District News 15-07-2013

Monday, July 15th, 2013

ದಿನಾಂಕ: 15-07-2013

ಜಿಲ್ಲಾಸುದ್ದಿ

ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸೂಚನೆ

ಹಾವೇರಿ: ಜು.15: ಮುಂಗಾರು ಮಳೆಗಾಲ ಆರಂಭವಾಗಿದ್ದು, ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಲಕ್ಷಣಗಳು ಕಂಡುಬರುತ್ತಿದ್ದು, ಹಾವೇರಿ ತಾಲೂಕಿನ ರೈತ ಬಾಂಧಬರು ತಮ್ಮ ನಾಉವಾರುಗಳಿಗೆ ಗಳಲು ಬೇನೆ, ಚಪ್ಪಬೇನೆ ಹಾಗೂ ಕರಳು ಬೇರೆ ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನು ಹಾಕಿಸಬೇಕೆಂದು  ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜು ಕೊಲೇರ ಅವರು ಸೂಚನೆ ನೀಡಿದ್ದಾರೆ.

ಈ ಲಸಿಕೆಯು ಉಚಿತವಾಗಿದ್ದು,  ಕೂಡಲೇ ರೈತರು ತಮ್ಮ ಜಾನುವಾರುಗಳನ್ನು ಪ್ರಾಣಾಪಾಯದಿಂದ ರಕ್ಷಿಸಿಕೊಳ್ಳಬೇಕು ಹಾಗೂ ಆಯಾ ಗ್ರಾಮಕ್ಕೆ ಸಂಬಂಧಿಸಿದ ಪಶು ವೈದ್ಯ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿಯವರಿಂದ ಜಾನುವಾರು, ಕುರಿ ಹಾಗೂ ಮೇಕೆಗಳಿಗೆ ಲಸಿಕೆಯನ್ನು ಹಾಕಿಸಬೇಕೆಂದು ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯತ ಉಪಚುನಾವಣೆ : ವೇಳಾಪಟ್ಟಿ ಪ್ರಕಟ

ಹಾವೇರಿ: ಜು.15:  ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಆಕಸ್ಮಿಕವಾಗಿ ತೆರವಾಗಿರು ಹಾಗೂ ಸದಸ್ಯರು ಆಯ್ಕೆಯಾಗದೇ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಪಂಚಾಯತ ರಾಜ್ ನಿಯಮಗಳನ್ವಯ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.

ಚುನಾವಣಾ ಆಯೋಗದ ಆದೇಶ ರೀತ್ಯ ದಿನಂಕ:17-07-2013(ಬುಧವಾರ) ಚುನಾವಣಾ ಅಧಿಸೂಚನೆ ಹೊರಬಿಳಲಿದೆ. ನಾಮಪತ್ರಗಳನ್ನು ಸಲ್ಲಿಸಲು 24-07-2013 ಕೊನೆಯ ದಿನವಾಗಿದ್ದು, 25-07-2013 ರಂದು ನಾಮಪತ್ರಗಳ ಪರಿಶೀಲನೆ ಜರುಗುವುದು. ಉಮೇದುವಾರಿಕೆ ಹಿಂಪಡೆಯಲು 27-07-2013 ಕೊನೆಯದಿನವಾಗಿದ್ದು, 04-08-2013 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ಜರುಗಲಿದೆ. ಅವಶ್ಯವಿದ್ದಲ್ಲಿ 06-08-2013 ರಂದು ಮರುಮತದಾನ ನಡೆಸಲಾಗುವುದು. 07-08-2013 ರಂದು ಬೆಳಿಗ್ಗೆ 8 ಗಂಟೆಯಿಂದ ಜಿಲ್ಲೆಯ ಆಯಾ ತಾಲೂಕಾ ಕೇಂದ್ರ ಸ್ಥಳಗಳಲ್ಲಿ ಮತ ಎಣಿಕೆ ಕಾರ್ಯ ಜರುಗಲಿದೆಯೆಂದು ಚುನಾವಣಾ ಆಯೋಗದ ತಿಳಿಸಿದೆ.

ಗ್ರಾಮ ಪಂಚಾಯತಿಯ ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ  ಚುನಾವಣಾ ನೀತಿ ಸಂಹಿತೆಯು ದಿನಾಂಕ 17-07-2013 ರಿಂದ 07-08-2013 ರವರೆಗೆ ಜಾರಿಯಲ್ಲಿರುತ್ತದೆ. ಈ ನೀತಿ ಸಂಹಿತೆಯು ಬರ ಕಾಮಗಾರಿ, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲವೆಂದು ಆಯೋಗವು ಸ್ಪಷ್ಟಪಡಿಸಿದೆ.

ಜಿಲ್ಲೆಯ ತೆರವಾಗಿರುವ ಗ್ರಾಮ ಪಂಚಾಯತ ಸ್ಥಾನಗಳ ವಿವರ: ಹಾವೇರಿ ತಾಲೂಕಿನ ದೇವಿಹೊಸೂರ, ಕರ್ಜಗಿ, ಬಸಾಪೂರ, ರಾಣೇಬೆನ್ನೂರ ತಾಲೂಕಿನ ಮೆಡ್ಲೇರಿ, ಹಿರೇಕೆರೂರ ತಾಲೂಕಿನ ಹಳ್ಳೂರ, ಶಿಗ್ಗಾಂವಿ ತಾಲೂಕ ತಡಸ ಹಾಗೂ ಹಿರೇಮಲ್ಲೂರ, ಮತ್ತು ಹಾನಗಲ್ಲ ತಾಲೂಕಿನ ಹುಲ್ಲತ್ತಿ, ಕೆಲವರಕೊಪ್ಪ ಹಾಗೂ ಹಿರೇಹುಲ್ಲಾಳ ಗ್ರಾಮ ಪಂಚಾಯತಿಗಳ ತಲಾ ಒಂದೊಂದು ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

ಗ್ರಾಮ ಪಂಚಾಯತ ಚುನಾವಣೆ: ಅಧಿಕಾರಿಗಳ ನೇಮಕ

ಹಾವೇರಿ: ಜು.15:  ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳ ಉಪ ಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರು ಆದೇಶ ಹೊರಡಿಸಿದ್ದಾರೆ.

ಹಾವೇರಿ ತಾಲೂಕಿನ ದೇವಿಹೋಸೂರ ಗ್ರಾಮ ಪಂಚಾಯತಿಗೆ ಚುನಾವಣಾಧಿಕಾರಿಯಾಗಿ ಜಲಾನಯನ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವಿ.ಪ್ರಕಾಶ(ಮೊ:9448868772), ಸಹಾಯಕ ಚುನಾವನಾಧಿಕಾರಿಯಾಗಿ ದೇವಿಹೊಸೂರ ಉರ್ದು ಪ್ರೌಢಶಾಲೆಯ ಶಿಕ್ಷಕ ಐ.ಬಿ.ಡಾಂಗೆ, ಕರ್ಜಗಿ ಗ್ರಾ.ಪಂ.ಗೆ ಕರ್ಜಗಿ ಪಿ.ಯು.ಕಾಲೇಜ ಉಪನ್ಯಾಸಕ ರಮೇಶ ಹಾವೇರಿ (ಮೊ:9686272489), ಸಹಾಯಕ ಚುನಾವಣಾಧಿಕಾರಿಯಾಗಿ ಕರ್ಜಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ನಾಗರಾಜ ನಡುವಿನಮಠ, ಬಸಾಪೂರ ಗ್ರಾ.ಪಂ.ಗೆ ಡಿ.ಡಿ.ಪಿ.ಐ.ಕಚೇರಿಯ ಸಂಯೋಜಕ ಎ.ವೈ.ಮುಲ್ಲಾ(ಮೊ:9480099796) ಹಾಗೂ ಸಾಯಕ ಚುನಾವಣಾಧಿಕಾರಿಯಾಗಿ ಬಸಾಪೂರ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜೆಬಿವುಲ್ಲಾ ಕೆ. ಅವರನ್ನು ನೇಮಿಸಲಾಗಿದೆ.

ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾ.ಪಂ.ಗೆ ಚುನಾವಣಾಧಿಕಾರಿಯಾಗಿ ದೇವರಗುಡ್ಡ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಸ್.ಎಂ.ಬಾಗಾಧಿ(ಮೊ:9986471646), ಸಹಾಯಕ ಚುನಾವಣಾಧಿಕಾರಿಯಾಗಿ ಜೋಯಿಸರಹರಳಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎ.ಎಲ್.ಮತ್ತೂರ ಹಾಗೂ ಹಿರೇಕೆರೂರು ತಾಲೂಕಿನ ಹಳ್ಳೂರು ಗ್ರಾ.ಪಂ. ಚುನಾವಣಾಧಿಕಾರಿಯಾಗಿ ಹಿರೇಕಬ್ಬಾರ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಉಮಾಪತಿ(ಮೊ:8722835456) ಸಹಾಯಕ ಚುನಾವಣಾಧಿಕಾರಿಯಾಗಿ ಹಿರೇಕೆರೂರು ಸಿ.ಆರ್.ಪಿ. ಕಚೇರಿಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಆರ್.ಎಚ್.ಹಂಚಿಮನಿ ಅವರನ್ನು ನಿಯೋಜಿಸಿದೆ.

ಶಿಗ್ಗಾಂವ ತಾಲೂಕ ತಡಸ ಗ್ರಾಮ ಪಂಚಾಯತ ಚುನಾವಣಾಧಿಕಾರಿಯಾಗಿ ಶಿಗ್ಗಾಂವ ಬಿ.ಆರ್.ಸಿ.ಕಚೇರಿಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಎಫ್.ಬಾರಕಿ(ಮೊ:9480695259) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಶಿಗ್ಗಾಂವ ಸಿ.ಡಿ.ಪಿ.ಓ.ಕಚೇರಿಯ ಎನ್.ಎಂ.ಅರ್ಕಾಚಾರಿ, ಹಿರೇಮಲ್ಲರೂ ಗ್ರಾ.ಪಂ. ಚುನಾವಣಾಧಿಕಾರಿಯಾಗಿ ಶಿಗ್ಗಾಂವಿಯ ಸರ್ಕಾರಿ ಉರ್ದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಐ.ಆರ್.ಬಳ್ಳಾರಿ(ಮೊ: 94484 16036) ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಶಿಗ್ಗಾಂವ ಸಿ.ಆರ್.ಸಿ.ಯ ಬಿ.ಆರ್.ಅಂಗಡಿ ಅವರನ್ನು ನೇಮಿಸಿದೆ.

ಹಾನಗಲ್ಲ ತಾಲೂಕ ಹುಲ್ಲತ್ತಿ ಗ್ರಾ.ಪಂ. ಚುನಾವಣಾಧಿಕಾರಿಯಾಗಿ ಕಂಚಿನೆಗಳೂರ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಉಮೇಶ (ಮೊ:9481484030) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹಾನಗಲ್ಲ ಬಿ.ಇ.ಓ.ಕಚೇರಿಯ ಮ್ಯಾನೇಜರ್ ಎ.ಎನ್.ಕುಲಕರ್ಣಿ,  ಕೆಲವರಕೊಪ್ಪ ಗ್ರಾ.ಪಂ.ಚುನಾವಣಾಧಿಕಾರಿಯಾಗಿ ಬೊಮ್ಮನಹಳ್ಳಿ ಸಹಾಯಕ ಕೃಷಿ ಅಧಿಕಾರಿ ಶ್ರೀಧರ ದಾಸರ(7259005503) ಸಹಾಯಕ ಚುನಾವಣಾಧಿಕಾರಿಯಾಗಿ ಹಾನಗಲ್ಲ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ಎಲ್.ಕುಲಕರ್ಣಿ ಹಾಗೂ ಹಿರೇಹುಲ್ಲಾಳ ಗ್ರಾ.ಪಂ.ಚುನಾವಣಾಧಿಕಾರಿಯಾಗಿ ಕೊಪ್ಪರಸಿಕೊಪ್ಪ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಾಲರಾಜ ಎಸ್.(ಮೊ:9964556028) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹಾನಗಲ್ಲ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ ಪಿ.ಎಂ.ಮಾಳದರ ಅವರನ್ನು ನೇಮಕಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜಾನಪದ  ವಿ ವಿ ಸಂಸ್ಥಾಪನಾ ದಿನ

ಹಾವೇರಿ: ಜು.15:  ಜಿಲ್ಲೆಯ ಶಿಗ್ಗಾಂವ ತಾಲೂಕ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಜುಲೈ 22 ರಂದು ಬೆಳಿಗ್ಗೆ 11 ಗಂಟೆಗೆ ಗೊಟಗೋಡಿಯ ನಡುಮನೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆಯೆಂದು ಕುಲಸಚಿವ ಡಾ.ಸಿ.ಎ.ಸೋಮಶೇಖರಪ್ಪ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ನೆರವೇರಿಸಲಿದ್ದು, ವಿಶ್ವವಿದ್ಯಾಲಯದ ಮುಂದಿನ ಹೆಜ್ಜೆಗಳು ಸಂವಾದ ಕಾರ್ಯಕ್ರಮಕ್ಕೆ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಸಣ್ಣಕೈಗಾರಿಕೆ, ಮುಜರಾಯಿ, ಸಕ್ಕರೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಪ್ರಕಾಶ ಹುಕ್ಕೇರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಉಮಾಶ್ರೀ, ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಳ್ಳುವರು. ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಅವರು ಉಪಸ್ಥಿತರಿರುವರು ಹಾಗೂ ವಿ.ವಿ.ಯ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅವರು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ನಂತರ ಮಧ್ಯಾಹ್ನ 2.30ಕ್ಕೆ ಸಂವಾದಗೋಷ್ಠಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕಲಾ ಪ್ರದರ್ಶನ ಜರುಗಲಿದೆ ಎಂದು ಕುಲಸಚಿವ ಡಾ.ಸಿ.ಎ.ಸೋಮಶೇಖರಪ್ಪ ಅವರು ತಿಳಿಸಿದ್ದಾರೆ.

ಕೈಗಾ ಸ್ಥಾವರದಿಂದ ನೆಲೆ ಕಳೆದುಕೊಂಡವರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಬದ್ಧ: ಎಚ್.ಎನ್.ಭಟ್

ಕಾರವಾರ, ಜು.15: ಕೈಗಾ ಅಣು ವಿದ್ಯುತ್ ಸ್ಥಾವರದಿಂದ ನೆಲೆ ಕಳೆದುಕೊಂಡಿರುವ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೈಗಾ ಸ್ಥಾವರದ ನಿರ್ದೇಶಕ ಎಚ್.ಎನ್.ಭಟ್ ತಿಳಿಸಿದ್ದಾರೆ.

