Government of Karnataka

Department of Information

Wednesday 09/11/2016

District News 14-03-2012

Date : Wednesday, March 14th, 2012

ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಿ-ಸಚಿವ ನಿರಾಣಿ

ತುಮಕೂರು ಮಾ.14: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ, ಸಮರೋಪಾದಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಂತೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮಾರುಕಟ್ಟೆ ಬೆಲೆಗೆ ಮೇವು ಖರೀದಿಸಿ ವಿತರಿಸಲು ಕ್ರಮಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮುರುಗೇಶ್ ಆರ್. ನಿರಾಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

           ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಬರಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ, ಮಾರ್ಚ್ ತಿಂಗಳಾಂತ್ಯದಲ್ಲಿ  ಕಾಮಗಾರಿಗಳನ್ನು  ಅನುಷ್ಟಾನಗೊಳಿಸಬೇಕು.  ಹಣ ಬಿಡುಗಡೆಗೆ ತಾವು ಕ್ರಮಕೈಗೊಳ್ಳುವುದಾಗಿ ತಿಳಿಸಿದ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿ.ಇ.ಓ., ಕೃಷಿ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಶೀಘ್ರವೇ ಸಭೆ ಸೇರಿ ಯಾವ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇವು ಸಿಗುತ್ತದೆ ಎಂಬುದನ್ನು ಚರ್ಚಿಸಿ, ವಾರದೊಳಗಾಗಿ ನಿರ್ಧಾರ ಕೈಗೊಂಡು ಮೇವು ಖರೀದಿ ಮಾಡುವಂತೆ ಸೂಚಿಸಿದರು.

            ರೈತರಿಗೆ ಹಾಗೂ ಜನಸಾಮಾನ್ಯರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಟ್ರಾನ್ಸ್‌ಫಾರ್ಮರ್‌ಗಳ ಕೊರತೆ ಇದ್ದಲ್ಲಿ ಪಟ್ಟಿ ಮಾಡಿ ಕೊಟ್ಟಲ್ಲಿ ತಾವು ಇಂಧನ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಸಾಮಗ್ರಿಗಳ ಪೂರೈಕೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

            ಶಾಸಕ ಶ್ರೀ ವೆಂಕಟರಮಣಪ್ಪ ಅವರು ಮಾತನಾಡಿ, ಬರದ ಹಿನ್ನಲೆಯಲ್ಲಿ ಪಾವಗಡ ತಾಲ್ಲೂಕು ಜಿಲ್ಲೆಯಲ್ಲೇ ಅತೀ ಹೆಚ್ಚು ತೊಂದರೆಗೊಳಗಾಗಿರುವ ತಾಲ್ಲೂಕಾಗಿರುತ್ತದೆ.  ಹಿಂಗಾರು, ಮುಂಗಾರು ವ್ಯವಸಾಯ ತಾಲ್ಲೂಕಿನಲ್ಲಿ ಇರುವುದಿಲ್ಲ. ಬೆಳೆದಂತಹ ಕಡಲೆ ಸಂಪೂರ್ಣ ಹಾಳಾಗಿದೆ.  ಜನರು ಗುಳೆ ಹೋಗುತ್ತಿದ್ದು, ಇಲ್ಲಿಯವರೆಗೆ ಸುಮಾರು 200-300ಜನರು ಗುಳೆ ಹೋಗಿದ್ದಾರೆ.  ಗುಳೆ ಹೋಗುವ ಜನರಿಗೆ ಕೆಲಸ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದ ಶಾಸಕರು, ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ತ್ವರಿತವಾಗಿ ತಾಲ್ಲೂಕಿನಲ್ಲಿ ಕಾಮಗಾರಿಗಳನ್ನು ಮಾರ್ಚ್ ತಿಂಗಳಾಂತ್ಯದೊಳಗಾಗಿ ಪೂರೈಸುವಂತೆ ಅಧಿಕಾರಿಗಳಿಗೆ ತಿಳಿಸಿದರು. 

          ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಜಿ.ಪಂ. ಸಿ.ಇ.ಓ. ಗೋವಿಂದರಾಜು ಅವರು ಪಾವಗಡ ತಾಲ್ಲೂಕಿಗೆ 65ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ಕುಡಿಯುವ ನೀರಿನ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.  ಶಾಸಕರ ನೇತೃತ್ವದ ಕಾರ್ಯಪಡೆಯ ಶಿಫಾರಸ್ಸಿನ ಮೇರೆಗೆ 40 ಹೊಸ ಬೋರ್‌ವೆಲ್‌ಗಳನ್ನು ಕೊರೆಸಲು 40ಲಕ್ಷ ರೂ.ಗಳ ಹೆಚ್ಚುವರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.  ಹಾಗೂ ತಾಲ್ಲೂಕಿನ ವಿವಿಧ ಗ್ರಾಮಪಂಚಾಯತಿಗಳ ಮೂಲಕ ಅಕ್ಕಪಕ್ಕದ ತೊಟ್ಟಿಗಳಲ್ಲಿ ನೀರು ಶೇಖರಣೆ ಮಾಡಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಹಾಗೂ ಜಲಮೂಲಗಳಿರುವ 32 ಸ್ಥಳಗಳನ್ನು ಗುರುತಿಸಿ, ಹೊಂಡಗಳನ್ನು ತೆಗೆದು ಜಾನುವಾರುಗಳಿಗೆ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು.

            ಜಿಲ್ಲಾಧಿಕಾರಿ ಶ್ರೀ ಆರ್.ಕೆ.ರಾಜು ಅವರು ಸಭೆಗೆ ಮಾಹಿತಿ ನೀಡುತ್ತಾ, ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕಿಗೆ 168.81, ಗುಬ್ಬಿ 84.00, ಕುಣಿಗಲ್ 83.86, ತಿಪಟೂರು 97.24, ತುರುವೇಕೆರೆ 64.71, ಚಿ.ನಾ.ಹಳ್ಳಿ 47.50, ಕೊರಟಗೆರೆ 123.25, ಶಿರಾ 143.03, ಮಧುಗಿರಿ 155.52, ಪಾವಗಡ 127.65, ಸೇರಿದಂತೆ ಒಟ್ಟು ಜಿಲ್ಲೆಗೆ 1095.57 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ವಿವರಿಸಿದರು.

             ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲದ ಹಾಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಲು ಸರ್ಕಾರ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರನ್ನು ಮಾರ್ಚ್ ತಿಂಗಳೊಳಗಾಗಿ ಸಮರ್ಪಕವಾಗಿ ಪೂರೈಸಲು ಅಧಿಕಾರಿಗಳಿಗೆ ತಾವು ಸೂಚನೆ ನೀಡಿದ್ದು, ತುಮಕೂರಿನ ಕ್ಯಾತ್ಸಂದ್ರ ಹಾಗೂ ಶಿರಾ ತಾಲ್ಲೂಕಿಗೆ ಎರಡು ಹಾಗೂ ಪಾವಗಡ ತಾಲ್ಲೂಕಿಗೆ ಎರಡು ಗೋಶಾಲೆಗಳನ್ನು ತೆರೆಯಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಪರಿಶೀಲನೆ ಹಂತದಲ್ಲಿದೆ.  ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಗೆ ಸಂಬಂಧಿಸಿದಂತೆ ಪಕ್ಕದ ಜಿಲ್ಲೆಗಳಿಗೆ ಅಧಿಕಾರಿಗಳನ್ನು ಕಳಿಸಿ ಮೇವಿನ ದರಪಟ್ಟಿ ತರಿಸಿ, ಸಭೆಯಲ್ಲಿ ಅನುಮೋದನೆ ಪಡೆದು ಮೇವು ತರಿಸಿಕೊಳ್ಳಲು ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

            ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ, ಶಾಸಕರಾದ ಎಸ್.ಶಿವಣ್ಣ, ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಹುಲಿನಾಯ್ಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಜಿ.ಪಂ. ಅಧ್ಯಕ್ಷರಾದ ಆನಂದರವಿ ಸೇರಿದಂತೆ ವಿವಿಧ ಗಣ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 ದೂರವಾಣಿ ಅದಾಲತ್

ತುಮಕೂರು ಮಾ.14: ಬಿ.ಎಸ್.ಎನ್.ಎಲ್.ನ ತುಮಕೂರು ಜಿಲ್ಲಾ ದೂರಸಂಪರ್ಕ ಮಹಾ ಪ್ರಬಂಧಕರ ಕಛೇರಿಯಲ್ಲಿ ಮಾರ್ಚ್ 28ರಂದು ಬೆಳಿಗ್ಗೆ 11-00 ಗಂಟೆಗೆ ಮಹಾಪ್ರಬಂಧಕರ ಅಧ್ಯಕ್ಷತೆಯಲ್ಲಿ ದೂರವಾಣಿ ಅದಾಲತ್ ನಡೆಯಲಿದೆ.  ಆರು ತಿಂಗಳಿಗೂ ಮೇಲ್ಪಟ್ಟ ಅವಧಿಯಲ್ಲಿ ಇತ್ಯರ್ಥವಾಗದ ದೂರವಾಣಿ ಸಂಪರ್ಕ, ಬಿಲ್‌ನಲ್ಲಿನ ಹೆಚ್ಚಳ, ಸಂಪರ್ಕ ಕಡಿತ ಮೊದಲಾದ ವೈಯಕ್ತಿಕ ದೂರುಗಳನ್ನು ಅದಾಲತ್‌ನಲ್ಲಿ ಪರಿಗಣಿಸಲಾಗುವುದು.  ಅದಾಲತ್‌ಗೆ ಅರ್ಜಿ ಸಲ್ಲಿಸುವ ಮೊದಲು ಕುಂದುಕೊರತೆ ನಿವಾರಣೆಗೆ ಎಲ್ಲಾ ಸಾಮಾನ್ಯ ಮಾರ್ಗಗಳನ್ನು ಕೈಗೊಂಡಿರಬೇಕು.  ಸಮಸ್ಯೆಯ ಪೂರ್ಣ ವಿವರಗಳನ್ನೊಳಗೊಂಡ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಕಿರಿಯ ದೂರಸಂಪರ್ಕ ಅಧಿಕಾರಿ (ಪಿ.ಆರ್.), ಮಹಾಪ್ರಬಂಧಕರ ಕಛೇರಿ, ಬಿ.ಎಸ್.ಎನ್.ಎಲ್., ಅಶೋಕ ರಸ್ತೆ, ತುಮಕೂರು-572101, ಇವರಿಗೆ ಮಾರ್ಚ್ 20ರ ಒಳಗೆ ತಲುಪುವಂತೆ ಕಳುಹಿಸಬೇಕು, ಲಕೋಟೆ ಮೇಲೆ ದೂರವಾಣಿ ಅದಾಲತ್‌ಗೆ ಅರ್ಜಿ ಎಂದು ನಮೂದಿಸಬೇಕು ಎಂದು ಬಿ.ಎಸ್.ಎನ್.ಎಲ್.ದೂರಸಂಪರ್ಕ ಮಹಾ ಪ್ರಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಮಾರ್ಚ್ 15ರಿಂದ ಯಾದಗಿರಿ ಜಿಲ್ಲೆಯಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಲಾ ಪ್ರದರ್ಶನ

