Government of Karnataka

Department of Information

Monday 11/09/2017

A apecial fearure on construct houses at lowest cost and at fastest pace bring home technology

Date : Thursday, January 19th, 2017

ಬೆಂಗಳೂರು, ಜನವರಿ 19 (ಕರ್ನಾಟಕ ವಾರ್ತೆ) :

ಮನೆ ! ಮನೆ !! ಮುದ್ದು ಮನೆ,
ಕಡಿಮೆ ವೆಚ್ಚದ, ಪರಿಸರಸ್ನೇಹಿ ಗಟ್ಟಿಮುಟ್ಟಾದ ನೆಲೆ.

ಸೂರಿಲ್ಲದ ಬಡವರಿಗೆ ಸೂರು
ಗಟ್ಟಿಮುಟ್ಟಿನ, ಕಡಿಮೆ ವೆಚ್ಚದ ತ್ವರಿತ ಗೃಹ ನಿರ್ಮಾಣಕ್ಕೆ ಅಡಿ.

ಪ್ರಯಾಸದಿಂದ ಮನೆ ನಿರ್ಮಿಸುವ ಬದಲು
ತ್ವರಿತ, ಸದೃಡದ ನೆಲೆ ಆರಾಮವಾಗಿ ನಿರ್ಮಿಸಿ

ಕಲ್ಪನೆಯ ಕನಸಿನ ಮನೆಗೀಗ ಕವಲು ದಾರಿ:
ಮನಕ್ಕೆ ಮುದ ನೀಡುವ ಅಂದದ ಮನೆ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು –ಇದು ಅತ್ಯಂತ ಜನಪ್ರಿಯ ನಾಣ್ಣುಡಿ. ಸಾಂಪ್ರದಾಯಿಕವಾಗಿ ಬಹಳ ಹಿಂದಿನಿಂದಲೂ ಜನಸಾಮಾನ್ಯರು ಮನೆ ಕಟ್ಟುವುದನ್ನು ಒಂದು ಸಮಸ್ಯೆಯಾಗಿಯೇ ಪರಿಗಣಿಸುತ್ತಾ ಬಂದಿದ್ದಾರೆ.

ದೇಶದಲ್ಲಿ ವಸತಿ ಸಮಸ್ಯೆ ಹೇಳಲಾರದಷ್ಟು ಭೀಕರವಾಗಿದೆ. ಜನಸಂಖ್ಯೆಯ ಅತೀವ ಹೆಚ್ಚಳದಿಂದ ದಿನ ಕಳೆದಂತೆ ಇದರ ನಿವಾರಣೆ ಬದಲು ಸಮಸ್ಯೆ ಜಟಿಲ ಸಮಸ್ಯೆಯಾಗಿಯೇ ಬೆಳೆಯುತ್ತಲಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸೂರಿಲ್ಲದವರಿಗೆ ಸೂರು ಒದಗಿಸುವುದೇ ತಮ್ಮ ಮಹತ್ತರ ಗುರಿಯನ್ನಾಗಿಸಿಕೊಂಡಿದೆ. ಅಂತೆಯೇ ಸಮಸ್ಯೆಯ ನಿವಾರಣೆಗೆ ಸತತ ಪ್ರಯತ್ನಗಳನ್ನು ಮಾಡುತ್ತಲೇ ಬಂದಿವೆ. ಆದರೂ ಸಮಸ್ಯೆ ನಿವಾರಣೆಯಾಗುತ್ತಿಲ್ಲ.

ಗೃಹ ನಿರ್ಮಾಣಕ್ಕಾಗಿ ಕೇಂದ್ರ ರಾಜ್ಯ ಸರ್ಕಾರ ಸುಲಭ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೀತಿಯ ಅನುಸಾರ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿಗೆ ಗೃಹಸಾಲ ಒದಗಿಸುತ್ತಿವೆ. ಆ ರೀತಿ ಗೃಹ ನಿರ್ಮಾಣ ಮಾಡಿದ ವೇತನದಾರರಿಗೆ ಹಾಗೂ ಇತರರಿಗೆ ಆದಾಯ ತೆರಿಗೆಲ್ಲಿಯೂ ಪರಿಹಾರ ಸೌಲಭ್ಯ ಕಲ್ಪಿಸಿದೆ. ಇಷ್ಟಾದರೂ ವಸತಿ ಸಮಸ್ಯೆ ಪರಿಹಾರವಾಗಿಲ್ಲ.