ಕೈಗಾ ಅಣು ವಿದ್ಯುತ್ ಸ್ಥಾವರದಿಂದ ತೊಂದರೆಗೀಡಾದ ಎಲ್ಲಾ 160ಕುಟುಂಬಗಳಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಪುನರ್ವಸತಿ ಹಾಗೂ ಸೂಕ್ತ ಪರಿಹಾರವನ್ನು ಈಗಾಗಲೇ ಒದಗಿಸಲಾಗಿದೆ. ಪರಿಹಾರದ ಜತೆಯಲ್ಲಿ ಯೋಜನಾ ನಿರಾಶ್ರಿತರ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ನೀಡಲಾಗಿದೆ. ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಒಟ್ಟು 186 ಜನರಿಗೆ ಉದ್ಯೋಗ ಒದಗಿಸಲಾಗಿದೆ. ಹೊಸದಾಗಿ ಉದ್ಯೋಗಕ್ಕೆ ಅರ್ಜಿಗಳು ಬರುತ್ತಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದರ ಹೊರತಾಗಿ ಕಳೆದ ಹಲವು ವರ್ಷಗಳಿಂದ ಸ್ಥಳೀಯ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೈಗಾ ಸ್ಥಾವರದ ಸುತ್ತಲಿನ ಗ್ರಾಮಗಳಲ್ಲಿ ಶೈಕ್ಷಣಿಕ, ಆರೋಗ್ಯ, ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದೆ. ಗೋಯಾರ್ ಗ್ರಾಮದಲ್ಲಿ ಸೇತುವೆ ನಿರ್ಮಾಣ, ಕೆರವಾಡಿ ಮತ್ತು ದೇವಲಮಕ್ಕಿ ಗ್ರಾಮಗಳಲ್ಲಿ ಬಹುಪಯೋಗಿ ಭವನಗಳ ನಿರ್ಮಾಣ, ಪುನರ್ವಸತಿ ಕೇಂದ್ರಗಳಲ್ಲಿ ಬೀದಿ ದೀಪಗಳ ಅಳವಡಿಕೆ, ಮಲ್ಲಾಪುರ ಪುನರ್ವಸತಿ ಕೇಂದ್ರ ವ್ಯಾಪ್ತಿಯಲ್ಲಿ ಆರ್‌ಸಿಸಿ ಪಾದಚಾರಿ ರಸ್ತೆ ನಿರ್ಮಾಣ ಇತ್ಯಾದಿ ಮೂಲಸೌಕರ್ಯ ಒದಗಿಸಲಾಗಿದೆ.

ಮಲ್ಲಾಪುರದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣ, ರೋಗಿಗಳ ಉಚಿತ ಸಂಚಾರಕ್ಕಾಗಿ ‘ಆರೋಗ್ಯ ವಾಹಿನಿ’, ಮಲವಳ್ಳಿ, ಬಸಲ, ಅಣಶಿ ಮತ್ತು ಬಾನಕೊಳ್ಳಿ ಗ್ರಾಮಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳ ಆಯೋಜನೆ ಮಾಡಲಾಗಿದೆ. ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಿಗೆ 26ಶಿಕ್ಷಕರನ್ನು ಒದಗಿಸಲಾಗಿದೆ. ‘ವಿದ್ಯಾ ವಾಹಿನಿ’ ಮೂಲಕ ಶಾಲಾ ಮಕ್ಕಳಿಗೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಆಟಿಕೆ ಸಾಮಾಗ್ರಿಗಳ ಪೂರೈಕೆ, ‘ಕೈಗಾ ವಿದ್ಯಾ ಆಧಾರ- 2013’ ಮೂಲಕ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್, ಡಿಕ್ಷನರಿಗಳನ್ನು ಒದಗಿಸುವ ಮೂಲಕ ಶೈಕ್ಷಣಿಕ ಸುಧಾರಣೆಗೆ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಮಲವಳ್ಳಿಯಲ್ಲಿ ಹೊಸ ಪ್ರಸೂತಿ ಕೋಣೆ, ಕೈಗಾ ಟೌನ್‌ಶಿಪ್‌ನ ಪೆಟ್ರೋಲ್ ಬಂಕ್‌ನಿಂದ ಹಿಂದೂವಾಡದ ವರೆಗಿನ ರಸ್ತೆ ಅಗಲೀಕರಣ, ಅಂಗನವಾಡಿ ಕೇಂದ್ರಗಳಿಗೆ ಫ್ಯಾನ್ ಹಾಗೂ ಶಾಲಾ ಮಕ್ಕಳಿಗೆ ಸೌರದೀಪ ವಿತರಣೆ, ಮೊಬೈಲ್ ಆರೋಗ್ಯ ಕೇಂದ್ರ, ಹರ್ತುಗಾದಲ್ಲಿ ರಸ್ತೆ ನಿರ್ಮಾಣ, ‘ಭಾಗೀರಥಿ’ ಯೋಜನೆ ಅಡಿ ಮಲ್ಲಾಪುರ, ಕುರ್ನಿಪೇಟೆ, ಹರೂರ್, ವಿರ‍್ಜೆ ಮತ್ತು ಬಳಸೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಸೇರಿದಂತೆ ಇನ್ನೂ ಹಲವಾರು ನೂತನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಸ್ಸ ಪೋತ್ಸಾಹ ದರ ಇಳಿಕೆ

ಬೆಳಗಾವಿ:ಜುಲೈ:15:(ಕರ್ನಾಟಕವಾರ್ತೆ): ಬೆಳಗಾವಿ ಧಾರವಾಡ ಹಾಗೂ ಬೆಳಗಾವಿ ಹುಬ್ಬಳ್ಳಿ ಮಧ್ಯ ಪ್ರತಿ ದಿನ ಸಂಚರಿಸುವ ತಡೆರಹಿತ ಬಸ್ಸುಗಳಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಪೋತ್ಸಾಹ ದರದಲ್ಲಿ ಇಳಿಕೆಮಾಡಲಾಗಿದ್ದು. ಪರಿಷ್ಕೃತ ಹೊಸ ದರಗಳು ಬೆಳಗಾವಿ ಧಾರವಾಡ ಸೆಮಿ ಡಿಲಕ್ಸ ಬಸ್ಸಿಗೆ ರೂಪಾಯಿ 90 ರಿಂದ 75 ದರ ನಿಗದಿ ಮಾಡಲಾಗಿದೆ. ಅದರಂತೆ ಬೆಳಗಾವಿ ಹುಬ್ಬಳ್ಳಿ ಸೆಮಿ ಡಿಲಕ್ಸ ಬಸ್ಸಿಗೆ 110 ರಿಂದ 100 ರೂಪಾಯಿಗೆ ದರ ನಿಗದಿ ಮಾಡಲಾಗಿದೆ ಎಂದು ವಿಭಾಗೀಯನಿಯಂತ್ರಣಾಧಿಕಾರಿ ವಾ.ಕ.ರ.ಸಾ. ಸಂಸ್ಥೆ ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮುದಾಯ ರೇಡಿಯೋ ಕೇಂದ್ರನಿರ್ವಹಣೆ ಕಾರ್ಯಾಗಾರ

ಬೆಳಗಾವಿ:ಜುಲೈ:15:(ಕರ್ನಾಟಕವಾರ್ತೆ): ವಾರ್ತಾ ಇಲಾಖೆ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ’ನಮ್ಮೂರ ಬಾನುಲಿಸಮುದಾಯ ರೇಡಿಯೋ ಕೇಂದ್ರ ಕರಗುಪ್ಪಿ-ಯಲ್ಲಾಪೂರ ಸಹಕಾರದೊಂದಿಗೆ ಸಂಘಟಿಸಿದ ಸಮುದಾಯ ರೇಡಿಯೋ” ಕೇಂದ್ರದ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಜುಲೈ 18 ರಂದು ಬೆಳಿಗ್ಗೆ 10-30ಕ್ಕೆ ನಾಗನೂರ ಶ್ರೀ ಬಸವೇಶ್ವರ ಟ್ರಸ್ಟ, ದೇವರಾಜ ಅರಸ ಕಾಲನಿ ಬೆಳಗಾವಿ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಶ್ರೀ ಎನ್. ಜಯರಾಂ ಉದ್ಘಾಟಕರಾಗಿ ಆಗಮಿಸಲಿದ್ದು, ಮಾಜಿ ಮಹಾಪೌರರಾದ ಡಾ ಸಿದ್ದನಗೌಡ ಪಾಟೀಲ ಅಧಕ್ಷತೆ ವಹಿಸಲಿರುವರು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಬೆಳಗಾವಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ಶ್ರೀಮತಿ ದೀಪಾ ಚೋಳನ್ ಹಾಗೂ ಅಭಿವೃದ್ಧಿ ಸಂವಹಣ ಪರಿಣಿತರಾದ ಶ್ರೀ ಎಂ. ಅಬ್ದುಲ್ ರೆಹಮಾನ್ ಪಾಷಾ ಬೆಂಗಳೂರು ಇವರು ಆಗಮಿಸಲಿರುವರು.

ಜುಲೈ 17 ರಂದು ಜಿಲ್ಲೆಯ 2.8 ಲಕ್ಷ ಮಕ್ಕಳಿಗೆ ಕಬ್ಬಿಣಾಂಶ, ಜಂತುನಾಶಕ ಮಾತ್ರೆಗಳ ವಿತರಣೆ

ಚಿತ್ರದುರ್ಗ,ಜು.15: ಚಿತ್ರದುರ್ಗ ಜಿಲ್ಲೆಯಲ್ಲಿರುವ 6 ರಿಂದ 10 ಹಾಗೂ 10 ರಿಂದ 19 ರ ವಯೋಮಿತಿಯಲ್ಲಿರುವ ಎಲ್ಲಾ ಹದಿಹರೆಯದ 2.8 ಲಕ್ಷ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಕಬ್ಬಿಣಾಂಶವಿರುವ ಮತ್ತು ಜಂತುನಾಶಕ ಮಾತ್ರೆಗಳನ್ನು ಇದೇ ಜುಲೈ 17 ರಂದು ಚಿತ್ರದುರ್ಗ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸಾಂಕೇತಿಕವಾಗಿ ನೀಡಿ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದೆಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.

 ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬಾಲ್ಯಾವಸ್ಥೆಯಿಂದ ವಯಸ್ಕರ ಹಂತಕ್ಕೆ ಹೋಗುವ ಮದ್ಯಕಾಲದ “ಹದಿಹರೆಯದ“ ಗಂಡು ಮತ್ತು ಹೆಣ್ಣು ಮಕ್ಕಳು ಬಹಳಷ್ಟು ರಕ್ತಹೀನತೆಯಿಂದ ಸಾರ್ವತ್ರಿಕವಾಗಿ ಬಳಲುತ್ತಿದ್ದು, ಅದರಲ್ಲೂ ಹೆಣ್ಣುಮಕ್ಕಳು ತೀವ್ರ ಬೆಳವಣಿಗೆಯಿಂದ ಹಾಗೂ ಋತುಸ್ರಾವದಿಂದ ಶೇ.55 ರಷ್ಟು ರಕ್ತಹೀನತೆಯಿಂದ, ಅಪೌಷ್ಠಿಕತೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಇಡೀ ರಾಜ್ಯಾದ್ಯಂತ ಹದಿಹರೆಯದ ಮಕ್ಕಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವುಗಳ ಸಹಯೋಗದಲ್ಲಿ ರಕ್ತಹೀನತೆ ತಡೆಯುವ ಫೋಲಿಕ್ ಆಸಿಡ್ ಮಾತ್ರೆಗಳನ್ನು ವಾರಕ್ಕೊಂದರಂತೆ 52 ವಾರಗಳವರೆಗೆ ಹಾಗೂ ಜಂತುನಾಶಕ ಅಲ್‌ಬೆಂಡಜೊಲನ್ನು ಆರು ತಿಂಗಳಿಗೊಂದರಂತೆ ವರ್ಷಕ್ಕೆ 2 ಬಾರಿ ಕೊಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 ಈ ವಯೋಮಾನದಲ್ಲಿರುವ ಶಾಲೆ ಬಿಟ್ಟವರನ್ನು ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರ ಸಹಕಾರದಲ್ಲಿ ಗುರುತಿಸಿ ಮಾತ್ರೆ ನೀಡಲಾಗುತ್ತದೆ. ಅದಕ್ಕಾಗಿ ಒಂದು ವರ್ಷಕ್ಕೆ ಬೇಕಾಗುವಷ್ಟು ಮಾತ್ರೆಗಳು ಈಗಾಗಲೇ ಶಿಕ್ಷಣ ಇಲಾಖೆಗೆ ಸರ್ಕಾರದಿಂದ ಸರಬರಾಜು ಆಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಭೆಯಲ್ಲಿ ತಿಳಿಸಿದರು.