ಯಾದಗಿರಿ,ಮಾ.14.(ಕ.ವಾ)-ಯಾದಗಿರಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಗಿರಿಜನ ಪ್ರದೇಶದ ಉಪ ಯೋಜನೆಯಡಿ ಯಾದಗಿರಿ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಲಾ ಪ್ರದರ್ಶನ ಕಾರ್ಯಕ್ರಮವನ್ನು 2012ರ ಮಾರ್ಚ್ 15ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಿರೀಶ ಸಿದ್ದಿ ದೇವರಕಲ್ಲಹಳ್ಳಿ ಮತ್ತು ತಂಡದವರು ಪ್ರತಿದಿನ ಸಂಜೆ 6-30 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಿದ್ದಿ ಡಮಾಮಿ ಮತ್ತು ಪುಗಡಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ತಾಲೂಕುವಾರು ಡಮಾಮಿ ಮತ್ತು ಪುಗಡಿ ನೃತ್ಯ ಪ್ರದರ್ಶಿಸುವ ಗ್ರಾಮಗಳ ಮತ್ತು ದಿನಾಂಕದ ವಿವರ ಇಂತಿದೆ. ಯಾದಗಿರಿ: ಅಬ್ಬೇತುಮಕೂರ-ಮಾರ್ಚ್ 15, ಸೈದಾಪುರ-ಮಾರ್ಚ್ 16 ಮತ್ತು ಕಾಳೆಬೆಳಗುಂದಿ-ಮಾರ್ಚ್ 17. ಶಹಾಪುರ: ಚರಬಸವೇಶ್ವರ ಗದ್ದುಗೆ ಸಂಸ್ಥಾನ ಶಹಾಪುರ-ಮಾರ್ಚ್ 18 ಮತ್ತು ನಾಯ್ಕಲ್-ಮಾರ್ಚ್ 19. ಸುರಪುರ: ಕನ್ನಡ ಸಾಹಿತ್ಯ ಸಂಘ ರಂಗಂಪೇಟೆ-ಮಾರ್ಚ್ 20 ಮತ್ತು  ಅರಕೇರಾ(ಕೆ)-ಮಾರ್ಚ್ 21.

 ನಾಗರೀಕ ಸೇವಾ ಖಾತರಿ ಕಾಯ್ದೆಯ ಅನುಷ್ಠಾನ ತರಬೇತಿ

ಯಾದಗಿರಿ: ಮಾ. 13 (ಕ.ವಾ.) ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಾರ್ಚ 16 ರಂದು ಮತ್ತು  17 ರಂದು ಅಬ್ದುಲ್ ನಜೀರ್ ಸಾಬ್ ಸಂಸ್ಥೆ ಮೈಸೂರ ಹಾಗೂ ರಾಜ್ಯ ನಗರಾಭಿವೃದ್ಧಿ ಸಂಸ್ಥೆ ರವರ ಸಹಯೋಗದಲ್ಲಿ ಶ್ರೀ ಜಿ.ಎಮ್. ಸರ್‍ವೇಶ್ವರ ಶ್ರೀ ಮನೋಜಕುಮಾರರವರಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೀಗೆ ಎರಡು ದಿನಗಳ ತರಬೇತಿ ನಡೆಯಲಿದೆ ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ. ಯಾದಗಿರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕಿಯರ ಬಾಲಮಂದಿರ ಪ್ರಾರಂಭ

ಯಾದಗಿರಿ:           ಮಾ.13 (ಕ.ವಾ.) ಬಾಲಕಿಯರ ಬಾಲಮಂದಿರ ಬಸವೇಶ್ವರ ನಗರದಲ್ಲಿ ಮಹಾಮಂದಿರ ಸಮೀಪ (ಎದುರಗಡೆ) ಕಟ್ಟಡ ಪ್ರಾರಂಭವಾಗಿದ್ದು, ಅನಾಥ ಹೆಣ್ಣು ಮಕ್ಕಳು ನಿರ್ಗತಿಕ ಮಕ್ಕಳು ಪಾಲಕರನ್ನು ಕಳೆದುಕೊಂಡ ಮಕ್ಕಳು, ಮತ್ತು ಮನೆಯಿಂದ ಒಡಿಬಂದ ಮಕ್ಕಳು, ಅವರ ವಯಸ್ಸು 14 ರಿಂದ 18 ವರೆಗೆ ಇದ್ದರೆ ಅವರಿಗೆ ಈ ಬಾಲಮಂದಿರದಲ್ಲಿ ವಾಸ್ಥವ್ಯ ಉಟೋಪಚಾರ ಶಾಲೆ ಶಿಕ್ಷಣ ಆರೋಗ್ಯ ತಪಾಸಣೆ ( ಪಾಲನೆ, ಫೋಷಣೆ, ರಕ್ಷಣೆ) ಕುರಿತಂತೆ ಸಹಾಯವನ್ನು ಪಡೆಯುವವರು ಜಿಲ್ಲಾ ಮಕ್ಕಳು ಕಲ್ಯಾಣ ಸಮಿತಿಯ ಮುಖಾಂತರ ಈ ಬಾಲಮಂದಿರದಲ್ಲಿ ಸೇರಬಹುದಾಗಿದೆ. ಹೆಚ್ಚಿನ ವಿಚಾರಣೆಗಾಗಿ ಉಪನಿರ್ದೇಶಕರ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಯಾದಗಿರಿ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08473-253739.

ಮಾ.15 ರಿಂದ 21 ರವರೆಗೆ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಕಾರ್ಯಕ್ರಮ

ಮಂಡ್ಯ, ಮಾ.14(ಕ.ವಾ.):- ಜಿಲ್ಲಾ ವಾರ್ತಾ ಇಲಾಖೆಯ ವತಿಯಿಂದ ಮಾರ್ಚ್ 15 ರಿಂದ 21 ರವರೆಗೆ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಸಂಜೆ 6.00 ಗಂಟೆಗೆ ನಾಗರಹೊಳೆಯ  ಅಂಮಾಳಮ್ಮ ಕಲಾ ತಂಡದಿಂದ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಮಾ. 15 ರಂದು ಶಿವಳ್ಳಿ, 16 ರಂದು ದುದ್ದ, 17 ರಂದು ಬೇವುಕಲ್ಲು, 18 ರಂದು ಹಟ್ನ, 19 ರಂದು ಕನ್ನಲಿ, 20 ರಂದು ತೂಬಿನಕೆರೆ ಹಾಗೂ 21 ರಂದು ಮಾದರಹಳ್ಳಿಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ವಾರ್ತಾಧಿಕಾರಿ ರಾಜು ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಕ್ಷರ ಭಾರತ್ ಕಾರ್ಯಕ್ರಮದಡಿ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಸಾಕ್ಷರ ಭಾರತ್ ಕಾರ್ಯಕ್ರಮದಡಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿ, ನೌಕರರಿಗೆ ಹಾಗೂ ಪಂಚಾಯಿತಿಗಳಿಗೆ ಸರ್ಕಾರ ವಿವಿಧ ಪ್ರಶಂಸನಾ ಪತ್ರ ಮತ್ತು ಪುರಸ್ಕಾರ ನೀಡುವ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ಕಾಳೇಗೌಡ ತಿಳಿಸಿದ್ದಾರೆ.

ಸರ್ಕಾರ ಜಿಲ್ಲಾ, ತಾಲ್ಲೂಕು, ಗ್ರಾಮ ಹಾಗೂ ನೌಕರರ ಕಾರ್ಯಕರ್ತರಿಗೆ ನೀಡುವ ಪ್ರಶಸ್ತಿಗಳ ವಿಭಾಗಗಳ ವಿವರ ಈ ಕೆಳಕಂಡಂತಿದೆ.

ಸಾಕ್ಷರ ಜಿಲ್ಲಾ ಪಂಚಾಯಿತಿ :  ಸಾಕ್ಷರ ಭಾರತ್ ಕಾರ್ಯಕ್ರಮದಡಿ 15+ ವಯೋಮಾನದ ಎಲ್ಲಾ ಅನಕ್ಷರಸ್ಥರನ್ನು ಕಲಿಕೆಗೆ ಒಳಪಡಿಸಿ ಎನ್.ಐ.ಓ.ಎಸ್. ಪರೀಕ್ಷೆಯಲ್ಲಿ ಶೇ.80 ರಷ್ಟು ಸಾಕ್ಷರಸ್ಥರಾಗುವುದನ್ನಾಧರಿಸಿ ಸಾಕ್ಷರ ಜಿಲ್ಲಾ ಪಂಚಾಯಿತಿ ಎಂದು ಘೋಷಿಸಲಾಗುವ ಜಿಲ್ಲಾ ಪಂಚಾಯಿತಿಗಳಿಗೆ ಸಾಕ್ಷರ ಜಿಲ್ಲಾ ಪಂಚಾಯಿತಿ ಪ್ರಶಂಸನಾ ಪತ್ರ ಮತ್ತು ತಲಾ ರೂ. 50,000/- ನಗದು ಪ್ರಶಸ್ತಿ ನೀಡಲಾಗುತ್ತದೆ.

