಗಸ್ಟ್ 28ರಂದು ಲಂಡನ್‌ನಲ್ಲಿ ವಿಕಲಚೇತನರಿಗಾಗಿ ಏರ್ಪಡಿಸಲಾಗಿದ್ದ ಪ್ಯಾರಾ ಲಿಂಪಿಕ್ಸ್‌ನಲ್ಲಿ ಕರ್ನಾಟಕ ರಾಜ್ಯದಿಂದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಭಾರತ ದೇಶವನ್ನು ಪ್ರತಿನಿಧಿಸಿ, ಪ್ಯಾರಾ ಲಿಂಪಕ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಹಾಸನ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟು ಹೆಚ್.ಎನ್. ಗಿರೀಶ್ ಅವರಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್ ಅಭಿನಂದನೆ ಸಲ್ಲಿಸಿದ್ದಾರೆ. ಸರ್ಕಾರವು ಪ್ರತಿಭಾವಂತ ಕ್ರೀಡಾಪಟು ಗಿರೀಶ್‌ರವರ ಸಾಧನೆಯನ್ನು ಪರಿಗಣಿಸಿ 5.00 ಲಕ್ಷ ರೂ. ಬಹುಮಾನವನ್ನು ಘೋಷಿಸಿದೆ.

ಕುಲಪತಿಗಳ-ಶಿಕ್ಷಣ ತಜ್ಞರ ದುಂಡುಮೇಜಿನ ಪರಿಷತ್ತು

                   ಶಿವಮೊಗ್ಗ, ಸೆಪ್ಟಂಬರ್ 6(ಕರ್ನಾಟಕ ವಾರ್ತೆ)- ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟಂಬರ್ 10ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಕುಮಾರಪಾರ್ಕ್ ಪೂರ್ವದಲ್ಲಿರುವ ಗಾಂಧೀ ಭವನದಲ್ಲಿ ಗಾಂಧೀ ಮೌಲ್ಯಗಳ ಮನನ ಮತ್ತು ಮದ್ಯಪಾನ ಹಾಗೂ ಮಾದಕ ವಸ್ತುಗಳ ವಿರುದ್ಧ ಕುಲಪತಿಗಳ-ಶಿಕ್ಷಣ ತಜ್ಞರ ದುಂಡು ಮೇಜಿನ ಪರಿಷತ್ತನ್ನು ಏರ್ಪಡಿಸಲಾಗಿದೆ.

                   ಈ ಕಾರ್ಯಕ್ರಮವನ್ನು ಘನತೆವೆತ್ತ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್‌ರವರು ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿಯವರು ಅಧ್ಯಕ್ಷತೆ ವಹಿಸುವರು. ವಿಧಾನಸಭಾ ಸದಸ್ಯ ಆರ್. ರೋಷನ್‌ಬೇಗ್ ಮತ್ತು ಲೋಕಸಭಾ ಸದಸ್ಯ ಪಿ.ಸಿ. ಮೋಹನ್‌ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ನಿಮ್ಹಾನ್ಸ್‌ನ ನಿರ್ದೇಶಕ ಮತ್ತು ಕುಲಪತಿ ಡಾ. ಪಿ. ಸತೀಶ್‌ಚಂದ್ರ ಆಶಯ ಭಾಷಣ ಮಾಡುವರು. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮತ್ತು ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ. ಶ್ರೀನಿವಾಸಯ್ಯನವರು ಪ್ರಾಸ್ತಾವಿಕ ನುಡಿ ನುಡಿಯುವರು.

ಪಿ.ಯು.ಸಿ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೂಚನೆ

                   ಶಿವಮೊಗ್ಗ, ಸೆಪ್ಟಂಬರ್ 6(ಕರ್ನಾಟಕ ವಾರ್ತೆ)- ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯು ಪ್ರಥಮ ಪಿ.ಯು.ಸಿ. ವಿಜ್ಞಾನ ಸಂಯೋಜನೆಯಲ್ಲಿ ವ್ಯಾಸಂಗ ಮಾಡಿ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೆ.10 ರಿಂದ ಪೂರಕ ಪರೀಕ್ಷೆಯನ್ನು ನಡೆಸಲಿದೆ. ಈ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿ.ಯು. ದಾಖಲಾತಿಗೆ ಅವಕಾಶ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.

                   ದ್ವಿತೀಯ ಪಿ.ಯು.ಸಿ.ಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಸೆ. 15ರವರೆಗೆ ದಂಡ ಶುಲ್ಕವಿಲ್ಲದೆ ಹಾಗೂ ಸೆ. 16 ರಿಂದ 25ರೊಳಗೆ ದಂಡಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಕಟ್ಟಲು ವ್ಯಾಸಂಗ ಮಾಡಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ವಿ.ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                                              

ಮಾಜಿ ಸೈನಿಕರಿಗೆ ಉದ್ಯೋಗಾವಕಾಶ

                   ಶಿವಮೊಗ್ಗ, ಸೆಪ್ಟಂಬರ್ 6(ಕರ್ನಾಟಕ ವಾರ್ತೆ)- ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಶಿವಮೊಗ್ಗದ ಮಾಜಿ ಸೈನಿಕರ ಕ್ಲಿನಿಕ್‌ನಲ್ಲಿ ಖಾಲಿ ಇರುವ 3 ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

                   ಮೆಡಿಕಲ್ ಸ್ಪೆಷಲಿಸ್ಟ್-01 ಹುದ್ದೆಗೆ ಎಂ.ಡಿ./ ಎಂ.ಎಸ್ ಪದವೀಧರರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕವಾಗಿ 35,000/- ರೂ. ಹಾಗೂ ಮೆಡಿಕಲ್ ಆಫೀಸರ್-02 ಹುದ್ದೆಗೆ ಎಂ.ಬಿ.ಬಿ.ಎಸ್. ಪದವಿ ಪಡೆದವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ 25,000/- ರೂ.ಗಳ ವೇತನ ನೀಡಲಾಗುವುದು.

                   ಅರ್ಹ ಅಭ್ಯರ್ಥಿಗಳು OIC ECHS Cell, HQ K&K Sub Area, Cubban Road, Bangalore-560001 ಅಥವಾ ಇ-ಮೇಲ್ [email protected] ಗೆ ಸಲ್ಲಿಸಬಹುದು. ವಿವರಗಳಿಗಾಗಿ ದೂ:080-25322873, 08182-220925ನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.ಇಡಿ., ಡಿ.ಪಿ.ಇಡಿ., ಆಯ್ಕೆ ಪಟ್ಟಿ ಪ್ರಕಟ

                   ಶಿವಮೊಗ್ಗ, ಸೆಪ್ಟಂಬರ್ 6(ಕರ್ನಾಟಕ ವಾರ್ತೆ)- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಡಿ.ಇಡಿ., ಮತ್ತು ಡಿ.ಪಿ.ಇಡಿ., ಪ್ರವೇಶಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆ ಹಂಚಿಕೆಯಾದ ವಿವರವನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಹಂಚಿಕೆಯಾದ ಸಂಸ್ಥೆ ಒಪ್ಪಿಗೆ ಇದ್ದಲ್ಲಿ ಅಭ್ಯರ್ಥಿಗಳು ದಾಖಲಾತಿಗೆ ಅವಶ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಸೆ. 10 ರೊಳಗಾಗಿ ಪರಿಶೀಲನೆಗೆ ಒಪ್ಪಿಸಿ ದಾಖಲಾತಿ ಪತ್ರ ಪಡೆಯಬೇಕು. ವಿವರಗಳಿಗಾಗಿ ಡಯಟ್ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಡಿತರ ವಿತರಣೆಯಲ್ಲಿ ಸಮಸ್ಯೆಯೆ ? ಸಂಪರ್ಕಿಸಿ

