District News 29-08-2012

Wednesday, August 29th, 2012

ಕೊಡಗು ಜಿಲ್ಲೆಯ ಮಳೆ ವಿವರ (ಮಿಲಿ ಮೀಟರ್‌ಗಳಲ್ಲಿ)

ಮಡಿಕೇರಿ ಆ.29(ಕರ್ನಾಟಕ ವಾರ್ತೆ):-ಕೊಡಗು ಜಿಲ್ಲೆಯ ಇಂದಿನ ಸರಾಸರಿ ಮಳೆ 31.01ಮಿ.ಮೀ. ಕಳೆದ ವರ್ಷ ಇದೇ ದಿನ 19.77ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1503.04ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 2108ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನ ಇಂದಿನ ಸರಾಸರಿ ಮಳೆ 51.75ಮಿ.ಮೀ. ಕಳೆದ ವರ್ಷ ಇದೇ ದಿನ 15.33ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2069.20ಮಿ.ಮೀ ಕಳೆದ ವರ್ಷ ಇದೇ ಅವಧಿಯಲ್ಲಿ 2951.66ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನ ಇಂದಿನ ಸರಾಸರಿ ಮಳೆ 21.10ಮಿ.ಮೀ. ಕಳೆದ ವರ್ಷ ಇದೇ ದಿನ 28.05ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1336.94ಮಿ.ಮೀ ಕಳೆದ ವರ್ಷ ಇದೇ ಅವಧಿಯಲ್ಲಿ 1981.83 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನ ಇಂದಿನ ಸರಾಸರಿ ಮಳೆ 20.18ಮಿ.ಮೀ. ಕಳೆದ ವರ್ಷ ಇದೇ ದಿನ 15.92ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1183.99ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1390.43ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 33.40, ನಾಪೋಕ್ಲು 34.20, ಸಂಪಾಜೆ 56.20, ಭಾಗಮಂಡಲ 78.20, ವಿರಾಜಪೇಟೆ ಕಸಬಾ 23.60, ಹುದಿಕೇರಿ 13.70, ಶ್ರೀಮಂಗಲ 36.40, ಪೊನ್ನಂಪೇಟೆ 16.60, ಅಮ್ಮತಿ 26.80, ಬಾಳೆಲೆ 10, ಸೋಮವಾರಪೇಟೆ ಕಸಬಾ 11.80, ಶನಿವಾರಸಂತೆ 11.40, ಶಾತಂಳ್ಳಿ 50.40, ಕೊಡ್ಲಿಪೇಟೆ 30.20, ಕುಶಾಲನಗರ 4, ಸುಂಟಿಕೊಪ್ಪ 13.30ಮಿ.ಮೀ ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ (29-08-2012) ವರದಿ

 ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.62ಅಡಿಗಳು, ಕಳೆದ ವರ್ಷ ಇದೇ ದಿನ 2858.73ಅಡಿ. ಇಂದಿನ ನೀರಿನ ಹೊರ ಹರಿವು ನಾಲೆಗೆ 1440 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು ನಾಲೆಗೆ 1550 ಕ್ಯೂಸೆಕ್.

ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಸೆಳೆಯುವಂತಾಗಲಿ: ಡಾ.ಎನ್.ಶಿವಶಂಕರ

ಮಡಿಕೇರಿ ಆ.29(ಕರ್ನಾಟಕ ವಾರ್ತೆ):-ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಅದೇ ರೀತಿ ಕಲೆ- ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಗಮನಸೆಳೆಯುವಂತಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ ಅವರು ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗು ಬ್ರಾಹ್ಮಣರ ವಿದ್ಯಾಭಿವೃದ್ದಿ ನಿಧಿ ವತಿಯಿಂದ ನಗರದ ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿಂದು ನಡೆದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲಿಯೂ ಕಲೆ ಸಾಹಿತ್ಯ, ಸಾಂಸ್ಕೃತಿಕ, ಸಂಗೀತ, ಕ್ರೀಡೆ ಹೀಗೆ ನಾನಾ ಪ್ರತಿಭೆಗಳಿರುತ್ತವೆ. ವಿದ್ಯಾಭ್ಯಾಸದ ಜತೆಗೆ ಕಲಾಪ್ರತಿಭೆಯಲ್ಲಿಯೂ ತೊಡಗಿಸಿಕೊಂಡರೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಡಾ.ಎನ್.ಶಿವಶಂಕರ ಅವರು ಅಭಿಪ್ರಾಯಪಟ್ಟರು. ಜಿಲ್ಲೆಯ ಕಲಾ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಹೆಸರು ತರುವಂತಾಗಬೇಕು. ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುವಲ್ಲಿ ಜಿಲ್ಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುಟ್ಟರಾಜು ಅವರು ಮಾತನಾಡಿ ಮಾನಸಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕಲೆ, ಸಾಹಿತ್ಯ, ಸಂಗೀತ ಮತ್ತಿತರ ಕಲಾ ಪ್ರಕಾರಗಳು ಸಹಕಾರಿಯಾಗಲಿದ್ದು,  ವಿದ್ಯಾರ್ಥಿಗಳು ಕಲಾ ಪ್ರತಿಭೋತ್ಸವದಂತಹ ಕಾರ್ಯಕ್ರಮಗಳಲ್ಲಿ ಕ್ರೀಯಾಶೀಲರಾಗಿ ತೊಡಗಿಸಿಕೊಳ್ಳುವಂತೆ ಅವರು ಸಲಹೆ ಮಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಮುನಿರ್ ಅಹ್ಮದ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಕಲಾ ಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಸಂಗೀತ ವಿದೂಷಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಮಾತನಾಡಿ ಓದಿನ ಜತೆಗೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ  ತೊಡಗಿಸಿಕೊಂಡಾಗ ಆತ್ಮವಿಶ್ವಾಸ ಹೆಚ್ಚುವುದಲ್ಲದೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬಹುದು ಎಂದು ಎಂದು ಅವರು ಅಭಿಪ್ರಾಯಪಟ್ಟರು. ಕೊಡಗು ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷರಾದ ಶರತ್‌ಕುಮಾರ್, ಕಾರ್ಯದರ್ಶಿಗಳಾದ ಕೆ.ವೆಂಕಟೇಶ್, ರಾಜ್ಯ ಪ್ರಶಸ್ತಿ ವಿಜೇತರಾದ ಸಿ.ಎಂ.ನರಸಿಂಹಮೂರ್ತಿ, ಕಲಾವಿದ ಈ.ರಾಜು. ಮತ್ತಿತರರು ಇದ್ದರು. ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಹೆಚ್.ವಿ.ಇಂದ್ರಮ್ಮ ಸ್ವಾಗತಿಸಿದರು., ಮಣಜೂರು ಮಂಜುನಾಥ್  ನಿರೂಪಿಸಿ ವಂದಿಸಿದರು, ಮೇಘಾಭಟ್ ಮತ್ತು ತಂಡದವರು ಪ್ರಾರ್ಥಿಸಿದರು.