ಸಾಕ್ಷರ ತಾಲ್ಲೂಕು ಪಂಚಾಯಿತಿ : ಶೇ.85 ರಷ್ಟು ಸಾಕ್ಷರಸ್ಥರಾಗುವುದನ್ನಾಧರಿಸಿ ಸಾಕ್ಷರ ತಾಲ್ಲೂಕು ಪಂಚಾಯಿತಿ ಎಂದು ಘೋಷಿಸಲಾಗುವ ತಾಲ್ಲೂಕು ಪಂಚಾಯಿತಿಗಳಿಗೆ ಸಾಕ್ಷರ ತಾಲ್ಲೂಕು ಪಂಚಾಯಿತಿ ಪ್ರಶಂಸನಾ ಪತ್ರ ಮತ್ತು ತಲಾ  ರೂ. 25,000/- ನಗದು ಪ್ರಶಸ್ತಿ ನೀಡಲಾಗುತ್ತದೆ.

ಸಾಕ್ಷರ ಗ್ರಾಮ ಪಂಚಾಯಿತಿ : ಶೇ. 90 ರಷ್ಟು ಸಾಕ್ಷರಸ್ಥರಾಗುವುದನ್ನಾಧರಿಸಿ ಸಾಕ್ಷರ ತಾಲ್ಲೂಕು ಪಂಚಾಯಿತಿ ಎಂದು ಘೋಷಿಸಲಾಗುವ ಗ್ರಾಮ ಪಂಚಾಯಿತಿಗಳಿಗೆ ಸಾಕ್ಷರ ಗ್ರಾಮ ಪಂಚಾಯಿತಿ ಪ್ರಶಂಸನಾ ಪತ್ರ ಮತ್ತು ತಲಾ ರೂ. 10,000/- ನಗದು ಪ್ರಶಸ್ತಿ ನೀಡಲಾಗುತ್ತದೆ.

            ಜಿಲ್ಲಾ ಮಟ್ಟದ ಸಾಕ್ಷರ ಭಾರತ್ ಕಾರ್ಯಕ್ರಮ ಅನುಷ್ಠಾನದಲ್ಲಿ ಕಾರ್ಯನಿರ್ವಹಣೆ, ಗುರಿ, ಸಾಧನೆ, ಆಧರಿಸಿ ರಾಜ್ಯದ ಅರ್ಹ ಒಬ್ಬ ಜಿಲ್ಲಾ ಪಂಚಾಯಿತಿ ಲೋಕ ಶಿಕ್ಷಣ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಉತ್ತಮ ಸದಸ್ಯ ಕಾರ್ಯದರ್ಶಿ ಪ್ರಶಂಸನಾ ಪತ್ರ ಮತ್ತು ತಲಾ ರೂ. 10,000/- ನಗದು ಪ್ರಶಸ್ತಿ ನೀಡಲಾಗುತ್ತದೆ.

           ತಾಲ್ಲೂಕು ಮಟ್ಟದ ಸಾಕ್ಷರ ಭಾರತ್ ಕಾರ್ಯಕ್ರಮದ ಅನುಷ್ಠಾನದಲ್ಲಿ ಕಾರ್ಯನಿರ್ವಹಣೆ, ಗುರಿ, ಸಾಧನೆ ಆಧರಿಸಿ ಅರ್ಹ 05 ಜನ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ತಾಲ್ಲೂಕು ಪಂಚಾಯಿತಿ ಲೋಕ ಶಿಕ್ಷಣ ಸಮಿತಿಯ ಉತ್ತಮ ಸದಸ್ಯ ಕಾರ್ಯದರ್ಶಿ ಪ್ರಶಂಸನಾ ಪತ್ರ ಮತ್ತು ರೂ. 5,000/- ಪುರಸ್ಕಾರ ನೀಡಲಾಗುತ್ತದೆ.

            ಗ್ರಾಮಪಂಚಾಯಿತಿ ಮಟ್ಟದ ಸಾಕ್ಷರ ಭಾರತ್ ಕಾರ್ಯಕ್ರಮದ ಅನುಷ್ಠಾನದಲ್ಲಿ ಕಾರ್ಯನಿರ್ವಹಣೆ, ಗುರಿ ಸಾಧನೆ ಆಧರಿಸಿ ರಾಜ್ಯದ ಅರ್ಹ 10 ಜನ ಗ್ರಾಮಪಂಚಾಯಿತಿ ಲೋಕ ಶಿಕ್ಷಣ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಸಮಿತಿಯ ಉತ್ತಮ ಸದಸ್ಯ ಕಾರ್ಯದರ್ಶಿ ಪ್ರಶಂಸನಾ ಪತ್ರ ಮತ್ತು ರೂ. 3,000/- ಪುರಸ್ಕಾರ ನೀಡಲಾಗುತ್ತದೆ.

ಗ್ರಾಮಪಂಚಾಯಿತಿ ಮಟ್ಟದ ಸಾಕ್ಷರ ಭಾರತ್ ಕಾರ್ಯಕ್ರಮದ ಅನುಷ್ಠಾನದಲ್ಲಿ ಕಾರ್ಯನಿರ್ವಹಣೆ, ಗುರಿ ಸಾಧನೆ ಆಧರಿಸಿ ಪ್ರತಿ ಜಿಲ್ಲೆಗೆ ಅರ್ಹ ಒಬ್ಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ  ಸಾಕ್ಷರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ  ಪ್ರಶಂಸನಾ ಪತ್ರ ಮತ್ತು ರೂ. 2,000/- ಪುರಸ್ಕಾರ ನೀಡಲಾಗುತ್ತದೆ.

ಗ್ರಾಮಪಂಚಾಯಿತಿ ಮಟ್ಟದ ಸಾಕ್ಷರ ಭಾರತ್ ಕಾರ್ಯಕ್ರಮದ ಅನುಷ್ಠಾನದಲ್ಲಿ ಕಾರ್ಯನಿರ್ವಹಣೆ, ದಕ್ಷತೆ ಮತ್ತು ಗುರಿ ಸಾಧನೆ ಆಧರಿಸಿ ಜಿಲ್ಲೆಗೆ ಒಬ್ಬ ಅರ್ಹ ಕಾರ್ಯಕ್ರಮ ಸಹಾಯಕ / ಸಂಯೋಜಕರಿಗೆ ಕಾರ್ಯಕ್ರಮ ಸಹಾಯಕ ಅಥವಾ ಜಿಲ್ಲಾ ಸಂಯೋಜಕ  ಪ್ರಶಂಸನಾ ಪತ್ರ ಮತ್ತು ರೂ. 3,000/- ಪುರಸ್ಕಾರ ನೀಡಲಾಗುತ್ತದೆ.

ಸರ್ಕಾರಿ ಅಥವಾ ಸರ್ಕಾರೇತರ ತಾಲ್ಲೂಕು ಸಂಯೋಜಕರಿಗೆ ನಿಗಧಿಪಡಿಸಿದ  ಕಾರ್ಯನಿರ್ವಹಣೆ, ದಕ್ಷತೆ ಮತ್ತು ಗುರಿ ಸಾಧನೆ ಆಧರಿಸಿ ಜಿಲ್ಲೆಗೆ ಒಬ್ಬ ಅರ್ಹ ಸಂಯೋಜಕರಿಗೆ ಉತ್ತಮ ತಾಲ್ಲೂಕು ಸಂಯೋಜಕ  ಪ್ರಶಂಸನಾ ಪತ್ರ ಮತ್ತು   ರೂ. 2,000/- ಪುರಸ್ಕಾರ ನೀಡಲಾಗುತ್ತದೆ.

ಗ್ರಾಮಪಂಚಾಯಿತಿಗೆ ನಿಗಧಿಪಡಿಸಿದ  ಗುರಿ, ಸಾಧನೆ ಲೋಕ ಶಿಕ್ಷಣ ಕೇಂದ್ರದ ಹತ್ತು ಹಲವು ಚುಟವಟಿಕೆಗಳ ನಿರ್ವಹಣೆ ಮತ್ತು ಕಾರ್ಯದಕ್ಷತೆಯನ್ನು ಆಧರಿಸಿ ಪ್ರತೀ ತಾಲ್ಲೂಕಿನ ಒಬ್ಬ ಅರ್ಹ ಪ್ರೇರಕರಿಗೆ ಉತ್ತಮ ಪ್ರೇರಕ  ಪ್ರಶಂಸನಾ ಪತ್ರ ಮತ್ತು ರೂ. 1,500/- ಪುರಸ್ಕಾರ ನೀಡಲಾಗುತ್ತದೆ.

ಪ್ರಶಂಸನಾ ಪತ್ರ ಪುರಸ್ಕಾರ :-

           ಕಲಿಕಾ ಕೇಂದ್ರದಲ್ಲಿ ದಾಖಲಾ 10 ಜನ ಕಲಿಕಾರ್ಥಿಗಳು ಸ್ವಯಂ ಸೇವಕರಿಗೆ ಪ್ರಾಥಮಿಕೆಯ ಎಲ್ಲಾ ಪಾಠಗಳನ್ನು ಕಲಿತು ಎನ್.ಐ.ಓ.ಎಸ್. ಪರೀಕ್ಷೆಯಲ್ಲಿ ಓದು, ಬರಹ ಮತ್ತು ಲೆಕ್ಕಾಚಾರ ವಿಭಾಗದಲ್ಲಿ ತೇರ್ಗಡೆಯಾಗಿರುವುದನ್ನು ಆಧರಿಸಿ 8 ಜನ ತೇರ್ಗಡೆಯಾದರೆ ಶ್ರೇಷ್ಠ, 6 ಜನ ತೇರ್ಗಡೆಯಾದರೆ ಅತ್ಯುತ್ತಮ, 1 ರಿಂದ 5 ಜನ ತೇರ್ಗಡೆಯಾದರೆ ಉತ್ತಮ ಸ್ವಯಂ ಸೇವಕರ ಪ್ರಶಂಸನಾ ಪತ್ರವನ್ನು ನೀಡಲಾಗುತ್ತದೆ.

            ಪ್ರತಿ ಕಲಿಕಾ ಕೇಂದ್ರದಲ್ಲಿ ದಾಖಲಾದ 10 ಜನ ಕಲಿಕಾರ್ಥಿಗಳು ಕಲಿತು ಎನ.ಐ.ಓ.ಎಸ್. ಪರೀಕ್ಷೆಯಲ್ಲಿ 9 ರಿಂದ 10 ಜನ ಉತ್ತೀರ್ಣರಾಗುವುದನ್ನು ಆಧರಿಸಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಇಬ್ಬರು ಸ್ವಯಂಸೇವಕರಿಗೆ ತಲಾ ರೂ. 1,000/-ಗಳ ಪುರಸ್ಕಾರ ನೀಡಲಾಗುತ್ತದೆ.