                   ಶಿವಮೊಗ್ಗ, ಸೆಪ್ಟಂಬರ್ 6(ಕರ್ನಾಟಕ ವಾರ್ತೆ)- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಪಡಿತರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ಆಯಾ ತಾಲ್ಲೂಕಿನ ತಹಶೀಲ್ದಾರ್‌ರವರ ಕಚೇರಿಯ ಆಹಾರ ವಿಭಾಗಕ್ಕೆ ಅಥವಾ ಆಹಾರ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ದೂರು ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                   ಆಯುಕ್ತರು, ಬೆಂಗಳೂರು-1800-425-9339, ಉಪನಿರ್ದೇಶಕರು ಶಿವಮೊಗ್ಗ -08182-222203, ಸಹಾಯಕ ನಿರ್ದೇಶಕರು ಶಿವಮೊಗ್ಗ-08182-250110, ಸಹಾಯಕ ನಿರ್ದೇಶಕರು ಭದ್ರಾವತಿ-08282-263444, ತಹಶೀಲ್ದಾರ್ ಶಿವಮೊಗ್ಗ-08182-277045, ಭದ್ರಾವತಿ-08182-265144, ಸಾಗರ-08183-220031, ಶಿಕಾರಿಪುರ-08187-222058, ತೀರ್ಥಹಳ್ಳಿ-08181-220160, ಸೊರಬ-08184-272466, ಹೊಸನಗರ-08185-221115 ದೂರವಾಣಿ ಸಂಖ್ಯೆಯ ಸಹಾಯವಾಣಿ ಕೇಂದ್ರಕ್ಕೆ ಸಂಪರ್ಕಿಸಿ ದೂರು ದಾಖಲಿಸಬಹುದಾಗಿದೆ.

ಜಿಲ್ಲೆಯಲ್ಲಿ ಉದ್ಯೋಗಕ್ಕಾಗಿ 137 ಅಭ್ಯರ್ಥಿಗಳ ನೋಂದಣಿ

          ಶಿವಮೊಗ್ಗ, ಸೆಪ್ಟಂಬರ್ 6 (ಕರ್ನಾಟಕ ವಾರ್ತೆ) ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯ 70 ಪುರುಷರು ಹಾಗೂ 67 ಮಹಿಳೆಯರು ಸೇರಿದಂತೆ ಒಟ್ಟು 137 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಎಸ್‌ಎಸ್‌ಎಲ್‌ಸಿ ಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ 14, ಎಸ್‌ಎಸ್‌ಎಲ್‌ಸಿ ಹಾಗೂ ಪದವೀಧರರಲ್ಲದ -51, ಪದವೀಧರರು-17 ಹಾಗೂ ತಾಂತ್ರಿಕ ಪದವೀಧರರು-58 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ 3565 ಮಹಿಳೆಯರು, 5507 ಪುರುಷರು ಸೇರಿದಂತೆ ಒಟ್ಟು 9072 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ.

ಮಳೆ ವರದಿ

          ಶಿವಮೊಗ್ಗ, ಸೆಪ್ಟಂಬರ್ 6(ಕರ್ನಾಟಕ ವಾರ್ತೆ)- ಜಿಲ್ಲಾಧಿಕಾರಿಗಳ ಕಚೇರಿ ಮಾಹಿತಿಯನ್ವಯ ದಿ.6.09.12ರ ಬೆಳಿಗ್ಗೆಯಿದ್ದಂತೆ ಜಿಲ್ಲೆಯ ತಾಲ್ಲೂಕುವಾರು ಮಳೆ ವಿವರ ಈ ಕೆಳಕಂಡಂತಿದೆ (ಮಿ.ಮಿ. ಗಳಲ್ಲಿ).

ಶಿವಮೊಗ್ಗ

ಭದ್ರಾವತಿ

ತೀರ್ಥಹಳ್ಳಿ

ಸಾಗರ

ಶಿಕಾರಿಪುರ

ಸೊರಬ

ಹೊಸನಗರ

2.6

1.6

7.4

2.6

1.0

5.0

40.2

ಜಲಾಶಯಗಳ ನೀರಿನ ಮಟ್ಟ

ಜಲಾಶಯ

ಗರಿಷ್ಟ ಮಟ್ಟ

ಕಳೆದವರ್ಷ ದಲ್ಲಿದ್ದ ಮಟ್ಟ ನೀರಿನ ಇಂದಿನ ಮಟ್ಟ (ಅಡಿಗಳಲ್ಲಿ) ಒಳ ಹರಿವು (ಕ್ಯೂಸೆಕ್ಸ್) ಹೊರ ಹರಿವು (ಕ್ಯೂಸೆಕ್ಸ್) ಮಳೆ ಪ್ರಮಾಣ (ಮಿ.ಮೀ)

ಲಿಂನಗಮಕ್ಕಿ 

1819.00

1815.50

1806.40

18413.00

0.00

18.2

ಭದ್ರಾ

186.00

185.08

173.00

10438.00

2078.00

1.0

ತುಂಗಾ

588.24 

586.66

587.90

31604.00

22250.00

0.00

ಜಲಾಶಯದ ನೀರಿನ ಪ್ರಮಾಣದ ಕುರಿತು ಕ್ಷಣ ಕ್ಷಣದ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂ:08182-225410ನ್ನು ಸಂಪರ್ಕಿಸಬಹುದಾಗಿದೆ.

ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು ಸೆಪ್ಟೆಂಬರ್ 6 ( ಕರ್ನಾಟಕ ವಾರ್ತೆ):-ಮಂಗಳೂರು ನಗರ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ತೆರವಾಗಿರುವ ಕಣ್ಣೂರಿನ ವೀರನಗರ ಅಂಗನವಾಡಿ ಕೇಂದ್ರ ವಾರ್ಡ್ ಸಂಖ್ಯೆ 52 ಸಾಮಾನ್ಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಷರತ್ತು ಮತ್ತು ನಿಬಂಧನೆಗಳ ಸಂಬಂಧ ಮಂಗಳೂರು ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರನ್ನು ಸಂಪರ್ಕಿಸಬಹುದು- ದೂರವಾಣಿ ಸಂಖ್ಯೆ 0824-2432809 ಎಂದು  ಪ್ರಕಟಣೆ ತಿಳಿಸಿದೆ.

ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಮಂಗಳೂರು ಸೆಪ್ಟೆಂಬರ್ 6 ( ಕರ್ನಾಟಕ ವಾರ್ತೆ):-ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಜನವರಿ 2012ರಿಂದ ಡಿಸೆಂಬರ್ 2012ರೊಳಗೆ ಹಾಗೂ ವೈದ್ಯಕೀಯ ವಿಷಯದಲ್ಲಿ ಜನವರಿ 2009ರಿಂದ ಡಿಸೆಂಬರ್ 2012ರೊಳಗೆ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಗೆ ಅಕಾಡೆಮಿ ಪುರಸ್ಕಾರ ನೀಡಲು ನಿರ್ಧರಿಸಲಾಗಿದ್ದು ಪ್ರತೀ ವಿಷಯಕ್ಕೆ 2 ಪ್ರಶಸ್ತಿಗಳನ್ನು ನೀಡಲಾಗುವುದು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ಕನ್ನಡದಲ್ಲಿ ವಿಜ್ಞಾನ ವಿಷಯದ ಪುಸ್ತಕಗಳ ಬರವಣೆಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ 2009ರಿಂದ ಕೃಷಿ ಮತ್ತು ವಿಜ್ಞಾನ ಲೇಖಕರನ್ನು ಆಯ್ಕೆ ಮಾಡಿ ಶ್ರೇಷ್ಠ ಲೇಖಕ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಾ ಬರುತ್ತಿದೆ.

