Government of Karnataka

Department of Information

Saturday 26/12/2015

District News 12-07-2012

Date : Thursday, July 12th, 2012

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ; ಪರೀಷ್ಕೃತ ವೇಳಾಪಟ್ಟಿ ಪ್ರಕಟ

                        ಶಿವಮೊಗ್ಗ, ಜುಲೈ 12 (ಕರ್ನಾಟಕ ವಾರ್ತೆ) ಸಾರ್ವಜನಿಕ ಶಿಕ್ಷಣ ಇಲಾಖೆಯು ಜುಲೈ 15 ರಿಂದ 18ರವರೆಗೆ ಜಿಲ್ಲೆಯ 32 ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿಗೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಜುಲೈ 15ರಂದು ಬೆಳಿಗ್ಗೆ 10 ರಿಂದ 12ರವರೆಗೆ ಸಾಮಾನ್ಯ ಪರೀಕ್ಷೆ-1, ಮ.2ರಿಂದ 4ರವರೆಗೆ ಕಲಾ ಶಿಕ್ಷಕರು ಪತ್ರಿಕೆ-2, ಜುಲೈ 16ರಂದು ಬೆಳಿಗ್ಗೆ 10 ರಿಂದ 12ರವರೆಗೆ ದೈಹಿಕ ಶಿಕ್ಷಣ ಗ್ರೇಡ್-1 ಪತ್ರಿಕೆ-2, ಮ.2 ರಿಂದ 4ರವರೆಗೆ ಭೌತವಿಜ್ಞಾನ-1 ಜೀವ ವಿಜ್ಞಾನ ಪತ್ರಿಕೆ-2, ಜುಲೈ 17 ರಂದು ಬೆಳಿಗ್ಗೆ 10 ರಿಂದ 12ರವರೆಗೆ ಕನ್ನಡ ಬಾಷಾ ಶಿಕ್ಷಕರು. ಪತ್ರಿಕೆ-2, ಮಧ್ಯಾಹ್ನ 2 ರಿಂದ 4ರವರೆಗೆ ಆಂಗ್ಲಬಾಷಾ ಶಿಕ್ಷಕರು ಪತ್ರಿಕೆ-2, ಮತ್ತು ಮಧ್ಯಾಹ್ನ 2ರಿಂದ 4ರವರೆಗೆ ಸಂಸ್ಕೃತ/ ಉರ್ದು/ ತಮಿಳು/ ಮರಾಠಿ-ಪತ್ರಿಕೆ-2ರ ವಿಷಯದ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಹಾರ ಕಲಬೆರೆಕೆ ತಡೆಗೆ ಕಟ್ಟುನಿಟ್ಟಿನ ಕಾನೂನು: ಅಪರ ಜಿಲ್ಲಾಧಿಕಾರಿ

ಮಂಗಳೂರು ಜುಲೈ 12(ಕರ್ನಾಟಕ ವಾರ್ತೆ): ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯಿದೆಯಡಿ ಆಹಾರ ಕಲಬೆರಕೆಯನ್ನು ತಡೆಗಟ್ಟಲು ಕಟ್ಟು ನಿಟ್ಟಿನ ಕಾನೂನು ಜಾರಿಯಾಗಿದ್ದು, ಸಂಬಂಧಪಟ್ಟವರು ಆಗಸ್ಟ್ 4, 2012ರೊಳಗಾಗಿ ತಮ್ಮ ವ್ಯವಹಾರಗಳ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿ/ ಜಿಲ್ಲಾ ಸರ್ವೇಕ್ಷಣಾ ಘಟಕ ಕಚೇರಿಯಲ್ಲಿ  ನೋಂದಾಯಿಸಬೇಕೆಂದು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಶ್ರೀ ಕೆ. ದಯಾನಂದ ಅವರು ಹೇಳಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಿತಿಯ ನ್ಯಾಯನಿರ್ಣಯ ಅಧಿಕಾರಿಗಳೂ ಆಗಿರುವ ಅಪರ ಜಿಲ್ಲಾಧಿಕಾರಿಗಳು, ಈ ಸಂಬಂಧ ಆಯೋಜಿಸಲಾದ ಸಭೆಯನ್ನುದ್ದೇಶಿಸಿ ಮಾತನಾಡಿದರು.  ಅತ್ಯಂತ ಪರಿಣಾಮಕಾರಿ ಕಾಯಿದೆ ಇದಾಗಿದ್ದು, ಆಗಸ್ಟ್ 4 ರೊಳಗೆ ಈ ಸಂಬಂಧ ತಿಳುವಳಿಕೆ ಮೂಡಿಸಿ ನೋಂದಾಯಿಸುವ ಕಾರ್ಯಕ್ಕೆ ಈಗಾಗಲೇ ವಿವಿಧ ಹಂತಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದರು. ಮಹಾನಗರ ಪಾಲಿಕೆ ಆಹಾರ ಸುರಕ್ಷತೆ ಅಧಿಕಾರಿಗಳ ಸರ್ಟಿಫಿಕೇಟ್ ಇಲ್ಲದೆ ಯಾವುದೇ ವ್ಯಾಪಾರಕ್ಕೆ ಪರವಾನಿಗೆ (ಟ್ರೇಡ್ ಲೈಸನ್ಸ್) ನೀಡಲಾಗುವುದಿಲ್ಲ ಎಂಬ ನಿಯಮವನ್ನು ಅಳವಡಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಅವರು ಹೇಳಿದರು.

ಈ ಸಂಬಂಧ ಎಲ್ಲ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ಹಣ್ಣು ತರಕಾರಿ ಮಾರುವವರು ಆಹಾರಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯಿದೆಯಡಿ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ ರಾಜೇಶ್, ವೆನ್ ಲಾಕ್ ಆಸ್ಪತ್ರೆ ಹಿಂಭಾಗ, ರೈಲ್ವೇ ಸ್ಟೇಷನ್ ರಸ್ತೆ, ಐಎಂಎ ಎದುರಿನಲ್ಲಿರುವ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮಂಗಳೂರು, ಬೆಳ್ತಂಗಡಿ ವ್ಯಾಪ್ತಿಗೆ ಆಹಾರ ಸುರಕ್ಷತಾ ಅಧಿಕಾರಿಯಾಗಿ ಶ್ರೀ ಸುರೇಶ್ ಅವರು ಕರ್ತವ್ಯ ನಿರ್ವಹಿಸಲಿದ್ದು ಅವರ ಮೊಬೈಲ್ 9448744168, ಬಂಟ್ವಾಳ, ಪುತ್ತೂರು, ಸುಳ್ಯ ವ್ಯಾಪ್ತಿಗೆ ಶ್ರೀ ದಯಾನಂದ ಅವರು ಆಹಾರ ಸುರಕ್ಷತಾ ಅಧಿಕಾರಿಯಾಗಿರುವರು. ಇವರ ಮೊಬೈಲ್ 9886568180 ಈ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

 ಕಾನೂನು ಉಲ್ಲಂಘಿಸಿದವರಿಗೆ 6 ತಿಂಗಳ ಜೈಲುವಾಸ, ಒಂದು ಲಕ್ಷ ರೂ. ದಂಡದಿಂದ 10 ಲಕ್ಷದವರೆಗೆ ದಂಡ, ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು. ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯಿದೆ, 2006 ಜಾರಿಗೆ ಬಂದ ಬಳಿಕ ಆಹಾರ ಕಲಬೆರಕೆ ತಡೆಗಟ್ಟುವಿಕೆ ಕಾಯಿದೆ, 1954, ಹಣ್ಣು ಹಂಪಲುಗಳ ಆದೇಶ 1995, ಮಾಂಸಾಹಾರ ಉತ್ಪನ್ನಗಳ ಆದೇಶ 1973, ತರಕಾರಿ ಎಣ್ಣೆಗಳ (ನಿಯಂತ್ರಣ) ಕಾಯಿದೆ, 1947, ಖಾದ್ಯ ತೈಲಗಳ ಪ್ಯಾಕೇಜಿಂಗ್ (ನಿಯಮಾವಳಿ) ಕಾಯಿದೆ, 1988, ಸಾಲ್ವೆಂಟ್ ಎಕ್ಸ್ ಟ್ರಾಕ್ಟೆಡ್, ಡೀ ಆಯಿಲ್ಡ್ ಮೀಲ್ ಮತ್ತು ಎಡಿಬಲ್ ಫ್ಲೋರ್ (ನಿಯಂತ್ರಣ) ಆದೇಶ, 1967, ಹಾಲು ಮತ್ತು ಹಾಲು ಉತ್ಪನ್ನಗಳ ಆದೇಶ 1992, ಮೊದಲಾದ ಅನೇಕ ಕೇಂದ್ರೀಯ ಕಾನೂನುಗಳನ್ನು ರದ್ದುಪಡಿಸಿ ಒಂದೇ ಪ್ರಬಲ ಮತ್ತು ಪರಿಣಾಮಕಾರಿಯಾದ ಕಾನೂನನ್ನು ರೂಪಿಸಲಾಗಿದೆ.

ಆಹಾರ ಸುರಕ್ಷತೆಗಳ ಕಾಯಿದೆ, 2006 ರ ಅನ್ವಯ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕಗಳ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಆಹಾರಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಇದುವರೆಗೆ ಸರಕಾರದ ಅನೇಕ ಮಂತ್ರಾಲಯಗಳು ಮತ್ತು ಇಲಾಖೆಗಳಲ್ಲಿದ್ದ ಹಲವಾರು ಕಾನೂನುಗಳು ಮತ್ತು ಆದೇಶಗಳನ್ನು ಒಂದುಗೂಡಿಸಿ ಈ ಕಾಯಿದೆಯನ್ನು ರೂಪಿಸಲಾಗಿದೆ.

ಮಾನವನ ಬಳಕೆಗೆ ಸುರಕ್ಷಿತವಾದ ಮತ್ತು ಸಂಪೂರ್ಣವಾದ ಆಹಾರಗಳು ಲಭ್ಯವಾಗುವುದನ್ನು ಖಚಿತಪಡಿಸುವುದಕ್ಕಾಗಿ ಆಹಾರ ಪದಾರ್ಥಗಳಿಗೆ ವಿಜ್ಞಾನ ಆಧಾರಿತವಾದ ಮಾನಕಗಳನ್ನು ತಯಾರು ಪಡಿಸಲು ಹಾಗೂ ಅವುಗಳ ಉತ್ಪಾದನೆ, ದಾಸ್ತಾನು, ವಿತರಣೆ, ಮಾರಾಟ ಮತ್ತು ಆಮದುಗಳನ್ನು ನಿಯಂತ್ರಿಸುವುದಕ್ಕಾಗಿ ಕಾನೂನುಗಳನ್ನು ರೂಪಿಸುವುದಕ್ಕಾಗಿ ಪ್ರಾಧಿಕಾರ ರಚನೆಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಗಳು ನ್ಯಾಯನಿರ್ಣಯ ಅಧಿಕಾರಿಗಳಾಗಿರುತ್ತಾರೆ. ಬೇಳೆ ಕಾಳು, ಬೇಕರಿ ತಿನಿಸು, ನೀರು, ಹಾಲು, ಮನೆಯಲ್ಲಿ ತಯಾರಿಸುವ ಗೃಹೋತ್ಪನ್ನ ಆಹಾರ ವಸ್ತುಗಳು ಈ ಕಾಯಿದೆಯಡಿ ಒಳಪಡು ವುದರಿಂದ ಆಹಾರ ಸುರಕ್ಷತೆ ಅಧಿಕಾರಿಯಿಂದ ಸರ್ಟಿಫಿಕೇಟ್ ಪಡೆಯುವುದು ಅನಿವಾರ್ಯ ಎಂದು ಶ್ರೀ ದಯಾನಂದ ತಿಳಿಸಿದರು.

ಸರಕಾರದ ಪಡಿತರ ಅಂಗಡಿ, ಬಿಸಿಯೂಟ, ಅಂಗನವಾಡಿಗಳಲ್ಲಿ ಆಹಾರ ಪೂರೈಕೆ, ಬಿಸಿಎಂ ಹಾಸ್ಟೆಲ್ ಗಳಲ್ಲಿಯ ಆಹಾರ ಪೂರೈಕೆಯೂ ಈ ಕಾನೂನಿನ ವ್ಯಾಪ್ತಿಗೆ ಬರಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು. ಪಾಲಿಕೆ ಆಯುಕ್ತರು ಕಾನೂನು ಜಾರಿಗೆ ಪಾಲಿಕೆ ಎಲ್ಲ ಸಹಕಾರ ನೀಡಲಿದೆ ಎಂದರು.  ಡಾ ರಾಜೇಶ್, ಡಿ ಎಚ್ ಒ ಓ.ಶ್ರೀರಂಗಪ್ಪ ಮತ್ತು ಸಂಬಂಧ ಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಕಳ ತಾಲೂಕಿನ ಅಂಗನವಾಡಿ ಕಾರ್ಯಕರ್ತೆರ ಹುದ್ದೆಗೆ ಅರ್ಜಿ ಆಹ್ವಾನ

ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮಪಂಚಾಯತಿನ ಅಶೋಕನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ತೆರವಿದ್ದು, ಸದ್ರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯ ಹುದ್ದೆಯನ್ನು ಗೌರವ ಸೇವೆಯ ಆಧಾರದಲ್ಲಿ ಭರ್ತಿಗೊಳಿಸಲು, ಅಂಗನವಾಡಿ ಕೇಂದ್ರವಿರುವ ಗ್ರಾಮ/ವಾರ್ಡ್‌ನ ಜನಸಂಖ್ಯೆಯು ಶೇ.40ಕ್ಕಿಂತ ಹೆಚ್ಚು ಪ.ಜಾತಿ/ಪಂಗಡದ ಜನಸಂಖ್ಯೆಯನ್ನು ಒಳಗೊಂಡಿದ್ದಲ್ಲಿ ಆ ಹುದ್ದೆಯನ್ನು ಪ.ಜಾತಿ/ಪಂಗಡಕ್ಕೆ ನಿಗದಿಪಡಿಸಿ ನೇಮಕ ಮಾಡಬೇಕಾಗಿರುವುದರಿಂದ ಈ ಕೆಳಗಿನಂತೆ ನಿಗಡಿಪಡಿಸಿ, 18ರಿಂದ 44 ವಯೋಮಿತಿಯ ಕನಿಷ್ಠ ಎಸ್.ಎಸ್.ಎಲ್.ಸಿ. ತೇರ್ಗಡೆಯಾದ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅಂಗನವಾಡಿ ಕಾರ್ಯಕರ್ತೆ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿವುಳ್ಳ ಮಹಿಳಾ ಅಭ್ಯರ್ಥಿಗಳು ಎಲ್ಲಾ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ದಿ:03/08/2012 ರ ಸಂಜೆ 5-30 ಗಂಟೆಯೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಕಾರ್ಕಳ ಇಲ್ಲಿ ಇರಿಸಿದ ಟೆಂಡರ್ ಪೆಟ್ಟಿಗೆಗೆ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಹುದ್ದೆಗಳ ವಿವರಗಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಕಳ ಇವರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆಯೆಂದು ಪ್ರಕಟಣೆ ತಿಳಿಸಿದೆ.

