District News 29-04-2013

Monday, April 29th, 2013

ಕೃಷಿ ಪಂಡಿತ ಪ್ರಶಸ್ತಿಗೆ ನಾಮನಿರ್ದೇಶನಗಳ ಆಹ್ವಾನ

ಕೃಷಿ ವಲಯದ ಈ ಕೆಳಕಂಡ ನಾಲ್ಕು ಪ್ರಮುಖ ವಿಭಾಗಗಳಲ್ಲಿ ತಮ್ಮದೇ ಆದ ಅಮೂಲ್ಯ   ಸಾಧನೆ ಮೂಲಕ ರೈತ ಸಮುದಾಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿರುವ ರಾಜ್ಯದ ಪರಿಣಿತ ಕೃಷಿಕ ಮಹನೀಯರುಗಳನ್ನು ಗುರುತಿಸಿ ಕೃಷಿ ಪಂಡಿತ ಪ್ರಶಸ್ತಿಯನ್ನು ನಗದು ಬಹುಮಾನದೊಂದಿಗೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 2012-13ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ರಾಜ್ಯದ ಆಸಕ್ತ ಮಹನೀಯರುಗಳಿಂದ ನಾಮನಿರ್ದೇಶನಗಳನ್ನು ಈ ಕೆಳಗೆ ಕಾಣಿಸಿದ ನಾಲ್ಕು ವಿಭಾಗಗಳಲ್ಲಿ ಆಹ್ವಾನಿಸಲಾಗಿದೆ. ಪ್ರತಿ ವಿಭಾಗದಲ್ಲಿ ತಲಾ ರೂ.1.00 ಲಕ್ಷಗಳ ಪ್ರಥಮ, ರೂ.0.50 ಲಕ್ಷಗಳ ದ್ವಿತೀಯ ಮತ್ತು ರೂ.0.25 ಲಕ್ಷಗಳ ತೃತೀಯ ಬಹುಮಾನಗಳನ್ನು ಪ್ರಶಸ್ತಿ ಪತ್ರದೊಂದಿಗೆ ನೀಡಲಾಗುವುದು.

ವಿಭಾಗಗಳು:

1. ಸಮಗ್ರ ಕೃಷಿ ಪದ್ಧತಿ, ಬೆಳೆ ಪದ್ಧತಿಗಳು ಮತ್ತು ಬೆಳೆ ವೈವಿದ್ಧೀಕರಣ

2. ಸಾವಯವ ಕೃಷಿ,

3. ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿ ಮತ್ತು

4. ನೀರಿನ ಸಮರ್ಥ ಬಳಕೆ,

ಸೂಚಿತ ನಾಲ್ಕು ವಿಭಾಗಗಳಡಿಯಲ್ಲಿ ಸದರಿ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸ ಬಯಸುವ ಮಹನೀಯರುಗಳು, ತಮ್ಮ ನಾಮ ನಿರ್ದೇಶನಗಳನ್ನು ನಿಗದಿತ ನಮೂನೆಯಲ್ಲಿ ಸಂಬಂಧಿತ ದಾಖಲಾತಿಗಳೊಂದಿಗೆ ಕಡ್ಡಾಯವಾಗಿ ಆಯಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು/ಕೃಷಿ ವಿಶ್ವವಿದ್ಯಾನಿಲಯಗಳ ತಜ್ಞರ ?ಂgಂ/ಶಿಫಾರಸ್ಸಿನೊಂದಿಗೆ ಕೃಷಿ ನಿರ್ದೇಶನಾಲಯ, ಇಂ?ಂ’ ರಸ್ತೆ, ಬೆಂಗಳೂರು-560001 ಇವರಿಗೆ ದಿನಾಂಕಃ31-05-2013 ರೊಳಗಾಗಿ ತಲುಪುವಂತೆ ಕಳುಹಿಸಲು ಕೋರಿದೆ. ತಡವಾಗಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಮಹನೀಯರುಗಳು ಅರ್ಜಿ ನಮೂನೆಗಳಿಗಾಗಿ ತಮ್ಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಿದೆ. ಅಲ್ಲದೆ ಅರ್ಜಿ ನಮೂನೆಯನ್ನು ಇಲಾಖೆ ವೆಬ್ ಸೈಟ್ http://raitamitra.kar.nic.in ನಲ್ಲಿ ಕ್ಲಿಕ್ಕಿಸಿ ಟೆಂಡರ್ ಪ್ರಕಟಣೆ ಮೆನುವಿನ ಸಬ್‌ಮೆನುವಿನಲ್ಲಿ ಕೃಷಿ ಪಂಡಿತ ಪ್ರಶಸ್ತಿ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ http://raitamitra.kar.nic.in/KPP.pdf ವಿಳಾಸವನ್ನು ಕಾಪಿ ಮಾಡಿ ಯುಆರ್‌ಎಲ್‌ನಲ್ಲಿ ಪೇಸ್ಟ್ ಮಾಡಿದಲ್ಲಿ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು  ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ಆಕಾಶವಾಣಿ ಫೋನ್-ಇನ್ ಮೂಲಕ ಮತದಾರರಿಗೆ ಜಾಗೃತಿ : ಉತ್ತಮ ಸ್ಪಂದನೆ

ಕೊಪ್ಪಳ ಏ. 29 (ಕ.ವಾ): ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ಕಾರ್ಯಕ್ರಮದಡಿ  ಸೋಮವಾರದಂದು ಹೊಸಪೇಟೆ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ ’ಮತದಾನದ ಮಹತ್ವ’ ನೇರ ಫೋನ್-ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಹೊಸಪೇಟೆ ಎಫ್.ಎಮ್. ಕೇಂದ್ರದಿಂದ ಏರ್ಪಡಿಸಲಾದ ಮತದಾನದ ಮಹತ್ವ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಳುಗರಿಗೆ ಮತದಾನದ ಮಹತ್ವ ಹಾಗೂ ಮತದಾನಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.  ಈ ಕಾರ್ಯಕ್ರಮದಲ್ಲಿ  ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ, ಕೊಪ್ಪಳ, ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರು ದೂರವಾಣಿ ಕರೆ ಮೂಲಕ ಮತದಾನಕ್ಕೆ ಸಂಬಂಧಪಟ್ಟ ಮಾಹಿತಿ ಪಡೆದುಕೊಂಡರು.  ಕೇವಲ ಕೊಪ್ಪಳ ಜಿಲ್ಲೆಯ ಶ್ರೋತೃಗಳಷ್ಟೇ ಅಲ್ಲದೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ತೋರಣಗಲ್ ಮುಂತಾದೆಡೆಗಳಿಂದ ಕೇಳುಗರು, ಮತದಾನಕ್ಕೆ ಸಂಬಂಧಪಟ್ಟ ಮಾಹಿತಿ ಪಡೆದುಕೊಂಡರು.  ಬಹುತೇಕ ಕೇಳುಗರು ಮತದಾನಕ್ಕೆ ಅಗತ್ಯವಿರುವ ದಾಖಲೆಗಳು, ಗುರುತಿನ ಚೀಟಿ, ಮತದಾನ ಪ್ರಕ್ರಿಯೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳಿ, ಸಮರ್ಪಕ ಮಾಹಿತಿ ಪಡೆದುಕೊಂಡರು.  ಕಾರ್ಯಕ್ರಮದ ಕೊನೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು, ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ತಮ್ಮ ಮತ ಚಲಾಯಿಸಬೇಕು.  ಎಲ್ಲಾ ಕಾರ್ಖಾನೆ, ಸಂಸ್ಥೆಗಳಲ್ಲಿನ ಖಾಯಂ, ದಿನಗೂಲಿ ನೌಕರರು ಮತ ಚಲಾವಣೆಗೆ ಅನುಕೂಲವಾಗುವಂತೆ ಮೇ. 05 ರಂದು ವೇತನ ಸಹಿತ ರಜೆ ಘೋಷಣೆ ಮಾಡಿರುವುದನ್ನು ಸದುಪಯೋಗ ಪಡಿಸಿಕೊಂಡು ಎಲ್ಲ ಕಾರ್ಮಿಕರು ಮತ ಚಲಾವಣೆ ಮಾಡಿ, ಹಣ, ಹೆಂಡದ ಆಸೆಗೆ ತಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡದೆ, ಸೂಕ್ತ ಅಭ್ಯರ್ಥಿಗೆ ಯೋಚಿಸಿ ಮತ ನೀಡಿ, ಒಟ್ಟಾರೆ ಕೊಪ್ಪಳ ಜಿಲ್ಲೆಯ ಮತದಾನ ಪ್ರಮಾಣವನ್ನು ಶೇ. 90 ರಷ್ಟು ಆಗುವ ರೀತಿಯಲ್ಲಿ ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಎಲ್ಲ ಕೇಳುಗರಿಗೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ, ನೈತಿಕ ಮತದಾನ ಮಾಡಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡುವಂತೆ ಮನವಿ ಮಾಡಿದರು.  ಹೊಸಪೇಟೆ ಆಕಾಶವಾಣಿ ಕೇಂದ್ರದ  ಮಂಜುನಾಥ ಡೊಳ್ಳಿನ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.  ಆಕಾಶವಾಣಿ ಕೇಂದ್ರದ ಮುಖ್ಯಸ್ಥ ವೆಂಕಟೇಶ್, ಕಾರ್ಯಕ್ರಮ ನಿರ್ವಾಹಕ ಅನಿಲ್ ದೇಸಾಯಿ, ಪ್ರಸಾರ ನಿರ್ವಾಹಕ ಬಿ. ಸಿದ್ದಣ್ಣ ಸೇರಿದಂತೆ ಆಕಾಶವಾಣಿ ಕೇಂದ್ರದ ವಿವಿಧ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ 20ಕ್ಕೂ ಹೆಚ್ಚು ಕೇಳುಗರು ದೂರವಾಣಿ ಕರೆ ಮೂಲಕ ಮತದಾನದ ಮಹತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು.