 ಸರ್ಕಾರದಿಂದ ನಡೆಯುತ್ತಿರುವ ವಸತಿನಿಲಯ ಹಾಗೂ ವಸತಿ ಶಾಲೆಗಳಿಗೆ ಈ ಮಾತ್ರೆಗಳನ್ನು ಆದ್ಯತೆಯ ಮೇಲೆ ಪೂರೈಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ನಾರಾಯಣಸ್ವಾಮಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವರ್ಷಕ್ಕೆ ಎರಡು ಸಾರಿಯಾದರೂ ಆರೋಗ್ಯ ತಪಾಸಣೆ ಮಾಡಿ ಬಾಲ್ಯದಲ್ಲಿಯೇ ಮಕ್ಕಳಲ್ಲಿರುವ ಆರೋಗ್ಯ ನ್ಯೂನತ್ಯೆಯನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮತ್ತು ಔಷಧೋಪಚಾರ ನೀಡುವ ಮೂಲಕ ಅವರನ್ನು ದೇಶದ ಸದೃಡ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡಲು ಮುಂದಾಗಬೇಕೆಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಿಕ್ಷಣ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಕನಿಷ್ಠ ವರ್ಷಕ್ಕೊಮ್ಮೆಯಾದರೂ ತಮ್ಮ ವ್ಯಾಪ್ತಿಯಲ್ಲಿನ ಶಾಲೆಗೆ ಭೇಟಿನೀಡಿ ಅಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧಿಸುವ ಶಿಕ್ಷಣ ವಿಧಾನ ಮತ್ತು ಅದನ್ನು ಮಕ್ಕಳು ಗ್ರಹಿಸುತ್ತಿರುವ ಕಲಿಕೆಯ ಸ್ಥಿತಿ-ಗತಿ, ಬಿಸಿಯೂಟ ಹಾಗೂ ಆರೋಗ್ಯ ತಪಾಸಣೆ, ಔಷಧೋಪಚಾರದ ಬಗ್ಗೆ ಸಮಗ್ರ ತನಿಖೆ ಮಾಡಿ ಮೇಲಾಧಿಕಾರಿಗಳಿಗೆ ಕಡ್ಡಾಯವಾಗಿ ವರದಿ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು, ಸಿಬ್ಬಂದಿಯವರು ತಾವು ಸಾರ್ವಜನಿಕರ ಸೇವಕರೆಂದು ತಮ್ಮ ಇಲಾಖೆಯ ಸೇವೆಯನ್ನು ಸೇವಾ ಮನೋಭಾವನೆಯಿಂದ ಅರ್ಹ ವ್ಯಕ್ತಿಗಳಿಗೆ ನೀಡಲು ಅಣಿಯಾಗಬೇಕೆಂದು ಜಿಲ್ಲಾಧಿಕಾರಿಗಳು ಮನವರಿಕೆ ಮಾಡಿದರು. ಆರೋಗ್ಯ ಇಲಾಖೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಕಾರ್ಯನಿಮಿತ್ತ ಕೈಗೊಳ್ಳುವ ಪ್ರವಾಸದಲ್ಲಿ ಯಾವುದಾದರೂ ವಸತಿನಿಲಯ, ವಸತಿಶಾಲೆಗಳಿಗೆ ಭೇಟಿನೀಡಿ ಅಲ್ಲಿರುವ ಮಕ್ಕಳ ಯೋಗಕ್ಷೇಮ, ವಿದ್ಯಾಭ್ಯಾಸದ ಬಗ್ಗೆ ವಿಚಾರಣೆ ಮಾಡುವಂತೆ ಹಾಗೂ ಅಲ್ಲಿರುವ ಸಿಬ್ಬಂದಿಗಳಿಗೆ ಸಲಹೆ-ಸೂಚನೆಗಳನ್ನು ನೀಡಬೇಕೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಲಹೆ ಮಾಡಿದರು. ಈ ವಿಷಯದಲ್ಲಿ ಪ್ರತ್ಯೇಕ ಸಭೆಯೊಂದನ್ನು ಕರೆದು ಸುದೀರ್ಘ ಚರ್ಚೆ ನಡೆಸಲಾಗುವುದೆಂದು ಅವರು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ವೈದ್ಯರುಗಳು ಉಪಸ್ಥಿತರಿದ್ದರು.

ಯಶಸ್ವಿನಿ ಸದಸ್ಯತ್ವ ನೊಂದಾಯಿಸಲು ಹಾಗೂ ನವೀಕರಿಸುವ ಪ್ರಕ್ರಿಯೆ ಆರಂಭ

ಚಿತ್ರದುರ್ಗ,ಜು.15: ಕರ್ನಾಟಕ ಸರ್ಕಾರದ ಯಶಸ್ವಿನಿ ರೈತರ ಆರೋಗ್ಯ ವಿಮಾ ಯೋಜನೆಯು 2003-04 ನೇ ಸಾಲಿನಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದು, ಸಹಕಾರ ಸಂಘಗಳ ಫಲಾನುಭವಿಗಳು 2013-14 ನೇ ಸಾಲಿಗೆ ವಾರ್ಷಿಕ ಶುಲ್ಕ ರೂ.210/- ಸಂಘಗಳಿಗೆ ಸಂದಾಯ ಮಾಡಿ ತಮ್ಮ ಸದಸ್ಯತ್ವ ನವೀಕರಿಸಲು ಜುಲೈ 15 ರಿಂದ ಪ್ರಕ್ರಿಯೆ ಆರಂಭವಾಗಿದೆ.

ಈಗಾಗಲೇ ಹೆಸರು ನೊಂದಾಯಿಸಿರುವ ಸದಸ್ಯರ ಸೌಲಭ್ಯ ಅವಧಿಯು ದಿನಾಂಕ 15-8-2013 ಕ್ಕೆ ಮುಕ್ತಾಯಗೊಳ್ಳಲಿದೆ. ಸದಸ್ಯತ್ವ ನವೀಕರಿಸಲು ದಿನಾಂಕ 31-8-2013 ಕಡೆಯ ದಿನವಾಗಿದೆ. ಹೊಸದಾಗಿ ಸದಸ್ಯತ್ವ ನೊಂದಣಿ ಮಾಡಲು ಯಾವುದೇ ಸಹಕಾರ ಸಂಘದಲ್ಲಿ ದಿನಾಂಕ 1-8-2013 ಕ್ಕೆ ಮೂರು ತಿಂಗಳ ಮುಂಚಿತವಾಗಿ ಸದಸ್ಯತ್ವ ಹೊಂದಿರಬೇಕಾಗಿರುತ್ತದೆ. ಹೊಸದಾಗಿ ಸದಸ್ಯತ್ವ ನೊಂದಣಿಗೆ ದಿನಾಂಕ 15-10-2013 ಕಡೆಯ ದಿನವಾಗಿದೆ ಎಂದು ಸಹಕಾರ ಇಲಾಖೆಯ ಸಹಕಾರ ಸಂಘಗಳ ಉಪನಿಬಂಧಕರಾದ ಜಿ.ಓಬಾನಾಯ್ಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಲಬರ್ಗಾ ಮಹಾನಗರ ಪಾಲಿಕೆ : ಮಾಹಿತಿ ಹಕ್ಕು ಅಧಿನಿಯಮದಡಿ ಅಧಿಕಾರಿಗಳ ನೇಮಕ

ಗುಲಬರ್ಗಾ,ಜು.15.(ಕ.ವಾ.)- ಗುಲಬರ್ಗಾ ಮಹಾನಗರ ಪಾಲಿಕೆಯಿಂದ ಮಾಹಿತಿ ಹಕ್ಕು ಅಧಿನಿಯಮ 2005ರಡಿ ಸಾರ್ವಜನಿಕರು ಕೋರುವ ಮಾಹಿತಿ ಒದಗಿಸಲು ಅಧಿನಿಯಮ ಕಲಂ 5(1), 5(2) ಮತ್ತು 19(1)ರಡಿ ಅಧಿಕಾರಿಗಳನ್ನು ನೇಮಿಸಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮೇಲ್ಮನವಿ ಪ್ರಾಧಿಕಾರಗಳೆಂದು ನೇಮಕ ಮಾಡಿದ್ದು ಹಾಗೂ ನೇರವಾಗಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ನೇರವಾಗಿ ಉತ್ತರಿಸಿ ಅದರ ಒಂದು ಪ್ರತಿಯನ್ನು ಕರ್ನಾಟಕ ಮಾಹಿತಿ ಹಕ್ಕು ಆಯೋಗ ಬಹುಮಹಡಿಗಳ ಕಟ್ಟಡ ಬೆಂಗಳೂರು ಇವರಿಗೆ ವರದಿ ಸಲ್ಲಿಸಲಾಗುವುದೆಂದು ಆಯುಕ್ತರು ತಿಳಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮ ಕಲಂ 19(1)ರಡಿ ಮೇಲ್ಮನವಿ ಅಧಿಕಾರಿಗಳಾಗಿ ಗುಲಬರ್ಗಾ ಮಹಾನಗರ ಪಾಲಿಕೆ ಆಯುಕ್ತ ಎಸ್.ಬಿ. ಕಟ್ಟಿಮನಿ ಕಾರ್ಯನಿರ್ವಹಿಸುವರು. ಕಲಂ 5(1)ರಡಿ ಸಾರ್ವಜನಿಕ ಮಾಹಿತಿ ಅಧಿಕಾರಿ, ಕಲಂ5(2)ರಡಿ ಸಹಾಯಕ ಸಾರ್ವಜನಿಕ ಅಧಿಕಾರಿ ಹಾಗೂ ಸಂಬಂಧಪಟ್ಟ ಶಾಖೆಗಳ ವಿವರ ಕ್ರಮವಾಗಿ ಇಂತಿದೆ.

ಆರ್.ಪಿ. ಜಾಧವ ಕಾರ್ಯಪಾಲಕ ಅಭಿಯಂತರರು ಮಹಾನಗರ ಪಾಲಿಕೆ ಗುಲಬರ್ಗಾ, ಅಬ್ದುಲ್ ಹಮೀದ ಅನ್ಸಾರಿ ಪ್ರದಸ- ತಾಂತ್ರಿಕ/ ಡಿ.ಬಿ. ಶಾಖೆಗೆ ಸಂಬಂಧಿಸಿದಂತೆ ಅನುಪಾಲನಾ ವರದಿಯ ಮೇಲ್ವಿಚಾರಣೆ ಉಸ್ತುವಾರಿ. ವಾಸುದೇವ ಮುಖ್ಯ ಲೆಕ್ಕಾಧಿಕಾರಿಗಳು, ಮಲ್ಲಿಕಾರ್ಜುನ ಕರ ವಸೂಲಿಗಾರ- ಲೆಕ್ಕ ಶಾಖೆಯ ಮತ್ತು ಲೆಕ್ಕ ಪರಿಶೋಧನಾ ರೂ.ನಂ. 09. ಅಭಯಕುಮಾರ ಪರಿಸರ ಅಭಿಯಂತರರು (ಉತ್ತರ), ಖಾಜಾ ಮೈನೋದ್ದಿನ್ ಪ್ರದಸ- ಆರೋಗ್ಯ ಶಾಖೆ(ಉತ್ತರ). ಬಾಬುರಾವ ಪರಿಸರ ಅಭಿಯಂತರರು ದಕ್ಷಿಣ, ರವಿ ಮೋರೆ ಎದಸ.,-ಆರೋಗ್ಯ ಶಾಖೆ(ದಕ್ಷಿಣ). ಜಗನ್ನಾಥ ಪಾಟೀಲ ಕಚೇರಿ ವ್ಯವಸ್ಥಾಪಕ, ಭೀಮಣ್ಣಾ ನಾಯಕ ಪ್ರದಸ-ಹಂಚಿಕೆ ಶಾಖೆ. ಬಾಬುರಾವ ವಿಭೂತೆ ಪ್ರಭಾರಿ ಪರಿಷತ್ ಕಾರ್ಯದರ್ಶಿ, ಮಹ್ಮದ್ ಹಕೀಮ ಎದಸ.,-ಪರಿಷತ್ ಶಾಖೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳು. ವಿಜಯಲಕ್ಷ್ಮೀ ಆರ್. ಪಟ್ಟೇದಾರ ಸಿಎಓ, ಶಕೀಲ ಎಲ್ ಗುನ್ನಾಪೂರ ಸಿ.ಓ.,-ಎಸ್.ಜೆ.ಎಸ್.ಆರ್.ವೈ(ಉತ್ತರ ಮತ್ತು ಆಶ್ರಯ ಶಾಖೆ). ಜಗನ್ನಾಥ ಪಾಟೀಲ ಕಚೇರಿ ವ್ಯವಸ್ಥಾಪಕ, ಶಿವಶರಣಯ್ಯ ಪ್ರದಸ.,-ಸಿಬ್ಬಂದಿ ಶಾಖೆ. ಅಮೀನ್ ಮುಕ್ತಾರ ಸ.ಕಾಪಾ.ಅ.(ಉತ್ತರ), ಸುನೀಲ ಪ್ರದಸ.,-ಚುನಾವಣಾಶಾಖೆ. ಬಾಬುರಾವ ವಿಭೂತೆ ಪ್ರಭಾರಿ ಪರಿಷತ್ ಕಾರ್ಯದರ್ಶಿ (ದಕ್ಷಿಣ), ಮಹೇಶ ದೇಶಪಾಂಡೆ ಕ.ವ.,-ಚುನಾವಣಾ ಶಾಖೆ. ವಿಠಲ ಹಾದಿಮನಿ ಸಿ.ಎ.ಓ., ಶಾಂತಪ್ಪ ಹಾದಿಮನಿ ಸಿ.ಓ.,-ಎಸ್.ಜೆ.ಎಸ್.ಆರ್.ವೈ (ದಕ್ಷಿಣ ಮತ್ತು 22.75%). ಎಂ.ಎ. ಮಜೀದ್ ಸ.ಕಾ.ಪಾ.ಅ. ಹಾಗೂ ವಲಯ ಆಯುಕ್ತರು, ಬಸವರಾಜ ವಗ್ಗೆ ಕ.ವ್ಯ. ಶೀಘ್ರಲಿಪಿಗಾರರು.,-ವಲಯ ಕಚೇರಿ-1ಗೆ ಸಂಬಂಧಪಟ್ಟ ಮಾಹಿತಿಗಳು. ಆರ್.ಪಿ. ಜಾಧವ, ಸ.ಕಾ.ಪಾ.ಅ. ಹಾಗೂ ವಲಯ ಆಯುಕ್ತರು, ಬಂಡಪ್ಪ ಹುಲಿಮನಿ ಕ.ವ್ಯ. ಪ್ರದಸ.,-ವಲಯ ಕಚೇರಿ-3ಗೆ ಸಂಬಂಧಪಟ್ಟ ಮಾಹಿತಿಗಳು. ಅಮಿನ್ ಮುಕ್ತಾರ್ ಸ.ಕ.ಪ.ಅ. ಹಾಗೂ ವಲಯ ಆಯುಕ್ತರು, ಕವಿತಾಬಾಯಿ ಕ.ವ್ಯ. ಪ್ರ.ದ.ಸ-ವಲಯ ಕಚೇರಿ-4ಕ್ಕೆ ಸಂಬಂಧಪಟ್ಟ ಮಾಹಿತಿಗಳು. ರಿಯಾಜ್ ಅಹ್ಮದ್, ಗುರುರಾಜ ಎದಸ.,-ವಿದ್ಯುತ್ ಶಾಖೆ. ಶಂಕರ ಕೊಳ್ಳೂರ ಕಂದಾಯ ಅಧಿಕಾರಿ ಕಂದಾಯ ಇಲಾಖೆ ವಲಯ ಕಚೇರಿ-1, ಬಸವರಾಜ ವಗ್ಗೆ ಕ.ವ್ಯ. ಶೀಘ್ರಲಿಪಿಗಾರರು.,- ವಲಯ ಕಚೇರಿ-1 ಕಂದಾಯ ಶಾಖೆ. ಶಂಕರ ಕೊಳ್ಳೂರು ಕಂದಾಯ ಇಲಾಖೆ, ಕಂದಾಯ ಅಧಿಕಾರಿ, ವಲಯ ಕಚೇರಿ-2, ಅಕ್ರಮ ಅಹಮದ್ ಪ್ರದಸ ಕ.ವ್ಯ. ವಲಯ ಕಚೇರಿ-2 ಕಂದಾಯ ಶಾಖೆಗೆ ಸಂಬಂಧ ಪಟ್ಟ ಮಾಹಿತಿ ವಲಯ ಕಚೇರಿ-2.  ಸಿದ್ರಾಮ ಕರಣಿಕ ಕಂದಾಯ ಅಧಿಕಾರಿಗಳು (ಪ್ರ), ಬಂಡಪ್ಪ ಕ.ವ್ಯ. ಪ್ರದಸ ವಲಯ ಕಚೇರಿ-3.,-ಕಂದಾಯ ಶಾಖೆಗೆ ಸಂಬಂಧಪಟ್ಟ  ಮಾಹಿತಿ ವಲಯ ಕಚೇರಿ-3. ರಮೇಶ ಹಾಲು ಕಚೇರಿ ಸಹಾಯ (ಕಂ), ಕವಿತಾಬಾಯಿ ಕ.ವ್ಯ. ಪ್ರದಸ ವಲಯ ಕಚೇರಿ-4.,-ಕಂದಾಯ ಶಾಖೆಗೆ ಸಂಬಂಧಪಟ್ಟ ಮಾಹಿತಿ ವಲಯ ಕಚೇರಿ-4. ಆರ್.ಪಿ. ಜಾಧವ, ಕಾರ್ಯಪಾಲಕ ಅಭಿಯಂತರರು ಮಹಾನಗರ ಪಾಲಿಕೆ ಗುಲಬರ್ಗಾ, ಧೀರೆಂದ್ರ ಸೀನಿಯರ್ ಪ್ರೋಗ್ರಾಮರ್.,-ನಿರ್ಮಲ ನಗರ ಯೋಜನೆ ಜಿ.ಐ.ಎಸ್. ಜಗನ್ನಾಥ ಪಾಟೀಲ್ ಕ.ವ್ಯ.(ಕೇಂದ್ರ ಕಚೇರಿ) ಅಭಿಲೇಖಾಲಯ, ಸೌಭಾಗ್ಯಮ್ಮ ಪ್ರದಸ., -ಅಭಿಲೇಖಾಲಯ ಕೇಂದ್ರ ಕಚೇರಿ. ಜಗನ್ನಾಥ ಪಾಟೀಲ್ ಕ.ವ್ಯ.(ಕೇಂದ್ರ ಕಚೇರಿ) ಅಭಿಲೇಖಾಲಯ, ಅವಧೂತ ಡಿ. ಪ್ರದಸ.,-ಖರೀದಿ ಶಾಖೆ ಮತ್ತು ಉಗ್ರಾಣ ಶಾಖೆ.