ಪಡಿತರ ಚೀಟಿಗಳಿಗೆ ಆಹಾರ ಸಾಮಾಗ್ರಿ ಬಿಡುಗಡೆ  

 ಉಡುಪಿ ಜಿಲ್ಲೆಯಲ್ಲಿ ಭಾವಚಿತ್ರ ಸೆರೆಹಿಡಿದ ಕಾರ್ಡುದಾರರಿಗೆ 2012ರ ಜುಲೈ  ಮಾಹೆಯಲ್ಲಿ ಅಕ್ಕಿ, ಗೋಧಿ, ಸಕ್ಕರೆ ಮತ್ತು ಸೀಮೆಎಣ್ಣೆಯನ್ನು ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಭಾವಚಿತ್ರ ಸೆರೆಹಿಡಿದ ಆರ್.ಆರ್.ನಂಬ್ರ ನೀಡಿದ ಪಡಿತರ ಚೀಟಿದಾರರಿಗೆ ಮಾತ್ರ ಈ ಕೆಳಗಿನ ಪ್ರಮಾಣದಂತೆ ಪಡಿತರ ಬಿಡುಗಡೆ ಮಾಡಲಾಗಿದೆ. ಕಾರ್ಡುದಾರರು ತಮ್ಮ ಕಾರ್ಡಿನ ಬಾಬ್ತು ಪಡಿತರವನ್ನು ತಮಗೆ ನಿಗದಿಪಡಿಸಿದ ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡೆಯುವಂತೆ ತಿಳಿಸಲಾಗಿದೆ. ಅಂತ್ಯೋದಯ ಕಾರ್ಡುಗಳಿಗೆ ಅಕ್ಕಿ 29 ಕೆ.ಜಿ., ಗೋಧಿ 6 ಕೆ.ಜಿ.(ದರ ಅಕ್ಕಿ ಕೆ.ಜಿ. ಒಂದರ ರೂ. 3-00, ಗೋಧಿ ಕೆ.ಜಿ. ಒಂದರ ರೂ. 2-00)

ಅಕ್ಷಯ ಕಾರ್ಡುಗಳಿಗೆ ಏಕ ಸದಸ್ಯರಿಗೆ 4 ಕೆ.ಜಿ. ಅಕ್ಕಿ ಮತ್ತು 1 ಕೆ.ಜಿ.ಗೋಧಿ, ಎರಡು ಸದಸ್ಯರಿಗೆ 8 ಕೆ.ಜಿ. ಅಕ್ಕಿ ಮತ್ತು 1 ಕೆ.ಜಿ. ಗೋಧಿ, ಮೂರು ಸದಸ್ಯರಿಗೆ 12 ಕೆ.ಜಿ. ಅಕ್ಕಿ ಮತ್ತು 1 ಕೆ.ಜಿ. ಗೋಧಿ, ನಾಲ್ಕು ಸದಸ್ಯರಿಗೆ 16 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಗೋಧಿ, 5 ಮತ್ತು 5 ಕ್ಕಿಂತ ಹೆಚ್ಚು ಸದಸ್ಯರಿಗೆ ಗರಿಷ್ಠ 20 ಕೆ.ಜಿ. ಅಕ್ಕಿ ಮತ್ತು 3 ಕೆ.ಜಿ. ಗೋಧಿ(ದರ ಕೆ.ಜಿ. ಒಂದರ ರೂ. 3-00, ಗೋಧಿ ಕೆ.ಜಿ. ಒಂದರ ರೂ. 3-00) ಸಕ್ಕರೆ: ಎಎವೈ ಮತ್ತು ಅಕ್ಷಯ ಕಾರ್ಡು ಒಂದರ ಒಂದು ಕೆ.ಜಿ.(ದರ ಕೆ.ಜಿ. ಒಂದರ ರೂ. 13-50)

ಸೀಮೆಎಣ್ಣೆ ನಾನ್ ಗ್ಯಾಸ್ ಕಾರ್ಡುಗಳಿಗೆ

ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದಲ್ಲಿ 6 ಲೀಟರ್ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 4 ಲೀಟರ್ ಆಗಿರುತ್ತದೆಯೆಂದು ಉಡುಪಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಶ್ರೀ ಅರುಣ್ ಕುಮಾರ್  ರವರು ತಿಳಿಸಿರುತ್ತಾರೆ. 

ಶಿಕ್ಷಕರ ಹುದ್ದೆಗಳ ನೇರನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ

ಯಾದಗಿರಿ: ಜು.12 (ಕ.ವಾ.) ಯಾದಗಿರಿ  ಜಿಲ್ಲೆಯಲ್ಲಿ ಜುಲೈ 15 ರಿಂದ 18 ರವರೆಗೆ ನಡೆಯಲಿರುವ 2012 ನೇ ಸಾಲಿನ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಗಳ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಶ್ರೀಮತಿ ಗುರುನೀತ್ ತೇಜ್ ಮೆನನ್ ಅವರು ನಾನು ದಂಡ ಪ್ರಕ್ರಿಯೆ ಸಂಹಿತೆ 144 ನೇ ಕಲಂ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜುಲೈ 15 ರಿಂದ 18 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದಾರೆ. ಎಸ್.ಟಿ.ಡಿ. ಮೊಬೈಲ್ ಪೇಜರ್, ಜಿರಾಕ್ಸ್ ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಿದ್ದಾರೆ.

ಅರ್ಜಿ ಆಹ್ವಾನ

ಯಾದಗಿರಿ: ಜು.12 (ಕ.ವಾ.) ಕರ್ನಾಟಕ ಸರ್ಕಾರವು 11 ಇಲಾಖೆಗಳ ಮುಖಾಂತರ 151 ಸೇವೆಗಳನ್ನು ಕಾಲಮಿತಿಯೊಳಗೆ ನಾಗರಿಕರಿಗೆ ಒದಗಿಸುವ ಕರ್ನಾಟಕ ನಾಗರೀಕ ಸೇವೆಗಳ ಖಾತರಿ ವಿದೇಯಕ 2011 ನ್ನು ಪರಿಣಾಮಕಾರಿಯಾಗಿ ಅನುಷ್ಠನಗೊಳಿಸಲು ಯಾದಗಿರಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ದೇಶಿಸಿದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಗೂ ತಹಶೀಲ್ ಕಛೇರಿಯ ಯಾದಗಿರಿ ಶಹಾಪೂರ, ಸುರಪುರ, ತಲಾ ಒಬ್ಬರಂತೆ 6 ತಿಂಗಳ ಅವಧಿಗಾಗಿ ಸಹಾಯವಾಣಿ ( Help Disk ) ನಡೆಸಲು ಆಸಕ್ತ ಗಣಕ ಯಂತ್ರದ ಜ್ಞಾನಯುಳ್ಳವರಾಗಿರಬೇಕು. ಸರ್ಕಾರೇತರ ಸಂಸ್ಥೆ/ನಿವೃತಿ ಸರ್ಕಾರಿ ಅಧಿಕಾರಿ/ ನೌಕರರುಗಳಿಂದ ಅರ್ಜಿಗಳನ್ನು  ಜುಲೈ 23 ರ ಒಳಗಾಗಿ ಜಿಲ್ಲಾಧಿಕಾರಗಳ ಕಚೇರಿಯಲ್ಲಿ ಸಲ್ಲಿಸತಕ್ಕದ್ದು.

ಸ್ಥಗಿತಗೊಂಡ 31 ಸಹಕಾರ ಸಂಘಗಳ ರದ್ದತಿಗೆ ಕ್ರಮ

ತುಮಕೂರು ಜು.12: ತುಮಕೂರು ಉಪವಿಭಾಗದ ವ್ಯಾಪ್ತಿಗೆ ಬರುವ ಈ ಕೆಳಕಂಡ ಸ್ಥಗಿತಗೊಂಡಂತಹ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ ನೊಂದಣಿ ರದ್ದತಿ ಮಾಡಬೇಕಾಗಿರುವುದರಿಂದ ಹಾಗೂ ಆಡಳಿತ ಮಂಡಳಿಯು ಅಸ್ಥಿತ್ವದಲ್ಲಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರುಗಳು / ಸಂಘದ ಸದಸ್ಯರು ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 20 ದಿನದೊಳಗಾಗಿ ಸಲ್ಲಿಸಬಹುದು.  ಆಕ್ಷೇಪಣೆ ಬಾರದಿದ್ದಲ್ಲಿ ಸಹಕಾರ ಸಂಘದ ಕಾಯ್ದೆ ರೀತ್ಯಾ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

            ಶ್ರೀ ಬೈಲಾಂಜನೇಯ ಪತ್ತಿನ ಸಹಕಾರ ಸಂಘ, ಕ್ಯಾತ್ಸಂದ್ರ, ತುಮಕೂರು, ಸರ್ಕಾರಿ ನೌಕರರ ಬಳಕೆದಾರರ ಸಂಘ, ಬೆಳ್ಳಾವಿ, ತುಮಕೂರು, ಹೆಚ್.ಎಂ.ಎಸ್. ಪಾಲಿಟೆಕ್ನಿಕ್ ವಿದ್ಯಾರ್ಥಿ ಬಳಕೆದಾರರ ಸಹಕಾರ ಸಂಘ, ತುಮಕೂರು, ಜಿಲ್ಲಾ ಹೈ ಅಂಡ್ ಹೈಯರ್ ಸೆಕೆಂಟರಿ ಶಾಲಾ ನೌಕರರ ಸಹಕಾರ ಸಂಘ, ತುಮಕೂರು, ಸಿದ್ದಲಿಂಗೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘ, ತುಮಕೂರು, ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಬಳಕೆದಾರರ ಸಹಕಾರ ಸಂಘ, ತುಮಕೂರು, ತುಮಕೂರು ಕೈಗಾರಿಕಾ ಬಳಕೆದಾರರ ಸಹಕಾರ ಸಂಘ, ಎಸ್.ಐ.ಟಿ. ತುಮಕೂರು, ಹಾಲು ಉತ್ಪಾದಕರ ಸಹಕಾರ ಸಂಘ, ಬಿದರೆಕಟ್ಟೆ, ತುಮಕೂರು, ತುಮಕೂರು ಜಿಲ್ಲಾ ಕೋಳಿ ಸಾಗಾಣಿಕೆದಾರರ ಸಹಕಾರ ಸಂಘ, ತುಮಕೂರು, ಎಫ್.ಸಿ.ಐ. ಲೇಬರ್ ಸಹಕಾರ ಸಂಘ, ತುಮಕೂರು, ಕೋಡಿ ಆಂಜನೇಯಸ್ವಾಮಿ ಮೀನುಗಾರರ ಕ್ಷೇಮಾಭಿವೃದ್ದಿ ಸಹಕಾರ ಸಂಘ, ನಾಗವಲ್ಲಿ, ತುಮಕೂರು, ಹಾಲು ಉತ್ಪಾದಕರ ಸಹಕಾರ ಸಂಘ, ಹೊಸಹಳ್ಳಿ, ತುಮಕೂರು, ಖಾಸಗಿ ಬಸ್ ಮಾಲೀಕರ ಸಹಕಾರ ಸಂಘ, ತುಮಕೂರು, ಸರ್ಕಾರಿ ನೌಕರರ ಬಳಕೆದಾರರ ಸಹಕಾರ ಸಂಘ, ತುಮಕೂರು, ಕೇಂದ್ರ ಬೆಳೆಗಾರರ ಸಂಶೋಧನಾ ಬಳಕೆದಾರರ ಸಹಕಾರ ಸಂಘ, ಹಿರೇಹಳ್ಳಿ ಸಹಕಾರ ಸಂಘ, ತುಮಕೂರು, ಗ್ರೂಪ್ ಡಿ. ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ತುಮಕೂರು, ಬಸವೇಶ್ವರ ಗೃಹ ನಿರ್ಮಾಣ ಸಹಕಾರ ಸಂಘ, ತುಮಕೂರು, ಮಹೇಶ್ವರಿ ವಿವಿದ್ದೋದ್ದೇಶ ಕೈಗಾರಿಕಾ ಸಹಕಾರ ಸಂಘ, ತುಮಕೂರು, ಹಾಲು ಉತ್ಪಾದಕರ ಸಹಕಾರ ಸಂಘ, ಬೀಚನಹಳ್ಳಿ, ಕುಣಿಗಲ್, ಕೆ.ಎಸ್.ಆರ್.ಟಿ.ಸಿ. ನೌಕರರ ಪತ್ತಿನ ಸಹಕಾರ ಸಂಘ, ಕುಣಿಗಲ್, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಕುಣಿಗಲ್, ಹಾಲು ಉತ್ಪಾದಕರ ಸಹಕಾರ ಸಂಘ, ಉಜ್ಜನಿ, ಕುಣಿಗಲ್, ಹಾಲು ಉತ್ಪಾದಕರ ಸಹಕಾರ ಸಂಘ, ಹುಲಿಯೂರುದುರ್ಗ, ಕುಣಿಗಲ್, ಹಾಲು ಉತ್ಪಾದಕರ ಸಹಕಾರ ಸಂಘ, ಕೆ.ಹೊಸಹಳ್ಳಿ, ಕುಣಿಗಲ್, ಕುಣಿಗಲ್ ತಾಲ್ಲೂಕು ಹರಿಜನಗಿರಿಜನ ಗೃಹನಿರ್ಮಾಣ ಸಹಕಾರ ಸಂಘ, ಕೆ.ಎಸ್.ಆರ್.ಟಿ.ಸಿ. ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಕುಣಿಗಲ್, ಕಾಮದೇನು ಹೈನುಗಾರಿಕೆ ಅಭಿವೃದ್ದಿ ಸಹಕಾರ ಸಂಘ ನಿ. ಕುಣಿಗಲ್, ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹರದಗೆರೆ, ಗುಬ್ಬಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ., ಬ್ಯಾಟಪ್ಪನಪಾಳ್ಯ, ಗುಬ್ಬಿ., ತೆಂಗಿನ ನಾರಿನ ಕೈಗಾರಿಕಾ ಸಹಕಾರ ಸಂಘ ನಿ. ಗುಡ್ಡೇನಹಳ್ಳಿ, ಗುಬ್ಬಿ, ಮತ್ತು ಗಾಯಿತ್ರಿ ತೆಂಗಿನ ನಾರಿನ ಕೈಗಾರಿಕಾ ಸಹಕಾರ ಸಂಘ ನಿ.ಕೊಡಿಯಾಲ, ಗುಬ್ಬಿ.