ಲೇಖಕರು ಈ ಪ್ರಶಸ್ತಿಗೆ ತಮ್ಮ ಹೆಸರು, ಭಾವಚಿತ್ರ, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಸ್ವವಿವರಗಳನ್ನು ಹೊಂದಿರುವ ಅರ್ಜಿಯೊಂದಿಗೆ ಪುಸ್ತಕದ ಮೂರು ಪ್ರತಿಗಳನ್ನು ಜನವರಿ2, 2013ರೊಳಗೆ ಅಕಾಡೆಮಿಯ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ವೆಬ್ ಸೈಟ್ ತಿತಿತಿ.ಞsಣಚಿಛಿಚಿಜemಥಿ.oಡಿg www.kstacademy.org ವೀಕ್ಷಿಸಬಹುದು ಎಂದು ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಲಿತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು ಸೆ.6: ಕಾಲಕಾಲಕ್ಕೆ ಹಾಗೂ ನಿಗದಿತ ಸಮಯದೊಳಗೆ ತಾಲ್ಲೂಕು ಮಟ್ಟದಲ್ಲಿ ಹಾಗೂ ಉಪವಿಭಾಗ ಮಟ್ಟದಲ್ಲಿ ಕ್ರಮವಾಗಿ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳು ತಾರತಮ್ಯ ಮಾಡದೆ ಎಲ್ಲಾ ದಲಿತ ಸಮುದಾಯದವರ ಕುಂದು ಕೊರತೆಗಳ ಸಮಿತಿ ಮತ್ತು ಹಿತರಕ್ಷಣಾ ಸಭೆಯನ್ನು ಕರೆಯುವ ಮೂಲಕ ಜಿಲ್ಲೆಯಲ್ಲಿನ ದಲಿತರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಗಳಾದ ಆರ್.ಕೆ.ರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.

          ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಜಿಲ್ಲೆಯ ದಲಿತರ ಕುಂದುಕೊರತೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ದಲಿತ ಸಮುದಾಯದವರ ಮನವಿಗಳನ್ನು ಆಧ್ಯತೆ ಮೇರೆಗೆ ಬಗೆಹರಿಸುವಂತೆ  ಸೂಚಿಸಿದ ಅವರು, ತಿಪಟೂರು ಉಪವಿಭಾಗ ವ್ಯಾಪ್ತಿಯಲ್ಲಿ ಅಕ್ಟೋಬರ್ 10ರಂದು, ಮಧುಗಿರಿ ವ್ಯಾಪ್ತಿಯಲ್ಲಿ ಸೆ.11ರಂದು ಹಾಗೂ ತುಮಕೂರು ಉಪವಿಭಾಗ ವ್ಯಾಪ್ತಿಯಲ್ಲಿ ಇನ್ನೊಂದು ತಿಂಗಳೊಳಗಾಗಿ ದಲಿತ ಕುಂದು ಕೊರತೆ ಸಭೆ ಕರೆಯುವಂತೆ ಆಯಾ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

          ತುರುವೇಕೆರೆ ತಾಲ್ಲೂಕಿನಲ್ಲಿ 122 ದಲಿತ ಕಾಲೋನಿಗಳಿವೆ, ಇಲ್ಲಿ ಸ್ಮಶಾನ ಇಲ್ಲ, ಇರುವಂತಹ ಜಾಗವನ್ನು ಸವರ್ಣೀಯರು ಭೂಕಬಳಿಕೆ ಮಾಡಿದ್ದಾರೆ.  19 ಅಂತರ್‌ಜಾತಿಯ ವಿವಾಹಗಳು ನೆರವೇರಲ್ಪಟ್ಟರೂ ಸಹ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹ ಹಣ ಬಿಡುಗಡೆಯಾಗಿಲ್ಲ ಎಂಬ ದಲಿತ ಮುಖಂಡರೊಬ್ಬರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯಿಂದಾಗಲೀ ಅಥವಾ ಪಿ.ಆರ್.ಇ.ಡಿ. ವತಿಯಿಂದಲಾಗಲೀ ಕೈಗೊಳ್ಳಲಾದ ದಲಿತ ಕಾಲೋನಿಗಳಿಗೆ ಸಿ.ಸಿ.ರಸ್ತೆ (ಸಿಮೆಂಟ್ ಕಾಂಕ್ರೀಟ್ ರಸ್ತೆ) ನಿರ್ಮಾಣದಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ ಆಯಾ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಪಿ.ಆರ್.ಇ.ಡಿ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿರುದ್ದ ತಾವು ಕ್ರಮಕೈಗೊಳ್ಳುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಸ್ವತಃ ಸ್ಥಳ ಪರಿಶೀಲನೆ ಮಾಡಿ ನಿಯಮಿತವಾಗಿ ದಲಿತ ಕಾಲೋನಿಗಳಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ದೃಡೀಕರಣ ನೀಡುವವರೆಗೆ ತಾವು ಕಾಮಗಾರಿಗೆ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

          ದಲಿತರ ಮನವಿ ಪತ್ರಗಳಿಗೆ ಯಾವುದೇ ಇಲಾಖೆಯಲ್ಲೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ.  ಜಿಲ್ಲಾಧಿಕಾರಿ ಕಛೇರಿಯಲ್ಲೂ ಮನವಿ ಪತ್ರಗಳಿಗೆ ಹಿಂಬರಹ ನೀಡಲಾಗುತ್ತಿಲ್ಲ ಎಂಬ ಮುಖಂಡರ ದೂರಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರತಿಯೊಂದು ಪತ್ರಕ್ಕೂ ಹಿಂಬರಹ ನೀಡಲಾಗುತ್ತಿದೆ.  ಹಿಂಬರಹ ನೀಡದ ಪ್ರಕರಣಗಳನ್ನು ತಮ್ಮ ಗಮನಕ್ಕೆ ತಂದಲ್ಲಿ ಆಯಾ ಅಧಿಕಾರಿಗಳನ್ನು ಕರೆಯಿಸಿ ಸೂಕ್ತ ಉತ್ತರ ಕೊಡಲಾಗುವುದು ಎಂದು ತಿಳಿಸಿದರು.

          ಪ್ರವಾಸೋದ್ಯಮ ಇಲಾಖೆ ವತಿಯಿಂದ ಅರ್ಹ ಪ.ಜಾತಿ ಫಲಾನುಭವಿಗಳಿಗೆ ಒದಗಿಸಲಾಗುತ್ತಿರುವ ಟ್ಯಾಕ್ಸಿ ಯೋಜನೆ ಕುರಿತ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, 2010-11ನೇ ಸಾಲಿಗೆ ವಯೋಮಾನ ಮೀರುತ್ತಿರುವ ಅಭ್ಯರ್ಥಿಗಳನ್ನು ಸಮಿತಿಯು ಆಯ್ಕೆ ಮಾಡಿದ್ದು, ಒಟ್ಟು 62 ಅರ್ಹ ಫಲಾನುಭವಿಗಳಿಗೆ ಈ ತಿಂಗಳ ಅಂತ್ಯದಲ್ಲಿ ಟ್ಯಾಕ್ಸಿಯನ್ನು ವಿತರಿಸಲಾಗುವುದು.  ಹಾಗೂ 2011-12ನೇ ಸಾಲಿಗೆ 43 ಟ್ಯಾಕ್ಸಿ ವಿತರಣೆ ಗುರಿಯನ್ನು ಈ ಜಿಲ್ಲೆಗೆ ನೀಡಿದ್ದು, ಈ ತಿಂಗಳೊಳಗಾಗಿ ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಅಂಬೇಡ್ಕರ್ ಜಯಂತಿ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಅಧಿಕಾರಿ / ನೌಕರರು ಪಾಲ್ಗೊಂಡಿರುವುದಿಲ್ಲ.  ಇದಕ್ಕೆ  ಜಿಲ್ಲಾಡಳಿತ ಯಾವ ರೀತಿ ಕ್ರಮಕೈಗೊಳ್ಳುತ್ತದೆ  ಎಂಬ  ಮುಖಂಡರೊಬ್ಬರ

 ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಅಂಬೇಡ್ಕರ್ ಜಯಂತಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ಹಬ್ಬ ಹಾಗೂ ದಿನಾಚರಣೆ ಕಾರ್ಯಕ್ರಮದಲ್ಲಿ ಕಛೇರಿ ಸಿಬ್ಬಂದಿ ಸಮೇತ ಭಾಗವಹಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿರುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಆಯಾ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

