Government of Karnataka

Department of Information

Wednesday 20/12/2017

District News 07-05-2012

Date : Monday, May 7th, 2012

ಉದ್ಯೋಗಖಾತ್ರಿ ಯೋಜನೆ ಅನುಷ್ಠಾನ : ತಾಲೂಕು ಅಧಿಕಾರಿಗಳಿಗೆ ತರಬೇತಿ

ಕೊಪ್ಪಳ ಮೇ. 07 (ಕರ್ನಾಟಕ ವಾರ್ತೆ) : ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ತರಬೇತಿ ಕಾರ್ಯಕ್ರಮ ಮೇ. 8 ರಿಂದ 11 ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.

            ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಪ್ರಧಾನಕಾರ್ಯದರ್ಶಿಗಳು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕರು, ಮೈಸೂರು ಇವರ ನಿರ್ದೇಶನದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಉದ್ಯೋಗಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕನ್ವರ್ಜೆನ್ಸ್ ಕಾಮಗಾರಿಗಳ ಗುಚ್ಛ ಮತ್ತು ಅಭಿವೃದ್ಧಿ ಮುನ್ನೋಟ ತಯಾರಿ ಮಾಡುವ ಕುರಿತಂತೆ ತರಬೇತಿಯನ್ನು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮೇ. 8 ರಿಂದ 11 ರವರೆಗೆ ನಾಲ್ಕು ದಿನಗಳ ನಡೆಯಲಿದೆ.   ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರುಗಳು, ಕಿರಿಯ ಇಂಜಿನಿಯರುಗಳು ಕಡ್ಡಾಯವಾಗಿ ಮೇ. 8 ರಂದು ಬೆಳಿಗ್ಗೆ 10 ಗಂಟೆಗೆ ಹಾಜರಾಗುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ತಿಳಿಸಿದ್ದಾರೆ.

ಯಲಬುರ್ಗಾ : ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಗೆ ಅರ್ಜಿ ಆಹ್ವಾನ

ಕೊಪ್ಪಳ ಮೇ. 07 (ಕ.ವಾ): ಯಲಬುರ್ಗಾ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ಸವಲತ್ತು ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

            2012-13ನೇ ಸಾಲಿಗಾಗಿ ಯುಎಸ್‌ಇಪಿ ಯೋಜನೆಯಲ್ಲಿ ಸ್ವಯಂ ಉದ್ಯೋಗ ಪ್ರಾರಂಭಿಸಲು ಶೇ. 25 ರ ಸಹಾಯಧನದೊಂದಿಗೆ ಗರಿಷ್ಟ 2 ಲಕ್ಷ ರೂ.ಗಳವರೆಗೆ (ಬ್ಯಾಂಕ್ ಸಹಕಾರದೊಂದಿಗೆ) ಸಾಲ ಮಂಜೂರು ಮಾಡಲಾಗುವುದು.  ಅಲ್ಲದೆ ಯುಡಬ್ಲ್ಯೂಎಸ್‌ಪಿ ಯೋಜನೆಯಲ್ಲಿ ವಿವಿಧ ಗುಂಪುಗಳಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಶೇ. 35 ರಷ್ಟು ಧನ ಸಹಾಯದೊಂದಿಗೆ ಸಾಲ ಮಂಜೂರು ಮಾಡಲಾಗುವುದು.  ಅಲ್ಲದೆ ವಿವಿಧ ತರಬೇತಿಗಾಗಿಯೂ ಅರ್ಜಿ ಆಹ್ವಾನಿಸಲಾಗಿದೆ.  ಭರ್ತಿ ಮಾಡಿದ ಅರ್ಜಿಯನ್ನು ದ್ವಿಪ್ರತಿಯಲ್ಲಿ ತಯಾರಿಸಿ, ಶೈಕ್ಷಣಿಕ ಪ್ರಮಾಣಪತ್ರ, ಜಾತಿ, ಆದಾಯ ಪ್ರಮಾಣಪತ್ರ, ಪಡಿತರಚೀಟಿ/ಗುರುತಿನ ಚೀಟಿ/ ವಾಸಸ್ಥಳ ಪ್ರಮಾಣಪತ್ರ, ಇತ್ತೀಚಿನ ಭಾವಚಿತ್ರ, ಅಫಿಡೆವಿಟ್, ಯೋಜನಾ ವರದಿಯನ್ನು ಲಗತ್ತಿಸಿ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯತಿ, ಯಲಬುರ್ಗಾ ಇವರಿಗೆ ಜೂ. 04 ರ ಒಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ  ಪ್ರವೇಶಕ್ಕೆ ಮೇ. 9 ರಿಂದ ಕೌನ್ಸಿಲಿಂಗ್

ಕೊಪ್ಪಳ ಮೇ. 07 (ಕ.ವಾ): ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2012-13ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಜರುಗಿದ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಮೇ. 9 ರಿಂದ 10 ರವರೆಗೆ ಎರಡು ದಿನಗಳ ಕಾಲ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕೌನ್ಸಿಲಿಂಗ್ ನಡೆಯಲಿದೆ ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಅವರು ತಿಳಿಸಿದ್ದಾರೆ.

            ಈಗಾಗಲೆ ಅರ್ಹ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್‌ಗೆ ಹಾಜರಾಗಲು ಸಂದರ್ಶನ ಪತ್ರ ಕಳುಹಿಸಲಾಗಿದ್ದು, ಅಲ್ಲದೆ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ.  ಆಯ್ಕೆಪಟ್ಟಿಯಲ್ಲಿ ಹೆಸರಿದ್ದು, ಸಂದರ್ಶನ ಪತ್ರ ಬಾರದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜರುಗುವ ಕೌನ್ಸಿಲಿಂಗ್‌ಗೆ ಹಾಜರಾಗಬಹುದಾಗಿದೆ.  ಮೇ. 09 ರಂದು ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಸಾಮಾನ್ಯ ವರ್ಗದವರಿಗೆ ಕೌನ್ಸಿಲಿಂಗ್ ನಡೆಸಲಾಗುವುದು.  ಮೇ. 10 ರಂದು ವಿಶೇಷ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕಾಯ್ದಿರಿಸಿದ ಪಟ್ಟಿಯಲ್ಲಿನ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಲಾಗುವುದು.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 08539- 221606 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ಮೇ. 07 (ಕ.ವಾ): ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮವು 2012-13ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಾಗಿ ಪ.ಜಾತಿ ಮತ್ತು ಪ.ವರ್ಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

            ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಗಂಗಾಕಲ್ಯಾಣ ವಯಕ್ತಿ ಕೊಳವೆ ಬಾವಿ ಯೋಜನೆ, ಭೂ ಒಡೆತನ ಯೋಜನೆ ಹಾಗೂ ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆ, ನೇರಸಾಲ ಯೋಜನೆ ಮತ್ತು ಮೈಕ್ರೋ ಕ್ರೆಡಿಟ್ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.  ಸಾಲ ಸೌಲಭ್ಯ ಪಡೆಯಲು ಇಚ್ಛಿಸುವ ಅರ್ಜಿದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು, ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು, ವಾರ್ಷಿಕ ಆದಾಯ ರೂ. 22000 ಕ್ಕಿಂತ ಕಡಿಮೆ ಇರಬೇಕು, ಸರ್ಕಾರಿ ಸೇವೆಯಲ್ಲಿ ಇರಬಾರದು, ವಾಹನ ಸೌಲಭ್ಯ ಪಡೆಯಲು ಇಚ್ಛಿಸಿದಲ್ಲಿ ಆಯಾ ವಾಹನಕ್ಕನುಗುಣವಾಗಿ ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಡ್ಜ್ ಹೊಂದಿರಬೇಕು.  ಈ ಹಿಂದೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವವರು ಪುನಃ ಅರ್ಜಿ ಸಲ್ಲಿಸಬಹುದು.  ನಿಗದಿತ ನಮೂನೆಯ ಅರ್ಜಿಯಲ್ಲಿ ಚಟುವಟಿಕೆಯ ವಿವರಗಳೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, 2 ಭಾವಚಿತ್ರ, ಯೋಜನಾ ವರದಿಯನ್ನು ಆಯಾ ಘಟಕಕ್ಕೆ ಅನುಗುಣವಾಗಿ ಸಲ್ಲಿಸಬೇಕು.  ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಇಚ್ಛಿಸಿದಲ್ಲಿ ನಗರಸಭೆ/ಪುರಸಭೆಯಿಂದ ಸರ್ವೆ ಮಾಡಿದ ಸರ್ವೇ ಪಟ್ಟಿಯಲ್ಲಿ ಸೇರ್ಪಡೆಯಾಗಿರಬೇಕು.  ಈ ಹಿಂದೆ ನಿಗಮದಿಂದ ಸಾಲ ಸೌಲಭ್ಯ ಪಡೆದಿದ್ದಲ್ಲಿ ಪುನಃ ಅರ್ಜಿ ಸಲ್ಲಿಸಬಾರದು.  ಅರ್ಜಿ ಸಲ್ಲಿಸುವ ಅರ್ಜಿದಾರರ ತಮ್ಮ ವಿಧಾನಸಭಾ ಮತಕ್ಷೇತ್ರವನ್ನು ತಪ್ಪದೆ ನಮೂದಿಸಬೇಕು. ನಿಗದಿತ ಅರ್ಜಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ಅಥವಾ ಆಯಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಉಚಿತವಾಗಿ ಪಡೆಯಬಹುದಾಗಿದೆ.  ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿಲ್ಲಾಢಳಿತ ಭವನ, ಎರಡನೆ ಮಹಡಿ, ಕೊಪ್ಪಳ ಇವರಿಗೆ ಜೂನ್ 30 ರ ಒಳಗಾಗಿ ಸಲ್ಲಿಸಬೇಕು ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: 08539- 221176 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಶಾಸಕರಿಂದ ನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ

ವಿಜಾಪುರ ಮೇ,07- ನಗರದಲ್ಲಿ ಇಂದು ಮುಂಜಾನೆ ಸನ್ 2011-12ನೇ ಸಾಲಿನ ಎಸ್.ಎಫ್.ಸಿ ಮತ್ತು 13ನೇ ಹಣಕಾಸು ಯೋಜನೆಯಡಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರದ ಶಾಸಕರಾದ ಶ್ರೀ ಅಪ್ಪಾಸಾಹೇಬ(ಅಪ್ಪು) ಮ.ಪಟ್ಟಣಶೆಟ್ಟಿ ಮತ್ತು ನಗರಸಭೆ ಅಧ್ಯಕ್ಷರಾದ ಶ್ರೀ ಪರಶುರಾಮ ವ್ಹಿ ರಜಪೂತ ಇವರು ಭೂಮಿ ಪೂಜಾ ಸಮಾರಂಭವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಶ್ರೀ. ಚನ್ನಪ್ಪ ಬಜಂತ್ರಿ ಹಾಗೂ ವಾರ್ಡಿನ ಸದಸ್ಯರುಗಳಾದ ಉಮೇಶ ವಂದಾಲ, ಆನಂದ ಧುಮಾಳೆ, ಶ್ರೀಮತಿ ಚಾಂದುಬಾಯಿ ಚವ್ಹಾಣ, ಎಂ.ಎಸ್ ಕರಡಿ, ಎಂ.ಆರ್ ನುಚ್ಚಿ, ಪ್ರಕಾಶ ಮಿರ್ಜಿ, ಶ್ರೀಮತಿ ಭಾರತಿ, ಬೆಲ್ಲದಲ ಮತ್ತು ನಗರದ ರಾಹುಲ ಜಾಧವ, ವಿಜಯ ಜೊಷಿ, ಮಳಗೌಡ ಪಾಟೀಲ, ವಿಶು ಜಾಧವ, ಪೌರಾಯುಕ್ತರಾದ ಎಸ್.ಜಿ ರಾಜಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಬಿ.ಬಿ.ಚೌಗಲಾ, ಸಹಾಯಕ ಅಭಿಯಂತರರಾದ ಎಸ್.ಎಸ್.ಕೊಟೆಣ್ಣವರ, ಎಸ್.ಎಂ ಕಲಬುರ್ಗಿ ಆಯ್.ಎಂ ಬಡಿಗೇರ ಹಾಗೂ ನಗರಸಭೆ ಸಿಬ್ಬಂದಿ ವರ್ಗ ಮತ್ತು ಗುತ್ತಿಗೆದಾರರಾದ ಆರ್.ಎಸ್ ಚೋರಗಿ, ಬಿ.ವಾಯ್ ಉಪ್ಪಾರ, ಎಂ.ಎಂ ಮನಿಯಾರ, ಎಂ.ಬಿ.ಬಂಡಿ, ಸಿದ್ದು ತಲ್ಲಿಹಾಳ, ರಾಮು ಹೊಸಪೇಠೆ, ಎಸ್.ಸಿ ಯರನಾಳ, ಆಯ್.ಎಫ್ ಇರಕಲ್ ಹಾಗೂ ವಾರ್ಡಿನ ನಾಗರೀಕರು ಉಪಸ್ಥಿತರಿದ್ದರು.

ಮೇ 9 ರಂದು ಕೌದಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿಯ ಭೂಮಿ ಪೂಜೆ

ಚಾಮರಾಜನಗರ ಮೇ 7, (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ತಾಲ್ಲೂಕಿನ ರಾಮಾಪುರ ಹೋಬಳಿ ಕುರಟ್ಟಿಹೊಸೂರು ಗ್ರಾಮ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಕುರಟ್ಟಿಹೊಸೂರು ಗ್ರಾಮದಿಂದ ಕೌದಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿಯ ಭೂಮಿ ಪೂಜೆ ಸಮಾರಂಭವನ್ನು ಮೇ 9 ರಂದು ಬೆಳಿಗ್ಗೆ 10 ಗಂಟೆಗೆ ಕುರಟ್ಟಿಹೊಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ ಅವರು ಭೂಮಿ ಪೂಜೆ ಮಾಡುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕರಾದ ಆರ್. ನರೇಂದ್ರ ಅಧ್ಯಕ್ಷತೆ ವಹಿಸುವರು.

    ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ರಾಜೇಶ್ವರಿ, ಶಾಸಕರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಸಂದೇಶ್ ನಾಗರಾಜು, ಮರಿತಿಬ್ಬೇಗೌಡ, ಗೋ. ಮಧುಸೂಧನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕೆ. ಈಶ್ವರ್, ತಾ.ಪಂ. ಅಧ್ಯಕ್ಷರಾದ ನಾಗಲಾಂಬಿಕ ಬಸವಣ್ಣ, ಉಪಾಧ್ಯಕ್ಷರಾದ ಎಂ. ಮಲ್ಲಯ್ಯ, ತಾ.ಪಂ. ಸದಸ್ಯರಾದ ಭಾಗ್ಯಮ್ಮ ವೆಂಕಟಮುನಿಶೆಟ್ಟಿ, ಗ್ರಾ.ಪಂ. ಅಧ್ಯಕ್ಷರಾದ ಸರ್ದಾರ್, ಉಪಾಧ್ಯಕ್ಷರಾದ ಮೈಲಾಜಡಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಕಲಾಬಾಯಿ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮೇ 9 ರಂದು ಯುವ ಚೇತನ ತರಬೇತಿ ಶಿಬಿರ

ಚಾಮರಾಜನಗರ ಮೇ 7, (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ ಯುವ ಚೇತನ ತರಬೇತಿ ಶಿಬಿರವನ್ನು ಮೇ 9 ರಂದು ಬೆಳಿಗ್ಗೆ 10-30 ಗಂಟೆಗೆ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಕಾಲೋನಿಯ ಗಿರಿಜನರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದೆ.

    ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೆ. ರಾಜೇಶ್ವರಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸುವರು.

   ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕೆ. ಈಶ್ವರ್, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕೆ. ಮಹದೇವ, ಸದಸ್ಯರಾದ ಕೇತಮ್ಮ, ತಾ.ಪಂ. ಅಧ್ಯಕ್ಷರಾದ ಉಮಾವತಿ, ಸದಸ್ಯರಾದ ಎನ್. ಮಹೇಶ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೋಮಣ್ಣ, ಸದಸ್ಯರಾದ ನಂಜೇಗೌಡ, ದಾಸೇಗೌಡ, ಮಂಗಳಗೌರಮ್ಮ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗರತ್ನಮ್ಮ, ಸಾಹಿತಿಗಳು ಮತ್ತು ಉಪನ್ಯಾಸಕರಾದ ನಾಗೇಶ್‌ಸೋಸ್ಲೆ, ಜಿಲ್ಲಾ ಬುಡಕಟ್ಟು ಅಭಿವೃದ್ದಿ ಸಂಘದ ಕಾರ್ಯದರ್ಶಿ ಸಿ. ಮಾದೇಗೌಡ, ತಾಲ್ಲೂಕು ಸೋಲಿಗ ಅಭಿವೃದ್ದಿ ಸಂಘದ ಕಾಡನ ಮಾದೇಗೌಡ, ದೇವೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

 ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಚಾಮರಾಜನಗರ ಮೇ 7 (ಕರ್ನಾಟಕ ವಾರ್ತೆ):- ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ ಅವರು ಮೇ 8 ಹಾಗೂ 9 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

    ಮೇ 8 ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲದಲ್ಲಿ ನಡೆಯುವ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಂದು ಸಂಜೆ 4:30 ಗಂಟೆಗೆ ರಸ್ತೆಯ ಮೂಲಕ ಗೋಪಿನಾಥಂನ ಗಡಿ ಪ್ರದೇಶ ಹಾಗೂ ಅರಣ್ಯಧಾಮಕ್ಕೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸುವರು. ನಂತರ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡುವರು.