ಮನೆಗಳು, ಕಟ್ಟಡಗಳು ಆಕಾಶದಿಂದ ಉದುರುವುದಿಲ್ಲ, ಇಂದ್ರಜಾಲ, ಮಹೇಂದ್ರಜಾಲ ಮಾಡಿ ಸೃಷ್ಟಿಸಲು ಸಾಧ್ಯವಿಲ್ಲ. ಲಕ್ಷಾಂತರ ಮನೆಗಳನ್ನು ನಿರ್ಮಿಸಲು ವರ್ಷಾನುಗಟ್ಟಲೆ ಕಾಲಾವಕಾಶ ಬೇಕು. ಮರಳು, ಸಿಮೆಂಟ್, ಜಲ್ಲಿಕಲ್ಲು, ಮರ ಮುಟ್ಟುಗಳ ಅಗತ್ಯವಿದೆ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ?

ಇದೆ. 1992 ರ ಆಸುಪಾಸಿನಲ್ಲಿ ಅಂದಿನ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾಗಿದ್ದ ಎ ಪಿ ಜೆ ಅಬ್ದುಲ್ ಕಲಾಂ ಅವರು ಸರ್ಕಾರದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದರು. ಸೂರಿಲ್ಲದವರಿಗೆ ಕಡಿಮೆ ದರದಲ್ಲಿ ಗಟ್ಟಿಮುಟ್ಟಾದ ಪರಿಸರ-ಸ್ನೇಹಿ ಗೃಹ ನಿರ್ಮಾಣದ ಪರ್ಯಾಯ ಮಾರ್ಗಗಳನ್ನು ಕಂಡು ಕೊಳ್ಳಲು ಚನ್ನೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಪ್ರೊ. ಭಂಡಾರೆ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಲಾಯಿತು.

ಸಾಂಪ್ರದಾಯಿಕ ಕಟ್ಟಡಗಳ ನಿರ್ಮಾಣ ವೆಚ್ಚ ಅತಿಯಾದದ್ದು ಹಾಗೂ ನಿರ್ಮಾಣ ಸಾಮಗ್ರಿಗಳು ಸುಲಭವಾಗಿ ದೊರಕದೇ ಇದ್ದದ್ದು ಹೊಸ ಹೊಸ ನಿರ್ಮಾಣ ತಂತ್ರಜ್ಞಾನಕ್ಕೆ ಹಾಗೂ ನವ ನವೀನ ಅವಿಷ್ಕಾರಕ್ಕೆ ಕಾರಣವಾಗುತ್ತಿದೆ.

ಈ ಸಮಿತಿಯಲ್ಲಿ ಹಲವಾರು ವಿಜ್ಞಾನಿಗಳು ಸೇರಿ ಚರ್ಚಿಸಿದರು. ಇವುಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಯೋಜಿತ ತಾಂತ್ರಿಕ ಉದ್ಯಾನ (ಕಂಪೋಸಿಟ್ ಟೆಕ್ನಾಲಜಿ ಪಾರ್ಕ್) ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಯ ರಚನೆಯಲ್ಲಿ ಭಾರತ ಹಾಗೂ ಕರ್ನಾಟಕ ಸರ್ಕಾರಗಳೆರಡೂ ಪಾಲುದಾರರಾಗಿವೆ. ಇದರ ನಿರ್ವಹಣೆಗೆ ಮಂಡಳಿಯೊಂದನ್ನು ರಚಿಸಲಾಯಿತು. ಭಾರತೀಯ ವೈಮಾನಿಕ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದ ಡಾ ಆರ್. ಗೋಪಾಲನ್ ಅವರು ಈ ಮಂಡಳಿಯ ಮುಖ್ಯಸ್ಥರಾದರು.