ಸಮಾಜದ ಅಭಿವೃದ್ದಿಗೆ ಯುವ ಸಂಘಗಳ ಕೊಡುಗೆ ಅಪಾರ: ಹೆಚ್.ಎಂ.ಕಾವೇರಿ

ಮಡಿಕೇರಿ ಆ.29(ಕರ್ನಾಟಕ ವಾರ್ತೆ):-ಸಮಾಜದ ಅಭಿವೃದ್ಧಿ ಮತ್ತು ಸ್ವಾವಲಂಬಿ ಬದುಕಿಗೆ ಯುವ ಸಂಘಗಳ ಕೊಡುಗೆ ಅಪಾರ ಎಂದು ಜಿ.ಪಂ. ಉಪಧ್ಯಕ್ಷರಾದ ಹೆಚ್.ಎಂ.ಕಾವೇರಿ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಡಿ.ದೇವರಾಜ ಅರಸು ಭವನದಲ್ಲಿಂದು ನೆಹರು ಯುವ ಕೇಂದ್ರ, ತ್ರಿನೇತ್ರ ಯುವಕ ಸಂಘ, ಮಹಿಳೋದಯ ಮಹಿಳಾ ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿಂದು ನಡೆದ ‘ಯುವ ಸಮಾವೇಶ ಮತ್ತು ಮಾರ್ಗದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯುವ ಸಂಘಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನರ್ಜನೆ ವೃದ್ದಿಸಿಕೊಳ್ಳುವುದರ ಜತೆಗೆ ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಲು ಸಹಕಾರಿಯಾಗಲಿದೆ ಎಂದು ಹೆಚ್.ಎಂ.ಕಾವೇರಿ ಅವರು ತಿಳಿಸಿದರು.

ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಂಘಗಳ ಜವಾಬ್ದಾರಿ ಹೆಚ್ಚಿನದಾಗಿದ್ದು, ಆ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಯುವ ಸಂಘಗಳು ಹಮ್ಮಿಕೊಳ್ಳುವಂತೆ ಎಂದು ಜಿ.ಪಂ. ಉಪಾಧ್ಯಕ್ಷರು ಸಲಹೆ ಮಾಡಿದರು. ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಾಂತಿ ಬೆಳ್ಯಯಪ್ಪ ಅವರು ಮಾತನಾಡಿ ಸ್ವಾವಲಂಬಿ ಹಾಗೂ ಸ್ವಾಭಿಮಾನ ಬದುಕಿಗೆ ಯುವ ಸಂಘಗಳು ಸಹಕಾರಿ. ಯುವ ಜನರು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ನಾನಾ ಸೌಲಭ್ಯಗಳನ್ನು ಪಡೆದು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ತಾ.ಪಂ.ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ ಅವರು ಯುವ ಜನರು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲು ಯುವ ಸಂಘಗಳಲ್ಲಿ ಹೆಚ್ಚು ಪಾಲ್ಗೊಳ್ಳುವಂತಾಗಬೇಕು ಎಂದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಗಾಯಿತ್ರಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಗೋವಿಂದ ಭಟ್, ತ್ರಿನೇತ್ರ ಯುವಕ ಸಂಘದ ಅಧ್ಯಕ್ಷರಾದ ಪಿ.ಇ.ದಿವಾಕರ, ಎನ್‌ವೈಕೆ ಸ್ವಯಂ ಸೇವಕರಾದ ಕು.ವೀಣಾರಾಣಿ, ಪಿ.ಪಿ ಉತ್ತಪ್ಪ ಮತ್ತಿತರರು ಇದ್ದರು.

ಮಕ್ಕಳಲ್ಲಿ ಪರಿಸರ ಕುರಿತ ಕಾಳಜಿ ಬಲಗೊಳಿಸಿ: ಜಿಲ್ಲಾಧಿಕಾರಿ ಶ್ರೀ ಸಮೀರ್ ಶುಕ್ಲ

 ಧಾರವಾಡ (ಕರ್ನಾಟಕ ವಾರ್ತೆ) ಆ 29: ದೇಶದ ಭವಿಷ್ಯವಾಗಿರುವ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಕುರಿತು ಕಾಳಜಿಯನ್ನು ಹುಟ್ಟಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಜಾರಿಗೊಳಿಸಲಾಗುತ್ತಿರುವ ಪರಿಸರ ಮಿತ್ರ ಶಾಲಾ ಯೋಜನೆ ತುಂಬ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ಸಮೀರ್ ಶುಕ್ಲ ನುಡಿದರು.

           ಅವರು ಧಾರವಾಡದ ಲೋಕೋಪಯೋಗಿ ಸಭಾಭವನದಲ್ಲಿಂದು ಧಾರವಾಡ ಗ್ರಾಮೀಣ ಮತ್ತು ಶಹರ ವ್ಯಾಪ್ತಿಯ ಶಾಲಾ ಶಿಕ್ಷಕರಿಗಾಗಿ ಪರಿಸರ ಸಂರಕ್ಷಣೆ ಕುರಿತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಶಾಲಾ ಮಕ್ಕಳಲ್ಲಿ ಶಾಲೆಯ ವಾತಾವರಣವನ್ನು ಹಸಿರಾಗಿಸಲು ಉತ್ತೇಜಿಸಿದಲ್ಲಿ ಅದರ ಪರಿಣಾಮ ಗ್ರಾಮದಿಂದ ಹಿಡಿದು ಇಡೀ ರಾಷ್ಟ್ರದ ತುಂಬೆಲ್ಲ ಪರಿಸರ ಹೆಚ್ಚುವಿಕೆ ಹಾಗೂ ಸಂರಕ್ಷಣೆಯಲ್ಲಿ ಆಗುತ್ತದೆ ಎಂದು ಶ್ರೀ ಶುಕ್ಲ ಅಭಿಪ್ರಾಯ ಪಟ್ಟರು. ಪರಿಸರ ರಕ್ಷಣೆಯ ಈ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ ಅವರು ಈ ಕಾರ್ಯಾಗಾರದಲ್ಲಿ ಸರಿಯಾದ ಮಾಹಿತಿ ಪಡೆದು ಯೋಜನೆಯ ಉದ್ದೇಶ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಕರೆ ನೀಡಿದರು.

       ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ|| ಬಿ.ಕೆ.ಎಸ್. ವರ್ಧನ್ ಅವರು ಮಾತನಾಡಿ, ನಾವಿಂದು ಜಾಗತಿಕ ತಾಪಮಾನ ಹೆಚ್ಚಿಸುವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಪರಿಸರದ ಸಮತೋಲನ ಪುನರ್‌ಸ್ಥಾಪನೆಗೆ ಜಾಗತಿಕ ವೇದಿಕೆಗಳಲ್ಲಿ ಅವ್ಯಾಹತ ಹೋರಾಟ ನಡೆಸಲಾಗುತ್ತಿದೆ ಎಂದರು. ಮಾನವ ಕುಲದ ಭವಿಷ್ಯದ ಬದುಕಿನ ಹಿತದೃಷ್ಟಿಯಿಚಿದ ನಾವಿಂದು ಪರಿಸರ ಸಂರಕ್ಷಣೆ ಹಾಗೂ ಅದರ ಬೆಳವಣಿಗೆಯನ್ನು ಮಾಡಲೇಬೇಕಾದ ಸ್ಥಿತಿ ಇದೆ. ನೂರಾರು ವರ್ಷಗಳ ಬೆಲೆಯನ್ನೆ ಊಹಿಸಲಾಗದ ಮರಗಳನ್ನು ಅಭಿವೃದ್ಧಿಗಾಗಿ ಬಲಿ ಕೊಡಲಾಗುತ್ತಿದೆ. ಆ ನಿಟ್ಟಿನಲ್ಲಿ ಜನಸಂಖ್ಯೆ ನಿಯಂತ್ರಣ ಅಗತ್ಯವಾಗಿದೆ. ಮಕ್ಕಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವ ಈ ಯೋಜನೆ ಯಶಸ್ವಿಗೆ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಶಾಲಾ ಮಕ್ಕಳೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಡಾ|| ವರ್ಧನ ನುಡಿದರು.

           ಜಿಲ್ಲೆಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶ್ರೀ ವಿಜಯಕುಮಾರ ಕಡಕಭಾವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ಹಲವಾರು ವಿಧಗಳ ಪರಿಸರ ಮಾಲಿನ್ಯ ಆಗುತ್ತಿದೆ. ಅರಣ್ಯ ಸಂಪತ್ತು, ಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಸಮಾಜದಲ್ಲಿ ಪರಿಸರ ಕುರಿತ ಜಾಗೃತಿ ಹಾಗೂ ಸಂರಕ್ಷಣೆ ಕಾರ್ಯ ಮಾತ್ರ ಪರಿಹಾರ ನೀಡಬಲ್ಲುದು ಎಂದರು. ಈ ಹಿನ್ನೆಲೆಯಲ್ಲಿ ಪರಿಸರ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಸಹಯೋಗದಿಂದ ಪರಿಸರ ಮಿತ್ರ ಶಾಲಾ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಇದರಂಗವಾಗಿ ಇಂದಿನಿಂದ 3 ದಿನಗಳ ಕಾಲ ಎಲ್ಲ ತಾಲೂಕುಗಳಲ್ಲಿ ಸುಮಾರು 500 ಶಾಲೆಗಳ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ನುಡಿದರು.  ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳು ಶಾಲಾ ಮಕ್ಕಳಿಗೆ ಸಸಿಯೊಂದನ್ನು ಸಾಂಕೇತಿಕವಾಗಿ ಹಸ್ತಾಂತರಿಸಿ ಜಿಲ್ಲೆಯ ಶಾಲೆಗಳ ಹಸುರೀಕರಣ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು. ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯ ಶ್ರೀ ಶಂಕರ ಕುಂಬಿ ಸರ್ವರನ್ನು ಸ್ವಾಗತಿಸಿದರು. ಶ್ರೀ ಕೆ.ಎಚ್. ನಾಯಕ ವಂದಿಸಿದರು. ಶ್ರೀ ಕೆ. ಜಗುಚಂದ್ರ ಕಾರ್ಯಕ್ರಮ ರೂಪಿಸಿ ತದನಂತರ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಮಹಿಳಾ ಜನಪ್ರತಿನಿಧಿಗಳ ಸಬಲೀಕರಣಕ್ಕೆ ಕಾರ್ಯತಂತ್ರ

 ಧಾರವಾಡ (ಕರ್ನಾಟಕ ವಾರ್ತೆ) ಆ 29: ಜನತಂತ್ರ ಅದರಲ್ಲೂ ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆಗಳಲ್ಲಿ ಮಹಿಳಾ ಜನಪ್ರತಿನಿಧಿಗಳು ಸಶಕ್ತವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಕೆಳಸ್ತದಿಂದಲೇ ಜಾಗೃತಿ ಹಾಗೂ ಮಾಹಿತಿ ನೀಡುವ ಸಬಲೀಕರಣ ಕಾರ್ಯಕ್ರಮ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ.ಎ. ಮೇಘಣ್ಣವರ ನುಡಿದರು.

        ಅವರು ಧಾರವಾಡದಲ್ಲಿಂದು (ದಿನಾಂಕ: 29) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳೆಯರ ರಾಜಕೀಯ ನಾಯಕತ್ವದ ಉತ್ತೇಜನ ಮತ್ತು ಸ್ಪಂದನಶೀಲ ಆಡಳಿತ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದ ಧಾರವಾಡ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಯೋಜಿಸಲಾಗುತ್ತಿದೆ. ನಾರ್ವೆ ಸರ್ಕಾರ, ಸಂಯುಕ್ತ ರಾಷ್ಟ್ರ ಸಂಘದ ಮಹಿಳಾ ವಿಭಾಗ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದೊಂದಿಗೆ ಇದು ಅನುಷ್ಠಾನಗೊಳಿಸುತ್ತಿದೆ. ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆ, ಪಂಚಾಯತ್ ಸಂಸ್ಥೆಗಳು ಅವುಗಳ ಪ್ರತಿನಿಧಿಗಳು ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಲು ಶ್ರೀ ಮೇಘಣ್ಣವರ ಕರೆ ನೀಡಿದರು.

           ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಮೈಸೂರಿನ ಅನಸಾರಾಗ್ರಾ ಸಂಸ್ಥೆಯ ಶ್ರೀಮತಿ ಎಂ.ಸಿ. ಶೈಲಜ ಅವರು ಇಡೀ ಕಾರ್ಯಕ್ರಮದ ರೂಪರೇಷೆ ವಿವರಿಸಿದರು. ಇಂದು ಮಹಿಳೆಯರು ಜೀವನದ ಎಲ್ಲ ಸ್ತರಗಳಲ್ಲಿ ಪುರುಷರಿಗೆ ಸರಿಸಮವಾಗಿ ಕೆಲವು ರಂಗಗಳಲ್ಲಿ ಇಂದು ಹೆಜ್ಜೆ ಮುಂದಿಟ್ಟು ಕಾರ್ಯನಿರ್ವಹಿಸುವಷ್ಟು ಸಕ್ಷಮಳಾಗಿದ್ದಾರೆ. ಅದರೆ ರಾಜಕೀಯ ರಂಗದಲ್ಲಿ ಮಹಿಳಾ ಪ್ರತಿನಿಧಿಗಳು ನಿರೀಕ್ಷೆ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಲಿಂಗಭೇದದ ದ್ವಂದ್ವ, ತಾರತಮ್ಯ ಅಷ್ಟೇ ಅಲ್ಲದೇ ಸಾಮಾಜಿಕ ಹಾಗೂ ಸಾಂಸ್ಕೃತಿಕ ಭಾವನೆಗಳ ಮಿತಿಯು ಪ್ರಮುಖ ಕಾರಣಗಳಾಗಿವೆ. ಈ ನಿಟ್ಟಿನಲ್ಲಿ ಮಹಿಳಾ ಜನಪ್ರತಿನಿಧಿಗಳ ಸಬಲೀಕರಣಕ್ಕೆ ಸಂಯುಕ್ತ ರಾಷ್ಟ್ರ ಸಂಘದ ಮಹಿಳಾ ವಿಭಾಗ ನಾರ್ವೆ ಸರ್ಕಾರದ ಸಹಯೋಗದಲ್ಲಿ ದಕ್ಷಿಣ ಏಷಿಯಾ ರಾಷ್ಟ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಅವುಗಳಲ್ಲಿ ಒಂದಾದ ಭಾರತದಲ್ಲಿ ಕರ್ನಾಟಕ, ಆಂದ್ರ, ಓಡಿಸ್ಸಾ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳ ತಲಾ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸಬಲೀಕರಣ ಕುರಿತ ಜಾಗೃತಿ ಹಾಗೂ ಮಾಹಿತಿ ಕಾರ್ಯ ಏರ್ಪಡಿಸಲಾಗಿದೆ.  ಈ ಕುರಿತು ಐದು ಮುಖ್ಯ ಕಾರ್ಯತಂತ್ರಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಈ ಜಿಲ್ಲೆಗಳ ತಾಲೂಕು ಮಟ್ಟದ ಪ್ರೇರಕರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ಇವರುಗಳು ಗ್ರಾಮ ಪಂಚಾಯತ್ ಹಂತದಲ್ಲಿ ಕಾರ್ಯನಿರ್ವಹಿಸಿ ಮಹಿಳಾ ಪ್ರತಿನಿಧಿಗಳ ಸಬಲೀಕರಣ ಹೆಚ್ಚಿಸಲು ಅಗತ್ಯದ ಮಾಹಿತಿ ಹಾಗೂ ಸಹಾಯ ನೀಡುವರು. ಜೊತೆಗೆ ಮಹಿಳಾ ಪ್ರತಿನಿಧಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮೇಲಸ್ತರದಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಗಮನ ಸೆಳೆಯುವರು.                                                

           ಜಿಲ್ಲೆಯಲ್ಲಿ ಈ ಯೋಜನೆಯ ಮಾದರಿ ಗ್ರಾಮಪಂಚಾಯತ್ ಕೂಡಾ ಗುರುತಿಸಲಾಗುತ್ತಿದ್ದು, ಆರೋಗ್ಯ, ಶಿಕ್ಷಣ, ಜೀವನೋಪಾಯ, ನೈರ್ಮಲ್ಯ ಸುಧಾರಣೆ ಹಾಗೂ ಮಹಿಳಾ ದೌರ್ಜನ್ಯ ತಡೆ ಅಂಶಗಳ  ಕುರಿತು  ಗಮನ  ನೀಡಲಾಗುವುದು.  ಈ  ಯೋಜನೆ ಸಫಲತೆಯಲ್ಲಿ ಸಂಬಂಧಿತ ಇಲಾಖೆಗಳ ಪಾತ್ರವು ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ನಂತರ ತಾಲೂಕು ಮಟ್ಟದ ಅಧಿಕಾರಿಗಳಿಗೂ ಇದನ್ನು ಏರ್ಪಡಿಸಲಾಗುವುದು. ಆಯ್ದ ಗ್ರಾಮ ಪಂಚಾಯತ್‌ಗಳಲ್ಲಿನ ಮಾಹಿತಿ ಸಂಗ್ರಹಣೆ ಹಾಗೂ ಕಾರ್ಯಕ್ರಮದ ಮುಕ್ತಾಯದ ನಂತರ ಮಾದರಿ ಮಹಿಳಾ ಪ್ರತಿನಿಧಿಗಳನ್ನು ಹೊರರಾಜ್ಯಗಳಲ್ಲಿನ ಸಂಸ್ಥೆಗಳಲ್ಲಿ ಮಾಹಿತಿ ಸಂವಹನಕ್ಕಾಗಿ ಪ್ರವಾಸ ಕೂಡ ಏರ್ಪಡಿಸಲಾಗುವುದು ಎಂದು ಶ್ರೀಮತಿ ಶೈಲಜ ನುಡಿದರು.