            ಈ ಮೇಲ್ಕಂಡ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರುಗಳು/ ಸಂಘದ ಸದಸ್ಯರುಗಳು ಆಕ್ಷೇಪಣೆ ಇದ್ದಲ್ಲಿ ಈ ಪ್ರಕಟಣೆ ಪ್ರಕಟಗೊಂಡ 20 ದಿನದೊಳಗಾಗಿ ತುಮಕೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಗೆ ಸಲ್ಲಿಸಲು ಕೋರಿದೆ. ಆಕ್ಷೇಪಣೆಗಳು ಬಾರದಿದ್ದಲ್ಲಿ ಸಹಕಾರ ಸಂಘಗಳ ಕಾಯ್ದೆ ರೀತ್ಯಾ ಮುಂದಿನ ಕ್ರಮಕೈಗೊಳ್ಳಲಾಗುವುದು.

************

ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೇರ ನೇಮಕಾತಿ-ಸ್ಪರ್ಧಾತ್ಮಕ ಪರೀಕ್ಷೆ

ತುಮಕೂರು ಜು.12: 2012-13ನೇ ಸಾಲಿಗೆ ಸಂಬಂಧಿಸಿದಂತೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೇರ ನೇಮಕಾತಿ ಸಂಬಂಧ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ತುಮಕೂರು ನಗರದ 23 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಮಧುಗಿರಿ ಪಟ್ಟಣದ 4 ಪರೀಕ್ಷಾ ಕೇಂದ್ರಗಳಲ್ಲಿ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜುಲೈ 15, 2012ರಿಂದ ಜುಲೈ 18, 2012ರವರೆಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಅರ್ಜಿ ಸಲ್ಲಿಸಿರುವ ಅಂಗವಿಕಲ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಹಾಯಕರನ್ನು ಪಡೆಯಬಹುದಾಗಿದೆ.  ಅಭ್ಯರ್ಥಿಗಳು ವೆಬ್‌ಸೈಟ್ ಲಾಗಿನ್‌ಆಗಿ ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಮತ್ತು ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಸಕಾಲದಲ್ಲಿ ಪರೀಕ್ಷೆಗೆ ಹಾಜರಾಗುವುದು ಎಂದು ಅವರು ತಿಳಿಸಿರುತ್ತಾರೆ.

ಪರೀಕ್ಷಾ ವೇಳಾಪಟ್ಟಿ:-

ಜುಲೈ 15, 2012ರಂದು ಬೆಳಿಗ್ಗೆ 10ರಿಂದ 12ಗಂಟೆಯವರೆಗೆ ಸಾಮಾನ್ಯ ಪತ್ರಿಕೆ-1 ಮತ್ತು ಮಧ್ಯಾಹ್ನ 2-00ರಿಂದ 4ರವರೆಗೆ ಕಲಾಶಿಕ್ಷಕರು ಪತ್ರಿಕೆ-2.

ಜುಲೈ 16, 2012ರಂದು ಬೆಳಿಗ್ಗೆ 10ರಿಂದ 12ಗಂಟೆಯವರೆಗೆ ದೈ.ಶಿ.ಗ್ರೇಡ್-1 ಪತ್ರಿಕೆ-2 ಮತ್ತು ಮಧ್ಯಾಹ್ನ  2-00 ರಿಂದ 4ರವರೆಗೆ ಭೌತ ವಿಜ್ಞಾನ/ ಜೀವವಿಜ್ಞಾನ ಪತ್ರಿಕೆ-2.

ಜುಲೈ 17, 2012ರಂದು ಬೆಳಿಗ್ಗೆ 10ರಿಂದ 12ಗಂಟೆಯವರೆಗೆ ಕನ್ನಡ ಭಾಷಾ ಶಿಕ್ಷಕರು ಪತ್ರಿಕೆ-2. ಮತ್ತು ಮಧ್ಯಾಹ್ನ 2-00ರಿಂದ 4ರವರೆಗೆ ಆಂಗ್ಲಭಾಷಾ ಶಿಕ್ಷಕರು ಪತ್ರಿಕೆ-2. 

ಜುಲೈ 18, 2012ರಂದು ಬೆಳಿಗ್ಗೆ 10ರಿಂದ 12ಗಂಟೆಯವರೆಗೆ ಹಿಂದಿ ಭಾಷಾ ಶಿಕ್ಷಕರು ಪತ್ರಿಕೆ-2. ಮತ್ತು ಮಧ್ಯಾಹ್ನ 2-00ರಿಂದ 4ರವರೆಗೆ ಸಂಸ್ಕೃತ/ಉರ್ದು/ತಮಿಳು/ಮರಾಠಿ ಪತ್ರಿಕೆ-2. 

****************

ಜನಸಂಖ್ಯೆ ನಿಯಂತ್ರಣವಿಲ್ಲದೆ ಅಭಿವೃದ್ಧಿ ಅಸಾಧ್ಯ: ವಡವಿ

ಮಂಡ್ಯ, ಜು.12 (ಕರ್ನಾಟಕ ವಾರ್ತೆ):- ದೇಶದಲ್ಲಿ ಜನಸಂಖ್ಯೆಯು ಆದರ್ಶ ಪ್ರಮಾಣದಲ್ಲಿ ಇರಬೇಕು. ಮಿತಿ ಮೀರಿದ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗುವುದು ಅಭಿವೃದ್ಧಿಗೆ ಮಾರಕವಾಗಲಿದ್ದು, ಜನಸಂಖ್ಯೆಯಲ್ಲಿ ನಿಯಂತ್ರಣವಿಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ ಎಂದು ನಬಾರ್ಡ್‌ನ ಸಹಾಯಕ ಮಹಾ ಪ್ರಬಂಧಕ ಬಿಂದುಮಾಧವ ವಡವಿ ಅವರು ಹೇಳಿದರು.

            ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ವಾರ್ತಾ ಇಲಾಖೆಯು ಕೇಂದ್ರ ಸಂಗೀತ ಮತ್ತು ನಾಟಕ ವಿಭಾಗ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಸಾತನೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸಾತನೂರಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.  ಜನರ ಸಂಖ್ಯೆ ಹೆಚ್ಚಾದರೆ ಕುಟುಂಬದ ಆದಾಯ ಹೆಚ್ಚಾಗುತ್ತದೆ, ತನ್ಮೂಲಕ ದೇಶದ ಆದಾಯವೂ ಹೆಚ್ಚಾಗುತ್ತದೆ ಎಂದು ಸಾಮಾನ್ಯ ಅಭಿಪ್ರಾಯವಾಗಿದೆ. ವಾಸ್ತವದಲ್ಲಿ ಜನಸಂಖ್ಯೆ ಹೆಚ್ಚಾದರೆ ಅವಲಂಬಿತರ ಸಂಖ್ಯೆ ಹೆಚ್ಚಾಗುತ್ತದೆ, ಬಡವರು ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಿಸಲು ಕಷ್ಟವಾಗುತ್ತದೆ, ಕುಡಿಯುವ ನೀರು ಪೂರೈಕೆ ಸಮಸ್ಯೆಗಳು ಉದ್ಭವಿಸುತ್ತವೆ. ಜಾಗದ ಸಮಸ್ಯೆ ಎದುರಾಗುತ್ತದೆ ಎಂದರು.

            ಜನಸಂಖ್ಯೆ ಹೆಚ್ಚಳದ ತಕ್ಷಣದ ಪರಿಣಾಮವೆಂದರೆ ನಗರೀಕರಣ. ಉದ್ಯೋಗ ಹರಸಿಕೊಂಡು, ನಗರ ಪ್ರದೇಶಕ್ಕೆ ಹೋಗುವರ ಸಂಖ್ಯೆ ಹೆಚ್ಚಾಗಿ ನಗರಗಳು ಬೆಳೆಯುತ್ತವೆ. ಇದರೊಂದಿಗೆ ಕೊಳಚೆ ಪ್ರದೇಶಗಳು ಹೆಚ್ಚಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಎಲ್ಲರಿಗೂ ಮೂಲ ಸೌಲಭ್ಯ ಒದಗಿಸುವುದು ಕಷ್ಟವಾಗುತ್ತದೆ ಎಂದರು.

            ಆದರ್ಶ ಕುಟುಂಬಕ್ಕೆ ಒಂದು ಅಥವಾ ಎರಡು ಮಕ್ಕಳು ಸಾಕು. ಇಂದಿನ ಬೆಲೆಗಳಲ್ಲಿ ಒಳ್ಳೆಯ ಶಿಕ್ಷಣ, ಆರೋಗ್ಯ, ಸೇವೆಗಳು ದುಬಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಕುಟುಂಬ ಯೋಜನೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಕುಟುಂಬ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಮುದಾಯದ ಸಹಕಾರ ಅಗತ್ಯ ಎಂದರು ತಿಳಿಸಿದರು.        2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ 1.21 ಕೋಟಿ ಇದೆ. ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ.17ರಷ್ಟಿದ್ದು, ಎಲ್ಲಾ ಯೋಜನೆಗಳು ವಿಫಲವಾಗಲು ಕಾರಣವಾಗುತ್ತಿವೆ. ಜನಪ್ರತಿನಿಧಿಗಳು, ವಿದ್ಯಾವಂತರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

            ಭಾರತದಲ್ಲಿ ಜನಸಂಖ್ಯೆಯ ಅತಿಯಾದ ಹೆಚ್ಚಳದಿಂದ ಬಡತನ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಬಡತನ ನಿರ್ಮೂಲನಾ ಕಾರ್ಯಕ್ರಮಗಳು ಎಲ್ಲರಿಗೂ ತಲುಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಡತನ ಮುಂದುವರಿದಿದೆ. ಹೆಚ್ಚು ಜನಸಂಖ್ಯೆ ಇರುವ ಕುಟುಂಬಗಳಲ್ಲಿ ಅನಕ್ಷರಸ್ಥರ ಪ್ರಮಾಣವೂ ಹೆಚ್ಚಾಗಿರುವುದು ಇದಕ್ಕೆ ನಿದರ್ಶನ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾ ದರ್ಶಿನಿ ತಂಡದವರು ಯಕ್ಷಗಾನ ಪ್ರದರ್ಶನ ನೀಡಿದರು. ಸಾತನೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೊಡ್ಡಹುಚ್ಚಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಆರ್. ರಾಜು ಸ್ವಾಗತಿಸಿದರು. ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಯೋಗೀಶ್ ನಿರೂಪಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಶ್ವಿನಿ ನಾಗೇಶ್, ಸದಸ್ಯರಾದ ರೇಖಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ಸಂಗಯ್ಯ, ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಸತೀಶ್ ಮತ್ತಿತರರು ಉಪಸ್ಥಿತರಿದ್ದರು. (ಭಾವಚಿತ್ರ ಲಗತ್ತಿಸಿದೆ)

ಕಾಣೆಯಾದ  ಹುಡುಗನ ಪತ್ತೆಗೆ ಸಹಕರಿಸಲು ಮನವಿ

ಮಳವಳ್ಳಿ ಗ್ರಾಮದ ನಿವಾಸಿ ಶಿವಣ್ಣ ಬಿನ್ ಕರಿಯಪ್ಪರವರು ತಮ್ಮ ಮಗ ಎಂ.ಎಸ್.ದಿಲೀತ್ ದಿನಾಂಕ 28-6-2012 ರಿಂದ ಕಾಣೆಯಾಗಿರುವುದಾಗಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. 

         ಕಾಣೆಯಾದ ದಿಲೀತ್ ಚಹರೆ ಇಂತಿದೆ.  ವಯಸ್ಸು 14 ವರ್ಷ,  ಎಣ್ಣೆಗೆಂಪು ಬಣ್ಣ,  ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಟೀಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.  ಈ ಚಹರೆ ಪಟ್ಟಿಯುಳ್ಳ ಹುಡುಗ ಪತ್ತೆಯಾದಲ್ಲಿ ಕೂಡಲೆ ಕಂಟ್ರೋಲ್ ರೂಂ : 08232-224888, ಎಸ್.ಪಿ. ಮಂಡ್ಯ   ಪೊಲೀಸ್ ಠಾಣೆ : 08232-224500, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ 08232-235032 / 9480804867 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. 

ಜುಲೈ 15 ರಿಂದ 18 ರವರೆಗೆ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ

            ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯು ಜುಲೈ 15 ರಿಂದ 18 ರವರೆಗೆ ಮಂಡ್ಯ ನಗರದ ಶ್ರೀ ಲಕ್ಷ್ಮಿಜನಾರ್ಧನ ಬಾಲಕಿಯರ ಪ್ರೌಢಶಾಲೆ, ಅರ್ಕೇಶ್ವರ ನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು, ಮಾಂಡವ್ಯ ಪದವಿಪೂರ್ವ ಕಾಲೇಜು, ಪಿ.ಇ.ಎಸ್. ಪದವಿಪೂರ್ವ ಕಾಲೇಜು, ಸೆಂಟ್ ಜಾನ್ ಪ್ರೌಢಶಾಲೆ, ಸೆಂಟ್ ಜೋಸೆಫ್ ಪ್ರೌಢಶಾಲೆ ಹಾಗೂ ರೋಟರಿ ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಯಲಿವೆ. ಜುಲೈ 15 ರಂದು  ಸಾಮಾನ್ಯ ಪತ್ರಿಕೆ-1, ಕಲಾ ಶಿಕ್ಷಕರ ಪತ್ರಿಕೆ-2, 16 ರಂದು ದೈಹಿಕ ಶಿಕ್ಷಕರ   ಗ್ರೇಡ್-1 ಪತ್ರಿಕೆ-2, ಭೌತ ವಿಜ್ಞಾನ ಹಾಗೂ ಜೀವ ವಿಜ್ಞಾನ, 17 ರಂದು ಕನ್ನಡ ಭಾಷೆ, ಆಂಗ್ಲ ಭಾಷೆ, 18 ರಂದು ಹಿಂದಿ, ಸಂಸ್ಕೃತ/ಉರ್ದು/ತಮಿಳು/ಮರಾಠಿ ಭಾಷಾ ಪರೀಕ್ಷೆಗಳು ನಡೆಯಲಿದೆ. 