ವಿವಿಧ ಪದ್ಮ ಪ್ರಶಸ್ತಿಗಳನ್ನು ಪಡೆದ ತಜ್ಞರ ಸಂಪೂರ್ಣ ತಾಂತ್ರಿಕ ಸಲಹೆ ಮೇರೆಗೆ ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದ ಗೃಹ ನಿರ್ಮಾಣದ ತಂತ್ರಜ್ಞಾನ ಕಂಡು ಹಿಡಿಯಲಾಯಿತು. ಇದರ ಅನುಷ್ಠಾನಕ್ಕೆ ಬೆಂಗಳೂರಿನ ಕೆಂಗೇರಿ ಉಪನಗರದ ಬಂಡೆ ಮಠದ ಬಳಿ ಕರ್ನಾಟಕ ಗೃಹ ಮಂಡಳಿ ಡೈಮಂಡ್ ಅಪಾರ್ಟ್‍ಮೆಂಟ್ ಎದುರು ಸುಮಾರು ಆರೂವರೆ ಎಕರೆ ಪ್ರದೇಶವನ್ನು ಸಂಯೋಜಿತ ತಾಂತ್ರಿಕ ಉದ್ಯಾನ ನಿರ್ಮಾಣಕ್ಕೆ ಕೊಡುಗೆಯಾಗಿ ನೀಡಿದೆ.

ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ ಸಂಯೋಜಿತ ವಿನ್ಯಾಸ ಕೇಂದ್ರ, ಸಂಯೋಜಿತ ತಾಂತ್ರಿಕ ಸಂಸ್ಥೆ ಇಲ್ಲಿ ಆರಂಭವಾಗಿದೆ. ಸಾಂಪ್ರದಾಯಿಕ ಗೃಹ ನಿರ್ಮಾಣಕ್ಕೆ ಬದಲು ಪರ್ಯಾಯ ತಾಂತ್ರಿಕತೆಯನ್ನು ಅನುಷ್ಠಾನಕ್ಕೆ ತರುವ ಕಾರ್ಯಕ್ಕೆ ಇಲ್ಲಿ ಚಾಲನೆ ದೊರೆತಿದೆ.
ಪರಿಸರ ಸ್ನೇಹಿ ಗೃಹ ನಿರ್ಮಾಣದಲ್ಲಿ ಸಾಂಪ್ರದಾಯಿಕ ವಸ್ತುಗಳನ್ನು ಬಳಸದೆ ಪ್ರಾಕೃತಿಕವಾಗಿ ದೊರೆಯುವ ವಸ್ತುಗಳನ್ನು ಬಳಕೆ ಮಾಡಿ ಕಟ್ಟಡಗಳನ್ನು ನಿರ್ಮಿಸುವ ತಂತ್ರಜ್ಞಾನವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗೃಹ ಅಥವಾ ಕಟ್ಟಡ ನಿರ್ಮಾಣಗಳಿಗೆ ಅಗತ್ಯವಾದ ಸೂರು, ಬಾಗಿಲು, ಕಿಟಕಿ, ಬಾಗಿಲು, ಗೋಡೆ ನಿರ್ಮಾಣ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಎಲ್ಲವನ್ನೂ ಕಡಿಮೆ ವೆಚ್ಚದ ಹಾಗೂ ಹಗುರವಾದ ಆದರೆ ಅಷ್ಟೇ ಸದೃಢ ಹಾಗೂ ಬಲಿಷ್ಠವಾಗಿರುವಂತೆ ರೂಪಿಸಲು ಪೂರಕ ತಂತ್ರಜ್ಞಾನವನ್ನು ಸಂಯೋಜಿತ ವಿನ್ಯಾಸ ಕೇಂದ್ರದಲ್ಲಿ ಅನ್ವೇಷಿಸಲಾಗಿದೆ. ಕೇವಲ ಮನೆಗಷ್ಟೇ ಸೀಮಿತವಾಗದೆ ಚಮ್ಮಾರರ ಕುಟೀರ ಹಾಗೂ ಇನ್ನಿತರ ಕಟ್ಟಡಗಳನ್ನು ಈ ತಂತ್ರಜ್ಞಾನ ಅಳವಡಿಸಿ ನಿರ್ಮಿಸಬಹುದಾಗಿದೆ. ಭಾರತಕ್ಕೆ ಅಗತ್ಯವಾದ ಗೃಹ ನಿರ್ಮಾಣದಲ್ಲಿನ ಪರ್ಯಾಯ ತಂತ್ರಜ್ಞಾನ ದೊರೆತಿದೆ. ಅತ್ಯಂತ ಸರಳ, ತ್ವರಿತವಾಗಿ ನಿರ್ಮಿಸುವ ಗಟ್ಟಿಮುಟ್ಟಾದ ಮನೆಗಳನ್ನು ಈಗಾಗಲೇ ತನ್ನ ಆವರಣದೊಳಗೆ ಹಾಗೂ ಪೊಲೀಸ್ ವಸತಿ ಸಮುಚ್ಛಯದಲ್ಲಿ ನಿರ್ಮಿಸಿ ಯಶಸ್ಸನ್ನು ಸಾಧಿಸಲಾಗಿದೆ.