ಆಸರೆ ವಿಶೇಷ ಮಕ್ಕಳ ವತಿಯಿಂದ ಮತದಾರರಿಗೆ ಮನವಿ

ಆಸರೆ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮಣಿಪಾಲ ಕೆ.ಎಂ.ಸಿ ಯ ಹೊರರೋಗಿ ವಿಭಾಗದಲ್ಲಿ ಮತದಾನ ಜಾಗೃತಿಯ ಜಾಥಾ ನಡೆಸಿದರು. ಜಿಲ್ಲಾಧಿಕಾರಿ ಡಾ|| ಎಂ.ಟಿ.ರೇಜು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಶಿಕ್ಷಣಾಧಿಕಾರಿ ಶ್ರೀ ಅಶೋಕ್ ಕಾಮತ್ ಉಪಸ್ಥಿತರಿದ್ದರು. ಮಾರ್ಕೆಟಿಂಗ್ ಆಫೀಸರ್ ಶೈಜಾ ಮ್ಯಾಥ್ಯೂ ಹಾಗೂ ದಯಾನಂದ ಉಪಸ್ಥಿತರಿದ್ದರು. ಸರತಿಯ ಸಾಲಿನಲ್ಲಿದ್ದ ಸನಿಹದ ಜಿಲ್ಲೆಗಳ ಸಾವಿರಾರು ಹೊರರೋಗಿಗಳು ವಿಶೇಷ ಮಕ್ಕಳ ಈ ಮನವಿಗೆ ಸ್ಪಂದಿಸಿದರು. ಎಸ್ಟೇಟ್ ಆಫೀಸರ್ ಶ್ರೀ ಜೈವಿಠಲ್ ರವರು ಸ್ವಾಗತಿಸಿದರು, ಮೆಡಿಕಲ್ ಸೂಪರಿಡೆಂಟ್ ಶ್ರೀ ದಯಾನಂದ ವಂದಿಸಿದರು.

ಮತಗಟ್ಟೆ ಅಧಿಕಾರಿಗಳ ಸಭೆ

122 ಕಾರ್ಕಳ ವಿಧಾನಸಭಾ ಕ್ಷೇತ್ರ ಸಾರ್ವತ್ರಿಕ ಚುನಾವಣೆ-2013 ರ ಅಂಗವಾಗಿ ಮತಗಟ್ಟೆ ಸಂಖ್ಯೆ 1 ರಿಂದ 187 ರ ವರೆಗಿನ ಮತಗಟ್ಟೆ ಮಟ್ಟದ ಅಧಿಕಾರಿಯವರಿಗೆ ಮೇ 1 ರಂದು ಬೆಳಿಗ್ಗೆ 11-00 ಗಂಟೆಗೆ ತಾಲೂಕು ಪಂಚಾಯತ್ ಸಭಾ ಭವನ ಕಾರ್ಕಳದಲ್ಲಿ ತುರ್ತಾಗಿ ಮೀಟಿಂಗ್ ಕರೆಯಲಾಗಿದೆ. ಈ ಮೀಟಿಂಗ್ ಗೆ ತಾಲೂಕಿನ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಕೋರಲಾಗಿದೆ ಯೆಂದು ಕಾರ್ಕಳ ವಿಧಾನಸಭಾ ಚುನಾವಣಾಧಿಕಾರಿ ರವರು ತಿಳಿಸಿರುತ್ತಾರೆ.

ಮರದಾರರು ಮತ ಚಲಾಯಿಸಲು ಹಾಜರುಪಡಿಸಬೇಕಾದ ದಾಖಲೆಗಳು

ಭಾರತ ಚುನಾವಣಾ ಆಯೋಗದ ಆದೇಶದಂತೆ ಮತದಾರರ ಮೇ 5 ರಂದು ಮತದಾನ ಮಾಡಲು ಬರುವಾಗ ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರ ಗುರುತಿನ ಚೀಟಿ (ಇಠಿiಛಿ) ಅಥವಾ ಈ ಕೆಳಕಾಣಿಸಿದ ದಾಖಲೆಗಳಲ್ಲಿ ಯಾವುದಾದರು ಒಂದನ್ನು ಹಾಜರು ಪಡಿಸುವಂತೆ ಕೋರಿದೆ.

ಅಧಿಕೃತ ಫೋಟೋ ಸಹಿತ ಓಟರ್ ಸ್ಲೀಪ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ (Epic), ರಾಜ್ಯ/ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್/ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರವಿರುವ ನೋಂದಾಯಿತ ಡೀಡ್‌ಗಳು/ ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪರಿತರ ಚೀಟಿಗಳು (Pan), ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ S.ಅ/S.ಖಿ/ಔಃಅ ಭಾವಚಿತ್ರವಿರುವ ಪ್ರಮಾಣ ಪತ್ರಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು, ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಿಗೆ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ಓಖಇಉ ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ / ಮೂಲ ಪಡಿತರ ಚೀಟಿ, ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‌ಗಳು (ಕಾರ್ಮಿಕ ಮಂತ್ರಾಲಯ ಯೋಜನೆ), ಭಾರತ ಚುನಾವಣಾ ಆಯೋಗದಿಂದ ನೀಡಿದ ಆಧಾರ್ ಕಾರ್ಡ್ ಯೆಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಡಾ|| ಎಂ.ಟಿ.ರೇಜು ರವರು ತಿಳಿಸಿರುತ್ತಾರೆ.

ಮಡಿಕೇರಿ: ಕಲ್ಯಾಣ ಇಲಾಖೆಗಳ ಮೂಲಕ ಜಾಗೃತಿ ಜಾಥ

ಮಡಿಕೇರಿ ಏ.29(ಕರ್ನಾಟಕ ವಾರ್ತೆ):-ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಸಮಾಜ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಹಾಗೂ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಹಕಾರದಲ್ಲಿಂದು ಮತದಾರರ ಹಕ್ಕು ಮತ್ತು ಮಹತ್ವ ಕುರಿತು ಜಾಗೃತಿ ಜಾಥ ನಡೆಯಿತು. ಸ್ವೀಪ್ ಚುನಾವಣಾ ವೀಕ್ಷಕರಾದ ಡಾ.ಎನ್.ಚಂದ್ರೇಗೌಡ ಮತ್ತು ಕೇಂದ್ರ ವಾರ್ತಾ ಸೇವೆಯ ಅಧಿಕಾರಿ ಅನ್ಸುಮಾನ್ ಮಿಶ್ರ ಅವರು ನಗರದ ಗದ್ದಿಗೆಯಲ್ಲಿಂದು ಜಾಥಗೆ ಚಾಲನೆ ನೀಡಿದರು.