           ಪ್ರಾರಂಭದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಬಲೀಕರಣದ ಜಿಲ್ಲಾ ಸಂಯೋಜಕ ಶ್ರೀ ರವೀಂದ್ರ ಸರ್ವರನ್ನು ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ಪೊಲೀಸ್, ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಕೃಷಿ ಇಲಾಖೆ ಹಿರಿಯ ಅಧಿಕಾರಿಗಳಲ್ಲದೇ ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಲಿಂಗ ತಾರತಮ್ಯ ಮುಖ್ಯವಾಹಿನಿಗೆ ಪ್ರವೇಶ, ಮಹಿಳೆಗೆ ರಾಜಕೀಯ ಶಕ್ತಿ ನೀಡುವಲ್ಲಿ ಇರುವ ಸವಾಲುಗಳು, ಕಾರ್ಯತಂತ್ರಗಳು, ಸಂವೇದನಾತ್ಮಕ ಆಡಳಿತ ನೀಡುವಲ್ಲಿ ಮಹಿಳಾ ಪ್ರತಿನಿಧಿಗಳ ಪಾತ್ರಗಳ ಕುರಿತು ತಜ್ಞರು ಮಾಹಿತಿ ನೀಡಿದರು.

ಧಾರವಾಡ ತಾಲೂಕಿನಲ್ಲಿ ರಾಷ್ಟ್ರೀಯ ಜನಸಂಖ್ಯಾ ಹಾಗೂ ಬಯೋಮೆಟ್ರಿಕ್ ನೋಂದಣಿ ಕಾರ್ಯಕ್ರಮ

 ಧಾರವಾಡ (ಕರ್ನಾಟಕ ವಾರ್ತೆ) ಆ 29: ರಾಷ್ಟ್ರೀಯ ಜನಸಂಖ್ಯಾ 2011 ರ ಜನಗಣತಿ ಅನ್ವಯ ಧಾರವಾಡ ಗ್ರಾಮೀಣ ಚಾರ್ಜ್ ವ್ಯಾಪ್ತಿಯಲ್ಲಿ ಬರುವ 110 ಗ್ರಾಮಗಳಲ್ಲಿ 426 ಗಣತಿ ಬ್ಲಾಕ್‌ಗಳನ್ನು ತಯಾರಿಸಿದ್ದು, 2ನೇ ಹಂತದ ಕಾರ್ಯಕ್ರಮ ಆಗಸ್ಟ್ 28 ರಿಂದ ಆರಂಭಗೊಂಡಿದೆ ಎಂದು ತಹಶೀಲ್ದಾರರಾದ ಶ್ರೀ ಶಿವಾನಂದ ಬಜಂತ್ರಿಯವರು ತಿಳಿಸಿದ್ದಾರೆ.  ಈ ಅವಧಿಯಲ್ಲಿ ಪ್ರತಿ ಮನೆ ಮನೆಗೂ ಭೇಟಿ ನೀಡಿ KYR (Known Your Residence) ನಮೂನೆಗಳನ್ನು ಮನೆಯ ಮುಖ್ಯಸ್ಥನ ಸಂದರ್ಶನದಿಂದ ಭರ್ತಿ ಮಾಡಿಕೊಳ್ಳಲಾಗುವುದು. ಬಯೋಮೆಟ್ರಿಕ್ ನೋಂದಣಿಗಾಗಿ 5 ವರ್ಷ ಮೇಲ್ಪಟ್ಟವರ ಭಾವಚಿತ್ರ, ಕಣ್ಣಿನ ಗುಡ್ಡೆಗಳ ಛಾಯಾಸಂಗ್ರಹಣ ಹಾಗೂ 10 ಬೆರಳುಗಳ  ಬೆರಳು ಗುರುತು ಪಡೆಯಲಾಗುವುದು. ಈ ಪ್ರಕ್ರಿಯೆಗಾಗಿ ವಲಯವಾರು, ಗ್ರಾಮವಾರು, ಗ್ರಾಮ ಪಂಚಾಯತ್‌ವಾರು, ಗ್ರಾಮಗಳಲ್ಲಿ ಛಾಯಾ ಚಿತ್ರ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಿದ್ದು ಪ್ರತಿ ದಿವಸ (ಸಾರ್ವನಿಕ ರಜಾ ಹೊರತುಪಡಿಸಿ) ಮುಂಜಾನೆ 9 ರಿಂದ ಸಂಜೆ 6 ಗಂಟೆಯವರೆಗೆ ಪಡೆಯಲಾಗುತ್ತದೆ. ವಿವರವಾದ ಕಾರ್ಯ ಸೂಚಿಯನ್ನು ಗ್ರಾಮ ಪಂಚಾಯತ್ ಹಾಗೂ ನಾಡ ಕಚೇರಿಗಳಲ್ಲಿ ಪ್ರಚುರ ಪಡಿಸಲಾಗಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ಸ್ಥಳಗಳಲ್ಲಿ ನಾಗರೀಕರು ಹಾಜರಾಗಲು ತಹಶೀಲ್ದಾರ ಶ್ರೀ ಶಿವಾನಂದ ಬಂಜತ್ರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಣೆಗಾಗಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರು ಹಾಗೂ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ಕೋಳಿ ಸಾಕಾಣಿಕೆ ತರಬೇತಿಗೆ ಆಹ್ವಾನ

ಹಾಸನ, ಆಗಸ್ಟ್ 29: ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಆಸಕ್ತಿಯುಳ್ಳ ಎಲ್ಲರಿಗೂ ಪಶು ಪಾಲನಾ ಇಲಾಖೆ, ಹಾಸನ ವತಿಯಿಂದ ದಿನಾಂಕ ಸೆಪ್ಟಂಬರ್ 5 ಮತ್ತು 6ರಂದು ಎರಡು ದಿನಗಳ ಕೋಳಿ ಸಾಕಾಣಿಕೆ ತರಬೇತಿಯನ್ನು ಏರ್ಪಡಿಸಲಾಗಿದೆ. ಆಸಕ್ತಿಯುಳ್ಳವರು ತರಬೇತಿ ಪ್ರಾರಂಭವಾಗುವ ದಿನಾಂಕದಂದು ಬೆಳಿಗ್ಗೆ 10.30 ಗಂಟೆಗೆ ಸಹಾಯಕ ನಿರ್ದೇಶಕರ ಕಛೇರಿ, ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕರ ಕಛೇರಿ ಆವರಣ, ಸಂತೇಪೇಟೆ, ಹಾಸನದಲ್ಲಿ ಹಾಜರಾಗಬೇಕೆಂದು ಸೂಚಿಸಿದೆ. ಸಂಪರ್ಕ ದೂರವಾಣಿ ಸಂಖ್ಯೆ: 08172-235226. ವಸತಿ ಅಥವಾ ಭತ್ಯೆ ವ್ಯವಸ್ಥೆ ಇರುವುದಿಲ್ಲ. ಎಂದು ಹಾಸನ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗವಿಕಲರಿಂದ ಡಿಪ್ಲೊಮ ಪ್ರವೇಶಕ್ಕೆ ಅರ್ಜಿ ಆಹ್ವಾನ