          ಮಹಾನ್ ನಾಯಕರ ಜನ್ಮ ಜಯಂತಿ ಹಾಗೂ ರಾಷ್ಟ್ರೀಯ ಹಬ್ಬಗಳಲ್ಲಿ ವಿಶೇಷ ವಿನಾಯತಿ ನೀಡಿ ಬ್ಯಾನರ್ ಕಟ್ಟಲು ಅವಕಾಶ ನೀಡುವಂತೆ ಮುಖಂಡರೊಬ್ಬರು ಮಾಡಿದ ಮನವಿಗೆ ಉತ್ತರಿಸಿದ ನಗರಸಭೆ ಪೌರಾಯುಕ್ತರು, ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಬ್ಯಾನರ್ ಕಟ್ಟಲು ಅವಕಾಶವಿದೆ, ಎಲ್ಲೆಂದರಲ್ಲಿ ಬ್ಯಾನರ್ ಕಟ್ಟಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಪ.ಜಾತಿ ಮತ್ತು ಪ.ಪಂಗಡಗಳಿಗೆ ಸರ್ಕಾರ ಕೃಷಿ ಜಮೀನು ಮಂಜೂರಾತಿ ಮಾಡಿದ್ದಲ್ಲಿ, ಷರತ್ತುಗಳನ್ನು ಉಲ್ಲಂಘಿಸಿ ಇಂತಹ ಜಮೀನುಗಳನ್ನು ಖರೀದಿ ಮಾಡಿದ್ದಲ್ಲಿ, ಕರ್ನಾಟಕ ಪ.ಜಾತಿ / ಪ.ಪಂಗಡ ಜಮೀನು ಪರಬಾರೆ ಕಾಯ್ದೆ 1978ರನ್ವಯ ಪಿ.ಟಿ.ಸಿ.ಎಲ್. ಪ್ರಕರಣಗಳಡಿ ಇತ್ಯರ್ಥ ಮಾಡಲಾಗುವುದು, ಗ್ರಾಂಟೆಡ್ ಜಮೀನುಗಳು ಮಾತ್ರ ಈ ಕಾಯ್ದೆಯಡಿ ಬರುತ್ತದೆ ಎಂದು ಸಭೆಗೆ ಮನವರಿಕೆ ಮಾಡಿಕೊಟ್ಟ ಜಿಲ್ಲಾಧಿಕಾರಿಗಳು, ಪಿ.ಟಿ.ಸಿ.ಎಲ್. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಭೂ ಮಂಜೂರಾತಿ ಕಡತ ಕಾಯಂ ಕಡತವಾಗಿ ತಾಲ್ಲೂಕು ಪಂಚಾಯತಿಯಲ್ಲಿ ಇರುತ್ತದೆ.  ರೆಕಾರ್ಡ್‌ಗಳು ಕಳೆದು ಹೋದಂತಹ ಪಕ್ಷದಲ್ಲಿ ಆಯಾ ಅಧಿಕಾರಿ ಸಿಬ್ಬಂದಿ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಮುಖಂಡರೊಬ್ಬರ ಪ್ರಶ್ನೆಗೆ ಉತ್ತರಿಸಿದರು.          

          ಇತ್ತೀಚೆಗೆ ದಲಿತ ಸಂಘಟನೆ ವತಿಯಿಂದ ಕರೆಯಲಾಗಿದ್ದ ಬಂದ್ ಸಂದರ್ಭದಲ್ಲಿ ರಜೆ ಘೋಷಿಸಿದ ಶಾಲೆಗಳಿಗೆ ಜಿಲ್ಲಾಡಳಿತ ನೋಟೀಸ್ ನೀಡಿರುವುದನ್ನು ವಿರೋಧಿಸಿ ಮಾತನಾಡಿದ ಮುಖಂಡರೊಬ್ಬರು, ಎಲ್ಲಾ ಬಂದ್ ಸಮಯದಲ್ಲೂ ಶಾಲಾ ಕಾಲೇಜುಗಳು ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸುತ್ತದೆ.  ಅಂತಹ ಸಂದರ್ಭಗಳಲ್ಲೂ ಸಹ ಜಿಲ್ಲಾಡಳಿತ ನೋಟೀಸ್ ನೀಡಿದೆಯೇ? ಕೇವಲ ದಲಿತ ಸಂಘಟನೆ ಬಂದ್‌ಗೆ ಸ್ಪಂದಿಸಿದ ಶಾಲಾ, ಕಾಲೇಜುಗಳಿಗೆ ನೋಟೀಸ್ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.  ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ದಲಿತ ಸಂಘಟನೆ ಕರೆ ನೀಡಿದ ಬಂದ್ ಸಂದರ್ಭದಲ್ಲಿ ರಜೆ ಘೋಷಿಸಿಕೊಂಡ ಜಿಲ್ಲೆಯ 8 ವಿವಿಧ ಶಾಲಾ ಕಾಲೇಜುಗಳು ತಮ್ಮಷ್ಟಕ್ಕೆ ತಾವೇ ಶಾಲೆ ಬಂದ್ ಮಾಡಿದ್ದು, ಯಾವ ಅಧೀಕೃತ ಸೂಚನೆ ಪಡೆಯದೆ ಶಾಲೆಗಳು ಮುಚ್ಚಲ್ಪಟ್ಟಿದ್ದವು, ಬಂದ್‌ಗಳ ನೆಪದಲ್ಲಿ ಶಾಲಾ ಕಾಲೇಜುಗಳು ಪದೇ ಪದೇ ಮುಚ್ಚಲ್ಪಡುತ್ತಿದ್ದರೆ ಶಾಲಾ ಕಾಲೇಜುಗಳು ನಡೆಯುವುದಾದರೂ ಹೇಗೆ? ಇನ್ನು ಮುಂದೆ ಯಾವುದೇ ಬಂದ್ ಸಂದರ್ಭದಲ್ಲಿ ಅಧೀಕೃತ ಸೂಚನೆ ಪಡೆಯದೆ ರಜೆ ಘೋಷಿಸುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಜಿಲ್ಲಾಡಳಿತ ನೋಟೀಸ್ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

          ಜಿಲ್ಲೆಯ ಹಲವೆಡೆ ದಲಿತರಿಗೆ ಸ್ಮಶಾನಕ್ಕೆ ಭೂಮಿ ಇಲ್ಲ ಎಂಬ ಮುಖಂಡರ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಯಾವ ಗ್ರಾಮಕ್ಕೆ ಸ್ಮಶಾನ ಬೇಕು ಎಂಬ ಪ್ರಸ್ತಾವನೆ ತಮಗೆ ಬಂದಲ್ಲಿ, ಸರ್ಕಾರದ ಭೂಮಿ ಇದ್ದಂತಹ ಗ್ರಾಮದಲ್ಲಿ, ಜನಸಂಖ್ಯೆ ಆಧಾರದ ಮೇಲೆ ಸ್ಮಶಾನವನ್ನು ನೀಡಲು ತಾವು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

          ಯಾರು ಸರ್ಕಾರದ ಜಮೀನನ್ನು ಅನಧೀಕೃತವಾಗಿ ಸಾಗುವಳಿ ಮಾಡಿದ್ದಾರೋ ಅಂತಹವರಿಗೆ ನಮೂನೆ-50/ 53 ಹಾಕಲು ಸರ್ಕಾರ ಅವಕಾಶ ನೀಡಿರುತ್ತದೆ. ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಬಂದಂತಹ ಅರ್ಜಿಗಳನ್ನು ರೆಕಾರ್ಡ್ ಮಾಡಿ ಪರಿಶೀಲಿಸಲಾಗುತ್ತದೆ.  ಅರ್ಹ ರೆಕಾರ್ಡ್‌ನ್ನು ಸಮಿತಿಯ ಮುಂದೆ ಇಟ್ಟು ಸಮಿತಿ ನಿರ್ಣಯಿಸಿದ ನಂತರ ಅಂತಹ ವ್ಯಕ್ತಿಗೆ ಸರ್ವೆ ನಂಬರ್, ಜಮೀನು ವಿಸ್ತೀರ್ಣ ಹಾಕಿ ಆದೇಶ ನೀಡಲಾಗುತ್ತದೆ. ಆದರೆ ನಗರಸಭೆ ವ್ಯಾಪ್ತಿಗೆ ಬರುವ ಹಾಗೂ ಅರಣ್ಯ ವ್ಯಾಪ್ತಿಗೆ ಬರುವ ಬಗರ್‌ಹುಕುಂ ಜಮೀನುಗಳನ್ನು ಸಕ್ರಮೀಕರಣ ಮಾಡಲು ನಗರಸಭೆ ಅಥವಾ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಸಾಧ್ಯವಾಗುವುದಿಲ್ಲ.  ಸಮಿತಿಯು ಇಂತಹ ಪ್ರಕರಣಗಳಲ್ಲಿ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