ವಿಶ್ವದಲ್ಲಿ ಭಾರತವು ಉತ್ತಮ ಸಂಸದೀಯ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಮೇ,5ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ 18ವರ್ಷ ತುಂಬಿದ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡುವಂತಾಗಬೇಕು ಎಂದು ಸ್ವೀಪ್ ಚುನಾವಣಾ ವೀಕ್ಷಕರಾದ ಡಾ.ಎನ್.ಚಂದ್ರೇಗೌಡ ಅವರು ಹೇಳಿದರು. ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿ ಲಕ್ಷ್ಮಣ ಜೆ.ಗಂಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ನರಸಿಂಹಮೂರ್ತಿ(ಮಡಿಕೇರಿ), ಸಿದ್ದಲಿಂಗಮೂರ್ತಿ(ವಿರಾಜಪೇಟೆ), ಗುರುಶಾಂತಪ್ಪ(ಮಡಿಕೇರಿ), ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪುಟ್ಟರಾಜು, ತಾಲ್ಲೂಕು ವಿಸ್ತರಣಾಧಿಕಾರಿಗಳಾದ ಕವಿತಾ(ಮಡಿಕೇರಿ), ಜಾಲಿ(ವಿರಾಜಪೇಟೆ), ಶ್ರೀನಿವಾಸ(ಸೋಮವಾರಪೇಟೆ) ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು, ನಿಲಯ ಮೇಲ್ವಿಚಾರಕರು, ವಿದ್ಯಾರ್ಥಿ ನಿಲಯಗಳ ಸಿಬ್ಬಂದಿಗಳು ಮತ್ತಿತರರು ಜಾಥದಲ್ಲಿ ಪಾಲ್ಗೊಂಡಿದ್ದರು.     

ಸ್ವೀಪ್ ವೀಕ್ಷಕರ ಭೇಟಿ:- ಸ್ವೀಪ್ ಚುನಾವಣಾ ವೀಕ್ಷಕರಾದ ಡಾ.ಎನ್.ಚಂದ್ರೇಗೌಡ ಮತ್ತು ಅನ್ಸುಮಾನ್ ಮಿಶ್ರ ಅವರು  ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷರಾದ ಕೆ.ಬಿ.ಅಂಜನಪ್ಪ ಅವರನ್ನು ನಗರದ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರ ಕಚೇರಿಯಲ್ಲಿಂದು ಭೇಟಿ ಮಾಡಿ ಸ್ವೀಪ್ ಕಾರ್ಯಕ್ರಮದ ಪ್ರಗತಿ ಬಗ್ಗೆ ಮಾಹಿತಿ ಪಡೆದರು.

ಜಿಲ್ಲೆಯಲ್ಲಿ ಸ್ವೀಪ್ ಅಭಿಯಾನದ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷರಾದ ಕೆ.ಬಿ.ಅಂಜನಪ್ಪ ಅವರು ಮೊದಲ ಹಂತದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕುರಿತು ಜಾಗೃತಿ ಜಾಥ, ತಿದ್ದುಪಡಿ ಅಥವಾ ತೆಗೆಸಿಹಾಕುವುದು, ಸ್ಥಳಾಂತರ  ಬಗ್ಗೆ ಜಾಗೃತಿ, ಬೀದಿನಾಟಕ ಮೂಲಕ ಜಿಲ್ಲೆಯ ಪ್ರಮುಖ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅರಿವು, ಕರಪತ್ರ, ಬಿತ್ತಿಪತ್ರ, ಬ್ಯಾನರ್, ಮತ್ತಿತರ ಅಭಿಯಾನವನ್ನು ಆಯೋಜಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ. ಹಾಗೆಯೇ ಜಿಲ್ಲಾ ಮಟ್ಟದಂತೆ ತಾಲ್ಲೂಕು ಮತ್ತು ಗ್ರಾಮ ಹಂತಗಳಲ್ಲಿಯೂ ಜಾಥ, ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಎರಡನೇ ಹಂತದಲ್ಲಿ ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಾರ್ಮಿಕ ಮತ್ತಿತರ ಇಲಾಖೆಗಳ ಜೊತೆಗೆ ಸರ್ಕಾರೇತರ ಸಂಸ್ಥೆಗಳಾದ ರೋಟರಿ, ಲಯನ್ಸ್, ಹೋಟೆಲ್, ಲಯನ್ಸ್ ಮಿಸ್ಟಿ ಹಿಲ್, ನಾರ್ತ್ ಕೂರ್ಗ್ ಕ್ಲಬ್ ಮತ್ತಿತರ ಸಹಯೋಗದಲ್ಲಿ ಜಿಲ್ಲಾ ಮಟ್ಟದಲ್ಲಿ ಜಾಥ ಮತ್ತು ಮಾನವ ಸರಪಳಿ ಅಭಿಯಾನ ಹಮ್ಮಿಕೊಳ್ಳಲಾಗಿದೆ  ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಬಿ.ಅಂಜನಪ್ಪ ಅವರು ಮಾಹಿತಿ ನೀಡಿದರು.

ಹಾಗೆಯೇ ಆರೋಗ್ಯ ಇಲಾಖೆ ಮೂಲಕ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳ ಆಸ್ಪತ್ರೆಗೆ ಆಗಮಿಸುವವರಿಗೆ  ಮತದಾನ ಹಕ್ಕು ಬಗ್ಗೆ ಮಾಹಿತಿಯ ಚೀಟಿಯನ್ನು ನೀಡಿ ಅರಿವು ಮೂಡಿಸಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.50ಕ್ಕಿಂತ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಹಾಗೆಯೇ ಜಿಲ್ಲೆಯ ಹಾಡಿಗಳಲ್ಲಿ ಮತದಾನದ ಹಕ್ಕು ಕುರಿತು ಜಾಗೃತಿ  ಮೂಡಿಸಲಾಗುತ್ತಿದೆ. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ತೆರಳಿ ಗ್ರಾಮಗಳ ಹಂತದಲ್ಲಿ ಅರಿವು ಮೂಡಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೆ.ಬಿ.ಅಂಜನಪ್ಪ ಅವರು ತಿಳಿಸಿದರು.

ಈಗಾಗಲೇ ಜಿಲ್ಲೆಯ 10 ಕಡೆಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಹೆದ್ದಾರಿ ಫಲಕಗಳನ್ನು ವಾರ್ತಾ ಇಲಾಖೆ ಮೂಲಕ ಅಳವಡಿಸಲಾಗಿದೆ. ಮತದಾರರಲ್ಲಿ ಜಾಗೃತಿ ಕಾರ್ಯಕ್ರಮವು ಮೇ, 2ರವರೆಗೆ ನಡೆಯಲಿದ್ದು, ಆ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಯೋಜನಾ ಶಾಖೆಯ ಸಿ.ಎಂ.ರಾಣಿ ಮತ್ತು ವೆಂಕಟರಾವ್ ಮತ್ತಿತರರು ಇದ್ದರು.

ಸ್ವೀಪ್ ಚುನಾವಣಾ ವೀಕ್ಷಕರಾದ ಡಾ.ಎನ್.ಚಂದ್ರೇಗೌಡ ಮತ್ತು ಅನ್ಸುಮಾನ್ ಮಿಶ್ರ ಅವರು ಇಂದು ಮಡಿಕೇರಿ ನಗರದಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಕೇಂದ್ರವಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ವ್ಯಾಪ್ತಿಯ ಪ್ರದೇಶಕ್ಕೆ ತೆರಳಿ ಅಲ್ಲಿನ ಸ್ಥಳಿಯರಿಂದ ಮಾಹಿತಿ ಪಡೆದರು.

ವಿಧಾನಸಭಾ ಚುನಾವಣೆ  ಶಾಂತಿಯುತವಾಗಿ ನಡೆಸಲು ಡಾ.ಎನ್.ವಿ.ಪ್ರಸಾದ್ ಸೂಚನೆ

ಮಡಿಕೇರಿ ಏ.29(ಕರ್ನಾಟಕ ವಾರ್ತೆ):-ವಿಧಾನಸಭೆ ಚುನಾವಣೆಗೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಶಾಂತಿಯುತವಾಗಿ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ನಿರ್ದೇಶನ ನೀಡಿದ್ದಾರೆ.

