District News 17-03-2012

Saturday, March 17th, 2012

ಮಕ್ಕಳ ಬಾಳು ಹಸನುಗೊಳಿಸುವತ್ತ ಪೋಷಕರು ಚಿಂತಿಸಬೇಕು: ಎನ್.ಕೃಷ್ಣಪ್ಪ

ಮಡಿಕೇರಿ ಮಾ.17(ಕರ್ನಾಟಕ ವಾರ್ತೆ):-ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹವನ್ನು ತಡೆಗಟ್ಟಿ ಮಕ್ಕಳ ಬಾಳನ್ನು ಹಸನುಗೊಳಿಸುವತ್ತ ಪೋಷಕರು ಗಮನಹರಿಸಬೇಕು ಎಂದು ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಸಲಹೆ ಮಾಡಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿಂದು ‘ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ’ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹಕ್ಕೆ ಬಡತನ, ಅನಕ್ಷರತೆ, ಮೂಢ ನಂಬಿಕೆಗಳು ಪ್ರಮುಖ ಕಾರಣವಾಗಿವೆ. ಈ ಬಗ್ಗೆ ತಳ ಮಟ್ಟದಲ್ಲಿ ಅರಿವು ಮೂಡಿಸುವ ಕೆಲಸವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಕರು, ಗ್ರಾಮ ಲೆಕ್ಕಿಗರು ನಿರ್ವಹಿಸಬೇಕು ಎಂದು ಎನ್.ಕೃಷ್ಣಪ್ಪ ಅವರು ಸಲಹೆ ಮಾಡಿದರು.

ಮಹಿಳೆಯರು ಪ್ರಜ್ಞಾವಂತರಾದಾಗ ಮಾತ್ರ ಬಾಲ್ಯ ವಿವಾಹ, ಮಕ್ಕಳ ಸಾಗಾಣಿಕೆಯಂತಹ ಕೆಟ್ಟ ಪದ್ದತಿಗಳನ್ನು ತಡೆಯಲು ಸಾಧ್ಯ. ಪೋಷಕರು ತಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆ ಅರಿತು ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಹೇಳಿದರು. ಸರ್ಕಾರ ನಿಗದಿ ಪಡಿಸಿದಂತೆ 18(ಹೆಣ್ಣು) ಮತ್ತು 21(ಗಂಡು) ವಯಸ್ಸು ತುಂಬಿದ ನಂತರವೇ ಮದುವೆ ಮಾಡಬೇಕು. ಆದರೂ ‘ಯುವತಿಯರಿಗೆ 21 ಮತ್ತು ಯುವಕರಿಗೆ 25 ವರ್ಷವಾದ ನಂತರವೇ ಮದುವೆ ಮಾಡುವ ಬಗ್ಗೆ ಎಲ್ಲರೂ ಚಿಂತನೆ ಮಾಡುವುದು ಅತ್ಯಗತ್ಯವಾಗಿದೆ’ ಎಂದು ಎನ್.ಕೃಷ್ಣಪ್ಪ ಅವರು ಅಭಿಪ್ರಾಯಪಟ್ಟರು. ಬಾಲ್ಯ ವಿವಾಹ, ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಯುವಲ್ಲಿ ಪೊಲೀಸ್, ಕಾರ್ಮಿಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತಿತರ ಇಲಾಖೆಗಳು ಶ್ರಮಿಸುತ್ತಿವೆ. ಇವುಗಳ ಜೊತೆಗೆ ಇತರರು ಸಹ ಕೈಜೋಡಿಸಬೇಕು. ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸಿದ್ದಯ್ಯ ಅವರು ಮಾತನಾಡಿ ಹದಿಹರೆಯದಲ್ಲಿ ಮದುವೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ರಕ್ತ ಹೀನತೆಯಿಂದ ದೇಹದ ಬೆಳವಣಿಗೆ ಕುಂಠಿತವಾಗಿ ಹಲವು ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದ್ದ ದಿವಾಕರ ಅವರು ಬಾಲ್ಯ ವಿವಾಹವನ್ನು ಏರ್ಪಡಿಸುವ, ನೆರವೇರಿಸುವವರು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಬಾಲ್ಯ ವಿವಾಹಕ್ಕೆ ಉತ್ತೇಜನ ನೀಡುವವರಿಗೆ 2 ವರ್ಷದವರೆಗೆ ಜೈಲು, 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಕಾಯ್ದೆ ಇದ್ದು, ಈ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಬೇಕಿದೆ ಎಂದು ಅವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ವಿಜಯಲಕ್ಷ್ಮಿ ಶೆಣೈ ಅವರು ಮಾತನಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಬಾಲ್ಯವಿವಾಹ ತಡೆ, ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆ ಬಗ್ಗೆ ಸದಾ ಜಾಗೃತಿ ವಹಿಸಲಾಗಿದೆ ಎಂದು ಅವರು ತಿಳಿಸಿದರು. ವೃತ್ತ ನಿರೀಕ್ಷಕರಾದ ಪ್ರಕಾಶ್ ಗೌಡ ಅವರು ಮಾತನಾಡಿ ಬಾಲ್ಯವಿವಾಹ, ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಯುವಲ್ಲಿ ಪೊಲೀಸ್ ಇಲಾಖೆ ಸದಾ ಸನ್ನದ್ದವಾಗಿದೆ. ಆದರೂ ಸಾರ್ವಜನಿಕರು ಬಾಲ್ಯವಿವಾಹ, ಮಹಿಳೆಯರು ಮತ್ತು ಮಕ್ಕಳ ಸಾಗಣಿಕೆ ನಡೆದರೆ ಸುಳಿವು ನೀಡುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಜಯರಾಂ, ಸಹಾಯಕ ನಿರ್ದೇಶಕರಾದ ಲಿಂಗರಾಜು, ಕಾರ್ಮಿಕ ಅಧಿಕಾರಿ ಯತಿರಾಜು, ತಾ.ಪ. ಸದಸ್ಯರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಮತ್ತಿತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆಯ ದಮಯಂತಿ ನಿರೂಪಿಸಿದರು. ಪಿ.ಡಿ. ಜ್ಯೋತಿ ಪ್ರಾರ್ಥಿಸಿದರು.

ಜಿಲ್ಲೆಯ ಮೂವರು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪ್ರಧಾನ

ಮಡಿಕೇರಿ ಮಾ.17(ಕರ್ನಾಟಕ ವಾರ್ತೆ):-ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಜಿಲ್ಲೆಯ ಮೂವರು ಯುವ ವಿಜ್ಞಾನಿಗಳಿಗೆ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಜಿ.ಪಂ.ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಪಿ.ಅಚ್ಯುತಾನಂದ(ಪ್ರಥಮ), ಜೆರೊನ್ ಅಬ್ರಾಹಂ(ದ್ವಿತೀಯ) ಮತ್ತು ಅರ್ವತ್ತೊಕ್ಲುನ ಸರ್ವ ದೈವತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಎಂ.ಡಿ.ಮಾಚಯ್ಯ (ತೃತೀಯ) ಅವರಿಗೆ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ಜಿಲ್ಲಾ ವಿಜ್ಞಾನ ಪರಿಷತ್, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಂದು ಜಿ.ಪಂ.ಸಿ.ಇ.ಒ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪಡೆದ ಜಿಲ್ಲೆಯ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ಸಂಶೋಧನೆ ಕೈಗೊಳ್ಳುವ ಮೂಲಕ ಪ್ರಸಿದ್ಧಿ ಗಳಿಸಬೇಕು ಎಂದು ಅವರು ಕರೆ ನೀಡಿದರು. ದೇಶದ ಸಿ.ವಿ.ರಾಮನ್, ಜಗದೀಶ್ ಚಂದ್ರಬೋಸ್, ಹೋಮಿ ಜಹಂಗೀರ್ ಬಾಬಾ ಅವರಂತೆ ಜಿಲ್ಲೆಯ ಯುವ ವಿಜ್ಞಾನಿಗಳು ಜಾಗತೀಕ ಮಟ್ಟದಲ್ಲಿ ಪ್ರಜ್ವಲಿಸುವಂತಾಗಬೇಕು. ಆ ನಿಟ್ಟಿನಲ್ಲಿ ಯುವ ವಿಜ್ಞಾನಿಗಳಿಗೆ ಜಿ.ಪಂ.ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ರವಿಕುಶಾಲಪ್ಪ ಅವರು ಹೇಳಿದರು.

ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ ವಿಷಯಗಳ ಬಗ್ಗೆ ಕುತೂಹಲ ಇದ್ದಾಗ ಸಂಶೋಧನೆ ಕೈಗೊಂಡು ಯಶಸ್ವಿಯಾದರೆ ವಿಜ್ಞಾನಿಗಳಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರು ತಮ್ಮ ಬಾಲ್ಯದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಕೂತೂಹಲ ಚಟುವಟಿಕೆಗಳನ್ನು ಕೈಗೊಂಡು ದೇಶದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು ಎಂದು ಎನ್.ಕೃಷ್ಣಪ್ಪ ಅವರು ಹೇಳಿದರು. ಯುವ ವಿದ್ಯಾರ್ಥಿಗಳು ದೇಶ ಕಟ್ಟುವ ಭವಿಷ್ಯದ ವಿಜ್ಞಾನಿಗಳಾಗಬೇಕು. ವಿಶಾಲ ಮನೋಭಾವ ಬೆಳೆಸಿಕೊಂಡು ಅತ್ಯುನ್ನತ ಸ್ಥಾನಕ್ಕೇರುವ ಪ್ರಯತ್ನವನ್ನು ಮಾಡಬೇಕು ಎಂದು ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಸಲಹೆ ಮಾಡಿದರು.

ಜಿಲ್ಲಾ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಯುವ ವಿಜ್ಞಾನಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು ವೈಜ್ಞಾನಿಕ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಕ್ರೀಯಾಶಿಲವಾಗಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ತಮ್ಮ ಪ್ರತಿಭೆಯನ್ನು ತೋರಿದ ವಿದ್ಯಾರ್ಥಿಗಳನ್ನು ಆಯ್ದು ಪ್ರಶಸ್ತಿ ಪತ್ರ ಜತೆಗೆ ನಗದು ಬಹುಮಾನ ಜಿಲ್ಲಾ ಮಟ್ಟದಲ್ಲಿ 3 ಸಾವಿರ ರೂ.(ಪ್ರಥಮ), 2 ಸಾವಿರ ರೂ.(ದ್ವಿತೀಯ) ಮತ್ತು 1 ಸಾವಿರ(ತೃತೀಯ) ರೂ.ಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಕ್ಕಳ ವಿಜ್ಞಾನ ಗೋಷ್ಠಿ, ಪ್ರತಿಭಾ ಕಾರಂಜಿ, ವಿಜ್ಞಾನ ನಾಟಕ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಡೆದುಕೊಂಡ ಬಹುಮಾನ, ಪ್ರಶಸ್ತಿ, ಗುಣಾಂಕಗಳು ಮತ್ತು ಎನ್.ಟಿ.ಎಸ್.ಸಿ. ಪರೀಕ್ಷಾ ಫಲಿತಾಂಶಗಳು ಮತ್ತಿತರ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದರು. ಯುವ ವಿಜ್ಞಾನಿ ಪ್ರಶಸ್ತಿ ಪಡೆದ ಪಿ.ಅಚ್ಯುತಾನಂದ ಮಾತನಾಡಿ ವಿಶ್ವದಲ್ಲಿ ಪ್ರಮುಖವಾಗಿ 7 ಮಂದಿ ವಿಜ್ಞಾನಿಗಳು ಖ್ಯಾತಿ ಗಳಿಸಿದ್ದು, ಈ ಪಟ್ಟಿಗೆ 8ನೇಯವನಾಗಿ ಸೇರ್ಪಡೆಯಾಗಲು ಸತ ಪ್ರಯತ್ನ ಮಾಡುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಜಿ.ಪಂ.ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಮಡಿಕೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರನ್, ವಿಷಯ ಪರಿವೀಕ್ಷಕರಾದ ಎ.ಎಂ.ಚಂಗಪ್ಪ, ಸದಸ್ಯರಾದ ಡೆನೀಸ್ ಡಿಸೋಜ, ಹೂಬರ್ಟ್ ಡಾಯಾಸ್, ಸಿ.ಎಸ್.ಸುರೇಶ್, ಮಾರ್ಗದರ್ಶಿ ಶಿಕ್ಷಕರು, ಪೋಷಕರು ಮತ್ತಿತರರು ಇದ್ದರು.

ಜಿ.ಪಂ.ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್ಗೆ ಪ್ರಶಸ್ತಿ

ಮಡಿಕೇರಿ ಮಾ.17(ಕರ್ನಾಟಕ ವಾರ್ತೆ):-ಉಡುಪಿ ಜಿ.ಪಂ.ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ತಯಾರಿಸಿದ ಮಾನವಾಭಿವೃದ್ಧಿ ವರದಿಗೆ ವಿಶ್ವ ಸಂಸ್ಥೆಯ ಯುನೈಟೆಡ್ ನೇಷನ್ ಡೆವಲಪ್ಮೆಂಟ್ ಯೋಜನೆ(ಯುಎನ್ಡಿಪಿ) ವತಿಯಿಂದ ಎ.ಶ್ರೀನಿವಾಸರಾವ್ ಅವರಿಗೆ ಅತ್ಯುತ್ತಮ ಮಾನವಾಭಿವೃದ್ಧಿ ಪ್ರಶಸ್ತಿ ಲಭಿಸಿದೆ.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕುಡಿಯುವ ನೀರು, ನೈರ್ಮಲ್ಯ ಸಚಿವರಾದ ಜೈರಾಮ್ ರಮೇಶ್ ಅವರಿಂದ ಶ್ರಿನಿವಾಸರಾವ್ ಅವರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಗಿನ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಹೇಮಲತಾ, ಮಣಿಪಾಲ ವಿಶ್ವ ವಿದ್ಯಾನಿಲಯದ ನಿರ್ದೇಶಕರಾದ ಶ್ರೀಕೃಷ್ಣ ಕೊತ್ತೂರು ಹಾಗೂ ಯುಎನ್ಡಿಪಿಯ ಪ್ರತಿನಿಧಿಗಳು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಎ.ಶ್ರೀನಿವಾಸರಾವ್ ಅವರು ಕೊಡಗು ಜಿ.ಪಂ.ನಲ್ಲಿ ಹಾಲಿ ಮುಖ್ಯ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಗ್ರಾಮ ಪಂಚಾಯ್ತಿವಾರು ಮಾಹಿತಿ ಕ್ರೂಡೀಕರಿಸಿ ಮಾನವಾಭಿವೃದ್ಧಿ ಸೂಚ್ಯಂಕ ವರದಿ ಸಿದ್ದಪಡಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ಜಿ.ಪಂ. ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಅವರು ಮಾನವಾಭಿವೃದ್ದಿ ವರದಿಗೆ ಪ್ರಶಸ್ತಿ ಪಡೆದ ಶ್ರೀನಿವಾಸರಾವ್ ಅವರನ್ನು ಅಭಿನಂದಿಸಿದ್ದಾರೆ.

ಸೈನಿಕರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿsಸಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ ಮಾ.17(ಕರ್ನಾಟಕ ವಾರ್ತೆ):-ಭೂ ಮಂಜೂರಾತಿ ಕಡತಗಳು ಸೇರಿದಂತೆ ಮಾಜಿ ಸೈನಿಕರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ ಇತ್ಯರ್ಥಪಡಿಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಡಾ. ಎನ್.ವಿ.ಪ್ರಸಾದ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ನಡೆದ ಮಾಜಿ ಸೈನಿಕರ ಅದಾಲತ್ನ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾಜಿ ಸೈನಿಕರ ಭೂ ಮಂಜೂರಾತಿ ಪ್ರಕರಣಗಳಿಗೆ ಸಂಬಂಧಿಸಿ ಪ್ರತ್ಯೇಕ ತಂಡ ರಚಿಸಿಕೊಂಡು ಆಧ್ಯತೆ ಮೇಲೆ ಸ್ಥಳ ಪರಿಶೀಲನೆ ಮಾಡಿ ಫಾರಂ ನಂ.50-53 ಸಲ್ಲಿಸಿರುವ ಪ್ರಕರಣಗಳನ್ನು ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಡಿಸಬೇಕು. ಅದೇ ರೀತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೀಘ್ರವಾಗಿ ಕಡತ ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ತಹಶೀಲ್ದಾರರುಗಳಿಗೆ ತಿಳಿಸಿದರು.

ಅದಾಲತ್ನಲ್ಲಿ ತಾಲ್ಲೂಕುವಾರು ಹಾಗೂ ಅರ್ಜಿವಾರು ಪ್ರಕರಣಗಳು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿದ ಅವರು ಮಾಜಿ ಯೋಧರನ್ನು ಪದೇ ಪದೇ ಕಚೇರಿಗೆ ಅಲೆಸಬಾರದು. ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಕಡ್ಡಾಯವಾಗಿ ಸ್ಥಳ ಪರಿಶೀಲಿಸಿ ಸ್ಥಳೀಯರನ್ನು ವಿಚಾರಿಸಿ ವರದಿ ಸಲ್ಲಿಸಬೇಕು. ಮಾನವೀಯತೆಯ ನೆಲಗಟ್ಟಿನಲ್ಲಿ ತ್ವರಿತವಾಗಿ ಕೆಲಸ ಮಾಡಿಕೊಡಬೇಕೆಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಮಾತನಾಡಿ ತಾಲ್ಲೂಕು ಕಚೇರಿಗಳಲ್ಲಿ ಮಾಜಿ ಸೈನಿಕರನ್ನು ಕಾಯಿಸದೆ ತುರ್ತು ಆದ್ಯತೆ ಮೇಲೆ ಕಡತ ವಿಲೇವಾರಿ ಮಾಡಬೇಕು. ಸಣ್ಣಪುಟ್ಟ ವಿಷಯಕ್ಕೂ ಅಲೆಸುವ ಬದಲು ಸ್ಥಳ ತನಿಖೆ ಮಾಡಿ ವಾಸ್ತವಾಂಶ ಮನದಟ್ಟು ಮಾಡಿಕೊಂಡು ನೆರವು ನೀಡಬೇಕು ಎಂದರು.

ಮಾಜಿ ಸೈನಿಕರ ಅರ್ಜಿಗಳ ಪಟ್ಟಿಯನ್ನು ಕೈಗೆತ್ತಿಕೊಂಡು ಗ್ರಾಮ ಲೆಕ್ಕಿಗರು ಪ್ರತಿ ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಬೇಕು. ಕಂದಾಯ ಪರಿವೀಕ್ಷಕರು ಇವುಗಳಲ್ಲಿ ಶೇ. 20ರಷ್ಟು ಪ್ರಕರಣಗಳ ಮರು ಪರಿಶೀಲನೆ ನಡೆಸಬೇಕು. ಶೇ. 5ರಷ್ಟು ಪ್ರಕರಣಗಳನ್ನು ತಹಶೀಲ್ದಾರರು ನೋಡಬೇಕು. ಒಟ್ಟಾರೆ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗಬೇಕು ಎಂದು ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

ಮಾಜಿ ಯೋಧರ ಅರ್ಜಿಗಳನ್ನು ಮಾನವೀಯತೆ ದೃಷ್ಠಿಯಿಂದ ವಿಶೇಷ ಆದ್ಯತೆ ಎಂದು ಪರಿಗಣಿಸಲು ಈಗಾಗಲೇ ತಹಶೀಲ್ದಾರ್ ಮತ್ತು ಕಂದಾಯ ಪರಿವೀಕ್ಷರು, ಗ್ರಾಮ ಲೆಕ್ಕಿಗರುಗಳಿಗೆ ಸೂಚನೆ ನೀಡಲಾಗಿದೆ. ಮಾಜಿ ಸೈನಿಕರು ಸಹ ಇದಕ್ಕೆ ಪೂರಕ ಸಹಕಾರ ನೀಡಬೇಕು ಎಂದು ಹೇಳಿದರು. ಈವರೆಗೆ ಕೆಲವು ಪ್ರಕರಣಗಳಲ್ಲಿ ಕೆಳಹಂತದ ಅಧಿಕಾರಿ, ಸಿಬ್ಬಂದಿಗಳಿಂದಾಗಿ ವಿಳಂಬ ಆಗಿರುವುದಕ್ಕೆ ವಿಷಾಧಿಸುತ್ತೇವೆ. ಇನ್ನೂ ಮುಂದೆ ಇದು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಮುಂದಿನ ಅದಾಲತ್ ಒಳಗಾಗಿ ಒಂದಷ್ಟು ಪ್ರಕರಣಗಳು ಇತ್ಯರ್ಥವಾಗುತ್ತವೆ ಎಂಬ ವಿಶ್ವಾಸ ತಮಗಿದೆ.

ಸಭೆಯಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ, ಲೆಪ್ಟಿನೆಂಟ್ ಕರ್ನಲ್ ಅಪ್ಪಯ್ಯ, ಕರ್ನಲ್ ನಂಜಪ್ಪ, ಸುಬೇದಾರ್ ನಂಜಪ್ಪ ಅವರುಗಳು ಮಾಜಿ ಯೋಧರು ಹಾಗೂ ಅವರ ಕುಟುಂಬದವರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಸಭೆಯಲ್ಲಿ ವಿಚಾರ ಮಂಡಿಸಿದರು. ದೇಶದ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುವ ಯೋಧರಿಗೆ ಜಿಲ್ಲೆಯಲ್ಲಿ ಸೂಕ್ತ ಗೌರವ ದೊರಕುತ್ತಿಲ್ಲ. ವರ್ಷಗಳೇ ಆದರೂ ಕಂದಾಯ ಇಲಾಖೆಯಲ್ಲಿ ಅರ್ಜಿಗಳು ವಿಲೇವಾರಿಯಾಗುವುದಿಲ್ಲ. ಟಿ.ಪಿ.ಪೈನ್ಸ್ ಕಟ್ಟಿದ ನಂತರವೂ ಜಮೀನು ಹಸ್ತಾಂತರವಾಗುತ್ತಿಲ್ಲ ಎಂದು ಅಸಮಾದಾನ ತೋಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಟಿ.ಪಿ.ದಂಡ ಎಂದರೆ ತಕರಾರು ತಕ್ತೆ ಎಂದರ್ಥ. ಇದು ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಉಳುಮೆ ಮಾಡಿದ್ದಕ್ಕಾಗಿ ಕಟ್ಟಿಸಿಕೊಳ್ಳಲಾಗುವ ದಂಡವಾಗಿದ್ದು, ಇದನ್ನು ಜಮೀನಿನ ಮೇಲೆ ಹಕ್ಕೆಂದು ಪರಿಗಣಿಸಲಾಗುವುದಿಲ್ಲ. ಆದರೂ ನಾವು ಮಾಜಿ ಸೈನಿಕರಿಗೆ ನಿಯಮಾನುಸಾರ ಜಮೀನು ದೊರಕಿಸಿಕೊಡಲು ಶ್ರಮಿಸುತ್ತಿರುವುದಾಗಿ ಹೇಳಿದರು.

ಇದೇ ವೇಳೆ ಮಾತನಾಡಿದ ಸೈನಿಕ ಪ್ರತಿನಿಧಿಗಳು 1990ಕ್ಕೂ ಹಿಂದೆಯೇ ನೂರಾರು ಸೈನಿಕರು ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದರು. ಅನಂತರ ಅಕ್ರಮ ಸಕ್ರಮಕ್ಕೆ ಅರ್ಜಿ ಆಹ್ವಾನಿಸಿದ ಸಂದರ್ಭ ಫಾರಂ 50-53 ಅನ್ನು ಕೊಡಲು ದೇಶದ ಮೂಲೆ ಮೂಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಸಾಧ್ಯವಾಗದೇ ಇರಬಹುದು ಅಥವಾ ಅವರಿಗೆ ಈ ವಿಷಯ ಗಮನಕ್ಕೆ ಬಾರೆದೆಯೂ ಇರಬಹುದು. ಈ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಯೋಧರು, ಮಾಜಿ ಯೋಧರ ಪ್ರಕರಣಗಳಲ್ಲಿ ಈ ನಿಯಮವನ್ನು ಸಡಿಲಿಸಬೇಕು ಅಥವಾ ಭೂ ಮಂಜೂರಾತಿಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು. ಕೆಲವು ಮಾಜಿ ಯೋಧರು ಪೊಲೀಸ್ ಇಲಾಖೆಯಲ್ಲಿ ಆಗುತ್ತಿರುವ ಅಸಹಕಾರಗಳ ಬಗ್ಗೆಯೂ ಬೇಸರ ತೋಡಿಕೊಂಡರು. ಜಿಲ್ಲೆಯ ಮೂರು ತಾಲ್ಲೂಕುಗಳ ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ನೂರಾರು ಸಂಖ್ಯೆಯ ಮಾಜಿ ಸೈನಿಕರು ಸಭೆಯಲ್ಲಿ ಹಾಜರಿದ್ದು ತಮ್ಮ ಸಂಕಷ್ಟಗಳನ್ನು ವಿವರಿಸಿದರು. ಪ್ರತಿಯೊಂದು ವಿಷಯಗಳನ್ನು ಆಲಿಸಿದ ಜಿಲ್ಲಾಧಿಕಾರಿ ಸಂಬಂಧಪಟ್ಟ ತಹಶೀಲ್ದಾರ್ ಮತ್ತು ಕಂದಾಯ ಪರಿವೀಕ್ಷಕರಿಗೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮವಹಿಸಲು ಸೂಚಿಸಿದರು.

ಮಾ.18ರಂದು ವಿದ್ಯುತ್ ವ್ಯತ್ಯಯ

ಮಡಿಕೇರಿ ಮಾ.17(ಕರ್ನಾಟಕ ವಾರ್ತೆ):-ಕುಶಾಲನಗರ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾದ ಕಾರಣ ಕ.ವಿ.ಪ್ರ.ನಿ.ನಿ.ರವರ ಕೋರಿಕೆಯಂತೆ ಮಾರ್ಚ್, 18 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕುಶಾಲನಗರ ವಿದ್ಯುತ್ ಸ್ವೀಕರಣಾ ಕೇಂದ್ರ ಹಾಗೂ ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಅದ್ದರಿಂದ ಕುಶಾಲನಗರ, ಗುಡ್ಡೆಹೊಸೂರು, ನಂಜರಾಯಪಟ್ಟಣ, ಕೈಗಾರಿಕಾ ಪ್ರದೇಶ, ಕೂಡಿಗೆ, ಹೆಬ್ಬಾಲೆ, ಸೋಮವಾರಪೇಟೆ, ಶಾಂತಳ್ಳಿ, ಗಣಗೂರು, ಐಗೂರು ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಕೋರಿದ್ದಾರೆ.

