District News 29-07-2013

Monday, July 29th, 2013

ಜಿಲ್ಲಾ ವರದಿಗಳು

Date: 29-07-2013

ಯಶಸ್ವಿನಿ ನೊಂದಣಿಗೆ 10 ರೂ. ವಂತಿಗೆ

ಚಿತ್ರದುರ್ಗ,ಜುಲೈ.29: ಪ್ರಸಕ್ತ ಸಾಲಿನಲ್ಲಿ ಸಹಕಾರಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು 10 ರೂ.ಗಳ ವಂತಿಗೆಯನ್ನು ಪಾವತಿಸಿ ಸಹಕಾರ ಸಂಘಗಳಲ್ಲಿ ನೊಂದಾಯಿಸಬಹುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಓಬಾನಾಯಕ ತಿಳಿಸಿದ್ದಾರೆ.
ಈ ಹಿಂದೆ ಎಸ್.ಸಿ., ಎಸ್.ಟಿ. ಸದಸ್ಯರಿಂದ ಯಶಸ್ವಿನಿಗೆ 210 ರೂ.ಗಳ ವಂತಿಗೆಯನ್ನು ಪಡೆಯಲಾಗುತ್ತಿದ್ದು ಇದರ ಬದಲಾಗಿ 10 ರೂ.ಗಳ ವಂತಿಗೆಯನ್ನು ಪಾವತಿಸಬೇಕು. ಉಳಿದ 200 ರೂ.ಗಳ ವಂತಿಗೆಯನ್ನು ಯಶಸ್ವಿನಿ ಟ್ರಸ್ಟ್ ವತಿಯಿಂದಲೇ ಭರಿಸಲಾಗುತ್ತದೆಂದು ತಿಳಿಸಲಾಗಿದೆ.

ವೃತ್ತಿ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ,ಜುಲೈ.29: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಐ.ಟಿ.ಐ. ಡಿಪ್ಲೊಮಾ, ಇಂಜಿನಿಯರಿಂಗ್ ಉತ್ತೀರ್ಣರಾದ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ವಿವಿಧ ವೃತ್ತಿಗಳಲ್ಲಿ 6 ತಿಂಗಳ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯನ್ನು ಮೈಸೂರಿನಲ್ಲಿನ ಕೇಂದ್ರ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯಲ್ಲಿ ಉಚಿತ ಊಟ, ವಸತಿ ಕಲ್ಪಿಸುವ ಮೂಲಕ ನೀಡಲಾಗುತ್ತದೆ. ಎಸ್.ಎಸ್.ಎಲ್.ಸಿ. ಉತ್ತೀರ್ಣರಾದವರಿಗೆ ಪ್ಲಾಸ್ಟಿಕ್ ಪ್ರೋಸಸಿಂಗ್, ಮಷಿನ್ ಆಪರೇಟಿಂಗ್ ಹಾಗೂ ಮೋಲ್ಡ್ ಮೇಕಿಂಗ್ ಟೆಕ್ನಾಲಜಿ, ಪಿ.ಯು.ಸಿ., ಐ.ಟಿ.ಐ. ಪದವಿ ಪಾಸಾದವರಿಗೆ ಇಂಜೆಕ್ಷನ್ ಮೋಲ್ಡಿಂಗ್ ಮಷಿನ್ ಆಪರೇಷನ್ ಮತ್ತು ನಿರ್ವಹಣೆ, ಐ.ಟಿ.ಐ, ಡಿಪ್ಲೊಮಾದವರಿಗೆ ಸಿಎನ್‌ಸಿ ಮಷಿನ್ ಪ್ರೋಗ್ರಾಮ್ ಮತ್ತು ಆಪರೇಷನ್ ಹಾಗೂ ಡಿಪ್ಲೊಮಾ, ಇಂಜಿನಿಯರಿಂಗ್ ಪಾಸಾದವರಿಗೆ ಸಿಎಡಿ, ಸಿಎಎಂ ಅಪ್ಲಿಕೇಷನ್ ಇನ್ ಪ್ಲಾಸ್ಟಿಕ್ ಪ್ರಾಡಕ್ಟ್ ಡಿಸೈನ್ ಕೋರ್ಸ್‌ನಲ್ಲಿ ತರಬೇತಿ ನೀಡಲಾಗುತ್ತದೆ.

ಅರ್ಜಿಗಳನ್ನು www.kbcwd.in ವೆಬ್‌ಸೈಟ್‌ನಿಂದ ಪಡೆದು ಆಗಸ್ಟ್ 8 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಡಿ.ದೇವರಾಜ ಅರಸು ಭವನ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ ಇಲ್ಲಿಗೆ ಸಲ್ಲಿಸಲು ಬಿ.ಸಿ.ಎಂ. ಜಿಲ್ಲಾಧಿಕಾರಿ ಆರ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಅಂಗನವಾಡಿ ಖರೀದಿ ಅವ್ಯವಹಾರ: ತಪ್ಪಿತಸ್ಥರ ವಿರುದ್ಧ ಕ್ರಮ ಜಾರಿ