ನಗರದ ಸಂತ ಜೋಸೆಫರ ಶಾಲೆಯಲ್ಲಿಂದು ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಎರಡನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಸ್ಟರಿಂಗ್ ಕಾರ್ಯ, ವಿದ್ಯುನ್ಮಾನ ಮತಯಂತ್ರ ಸಮರ್ಪಕ ನಿರ್ವಹಣೆ, ಮತಗಟ್ಟೆಯಲ್ಲಿ ನಿರ್ವಹಿಸಬೇಕಾದ ಕಾರ್ಯಗಳು, ಅಣಕು ಮತದಾನ, ಡಿಮಸ್ಟರಿಂಗ್ ಮತ್ತಿತರ ಬಗ್ಗೆ ಸಮರ್ಪಕವಾಗಿ ತರಬೇತಿಯಲ್ಲಿ ಮಾಹಿತಿ ಪಡೆದು ವಿಧಾನಸಭಾ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯವರು ಹೇಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಿ.ಪ್ರಭು ಅವರು ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್ ದಿನದಂದು ಮತಗಟ್ಟೆ ಸಾಮಗ್ರಿಗಳನ್ನು ಪಡೆದು ಮತಗಟ್ಟೆಗೆ ತೆರಳುವುದು, ಮತಯಂತ್ರದ ಸಿದ್ದತೆ ಮತ್ತು ಮೊಹರು ಮಾಡುವುದು ಮತ್ತು ನಿರ್ವಹಣೆ, ಸ್ಪರ್ಧಿಸಿದ ಅಭ್ಯರ್ಥಿಗಳ ಹೆಸರು, ಚಿಹ್ನೆ, ಸರಿಯಾಗಿದೆಯೇ ಎಂದು ದೃಢಪಡಿಸಿಕೊಳ್ಳುವುದು, ಬ್ಯಾಲೆಟ್ ಯೂನಿಟ್‌ನಲ್ಲಿ ಉಮೇದುವಾರರ ಸಂಖ್ಯೆಗೆ ಅನುಗುಣವಾಗಿ ನೀಲಿ ಬಟನ್‌ಗಳು ಇವೆಯೇ ಎಂದು ನೋಡಿಕೊಳ್ಳಬೇಕು. ಕಂಟ್ರೋಲ್ ಯೂನಿಟ್‌ನಲ್ಲಿರುವ ಸ್ಟೀಲ್ ಬಟನ್ ಸ್ವಿಚ್ ಆನ್ ಮಾಡಿ ಅದರಲ್ಲಿ ಅಳವಡಿಸಿರುವ ಬ್ಯಾಟರಿ ಸಮರ್ಪಕವಾಗಿ ಕೆಲಸನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಬೇಕು ಎಂದು ಅವರು ಹೇಳಿದರು.

ಕಂಟ್ರೋಲ್ ಯುನಿಟ್‌ನ ಕ್ಯಾಂಡ್ ಸೆಟ್ ಮೊಹರು ಮಾಡಲಾಗಿದೆಯೇ , ಅಡ್ರಸ್ಟ್ ಯಾಗ್ ಮಾಡಲಾಗಿದೆಯೇ ಎಂದು  ನೋಡಿಕೊಳ್ಳಬೇಕು. ಮಸ್ಟರಿಂಗ್ ಸೆಂಟರ್ ಬಿಡುವ ಮುನ್ನ ಮತದಾನ ಕೇಂದ್ರದಲ್ಲಿ ಅಳವಡಿಸಲಾಗಿರುವ ಶಾಯಿ, ಸ್ಪರ್ಧಾ ಕಣದಲ್ಲಿರುವ ಉಮೇದುವಾರರ ಮತ್ತು ಚುನಾವಣೆ ಏಜೆಂಟರ ಮಾದರಿ ಸಹಿಗಳ ಪೋಟೋ, ಪ್ರತಿ ಕೊಟ್ಟಿರುವ ಬಗ್ಗೆ ದೃಢಪಡಿಸಿಕೊಳ್ಳುವುದು. ಚುನಾವಣೆ ಸಾಮಗ್ರಿಗಳನ್ನು ಪರಿಶೀಲಿಸಿದ ನಂತರ ಎಲ್ಲಾ ಸರಿಯಾಗಿದೆಯೇ ಎಂದು ಖಾತರಿಪಡಿಸಿಕೊಳ್ಳಬೇಕು ಎಂದು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಮಾಹಿತಿ ನೀಡಿದರು.

ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ನಿಗಧಿಪಡಿಸಿದ ಮತಗಟ್ಟೆ ತಲುಪಿದ ನಂತರ ತಮಗೆ ಕೊಡಲಾದ ಚುನಾವಣಾ ಸಾಮಗ್ರಿಗಳನ್ನು ಪರಿಶೀಲಿಸಿ, ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಿ ತರಿಸಿಕೊಳ್ಳುವುದು. ಪ್ರಿಸೈಡಿಂಗ್ ಅಧಿಕಾರಿ, ಮೊದಲನೇ, ಎರಡನೇ ಮತ್ತು ಪೋಲಿಂಗ್ ಅಧಿಕಾರಿಗಳು ಹಾಗೂ ಚುನಾವಣಾ ಏಜೆಂಟರು ಕುಳಿತುಕೊಳ್ಳಲು ವ್ಯವಸ್ಥೆ ಮಾಡುವುದು. ಮತದಾರರು ಮತವನ್ನು ಗೌಪ್ಯವಾಗಿ ಚಲಾಯಿಸುವ ನಿಟ್ಟಿನಲ್ಲಿ ಒಂದು ಕಾರ್ನರ್‌ನಲ್ಲಿ ಮೂರು ಬದಿಯನ್ನು ಕವರ್ ಮಾಡಿ ಮತದಾರರ ಕಂಪಾರ್ಟ್‌ಮೆಂಟ್ ಒಳಗಡೆ ಸುಲಭವಾಗಿ ಹೋಗುವಷ್ಟು ಸ್ಥಳವಕಾಶ ನೋಡಿಕೊಳ್ಳಬೇಕು. ಚುನಾವಣಾ ಕೇಂದ್ರದ ಒಳಗೆ ರಾಜಕೀಯ ಪಕ್ಷಗಳ ಭಾವಚಿತ್ರಗಳಾಗಲಿ ಅಥವಾ ಚುನಾವಣೆ ಮೇಲೆ ಪರಿಣಾಮ ಬೀರುವ ಬರವಣಿಗೆಗಳಿದ್ದಲ್ಲಿ ತೆಗೆಸಿಹಾಕುವುದು ಅಥವಾ ಕವರ್ ಮಾಡುವುದು.

ಮತಯಂತ್ರ ಸಿದ್ದತೆಯನ್ನು ಪ್ರಿಸೈಡಿಂಗ್ ಅಧಿಕಾರಿಯು ಮಾಡಬೇಕು. ಮತದಾನಕ್ಕೂ ಮುಂಚೆ 45 ನಿಮಿಷಕ್ಕೂ ಮೊದಲು ಪ್ರತಿಯೊಬ್ಬ ಉಮೇದುವಾರರಿಗೆ ಕೆಲವು ಮತಗಳನ್ನು ದಾಖಲು ಮಾಡುವ ಮೂಲಕ ಹಾಜರಿದ್ದ ಪೋಲಿಂಗ್ ಏಜೆಂಟರ ಮುಂದೆ ಅಣಕು ಮತದಾನ ಮಾಡಿ ತೋರಿಸುವುದು. ಬ್ಯಾಲೆಟ್ ಯೂನಿಟ್‌ನ ನೀಲಿ ಬಟನ್‌ಗಳನ್ನು ರ‍್ಯಾಂಡಮ್  ಮತಗಟ್ಟೆಯಲ್ಲಿ ಮತ ಚಲಾಯಿಸುವ ವಿಧಾನ ಮತ್ತು ಪೋಲಿಂಗ್ ಅಧಿಕಾರಿಗಳ ಕರ್ತವ್ಯ, ಅಂಚೆ ಮತಪತ್ರ, ಮತದಾನ ಆರಂಭ, ಟೆಂಡರ್ಡ್ ಮತಗಳು, ಚಾಲೆಂಜ್‌ಡ್ ಮತಗಳು(ಆಕ್ಷೇಪಿತ ಮತ), ಮತಗಟ್ಟೆ ಒಳಗಡೆ ಪ್ರವೇಶ ಮಾಡಲು ಹಕ್ಕುಳ್ಳ ವ್ಯಕ್ತಿಗಳು ಮತದಾನ ಮುಕ್ತಾಯಗೊಳಿಸುವುದು, ದಾಖಲಿಸಿದ ಮತಗಳನ್ನು ಸಿದ್ದಪಡಿಸುವುದು. ಚುನಾವಣಾ ಕಾಗದ ಪತ್ರ ಮೊಹರು ಮಾಡುವುದು ಮತ್ತಿತರ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಯಿತು.

ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ಸುರ ಬಾಲಕೃಷ್ಣ, ತರಬೇತಿದಾರರಾದ ದಿವಾಕರ, ಪ್ರಶಾಂತ್, ಲಿಂಗರಾಜು, ತಹಶೀಲ್ದಾರರುಗಳಾದ ಅನಿಲ್ ಕುಮಾರ್(ಮಡಿಕೇರಿ), ಎಸ್.ವೆಂಕಟಾಚಲಪ್ಪ(ಸೋಮವಾರಪೇಟೆ),  ಸತ್ಯನಾರಾಯಣ ರಾವ್ ಮತ್ತಿತರರು ಇದ್ದರು.

ವಿಧಾನಸಭಾ ಚುನಾವಣೆಗೆ ಅಗತ್ಯ ಸಿದ್ಧತೆ: ಜಿ.ಪ್ರಭು

ಮಡಿಕೇರಿ ಏ.29(ಕರ್ನಾಟಕ ವಾರ್ತೆ):-ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತ್ತು ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಆ ದಿಸೆಯಲ್ಲಿ ಎರಡನೇ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಿ.ಪ್ರಭು ಅವರು ತಿಳಿಸಿದ್ದಾರೆ. ನಗರದ ಸಂತ ಜೋಸೆಫರ ಶಾಲೆಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ವಿಧಾನಸಭಾ ಚುನಾವಣೆ ಹಿನ್ನೆಲೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 253 ಮತಗಟ್ಟೆಗಳಿಗೆ ಅಗತ್ಯ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಿ ಮೇ, 5 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರು ತಿಳಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ 253 ಮತಗಟ್ಟೆಗಳಿಗೆ 253 ಮತಯಂತ್ರಗಳನ್ನು ಕಳುಹಿಸಿಕೊಡಲಾಗುತ್ತದೆ. ಜೊತೆಗೆ 39 ಹೆಚ್ಚುವರಿ ವಿದ್ಯುನ್ಮಾನ ಮತಯಂತ್ರವನ್ನು ಇಡಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 7 ಫ್ಲೈಯಿಂಗ್ ಸ್ಕ್ವಾಡ್ ಮತ್ತು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಇಬ್ಬರು ಮುಖ್ಯ ಸ್ಟಾಟಿಕ್ ಸರ್ವಿಲೆನ್ಸ್ ತಂಡದ ಅಧಿಕಾರಿಗಳು ಜೊತೆಗೆ 5 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇಬ್ಬರು ವಿಡಿಯೋ ಸರ್ವಿಲೆನ್ಸ್ ತಂಡ, ಒಬ್ಬರು ವಿಡಿಯೋ ವ್ಯೂವಿಂಗ್ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,02,074 ಮತದಾರರಿದ್ದು, ಅವರಲ್ಲಿ 1,00,235 ಪುರುಷ ಮತದಾರರು ಮತ್ತು 1,01,839 ಮಹಿಳಾ ಮತದಾರರು ಇದ್ದಾರೆ ಎಂದು ಜಿ.ಪ್ರಭು ಅವರು ಮಾಹಿತಿ ನೀಡಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಡಿಕೇರಿ ನಗರ, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಹೆಬ್ಬಾಲೆ, ಕುಶಾಲನಗರ, ಕೂಡಿಗೆ, ಸುಂಟಿಕೊಪ್ಪ, ಗರಗಂದೂರು, ಹೊಸತೋಟ, ಗದ್ದೆಹಳ್ಳ, ಕಂಬಿಬಾಣೆ ಪ್ರದೇಶಗಳನ್ನು ವಲ್ನರಬಲ್ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ತಹಶೀಲ್ದಾರ್ ಎಸ್.ವೆಂಕಟಾಚಲಪ್ಪ, ಅಂಚೆ ಮತಪತ್ರ ನೋಡಲ್ ಅಧಿಕಾರಿ ಸತ್ಯನಾರಾಯಣರಾವ್, ಸಹಾಯಕ ತರಬೇತಿದಾರರಾದ ಲಿಂಗರಾಜು, ಮಡಿಕೇರಿ ತಹಶೀಲ್ದಾರ್ ಅನಿಲ್ ಕುಮಾರ್ ಮತ್ತಿತರರು ಇದ್ದರು.

ಚುನಾವಣಾ ವೀಕ್ಷಕರಿಂದ ಚುನಾವಣಾ ಸಿದ್ಧತೆ ಬಗ್ಗೆ ಪರಿಶೀಲನೆ

ಮಡಿಕೇರಿ ಏ.29(ಕರ್ನಾಟಕ ವಾರ್ತೆ):-ಮಡಿಕೇರಿ ವಿಧಾನಸಭಾ ಕ್ಷೇತ್ರ (208)ದ ಸಾಮಾನ್ಯ ಚುನಾವಣಾ ವೀಕ್ಷಕರಾದ ಸುರಾ ಬಾಲಕೃಷ್ಣ  ಐ ಡಿ ಇ ಎನ್. ಅವರು ನಂಜರಾಯಪಟ್ಟಣ, ವಾಲ್ನೂರು, ಕಂಬಿಬಾಣೆ, ಶಿರಾಂಗಾಲ, ಹೆಬ್ಬಾಲೆ, ಕೂಡಿಗೆ, ತೊರೆನೂರು ಸುತ್ತಮುತ್ತ ಪ್ರದೇಶಗಳಿಗೆ ಭೇಟಿ ನೀಡಿ ಚುನಾವಣೆ ಸಿದ್ದತೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಭೇಟಿಯ ಸಮಯದಲ್ಲಿ ಸ್ಥಳಿಯರೊಂದಿಗೆ ಚುನಾವಣೆಯ ವಿಷಯದಲ್ಲಿ ಸಂವಾದ ನಡೆಸಿರುತ್ತಾರೆ. ಏಪ್ರಿಲ್, 26 ಮತ್ತು 27ರಂದು ಸಂತ ಜೋಸೆಪರ ಕಾನ್ವೆಂಟ್‌ನಲ್ಲಿ ನಡೆಸಲಾದ ವಿದ್ಯುನ್ಮಾನ ಮತಯಂತ್ರಗಳ ತಯಾರಿ ತದನಂತರ ಅಣಕು ಮತದಾನದ ಪ್ರಾತ್ಯಕ್ಷತಿಯಲ್ಲಿ ಸ್ಪರ್ದಿಸುತ್ತಿರುವ ಅಭ್ಯರ್ಥಿಗಳ ಮತ್ತು ಏಜೆಂಟ್‌ರ ಸಮ್ಮಖದಲ್ಲಿ ನಡೆಸಿರುವುದನ್ನು ಪರಿಶಿಲಿಸಿರುತ್ತಾರೆ. ಅವರ ವೈಯಕ್ತಿಕ ಮೊಬೈಲ್ ಸಂಖೈ: 9448933972 ನ್ನು ಸಂಪರ್ಕಿಸಬಹುದಾಗಿz

ಏಪ್ರಿಲ್ 30ರಂದು ಜಾಥ

ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ಮತದಾರರು  ಮತಹಕ್ಕು ಚಲಾಯಿಸುವ ದಿಸೆಯಲ್ಲಿ ಅರಿವು ಕಾರ್ಯಕ್ರಮವು ಎರಡನೇ ಹಂತದಲ್ಲಿ ಶುರುವಾಗಿದ್ದು, 7ನೇ ದಿನವಾದ ಏ.30ರಂದು ಬೆಳಗ್ಗೆ 8.30ಗಂಟೆಗೆ ನಗರದ ಓಂಕಾರೇಶ್ವರ ದೇವಸ್ಥಾನದಿಂದ ಗಣಪತಿ ಬೀದಿ, ಕಾಲೇಜು ರಸ್ತೆ, ಗೌಳಿಬೀದಿ ಮುಖಾಂತರ ಜನರಲ್ ತಿಮ್ಮಯ್ಯ ವೃತ್ತದವರೆಗೆ ಜಾಥ ಹೊರಡಲಿದೆ. ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ, ಲೀಡ್ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕುಗಳ ವತಿಯಿಂದ ಏ.30ರಂದು ಜಾಥ ನಡೆಯಲಿದೆ.