ಏ.1 ರಿಂದ ಮಡಿಕೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ

ಮಡಿಕೇರಿ ಮಾ.16(ಕರ್ನಾಟಕ ವಾರ್ತೆ):-ಮಡಿಕೇರಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏಪ್ರಿಲ್ 1 ರಿಂದ 7 ರವರೆಗೆ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ. ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ವಿಜಾಪುರ, ಧಾರವಾಡ, ಜಿಲ್ಲೆಗಳಲ್ಲಿ ಅರ್ಹ ಅಭ್ಯರ್ಥಿಗಳು ಹಾಗೂ ಇತರೆ ಎಲ್ಲಾ ಜಿಲ್ಲೆಗಳ ಎನ್ಸಿಸಿ, ಎಬಿಸಿ ಪ್ರಮಾಣ ಪತ್ರ ಹೊಂದಿದ ಕ್ರೀಡಾಪುಟುಗಳು, ಮಾಜಿ ಸೈನಿಕರ ಮಕ್ಕಳು ಮತ್ತಿತರರು ಆಯಾಯ ದಿನಗಳಂದು ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಏಪ್ರಿಲ್ 1 ರಂದು ಸಿಪಾಯಿ, ಟೆಕ್ನಿಕಲ್, ಸಿಪಾಯಿ ಕ್ಲಾರ್ಕ್, ಎಸ್.ಕೆ.ಟಿ ಸಿಪಾಯಿ ನರ್ಸಿಂಗ್ ಸಹಾಯಕ, ಏಪ್ರಿಲ್ 3 ರಿಂದ 7 ರವರೆಗೆ ಸಿಪಾಯಿ ಜೆಡಿ, ಸಿಪಾಯಿ ಕ್ರೀಡಮ್ಯಾನ್ ಮತ್ತಿತರ ಹುದ್ದೆಗಳಿಗೆ ರ್ಯಾಲಿ ನಡೆಯಲಿದೆ.

ದೈಹಿಕ ಪರೀಕ್ಷೆ:-5 ನಿಮಿಷ 40 ಸೆಕುಂಡಗಳಿಂದ 6 ನಿಮಿಷ 20 ಸೆಕುಂಡಿನ ಒಳಗೆ 1.6 ಕಿ.ಮೀ. ಓಟ, ಫುಲ್ ಆಫ್ಸ್ ಕನಿಷ್ಠ 6ನ್ನು ತೆಗೆಯಬೇಕು 10 ತೆಗೆದರೆ ಹೆಚ್ಚು ಮಾರ್ಕ್ಸ್, ಬ್ಯಾಲೆನ್ಸ್ ಓಟ-ಜಿಗ್ ಜಾಗ್ನಲ್ಲಿ ಪಾಸಾಗಬೇಕು ಹಾಗೂ 9 ಅಡಿ ಜಿಗಿತ.

ದೈಹಿಕ ಅರ್ಹತೆ:-ಸಿಪಾಯಿ ಜಿಡಿ(ಎಲ್ಲಾ ತರಹದ)-ಎತ್ತರ 166 ಭಾರ 50 ಕೆ.ಜಿ. ಎದೆ 77/82, ಸಿಪಾಯಿ ಟೆಕ್ನಿಕಲ್/ಎನ್.ಎ-ಎತ್ತರ 165 ಭಾರ 50 ಕೆ.ಜಿ. ಎದೆ 77/82, ಸಿಪಾಯಿ ಗುಮಾಸ್ತ/ಟೆಕ್ನಿಕಲ್-ಎತ್ತರ 162 ಭಾರ 50 ಕೆ.ಜಿ. ಎದೆ 77/82 ಹಾಗೂ ಸಿಪಾಯಿ ಟ್ರೇಡ್ಸ್ಮೆನ್-ಎತ್ತರ 166 ಭಾರ 48 ಕೆ.ಜಿ. ಎದೆ 76/81 ಅರ್ಹತೆ ಹೊಂದಿರಬೇಕು.

ವಿದ್ಯಾರ್ಹತೆ ಮತ್ತಿತರ ಹೆಚ್ಚಿನ ಮಾಹಿತಿಗೆ ದೂರವಾಣಿ: 0824-2458367 ಅಥವಾ 080-25599290 ಕರೆ ಮಾಡಬಹುದು. ಇ.ಮೇಲ್:[email protected] ಅಥವಾ www.zrobangalore.com ನೋಡಬಹುದಾಗಿದೆ.

ಮಾರ್ಚ್, 18 ಮತ್ತು 19ರ ಕಾರ್ಯಕ್ರಮಗಳು

ಗೃಹ ಮತ್ತು ಸಾರಿಗೆ ಸಚಿವರ ಜಿಲ್ಲಾ ಪ್ರವಾಸ

ಗೃಹ ಮತ್ತು ಸಾರಿಗೆ ಸಚಿವರಾದ ಆರ್. ಅಶೋಕ ಅವರು ಮಾರ್ಚ್ 18ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾರ್ಚ್, 17 ರಂದು ಸಂಜೆ 6 ಗಂಟೆಗೆ ಮಡಿಕೇರಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಮಾರ್ಚ್, 18ರಂದು ಬೆಳಗ್ಗೆ 10 ಗಂಟೆಗೆ ಗೃಹ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಮಡಿಕೇರಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಡಾ.ರಾಮೇಗೌಡ ಅವರು ತಿಳಿಸಿದ್ದಾರೆ.

ಮಾ.19ರಂದು ಶಾಸಕರಿಂದ ಗ್ರಾಮ ವಾಸ್ತವ್ಯ

ಬೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಭಂಡಾರ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾರ್ಚ್, 19ರಂದು ವಾಸ್ತವ್ಯ ಹೂಡಲಿದ್ದಾರೆ ಎಂದು ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಮಾ.19ರಂದು ಆರೋಗ್ಯ ತಪಾಸಣಾ ಶಿಬಿರ

ಚೆಯ್ಯಂಡಾಣೆ ನರಿಯಂದಡ ಗ್ರಾಮದ ಪಂಚಮುಖಿ ಮಹಿಳಾ ಸ್ವ-ಸಹಾಯ ಗುಂಪು ವತಿಯಿಂದ ಮಾರ್ಚ್, 19ರಂದು ಬೆಳಗ್ಗೆ 10 ಗಂಟೆಗೆ ಚೆಯ್ಯಂಡಾಣೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಲಿದೆ.

ಶಿಬಿರವನ್ನು ಚೆರಿಯಪಂಡ ಲಲಿತ ಪೊನ್ನಪ್ಪ ಅವರು ಉದ್ಘಾಟಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ವಿರಾಜಪೇಟೆಯ ಕೊಡಗು ದಂತ ಮಹಾ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಚೆಯ್ಯಂಡಾಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಾರ್ಚ್ 19 ರಂದು ಬೆಳಗ್ಗೆ 10 ಗಂಟೆಗೆ ಉಚಿತ ವೈದ್ಯಕೀಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಪಂಚಮುಖಿ ಮಹಿಳಾ ಸ್ವಸಹಾಯ ಸಂಘದಿಂದ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.

ಕೇಂದ್ರಾಡಳಿತ ಸೇವೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.1 ಲಕ್ಷ ಪ್ರೋತ್ಸಾಹಧನ

ಮಂಗಳೂರು ಮಾರ್ಚ್ 17 (ಕರ್ನಾಟಕ ವಾರ್ತೆ):ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಖಿಲ ಭಾರತ ಸೇವೆಗಳು ಹಾಗೂ ಕೇಂದ್ರಾಡಳಿತ ಸೇವೆಗಳಿಗೆ ಆಯ್ಕೆಯಾಗುವ ಕರ್ನಾಟಕ ರಾಜ್ಯದ ಆಯ್ಕೆಯಾಗಿರುವ,ಐಎಎಸ್,ಐಪಿಎಸ್,ಐಎಫ್ ಎಸ್ ಇತರೆ ಅಭ್ಯರ್ಥಿಗಳಿಗೆ 2011-12 ನೇ ಸಾಲಿನಿಂದ ಜಾರಿಗೆ ಬರುವಂತೆ ತಲಾ ರೂ.1.00 ಲಕ್ಷ ಪ್ರೋತ್ಸಾಹಧನ ನೀಡಲು ಸರ್ಕಾರ ಮಂಜೂರಾತಿ ನೀಡಿದೆಯೆಂದು ಶ್ರೀಮತಿ ಎನ್.ಗೀತಾಕುಮಾರಿ,ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ, ಸರ್ಕಾರದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ 2008-09,2009-10 ಹಾಗೂ 2010-11 ನೇ ಸಾಲಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಂದ ಒಟ್ಟು 70 ಅರ್ಜಿಗಳು ಸ್ವೀಕೃತಗೊಂಡಿದ್ದು,ಇವರಲ್ಲಿ ಯಾವ ದರ್ಜೆ ಅಭ್ಯರ್ಥಿಗಳನ್ನು ಪ್ರೋತ್ಸಾಹಧನದ ಆಯ್ಕೆಗೆ ಪರಿಗಣಿಸಬೇಕೆಂಬ ಬಗ್ಗೆ ಸರ್ಕಾರದ ಮಾರ್ಗದರ್ಶನ ಕೋರಿ ಪತ್ರ ಬರೆಯಲಾಗಿದೆಯೆಂದು ಅವರು ತಿಳಿಸಿದ್ದಾರೆ.

ಅಸೈಗೋಳಿಯಲ್ಲಿ ಸೋಲಿಗರ ನೃತ್ಯ

ಮಂಗಳೂರು ಮಾರ್ಚ್ 17 (ಕರ್ನಾಟಕ ವಾರ್ತೆ):-ವಿವಿಧ ಧರ್ಮ,ಜಾತಿ,ಭಾಷೆ ಸಂಸ್ಕೃತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ವಿವಿಧ ಸಂಸ್ಕೃತಿಗಳ ವಿನಿಮಯದಿಂದಾಗಿ ಮಾದರಿ ಜೀವನಕ್ಕೆ ನಾಂದಿಯಾಗಲಿದೆ.ಇಂತಹ ಸಂಸ್ಕೃತಿ ವಿನಿಮಯ ಕಾರ್ಯವನ್ನು ರಾಜ್ಯ ವಾರ್ತಾ ಇಲಾಖೆ ಹಮ್ಮಿ ಕೊಂಡಿರುವುದು ಪ್ರಶಂಸನೀಯವಾದುದು ಎಂದು ಮಂಗಳೂರು ತಾಲೂಕು ಕೋಣಾಜೆ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಶ್ರೀ ಶೌಕತ್ ಆಲಿ ಅವರು ತಿಳಿಸಿದ್ದಾರೆ.

ಅವರು ನಿನ್ನೆ (16-3-12)ರಂದು ಕೋಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸೈಗೋಳಿಯಲ್ಲಿ ಮಂಗಳೂರಿನ ವಾರ್ತಾ ಇಲಾಖೆ ವತಿಯಿಂದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದನ್ವಯ ಆಯೋಜಿಸಿದ್ದ ಚಾಮರಾಜ ನಗರ ಜಿಲ್ಲೆಯ ಸೋಲಿಗರ ನೃತ್ಯ ಕಾರ್ಯಕ್ರಮವನ್ನು ತಮಟೆ ಬಾರಿಸಿ ಚಾಲನೆ ಮಾಡಿದರು. ಸಂಪೂರ್ಣ ಕಾಡಿನಲ್ಲಿಯೇ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಸೋಲಿಗರ ಸಂಸ್ಕೃತಿ ಆಚಾರವಿಚಾರಗಳು ಇತರೆ ನಾಗರೀಕ ಸಮಾಜಕ್ಕೆ ಮಾದರಿಯಾಗಿದೆಯೆಂದರು. ಸಮಾರಂಭದಲ್ಲಿ ಕೋಣಾಜೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸಾವಿತ್ರಿ,ಕಾರ್ಯದರ್ಶಿ ಶ್ರೀ ಅಬೂಬಕರ್ ಹಾಗೂ ಪಂಚಾಯತ್ನ ಕೆಲವು ಸದಸ್ಯರು ಮುಂತಾದವರು ಹಾಜರಿದ್ದರು.ಕಾರ್ಯಕ್ರಮದ ಕುರಿತು ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಶ್ರೀ ಬಿ.ಆರ್. ಚಂದ್ರಶೇಖರ ಆಜಾದ್ ಪರಿಚಯ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 1932 ಮತದಾರರು

ಮಂಗಳೂರು ಮಾರ್ಚ್ 17 (ಕರ್ನಾಟಕ ವಾರ್ತೆ):ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ/ಜಿಲ್ಲಾ ಘಟಕಗಳ ಅಧ್ಯಕ್ಷರ/ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಯು ಎಪ್ರಿಲ್ 29 ರಂದು ನಡೆಸುವ ಬಗ್ಗೆ ಚುನಾವಣಾ ವೇಳಾ ಪಟ್ಟಿ ಈಗಾಗಲೇ ಪ್ರಕಟವಾಗಿದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 1932 ಮತದಾರರು ನೊಂದಾಯಿಸಿದ್ದಾರೆಯೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ಹಾಗೂ ಮಂಗಳೂರು ತಹಶೀಲ್ದಾರರಾದ ಶ್ರೀ ರವಿಚಂದ್ರ ನಾಯಕ್ ಅವರು ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದರು.

ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆದರೆ ಯಾರಿಂದಲೂ ಆಕ್ಷೇಪಣೆಗಳು ಬಂದಿಲ್ಲ ಎಂದ ಅವರು ಚುನಾವಣೆಗೆ ಉಮೇದುವಾರಿಕೆಗಳನ್ನು ಸಲ್ಲಿಸಲು 21-3-12 ರಿಂದ 28-3-12 ರ ವರೆಗೆ ಪ್ರತೀದಿನ ಬೆಳಿಗ್ಗೆ 11 ರಿಂದ ಸಂಜೆ 5 ರ ವರೆಗೆ ಅವಕಾಶ ಕಲ್ಪಿಸಲಾಗಿದೆಯೆಂದು ಅವರು ತಿಳಿಸಿದರು.

ನಾಮಪತ್ರಗಳ ಪರಿಶೀಲನೆಯನ್ನು 31-3-12 ರಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕಚೇರಿ ಮಂಗಳೂರಿನಲ್ಲಿ ಅಭ್ಯರ್ಥಿ ಅಥವಾ ಅವರು ಸೂಚಿಸುವ ಸೂಚಕರ ಸಮಕ್ಷಮ ನಡೆಸಲಾಗುವುದು.. 5-4-12 ರಂದು ಅಪರಾಹ್ನ 3 ಗಂಟೆಯೊಳಗೆ ನಾಮಪತ್ರಗಳನ್ನು ಹಿಂಪಡೆಯಬಹುದಾಗಿದೆ.