ಹಾಸನ, ಆಗಸ್ಟ್ 29: ಶ್ರೀಮತಿ ಎಲ್.ವಿ.(ಸರ್ಕಾರಿ) ಪಾಲಿಟೆಕ್ನಿಕ್, ಹಾಸನ ಸಂಸ್ಥೆಯಲ್ಲಿ ಅಂಗವಿಕಲರಿಗೆ 14 ಡಿಪ್ಲೋಮ ಸೀಟುಗಳು ಖಾಲಿಯಿದ್ದು, ಶೇಕಡ 40% ಕ್ಕೂ ಹೆಚ್ಚು ಅಂಗವಿಕಲತೆವುಳ್ಳ ಅಭ್ಯರ್ಥಿಗಳು ವ್ಯಾಸಂಗ ಮಾಡಲಿಚ್ಚಿಸುವವರು ಆಗಸ್ಟ್ 31ರ ಸಂಜೆ 5 ಘಂಟೆಯೊಳಗೆ ಕಛೇರಿ ವೇಳೆಯಲ್ಲಿ ಬಂದು ಅರ್ಜಿ ಸಲ್ಲಿಸಿ, ಪ್ರಥಮ ವರ್ಷ ಡಿಪ್ಲೋಮಕ್ಕೆ ಪ್ರವೇಶ ಪಡೆಯಬಹುದೆಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿರುತ್ತಾರೆ.

ಸಮುದಾಯ ರೇಡಿಯೋ ಕುರಿತ ಕಾರ್ಯಾಗಾರ :ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಅರ್ಜಿ ಆಹ್ವಾನ

ಹಾಸನ, ಆಗಸ್ಟ್ 29: ಸಮುದಾಯ ರೇಡಿಯೋ ಕುರಿತಂತೆ ಸೆಪ್ಟೆಂಬರ್ 14 ರಂದು ಬೆಂಗಳೂರಿನಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.  ಈ  ಕಾರ್ಯಾಗಾರದಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಇಚ್ಚಿಸುವ  ಅರ್ಹ ಮತ್ತು ಆಸಕ್ತ ವ್ಯಕ್ತಿಗಳಿಂದ ರಾಜ್ಯ ವಾರ್ತಾ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ. ಸಮುದಾಯ ರೇಡಿಯೋ ಎಂದರೇನು ? ಸಮುದಾಯ ರೇಡಿಯೋ ವಿಶೇಷತೆಗಳೇನು ? ಸಮುದಾಯ ರೇಡಿಯೋ ಕುರಿತ ಸರ್ಕಾರದ ಧೋರಣೆಗಳೇನು ? ಸಮುದಾಯ ರೇಡಿಯೋ ಸ್ಥಾಪಿಸುವುದು ಹೇಗೆ ? ಸಮುದಾಯ ರೇಡಿಯೋ ನಿರ್ವಹಿಸುವುದು ಹೇಗೆ ? ಸರ್ಕಾರದಿಂದ ಸಮುದಾಯ ರೇಡಿಯೋ ಸಂಘಟನೆಗೆ ದೊರೆಯುವ ಸೌಲಭ್ಯಗಳೇನು ? ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಸಮುದಾಯ ರೇಡಿಯೋಗಳ ಚಿತ್ರಣವೇನು ? ಎಂಬ ಬಗ್ಗೆ ವಿಷಯ ತಜ್ಞರು ಈ ಕಾರ್ಯಾಗಾರದಲ್ಲಿ ಬೆಳಕು ಚೆಲ್ಲಲಿದ್ದಾರೆ. ಸಮುದಾಯ ರೇಡಿಯೋ ಪರಿಕಲ್ಪನೆ, ಸ್ಥಾಪನೆ ಹಾಗೂ ಸಂಚಾಲನೆಗೆ ಇರುವ ಅವಕಾಶಗಳು ಮತ್ತು ಅನುಕೂಲಗಳು, ಸಮುದಾಯ ರೇಡಿಯೋ ಸ್ಥಾಪಿಸುವಲ್ಲಿ   ಸಾಮಾನ್ಯವಾಗಿ ಎದುರಾಗುವ ಸಮಸ್ಯೆಗಳು ಹಾಗೂ ಅವುಗಳ ನಿವಾರಣೆಗೆ ಸುಲಭ ಪರಿಹಾರೋಪಾಯಗಳ ಕುರಿತು ಪರಿಣಿತರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.

 ಈಗಾಗಲೇ ಸಮುದಾಯ ರೇಡಿಯೋವನ್ನು ಸ್ಥಾಪಿಸಿರುವ ಅಥವಾ ಸಮುದಾಯ   ರೇಡಿಯೋ ಸ್ಥಾಪಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಅಥವಾ ಸಂಘ - ಸಂಸ್ಥೆಗಳ ಪ್ರತಿನಿಧಿಗಳಿಗೆ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆದ್ಯತೆ ನೀಡಲಾಗುವುದು. ವೃತ್ತಿನಿರತ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಅಧಿಕಾರಿಗಳಿಗೂ ಕಾರ್ಯಾಗಾರದಲ್ಲಿ ಭಾಗವಹಿಸಲು ವಿಶೇಷ ಪ್ರಾಧಾನ್ಯತೆ ಇದೆ. ಪ್ರತಿನಿಧಿಯಾಗಿ ಪಾಲ್ಗೊಳ್ಳುವವರಿಗೆ ಸರ್ಕಾರದಿಂದ ಹಾಗೂ ವಾರ್ತಾ ಇಲಾಖೆಯಿಂದ ಯಾವುದೇ ಪ್ರಯಾಣ ಭತ್ಯೆ ಅಥವಾ ಇತರೆ ಭತ್ಯೆಗಳನ್ನು ನೀಡಲಾಗುವುದಿಲ್ಲ.