            ಜಿಲ್ಲೆಯಲ್ಲಿ ಒಟ್ಟು 2228 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪ್ರತಿ ಕೇಂದ್ರಕ್ಕೆ ಮುಖ್ಯ ಅಧೀಕ್ಷಕರು ಹಾಗೂ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ನಡೆಯುವ ದಿನಾಂಕಗಳಂದು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಪರೀಕ್ಷಾ ಕೇಂದ್ರದ ಸಮೀಪದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

********

ಅಪೌಷ್ಠಿಕ ಮಕ್ಕಳ ಪತ್ತೆಗೆ ನಗರದಲ್ಲಿ ಜುಲೈ 22ರಂದು ಆರೋಗ್ಯ ಶಿಬಿರ

 ಮಂಗಳೂರು,ಜುಲೈ .12 (ಕರ್ನಾಟಕ ವಾರ್ತೆ):  ನಗರಪ್ರದೇಶಗಳಲ್ಲಿ ಅಂಗನವಾಡಿಯಿಂದ ಹೊರಗುಳಿದಿರುವ (ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ) 0-6 ವರ್ಷದ ಮಕ್ಕಳಲ್ಲಿ ಅಪೌಷ್ಠಿಕತೆಯ ತೊಂದರೆಯಿರುವ ಮಕ್ಕಳನ್ನು ಗುರುತಿಸಲು  ಜುಲೈ 22ರಂದು ಆರೋಗ್ಯ ಶಿಬಿರಗಳನ್ನು ಆಯೋಜಿಸಲು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀ ಕೆ. ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಶಿಬಿರಗಳ ಆಯೋಜನೆಗೆ ಪೂರ್ವಭಾವಿ ಸಿದ್ಥತೆಗಳ ಕುರಿತು ಸವಿವರ ಚರ್ಚೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಲು ಸಲಹೆ ಮಾಡಿದ ಅಪರ ಜಿಲ್ಲಾಧಿಕಾರಿಗಳು,  ಸುಪ್ರೀಂ ಕೋರ್ಟ್ ನಿರ್ದೇಶನದಂತೆ 0-6 ವರ್ಷದ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಗರ್ಭಿಣಿಯರ ಮತ್ತು ಹಾಲುಣಿಸುವ ತಾಯಿಯಂದಿರ ಆರೋಗ್ಯ ತಪಾಸಣೆಯನ್ನು ಜುಲೈ 22ರೊಳಗೆ ಮುಗಿಸಿ ವರದಿ ಸಲ್ಲಿಸುವ ಹೊಣೆಗಾರಿಕೆಯ ಬಗ್ಗೆ ಮಾತನಾಡಿದರು.

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಂಗನವಾಡಿಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಇಂತಹ ಮಕ್ಕಳ ಆರೋಗ್ಯ ತಪಾಸಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪಾಲಿಕೆ ವತಿಯಿಂದ ಸಂಪೂರ್ಣ ಸಹಕಾರದ ಭರವಸೆಯನ್ನು ಪಾಲಿಕೆ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್ ನೀಡಿದರು. ಮುಲ್ಕಿ, ಮೂಡಬಿದ್ರೆ, ಬಂಟ್ವಾಳ, ಉಳ್ಳಾಲ, ಪುತ್ತೂರುಗಳಲ್ಲಿಯೂ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಡಾ ರುಕ್ಮಿಣಿ ತಿಳಿಸಿದರು. ನಗರದ ವೈದ್ಯಕೀಯ ಕಾಲೇಜುಗಳು ನೆರವು ಹಾಗೂ ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಗರ್ಭಿಣಿ ಹಾಗೂ ಹಾಲುಡಿಸುವ ತಾಯಿಯಂದಿರ ಆರೋಗ್ಯ ಪರೀಕ್ಷೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಶಿಬಿರಗಳು ನಡೆಸುವ ಜಾಗವನ್ನು ನಿರ್ಧರಿಸಲು ಇನ್ನೊಂದು ಸುತ್ತಿನ ಸಭೆ ಕರೆಯಲು ನಿರ್ಧರಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ. ಶ್ರೀರಂಗಪ್ಪ, ಡಾ ಸುದರ್ಶನ್, ಡಿಡಿಪಿಐ ಮೋಸೆಸ್ ಜಯಶೇಖರ್, ಬಿಇಒ ದಯಾವತಿ ಅವರನ್ನೊಳಗೊಂಡಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಪೌಷ್ಠಿಕತೆಯುಳ್ಳ ಮಕ್ಕಳ ಆರೋಗ್ಯ ತಪಾಸಣೆ

ಉಡುಪಿ ಜಿಲ್ಲೆಯಲ್ಲಿ 2012ರ ಜುಲೈ 8 ರಿಂದ 14ರವರೆಗೆ ಅಂಗನವಾಡಿ ಕೇಂದ್ರಗಳಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ತೂಕ ಮಾಡಿ, ಗ್ರೇಡ್ ಗುರುತಿಸುವ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಹೀಗೆ ತೂಕ ಮಾಡಿದ ಅಪೌಷ್ಠಿಕ ಮಕ್ಕಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ದಿನಾಂಕ 15-07-2012ರಂದು ಆರೋಗ್ಯ ತಪಾಸಣೆ ಮಾಡಲಿರುವರು.

ಸದ್ರಿ ಕಾರ್ಯಕ್ರಮಕ್ಕೆ ಮಕ್ಕಳ ಪೋಷಕರನ್ನು ಸೆಳೆಯಲು ತೀವ್ರ ಅಪೌಷ್ಠಿಕ ಮಕ್ಕಳೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಜರಾಗುವ ಪೋಷಕರಿಗೆ ತಲಾ 5 ಕೆ.ಜಿ. ಗೋಧಿಯನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಉಚಿತವಾಗಿ ವಿತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ರೀಟಾ ಮಾಡ್ತಾ ರವರು ತಿಳಿಸಿರುತ್ತಾರೆ.

ಕೊಳ್ಳೇಗಾಲ : ಸಕ್ಕಿಂಗ್ ಯಂತ್ರ ಮೂಲಕ ಶೌಚಾಲಯ ತ್ಯಾಜ್ಯ ವಿಲೇವಾರಿಗೆ ಸೂಚನೆ

ಚಾಮರಾಜನಗರ ಜುಲೈ 12 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ ನಾಗರೀಕರು ತಮ್ಮ ಶೌಚಾಲಯದ ಗುಂಡಿಗಳ ತ್ಯಾಜ್ಯವನ್ನು ಸ್ಕಾವೆಂಜರ್‍ಸ್ ಅಥವಾ ಯಾವುದೇ ಮಾನವ ವ್ಯಕ್ತಿಯಿಂದ ಖಾಲಿ ಮಾಡಿಸುವುದನ್ನು ನಿಷೇಧಿಸಲಾಗಿದೆ. ನಗರ ಸಭೆಯಲ್ಲಿ ಶೌಚ ತ್ಯಾಜ್ಯ ಮಾಡುವ ಸಕ್ಕಿಂಗ್ ಯಂತ್ರ ಲಭ್ಯವಿದೆ. ಇದನ್ನು ಬಳಸಿ ಶೌಚ ತ್ಯಾಜ್ಯವನ್ನು ಶುಚಿಗೊಳಿಸಬೇಕು. ಯಂತ್ರವನ್ನು ಶುಲ್ಕ ಪಾವತಿಸಿ ಪಡೆಯಬಹುದು. ಎಂಪ್ಲಾಯ್‌ಮೆಂಟ್ ಆಫ್ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅಂಡ್ ಕನ್‌ಸ್ಟ್ರಕ್ಷನ್ ಆಫ್ ಡ್ರೈ ಲೆಟ್ರಿನ್ (ಪ್ರಾಹಿಬಿಷನ್) ಆಕ್ಟ್ 1993ರ ಕಾಯ್ದೆಯಂತೆ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಆಚರಣೆಗೆ ಕಾರಣರಾದವರು, ಒಣ ಶೌಚಾಲಯ ಹೊಂದಿದವರು, ತಲೆಮೇಲೆ ಮಲ ಹೊರುವ ಪದ್ಧತಿಗೆ ಪ್ರಚೋದನೆ ನೀಡುವವರನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ.

ಇನ್ನುಮುಂದೆ ಶೌಚಾಲಯದ ಗುಂಡಿಗಳನ್ನು ಯಾವುದೇ ವ್ಯಕ್ತಿಗಳಿಂದ ಖಾಲಿ ಮಾಡಿಸದೆ ಸಕ್ಕಿಂಗ್ ಯಂತ್ರ ಮೂಲಕವೇ ಸ್ವಚ್ಚ ಮಾಡಬೇಕು. ತಪ್ಪಿದಲ್ಲಿ ಮನೆ ಮಾಲೀಕರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಲಾಗುವುದು. ಶೌಚಾಲಯದ ಗುಂಡಿಗಳನ್ನು ಖಾಲಿಗೊಳಿಸಲು ಹೀರುವ ಯಂತ್ರವನ್ನು ಪಡೆಯಬೇಕಿದ್ದಲ್ಲಿ ನಗರ ಸಭೆ  ಕಚೇರಿ ದೂರವಾಣಿ ಸಂಖ್ಯೆ 08224-252016, 08224-252526, ಮೊಬೈಲ್ ಸಂಖ್ಯೆ 9845628621, 9880111931 ಸಂಪರ್ಕಿಸಬಹುದು ಎಂದು ನಗರಸಭೆ ಅಧ್ಯಕ್ಷರಾದ ಎಸ್. ಮಂಗಳಗೌರಿ, ಉಪಾಧ್ಯಕ್ಷರಾದ ಅಕ್ಮಲ್ ಪಾಷಾ ಹಾಗು ಆಯುಕ್ತರಾದ ಮಂಜುನಾಥಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಲ ಯೋಜನೆ ಮರುಪಾವತಿಗೆ ಓಟಿಎಸ್ ಯೋಜನೆ ಅವಕಾಶ

ಚಾಮರಾಜನಗರ ಜುಲೈ 12 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಅಭಿವೃದ್ಧಿ ಸಾಲ, ದುಡಿಮೆ ಬಂಡವಾಳ ಸಾಲ ಪಡೆದು ಮರುಪಾವತಿಸದೆ ಇರುವ ಕೈಗಾರಿಕಾ ಘಟಕಗಳಿಗೆ ಸರ್ಕಾರ ಘೋಷಿಸಿರುವ ಒಂದಾವರ್ತಿ ತೀರುವಳಿ ಯೋಜನೆ (ಓ.ಟಿ.ಎಸ್.) ಯನ್ನು ಜಾರಿಗೆ ತರಲಾಗಿದೆ. ಮಾರಾಟ ತೆರಿಗೆ ವಿನಾಯಿತಿ ಬದಲಿಗೆ ಘಟಕವು ಪಡೆದಿರುವ ಯಾವುದೇ ಇತರ ಸಾಲ ಹೊರತುಪಡಿಸಿದ ಅಭಿವೃದ್ಧಿ ಸಾಲ ಮತ್ತು ದುಡಿಮೆ ಬಂಡವಾಳ ಸಾಲಗಳಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ.

ಕೈಗಾರಿಕೆ ಘಟಕವು ಪಡೆದಿರುವ ಪೂರ್ಣ ಅಸಲು ಬಾಕಿಯನ್ನು ಆಗಸ್ಟ್ 31ರೊಳಗೆ ಪೂರ್ಣವಾಗಿ ಮರುಪಾವತಿ ಮಾಡಿದರೆ ಬಾಕಿ ಇರುವ ಬಡ್ಡಿ, ಸುಸ್ತಿ ಬಡ್ಡಿಯನ್ನು ಪೂರ್ಣವಾಗಿ ಮನ್ನಾ ಮಾಡಲಾಗುವುದು. ಘಟಕ ಪಡೆದಿರುವ ಪೂರ್ಣ ಅಸಲನ್ನು ಶೇ. 25ರಷ್ಟು ಬಡ್ಡಿ ಹಾಗೂ ಸುಸ್ತಿ ಬಡ್ಡಿಯೊಂದಿಗೆ ಅಕ್ಟೋಬರ್ 31ರೊಳಗೆ ಪಾವತಿಸಿದಲ್ಲಿ ಶೇ.75ರಷ್ಟು  ಬಡ್ಡಿ, ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು. ಓಟಿಎಸ್ ಯೋಜನೆಯ ವಿವರಗಳಿಗೆ ಜಂಟಿನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾಡಳಿತ ಭವನ, ಚಾಮರಾಜನಗರ ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಬಿ.ಎಚ್. ಸಿದ್ದಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಟರ ಹುದ್ದೆಗೆ ಅರ್ಜಿ ಆಹ್ವಾನ

ಚಾಮರಾಜನಗರ ಜುಲೈ 12 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಖಾಲಿ ಇರುವ ಗೃಹ ರಕ್ಷದ ದಳದ ಜಿಲ್ಲಾ ಗೌರವ ಸಮಾದೇಷ್ಟರ ಹುದ್ದೆಗೆ ಸ್ವಯಂ ಸೇವಾ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಪದವೀಧರರಾಗಿದ್ದು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬಾರದು. ಜಿಲ್ಲೆಯಲ್ಲಿ ಒಳ್ಳೆಯ ಗೌರವ ಹೊಂದಿದ ಜವಾಬ್ದಾರಿಯುತ ವ್ಯಕ್ತಿಯಾಗಿರಬೇಕು. ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಬಾರದು. ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರಬಾರದು. ದೈಹಿಕ ಸಮರ್ಥತೆ ಇರಬೇಕು. ಜಿಲ್ಲಾ ಕೇಂದ್ರದ ವಾಸಿಯಾಗಿರಬೇಕು. ಹುದ್ದೆಯು ಸಂಪೂರ್ಣ ಸ್ವಯಂ ಸೇವಾ  ಆಧಾರಿತವಾಗಿದ್ದು ಯಾವುದೇ ಸಂಬಳವನ್ನು ಹೊಂದಾಣಿಕೆ ಮಾಡಿಲ್ಲ.

