Government of Karnataka

Department of Information

Tuesday 31/05/2016

About Us

ವಾರ್ತಾ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರದ ಬಹುಮುಖ್ಯ ಇಲಾಖೆಗಳಲ್ಲಿ ಒಂದು. ಸರ್ಕಾರ ತನ್ನ ಜನರಿಗಾಗಿ ಹಮ್ಮಿಕೊಳ್ಳುವ ಪ್ರಗತಿಪರ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸಿ ಯೋಜನೆಗಳ ಫಲಾನುಭವಿಗಳಾಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದು. ಇದಕ್ಕಾಗಿ ವಿಭಿನ್ನ ಸಮೂಹ ಮಾಧ್ಯಮಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುವುದು. ಅದಕ್ಕಾಗಿ ಇಲಾಖೆ ಪೂರ್ವಭಾವಿ ಕಾರ್ಯಕ್ರಮಗಳನ್ನು ಆಯೋಜಿಸುವುದು. ಸರ್ಕಾರ ಇಲಾಖೆಯ ಕಾರ್ಯಚಟುವಟಿಕೆಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ ಆಯ-ವ್ಯಯದಲ್ಲಿ ಯೋಜನೆ ಮತ್ತು ಯೋಜನೇತರ ಶೀರ್ಷಿಕೆಯಡಿ ಅನುದಾನ ಬಿಡುಗಡೆ ಮಾಡುವುದು.

ವಾರ್ತಾ ಇಲಾಖೆ ರಾಜ್ಯವ್ಯಾಪಿ ಹಾಗೂ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ತನ್ನ ಕಾರ್ಯಜಾಲವನ್ನು ಹೊಂದಿದೆ. ಕೇಂದ್ರ ಕಛೇರಿಯನ್ನು ಹೊರತುಪಡಿಸಿ ಎಲ್ಲಾ 30 ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾಧಿಕಾರಿಗಳ ಕಾರ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ನವದೆಹಲಿಯಲ್ಲಿ ಕರ್ನಾಟಕ ವಾರ್ತಾ ಕೇಂದ್ರ ಮತ್ತು ಹುಬ್ಬಳ್ಳಿಯಲ್ಲಿ ರಾಜ್ಯ ವಾರ್ತಾ ಕೇಂದ್ರಗಳಿದ್ದು, ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಮಾಹಿತಿ ಒದಗಿಸುವ ಕಾರ್ಯವನ್ನು ನಿರ್ವಹಿಸುತ್ತಿವೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೇಂದ್ರ ವಾರ್ತಾ ಕಛೇರಿಯಿದ್ದು, ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿರುವರು. ಇಲಾಖೆಯ ದಿನನಿತ್ಯದ ಕಾರ್ಯ ನಿರ್ವಹಣೆಗೆ ಕೇಂದ್ರ ಕಛೇರಿಯಲ್ಲಿ ಒಬ್ಬರು ನಿರ್ದೇಶಕರು, ನಾಲ್ಕು ಜನ ಜಂಟಿ ನಿರ್ದೇಶಕರು, ಆರು ಜನ ಉಪನಿರ್ದೇಶಕರು ಮತ್ತು ಎಂಟು ವಿವಿಧ ಶಾಖೆಗಳ ಮುಖ್ಯಸ್ಥರು ಆಯುಕ್ತರಿಗೆ ನೆರವಾಗುವರು. ಅದೇ ರೀತಿ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳಿಗೆ ತಕ್ಕಂತೆ ಸೃಷ್ಠಿಸಿರುವ ಹುದ್ದೆಗಳ 5 ಜನ ಉಪನಿರ್ದೇಶಕರು, 8 ಜನ ಹಿರಿಯ ಸಹಾಯಕ ನಿರ್ದೇಶಕರು, 14 ಜನ ಸಹಾಯಕ ನಿರ್ದೇಶಕರು ಆಯುಕ್ತರ ಮಾರ್ಗದರ್ಶನದಲ್ಲಿ ಸರ್ಕಾರದ ಯೋಜನೆ ಮತ್ತು ಯೋಜನೇತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಲ್ಲಿ ನಿರತರಾಗಿರುತ್ತಾರೆ.