   ಮೇ 9 ರಂದು ಬೆಳಿಗ್ಗೆ 10 ಗಂಟೆಗೆ ಕೌದಳ್ಳಿ-ಕುರಹಟ್ಟಿ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೇರವೇರಿಸುವರು. ಅಂದು ಬೆಳಿಗ್ಗೆ 11-30 ಗಂಟೆಗೆ ರಾಮಾಪುರದ ಪ್ರವಾಸಿ ಮಂದಿರ ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಬರ ಪರಿಹಾರ ಕಾಮಗಾರಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವರು. ಮದ್ಯಾಹ್ನ 3-30 ಗಂಟೆಗೆ ಜಾಗೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವರು. ಸಂಜೆ 4 ಗಂಟೆಗೆ ಬೆಂಗಳೂರಿಗೆ ತೆರೆಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ ಮೇ 7 (ಕರ್ನಾಟಕ ವಾರ್ತೆ):- ಗುಂಡ್ಲುಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಗುಂಡ್ಲುಪೇಟೆ ಪಟ್ಟಣ, ಹಂಗಳ, ಬಾಚಹಳ್ಳಿ, ಬೊಮ್ಮಲಾಪುರ, ಬೇಗೂರು ಮತ್ತು ಕಬ್ಬಹಳ್ಳಿ ಗ್ರಾಮಗಳಲ್ಲಿ ಮೆಟ್ರಿಕ್ ಪೂರ್ವ ಬಾಲಕರ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು 6ನೇ ತರಗತಿಯಲ್ಲಿ 2012-13 ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

   ವಿದ್ಯಾರ್ಥಿ ನಿಲಯಗಳಿಗೆ ಸೇರಲಿರುವ ವಿದ್ಯಾರ್ಥಿಗಳು ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳಿಂದ ಅಥವಾ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು ಜೂನ್ 10 ರೊಳಗೆ ಸಲ್ಲಿಸಬೇಕು. ವಿದ್ಯಾರ್ಥಿ ನಿಲಯಗಳಳ್ಲಿ ಉಚಿತ ವಸತಿ, ಊಟ, ಸಮವಸ್ತ್ರ, ಲೇಖನ ಸಾಮಾಗ್ರಿಗಳು ಹಾಗೂ ಇತರೆ ಸೌಲಭ್ಯವನ್ನು ನೀಡಲಾಗುವುದು. ಎಂದು ಗುಂಡ್ಲುಪೇಟೆಯ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮೇ 11 ರಂದು ಜಿ.ಪಂ. ಕೆ.ಡಿ.ಪಿ. ಸಭೆ

            ದಾವಣಗೆರೆ, ಮೇ.07- ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಮಾಸಿಕ ಸಭೆಯನ್ನು ಮೇ.11 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ  ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿಗಳು ಹಾಗೂ ಕೆ.ಡಿ.ಪಿ. ಮಾಸಿಕ ಸಭೆಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವಧಿಯೊಳಗೆ ಕಾಮಗಾರಿ ಮುಗಿಸಿ: ಜಗದೀಶ್ ಶೆಟ್ಟರ್

ದಾವಣಗೆರೆ, ಮೇ.07- ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳನ್ನು ಅವಧಿಯೊಳಗೆ ಮಾಡಿ ಮುಗಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಜಗದೀಶ್ ಶೆಟ್ಟರ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

            ಅವರು ಭಾನುವಾರ ಹರಪನಹಳ್ಳಿ ತಾಲೂಕಿನ ಗರ್ಭಗುಡಿಯಲ್ಲಿ ಕಣವಿ ಮತ್ತು ಇತರೆ 20 ಹಳ್ಳಿಗಳಿಗೆ ಕುಡಿಯಲು ನದಿ ನೀರು ಸರಬರಾಜು ಮಾಡುವ ಯೋಜನೆ ಉದ್ಘಾಟಿಸಿ ನಂತರ ತಾಲೂಕಿನ ನಜೀರ್ ನಗರದಲ್ಲಿ ರಾಜೀವ್ ಗಾಂಧಿ ಸಬ್‌ಮಿಷನ್ ಯೋಜನೆಯಡಿಯಲ್ಲಿ ತಾಲ್ಲೂಕಿನ ಚಿಗಟೇರಿ ಮತ್ತು ಇತರೆ 56 ಗ್ರಾಮಗಳಿಗೆ ಹಾಗೂ ನಿಚ್ಚವ್ವನಹಳ್ಳಿ ಮತ್ತು ಇತರೆ 46 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

            ಇಂದು ಇಲ್ಲಿ ಭೂಮಿ ಪೂಜೆ ನೆರವೇರಿಸಲಾದ ಕುಡಿಯುವ ನೀರಿನ ಕಾಮಗಾರಿಗಳು ಅವಧಿ ಮುಗಿಯುವ ಮೊದಲು ಮುಗಿಸಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಪೂರೈಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ನದಿಮೂಲ ಪಕ್ಕದಲ್ಲಿಯೇ ಇದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಂರ್ತಜಲಮಟ್ಟ ಕೂಡ ಕುಸಿದಿದೆ, ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ ಹೀಗಾಗಿ ಶಾಶ್ವತ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಆಧ್ಯತೆ ನೀಡುತ್ತಿದೆ, ನದಿಮೂಲಗಳಿಂದ ಕೆರೆ, ಹಳ್ಳಗಳಿಗೆ ನೀರನ್ನು ಹರಿಸಿ ಆ ಮುಖಾಂತರ ಕುಡಿಯುವ ನೀರನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

  ನದಿ, ಹಳ್ಳ, ಕೆರೆ-ಕಟ್ಟೆಗಳಿಂದ ಕುಡಿಯುವ ನೀರು ಸರಬರಾಜು ಮಾಡುವ 217 ಬಹು ಗ್ರಾಮಗಳ ಯೋಜನೆಗೆ 2,650 ಕೋಟಿ ರೂ. ಮಂಜೂರು ಮಾಡಲಾಗಿದೆ, 217 ಬಹು ಗ್ರಾಮ ಯೋಜನೆಯಲ್ಲಿ 4,100 ಹಳ್ಳಿಗಳು ಒಳಪಡುತ್ತವೆ. ದಾವಣಗೆರೆ ಜಿಲ್ಲೆಯಲ್ಲಿ 185 ಕೋಟಿ ರೂ.ಗಳ 18 ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು. 

            ನಗರ ಪ್ರದೇಶಗಳಲ್ಲಿರುವ ಮೂಲಭೂತ ಸೌಕರ್ಯಗಳು ಗ್ರಾಮೀಣ ಭಾಗಕ್ಕೆ ಒದಗಿಸುವ ಸುವರ್ಣ ಗ್ರಾಮ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆ ಯೋಜನೆಯಲ್ಲಿ 3,300 ಗ್ರಾಮಗಳನ್ನು ಸುವರ್ಣಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಯೋಜನೆಯಡಿ 1 ಸಾವಿರ ಗ್ರಾಮಗಳನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ ಇದಕ್ಕಾಗಿ ವಿಶೇಷ ಅನುದಾನವನ್ನು ನೀಡಲಾಗಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಿದ್ದು, ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿಯಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 20 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು ಇನ್ನು ಮುಂದೆ ಅದನ್ನು 30 ಕಿ.ಮೀ.ಗೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ಕಿ.ಮೀ. ರಸ್ತೆ ನಿರ್ಮಾಣಕ್ಕೆ 30 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅವರು ಹೇಳಿದರು.

            ಗ್ರಾಮ ಪಂಚಾಯತ್‌ಗಳ ಪುನರ್ ವಿಂಗಡಣೆ ಆಗಬೇಕು. ಅದಕ್ಕಾಗಿ ಮಹೇಂದ್ರ ಕಂಠಿ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿದೆ. ಅವರು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ ಸಾರ್ವಜನಿಕರಿಂದ ಅಹವಾಲು ಆಲಿಸುವರು, ಆಯೋಗದ ಸಮಗ್ರ ವರದಿ ಬಂದ ನಂತರ ಗ್ರಾಮ ಪಂಚಾಯತ್‌ನ ಪುನರ್ ವಿಂಗಡಣೆಗೆ ಕ್ರಮವಹಿಸಲಾಗುವುದು ಎಂದರು.

            ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಬದ್ಧವಾಗಿದೆ, ಗ್ರಾಮ ಪಂಚಾಯತ್‌ಗಳಿಗೆ ಬಿಡುಗಡೆಯಾಗುತ್ತಿದ್ದ ಅನುದಾನ ಮೊದಲ 6 ಲಕ್ಷಕ್ಕೆ ಇತ್ತು. ಅದನ್ನು 8 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ 10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅಂತೆಯೇ ತಾಲ್ಲೂಕು ಪಂಚಾಯತ್‌ಗೆ 1 ಕೋಟಿ ರೂ.ಗಳ ವಿಶೇಷ ಅನುದಾನ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಈ ಹಿಂದೆ ನೀಡಲಾಗುತ್ತಿದ್ದ 1 ಕೋಟಿ ವಿಶೇಷ ಅನುದಾನವನ್ನು ಈ ಬಾರಿ ಬಜೆಟ್‌ನಲ್ಲಿ 2 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು. 

            ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದ ಕೂಲಿ 125 ರೂ.ಗಳನ್ನು 155 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಗ್ರಾಮೀಣರು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಹಳ್ಳಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕರಣಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಆಸಕ್ತಿ ವಹಿಸಬೇಕು. ರಾಜ್ಯದಲ್ಲಿ 90 ಸಾವಿರ ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. ಮೊದಲು ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು ಶೌಚಾಲಯ ನಿರ್ಮಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

            ಸಕ್ಕರೆ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎ. ರವೀಂದ್ರನಾಥ್ ಅವರು ಮಾತನಾಡಿ, ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿನ ಯೋಜನೆ ಒದಗಿಸಲು ಕ್ರಮ ವಹಿಸಲಾಗುತ್ತಿದೆ, ಈ ಯೋಜನೆಗಳ ಕಾಮಗಾರಿಗಳು ತುರ್ತಾಗಿ ಆಗಬೇಕು, ಸ್ಥಳೀಯರು ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡಬೇಕು. ತೋಟಗಾರಿಕೆ ಬೆಳೆಗಳನ್ನು ಉತ್ತೇಜಿಸಲು ಸರ್ಕಾರ ಸಹಾಯಧನ ನೀಡುತ್ತಿದೆ. ನೀರಾವರಿ, ಹನಿ ನೀರಾವರಿ, ಕೊಳವೆಬಾವಿ ಕೊರೆಸಲು ಸಹಾಯಧನ ನೀಡುಲಾಗುತ್ತಿದೆ, ಇದರ ಪ್ರಯೋಜನ ಪಡೆದು ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ಅವರು ಕರೆ ನೀಡಿದರು.

            ಸಂಸದರಾದ ಜಿ.ಎಂ. ಸಿದ್ದೇಶ್ವರ್, ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಎಸ್.ವಿ. ರಾಮಚಂದ್ರ ಹಾಗೂ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕರಾದ ಜಿ. ಕರುಣಾಕರ ರೆಡ್ಡಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ಚಿದಾನಂದ, ಉಪಾಧ್ಯಕ್ಷರಾದ  ಶ್ರೀಮತಿ ಯಶೋಧಮ್ಮ ಹಾಲೇಶ್, ಮಾಜಿ ಶಾಸಕರಾದ ವಿ.ಬಿ. ಹಾಲಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಗೀತಾಬಾಯಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವನಗೌಡ, ತೆಲಿಗಿ ಈಶ್ವರಪ್ಪ, ಕವಿತಾ, ಊಮ್ಲಿಬಾಯಿ, ಪುರಸಭಾಧ್ಯಕ್ಷ ಮಹಬೂಬ್ ಸಾಬ್, ಉಪಾಧ್ಯಕ್ಷೆ ಸುಮಿತ್ರಾ ಬಾಪೂಜಿ, ತಾಲ್ಲೂಕು ಪಂಚಾಯತ್ ಸದಸ್ಯರಾದ ಎನ್. ಕೊಟ್ರೇಶ, ಅಧೀಕ್ಷಕ ಇಂಜಿನಿಯರ್ ಶಿವಾನಂದ ಬಣಕಾರ, ಜಿಲ್ಲಾ ಪಂಚಾಯತ್ ಸಿಇಓ ಗುತ್ತಿ ಜಂಬುನಾಥ್, ತಹಶೀಲ್ದಾರ ಡಾ. ವೆಂಕಟೇಶಮೂರ್ತಿ, ಇಓ ಪಾಂಡೆಪ್ಪ ಹಾಗೂ ಇತರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳು

ದಾವಣಗೆರೆ, ಮೇ.07- 2012-13ನೇ ಸಾಲಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಭೌದ್ದ, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಈ ಜನಾಂಗದವರ ಏಳಿಗೆಗಾಗಿ  ಸ್ವಾವಲಂಬನಾ ಯೋಜನೆಯಡಿ ಮಾರ್ಜಿನ್ ಮತ್ತು ಸಹಾಯಧನ, ಅರಿವು ಸಾಲ ಯೋಜನೆ (ವೃತ್ತಿಪರ ವ್ಯಾಸಂಗಕ್ಕಾಗಿ), ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋಸಾಲ (ಕಿರುಸಾಲ ಯೋಜನೆ) ಮತ್ತು ಗಂಗಾ ಕಲ್ಯಾಣ ಯೋಜನೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸದರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಮೂರ್ತಿ ಶ್ರೀ. ಎನ್. ಕೆ. ಪಾಟೀಲ ಅವರಿಂದ ಅಂಗನವಾಡಿ ಕೇಂದ್ರಗಳ ವ್ಯವಸ್ಥೆ ಪರಿಶೀಲನೆ

ಬೆಳಗಾವಿ:ಮೇ:7:(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಅಪೌಷ್ಠಿಕ ಮಕ್ಕಳ ಹಾಗೂ ಶಿಶು ಮರಣ ತಡೆಗಟ್ಟುವ ಕುರಿತು ರಚಿಸಿರುವ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ. ಎನ್.ಕೆ. ಪಾಟೀಲ ಅವರು ಮೇ 3 ರಂದು ಬೆಳಗಾವಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು.

      ಬಾಳೇಕುಂದ್ರಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ: 562, 566, ಬಾಗೇವಾಡಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ: 68 ಮತ್ತು 72 ನೇ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಮಕ್ಕಳಿಂದ ಹಾಡು, ಕಥೆ ಇತ್ಯಾದಿ ಮಾಹಿತಿ ಪಡೆದು ಅಂಗನವಾಡಿ ಪೌಷ್ಠಿಕ ಆಹಾರದ ಬಗ್ಗೆ, ಅಂಗನವಾಡಿ ಮಕ್ಕಳಿಗೆ ವೈದ್ಯಾಧಿಕಾರಿಗಳಿಂದ ತಪಾಸಣೆ ಮಾಡಿರುವ ಬಗ್ಗೆ ಪರಿಶೀಲಿಸಿದರು.

        ಫಲಾನುಭವಿಗಳನ್ನು, ತಾಯಂದಿರನ್ನು ಸ್ವತ: ನ್ಯಾಯಾಧೀಶರು ಅಂಗನವಾಡಿಗೆ ಕರೆಯಿಸಿ ಪೌಷ್ಠಿಕ ಆಹಾರ, ಕೋಳಿ ಮೊಟ್ಟೆ, ಹಾಲು, ಔಷಧಿಗಳನ್ನು ನೀಡಿದ್ದರ ಬಗ್ಗೆ ತಪಾಸಣೆ ಮಾಡಿದರು. ಸ್ವತ: ಮಾನ್ಯ ನ್ಯಾಯಾಧೀಶರು ಮಕ್ಕಳ ತೂಕ ನೋಡಿ, ಮಕ್ಕಳ ಬೆಳವಣಿಗೆಯ ಬಗ್ಗೆ ಪರಿಶೀಲಿಸಿದರು. ಮತ್ತು ಅಂಗನವಾಡಿಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು ತಕ್ಷಣ ಒದಗಿಸಲು ಹಾಗೂ ಅಪೌಷ್ಠಿಕ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಲು ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶಿಸಿದರು.

       ಈ ಸಂದರ್ಭದಲ್ಲಿ ಗೌರವಾನ್ವಿತ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀ. ವಿಶ್ವನಾಥ ಅಂಗಡಿ, ಜಿಲ್ಲಾ ನ್ಯಾಯಾಧೀಶರಾದ ಶ್ರೀ. ಹೆಚ್.ಕೆ. ಜಗದೀಶ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಶ್ರೀ. ಕೆ.ಎಮ್. ನಟರಾಜ, ಜಿಲ್ಲಾಧಿಕಾರಿ ಶ್ರೀ.ವಿ. ಅನ್ಬುಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ಅಜಯ ನಾಗಭೂಷಣ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀ. ಕೆ.ಹೆಚ್. ಓಬಳಪ್ಪ ಅವರು ಉಪಸ್ಥಿತರಿದ್ದರು.