ಸರ್ಕಾರಿ ನಿಯಮದಂತೆ 5 ವರ್ಷ ಅವಧಿಗೆ ಸಮಾದೇಷ್ಟರ ಹುದೆಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದನ್ನು ತಲಾ 5 ವರ್ಷದಂತೆ 2 ಅವಧಿಗೆ ವಿಸ್ತರಿಸಲು ಅವಕಾಶವಿದೆ. ಆದರೆ ಅಭ್ಯರ್ಥಿಗಳು 60 ವರ್ಷ ಮೇಲ್ಪಟ್ಟಿರಬಾರದು. ಅರ್ಜಿ ನಮೂನೆಯನ್ನು ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು. ಸ್ವಯಂ ವಿವರ (ಬಯೋಡೆಟಾ), ಹುಟ್ಟಿದ ದಿನಾಂಕ ಸಂಬಂಧ ದಾಖಲೆ, ವಿದ್ಯಾರ್ಹತೆ, ವಿಳಾಸ, ದೂರವಾಣಿ ಸಂಖ್ಯೆ, ಇನ್ನಿತರ ಅಗತ್ಯ ಪ್ರಮಾಣಪತ್ರಗಳ ದೃಢೀಕೃತ ಪ್ರತಿಗಳು, ಇಬ್ಬರು ಸ್ಥಳೀಯ ಗಣ್ಯ ವ್ಯಕ್ತಿಗಳಿಂದ ರೆಫರೆನ್ಸ್ ಪತ್ರ ( ಉದ್ಯೋಗಿಗಳಾಗಿದ್ದಲ್ಲಿ ಕಚೇರಿಯ ಮುಖ್ಯಸ್ಥರಿಂದ) ವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಆಸಕ್ತರು ಅರ್ಜಿಯನ್ನು ಜಿಲ್ಲಾಧಿಕಾರಿಗಳು, ಚಾಮರಾಜನಗರ ಜಿಲ್ಲೆ, ಚಾಮರಾಜನಗರ ಇವರಿಗೆ ಆಗಸ್ಟ್ 10ರಂದು ಅಥವಾ ಅದಕ್ಕಿಂತ ಮುಂಚೆ ತಲುಪುವಂತೆ ಕಳುಹಿಸಬೇಕು. ಅರ್ಜಿಯ ಪ್ರತಿಯೊಂದನ್ನು ಚಾಮರಾಜನಗರದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಪೋಲೀಸ್ ಮಹಾನಿರ್ದೇಶಕರು ಮತ್ತು ಗೃಹ ರಕ್ಷಕದಳದ ಮಹಾ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ಇಲಾಖೆಯ ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಾಮರಾಜನಗರ ಜುಲೈ 12 (ಕರ್ನಾಟಕ ವಾರ್ತೆ):- ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ರೀತಿಯ 12042 ಟೆಕ್ನೀಷಿಯನ್ ಹುದ್ದೆಗಳನ್ನು ಸಾಮಾನ್ಯ ಪರೀಕ್ಷೆ ಮೂಲಕ ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ನಂತರದ ಪೂರ್ಣ ಅವಧಿಯ ಅಪ್ರೆಂಟೀಸ್ ಅಥವಾ ಐಟಿಐ ಪಾಸಾಗಿರಬೇಕು. 2012ರ ಜುಲೈ 1ರಂದು ಅನ್ವಯವಾಗುವಂತೆ 18 ರಿಂದ 30 ವರ್ಷದೊಳಗಿರಬೇಕು. ಪ.ಜಾತಿ, ಪಂಗಡ, ಓಬಿಸಿ ವರ್ಗದವರಿಗೆ ಗರಿಷ್ಠ ವಯೋಮಿತಿಯಲ್ಲಿ ರಿಯಾಯಿತಿ ಇದೆ. ಅರ್ಜಿ ಸಲ್ಲಿಕೆಗೆ ಜುಲೈ 16 ಕಡೆಯ ದಿನ.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಾಗಿ ವೆಬ್ ಸೈಟ್  www.rrbbnc.gov.in ಸಂಪರ್ಕಿಸಿ ಅಥವಾ ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ (ದೂರವಾಣಿ ಸಂ. 0821-2516844 / 9449686641) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಹಿರಿಯ ನಾಗರಿಕರ ಕ್ಷೇತ್ರದ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ ಜುಲೈ 12 (ಕರ್ನಾಟಕ ವಾರ್ತೆ):- ಹಿರಿಯ ನಾಗರಿಕರಿಗಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ನೀಡಲಿರುವ 2012 ಸಾಲಿನ ವಯೋಶ್ರೇಷ್ಠ ಸನ್ಮಾನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಕ್ರೀಡೆ, ಪ್ರತಿಭೆ ಇನ್ನಿತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು, ಹಿರಿಯ ನಾಗರೀಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು.

ನಿಗಧಿತ ನಮೂನೆಯ ಅರ್ಜಿಗಳನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಪಡೆದು ಜುಲೈ 25ರೊಳಗೆ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿ (ದೂರವಾಣಿ ಸಂಖ್ಯೆ 08226-223688) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕನ್ನಡ ಸಂಸ್ಕೃತಿ ಇಲಾಖೆಯಿಂದ ನಗರದಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆ

ಚಾಮರಾಜನಗರ ಜುಲೈ 12 (ಕರ್ನಾಟಕ ವಾರ್ತೆ):- ನಗರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಆಯ್ದ ಕೆಲ ಕನ್ನಡ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟಗೊಂಡ ಪುಸ್ತಕಗಳು ಮಾತ್ರ ಮಾರಾಟಕ್ಕೆ ಲಭ್ಯವಿದೆ. ಮುದ್ರಿತಗೊಂಡ 10 ವರ್ಷಗಳ ಪುಸ್ತಕಗಳಿಗೆ ಶೇ. 50ರಷ್ಟು, 6 ರಿಂದ 10 ವರ್ಷದೊಳಗಿನ ಪುಸ್ತಕಗಳಿಗೆ ಶೇ. 30ರಷ್ಟು, 3 ರಿಂದ 5 ವರ್ಷದೊಳಗಿನ ಪುಸ್ತಕಗಳಿಗೆ ಶೇ. 20ರಷ್ಟು ಹಾಗೂ 2 ವರ್ಷದೊಳಗಿನ 5 ಪುಸ್ತಕಗಳಿಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಕಾಲೇಜು ವಿದ್ಯಾರ್ಥಿಗಳು, ಗ್ರಂಥಾಲಯಗಳಿಗೆ ಉಪಯುಕ್ತವಾದ ಪುಸ್ತಕಗಳು ಲಭ್ಯವಿದೆ. ಕಚೇರಿ ವೇಳೆಯಲ್ಲಿ ಮಾತ್ರ ಪುಸ್ತಕಗಳನ್ನು ಮಾರಾಟ ಮಾಡಲಾಗುವುದು. ಓದುಗರು, ಪುಸ್ತಕ ಪ್ರಿಯರು, ವಿದ್ಯಾರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಪುಸ್ತಕ ಮಾರಾಟ ವ್ಯವಸ್ಥೆಯ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಉದ್ಯೋಗಮೇಳ : 7 ರಿಂದ ಸ್ನಾತಕೋತ್ತರ ಪದವಿವರೆಗಿನ ಅಭ್ಯರ್ಥಿಗಳಿಗೆ ಅವಕಾಶ

ಚಾಮರಾಜನಗರ ಜುಲೈ 12 (ಕರ್ನಾಟಕ ವಾರ್ತೆ):- ಕೊಳ್ಳೇಗಾಲದಲ್ಲಿ ಜುಲೈ 14ರಂದು ನಡೆಯಲಿರುವ ಉದ್ಯೋಗ ಮೇಳದಲ್ಲಿ 7ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವ ಎಲ್ಲಾ ಅಭ್ಯರ್ಥಿಗಳು ಪಾಲ್ಗೊಳ್ಳಲು ಅವಕಾಶವಿದೆ. ಅಬ್ಯರ್ಥಿಗಳಿಗೆ ಯಾವುದೇ ಗರಿಷ್ಠ ವಯೋಮಿತಿ ನಿಗದಿಪಡಿಸಿಲ್ಲ. ಎಲ್ಲ ಹಂತದ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ಅಭ್ಯರ್ಥಿಗಳು ಉದ್ಯೋಗಮೇಳದ ಪ್ರಯೋಜನ ಪಡೆಯುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ

ಮೈಸೂರು, ಜು. 12. (ಕ.ವಾ.)-ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಯ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳು ಮೈಸೂರು ನಗರದ 31  ಕೇಂದ್ರಗಳಲ್ಲಿ 2012ರ ಜುಲೈ 15 ರಿಂದ 18ವರೆಗೆ ನಡೆಯಲಿದ್ದು, ಈ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಹಾಗೂ ಈ ಪ್ರದೇಶದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮೀಷನರ್ ಕೆ.ಎಲ್.ಸುಧೀರ್ ಅವರು ಆದೇಶ ಹೊರಡಿಸಿದ್ದಾರೆ.

ಪರೀಕ್ಷೆಯ ಅವಧಿಯಲ್ಲಿ ಯಾವುದೇ ಅಕ್ರಮ ಮತ್ತು ಅವ್ಯವಹಾರ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ಹೊರಡಿಸಿದ ಈ ಆದೇಶ ಮೇಲ್ಕಂಡ ದಿನಗಳಂದು ಬೆಳಗಿನ 6 ರಿಂದ ಸಂಜೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಇದಲ್ಲದೆ ಪರೀಕ್ಷಾ ಕೇಂದ್ರಗಳ ಬಳಿಯಿರುವ ಎಲ್ಲ ಜಿರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಪರೀಕ್ಷಾ ಕೇಂದ್ರಗಳ ಪ್ರದೇಶದಲ್ಲಿ ಪರೀಕ್ಷಾರ್ಥಿಗಳು ಹಾಗೂ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಇತರ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದೆಂದು ಸೂಚಿಸಿದ್ದಾರೆ.

ಜುಲೈ 13ರಂದು ಪ್ರಶಸ್ತಿ ಪ್ರದಾನ ಸಮಾರಂಭ

            ಮೈಸೂರು, ಜು. 12. (ಕ.ವಾ.)-ಮೈಸೂರಿನ ಸಿಎಸ್‌ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ಎಂ.ಎಸ್ಸಿ.(ಆಹಾರ ತಂತ್ರಜ್ಞಾನ) ಹಾಗೂ ಹಿಟ್ಟಿನ ಗಿರಣಿ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪದಕ, ವಿದ್ಯಾರ್ಥಿವೇತನ ಹಾಗೂ ಪ್ರಮಾಣಪತ್ರ ಪ್ರದಾನ ಮಾಡುವ ಸಮಾರಂಭ 2012ರ ಜುಲೈ 13ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ. ನವದೆಹಲಿಯ  ವ್ಶೆಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಮಂಡಳಿಯ ಮುಖ್ಯಸ್ಥ ಡಾ. ರಾಜೇಶ್ ಲೂಥ್ರ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸುವರು. ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಪ್ರಭಾರ ನಿರ್ದೇಶಕ ಡಾ. ಜಿ. ವೆಂಕಟೇಶ್ವರರಾವ ಅಧ್ಯಕ್ಷತೆ ವಹಿಸುವರು.

ಗುತ್ತಿಗೆ ಆಧಾರಿತ ವೈದ್ಯಾಧಿಕಾರಿಗಳ ಹುದ್ದೆಗಾಗಿ ಅರ್ಜಿ ಆಹ್ವಾನ

ಮೈಸೂರು, ಜು. 12. (ಕ.ವಾ.)-ಮೈಸೂರು ಜಿಲ್ಲೆಯಲ್ಲಿ ಖಾಲಿಯಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಮೂರು ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಆಹ್ವಾನಿಸಲಾಗಿದೆ. ಎಂ.ಬಿ.ಬಿ.ಎಸ್. ಉತ್ತೀರ್ಣರಾದ ಹಾಗೂ ಹೌಸ್‌ಮನ್ ಪೂರೈಸಿದ ಅಭ್ಯರ್ಥಿಗಳು ಅರ್ಹರು. ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಹಾಗೂ ಪ್ರವರ್ಗ 2ಬಿಗೆ ತಲಾ ಒಂದು ಹುದ್ದೆ ಮೀಸಲಾಗಿದ್ದು, 13950 ರೂ. ಮಾಸಿಕ ಸಂಚಿತ ವೇತನ ಹಾಗೂ ನಿಯಮಾನುಸಾರ ಇತರೆ ಭತ್ಯೆ ನೀಡಲಾಗುವುದು ಎಂದು ಜಿಲ್ಲಾ ಮಟ್ಟದ ಗುತ್ತಿಗೆ ಆಧಾರಿತ ವೈದ್ಯರ ನೇಮಕಾತಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ ಅವರು ತಿಳಿಸಿದ್ದಾರೆ.

ಮಕ್ಕಳ ಕಲ್ಯಾಣ ಕ್ಷೇತ್ರದ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

ಮೈಸೂರು, ಜು. 12. (ಕ.ವಾ.)-ಕರ್ನಾಟಕ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಟ 5 ವರ್ಷ ಸೇವೆ ಸಲ್ಲಿಸಿರುವಂತಹ ಇಬ್ಬರು ವ್ಯಕ್ತಿಗಳು ಹಾಗೂ ಎರಡು ಸಂಸ್ಥೆಗಳನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಲು ಯೋಜಿಸಿದೆ. ಇದಕ್ಕಾಗಿ  ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶ, ಮಕ್ಕಳ ಶಿಕ್ಷಣ, ಕಲೆ, ಸಂಸ್ಕೃತಿ ಹಾಗೂ ಕ್ರೀಡೆಯ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯಂತಹ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಟ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರಬೇಕು. ಪ್ರತಿ ವ್ಯಕ್ತಿಗೆ ನೀಡುವ ಪ್ರಶಸ್ತಿಯ ಮೊತ್ತ 25 ಸಾವಿರ ರೂ. ಹಾಗೂ ಪ್ರತಿ ಸಂಸ್ಥೆಗೆ ನೀಡುವ ಪ್ರಶಸ್ತಿಯ ಮೊತ್ತ 1 ಲಕ್ಷ ರೂ.  ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಸಂಘ ಸಂಸ್ಥೆಗಳಲ್ಲಿ ವೇತನ ಪಡೆಯುವ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಿರುವುದಿಲ್ಲ. ಈ ಪ್ರಶಸ್ತಿಯನ್ನು ನವೆಂಬರ್ 14 ರಂದು ಆಚರಿಸಲಾಗುವ ಮಕ್ಕಳ ದಿನಾಚರಣೆಯ ಅಂಗವಾಗಿ ನೀಡಲಾಗುವುದು.