ಸಂಬಂಧಪಟ್ಟ ಸಾರ್ವಜನಿಕ ಸಂಪರ್ಕಾಧಿಕಾರಿಯವರಿಂದ ಅರ್ಜಿದಾರರಿಗೆ ಮಾಹಿತಿ ಒದಗಿಸುವಲ್ಲಿ ಏನಾದರೂ ದೂರುಗಳು/ ಮೇಲ್ಮನವಿ ಸಲ್ಲಿಸಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಕಲಂ 19(1)ರ ಅಡಿ ಮೇಲ್ಮನವಿ ಪ್ರಾಧಿಕಾರವಾದ ಮಹಾನಗರ ಪಾಲಿಕೆಯ ಆಯುಕ್ತರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಜೆ.ಟಿ.ಟಿ.ಸಿ.ಯಲ್ಲಿ ವಿವಿಧ ಕೋರ್ಸುಗಳಿಗೆ ಅರ್ಜಿ ಆಹ್ವಾನ

ಗುಲಬರ್ಗಾ,ಜು.15.(ಕ.ವಾ.)- ಗುಲಬರ್ಗಾದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜೆ.ಟಿ.ಟಿ.ಸಿ.)ದಲ್ಲಿ ಜಾಬ್ ಓರಿಯಂಟೆಡ್ ಮತ್ತು ಪ್ರಾಕ್ಟಿಕಲ್ ಇಂಟಿಗ್ರೇಟೆಡ್ ಕೋರ್ಸ್‌ನಲ್ಲಿ ಐಟಿಐ ಪಾಸಾದ ವಿದ್ಯಾರ್ಥಿಗಳು ಲ್ಯಾಟರಲ್ ಎಂಟ್ರಿ ಸ್ಕೀಮ್ ಮೂಲಕ 2ನೇ ವರ್ಷಕ್ಕೆ ಡಿಪ್ಲೋಮ ಕೋರ್ಸ್‌ನಲ್ಲಿ ಪ್ರವೇಶ ಪಡೆಯಬಹುದಾಗಿದೆ. ಕೋರ್ಸು ಸೇರುವ ಆಸಕ್ತರು ಜೆ.ಟಿ.ಟಿ.ಸಿ. ಕೇಂದ್ರದಿಂದ ಅರ್ಜಿ ಫಾರ್ಮುಗಳನ್ನು ಪಡೆದು ಭರ್ತಿಮಾಡಿ 16-7-2013ರೊಳಗಾಗಿ ಸಲ್ಲಿಸಬೇಕು.

ಐಟಿಐ: ಫಿಟ್ಟರ್, ಮಶಿನಿಷ್ಟ ಹಾಗೂ ಟರ್ನರ್ ಪಾಸಾದವರಿಗೆ ಸಿ.ಎನ್.ಸಿ. ಮಷಿನಿಷ್ಟ 6 ತಿಂಗಳ ಕೋರ್ಸು. ಈ ಕೋರ್ಸು ಸೇರಬಯಸುವವರು ಜೆ.ಟಿ.ಟಿ.ಸಿ. ಕೇಂದ್ರದಿಂದ ಅರ್ಜಿ ಫಾರ್ಮುಗಳನ್ನು ಪಡೆದು ಭರ್ತಿಮಾಡಿ ಸಲ್ಲಿಸಲು 24-7-2013 ಕೊನೆಯ ದಿನವಾಗಿದೆ.

ಎಸ್.ಎಸ್.ಎಲ್.ಸಿ./ ಪಿ.ಯು.ಸಿ. ಪಾಸಾದವರಿಗೆ ಸರ್ಟಿಫಿಕೇಟ್ ಕೋರ್ಸು ಗಳಾದ 1 ವರ್ಷದ ಟೂಲ್ ರೋಂ ಮಷಿನಿಷ್ಟ ಕೋರ್ಸು ಮತ್ತು 2 ವರ್ಷದ ಟೂಲ್ ಆಂಡ್ ಡೈ ಟೆಕ್ನಿಶಿಯನ್ ಕೋರ್ಸು (ಕೋರ್ಸು ಸೇರಬಯಸುವವರು ಜೆ.ಟಿ.ಟಿ.ಸಿ. ಕೇಂದ್ರದಿಂದ ಅರ್ಜಿ ಫಾರ್ಮಗಳನ್ನು ಪಡೆದು ಭರ್ತಿಮಾಡಿ 19-7-2013ರೊಳಗಾಗಿ ಸಲ್ಲಿಸಬೇಕು.)

ಒಂದು ತಿಂಗಳ ಸರ್ಟಿಫಿಕೇಟ್ ಕೋರ್ಸು: ಆಟೋಕ್ಯಾಡ್, ಸಿ.ಎನ್.ಸಿ., ಪ್ರೋ-ಇ, ಕ್ಯಾಟಿಯಾ, ಯು.ಜಿ. ಹಾಗೂ ಸಾಲಿಡ್ ವರ್ಕ ಸರ್ಟಿಫೀಕೇಟ್ ಕೋರ್ಸುಗಳಿಗೆ ಸೇರಬಯಸುವವರು ಐಟಿಐ./ ಡಿಪ್ಲೋಮಾ ಪಾಸಾಗಿರಬೇಕು. ಸರ್ಕಾರಿ ಉಪಕರಣಗಾರರ ಮತ್ತು ತರಬೇತಿ ಕೇಂದ್ರದಿಂದ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸಲಾಗಿದೆ.

ಟೂಲ್ ಆಂಡ್ ಡೈ ಮೇಕಿಂಗ್ ಪ್ರಾಕ್ಟಿಕಲ್ ಓರಿಯಂಟೆಡ್ ತರಬೇತಿಯಾಗಿದ್ದು, ಪ್ರಾಕ್ಟಿಕಲ್ ಮತ್ತು ಪಠ್ಯಗಳನ್ನು ಅಳವಡಿಸಲಾಗಿದೆ. ಕಂಪನಿಗಳಿಗೆ ಬೇಕಾಗುವ ಎಲ್ಲ ಕೌಶಲ್ಯ ಮತ್ತು ಜ್ಞಾನವನ್ನು ಅಳವಡಿಸಿಕೊಳ್ಳಲು ಬೇಕಾಗುವ ಎಲ್ಲ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಜೆ.ಟಿ.ಟಿ.ಸಿ. ಅಳವಡಿಸಿಕೊಂಡಿರುವುದರಿಂದ ಈ ತರಬೇತಿಯ ಬಹು ಬೇಡಿಕೆಯ ತರಬೇತಿ ಎಂದು ಸಾಬೀತಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಯರಾಜ್ ಟಿ ನರಗುಂದ ಪ್ರಾಂಶುಪಾಲರು ಜೆ.ಟಿ.ಟಿ.ಸಿ., ಎಮ್.ಜಿ. ರಸ್ತೆ, ಬಸವೇಶ್ವರ ಕಾಲೋನಿ ಗುಲಬರ್ಗಾ ದೂರವಾಣಿ ಸಂಖ್ಯೆ 08472-230084 ಮೊ. 9141630308ನ್ನು ಸಂಪರ್ಕಿಸಿ ಪಡೆಯಬಹುದು. 

ಪಿಂಚಣಿ ಅದಾಲತ್

ಗದಗ(ಕರ್ನಾಟಕ ವಾರ್ತೆ)   ಜುಲೈ 15:   ಉಪತಹಶೀಲ್ದಾರ ನಾಡ ಕಾರ‍್ಯಾಲಯ ಕೊಣ್ಣೂರು ಇವರ ಆಶ್ರಯದಲ್ಲಿ ದಿನಾಂಕ 25-7-2013 ರಂದು ಬೆಳಿಗ್ಗೆ 10-00 ಗಂಟೆಗೆ ಕೊಣ್ಣೂರಿನ ಗ್ರಾಮ ಪಂಚಾಯತ್ ಸಭಾಭವನದಲ್ಲಿ  ಪಿಂಚಣಿ ಅದಾಲತ್   ಏರ್ಪಡಿಸಲಾಗಿದೆ.  ಸದರ ಪಿಂಚಣಿ ಅದಾಲತ್ ದಲ್ಲಿ ಕೊಣ್ಣೂರ ಹೋಬಳಿಯ ಗ್ರಾಮಗಳ ಸಾರ್ವಜನಿಕರು, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲ ಭತ್ಯೆ, ವಿಧವಾ ವೇತನಗಳಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ಅವಶ್ಯ ದಾಖಲೆಗಳೊಂದಿಗೆ ಬಂದು ಈ ಪಿಂಚಣಿ ಅದಾಲತ್‌ನಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಮತ್ತು ಅರ್ಹ ವ್ಯಕ್ತಿಗಳು ಅವಶ್ಯ ದಾಖಲೆಗಳೊಂದಿಗೆ ಹಾಜರಾದಲ್ಲಿ ಅವರಿಗೆ ಸ್ಥಳದಲ್ಲಿಯೇ ಸಂಧ್ಯಾ  ಸುರಕ್ಷಾ ವೇತನ, ಅಂಗವಿಕಲ ಭತ್ಯೆ, ವಿಧವಾ ವೇತನ, ವೃದ್ಯಾಪ ವೇತನ ಮಂಜೂರು ಮಾಡಲಾಗುವುದು.

ಪಿಂಚಣಿ ಅದಾಲತ್‌ನ್ನು ಮಾನ್ಯಶ್ರೀ ಇಸ್ಲಾವುದ್ದೀನ್ ಗದ್ಯಾಳ ಉಪವಿಭಾಗಾಧಿಕಾರಿಗಳು ಗದಗ ಇವರು ನಡೆಸಿಕೊಡುವರು.  ಶ್ರೀ ವೆಂಕನಗೌಡ ಪಾಟೀಲ ತಹಶೀಲ್ದಾರ ನರಗುಂದ ಇವರು ಉಪಸ್ಥಿತರಿರುವರು.   ಕೊಣ್ಣೂರ ಹೋಬಳಿಯ ಎಲ್ಲ ಗ್ರಾಮಗಳ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಉಪತಹಶೀಲ್ದಾರ ಕೊಣ್ಣೂರ  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಐ.ಟಿ.ಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಗದಗ(ಕರ್ನಾಟಕ ವಾರ್ತೆ)   ಜುಲೈ 15:   2013-14 ನೇ ಸಾಲಿಗೆ ಐ.ಟಿ.ಐ ಕೋರ್ಸಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಈಗಾಗಲೇ ಮೂರು ಹಂತಗಳ ಪ್ರವೇಶಾತಿ ಪೂರ್ಣಗೊಂಡಿರುತ್ತದೆ.  ನಾಲ್ಕನೇ ಹಂತದ ಪ್ರವೆಶ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ  ಸ್ಥಗಿತಗೊಳಿಸಿ, ಈ ಹಿಂದೆ ಅರ್ಜಿಗಳನ್ನು ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರವೇಶಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿ ಆಯ್ಕೆಯಾಗದಿರುವ ಅಭ್ಯರ್ಥಿಗಳು ದಿನಾಂಕ   17-7-2013 ರಿಂದ 24-7-2013 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು  ವೆಬ್‌ಸೈಟ್‌ಗಳಲ್ಲಿ www.emptrg.kar.nic.in , www.dget.gov.in ತಮ್ಮ ಅರ್ಜಿಯನ್ನು ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ.  