ಕಾರವಾರ, ಜುಲೈ 29: ಯಲ್ಲಾಪುರ ತಾಲೂಕಿನ ಅಂಗನವಾಡಿಗಳಿಗೆ ಸಾಮಾಗ್ರಿ ಖರೀದಿಯಲ್ಲಿ ನಡೆಸಲಾಗಿದ್ದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಾಯ ಕಾಮತ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಭಾ ಬಿ.ಗೌರಿ, ಮಹಿಳಾ ಮೇಲ್ವಿಚಾರಕಿ, ದೇನ್ಯಾ ನಾಯ್ಕ ಪ್ರಥಮ ದರ್ಜೆ ಸಹಾಯಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಯಲ್ಲಾಪುರ ಅವರನ್ನು ಅಮಾನತುಗೊಳಿಸಿ ಆದೇಶ ಜಾರಿಗೊಳಿಸಲಾಗಿದೆ. ಅಂದಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಟಿ.ಕೆ.ಗೌಡ ಅವರು ನಿವೃತ್ತರಾಗಿ ಎರಡು ವರ್ಷ ಸಂದಿರುವುದರಿಂದ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಇವರಿಗೆ ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಜುಲೈ 26ರಂದು ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದರಿ ವಿಷಯವನ್ನು ಪ್ರಸ್ತಾಪಿಸಿದ್ದ ಸುಬ್ರಾಯ ಭಟ್ ಜಿಲ್ಲಾ ಪಂಚಾಯತ್ ಸದಸ್ಯರು ಮಂಚಿಕೇರಿ ಅವರು, ತಪ್ಪಿತಸ್ಥರ ವಿರುದ್ಧ 2012ರ ಮಾರ್ಚ್ ತಿಂಗಳಲ್ಲಿ ಅಮಾನತು ಆದೇಶ ಹೊರಡಿಸಲಾಗಿದ್ದರೂ, ಇನ್ನೂ ಜಾರಿಯಾಗದಿರುವುದನ್ನು ಆಕ್ಷೇಪಿಸಿದ್ದರು. ತನಿಖೆಯಿಂದ ರುಜುವಾತಾದ ಆರೋಪಗಳ ಹಿನ್ನೆಲೆಯಲ್ಲಿ ಮಾಡಲಾಗಿರುವ ಅಮಾನತು ಆದೇಶಗಳು ಸುಮಾರು ಒಂದುವರೆ ವರ್ಷ ಕಳೆದರೂ ಜಾರಿಯಾಗದಿರುವ ಬಗ್ಗೆ ಅಂದಿನ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಸಭೆಯಲ್ಲಿ ಸ್ಪಷ್ಟೀಕರಣ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಅಮಾನತು ಆದೇಶಗಳನ್ನು ಜಾರಿಗೊಳಿಸದಿರುವ ಬಗ್ಗೆ ಅಂದಿನ ಉಪನಿರ್ದೇಶಕರಿಗೆ ಪತ್ರ ಮುಖೇನ ಮಾಹಿತಿ ಕೋರಲಾಗಿತ್ತು. ಎಲ್ಲಾ ದಾಖಲೆಗಳು ಕಾರವಾರ ಕಚೇರಿಯಲ್ಲಿಯೇ ಇದ್ದು ತಾನು ಕೊಂಡೊಯ್ದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಜುಲೈ 27ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದಾಗ 2012ರ ಮಾರ್ಚ್ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯದಿಂದ ಹೊರಡಿಸಲಾದ ಅಮಾನತು ಆದೇಶಗಳು ಕಚೇರಿಯ ಒಂದು ಅಲ್ಮೇರಾದಲ್ಲಿರುವ 2012ನೇ ಸಾಲಿನ ಸರ್ಕಾರಿ ಡೈರಿಯಲ್ಲಿ ಸಿಕ್ಕಿರುತ್ತದೆ. ಅದರಲ್ಲಿ ಅಂದಿನ ಉಪನಿರ್ದೇಶಕರ ಸ್ವೀಕೃತಿ ಇರುತ್ತದೆ ಎಂದು ಕಾಮತ್ ಹೇಳಿದ್ದಾರೆ.

ಜುಲೈ 27ರಂದು ಪತ್ತೆಯಾದ ಅಮಾನತು ಆದೇಶ ಪತ್ರಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಜುಲೈ 29ರಂದು ಪರಿಶೀಲಿಸಿ ಅವಶ್ಯ ಕ್ರಮ ಜರುಗಿಸಲು ಕೋರಿ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ಕೋರ್ಸ್‌ಗಳಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಬೆಳಗಾವಿ:ಜುಲೈ:29:(ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ನಿರುದ್ಯೋಗಿ ಮಹಿಳಾ ಹಾಗೂ ಪುರುಷ ಅರ್ಹ ಅಭ್ಯರ್ಥಿಗಳಿಗೆ ಸೆಂಟ್ರಲ್ ಇನ್ಸಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ ಇಂಜೀನಿಯರಿಂಗ್ ಆಂಡ ಟೆಕ್ನಾಲಜಿ, ಮೈಸೂರಿನ (ಭಾರತ ಸರ್ಕಾರದ ಸಂಸ್ಥೆ) ಮೂಲಕ ಈ ಕೆಳಕಂಡ ಕೋರ್ಸಗಳಲ್ಲಿ ಉಚಿತ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ಲಾಸ್ಟೀಕ್ ಪ್ರೋಸೆಸಿಂಗ್ ಮಷಿನ ಆಪರೇಶನ್ ಹಾಗೂ ಮೌಲ್ಡ ಮೇಕಿಂಗ್ ಟೆಕ್ನಾಲಜಿ ಕೋರ್ಸ್‌ಗಳಿಗೆ ತರಬೇತಿ ಪಡೆಯಲು ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಇಂಜೇಕ್ಷನ್ ಮೌಲ್ಡಿಂಗ್ ಮಷಿನ್ ಆಪರೇಶನ್/ಮೆಂಟೆನೆನ್ಸ ತರಬೇತಿ ಪಡೆಯಲು ಪಿ.ಯು.ಸಿ/ಆಯ್.ಟಿ.ಆಯ್(ಎಲೆಕಟ್ರೀಶಿಯನ್) ಡಿಗ್ರಿ ಪಾಸಾಗಿರಬೇಕು. ಸಿ.ಎನ್.ಸಿ ಮಷಿನ್ ಪ್ರೋಗ್ರಾಮಿಂಗ್/ ಆಪರೇಶನ್ ತರಬೇತಿ ಪಡೆಯಲು ಆಯ್.ಟಿ.ಆಯ್ (ಫೀಟರ್/ ಟೂರನರ್/ ಮೇಕ್ಯಾನಿಸ್ಟ್)/ಡಿಪ್ಲೋಮಾ ಇನ್ ಟೂಲ್/ ಡೈ ಮೈಕಿಂಗ್ ಪಾಸಾಗಿರಬೇಕು. ಸಿಎಡಿ/ಸಿಎಎಮ್/ಅಪ್ಲೀಕೇಶನ್ಸ್ ಇನ್ ಪ್ಲಾಸ್ಟೀಕ್ಸ್ನ ಪ್ರೋಡಕ್ಟ ಡಿಸೈನ್ ತರಬೇತಿ ಪಡೆಯಲು ಡಿಪ್ಲೋಮಾ/ಬಿ.ಇ ಇನ್ ಮೇಕ್ಯಾನಿಕಲ್/ ಇಂಡಸ್ಟ್ರೀಯಲ್ ಪ್ರೋಡಕ್ಷನ್/ ಪಾಲಿಮರ/ ಆಟೋಮೊಬೈಲ್/ ಆಯ್.ಟಿ.ಆಯ್ (ಡ್ರಾಪ್ಟ್ಸಮನ್) ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ತರಬೇತಿ ಅವಧಿ 6 ತಿಂಗಳದಾಗಿರುತ್ತದೆ.

ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 8 ರೊಳಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗಳಲ್ಲಿ ಮೂಲ ದಾಖಲಾತಿಗಳ ಪರಿಶೀಲನೆಯು ಆಗಸ್ಟ್ 21 ಹಾಗೂ 22 ರಂದು ಮಾಡಲಾಗುವುದು.

ಈ ಇಲಾಖೆಯ ವೆಬ್‌ಸೈಟ್ ವಿಳಾಸ www.kbcwd.in ನಲ್ಲಿ ದಿನಾಂಕ 27-8-2013 ರಂದು ಪ್ರಕಟವಾಗುವ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಕೋರ್ಸವಾರು ನಿಗಧಿಪಡಿಸಿದ ವಿದ್ಯಾರ್ಹತೆಯ ಮೂಲ ಅಂಕಪಟ್ಟಿ ಮತ್ತು ಮುಚ್ಚಳಿಕೆ ಪ್ರಮಾಣ ಪತ್ರದೊಂದಿಗೆ CIPET. ಮೈಸೂರು ಸಂಸ್ಥೆಗೆ ತರಬೇತಿಗಾಗಿ ಹಾಜರಾಗಬೇಕಾದ ದಿನಾಂಕ 2-9-2013 (ಮುಚ್ಚಳಿಕೆ ಪ್ರಮಾಣ ಪತ್ರದ ಮಾದರಿಯನ್ನು ಇಲಾಖಾ ವೆಬ್‌ಸೈಟನಲ್ಲಿ ಪ್ರಕಟಿಸಲಾಗುವುದು).

ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಳಗಾವಿ ಇವರ ಕಛೇರಿಯಿಂದ ಅಥವಾ ಇಲಾಖೆಯಯ ವೆಬಸೈಟ್ ವಿಳಾಸ www.kbcwd.in ನಲ್ಲಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0831-2407247 ಗೆ ಸಂಪರ್ಕಿಸಬೇಕೆಂದು ಬೆಳಗಾವಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸಲು ಜಿಲ್ಲಾಡಳಿತದಿಂದ ಪರ‍್ಯಾಯ ವ್ಯವಸ್ಥೆ

ಗದಗ(ಕರ್ನಾಟಕ ವಾರ್ತೆ) ಜುಲೈ 29 : ಗದಗ ಜಿಲ್ಲೆಯಲ್ಲಿ 108 ಆರೋಗ್ಯ ಕವಚ ಅಂಬ್ಯೂಲೆನ್ಸ್ ವಾಹನಗಳ ಸಿಬ್ಬಂದಿ ವರ್ಗದವರು ತಮ್ಮ ವಿವಿಧ ಬೇಡಿಕೆಗಳ ಇತ್ಯರ್ಥಕ್ಕಾಗಿ ಮುಷ್ಕರದ ಮೇಲೆ ಇದ್ದು ಈ ದಿಶೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತವು ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 10 - 108 ಆರೋಗ್ಯ ಕವಚ ಅಂಬ್ಯೂಲೆನ್ಸ್ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳನ್ನು ಆರೋಗ್ಯ ಇಲಾಖೆಯ ಸುಪರ್ಧಿಗೆ ಪಡೆದುಕೊಂಡು ಅವುಗಳ ನಿರ್ವಹಣೆಗಾಗಿ ಕೆ.ಎಸ್.ಆರ್.ಟಿ.ಸಿ. ವತಿಯಿಂದ 10 ವಾಹನ ಚಾಲಕರ ಸೇವೆ ಹಾಗೂ ಆರೋಗ್ಯ ಇಲಾಖೆಯಿಂದ 10 ವಾಹನ ಚಾಲಕರ ಸೇವೆ ಹಾಗೂ 20 ಶುಶ್ರೂಷಕಿಯನ್ನು ಆರೋಗ್ಯ ಇಲಾಖೆಯಿಂದ ನಿಯೋಜನೆ ಮಾಡಿ ಸಾರ್ವಜನಿಕರಿಗೆ ವೈದ್ಯಕೀಯ ಸೇವೆಯ ಸೌಲಭ್ಯಗಳನ್ನು ನೀಡುವಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಇದರಿಂದಾಗಿ ಸಾರ್ವಜನಿಕರು ಯಾವುದೇ ಭಯ-ಭೀತಿಯನ್ನು ಹೊಂದುವ ಅವಶ್ಯಕತೆ ಇರುವದಿಲ್ಲವೆಂದು ಮಾನ್ಯ ಜಿಲ್ಲಾಧಿಕಾರಿಗಳು ಗದಗ ಜಿಲ್ಲೆ ಗದಗ ಇವರು ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ದಿನಾಂಕ : 28-07-2013ರಂದು 28 ಪ್ರಕರಣಗಳಿಗೆ ಹಾಗೂ 29-07-2013ರಂದು 27 ಪ್ರಕರಣಗಳಿಗೆ ತುರ್ತು ಚಿಕಿತ್ಸಾ ಸೇವಾ ಸೌಲಭ್ಯವನ್ನು ಒದಗಿಸಲಾಗಿರುತ್ತದೆ ಎಂದು ತಿಳಿಸಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಧಿಕೃತ ಗೈರುಹಾಜರಿ : ಸೇವೆಯಿಂದ ಗ್ರಾಮಲೆಕ್ಕಿಗ ವಜಾ