ಅರಿಶಿಣ ಬೆಳಗಾರರ ಗಮನಕ್ಕೆ

ಬೆಳಗಾವಿ:ಮೇ:7:(ಕರ್ನಾಟಕ ವಾರ್ತೆ): 2011-12 ನೇ ಸಾಲಿನ ಮುಂಗಾರು ಋತುವಿನಲ್ಲಿ ಜಿಲ್ಲೆಯ ಅರಿಶಿಣ ಬೆಳೆಗಾರರು ಬೆಳೆದ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಪಾಲಿಶ್ ಮಾಡಿದ ಅರಿಶಿಣವನ್ನು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲು ಜಿಲ್ಲೆಯ ಗೋಕಾಕ ಮತ್ತು ಅಥಣಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪ್ರಾಂಗಣಗಳಲ್ಲಿ ಅರಿಶಿಣ ಖರೀದಿ ಪ್ರಕ್ರಿಯೇಯನ್ನು ಆರಂಭಿಸಲಾಗಿದ್ದು, ರೈತ ಬಾಂದವರು ಇದರ ಸದುಪಯೋಗ ಪಡೆಯಲು ಬೆಳಗಾವಿ ಜಿಲ್ಲಾ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

      ಸರ್ಕಾರದ ಆದೇಶದನ್ವಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಟಾಸ್ಕ್‌ಫೋರ್ಟ್ ಸಮಿತಿಯ ತೀರ್ಮಾನದಂತೆ ಉತ್ತಮ ಗುಣಮಟ್ಟದ ಅರಿಶಿಣ (ಪಾಲಿಶ್ ಮಾಡಿದ) ವನ್ನು ನೇರವಾಗಿ ಗೋಕಾಕ, ಅಥಣಿ ಟಿ.ಎ. ಪಿ.ಸಿ.ಎಂ.ಎಸ್. ಮೂಲಕ ಗೋಕಾಕ ಮತ್ತು ಅಥಣಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮೇ 31 ರ ವರೆಗೆ ಖರೀದಿಸಲಾಗುವುದು. ಖರೀದಿಯನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ (ಸರ್ಕಾರಿ ರಜಾ ದಿನ ಹೊರತುಪಡಿಸಿ) ಮಾಡಲಾಗುತ್ತದೆ.

      ಖರೀದಿ ಕೇಂದ್ರಕ್ಕೆ ಅರಿಶಿಣ ತರುವ ಪ್ರತಿಯೊಬ್ಬ ರೈತರು 2011-12 ನೇ ಸಾಲಿನ ಕಂಪ್ಯೂಟರ್ ಪಹಣಿ, 2011-12 ರ ಸಾಲಿನಲ್ಲಿ ಮುಂಗಾರು ಋತುವಿನಲ್ಲಿ ಅರಿಶಿಣ ಎಷ್ಟು ಎಕರೆಯಲ್ಲಿ ಬೆಳೆದಿದ್ದಾರೆ ಎಂಬ ಬಗ್ಗೆ ಮತ್ತು ರೈತರ ಮಾದರಿ ಸಹಿಯನ್ನು ಭಾವಚಿತ್ರ ಸಮೇತ ಗ್ರಾಮ ಲೆಕ್ಕಾಧಿಕಾರಿಗಳು ದೃಢೀಕರಿಸಿರುವ ಪತ್ರ ಹಾಗೂ 1 ಪಾಸ್‌ಪೋರ್ಟ್ ಅಳತೆಯ ಬಾವಚಿತ್ರವನ್ನು ಒಳಗೊಂಡು ದಾಖಲಾತಿಗಳನ್ನು ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸಲ್ಲಿಸಿ ಪ್ರಥಮವಾಗಿ ನೋಂದಾಯಿಸಿಕೊಳ್ಳಬೇಕು.

      ನಿಗಪಡಿಸಿದ ದಿನಾಂಕ ಮತ್ತು ವೇಳೆಗೆ ರೈತರು ಎಫ್.ಎ.ಕ್ಯೂ ಗುಣಮಟ್ಟದ ಅರಿಶಿಣವನ್ನು ಒಂದು ಬಾರಿ ಉಪಯೋಗಿಸಿ ಹಾಗೂ ಉಪಯೋಗಿಸಲು ಯೋಗ್ಯವಿರುವ (50 ಕೆ.ಜಿ. ಸಾಮರ್ಥ್ಯದ) ಗೋಣಿಚೀಲಗಳಲ್ಲಿ ತರಬೇಕು. ರೈತರು ಅವರ ಸ್ವಂತ ಖರ್ಚಿನಲ್ಲಿ ಅರಿಶಿಣವನ್ನು ಖರೀದಿ ಕೇಂದ್ರವಿರುವ ಸ್ಥಳಕ್ಕೆ ತರಬೇಕು. ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್ ಸಂಸ್ಕರಿಸಿ ಪಾಲಿಶ್ ಮಾಡಿದ ಅರಿಶಿಣವನ್ನು ಮಾತ್ರ ಖರೀದಿಸಲಾಗುವುದು ಮತ್ತು ಅರಿಶಿಣ ಖರೀದಿಸಿದ ನಂತರ ಖರೀದಿ ಬಗ್ಗೆ ವೋಚರ್‌ಗಳನ್ನು ನೀಡಲಾಗುತ್ತದೆ. ನಂತರ ಹಣ ಅಕೌಂಟ್ ಪೇಯಿ ಚೆಕ್ ಮೂಲಕ ಪಾವತಿಸಲಾಗುತ್ತದೆ. ರೈತರು ಕಡ್ಡಾಯವಾಗಿ ಬ್ಯಾಂಕ್ ಅಕೌಂಟ್ ಖಾತೆಯನ್ನು ಹೊಂದಿರಬೇಕು.

      ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ತಾಲೂಕಾ ತಹಸೀಲದಾರರು, ಉಪನಿಬಂದಕರು, ಸಹಕಾರ ಸಂಘಗಳ ಇಲಾಖೆ, ಕಾರ್ಯದರ್ಶಿಗಳು, ಟಿ.ಎ. ಪಿ.ಸಿ.ಎಂ.ಎಸ್ ಗೋಕಾಕ, ಉಪನಿರ್ದೇಶಕರು (ತೋಟಗಾರಿಕೆ ಇಲಾಖೆ) ಬೆಳಗಾವಿ/ ಎ.ಪಿ.ಎಂ.ಸಿ. ಕಾರ್ಯದರ್ಶಿಗಳು ಗೋಕಾಕ ಇವರ ಗಮನಕ್ಕೆ ತರಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

       ಎಫ್.ಎ.ಕ್ಯೂ ಗುಣಮಟ್ಟದ ಪಾಲೀಶ್ಡ್ ಅರಿಶಿಣ ಬೆಳೆಗೆ ಸರ್ಕಾರವು ಕ್ವಿಂಟಲ್‌ಗೆ 5 ಸಾವಿರ ರೂ. ದರ ನಿಗದಿಪಡಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಉಪನಿರ್ದೇಶಕರ ಕಚೇರಿ, ಕೃಷಿ ಮಾರಾಟ ಇಲಾಖೆ, ಶಿವಾಜಿ ನಗರ, ಪೊಲೀಸ್ ಕೇಂದ್ರ ಸ್ಥಾನದ ಹತ್ತಿರ ಬೆಳಗಾವಿ ಇವರನ್ನು (ದೂರವಾಣಿ ಸಂಖ್ಯೆ: 0831-2476035) ಗೆ ಸಂಪರ್ಕಿಸಲು ಕೋರಲಾಗಿದೆ.

ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಳಗಾವಿ:ಮೇ:7:(ಕರ್ನಾಟಕ ವಾರ್ತೆ): ಡಾ|| ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ ಬೆಳಗಾವಿ ಕಚೇರಿಯಿಂದ 2012-13 ನೇ ಸಾಲಿಗೆ ಈ ಕೆಳಕಂಡ ಯೋಜನೆಗಳಿಡಿ ಸಾಲ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

     ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಭೂ ಒಡೆತನ ಯೋಜನೆ, ವೈಯಕ್ತಿಕ ಕೊಳವೆ ಬಾವಿ ಯೋಜನೆ, ನೇರಸಾಲ ಯೋಜನೆ-ಹೈನುಗಾರಿಕೆ ಹಾಗೂ ಮೈಕ್ರೋ ಕ್ರೆಡಿಟ್ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 55,000/- ರೊಳಗಿರಬೇಕು. ವಯೋಮಿತಿ 18 ರಿಂದ 60 ವರ್ಷರೊಳಗಿರಬೇಕು.

       ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 30 ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಾ|| ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ, ಮೆಟಗುಡ್ಡ ಬಿಲ್ಡಿಂಗ್, 1ನೇ ಕ್ರಾಸ್, ಮಹಾಂತೇಶ ನಗರ, ಬೆಳಗಾವಿ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಾಲೂಕಾ ಅಭಿವೃದ್ಧಿ ಅಧಿಕಾರಿಗಳನ್ನು ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಾ|| ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ ಬೆಳಗಾವಿ ಇವರಿಗೆ ಸಂಪರ್ಕಿಸಲು ಕೋರಲಾಗಿದೆ.

ಮಾಜಿ ಸೈನಿಕರ ಅನುಕೂಲಕ್ಕಾಗಿ ವೆಬ್‌ಸೈಟ್ ಆರಂಭ

ಬೆಳಗಾವಿ:ಮೇ:7:(ಕರ್ನಾಟಕ ವಾರ್ತೆ): ಸೇವಾನಿರತ ಸೈನಿಕರು/ಮಾಜಿ ಸೈನಿಕರು ಮತ್ತು ಯುದ್ಧ ಸಂತ್ರಸ್ಥರ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ವೆಬ್‌ಸೈಟ್ www.karnatakasainikwelfare.com ನ್ನು ಪ್ರಾರಂಭಿಸಲಾಗಿರುತ್ತದೆ. ಈ ವೆಬ್‌ಸೈಟ್‌ನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಂದ ಸಿಗುವ ಎಲ್ಲ ಸೌಲಭ್ಯಗಳ ಮತ್ತು ಇತರೆ ವಿವರಗಳನ್ನು ವಿಸ್ತೃತವಾಗಿ ನೀಡಲಾಗಿರುತ್ತದೆ. ಸೇವಾನಿರತ ಸೈನಿಕರು/ಮಾಜಿ ಸೈನಿಕರು ಮತ್ತು ಯುದ್ಧ ಸಂತ್ರಸ್ಥರು ಇದರ ಸದುಪಯೋಗ ಪಡೆಯಬೇಕೆಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಸವದತ್ತಿ: ಮೆಟ್ರಿಕ್‌ಪೂರ್ವ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಳಗಾವಿ:ಮೇ:7:(ಕರ್ನಾಟಕ ವಾರ್ತೆ): 2012-13 ನೇ ಸಾಲಿಗೆ ಸವದತ್ತಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಈ ಕೆಳಕಂಡ ಮೆಟ್ರಿಕ್‌ಪೂರ್ವ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

      ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಸವದತ್ತಿ, ಮುನವಳ್ಳಿ, ಹುಲಿಕಟ್ಟಿ, ತಲ್ಲೂರ, ಯರಗಟ್ಟಿ, ಸತ್ತಿಗೇರಿ, ಯರಜರವಿ, ಕಡಬಿ, ಮುರಗೋಡ, ಹಾರುಗೊಪ್ಪ, ಚಿಕ್ಕೊಪ್ಪ, ಸುತಗಟ್ಟಿ, ಚಚಡಿ, ಹಿರೇಕುಂಬಿ, ಯಕ್ಕುಂಡಿ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಸವದತ್ತಿ ಇಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 

      ಪ್ರವರ್ಗ-2ಎ, 3ಬಿ, 3ಎ ಮತ್ತು 3ಬಿ ಗಳ ಕುಟುಂಬದ ವಾರ್ಷಿಕ ಆದಾಯ ರೂ. 15,000/- ರೊಳಗಿರಬೇಕು. ಪ್ರವರ್ಗ-1 ಮತ್ತು ಪರಿಶಿಷ್ಟ ಜಾತಿ: ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 50,920/- ರೊಳಗಿರಬೇಕು. ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜೂನ್ 10 ರೊಳಗೆ ತಾಲೂಕಾ ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸವದತ್ತಿ ಇವರಿಗೆ ಸಲ್ಲಿಸಬೇಕು. ನವೀಕರಣ ವಿದ್ಯಾರ್ಥಿಗಳು ನಿಲಯ ಪ್ರವೇಶಕ್ಕಾಗಿ ಮೇ 31 ರೊಳಗೆ ಸಂಬಂಧಿಸಿದ ನಿಲಯ ಮೇಲ್ವಿಚಾರಕರಿಗೆ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. 

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮೇ.07.(ಕ.ವಾ.)-ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಗುಲಬರ್ಗಾ ಜಿಲ್ಲೆಯ 18 ರಿಂದ 55 ವರ್ಷ ವಯೋಮಿತಿಯಲ್ಲಿರುವ ಅರ್ಹ  ಮತಿಯ ಅಲ್ಪಸಂಖ್ಯಾತರು ಮತ್ತು ಕ್ರೀಶ್ಚಿಯನ್ ಸಮುದಾಯದ ಫಲಾನುಭವಿಗಳಿಂದ 2012-13 ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ. ಮತೀಯ ಅಲ್ಪಸಂಖ್ಯಾತರು: ಸ್ವಾವಲಂಬನಾ ಮಾರ್ಜಿನ ಮನಿ ಹಾಗೂ ಸಹಾಯಧನ ಸಾಲ ಯೋಜನೆ( ಬ್ಯಾಂಕ್ ಸಹಯೋಗದೊಂದಿಗೆ), ವೃತ್ತಿಪರ ವ್ಯಾಸಂಗಕ್ಕಾಗಿ ಅರಿವು ಸಾಲ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋ ಸಾಲ ಯೋಜನೆ (ಮಹಿಳಾ ಗುಂಪುಗಳಿಗೆ ಮಾತ್ರ), ಗಂಗಾಕಲ್ಯಾಣ ಯೋಜನೆ ಮತ್ತು ನೇರ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು. ಕ್ರೀಶ್ಚಿಯನ್ ಸಮುದಾಯ:ಅರಿವು ಸಾಲ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋ ಸಾಲ ಯೋಜನೆ ಮತ್ತು ಮನೆ ಕಟ್ಟಡ ಬಡ್ಡಿ ಸಹಾಯಧನ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

            ವಾರ್ಷಿಕ ವರಮಾನ 22 ಸಾವಿರ ರೂ. ಗಿಂತ ಕಡಿಮೆ ಇರುವ ಇಚ್ಛೆಯುಳ್ಳ ಮತೀಯ ಅಲ್ಪಸಂಖ್ಯಾತರ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಅರಿವು ಸಾಲ ಯೋಜನೆಯಡಿಯಲ್ಲಿ ವಾರ್ಷಿಕ ವರಮಾನ ಮಿತಿಯನ್ನು ಸಡಿಲಗೊಳಿಸಿ 1 ಲಕ್ಷ ರೂ. ವರಮಾನ ಇರುವವರು ಮತ್ತು ಮನೆ ಕಟ್ಟಡ ಬಡ್ಡಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಗಂಗಾಕಲ್ಯಾಣ ಯೋಜನೆಯಡಿಯಲ್ಲಿ 2 ಎಕರೆಯಿಂದ 5 ಎಕರೆವರೆಗೆ ಇರುವ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 5-6-2012ರ ಸಾಯಂಕಾಲ 5 ಗಂಟೆಯೊಳಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ , ಸಂ. 10/3/96, ಎನ್.ವಿ. ಕಾಂಪ್ಲೆಕ್ಸ್ ನಿಷ್ಟಿ ಯಮಹಾ ಶೋರೂಮ್ ಹಿಂದುಗಡೆ ವಿಠ್ಠಲನಗರ ಗುಲಬರ್ಗಾದಲ್ಲಿ ಸಲ್ಲಿಸಬೇಕು.

             ನಿಗಮದ ನಿಯಮಾನುಸಾರ ಮಹಿಳೆಯರಿಗೆ, ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಗುರಿ ನಿಗದಿಪಡಿಸಲಾಗಿದೆ. ಸ್ವಾವಲಂಬನಾ ಯೋಜನೆಯಡಿಯಲ್ಲಿ ಆಟೋರಿಕ್ಷಾ ಹೊರತುಪಡಿಸಿ ಅರ್ಜಿ ಹಾಕಬಹುದು. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08472-232425ನ್ನು ಅಥವಾ ತಿತಿತಿ.ಞmಜಛಿ.iಟಿ ನ್ನು ಸಂಪರ್ಕಿಸಬಹುದು.

ನೇರ ನೇಮಕಾತಿ ಸಂದರ್ಶನ

ಗುಲಬರ್ಗಾ,ಮೇ.07.(ಕ.ವಾ.)-ಜೇವರ್ಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಮೇ|| ರೀಚ್ ಮ್ಯಾನೇಜ್‌ಮೆಂಟ್ ಸೊಲೂಷನ್ಸ್ ಬೆಂಗಳೂರು ಸಂಸ್ಥೆಯವರು ಟಿ.ವಿ.ಎಸ್ ಕಂಪನಿಗೆ ಅಗತ್ಯ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಐಟಿಐ ವಿದ್ಯಾರ್ಥಿಗಳಿಗೆ ನೇರ ನೇಮಕಾತಿ ಸಂದರ್ಶನ ಆಯೊಜಿಸಿದ್ದಾರೆ. ಐ.ಟಿ.ಐ ಫಾಸ್/ಫೇಲ್ ಹಾಗೂ ಐ.ಟಿ.ಐ 2ನೇ ವರ್ಷದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ನೇರ ನೇಮಕಾತಿ ಸಂದರ್ಶನಕ್ಕೆ ಹಾಜರಾಗಬಹುದು.