ಏರ್‌ಮೆನ್ ಟೆಕ್ನಿಕಲ್ ಹುದ್ದೆಗೆ ನೇಮಕಾತಿ ರ‍್ಯಾಲಿ

ಚಿಕ್ಕಮಗಳೂರು ಜು.15: ಭಾರತೀಯ ವಾಯುಪಡೆಯಲ್ಲಿ ಏರ್‌ಮೆನ್ ಟೆಕ್ನಿಕಲ್ ಹುದ್ದೆಗಳ ನೇಮಕಾತಿ ರ‍್ಯಾಲಿಯು ಜುಲೈ 31 ರಂದು ಕೊಪ್ಪಳದ ಜಿಲ್ಲಾ ಒಳಾಂಗಣ ಕ್ರೀಡಾಂಗಣ(ಬ್ಯಾಡ್‌ಮಿಂಟನ್ ಕೋರ್ಟ್ ಹಾಲ್)ದಲ್ಲಿ ನಡೆಯಲಿದೆ. 1993 ಮೇ 1 ರಿಂದ 1996 ನವೆಂಬರ್ 30 ರೊಳಗೆ ಜನಿಸಿದ ಅವಿವಾಹಿತ ಪುರುಷರು, ಪಿಯುಸಿಯ ವಿಜ್ಞಾನ ವಿಷಯದಲ್ಲಿ ಅಥವಾ ಡಿಪ್ಲೊಮೋದಲ್ಲಿ ಶೇ.50ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದವರು ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದೂ.ಸಂ. 08262-235513 ಅಥವಾ ಏರ್‌ಮನ್ ಸೆಲೆಕ್ಷನ್ ಸೆಂಟರ್ ಬೆಂಗಳೂರು, www.indianairforce.nic.in ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಕಾವೇರಿ ಗ್ರಾಮೀಣ ಬ್ಯಾಂಕಿನ ಪ್ರಗತಿ

ಹಾಸನ, ಜುಲೈ 15:: ಕಾವೇರಿ ಗ್ರಾಮೀಣ ಬ್ಯಾಂಕಿನ  ಅಧ್ಯಕ್ಷರಾದ ಶ್ರೀಯುತ. ಸೋಮಶೇಖರ ಶಾಸ್ತ್ರಿಯವರು, ಪ್ರಧಾನ ವ್ಯವಸ್ಥಾಪಕರಾದ ಶ್ರೀಯುತ. ಜನಾರ್ಧನಯ್ಯ ಮತ್ತು ಶ್ರೀಯುತ. ಪ್ರಸನ್ನ ಸಿಂಹ ರಾವ್ ರವರ ಜೊತೆಯಾಗಿ ನಡೆಸಿದ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು:

ಕಾವೇರಿ ಕಲ್ಪತರು, ಚಿಕ್ಕಮಗಳೂರು-ಕೊಡಗು ಹಾಗೂ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕುಗಳ ವಿಲೀನದೊಂದಿಗೆ ತಾ.01.011.2012ರಿಂದ ’ಕಾವೇರಿ ಗ್ರಾಮೀಣ ಬ್ಯಾಂಕ್’ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದ ದಕ್ಷಿಣ ಭಾಗದ    ಹತ್ತು ಜಿಲ್ಲೆಗಳಲ್ಲಿ 350 ಶಾಖೆಗಳ ಮೂಲಕ ಬ್ಯಾಂಕಿಂಗ್ ಸೇವೆಯನ್ನು ಸಲ್ಲಿಸುತ್ತಿದೆ. ಬ್ಯಾಂಕಿನ ಪ್ರಸ್ತುತ ವರ್ಷದ ತ್ರೈಮಾಸಿಕ  ಬೆಳವಣಿಗೆಯ ಪ್ರಮುಖಾಂಶಗಳು ತಾ.30.06.2013ರಲ್ಲಿದ್ದಂತೆ:

ಒಟ್ಟು ಠೇವಣಿ 3830.47 ಕೋಟಿ ರೂ., ಒಟ್ಟು ಮುಂಗಡ 3119.67 ಕೋಟಿ ರೂ, ಒಟ್ಟು ವ್ಯವಹಾರ ರೂ 5950.14ಕೋಟಿ ರೂ.,ಸಾಲ/ಠೇವಣಿಗಳ ಅನುಪಾ 81.44 ಕೋಟಿ ರೂ., ಕೃಷಿ ಸಾಲ 1613.55ಕೋಟಿ ರೂ, ಕೃಷಿ ಸಾಲ/ಒಟ್ಟು ಮುಂಗಡಗಳ ಅನುಪಾತ 51.72 ಕೋಟಿ ರೂ, ನಿವ್ವಳ ಲಾಭ ಮಾರ್ಚ್ 2013ರ ಅಂತ್ಯಕ್ಕೆ 32.27 ಕೋಟಿ ರೂ, ಜೂನ್ 2013ರ ಅಂತ್ಯಕ್ಕೆ ನಿವ್ವಳ ಲಾಭ 19.11 ಕೋಟಿ ರೂ, ಆಗಿದೆ. ಜಿಲ್ಲೆಯಲ್ಲಿ 350 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಬ್ಯಾಂಕಿನ ಕಳೆದ ವರ್ಷದ ವ್ಯವಹಾರ ಬೆಳವಣಿಗೆಯು 17.73% ರಷ್ಟಿದ್ದು, ಈ ವರ್ಷ ಶೇ.25ರಷ್ಟು ಬೆಳವಣಿಗೆಯ ಗುರಿಯನ್ನು ಬ್ಯಾಂಕ್ ಹೊಂದಿದೆ. ಮೊದಲ ತ್ರೈಮಾಸಿಕದಲ್ಲಿನ ಪ್ರಮುಖ ಅಂಶಗಳು : 16 ಹೊಸ ಶಾಖೆಗಳ ಆರಂಭ, 100 ಕೋಟಿಗಳ ಬೆಳವಣಿಗೆ, ಒಟ್ಟು ವ್ಯವಹಾರ ರೂ.6950 ಕೋಟಿ ದಾಟಿದೆ., ಕೃಷಿ ವಲಯಗಳಿಗಾಗಿ ರೂ..567 ಕೋಟಿ ಸಾಲ ವಿತರಣೆ. ಕಳೆದ ಜೂನ್ ನಲ್ಲಿ 7.26 ಕೋಟಿ ಲಾಭ ದಾಖಲಿಸಿದ್ದರೆ, ಈ ತ್ರೈಮಾಸಿಕದಲ್ಲಿ 19.11 ಕೋಟಿ ನಿವ್ವಳ ಲಾಭ ಗಳಿಕೆ.

ಮುಂದಿನ ವರ್ಷಗಳ ಯೋಜನೆಗಳು, ಈ ಹಣಕಾಸು ವರ್ಷದಕೊನೆಯಲ್ಲಿ 400 ಶಾಖೆಗಳ ಗುರಿ ಹೊಂದಿದ್ದು, ಪ್ರಸ್ತುತ ವರ್ಷ 80 ಹೊಸ ಶಾಖೆಗಳ ಆರಂಭಿಸುವುದರ ಮೂಲಕ ಆರ್ಥಿಕ ಸೇರ್ಪಡೆ       ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಹಾಗೂ ಬ್ಯಾಂಕ್ ಶಾಖೆಗಳ ಜಾಲವನ್ನು ವಿಸ್ತರಿಸಲಾಗುವುದು.  ಈ  ನಿಟ್ಟಿನಲ್ಲಿ ಈಗಾಗಲೇ 16 ಹೊಸ ಶಾಖೆಗಳನ್ನು ತೆರೆಯಲಾಗಿದ್ದು  ಬ್ಯಾಂಕ್ ಈಗ 350 ಶಾಖೆಗಳನ್ನು ಹೊಂದಿದೆ.  2015ರ ಮಾರ್ಚ್ ಗೆ 500 ಶಾಖೆಗಳನ್ನು ಹೊಂದಲು ಯೋಜಿಸಲಾಗಿದೆ.

ಪ್ರಸ್ತುತ ವರ್ಷ 716 ಸಿಬ್ಬಂದಿ - 265 ಅಧಿಕಾರಿಗಳು ಹಾಗೂ 451 ಕ್ಲೆರಿಕಲ್ ಹುದ್ದೆಗಳನ್ನು ಭರ್ತಿ ಮಾಡಲು ಐ.ಬಿ.ಪಿ.ಎಸ್ (ಬ್ಯಾಂಕ್ ಸಿಬ್ಬಂಧಿ ಆಯ್ಕೆ ಸಂಸ್ಥೆ, ಮುಂಬೈ) ರವರ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಸೆಪ್ಟೆಂಬರ್ 2013ರಲ್ಲಿ ನಡೆಸಲಾಗುವ ಪರೀಕ್ಷೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಐ.ಬಿ.ಪಿ.ಎಸ್‌ರವರ ವೆಬ್ ಸೈಟಿನಲ್ಲಿ ಹೆಚ್ಚಿನ ವಿವರಗಳು ಲಭ್ಯವಿದೆ.  ಹೆಚ್ಚು ಹೆಚ್ಚು ಸ್ಥಳೀಯ ಅಭ್ಯರ್ಥಿಗಳು ಅರ್ಹತೆಗನುಗುಣವಾಗಿ ಬ್ಯಾಂಕಿನಲ್ಲಿ ಸೇರ್ಪಡೆಯಾಗ ಬೇಕೆಂಬುದು ಬ್ಯಾಂಕಿನ ಆಶಯ.

ಬ್ಯಾಂಕಿಂಗ್ ಸಿಬ್ಬಂಧಿ ಇತರೆ ಕಮರ್ಷಿಯಲ್ ಬ್ಯಾಂಕ ಸಿಬ್ಬಂದಿಗಳಿಗೆ ಸಮನಾಗಿ ವೇತನ ಪಡೆಯುತ್ತಿದ್ದಾರೆ. ಬ್ಯಾಂಕ್ ಇತರೆ ಬ್ಯಾಂಕುಗಳಂತೆಯೇ ಎಲ್ಲಾ ರೀತಿಯ ಗ್ರಾಹಕ ಸೇವೆ ನೀಡುತ್ತಿದ್ದು ಂಖಿಒ ಕಾರ್ಡ್ ನೀಡಲು ಸಹ ಉದ್ದೇಶಿಸಿದೆ.  ಸರ್ಕಾರದ ಕಾರ್ಯಾಕ್ರಮಗಳಲ್ಲಿ ಬ್ಯಾಂಕ್ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು ಬ್ಯಾಂಕ್ ಖಾತೆಗೆ ಆಧಾರ್’ ಸಂಖ್ಯೆ ಜೋಡನೆಯ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ.

ಗ್ರಾಹಕರ ನಿರೀಕ್ಷೆ ಹಾಗೂ ಅಗತ್ಯಗಳಿಗೆ ಕಾಲ ಅನುಗುಣ ಸೇವೆಯನ್ನು  ಗಮನದಲ್ಲಿಟ್ಟುಕೊಂಡು ಮೈಸೂರಿನ ಪ್ರಾದೇಶಿಕ ಕಚೇರಿ ಹಾಗೂ ದಟ್ಟಗಳ್ಳಿ ಶಾಖೆಯನ್ನು ವಿಸ್ತಾರವಾದ ವಿವೇಕಾನಂದ ನಗರದ ವಿವೇಕಾನಂದ ಮುಖ್ಯ ರಸ್ತೆಯಲ್ಲಿರುವ ’  ಚಕ್ರವರ್ತಿ ಕಾಂಪ್ಲಕ್ಸ್’ಗೆ ನಾಳ ದಿನಾಂಕ 12.07.2013ರಂದು ಸ್ಥಳಾಂತರಗೊಳಿಸುತ್ತಿದ್ದು ಜಿಲ್ಲಾಧಿಕಾರಿ. ಡಾ. ರಾಮೇಗೌಡರು ಕಚೇರಿಯ ಉದ್ಘಾಟನೆ ಮಾಡಲಿದ್ದು, ಶ್ರೀಯುತ ಪಿ.ಎ.ಗೋಪಾಲ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಮೈಸೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಂದು ಬಯಾಂಕಿನ ಅಧ್ಯಕ್ಷರಾದ ಡಿ.ಸೋಮಶೇಖರ ಶಾಸ್ತ್ರಿ ತಿಳಿಸಿದ್ದಾರೆ.

ಜಲಾಶಯಗಳ ನೀರಿನ ಮಟ್ಟ (15-7-2013) ವರದಿ

ಹೇಮಾವತಿ ಜಲಾಶಯ : ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2904.25, ಕಳೆದ ವರ್ಷ 2885.10, ಜಲಾಶಯಕ್ಕೆ ಒಳ ಹರಿವು 9677ಕ್ಯೂಸೆಕ್ ಕಳೆದ ವರ್ಷ 1095 ಹೊರ ಹರಿವು ನದಿಗೆ 500 ಕ್ಯೂಸೆಕ್ ನಾಲೆಗೆ 800 ಕ್ಯೂಸೆಕ್ ನೀರಿನ ಸಂಗ್ರಹ ಪ್ರಮಾಣ ಟಿ.ಎಂ.ಸಿ ಯಲ್ಲಿ 22.547 ಕಳೆದ ವರ್ಷ ಇದೇ ದಿನ 10.928 ಟಿ.ಎಂ.ಸಿ.ನೀರು ಸಂಗ್ರಹವಾಗಿದೆ.

 ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3150.945ಅಡಿ, ಒಳ ಹರಿವು 200 ಕ್ಯೂಸೆಕ್ಸ,ಹೊರ ಹರಿವು 25 ಕ್ಯೂಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.

ವಾಟೆ ಹೊಳೆ: ಇಂದಿನ 3140.91 ಅಡಿ, ಒಳ ಹರಿವು 62 ಕ್ಯೂಸೆಕ್ಸ, ಒಟ್ಟು ನೀರಿನ ಸಂಗ್ರಹ ಟಿಎಂ.ಸಿಯಲ್ಲಿ 0.366 ಟಿ ಎಂ ಸಿ. ನೀರು ಸಂಗ್ರಹವಾಗಿದೆ.

ತಾಲ್ಲೂಕುವಾರು ವಿವರ: ಆಲೂರು 2.4., ಅರಕಲಗೂಡು 2.1,,ಬೇಲೂರು 1.4, ಅರಸೀಕೆರೆ 2.0 ಹಾಸನ 1.2, ಹೊಳೆನರಸೀಪುರ 1.0., ಸಕಲೇಶಪುರ 14.4 ಮಿ.ಮೀಟರ್ ಮಳೆಯಾಗಿದೆ.

ಹೋಬಳಿವಾರು ವಿವರ: ಅರಕಲಗೂಡು ಕಸಬ 2.1, ,ಮಲ್ಲಿಪಟ್ಟಣ 33,ರಾಮನಾಥಪುರ 1.2,ಕೊಣನೂರು 2.6, ದೊಡ್ಡಮಗ್ಗೆ 1.2., ಬಸವಾಪಟ್ಟಣ 00,         ದೊಡ್ಡಬೆಮ್ಮತ್ತಿ 2.2 ಬೇಲೂರು ಕಸಬ 1.4, ಹಳೇಬೀಡು 00, ಹಗರೆ 2,  ಬಿಕ್ಕೋಡು 2, ಗೆಂಡೆಹಳ್ಳಿ 00, ಅರೇಹಳ್ಳಿ 10.2. ಆಲೂರು ಕಸಬ 2.4, ಪಾಳ್ಯ 3.8., ಕೆಂಚಮ್ಮನಹೊಸಕೋಟೆ 9, ಕುಂದೂರು 2.8 ಮಿ.ಮೀ. ಮಳೆಯಾಗಿದೆ.