ಚಾಮರಾಜನಗರ, ಜುಲೈ 29 (ಕರ್ನಾಟಕ ವಾರ್ತೆ):- ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ವೃತ್ತದ ಗ್ರಾಮಲೆಕ್ಕಿಗರಾದ ಹೆಚ್. ಮಾದೇಶ್ ಅವರನ್ನು ಅನಧಿಕೃತ ಗೈರು ಹಾಜರಿ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರು ಆದೇಶ ಹೊರಡಿಸಿದ್ದಾರೆ.

ಮಾದೇಶ್ ಅವರು 2009ರ ಏಪ್ರಿಲ್ 5 ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿ ಸರ್ಕಾರಿ ಹುದ್ದೆಯ ನಿರ್ಲಕ್ಷತೆ ತೋರಿದ್ದಾರೆ. ಇದರಿಂದ ದೈನಂದಿನ ಸಾರ್ವಜನಿಕರ ಕೆಲಸಕಾರ್ಯಗಳಿಗೆ ತೊಂದರೆಯಾಗಿದೆ. ಗೈರುಹಾಜರಿಗೆ ಕಾರಣ ಕೇಳಿ ಕಳುಹಿಸಲಾಗಿದ್ದ ನೋಟೀಸುಗಳನ್ನು ಸ್ವೀಕರಿಸಿದ್ದರೂ ಯಾವುದೇ ಲಿಖಿತ ಸಮಜಾಯಿಸಿ ನೀಡಿಲ್ಲ. ಮಾದೇಶ್ ರವರಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಉತ್ತರವನ್ನು ನೀಡದೆ ಇರುವುದರಿಂದ ಅರೋಪವನ್ನು ನೌಕರನು ಒಪ್ಪಿಕೊಂಡಂತಾಗಿದೆ. ಅಲ್ಲದೆ ನೌಕರರ ವಿಚಾರಣಾ ವರದಿಯಲ್ಲೂ ಆರೋಪ ಸಾಬೀತಾಗಿರುವುದರಿಂದ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳನ್ವಯ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿ: 39 ಗ್ರಾಮಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ವಿಶೇಷ ಸಭೆ

ಬೆಳಗಾವಿ:ಜುಲೈ:29:(ಕರ್ನಾಟಕ ವಾರ್ತೆ): ಪ್ರತಿವರ್ಷ ಪ್ರವಾಹದಿಂದ ತೊಂದರೆಗೊಳಗಾಗಿರುವ 39 ಗ್ರಾಮಗಳನ್ನು ಸ್ಥಳಾಂತರಿಸಿ ಶಾಶ್ವತ ಪುನರ್ವಸತಿ ಕಲ್ಪಿಸುವ ಕುರಿತು ಪ್ರಸಕ್ತ ವಿಧಾನ ಮಂಡಲದ ಅಧಿವೇಶನ ಮುಗಿದ ನಂತರ ವಿಶೇಷ ಸಭೆ ನಡೆಸಿ ಯೋಜನೆವೊಂದನ್ನು ಸಿದ್ಧಪಡಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಖಾತೆ ಸಚಿವರಾದ ಶ್ರೀ. ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಕುಡಚಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಪ್ರತಿವರ್ಷ ಪ್ರವಾಹ ಬಂದಾಗ 39 ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದೆ. ಕಳೆದ 10 ವರ್ಷಗಳಿಂದ ಈ ಗ್ರಾಮಸ್ಥರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಯೋಜನೆ ನೆನೆಗುದ್ದಿಗೆ ಬಿದ್ದಿದೆ. ಪ್ರಸಕ್ತ ವಿಧಾನಮಂಡಲ ಅಧಿವೇಶನ ನಂತರ ಸ್ಥಳೀಯ ಶಾಸಕರೊಂದಿಗೆ ವಿಶೇಷ ಸಭೆ ನಡೆಸಿ ಈ ಗ್ರಾಮಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗುವುದೆಂದು ತಿಳಿಸಿದರು.

ಅದರಂತೆ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕಿನ 17 ಬ್ಯಾರೇಜ್ ಹಾಗೂ ರಸ್ತೆಗಳನ್ನು ಸಹ ಮೇಲ್ದರ್ಗೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರದಿಂದ ಅನುದಾನ ಪಡೆಯಲಾಗುವುದೆಂದು ತಿಳಿಸಿದರು.

ಜಿಲ್ಲೆಯಲ್ಲಿ 2005 ರಲ್ಲಿ ಬಂದ ಪ್ರವಾಹಕ್ಕೆ ಹೋಲಿಸಿದಾಗ ಪ್ರಸಕ್ತ ವರ್ಷದ ಪ್ರವಾಹ ಅಷ್ಟೊಂದು ಗಂಭೀರವಾಗಿಲ್ಲ. ಈಗ ಮಹಾರಾಷ್ಟ್ರದಿಂದ ಬಿಡಲಾಗುತ್ತಿರುವ ನೀರಿನ ಪ್ರವಾಣವು ಕಡಿಮೆಯಾಗಿರುವ ಜೊತೆಗೆ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈಗ ಮಹಾರಾಷ್ಟ್ರದಿಂದ 2.10 ಲಕ್ಷ ಕ್ಯೂಸೆಕ್ಸ್ ನೀರು ಬೀಡಲಾಗುತ್ತಿದ್ದು, ಆಲಮಟ್ಟಿ ಜಲಾಶಯದಿಂದ 2.30 ಲಕ್ಷ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ ಎಂದು ಹೇಳಿದ ಅವರು 2-3 ದಿನಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಬರುವದೆಂದು ಹೇಳಿದರು.