            ಪ್ರಶಂಸನಾ ಪತ್ರ ಮತ್ತು ಪುರಸ್ಕಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಅಥವಾ ಕಛೇರಿ ದೂರವಾಣಿ ಸಂಖ್ಯೆ : 224636 ನಲ್ಲಿ ಸಂಪರ್ಕಿಸಬಹುದಾಗಿದೆ.

ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವನ

 ಧಾರವಾಡ (ಕರ್ನಾಟಕ ವಾರ್ತೆ)ಮಾ.14: ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಎಲ್‌ಇಟಿಸಿ ಕಟ್ಟಡದಲ್ಲಿ ಕಳೆದ ಸಾಲಿನಿಂದ ಪ್ರಾರಂಭಿಸಿರುವ ಆದರ್ಶ ವಿದ್ಯಾಲಯಕ್ಕೆ 2012-13ನೇ ಸಾಲಿಗೆ 6ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಪ್ರವೇಶ ಪರೀಕ್ಷೆಯನ್ನು ಎಪ್ರೀಲ್ 15 ರಂದು ನಡೆಸಲಾಗುವುದು. ತಾಲೂಕಿನ ಅಂಗೀಕೃತ ಶಾಲೆಗಳಲ್ಲಿ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶ ಪರೀಕ್ಷೆ ಅರ್ಜಿಗಳನ್ನು ಮಾರ್ಚ್ 24 ರ ಒಳಗಾಗಿ ಶಾಲಾ ಕಚೇರಿಯಿಂದ ಉಚಿತವಾಗಿ ಪಡೆದು ಮಾರ್ಚ್ 26 ರ ಒಳಗಾಗಿ ಸಲ್ಲಿಸಲು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎಸ್.ಬಿ. ಬೆಂಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿಗಳನ್ನು www.ssakarnataka.gov.in ಹಾಗೂ www.schooleducation.kar.nic.in ಮೂಲಕವು ಪಡೆಯಬಹುದಾಗಿದೆ

ಮಾಜಿ ರಾಷ್ಟ್ರಪತಿ ಡಾ|| ಕಲಾಂ ಅವರ ಕಾರ್ಯಕ್ರಮ

 ಧಾರವಾಡ (ಕರ್ನಾಟಕ ವಾರ್ತೆ)ಮಾ.14: ಮಾಜಿ ರಾಷ್ಟ್ರಪತಿ ಡಾ|| ಎಪಿಜಿ ಅಬ್ದುಲ್ ಕಲಾಂ ಅವರು ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಶನಿವಾರ ದಿನಾಂಕ 17 ರಂದು ಮುಂಜಾನೆ 10 ಗಂಟೆಗೆ ಆಗಮಿಸುವರು. 10-45 ಕ್ಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಡಾ. ಎಸ್.ಡಬ್ಲೂ. ಮೆಣಸಿನಕಾಯಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಕೆಲಗೇರಿಯಲ್ಲಿನ ಜೆ.ಎಸ್.ಎಸ್. ಶಾಲಾ ಆವರಣದಲ್ಲಿ ಜರುಗುವ ಹಾಲಭಾವಿ ಅವರ ಶತಮಾನೋತ್ಸವ ಹಾಗೂ ಧಾರವಾಡದ ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮಧ್ಯಾಹ್ನ 1-15 ಗಂಟೆಗೆ ತಪೋವನದಲ್ಲಿ ಹಾಗೂ ಅಪರಾಹ್ನ 3-15 ಗಂಟೆಗೆ ಎಸ್‌ಡಿಎಂ ಇಂಜಿನೀಯರಿಂಗ್ ಕಾಲೇಜಿನಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹುಬ್ಬಳ್ಳಿಗೆ ತೆರಳುವರು. ಸಂಜೆ 4-15 ಗಂಟೆಗೆ ವಿಶೇಷ ವಿಮಾನದ ಮೂಲಕ ದಾವಣಗೆರೆಗೆ ಪ್ರಯಾಣಿಸುವರು.

 ದ್ವಿತೀಯ ಪಿಯು ಪರೀಕ್ಷೆ: ಜಾಗೃತ ದಳಗಳ ನೇಮಕ ಪರೀಕ್ಷಾ ಕೇಂದ್ರಗಳ ಸುತ್ತ ನಿರ್ಭಂಧಿತ ಪ್ರದೇಶದ ಘೋಷಣೆ

 ಧಾರವಾಡ (ಕರ್ನಾಟಕ ವಾರ್ತೆ)ಮಾ.14: ಜಿಲ್ಲೆಯಲ್ಲಿ ಮಾರ್ಚ್ 15 ರಿಂದ 31 ರ ವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, 22,308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಜಿಲ್ಲೆಯಲ್ಲಿ 06 ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರ್ತಿಸಲಾಗಿದೆ.  ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಅಂತರವನ್ನು ನಿರ್ಭಂದಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘೋಷಿಸಿದ್ದು, ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸಹ ಆದೇಶ ನೀಡಲಾಗಿದೆ.

             ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆಸಲು ಹಾಗೂ ಅಕ್ರಮ ತಪ್ಪಿಸಲು ಸ್ಥಾನಿಕ ಜಾಗೃತ ದಳಗಳು ಹಾಗೂ ಬೇರೆ ಜಿಲ್ಲೆಗಳ ಜಾಗೃತ ದಳಗಳು ಕಾರ್ಯನಿರ್ವಹಿಸಲಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಶ್ರೀ ಆರ್.ಹೆಚ್. ರಿತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

 ಕಿರುಧಾನ್ಯ ಖಾದ್ಯ ಸ್ಪರ್ಧೆ

 ಧಾರವಾಡ (ಕರ್ನಾಟಕ ವಾರ್ತೆ)ಮಾ.14: ಧಾರವಾಡ ಕೃಷಿ ವಿಶ್ವವಿದ್ಯಾಲಯವು ಸ್ಥಳೀಯ ಲಿಂಗಾಯತ ಟೌನ್‌ಹಾಲ್‌ನಲ್ಲಿ ಮಾರ್ಚ್ 27, 28 ರಂದು ಸಿರಿಧಾನ್ಯ ಮೇಳ ಆಯೋಜಿಸಿದೆ. ಅದರಂಗವಾಗಿ ಸೋಮವಾರ ದಿನಾಂಕ: 26 ರಂದು ಸಂಜೆ 6 ರಿಂದ 8 ರ ವರೆಗೆ ರಾಗಿ, ನವಣೆ, ಸಾವಿ, ಬರಗು, ಔಡಲು, ಸಜ್ಜೆ ಇತ್ಯಾದಿ ಕಿರುಧಾನ್ಯಗಳಿಂದ ತಯಾರಿತ ಖಾದ್ಯಗಳ ಸ್ಪರ್ಧೆ ನಡೆಸಲಿದೆ. ಖಾದ್ಯಗಳನ್ನು ಕಿರುಧಾನ್ಯ ಉಪಯೋಗಿಸಿ ಮನೆಯಲ್ಲಿಯೇ ತಯಾರಿಸಿ ತರಲು ತಿಳಿಸಲಾಗಿದೆ. ಆಸಕ್ತರು  0836-2446470 ಸಂಪರ್ಕಿಸಲು ತಿಳಿಸಲಾಗಿದೆ. 

 ವಿಶೇಷ ಲೇಖನ

ಗುಲಬರ್ಗಾ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗದ ಪಕ್ಷಿನೋಟ

            ಸಂಚಾರ ಜನಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಹಿಂದಿನ ಕಾಲದ ಕುದುರೆ, ಕತ್ತೆ, ಒಂಟೆ, ಎತ್ತು ಹಾಗೂ ಎತ್ತಿನ ಬಂಡಿ ಮೊದಲಾದ ಸಂಚಾರ ಸಾಧನಗಳು ಈಗ  ವಿರಳವಾಗಿವೆ. ನಾಗರಿಕತೆಯ ತೀವ್ರ ಬೆಳವಣಿಗೆಯಿಂದ  ಮೋಟರ್ ಸೈಕಲ್, ಕಾರು, ಜೀಪು, ಹಡಗು, ರೈಲು, ವಿಮಾನ, ಬಸ್ಸು, ಮುಂತಾದ ಆಧುನಿಕ ಸಂಚಾರ ಸಾಧನಗಳು ಈಗ ಹೆಚ್ಚು ಬಳಕೆಯಲ್ಲಿ ಬಂದಿವೆ. ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಒಂದು ಕಾಲದಲ್ಲಿ ಕೆಂಪು ಬಸ್ಸು ಎಂದೇ ಪ್ರಸಿದ್ಧಿ ಹೊಂದಿದ್ದವು. ಇಂದಿಗೂ ಜನಸಾಮಾನ್ಯರು ಹೆಚ್ಚಾಗಿ ಈ ಬಸ್ಸುಗಳ ಸಂಚಾರವನ್ನೇ ಅವಲಂಬಿಸಿದ್ದಾರೆ. ಇವರಿಗೆ ಉತ್ತಮ, ಸುಖಕರ, ದಕ್ಷ, ಸಮರ್ಪಕ, ವಿಶ್ವಾಸಾರ್ಹ, ಉತ್ತಮ ಗುಣಮಟ್ಟದ, ದುಬಾರಿಯಾಗದ ಮತ್ತು ಅಧಿಕ ಪ್ರಮಾಣದ ರಸ್ತೆ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ರಸ್ತೆ ಸಾರಿಗೆ ರಾಷ್ಟ್ರೀಕರಣಗೊಂಡು ರಾಜ್ಯದಲ್ಲಿ ವಿವಿಧ ಸಾರಿಗೆ ಸಂಸ್ಥೆಗಳು ಸ್ಥಾಪನೆಗೊಂಡಿವೆ. ಅವುಗಳಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ಒಂದು. ಈ ಸಂಸ್ಥೆಯ ಗುಲಬರ್ಗಾ ವಿಭಾಗವು   2011-12ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಸಾಧಿಸಿದ ಪಕ್ಷಿನೋಟ ಇಲ್ಲಿದೆ.