ಹಾಸನ ಕಸಬ 1.2, ತಾಲ್ಲೂಕಿನ ಕಟ್ಟಾಯ 0.5.,ಸಾಲಗಾಮೆ  00, ಗೊರೂರು 2.5 ಶಾಂತಿಗ್ರಾಮ 1.2, ದುದ್ದ 1,ಸಕಲೇಶಪುರ ಕಸಬ 14.4,ಬಾಳ್ಳುಪೇಟೆ 9.1,ಯಸಳೂರು15.0,ಶುಕ್ರವಾಸಂತೆ 14.1,ಮಾರೇನಹಳ್ಳಿ 16.2.  ಹೊಸೂರು 9.42,ಬೆಳಗೊಡು 10.3,ಹಾನುಬಾಳು 13.8,ಹೆತ್ತೂರು 43.84 ಮಿ.ಮೀಟರ್ ಮಳೆಯಾಗಿದೆ.

ಹೊಳೆನರಸೀಪುರ ಕಸಬ 1.0, ಹಳ್ಳಿ ಮೈಸೂರು 00, ಹಳೆಕೋಟೆ 1.0, ಅರಸೀಕೆರೆ ಕಸಬ 2.0, ಬಾಣಾವರ 00., ಗಂಡಸಿ 00, ಕಣಕಟ್ಟೆ 00., ಜಾವಗಲ್ 3.4,ಯಳವಾರೆ-3.6 ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ 0.2, ಶ್ರವಣಬೆಳಗೊಳ 1.7,ಮಿಮೀ.ಮಳೆಯಾಗಿದೆ.

ಕೊಡಗು ಜಿಲ್ಲೆಯ ಮಳೆ ವಿವರ (ಮಿಲಿ ಮೀಟರ್‌ಗಳಲ್ಲಿ)

ಕೊಡಗು ಜು.15 - ಕೊಡಗು ಜಿಲ್ಲೆಯ ಇಂದಿನ ಸರಾಸರಿ ಮಳೆ 13.55 ಮಿ.ಮೀ. ಕಳೆದ ವರ್ಷ ಇದೇ ದಿನ 10.16 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 1513.51 ಮಿ.ಮೀ ಕಳೆದ ವರ್ಷ ಇದೇ ಅವಧಿಯಲ್ಲಿ 708.76 ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 21.55ಮಿ.ಮೀ. ಕಳೆದ ವರ್ಷ ಇದೇ ದಿನ 17ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2257.49ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1005.07ಮಿ.ಮೀ. ಮಳೆಯಾಗಿತ್ತು.

ವೀರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 13.28 ಮಿ.ಮೀ. ಕಳೆದ ವರ್ಷ ಇದೇ ದಿನ 7.87ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1080.71 ಮಿ.ಮೀ.  ಕಳೆದ ವರ್ಷ ಇದೇ ಅವಧಿಯಲ್ಲಿ 611.18ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5.83ಮಿ.ಮೀ. ಕಳೆದ ವರ್ಷ ಇದೇ ದಿನ 5.62 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1202.34 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 510.03 ಮಿ.ಮೀ ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 22.6, ನಾಪೋಕ್ಲು 8.8, ಸಂಪಾಜೆ 20.4, ಭಾಗಮಂಡಲ 34.4, ವೀರಾಜಪೇಟೆ ಕಸಬಾ 9.8, ಹುದಿಕೇರಿ 24.1, ಶ್ರೀಮಂಗಲ 17.4, ಪೊನ್ನಂಪೇಟೆ 8.4, ಅಮ್ಮತ್ತಿ 6, ಬಾಳಲೆ 14, ಸೋಮವಾರಪೇಟೆ ಕಸಬಾ 4.6, ಶನಿವಾರಸಂತೆ 4, ಶಾಂತಳ್ಳಿ 13.2, ಕೊಡ್ಲಿಪೇಟೆ 0.00, ಕುಶಾಲನಗರ 3.2, ಸುಂಟಿಕೊಪ್ಪ 10 ಮಿ.ಮೀ. ಮಳೆಯಾಗಿದೆ. 

ಹಾರಂಗಿ ಜಲಾಶಯದ ನೀರಿನ ಮಟ್ಟ (15-07-13) ವರದಿ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2855.65 ಅಡಿಗಳು, ಕಳೆದ ವರ್ಷ ಇದೇ ದಿನ 2825.73 ಅಡಿ. ಹಾರಂಗಿಯಲ್ಲಿ ಇಂದಿನ ಮಳೆ 5.2 ಮಿ.ಮೀ, ಕಳೆದ ವರ್ಷ ಇದೇ ದಿನ 2.6 ಮೀ.ಮೀ, ಇಂದಿನ ನೀರಿನ ಒಳ ಹರಿವು 6586 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 384 ಕ್ಯೂಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 5288 ಕ್ಯೂಸೆಕ್, ನಾಲೆಗೆ 813 ಕ್ಯೂಸೆಕ್.

ಅಡಿಕೆ ಹಳದಿ ಎಲೆ ರೋಗ ಬಾದಿತ ತೋಟಗಳ ಪುನಃಶ್ಚೇತನ ಯೋಜನೆ ಜಾರಿ

ಶಿವಮೊಗ್ಗ : ಜುಲೈ 15 (ಕರ್ನಾಟಕ ವಾರ್ತೆ) :  ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಬೇರುಹುಳು, ಕೊಳೆರೋಗ ಮತ್ತು ಹಿಡಿಮುಂಡಿಗೆ ರೋಗಗಳ ಬಾದೆಯಿಂದಾಗಿ ಇಳುವರಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಸಕಾರವು ಅಡಿಕೆ ಹಳದಿ ಎಲೆ ರೋಗ ಬಾದಿತ ತೋಟಗಳ ಪುನಃಶ್ಚೇತನ ಯೋಜನೆಯನ್ನು ಜಾರಿಗೊಳಿಸಿದ್ದು, ಸಹಾಯಧನಕ್ಕಾಗಿ ಅರ್ಹ ಅಡಿಕೆ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಯೋಜನೆಯಡಿಯಲ್ಲಿ ಅಡಿಕೆ ಬೇರು ಹುಳು ಮತ್ತು ಹಿಡಿಮುಂಡಿಗೆ ರೋಗಕ್ಕೆ ತುತ್ತಾದ ತಾಕುಗಳನ್ನು ಮಾತ್ರ ಸಹಾಯಧನಕ್ಕೆ ಪರಿಗಣಿಸಲಾಗುವುದು. ಫಲಾನುಭವಿಯು ಅರ್ಜಿಯ ಜೊತೆಯಲ್ಲಿ ಪಹಣಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಪಾಸ್ ಪುಸ್ತಕದ ನಕಲನ್ನು ಸಲ್ಲಿಸಬೇಕು. ಜಿಲ್ಲೆಗೆ ಮತ್ತು ತಾಲೂಕಿಗೆ ನಿಗದಿಪಡಿಸಿದ ಅನುದಾನಕ್ಕೆ ತಕ್ಕಂತೆ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ರೋಗಬಾದಿತ ತಾಕುಗಳನ್ನು ತಾಂತ್ರಿಕ ತಂಡವು ಪರಿಶೀಲಿಸಿದ ನಂತರವೇ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನ್ನಭಾಗ್ಯ ಅಕ್ಕಿ ದುರುಪಯೋಗ ತಡೆಗೆ ಗ್ರಾಮ ಲೆಕ್ಕಾಧಿಕಾರಿಯಿಂದ ತಪಾಸಣೆ

ವಿಜಾಪುರ.ಜು,15- ವಿಜಾಪುರ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡುತ್ತಿರುವ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಪಡಿತರ ಕಾರ್ಡದಾರರಿಗೆ ನಿಯಮಿತವಾಗಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆಯಾಗುತ್ತಿರುವ ಕುರಿತಂತೆ ಪರಿಶೀಲನೆ ಮಾಡಲು ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಶಿವಯೊಗಿ ಕಳಸದ ಆದೇಶ ಹೊರಡಿಸಿದ್ದಾರೆ.

ಗ್ರಾಮವಾರು ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಯಂತೆ ಬಿಪಿಎಲ್ ಕಾರ್ಡದಾರರಿಗೆ ಓರ್ವ ಸದಸ್ಯರಿಗೆ 10 ಕೆ.ಜಿ., ಎರಡು ಸದಸ್ಯರಿಗೆ 20 ಕೆ.ಜಿ. ಹಾಗೂ ಮೂರು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳಿಗೆ 30ಕೆ.ಜಿ. ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯವರು ಒಂದು ರೂ.ಗೆ ಒಂದು ಕೆ.ಜಿಯಂತೆ ವಿತರಿಸುತ್ತಿದ್ದಾರೆಯೇ ಎಂದು ಪರಿಶೀಲನೆ ಮಾಡಿ ಪ್ರತಿ ಮಾಹೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಪಡಿತರದಾರರಿಗೆ ಅಕ್ಕಿ ವಿತರಣೆಯ ಜೊತೆಗೆ ನ್ಯಾಯಬೆಲೆ ಅಂಗಡಿಯವರು ತಮಗೆ ನಿಗದಿಪಡಿಸಿದಂತೆ ಆಯಾ ತಿಂಗಳು ಸಗಟು ಮಳಿಗೆಗಳಿಂದ ಅಕ್ಕಿ ಇತರ ಪಡಿತರ ಪದಾರ್ಥಗಳನ್ನು ಎತ್ತುವಳಿ ಮಾಡಿ ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆಯೇ ಎಂದು ಖುದ್ದು ಪರಿಶೀಲನೆ ಮಾಡಿ ನಿಗದಿತ ಮಾದರಿಯಲ್ಲಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸೀಮೆ ಎಣ್ಣೆ ಬಿಡುಗಡೆ: ಗ್ಯಾಸ್ ಸಂಪರ್ಕ ಹೊಂದಿರದ ನಗರ ಹಾಗೂ ಗ್ರಾಮೀಣ ಭಾಗದ ಪಡಿತರ ಕಾರ್ಡದಾರರಿಗೆ ಜುಲೈ ಮಾಹೆಯ ಸೀಮೆ ಎಣ್ಣೆಯನ್ನು ಬಿಡುಗಡೆಗೊಳಿಸಲಾಗಿದೆ.

ಗ್ರಾಮೀಣ ಪ್ರದೇಶದ ಪಡಿತರ ಚೀಟಿಗಳಿಗೆ 5 ಲೀಟರ್ ಹಾಗೂ ನಗರ ಪ್ರದೇಶದ ಪಡಿತರ ಚೀಟಿದಾರರಿಗೆ 6ಲೀಟರ್ ನಂತೆ ಸೀಮೆ ಎಣ್ಣೆ ವಿತರಿಸಲು ಜಿಲ್ಲೆಗೆ 1452ಕೆ.ಎಲ್. ಸೀಮೆ ಎಣ್ಣೆಯನ್ನು ಬಿಡುಗಡೆಗೊಳಿಸಲಾಗಿದೆ. ಜುಲೈ 20ರೊಳಗಾಗಿ ನಿಯಮಾನುಸಾರ ಪಡಿತರದಾರರಿಗೆ ಸೀಮೆ ಎಣ್ಣೆ ವಿತರಿಸಲು ಸೀಮೆ ಎಣ್ಣೆ ವಿತರಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಸದಸ್ಯರಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಆದೇಶ

ವಿಜಾಪುರ.ಜು,15- ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಮರಳು ಸಾಗಾಣಿಕೆ ತಡೆಗೆ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿದ್ದು, ಮರಳು ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಮರಳು ನಿರ್ವಹಣಾ ಸಮಿತಿಯ  ಸದಸ್ಯರುಗಳಿಗೆ ಆದೇಶ ನೀಡಿದ್ದಾರೆ.

ಜುಲೈ 9ರಂದು ಹೊರಡಿಸಿರುವ ಆದೇಶದಲ್ಲಿ ಸರ್ಕಾರ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಇರುವ ಜಿಲ್ಲಾ ಮರಳು ಮಾನಿಟರಿಂಗ್ ಸಮಿತಿಯ ಸದಸ್ಯರಿಗೆ ಅಧಿಕಾರ ನೀಡಿದ್ದು, ಇದರನ್ವಯ ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ಮಾಡುವ ವಾಹನವನ್ನು ತಡೆದು, ದಾಖಲೆಗಳನ್ನು ಪರಿಶೀಲಿಸಿ, ಅಕ್ರಮ  ಎಂದು ಕಂಡು ಬಂದರೆ ಅಂತಹವರ ವಿರುದ್ಧ ದೂರು ದಾಖಲಿಸಲು ಹಾಗೂ ಗರಿಷ್ಠ 1ಲಕ್ಷರೂ. ವರೆಗೆ ದಂಡ ವಿಧಿಸಲು ಜಿಲ್ಲಾಧಿಕಾರಿಗಳು ಸಮಿತಿಯ ಸದಸ್ಯರಿಗೆ ಸೂಚಿಸಿದ್ದಾರೆ.

ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಕ್ಕೆ ಚುನಾವಣೆ ಘೋಷಣೆ

ವಿಜಾಪುರ.ಜು,15- ವಿಜಾಪುರ ಜಿಲ್ಲೆಯ 19 ಸ್ಥಾನಗಳು ಸೇರಿದಂತೆ ವಿವಿಧ ಕಾರಣಗಳಿಂದ ತೆರವಾಗಿರುವ ರಾಜ್ಯದ ಗ್ರಾಮ ಪಂಚಾಯತಿ ಸದಸ್ಯರ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ವಿಜಾಪುರ ಜಿಲ್ಲೆಯಲ್ಲಿ ಮಮದಾಪುರ, ತಿಡಗುಂದಿ, ಜಾಲಗೇರಿ, ಮನಗೂಳಿ, ಬೀರಲದಿನ್ನಿ, ಹುಣಶ್ಯಾಳ, ಮಸಬಿನಾಳ, ನಾಲತವಾಡ, ತುಂಬಗಿ, ಮೂಕಿಹಾಳ, ಬೆನಕನಹಳ್ಳಿ, ಹಿರೇರೂಗಿ, ಬಳ್ಳೊಳ್ಳಿ, ಬರಡೋಲ, ರಾಂಪೂರ ಪಿಎ, ಜಾಲವಾದ,ಕಲಕೇರಿ ಗ್ರಾಮ ಪಂಚಾಯತಿಯ ತಲಾ ಒಂದು ಸ್ಥಾನಗಳಿಗೆ ಹಾಗೂ ತಾಂಬಾ ಗ್ರಾಮ ಪಂಚಾಯತಿಯ ಎರಡು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.