         ಗ್ರಾಮಪಂಚಾಯತಿಗಳಲ್ಲಿ ದಲಿತರ ಕಲ್ಯಾಣಕ್ಕಾಗಿ ಮೀಸಲಿಡಲಾಗಿರುವ ಶೇ.25ರಷ್ಟು ಅನುದಾನ ಸದ್ಬಳಕೆಯಾಗುತ್ತಿಲ್ಲ.  ಈ ಅನುದಾನಕ್ಕೆ ಪ್ರತ್ಯೇಕವಾದ ಖಾತೆ ತೆರೆಯಬೇಕು ಎಂದು ತಿಳಿಸಿದ ದಲಿತ ಮುಖಂಡರೊಬ್ಬರ ಮನವಿಗೆ ಉತ್ತರಿಸಿದ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಅವರು, ಜಿಲ್ಲೆಯ 321 ಗ್ರಾ.ಪಂ.ಗಳಲ್ಲಿ ಶೇ.60ಕ್ಕೂ ಹೆಚ್ಚು ಗ್ರಾ.ಪಂ.ಗಳು ಶೇ.25ರಷ್ಟು ಹಣವನ್ನು ಖರ್ಚು ಮಾಡಿವೆ.  ಈ ಆರ್ಥಿಕ ವರ್ಷದ ಅಂತ್ಯದೊಳಗಾಗಿ ಹಿಂದಿನ ಸಾಲಿನಲ್ಲಿ ಬಾಕಿ ಉಳಿದ ಅನುದಾನ ಹಾಗೂ ಈ ಸಾಲಿನ ಅನುದಾನವನ್ನು ದಲಿತರ ಕಲ್ಯಾಣಕ್ಕಾಗಿ ಖರ್ಚು ಮಾಡಲು ಕ್ರಮಕೈಗೊಳ್ಳಲಾಗುವುದು.  ಹಾಗೂ ಸಾಧ್ಯವಾದಲ್ಲಿ ಸದರಿ ಅನುದಾನಕ್ಕೆ ಪ್ರತ್ಯೇಕ ಖಾತೆ ತೆರೆಯಲಾಗುವುದು ಎಂಬ ಭರವಸೆ ನೀಡಿದರು.

ದಲಿತರಿಗೆ ಸೇರಿದ ಸ್ಮಶಾನದ ಜಾಗವನ್ನು ನಗರಸಭೆಯ ಪ್ರಭಾವಿ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿ ಕಟ್ಟಡ ಕಟ್ಟುತ್ತಿದ್ದಾರೆ.  ಇದನ್ನು ತಡೆಯಬೇಕು, ಮಕ್ಕಳ ಸಂಖ್ಯೆ ಇಲ್ಲ ಎಂಬ ಕಾರಣಕ್ಕೆ ಸರ್ಕಾರಿ ಪ.ಜಾತಿ ಹಾಸ್ಟಲ್‌ಗಳನ್ನು ಮುಚ್ಚಿ ಖಾಸಗೀ ಹಾಸ್ಟಲ್‌ಗಳು ತೆರೆಯಲು ಅವಕಾಶ ನೀಡಲಾಗುತ್ತಿದೆ, ಇದು ತಪ್ಪಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದಲಿತರಿಗೆ ಸಾಲ ಸಿಗುತ್ತಿಲ್ಲ, ತುಮಕೂರು ನಗರಸಭೆಯಲ್ಲಿ ದಲಿತರ ಶವ ಸಾಗಿಸುವ ಶವ ಸಾಗಣೆ ವಾಹನಗಳು ಕಾಣಬರುತ್ತಿಲ್ಲ, ಶಿರಾ ತಾಲ್ಲೂಕು ಬುಕ್ಕಾಪಟ್ಟಣ ವ್ಯಾಪ್ತಿಯಲ್ಲಿ ಕಾಲೇಜು, ಪ್ರಿಮೆಟ್ರಿಕ್ ಮತ್ತು ಡಿಗ್ರಿ ಕಾಲೇಜು ಹುಡುಗರ ಹಾಸ್ಟಲ್‌ಗಳನ್ನು ತುರ್ತಾಗಿ ತೆರೆಯಬೇಕಿದೆ.  ಬಹಳ ಕಾಲದಿಂದ ಗ್ರಾಮಪಂಚಾಯತಿಗಳಲ್ಲಿ ವರ್ಗಾವಣೆಯಾಗದೆ ಉಳಿದಿರುವ ಕಾರ್ಯದರ್ಶಿಗಳು ದಲಿತರ ಯಾವುದೇ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ.  ಕಾಲಕಾಲಕ್ಕೆ ಇಂತಹ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂಬ ಹಲವು ಮನವಿಗಳು ದಲಿತ ಮುಖಂಡರುಗಳಿಂದ ಸಭೆಯಲ್ಲಿ ಮಂಡಿಸಲ್ಪಟ್ಟವು.

          ಎಲ್ಲಾ ಮನವಿಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ದಲಿತ ಸಮುದಾಯದ ಮುಖಂಡರುಗಳು ತಮ್ಮದೇ ಸಮಿತಿ ರಚಿಸಿ, ಎಲ್ಲಾ ಸಮಸ್ಯೆಗಳನ್ನು ಕ್ರೋಢೀಕರಿಸಿ ಪಟ್ಟಿ ತಮಗೆ ಸಲ್ಲಿಸಿದಲ್ಲಿ, ಆಧ್ಯತೆ ಮೇರೆಗೆ ಸಮಸ್ಯೆಗಳನ್ನು ತಾವು ಪರಿಹರಿಸುವುದಾಗಿ ಸಭೆಗೆ ಭರವಸೆ ನೀಡಿದರು. ಸಭೆಯಲ್ಲಿ ತಿಪಟೂರು, ಮಧುಗಿರಿ, ತುಮಕೂರಿನ ಉಪವಿಭಾಗಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

***************

ಕ್ರೀಡಾ ಅಕಾಡೆಮಿ ತೆರೆಯಲು ಚಿಂತನೆ

ತುಮಕೂರು ಸೆ.6: ಎಲ್ಲಾ ಜಿಲ್ಲೆಗಳಲ್ಲೂ ಕ್ರೀಡಾ ಶಾಲೆ, ಕ್ರೀಡಾಂಗಣ, ಒಳ ಕ್ರೀಡಾಂಗಣ ಇರಬೇಕು, ಯಾವ ಜಿಲ್ಲೆ ಯಾವ ಕ್ರೀಡೆಗೆ ಹೆಸರುವಾಸಿಯಾಗಿದೆ ಎಂಬುದನ್ನು ಆಧರಿಸಿ, ಆಯಾ ಜಿಲ್ಲೆಗಳಲ್ಲಿ ಆಯಾ ಕ್ರೀಡೆಗೆ ಸಂಬಂಧಿಸಿದಂತೆ ಅಕಾಡೆಮಿ ತೆರೆಯಲು ಚಿಂತನೆ ನಡೆದಿದೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾದ ಶ್ರೀ ಎಂ.ಪಿ.ಅಪ್ಪಚ್ಚು (ರಂಜನ್) ಅವರು ತಿಳಿಸಿದರು.  ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆsಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಇನ್ನೆರಡು ತಿಂಗಳೊಳಗಾಗಿ ಕ್ರೀಡಾ ನೀತಿಯನ್ನು ಜಾರಿಗೆ ತಂದು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುವುದು ಎಂದರು.