ಪ್ರವಾಹದಿಂದ ಅಥಣಿ ತಾಲೂಕಿನ ಬಣಜವಾಡ ಗ್ರಾಮದ 20 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಕುಟುಂಬದವರಿಗೆ ಗಂಜಿ ಕೇಂದ್ರವನ್ನು ಸಹ ಪ್ರಾರಂಭಿಸಲಾಗಿದೆ. ಪ್ರವಾಹಕ್ಕೆ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಹಾಗೂ ಜನ, ಜಾನುವಾರುಗಳ ಜೀವ ರಕ್ಷಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಮುಂದು ಪ್ರವಾಹದಿಂದ ಬೆಳೆಹಾನಿ ಹಾಗೂ ಇತರೆ ಹಾನಿಗಳ ಬಗ್ಗೆ ನೀರು ಇಳಿಮುಖವಾದ ನಂತರ ಸಮೀಕ್ಷೆ ನಡೆಸಲಾಗುವುದು. ಬೆಳೆಹಾನಿಯಾದ ರೈತರಿಗೆ ಅವಶ್ಯಕ ಪರಿಹಾರವನ್ನು ಸಹ ನೀಡಲಾಗುವುದು. ಪ್ರವಾಹ ಪರಿಹಾರ ಕಾರ್ಯಕ್ರಮಗಳಿಗೆ ಹಣಕಾಸಿನ ತೊಂದರೆಯಿಲ್ಲ. ಅವಶ್ಯಬಿದ್ದರೆ ಸರ್ಕಾರ ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲು ಸಿದ್ಧವಿದೆ ಎಂದು ಸಚಿವ ಶ್ರೀ. ಜಾರಕಿಹೊಳಿ ಅವರು ಹೇಳಿದರು.

ಪರಿಹಾರ ಚೆಕ್ ವಿತರಣೆ:- ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದಲ್ಲಿ ಮನೆ ಬಿದ್ದು ಪ್ರಾಣ ಕಳೆದುಕೊಂಡ ಶ್ರೀಮತಿ. ನಿಂಗವ್ವ ನಿಂಗಪ್ಪ ಬಾಳೊಬಾಳ ಹಾಗೂ ಕು. ಲಕ್ಷ್ಮೀ ರಾಮಕೃಷ್ಣ ಧನಗರ ಅವರ ಕುಟುಂಬಗಳಿಗೆ ಇಂದು ತಲಾ 1.50 ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ಸಚಿವರು ನೀಡಿದರು.

ಮೃತ ನಿಂಗವ್ವಳ ಪತಿ ಶ್ರೀ. ನಿಂಗಪ್ಪ ಬಾಳೊಬಾಳ ಹಾಗೂ ಮೃತ ಕು. ಲಕ್ಷ್ಮೀ ಅವರ ತಂದೆ ರಾಮಕೃಷ್ಣ ಧನಗರ ಅವರು ಸಚಿವರಿಂದ ಪರಿಹಾರದ ಚೆಕ್ಕನ್ನು ಪಡೆದರು. ಇದೇ ಸಂದರ್ಭದಲ್ಲಿ ಸಂಪೂರ್ಣವಾಗಿ ಮನೆ ಕುಸಿದು ಬಿದ್ದಿದ್ದರಿಂದ ಶ್ರೀ. ನಿಂಗಪ್ಪ ಬಾಳೊಬಾಳ ಅವರಿಗೆ 15 ಸಾವಿರ ರೂ.ಗಳ ಚೆಕ್ಕನ್ನು ಸಹ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಚಿವರೊಂದಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ. ಶಾಂತಾ ಕೃಷ್ಣಾ ಕಲ್ಲೋಳಿಕರ, ಜಿಲ್ಲಾಧಿಕಾರಿ ಶ್ರೀ.ಎನ್. ಜಯರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಚಂದ್ರಗುಪ್ತ ಹಾಗೂ ಇತರ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥತರಿದ್ದರು.

ಸಚಿವರು ಇಂದು ಅಥಣಿ, ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಅಧ್ಯಯನ ನಡೆಸಿ ಸಂತ್ರಸ್ಥರಿಗೆ ನೀಡಲಾಗುವ ಪರಿಹಾರದ ಕುರಿತು ಚರ್ಚೆ ನಡೆಸಿದರು.