ಸಾರಿಗೆ ಸೌಲಭ್ಯ:

            ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗುಲಬರ್ಗಾ ವಿಭಾಗವು ಗುಲಬರ್ಗಾ ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಗುಲಬರ್ಗಾ, ಅಫಜಲಪುರ, ಆಳಂದ, ಜೇವರ್ಗಿ ತಾಲೂಕುಗಳನ್ನು ಒಳಗೊಂಡಿದ್ದು, ಗುಲಬರ್ಗಾ ಜಿಲ್ಲೆಯ ಜನಜೀವನದ ಅವಿಭಾಜ್ಯ ಅಂಗವಾಗಿ ಸರ್ವವ್ಯಾಪಿಯಾಗಿ ಬೆಳೆದು ಪ್ರಯಾಣಿಕರ ಅಪೂರ್ವ ಸೇವೆ ಮಾಡುತ್ತಿದೆ.  

ಗಣರಾಜ್ಯೋತ್ಸವ ದಿನವಾದ 2012ರ ಜನವರಿ 26ರಂದು ಗುಲಬರ್ಗಾ ವಿಭಾಗವನ್ನು ಬೇರ್ಪಡಿಸಿ ಗುಲಬರ್ಗಾ ಪೂರ್ವ ಮತ್ತು ಗುಲಬರ್ಗಾ ಪಶ್ಚಿಮವೆಂದು ಬೇರ್ಪಡಿಸಲಾಗಿದೆ.  ಗುಲಬರ್ಗಾ ಪೂರ್ವ ವಿಭಾಗದ ವ್ಯಾಪ್ತಿಗೆ ಗುಲಬರ್ಗಾ-1, ಚಿತ್ತಾಪುರ, ಕಾಳಗಿ, ಚಿಂಚೋಳಿ ಹಾಗೂ ಸೇಡಂ ಬಸ್ ಘಟಕಗಳು ಮತ್ತು ಗುಲಬರ್ಗಾ ಪಶ್ಚಿಮ ವಿಭಾಗಕ್ಕೆ ಗುಲಬರ್ಗಾ-2 ಮತ್ತು 3, ಆಳಂದ, ಆಫಜಲಪುರ ಹಾಗೂ ಜೇವರ್ಗಿ ಬಸ್ ಘಟಕಗಳು ಒಳಪಟ್ಟಿವೆ.

ಗುಲಬರ್ಗಾ ಜಿಲ್ಲೆಯಲ್ಲಿ 811 ಹಳ್ಳಿಗಳ ಪೈಕಿ 706 ಹಳ್ಳಿಗಳು ಸಮರ್ಪಕ ಬಸ್ ಸಾರಿಗೆ ಸೌಲಭ್ಯ ಪಡೆದಿವೆ. ಉಳಿದ ಜನವಸತಿ ರಹಿತ 36 ಗ್ರಾಮಗಳು ಮತ್ತು ರಸ್ತೆ ಸರಿಯಿಲ್ಲದ 69 ಗ್ರಾಮಗಳು ಸೇರಿದಂತೆ 105 ಹಳ್ಳಿಗಳು ಬಸ್ಸುಗಳ ಸೇವಾ ಸೌಲಭ್ಯ ಪಡೆದಿಲ್ಲ. ರಸ್ತೆ ಸರಿಯಿಲ್ಲದ ಗ್ರಾಮಗಳು ಉತ್ತಮ ರಸ್ತೆ ಸೌಲಭ್ಯ ಹೊಂದಿದ ಕೂಡಲೇ ಬಸ್ ಸೌಲಭ್ಯ ಒದಗಿಸಲು ಈ ಸಾರಿಗೆ ಸಂಸ್ಥೆ ಬದ್ಧವಾಗಿದೆ.

ಅನುಸೂಚಿಗಳ ಕಾರ್ಯಾಚರಣೆ:

            ಗ್ರಾಮೀಣ, ನಗರ ಪ್ರದೇಶ, ರಾಜಧಾನಿ ಮತ್ತು ಅಂತರರಾಜ್ಯಗಳಲ್ಲಿ ಹಲವಾರು ವೇಗದೂತ, ಸುಖಾಸೀನ ರಾಜಹಂಸ, ಅರೆ ಸುಖಾಸೀನ, ಹವಾನಿಯಂತ್ರಿತ ಐರಾವತ್ ಮತ್ತು ಕರೋನಾ ಸ್ಲೀಪರ್ ಕೋಚ್ ಮುಂತಾದ ಬಸ್ಸುಗಳನ್ನು ಓಡಿಸುತ್ತಿದೆ. ಈ ವಿಭಾಗದ ವ್ಯಾಪ್ತಿಯಲ್ಲಿ 9 ಬಸ್ ಘಟಕಗಳಿವೆ.  640 ವಾಹನಗಳಿಂದ 26 ನಗರ, 28 ಉಪನಗರ,227 ಗ್ರಾಮೀಣ ಹಾಗೂ 233 ವೇಗದೂತ ಬಸ್ ಸೇರಿದಂತೆ ಒಟ್ಟು 564 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಿ ಸರಾಸರಿ 2 ಲಕ್ಷ ಕಿ.ಮೀ. ಕ್ರಮಿಸುತ್ತಿದ್ದು, ಪ್ರತಿದಿನ ಸರಾಸರಿ 3 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ರಾಜ್ಯಗಳ ಪ್ರಮುಖ ಐತಿಹಾಸಿಕ, ಪ್ರವಾಸಿ ಮತ್ತು ಧಾರ್ಮಿಕ ನಗರಗಳಿಗೆ, ರಾಜ್ಯದ ಹಲವಾರು ಪ್ರಮುಖ ನಗರ, ಪ್ರವಾಸಿ ತಾಣಗಳಿಗೆ ಪ್ರತಿದಿನ 134 ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಖಾಸಗಿ ವಾಹನಗಳ ತೀವ್ರ ಪೈಪೋಟಿ ಇರುವುದರಿಂದ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಉತ್ತಮ ಪ್ರಯಾಣ ಸೇವೆ ಒದಗಿಸುವ ಉದ್ದೇಶದಿಂದ ಗುಲಬರ್ಗಾ-ಬೆಂಗಳೂರು, ಗುಲಬರ್ಗಾ-ಧಾರವಾಡ, ಗುಲಬರ್ಗಾ-ವಿಜಾಪುರ, ಗುಲಬರ್ಗಾ-ಬಸವಕಲ್ಯಾಣ ಮಾರ್ಗಗಳಲ್ಲಿ ಪ್ರೋತ್ಸಾಹದಾಯಕ ಪ್ರಯಾಣದರದಲ್ಲಿ ಸಾರಿಗೆಗಳ ಕಾರ್ಯಾಚರಣೆ ಮಾಡುತ್ತಿದೆ.

 ಸಾಧನೆ:

            ಗುಲಬರ್ಗಾ ವಿಭಾಗವು ಪ್ರತಿನಿತ್ಯ 2 ಲಕ್ಷ ಕಿ.ಮೀ. ಕಾರ್ಯಾಚರಣೆ ಮಾಡಿ ಸರಾಸರಿ 40 ಲಕ್ಷ ರೂ. ಆದಾಯ ಗಳಿಸುತ್ತಿದೆ. ಪ್ರಸಕ್ತ 2011-12ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ 107.69 ಕೋಟಿ ರೂ. ಆದಾಯ ಗಳಿಸಿದೆ. ವಿಭಾಗದಲ್ಲಿ 875 ಚಾಲಕರು, 526 ನಿರ್ವಾಹಕರು, 778 ಚಾಲಕ ಕಮ್ ನಿರ್ವಾಹಕರು ಹಾಗೂ 878 ಇತರ ಸಿಬ್ಬಂದಿಗಳು ಸೇರಿದಂತೆ ಒಟ್ಟು 3057 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.  ವಿಭಾಗದಲ್ಲಿರುವ ಕಾರ್ಮಿಕರಿಗೆ ಸೇವಾ ಬಡ್ತಿಗಳನ್ನು ನೀಡಲಾಗಿದೆಯಲ್ಲದೆ ಚಾಲಕ ನಿರ್ವಹಕರ ಕೊರತೆಯನ್ನು ಕಳೆದೆರಡು ವರ್ಷಗಳಲ್ಲಿ ಸತತ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಿ ಸರಿಪಡಿಸಲಾಗಿದೆ. ಪ್ರಸ್ತುತ ವರ್ಷ ವಿಭಾಗದಿಂದ ಪ್ರಾಥಮಿಕ ಶಾಲೆಯ 4780 ವಿದ್ಯಾರ್ಥಿಗಳಿಗೆ ಮತ್ತು 167 ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ, 3842 ಅಂಗವಿಕಲರಿಗೆ, 1156 ಅಂಧರಿಗೆ ರಿಯಾಯಿತಿ  ಬಸ್  ಪಾಸು, 3332  ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ  ಮತ್ತು 154171 ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ನೀಡಲಾಗಿದೆ. ಮಾನ್ಯತೆ ಪಡೆದ ಪತ್ರಕರ್ತರಿಗೂ ವಿವಿಧ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ.

ಮೂಲಸೌಕರ್ಯ ಮತ್ತು ಪ್ರಸಕ್ತ ಸಾಲಿನ ಯೋಜನೆಗಳು:

            ವಿಭಾಗದ ವ್ಯಾಪ್ತಿಯ ಚಿತ್ತಾಪುರ, ಕಮಲಾಪುರ ಮತ್ತು ಜೇವರ್ಗಿಯಲ್ಲಿ ಆಧುನಿಕ ಮಾದರಿಯ ನೂತನ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಅಫಜಲಪುರ ಮತ್ತು ದೇವಲಗಾಣಗಾಪುರಗಳಲ್ಲಿ ನೂತನ ಬಸ್ ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆಳಂದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. ಗುಲಬರ್ಗಾದಲ್ಲಿ 8 ನಗರ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ನಗರದ ಸೂಪರಮಾರ್ಕೆಟ್ ಮತ್ತು ಎಸ್‌ಟಿಬಿಟಿಯಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ವಿಭಾಗದ ಎಲ್ಲ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯಗಳ ಕೊರತೆಯಾಗದಂತೆ ಪ್ರಥಮಾದ್ಯತೆ ಮೇರೆಗೆ ಕ್ರಮ ಜರುಗಿಸಿದೆ. ಗುಲಬರ್ಗಾ ನಗರದ ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಕರ್ಯ ಒದಗಿಸಲು ನಗರ ಸಾರಿಗೆಯನ್ನು ಉನ್ನತೀಕರಿಸಿ ಹೊಸ 50 ನಗರ ಸಾರಿಗೆ ವಾಹನಗಳ ಕಾರ್ಯಾಚರಣೆ ಮಾಡಲು ಯೋಜಿಸಿದೆ. ಅಫಜಲಪುರ ಮತ್ತು ಕಾಳಗಿ ಘಟಕಗಳಿಂದ ಹೆಚ್ಚಿನ ವಾಹನಗಳ ಕಾರ್ಯಾಚರಣೆ ಮಾಡಲು, ಮುಂಬರುವ ದಿನಗಳಲ್ಲಿ ಗುಲಬರ್ಗಾದಲ್ಲಿ 4ನೇ ಹೊಸ ಬಸ್ ಘಟಕ ಪ್ರಾರಂಭಿಸಲು ಮತ್ತು ಗುಲಬರ್ಗಾ ನಗರದ ಒಟ್ಟು 28 ಸ್ಥಳಗಳಲ್ಲಿ ಅತ್ಯಾಧುನಿಕ ಮಾದರಿಯ ನಗರ ಸಾರಿಗೆ ಬಸ್ ತಂಗುದಾಣಗಳನ್ನು ನಿರ್ಮಿಸಲು ಯೋಜನೆಯನ್ನು ಹಮ್ಮಿಕೊಂಡಿದೆ.