ವಿವಿಧ ಶಾಖೆಗಳ ಕಾರ್ಯಚಟುವಟಿಕೆಗಳು:

I. ಸುದ್ದಿ ಮತ್ತು ಪತ್ರಿಕಾ ಶಾಖೆ :

ಸರ್ಕಾರ ಏರ್ಪಡಿಸುವ ಸಭೆ ಸಮಾರಂಭಗಳು ಮತ್ತು ಹಮ್ಮಿಕೊಳ್ಳುವ ಯೋಜನಾ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸುದ್ದಿ ಬಿಡುಗಡೆ ಮಾಡುವ ಕಾರ್ಯವನ್ನು ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗವು ನೆರವೇರಿಸುತ್ತದೆ. ಅಲ್ಲದೆ ಆಗಾಗ್ಗೆ ಸಚಿವರ, ಗಣ್ಯ ಮತ್ತು ಅತಿಗಣ್ಯರ ಕಾರ್ಯಕ್ರಮಗಳಿಗೆ ಹಾಗೂ ಅಭಿವೃದ್ಧಿಪರ ಚಟುವಟಿಕೆಗಳ ವೀಕ್ಷಣೆಗೆ ಪತ್ರಕರ್ತರ ಪ್ರವಾಸವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ.

ಮಾನ್ಯತೆ ಪಡೆದ ಪತ್ರಕರ್ತರಿಗಾಗಿ ಉಚಿತ ಬಸ್ ಪಾಸ್ ಸೌಲಭ್ಯ (ವಾರ್ಷಿಕ ರೂ.1000 ಮೌಲ್ಯದ), ಸಂಕಷ್ಟದಲ್ಲಿರುವ ಹಿರಿಯ ಪತ್ರಕರ್ತರಿಗೆ ಮಾಸಾಶನ, ಖ್ಯಾತ ಪತ್ರಕರ್ತ ದಿ|| ಟಿ.ಯಸ್.ರಾಮಚಂದ್ರರಾವ್ ಅವರ ನೆನಪಿನಲ್ಲಿ ಪತ್ರಿಕೋದ್ಯಮದಲ್ಲಿ ಗಮನಾರ್ಹ ಸಾಧನೆ ಮಾಡಿದ ಪತ್ರಕರ್ತರಿಗೆ ”ಟೀಯೆಸ್ಸಾರ್ ಪ್ರಶಸ್ತಿ”, ”ಪರಿಸರ ಪತ್ರಿಕೋದ್ಯಮ ಪ್ರಶಸ್ತಿ” ಮತ್ತು ”ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ” ಗಳನ್ನು ನೀಡುವ ಜವಾಬ್ದಾರಿಯನ್ನು ಈ ಶಾಖೆ ನಿರ್ವಹಿಸುತ್ತದೆ. ಇದರೊಂದಿಗೆ ಪತ್ರಿಕೆಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕುರಿತು ಬರುವ ಟೀಕೆ ಟಿಪ್ಪಣಿಗಳನ್ನು ಸಂಬಂಧಪಟ್ಟ ಇಲಾಖೆ / ಸಚಿವಾಲಯಕ್ಕೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಟ್ಟು, ಅವರುಗಳಿಂದ ಪ್ರತಿಕ್ರಿಯೆ / ಪ್ರತಿಸ್ಪಂದನ (ರಿಜೆಂಡರ್‍ಸ್) ಪ್ರಯತ್ನಿಸುವುದು. ಪಿ.ಟಿ.ಐ. ಮತ್ತು ಯು.ಎನ್.ಐ. ಹಾಗೂ ಇನ್ನಿತರ ಕನ್ನಡ ಸುದ್ದಿ ಸಂಸ್ಥೆಗಳ ಟೆಲಿಪ್ರಿಂಟರ್ ಸುದ್ದಿ ಸೌಲಭ್ಯಗಳನ್ನು ಈ ಶಾಖೆ ಹೊಂದಿಗೆ.