ಇದರ ಜೊತೆಗೆ ಪ್ರಖ್ಯಾತ ಖಾಸಗಿ ಡೆವಲಪ್‍ರ್‍ಗಳು ಇವರಿಂದ ಖರೀದಿಸಿದ ಗೃಹ ನಿರ್ಮಾಣ ಸಾಮಗ್ರಿಗಳ ಮೂಲಕ ತಮ್ಮ ಒಡೆತನದ ಗೃಹ ನಿರ್ಮಾಣಗಳಲ್ಲಿ ಪರಿಸರ ಸ್ನೇಹಿ ಹಾಗೂ ಗಟ್ಟಿ ಮುಟ್ಟಾದ ಮನೆ ನಿರ್ಮಿಸಿ ಕೊಡುವುದಾಗಿ ಹೆಮ್ಮೆಯಿಂದ ಪ್ರಕಟಿಸಿದ್ದಾರೆ !

ಸಂಯೋಜಿತ ತಾಂತ್ರಿಕ ಸಂಸ್ಥೆಯ ಮೂಲ ಉದ್ದೇಶ ಪ್ರಕೃತಿಯಲ್ಲಿ ದೊರೆಯುವ ತೆಂಗಿನ ನಾರು, ಬಾಳೆ ನಾರು, ಬೊಂಬು, ಬಾಳೆ ದಿಂಡಿನಂತಹ ವಸ್ತುಗಳನ್ನು ಬಳಸಿ ಕಟ್ಟಡ ನಿರ್ಮಿಸಲು ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಯಾಗಿದೆ. ಇದು ಕರ್ನಾಟಕ ರಾಜ್ಯದ ಸೊಸೈಟಿ ಆಕ್ಟ್ – 1960 ರಡಿ ರಚನೆಯಾಗಿದ್ದು, ತಾಂತ್ರಿಕ ಸಲಹಾ ಸಮಿತಿಯ ನೆರವಿನೊಡನೆ ನಿರ್ದೇಶಕ ಮಂಡಳಿ ಕಾರ್ಯ ನಿರ್ವಹಿಸುತ್ತದೆ.

ಪ್ರಾಕೃತಿಕ ನಾರಿನಂಶಗಳನ್ನು ಉಪಯೋಗಿಸಿರುವ ವಿನ್ಯಾಸ, ಅಭಿವೃದ್ಧಿ ಮತ್ತು ಸಮೀಕ್ಷೆಗಾಗಿ ಹಲವು ವಿಧಾನಗಳನ್ನು ಸಂಸ್ಥೆ ಅನುಸರಿಸುತ್ತಿದೆ. ಈ ಸಂಸ್ಥೆಯು ಸಂಪೂರ್ಣ ಕಂಪ್ಯೂಟರ್ ನೆರವಿನ ವಿನ್ಯಾಸ ಕೇಂದ್ರ, ಗುಣಮಟ್ಟ ಪರೀಕ್ಷೆ ಮತ್ತು ನಿಯಂತ್ರಣ ಪ್ರಯೋಗಾಲಯ, ಬಳಸುವ ವಸ್ತುಗಳ ಗುಣಮಟ್ಟ ಪರೀಕ್ಷೆ ಪ್ರಯೋಗಾಲಯ, ತರಬೇತಿ ಕೇಂದ್ರ, ತಾಂತ್ರಿಕ ದಾಖಲೀಕರಣ ಕೇಂದ್ರ ಹಾಗೂ ವಿವಿಧ ಹಂತದ ಕಾರ್ಯ ಸೌಲಭ್ಯ ಹೊಂದಿದೆ.