115 ಬಸ್ ಚಾಲಕರಿಗೆ ಬೆಳ್ಳಿ ಪದಕ ವಿತರಣೆ:

           ಈಶಾನ್ಯ ಸಾರಿಗೆ ಸಂಸ್ಥೆಯ ಗ್ರಾಮೀಣ ಸಾರಿಗೆ ವಿಭಾಗದಲ್ಲಿ 5 ವರ್ಷ ಮತ್ತು ನಗರ ಸಾರಿಗೆ ವಿಭಾಗದಲ್ಲಿ 3 ಅಪಘಾತ ರಹಿತ ಬಸ್ ಚಾಲನೆ ಮಾಡಿದ ಬಸ್ ಚಾಲಕರು ಬೆಳ್ಳಿ ಪದಕ ಪಡೆಯಲು ಅರ್ಹರಿದ್ದು, 2000 ರೂ. ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಮತ್ತು 50 ರೂ. ಮಾಸಿಕ ಭತ್ಯೆ ನೀಡಲಾಗುವುದು. ವಿಭಾಗದಲ್ಲಿ 2006ರಿಂದ 2010ರವರೆಗೆ ಬೆಳ್ಳಿ ಪದಕ ಪಡೆಯದ ಒಟ್ಟು 115 ಬೆಳ್ಳಿ ಪದಕಗಳನ್ನು ವಿತರಿಸಲು ತೀರ್ಮಾನಿಸಿ ಅಪಘಾತ ರಹಿತ ಬಸ್ ನಡೆಸಿದ 115 ಚಾಲಕರಿಗೆ ಬೆಳ್ಳಿ ಪದಕಗಳನ್ನು ಜಲಸಂಪನ್ಮೂಲ ಹಾಗೂ ಗುಲಬರ್ಗಾ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅವರು ಜನವರಿ 26ರಂದು ವಿತರಿಸಿದರು. ವಿಭಾಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರತಿ ಘಟಕದಿಂದ 3 ನಿರ್ವಾಹಕರು, 3 ಚಾಲಕರು ಮತ್ತು 3 ತಾಂತ್ರಿಕ ಸಹಾಯಕರು ಸೇರಿದಂತೆ  9 ಜನರಂತೆ ಒಟ್ಟು 81 ಜನರ ಉತ್ತಮ ಸೇವೆಯನ್ನು ಗುರುತಿಸಿ ಪುರಸ್ಕಾರ ನೀಡಲಾಯಿತು. 

 ಬುಡಕಟ್ಟು ಜನಾಂಗದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

 ಮಂಗಳೂರು ಮಾರ್ಚ್ 14. (ಕರ್ನಾಟಕ ವಾರ್ತೆ):-ಕರ್ನಾಟಕ ಸರ್ಕಾರ, ಬೆಂಗಳೂರು,  ವಾರ್ತಾ ಇಲಾಖೆ ವತಿಯಿಂದ  ಬುಡಕಟ್ಟು ಜನರಲ್ಲಿರುವ ಶ್ರೀಮಂತ ಕಲಾ ಸಂಸ್ಕೃತಿಯನ್ನು ನಾಡಿಗೆ ಪರಿಚಯ ಮಾಡಿಸುವ ಸದುದ್ದೇಶದಿಂದ ಮಾರ್ಚ್ 15 ರಿಂದ ರಾಜ್ಯದ ಬೆಂಗಳೂರು ವಿಭಾಗ ಹಾಗೂ ಮೈಸೂರು ವಿಭಾಗದ ಜಿಲ್ಲೆಗಳ ಆಯ್ದ ಗ್ರಾಮಗಳಲ್ಲಿ 7 ದಿನಗಳ ಬುಡಕಟ್ಟು ಜನರ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 ಈ ಸಂಬಂಧ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾರ್ಚ್  15 ರಿಂದ 21 ರ ವರೆಗೆ ಮಂಗಳೂರು ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ  ಸಂಜೆ 5.00 ಗಂಟೆಗೆ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಯಳಂದೂರು ತಾಲ್ಲೂಕಿನ ಎರಕನಗದ್ದೆ ಕಾಲೊನಿಯ ಶ್ರೀ ಬಸವರಾಜ್‌ರವರ ಪುಷ್ಪಮಾಲೆ ತಂಡದವರಿಂದ ಸೋಲಿಗರ ನೃತ್ಯ ಕಾರ್‍ಯಕ್ರಮ ಆಯೋಜಿಸಲಾಗಿದೆ.

 15-3-12 ರಂದು ಸಂಜೆ 4.00 ಗಂಟೆಗೆ ಮುಚ್ಚೂರು ಗ್ರಾಮದ ಗುರಿಕಾರರ ಮನೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಅವರು ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್‌ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಜನಾರ್ಧನ ಗೌಡರು ವಹಿಸಲಿದ್ದು,,ಮುಖ್ಯ ಅತಿಥಿಗಳಾಗಿ ಮುಚ್ಚೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೋಹಿಣಿ,ಒಂಬುಡ್ಸ್‌ಮನ್ ಶ್ರೀ ಬಿ.ಶೀನ ಶೆಟ್ಟಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯ ನಿರ್ವಾಹಕ ಅಧಿಕಾರಿ ಡಾ. ಕೆ.ಎನ್.ವಿಜಯಪ್ರಕಾಶ್ ಮುಂತಾದವರು ಭಾಗವಹಿಸಲಿದ್ದಾರೆ.

ದಿನಾಂಕ 16-3-12 ರಂದು ಕೋಣಾಜೆ ಗ್ರಾಮ ಪಂಚಾಯತ್ ಆವರಣದಲ್ಲಿ,17 ರಂದು ಎದುರುಪದವು ಗ್ರಾಮ ಪಂಚಾಯತ್ ಆವರಣದಲ್ಲಿ,18 ರಂದು ಮದ್ಯಪದವು ಗ್ರಾಮ ಪಂಚಾಯತ್ ಆವರಣದಲ್ಲಿ,19 ರಂದು ಬಾಳೆಪುಣಿ ಗ್ರಾಮ ಪಂಚಾಯತ್ ಆವರಣದಲ್ಲಿ,20 ರಂದು ಸಾಲೆತ್ತೂರು ಗ್ರಾಮ ಪಂಚಾಯತ್ ಆವರಣದಲ್ಲಿ ಹಾಗೂ 21  ರಂದು ಮಂಗಳೂರು ಪುರಭವನದ ಹೊರ ಆವರಣದಲ್ಲಿ ಸೋಲಿಗರ ನೃತ್ಯ ಕಾರ್‍ಯಕ್ರಮವನ್ನು ಏರ್ಪಡಿಸಲಾಗಿದೆ.

ಕಡವು ಹರಾಜು

ಮಂಗಳೂರು, ಮಾರ್ಚ್.14 (ಕರ್ನಾಟಕ ವಾರ್ತೆ):-ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಂಗಳೂರು ವಲಯ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಧಕ್ಕೆ, ಬೊಕ್ಕಪಟ್ಟಣ ಮರಳು ದಿಣ್ಣೆ ಪ್ರದೇಶಗಳಲ್ಲಿ ಇಲಾಖಾ ವತಿಯಿಂದ ಒದಗಿಸುವ ಸ್ವಂತ ಮರದ, ಫೈಬರ್, ಉಕ್ಕಿನ ಯಂತ್ರ ಚಾಲಿತ ನಾವೆ ಅಥವಾ ಮೂಗ ನಾವೆಯನ್ನು ಇಟ್ಟು ಕಡವು ನಡೆಸುವ ಹಕ್ಕನ್ನು ಕಡವು ನಿರೀಕ್ಷಕರು ಮಂಗಳೂರು ವಲಯ ಹೊನ್ನಾವರ ಅವರು ಹರಾಜು ಮೂಲಕ ನೀಡಲಿರುವರು.

ಹೆಚ್ಚಿನ ಮಾಹಿತಿಗೆ ಕಡವು ನಿರೀಕ್ಷಕರ ಕಾರ್ಯಾಲಯ ಹೊನ್ನಾವರ ಇವರನ್ನು ಸಂಪರ್ಕಿಸಬಹುದು.

ದ್ವಿತೀಯ ಸುತ್ತಿನ ಗ್ರಾಮಸಭೆ

ಮಂಗಳೂರು, ಮಾರ್ಚ್.14 (ಕರ್ನಾಟಕ ವಾರ್ತೆ):-ಸಜೀಪಮುನ್ನೂರು ಗ್ರಾಮ ಪಂಚಾಯತ್‌ನಲ್ಲಿ 15.3.12ನೇ ಗುರುವಾರ ಅಪರಾಹ್ನ 2.30ಕ್ಕೆ ಸಜೀಪಮುನ್ನೂರು ಗ್ರಾಮಪಂಚಾಯತ್ ಕಚೇರಿಯಲ್ಲಿ 11-12ನೇ ಸಾಲಿನ ಸಜೀಪಮುನ್ನೂರು ಗ್ರಾಮದ ದ್ವಿತೀಯ ಸುತ್ತಿನ ಗ್ರಾಮಸಭೆ ನಡೆಯಲಿದೆ.