ಚುನಾವಣೆ ಆವಶ್ಯವಿದ್ದಲ್ಲಿ ಎಪ್ರಿಲ್ 29 ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಎಲ್ಲಾ ತಾಲೂಕು ಕಚೇರಿ ಆವರಣದ ಮತಗಟ್ಟೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.ಅಂದೇ ಚುನಾವಣಾ ಮತಗಳ ಎಣಿಕೆ ಕಾರ್ಯ ನಡೆಯಲಿದೆಯೆಂದು ಅವರು ತಿಳಿಸಿರುತ್ತಾರೆ.

ಚುನಾವಣೆಗೆ ಹಿಂದಿನಂತೆ ಈ ಬಾರಿಯೂ ಮೂಲ್ಕಿಯಲ್ಲಿ ಹೆಚ್ಚುವರಿ ಮತದಾನ ಕೇಂದ್ರ ಸ್ಥಾಪಿಸಲು ಅನುಮತಿಗಾಗಿ ಪತ್ರ ಬರೆಯಲಾಗಿದ್ದು ,ಅನುಮತಿ ದೊರೆತಲ್ಲಿ ಹೆಚ್ಚುವರಿ ಮತದಾನ ಕೇಂದ್ರವನ್ನು ತೆರೆಯಲಾಗುವುದೆಂದರು.

ಯಾದವಾಡದಲ್ಲಿ ಆಕಾಶಬುಟ್ಟಿ ನಾಟಕ ಪ್ರದರ್ಶನ

ಧಾರವಾಡ (ಕರ್ನಾಟಕ ವಾರ್ತೆ)ಮಾ.17: ಗ್ರಾಮೀಣ ಜನರು ಸರ್ಕಾರಿ ಯೋಜನೆಗಳ ಸರಿಯಾದ ಪ್ರಯೋಜನ ಪಡೆಯಲು ಅದರ ಕುರಿತು ಮಾಹಿತಿ ಅಗತ್ಯ ಎಂದು ಯಾದವಾಡ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಮಡಿವಾಳಪ್ಪ ದಿಂಡಲಕೊಪ್ಪ ತಿಳಿಸಿದರು.

ವಾರ್ತಾ ಇಲಾಖೆ ಬುಡಕಟ್ಟು ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮದಡಿ ಯಾದವಾಡ ಗ್ರಾಮದಲ್ಲಿ ಬಳ್ಳಾರಿ ಜಿಲ್ಲೆಯ ಮರಿಯಮ್ಮನ ಹಳ್ಳಿಯ ಮಹಿಳಾ ಕಲಾವಿದರ ತಂಡದಿಂದ ಆಯೋಜಿಸಿದ ಸಾಕ್ಷರತೆ ಮತ್ತು ಮಹಿಳಾ ಸಬಲೀಕರಣ ಕುರಿತ ಆಕಾಶಬುಟ್ಟಿ ನಾಟಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗ್ರಾಮಸ್ಥರು ನಾಟಕವನ್ನು ವೀಕ್ಷಣೆ ಮಾಡಿ ಯೋಜನೆಗಳನ್ನು ತಿಳಿದುಕೊಂಡು ಅವುಗಳ ಪ್ರಯೋಜನ ಪಡೆಯಲು ಹಾಗೂ ಅದರಲ್ಲಿನ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಲು ಶ್ರೀ ದಿಂಡಿಲಕೊಪ್ಪ ನುಡಿದರು.

ಸಾಕ್ಷರ ದೀಪ ಸಮಿತಿಯ ಅಧಿಕಾರಿ ಶ್ರೀ ಎಸ್.ಎಂ. ಹುಡೇದಮನಿ ಅವರು ಮಾತನಾಡಿ ಶಿಕ್ಷಣದಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ, ಪ್ರಜಾಪ್ರಭುತ್ವದ ಯಶಸ್ವಿಗೆ ಶಿಕ್ಷಣವು ಮೂಲ ಮಂತ್ರವಾಗಿದೆ ಎಂದರು. ಗ್ರಾಮಾಂತರ ಮಹಿಳೆಯರು ಶಿಕ್ಷಣ ಪಡೆಯಬೇಕು. ಹಾಗೂ ಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಲು ಕೋರಿದರು. ನಾಟಕ ತಂಡದ ಮುಖ್ಯಸ್ಥೆ ಶ್ರೀಮತಿ ನಾಗರತ್ನಮ್ಮ ಮಾತನಾಡಿ ನಾಟಕದ ಅಂಶಗಳನ್ನು ತಿಳಿಸಿದರು.

ಗ್ರಾಮಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನಿವೇದಿತ ಕಣಜಿನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ನಾಟಕಗಳ ಮೂಲಕ ನಾಡಿನ ಸಂಪ್ರದಾಯ ಸಂಸ್ಕೃತಿ ಹಾಗೂ ನೈತಿಕ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕೆಂದರು.

ಆರಂಭದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಪಿ.ಎಸ್. ಹಿರೇಮಠ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಲ್ಲಿಕಾರ್ಜುನ್ ವಂದಿಸಿದರು.

ನಂತರ ಮರಿಯಮ್ಮನಹಳ್ಳಿಯ ಮಹಿಳಾ ವೃತ್ತಿ ರಂಗ ಕಲಾವಿದರ ತಂಡದಿಂದ ಆಕಾಶಬುಟ್ಟಿ ನಾಟಕ ಪ್ರದರ್ಶನಗೊಂಡಿತು. ನಾಳೆ ದಿನಾಂಕ: 18 ರಂದು ತಬಕದಹೊನ್ನಳ್ಳಿ, 19 ರಂದು ಹಿರೇಹೊನ್ನಳ್ಳಿ, 20 ರಂದು ಹರ್ಲಾಪೂರ ಹಾಗೂ 21 ರಂದು ಹುಬ್ಬಳ್ಳಿಯ ಗ್ಲಾಸ್ಹೌಸ್ನಲ್ಲಿ ಪ್ರದರ್ಶನಗೊಳ್ಳಲಿದೆ. (ಛಾಯಾಚಿತ್ರವನ್ನು ಇದರೊಂದಿಗೆ ಈ-ಮೇಲ್ ಮಾಡಲಾಗಿದೆ)

ಸಂಗ್ಯಾ-ಬಾಳ್ಯಾ ನಾಟಕ ಮಹಿಳೆಯರನ್ನು ಗೌರವದಿಂದ ಕಾಣುವಂತೆ ಪ್ರೇರೆಪಿಸುತ್ತದೆ ; ಎಂ.ಎಸ್.ಬಸಗೊಂಡವರ

ವಿಜಾಪುರ,ಮಾ.17- ಸಂಗ್ಯಾ ಬಾಳ್ಯಾ ನಾಟಕ ಪರ ಮಹಿಳೆಯರನ್ನು ಪೂಜನೀಯ ಭಾವದಿಂದ ಕಾಣುವಂತೆ ಪ್ರೇರೆಪಿಸುವ ಮಹಾಕಾವ್ಯವಾಗಿದೆ ಎಂದು ಕನಮಡಿ ತಾಲೂಕಾ ಪಂಚಾಯತ್ ಸದಸ್ಯ ವಕೀಲರಾದ ಎಂ.ಎಸ್.ಬಸಗೊಂಡವರ ಹೇಳಿದರು.

ಬುಡಕಟ್ಟು ಕಲಾವಿದರ ಸಾಂಸ್ಕ್ರತಿಕ ಕಾರ್ಯಕ್ರಮದಡಿ ವಾರ್ತಾ ಇಲಾಖೆ ಕನಮಡಿ ಗ್ರಾಮದಲ್ಲಿ ಆಯೋಜಿಸಿದ ಸಂಗ್ಯಾ-ಬಾಳ್ಯಾ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ಪ್ರಶಸ್ತಿ ವ್ಯಾಮೋಹದಿಂದ ಉಂಟಾಗುವ ಸಾಮಾಜಿಕ ಅಸಮತೆ, ದುರಂತಗಳನ್ನು ತೆರೆದಿಡುವ ಮೂಲಕ ಪರ ಮಹಿಳೆಯರನ್ನು ತಾಯಿ ಸಹೋದರಿಯಂತೆ ಕಾಣಬೇಕು ಎಂಬ ನೈತಿಕ ಸಂದೇಶವನ್ನು ಸಾರುವ ಜಾನಪದ ನಾಟಕ ಸಂಗ್ಯಾ-ಬಾಳ್ಯಾ ಉತ್ತರ ಕರ್ನಾಟಕ ಭಾಗದ ಜನತೆಗೆ ಆರಣೀಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಬಿ.ಶೀಳಿನ ಮಾತನಾಡಿ, ಟಿ.ವಿ. -ಸಿನಿಮಾಗಳಿಂದಾಗಿ ಜಾನಪದ ಕಲೆ, ನಾಟಕ ಸಂಸ್ಕ್ರತಿ ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಸಂಗ್ಯಾ-ಬಾಳ್ಯಾ ನಾಟಕ ಪ್ರದರ್ಶನದ ಮೂಲಕ ಜಾನಪದ ಕಲಾ ಪ್ರಕಾರ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ ಎಂದರು.

ಕಾರ್ಯಕ್ರಮವನ್ನು ಹೊನವಾಡ ಜಿಲ್ಲಾ ಪಂಚಾಯತ್ ಸದಸ್ಯ ರತ್ನಮ್ಮ ಚಿನಗುಂಡಿ ಉದ್ಘಾಟಿಸಿದರು. ವಾರ್ತಾಧಿಕಾರಿ ಡಾ: ಬಿ.ಆರ್.ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನಮಡಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ, ಎಂ.ಸಿ.ತಳವಾರ ಸ್ವಾಗತಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಅಶಾಬಿ ತಿಕೋಟಾ, ಗ್ರಾ.ಪಂ. ಸದಸ್ಯರಾದ ವಿನೋಬಾ ಬಿರಾದಾರ, ಸಾಬು ಯಳವಾರ, ಭೀಮು ಬೀಲೂರ, ಶಿವು ಭಜಂತ್ರಿ, ಉಪಸ್ಥಿತರಿದ್ದರು. ಜಿ.ಎಸ್.ಬಿರಾದಾರ ಕೊನೆಯಲ್ಲಿ ವಂದಿಸಿದರು.

ಮಾರ್ಚ 18ರಂದು ಜಿಲ್ಲೆಯ ನವಸಾಕ್ಷರರಿಗೆ ಪರೀಕ್ಷೆ

ವಿಜಾಪುರ,ಮಾ.17- ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ, ನವದೆಹಲಿ ಮತ್ತು ರಾಷ್ಟ್ರೀಯ ಮುಕ್ತ ಶಾಲೆ ಸಂಸ್ಥೆಗಳ ಸಹಯೋಗದಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮದ ಕಲಿಕಾರ್ಥಿಗಳ ಕಲಿಕಾ ಸಾಮರ್ಥ್ಯ ಮೌಲ್ಯಮಾಪನ ಪರೀಕ್ಷೆಯು ಮಾರ್ಚ 18ರಂದು ಜಿಲ್ಲೆಯಾದ್ಯಂತ ಜರುಗಲಿದೆ.

ಕಲಿಕಾರ್ಥಿಗಳು ಮೌಲ್ಯ ಮಾಪನ ಪರೀಕ್ಷೆ ಬರೆದು ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆಯುವುದಾಗಿದೆ. ಸಾಕ್ಷರ್ ಭಾರತ್ ಕಾರ್ಯಕ್ರಮದಡಿ 15 ವರ್ಷಕ್ಕೆ ಮೇಲ್ಪಟ್ಟ ವಯೋಮಾನದ ನವಸಾಕ್ಷರರನ್ನು ಈ ಮೌಲ್ಯ ಮಾಪನ ಪರೀಕ್ಷೆಗೆ ಒಳಪಡಿಸುವುದಾಗಿದೆ. ಸುಮಾರು 43,780 ಜನ ನವಸಾಕ್ಷರರನ್ನು ಈ ಮೌಲ್ಯಮಾಪನ ಪರೀಕ್ಷೆಗಾಗಿ ನೋಂದಣಿ ಮಾಡುವ ಗುರಿ ವಿಜಾಪುರ ಜಿಲ್ಲೆಗೆ ಇದ್ದು, ಪ್ರತಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಳದಲ್ಲಿ ಒಂದು ಕೇಂದ್ರ ಹಾಗೂ ಉಪ ಗ್ರಾಮಗಳಲ್ಲಿ ಇನ್ನೊಂದು ಕೇಂದ್ರವನ್ನು ಗುರುತಿಸಲಾಗಿದೆ.

ವಿಜಾಪುರ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 199 ಗ್ರಾಮ ಪಂಚಾಯತ್ಗಳಲ್ಲಿ ಒಟ್ಟು 398 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. 398 ಮುಖ್ಯ ಅಧೀಕ್ಷಕರು, 199 ಜನ ವೀಕ್ಷಕರು, 796 ಜನ ಕೊಠಡಿ ಮೇಲ್ವಿಚಾರಕರು, 398ಜನ ಪ್ರೇರಕರು ಈ ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಪರೀಕ್ಷೆ ದಿನದವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ 03 ಬ್ಯಾಚ್ಗಳಲ್ಲಿ ಪರೀಕ್ಷೆ ನಡೆಯಲಿದೆ.

ದಿನಾಂಕ : 20-3-2012 ರಿಂದ ಎರಡು ದಿನಗಳವರೆಗೆ ಈ ಪರೀಕ್ಷೆ ಮೌಲ್ಯಮಾಪನ ಕಾರ್ಯವು ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ವಾತಾವರಣ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಂಗೂರ ಸಾರುವುದು, ಸುದ್ದಿ ಪತ್ರಿಕೆ, ಭಿತ್ತಿ ಪತ್ರ ಹಾಗೂ ಮಡಿಕೆ ಪತ್ರಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿತರಿಸಲಾಗಿದೆ.

ಜಿಲ್ಲಗೆ ನಿಗದಿಪಡಿಸಿದ ಗುರಿ ಸಾಧನೆಗೆ ಸಾಕ್ಷರ ಭಾರತ್ ಕಾರ್ಯಕ್ರಮದ ನವಸಾಕ್ಷರರನ್ನು ನೋಂದಣಿ ಮಾಡಿಸಲು ಹಾಗೂ ನೋಂದಣಿ ಮಾಡಿಸಿದ ಎಲ್ಲ ನವಸಾಕ್ಷರರು ಮಾರ್ಚ 18ರಂದು ನಡೆಯಲಿರುವ ಎನ್. ಆಯ್.ಓ.ಎಸ್. ಮೂಲ ಸಾಕ್ಷರತಾ ಪರೀಕ್ಷೆಗೆ ನವಸಾಕ್ಷರರನ್ನು ಕರೆತರುವಂತೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು, ಸಮಾಜ ಸೇವಾ ಸಂಘಗಳು, ಯುವಕ-ಯುವತಿ ಮಂಡಳಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಹಿಳಾ ಸಾಮಖ್ಯಾದವರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಹಾಗೂ ಜಿಲ್ಲಾ, ತಾಲೂಕ, ಗ್ರಾಮ ಪಂಚಾಯತಿ ಲೋಕ ಶಿಕ್ಷಣ ಸಮಿತಿಗಳು ಸಕ್ರೀಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ 19ರಂದು ಪಾರಂಪರಿಕ ಸಂರಕ್ಷಣಾ ಸಮಿತಿ ಸಭೆ

ವಿಜಾಪುರ,ಮಾ.17- ವಿಜಾಪುರ ಪಾರಂಪರಿಕ ಪ್ರದೇಶ ಅಭಿವೃದ್ದಿ ಮತ್ತು ಸಂರಕ್ಷಣಾ ಸಮಿತಿಯ ಸಭೆಯನ್ನು ದಿನಾಂಕ : 19-3-2012ರಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ 19ರಂದು ಬರ ಪರಿಶೀಲನಾ ಸಭೆ

ವಿಜಾಪುರ,ಮಾ.17- ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾರ್ಚ 19ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಬರ ಪರಿಸ್ಥಿತಿ, ಹಾಗೂ ಕುಡಿಯುವ ನೀರು ಮತ್ತು ಮೇವಿನ ಪರಿಸ್ಥಿತಿ ಕುರಿತು ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ

ಶಿವಮೊಗ್ಗ, ಮಾರ್ಚ್ 17 (ಕರ್ನಾಟಕ ವಾರ್ತೆ) ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಕು. ಸಿ. ಮಂಜುಳಾರವರು ಮಾರ್ಚ್ 17ರಂದು ರಾತ್ರಿ ಶಿವಮೊಗ್ಗಕ್ಕೆ ಆಗಮಿಸುವರು. ಮಾರ್ಚ್ 18ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಎ.ಪಿ.ಎಂ.ಸಿ. ಯಾರ್ಡ್ ಎದುರಿಗಿರುವ ಹವ್ಯಕ ಭವನದ ಶ್ರೀಧರಸ್ವಾಮಿ ಸಭಾಂಗಣದಲ್ಲಿ ಏರ್ಪಡಿಸಿರುವ ಮಹಿಳಾ ಚೇತನ ಅನಾವರಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸುವರು. ಸಂಜೆ 5.30 ಗಂಟೆಗೆ ಮಹಿಳಾ ಆರೋಗ್ಯ ವೇದಿಕೆಯು ಭದ್ರಾವತಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿರುವ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.

ತುಂಗ-ಭದ್ರಾ ನದಿಗೆ ನೀರು ಬಿಡುಗಡೆ

ಶಿವಮೊಗ್ಗ, ಮಾರ್ಚ್ 17 (ಕರ್ನಾಟಕ ವಾರ್ತೆ) ಕರ್ನಾಟಕ ನೀರಾವರಿ ನಿಗಮವು ಹಾವೇರಿ ನಗರ, ರಾಣೆಬೆನ್ನೂರು, ಬ್ಯಾಡಗಿ ಪಟ್ಟಣ, ಗದಗ-ಬೆಟಗೇರಿ ನಗರ, ಮುಂಡರಗಿ ಪಟ್ಟಣ ಹಾಗೂ ಮಾರ್ಗ ಮಧ್ಯದ 18 ಹಳ್ಳಿಗಳು ಮತ್ತು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲು ಮಾರ್ಚ್ 15ರ ಸಂಜೆ 6.00 ಗಂಟೆಯಿಂದ 250 ಕ್ಯೂಸೆಕ್ಸ್ ಹಾಗೂ ನಂತರದ ದಿನಗಳಲ್ಲಿ ಅವಶ್ಯಕತೆಗನುಗುಣವಾಗಿ ನೀರಿನ ಪ್ರಮಾಣವನ್ನು ನಿಯಂತ್ರಿಸಿ ಮೇ 31ರವರೆಗೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಯಬಿಡಲಾಗುವುದು.

ಈ ಸಂದರ್ಭದಲ್ಲಿ ದಂಡೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು, ಕೃಷಿ ಚಟುವಟಿಕೆಯನ್ನು ಮಾಡದಂತೆ ಹಾಗೂ ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನು ನಿಷೇಧಿಸಿದೆ ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಬಕಾರಿ ಸಚಿವರ ಪ್ರವಾಸ

ಶಿವಮೊಗ್ಗ, ಮಾರ್ಚ್ 17 (ಕರ್ನಾಟಕ ವಾರ್ತೆ) ಅಬಕಾರಿ ಸಚಿವ ಶ್ರೀ ಎಂ.ಪಿ. ರೇಣುಕಾಚಾರ್ಯ ಅವರು ಮಾರ್ಚ್ 18ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ಶುಭಮಂಗಳ ಸಮುದಾಯ ಭವನದಲ್ಲಿ ನಡೆಯಲಿರುವ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳುವರು. ನಂತರ ಅವರು ಮಧ್ಯಾಹ್ನ 2.00 ಗಂಟೆಗೆ ಶಿವಮೊಗ್ಗದಿಂದ ಹೊನ್ನಾಳಿಗೆ ತೆರಳುವರು.

ಡಿ.ಹೆಚ್. ಶಂಕರಮೂರ್ತಿಯವರ ಪ್ರವಾಸ

ಶಿವಮೊಗ್ಗ, ಮಾರ್ಚ್ 17 (ಕರ್ನಾಟಕ ವಾರ್ತೆ) ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳಾದ ಶ್ರೀ ಡಿ.ಹೆಚ್. ಶಂಕರಮೂರ್ತಿಯವರು ಮಾರ್ಚ್ 18ರಂದು ಮಧ್ಯಾಹ್ನ 12.00ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ರಾತ್ರಿ ಶಿವಮೊಗ್ಗದಲ್ಲಿ ವಾಸ್ತವ್ಯ ಮಾಡುವರು. ಮಾರ್ಚ್ 19ರಂದು ಬೆಳಿಗ್ಗೆ 8.00 ಗಂಟೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

18ನೇ ಮಾರ್ಚ್ 2012ರ ಮೂಲ ಸಾಕ್ಷರತಾ ಮೌಲ್ಯಮಾಪನ ಪರೀಕ್ಷೆ

ಮೈಸೂರು, ಮಾ. 17 (ಕರ್ನಾಟಕ ವಾರ್ತೆ) - ಶೇಕಡ 50ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆಯಿರುವ ರಾಜ್ಯದ 18 ಜಿಲ್ಲೆಗಳಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮವು 2010-2011ನೇ ಸಾಲಿನಲ್ಲಿ ಅನುಷ್ಠಾನಗೊಂಡಿದೆ. ಇದರಲ್ಲಿ ಮೈಸೂರು ಜಿಲ್ಲೆಯ ಏಳು ತಾಲ್ಲೂಕಿನ 235 ಗ್ರಾಮ ಪಂಚಾಯಿತಿಗಳು ಸೇರಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.

ನಮ್ಮ ನಾಡಿನ 15 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಅನಕ್ಷರಸ್ಥರನ್ನು ಹಂತ ಹಂತವಾಗಿ ಅಕ್ಷರಸ್ಥರನ್ನಾಗಿಸುವ ಗುರಿ ಹೊಂದಿ ಸಾಕ್ಷರ ಭಾರತ್ ಕಾರ್ಯಕ್ರಮವನ್ನು 2010 ರಿಂದ ಜಾರಿಗೆ ತರಲಾಗಿದೆ. ಅಕ್ಷರ ಜ್ಞಾನದ ಜೊತೆಗೆ ಸರಳ ಲೆಕ್ಕಾಚಾರ, ಸ್ವಾವಲಂಬನೆಗಾಗಿ ಕನಿಷ್ಠ ವ್ಯವಹಾರ ಕೌಶಲಗಳನ್ನು ನೀಡುವುದು, ಸಾಮಾಜಿಕ ಜಾಗೃತಿ ಮೂಡಿಸುವುದು ಸಾಕ್ಷರ ಭಾರತದ ವೈಶಿಷ್ಟವಾಗಿದೆ.

ಸಾಕ್ಷರ ಭಾರತ್ - 2012 ಕಾರ್ಯಕ್ರಮ ಹಾಗೂ ಇನ್ನಿತರೆ ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಕಲಿತಿರುವ ನವಸಾಕ್ಷರರಿಗೆ ಜಿಲ್ಲೆಯ 235 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸಾಕ್ಷರತಾ ಮೌಲ್ಯಮಾಪನ ಪರೀಕ್ಷೆಯು ದಿನಾಂಕ 18.03.2012ರಂದು ಭಾನುವಾರ ನಡೆಯಲಿದೆ.

ಅನೌಪಚಾರಿಕ ಶಿಕ್ಷಣದಲ್ಲಿ ಕಲಿತವರಿಗೆ ಮೌಲ್ಯಮಾಪನ ಮಾಡಿ ಕಲಿಕಾ ಮಟ್ಟವನ್ನು ಗುರುತಿಸಿ ಪ್ರಮಾಣ ಪತ್ರವನ್ನು ಈ ಹಿಂದೆ ನೀಡುತ್ತಿರಲಿಲ್ಲ. ಈಗ ಕಲಿಕಾ ಮಟ್ಟವನ್ನು ದೃಢೀಕರಿಸಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಹಾಗೂ ಓIಔS ವತಿಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತಿದೆ.

ಬನ್ನಿ, ಸಾಕ್ಷರ ಬಂಧುಗಳೇ, ನೀವು ಕಲಿತದ್ದನ್ನು ದೃಢೀಕರಿಸಿಕೊಳ್ಳಲು ಮೌಲ್ಯಮಾಪನ ಪರೀಕ್ಷೆಗಾಗಿ ಕಲಿಕಾ ಕೇಂದ್ರಗಳಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ದಿನಾಂಕ 18.03.2012ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಮೌಲ್ಯಮಾಪನಕ್ಕೆ ಒಳಗಾಗಿ ಎಂಬ ಕೋರಿಕೆ. ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಅಕ್ಷರಸ್ಥರು, ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಪ್ರಗತಿಪರರು, ಸಕ್ರಿಯವಾಗಿ ಭಾಗವಹಿಸಿ ಗ್ರಾಮೀಣ ಅನಕ್ಷರಸ್ಥ ಬಂಧುಗಳ ಬದುಕಲ್ಲಿ ಬೆಳಕು ನೀಡಿ ಎಂದು ಜಿಲ್ಲಾ ಲೋಕ ಶಿಕ್ಷಣ ಸಮಿತಿಯು ವಿನಂತಿಸಿದೆ.

ಆಕ್ಷೇಪಣೆ ಇದ್ದಲ್ಲಿ ತಿಳಿಸಿ

ಮೈಸೂರು, ಮಾ.. 17 (ಕರ್ನಾಟಕ ವಾರ್ತೆ) - ಮೈಸೂರು ವಿಶ್ವವಿದ್ಯಾನಿಲಯದ 92ನೇ ಘಟಿಕೋತ್ಸವವು ದಿನಾಂಕ 07.04.2012ರಂದು ನಡೆಯಲಿದ್ದು, ಘಟಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ಬಹುಮಾನಗಳನ್ನು ಪಡೆಯಲಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ವಿಶ್ವವಿದ್ಯಾನಿಲಯದ ವೆಬ್ಸೈಟ್ನಲ್ಲಿ www.uni.mysore.ac.in ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ವಿಶ್ವವಿದ್ಯಾನಿಲಯದ ಘಟಿಕೋತ್ಸವ ವಿಭಾಗದಲ್ಲಿ ಕೂಡಲೇ ಸಂಪರ್ಕಿಸಬಹುದಾಗಿರುತ್ತದೆ.

ವಿದ್ಯುತ್ ದರ ಏರಿಸುವ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹ

ಮೈಸೂರು, ಮಾ.. 17 (ಕರ್ನಾಟಕ ವಾರ್ತೆ) - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು 2012 -2013ನೇ ಸಾಲಿಗೆ ಪ್ರತಿ ಯೂನಿಟ್ಟಿಗೆ 73 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಿಸಬೇಕೆಂದು ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮುಂದೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಆಯೋಗವು ಜಿಲ್ಲಾಧಿಕಾರಿಯವರ ಕಚೇರಿ, ಮೈಸೂರು ಇಲ್ಲಿ ದಿನಾಂಕ 30.03.2012ರಂದು ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ವಿಚಾರಣೆಯನ್ನು ಏರ್ಪಡಿಸಿದೆ. ಈ ವಿಚಾರಣೆಗೆ ಸಾರ್ವಜನಿಕರು ಭಾಗವಹಿಸಬೇಕೆಂದು ಆಯೋಗದ ಕಾರ್ಯದರ್ಶಿ ಶ್ರೀ ಟಿ.ಎ. ಪಾರ್ಥಸಾರಥಿ ಅವರು ಕೋರಿದ್ದಾರೆ.