II. ವಾಣಿಜ್ಯ ಪ್ರಚಾರ ಶಾಖೆ :

ಈ ಶಾಖೆಯು ಸರ್ಕಾರದ ವಿವಿಧ ಇಲಾಖೆಗಳ ಟೆಂಡರ್ ಜಾಹೀರಾತುಗಳನ್ನು ಮತ್ತು ಸರ್ಕಾರದ ಜನಪರ ಯೋಜನೆಗಳು ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಮಹತ್ವದ ಸಂದರ್ಭಗಳಲ್ಲಿ ಆಕರ್ಷಕ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆಯನ್ನು ಮಾಡುತ್ತದೆ ಹಾಗೂ ಟೆಂಡರ್ ಗಳನ್ನು ವೆಬ್‌ಸೈಟಿಗೆ ಬಿಡುಗಡೆ ಮಾಡುವುದು. ಇದಕ್ಕಾಗಿ ಸುಮಾರು 150 ಅಂಗೀಕೃತ ದಿನಪತ್ರಿಕೆಗಳು ಹಾಗು 150 ನಿಯತಕಾಲಿಕೆಗಳನ್ನು ಮಾಧ್ಯಮ ಪಟ್ಟಿಗೆ ಸೇರಿಸಿ ಅವುಗಳಿಗೆ ಇಲಾಖೆ ರಿಯಾಯಿತಿ ದರದ ಜಾಹೀರಾತು ದರಗಳನ್ನು ನಿಗದಿಪಡಿಸಿ ಜಾಹೀರಾತು ನೀಡುತ್ತದೆ.

ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದವರು ನಡೆಸುವ ಪತ್ರಿಕೆಗಳಿಗೆ, ಗಡಿಭಾಗದ ಪತ್ರಿಕೆಗಳಿಗೆ, ಕಲೆ, ಸಾಹಿತ್ಯ, ಸಂಸ್ಕೃತಿ , ಕ್ರೀಡೆ ವಿಷಯಗಳನ್ನು ಬಿಂಬಿಸುವ ವಿಶೇಷ ಪತ್ರಿಕೆಗಳಿಗೆ ಇಲಾಖೆ ಪ್ರತಿ ತಿಂಗಳು ಪ್ರೋತ್ಸಾಹ ರೂಪದಲ್ಲಿ ಜಾಹೀರಾತು ಬಿಡುಗಡೆ ಮಾಡುವುದು.

III. ಕ್ಷೇತ್ರ ಪ್ರಚಾರ ವಿಭಾಗ :

1) ವಸ್ತು ಪ್ರದರ್ಶನ :

ವಾರ್ತಾ ಇಲಾಖೆಯಲ್ಲಿ ಪ್ರಸ್ತುತ ಪ್ರತಿ ಜಿಲ್ಲೆಗೆ ಒಂದರಂತೆ 30 ಸಂಚಾರಿ ವಸ್ತು ಪ್ರದರ್ಶನ ವಾಹನಗಳಿದ್ದು, ಇವು ಕ್ಷೇತ್ರ ಪ್ರಚಾರ ಕಾರ್ಯದಲ್ಲಿ ಬಳಕೆಯಾಗುತ್ತಿದೆ. ಸಂಚಾರಿ ವಸ್ತು ಪ್ರದರ್ಶನ ವಾಹನಗಳಲ್ಲಿ ವಿಡಿಯೋ ಪ್ರೊಜೆಕ್ಟರ್, ವಿ.ಸಿ.ಡಿ.ಪ್ಲೇಯರ್, ಸೌಂಡ್ ಸಿಸ್ಟಂ, ಜನರೇಟರ್ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಿಂಬಿಸುವ ಫಲಕಗಳಿಂದ ಸುಸಜ್ಜಿತವಾಗಿ ಅಳವಡಿಸಿ, ಇವುಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

2) ಸಂಗೀತ ಮತ್ತು ನಾಟಕ ಸೇವೆ :