ನಿಗದಿತ ಅರ್ಜಿ ನಮೂನೆಗಳನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಂ.9/ಎ, 3ನೇ ಮಹಡಿ, ಕೃಷ್ಣಧಾಮ ಎದುರು, ಸಾಹುಕಾರ್ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು ಈ ಕಚೇರಿಯಿಮದ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ತ್ರಿಪ್ರತಿಯಲ್ಲಿ ಸದರಿ ಕಚೇರಿಯಲ್ಲಿಯೇ ಜುಲೈ 18 ರ ಸಂಜೆ 5-30 ಗಂಟೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯ ದೂರವಾಣಿ ಸಂಖ್ಯೆ 2498031 ಅಥವಾ 2495432 ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

ಜಿ.ಪಂ.ಚುನಾವಣಾ ವೆಚ್ಚ ವಿವರ ಸಲ್ಲಿಸದ 28 ಅಭ್ಯರ್ಥಿಗಳ ಅನರ್ಹತೆ ವಿವರ

ಮೈಸೂರು, ಜು. 12. (ಕ.ವಾ.)-ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2010 ರಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ನಿಯಮಗಳಂತೆ ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸದ ಮೈಸೂರು ಜಿಲ್ಲೆಯ ಈ ಕೆಳಕಂಡ ಒಟ್ಟು 28 ಅಭ್ಯರ್ಥಿಗಳನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 308ಸಿ ಅನ್ವಯ ಸದರಿ ಆದೇಶದ ದಿನಾಂಕದಿಂದ ಆರು ವರ್ಷಗಳ ಅವಧಿಗೆ ಅನರ್ಹಗೊಳಿಸಿ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ಸದರಿ ಆದೇಶದ ಪ್ರತಿಗಳನ್ನು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್ ಅವರ ಮೂಲಕ ಜಾರಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ ಅವರು ತಿಳಿಸಿದ್ದಾರೆ.

ತಾಲೂಕುವಾರು ಅನರ್ಹಗೊಂಡ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹಾಗೂ ಅಭ್ಯರ್ಥಿಗಳ ಹೆಸರು ಇಂತಿದೆ. ಮೈಸೂರು: 6 ದೇವಲಾಪುರ-ಸವಿತ, 7 ಜಯಪುರ-  ಗೋವಿಂದ  ಟಿ.ನರಸೀಪುರ: 10 ಸೋಮನಾಥಪುರ-ಸುಶೀಲ ಆರ್.ಪಿ., 13 ಮೂಗೂರು-ಸವಿತಾ ಬಸವರಾಜು,  14 ಬೈರಾಪುರ-ಯಶೋದ, 15 ಗರ್ಗೇಶ್ವರಿ-ಕಾರ್ಗಿಲ್ ಮಾದಪ್ಪ ಎಸ್., 15 ಗರ್ಗೇಶ್ವರಿ-ರಂಗಸ್ವಾಮಿ, 15 ಗರ್ಗೇಶ್ವರಿ-ಹೆಚ್.ಎಂ.ಲಿಂಗರಾಜು. ನಂಜನಗೂಡು: 20 ದೊಡ್ಡ ಕೌಲಂದೆ-ಎಸ್. ರಾಜಪ್ಪ, 20 ದೊಡ್ಡ ಕೌಲಂದೆ- ರಂಗಸ್ವಾಮಿ ನಾಯ್ಕ, 21 ತಗಡೂರು-ಜೆ. ರೂಪ, 23 ಹದಿನಾರು-ಎಂ. ರೂಪ, ಕೆ.ಆರ್.ನಗರ: 30 ಸಾಲಿಗ್ರಾಮ-ಕುಮಾರಿ ಯೋಗಣ್ಣ, 30 ಸಾಲಿಗ್ರಾಮ-ಎಸ್.ಜೆ. ಲೀಲಾವತಿ, 31 ಮಿರ್ಲೆ-ವೇದಾವತಿ ಪಾಂಡುರಂಗೇಗೌಡ,  ಭೇರ್ಯ-ವಿನೋದ ಎಂ.ಪಿ. ಕುಮಾರ, 33 ತಿಪ್ಪೂರು- ಆರ್. ಕೃಷ್ಣಪ್ಪ, 34 ಹೆಬ್ಬಾಳು-ಅನುಸೂಯ. ಪಿರಿಯಾಪಟ್ಟಣ: 36 ಕಂಪಲಾಪುರ-ಚಂದ್ರ, 37 ಹುಣಸವಾಡಿ-ಲತಾ, 39 ಬೆಟ್ಟದಪುರ-ಕೌಶಲ್ಯ, 39 ಬೆಟ್ಟದಪುರ-ಭಾಗ್ಯ.ಬಿ.ಸಿ., 39 ಬೆಟ್ಟದಪುರ-ಯಶೋದಮ್ಮ, 40 ರಾವಂದೂರು-ವಿ.ಜಿ. ಅಪ್ಪಾಜಿಗೌಡ, ಹೆಚ್.ಡಿ.ಕೋಟೆ: 45 ಕೆ.ಬೆಳತ್ತೂರು-ಶೋಭ ಗೋವಿಂದೇಗೌಡ, 45 ಕೆ.ಬೆಳತ್ತೂರು-ಶಾಂತ ಮಾದಪ್ಪ.

ರಾಣೇಬೆನ್ನೂರು ತಾಲೂಕಿನ 20 ಗ್ರಾಮಗಳಲ್ಲಿ ವಾರ್ತಾ ಇಲಾಖೆ ಕ್ಷೇತ್ರ ಪ್ರಚಾರ ಕಾರ್ಯಕ್ರಮ

ಹಾವೇರಿ: ಜು.12: ಹಾವೇರಿ ಜಿಲ್ಲಾ ವಾರ್ತಾ ಕಚೇರಿಯ ಕ್ಷೇತ್ರ ಪ್ರಚಾರ ಘಟಕ ವತಿಯಿಂದ ರಾಣೇಬೆನ್ನೂರು ತಾಲೂಕಿನ ಆಯ್ದ 20 ಗ್ರಾಮಗಳಲ್ಲಿ ಇದೇ ಜುಲೈ 16 ರಿಂದ 25 ರವರೆಗೆ ಒಟ್ಟು 10 ದಿನಗಳ ಕಾಲ ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನಜಾಗೃತಿಗಾಗಿ ಪ್ರಚಾರ ಕಾರ್ಯಕ್ರಮಗಳು ಜರುಗಲಿವೆ. ಈ ಪ್ರಚಾರ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಸಂಚಾರಿ ವಸ್ತುಪ್ರದರ್ಶನ ವಾಹನದಿಂದ ವಸ್ತುಪ್ರದರ್ಶನ, ವಿಡಿಯೋ ಚಿತ್ರಪ್ರದರ್ಶನ ಮತ್ತು ವಿವಿಧ ಕಲಾವಿದರ ತಂಡಗಳಿಂದ ಬೀದಿನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜುಲೈ 16 ರಿಂದ 20ರವರೆಗೆ ಸವಣೂರ ತಾಲೂಕಿನ ಮಂತ್ರೋಡಿ ಗ್ರಾಮದ ಚಂದ್ರು ಚಾಕಲಬ್ಬಿ ಜನಪದ  ಸಂಗಡಿಗರಿಂದ ಜಾನಪದ ಕಾರ್ಯಕ್ರಮ ಹಾಗೂ ಜುಲೈ 21 ರಿಂದ 25ರವರೆಗೆ ರಾಣೇಬೆನ್ನೂರು ತಾಲೂಕಿನ ಯಕಲಾಸಪೂರ ಗ್ರಾಮದ ಜನನಿ ಜಾನಪದ ಕಲಾ ವೇದಿಕೆಯಿಂದ ಬೀದಿನಾಟಕ ಜರುಗಲಿವೆ.

            ಪ್ರಚಾರ ಕಾರ್ಯಕ್ರಮಕ್ಕಾಗಿ ಪ್ರತಿದಿನ ಎರಡು ಗ್ರಾಮಗಳಂತೆ ಒಟ್ಟು 10 ದಿನಗಳವರೆಗೆ ರಾಣೇಬೆನ್ನೂರು ತಾಲೂಕಿನ ದೇವಗೊಂಡನಹಳ್ಳಿ, ಕಮದೋಡ, ಲಕ್ಷ್ಮಾಪೂರ, ತಿರುಮಲದೇವರಕೊಪ್ಪ, ಅಸುಂಡಿ, ಹಳೆಹುಲ್ಲತ್ತಿ, ಮಾಗೋಡ, ಹುಣಸಿಕಟ್ಟಿ, ಬೇವಿನಹಳ್ಳಿ, ಚನ್ನಾಪುರ, ಕೂನವೇವು, ಕಜ್ಜರಿ, ತೆರದಹಳ್ಳಿ, ಚಳಗೇರಿ, ಕುಸಗೂರು, ಬೆನಕನಕೊಂಡ, ಕೋಣನತಂಬಿಗಿ, ಹಿರೇಬಿದರಿ, ಯಕಲಾಸಪುರ ಹಾಗೂ ರಾಹುತನಕಟ್ಟಿ ಗ್ರಾಮಗಳಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮಗಳು ಜರುಗುವವೆಂದು ಜಿಲ್ಲಾ ವಾರ್ತಾ ಕಚೇರಿ ಪ್ರಕಟಣೆ ತಿಳಿಸಿದೆ.

ಅನಧಿಕೃತ ಕೃಷಿ ನೀರಾವರಿ ಪಂಪ್‌ಸೆಟ್‌ಗಳ ಸಕ್ರಮೀಕರಣಗೊಳಿಸುವ ಅವಧಿ ವಿಸ್ತರಣೆ

ಹಾವೇರಿ: ಜು.12: ಅನಧಿಕೃತ ಕೃಷಿ ನೀರಾವರಿ ಪಂಪ್‌ಸೆಟ್‌ಗಳ ಸಕ್ರಮೀಕರಣಗೊಳಿಸುವ ಅರ್ಜಿಗಳನ್ನು ಸ್ವೀಕರಿಸುವ  ಅವಧಿಯನ್ನು ದಿನಾಂಕ: 31-07-2012 ರ ವರೆಗೆ ಸರಕಾರ ವಿಸ್ತರಿಸಿದೆ. ಆದ್ದರಿಂದ ಅನಧೀಕೃತ ಕೃಷಿ ನೀರಾವರಿ ಪಂಪ್‌ಸೆಟ್ ಹೊಂದಿರುವ ರೈತರು ಸಕಾಲಕ್ಕೆ ಸಕ್ರಮಿಕರಣಗೊಳಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅವಧಿ ವಿಸ್ತರಣೆ ನಂತರ ಸಕ್ರಮಗೊಳ್ಳದ ಪಂಪಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಲ್ಲದೇ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮದ ವ್ಯಾಪ್ತಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಕ್ರಮ ಜರುಗಿಸಲಾಗುವುದು ಎಂದು ಹೆಸ್ಕಾಂನ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಬೆಳಗಾವಿ ನಗರದ ಅಪೌಷ್ಠಿಕತೆಯುಳ್ಳ ಮಕ್ಕಳನ್ನು ಗುರುತಿಸಿ ಆರೋಗ್ಯವಂತರನ್ನಾಗಿಸಲು ಪೈಲಟ್ ಪ್ರೊಜೆಕ್ಟ - ಜಿಲ್ಲಾಧಿಕಾರಿ ಶ್ರೀ. ವಿ. ಅನ್ಬುಕುಮಾರ

ಬೆಳಗಾವಿ:ಜುಲೈ:12:(ಕರ್ನಾಟಕ ವಾರ್ತೆ)- ಬೆಳಗಾವಿ ನಗರದಲ್ಲಿರುವ 0-6 ವರ್ಷದೊಳಗಿನ ಅಪೌಷ್ಠಿಕ ಮಕ್ಕಳನ್ನು ಸಮೀಕ್ಷೆ ಮೂಲಕ ಗುರುತಿಸಿ ಅವರನ್ನು ಬರುವ ಡಿಸೆಂಬರ್ ಅಂತ್ಯರೊಳಗೆ ಸಂಪೂರ್ಣ ಪೌಷ್ಠಿಕಾಂಶವುಳ್ಳ ಆರೋಗ್ಯವಂತ ಮಕ್ಕಳನ್ನಾಗಿಸುವ ಆರಂಭಿಕ ಪೈಲಟ್ ಪ್ರೊಜೆಕ್ಟ್ ವೊಂದನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರೀ. ವಿ. ಅನ್ಬುಕುಮಾರ ಅವರು ಹೇಳಿದ್ದಾರೆ. ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿಂದು ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಮೇಲ್ವಿಚಾರಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಮಹಾನಗರಪಾಲಿಕೆ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಬೆಳಗಾವಿ ನಗರದ ಅಪೌಷ್ಠಿಕ ಮಕ್ಕಳ ಸಮೀಕ್ಷೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಪ್ರಥಮವಾಗಿ ಬೆಳಗಾವಿ ನಗರದಲ್ಲಿರುವ ಅಪೌಷ್ಠಿಕಾಂಶವುಳ್ಳ ಮಕ್ಕಳನ್ನು ಪೈಲಟ್ ಪ್ರೊಜೆಕ್ಟ್ ಅಂಗವಾಗಿ ಸಮೀಕ್ಷೆ ಕೈಗೊಂಡು ಗುರುತಿಸಲಾಗುತ್ತದೆ. ಈ ಮಕ್ಕಳ ಬಗ್ಗೆ ಭಾವಚಿತ್ರ ಸಹಿತ ಸಮಗ್ರವಾದ ಮಾಹಿತಿಯನ್ನು ಮಹಾನಗರಪಾಲಿಕೆಯಲ್ಲಿ ಇಟ್ಟುಕೊಂಡು ಅವರ ಆರೋಗ್ಯ ನಿರ್ವಹಣೆ, ಸರ್ವಾಂಗೀಣ ಬೆಳವಣಿಗೆಗಳ ಬಗ್ಗೆ ನಿಗಾ ಇಡಲಾಗುತ್ತದೆ. ಬರುವ ಡಿಸೆಂಬರ್ ಅಂತ್ಯರೊಳಗೆ ಈ ಎಲ್ಲ ಮಕ್ಕಳನ್ನು ಪೌಷ್ಠಿಕಾಂಶವುಳ್ಳ ಆರೋಗ್ಯವಂತ ಮಕ್ಕಳನ್ನಾಗಿಸಲು ಈ ಯೋಜನೆಯಡಿ ಉದ್ದೇಶ ಹೊಂದಲಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಇದನ್ನು ವಿಸ್ತರಿಸಲಾಗುವುದೆಂದು ಅವರು ಹೇಳಿದರು.