ಘನ ತ್ಯಾಜ್ಯ ವಿಲೇವಾರಿ ಜಾಗೃತಿ

ಮಂಗಳೂರು ಮಾರ್ಚ್ 17(ಕರ್ನಾಟಕ ವಾರ್ತೆ):- ರೋಶನಿ ನಿಲಯದ ಎಂಎಸ್ಡಬ್ಲ್ಯು ವಿದ್ಯಾರ್ಥಿಗಳು ಘನತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸಲು ಮಾರ್ಚ್ 18 ರಂದು ಸೂಟರ್ಪೇಟೆ ಪ್ರದೇಶದಲ್ಲಿ ಬೆಳಿಗ್ಗೆ 9 ರಿಂದ 12 ಗಂಟೆಯ ವರೆಗೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸುವರು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಸೋಫಿಯಾ ಎನ್.ಫರ್ನಾಂಡೀಸ್ ತಿಳಿಸಿದ್ದಾರೆ.

ಜಿಲ್ಲೆಯ ಗಡಿ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧ

ಶಿವಮೊಗ್ಗ, ಮಾರ್ಚ್ 17 (ಕರ್ನಾಟಕ ವಾರ್ತೆ) ಮಾರ್ಚ್ 18ರಂದು ನಡೆಯಲಿರುವ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಮುಕ್ತ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಮಾರ್ಚ್ 16ರ ಸಂಜೆ 5.00 ಗಂಟೆಯಿಂದ ಮಾರ್ಚ್ 18ರ ಸಂಜೆ 5.00 ಗಂಟೆಯವರೆಗಿನ ಅವಧಿಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಶಿವಮೊಗ್ಗ ಜಿಲ್ಲೆಯ 5.00ಕಿ.ಮೀ ವ್ಯಾಪ್ತಿಯಲ್ಲಿ ಬರುವ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಶ್ರೀ ಎಂ.ವಿ. ವೇದಮೂರ್ತಿ ಆದೇಶ ಹೊರಡಿಸಿದ್ದಾರೆ. ಈ ದಿನಾಂಕಗಳಂದು ಸದರಿ ಪ್ರದೇಶದಲ್ಲಿ ಯಾವುದೇ ಮದ್ಯ ಸಾಗಾಣಿಕೆ, ಸಂಗ್ರಹಣೆ ಮತ್ತು ಮಾರಾಟ ಮಾಡುವುದರನ್ನು ನಿಷೇಧಿಸಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಮಾ.19 ರಂದು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಉದ್ಘಾಟನೆ

ಮಂಡ್ಯ, ಮಾ.17(ಕ.ವಾ.):- ನಗರದ ಬನ್ನೂರು ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ (ಸಂ. 2170/5) ಇಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಮಂಡ್ಯ ಶಾಖೆಯ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ್ನು ಮಾರ್ಚ್ 19 ರಂದು ಬೆಳಿಗ್ಗೆ 10.00 ಗಂಟೆಗೆ ಬ್ಯಾಂಕಿನ ಮಹಾಪ್ರಬಂಧಕ ಬಿ.ಜಿ.ರಂಗನಾಥ್ ಉದ್ಘಾಟಿಸಲಿದ್ದಾರೆ.

ಫಿಲ್ಸ್ ಸೇಲ್ಸ್ ಹುದ್ದೆಗಳ ಆಯ್ಕೆಗೆ ಸಂದರ್ಶನ

ಮಂಡ್ಯ, ಮಾ.17(ಕ.ವಾ.):- ನವಭಾರತ್ ಫೆರ್ಟಿಲೈಸರ್ಸ್ ಲಿಮಿಟೆಡ್, ಹಾಸನ ಇವರು 19 ರಿಂದ 28 ವರ್ಷ ವಯೋಮಿತಿ ಯೊಳಗಿನ ಎಸ್.ಎಸ್.ಎಲ್.ಸಿ./ಪಿ.ಯು.ಸಿ./ಜೆ.ಒ.ಸಿ/ಐ.ಟಿ.ಐ/ಪದವೀಧರರು ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳನ್ನು ಫಿಲ್ಸ್ ಸೇಲ್ಸ್ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಮಾರ್ಚ್ 21 ರಂದು ಬೆಳಿಗ್ಗೆ ಬೆಳಿಗ್ಗೆ 11.00 ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಪ್ರಾದೇಶಿಕ ಸಾರಿಗೆ ಕಛೇರಿ ಎದುರು, ಮಂಡ್ಯ ಇಲ್ಲಿ ಸಂದರ್ಶನವನ್ನು ಆಯೋಜಿಸಿರುತ್ತಾರೆ. ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ಪ್ರತಿ ಹಾಗೂ ಸ್ವ ವಿವರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08232-239400 ನ್ನು ಸಂಪರ್ಕಿಸುವುದು.

ಐ.ಟಿ.ಐ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ

ಮಂಡ್ಯ, ಮಾ.17(ಕ.ವಾ.):- ಟೀಮ್ ಲೀಸ್ ಸಂಸ್ಥೆ, ಬೆಂಗಳೂರು ಇವರು 18 ವರ್ಷ ಪೂರ್ಣಗೊಂಡಿರುವ 2010-11ನೇ ಸಾಲಿನಲ್ಲಿ ಐ.ಟಿ.ಐ. ಎಲೆಕ್ಟ್ರಾನಿಕ್, ಮೆಕ್ಯಾನಿಕಲ್, ಎಲೆಕ್ಟ್ರೀಷಿಯನ್ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಾರ್ಚ್ 19 ರಂದು ಬೆಳಿಗ್ಗೆ 10.00 ಗಂಟೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಪ್ರಾದೇಶಿಕ ಸಾರಿಗೆ ಕಛೇರಿ ಎದುರು, ಮಂಡ್ಯ ಇಲ್ಲಿ ಸಂದರ್ಶನವನ್ನು ಆಯೋಜಿಸಿರುತ್ತಾರೆ. ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ಪ್ರತಿ ಹಾಗೂ ಸ್ವ ವಿವರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08232-239400 ನ್ನು ಸಂಪರ್ಕಿಸುವುದು.

“ಸಕಾಲ ”ಸ್ವಯಂ ಸೇವೆಗೆ ಅವಕಾಶ

ಮಂಗಳೂರು ಮಾರ್ಚ್ 17 (ಕರ್ನಾಟಕ ವಾರ್ತೆ):- ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಮತ್ತು ಸಹಾಯ ನೀಡಲು ತೆರೆಯಲಾಗಿರುವ ಸಹಾಯವಾಣಿ ಕೇಂದ್ರಗಳಲ್ಲಿ ಸ್ವಯಂ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಿವೃತ್ತ ಸರ್ಕಾರಿ ನೌಕರರು,ಗ್ರಾಹಕ ಸೇವಾ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಸ್ವಯಂ ಸೇವಕರು ಈ ಸಹಾಯವಾಣಿ ಕೇಂದ್ರಗಳಲ್ಲಿ ನಾಗರಿಕ ಸೇವಾ ಖಾತರಿ ಅಧಿನಿಯಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಕಾರ್ಯನಿರ್ವಹಿಸಬೇಕಿದೆ.ಆಸಕ್ತರು ಹಿರಿಯ ಸಹಾಯಕ ನಿರ್ದೇಶಕರು,ವಾರ್ತಾ ಇಲಾಖೆ ಮಂಗಳೂರು ಇಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಸ್ವಯಂ ಸೇವಕರಿಗೆ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮದ ಕುರಿತಂತೆ ಕಾರ್ಯಾಗಾರ ಏರ್ಪಡಿಸುವ ಮೂಲಕ ಕಾಯ್ದೆಯ ಬಗ್ಗೆ ತರಬೇತಿ ನೀಡಲಾಗುವುದು.ತರಬೇತಿ ದಿನಾಂಕವನ್ನು ನಂತರ ತಿಳಿಸಲಾಗುವುದು.

ಮಾರ್ಚ್ 18 ರಂದು ನವಸಾಕ್ಷರರಿಗೆ ಮೌಲ್ಯಮಾಪನ ಪರೀಕ್ಷೆ

ಚಾಮರಾಜನಗರ ಮಾರ್ಚ್ 17 (ಕರ್ನಾಟಕ ವಾರ್ತೆ):- ಸಾಕ್ಷರಭಾರತ್ ಕಾರ್ಯಕ್ರಮದಡಿ ನವಸಾಕ್ಷರರಾಗಿರುವವರಿಗೆ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಮತ್ತು ರಾಷ್ಟ್ರೀಯ ಮುಕ್ತ ಶಾಲೆ ಸಂಸ್ಥೆ ಸಹಯೋಗದಡಿ ಮಾರ್ಚ್ 18 ರಂದು ಜಿಲ್ಲಾದ್ಯಾಂತ ಮೌಲ್ಯಮಾಪನ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.

ಸಾಕ್ಷರಭಾರತ್ ಕಾರ್ಯಕ್ರಮದಲ್ಲಿ ದಾಖಲಾಗಿ ಕಲಿಕ ಕೇಂದ್ರಗಳ ಮೂಲಕ ಓದು ಬರಹ ಲೆಕ್ಕಚಾರ ಕಲಿತಿರುವ ನವಸಾಕ್ಷರರು ಪರೀಕ್ಷೆಗೆ ಹಾಜರಾಗಲಿದ್ದಾರೆ ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವಂತೆ ಜಿಲಾ ವಯಸ್ಕರ ಶಿಕ್ಷಣಾಧಿಕಾರಿ ರಾಮಲಿಂಗಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಾರಶಿಪ್ ಮ್ಯೂಸಿಯಂ ಆವರಣದಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮ

ಕಾರವಾರ-17 : ವಾರ್ತಾ ಇಲಾಖೆಯು ಬುಡಕಟ್ಟು ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೀದಿನಾಟಕ ಕಾರ್ಯಕ್ರಮವನ್ನು ಕಾರವಾರದ ವಾರ್ಶಿಪ್ ಮ್ಯೂಸಿಯಂ ಆವರಣದಲ್ಲಿ ಮಾರ್ಚ 18 ರಂದು ಸಂಜೆ 6 ಗಂಟೆಗೆ ಆಯೋಜಿಸಿದೆ.

ಬಳ್ಳಾರಿ ಕೂಡ್ಲಿಗಿಯ ವೀಣಾ ಕಲಾ ತಂಡದ ಸದಸ್ಯರು ವೈವಿಧ್ಯಮಯ ಡೊಳ್ಳು ಕುಣಿತವನ್ನು ಪ್ರದರ್ಶಿಸುವರು.ಅಮದಳ್ಳಿಯ ಶ್ರೀ ಬಂಟದೇವ ಕಲಾ ತಂಡದವರು ಬೀದಿನಾಟಕವನ್ನು ಸಹ ಪ್ರದರ್ಶಿಸುವರು. ಮಾರ್ಚ 19 ರಂದು ಸಂಜೆ 6 ಗಂಟೆಗೆ ಬಿಣಗಾದ ಒಕ್ಕಲಕೇರಿ, ಹಾಗೂ ದಿನಾಂಕ 20 ರಂದು ಹಣಕೋಣದ ಸಾತೇರಿ ದೇವಸ್ಥಾನ ಹತ್ತಿರ ಹಾಗೂ 21 ರಂದು ಸಿದ್ಧರ ಶ್ರೀ ನರಸಿಂಹ ದೇವಸ್ಥಾನ ಹತ್ತಿರ ಈ ಕಾರ್ಯಕ್ರಮಗಳು ಜರುಗಲಿವೆ.

ಸಾರ್ವಜನಿಕರು ಈ ಸಾಂಸ್ಕೃತಿಕ ಕಾರ್ಯಕ್ರಮದ ಆನಂದ ಪಡೆದುಕೊಳ್ಳುವಂತೆ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಕೋರಿದ್ದಾರೆ.

ಶೈಕ್ಷಣಿಕ ಅಭಿವೃದ್ಧಿಯತ್ತ ಕಾರವಾರ ಗಡಿಯ ಶಾಲೆಗಳು

ಕಾರವಾರ-17 : ಹಲವಾರು ದಶಕಗಳಾದ ಮರಾಠಿ- ಕೊಂಕಣಿಮಯವಾಗಿದ್ದ ಕಾರವಾರ-ಗೋವಾ ಗಡಿಯಲ್ಲಿರುವ ಸದಾಶಿವಗಡ, ಮೂಡಗೇರಿ, ಅಂಗಡಿ ಸೇರಿದಂತೆ ಅನೇಕ ಗ್ರಾಮಗಳ ಎಲ್ಲ ಮಕ್ಕಳು ಕನ್ನಡವನ್ನೇ ಅವಲಂಬಿಸಿ ಈ ಪ್ರದೇಶವನ್ನೆಲ್ಲ ಈಗ ಕನ್ನಡಮಯಗೊಳಿಸುತ್ತಿವೆ. ಮೀನುಗಾರರು ಹಾಗೂ ಕೂಲಿ ಕಾರ್ಮಿಕರ ಮಕ್ಕಳೇ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸರ್ವಶಿಕ್ಷಣ ಅಭಿಯಾನದಿಂದಾಗಿ ಎಲ್ಲ ರೀತಿಯ ಶೈಕ್ಷಣಿಕ ಹಾಗೂ ಭೌತಿಕ ಅಗತ್ಯತೆಗಳನ್ನು ಪೂರೈಸಲಾಗಿದೆ.