ನೀವು ನಿರ್ಮಿಸಲಿರುವ ಕಟ್ಟಡದ ಆದ್ಯತೆ, ಅಗತ್ಯತೆಗಳ ಸ್ವರೂಪ ಗುರುತು ಹಾಕಿ ಅಥವಾ ಕರಡು ನೀಲ ನಕ್ಷೆ ಸಿದ್ದಪಡಿಸಿಕೊಂಡು ಸಂಸ್ಥೆಗೆ ನೀಡಿದರೆ ಅಲ್ಲಿನ ಕಂಪ್ಯೂಟರ್‍ನಲ್ಲಿ ಕಟ್ಟಡದ ಅಂತಿಮ ನೀಲನಕ್ಷೆ ( Building Blue Print )  ಸಿದ್ದಗೊಳ್ಳುತ್ತದೆ. ನಂತರ ಮಿಂಚಿನ ವೇಗದಲ್ಲಿ ಅದನ್ನು ಯಂತ್ರಕ್ಕೆ ಕಳುಹಿಸಲಾಗುತ್ತದೆ. ಕ್ಷಿಪ್ರಗತಿಯಲ್ಲಿ ಕಟ್ಟಡಕ್ಕೆ ಅಗತ್ಯವಾದ ಗಟ್ಟಿ ಮಾಡಲಾದ ಅಲ್ಯೂಮಿನಿಯಂ ಹಾಗೂ ಇನ್ನಿತರ ಕಟ್ಟಡ ಸಾಮಗ್ರಿಗಳು ಸಿದ್ದಗೊಳ್ಳುತ್ತದೆ. ಅವುಗಳನ್ನು ಕೊಂಡೊಯ್ದು ನಿಮ್ಮ ನಿವೇಶನದಲ್ಲಿ ಜೋಡಿಸಿ ಕೆಲವೇ ತಾಸುಗಳಲ್ಲಿ ನಿಮ್ಮ ಮನೆ ಸಿದ್ದಗೊಳ್ಳುತ್ತದೆ !

ಹತ್ತು ಚದುರದ ಮನೆ ನಿರ್ಮಾಣಕ್ಕೆ ಹತ್ತು ತಿಂಗಳು ಬೇಕಿಲ್ಲ ! ಕೇವಲ ಹತ್ತು ಗಂಟೆಗಳೇ ಸಾಕು !! ಇದು ಇಸ್ಪೇಟ್ ಎಲೆಗಳಂತಲ್ಲ !!! ದೀರ್ಘ ಕಾಲ ಬಾಳಿಕೆ ಬರುವ ಸದೃಢ ಮನೆಗಳು !!! ಇದು ಸಂಯೋಜಿತ ತಾಂತ್ರಿಕ ಉದ್ಯಾನದ ಸಾಹಸ ಮಾತ್ರವಲ್ಲ, ಸಾಧನೆಯೂ ಆಗಿದೆ.

ಸಂಸ್ಥೆಯ ಮುಖ್ಯಸ್ಥ ವಿಜ್ಞಾನಿ ಡಾ ಆರ್ ಗೋಪಾಲನ್ ಅವರು ಹೇಳುವಂತೆ ಈ ತಂತ್ರಜ್ಞಾನದ ವಿಸ್ತøತ ಬಳಕೆ ಆರಂಭಗೊಂಡರೆ ಭಾಗಶಃ ದೇಶದಲ್ಲಿ ಜನ ವಸತಿ ನಿರ್ಮಾಣದಲ್ಲಿ ದೊಡ್ಡ ಕ್ರಾಂತಿಯೇ ಉಂಟಾಗುತ್ತದೆ. ಸರಳ, ಸುಂದರ, ಸಾಂಪ್ರದಾಯಿಕ ಮನೆಗಳಿಗಿಂತ ಹೆಚ್ಚು ಗಟ್ಟಿಮುಟ್ಟಾದ ಪರಿಸರ ಸ್ನೇಹಿ ಮನೆಗಳು ದೇಶದೆಲ್ಲೆಡೆ ತಲೆ ಎತ್ತಲಿದೆ. ಶಬ್ದ ಮಾಲಿನ್ಯ, ಶಾಖ ಮಾಲಿನ್ಯ, ಪ್ರಕೃತಿ ವಿಕೋಪ ಹಾನಿ ತಡೆಗಟ್ಟಲು ಸಾಮಥ್ರ್ಯವಿರುವುದರಿಂದ ಈ ಕಟ್ಟಡಗಳು ಮುಂದಿನ ದಿನಗಳಲ್ಲಿ ಜನಸ್ನೇಹಿಯಾಗಬಲ್ಲದು ಎನ್ನುತ್ತಾರೆ.