 ಆಸಕ್ತರು ವ್ಯಕ್ತಿಗಳಾಗಿದ್ದಲ್ಲಿ ತಮ್ಮ ಹೆಸರು, ವಯಸ್ಸು, ವಿದ್ಯಾರ್ಹತೆ ಮತ್ತು ಇತರೆ ವೈಯುಕ್ತಿಕ ವಿವರಗಳನ್ನು ಅಥವಾ ಸಂಘ-ಸಂಸ್ಥೆಗಳಾಗಿದ್ದಲ್ಲಿ ಸಂಸ್ಥೆಯ ಹಿನ್ನೆಲೆ ಮತ್ತು ಉದ್ದೇಶಗಳು ಹಾಗೂ  ತಮ್ಮ ಪ್ರತಿನಿಧಿಗಳ ಹೆಸರು ಮತ್ತು ವಿವರಗಳನ್ನು ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ಸಂಖ್ಯೆ 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು -560 001 ಇವರಿಗೆ   ಅಂಚೆಯ ಮೂಲಕ ಅಥವಾ [email protected] ಮಿಂಚಂಚೆಯ ಮೂಲಕ ಆಗಸ್ಟ್ 31 ರೊಳಗೆ ಸಲ್ಲಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

*********

ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕಿಗೆ ಔಷಧಿಗಳ ಸರಬರಾಜಿಗೆ ಅರ್ಜಿ ಆಹ್ವಾನ

ಹಾಸನ, ಆಗಸ್ಟ್ 29: ಮಾಜಿ ಸೈನಿಕರ ಅಂಶದಾಯಿ ಆರೋಗ್ಯ ಯೋಜನೆಯ (ECHS) ಪಾಲಿಕ್ಲಿನಿಕ್, ಹಾಸನ ನಗರದಲ್ಲಿ ಕಾರ್ಯಾರಂಬಗೊಂಡಿದ್ದು ಸದರಿ ಪಾಲಿ ಕ್ಲಿನಿಕಿನ ಉಪಯೋಗಕ್ಕಾಗಿ ಔಷದಿಗಳ ಅವಶ್ಯಕತೆ ಇದ್ದು ಅವುಗಳನ್ನು ಸರಬರಾಜು ಮಾಡಲು ಹಾಸನ ನಗರದಲ್ಲಿರುವ ಔಷಧಿ ಅಂಗಡಿಗಳು/ವ್ಯಾಪಾರಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

 ಇಚ್ಚೆವುಳ್ಳ ಔಷದ ವ್ಯಾಪಾರಿಗಳು  ಅರ್ಜಿಯೊಂದಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಪಡೆದ TIN ಪ್ರಮಾಣ ಪತ್ರ,,  ಫಾರಂ ನಂ 20 ಹಾಗೂ 21,  ಆದಾಯ ತೆರಿಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್,  ಝೆರಾಕ್ಸ್ ಪ್ರತಿ ಲಗತ್ತಿಸಿ ದಿನಾಂಕ 15-9-2012ರೊಳಗೆ ಸ್ಟೇಷನ್ ಕಮಾಂಡರ್, ಇಸಿಹೆಚ್‌ಎಸ್ ಹೆಡ್ ಕ್ವಾರ್ಟರ್‍ಸ್, ಕಮಾಂಡ್ ಹಾಸ್ಪಿಟಲ್ (ಏರ್‌ಫೋರ್‍ಸ್), ಬೆಂಗಳೂರು - 560 007 ಇವರಿಗೆ ಸಲ್ಲಿಸುವಂತೆ ಕೋರಲಾಗಿದೆ.

ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ 2012

ಹಾಸನ, ಆಗಸ್ಟ್ 29: ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಕೂಟವನ್ನು ಆಗಸ್ಟ್ 30ರಂದು ಅರಸೀಕೆರೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ ಬೆಳಿಗ್ಗೆ 9 ಗಂಟೆಗೆ ಕ್ರೀಡಾಂಗಣದಲ್ಲಿ ಸಂಘಟಕರಿಗೆ ವರದಿ ಮಾಡಿಕೊಳ್ಳುವುದು.

ಪುರುಷರಿಗಾಗಿ ಸ್ಪರ್ಧೆಗಳು :-

100ಮೀ, 200ಮೀ, 400ಮೀ, 800ಮೀ, 1,500 ಮೀ, 5000ಮೀ, ಓಟಗಳು ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ

ಟ್ರಿಪಲ್ ಜಂಪ್, 4 x  100ಮೀ, ರಿಲೆ 4 x 400ಮೀ ರಿಲೆ. ಕಬ್ಬಡಿ, ಖೋ-ಖೋ ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, (ಒಬ್ಬ ಕ್ರೀಡಾಪಟು ಗರಿಷ್ಠ 3 ಕ್ರೀಡೆಗಳಲ್ಲಿ ಭಾಗವಹಿಸಬಹುದು)

ಮಹಿಳೆಯರಿಗಾಗಿ ಸ್ಪರ್ಧೆಗಳು :-

100ಮೀ, 200ಮೀ, 400ಮೀ, 800ಮೀ, 1,500 ಮೀ, 3000ಮೀ, ಓಟಗಳು ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ

ಟ್ರಿಪಲ್ ಜಂಪ್, 4 x  100ಮೀ, ರಿಲೆ 4 x 400ಮೀ ರಿಲೆ. ಕಬ್ಬಡಿ, ಖೋ-ಖೋ ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, (ಒಬ್ಬ ಕ್ರೀಡಾಪಟು ಗರಿಷ್ಠ 3 ಕ್ರೀಡೆಗಳಲ್ಲಿ ಭಾಗವಹಿಸಬಹುದು)

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ, ಅರಸೀಕೆರೆ ಇವರ ಮೊಬೈಲ್ ಸಂ 9481544094 ಸಂಪರ್ಕಿಸುವುದು. ಎಂದು ಅರಸೀಕೆರೆ ತಾಲ್ಲೂಕು ಪಂಚಾಯತಿ ಕಾರ್ಯ ನಿವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