ಮಾಧ್ಯಮ ದಾಖಲೀಕರಣ ನಿಮಿತ್ತ ಸದಾಶಿವಗಡ, ಅರ್ಜುನಕೋಟಾ, ಮೂಡಗೇರಿ, ನಾಗಪೊಂಡ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿವೃದ್ಧಿಯ ಅಂಶಗಳು ಗಮನಕ್ಕೆ ಬಂದವು. ಅತ್ಯಂತ ಹಿಂದುಳಿದ ಕೂಲಿಕಾರ್ಮಿಕರಿರುವ ಅರ್ಜುನಕೋಟಾ ಪ್ರದೇಶದ ಶಾಲೆಯ ಮಕ್ಕಳಿಗೆ ಮುಖ್ಯೋಪಾಧ್ಯಾಯಕಿ ಕಾಮಾಕ್ಷಿ ನಾಯ್ಕ ಹಾಗೂ ಶಿಕ್ಷಕಿ ರೇಖಾ ನಾಯ್ಕ ತಮ್ಮ ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೆ. 40 ವರ್ಷಗಳ ಹಿಂದೆ ತಮಿಳುನಾಡಿನಿಂದ ವಲಸೆ ಬಂದಿರುವ ಬಡ ಕೂಲಿಕಾರ್ಮಿಕರ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಶಾಲೆಯ ವಿದ್ಯಾರ್ಥಿ ಸತೀಶ ಲೋಕೇಶ ಗೌಂಡರ ನವೋದಯ ಶಾಲೆಗೆ ಆಯ್ಕೆಗೊಂಡಿರುವುದು ಶಿಕ್ಷಕಿ ರೇಖಾ ನಾಯ್ಕ ಅವರ ಪರಿಶ್ರಮ ಎದ್ದು ಕಾಣುತ್ತದೆ.

ಇನ್ನು 106 ವರ್ಷಗಳನ್ನು ಬಾಡಿಗೆ ಕಟ್ಟಡದಲ್ಲೇ ಪೂರೈಸಿರುವ ನಾಗಪೊಂಡ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕಿಯರಿಬ್ಬರ ಪೈಪೋಟಿ ಎಲ್ಲರನ್ನು ಆಶ್ಚರ್ಯಗೊಳಿಸುತ್ತದೆ. 1 ರಿಂದ 5 ರವರೆಗೆ 41 ಮಕ್ಕಳು ಶಾಲೆಯಲ್ಲಿದ್ದು ಶೈಕ್ಷಣಿಕವಾಗಿ ಮಕ್ಕಳು ಉತ್ತಮವಾಗಿದ್ದಾರೆ. ಈ ಶಾಲೆಯ ಸುತ್ತಮುತ್ತ ಕೂಗಳತೆಯಲ್ಲೇ ಅನೇಕ ದಾನಿಗಳು, ಜನಪ್ರತಿನಿಧಿಗಳು ಸಮಾಜ ಸೇವಕರು ವಾಸವಾಗಿದ್ದರೂ ಸಹ ಈ ಶಾಲೆಗೆ ಭೂಮಿ ದಾನ ಮಾಡಲು ಅಥವಾ ಜಾಗೆಯನ್ನು ಗುರುತಿಸುಲ್ಲಿ ಯಾರೂ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಕೋಟ್ಯಾಂತರ ರೂ.ಗಳನ್ನು ದಾನ ಮಾಡುವ ಹವ್ಯಾಸವಿರುವ ಕೆಲ ಉದ್ಯಮಿಗಳು ಇದೇ ಪ್ರದೇಶದಲ್ಲಿದ್ದರೂ ಈ ನಾಗಪೊಂಡ ಶಾಲೆ ಮಾತ್ರ ಅವರ ಕಣ್ಣಿಗೆ ಬೀಳದೆ ಇರುವುದು ವಿಪರ್ಯಾಸ. ಕಣಸಗಿರಿಯ ನಿವಾಸಿ ಭಾರತಿ ಗೋಸಾವಿ ಎನ್ನುವವರು ಈ ಶಾಲೆಗೆ 1.6ಗುಂಟೆ ಜಾಗೆಯನ್ನು ದಾನವಾಗಿ ನೀಡುವ ಬಗ್ಗೆ ಸುದ್ದಿಯಿದೆಯಾದರೂ ಸಹ ಸ್ಥಳೀಯ ಎಸ್.ಡಿ.ಎಂ.ಸಿ ಸದಸ್ಯರು ಈ ಬಗ್ಗೆ ಆಸಕ್ತಿ ತೋರಬೇಕಿದೆ.

ಪ್ರತಿಶತ ಕೊಂಕಣಿ ಮರಾಠಿಮಯವಾಗಿರುವ ಮುಡಗೇರಿ ಪ್ರದೇಶದಲ್ಲಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಮಾತ್ರ ಎಲ್ಲ ರೀತಿಯ ಸೌಲಭ್ಯಗಳಿಂದ ಗರಿಗೆದರಿದೆ. ಇಲ್ಲಿಯ ಶಿಕ್ಷಕರು ಎಸ್.ಡಿ.ಎಂ.ಸಿ ಸದಸ್ಯರು ಸಮುದಾಯ ಹಾಗೂ ತಾಲೂಕಾ ಪಂಚಾಯತ ಸದಸ್ಯೆ ಆರತಿ ಬಾನಾವಳಿಕರ ಶಾಲೆಯ ಬೆಳವಣಿಗೆಗೆ ವಿಶೇಷ ಗಮನ ಹರಿಸುತ್ತಿದ್ದಾರೆ. ಶೈಕ್ಷಣಿಕ ಗುಣಮಟ್ಟ ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯ ಉತ್ತಮವಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಸಮುದಾಯ ಕಾರ್ಯಕ್ರಮಗಳಲ್ಲಿ ಎಲ್ಲರ ಸಹಭಾಗಿತ್ವ ಎದ್ದು ಕಾಣುತ್ತದೆ.

ಮಾಧ್ಯಮ ಭೇಟಿ ಫಲಶ್ರುತಿ ಶಿಕ್ಷಣ ಪ್ರೇಮಿಗಳ ಗಮನಸೆಳೆದ ಕೆರವಡಿಯ ಇಂಗ್ಲೀಷ ಕೇಂದ್ರ

ಕಾರವಾರ-17 : ಇಂಗ್ಲೀಷ ಕಲಿಕೆಗಾಗಿ ರಂಗುರಂಗಿನ ಚಿತ್ರಕಲೆ, ಪೇಂಟಿಂಗ್, ಗೋಡೆಬರಹ, ವ್ಯಾಕರಣ ಭಿತ್ತಿ ಚಿತ್ರ, ಮುಂತಾದವುಗಳನ್ನು ಬರೆದು ಇಂಗ್ಲೀಷ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಿ ಜಿಲ್ಲೆಯ ಗಮನ ಸೆಳೆದಿರುವ ಕೆರವಡಿ ಶಾಲೆ ಅನೇಕ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭೇಟಿ ನೀಡುತ್ತಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ ತಿಳಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮ ಭೇಟಿ ಸಂದರ್ಭದಲ್ಲಿ ಕೆರವಡಿ ಗ್ರಾಮೀಣ ಶಾಲೆಯ ಈ ಇಂಗ್ಲೀಷ ಸಂಪನ್ಮೂಲ ಕೇಂದ್ರದ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ನಂತರ ಅನೇಕರು ಈ ಕೇಂದ್ರಕ್ಕೆ ಭೇಟಿ ನೀಡಿ ತಮ್ಮಲ್ಲಿಯೂ ಸಹ ಇಂಥ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಯೋಜಿಸುತ್ತಿದ್ದಾರೆ. ಇತ್ತೀಚೆಗೆ ಕುಮಟಾದ ಕೊಂಕಣ ಶಿಕ್ಷಣ ಸಂಸ್ಥೆಯು ಕೆರವಡಿ ಶಾಲೆಯ ಇಂಗ್ಲೀಷ ಕೇಂದ್ರದ ಬಗ್ಗೆ ಅಧ್ಯಯನ ಮಾಡಲು ತನ್ನ ಇಬ್ಬರು ಶಿಕ್ಷಕರನ್ನು ನಿಯೋಜಿಸಿ ಅಲ್ಲಿರುವ ಗುಣಮಟ್ಟ ಹಾಗೂ ಉಪಯೋಗ ಕುರಿತಂತೆ ವರದಿ ಮಾಡಿದ್ದರಂತೆ. ಅಲ್ಲದೇ ಗೋವಾ ಶಿಕ್ಷಣ ಇಲಾಖೆ ನಿರ್ದೇಶಕರಾಗಿರುವ ಅಜಿತ ಪವಾರ ಅವರು ಸಹ ಗ್ರಾಮೀಣ ಪ್ರದೇಶದ ಕನ್ನಡ ಶಾಲೆಯಲ್ಲಿರುವ ಇಂಥ ಇಂಗ್ಲೀಷ್ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಿಕ್ಷಕರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೋವಾ ಶಿಕ್ಷಣ ಇಲಾಖೆಗೆ ಅಧ್ಯಯನಗೈಯಲು ಹೋದಾಗ ಈ ವಿಷಯವನ್ನು ಅಲ್ಲಿಯ ನಿರ್ದೇಶಕ ಪವಾರ ಬಹಿರಂಗಪಡಿಸಿದ್ದಾರೆ.

ಗ್ರಾಮೀಣ ಪ್ರದೇಶದ ಆರ್ಥಿಕ ಪರಿಸ್ಥಿತಿ ಬಲಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ

ಬೆಳಗಾವಿ:ಮಾರ್ಚ್: 17: (ಕರ್ನಾಟಕ ವಾರ್ತೆ)- ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜನರಿಗೆ ಉದ್ಯೋಗವನ್ನು ಕಲ್ಪಿಸುವುದರ ಜೊತೆಗೆ ಗ್ರಾಮೀಣ ಪ್ರದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ರಾಜ್ಯ ಶ್ರೇಷ್ಠ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ. ಡಿ.ವಿ. ಶೈಲೇಂದ್ರ ಕುಮಾರ ಅವರು ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾನೂನು ಸೇವೆಗಳ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಬೆಳಗಾವಿ ವಿಭಾಗ ಮಟ್ಟದ ಲೋಕ ಅದಾಲತ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರಿಗಳು ಉದ್ಯೋಗ ಖಾತರಿ ಯೋಜನೆಯಲ್ಲಿ ಜನರಿಗೆ ಉದ್ಯೋಗ ಒದಗಿಸುವುದು ಮಾತ್ರ ತಮ್ಮ ಕರ್ತವ್ಯವೆಂದು ಭಾವಿಸದೇ ಗುಣಮಟ್ಟದ ಕಾಮಗಾರಿಗಳ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಪ್ರತಿಯೊಂದು ಜಿಲ್ಲೆಗೆ ನೂರಾರು ಕೋಟಿ ರೂ.ಗಳ ಹಣ ಬರುತ್ತಿದೆ. ಸಾಧ್ಯವಿದ್ದಲ್ಲಿ ನಾಲಾ ಬಂಡಿಂಗ್, ಅರಣ್ಯೀಕರಣ, ಮಣ್ಣು ಹಾಗೂ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಪ್ರಾಧಾನ್ಯತೆಕೊಡಬೇಕು.

ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ನಾವಿಂದು ನೀರು ಹಾಗೂ ಮಣ್ಣಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಗಳ ಹೂಳೆತ್ತುವುದಕ್ಕೆ ಆದ್ಯತೆ ನೀಡಬೇಕು. ನದಿಗಳು ಇಂದು ಮಾಲಿನ್ಯ ಹೊಂದುತ್ತಿದ್ದು, ಇದನ್ನು ತಡೆಯಲು ಸಹ ಅಧಿಕಾರಿಗಳು ಗಮನ ಕೊಡಬೇಕು.

ನಗರ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಕಾರ್ಯಕ್ರಮ ತೃಪ್ತಿದಾಯಕವಾಗಿ ನಡೆದಿಲ್ಲ. ವೈದ್ಯಕೀಯ ತ್ಯಾಜ್ಯ ವಸ್ತುಗಳ ವಿಲೇವಾರಿಯತ್ತ ಗಮನಕೊಡಬೇಕು. ತ್ಯಾಜ್ಯ ವಸ್ತುಗಳ ವಿಲೇವಾರಿಯ ಜೊತೆಗೆ ಕಸದಿಂದ ರಸಹುಟ್ಟಿಸುವ ಚಿಂತನೆಯನ್ನು ನಾವಿಂದು ಮಾಡಬೇಕಾಗಿದೆ. ಅಧಿಕಾರಿಗಳಲ್ಲಿ ಬದ್ಧತೆಯಿದ್ದರೆ ಮಾತ್ರ ಇದು ಸಾಧ್ಯವಾಗುವುದೆಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಇಂದು ನೂರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಅಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇರುವುದಿಲ್ಲ. ಶಾಲೆಗಳಲ್ಲಿಯೂ ಸಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯಗಳಿದ್ದರೂ ಸಹ ನೀರಿನ ಕೊರತೆಯಿಂದ ಅವುಗಳ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿದೆ. ಯಾವುದೇ ಯೋಜನೆಗಳನ್ನು ರೂಪಿಸುವಾಗ ಅಧಿಕಾರಿಗಳು ಮುಂದಾಲೋಚನೆ ಮಾಡಿ ಸಮಗ್ರ ಸೌಲಭ್ಯವಿರುವ ಯೋಜನೆ ರೂಪಿಸಬೇಕೆಂದು ಶ್ರೀ.ಶೈಲೇಂದ್ರ ಕುಮಾರ ಅವರು ಹೇಳಿದರು.