ತರಬೇತಿ

ಮಂಗಳೂರು, ಮಾರ್ಚ್.14 (ಕರ್ನಾಟಕ ವಾರ್ತೆ):- ಕೃಷಿ ವಿಜ್ಞಾನ ಕೇಂದ್ರ (ದ.ಕ) ಕಂಕನಾಡಿ (ಎಕ್ಕೂರು) ಇಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಕೀಟರೋಗ ನಿರ್ವಹಣೆ ಮತ್ತು ಭತ್ತದ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು 16.3.12ರಂದು ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯಲ್ಲಿ ಕೇಂದ್ರದ ತಜ್ಞರಿಂದ ಅಡಿಕೆ, ತೆಂಗು, ಬಾಳೆ, ಗೇರು ಮತ್ತು ಮಲ್ಲಿಗೆ ಬೆಳೆಗಳಲ್ಲಿ ಸಮಗ್ರ ಕೀಟರೋಗ ನಿರ್ವಹಣೆ ಹಾಗೂ ಭತ್ತದ ಯಾಂತ್ರೀಕೃತ ಕೃಷಿ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು.

ಬಹಿರಂಗ ಹರಾಜು

ಮಂಗಳೂರು, ಮಾರ್ಚ್.14 (ಕರ್ನಾಟಕ ವಾರ್ತೆ):-ತೋಟಗಾರಿಕಾ ಇಲಾಖೆ ಬಂಟ್ವಾಳ ತಾಲೂಕಿನಲ್ಲಿ 1-1-12 ರಿಂದ 30-6-12ರ ಅವಧಿಗೆ ಮಾವು ಫಸಲನ್ನು ದಿನಾಂಕ 26.3.12ರಂದು ಬೆಳಗ್ಗೆ 11.30ಕ್ಕೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಆಸಕ್ತರು ಭಾಗವಹಿಸಬಹುದಾಗಿದ್ದು, ವಿಲೇವಾರಿ ಷರತ್ತುಗಳು ಹಾಗೂ ಹೆಚ್ಚಿನ ವಿವರಗಳಿಗೆ ತೋಟಗಾರಿಕಾ ಉಪನಿರ್ದೇಶಕರು ಮಂಗಳೂರು ಇವರನ್ನು ಸಂಪರ್ಕಿಸಬಹುದು.

 ಲೆಕ್ಕಪರಿಶೋಧನೆಗೊಳ್ಳದ ಸಹಕಾರ ಸಂಘಗಳ ರದ್ದತಿ

 ಧಾರವಾಡ (ಕರ್ನಾಟಕ ವಾರ್ತೆ)ಮಾ.14: ಸ್ಥಗಿತ ಹಾಗೂ ಅವಸಾನ ಹೊಂದಿದ ಸಹಕಾರ ಸಂಘಗಳ ದಾಖಲೆಗಳನ್ನು ವಶದಲ್ಲಿಟ್ಟುಕೊಂಡವರು ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಿಂದ ಲೆಕ್ಕಪರಿಶೋದನೆಯನ್ನು ಪೂರೈಸಿಕೊಳ್ಳುವಂತೆ ತಿಳಿಸಲಾಗಿದೆ. ಇದಕ್ಕೆ ತಪ್ಪಿದಲ್ಲಿ ನಿಯಮಗಳನುಸಾರ ಅಂತಹ ಸಂಘಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

 ಜಿಲ್ಲೆಯಲ್ಲಿ ಬುಡಕಟ್ಟು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ

 ಧಾರವಾಡ (ಕರ್ನಾಟಕ ವಾರ್ತೆ)ಮಾ.14: ವಾರ್ತಾ ಇಲಾಖೆಯು ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ದಿನಾಂಕ: 15 ರಿಂದ 21 ರ ವರೆಗೆ ಬುಡಕಟ್ಟು ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಕಲಾವಿದರ ಸಂಘದ ತಂಡವು ಇದರಲ್ಲಿ ಪಾಲ್ಗೊಳ್ಳಲಿದೆ. ಸಾಕ್ಷರತೆ ಹಾಗೂ ಮಹಿಳಾ ಸಬಲೀಕರಣ ಕುರಿತ ಸಂದೇಶ ಸಾರುವ ಆಕಾಶಬುಟ್ಟಿ ಎಂಬ ನಾಟಕವು ಸೂಚಿತ ದಿನ ಹಾಗೂ ಗ್ರಾಮಗಳಲ್ಲಿ ಸಂಜೆ 6-30 ಕ್ಕೆ ಪ್ರದರ್ಶಿತಗೊಳ್ಳಲಿದೆ. ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ದಿನಾಂಕ: 15 ರಂದು, ಯಾದವಾಡದಲ್ಲಿ 16 ರಂದು, ನವಲಗುಂದ ತಾಲೂಕಿನ ಮೊರಬದಲ್ಲಿ 17 ರಂದು,  ಕಲಘಟಗಿ ತಾಲೂಕಿನ ತಬಕದ ಹೊನ್ನಿಹಳ್ಳಿಯಲ್ಲಿ 18 ರಂದು, ಹಿರೇಹೊನ್ನಳ್ಳಿಯಲ್ಲಿ 19 ರಂದು, ಕುಂದಗೋಳ ತಾಲೂಕಿನ ಹರ್ಲಾಪೂರದಲ್ಲಿ 20 ರಂದು ಹಾಗೂ ಹುಬ್ಬಳ್ಳಿಯ ಗ್ಲಾಸ್‌ಹೌಸ್‌ನಲ್ಲಿ ದಿನಾಂಕ: 21 ರಂದು ಸಂಜೆ 6-30 ಕ್ಕೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.  ಸಂಬಂಧಿತ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ವಿಶೇಷವಾಗಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಕಲಾವಿದರನ್ನು ಪ್ರೋತ್ಸಾಹಿಸಲು ಕೋರಿದೆ.

ನಾಗರೀಕ ಸೇವಾ ಖಾತರಿ ಅಧಿನಿಯಮ ಕಾರ್ಯಾಗಾರ            

            ಶಿವಮೊಗ್ಗ, ಮಾರ್ಚ್ 14 (ಕರ್ನಾಟಕ ವಾರ್ತೆ)- ಮಾರ್ಚ್ 16 ಮತ್ತು 17ರಂದು ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ‘ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮ-2011’ರ ಅನುಷ್ಠಾನದ ಕುರಿತು 2 ದಿನಗಳ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಶ್ರೀ ಎಂ.ವಿ. ವೇದಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಸಂಜಯ್ ಬಿಜ್ಜೂರ್‌ರವರು ಈ ಕಾರ್ಯಾಗಾರದಲ್ಲಿ ಭಾಗವಹಿಸುವರು.

ಮಡಿಕೇರಿಯಲ್ಲಿ ಭೂಸೇನೆ ನೇಮಕಾತಿ ರ್‍ಯಾಲಿ

            ಶಿವಮೊಗ್ಗ, ಮಾರ್ಚ್ 14 (ಕರ್ನಾಟಕ ವಾರ್ತೆ)- ಭಾರತೀಯ ಭೂಸೇನೆಯಲ್ಲಿ ಖಾಲಿ ಇರುವ ಸಿಪಾಯಿ ಕ್ಲರ್ಕ್, ಸಿಪಾಯಿ ಟೆಕ್ನಿಕಲ್, ಸಿಪಾಯಿ ನರ್ಸಿಂಗ್ ಸಹಾಯಕ, ಸಿಪಾಯಿ ಟ್ರೇಡ್ಸ್‌ಮನ್ ಹುದ್ದೆಗಳ ಭರ್ತಿಗಾಗಿ ಏಪ್ರಿಲ್ 1 ರಿಂದ 7ರ ವರೆಗೆ ಕೊಡಗು ಜಿಲ್ಲೆ ಮಡಿಕೇರಿಯ ತಿಮ್ಮಯ್ಯ ಸ್ಟೇಡಿಯಂನಲ್ಲಿ ನೇಮಕಾತಿ ರ್‍ಯಾಲಿ ನಡೆಯಲಿದೆ.

            ಅಭ್ಯರ್ಥಿಗಳು 171/2 ಯಿಂದ 23ವರ್ಷ ವಯೋಮಿತಿಯವರಾಗಿರಬೇಕು. ಸಿಪಾಯಿ ಕ್ಲರ್ಕ್, ಸಿಪಾಯಿ ಟೆಕ್ನಿಕಲ್ ಹುದ್ದೆಗೆ ಅಭ್ಯರ್ಥಿಯು ದ್ವಿತೀಯ ಪಿಯುಸಿಯಲ್ಲಿ ಆಂಗ್ಲಭಾಷೆ, ಗಣಿತ/ಅಕೌಂಟ್ಸ್/ಬುಕ್ ಕೀಪಿಂಗ್ ವಿಷಯಗಳನ್ನು ವ್ಯಾಸಂಗ ಮಾಡಿ ಪ್ರತಿ ವಿಷಯದಲ್ಲೂ ಕನಿಷ್ಠ ಶೇ. 40ರಷ್ಟು ಅಂಕ ಗಳಿಸಿದ್ದು, ಒಟ್ಟಾರೆ ಶೇಕಡ 50ರಷ್ಟು ಅಂಕ ಗಳಿಸಿರಬೇಕು.