            ಅರ್ಹ ಅಭ್ಯರ್ಥಿಗಳು ಜೇವರ್ಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಿನಾಂಕ: 10-5-2012 ರಂದು ತಮ್ಮ ಎಲ್ಲ ಮೂಲ ದಾಖಲಾತಿಗಳು ಹಾಗೂ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರನ್ನು ಮತ್ತು  ಮೊಬೈಲ್ ಸಂ. 9980518117ನ್ನು ಸಂಪರ್ಕಿಸಬಹುದು.

ಚಿತ್ತಾಪೂರ: ವಿದ್ಯಾರ್ಥಿನಿಲಯ ಕಟ್ಟಡ ಬಾಡಿಗೆಗಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮೇ.07.(ಕ.ವಾ.)-ಚಿತ್ತಾಪೂರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ  ವಿದ್ಯಾರ್ಥಿನಿಲಯಕ್ಕಾಗಿ ಕನಿಷ್ಟ 50 ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಾಗುವ ಹಾಗೂ ಕನಿಷ್ಟ 4 ಶೌಚಾಲಯ ಮತ್ತು 4 ಸ್ನಾನ ಗೃಹಗಳು ಹೊಂದಿರುವ  ಕಟ್ಟಡಗಳು ಬೇಕಾಗಿವೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸುವಂತೆ ಬಾಡಿಗೆ ಪಾವತಿಸಲಾಗುವುದು. ಆಸಕ್ತ ಕಟ್ಟಡದ ಮಾಲೀಕರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ 2012ರ ಮೇ-15ರೊಳಗೆ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀರಣಾಧಿಕಾರಿಗಳು, ಚಿತ್ತಾಪೂರ ಇವರಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸದರಿ ಕಚೇರಿಯಿಂದ ಪಡೆಯಬಹುದಾಗಿದೆ.

ಸೇಡಂ: ವಿದ್ಯಾರ್ಥಿನಿಲಯ ಕಟ್ಟಡ ಬಾಡಿಗೆಗಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮೇ.07.(ಕ.ವಾ.)-ಸೇಡಂ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ  ವಿದ್ಯಾರ್ಥಿ ನಿಲಯಕ್ಕಾಗಿ ಕನಿಷ್ಟ 50 ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಾಗುವ ಹಾಗೂ ಕನಿಷ್ಟ 4 ಶೌಚಾಲಯ ಮತ್ತು 4 ಸ್ನಾನ ಗೃಹಗಳು ಹೊಂದಿರುವ  ಬಾಡಿಗೆ ಕಟ್ಟಡಗಳು ಬೇಕಾಗಿವೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸುವಂತೆ ಬಾಡಿಗೆ ಪಾವತಿಸಲಾಗುವುದು. ಆಸಕ್ತ ಕಟ್ಟಡದ ಮಾಲೀಕರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ 2012ರ ಮೇ-15ರೊಳಗೆ ತಾಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಸೇಡಂ ಇವರಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸದರಿ ಕಚೇರಿಯಿಂದ ಪಡೆಯಬಹುದಾಗಿದೆ.

ಅಫಜಲಪೂರ: ವಿದ್ಯಾರ್ಥಿನಿಲಯ ಕಟ್ಟಡ ಬಾಡಿಗೆಗಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮೇ.07.(ಕ.ವಾ.)-ಅಫಜಲಪೂರ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ  ವಿದ್ಯಾರ್ಥಿ ನಿಲಯಕ್ಕಾಗಿ ಕನಿಷ್ಟ 50 ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಾಗುವ ಹಾಗೂ ಕನಿಷ್ಟ 4 ಶೌಚಾಲಯ ಮತ್ತು 4 ಸ್ನಾನ ಗೃಹಗಳು ಹೊಂದಿರುವ  ಬಾಡಿಗೆ ಕಟ್ಟಡಗಳು ಬೇಕಾಗಿವೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸುವಂತೆ ಬಾಡಿಗೆ ಪಾವತಿಸಲಾಗುವುದು. ಆಸಕ್ತ ಕಟ್ಟಡದ ಮಾಲೀಕರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ 2012ರ ಮೇ-31ರೊಳಗೆ ತಾಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಅಫಜಲಪೂರ ಇವರಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸದರಿ ಕಚೇರಿಯಿಂದ ಪಡೆಯಬಹುದಾಗಿದೆ.

ಮೆಟ್ರಿಕ್ ಪೂರ್ವ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮೇ.07.(ಕ.ವಾ.)-ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಈ ಕೆಳಕಂಡ ಮೆಟ್ರಿಕ್ ಪೂರ್ವ ಬಾಲಕರ ಮತ್ತು  ಬಾಲಕಿಯರ ವಸತಿ ನಿಲಯಗಳಿಗೆ 2012-13ನೇ ಸಾಲಿನ ಪ್ರವೇಶಕ್ಕಾಗಿ (ನವೀಕರಣ ಮತ್ತು ಹೊಸದು ಸೇರಿ) ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸೇಡಂ ಪಟ್ಟಣ, ಮುಧೋಳ, ಇಟಕಾಲ್ ಮತ್ತು ಕುರಕುಂಟಾ. ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಸೇಡಂ ಪಟ್ಟಣ ಮತು ಶ್ರೀ.ಶ್ರೀ.ಶ್ರೀ ಮಾತಾ ಮಾಣಿಕೇಶ್ವರಿ ಖಾಸಗಿ ವಿದ್ಯಾರ್ಥಿ ನಿಲಯ ಯಾನಾಗುಂದಿ.

            5 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಹಿಂದುಳಿದ ವರ್ಗಗಳ ಪ್ರವರ್ಗ-1,2ಎ,2ಬಿ,3ಎ,3ಬಿ, ಹಾಗೂ ಎಸ್.ಸಿ./ಎಸ್.ಟಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರವೇಶಕ್ಕೆ ಅರ್ಹರು. ಪಾಲಕರ ವಾರ್ಷಿಕ ಆದಾಯ 15000 ರೂ.ಗಿಂತ ಕಡಿಮೆ ಇರಬೇಕು. ಪ್ರವರ್ಗ-1 ಮತ್ತು ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಆದಾಯದ ಮಿತಿ ಅನ್ವಯಿಸುವುದಿಲ್ಲ. ಈ ವಸತಿ ನಿಲಯಗಳ ಪ್ರವೇಶಕ್ಕೆ ಶೈಕ್ಷಣಿಕ ಸಂಸ್ಥೆಯಿಂದ 5 ಕಿ.ಮೀ. ದೂರದಲ್ಲಿ ವಾಸಿಸುವ ವಿದ್ಯಾರ್ಥಿಗಳು ಅರ್ಹರಿದ್ದು, ಆಸಕ್ತಿಯುಳ್ಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಿಗದಿತ ಅರ್ಜಿ ನಮೂನೆಯನ್ನು ಸದರಿ ಕಚೇರಿಯಿಂದ ಅಥವಾ ಸಂಬಂಧಿಸಿದ ವಸತಿ ನಿಲಯಗಳ ಮೇಲ್ವಿಚಾರಕರಿಂದ ಪಡೆದು, ಅದಕ್ಕೆ ಜಾತಿ, ಆದಾಯ ಪ್ರಮಾಣಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಅಭ್ಯರ್ಥಿಯು ಜೀತ ವಿಮುಕ್ತ ಮತ್ತು ಬಾಲ ಕಾರ್ಮಿಕ ಅಭ್ಯರ್ಥಿಗಳಲ್ಲ ಎಂದು ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ ಹಾಗೂ ವಾಸಸ್ಥಳ ಪ್ರಮಾಣ ಪತ್ರದೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 10-06-2012ರೊಳಗಾಗಿ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿಗಳು, ಸೇಡಂ ಇವರಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಆಯಾ ವಸತಿ ನಿಲಯ ಮೇಲ್ವಿಚಾರಕರನ್ನು ಸಂಪರ್ಕಿಸಬಹುದಾಗಿದೆ.

ಮೇ 13 : ಡಾ.ವಿ.ಕೃ.ಗೋಕಾಕರ ಪುಣ್ಯಸ್ಮರಣೆ

ಹಾವೇರಿ.ಮೇ.07ಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪದ್ಮಶ್ರೀ ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ್ ಟ್ರಸ್ಟ್(ರಿ) ಹಾವೇರಿ ಹಾಗೂ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ, ಪದ್ಮಶ್ರೀ ಡಾ.ವಿ.ಕೃ.ಗೋಕಾಕರ ಪುಣ್ಯಸ್ಮರಣೆ ಕಾರ್ಯಕ್ರಮ ಇದೇ ಮೇ 13 ರಂದು ಸಂಜೆ 5 ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಶ್ರೀ ರಾ,ಹ ದೇಶಪಾಂಡೆ ಸಭಾಭವನದಲ್ಲಿ ಜರುಗಲಿದೆ.

              ಪದ್ಮಶ್ರೀ ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ್ ಟ್ರಸ್ಟ್(ರಿ) ಅಧ್ಯಕ್ಷ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಅಧ್ಯಕ್ಷತೆ ವಹಿಸುವರು. ಡಾ.ಶಾಂತಾ ಇಮ್ರಾಪುರ ಅವರು ಗೋಕಾಕರ ಮಹಾಕಾವ್ಯ ಭಾರಥ ಸಿಂಧು ರಶ್ಮಿ, ಡಾ.ಜಿನದತ್ತ ದೇಸಾಯಿ ಅವರು ಡಾ.ವಿ.ಕೃ.ಗೋಕಾಕರ ವ್ಯಕ್ತಿತ್ವ ಹಾಗೂ ಡಾ.ರಮಾಕಾಂತ ಜೋಶಿ ಅವರು ಗೋಕಾಕರ ಸಾಹಿತ್ಯಿಕ ಸಂಬಂಧಗಳು ಕುರಿತು ಉಪನ್ಯಾಸ ನೀಡುವರು.

            ಕಾರ್ಯಕ್ರಮದಲ್ಲಿ ಬೆಂಗಳೂರಿನ ಅನಿಕ ಗೋಕಾಕ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮತ್ತು   ಕಾರ್ಯಕಾರಿ ಸಮಿತಿ ಅಧ್ಯಕ್ಷ ಹಾಗೂ ಹಾವೇರಿ ಜಿಲ್ಲಾಧಿಕಾರಿ ಹೆಚ್.ಜಿ.ಶ್ರೀವರ ಅವರು ಪಾಲ್ಗೊಳ್ಳುವರು.

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಹಾವೇರಿ.ಮೇ.07ಃ ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಶಿಗ್ಗಾಂವ ತಾಲೂಕಿನಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ನಿಲಯಗಳ ಪ್ರವೇಶಕ್ಕಾಗಿ  ಅರ್ಹ ವಿದ್ಯಾರ್ಥಿಗಳಿಂದ  ದಿ.10-6-2012 ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ.

            ತಾಲೂಕಿ ಶಿಗ್ಗಾಂವ, ಶಿಶುವಿನಹಾಳ, ಬಂಕಾಪೂರ, ದುಂಢಶಿ, ಹೋತನಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಹಾಗೂ ಶಿಗ್ಗಾಂವ ಬಾಲಕಿಯರ ವಸತಿ ನಿಲಯ, ಶಿಶುವಿನಹಾಳದ ಗುರುಗೋವಿಂದ ಶಿವಯೋಗೇಶ್ವರ ಉಚಿತ ಪ್ರಸಾದ ನಿಲಯ, ಕಬನೂರ ಚೆನ್ನಪ್ಪ ಫಕ್ಕೀರಪ್ಪ ಗುಂಜಳ ಹಾಗೂ ತರಳುಬಾಳು ಜಗದ್ಗುರು ಉಚಿತ ಪ್ರಸಾದ ನಿಲಯಗಳಿಗೆ 5 ರಿಂದ 10ನೇ ತರಗತಿಯವರೆಗೆ ವ್ಯಾಸಾಂಗ ಮಾಡುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಶಿಗ್ಗಾಂವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.

            ವಿದ್ಯಾರ್ಥಿನಿಲಯಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ (ಖಾಸಗಿ ವಿದ್ಯಾರ್ಥಿ ನಿಲಯ ಹೊರತುಪಡಿಸಿ) ಊಟ, ವಸತಿ, ಸಮವಸ್ತ್ರ, ಹಾಸಿಗೆ, ಹೊದಿಕೆ, ಪಠ್ಯಪುಸ್ತಕ, ಸೋಪು, ಎಣ್ನೆ ಇತ್ಯಾದಿ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು. ಶೇ. 75 ರಷ್ಟು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರು ಹಾಗೂ ಶೇ.25% ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. 5 ಕಿ.ಮೀ. ಹೊರಗಿನ ಅಂತರದ ವಿದ್ಯಾರ್ಥಿಗಳಿಗೆ ಶೇಕಡಾ 90 ರಷ್ಟು ಪ್ರವೇಶ ನೀಡಲಾಗುವುದು.        

            ಅರ್ಜಿಯೊಂದಿಗೆ ಜಾತಿ ಹಾಗೂ ಆದಾಯ ಪ್ರಮಾಣಪತ್ರ, ಪ್ರಸಕ್ತ ಸಾಲಿನಲ್ಲಿ ಉತ್ತೀಣರಾದ ತರಗತಿ ಅಂಕಪಟ್ಟಿ, ಪಿ.ಡಿ.ಓ.  ಅವರಿಂದ ವಿದ್ಯಾರ್ಥಿ ನಿಲಯ ಮತ್ತು  ಸ್ವಂತ ಊರಿಗೆ ಇರುವ ಅಂತರದ ಪ್ರಮಾಣಪತ್ರ, ಸೇರಬಯಸುವ ವಿದ್ಯಾರ್ಥಿ ನಿಲಯದ ಹೆಸರು ನಮೂದಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳು ರೂ.100 ಗಳ ಎಚ್ಚರಿಕೆ ಹಣ ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಸೈಜಿನ ಭಾವಚಿತ್ರಗಳನ್ನು ನೀಡಬೇಕು.

            ಅರ್ಜಿ ನಮೂನೆಗಳನ್ನು ತಾಲೂಕಾ ವಿಸ್ತರಣಾಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶಿಗ್ಗಾಂವ ಇಲ್ಲಿ ಕಚೇರಿ ವೇಳೆಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಬಹುಸು.

ಜಾನಪದ ವಿ.ವಿ.ತಿಂಗಳಾಂತ್ಯಕ್ಕೆ ಉದ್ಘಾಟನೆ ನಿರೀಕ್ಷೆ

ಹಾವೇರಿ.ಮೇ.07ಃ ಶಿಗ್ಗಾಂವ ತಾಲೂಕಿನ ಗೊಟಗೋಡಿಯಲ್ಲಿ ತಲೆಯತ್ತುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಈ ತಿಂಗಳಾಂತ್ಯಕ್ಕೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ತಿಳಿಸಿದ್ದಾರೆ.

            ಅವರು ಇಂದು ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,  ಕಾರಣಾಂತರಗಳಿಂದಾಗಿ ನೂತನ ವಿವಿಯ ಉದ್ಘಾಟನೆ ವಿಳಂಭವಾಗಿದ್ದರು ವಿಶ್ವ ವಿದ್ಯಾನಿಲಯದ ಆರಂಭಿಕ ಕೆಲಸಕಾರ್ಯಗಳು ನಿಗದಿತ ವೇಗದಲ್ಲಿವೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಸಧ್ಯಕ್ಕೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಸದಸ್ಯರಾಗಿದ್ದು, ವಿವಿ ಸ್ಥಾಪನೆ ಸಂಬಂಧದ ಪ್ರಕ್ರಿಯೆಗೆ ಪೂರಕವಾಗಿ ಕಾರ್ಯಗಳು ನಡೆಯುತ್ತಿ ಎಂದರು.

            ಈ ವಿಶ್ವವಿದ್ಯಾಲಯದಲ್ಲಿ ಆರಂಭಿಸಬೇಕೆಂದಿರುವ ಕೆಲ ಕೋರ್ಸುಗಳಿಗೆ ಸಿಲೆಬಸ ಸಿದ್ಧಗೊಳಿಸುವ ಕಾರ್ಯ ಪೂರ್ಣಗೊಂಡಿದ್ದು, ಜೂನ್‌ನಲ್ಲಿ ಕೋರ್ಸುಗಳು ಆರಂಭಗೊಳ್ಳಬಹುದಾಗಿದೆ. ವಿಶ್ವವಿದ್ಯಾನಿಲಯದ ಆಡಳಿತ ಕಚೇರಿಗೆ ಗೊಟಗೋಡಿಯಲ್ಲಿ ಸಿದ್ದಕಟ್ಟಡ ಲಭ್ಯವಾಗಿದ್ದು, ಮಿಕ್ಕ ಕಟ್ಟಡಗಳು ಇನ್ನು 5-6 ತಿಂಗಳಲ್ಲಿ ಪೂರ್ಣಗೊಳ್ಳಬಹುದು. ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯದ ಕಟ್ಟಡ ಕಾಮಗಾರಿ ಆರಂಭಗೊಂಡಿದ್ದು,  ಜಾನಪದ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಪುಸ್ತಕ ಸಂಗ್ರಹ ಕಾರ್ಯ, ವಿಶ್ವವಿದ್ಯಾಲಯದ ಪ್ರಕಟಣೆಯ ಕೆಲಸಕ್ಕೆ ಚಾಲನೆ ದೊರೆತಿದೆ. ಈ ವಿಶ್ವವಿದ್ಯಾನಿಲಯದಿಂದ ರಾಜ್ಯದ 30 ಸಾವಿರ ಹಳ್ಳಿಗಳ ಗ್ರಾಮ ಚರಿತ್ರೆ ಸಂಗ್ರಹಿಸಿ ದಾಖಲಿಸುವ ಯೋಜನೆ ಇದ್ದು, ಈ ಸಂಬಂಧದ ಕ್ಷೇತ್ರ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದೂ ಅವರು ತಿಳಿಸಿದರು.