ಸೇತುವೆಗಳ ಜಲಾವೃತ:- ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ 20 ಬ್ಯಾರೇಜುಗಳು ಜಲಾವೃತಗೊಂಡಿವೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಬ್ರಿಡ್ಜ್ (ಕೃಷ್ಣಾ ನದಿ), ಸದಲಗಾ-ಬೋರಗಾಂವ ಬ್ರಿಡ್ಜ್ (ವೇದಗಂಗಾ+ದೂಧಗಂಗಾ), ಕಾರದಗಾ-ಭೋಜ ಬ್ರಿಡ್ಜ್ (ವೇದಗಂಗಾ+ಧೂದಗಂಗಾ ನದಿ), ಭೋಜವಾಡಿ-ಕುನ್ನೂರ ಬ್ರಿಡ್ಜ್ (ವೇದಗಂಗಾ), ಸಿದ್ನಾಳ-ಅಕ್ಕೋಳ ಬ್ರಿಡ್ಜ್ (ವೇದಗಂಗಾ ನದಿ), ಜತ್ರಾಟ-ಭೀವಶಿ ಬ್ರಿಡ್ಜ್ (ವೇದಗಂಗಾ ನದಿ), ಮಲಿಕವಾಡ-ದತ್ತವಾಡ ಬ್ರಿಡ್ಜ್ (ದೂಧಗಂಗಾ ನದಿ), ಎಕ್ಸಂಬಾ-ದಾನವಾಡ ಸೇತುವೆ (ಕೃಷ್ಣಾ ನದಿ), ರಾಯಬಾಗ ತಾಲೂಕಿನ ಕುಡಚಿ ಸೇತುವೆ (ಕೃಷ್ಣಾ ನದಿ), ಚಿಂಚಲಿ ಸೇತುವೆ (ಕೃಷ್ಣಾ ನದಿ), ಶಿರಗೂರ-ಪರಮಾನಂದವಾಡಿ ರಸ್ತೆ (ಕೃಷ್ಣಾ ನದಿ), ಸಿದ್ದಾಪೂರ-ಸಪ್ತಸಾಗರ ರಸ್ತೆ (ಕೃಷ್ಣಾ ನದಿ), ಸಿದ್ಧಾಪೂರ-ಖೇಮಲಾಪೂರ ರಸ್ತೆ (ಕೃಷ್ಣಾ ನದಿ), ಖೇಮಲಾಪೂರ-ಶಿರಗೂರ ರಸ್ತೆ (ಕೃಷ್ಣಾ ನದಿ), ಶಿರಗೂರ-ಪರಮಾನಂದವಾಡಿ (ಕೃಷ್ಣಾ ನದಿ), ಅಥಣಿ ತಾಲೂಕಿನ ಉಗಾರಖುರ್ದ-ಉಗಾರ ಬಿ.ಕೆ. ರಸ್ತೆ (ಕೃಷ್ಣಾ ನದಿ), ನದಿ ಇಂಗಳಗಾಂವ-ತೀರ್ಥರಸ್ತೆ (ಕೃಷ್ಣಾ ನದಿ) ಹಾಗೂ ಕಾತ್ರಾಳ-ಬಣಜವಾಡ ರಸ್ತೆ (ಕೃಷ್ಣಾ ನದಿ), ಉಗಾರ ಬಿ.ಕೆ-ಕುಸನಾಳ ರಸ್ತೆ (ಕೃಷ್ಣಾ ನದಿ) ಹಾಗೂ ತಂಗಡಿ- ಐನಾಪೂರ ರಸ್ತೆ (ಕೃಷ್ಣಾನದಿ) ಬ್ಯಾರೇಜ್ ಹಾಗೂ ರಸ್ತೆಗಳ ಮುಳುಗಡೆಯಾಗಿರುತ್ತದೆ.

ಘಟಪ್ರಭಾ ನದಿಯ ನೀರಿನಿಂದಾಗಿ ಗೋಕಾಕ ತಾಲೂಕಿನ ಗೋಕಾಕ-ಶಿಂಗಳಾಪೂರ ಸೇತುವೆ ಮುಳುಗಿರುತ್ತವೆ. ಪರ್ಯಾಯ ರಸ್ತೆಯ ಮೂಲಕ ಸಂಚಾರ ಜಾರಿಯಲ್ಲಿರುತ್ತದೆ. ಘಟಪ್ರಭಾ ನದಿಯ ನೀರಿನಿಂದಾಗಿ ಮುಳುಗಿದ್ದ ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಸೇತುವೆಯು ಸಂಚಾರಕ್ಕೆ ಮುಕ್ತವಾಗಿರುತ್ತದೆ. ಜಿಲ್ಲೆಯಲ್ಲಿ ಅತೀವೃಷ್ಠಿಯಿಂದಾಗಿ ಬೆಳಗಾವಿ ತಾಲೂಕಿನಲ್ಲಿ 3 ಮನೆಗಳು ಭಾಗಶ:ವಾಗಿ ಹಾನಿಗೊಂಡಿದ್ದು, ಅಂದಾಜು 1 ಲಕ್ಷ ರೂ.ಗಳ ನಷ್ಟವಾಗಿರುವುದಾಗಿ ವರದಿಯಾಗಿದೆ.

ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಕಲ್ಲೋಳ ಗ್ರಾಮದ ನದಿಯ ದಡದಲ್ಲಿಯ ತೋಟಪಟ್ಟಿಗಳಲ್ಲಿರುವ 424 ಜನರು, ಅವರು ಹೊಂದಿದ ಜಾನುವಾರುಗಳೊಂದಿಗೆ ಜುಲೈ 24 ರಿಂದ 26 ರವರೆಗೆ ಹಾಗೂ ಇಂಗಳಿ ಗ್ರಾಮದ ಮಾಳಭಾಗದಲ್ಲಿರುವ 159 ಜನರು, ಅವರು ಹೊಂದಿದ ಜಾನುವಾರುಗಳೊಂದಿಗೆ ಜುಲೈ 25 ಹಾಗೂ 26 ರಂದು ಇವರು ಅದೇ ಗ್ರಾಮಗಳ ತಮ್ಮ ಸ್ವಂತ ವಾಸದ ಮನೆಗಳಿಗೆ ತೆರಳಿರುತ್ತಾರೆ ಎಂದು ವರದಿಯಾಗಿದೆ.

ಕೃಷ್ಣಾ ನದಿಯ ಪ್ರವಾಹದಿಂದ ಬಣಜವಾಡ ಗ್ರಾಮಕ್ಕೆ ಹೊಂದಿರುವ ನದಿ ದಡದಲ್ಲಿರುವ ಸುಮಾರು 20 ಕುಟುಂಬದ 100 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಜುಲೈ 28 ರಿಂದ ಬಣಜವಾಡ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಿರುವುದಾಗಿ ವರದಿಯಾಗಿದೆ.

ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಜನಜಾಗೃತಿ ಜಾಥಾ

ದಾವಣಗೆರೆ, ಜು.29- ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ದಾವಣಗೆರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ದಾವಣಗೆರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಕ್ಕರಗೊಳ್ಳ, ಬಿಸಿಗ್ನೇಶ್ವರ ಮಠ ಕಕ್ಕರಗೊಳ್ಳ, ಕಮ್ಯೂನಿಟಿ ಮೆಡಿಸಿನ್ ವಿಭಾಗ, ಜೆ.ಜೆ.ಎಂ.ಮೆಡಿಕಲ್ ಕಾಲೇಜು, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದ ಬಿಸಿಗ್ನೇಶ್ವರ ಸಮುದಾಯ ಭವನದಲ್ಲಿ ಹಾಗೂ ಜನಜಾಗೃತಾ ಜಾಥಾ ಕಾರ್ಯಕ್ರಮವನ್ನು ಕಕ್ಕರಗೊಳ್ಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2013ರ ಆಗಸ್ಟ್02 ರ ಶುಕ್ರವಾರ ಬೆ. 10 ಗಂಟೆಗೆ ಏರ್ಪಡಿಸಲಾಗಿದೆ.

ಕಕ್ಕರಗೊಳ್ಳದ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ. ಕರಿಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಹೆಚ್.ಡಿ. ವಿಶ್ವನಾಥ್ ಅವರು ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸುವರು.

ತೋಟಗಾರಿಕೆ, ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರು ವಿಶ್ವಜನಸಂಖ್ಯಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಕ್ಕರಗೊಳ್ಳ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಕೆ.ಜಿ. ಶಾಂತರಾಜ್ ಅವರು ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ್, ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ. ಶಿವಮೂರ್ತಿ, ದಾವಣಗೆರೆಯ ತಾಲ್ಲೂಕು ಪಂಚಾಯತ್‌ನ ಅಧ್ಯಕ್ಷರಾದ ದೊಗ್ಗಳ್ಳಿ ರೇವಣಸಿದ್ದಪ್ಪ, ಜಿಲ್ಲಾ ಪಂಚಾಯತ್‌ನ ಸದಸ್ಯರಾದ ಬಿ. ಕರಿಬಸಪ್ಪ ಹಾಗೂ ಇತರರು ಭಾಗವಹಿಸುವರು.

ಕಾನೂನು ಪದವೀಧರರಿಗೆ ತರಬೇತಿ/ಭತ್ಯೆ ನೀಡುವ ಕುರಿತು ಅರ್ಜಿ ಆಹ್ವಾನ

ದಾವಣಗೆರೆ, ಜು.29- 2012-13ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾದೀಕರಣದಲ್ಲಿ ತರಬೇತಿ/ಭತ್ಯೆ ನೀಡುವ ಕುರಿತು ಈ ಕೆಳಕಂಡ ನಿಬಂಧನೆಗೊಳಪಟ್ಟು ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ-46, 2ನೇ ಮಹಡಿ, ಜಿಲ್ಲಾಡಳಿತ ಭವನ, ಕರೂರು ರಸ್ತೆ, ದಾವಣಗೆರೆ. ಇಲ್ಲಿ ಕಚೇರಿಯ ವೇಳೆಯಲ್ಲಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅವಶ್ಯಕ ದಾಖಲೆಗಳೊಂದಿಗೆ 2013ರ ಸೆಪ್ಟಂಬರ್ 6 ರೊಳಗೆ ಕಚೇರಿಗೆ ಸಲ್ಲಿಸಬಹುದಾಗಿದೆ.

ನಿಬಂಧನೆಗಳು:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದುಳಿದ ವರ್ಗಗಳಿಗೆ ಸೇರಿದ ಅಂದರೆ ಪ್ರವರ್ಗ-1, 2(ಎ), 3(ಎ) ಮತ್ತು 3(ಬಿ)ಗೆ ಸೇರಿದವರಾಗಿದ್ದು, ಕುಟುಂಬದ ವಾರ್ಷಿಕ ಆದಾಯ ರೂ. 15,000 ಕ್ಕೆ ಮೀರಿರಬಾರದು (ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಲಗತ್ತಿಸುವುದು) ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ (ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ) 31 ವರ್ಷಗಳು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷಗಳನ್ನು ಮೀರಿರಬಾರದು. (ಜನ್ಮ ದಿನಾಂಕ: ದೃಢೀಕರಣ ಪತ್ರ ಲಗತ್ತಿಸುವುದು.) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕಾನೂನು ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷಗಳ ಅವಧಿಯೊಳಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿರಬೇಕು. ಮತ್ತು ಯಾವುದೇ ಇಲಾಖೆಯಲ್ಲಿ ತರಬೇತಿ/ಭತ್ಯೆ ಪಡೆಯುತ್ತಿರಬಾರದು. ತರಬೇತಿಯು 4 ವರ್ಷಗಳ ಅವಧಿಯದಾಗಿದ್ದು, ಮಾಸಿಕ ದಿನಚರಿಯನ್ನಾದರಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 1000 ಶಿಷ್ಯವೇತನ ನೀಡಲಾಗುವುದು. ತರಬೇತಿಗೆ ಜಿಲ್ಲೆಯ ಹಿಂದುಳಿದ ವರ್ಗಗಳ 10 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಮದ್ಯದಲ್ಲಿ ಗೈರು ಹಾಜರಾದಲ್ಲಿ ಪಡೆಯಲಾದ ಶಿಷ್ಯವೇತನವನ್ನು ಬಡ್ಡಿಯೊಂದಿಗೆ ಹಿಂದುರುಗಿಸಬೇಕಾಗುವುದು. ಅಭ್ಯರ್ಥಿಗಳು ತಮ್ಮ ಹೆಸರನ್ನು ಜಿಲ್ಲೆಯ ಹಾಗೂ ರಾಜ್ಯದ ಬಾರ್ ಕೌನ್ಸಿಲ್‌ನಲ್ಲಿ ನೊಂದಾಯಿಸಿರಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಸರ್ಕಾರಿ ವಕೀಲರು ಅಥವಾ 20 ವರ್ಷಗಳ ಅನುಭವವುಳ್ಳ ಯಾವುದೇ ವಕೀಲರ ಅಧೀನದಲ್ಲಿ ತರಬೇತಿಗೆ ನಿಯೋಜಿಸಲಾಗುವುದು. ಅಗತ್ಯ ದಾಖಲಾತಿಗಳು, ಲಗತ್ತುಗಳಿಲ್ಲದ, ನಿಗದಿತ ದಿನಾಂಕ 2013ರ ಸೆಪ್ಟಂಬರ್ 6 ರ ನಂತರ ಬರುವ ಅರ್ಜಿಗಳನ್ನು ಅನರ್ಹ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆಯ ವಿವರ