ತಪ್ಪದೇ ಮತ ಚಲಾಯಿಸಿ ಮತದಾರ ಜಾಗೃತಿಯಲ್ಲಿ ಮಹಿಳೆಯರ ಪಾತ್ರ ಹಿರಿದು

ಧಾರವಾಡ (ಕರ್ನಾಟಕ ವಾರ್ತೆ) ಏ. 29: ಮತದಾರರ ಜಾಗೃತಿ ಹಾಗೂ ತಪ್ಪದೇ ಮತ ಚಲಾಯಿಸುವ ಕುರಿತು ಮಹಿಳೆಯರು ಆಸಕ್ತಿ ವಹಿಸಿ ತಮ್ಮ ಕುಟುಂಬದ ಸುತ್ತಲಿನ ಜನರಿಗೆ ತಿಳುವಳಿಕೆ ನೀಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಪಿ.ಎ. ಮೇಘಣ್ಣವರ ಮನವಿ ಮಾಡಿದರು. ಅವರು ನವಲಗುಂದದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ಯುವಜನ ಸೇವಾ ಇಲಾಖೆ ಆಯೋಜಿಸಿದ್ದು, ಮತದಾರರ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯವಾಗಿ ಪುರುಷರು ಕೇಳಿದ್ದರ ಕುರಿತು ಲಕ್ಷ್ಯ ನೀಡುವುದಿಲ್ಲ, ನೀಡಿದರು ಇನ್ನೊಬ್ಬರಿಗೆ ತಿಳಿಹೇಳುವುದು ಇನ್ನೂ ಕಡಿಮೆ. ಆದುದರಿಂದ  ತಾಲೂಕು ಹಾಗೂ ಜಿಲ್ಲೆಯಲ್ಲಿ ಮತ ಚಲಾವಣೆಯ ಶೇಕಡಾವಾರು ಪ್ರಮಾಣ ಹೆಚ್ಚಿಸುವಲ್ಲಿ ಮಹಿಳೆಯರು ಗಮನಾರ್ಹ ಪಾತ್ರ ವಹಿಸಬಹುದಾಗಿದೆ. ಆಯ್ಕೆ ಯಾವುದೇ ಇದ್ದಲ್ಲಿ ಮತದಾನವನ್ನು ಮೇ 5 ರಂದು ಮುಂಜಾನೆ 7 ರಿಂದ ಸಂಜೆ 5 ರ ಅವಧಿಯೊಳಗೆ ತಪ್ಪದೇ ಮಾಡಬೇಕು. ಈ ಬಾರಿ ಚುನಾವಣಾ ಆಯೋಗ ಮತದಾರರು ತಮ್ಮ ಮತಗಟ್ಟೆ ಹಾಗೂ ವಿವರಗಳ ಹುಡುಕಾಟ ತಪ್ಪಿಸಲು ಮತವಿವರ ಚೀಟಿಯನ್ನು ಮನೆಗೆ ನೀಡಲಿದ್ದಾರೆ. ಆದುದರಿಂದ ಜಿಲ್ಲೆಯ ಮತದಾರರು ತಾವು ಮತದಾನ ಮಾಡುವುದಲ್ಲದೇ ನೆರೆಹೊರೆಯರನ್ನು, ಸ್ನೇಹಿತರನ್ನು ಮತ ಚಲಾವಣೆಗೆ ಪ್ರೇರೆಪಿಸಬೇಕು ಎಂದು ಮೇಘಣ್ಣವರ ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕ ಸ್ವೀಪ್ ಸಮಿತಿ ಸಮನ್ವಯಾಧಿಕಾರಿ ಕೆ.ಎಚ್. ಚೆನ್ನೂರ ವಹಿಸಿದ್ದರು. ನವಲಗುಂದ ಜಿಎಂಎಫ್‌ಸಿ ನ್ಯಾಯಮೂರ್ತಿಗಳಾದ ಸರವಣ, ತಾಲೂಕು ಪಂಚಾಯತ್ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷ ತಾಲೂಕು ಪಂಚಾಯತ್‌ನ ಎಂ.ಎಂ. ಸವದತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ಕುಂದಗೋಳ ಹರ್ಲಾಪುರದ ಕಲಾ ತಂಡದ ಸದಸ್ಯರಿಂದ ಮತದಾರ ಜಾಗೃತಿ ಕುರಿತ ಬೀದಿ ನಾಟಕ ಡೊಳ್ಳಿನ ಮತ್ತು ಲಾವಣಿ ಪದಗಳ ಕಾರ್ಯಕ್ರಮ ನಡೆಯಿತು. ಯುವಜನ ಸೇವಾಧಿಕಾರಿ ಬಿ.ಬಿ. ವಿಶ್ವನಾಥ ಸರ್ವರನ್ನು ಸ್ವಾಗತಿಸಿದರು. ಎನ್.ಎನ್. ಹಾಲಗೇರಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಸೌದಾಗರ ವಂದಿಸಿದರು.

ಮೈಕ್ರೋ ಅಬ್ಸರ್ವರ್‌ಗಳ ತರಬೇತಿ

ಧಾರವಾಡ (ಕರ್ನಾಟಕ ವಾರ್ತೆ) ಏ. 29: ಜಿಲ್ಲೆಯಲ್ಲಿ ಮೇ 5 ರಂದು ಜರುಗಲಿರುವ ವಿಧಾನಸಭಾ ಚುನಾವಣೆಯ ಕುರಿತಂತೆ ನೇಮಕಗೊಂಡಿರುವ ಮೈಕ್ರೋಅಬ್ಸರ್ವ್‌ರ ಅವರುಗಳಿಗೆ ಇಂದು ತರಬೇತಿ ಏರ್ಪಡಿಸಲಾಗಿತ್ತು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆರು ಜನರಿಗೆ ಹಾಗೂ ಆಲೂರ ವೆಂಕಟರಾವ್ ಭವನದಲ್ಲಿ 200 ಮೈಕ್ರೋ ಆಬ್ಸರ್ವ್ ಅವರಿಗೆ ಅವರ ಕರ್ತವ್ಯ ಹಾಗೂ ಸಲ್ಲಿಸಬೇಕಾದ ವರದಿಗಳ ಕುರಿತು ವಿಸ್ತ್ರತವಾದ ತರಬೇತಿಯನ್ನು ನೀಡಲಾಯಿತು. ಸಂಬಂಧಿತ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ವೀಕ್ಷಕರು ತರಬೇತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಸಮೀರ್ ಶುಕ್ಲ ಅವರು ಆಗಮಿಸಿ ತರಬೇತಿಯಲ್ಲಿ ಭಾಗವಹಿಸಿದವರಿಗೆ ಸೂಚಿತ ಜವಾಬ್ದಾರಿ, ಕರ್ತವ್ಯ ಹಾಗೂ ವರದಿ ಸಲ್ಲಿಸುವಿಕೆಗಳನ್ನು ಸಮಯಕ್ಕೆ ಸರಿಯಾಗಿ ಪಾಲಿಸಲು ನಿರ್ದೇಶನ ನೀಡಿದರು.

ಮತದಾನಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯ-ಹರ್ಷಗುಪ್ತಾ

ಮಂಗಳೂರು ಎಪ್ರಿಲ್ 29(ಕರ್ನಾಟಕ ವಾರ್ತೆ):-ಮೇ 5ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮತದಾನಕ್ಕೆ ಅವಕಾಶ ಎಂದು ದಕ್ಷಿಣಕನ್ನಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶ್ರೀ ಹರ್ಷಗುಪ್ತಾ ಅವರು ಸ್ಪಷ್ಟಪಡಿಸಿದ್ದಾರೆ.