          ಎಲ್ಲಾ ತಾಲ್ಲೂಕುಗಳ ಕ್ರೀಡಾಂಗಣಕ್ಕೆ ಒಬ್ಬೊಬ್ಬ ಕೋಚ್, ಜಿಲ್ಲಾ ಮಟ್ಟದಲ್ಲಿ ಸೀನಿಯರ್ ಕೋಚ್, ವಿಭಾಗೀಯ ಮಟ್ಟದಲ್ಲಿ ಉಪನಿರ್ದೇಶಕರು ಮತ್ತು ಪ್ರಾದೇಶಿಕ ಮಟ್ಟದಲ್ಲಿ ಜಂಟಿ ನಿರ್ದೇಶಕರನ್ನು ನೇಮಿಸಲು ಕ್ರಮಕೈಗೊಳ್ಳಲಾಗಿದ್ದು, ಈ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

          ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲಾತಿ ನೀಡಲು ಹಾಗೂ ಒಲಂಪಿಕ್ಸ್ ಮುಂತಾದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದಂತಹವರಿಗೆ ನೇರ ನೇಮಕಾತಿ ಮಾಡಲೂ ಸಹ ಚಿಂತನೆ ನಡೆದಿದೆ ಎಂದು ಸಚಿವರು ಈ ಸಂದರ್ಭ ತಿಳಿಸಿದರು. ಯುವಜನರೇ ರಾಷ್ಟ್ರದ ಶಕ್ತಿ, ಯುವಜನರಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರಭಕ್ತಿ ಮೂಡಿಸಿ, ಯುವಕರನ್ನು ಸಬಲೀಕರಣಗೊಳಿಸುವ ಕೆಲಸ ಇಂದು ಆಗಬೇಕಿದೆ.   ರಾಜ್ಯದಲ್ಲಿ  1.86ಕೋಟಿಯಷ್ಟು  ಯುವ  ಜನತೆ

 ಇದ್ದಾರೆ. ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಮತ್ತು ಕೆ.ಎ.ಎಸ್. / ಐ.ಎ.ಎಸ್. ಮುಂತಾದ ಕ್ಷೇತ್ರದಲ್ಲಿ ಉತ್ತಮ ತರಬೇತಿ ನೀಡುವ ಮೂಲಕ ಸಬಲೀಕರಣಗೊಳಿಸುವ ಅಗತ್ಯತೆ ಇವೆ.  ಸ್ವಾಮಿ ವಿವೇಕಾನಂದ ಯೂತ್ ಎಂಪವರ್‌ಮೆಂಟ್ ಕಾರ್ಪೋರೇಷನ್ ತೆರೆಯಬೇಕೆಂಬ ಚಿಂತನೆ ಇದೆ.  ಎಲ್ಲಾ ಪಂಚಾಯತಿ ಮಟ್ಟದಲ್ಲೂ ಯುವಕ ಸಂಘ ಸ್ಥಾಪನೆಯಾಗಬೇಕಿದೆ ಎಂದು ಸಚಿವರು ತಿಳಿಸಿದರು.

          ಕ್ರೀಡಾಂಗಣಗಳಲ್ಲಿ ಮತ್ತು ಕ್ರೀಡಾಶಾಲೆಗಳಲ್ಲಿ ಕ್ರೀಡಾಪಟುಗಳ ಅನುಕೂಲಕ್ಕಾಗಿ ಡ್ರಸಿಂಗ್ ರೂಂ ಮತ್ತು ಶೌಚಾಲಯ ಇರುವಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿಗಳಿಗೆ ಸಚಿವರು ಈ ಸಂದರ್ಭ ಸೂಚಿಸಿ, ಜಿಲ್ಲಾ ಕ್ರೀಡಾಂಗಣಕ್ಕೆ ಸಿಂತಟಿಕ್ ಟ್ರ್ಯಾಕ್ ನಿರ್ಮಾಣಕ್ಕಾಗಿ ಸೂಕ್ತ ಪ್ರಸ್ತಾವನೆಯನ್ನು ಕಳುಹಿಸುವಂತೆ ಅಧಿಕಾರಿಗೆ ಸೂಚಿಸಿದರು.

          ಎಲ್ಲಾ ತಾಲ್ಲೂಕುಗಳಲ್ಲಿನ ಕ್ರೀಡಾಂಗಣಗಳನ್ನು ಪಿ.ಡಬ್ಲ್ಯೂ.ಡಿ. ವತಿಯಿಂದ ನಿರ್ಮಿಸಲಾಗುತ್ತಿದ್ದು, ಆದಷ್ಟು ಬೇಗ ಕ್ರೀಡಾಂಗಣ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಸಚಿವರು ಸೂಚಿಸಿದರು. ಎಲ್ಲಾ ರಾಜ್ಯಗಳಲ್ಲೂ ಕ್ರೀಡಾ ನೀತಿಇದೆ.  ಅದರಂತೆ ರಾಜ್ಯದಲ್ಲೂ ಸಹ ಕ್ರೀಡಾನೀತಿ ಕರಡನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. 

          ಗ್ರಾಮೀಣ ಭಾಗದ ಕ್ರೀಡಾಪಟುಗಳು ಇಂದು ಎಲ್ಲಾ ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.  ಗ್ರಾಮೀಣ  ಪ್ರದೇಶಗಳಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಕ್ರೀಡಾಕೂಟಗಳನ್ನು ಏರ್ಪಡಿಸಿ, ಅಲ್ಲಿ ಆಯ್ಕೆಯಾದ ಪ್ರತಿಭೆಗಳನ್ನು ಜಿಲ್ಲಾ ಮಟ್ಟ, ರಾಜ್ಯ ಮಟ್ಟಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಕೆ.ರಾಜು, ಸಿ.ಇ.ಓ. ಗೋವಿಂದರಾಜು ತಿಪಟೂರು, ಮಧುಗಿರಿ, ತುಮಕೂರಿನ ಉಪವಿಭಾಗಾಧಿಕಾರಿಗಳು, ಯುವಜನ ಸೇವಾ ಕ್ರೀಡಾಧಿಕಾರಿ ಸೀಬಿರಂಗಯ್ಯ ಮುಂತಾದವರು ಉಪಸ್ಥಿತರಿದ್ದರು.

***********

ಪಾವಗಡ, ಕೊರಟಗೆರೆ-ಗೋಶಾಲೆ ಸ್ಥಗಿತ

ತುಮಕೂರು ಸೆ.6: ಪಾವಗಡ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ವಹಿಸಲಾಗುತ್ತಿದ್ದ ಎಲ್ಲಾ ಗೋಶಾಲೆಗಳನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರರ ಅಭಿಪ್ರಾಯಗಳ ಮೇರೆಗೆ 5-9-2012ರಿಂದ ಜಾರಿಗೊಳ್ಳುವಂತೆ ಸ್ಥಗಿತಗೊಳಿಸಲು ತಹಶೀಲ್ದಾರರಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*************

ಮದ್ಯ ನಿಷೇಧ

ತುಮಕೂರು ಸೆ.6: ತುಮಕೂರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಸೆ. 9, 2012ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಮತದಾನದ ದಿನದ 24 ಗಂಟೆಗಳ ಮುಂಚಿತವಾಗಿ ಮತ್ತು ಮತದಾನ ದಿನ ಮತ್ತು ಮತ ಎಣಿಕೆ ದಿನದಂದು ಮದ್ಯಮಾರಾಟ, ಹಂಚಿಕೆ, ಸಾಗಾಣಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.

          ಮತದಾನ ಪ್ರಾರಂಭವಾಗುವ ದಿನಾಂಕಕ್ಕೆ 24ಗಂಟೆಗೆ ಮುಂಚೆ ಮತ್ತು ಮತದಾನದ ದಿನಪೂರ್ತಿ ಅಂದರೆ ಸೆ.8, 2012ರ ಬೆಳಿಗ್ಗೆ 7-00ಗಂಟೆಯಿಂದ ಸೆ.9, 2012ರ ರಾತ್ರಿ 11-00ಗಂಟೆಯವರೆಗೆ ಮತದಾನ ನಡೆಯುವ ಸ್ಥಳದ ತ್ರಿಜ್ಯದ 5 ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಸೆ.12, 2012ರಂದು ಮತಗಳ ಎಣಿಕೆ ನಡೆಯುವ ತಾಲ್ಲೂಕು ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಸೆ.12, 2012ರ ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 11-00ಗಂಟೆಯವರೆಗೆ ಜಾರಿಯಲ್ಲಿರುವಂತೆ ಎಲ್ಲಾ ಮದ್ಯ ವಹಿವಾಟನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.

ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹ

ತುಮಕೂರು ಸೆ.6: ತುಮಕೂರು ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಸೆ.8ರಿಂದ ಸೆ.14, 2012ರವರೆಗೆ ಜಿಲ್ಲೆಯಾದ್ಯಂತ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹವನ್ನು ಗ್ರಾ.ಪಂ. ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.

          ಸೆ.8ರಂದು ಬೆಳಿಗ್ಗೆ 10-30ಕ್ಕೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ದಿನಾಚರಣೆಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರಂಭಕ್ಕೆ ಮುಂಚಿತವಾಗಿ ಟೌನ್‌ಹಾಲ್ ವೃತ್ತದಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ಸಾಕ್ಷರತಾ ಕಲಾಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರು, ಜಿ.ಪಂ. ಹಾಗೂ ಜಿಲ್ಲಾ ಲೋಕಶಿಕ್ಷಣ ಸಮಿತಿ ಇವರು ತಿಳಿಸಿರುತ್ತಾರೆ.

          ಸೆ.8ರಂದು ಎಲ್ಲಾ ಗ್ರಾ.ಪಂ. ಕೇಂದ್ರ ಸ್ಥಾನದ ಗ್ರಾಮದಲ್ಲಿ ಸಾಕ್ಷರ ಮೆರವಣಿಗೆ ಮತ್ತು ಲೋಕಶಿಕ್ಷಣ ಕೇಂದ್ರದಲ್ಲಿ ಸಾಕ್ಷರತಾ ಧ್ವಜಾರೋಹಣ ಮತ್ತು ಸಮಾರಂಭ, ಸೆ.9ರಂದು ಸಾಕ್ಷರ ವಿಚಾರ ಸಂಕಿರಣ / ಕಲಿಕಾರ್ಥಿಗಳ ಓದು, ಬರಹ ಸ್ಪರ್ಧೆ, ಸೆ.10ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆ.11ರಂದು ರಂಗೋಲಿ ಸ್ಪರ್ಧೆ, ಸೆ.12ರಂದು ಸಾಕ್ಷರ ಭಾಷಣ, ಸೆ.13ರಂದು ಪ್ರಬಂಧ ಸ್ಪರ್ಧೆ, ಸೆ.14ರಂದು ಸಮಾರೋಪ ಸಮಾರಂಭ ಜರುಗಲಿದೆ.

***********

ಸೆಪ್ಟೆಂಬರ್ 7 ರಂದು ಮೈಸೂರು ದಸರಾ ಮಹೋತ್ಸವದ ಗಜ ಪಯಣ 

ಮೈಸೂರು, ಸೆ. 06. (ಕ.ವಾ.)-ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗಾಪುರ-1ನೇ ಬ್ಲಾಕ್ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಮೈಸೂರು ದಸರಾ ಮಹೋತ್ಸವ-2012ರ ಗಜ ಪಯಣ ಸೆಪ್ಟೆಂಬರ್ 7 ರಂದು ಮಧ್ಯಾಹ್ನ 12-10 ಗಂಟೆಗೆ ಪ್ರಾರಂಭವಾಗಲಿದೆ ಹಾಗೂ ಸೆಪ್ಟೆಂಬರ್ 10 ರಂದು ಮಧ್ಯಾಹ್ನ 12-30 ಗಂಟೆಗೆ ಈ ಗಜ ಪಯಣ ಮೈಸೂರು ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಆಗಮಿಸಲಿದೆ.

ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎ. ರಾಮದಾಸ್ ಅವರು ಸೆಪ್ಟೆಂಬರ್ 7 ರಂದು ಶುಕ್ರವಾರ ಈ ಗಜ ಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವರು. ಶಾಸಕ ಹೆಚ್.ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಈ ಸಮಾರಂಭಕ್ಕೆ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಮಗದ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಎಂ.ಸಿ.ರಾಜೇಶ್ವರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಶಿವಮೂರ್ತಿ, ಲೋಕಸಭಾ ಸದಸ್ಯರಾದ ಅಡಗೂರು ಎಚ್.ವಿಶ್ವನಾಥ್, ಆರ್.ಧ್ರುವನಾರಾಯಣ, ಎನ್.ಚಲುರಾಯಸ್ವಾಮಿ, ವಿಧಾನ ಪರಿಷತ್ ಶಾಸಕರಾದ ಸಿ.ಎಚ್.ವಿಜಯಶಂಕರ್, ಗೋ.ಮಧುಸೂದನ್, ಸಿದ್ಧರಾಜು, ಮರಿತಿಬ್ಬೇಗೌಡ, ಎಸ್.ನಾಗರಾಜು, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಕೆ.ವಿ.ನಾರಾಯಣಪ್ಪ,  ವಿಧಾನಸಭಾ ಶಾಸಕರಾದ ಹೆಚ್.ಎಸ್. ಶಂಕರಲಿಂಗೇಗೌಡ, ತನ್ವೀರ್ ಸೇಠ್,  ಎಂ.ಸತ್ಯನಾರಾಯಣ, ವಿ.ಶ್ರೀನಿವಾಸಪ್ರಸಾದ್, ಡಾ.ಹೆಚ್.ಸಿ.ಮಹಾದೇವಪ್ಪ,  ಚಿಕ್ಕಣ್ಣ, ಕೆ.ವೆಂಕಟೇಶ್, ಸಾ.ರಾ.ಮಹೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

            ಇದಲ್ಲದೇ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ  ಮೈ.ವಿ.ರವಿಶಂಕರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಕಾಡಾ ಅಧ್ಯಕ್ಷ ಡಿ.ರಾಮಲಿಂಗಯ್ಯ,  ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಮಂಚನಾಯಕ, ಗ್ರಾಮ ಪಂಚಾಯತ್ ಕೆ.ಪಿ.ದೇವರಾಜು ಅವರು ಸಹ ಮುಖ್ಯ ಅತಿಥಿಗಳಾಗಿ ಈ ಸಮಾರಂಭಕ್ಕೆ  ಆಗಮಿಸುವರು.

ಸೆ.9 ಮತ್ತು 10 ರಂದು ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆ ವಿತರಣಾ ಸಮಾರಂಭ

          ಮೈಸೂರು, ಸೆ. 06.(ಕ.ವಾ.)-ಮೈಸೂರು ಜಿಲ್ಲೆಯ 575 ವಿವಿಧ ವಿಕಲಚೇತನ ಫಲಾನುಭವಿಗಳಿಗೆ ಸುಮಾರು 50-60 ಲಕ್ಷ ರೂ. ಮೌಲ್ಯದ 1128 ವಿವಿಧ ಸಾಧನ ಸಲಕರಣೆಗಳನ್ನು ವಿತರಿಸುವ ಸಮಾರಂಭ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಜರುಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಅವರು ಹೇಳಿದರು. ಅವರು ಗುರುವಾರ ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವಿಕಲಚೇತನರಿಗೆ ನೆರವು (ಅಡಿಪ್) ಯೋಜನೆಯಡಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಿಕಲಚೇತನರ ರಾಷ್ಟ್ರೀಯ ಸಂಸ್ಥೆಯು ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಹಾಗೂ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ಸೆಪ್ಟೆಂಬರ್ 9 ರಂದು ಬೆಳಗಿನ 11-30 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದರು.

          ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ  ಅವರು ಸಾಧನ ಸಲಕರಣೆಗಳನ್ನು ವಿತರಿಸುವರು. ಶಾಸಕ ಹೆಚ್.ಎಸ್. ಶಂಕರಲಿಂಗೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಪಂಡಿತ ದೀನ್ ದಯಾಳ್ ಉಪಾಧ್ಯಾಯ ವಿಕಲಚೇತನರ ರಾಷ್ಟ್ರೀಯ ಸಂಸ್ಥೆ ಹಾಗೂ ಜಿಲ್ಲಾಡಳಿತದ ನೆರವಿನೊಂದಿಗೆ ಮೇ ತಿಂಗಳಲ್ಲಿ ಆಯೋಜಿಸಿದ ವಿಕಲಚೇತನರ ಸಮಗ್ರ ಪುನರ್ವಸತಿ ಶಿಬಿರದಲ್ಲಿ ತಪಾಸಣೆಗೊಳಪಟ್ಟ 2000ಕ್ಕಿಂತ ಹೆಚ್ಚು ವಿಕಲಚೇತನರ ಪೈಕಿ 575 ಫಲಾನುಭವಿಗಳನ್ನು ಗುರುತಿಸಿ ತ್ರಿಚಕ್ರವಾಹನ, ಗಾಲಿಕುರ್ಚಿ ಕ್ರಚ್ಚರ್ಸ್, ಕ್ಯಾಲಿಪರ್, ಕೃತಕ ಕೈ ಮತ್ತು ಕಾಲು, ಸರ್ಜಿಕಲ್ ಶೂಸ್, ವಾಕರ್, ಸ್ಪ್ಲಿಂಟ್, ಸಿ.ಪಿ.ಚೇರ್, ಬಿಳಿಕೋಲು, ಬ್ರೈಲ್ ವಾಚ್ ಮತ್ತು ಸ್ಲೇಟ್, ಶ್ರವಣೋಪಕರಣ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಎಂ.ಆರ್. ಕಿಟ್ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಗುವುದು.

          ಹಿಂದೆ ತಪಾಸಣೆಗೊಳಪಟ್ಟ ಅರ್ಹ ವಿಕಲಚೇತನ ಫಲಾನುಭವಿಗಳು ಈ ಸಮಾರಂಭಕ್ಕೆ ಬರುವಾಗ ದೀನ್ ದಯಾಳ್ ಸಂಸ್ಥೆ ನೀಡಿದ ಪತ್ರದ ಮೂಲ ಪ್ರತಿ, ಆದಾಯ ಪ್ರಮಾಣಪತ್ರ, ನ್ಯೂನತೆ ಕಾಣುವ 2 ಭಾವಚಿತ್ರ, ರೇಷನ್ ಕಾರ್ಡು ಮತ್ತು ಆಧಾರ್ ಕಾರ್ಡುಗಳನ್ನು ತರುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.

ಮೈಸೂರಿನಲ್ಲಿ ಕೌಶಲ್ಯಾಧಾರಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

          ಮೈಸೂರು, ಸೆ. 06.(ಕ.ವಾ.)-ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಚಾಮರಾಜನಗರ ಇವುಗಳ ಸಂಯುಕ್ತಾಶ್ರಯದಲ್ಲಿ ನಾಲ್ಕು ವಾರಗಳ ಯು.ಪಿ.ಎಸ್. ರಿಪೇರಿ ಮತ್ತು ನಿರ್ವಹಣೆ ಕುರಿತ ಕೌಶಲ್ಯಾಧಾರಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ.

          ಈ ತರಬೇತಿಯು ಉಚಿತವಾಗಿದ್ದು, ತರಬೇತಿಯಲ್ಲಿ ಯು.ಪಿ.ಎಸ್. ರಿಪೇರಿ ಮತ್ತು ನಿರ್ವಹಣೆ ಕುರಿತ ಉದ್ಯಮಗಳನ್ನು ಸ್ಥಾಪಿಸುವ ಬಗ್ಗೆ, ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯ, ಉದ್ಯಮವನ್ನು ನಿರ್ವಹಿಸುವ, ಮಾರುಕಟ್ಟೆ ನಿರ್ವಹಣೆ ಬಗ್ಗೆ ಮಾಹಿತಿಗಳನ್ನು ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪಾಸಾಗಿರಬೇಕು ಮತ್ತು 18 ರಿಂದ 40 ವರ್ಷ ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಗೆ ಹಾಜರಾಗಬಯಸುವ ಅಭ್ಯರ್ಥಿಗಳು ಸ್ವ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಸಯ್ಯಾಜಿರಾವ್ ರಸ್ತೆ, ಮೈಸೂರು ಕಛೇರಿಗೆ 2012 ರ ಸೆಪ್ಟೆಂಬರ್ 15 ರೊಳಗಾಗಿ ಸಲ್ಲಿಸಬೇಕೆಂದು ಸಿಡಾಕ್ ಸಂಸ್ಥೆಯ ತರಬೇತಿ ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತರಬೇತಿ ಅಧಿಕಾರಿ ಅವರ ಮೊಬೈಲ್ ಸಂಖ್ಯೆ: 7760145784ನ್ನು ಸಂಪರ್ಕಿಸಬಹುದು.

ಸೆಪ್ಟೆಂಬರ್ 10 ರಿಂದ ಪರೀಕ್ಷಾ ಪೂರ್ವ ತರಬೇತಿ

          ಮೈಸೂರು, ಸೆ. 06.(ಕ.ವಾ.)-ಕರ್ನಾಟಕ ಲೋಕ ಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತು ಪಂಚಾಯತ್ ರಾಜ್ ಇಲಾಖೆಯಲ್ಲಿನ 1750 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಮೈಸೂರಿನ ಸರಸ್ವತಿಪುರಂ 9ನೇ ಮೇನ್, 1ನೇ ಕ್ರಾಸ್, ಕೆ.ಹೆಚ್.ಬಿ.ಕಟ್ಟಡದ ಜಿಲ್ಲಾ ಉದ್ಯೋಗ ವಿನಿಮಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೆಪ್ಟೆಂಬರ್ 10 ರಿಂದ 22 ರವರೆಗೆ ಅಪರಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ನುರಿತ ಉಪನ್ಯಾಸಕರಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ಆಯೋಜಿಸಲಾಗಿದೆ. ಸದರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರನ್ನು ಭಾವಚಿತ್ರದೊಂದಿಗೆ ಈ ಕಚೇರಿಗೆ ಸೆಪ್ಟೆಂಬರ್ 9 ರೊಳಗೆ ಖುದ್ದಾಗಿ ಬಂದು ನೋಂದಾಯಿಸಿಕೊಳ್ಳಬಹುದಾಗಿದೆ. ಈ ಕಚೇರಿಯಲ್ಲಿ ಲಭ್ಯವಿರುವ ವೃತ್ತಿ ಗ್ರಂಥಾಲಯವನ್ನು ಕಚೇರಿ ಕೆಲಸದ ವೇಳೆಯಲ್ಲಿ ಉಚಿತವಾಗಿ ಸದುಪಯೋಗಿಸಿಕೊಂಡು ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೂರವಾಣಿ ಸಂಖ್ಯೆ:2489972 ನ್ನು ಸಂಪರ್ಕಿಸಬಹುದು.

ಗ್ರಂಥಾಲಯಗಳ ಹೆಚ್ಚುವರಿ ಪುಸ್ತಕಗಳಿಗಾಗಿ ಮನವಿ ಸಲ್ಲಿಸಿ

          ಮೈಸೂರು, ಸೆ. 06.(ಕ.ವಾ.)-ಮೈಸೂರು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಶಾಖೆ ಹಾಗೂ ಕೆಲವು ಅಧೀನ ಶಾಖೆ/ಸೇವಾ ಕೇಂದ್ರ ಗ್ರಂಥಾಲಯಗಳಲ್ಲಿ ಲಭ್ಯವಿರುವ ಹೆಚ್ಚುವರಿ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ಹಾಗೂ ಅನುದಾನಿತ ಶಾಲೆಗಳಿಗೆ ದಾನದ ರೂಪದಲ್ಲಿ ನೀಡಲಾಗುವುದು. ಆಸಕ್ತ ಸರ್ಕಾರಿ/ಅನುದಾನಿತ ಶಾಲೆಗಳ ಅಧಿಕಾರಿಗಳು/ ಮುಖ್ಯೋಪಾಧ್ಯಾಯರು ಕಚೇರಿ ವೇಳೆಯಲ್ಲಿ ಈ ಕಚೇರಿಗೆ ಮನವಿಯನ್ನು ಸಲ್ಲಿಸಬಹುದಾಗಿದೆ.