ನಗರದ ಪ್ರಮುಖ ರಸ್ತೆಗಳ ಕಟ್ಟಡ ಮಾಲೀಕರಲ್ಲಿ ಮನವಿ

 ತುಮಕೂರು ಮೇ 07 : ತುಮಕೂರು ನಗರ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ಅಭಿವೃದ್ದಿಗೊಳಿಸಲು ಸರ್ಕಾರ ವಿವಿಧ ಯೋಜನೆಗಳಡಿ ಅನುದಾನ ಬಿಡುಗಡೆ ಮಾಡಿದ್ದು, ತ್ವರಿತವಾಗಿ ಅಭಿವೃದ್ದಿ ಕಾರ್ಯ ಕೈಗೊಳ್ಳಬೇಕಿರುವ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಯ ಅಭಿವೃದ್ದಿಗಾಗಿ ಮಾಡಿರುವ ಒತ್ತುವರಿಯನ್ನು ಕಟ್ಟಡದ ಮಾಲೀಕರೆ ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ನಗರಸಭೆ ಪೌರಾಯುಕ್ತರು ಮನವಿ ಮಾಡಿದ್ದಾರೆ.

 ಈ ಸಮಯದಲ್ಲಿ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿರುವ  ಕಟ್ಟಡದ ಭಾಗಗಳನ್ನು ಅನಿವಾರ್ಯವಾಗಿ ತೆರವುಗೊಳಿಸಬೇಕಾಗಿರುವುದರಿಂದ ನಗರದ  ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿರುವ ಒತ್ತುವರಿ ಕಟ್ಟಡಗಳ ಮಾಲೀಕರು ರಸ್ತೆ ಒತ್ತುವರಿ ಮಾಡಿಕೊಂಡು ನಗರಸಭೆ / ನಗರಾಭಿವೃದ್ದಿ ಪ್ರಾಧಿಕಾರ ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಲ್ಲಿ, ತುರ್ತಾಗಿ ತಮ್ಮ ವತಿಯಿಂದಲೇ ತೆರವು ಮಾಡಿಕೊಂಡು ರಸ್ತೆಗಳ ಅಭಿವೃದ್ದಿಗೆ ಹಾಗೂ ನಗರದ ಸೌಂದರ್ಯಕ್ಕೆ ಸಹಕರಿಸಲು ಪೌರಾಯುಕ್ತರು ಕೋರಿದ್ದಾರೆ.

 ರಸ್ತೆ ಅಗಲ ಹಾಗೂ ಇನ್ನಿತರೆ ಮಾಹಿತಿ ಬೇಕಾಗಿದ್ದಲ್ಲಿ ನಗರಸಭೆ / ನಗರಾಭಿವೃದ್ದಿ ಪ್ರಾಧಿಕಾರದ ತಾಂತ್ರಿಕ / ಯೋಜನಾ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

 ತುಮಕೂರು ಮೇ 07 : ಜಿಲ್ಲಾ ಪಂಚಾಯತ್  ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ಮೇ 11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರಾದ ಎನ್ ಆರ್ ಆನಂದರವಿ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.

ತ್ವರಿತ ಕಾಮಗಾರಿ ಕೈಗೊಳ್ಳಲು ಪ್ರತಿ ಗ್ರಾಮ ಪಂಚಾಯತ್ ಓರ್ವ ಪಿಡಿಓ ನೇಮಕ

            ಬಳ್ಳಾರಿ. ಮೇ. 7 ( ಕರ್ನಾಟಕ ವಾರ್ತೆ) :    ತಾಲೂಕಿನಲ್ಲಿ ಬರ ಪರಿಹಾರ ಕಾಮಗಾರಿ,  ಕುಡಿಯುವ ನೀರು ಸಮರ್ಪಕ ಪೂರೈಕೆ ಒದಗಿಸುವ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ತಲಾ ಒಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್‍ಯದರ್ಶಿಯನ್ನು  ನೇಮಕ ಮಾಡಿ ಕೆಲಸಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಾ.ಪಂ. ಕಾರ್‍ಯನಿರ್ವಾಹಕ ಅಧಿಕಾರಿ ಶ್ರೀ  ರಾಧಾಕೃಷ್ಣರೆಡ್ಡಿ ಅವರು ತಿಳಿಸಿದರು.

ತಾಲೂಕ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬರಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಲಾಗುತ್ತಿದೆ. ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚುವರಿ ಕಾಮಗಾರಿಗಳನ್ನು  ಅನುಷ್ಠಾನಗೊಳಿಸುವ ಮೂಲಕ ದುಡಿಯುವ ಕೂಲಿಕಾರ್ಮಿಕರಿಗೆ ಉದ್ಯೋಗವನ್ನು ನೀಡಲಾಗುತ್ತಿದೆ. ಈ ಕಾಮಗಾರಿಗಳನ್ನು ಯಶಸ್ವಿಯಾಗಿ ಅನಷ್ಠಾನಗೊಳಿಸುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗು ಕಾರ್‍ಯದರ್ಶಿಗಳಿಗೆ ಸೂಚಿಸಲಾಗಿದೆ. ಇವರು ಕೇಂದ್ರಸ್ಥಾನದಲ್ಲಿದ್ದು, ಜನಪ್ರತಿನಿಧಿಗಳ ಸಹಯೋಗದೊಂದಿಗೆ ಕಾರ್‍ಯನಿರ್ವಹಿಸಬೇಕು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ತಕ್ಷಣವೇ ಇತ್ಯರ್ಥಗೊಳಿಸಬೇಕು.  ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡಬೇಕು. ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು. 

ಅಧ್ಯಕ್ಷತೆವಹಿಸಿದ್ದ ತಾ.ಪಂ. ಅಧ್ಯಕ್ಷೆ ಶ್ರೀ ಉಮಾದೇವಿ ಅವರು, ಅಧಿಕಾರಿಗಳು ಜನಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ಪರಿಗಣಿಸಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ತಾ.ಪಂ. ಉಪಾಧ್ಯಕ್ಷ ಶ್ರೀ ಹನುಮಂತಪ್ಪ ಅವರು ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಕೂಡಲೇ ನಿವೇಶನಗಳನ್ನು ನೀಡಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ವಿತರಿಸಬೇಕು. ತಾಲೂಕ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. 

ಕ್ರಿಶ್ಚಿಯನ್ ಜನಾಂಗದವರಿಗೆ ಸಾಲ ಸೌಲಭ್ಯ

ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತ ವರ್ಗಗಳ ಕ್ರಿಶ್ಚಿಯನ್ ಜನರ ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಲು ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.   

ಅರಿವು ಸಾಲದ ಯೋಜನೆಯಡಿ ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡಲು 50ಸಾವಿರ ರೂ., ಶ್ರಮ ಶಕ್ತಿ ಯೋಜನೆಯಡಿ  ವೃತ್ತಿ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿಕೊಳ್ಳಲು 25ಸಾವಿರ ರೂ.,    ಮೈಕ್ರೋ ಲೋನ್(ಸಣ್ಣ ಸಾಲದ ಯೋಜನೆ) ಅಡಿ ಸಣ್ಣ ಪ್ರಮಾಣದ ವ್ಯಾಪಾರ ಮಾಡಲು 7500 ರೂ.ಗಳ ಸಾಲ ಸೌಲಭ್ಯ, ಮನೆ ಕಟ್ಟುವ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ಸಾಲ ಹಾಗೂ ಗೃಹ ಸಾಲಕ್ಕಾಗಿ 1ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುವುದು. 

ನಿಗಮದಿಂದ ಸಾಲ ಸೌಲಭ್ಯ ಪಡೆಯಲಿಚ್ಛಸುವವರು ಜಿಲ್ಲೆಯ ಖಾಯಂ ನಿವಾಸಿಯಾಗಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖರು, ಬೌದ್ಧರು, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ವರ್ಗಕ್ಕೆ ಸೇರಿದವರಾಗಿರಬೇಕು.  ಆಸಕ್ತರು ತಮ್ಮ ಅರ್ಜಿಗಳನ್ನು ಜೂನ್ 15ರೊಳಗಾಗಿ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಇನ್‌ಫೆಂಟ್ರಿ ರಸ್ತೆ, ರಾಕ್‌ಗಾರ್ಡನ್ ಎದುರು, ಸಂಜಯಗಾಂಧಿನಗರ, ಬಳ್ಳಾರಿ-583101 ಇವರಿಗೆ ಸಲ್ಲಿಸಬೇಕು.   ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-267037 ಅಥವಾ 267038 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಹತ್ತಿ ಬೆಳೆಗಾರರು ಮುನ್ನೆಚ್ಚರಿಕೆ ವಹಿಸಲು ಸಲಹೆ

            ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಜಿಲ್ಲೆಯಾದ್ಯಂತ ಏಪ್ರಿಲ್ ಮಾಹೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಹತ್ತಿ ಬೆಳೆ ಬಿತ್ತನೆ ಕಾರ್ಯಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವ ಬೆಳೆಗಾರರು ಹತ್ತಿ ಬೀಜಗಳನ್ನು ಖರೀದಿಸುವಲ್ಲಿ ಮುನ್ನೆಚ್ಚರಿಕೆ ವಹಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ಶ್ರೀ ಕೆ. ರಾಮಪ್ಪ ಸಲಹೆ ನೀಡಿದ್ದಾರೆ.

            ಹತ್ತಿ ಬೆಳೆಯುವ ರೈತರಿಗಾಗಿ ವಿವಿಧ ಬೀಜದ ಕಂಪನಿಗಳು ದಾಸ್ತಾನು ಮಾಡಿ ಮಾರಾಟ ಮಾಡುವ ಎಲ್ಲ ತಳಿಗಳು ಬಿಟಿ ಹತ್ತಿ ತಳಿಗಳಾಗಿದ್ದು, ಅವುಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ.  ರೈತರು ಒಂದೇ ಕಂಪನಿಯ   ತಳಿಯು ಬೇಕೆಂದಲ್ಲಿ ಮಾರುಕಟ್ಟೆಯಲ್ಲಿ ಅಂತಹ ತಳಿಯ ಕೊರತೆಯುಂಟಾಗಿ ಅಧಿಕ ಬೆಲೆಗೆ ಮಾರಾಟವಾಗುವ, ಕಳಪೆ ಬೀಜ ಸರಬರಾಜು ಮಾಡುವ ಹಾಗೂ ಮತ್ತಿತರ ಅವ್ಯವಹಾರ ಪ್ರಾರಂಭವಾಗಿ ರೈತರಿಗೆ ಅನ್ಯಾಯವಾಗುವ ಸಾಧ್ಯತೆಯಿರುತ್ತದೆ.  ಈ ಹಿನ್ನೆಲೆಯಲ್ಲಿ ಹತ್ತಿ ಬೆಳೆಗಾರರು ಮಾರುಕಟ್ಟೆಯಲ್ಲಿರುವ ವಿವಿಧ ತಳಿಗಳಲ್ಲಿ ಲಭ್ಯತೆ ಮೇಲೆ ಆಯ್ಕೆ ಮಾಡಿಕೊಳ್ಳಬೇಕು.  ಕೊಳ್ಳುವ ಮುನ್ನ ಪಾಕೆಟ್ ಅನ್ನು ಪರಿಶೀಲಿಸಿ ತಯಾರಕರ ಕಂಪನಿಯ ಪೂರ್ಣ ಹೆಸರು ಹಾಗೂ ವಿಳಾಸ ಸರಿಯಿರುವುದನ್ನು ಹಾಗೂ ಅದರೊಂದಿಗೆ ನಿಜ ಚೀಟಿ ಪತ್ರ ಇರುವುದನ್ನು ದೃಢಪಡಿಸಿಕೊಳ್ಳಬೇಕು.  ಬಿತ್ತನೆ ಬೀಜವನ್ನು ಅಧಿಕೃತ ಪರವಾನಗಿ ಹೊಂದಿರುವವರಿಂದ ಕೊಂಡು ಮಾರಾಟಗಾರರಿಂದ ಅಧಿಕೃತ ರಸೀದಿಯನ್ನು ಪಡೆಯಬೇಕು.  ಆ ತಳಿಯ ಬೇಸಾಯ ಪದ್ಧತಿಯ ಬಗ್ಗೆ ಕರಪತ್ರ ಪಡೆಯಬೇಕು.  ಬಿತ್ತನೆ ಮಾಡಿದ ನಂತರ ಬೆಳೆ ಬರುವವರೆಗೆ ಖಾಲಿ ಪಾಕೆಟ್, ಅಲ್ಪ ಪ್ರಮಾಣದ ಬೀಜ, ರಸೀದಿ ಹಾಗೂ ಕರಪತ್ರವನ್ನು ಕಾಯ್ದಿರಿಸಿಕೊಂಡಿರಬೇಕು.  ಬೆಳೆಯಲ್ಲಿ ಸಮಸ್ಯೆಯುಂಟಾದಲ್ಲಿ ಇವು ಪ್ರಯೋಜನಕ್ಕೆ ಬರುತ್ತವೆ. 

            ಹೆಚ್ಚಿನ ಮಾಹಿತಿಗಾಗಿ ಹಾಗೂ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

ಅನಾಮಧೇಯ  ಶವ ಪತ್ತೆ

ಬಳ್ಳಾರಿ. ಮೇ. 7 ( ಕರ್ನಾಟಕ ವಾರ್ತೆ): ತಾಲೂಕಿನ ಪಿಡಿಹಳ್ಳಿ ಠಾಣೆಯ ವ್ಯಾಪ್ತಿಯ  ಜೋಳದರಾಶಿ ಗ್ರಾಮದ ಬಳಿ ಅನಾಮಧೇಯ ಗಂಡಸಿನ ಶವವು ಪತ್ತೆಯಾಗಿದೆ.

ಮೃತ ವ್ಯಕ್ತಿಯ  ದೇಹವು 5.1 ಅಡಿ ಎತ್ತರ, ಕಪ್ಪು ಬಣ್ಣ, ದೃಢವಾದ ಮೈಕಟ್ಟು, ದುಂಡು ಮುಖವನ್ನು ಹೊಂದಿದ್ದು, ಬನಿಯನ್ ಹಾಗು  ಬಿಳಿ ಬಣ್ಣದ ಪಂಜೆಯನ್ನು ಧರಿಸಿದ್ದಾನೆ.  ಜಿ.ಪಂ. ಸದಸ್ಯ ಶ್ರೀ ಮಲ್ಲಿಕಾರ್ಜುನ ಎನ್ನುವವರು  ಜೋಳದ ರಾಶಿ ಗ್ರಾಮದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಕಟ್ಲಗಂಗಮ್ಮ ಎನ್ನುವವರ ಹೊಲದಲ್ಲಿರುವ ಬೇವಿನ ಮರದಕೆಳಗೆ ಅನಾಮದೇಯ ವ್ಯಕ್ತಿಯ ಶವವಿದ್ದು, ಶವದ ಸುತ್ತ ಮುತ್ತ ಕ್ರಿಮಿನಾಶಕ ಬಾಟಲಿಗಳಿವೆ ಎಂದು ದೂರು ನೀಡಿದ್ದಾರೆ.  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಲಾಗುತ್ತಿದೆ. ಈ ಮೃತ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ದೊರೆತರೆ ಪಿಡಿಹಳ್ಳಿ ಠಾಣೆ ದೂರವಾಣಿ ಸಂಖ್ಯೆ 08392-276461, 948080302, ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08392-256100 ( 100) ಅನ್ನು ಸಂಪರ್ಕಿಸಬಹುದು ಎಂದು ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ. 

ನಿರುದ್ಯೋಗಿ ಯುವಕ/ಯುವತಿಯರಿಗೆ ಡಿಟಿಪಿ ತರಬೇತಿ

ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಜಿಲ್ಲೆಯ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ಯುವತಿಯರಿಗೆ 45 ದಿನಗಳ ಕಂಪ್ಯೂಟರ್ ಡಿಟಿಪಿ ತರಬೇತಿ ನೀಡಲಿದೆ.  ತರಬೇತಿಯು ಮೇ 11 ರಿಂದ ಜೂನ್ 24ರವರೆಗೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಅವಧಿಯಲ್ಲಿ ಉಚಿತ ಊಟ, ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು.    20 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ತರಬೇತಿ ಪಡೆಯಲು ಅರ್ಹರಿರುತ್ತಾರೆ.  ಆಸಕ್ತರು ಮೇ 11ರಂದು ಬೆಳಿಗ್ಗೆ 9-30ಕ್ಕೆ ಅಗತ್ಯ ದಾಖಲೆಗಳೊಂದಿಗೆ ಹೊಸಪೇಟೆ ರಸ್ತೆ ಡಿಐಸಿ ಕಾಂಪೌಂಡ್‌ನಲ್ಲಿರುವ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕಚೇರಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.  ಹೆಚ್ಚಿನ ಮಾಹಿತಿಗಾಗಿ 08392-244117ನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕರು ಕೋರಿದ್ದಾರೆ.