ಜುಲೈ 17ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜುಲೈ 24 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಜುಲೈ 25 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜುಲೈ 27 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ. ಆಗಸ್ಟ್ 4 ರಂದು ಅಗತ್ಯ ಬಿದ್ದರೆ ಮತದಾನ ನಡೆಯಲಿದೆ. ಆಗಸ್ಟ್ 6 ರಂದು ಮರು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 7 ರಂದು ಬೆಳಿಗ್ಗೆ 8 ರಿಂದ ಆಯಾ ತಾಲೂಕಾ ಕೇಂದ್ರದಲ್ಲಿ ಮತ ಏಣಿಕೆ ಜರುಗಲಿದೆ. ಆಗಸ್ಟ್7 ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ವೀರಭದ್ರಯ್ಯ ಆದೇಶ ಹೊರಡಿಸಿದ್ದಾರೆ.

ಉಚಿತ ಸಾಫ್ಟ್ ಸ್ಕಿಲ್ ತರಬೇತಿ

ವಿಜಾಪುರ.ಜು,15- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ ವಿಜಾಪುರ ಇವರ ವತಿಯಿಂದ ಅಭ್ಯರ್ಥಿಗಳಿಗೆ ಉಚಿತ ಸಾಫ್ಟ್ ಸ್ಕಿಲ್ ತರಬೇತಿ ಆಯೋಜಿಸಲಾಗಿದೆ.

ತರಬೇತಿಯಲ್ಲಿ ಕಮ್ಯುನಿಕೇಶನ್ ಸ್ಕಿಲ್, ಬೇಸಿಕ ಕಂಪ್ಯೂಟರ್ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗುವುದು. ಹಾಗೂ ಖಾಸಗಿ ಸಂಸ್ಥೆಗಳ ಮುಖಾಂತರ ಖಾಲಿ ಹುದ್ದೆಗಳ ಮಾಹಿತಿ ಪಡೆದು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು.

ಆಸಕ್ತ ಅಭ್ಯರ್ಥಿಗಳು ದಿನಾಂಕ : 24-07-2013ರೊಳಗಾಗಿಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ, ಸ್ಟೇಶನ ರಸ್ತೆ, ವಿಜಾಪುರ ದೂ: 08352-240956 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

ಮಹಿಳಾ ವಿವಿ ಫಲಿತಾಂಶ ಪ್ರಕಟ

ವಿಜಾಪುರ.ಜು,15- ಪ್ರಸಕ್ತ 2013ರ ಮೇ-ಜೂನ್ ತಿಂಗಳಲ್ಲಿ ಜರುಗಿದ B.Sc-IV ಸೆಮಿಸ್ಟರ್ ಪರೀಕ್ಷೆ ಫಲಿತಾಂಶವನ್ನು ದಿ: 11-07-2013 ರಂದು ಹಾಗೂ BA-IV ಹಾಗೂ V ಮತ್ತು VI ಸೆಮಿಸ್ಟರ್ ಪರೀಕ್ಷೆ ಫಲಿತಾಂಶವನ್ನು ಮಹಿಳಾ ವಿಶ್ವವಿದ್ಯಾಲಯ ದಿನಾಂಕ: 15-7-2013 ರಂದು ಪ್ರಕಟಿಸಿದೆ. ಸದರಿ ಫಲಿತಾಂಶವನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ www.kswu.ac.in, www.educationgateway.co.in, www.schools9.com, www.indiaresult.com, ಮತ್ತು www.manbadi.com ನಲ್ಲಿ ನೋಡಬಹುದು ಎಂದು ಮೌಲ್ಯಮಾಪನ ಕುಲಸಚಿವ ಪ್ರೊ: ವಿ.ವಿ. ಮಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 31ರಂದು ಕೊಪ್ಪಳದಲ್ಲಿ ವಾಯುಪಡೆ  ನೇಮಕಾತಿ ರ‍್ಯಾಲಿ

ವಿಜಾಪುರ.ಜು,15- ಭಾರತೀಯ ವಾಯುಪಡೆಯು ಗ್ರೂಪ್ ಎಕ್ಸ್ ವಿಭಾಗದ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಕೊಪ್ಪಳ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇದೇ ಜುಲೈ 31ರ ಬುಧವಾರದಂದು ಬೃಹತ್ ನೇಮಕಾತಿ ರ‍್ಯಾಲಿಯನ್ನು ಹಮ್ಮಿಕೊಂಡಿದೆ.

ರಾಜ್ಯದ ಅವಿವಾಹಿತ ಪುರುಷ ಅಭ್ಯರ್ಥಿಗಳು (ದಿನಾಂಕ: 1ಮೇ,1993ರಿಂದ 30ನವೆಂಬರ್ 1996ರ ನಡುವೆ ಜನಿಸಿರುವ) ಭಾಗವಹಿಸಬಹುದಾಗಿದೆ. ದ್ವೀತಿಯ ಪಿಯುಸಿಯಲ್ಲಿ ಗಣಿತ,ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯದೊಂದಿಗೆ ಶೇ.50ಕ್ಕೂ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿರಬೇಕು. ಹಾಗೂ ಇಂಗ್ಲೀಷ್ ವಿಷಯದಲ್ಲಿ ಶೇ.50ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಅಥವ ಮೂರು ವರ್ಷಗಳ ಡಿಪ್ಲೋಮಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಅಟೋಮೊಬೈಲ್, ಕಂಪ್ಯೂಟರ್ ಸೈಯನ್ಸ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ ಅಥವಾ ಇನ್‌ಫಾರಮೇಶನ ಟೆಕ್ನಾಲಜಿ ಈ ಯಾವುದಾದರೂ ವಿಷಯದಲ್ಲಿ ಶೇ.50ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಅರ್ಹ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ., ದ್ವೀತಿಯ ಪಿಯುಸಿ ಅಥವಾ ಡಿಪ್ಲೊಮಾ ಅಂಕಪಟ್ಟಿಗಳು ಸೇರಿದಂತೆ ಅಗತ್ಯ ದಾಖಲೆಗಳ ಮೂಲ ಪ್ರತಿ ಹಾಗೂ ಝರಾಕ್ಸ ಪ್ರತಿಗಳೊಂದಿಗೆ ತಮ್ಮ ಇತ್ತೀಚಿನ ಬಣ್ಣದ  7 ಭಾವಚಿತ್ರಗಳನ್ನು ನೇಮಕಾತಿ ಸ್ಥಳಕ್ಕೆ ಹಾಜರಪಡಿಸುವುದು.

ಹೆಚ್ಚಿನ ಮಾಹಿತಿಯನ್ನು ಭಾರತೀಯ ವಾಯುಪಡೆ ವೆಬ್‌ಸೈಟ್ www.indianairforce.nic.in ಅಥವಾ ಇಮೇಲ್[email protected] ಅಥವಾ ದೂರವಾಣಿ ಸಂಖ್ಯೆ: 080-25592199 ಅಥವಾ ಖುದ್ದಾಗಿ ನಂ.7, ಏರಮನ್ ಸೆಲೆಕ್ಷನ್ ಸೆಂಟರ್, ನಂ.1, ಕಬ್ಬನ ರಸ್ತೆ, ಬೆಂಗಳೂರು-560001 ಸಂಪರ್ಕಿಸಿ ಪಡೆಯಬಹುದಾಗಿದೆ.

ಮಾಜಿ ಸೈನಿಕ ಕೋಟಾದಡಿ ರೈಲ್ವೆ ಇಲಾಖೆಯ 1014  ಹುದ್ದೆಗೆ ಅರ್ಜಿ ಕರೆ

ವಿಜಾಪುರ.ಜು,15- ಹುಬ್ಬಳ್ಳಿಯ ರೈಲ್ವೆ ರಿಕ್ರೂಟಮೆಂಟ್ ನೈಋತ್ಯ ವಲಯದಿಂದ ಮಾಜಿ ಸೈನಿಕ ಕೋಟಾದಡಿ ಹುಬ್ಬಳ್ಳಿ ರೈಲ್ವೆಯಲ್ಲಿ ಖಾಲಿ ಇರುವ  1014 ಡಿ ಗ್ರೂಪ್  ಹುದ್ದೆಗಳ ಭರ್ತಿಗಾಗಿ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರೂಪ್ ಡಿ ವರ್ಗದ 1014 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, 15 ವರ್ಷಗಳ ಸೇವೆಯನ್ನು ಸಲ್ಲಿಸಿ ಮತ್ತು ನಿವೃತ್ತರಾಗಿರುವ ಮತ್ತು ಸೈನ್ಯದರ್ಜೆ ಒಂದು ಪ್ರಮಾಣ ಪತ್ರ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಅಭರ್ಥಿಗಳಿಗೆ 33 ವರ್ಷ, ಓಬಿಸಿ 36, ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ 38ವರ್ಷ ಜೊತೆ ಎಲ್ಲ ವರ್ಗದವರಿಗೂ 3 ವರ್ಷ ಮಿಲಿಟರಿ ಸೇವಾ ವ್ಯಾಪ್ತಿಯ ಗರಿಷ್ಠ ವಯೋಮಿತಿವುಳ್ಳವರು ಅರ್ಜಿ ಸಲ್ಲಿಸಬಹುದು.

 ನೇಮಕಾತಿಯಲ್ಲಿ ಯಾವುದೇ ದೈಹಿಕ ಸಾಮರ್ಥ್ಯ ಅಥವಾ ಲಿಖಿತ ಪರೀಕ್ಷೆ ಇರುವುದಿಲ್ಲ. ವೈದ್ಯಕೀಯ ಸದೃಢತೆಗೆ ಅನುಗುಣವಾಗಿ ಮಿಲಿಟರಿ ಸೇವೆಯ ಅವಧಿಯನ್ನು ಆಧರಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 29-6-2013ರ ಎಂಪ್ಲಾಮೆಂಟ್ ನ್ಯೂಸ್ ಅಥವಾ ರೋಜಗಾರ ಸಮಾಚಾರ, ಅಥವಾ ಆರ್.ಆರ್.ಸಿ.ಅಥವಾ ಎಸ್.ಡಬ್ಲ್ಯೂ.ಆರ್.ವೆಬ್‌ಸೈಟ್ www.rrchubli.in ತಾಣದಲ್ಲಿ ಪಡೆಯಬಹುದೆಂದು ಹುಬ್ಬಳ್ಳಿ ನೈಋತ್ಯ ವಲಯದ ಡೆಪ್ಯೂಟಿ ಚೀಪ್ ಪರ್ಸನಲ್ ಆಫೀಸರ್ ನೇಮಕಾತಿ ವಿಭಾಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಗನಚುಕ್ಕಿ ಜಲಪಾತ ನಯಾಗರ ಜಲಪಾತದಷ್ಟೇ ಮನೋಹರ : ಡಾ|| ಯಲ್ಲಪ್ಪರೆಡ್ಡಿ

ಮಂಡ್ಯ ಜು.15 (ಕ.ವಾ):- ವಿಶ್ವ ವಿಖ್ಯಾತ ಗಗನಚುಕ್ಕಿ ಜಲಪಾತವು ಅಮೇರಿಕಾದ ನಯಾಗರ ಜಲಪಾತದಷ್ಟೇ ಮನಮೋಹಕ ಎಂದು ಕರ್ನಾಟಕ ಹೈಕೋರ್ಟ್ ಕಾನೂನು ಸಮಿತಿ ಸದಸ್ಯರಾದ ಡಾ|| ಎ.ಎನ್. ಯಲ್ಲಪ್ಪ ರೆಡ್ಡಿ ಹೇಳಿದರು.

ಗಗನಚುಕ್ಕಿ ಸುತ್ತಮುತ್ತ ಜೈವಿಕ ಪರಿಸರ ಸಂರಕ್ಷಣೆ ಕುರಿತು ಸೋಮವಾರ ಗಗನಚುಕ್ಕಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಜಲಪಾತ ವೀಕ್ಷಿಸಿ ಮಾತನಾಡಿದರು. ಗಗನಚುಕ್ಕಿಯನ್ನು ಮತ್ತಷ್ಟು ಆಕರ್ಷಣೀಯವಾಗಿ ಅಭಿವೃದ್ಧಿಗೊಳಿಸಲು ಸಲಹೆ ಸೂಚನೆಗಳನ್ನು ನೀಡಿದರು.

ಗಗನಚುಕ್ಕಿ ಭಾಗದ ಪರಿಸರ ಅತ್ಯಂತ ವಿಶಿಷ್ಟತೆಯಿಂದ ಕೂಡಿದೆ. ಶ್ರೀಗಂಧ, ತೇಗ, ಬೀಟೆ, ಬಿದಿರು ಮುಂತಾದ ವಿವಿಧ ಸಸ್ಯ ಪ್ರಭೇದಗಳನ್ನು ಕಾಣಬಹುದು. ಸ್ವಚ್ಛ ಪರಿಸರ, ಸೂಕ್ತ ಪ್ರವಾಸಿ ಸೌಲಭ್ಯ ಒದಗಿಸಿದರೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಸಾಧ್ಯ ಎಂದರು.

ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಕಾವೇರಿ ನದಿ ಉದ್ದಕ್ಕೂ ನದಿ ಅಂಚಿನಿಂದ 300 ಮೀ.ವರೆಗೆ ಪರಿಸರ ಸೂಕ್ಷ್ಮ ವಲಯ (Eco senstive Zone) ಎಂದು ಘೋಷಿಸಬೇಕಾಗಿದೆ.  ಈ ಪ್ರದೇಶವನ್ನು ಜೌಗು ಪ್ರದೇಶವಾಗಿ ಸಂರಕ್ಷಿಸಬೇಕಿದ್ದು, ಅಧಿಕಾರಿಗಳು ಈ ವ್ಯಾಪ್ತಿಯಲ್ಲಿ ಕೆರೆಗಳನ್ನು ಗುರುತಿಸಿ ಇಂಪ್ಯಾಕ್ಟ್ ಅಸೆಸ್‌ಮೆಂಟ್ ವರದಿಯನ್ನು 2 ತಿಂಗಳೊಳಗಾಗಿ ನೀಡಬೇಕು ಎಂದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರು ಗಗನಚುಕ್ಕಿ ಜಲಪಾತದ ಮೇಲ್ಭಾಗದಲ್ಲಿ 150 ಎಕರೆ ವಸ್ತೀರ್ಣದಷ್ಟು ದ್ವೀಪವಿದೆ. 1970 ರ ದಶಕದಲ್ಲಿ ಈ ಭೂಮಿಯನ್ನು ಮಾಜಿ ಸೈನಿಕರಿಗೆ, ರೈತರಿಗೆ ಮಂಜೂರು ಮಾಡಲಾಗಿದೆ. ಆದರೆ ಬಹುತೇಕ ಪ್ರದೇಶಗಳಲ್ಲಿ ಸಾಗುವಳಿ ನಡೆಯುತ್ತಿಲ್ಲ. ಇಲ್ಲಿ ಖಾಸಗಿ ಕಟ್ಟಡಗಳು ತಲೆ ಎತ್ತಲು ಸಿದ್ಧವಾಗುತ್ತಿದೆ. ಕಟ್ಟಡಗಳು ನಿರ್ಮಾಣವಾದರೆ ಪರಿಸರದ ಮೇಲೆ ಪ್ರತಿಕೂಲ  ಪರಿಣಾಮ ಬೀರುತ್ತದೆ ಎಂದು ಹೊಸದಾಗಿ ಕಟ್ಟಡ ನಿರ್ಮಿಸಲು ಅನುಮತಿ ನೀಡುತ್ತಿಲ್ಲ. ಮಂಜೂರು ಮಾಡಿರುವ ಭೂಮಿಯನ್ನು ಸೂಕ್ತ ಪ್ರಕ್ರಿಯೆಗಳ ಮೂಲಕ ಸರ್ಕಾರದ ವಶಕ್ಕೆ ತೆಗೆದುಕೊಂಡು ಅರಣ್ಯ ವ್ಯಾಪ್ತಿಗೆ ಸೇರಿಸಬೇಕಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ 192 ಕೆರೆಗಳು ಬೃಹತ್ ನೀರಾವರಿ ಇಲಾಖೆಗೆ ಸೇರಿದೆ. ಇದಲ್ಲದೆ ಜಿಲ್ಲಾ ಪಂಚಾಯತ್ ಹಾಗೂ ಸಣ್ಣ ನೀರಾವರಿಗೆ ಸೇರಿದ ಕೆರೆಗಳು ಇವೆ. ಈ ಎಲ್ಲಾ ಕೆರೆಗಳಲ್ಲಿ ಹೂಳು ಹಾಗೂ ಜೋಂಡು ತೆಗೆದರೆ ಪ್ರತಿ ಕೆರೆಯಲ್ಲಿ ಸುಮಾರು 1 ಟಿ.ಎಂ.ಸಿ. ನೀರು ಸಂಗ್ರಹಿಸಬಹುದು ಎಂದು ತಿಳಿಸಿದರು. ಗಗನಚುಕ್ಕಿ ಜಲಪಾತನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ಮಂಡ್ಯ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಖ್ಯಾತ ಭೂ ವಿಜ್ಞಾನಿ ಡಾ|| ಶಕುಂತಲ, ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ, ಚಾಮರಾಜನಗರ ಜಿಲ್ಲಾಧಿಕಾರಿ ಸಾವಿತ್ರಮ್ಮ, ಮಂಡ್ಯ ವಿಭಾಗಾಧಿಕಾರಿ ಶಾಂತ ಹುಲ್ಮನಿ, ಕೊಳ್ಳೇಗಾಲ ವನ್ಯಜೀವಿ ಉಪ ಅರಣ್ಯ ಸಂರಕ್ಷಾಣಾಧಿಕಾರಿ ವಸಂತರೆಡ್ಡಿ, ಜಿಲ್ಲಾ ಪಂಚಾಯತ್ ಉಪ ಕಾಂiiದರ್ಶಿ ಎಸ್.ಸಿ. ಮಹೇಶ್, ಮಳವಳ್ಳಿ ತಹಶೀಲ್ದಾರ್ ರಾಜೇಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನ

 ಮದ್ದೂರು ಪುರಸಭೆಯ ವತಿಯಿಂದ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯಡಿ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಲ್ಲಿ ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳಿಗೆ ಸೇರಿದ ವಿದ್ಯಾವಂತ ನಿರುದ್ಯೋಗಿಗಳಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿ.ಎನ್.ಸಿ. ಟರ್ನಿಂಗ್, ಸಿ.ಎನ್.ಸಿ. ಮಿಲ್ಲಿಂಗ್, ಟರ್ನರ್, ಮಿಲ್ಲರ್, ಗ್ರೈಂಡರ್, ಆಟೋಕ್ಯಾಡ್, ಎಲೆಕ್ಟ್ರಾನಿಕ್ಸ್ ಅಂಡ್ ಮೈನ್‌ಟೆನೆನ್ಸ್ ಆಫ್ ಮೊಬೈಲ್ ಫೋನ್, ಕಂಪ್ಯೂಟರ್ ಫಂಡಮೆಂಟಲ್ & ಎಂ.ಎಸ್. ಆಫೀಸ್, ಇಂಟರ್‌ನೆಟ್ & ಡಿ.ಟಿ.ಪಿ, ಸಾಪ್ಟ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಸ್, ಕಮ್ಯುನಿಕೇಷನ್ ಸ್ಕಿಲ್ಸ್, ಅಕೌಂಟಿಂಗ್, ಬೇಸಿಕ್ ಎಲೆಕ್ಟ್ರಿಕಲ್ಸ್ & ಹೌಸ್ ವೈರಿಂಗ್, ಬೇಸಿಕ್ ಕಾರ್ಪೆಂಟರ್, ಪ್ಲಂಬಿಂಗ್ ಅಂಡ್ ಸ್ಯಾನಿಟೇಷನ್, ಭಾರಿ ವಾಹನ ಚಾಲನಾ ತರಬೇತಿ, ಲಘು ವಾಹನ ಚಾಲನಾ ತರಬೇತಿ, ಸೌಂದರ್ಯವರ್ಧಕ ಕ್ಯಾಂಡಲ್, ಫೆನಾಯಲ್ ತಯಾರಿಕಾ ತರಬೇತಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಆಗಸ್ಟ್ 17 ಕೊನೆಯ ದಿನಾಂಕವಾಗಿದ್ದು, ವಿದ್ಯಾರ್ಹತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸ್ವಯಂ ಉದ್ಯೋಗ ಕೈಗೊಳ್ಳಲು ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯ ನೀಡಲು ಮದ್ದೂರು ಪುರಸಭೆಯ ಎಸ್.ಜೆ.ಎಸ್.ಆರ್.ವೈ. ಯೋಜನಾ ಶಾಖೆಯನ್ನು ಸಂಪರ್ಕಿಸಲು

ವಾಯುಪಡೆ ನೇಮಕಾತಿ ರ‍್ಯಾಲಿ

ಕಮಾಂಡಿಂಗ್ ಆಫೀಸರ್, 7 ಏರ್‌ಮೆನ್ ಸೆಲೆಕ್ಷನ್ ಸೆಂಟರ್, 1 ಕಬ್ಬನ್ ರಸ್ತೆ, ಬೆಂಗಳೂರು 560001 ಇವರ ವತಿಯಿಂದ ಭಾರತೀಯ ವಾಯುಪಡೆಯ ಗ್ರೂಫ್ ’X’ ವಿಭಾಗದ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ  ಜುಲೈ 31 ರಂದು  ಕೊಪ್ಪಳ ಜಿಲ್ಲೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣ (ಬ್ಯಾಡ್ಮಿಂಟನ್ ಕೋರ್ಟ್), ಗದಗ ಇಲ್ಲಿ ಯುವಕರಿಗೆ ಬೃಹತ್ ರ‍್ಯಾಲಿಯನ್ನು ನಡೆಸಲಿದ್ದಾರೆ. ದಿನಾಂಕ 31-7-2013ರಂದು ಲಿಖಿತ ಮತ್ತು ದೈಹಿಕ ಪರೀಕ್ಷೆಯನ್ನು ದಿನಾಂಕ 1-8-2013ರಂದು ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ.

ದಿನಾಂಕ 1-5-1993 ರಿಂದ 30-11-1996 ಇದರ ನಡುವೆ ಹುಟ್ಟಿರುವ ಅಭ್ಯರ್ಥಿಗಳು ಮಾತ್ರ ಈ ರಿಕ್ರೂಟ್‌ಮೆಂಟ್ ರ‍್ಯಾಲಿಯಲ್ಲಿ ಭಾಗವಹಿಸಬಹುದು. ಪಿ.ಯು.ಸಿ.ಯಲ್ಲಿ ಗಣಿತ, ಭೌತ ಶಾಸ್ತ್ರ ಮತ್ತು ಆಂಗ್ಲ ಭಾಷೆಯಲ್ಲಿ ಕನಿಷ್ಠ ಶೇ. 50ರಷ್ಟು ಅಂಕಗಳಿಸಿದ್ದು ಒಟ್ಟಿನಲ್ಲಿ ಶೇ:50ರಷ್ಟು  ಅಂಕಗಳನ್ನು  ಪಡೆದಿರಬೇಕು ಅಥವಾ ಡಿಪ್ಲೋಮೋದಲ್ಲಿ 3 ವರ್ಷದ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ ಎಲ್ಕೆಟ್ರಾನಿಕ್ಸ್/ ಆಟೋಮೊಬೈಲ್/ ಕಂಪ್ಯೂಟರ್ ಸೈನ್ಸ್/ಇನ್ಸ್‌ಟ್ರೊಮೇಂಟೆಷನ್ ಟೆಕ್ನಾಲಜಿ/ಇನ್‌ಪರ್ಮೇಷನ್ ಟೆಕ್ನಾಲಜಿಯಲ್ಲಿ ಕನಿಷ್ಠ ಶೇ:50ರಷ್ಟು ಅಂಕಗಳಿಸಿರಬೇಕು.

ಆರ್ಹ ಹಾಗೂ ಇಚ್ಚೆಯುಳ್ಳ ಅಭ್ಯರ್ಥಿಗಳು ದಿನಾಂಕ 31-7-2013ರಂದು  ಬೆಳಿಗ್ಗೆ 10-00 ಘಂಟೆಗೆ ತಮ್ಮ ವಿದ್ಯಾರ್ಹತೆಯ ಎಲ್ಲಾ ಮೂಲ ಪ್ರಮಾಣ ಪತ್ರಗಳೊಂದಿಗೆ ಮತ್ತು ಇದರ3 ಸೆಟ್ ಜೆರಾಕ್ಸ್ ಪ್ರತಿಗಳು, ತಮ್ಮ ಇತ್ತೀಚಿನ ಬಣ್ಣದ 7 ಪಾಸ್ ಪೋರ್ಟ್ ಆಳತೆಯ ಭಾವ ಚಿತ್ರಗಳು, ಹೆಚ್.ಬಿ.ಪೆನ್‌ಸಿಲ್, ಬ್ಲೂ/ಬ್ಲಾಕ್ ಪೆನ್ ಮತ್ತು ಎರೇಸರ್ ಹಾಗೂ 2(24×10 ಸೇ.ಮಿ ಅಳತೆಯ) ಸ್ವ ವಿಳಾಸವಿರುವ ಲಕೋಟೆಯೊಂದಿಗೆ ಹಾಜರಾಗತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ www.indianairforce.nic.in ನ ವೆಬ್‌ಸೈಟ್‌ಅನ್ನು ನೋಡಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಂಡ್ಯ ಇವರನ್ನು ಮತ್ತು ದೂರವಾಣಿ ಸಂಖ್ಯೆ.220126ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಡಿ.ಎಂ.ರಾಣಿ ತಿಳಿಸಿದ್ದಾರೆ.

ಮೊಬೈಲ್ ಪೋನ್ ದುರಸ್ತಿ ಹಾಗೂ ಸರ್ವೀಸ್ ತರಬೇತಿ

ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಮತ್ತು ಸಿಡಾಕ್ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 10 ರಿಂದ 10ನೇ ತರಗತಿಯಲ್ಲಿ ತೇರ್ಗಡೆಯಾಗಿರುವ, 18 ರಿಂದ 35 ವರ್ಷ ವಯೋಮಿತಿಯೊಳಗಿನ, ಅಭ್ಯರ್ಥಿಗಳಿಗೆ ನಾಗಮಂಗಲದಲ್ಲಿ 4 ವಾರಗಳ ಮೊಬೈಲ್ ಪೋನ್ ದುರಸ್ತಿ ಹಾಗೂ ಸರ್ವೀಸ್ ಕುರಿತು   ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತರು  ತಮ್ಮ ಸ್ವ ವಿವರದೊಂದಿಗೆ ಮೊಬೈಲ್ ನಂಬರ್ ಸಮೇತ ಅರ್ಜಿಯನ್ನು ಜಿಲ್ಲಾ ಉಪನಿರ್ದೇಶಕರು, (ತ), ಸಿಡಾಕ್, ಕುಶಲಕರ್ಮಿ ತರಬೇತಿ ಸಂಸ್ಥೆ, ತಾಲ್ಲೂಕು ಕಛೇರಿ ಪಕ್ಕ, ನಾಗಮಂಗಲ ಇಲ್ಲಿಗೆ ಜುಲೈ 25 ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9844346777 ಅನ್ನು ಸಂಪರ್ಕಿಸುವುದು.

ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗೆ ಮತ್ತು ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಪ್ರವರ್ಗ-1, 2ಎ, 2ಬಿ, 3ಎ, 3ಬಿ ಸೇರಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವರಮಾನ ಗ್ರಾಮಂತರ ಪ್ರದೇಶದವರಿಗೆ ರೂ. 40,000/-, ಪಟ್ಟಣ ಪ್ರದೇಶದವರಿಗೆ ರೂ. 55,000/- ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಕುಟುಂಬದ ವರಮಾನ ಗ್ರಾಮಂತರ ಪ್ರದೇಶದವರಿಗೆ ರೂ. 80,000/-ಪಟ್ಟಣ ಪ್ರದೇಶದವರಿಗೆ ರೂ. 1,03,000/- ಗಳಿದ್ದು, ವಯಸ್ಸು 18 ರಿಂದ 55 ವರ್ಷಗಳ ಮಿತಿಯಿರಬೇಕು.

ಚೈತನ್ಯ ಸಬ್ಸಿಡಿ ಕಂ ಸಾಪ್ಟ್‌ಲೋನ್ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಕಿರು ಸಾಲ ಯೋಜನೆ, ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಸಾಂಪ್ರದಾಯಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಸೌಲಭ್ಯ ಯೋಜನೆ, ಕುಂಬಾರಿಕಾ ಅಭಿವೃದ್ಧಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಯೋಜನೆ, ಅವಧಿ ಸಾಲ ಯೋಜನೆ, ಶೈಕ್ಷಣಿಕ ಸಾಲ, ನ್ಯೂ ಸ್ವರ್ಣಿಮಾ ಯೋಜನೆಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು, ನಿಗದಿತ ಅರ್ಜಿ ನಮೂನೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಆಭಿವೃದ್ಧಿ ನಿಗಮ, (ದೂರವಾಣಿ ಸಂಖ್ಯೆ 08232-231804), ಜಿಲ್ಲಾ ಪಂಚಾಯತ್ ಕಛೇರಿ ಪಕ್ಕ, ಮಂಡ್ಯ ಇಲ್ಲಿ ಸಂಪರ್ಕಿಸುವುದು.