 ಹಾಸನ, ಆಗಸ್ಟ್ 29: 2012-13ನೇ ಸಾಲಿನಲ್ಲಿ ಅರಸೀಕೆರೆ ತಾಲೂಕಿನಲ್ಲಿ ಖಾಲಿ ಇರುವ ಬಡಿಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಮರು ಪ್ರಕಟಣೆ ಹೊರಡಿಸಿ ಕಡೆಯ ದಿನಾಂಕ: 21/09/2012ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶಿ ಅಭಿವೃದ್ಧಿ ಯೋಜನಾಧಿಕಾರಿಗಳು ಅರಸೀಕೆರೆ ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಹೇಮಾವತಿ ಜಲಾಶಯ ನೀರಿನ ಮಟ್ಟ

ಹಾಸನ ಆಗಸ್ಟ್ 29: ಹೇಮಾವತಿ ಜಲಾಶಯದ ಗರಿಷ್ಠ ನೀರು ಸಂಗ್ರಹಣಾ ಮಟ್ಟ 2922 ಅಡಿಗಳಾಗಿದ್ದು, ಇಂದಿನ ಮಟ್ಟ 2911.45 ಕಳೆದ ವರ್ಷ ಇದೇ ದಿನ 2917.87 ಅಡಿ ಒಳಹರಿವು 5500ಕ್ಯೂಸೆಕ್ಸ್ ಕಳೆದ ವರ್ಷ ಇದೇ ದಿನ 5800 ಕ್ಯೂಸೆಕ್ಸ್, ಹೊರ ಹರಿವು  4700 ಕ್ಯೂಸೆಕ್ಸ್ ಕಳೆದ ವರ್ಷ ಇದೇ ದಿನ 6130ಕ್ಯೂಸೆಕ್ಸ್.

ಮಳೆ ವರದಿ

ಹಾಸನ ಆಗಸ್ಟ್ 29: ಜಿಲ್ಲೆಯಲ್ಲಿಂದು 62.7 ಮಿ.ಮೀ ಸರಾಸರಿ ಮಳೆಯಾಗಿದೆ. ತಾಲ್ಲೂಕುವಾರು ವಿವರ ಇಂತಿದೆ: ಆಲೂರು 5.2 ಮಿ.ಮೀ.ಅರಕಲಗೂಡು 10.2, ಅರಸೀಕೆರೆ 00 ಮಿ.ಮಿ. ಬೇಲೂರು 6.4, ಚನ್ನರಾಯಪಟ್ಟಣ 2.2, ಹಾಸನ 1.8 ಹೋಳೆನರಸೀಪುರ 3.5.ಮಿಮಿ.,  ಸಕಲೇಶಪುರ ತಾಲ್ಲೂಕಿನಲ್ಲಿ  33.4  ಮಿ.ಮೀ ಮಳೆಯಾಗಿದೆ.

ವಾಟೆಹೊಳೆ ಜಲಾಶಯದಿಂದ ಕಟ್ಟು ಪದ್ಧತಿಯಲ್ಲಿ ನೀರು ಬಿಡುಗಡೆ

ಹಾಸನ, ಆಗಸ್ಟ್ 29:  ವಾಟೆಹೊಳೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯನ್ನು ಆಗಸ್ಟ್ 23ರಂದು ನಡೆಸಲಾಗಿದ್ದು, ಅಂತಿಮವಾಗಿ ಸಭೆಯಲ್ಲಿ ಕೈಗೊಂಡ ತೀರ್ಮಾನದ ಮೇರೆಗೆ ವಾಟೆಹೊಳೆ ಜಲಾಶಯದಿಂದ 2012ರಲ್ಲಿ ಜಲಾಶಯದ ನೀರಿನ ಸಂಗ್ರಹಣೆಯ ಆಧಾರದ ಮೇಲೆ ಆಗಸ್ಟ್ 23ರಿಂದ ವಾಟೆಹೊಳೆ ಎಡದಂಡೆ ನಾಲೆಯಲ್ಲಿ 10 ದಿನ ನೀರು ಬಿಡುವುದು, 10 ದಿನ ನೀರು ನಿಲ್ಲಿಸುವುದು ಹಾಗೂ ವಾಟೆಹೊಳೆ ಬಲದಂಡೆ ನಾಲೆ ಮತ್ತು ನಾಕಲಗೂಡು ಶಾಖಾ ನಾಲೆಗಳಲ್ಲಿ 10 ದಿನ ನೀರು ಬಿಡುವುದು, 15 ದಿನ ನೀರು ನಿಲ್ಲಿಸುವುದು ಈ ರೀತಿ ಕಟ್ಟು ಪದ್ಧತಿಯಲ್ಲಿ ಜಲಾಶಯದಲ್ಲಿ ನೀರು ಲಭ್ಯವಿರುವವರೆಗೆ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ ನಿಯಮಿತ, ಹೇಮಾವತಿ ಅಣೆಕಟ್ಟು ವಿಭಾಗ, ಗೊರೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂದಲಿಯಲ್ಲಿ ಸಂವಾದ ಕಾರ್ಯಕ್ರಮ

ಹಾಸನ, ಆಗಸ್ಟ್ 29: ವಾರ್ತಾ ಇಲಾಖೆ ಹಾಸನ ಕಚೇರಿಯಿಂದ ಸ್ವಾತಂತ್ರ್ಯ ಸಂಗ್ರಾಮ ಒಂದು ಅವಲೋಕನ ಕುರಿತಂತೆ ಸಂವಾದ ಕಾರ್ಯಕ್ರಮವನ್ನು ಆಗಸ್ಟ್ 30ರಂದು ಬೆಳಿಗ್ಗೆ 11 ಗಂಟೆಗೆ ಕಂದಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಕಂದಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಕುಮಾರಿಯವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮುರಾರ್ಜಿ ವಸತಿ ಶಾಲೆಯ ಪ್ರಾಚಾರ್ಯರಾದ ತಮ್ಮಣ್ಣಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಬಿ. ಪುಟ್ಟರಾಜು ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ.ಶಿವಣ್ಣ ಇವರು ಭಾಗವಹಿಸುವರು. ಬಿ.ಎನ್.ರಾಮಸ್ವಾಮಿ, ನಿವೃತ್ತ ಪ್ರಾಚಾರ್ಯರು ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದ ನಂತರ ರವಿಕುಮಾರ್ ತಂಡದಿಂದ ಬೀದಿ ನಾಟಕ ಹಾಗೂ ಇಲಾಖೆಯಿಂದ ವಸ್ತುಪ್ರದರ್ಶನ ಮತ್ತು ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.