ಸರ್ಕಾರದ ಪ್ರಮುಖ ಜನಪರ ಯೋಜನೆಗಳನ್ನು ಹಾಗೂ ಸಾಧನೆಗಳನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಕಲಾ ಮಾಧ್ಯಮದ ಮೂಲಕ ಪ್ರಚಾರ ಮಾಡುವ ವ್ಯವಸ್ಥೆ ಹೊಂದಿದೆ. ಅದರನುಸಾರ ತೊಗಲು ಬೊಂಬೆಯಾಟ, ಬಯಲಾಟ, ಜನಪದ ಹಾಡು, ಬೀದಿ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ.

ವಿದ್ಯಾರ್ಥಿ ಸಮುದಾಯದಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸುವ ಬಗ್ಗೆ ಅಭಿರುಚಿ. ಆಸಕ್ತಿ ಕುದುರಿಸುವ ವಾರ್ತಾ ಪ್ರಶ್ನಾವಳಿ ಜನರು ಮತ್ತು ಜನಪ್ರತಿನಿಧಿಗಳ ನಡುವೆ ನೇರ ಸಂವಾದಕ್ಕೆ ಅವಕಾಶ ಕಲ್ಪಿಸುವ ಜನಪ್ರಿಯ ಮತ್ತು ನವೀನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಅದೇ ರೀತಿ ಮೈಸೂರು ದಸರಾ ಮಹೋತ್ಸವ ಹಾಗು ದೆಹಲಿಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ವೈಶಿಷ್ಟ್ಯಪೂರ್ಣ ವಿಷಯಗಳ ಸ್ತಬ್ದಚಿತ್ರಗಳನ್ನು ಪ್ರದರ್ಶಿಸುವ ಹಾಗೂ ರಾಜ್ಯದ ಪ್ರಮುಖ ಜಾತ್ರಾ ಉತ್ಸವಗಳಲ್ಲಿ ಪ್ರದರ್ಶನ ಮಳಿಗೆಗಳನ್ನು ತೆರೆದು ಪ್ರಚಾರ ಕಾರ್ಯಕ್ರಮ ಏರ್ಪಡಿಸುತ್ತದೆ.

3) ದೂರದರ್ಶನ ಯೋಜನೆ :

ಗ್ರಾಮೀಣ ಪ್ರಸಾರ ಮತ್ತು ದೂರದರ್ಶನ ಯೋಜನೆಯಡಿ ಪರಿಶಿಷ್ಟ ಜಾರಿ / ಪಂಗಡಗಳ ಕಾಲೋನಿಗಳಲ್ಲಿ ಬಣ್ಣದ ದೂರದರ್ಶನಗಳನ್ನು ಅಳವಡಿಸಲಾಗುತ್ತದೆ. ಕರ್ನಾಟಕ ವಿಧಾನ ಮಂಡಲದ ಕಾರ್ಯಕಲಾಪಗಳ ನೇರ ವೀಕ್ಷಣೆಗೆ ವಿಧಾನ ಸೌಧದಲ್ಲಿ ಆಂತರಿಕ ದೂರದರ್ಶನಗಳ ನಿರ್ವಹಣೆ ಕೆಲಸ ನಿರ್ವಹಿಸುತ್ತದೆ.

IV. ಚಲನಚಿತ್ರ ವಿಭಾಗ :

1) ಚಲನಚಿತ್ರ ಶಾಖೆ:

ರಾಜ್ಯದಲ್ಲಿ ಚಲನಚಿತ್ರೋದ್ಯಮದ ಬೆಳವಣಿಗೆಗೆ ಸರ್ಕಾರದ ಪ್ರೋತ್ಸಾಹ ದೊರಕಿಸಿಕೊಡುವ ಮತ್ತು ಚಲನಚಿತ್ರಗಳ ನಿರ್ಮಾಣದಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕಾರ್ಯ ಈ ವಿಭಾಗದ್ದು, ಚಲನಚಿತ್ರಗಳಿಗೆ ಸಹಾಯಧನ, ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ರಾಜ್ಯದ ಚಿತ್ರಗಳಿಗೆ ಹಾಗೂ ಕಲಾವಿದರಿಗೆ ನಗದು ಪುರಸ್ಕಾರ, ಮನೋರಂಜನಾ ತೆರಿಗೆ ವಿನಾಯಿತಿ, ಚಿತ್ರೀಕರಣಕ್ಕಾಗಿ ಅನುಮತಿ ಇತ್ಯಾದಿ ಸಂಬಂಧಿಸಿದ ಕಾರ್ಯಗಳನ್ನು ಈ ವಿಭಾಗ ನಿರ್ವಹಿಸುವುದು.

2) ಛಾಯಾಚಿತ್ರ ಶಾಖೆ :

ಸರ್ಕಾರದ ಸಭೆ ಸಮಾರಂಭಗಳ ಚಿತ್ರೀಕರಣ ಮತ್ತು ಅವುಗಳನ್ನು ಸುದ್ದಿ ಸಂಸ್ಥೆಗಳಿಗೆ, ದೂರದರ್ಶನ, ಪತ್ರಿಕಾ ಕಾರ್ಯಾಲಯಗಳಿಗೆ ವಿತರಿಸುವ ಕಾರ್ಯ ಈ ಶಾಖೆಯಲ್ಲಿ ಮಾಡಲಾಗುವುದು. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರತಿವಾರ ದೂರದರ್ಶನದಲ್ಲಿ ಮೂಡಿ ಬರುತ್ತಿದ್ದ ಅತ್ಯಂತ ಜನಪ್ರಿಯ ಕಥಾ ಆಧಾರಿತ ಪ್ರಗತಿ ಚಿತ್ರ ಬಿಂಬಿಸುವ ಸಂಚಿಕೆ “ಹೊಂಬೆಳಕು” ನಿರ್ಮಾಣ ಕಾರ್ಯವನ್ನು ಈ ಶಾಖೆ ನಿರ್ವಹಿಸುವುದು. ಅದೇ ರೀತಿ ಪ್ರತಿ ಗುರುವಾರ ರಾಜ್ಯದ ಜನತೆಯ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವ ಸಾಹಿತ್ಯ 15 ನಿಮಿಷಗಳ “ಹೇಳಿಕೇಳಿ” ಮತ್ತೊಂದು ರೇಡಿಯೋ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ.

V. ಪ್ರಕಟಣಾ ವಿಭಾಗ :

ಈ ವಿಭಾಗ ಸರ್ಕಾಋದ ಯೋಜನೆಗಳ ಕುರಿತು ಆಗಗ್ಗೆ ಕಿರುಹೊತ್ತಿಗೆ, ಮಡಿಕೆ ಪತ್ರ, ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕರಿಗೆ ವಿತರಿಸುವ ಕಾರ್ಯ, ಹೆದ್ದಾರಿ ಫಲಕಗಳ ನಿರ್ಮಾಣ ಮತ್ತು ಪ್ರದರ್ಶನ, ತಗಡು ಫಲಕಗಳು ಹಾಗೂ ಪ್ರತಿ ತಿಂಗಳು ಕನ್ನಡದಲ್ಲಿ “ಜನಪದ” ಮತ್ತು ಆಂಗ್ಲ ಭಾಷೆಯಲ್ಲಿ “ಮಾರ್ಚ್ ಆಫ್ ಕರ್ನಾಟಕ” ನಿಯತಕಾಲಿಕೆಗಳ ಪ್ರಕಟಣೆಯನ್ನು ಹೊರತರುತ್ತದೆ.