ದೊಡ್ಡ ದೊಡ್ಡ ಕೈಗಾರಿಕಾ ವಸಾಹತುಗಳಲ್ಲಿ ಪರಿಸರ ನಾಶವನ್ನು ತಡೆಯಲು ಅನುಕೂಲವಾಗುವಂತೆ ಆಯಾ ಕಾರ್ಖಾನೆಗಳ ಆಡಳಿತ ಮಂಡಳಿಗಳು ಅರಣ್ಯೀಕರಣ ಕೈಗೊಳ್ಳಬೇಕೆಂದು ಕಾನೂನಿನಲ್ಲಿದೆ. ಆದರೆ ಇದು ಕಟ್ಟುನಿಟ್ಟಾಗಿ ಜಾರಿಗೊಳ್ಳುತ್ತಿಲ್ಲ. ಕೆಲವು ಕಾರ್ಖಾನೆಗಳು ತಮಗೆ ಬೇಕಾದ ಸಸಿಗಳನ್ನು ನೆಡುತ್ತವೆ. ಆದರೆ ಜನರಿಗೆ ಹಾಗೂ ಪರಿಸರಕ್ಕೆ ಉಪಯೋಗವಾಗುವ ಸಸಿಗಳನ್ನು ನೆಡವಂತಾಗಬೇಕು. ಈ ವಿಷಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಲೋಕ ಅದಾಲತ್ನ ಸದಸ್ಯರಾದ ಶ್ರೀ. ಎ.ಎನ್. ಯಲ್ಲಪ್ಪರೆಡ್ಡಿ ಅವರು ಹೇಳಿದರು.

ಬಾಗಲಕೋಟ ಹಾಗೂ ವಿಜಾಪೂರ ಜಿಲ್ಲೆಗಳಲ್ಲಿ ಅರಣ್ಯೀಕರಣಗೊಳಿಸಲು ಸಾಕಷ್ಟು ಅವಕಾಶವಿದೆ. ಆದರೆ ಈ ದಿಸೆಯಲ್ಲಿ ಯಾವುದೇ ಕ್ರಮಗಳಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀ. ಯಲ್ಲಪ್ಪರೆಡ್ಡಿ ಅವರು ಮುಂದಿನ ಐದು ವರ್ಷಗಳ ಅವಧಿಗಾಗಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸಬೇಕೆಂದು ಸೂಚಿಸಿದ ಅವರು ಇದರಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆಯ ಸುಧಾರಣೆಗೆ ಸಹಾಯವಾಗುವುದೆಂದು ಹೇಳಿದರು.

ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಗ್ರಾಮೀಣ ಪ್ರದೇಶದಲ್ಲಿರುವ ಜಾನುವಾರುಗಳಿಗೆ ಸೂಕ್ತ ಕುಡಿಯುವ ನೀರು ಹಾಗೂ ಮೇವಿನ ವ್ಯವಸ್ಥೆಯನ್ನು ಮಾಡಬೇಕೆಂದು ಹೇಳಿದ ಅವರು ಒಟ್ಟಾರೆ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಪರಿಸರ ಸಂರಕ್ಷಣೆಗೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಾಪೂರ ಮತ್ತು ಕಾರವಾರ ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಘನತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ಬಳಕೆ ನಿಷೇಧ, ಅರಣ್ಯೀಕರಣ ಕಾರ್ಯಕ್ರಮ, ವೈದ್ಯಕೀಯ ತ್ಯಾಜ್ಯ ವಸ್ತುಗಳ ನಿರ್ವಹಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ಲೋಕ ಅದಾಲತ್ನಲ್ಲಿ ಪರಾಮರ್ಶೆ ನಡೆಸಲಾಯಿತು.

ಪ್ರಾರಂಭದಲ್ಲಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಶ್ರೀ. ಗಂಗಾರಾಮ ಬಡೇರಿಯಾ ಅವರು ಸ್ವಾಗತಿಸಿ ಬೆಳಗಾವಿ ವಿಭಾಗದಲ್ಲಿ ಬರುವ ಏಳು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಕಾರ್ಯಕ್ರಮಗಳ ವಿವರ ನೀಡಿದರು. ವಿಭಾಗದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ತಮ್ಮ ಜಿಲ್ಲೆಯಲ್ಲಿ ಕೈಗೊಳ್ಳಲಾದ ವಿವರಗಳನ್ನು ನೀಡಿದರು.

ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ: ಸಹಾಯವಾಣಿ ಕೇಂದ್ರ ಆರಂಭ

ಬೆಳಗಾವಿ:ಮಾರ್ಚ್: 17: (ಕರ್ನಾಟಕ ವಾರ್ತೆ)- ಮಾರ್ಚ್ 2012 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಇದೇ ಮಾರ್ಚ್ 15 ರಿಂದ 31 ರವರೆಗೆ ನಡೆಯಲಿದ್ದು, ಈ ಪರೀಕ್ಷೆಗೆ ಸಂಬಂಧಿಸಿದಂತೆ ಸಹಾಯ ಮತ್ತು ಏನಾದರೂ ದೂರುಗಳಿದ್ದಲ್ಲಿ ಬೆಳಗಾವಿ ಕಾಲೇಜು ರಸ್ತೆಯ ಗೋಂಧಳಿಗಲ್ಲಿಯಲ್ಲಿರುವ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ದ್ವಿತೀಯ ದರ್ಜೆ ಸಹಾಯಕ ಶ್ರೀ. ಶ್ರೀಶೈಲ ಮಠಪತಿ ಅವರನ್ನು (ಸಹಾಯವಾಣಿ) ದೂರವಾಣಿ ಸಂಖ್ಯೆ: 0831-2423860 ಮೂಲಕ ಸಂಪರ್ಕಿಸಬೇಕೆಂದು ಬೆಳಗಾವಿ ಪದವಿಪೂರ್ವ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಸೂಚನೆ

ಬೆಳಗಾವಿ:ಮಾರ್ಚ್: 17: (ಕರ್ನಾಟಕ ವಾರ್ತೆ)- 2011-12 ನೇ ಸಾಲಿನ ಸರಕಾರಿ ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಕಾರಣ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಪಟ್ಟಿ ಪರಿಶೀಲನೆ ಮಾಡಿ, ಆಕ್ಷೇಪಣೆ ಇದ್ದಲ್ಲಿ ಮಾರ್ಚ್ 20 ರೊಳಗೆ ಈ ಕಚೇರಿಯ ವ್ಯವಸ್ಥಾಪಕರಿಗೆ ಸಲ್ಲಿಸಿ, ಸ್ವೀಕೃತಿ ಪಡೆಯಬೇಕೆಂದು ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ: ಇಬ್ಬರು ವಿದ್ಯಾರ್ಥಿಗಳು ಡಿಬಾರ್

ಬೆಳಗಾವಿ:ಮಾರ್ಚ್: 17: (ಕರ್ನಾಟಕ ವಾರ್ತೆ)- ಇಂದು ನಡೆದ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ರಾಜ್ಯಶಾಸ್ತ್ರ ವಿಷಯದಲ್ಲಿ ಬೈಲಹೊಂಗಲ ತಾಲೂಕಿನ ಕಿತ್ತೂರಲ್ಲಿ ಓರ್ವ ವಿದ್ಯಾರ್ಥಿ ಹಾಗೂ ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ ಒಟ್ಟು ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆಂದು ಬೆಳಗಾವಿ ಪದವಿಪೂರ್ವ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಬೆಳಗಾವಿ:ಮಾರ್ಚ್: 17: (ಕರ್ನಾಟಕ ವಾರ್ತೆ)- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೋಥಳಿ-ಕುಪ್ಪಾನವಾಡಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದ 9ನೇ ವರ್ಗಕ್ಕೆ ಖಾಲಿ ಇರುವ 5 ಸ್ಥಾನಗಳನ್ನು ಭರ್ತಿ ಮಾಡಲು ಬರುವ ಮೇ 6 ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಪ್ರವೇಶ ಪರೀಕ್ಷೆಯ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಏಪ್ರಿಲ್ 16 ಇರುತ್ತದೆ. ಆಸಕ್ತ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪ್ರವೇಶ ಪರೀಕ್ಷೆಯ ಅರ್ಜಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ, ಬೆಳಗಾವಿ ಮತ್ತು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಥವಾ ಜವಾಹರ ನವೋದಯ ವಿದ್ಯಾಲಯ, ಕೋಥಳಿ- ಕುಪ್ಪಾನವಾಡಿ ಇವರಿಂದ ಪಡೆಯಬೇಕು. ಅಥವಾ ಅರ್ಜಿಯನ್ನು http://navodayahyd.gov.in ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಚಿಕ್ಕೋಡಿ ತಾಲೂಕಿನ ಕೋಥಳಿ-ಕುಪ್ಪನವಾಡಿ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರನ್ನು ಸಂಪರ್ಕಿಸಲು ಕೋರಲಾಗಿದೆ.

ಮಿಲಟಿರಿ ಕುಟುಂಬ ಪಿಂಚಣಿ ಪಡೆಯುವವರ ಗಮನಕ್ಕೆ

ಬೆಳಗಾವಿ:ಮಾರ್ಚ್: 17: (ಕರ್ನಾಟಕ ವಾರ್ತೆ)- 1986 ರ ಜನೇವರಿ 1 ಕ್ಕಿಂತಲೂ ಮೊದಲು ಮಿಲಿಟರಿಯಿಂದ ಪಿಂಚಣಿಯೊಂದಿಗೆ ಬಂದವರು, ತಮ್ಮ ಪತ್ನಿಯ ಹೆಸರು ಕುಟುಂಬ ಪಿಂಚಣಿಯಲ್ಲಿ ನಾಮ ನಿರ್ದೇಶನ (ಹೆಸರು ನೊಂದಣಿ) ಇನ್ನುವರೆಗೆ ಮಾಡದೇ ಇದ್ದವರು ಕೂಡಲೇ ತಮ್ಮ ರೇಕಾರ್ಡ್ಸ್ ಕಾರ್ಯಾಲಯದಿಂದ ಅಥವಾ ಸಮೀಪದ ಜಿಲ್ಲಾ ಸೈನಿಕ ಕಾರ್ಯಾಲಯದಿಂದ ಸಂಬಂಧಿಸಿದ ಫಾರ್ಮಗಳನ್ನು ಪಡೆದು ಭರ್ತಿ ಮಾಡಿ ತಮ್ಮ ಸಂಬಂದಿತ ರೇಕಾರ್ಡ್ಸ್ ಕಾರ್ಯಾಲಯಗಳಿಗೆ ಸಲ್ಲಿಸಬೇಕೆಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಮಾಜಿ ಸೈನಿಕರ ಗಮನಕ್ಕೆ

ಬೆಳಗಾವಿ:ಮಾರ್ಚ್: 17: (ಕರ್ನಾಟಕ ವಾರ್ತೆ)- 2003 ರ ಏಪ್ರಿಲ್ 1 ರ ನಂತರ ಇ.ಸಿ.ಹೆಚ್.ಎಸ್. ಸ್ಕೀಮ್ ಜಾರಿಗೆ ಬಂದಿರುವುದರಿಂದ, 2003 ರ ಏಪ್ರಿಲ್ 1 ಕ್ಕಿಂತ ಮೊದಲು ಮಿಲಿಟರಿಯಿಂದ ಬಿಡುಗಡೆ ಹೊಂದಿ ಬಂದ ಮಾಜಿ ಸೈನಿಕರಿಗೆ ನೀಡಲಾಗಿದ್ದ ಮೆಡಿಕಲ್ ಬೆನಿಪಿಟ್ಸ್ ಸ್ಕೀಮ್ನ ಮೊತ್ತವನ್ನು ಎ.ಜಿ.ಆಯ್ ಅವರು ಹಿಂತಿರುಗಿಸುತ್ತಿರುತ್ತಾರೆ.

ಆದುದರಿಂದ ಇಲ್ಲಿಯವರೆಗೆ ಮೆಡಿಕಲ್ ಬೆನಿಪಿಟ್ಸ್ ಸ್ಮೀಮ್ನ ಕಾರ್ಡನ್ನು ಮರಳಿಸದೇ ಇದ್ದವರು ಮೆಡಿಕಲ್ ಬೆನಿಪಿಟ್ಸ್ ಸ್ಮೀಮ್ನ ಕಾರ್ಡ ಮೂಲ ಪ್ರತಿ, ಬ್ಯಾಂಕ್ ಪಾಸ್ ಬುಕ್ಕಿನ ಒಂದು ಝೆರಾಕ್ಸ್ ಪ್ರತಿ ಹಾಗೂ ಮೊಬೈಲ್ ನಂಬರ್ ಮತ್ತು ಪೂರ್ಣ ವಿಳಾಸದ ದಾಖಲೆಗಳೊಂದಿಗೆ ಎ.ಜಿ.ಆಯ್. ದೆಹಲಿ ಇವರಿಗೆ ಕಳುಹಿಸಬೇಕೆಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಬೆಳಗಾವಿ:ಮಾರ್ಚ್:16: (ಕರ್ನಾಟಕ ವಾರ್ತೆ)- ತುರ್ತು ಕಾಮಗಾರಿ ಕಾರ್ಯ ಪೂರ್ಣಗೊಳಿಸಲು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದ್ದು, ವಿದ್ಯುತ್ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ವಿ) ಅವರು ತಿಳಿಸಿದ್ದಾರೆ.

ಮಾರ್ಚ್ 17 ರ ಸಂಜೆ 6 ಗಂಟೆಯಿಂದ ಮಾರ್ಚ್ 18 ರ ಸಂಜೆ 6 ಗಂಟೆಯವರೆಗೆ 110 ಕೆ.ವಿ. ಮಚ್ಛೆ ಸ್ಟೇಶನ್ನಿಂದ ಮಚ್ಛೆ, ಪೀರನವಾಡಿ, ವಾಘವಾಡೆ ಗ್ರಾಮದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಅದರಂತೆ ಮಾರ್ಚ್ 20 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ 33 ಕೆ.ವಿ. ಕಾಕತಿ ಸ್ಟೇಶನ್ನಿಂದ ವಿತರಣೆಯಾಗುವ ಕಾಕತಿ, ಹೊನಗಾ ಕೈಗಾರಿಕಾ ಪ್ರದೇಶ, ಹೊನಗಾ, ಕಾಕತಿ ಮತ್ತಿತರ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ವಿ) ಅವರು ತಿಳಿಸಿದ್ದಾರೆ.