 ಜಿಲ್ಲೆಯಲ್ಲಿ ಒಟ್ಟು 7254 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಬೆಳಗಾವಿ ನಗರದಲ್ಲಿ 375 ಅಪೌಷ್ಠಿಕ ಮಕ್ಕಳಿದ್ದಾರೆ. ಈಗಾಗಲೇ ಇಂತಹ ಮಕ್ಕಳನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳಲು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯು ಸಹ ಸಲಹೆಗಳನ್ನು ನೀಡಿದೆ. ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಬಾಲ ಸಂಜೀವಿನಿ ಯೋಜನೆಯಡಿ 30,000/- ರೂ.ಗಳ ಅನುದಾನ, 250/- ರೂ.ಗಳಲ್ಲಿ ಔಷಧ ವಿತರಣೆ, ಸಮರ್ಪಕ ಆಹಾರ ಹಾಗೂ ಮೊಟ್ಟೆ, ಹಾಲನ್ನು ಸಹ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈಗ ಸಮೀಕ್ಷೆ ಕೈಗೊಳ್ಳುವ ಜವಾಬ್ದಾರಿಯನ್ನು ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಾಗೃತಿಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದ ಅವರು ಕ್ಷೇತ್ರ ಮಟ್ಟದಲ್ಲಿ ಈ ವಿಷಯದಲ್ಲಿ ಇವರಿಂದ ಬರುವ ಸಲಹೆಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

    ಅದರಂತೆ ಈ ಯೋಜನೆ ಯಶಸ್ವಿಗೊಳಿಸಲು ಅನುಕೂಲವಾಗುವಂತೆ ಸರ್ಕಾರದ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಾನಗರಪಾಲಿಕೆ, ಆರೋಗ್ಯ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಅದರಂತೆ ನಗರ, ಸ್ಥಳೀಯ ಸಂಸ್ಥೆಗಳು,  ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಿವಿಧ ಪಂಚಾಯತ್‌ಗಳು ಕೈಜೋಡಿಸಬೇಕೆಂದ ಅವರು ಅಪೌಷ್ಠಿಕತೆ ಕುರಿತು ತಾಯಂದಿರಲ್ಲಿ ಅರಿವನ್ನು ಮೂಡಿಸಬೇಕು. ಉತ್ತಮ ಆಹಾರ ಪದ್ಧತಿ, ಮತ್ತು ಜೀವನ ಶೈಲಿ ಬಗ್ಗೆ ತಿಳಿ ಹೇಳಬೇಕು. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ನಿರ್ವಹಣೆ ಮತ್ತು ಆಹಾರ ನಿರ್ವಹಣೆ ಕುರಿತಂತೆಯೂ ಜಾಗೃತಿ ಮೂಡಿಸಬೇಕೆಂದು ಈ ಸಂದರ್ಭದಲ್ಲಿ ಅವರು ಸಲಹೆ ನೀಡಿದರು.

 ಕಾರ್ಯಾಗಾರದಲ್ಲಿ ಮಾತನಾಡಿದ ಮಹಾನಗರಪಾಲಿಕೆ ಆಯುಕ್ತ ಪ್ರಿಯಾಂಕಾ ಫ್ರಾನ್ಸಿಸ್ ಅವರು ಅಪೌಷ್ಠಿಕ ಮಕ್ಕಳ ಆರೋಗ್ಯ ಸಮೀಕ್ಷೆ ಮಾಡುವ ಕ್ರಿಯಾ ಯೋಜನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಾಡಲು ಉದ್ದೇಶಿಸಲಾಗಿದ್ದು, ಡಿಸೆಂಬರ್ 31 ರೊಳಗೆ ಬೆಳಗಾವಿ ನಗರ ಅಪೌಷ್ಠಿಕ ಮಕ್ಕಳ ಮುಕ್ತ ನಗರವನ್ನಾಗಿಸಲು ಪ್ರಯತ್ನ ಮಾಡಲಾಗುತ್ತದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇಂತಹ ಮಕ್ಕಳ ಭಾವಚಿತ್ರ ಒಳಗೊಂಡ ಮಾಹಿತಿಯನ್ನು ಇಟ್ಟುಕೊಂಡು ನಿರಂತರ ಆ ಮಗುವಿನ ಅಪೌಷ್ಠಿಕತೆ ಹೋಗುವವರೆಗೆ ಪರಿಶೀಲನೆ ನಡೆಸಲಾಗುತ್ತದೆ. ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡಿ ಪೌಷ್ಠಿಕಾಂಶವುಳ್ಳ ಆರೋಗ್ಯವಂತ ಮಗು ರೂಪಿಸುವ ಉದ್ದೇಶ ಈ ಯೋಜನೆಯಡಿ ಹೊಂದಲಾಗಿದೆ ಎಂದು ಹೇಳಿದರು.

    ಸಮಾರಂಭದಲ್ಲಿ ಉಪನ್ಯಾಸ ನೀಡಿದ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಶ್ರೀಮತಿ. ಇಂದಿರಾ ಕಬಾಡೆ ಅವರು ಮಗು ಜನನವಾದಾಗ ತೂಕ ಕಡಿಮೆ, ಅಸಮರ್ಪಕ ಆಹಾರ ಪದ್ಧತಿ, ತಡವಾಗಿ ಮೇಲಾಹಾರ ಆರಂಭಿಸುವುದು, ಸೋಂಕು ರೋಗಗಳು, ಆಹಾರದ ಅಭಾವ ಮತ್ತು ಮೂಢನಂಬಿಕೆಗಳು ಅಪೌಷ್ಠಿಕ ಮಕ್ಕಳಾಗಲು ಕಾರಣಗಳಾಗಿದ್ದು, ಮುಂದೆ ಈ ಮಕ್ಕಳು ಮರಾಸ್ಮಸ್ ಮತ್ತು ಕ್ವಾಷಿಯಾರ್ಕರ್ ಎಂಬ ರೋಗಗಳಿಗೆ ಮಕ್ಕಳು ತುತ್ತಾಗುತ್ತಾರೆ. ಈ ರೋಗ ಬಂದಲ್ಲಿ ಇಂತಹ ಮಕ್ಕಳ ಆರೋಗ್ಯ ನಿರ್ವಹಿಸುವ ಜವಾಬ್ದಾರಿ ಹೆಚ್ಚಾಗುತ್ತದೆ. ಮತ್ತು ಮಕ್ಕಳಿಗೂ ಹೆಚ್ಚಿನ ಅಪಾಯವಿದೆ. ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಲ್ಲಿ ಮಗುವಿನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಪದೇ ಪದೇ ಸೋಂಕು ತಗಲುತ್ತದೆ. ಕಾರಣ ಇಂತಹ ಅಪೌಷ್ಠಿಕತೆಯನ್ನು ಹೋಗಲಾಡಿಸಲು ತಾಯಂದಿರು ಪೌಷ್ಠಿಕ ಆಹಾರ ಸೇವಿಸಬೇಕು. ಅವಶ್ಯಕ ಚಿಕಿತ್ಸೆ ಪಡೆಯಬೇಕು. ಮಕ್ಕಳ ಆರೋಗ್ಯ ತಪಾಸಣೆ ಕಾಲಕಾಲಕ್ಕೆ ಮಾಡಿಸಬೇಕು. ಸಮತೋಲನ ಪ್ರಮಾಣದ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು. ಇಂತಹ ಎಲ್ಲ ಮಾಹಿತಿಯನ್ನು ತಾಯಂದಿರಿಗೆ ಈಗ ಸಮೀಕ್ಷೆಯಲ್ಲಿ ಅಳವಡಿಸಿರುವ ಸಿಬ್ಬಂದಿಗಳು ನೀಡಿ ಇಂತಹ ಮಕ್ಕಳ ಬಗ್ಗೆ ಅವಶ್ಯಕ ಮಾಹಿತಿ ಸಂಗ್ರಹಿಸಬೇಕೆಂದು ಸಲಹೆ ನೀಡಿದರು.

   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ವಿ. ಶಂಕರ ಅವರು ಅಧ್ಯಕ್ಷತೆವಹಿಸಿ ಮಾತನಾಡಿ ಸಮೀಕ್ಷೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಖಚಿತಪಡಿಸಿಕೊಂಡು ಪೌಷ್ಠಿಕ ಆಹಾರ ಒದಗಿಸಲು ಕ್ರಮಕೈಗೊಳ್ಳಬೇಕು. ಅದರಂತೆ ಮಕ್ಕಳಲ್ಲಿ ಅಪೌಷ್ಠಿಕತೆ ಗುರುತಿಸಿ ಸೂಕ್ತ ಕ್ರಮಕೈಗೊಳ್ಳುವ ಕುರಿತಂತೆ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಕ್ಷೇತ್ರ ಮಟ್ಟದ ಸಿಬ್ಬಂದಿಗಳು ಜಾಗೃತಿಯಿಂದ, ಪ್ರಾಮಾಣಿಕತೆಯಿಂದ ಮನೆ ಮನೆಗೆ ತೆರಳಿ ಅಪೌಷ್ಠಿಕ ಮಕ್ಕಳನ್ನು ಗುರುತಿಸಬೇಕೆಂದು ಕರೆ ನೀಡಿದರು. ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀ. ಕೆ.ಹೆಚ್. ಓಬಳಪ್ಪ ಸ್ವಾಗತಿಸಿದರು. ಕೊನೆಯಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಶ್ರೀಮತಿ. ಶೈಲಜಾ ತಮ್ಮನ್ನವರ ವಂದಿಸಿದರು.

ವಾರ್ತಾ ಫೆಲೋಶಿಫ್‌ಗಾಗಿ ಅರ್ಜಿ ಆಹ್ವಾನ

ಬೆಳಗಾವಿ:ಜುಲೈ:12:(ಕರ್ನಾಟಕ ವಾರ್ತೆ)- ವಾರ್ತಾ ಇಲಾಖೆಯು 2012-13ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿಯಲ್ಲಿ ‘ವಾರ್ತಾ ಫೆಲೋಶಿಫ್’ಗಾಗಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಂದ ಅರ್ಜಿಯನ್ನು ಆಹ್ವಾನಿಸಿದೆ. 

ಅಧ್ಯಯನದ  ಅವಧಿಯು 6 ತಿಂಗಳುಗಳಾಗಿದ್ದು, ಅಧ್ಯಯನಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಇಲಾಖೆ ನೀಡಲಿದೆ. ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಪತ್ರಿಕೋದ್ಯಮ ವಿಷಯದಲ್ಲಿ ಪದವಿ/ ಪಿಜಿ ಡಿಪ್ಲೊಮಾ/ ಎಂ.ಎ ಪದವಿಯಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳನ್ನು ಪಡೆದಿರಬೇಕು.  ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು.  ಸಮೂಹ ಮಾಧ್ಯಮ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಬೇಕಾಗಿದ್ದು, ಅಭ್ಯರ್ಥಿಯು 5 ವಿವಿಧ ಶೀರ್ಷಿಕೆಯಡಿ ಪ್ರಾಸ್ತಾವಿಕ ಕಿರು ಟಿಪ್ಪಣಿಗಳನ್ನು ಸಲ್ಲಿಸಬೇಕು. 

ಆಯ್ಕೆ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಒಟ್ಟು 10 ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಿದೆ. ಅರ್ಜಿ ನಮೂನೆಗಳು ಮತ್ತು ಅರ್ಹತಾ ನಿಯಮಗಳನ್ನು ಆಯಾ ಜಿಲ್ಲಾ ವಾರ್ತಾ ಇಲಾಖೆ ಕಛೇರಿಗಳಿಂದ ಅಥವಾ ಕೇಂದ್ರ ಕಛೇರಿ ಹಾಗೂ ವೆಬ್‌ಸೈಟ್  www.karnatakavarthe.org  ಇಂದ ಪಡೆಯಬಹುದಾಗಿದೆ.

 ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 20 ರಂದು ಸಂಜೆ   5-30 ಗಂಟೆಯೊಳಗೆ  ನಿರ್ದೇಶಕರು, ವಾರ್ತಾ ಇಲಾಖೆ, ನಂ: 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-1 ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಾರ್ತಾ ಇಲಾಖೆಯ ಜಿಲ್ಲಾ ಕಛೇರಿಗಳು ಹಾಗೂ ಕೇಂದ್ರ ಕಛೇರಿ ಬೆಂಗಳೂರು ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ : 080-22028034 ನ್ನು ಸಂಪರ್ಕಿಸಬಹುದು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ದಿಂದ ಅಭಿವೃದ್ಧಿಪಡಿಸಲು ಜ್ಯೋತಿನಗರ ದತ್ತು

ಬೆಳಗಾವಿ:ಜುಲೈ:12:(ಕರ್ನಾಟಕ ವಾರ್ತೆ)- ನಗರದ ಡೊಂಬರವಾಡಿ (ಜ್ಯೋತಿ ನಗರ) ವನ್ನು ಸಮಗ್ರ ಅಭಿವೃದ್ಧಿಪಡಿಸಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ದತ್ತು ಪಡೆದಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಬೆಳಗಾವಿ ಇದರ ವ್ಯಾಪ್ತಿಯಲ್ಲಿ ಬರುವ ಈ ತಾಲೂಕಿನ 18 ಶಾಖೆಗಳಿಂದ ವಿತರಿಸಲಾಗುವ ಸಾಲ ವಿತರಣಾ ಸಮಾರಂಭದಲ್ಲಿ ಈ ವಿಷಯ ತಿಳಿಸಲಾಗಿದೆ. ಈ ಕಾರ್ಯಕ್ರಮವನ್ನು ನಗರದ ಖ್ಯಾತ ವೈದ್ಯರಾದ ಡಾ|| ರಮೇಶ ದೊಡ್ದಣ್ಣವರ ಉದ್ಘಾಟಿಸಿ ಮಾತನಾಡಿ ಈ ಬ್ಯಾಂಕಿನಿಂದ ಸಾಲ ಪಡೆದ ಫಲಾನುಭವಿಗಳು ಸಾಲವನ್ನು ಸದುಪಡಿಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡುವಂತೆ ಕರೆ ನೀಡಿದರು. ಸುಮಾರು 100 ಫಲಾನುಭವಿಗಳಿಗೆ 3 ಕೋಟಿ ರೂ. ಮೊತ್ತದ ಸಾಲಪತ್ರ ವಿತರಿಸಿ ಮಾತನಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀ. ಸಿ. ಸಾಂಬಶಿವರೆಡ್ಡಿ ಅವರು ಈ ಬ್ಯಾಂಕ್ ವ್ಯಾಪ್ತಿಯಲ್ಲಿ ಬರುವ ಎಲ್ಲ ರೈತರು, ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಕೂಲಿಕಾರರು, ಕುಶಲಕರ್ಮಿಗಳು, ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಬ್ಯಾಂಕ್‌ನ ಸಾಲ ಸೌಲಭ್ಯ ಕಲ್ಪಿಸಲು ಜನಸಂಪರ್ಕ ಸಭೆ ಹಾಗೂ ಸಾಲ ವಿತರಣಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

        ಬೆಳಗಾವಿ ಖಡಕಗಲ್ಲಿಯ ಮುಖ್ಯ ಶಾಖೆಯ ಮುಖ್ಯ ಪ್ರಬಂಧಕ ಶ್ರೀ. ರಾಜಶೇಖರ ಅಡಿಕೆವರ್ ಅವರು ನಗರದ ಡೊಂಬರವಾಡಿಯನ್ನು ಸಮಗ್ರ ಅಭಿವೃದ್ಧಿಗೊಳಿಸಲು ದತ್ತು ಸ್ವೀಕರಿಸಲಾಗುವುದು. ಹಾಗೂ ಅಲ್ಲಿನ ಬಡ ಮಕ್ಕಳಿಗೆ ಶಾಲಾ ನೋಟಬುಕ್ ವಿತರಿಸಲಾಗುವುದೆಂದು ಹೇಳಿದರು. ಸಮಾರಂಭದಲ್ಲಿ ನಾಗೇರಹಾಳ ಗ್ರಾಮದ ಶ್ರೀ. ಮೋಹನ ಅಂಗಡಿ ಹಾಗೂ ಸಮಾಜ ಸೇವಕ ಶ್ರೀ. ಭೋಸಲೆ ಮಾತನಾಡಿದರು.