VI. ಲೆಕ್ಕಪತ್ರ ಶಾಖೆ :

ಇಲಾಖೆಗೆ ಅಗತ್ಯವಿರುವ ಬಡ್ಜೆಟ್ ತಯಾರಿಸುವುದು. ಇಲಾಖೆಯ ಸಿಬ್ಬಂದಿಗಳ ವೇತನ ಸಂಬಂಧ ಅಪೆಂಡಿಕ್ಸ್-ಬಿ ತಯಾರಿಸುವುದು. ಮಹಾಲೇಖಪಾಲಕರ ತಪಾಸಣೆ, ಆಡಿಟ್ ಪ್ಯಾರಾಗಳಿಗೆ ಅನುಸರಣಾ ವರದಿ ಕಳುಹಿಸುವುದು. ಇಲಾಖೆಯ ವಿವಿಧ ಶೀರ್ಷಿಕೆಗಳಡಿ ಮಾಡಿರುವ ವೆಚ್ಚದ ಅಂಕಿ ಅಂಶಗಳನ್ನು ಮಹಾಲೇಖಪಾಲಕರ ಕಛೇರಿಯ ಲೆಕ್ಕದೊಂದಿಗೆ ತಾಳೆ ಹೊಂದಿಸುವುದು. ಕೇಂದ್ರ ಕಛೇರಿಯ ಅಧಿಕಾರಿಗಳ, ಸಿಬ್ಬಂದಿಗಳ ವೇತನ, ಇತರ ಭತ್ಯೆಗಳ ಬಿಲ್ಲುಗಳ ತಯಾರಿಕೆ ಹಾಗೂ ವಿತರಣೆ. ಕೇಂದ್ರ ಕಛೇರಿಯ ಇತರೆ ವೆಚ್ಚಗಳ ಬಿಲ್ಲುಗಳ ತಯಾರಿಕೆ ಹಾಗೂ ವಿತರಣೆ. ಅಧೀನ ಕಛೇರಿಗಳಿಗೆ ಅನುದಾನ ಬಿಡುಗಡೆ ಮಾಡುವುದು. ಕಛೇರಿಯ ಖರ್ಚು ವೆಚ್ಚಗಳ ಬಗ್ಗೆ ನಗದು ಪುಸ್ತಕ ನಿರ್ವಹಣೆ. ಹಣ ಸ್ವೀಕೃತಿ ಹಾಗೂ ಖಜಾನೆಗೆ ಜಮಾ ಮಾಡುವುದು. ಆರ್ಥಿಕ ವಿಷಯಗಳ ಸಂಬಂಧ ಖಜಾನೆ ಹಾಗೂ ಸರ್ಕಾರದೊಂದಿಗೆ ಪತ್ರ ವ್ಯವಹಾರ ಇತ್ಯಾದಿ ಕೆಲಸಗಳನ್ನು ಈ ಶಾಖೆ ನಿರ್ವಹಿಸುವುದು.

VII. ಆಡಳಿತ ವಿಭಾಗ :

1) ಆಡಳಿತ ಶಾಖೆ :

ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರ ಸೇವಾ ವಿಷಯಗಳನ್ನು ನಿರ್ವಹಿಸುವುದು. ಇಲಾಖೆಯ ಕಛೇರಿ ಕಟ್ಟಡಕ್ಕೆ ಸಂಬಂಧಿಸಿದ ವಿಷಯಗಳ ನಿರ್ವಹಣೆ. ಕಛೇರಿಯ ಉಗ್ರಾಣ ನಿರ್ವಹಣೆ. ಅಭಿಲೇಖಾಲಯ ನಿರ್ವಹಣೆ. ಇಲಾಖೆಯ ಯೋಜನಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅನುದಾನ ವಿತರಣೆ ಹಾಗೂ ಕಾರ್ಯಕ್ರಮ ಗುರಿ ನಿಗಧಿಪಡಿಸುವುದು. ಮಾಸಿಕ ಯೋಜನಾ ಕಾರ್ಯಕ್ರಮಗಳ ಎಂ.ಎಂ.ಆರ್. ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದು. ಫೋಟೋ ಕಾಪಿಯರ್, ಗಣಕ ಯಂತ್ರ, ಫ್ಯಾಕ್ಸ್ ಯಂತ್ರ ಮತ್ತು ಇತರೆ ಯಂತ್ರೋಪಕರಣಗಳ ನಿರ್ವಹಣೆ.