ಅವರು ಇಂದು ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಕಾರ‍್ಯ ನಿರ್ವಹಿಸಲಿರುವ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಎಲ್ಲಾ ತರಬೇತಿ ಕೇಂದ್ರಗಳಿಗೆ ಖುದ್ದು ತೆರಳಲು ಸಾಧ್ಯವಾಗದ ಕಾರಣ ವಿವಿಧ ತರಬೇತಿಕೇಂದ್ರಗಳ ಚುನಾವಣಾ ಸಿಬ್ಬಂದಿಗಳನ್ನು ತಮ್ಮ ಕಚೇರಿಯಿಂದಲೇ ವೈರ್‌ಲೆಸ್ ಮೂಲಕ ಏಕಕಾಲಕ್ಕೆ ಸಂಪರ್ಕ ಪಡೆದು ಮಾತನಾಡಿದರು. ಫೋಟೋ ಇರುವ ಎಪಿಕ್ ಕಾರ್ಡ್ ಇದ್ದು,ಅಂತಹವರ ಹೆಸರು ಮತದಾರರ ಪಟ್ಟಿಯಲ್ಲಿ  ಇಲ್ಲದಿದ್ದರೆ ಅವರಿಗೆ ಮತದಾನಕ್ಕೆ ಅವಕಾಶ ನೀಡಬಾರದು.ಮತದಾರರ ಪಟ್ಟಿಯಲ್ಲಿ ಹೆಸರಿದ್ದು,23 ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸದ್ದಿದ್ದಲ್ಲಿ, ಅಂತಹವರಿಗೂ ಮತದಾನಕ್ಕೆ ಅವಕಾಶ ನೀಡದಿರಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.

ಚುನಾವಣೆ ಕಾರ‍್ಯಕ್ಕೆ ನಿಯೋಜಿಸಿರುವ ಎಲ್ಲಾ ಸಿಬ್ಬಂದಿಗಳು ನಿರ್ಭೀತಿಯಿಂದ ನ್ಯಾಯಯುತ,ನಿಷ್ಪಕ್ಷಪಾತವಾಗಿ ಹಾಗೂ ಇತರರಿಗೆ ಮಾದರಿಯಾಗುವಂತೆ ತಮ್ಮ ಚುನಾವಣಾ ಕಾರ‍್ಯವನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಕರೆ ನೀಡುವ ಮೂಲಕ ಸಿಬ್ಬಂದಿಗಳಲ್ಲಿ ಹುರುಪು ವಿಶ್ವಾಸ ತುಂಬಿದರು.ಜಿಲ್ಲಾಡಳಿತ ಚುನಾವಣಾ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸನ್ನದ್ಧವಾಗಿದೆ.ಆದಕಾರಣ ಸಿಬ್ಬಂದಿಗಳು ಚುನಾವಣೆ ಕಾರ‍್ಯಕ್ಕೆ ಸಂಬಂಧಿಸಿದ ತಮ್ಮ ದೂರುಗಳನ್ನು ದೂರವಾಣಿ ಸಂಖ್ಯೆ 1077 ಕ್ಕೆ ಕರೆಮಾಡಿ ಸಲ್ಲಿಸಬಹುದಾಗಿದೆ.  ಪೋಲೀಸ್ ,ಅರೆಸೇನಾ ಪಡೆ ಇನ್ನಿತರೆ ಸಿಬ್ಬಂದಿಯನ್ನು ರಕ್ಷಣಾ ಕಾರ‍್ಯಕ್ಕೆ ನಿಯೋಜಿಸಿರುವ ಕಾರಣ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಕಾರ‍್ಯದಲ್ಲಿ  ಯಾವುದೇ ಚುನಾವಣಾ ನೀತಿ ಉಲ್ಲಂಘನೆಯಂತಹ ಘಟನೆಗಳು ಕಂಡುಬಂದಲ್ಲಿ ಕೂಡಲೇ 1077 ಕ್ಕೆ ಪೋನ್ ಮೂಲಕ ತಿಳಿಸಲು ಸೂಚಿಸಿದ್ದಲ್ಲದೆ,ಸಿಬ್ಬಂದಿಗಳು ಯಾವ ದಾಕ್ಷಿಣ್ಯಕ್ಕೂ ಒಳಗಾಗದೇ ಆತ್ಮವಿಶ್ವಾಸದಿಂದ ಕಾರ‍್ಯಾಚರಿಸುವಂತೆ ಕರೆ ನೀಡಿದರು. ಚುನಾವಣಾ ಸಿಬ್ಬಂದಿಗಳಿಗೆ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ,ಕುರ್ಚಿಗಳ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾ ಚುನಾವಣಾಧಿಕಾರಿಗಳು,ಮೇ 4 ಹಾಗೂ ಮೇ 5 ರಂದು ಚುನಾವಣಾ ಸಿಬಂದಿಗಳು ಆವಶ್ಯಕತೆ ಇದ್ದರೆ ಊಟ ,ತಿಂಡಿ,ಕಾಫಿ ವ್ಯವಸ್ಥೆ ಮುಂಚಿತವಾಗಿ ಆಯಾ ಮತಗಟ್ಟೆ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ತಿಳಿಸಿದಲ್ಲಿ ವ್ಯವಸ್ಥೆಯನ್ನು ಮಾಡಲಿದ್ದು ಇದರ ವೆಚ್ಚವನ್ನು ಸಿಬ್ಬಂದಿಯ ಚುನಾವನಾ ಕಾರ‍್ಯ ಗೌರವಧನದಲ್ಲಿ ಕಡಿತಗೊಳಿಸಲಾಗುವುದೆಂದರು.ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ದಿನ ಮೇ 4 ರಂದು ಬೆಳಿಗ್ಗೆ 6.30 ಗಂಟೆಗೆ ಸರಿಯಾಗಿ ಮಸ್ಟರಿಂಗ್ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಿರಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಅಂಧ ಮತ್ತು ಅಶಕ್ತ ಮತದಾರರ ಸಹಾಯಕ್ಕಾಗಿ ಜೊತೆಯಲ್ಲಿ ಒಬ್ಬರು ಸಹಾಯಕರನ್ನು ಮತಗಟ್ಟೆಗೆ ಕರೆದೊಯ್ಯಲು ಅವಕಾಶವಿದೆ ಎಂದರು.

ಸಿಬ್ಬಂದಿಗಳಿಗೆ ಮತಗಟ್ಟೆಗಳಲ್ಲಿ ಏನಾದರೂ ಸಣ್ಣಪುಟ್ಟ ಲೋಪಗಳಿದ್ದರೂ ಅವುಗಳನ್ನು ನಿವಾರಿಸಿಕೊಂಡು ಚುನಾವಣಾ ಕಾರ‍್ಯವನ್ನು ಒಮ್ಮತದಿಂದ ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗಳ ಜೊತೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಮಿಕರ ದಿನಾಚರಣೆ:ವಿಧಾನಸಭಾ ಚುನಾವಣೆ:ಆಧಾರ್ ನೋಂದಣಿಗೆ ರಜೆ

