Government of Karnataka

Department of Information

Monday 02/05/2016

District News 08-02-2016

Date : Monday, February 8th, 2016

ಜಿಲ್ಲಾಮಟ್ಟದ ಚುನಾವಣಾ ಪ್ರಚಾರ ನಿಯಂತ್ರಣ ಸಮಿತಿ

ಬೆಂಗಳೂರು, ಫೆ, 8:  ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಡೆಯುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಚುನಾವಣಾ ಪ್ರಚಾರ ಸಾಮಗ್ರಿಗಳ ಪರಿಶೀಲನೆಗೆ ರಾಜ್ಯ ಚುನಾವಣಾ ಆಯೋಗ ರಚಿಸಿರುವ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿಯ ಅನುಮತಿ ಪಡೆಯಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ  ಶ್ರೀ ವಿ.ಶಂಕರ್ ಅವರು ತಿಳಿಸಿದರು.

ವಿವಿಧ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕೈಗೊಳ್ಳುವಾಗ ಪತ್ರಿಕೆ, ಶ್ರವಣ, ದೃಶ್ಯ ಮಾದ್ಯಮ ಪ್ರಚಾರ ಸಾಮಗ್ರಿಗಳ ಬಗ್ಗೆ ವಿವರಗಳನ್ನು ಜಿಲ್ಲಾಮಟ್ಟದ ಪರಿಶೀಲನಾ ಸಮಿತಿಗೆ ಅಗತ್ಯ ನಮೂನೆಗಳನ್ನು ಭರ್ತಿ ಮಾಡಿ ಪರಿಶೀಲನೆಗಾಗಿ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿಗೆ ಸಲ್ಲಿಸಬೇಕೆಂದು ಅವರು ಹೇಳಿದರು.

ಜಿಲ್ಲಾಮಟ್ಟದ ಸಮಿತಿಯಲ್ಲಿ ಜಿಲ್ಲಾಧಿಕಾರಿ (ಅಧ್ಯಕ್ಷರು), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಸದಸ್ಯರು), ಅಪರ ಜಿಲ್ಲಾಧಿಕಾರಿ (ಸದಸ್ಯರು), ಜಿಲ್ಲಾ ವಾರ್ತಾಧಿಕಾರಿ (ಸಂಚಾಲಕರು), ಉಪವಿಭಾಗಾಧಿಕಾರಿ (ಸದಸ್ಯರು), ತಹಸೀಲ್ದಾರರು ಸದಸ್ಯರಾಗಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೈರಾದ ಚುನಾವಣಾ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ

ಬೆಂಗಳೂರು, ಫೆ, 8: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಬೆಂಗಳೂರು ಉತ್ತರ, ಪೂರ್ವ, ದಕ್ಷಿಣ ಮತ್ತು ಆನೇಕಲ್ ತಾಲ್ಲೂಕುಗಳಿಗೆ ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡ ಸಿಬ್ಬಂದಿಯು ದಿನಾಂಕ: 12-2-2016 ರಂದು ಮಸ್ಟರಿಂಗ್ ಕೇಂದ್ರದಲ್ಲಿ ತಪ್ಪದೇ ಹಾಜರಾಗಬೇಕೆಂದು ಗೈರುಹಾಜರಾದ ಚುನಾವಣಾ ಸಿಬ್ಬಂದಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರು ಸೂಚಿಸಿದರು.

ಚುನಾವಣಾ ಕಾರ್ಯದಲ್ಲಿ ಗೈರುಹಾಜರಾದ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.