2) ವಾಹನ ಶಾಖೆ :

ಇಲಾಖೆಯ ಕೇಂದ್ರ ಹಾಗೂ ಅಧೀನ ಕಛೇರಿಗಳ ವಾಹನಗಳ ನಿರ್ವಹಣೆ ಹಾಗೂ ಉಸ್ತುವಾರಿ ಕೆಲಸ ನಿರ್ವಹಿಸುವುದು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ಅಧೀನ ಕಛೇರಿಗಳ ಕಾರ್ಯಚಟುವಟಿಕೆಗಳು :

1. ಸಂಬಂಧಪಟ್ಟ ಜಿಲ್ಲಾ ವಾರ್ತಾ ಕಛೇರಿಗಳ ಉಪನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು :-

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪತ್ರಿಕಾ ಗೋಷ್ಠಿ ಪತ್ರಕರ್ತರ ಪ್ರವಾಸ ಏರ್ಪಡಿಸುವುದು; ಜಿಲ್ಲೆ ಹಾಗೂ ತಾಲ್ಲೂಕುಗಳ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆಗಳಲ್ಲಿ ಭಾಗವಹಿಸಿ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡುವುದು. ಜಿಲ್ಲಾಡಳಿತದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಕಛೇರಿಯ ದಿನನಿತ್ಯದ ಕೆಲಸ ಕಾರ್ಯಗಳ ಉಸ್ತುವಾರಿ ನಿರ್ವಹಿಸುವುದು.

2. ಸಂಬಂಧಪಟ್ಟ ಹಿರಿಯ ಸಹಾಯಕ ನಿರ್ದೇಶಕರು, ರಾಜ್ಯ ವಾರ್ತಾ ಕೇಂದ್ರ, ಹುಬ್ಬಳ್ಳಿ :-

ಕರ್ನಾಟಕ ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಮುಖ್ಯ ಯಾತ್ರಾ ಕೇಂದ್ರಗಳು, ಇತ್ಯಾದಿಗಳ ಬಗ್ಗೆ ಜನ ಸಾಮಾನ್ಯರಿಗೆ ಹಾಗೂ ಪತ್ರಿಕೆಯವರಿಗೆ ಮಾಹಿತಿ ಒದಗಿಸುವುದು ಮತ್ತು ಇಲಾಖಾ ಪ್ರಕಟಣೆಗಳ ವಿತರಣೆ ಕೆಲಸ ನೋಡಿಕೊಳ್ಳುವುದು.

3. ಉಪನಿರ್ದೇಶಕರು, ಕರ್ನಾಟಕ ವಾರ್ತಾ ಕೇಂದ್ರ, ನವದೆಹಲಿ :-

ಕೇಂದ್ರ ಸಚಿವಾಲಯ ಹಾಗೂ ಕರ್ನಾಟಕ ಸ್ಥಾನೀಯ ಆಯುಕ್ತರು, ನವದೆಹಲಿ ಇವರೊಂದಿಗೆ ಮತ್ತು ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದವರ ಜೊತೆ ನಿಕಟ ಸಂಪರ್ಕ ಇಟ್ಟುಕೊಳ್ಳುವುದು. ಕರ್ನಾಟಕ ಮುಖ್ಯಮಂತ್ರಿಗಳ ಹಾಗೂ ಇತರ ಸಚಿವರುಗಳ, ಕಾರ್ಯದರ್ಶಿಗಳ ಪತ್ರಿಕಾ ಗೋಷ್ಠಿಗಳನ್ನು ಏರ್ಪಡಿಸುವುದು. ಕರ್ನಾಟಕ ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಮುಖ್ಯ ಯಾತ್ರಾ ಕೇಂದ್ರಗಳು, ಇತ್ಯಾದಿಗಳ ಬಗ್ಗೆ ಜನ ಸಾಮಾನ್ಯರಿಗೆ ಹಾಗೂ ಪತ್ರಿಕೆಯವರಿಗೆ ಮಾಹಿತಿ ಒದಗಿಸುವುದು.