ಮಂಗಳೂರು ಎಪ್ರಿಲ್ 29(ಕರ್ನಾಟಕ ವಾರ್ತೆ):-ದಕ್ಷಿಣಕನ್ನಡ ಜಿಲ್ಲೆಯಲ್ಲಿ(ಸುಳ್ಯ ಹೊರತುಪಡಿಸಿ) ’ ಆಧಾರ್ ’ ದ್ವಿತೀಯ ಹಂತದ ನೋಂದಣಿ ಕಾರ‍್ಯ ಯೋಜನೆಯನ್ನು ಅನುಷ್ಟಾನಗೊಳಿಸುವರೇ ಒಟ್ಟು 15 ಕೇಂದ್ರಗಳಲ್ಲಿ  ಕಾರ್ಯಾಚರಿಸುತ್ತಿದ್ದು,ಮಂಗಳೂರು ಮಹಾನಗರಪಾಲಿಕೆ  ವಾಣಿಜ್ಯ ಸಂಕೀರ್ಣ,ಲಾಲ್‌ಭಾಗ್ ,ಮಹಾನಗರಪಾಲಿಕೆ ವಾಣಿಜ್ಯ ಸಂಕೀರ್ಣ ಕದ್ರಿ ಮಲ್ಲಿಕಟ್ಟೆ ,ಸಮುದಾಯ ಭವನ  ಪೆರ್ಮನ್ನೂರು,ಸಮುದಾಯ ಭವನ ಉಳ್ಳಾಲ ಮತ್ತು ಕಾರ್ನಾಡ್ ಸದಾಶಿವ ರಾವ್ ಸ್ಮಾರಕ ಕಟ್ಟಡ,ಲೈಟ್ ಹೌಸ್ ಹಿಲ್ ರಸ್ತೆ,ಮಹಾನಗರಪಾಲಿಕೆ ಉಪ ಕಚೇರಿ ಸುರತ್ಕಲ್,ಐಬಿ ನಾಡ ಕಚೇರಿ ಬಳಿ,ಮೂಡಬಿದ್ರೆ,ಹಳೆ ತಾಲೂಕು ಪಂಚಾಯತ್ ಕಚೇರಿ ಕಟ್ಟಡ,ಬಿ.ಸಿ ರೋಡ್,ಸಮುದಾಯ ಭವನ ಪುತ್ತೂರು,ಎಂಆರ್‌ಪಿಎಲ್ ಕುತ್ತೆತ್ತೂರು,ಸುರತ್ಕಲ್ ಮತ್ತು ಪಂಚಾಯತ್ ಕಚೇರಿ ವಿಟ, ಗ್ರಾಮ ಪಂಚಾಯತ್ ಕಚೇರಿ ಪುದು,ಗ್ರಾಮ ಪಂಚಾಯತ್ ಉಪ್ಪಿನಂಗಡಿ,ಪಟ್ಟಣ ಪಂಚಾಯತ್ ಬೆಳ್ತಂಗಡಿ ಮತ್ತು ಧರ್ಮಸ್ಥಳ ಪಂಚಾಯತ್‌ಗಳಲ್ಲಿ ದ್ವಿತೀಯ ಹಂತದ ಆಧಾರ್ ನೋಂದಣಿ ಕಾರ‍್ಯ ಪ್ರಗತಿಯಲ್ಲಿದೆ.

ದಿನಾಂಕ 1-5-13 ರಂದು ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮತ್ತು 5-5-13 ರಂದು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ  ಆಧಾರ್ ಕೇಂದ್ರಗಳಿಗೆ ರಜೆ ಇರುತ್ತದೆ. ಆದ್ದರಿಂದ ಆಧಾರ್ ಕೇಂದ್ರಗಳು ಕಾರ‍್ಯ ನಿರ್ವಹಿಸುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ. ಇತರ ದಿನಗಳಲ್ಲಿ ಸಾರ್ವಜನಿಕರು ಎಂದಿನಂತೆ ಆಯಾಯ ಕೇಂದ್ರಗಳಲ್ಲಿ ಹಾಜರಾಗಿ ನೋಂದಣಿ ಮಾಡಿಸಿಕೊಳ್ಳಬಹುದೆಂದು ದಕ್ಷಿಣಕನ್ನಡ ಅಪರ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.

ಎನ್‌ಇಟಿ ಅರ್ಹತಾ ಪರೀಕ್ಷೆ ತರಬೇತಿ

ಮಂಗಳೂರು ಎಪ್ರಿಲ್ 29(ಕರ್ನಾಟಕ ವಾರ್ತೆ):-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ನವದೆಹಲಿಯ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದವರು ಬರುವ ಜೂನ್ 30 ರಂದು ನಡೆಸಲಿರುವ ಕಿರಿಯ ಶಿಷ್ಯ ವೇತನ ಸಂಶೋಧನಾ ಸಹಾಯಕರ ಹಾಗೂ ಕಾಲೇಜು ಉಪನ್ಯಾಸಕರ ರಾಷ್ಟ್ರ ಮಟ್ಟದ ತರಬೇತಿ ಮತ್ತು ಕನ್ನಡ ವಿಷಯ ಮತ್ತು ಇತರ ಆಯ್ದ ವಿಷಯಗಳಿಗೆ ಜೆಆರ್‌ಎಫ್‌ಗಾಗಿ 45 ದಿನಗಳ ವಿಶೇಷ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಆಸಕ್ತರು ದಿನಾಂಕ 4-5-13 ರೊಳಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

ಕಾಣೆಯಾಗಿದ್ದಾರೆ

ಮಂಗಳೂರು ಎಪ್ರಿಲ್ 29(ಕರ್ನಾಟಕ ವಾರ್ತೆ):-ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ವಿದ್ಯಾನಗರ ಮನೆ ನಿವಾಸಿಉದಯಕುಮಾರ್‌ರವರ ಪತ್ನಿ ಶ್ರೀಮತಿ ಲಲಿತ ದಿನಾಂಕ 26-4-13 ರಂದು ನೀಡಿದ ದೂರಿನನ್ವಯ ಅವರ ಗಂಡ 41 ವರ್ಷದ ಉದಯಕುಮಾರ್ ದಿನಾಂಕ 25-4-13 ರಂದು ಕೆಲಸ ಮುಗಿಸಿ ಮನೆಗೆ ಬಂದವರು ರಾತ್ರಿ 9 ಗಂಟೆಗೆ ಊಟ ಮುಗಿಸಿ ಅಂಗಡಿಗೆ ಹೋಗಿಬರುತ್ತೇನೆಂದು ಹೇಳಿ ಹೋದವರು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಉದಯಕುಮಾರ್ 168 ಸೆಂ.ಮೀ.ಎತ್ತರವಿದ್ದು,ಎಣ್ಣೆ ಕಪ್ಪು ಮೈಬಣ್ಣ ,ಸಾಧಾರಣ ಶರೀರ,ಕನ್ನಡ ,ತುಳು ಮಾತನಾಡುವ ಇವರು ಕಾಣೆಯಾದಾಗ ನೀಲಿ ಬಣ್ಣದ ಅಂಗಿ ಮತ್ತು ಹಸಿರು ಕಪ್ಪು ಮಿಶ್ರಿತ ಚೌಕ ಗೆರೆಯ ಪಂಚೆ ಧರಿಸಿರುತ್ತಾರೆ. ಕಂಡವರು ಉಪ್ಪಿನಂಗಡಿ ಠಾಣೆ 08251-251055 ಜಿಲ್ಲಾ ನಿಸ್ತಂತು ವಿಭಾಗ 0824-2220500 ಸಂಪರ್ಕಿಸಿ ತಿಳಿಸಬಹುದಾಗಿದೆ.

ಗೆಸ್ಟ್ ಫ್ಯಾಕಲ್ಟಿ ನೆಲೆಯಲ್ಲಿ ನೇಮಕಾತಿ

ಮಂಗಳೂರು ಎಪ್ರಿಲ್ 29(ಕರ್ನಾಟಕ ವಾರ್ತೆ):- ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದ ಸೈಬರ್ ಲ್ಯಾಬ್‌ನ ಕೆಲಸ ಕಾರ‍್ಯಗಳನ್ನು ನಿರ್ವಹಿಸಲು ಇಬ್ಬರು ಗೆಸ್ಟ್ ಫ್ಯಾಕಲ್ಟಿಯ ಆವಶ್ಯಕತೆ ಇದ್ದು, ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಮತ್ತು ಪಿಜಿಡಿಸಿಎ ಅರ್ಹತೆ ಹೊಂದಿದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ,ಪ್ರವರ್ಗ,ಅನುಭವ,ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳುಳ್ಳ ಅರ್ಜಿ ಹಾಗೂ ಮೂಲ ಶೈಕ್ಷಣಿಕ ದಾಖಲೆಗಳೊಂದಿಗೆ ದಿನಾಂಕ 9-5-13 ರ ಬೆಳಿಗ್ಗೆ 10.30 ಗಂಟೆಗೆ ಕುಲ ಸಚಿವರ ಕಚೇರಿ,ಆಡಳಿತ ಸೌಧ,ಮಂಗಳೂರು ವಿಶ್ವವಿದ್ಯಾನಿಲಯ ,ಮಂಗಳಗಂಗೋತ್ರಿ ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ವಿವರವನ್ನು ವೆಬ್‌ಸೈಟ್ www.mangaloreuniversity.ac.in ನಿಂದಲೂ ಪಡೆಯಬಹುದು.