ದಾವಣಗೆರೆ, ಜು.29- ಜಿಲ್ಲೆಯಲ್ಲಿ ದಿನಾಂಕ 28.7.2013 ರಂದು 5.5 ಮಿ.ಮೀ. ಮಳೆಯಾಗಿರುತ್ತದೆ. ತಾಲ್ಲೂಕುವಾರು ಮಳೆ ಮತ್ತು ಹಾನಿ ವಿವರ ಈ ಕೆಳಕಂಡಂತೆ ಇರುತ್ತದೆ.

ಮಳೆಯ ವಿವರ:- ವರ್ಷದ ವಾಡಿಕೆ - 656.9 ಮಿ.ಮೀ.

ಕ್ರ. ಸಂ.

ತಾಲ್ಲೂಕು

ತಿಂಗಳ ವಾಡಿಕೆ (ಜುಲೈ-2013)

ವಾಸ್ತವ (ಎಂ.ಎಂ.ಗಳಲ್ಲಿ)

 

ಈವರೆಗೂ ಬಿದ್ದ ಮಳೆ

28.7.2013

1.7.2013ರಿಂದ

1

ದಾವಣಗೆರೆ

88.2

4.5

128.0

2

ಹರಿಹರ

80.1

4.4

147.2

3

ಹನ್ನಾಳಿ

99.0

6.3

225.7

4

ಚನ್ನಗಿರಿ

156.3

10.0

230.5

5

ಹರಪನಹಳ್ಳಿ

101.4

4.0

218.5

6

ಜಗಳೂರು

63.4

3.8

67.6

 

ಸರಾಸರಿ/ಒಟ್ಟು

98.1

5.5

152.9

 

ತುಂಗಭದ್ರ ನದಿ ಮಟ್ಟ

 

9.88

 

ಹಾನಿಯ ವಿವರ (ರೂ. ಲಕ್ಷಗಳಲ್ಲಿ)

ಕ್ರ. ಸಂ.

ತಾಲ್ಲೂಕು

ನಷ್ಟದ ವಿವರ

ಕಚ್ಚಾ ಮನೆ ಹಾನಿ

ಜೀವ ಹಾನಿ

ಜಾನುವಾರು ಹಾನಿ

ಬೆಳೆಹಾನಿ (ವಿಸ್ತೀರ್ಣ) ಹೆ.ಗಳಲ್ಲಿ

ಅಂದಾಜು ನಷ್ಟ

ಸಾರ್ವಜನಿಕ ಆಸ್ತಿ ಹಾನಿ ಅಂದಾಜು ನಷ್ಟ

ಒಟ್ಟು ಅಂದಾಜು ನಷ್ಟ

ತೀವ್ರ

ಅಂದಾಜು ನಷ್ಟ

ಭಾಗಶ:

ಅಂದಾಜು ನಷ್ಟ

1

ದಾವಣಗೆರೆ

0

0.00

7

0.70

0

0

0.00

0.00

0.00

0.70

2

ಹರಿಹರ

0

0.00

2

0.20

0

0

13.70

6.00

0.00

6.20

3

ಹನ್ನಾಳಿ

0

0.00

6

0.60

0

0

0.00

0.00

0.00

0.60

4

ಚನ್ನಗಿರಿ

0

0.00

7

0.70

0

0

0.00

0.00

0.00

0.70

5

ಹರಪನಹಳ್ಳಿ

0

0.00

0

0.00

0

0

0.00

0.00

0.00

0.00

6

ಜಗಳೂರು

0

0.00

0

0.00

0

0

0.00

0.00

0.00

0.00

 

ಒಟ್ಟು

0

0.00

22

2.20

0

0

13.70

6.00

0.00

8.20

ದಾವಣಗೆರೆ ತಾಲ್ಲೂಕಿನಲ್ಲಿ 7, ಹರಿಹರ ತಾಲ್ಲೂಕಿನಲ್ಲಿ 2, ಹೊನ್ನಾಳಿ ತಾಲ್ಲೂಕಿನಲ್ಲಿ 6 ಮತ್ತು ಹರಪನಹಳ್ಳಿ ತಾಲ್ಲೂಕಿನಲ್ಲಿ 7 ಒಟ್ಟು 22 ಮನೆಗಳು ಭಾಗಶಃ ಹಾನಿಗೊಂಡಿದ್ದು, ರೂ. 2.20 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಹರಿಹರ ತಾಲ್ಲೂಕು ಉಕ್ಕಡಗಾತ್ರಿ ಗ್ರಾಮದಲ್ಲಿ 13.70 ಹೆಕ್ಟೇರ್ ಬೆಳೆ ಹಾನಿಗೊಂಡಿದ್ದು, ರೂ. 6.00 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸಂತ್ರಸ್ತರಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ವಿ. ದೊಡ್ಡಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.