ವಿವಿಧ ಯೋಜನೆಗಳಡಿ ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತ ವರ್ಗಗಳ ಜನರ ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಲು ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.   

ಸ್ವಾವಲಂಬನಾ ಸಾಲದ ಯೋಜನೆಯಡಿ ಆರ್ಥಿಕ ಚಟುವಟಿಕೆ ಪ್ರಾರಂಭಿಸಲು 1 ಲಕ್ಷ ರೂ., ಅರಿವು ಸಾಲದ ಯೋಜನೆಯಡಿ ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡಲು 50ಸಾವಿರ ರೂ., ಶ್ರಮ ಶಕ್ತಿ ಯೋಜನೆಯಡಿ  ವೃತ್ತಿ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿಕೊಳ್ಳಲು 25ಸಾವಿರ ರೂ.,  ಗಂಗಾ ಕಲ್ಯಾಣ ಯೋಜನೆಯಡಿ ಕೃಷಿ ಚಟುವಟಿಕೆ ಕೈಗೊಳ್ಳಲು ನೀರಾವರಿ ಸೌಲಭ್ಯಕ್ಕಾಗಿ ಕೊಳವೆಬಾವಿ ಕೊರೆಸಲು 1ಲಕ್ಷ ರೂ., ಮೈಕ್ರೋ ಲೋನ್(ಸಣ್ಣ ಸಾಲದ ಯೋಜನೆ) ಅಡಿ ಸಣ್ಣ ಪ್ರಮಾಣದ ವ್ಯಾಪಾರ ಮಾಡಲು 7500 ರೂ.ಗಳ ಸಾಲ ಸೌಲಭ್ಯ  ಹಾಗೂ ನೇರ ಸಾಲ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುವುದು. 

ನಿಗಮದಿಂದ ಸಾಲ ಸೌಲಭ್ಯ ಪಡೆಯಲಿಚ್ಛಸುವವರು ಜಿಲ್ಲೆಯ ಖಾಯಂ ನಿವಾಸಿಯಾಗಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖರು, ಬೌದ್ಧರು, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ವರ್ಗಕ್ಕೆ ಸೇರಿದವರಾಗಿರಬೇಕು.  ಆಸಕ್ತರು ತಮ್ಮ ಅರ್ಜಿಗಳನ್ನು ಜೂನ್ 15ರೊಳಗಾಗಿ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಇನ್‌ಫೆಂಟ್ರಿ ರಸ್ತೆ, ರಾಕ್‌ಗಾರ್ಡನ್ ಎದುರು, ಸಂಜಯಗಾಂಧಿನಗರ, ಬಳ್ಳಾರಿ-583101 ಇವರಿಗೆ ಸಲ್ಲಿಸಬೇಕು.   ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-267037 ಅಥವಾ 267038 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಮೇ 11 ರಂದು ಬ್ಯೂಟಿ ಪಾರ್ಲರ್ ತರಬೇತಿಗಾಗಿ ಸಂದರ್ಶನ

ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಬ್ಯೂಟಿ ಪಾರ್ಲರ್ ತರಬೇತಿಗಾಗಿ ಮೇ 11 ರಂದು ಬೆಳಿಗ್ಗೆ 9-30 ಗಂಟೆಗೆ ಸಂದರ್ಶನ ನಡೆಸಲಿದೆ.   ಸಂದರ್ಶನವು ನಗರದ ಹೊಸಪೇಟೆ ರಸ್ತೆಯ ಡಿ.ಐ.ಸಿ ಕಾಂಪೌಂಡ್‌ನಲ್ಲಿರುವ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ   ಸಂಸ್ಥೆಯಲ್ಲಿ ನಡೆಯಲಿದ್ದು, 20 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಮಹಿಳೆಯರು ಹಾಜರಾಗಬಹುದು.  ತರಬೇತಿಯು 11-5-2012 ರಿಂದ 10-6-2012ರವರೆಗೆ ನಡೆಯಲಿದ್ದು, ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ ಸೌಕರ್ಯ ಕಲ್ಪಿಸಲಾಗುವುದು.  ಆಸಕ್ತ ನಿರುದ್ಯೋಗಿ ಮಹಿಳೆಯರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-244117ನ್ನು ಸಂಪರ್ಕಿಸಲು ಕೋರಲಾಗಿದೆ.

ಡ್ರೆಸ್ ಡಿಸೈನ್ ತರಬೇತಿಯ ಸಮಾರೋಪ

            ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಭಾನುವಾರ ಗ್ರಾಮೀಣ ಯುವತಿಯರಿಗಾಗಿ ಹಮ್ಮಿಕೊಳ್ಳಲಾಗಿದ್ದ 21 ದಿನಗಳ ಡ್ರೆಸ್ ಡಿಸೈನ್-ವುಮನ್ ತರಬೇತಿ ಕಾರ್ಯಕ್ರಮದ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು.  

            ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆಯ ಚೀಫ್ ಮ್ಯಾನೇಜರ್ ಶ್ರೀ ನಾರಾಯಣ್ ಅವರು ಇಂತಹ ತರಬೇತಿಗಳನ್ನು ಪಡೆಯುವದರಿಂದ ಮಹಿಳೆಯರು ಸ್ವ-ಉದ್ಯೋಗ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸ್ವಾವಲಂಬಿಗಳಾಗಬಹುದು ಎಂದರು.

            ಸಂಸ್ಥೆಯ ನಿರ್ದೇಶಕ ಶ್ರೀ ಪಿ. ರಾಮಾಂಜಿನೇಯಲು ಮಾತನಾಡಿ ಬ್ಯಾಂಕುಗಳಿಂದ ದೊರೆಯುವ ಆರ್ಥಿಕ ಸಹಾಯ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬೇಕು. ಈ ಶಿಬಿರದಲ್ಲಿ ನೀಡಿದ ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. 

            ಈ ಸಂದರ್ಭದಲ್ಲಿ  ಬಳ್ಳಾರಿ ಹಾಗೂ ಚಿತ್ರದುರ್ಗದ 24 ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.  ಶ್ರೀಮತಿ ಓಂಕಾರಮ್ಮ ಉಪಸ್ಥಿತರಿದ್ದರು.  ಕು|| ದಿವ್ಯಲಕ್ಷ್ಮಿ ಸ್ವಾಗತಿಸಿದರು.  ಕು|| ಅರ್ಪಿತ ನಿರೂಪಿಸಿದರು. ಕು|| ಕೊಟ್ರಮ್ಮ ವಂದಿಸಿದರು.  ಮಹಾದೇವಿ, ಸಾಯಿಕಲ್ಯಾಣಿ, ಕೊಟ್ರಮ್ಮ, ಸುಧಾ, ಸಂಗಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದರು. 

ಸಾಲಸೌಲಭ್ಯಕ್ಕಾಗಿ ಹಿಂದುಳಿದ ವರ್ಗದವರಿಂದ ಅರ್ಜಿ ಆಹ್ವಾನ

            ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಹಿಂದುಳಿದ ವರ್ಗದವರ ಆರ್ಥಿಕಾಭಿವೃದ್ಧಿಗಾಗಿ 2012-13ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಿದೆ. 

            ಚೈತನ್ಯ ಸಬ್ಸಿಡಿ ಕಂ ಸಾಫ್ಟ್‌ಲೋನ್ ಯೋಜನೆ, ಅರಿವು/ಶೈಕ್ಷಣಿಕ ಸಾಲ ಯೋಜನೆ, ಚೈತನ್ಯ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಕಿರುಸಾಲ ಯೋಜನೆ, ಸಾಂಪ್ರದಾಯಿಕ ವೃತ್ತಿದಾರರು ಮತ್ತು ಕುಶಲಕರ್ಮಿಗಳ ಸಾಲ ಯೋಜನೆ, ಕುಂಬಾರಿಕೆ ಅಭಿವೃದ್ಧಿ ಯೋಜನೆ, ಗಂಗಾಕಲ್ಯಾಣ ನೀರಾವರಿ ಯೋಜನೆ, ಸವಿತಾ ಸಮಾಜ ಅಭಿವೃದ್ಧಿ ಯೋಜನೆ, ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆರ್ಥಿಕ ನೆರವು ಯೋಜನೆ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ನ್ಯೂ ಸ್ವರ್ಣಿಮಾ, ಮತ್ತಿತರ ವಿವಿಧ ಅವಧಿ ಸಾಲ ಯೋಜನೆಗಳಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಹ ಹಿಂದುಳಿದ ವರ್ಗದವರು ಅರ್ಜಿ ಸಲ್ಲಿಸಬಹುದು.

            ಅರ್ಜಿದಾರರು ಹಿಂದುಳಿದ ಪ್ರವರ್ಗ-1, 2ಎ, 3ಎ ಮತ್ತು 3ಬಿ ವರ್ಗಕ್ಕೆ ಸೇರಿದವರಾಗಿರಬೇಕು.  ರಾಜ್ಯ ಸರ್ಕಾರದ ಯೋಜನೆಗಳಿಗಾಗಿ   ಕುಟುಂಬದ ವಾರ್ಷಿಕ ವರಮಾನವು ಎಲ್ಲ ಮೂಲಗಳಿಂದ 22ಸಾವಿರ ರೂ. ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗಾಗಿ ಗ್ರಾಮೀಣ ಪ್ರದೇಶದವರಿಗೆ 40ಸಾವಿರ ರೂ. ಹಾಗೂ ನಗರ ಪ್ರದೇಶದವರಿಗೆ 55ಸಾವಿರ ರೂ.ಗಳಿಗಿಂತ ಕಡಿಮೆಯಿರಬೇಕು.  ಈ ಹಿಂದೆ ನಿಗಮದಿಂದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.   ಆಸಕ್ತರು ಭರ್ತಿ ಮಾಡಿದ ತಮ್ಮ ಅರ್ಜಿಗಳನ್ನು ಜೂನ್ 30ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಸಂಜಯಗಾಂಧಿ ನಗರ, ಇನ್‌ಫೆಂಟ್ರಿ ರಸ್ತೆ, ಎಂ.ಆರ್.ಎಫ್. ಟೈರ್ ಶೋರೂಂ ಬಳಿ, ಕಂಟೋನ್‌ಮೆಂಟ್, ಬಳ್ಳಾರಿ ಇವರ ಕಚೇರಿಗೆ ಸಲ್ಲಿಸಬೇಕು.  

            ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಯುವತಿ ಕಾಣೆ

            ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಬಳ್ಳಾರಿಯ ಯಲ್ಲಾಪುರ ಕ್ಯಾಂಪಿನ ನಿವಾಸಿ ಶ್ರೀ ಜೆ. ಶ್ರೀನಿವಾಸ ಅವರ ಪುತ್ರಿ 17 ವರ್ಷದಕು|| ಮೌನಿಕ ಮೇ 2ರಂದು ಬೆಳಿಗ್ಗೆ 8 ಗಂಟೆಯಿಂದ ಕಾಣೆಯಾಗಿದ್ದಾಳೆ ಎಂದು ಕುರುಗೋಡು ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ತಿಳಿಸಿದ್ದಾರೆ.

            ಈ ಕುರಿತು ಮೌನಿಕಾಳ ತಂದೆ ಶ್ರೀ ಶ್ರೀನಿವಾಸ ಅವರು ಠಾಣೆಗೆ ದೂರು ನೀಡಿದ್ದಾರೆ.  ಮೇ 2ರಂದು ಕು|| ಮೌನಿಕಾ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಬಂದಿರುವುದಿಲ್ಲ.  ಸುಮಾರು 5.3 ಎತ್ತ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುವ ಈಕೆಗೆ ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು ಮಾತನಾಡಲು ಬರುತ್ತದೆ.   ಮೌನಿಕಾ ಕುರಿತು ಮಾಹಿತಿ ಸಿಕ್ಕಲ್ಲಿ ಕೂಡಲೇ ದೂರವಾಣಿ ಸಂಖ್ಯೆ 08393-263433 ಅಥವಾ ಮೊಬೈಲ್ ನಂ. 9480803089 ಅನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಗೃಹರಕ್ಷಕ ದಳದಿಂದ ರೂಟ್ ಮಾರ್ಚ್

            ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಭಾನುವಾರ ಹೀರದ ಸೂಗಮ್ಮ ಶಾಲಾ ಆವರಣದಲ್ಲಿ ಗೃಹರಕ್ಷಕ ಸಂಸ್ಥೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ರೂಟ್ ಮಾರ್ಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

            ಸಹಾಯಕ ಆಯುಕ್ತ ಶ್ರೀ ಶಶಿಕಾಂತ್ ಸೆಂಥಿಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಸಿ.ಜಿ. ಕ್ಯಾತನ್ ಕಾರ್ಯಕ್ರಮ ಉದ್ಘಾಟಿಸಿದರು.  ಸಮಾದೇಷ್ಟರಾದ ಶ್ರೀ ಎಂ.ಎ. ಷಕೀಬ್, ಸೆಕೆಂಡ್ ಇನ್ ಕಮಾಂಡ್ ಶ್ರೀ ಎನ್.ಎಸ್. ಲಕ್ಷ್ಮೀನರಸಿಂಹ, ಸಹಬೋಧಕ ಶ್ರೀ ಹೆಚ್. ತಿಪ್ಪೇಸ್ವಾಮಿ ಹಾಗೂ ಜಿಲ್ಲೆಯ ವಿವಿಧ ಘಟಕಗಳ ಘಟಕಾಧಿಕಾರಿಗಳು ಮತ್ತು ಗೃಹರಕ್ಷಕರು ಭಾಗವಹಿಸಿದ್ದರು.

ಸಾಮಾನ್ಯ ಕಾನೂನಿನ ಅರಿವು ಹೊಂದಲು ಕರೆ

            ಬಳ್ಳಾರಿ, ಮೇ. 7 ( ಕರ್ನಾಟಕ ವಾರ್ತೆ)  :  ಜನಸಾಮಾನ್ಯರು ಸಾಮಾನ್ಯ ಕಾನೂನು ಕುರಿತು ತಿಳುವಳಿಕೆ ಹೊಂದಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀ ಹೊಸಮನಿ ಸಿದ್ಧಪ್ಪ ಹೆಚ್ ಅವರು ಕರೆ ನೀಡಿದರು.

            ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಶ್ರೀ ಸತ್ಯಂ ಎಂಎಸ್‌ಡಬ್ಲ್ಯೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ವಾಹನ ಚಾಲಕರು ಆರ್.ಸಿ ಬುಕ್, ಚಾಲನಾ ಪರವಾನಗಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.  ವಾಹನ ಕಾಯ್ದೆ, ವಾಹನ ಅಪಘಾತ ಸಂದರ್ಭದಲ್ಲಿ ವಿಮಾ ಸೌಲಭ್ಯ ಕುರಿತು ವಿವರಣೆ ನೀಡಿದರು.

            ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶ್ರೀ ಎ.ಜಿ. ಶಿವಕುಮಾರ್ ಅವರು ನೀಡಿದ ವಿಶೇಷ ಉಪನ್ಯಾಸದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳ ಕಾಯ್ದೆ, ಪಹಣಿ ಹಾಗೂ ಜಮೀನು ಪರಭಾರೆ ಮಾಡುವ ಬಗ್ಗೆ ಮಾಹಿತಿ ನೀಡಿದರು. 

            ಅಧ್ಯಕ್ಷತೆವಹಿಸಿದ್ದ ವಕೀಲರಾದ ಶ್ರೀ ಶಶಿಕಾಂತ ಪಿ. ಕಲಾಲ್ ಅವರು ಮಾತನಾಡಿ ರೈತರು ಕಾನೂನು ಸೇವಾ ಪ್ರಾಧಿಕಾರ ನೀಡುವ ಉಚಿತ ಕಾನೂನು ನೆರವು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದರು.

            ಗಣ್ಯರಾದ ಶ್ರೀ ವಿ. ವೀರೇಶ್, ಶ್ರೀ ಸಿ. ರಾಜಶೇಖರ್, ಶ್ರೀ ಸಣ್ಣ ಸಿದ್ಧಪ್ಪ, ಗ್ರಾಮ ಪಂಚಾಯತ್ ಸದಸ್ಯ ಶ್ರೀ ಸುರೇಶ್, ಶ್ರೀ ಸಿ. ಬಸವರಾಜ್, ಶ್ರೀ ಸಣ್ಣ ರುದ್ರಗೌಡ್ರು, ಹಿರಿಯ ವಕೀಲರಾದ ಶ್ರೀ ಕೋರೆ ಪ್ರಭಾಕರ್ ಅವರು ಉಪಸ್ಥಿತರಿದ್ದರು.

ಶ್ರೀ ಹನುಮೇಶ್ ಸ್ವಾಗತಿಸಿದರು.  ಶ್ರೀ ಗಂಗಾಧರ್ ನಿರೂಪಿಸಿದರು.  ಶ್ರೀ ಹೊನ್ನೂರುಸ್ವಾಮಿ ವಂದಿಸಿದರು. 