ಇಂತಹ ಗೃಹ ನಿರ್ಮಾಣಕ್ಕೆ ಅಂದಾಜು ಬೆಲೆ ಚದರ ಅಡಿಗೆ 1350 ರೂ ಆಗುತ್ತದೆ. ಅಲ್ಲದೆ, ಹೊರ ಹಾಗೂ ಒಳನೋಟಗಳು ಯಾವುದೇ ಸಾಂಪ್ರದಾಯಿಕ ಮನೆಗಳಿಗಿಂತ ಸುಂದರ, ಸರಳ ಅದಕ್ಕೂ ಹೆಚ್ಚಾಗಿ ಗಟ್ಟಿ ಮುಟ್ಟಾದುದಾಗಿದೆ – ಎನ್ನುತ್ತಾರೆ ಮಂಡಳಿಯ ಸದಸ್ಯ ಬಿ. ಹೆಚ್. ಲೋಕೇಶ್.

ಮೇಲ್ನೋಟಕ್ಕೆ ನಿಜಕ್ಕೂ ಇದೊಂದು ಅದ್ಭುತ. ಸರಳ ಸದೃಢ ಕಟ್ಟಡ ನಿರ್ಮಾಣ ತಂತ್ರಜ್ಞಾನ ಎಂಬುದು ಕಂಡು ಬರುತ್ತದೆ. ಸಾಂಪ್ರದಾಯಿಕ ಗೃಹ ನಿರ್ಮಾಣಕ್ಕೆ ಮಾನಸಿಕವಾಗಿ ಸಂಪೂರ್ಣ ಹೊಂದಿ ಕೊಂಡಿರುವ ಜನರು ಹೆಚ್ಚು ಹೆಚ್ಚು ಮುಂದಾಗಿ ಇಂತಹ ಪರಿಸರ ಸ್ನೇಹಿ ಗೃಹ ನಿರ್ಮಾಣಕ್ಕೆ ಮುಂದಾದರೆ ಈ ನೂತನ ಅವಿಷ್ಕಾರಗಳು ಮತ್ತಷ್ಟು ಫಲಪ್ರದವಾಗಲು ಮಾತ್ರವಲ್ಲ, ಪರಿಸರ ಸಂರಕ್ಷಣೆಯೂ ಸಾಧ್ಯ.

ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ವಿಮಾನಗಳನ್ನು ನಿರ್ಮಿಸುವ ಲೈಟ್ ಗೇಜ್ ಸ್ಟ್ರೀಲ್ ಫ್ರೇಮ್ ಸ್ಟ್ರಕ್ಚರ್ ತಂತ್ರಜ್ಞಾನದಿಂದ ಅತ್ಯಂತ ಕ್ಷಿಪ್ರವಾಗಿ ನಿರ್ಮಿಸಬಹುದಾದ ಮನೆಗಳ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ : ಡಾ ಆರ್. ಗೋಪಾಲನ್, ಕಾರ್ಯ ನಿರ್ವಾಹಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಕಾಂಪೋಸಿಟ್ ಡಿಸೈನ್ ಸೆಂಟರ್ ಮತ್ತು ಕಾಂಪೋಸಿಟ್ ಟೆಕ್ನಾಲಜಿ ಪಾರ್ಕ್, ಕರ್ನಾಟಕ ಗೃಹ ಮಂಡಳಿ, ಡೈಮಂಡ್ ಅಪಾರ್ಟ್‍ಮೆಂಟ್ ಎದುರು, ಬಂಡೆಮಠ, ಕೆಂಗೇರಿ ಉಪನಗರ, ಬೆಂಗಳೂರು – 560 060. ದೂರವಾಣಿ : 080 – 6599 7605 ಮತ್ತು 080 – 6558 1005 ಮೊಬೈಲ್ ಸಂಖ್ಯೆ : 76762 99152 ಹಾಗೂ ಅಂತರ್ಜಾಲ : www.compositestechnologypark.com.