       ಶ್ರೀನಗರ ಶಾಖೆಯ ಪ್ರಬಂಧಕ ಶ್ರೀ. ಸಿ. ಬೂದಿಹಾಳ ಇವರು ಪ್ರಾರ್ಥಿಸಿದರು. ಬೆಳಗಾವಿ ವಲಯದ ಪ್ರಭಾರಿ ವಲಯ ಪ್ರಬಂಧಕ ಶ್ರೀ. ಆರ್.ಡಿ. ಸುಳ್ಳೀಕೆರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೊನೆಯಲ್ಲಿ ಶ್ರೀ. ರಾಜಶೇಖರ ಅಡಿಕೇನವರ ವಂದಿಸಿದರು. ಹಿರಿಯ ಪ್ರಬಂಧಕರಾದ ಶ್ರೀ. ಮಹದೇವ ಕೊಡಶೆಟ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬೆಳಗಾವಿ ಹಾಗೂ ಬೆಳಗಾವಿ ತಾಲೂಕಿನ ಎಲ್ಲ ಶಾಖಾ ಪ್ರಬಂಧಕರು ಉಪಸ್ಥಿತರಿದ್ದರು. 

ಜುಲೈ 15ರಿಂದ ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿ ಪರೀಕ್ಷೆ : ನಿಷೇಧಾಜ್ಞೆ ಜಾರಿ

ವಿಜಾಪುರ ಜು.12- ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಗಾಗಿ ಜುಲೈ 15ರಿಂದ 18ರವರೆಗೆ ನೇಮಕಾತಿ ಪರಿಕ್ಷೆ ಜರುಗಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸುವುದು, ಪರೀಕ್ಷಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಕುರಿತಂತೆ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಸೂಚಿಸಿದರು. ಇಂದು ಬೆಳಿಗ್ಗೆ ನಗರದ ಅಂಜುಮನ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿ ಪೂರ್ವ ಸಿದ್ಧತಾ ಸಭೆಯಲ್ಲಿ ಪರೀಕ್ಷೆ ಸಿದ್ಧತೆ ಹಾಗೂ ಪ್ರಾಧಿಕಾರದ ಮಾರ್ಗಸೂಚಿಗಳ ಕುರಿತಂತೆ ಪರಿಶೀಲನೆ ನಡೆಸಿದರು.

ವಿಜಾಪುರ ನಗರದ 41 ಕೇಂದ್ರಗಳಲ್ಲಿ ಪರೀಕ್ಷೆಗಳಲ್ಲಿ ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿಗಾಗಿ ಪರೀಕ್ಷೆಗಳು  ಜರುಗಲಿದ್ದು,  ಜುಲೈ 15, ಜುಲೈ 16, ಜುಲೈ 17 ಮತ್ತು 18 ರಂದು ಪರೀಕ್ಷೆಗಳು ಜರುಗಲಿವೆ. ಪರೀಕ್ಷಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಪರೀಕ್ಷೆ ಕೇಂದ್ರದ ಸುತ್ತಲೂ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸುವುದು, 200 ಮೀಟರ್ ವ್ಯಾಪ್ತಿಯ ಝರಾಕ್ಸ ಅಂಗಡಿಗಳನ್ನು ಬಂದ್ ಮಾಡುವುದು, ಸುರಕ್ಷಿತವಾಗಿ ಪ್ರಶ್ನೆ ಪತ್ರಿಕೆಯ ಸಾಗಾಣಿಕೆ, ಕೊಠಡಿ ಮೇಲ್ವಿಚಾರಕರ ನೇಮಕಾತಿ, ಆಸನ ವ್ಯವಸ್ಥೆ ಕುರಿತಂತೆ ಚರ್ಚಿಸಲಾಯಿತು.

ಪರೀಕ್ಷೆಯು ಬೆಳಿಗ್ಗೆ 10ರಿಂದ 12 ಹಾಗೂ ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಪರೀಕ್ಷೆಗಳು ಜರುಗಲಿವೆ. ಜುಲೈ 15ರಂದು  ಸಾಮಾನ್ಯ ಪತ್ರಿಕೆ-1 ಹಾಗೂ ಕಲಾ ಶಿಕ್ಷಕರ ಪತ್ರಿಕೆ-2, ಜುಲೈ 16ರಂದು ಬೆಳಿಗ್ಗೆ ದೈಹಿಕ ಶಿಕ್ಷಣ ಗ್ರೇಡ್-1 ಹಾಗೂ ಪತ್ರಿಕೆ-2, ಮಧ್ಯಾಹ್ನ ಭೌತ ವಿಜ್ಞಾನ, ಜೀವ ವಿಜ್ಞಾನ ಪತ್ರಿಕೆ-2, ಜುಲೈ 17 ರಂದು ಬೆಳಿಗ್ಗೆ ಕನ್ನಡ ಭಾಷಾ ಶಿಕ್ಷಕರ ಪತ್ರಿಕೆ-2, ಮಧ್ಯಾಹ್ನ ಆಂಗ್ಲ ಭಾಷಾ ಶಿಕ್ಷಕರ ಪತ್ರಿಕೆ-2, ಜುಲೈ 18ರಂದು ಬೆಳಿಗ್ಗೆ ಹಿಂದಿ ಭಾಷಾ ಶಿಕ್ಷಕರ ಪತ್ರಿಕೆ-2, ಮಧ್ಯಾಹ್ನ ಸಂಸ್ಕ್ರತ, ಉರ್ದು, ತಮಿಳು ಮರಾಠಿ ಪತ್ರಿಕ-2 ವಿಷಯಗಳ ಕುರಿತಂತೆ ಸ್ಪರ್ಧಾತ್ಮಕ ಪರೀಕ್ಷೆಗಳು ಜರುಗಲಿವೆ.

ಜುಲೈ 15ರ ಮೊದಲ ದಿನ ಸಾಮಾನ್ಯ ಪತ್ರಿಕೆಗೆ 12946 ಅಭ್ಯರ್ಥಿಗಳು, ಕಲಾ ವಿಭಾಗ ಪರೀಕ್ಷೆಗೆ 7876 ಅಭ್ಯರ್ಥಿಗಳು, ಜುಲೈ 16ರಂದು ದೈಹಿಕ ಶಿಕ್ಷಣ ಪರೀಕ್ಷೆಗೆ 1206 ಮಧ್ಯಾಹ್ನ ನಡೆಯುವ ಪಿಸಿಎಂ, ಸಿಬಿಝಡ್ ಪರೀಕ್ಷೆಗೆ 1858, ಜುಲೈ 17ರಂದು ಬೆಳಿಗ್ಗೆ ನಡೆಯುವ ಕನ್ನಡ ಭಾಷಾ ಪರೀಕ್ಷೆಗೆ 3328, ಮಧ್ಯಾಹ್ನ ಜರುಗುವ ಇಂಗ್ಲೀಷ್ ಭಾಷಾ ವಿಷಯ ಪರೀಕ್ಷೆಗೆ 1414, ಜುಲೈ 18ರಂದು ನಡೆಯುವ ಹಿಂದಿ ಭಾಷಾ ಪರೀಕ್ಷೆಗೆ 1119, ಹಾಗೂ ಮರಾಠಿ, ಉರ್ದು, ಸಂಸ್ಕ್ರತ ಪರೀಕ್ಷೆಗೆ 185 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ಧಾರೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್ ಹಾಗೂ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು  ಇತರರು ಉಪಸ್ಥಿತರಿದ್ದರು.

ತಜ್ಞ ವೈದ್ಯರ ಹುದ್ದೆಗಳಿಗಾಗಿ ಜುಲೈ 17ರಂದು  ನೇರ ಸಂದರ್ಶನ

ವಿಜಾಪುರ ಜು.12- ವಿಜಾಪುರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ತಜ್ಞ ವೈದ್ಯರ ಹುದ್ದೆಗಳನ್ನು ಎನ್‌ಆರ್‌ಎಚ್‌ಎಂ ಮತ್ತು ಕೆಎಚ್‌ಎಸ್‌ಡಿಆರ್‌ಪಿ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ದಿನಾಂಕ : 17-7-2012ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.

ಜನರಲ್ ಮೆಡಿಸಿನ್ 9 ಹುದ್ದೆ, ಸಾಮಾನ್ಯ ಶಸ್ತ್ರ ಚಿಕಿತ್ಸಾ ತಜ್ಞರು 10, ಸ್ತ್ರೀ ರೋಗ ತಜ್ಞರು 8, ಅರವಳಿಕೆ ತಜ್ಞರು 3, ಚಿಕ್ಕ ಮಕ್ಕಳ ತಜ್ಞ 8, ಇಎನ್‌ಟಿ ತಜ್ಞ 3 ಹಾಗೂ ಎಲಬು, ಕೀಲು ತಜ್ಞರ 2 ಹುದ್ದೆಗಳು ಸೇರಿದಂತೆ ಒಟ್ಟು 46 ತಜ್ಞರ ಹುದ್ದೆಗೆ ನೇರ ಸಂದರ್ಶನ ಜರುಗಲಿದ್ದು,  ಎಂಬಿಬಿಎಸ್ ಪದವಿಯೊಂದಿಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಪಡೆದ ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮೂಲ ದಾಖಲೆಗಳು ಮತ್ತು ಅವುಗಳ ಝರಾಕ್ಸ್ ಪ್ರತಿ, ಇತ್ತೀಚಿನ ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿ ಹಾಗೂ ವೈಯಕ್ತಿಕ ವಿವರಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಉಪಾಧ್ಯಕ್ಷರು  ಜಿಲ್ಲಾ ಆರೋಗ್ಯ ಸಂಘ, ಹಳೆ ಸಿವ್ಹಿಲ್ ಆಸ್ಪತ್ರೆ ಆವರಣ, ಶಿವಾಜಿ ವೃತ್ತ, ವಿಜಾಪುರ. ದೂ: 08352-250256 ಇವರನ್ನು ಸಂಪರ್ಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಅಥರ್ಗಾ ಕ್ಷೇತ್ರಕ್ಕೆ ಚುನಾವಣಾ ಅಧಿಸೂಚನೆ ಪ್ರಕಟ

ವಿಜಾಪುರ ಜು.12- ಜಿಲ್ಲಾ ಪಂಚಾಯತಿಯ ಅಥರ್ಗಾ ಮತಕ್ಷೇತ್ರಕ್ಕೆ  ಆಗಸ್ಟ್ 5ರಂದು ಚುನಾವಣೆ ನಡೆಸುವ ಕುರಿತಂತೆ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಇಂದು ಅಧಿಸೂಚನೆ ಹೊರಡಿಸಿದ್ದಾರೆ. ಅಥರ್ಗಾ ಮತಕ್ಷೇತ್ರದ ಜಿಲ್ಲಾ ಪಂಚಾಯ್ ಸದಸ್ಯೆ ಶ್ರೀಮತಿ ಕಮಲಾಬಾಯಿ ದೇವೇಂದ್ರಪ್ಪ ಮಾಯವಂಶಿ ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ಪಂಚಾಯತ್ ರಾಜ್ ಚುನಾವಣಾ ನಿಯಮಾನುಸಾರ ಅಧಿಸೂಚನೆಯನ್ನು ಹೊರಡಿಸಲಾಗಿದೆ. ವೇಳಾಪಟ್ಟಿಯಂತೆ ಜುಲೈ 16 ರಂದು ನಾಮಪತ್ರ ಸಲ್ಲಿಕೆ ಆರಂಭ, ಜುಲೈ 23ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ, ಜುಲೈ 24ರಂದು ನಾಮಪತ್ರ ಪರಿಶೀಲನೆ, ಜುಲೈ 26ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ, ಆಗಸ್ಟ್ 5ರಂದು ಅಗತ್ಯ ಬಿದ್ದರೆ ಮತದಾನಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ ಹಾಗೂ ಆಗಸ್ಟ್ 7ರಂದು ಮರು ಮತದಾನಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಆಗಸ್ಟ್ 8 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆಗಾಗಿ ದಿನಾಂಕ ನಿಗದಿಪಡಿಸಲಾಗಿದೆ. ಅಗಸ್ಟ್ 9ರೊಳಗೆ ಚುನಾವಣೆಯ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.

ಆಗಸ್ಟ್ 5ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ, ಆಗಸ್ಟ್ 8 ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕಾ ಕೇಂದ್ರದಲ್ಲಿ ಮತ ಎಣಿಕೆಗಾಗಿ ಸಮಯ ಹಾಗೂ ಸ್ಥಳವನ್ನು ನಿಗದಿಪಡಿಸಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅಧಿಸೂಚನೆಯನ್ನು ಹೊರಡಿಸಿದ್ದಾರೆ.