ಸಿ.ಆರ್.ಪಿ /ಬಿ.ಆರ್.ಪಿ.ಗಳಿಗೆ ಸ್ಥಳ ನಿಯುಕ್ತಿ ಕೌನ್ಸಿಲಿಂಗ್

               ಮೈಸೂರು, ಮೇ. 07 (ಕರ್ನಾಟಕ ವಾರ್ತೆ) - ಉಪನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆ, ಮೈಸೂರು ಇಲ್ಲಿ ದಿನಾಂಕ 08.05.2012ರಂದು ಅಪರಾಹ್ನ 4:00 ಗಂಟೆಗೆ ಮೂರು ವರ್ಷಕ್ಕಿಂತ ಅಧಿಕ ವರ್ಷಗಳ ಸೇವೆ ಸಲ್ಲಿಸಿರುವ ಜಿಲ್ಲೆಯ ಎಲ್ಲಾ ಸಿ.ಆರ್.ಪಿ /ಬಿ.ಆರ್.ಪಿ. ಗಳಿಗೆ ತಾಲ್ಲೂಕುವಾರು ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಹಮ್ಮಿಕೊಂಡಿದ್ದು, ಎಲ್ಲಾ ಅರ್ಹ ಸಿ.ಆರ್.ಪಿ /ಬಿ.ಆರ್.ಪಿ ಗಳು ನಿಗದಿತ ಸಮಯಕ್ಕೆ ಹಾಜರಾಗಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಆಡಳಿತ) ಶ್ರೀ ಬಿ.ಕೆ.ಬಸವರಾಜ ಅವರು ತಿಳಿಸಿದ್ದಾರೆ.

 ಖಾಸಗಿ ಬಾಡಿಗೆ ಕಟ್ಟಡ ಬೇಕಾಗಿದೆ : ಸಂಪರ್ಕಿಸಿ

ಮೈಸೂರು, ಮೇ. 07 (ಕರ್ನಾಟಕ ವಾರ್ತೆ) - ಮೈಸೂರು ಜಿಲ್ಲೆಯ ಮೈಸೂರು, ಕೆ.ಆರ್.ನಗರ, ನಂಜನಗೂಡು ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಖಾಸಗಿ ಬಾಡಿಗೆ ಕಟ್ಟಡಗಳು ಬೇಕಾಗಿವೆ.

ಕನಿಷ್ಠ 50 ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಳಾವಕಾಶ ಹಾಗೂ ಇನ್ನಿತರ ಸೌಕರ್ಯಗಳನ್ನು ಹೊಂದಿರುವ ಆಸಕ್ತ ಕಟ್ಟಡದ ಮಾಲೀಕರು ನಮೂನೆ 1ರಲ್ಲಿ ಅರ್ಜಿಗಳನ್ನು ಸಂಬಂಧಪಟ್ಟ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಅಥವಾ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಮೈಸೂರು ಇವರಿಂದ ಪಡೆದು ಭರ್ತಿ ಮಾಡಿ ದಿನಾಂಕ 15.5.2012ರ ಒಳಗೆ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು, ನಂ.9/ಎ, 3ನೇ ಮಹಡಿ, ಎಸ್.ಬಿ.ಎಂ. ರೀಜನಲ್ ಆಫೀಸ್ ಕಟ್ಟಡ, ಕೃಷ್ಣಧಾಮ ಎದುರು, ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು ಇವರಿಗೆ ಸ್ಲಲಿಸಬಹುದು.

ಅರ್ಜಿ ಹಾಗೂ ವಿವರಗಳಿಗೆ ಮೈಸೂರು ತಾಲ್ಲೂಕು - ಶ್ರೀ ಹೆಚ್.ಕೆ. ಕಾಂತರಾಜು - 9620638555, ಕೆ.ಆರ್.ನಗರ ತಾಲ್ಲೂಕು - ಶ್ರೀಮತಿ ಎನ್.ಎಸ್. ಭಾಗ್ಯ - 7829914085, ನಂಜನಗೂಡು ತಾಲ್ಲೂಕು - ಶ್ರೀ ಚನ್ನರುದ್ರಯ್ಯ - 9480234900, ಪಿರಿಯಾಪಟ್ಟಣ ತಾಲ್ಲೂಕು - ಶ್ರೀ ಸಿದ್ದೇಗೌಡ - 985681136 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಕಂಪ್ಯೂಟರ್ ತರಬೇತಿ

ಮೈಸೂರು, ಮೇ. 07 (ಕರ್ನಾಟಕ ವಾರ್ತೆ) - ಕರ್ನಾಟಕ ರಾಜ್ಯ ಸರ್ಕಾರದ ಉದ್ಯಮವಾದ ಕಿಯೋನಿಕ್ಸ್ ಸಂಸ್ಥೆಯಲ್ಲಿ ಮೈಸೂರು ಜಿಲ್ಲೆಯ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸುವ ಸಲುವಾಗಿ ಅತೀ ಕಡಿಮೆ ದರದಲ್ಲಿ ಸಿ, ಸಿ++, ಜಾವ, ಅಂಡ್ರಾಯಡ್ ಮತ್ತು ಇತರ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಕಿಯೋನಿಕ್ಸ್ ಯುವ.ಕಾಂ, 47/ಡಿ, ಎಂ ಬ್ಲಾಕ್, 2ನೇ ಹಂತ, ಕುವೆಂಪುನಗರ, ಮೈಸೂರು 570023 (ದೂರವಾಣಿ 0821-2363127, ಮೊಬೈಲ್ 9880622747) ವಿಳಾಸದಲ್ಲಿ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

ಮಿಲಿಟರಿ ಬಾಲಕಿಯರ ವಸತಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮೈಸೂರು, ಮೇ. 07 (ಕರ್ನಾಟಕ ವಾರ್ತೆ) - ಧಾರವಾಡ ಶಹರದ ಸಪ್ತಾಪುರ ರಸ್ತೆಯಲ್ಲಿರುವ ಮಿಲಿಟರಿ ಬಾಲಕಿಯರ ವಸತಿ ನಿಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಧಾರವಾಡ ಜಿಲ್ಲೆಯ ಗ್ರಾಮಾಂತರ ಪ್ರದೇಶ, ಗದಗ, ಹಾವೇರಿ ಮತ್ತು ಬಳ್ಳಾರಿ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಮಾಜಿ ಸೈನಿಕರ ಮತ್ತು ಯುದ್ಧದಲ್ಲಿ ಮಡಿದ ಯೋಧರ ಹೆಣ್ಣುಮಕ್ಕಳಿಗೆ ಮೆಟ್ರಿಕ್ ಪೂರ್ವ 5 ರಿಂದ 10ನೇ ತರಗತಿಯವರೆಗೆ ಮಾಜಿ ಸೈನಿಕರ ಒಂದು ಹೆಣ್ಣುಮಗುವಿಗೆ ಮಾತ್ರ ಆದ್ಯತೆ ಹಾಗೂ ಅರ್ಹತೆ ಮೇರೆಗೆ ವಸತಿ ನಿಲಯದಲ್ಲಿ ಪ್ರವೇಶ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರವೇಶವು ಅರ್ಹರಿರುವವರಿಗೆ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಧಾರವಾಡ ನಗರದಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆದ ನಂತರವೇ ನಿಲಯಲ್ಲಿ ಪ್ರವೇಶ ನೀಡಲಾಗುವುದು.

ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 20.05.2012. ಅರ್ಜಿ ನಮೂನೆಯನ್ನು ಮತ್ತು ಪ್ರವೇಶದ ನಿಬಂಧನೆಗಳಿಗೆ ಖುದ್ದಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣ, ಧಾರವಾಡ - 580001 ಇವರಿಂದ ಕಾರ್ಯಾಲಯದ ಕೆಲಸದ ದಿನಗಳಲ್ಲಿ ದಿನಾಂಕ 20.05.2012ರೊಳಗೆ ಪಡೆಯಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2440176ನ್ನು ಸಂಪರ್ಕಿಸಬಹುದಾಗಿದೆ.

ಕಟ್ಟಡಗಳ ಶಂಕುಸ್ಥಾಪನಾ ಸಮಾರಂಭ ಹಾಗೂ ವಿಚಾರ ಸಂಕಿರಣ

ಮೈಸೂರು, ಮೇ. 07 (ಕರ್ನಾಟಕ ವಾರ್ತೆ) - ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಹಾಗೂ ಮೈಸೂರು ತೋಟಗಾರಿಕೆ ಮಹಾವಿದ್ಯಾಲಯಗಳ ವತಿಯಿಂದ ಮೈಸೂರು ತಾಲ್ಲೂಕು ಇಲವಾಲದ ಯಲಚನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ದಿನಾಂಕ 09.05.2012ರಂದು ಬೆಳಿಗ್ಗೆ 11.00 ಗಂಟೆಗೆ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ವಸತಿನಿಲಯ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.

ಉದ್ಘಾಟನೆ ಹಾಗೂ ಮಹಾವಿದ್ಯಾಲಯ ಕಟ್ಟಡದ ಶಂಕುಸ್ಥಾಪನೆಯನ್ನು ರಾಜ್ಯ ತೋಟಗಾರಿಕೆ ಹಾಗೂ ಸಕ್ಕರೆ ಖಾತೆ ಸಚಿವ ಶ್ರೀ ಎಸ್.ಎ ರವೀಂದ್ರನಾಥ್ ನೆರವೇರಿಸುವರು. ಶಾಸಕ ಶ್ರೀ ಎಂ. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ವಿದ್ಯಾರ್ಥಿ ವಸತಿ ನಿಲಯ ಕಟ್ಟಡದ ಶಂಕುಸ್ಥಾಪನೆಯನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀಸ್.ಎ ರಾಮದಾಸ್ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡದ ಶಂಕುಸ್ಥಾಪನೆಯನ್ನು ವಿರೋಧ ಪಕ್ಷದ ನಾಯಕ ಶ್ರೀ ಸಿದ್ಧರಾಮಯ್ಯ ನೆರವೇರಿಸುವರು.

ಮುಖ್ಯ ಅತಿಥಿಗಳು ಹಾಗೂ ಗೌರವಾನ್ವಿತ ಅತಿಥಿಗಳಾಗಿ ಎಲ್ಲ ಲೋಕಸಭಾ, ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಗಣ್ಯರು ಆಗಮಿಸುವರು.

ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಹಿಂದುಳಿದ ವರ್ಗಗಳ  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ       

            ಶಿವಮೊಗ್ಗ, ಮೇ 7 (ಕರ್ನಾಟಕ ವಾರ್ತೆ) ದಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2012-13ನೇ ಸಾಲಿಗೆ ಹಿಂದುಳಿದ ವರ್ಗಗಳ ಆರ್ಥಿಕಾಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಚೈತನ್ಯ ಸಬ್ಸಿಡಿ ಕಂ. ಸಾಫ್ಟ್‌ಲೋನ್ ಯೋಜನೆ, ಅರಿವು/ಶೈಕ್ಷಣಿಕ ಸಾಲ ಯೋಜನೆ, ಚೈತನ್ಯ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಕಿರುಸಾಲ ಯೋಜನೆ, ಸಾಂಪ್ರದಾಯಿಕ ವೃತ್ತಿದಾರರು ಮತ್ತು ಕುಶಲ ಕರ್ಮಿಗಳ ಸಾಲ ಯೋಜನೆ, ಕುಂಬಾರಿಕೆ ಅಭಿವೃದ್ಧಿ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸವಿತಾ ಸಮಾಜ ಅಭಿವೃದ್ಧಿ ಯೋಜನೆ, ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆರ್ಥಿಕ ನೆರವು ಯೋಜನೆ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ನ್ಯೂ ಸ್ವರ್ಣಮಾ ಮತ್ತು ವಿವಿಧ ಅವಧಿ ಸಾಲ ಯೋಜನೆಗಳಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಹ ಹಿಂದುಳಿದ ವರ್ಗಗಳ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

            ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿದ್ದು, ಅಭ್ಯರ್ಥಿಯ ಕುಟುಂಬದ ವಾರ್ಷಿಕ ವರಮಾನ 22,000/- ರೂ.ಗಳನ್ನು ಮೀರಿರಬಾರದು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಲ್ಲಿ ಗ್ರಾಮೀಣ ಪ್ರದೇಶದವರಿಗೆ 40,000/- ರೂ. ಹಾಗೂ ನಗರ ಪ್ರದೇಶದವರಿಗೆ 55,000/- ರೂ.ಗಿಂತ ಕಡಿಮೆ ಇರಬೇಕು. ನಿಗಮದ ಯಾವುದೇ ಯೋಜನೆಗಳಲ್ಲಿ ಈಗಾಗಲೇ ಸಾಲ-ಸೌಲಭ್ಯ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

            ಆಸಕ್ತರು ಅರ್ಜಿಯನ್ನು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 15ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ನೆಹರೂ ಕ್ರೀಡಾಂಗಣದ ಹತ್ತಿರ, ಒಂದನೇ ಮುಖ್ಯ ರಸ್ತೆ, ಜಯನಗರ, ಶಿವಮೊಗ್ಗ ವಿಳಾಸಕ್ಕೆ ಸಲ್ಲಿಸಬೇಕು. ವಿವರಗಳಿಗಾಗಿ 08182-229634ನ್ನು ಸಂಪರ್ಕಿಸಬಹುದಾಗಿದೆ.

ಬಿ.ಎಸ್.ಎನ್.ಎಲ್. ನಿಂದ ಹೊಸ ಯೋಜನೆ ಪ್ರಕಟ              

       ಶಿವಮೊಗ್ಗ, ಮೇ 7 (ಕರ್ನಾಟಕ ವಾರ್ತೆ) ಭಾರತ ಸಂಚಾರ ನಿಗಮ ನಿಯಮಿತವು ಸ್ಥಿರ ದೂರವಾಣಿ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದ್ದು, ಶಿವಮೊಗ್ಗ ನಗರದ ಗ್ರಾಹಕರು ಪ್ರತಿ ತಿಂಗಳಿಗೆ 600/- ರೂ ಮತ್ತು ಜಿಲ್ಲೆಯ ಇತರ ನಗರ ಮತ್ತು ಗ್ರಾಮೀಣ ಭಾಗದ ಎಲ್ಲಾ ಗ್ರಾಹಕರು ತಿಂಗಳಿಗೆ 500/-ರೂ. ಬಾಡಿಗೆ ಪಾವತಿಸಿ ದೇಶದ ಎಲ್ಲಾ ಬಿ.ಎಸ್.ಎನ್.ಎಲ್. ಸ್ಥಿರ ದೂರವಾಣಿ ಮತ್ತು ಮೊಬೈಲ್ ಸಂಪರ್ಕಗಳಿಗೆ ಅನುಯಮಿತ ಉಚಿತ ಕರೆಗಳನ್ನು ಮಾಡಬಹುದಾಗಿದೆ. ಬ್ರಾಡ್ ಬ್ಯಾಂಡ್ ಸೌಲಭ್ಯ ಹೊಂದಿರುವ ಸ್ಥಿರ ದೂರವಾಣಿ ಗ್ರಾಹಕರು 1, 2 ಮತ್ತು 3 ವರ್ಷದ ಮುಂಗಡ ಠೇವಣಿ ಪಾವತಿಸಿ ಆಕರ್ಷಕ ರಿಯಾಯಿತಿ ಪಡೆಯಬಹುದಾಗಿದೆ.

            ವಿವರಗಳಿಗಾಗಿ ದೂರವಾಣಿ:08182-251308 ಅಥವಾ 261251ನ್ನು ಸಂಪರ್ಕಿಸುವಂತೆ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಹ: ಅಗತ್ಯ ಮುನ್ನೆಚ್ಚರಿಕೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಸೂಚನೆ

     ಮಡಿಕೇರಿ ಮೇ, 07(ಕರ್ನಾಟಕ ವಾರ್ತೆ):-ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಈಗಾಗಲೇ ಆರಂಭವಾಗಿದ್ದು,  ವಾಡಿಕೆಯಂತೆ ಕೊಡಗು ಜಿಲ್ಲೆ ಹೆಚ್ಚು ಮಳೆ ಸುರಿಯುವ ಪ್ರದೇಶವಾಗಿದೆ. ಅಧಿಕ ವರ್ಷಧಾರೆ ಸಂದರ್ಭ ಪ್ರವಾಹ ಉಂಟಾಗುವ ಸಂಭವವಿದ್ದು, ಇದರ ಪರಿಣಾಮಗಳ ನಿರ್ವಹಣೆಗೆ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

     ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮೇ, 5ರಂದು ಪ್ರವಾಹ ಮುನ್ನೆಚ್ಚರಿಕೆ ವಹಿಸುವ ಕುರಿತು ನಡೆದ ಪೂರ್ವಭಾವಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನ-ಜಾನುವಾರುಗಳ ಜೀವ ಅಮೂಲ್ಯವಾದುದು, ಎಂತಹುದೇ ಕ್ಲಿಷ್ಟ ಸಂದರ್ಭದಲ್ಲೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಬೇಕು. ಸಂಕಷ್ಟದಲ್ಲಿ ಸಿಲುಕಿದವರಿಗೆ ನೆರವಾಗಬೇಕು. ಜೀವ ಹಾನಿ ಸಂದರ್ಭ ಶೀಘ್ರವಾಗಿ ಪರಿಹಾರ ವಿತರಣೆಯಾಗಬೇಕು. ಅದೇ ರೀತಿ ಬೆಳೆ ಹಾನಿ ಅರ್ಜಿಗಳು ಬಂದಾಗ ಸ್ಥಳ ಪರಿಶೀಲನೆ ನಡೆಸಿ ಪರಿಹಾರಕ್ಕೆ ಶಿಫಾರಸು ಮಾಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂದಾಯ, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳ ನಡುವೆ ನಿರಂತರ ಸಂಪರ್ಕ ಮತ್ತು ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು. 

     ಜಿಲ್ಲೆಯ ಕರಡಿಗೋಡು, ನೆಲ್ಯಹುದಿಕೇರಿ ಗುಹ್ಯ, ಬಲಮುರಿ, ಬೇತ್ರಿ, ಬೆಳ್ಳುಮಾಡು, ಹೊದ್ದೂರು, ಎಮ್ಮೆಮಾಡು, ಕಣಿವೆ, ದುಬಾರೆ, ಲಕ್ಷ್ಮಣ ತೀರ್ಥ ಮತ್ತಿತರ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಂಭವ ಹೆಚ್ಚಿದ್ದು, ಅಂತಹ ಗ್ರಾಮಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

     ಪ್ರವಾಹ ಉಂಟಾಗುವ ಗ್ರಾಮಗಳಲ್ಲಿ ಜನರ ರಕ್ಷಣೆ, ಪ್ರವಾಹ ಸಂದರ್ಭ ನಿರಾಶ್ರಿತರ ಗಂಜಿ ಕೇಂದ್ರ ತೆರೆಯುವುದು, ಜಾನುವಾರುಗಳ ರಕ್ಷಣೆ ಮತ್ತಿತರ ಅಗತ್ಯ ಕ್ರಮವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಕೆ.ಎಂ.ಚಂದ್ರೇಗೌಡ ಅವರು ಸೂಚಿಸಿದರು.

     ಮಳೆ-ಗಾಳಿಯ ರಭಸದಿಂದಾಗಿ ವಿದ್ಯುತ್ ಕಂಬಗಳು ಬೀಳುವ ಅಥವಾ ತಂತಿ ತುಂಡಾಗುವ ಸಂಭವವಿದ್ದು, ಅಪಾಯದ ಹಂತದಲ್ಲಿರುವ ಕಂಬಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು. ತುರ್ತು ಸಂದರ್ಭದಲ್ಲಿ ಬಳಕೆಗಾಗಿ ವಿದ್ಯುತ್ ಕಂಬಗಳನ್ನು ಮೀಸಲಿರಿಸಿಕೊಂಡಿರಬೇಕು ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ  ನೀಡಿದರು.

     ಪ್ರವಾಹ ಉಂಟಾಗುವ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು.  ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ವೈದ್ಯರು ಕೇಂದ್ರ ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಡಿಎಚ್‌ಓಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ ನೀಡಿದರು.

     ರಸ್ತೆ ಬದಿಯಲ್ಲಿ ಮರ-ಗಿಡಗಳು ಬಿದ್ದಾಗ ಲೋಕೋಪಯೋಗಿ ಇಲಾಖೆಯೊಂದಿಗೆ ಅರಣ್ಯ ಇಲಾಖೆಯವರು ಕೈಜೋಡಿಸಿ ತೆರವುಗೊಳಿಸಲು ಕ್ರಮವಹಿಸಬೇಕು. ಗ್ರಾಮ ಪಂಚಾಯ್ತಿ ಹಂತದಲ್ಲಿ ಇದಕ್ಕಾಗಿ ಸಲಕರಣೆ ಮತ್ತು ನೆರವು ತಂಡ ರಚಿಸಬೇಕು.  ಹಾಗೆಯೇ ಎಲ್ಲೆಲ್ಲಿ ನಿರಂತರವಾಗಿ ಮಳೆ ಸುರಿಯುತ್ತದೆ ಅಂತಹ ಗ್ರಾಮಗಳಲ್ಲಿನ ಶಾಲೆಗಳಿಗೆ ಒಂದು ದಿನದ ಮಟ್ಟಿಗೆ ಶಾಲೆಗೆ ರಜೆಯನ್ನು ಅಲ್ಲಿನ ಮುಖ್ಯೋಪಾಧ್ಯಾಯರೇ ಘೋಷಿಸಬಹುದಾಗಿದ್ದು, ಅದರ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು. ಜೊತೆಗೆ ಅತಿಯಾದ ಮಳೆ ಬೀಳುವ ಸಂದರ್ಭ ಆಯಾಯ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿ ಶಾಲೆಗಳಿಗೆ ರಜೆ ಘೋಷಣೆ ಮಾಡಬೇಕು ಎಂದು ಕೆ.ಎಂ.ಚಂದ್ರೇಗೌಡ ಅವರು ಸೂಚನೆ ನೀಡಿದರು.

     ಅಗ್ನಿ ಶಾಮಕ, ಗೃಹ ರಕ್ಷಕ ದಳದವರು, ನಗರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ  ಚುರುಕಿನಿಂದ ಕೆಲಸ ನಿರ್ವಹಿಸಬೇಕು. ಪ್ರವಾಹ ಸಂದರ್ಭದಲ್ಲಿ ಬರೆ ಕುಸಿತ ಉಂಟಾಗುವ ಸಂಭವ ಹೆಚ್ಚಿದ್ದು, ಇದರ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರೇಗೌಡ ಅವರು ಸಲಹೆ ಮಾಡಿದರು.

     ಮುಂಗಾರು ಸಂದರ್ಭದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ಧಾಗಿ ತೆರಳಿ ಪರಿಶೀಲಿಸಿ ಸಮರ್ಪಕವಾಗಿ ಪರಿಹಾರ ವಿತರಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

 ಮೂರು ತಾಲ್ಲೂಕಿನ ತಹಶೀಲ್ದಾರರು ಪ್ರವಾಹ ಮುನ್ನೆಚ್ಚರಿಕೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಿ ಮುಂಜಾಗ್ರತಾ ಕ್ರಮವನ್ನು ವಹಿಸಬೇಕು.  ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಬಾರದು ಎಂದು ತಹಶೀಲ್ದಾರ್‌ಗಳಿಗೆ ಚಂದ್ರೇಗೌಡ ಸೂಚಿಸಿದರು.

     ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯವರು ಜಿಲ್ಲೆಯಲ್ಲಿ 48 ಮಳೆ ಮಾಪಕ ಕೇಂದ್ರಗಳಿದ್ದು, 8 ಮಳೆ ಮಾಪಕ ಕೇಂದ್ರಗಳು ದುಸ್ಥಿತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಇವುಗಳನ್ನು ದುರಸ್ಥಿ ಮಾಡಿ ಪ್ರತಿ ದಿನ 8.30ಗಂಟೆಯೊಳಗೆ ಮಳೆಮಾಪನ ಮಾಡಿ ವರದಿ ಸಲ್ಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೂಚಿಸಿದರು.

     ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು ಎಂದು ಅವರು ತಿಳಿಸಿದರು. 

ಹಿಂದುಳಿದ ವರ್ಗದವರಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

       ಮಡಿಕೇರಿ ಮೇ, 07(ಕರ್ನಾಟಕ ವಾರ್ತೆ):-ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮವು 2012-13ನೇ ಸಾಲಿಗೆ ಹಿಂದುಳಿದ ವರ್ಗಗಳ ಆರ್ಥಿಕಾಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಚೈತನ್ಯ ಸಬ್ಸಿಡಿ ಕಂ ಸಾಫ್ಟ್‌ಲೋನ್ ಯೋಜನೆ, ಅರಿವು/ಶೈಕ್ಷಣೆಕ ಸಾಲ ಯೋಜನೆ, ಚೈತನ್ಯ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಕಿರುಸಾಲ ಯೋಜನೆ, ಸಾಂಪ್ರದಾಯಿಕ ವೃತ್ತಿದಾರರು ಮತ್ತು ಕುಶಲಕರ್ಮಿಗಳ ಸಾಲ ಯೋಜನೆ, ಕುಂಬಾರಿಕೆ ಅಭಿವೃದ್ಧಿ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸವಿತಾ ಸಮಾಜ ಅಭಿವೃದ್ಧಿ ಯೋಜನೆ, ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆರ್ಥಿಕ ನೆರವು ಯೋಜನೆ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ನ್ಯೂ ಸ್ವರ್ಣಿಮಾ ಮತ್ತು ವಿವಿಧ ಅವಧಿ ಸಾಲ ಯೋಜನೆಗಳಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಹ ಹಿಂದುಳಿದ ವರ್ಗದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

     ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ -1, 2ಎ, 3ಎ & 3ಬಿ ಗೆ ಸೇರಿದವರಾಗಿದ್ದು, ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಅವರ ಕುಟುಂಬದ ವಾರ್ಷಿಕ ವರಮಾನವು ಎಲ್ಲಾ ಮೂಲಗಳಿಂದ 22,000/-ರೂ.ಗಳು ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃಧ್ಧಿ ನಿಗಮದ ಯೋಜನೆಗಳಲ್ಲಿ ಗ್ರಾಮೀಣ ಪ್ರದೇಶದವರಿಗೆ 40,000/-ರೂ.ಗಳು ಹಾಗೂ ನಗರ ಪ್ರದೇಶದವರಿಗೆ 55,000/- ರೂ.ಗಳಿಗಿಂತ ಕಡಿಮೆ ಇರಬೇಕು.  ಅರ್ಜಿ ಸಲ್ಲಿಸಲು ಬಯಸುವವರು ಈ ಹಿಂದೆ ನಿಗಮದ ಯಾವುದೇ ಯೋಜನೆಗಳಲ್ಲಿ ಸೌಲಭ್ಯ ಪಡೆದಿರಬಾರದು.

     ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಲು ಇಚ್ಚಿಸುವ ಅರ್ಹ ಹಿಂದುಳಿದ ವರ್ಗಗಳ ಅರ್ಜಿದಾರರು ಯೋಜನೆಯ ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳನ್ನು ಅರ್ಜಿದಾರರು ವಾಸಿಸುವ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು. 

     ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 30ರೊಳಗೆ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಹೆಚ್ಚಿನ ವಿವರಗಳಿಗೆ ಕಚೇರಿ ವೇಳೆಯಲ್ಲಿ ದೂ. ಸಂಖ್ಯೆ 08272-221656 ಮಾಹಿತಿ ಪಡೆಯಬಹುದಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಶೋಭ ಅವರು ಕೋರಿದ್ದಾರೆ.     

ಲಿಖಿತ ಪರೀಕ್ಷೆಗೆ ಅರ್ಜಿ ಆಹ್ವಾನ

ಮಡಿಕೇರಿ ಮೇ, 07(ಕರ್ನಾಟಕ ವಾರ್ತೆ):-ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಹುದ್ದೆಗಳಿಗೆ ಅರ್ಹ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ತತ್ಸಮಾನ ವೃಂದದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಂದ ಲಿಖಿತ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು(ಆಡಳಿತ) ಇವರಿಗೆ ಮೇ, 10ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪಡೆಯಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್.ಎ.ರಾಮಸ್ವಾಮಿ ಅವರು ಕೋರಿದ್ದಾರೆ.

ಯುವನೀತಿ ಅನುಷ್ಠಾನ:ಸಭೆ

ಚಿಕ್ಕಮಗಳೂರು,ಮೇ.07: 2012-13ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪ್ರಕಟವಾಗಿರುವ ರಾಜ್ಯ ಯುವ ನೀತಿಯನ್ನು ರೂಪಿಸುವ ಸಂಬಂಧ, ಅಭಿಪ್ರಾಯ ಕ್ರೋಢೀಕರಿಸಲು ಜಿಲ್ಲಾಧಿಕಾರಿ ಡಿ.ಕೆ ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.

   ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಯುವನೀತಿಯ ಅನುಷ್ಠಾನಕ್ಕಾಗಿ 25 ಕೋಟಿ ರೂಗಳನ್ನು ಬಜೆಟ್‌ನಲ್ಲಿ ಮುಖ್ಯಮಂತ್ರಿ ಪ್ರಕಟಿಸಿದ್ದು, ಈಗಾಗಲೇ 15 ಕೋಟಿ  ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಯುವನೀತಿಯನ್ನು 2012ರ ಮೇ ತಿಂಗಳೊಳಗೆ ರಚಿಸಿ ಸರಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ಹೇಳಿದರು. 

   ರಾಜ್ಯದ ಜನಸಂಖ್ಯೆಯಲ್ಲಿ ಶೇ.36.4ರಷ್ಟು ಯುವಜನರು ಇದ್ದಾರೆ. ಯುವಜನರ ಸಮಗ್ರ ಅಭ್ಯುದಯ ದೃಷ್ಟಿಯಲ್ಲಿಟ್ಟುಕೊಂಡು ಯುವನೀತಿ ರಚಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

   ನಗರಸಭೆ ಅಧ್ಯಕ್ಷ ಪ್ರೇಂಕುಮಾರ್ ಮಾತನಾಡಿ ರಾಜ್ಯ ಸರಕಾರವು ಯುವನೀತಿ ಜಾರಿಗೆ ತರುತ್ತಿರುವುದು ಒಳ್ಳೆಯ ವಿಚಾರ. ಇದರ ಅನುದಾನ ಬಳಕೆಗಿಂತಲೂ, ಪರಿಣಾಮಕಾರಿಯಾದ ಅನುಷ್ಠಾನ ಅಗತ್ಯ. ಯುವಕರ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿ, ಅದರಲ್ಲಿಯೇ ಪ್ರೋತ್ಸಾಹಿಸಬೇಕು. ಅನಕ್ಷರಸ್ಥ ಯುವಕರ ಸಾಮರ್ಥ್ಯವನ್ನು ಸಮಾಜಕ್ಕೆ ಬಳಸುವಂತೆ ಹಾಗೂ ಶಿಕ್ಷಿತ ಯುವಕರು ಚಟಗಳಿಗೆ ಬಲಿಯಾಗದ ನಿಟ್ಟಿನಲ್ಲಿ ಯುವ ನೀತಿ ಗಮನಹರಿಸಬೇಕಿದೆ ಎಂದು ಹೇಳಿದರು.

   ಪತ್ರಕರ್ತ ಹೆಚ್.ಎಸ್.ಪುಟ್ಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಯುವಕ-ಯುವತಿ ಸಂಘ ಸಂಸ್ಥೆಗಳಿವೆ. ಇವುಗಳಲ್ಲಿ ಕೆಲವು ಕ್ರಿಯಾಶೀಲವಾಗಿದ್ದು, ನಿಸ್ತೇಜಗೊಂಡಿರುವ ಸಂಘಟನೆಗಳೂ ಬಹಳಷ್ಟಿವೆ. ಯುವಕಾರ್ಯಕ್ರಮಗಳ ಜಾರಿಯಲ್ಲಿ ಇವುಗಳ ಪಾತ್ರ ಬಹಳಷ್ಟಿರುವುದರಿಂದ ನಿಸ್ತೇಜಗೊಂಡಿರುವ ಸಂಘಟನೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ ಎಂದು ಹೇಳಿದರು.

  ಸಭೆಯಲ್ಲಿ ಭಾಗವಹಿಸಿದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಾಲೇಜು ಪ್ರಾಂಶುಪಾಲರು, ತಮ್ಮ ಅನಿಸಿಕೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

  ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಯುವನೀತಿ ರೂಪಿಸುವ ಸಂಬಂಧ, ತಂಡಗಳನ್ನು ರಚಿಸಿ ಜಿಲ್ಲೆಯ ಸಂಘ ಸಂಸ್ಥೆಗಳನ್ನೂ, ಕ್ರಿಯಾಶೀಲ ವ್ಯಕ್ತಿಗಳನ್ನು ಭೇಟಿ ಮಾಡಿ, ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

   ಸಭೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರತಾಪ್ ಕುಮಾರ್, ಕ್ರೀಡಾಧಿಕಾರಿ ವಿಶ್ವನಾಥ್, ಉಪವಿಭಾಗಾಧಿಕಾರಿ ಡಾ.ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

ಉದ್ಯಾನವನ ಅಭಿವೃದ್ಧಿ: 9ರಂದು ಸಭೆ

ಚಿಕ್ಕಮಗಳೂರು,ಮೇ.07: ಚಿಕ್ಕಮಗಳೂರು ನಗರವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ನಗರಸಭೆಯ ಒಡೆತನದಲ್ಲಿರುವ ಉದ್ಯಾನವನಗಳಿಗಾಗಿ ಮೀಸಲಿಟ್ಟಿರುವ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಆಸಕ್ತ ಸಂಸ್ಥೆಗಳು, ಟ್ರಸ್ಟ್‌ಗಳು, ಬ್ಯಾಂಕ್‌ಗಳು, ವಾಣಿಜ್ಯ ಕೇಂದ್ರಗಳ ಮಾಲೀಕರುಗಳು, ನಾಗರೀಕರುಗಳೊಂದಿಗೆ ಚರ್ಚಿಸುವ ಸಂಬಂಧ ಮೇ 9 ರಂದು ಬೆಳಗ್ಗೆ 11 ಗಂಟೆಗೆ ನಗರಸಭಾ ಸಭಾಂಗಣದಲ್ಲಿ ನಗರಸಭೆಯ ಮಾನ್ಯ ಅಧ್ಯಕ್ಷರಾದ ಸಿ.ಆರ್.ಪ್ರೇಮ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ. ಉದ್ಯಾನವನಗಳು ನಗರಸಭೆ ಒಡೆತನದಲ್ಲಿದ್ದು, ಇವುಗಳನ್ನು ತಮ್ಮ ಸಂಸ್ಥೆಗಳ ಹೆಸರಿನಲ್ಲಿ ನಿರ್ವಹಣೆ ಮಾಡಲಿಚ್ಛಿಸುವ ಸಂಘ ಸಂಸ್ಥೆಗಳ/ಟ್ರಸ್ಟ್‌ಗಳ/ಬ್ಯಾಂಕ್‌ಗಳ/ಇತರೆ ಯಾವುದೇ ವಾಣಿಜ್ಯ ಕೇಂದ್ರಗಳ ಮಾಲೀಕರುಗಳು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ನಗರ ವ್ಯಾಪ್ತಿಯಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.