            ಸಿಪಾಯಿ ಟೆಕ್ನಿಕಲ್ ಹುದ್ದೆಗೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಆಂಗ್ಲ ಭಾಷೆಯನ್ನು ವ್ಯಾಸಂಗ ಮಾಡಿ ಉತ್ತೀರ್ಣರಾಗಿರಬೇಕು. ಸಿಪಾಯಿ ನರ್ಸಿಂಗ್ ಸಹಾಯಕ ಹುದ್ದೆಗೆ ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಶೇಖಡ 40ರಷ್ಟು ಅಂಕಗಳೊಂದಿಗೆ ಐಚ್ಫಿಕ ವಿಷಯಗಳಾದ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಹಾಗೂ ಆಂಗ್ಲಭಾಷೆಯನ್ನು ವ್ಯಾಸಂಗ ಮಾಡಿದ್ದು, ಒಟ್ಟಾರೆ ಶೇ. 50ರಷ್ಟು ಅಂಕ ಗಳಿಸಿರಬೇಕು. ಬಿಎಸ್ಸಿ ಪದವಿ ಪಡೆದಿರುವವರು ಜೀವಶಾಸ್ತ್ರ  ಮತ್ತು ಆಂಗ್ಲಭಾಷೆಯಲ್ಲಿ ವ್ಯಾಸಂಗ ಮಾಡಿರಬೇಕು. ಸಿಪಾಯಿ ಟ್ರೇಡ್ಸ್‌ಮನ್ ಹುದ್ದೆಗಳಿಗೆ 10ನೇ ತರಗತಿಯಲ್ಲಿ ಅಥವಾ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

            ರ್‍ಯಾಲಿಯಲ್ಲಿ ಭಾಗವಹಿಸಲಿಚ್ಚಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಮೂಲ ಪ್ರಮಾಣಪತ್ರಗಳು, ಪಾಸ್‌ಪೋರ್ಟ್ ಅಳತೆಯ 12 ಬಹುವರ್ಣದ ಭಾವಚಿತ್ರ, ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ, ಗುಣ-ನಡತೆಯ ಪ್ರಮಾಣ ಪತ್ರ, ಎನ್‌ಸಿಸಿ, ಆಟೋಟದ ಪ್ರಮಾಣ ಪತ್ರಗಳು ಹಾಗೂ ಇತರೆ ಅಗತ್ಯ ದಾಖಲಾತಿಗಳನ್ನು ದ್ವಿಪ್ರತಿಗಳಲ್ಲಿ ಸಿದ್ದಪಡಿಸಿಕೊಂಡು ಹಾಜರಾಗಬಹುದಾಗಿದೆ. ರ್‍ಯಾಲಿಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಬಿಜಾಪುರ ಹಾಗೂ ದಾರವಾಡ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ನೇಮಕಾತಿ ಘಟಕದ ಪ್ರಕಟಣೆ ತಿಳಿಸಿದೆ.

ವಿಶ್ವ ಗ್ರಾಹಕರ ದಿನಾಚರಣೆ                             

            ಶಿವಮೊಗ್ಗ, ಮಾರ್ಚ್ 14(ಕರ್ನಾಟಕ ವಾರ್ತೆ)-  ಜಿಲ್ಲಾಡಳಿತ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ವಾರ್ತಾ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಮಾಹಿತಿ ಕೇಂದ್ರ ಹಾಗೂ ಜಿಲ್ಲಾ ಬಳಕೆದಾರರ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 19ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ‘ವಿಶ್ವ ಗ್ರಾಹಕರ ದಿನಾಚರಣೆ’ಯನ್ನು ಏರ್ಪಡಿಸಲಾಗಿದೆ.

            ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶ್ರೀ ಎಂ.ವಿ. ವೇದಮೂರ್ತಿ ಅವರು ಉದ್ಘಾಟಿಸುವರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಶ್ರೀ ಮಹಿಪಾಲ ದೇಸಾಯಿ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಶ್ರೀಮತಿ ಪ್ರೇಮಾ ಈ., ಜಿಲ್ಲಾ ಬಳಕೆದಾರರ ವೇದಿಕೆ ಅಧ್ಯಕ್ಷ ಬಿ.ವಿ. ಗೋಪಾಲಕೃಷ್ಣ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಾರ್ತಾಧಿಕಾರಿ ದೇವರಾಜಯ್ಯ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಂ.ಎಸ್. ರಾಮಯ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಿ.ಆರ್. ವಿಶ್ವನಾಥ್ ಉಪಸ್ಥಿತರಿರುವರು.

ಸಕಾಲ- ಸ್ವಯಂ ಸೇವೆಗೆ ಅವಕಾಶ

            ಶಿವಮೊಗ್ಗ, ಮಾರ್ಚ್ 14(ಕರ್ನಾಟಕ ವಾರ್ತೆ)- ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಮತ್ತು ಸಹಾಯ ನೀಡಲು ತೆರೆಯಲಾಗಿರುವ ಸಹಾಯವಾಣಿ ಕೇಂದ್ರಗಳಲ್ಲಿ (Help Desk) ಸ್ವಯಂ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

            ನಿವೃತ್ತ ಸರ್ಕಾರಿ ನೌಕರರು, ಗ್ರಾಹಕ ಸೇವಾ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಸ್ವಯಂ ಸೇವಕರು ಈ ಸಹಾಯವಾಣಿ ಕೇಂದ್ರಗಳಲ್ಲಿ ನಾಗರಿಕ ಸೇವಾ ಖಾತರಿ ಅಧಿನಿಯಮದ ಬಗ್ಗೆ ಮಾಹಿತಿ ನೀಡುವಲ್ಲಿ ಕಾರ್ಯನಿರ್ವಹಿಸಬೇಕಿದೆ. ಆಸಕ್ತರು ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಶಿವಮೊಗ್ಗ ಇಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು.

           ಸ್ವಯಂ ಸೇವಕರಿಗೆ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮದ ಕುರಿತಂತೆ ಕಾರ್ಯಾಗಾರ ಏರ್ಪಡಿಸುವ ಮೂಲಕ ಕಾಯ್ದೆಯ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿ ದಿನಾಂಕವನ್ನು ನಂತರ ತಿಳಿಸಲಾಗುವುದು. 

 ಲೋಕೋಪಯೋಗಿ ಸಚಿವರ ಪ್ರವಾಸ                  

            ಶಿವಮೊಗ್ಗ, ಮಾರ್ಚ್ 14(ಕರ್ನಾಟಕ ವಾರ್ತೆ)- ಲೋಕೋಪಯೋಗಿ ಸಚಿವರಾದ ಶ್ರೀ ಸಿ.ಎಂ. ಉದಾಸಿ ಅವರು ಮಾರ್ಚ್ 15ರಂದು ಮಧ್ಯಾಹ್ನ 3.30ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ, ಶಿವಮೊಗ್ಗ ಲೋಕೋಪಯೋಗಿ ಹಾಗೂ ವಿಶೇಷ ವಿಭಾಗದ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ನಂತರ ಅವರು ಸಂಜೆ 6.30ಕ್ಕೆ ಶಿವಮೊಗ್ಗದಿಂದ ಹಾನಗಲ್‌ಗೆ ಪ್ರಯಾಣ ಬೆಳೆಸುವರು.

ಬುಡಕಟ್ಟು ಜನಾಂಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು, ಮಾ. 14 (ಕರ್ನಾಟಕ ವಾರ್ತೆ) - ವಾರ್ತಾ ಇಲಾಖೆ, ಮೈಸೂರು ವತಿಯಿಂದ ಮಾರ್ಚ್ 15 ರಿಂದ ಮಾರ್ಚ್ 21ರವರೆಗೆ ಮೈಸೂರು ತಾಲ್ಲೂಕಿನ ಸಿಂಧುವಳ್ಳಿ, ಹಾರೋಹಳ್ಳಿ, ನಾಗನಹಳ್ಳಿ, ಬೀರಿಹುಂಡಿ, ಆನಂದೂರು, ಜಯಪುರ ಹಾಗೂ ಹೊಸಹುಂಡಿಗಳಲ್ಲಿ ಬುಡಕಟ್ಟು ಜನಾಂಗದ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 15ರಂದು ಸಂಜೆ 5 ಗಂಟೆಗೆ ಮೈಸೂರು ತಾಲ್ಲೂಕಿನ ಸಿಂಧುವಳ್ಳಿ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ರೀ ಜವರೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಸಿಂಧುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಕುಮಾರ್ ಅಧ್ಯಕ್ಷತೆ ವಹಿಸುವರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಿದ್ದರಾಜು, ಸಿಂಧುವಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಶಿವನಂಜಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಿ ಕವಿತ ಮುಖ್ಯ ಅತಿಥಿಗಳಾಗಿ ಆಗಮಿಸುವರು.

 ಮೈಸೂರು ಜಿಲ್ಲೆಯ ಪರಿಶಿಷ್ಟ ಜಾತಿ ವಿದ್ಯಾಸಂಸ್ಥೆಯ ಆಟದ ಮೈದಾನದ ಅಭಿವೃದ್ದಿಗೆ ಅನುದಾನ ಮಂಜೂರಾತಿ

ಮೈಸೂರು, ಮಾ. 14 (ಕರ್ನಾಟಕ ವಾರ್ತೆ) - ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿಗೆ ಸೇರಿ ವಿದ್ಯಾಸಂಸ್ಥೆಯ ಆಟದ ಮೈದಾನವನ್ನು ಅಭಿವೃದ್ದಿ ಪಡಿಸಲು ಯುವಜನ ಸೇವಾ ಮತ್ತು  ಕ್ರೀಡಾ ಇಲಾಖೆಯಿಂದ ರೂ. 4.86 ಲಕ್ಷಗಳ ಅನುದಾನ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬಯಸುವ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾಸಂಸ್ಥೆಯು ಕಳೆದ ಐದು ವರ್ಷಗಳ ಹಿಂದೆ ನೊಂದಣಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು. ಶಾಲೆಯ ಕ್ರೀಡಾಪಟುಗಳು ಕ್ರೀಡಾರಂಗದಲ್ಲಿ ಸಾಧನೆ ಮಾಡಿರುವ ವರದಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ವರದಿ, ವಿದ್ಯಾಸಂಸ್ಥೆಯ ಕಳೆದ ಐದು ವರ್ಷಗಳ ಲೆಕ್ಕ ತಪಾಸಣಾ ವರದಿ, ಶಾಲೆಯ ಒಡೆತನದಲ್ಲಿರುವ ಜಮೀನಿನ ದಾಖಲೆ, ಆಟದ ಮೈದಾನವನ್ನು ಅಭಿವೃದ್ದಿಪಡಿಸುವ ಅಂದಾಜುಪಟ್ಟಿ ಮತ್ತು ನೀಲನಕ್ಷೆ ಮುಂತಾದವುಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ದಿನಾಂಕ 17.3.2012ರೊಳಗಾಗಿ ಈ ಕಚೇರಿಗೆ ಸಲ್ಲಿಸಲು  ಹಾಗೂ ಹೆಚ್ಚಿನ ಮಾಹಿತಿಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಾಮುಂಡಿವಿಹಾರ ಕ್ರೀಡಾಂಗಣ,  ನಜರ್‌ಬಾದ್, ಮೈಸೂರು ಇವರಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 0821-2564179 ಮೂಲಕ ಪಡೆಯಬಹುದಾಗಿದೆ.

ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

 ಮೈಸೂರು, ಮಾ. 14 (ಕರ್ನಾಟಕ ವಾರ್ತೆ) - ಎಲ್ಲಾ ಶಾಲೆಗಳಲ್ಲಿ 5ನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾಧ್ಯಮದ ಆದಶವಿದ್ಯಾನಿಲಯಗಳ ಆಯ್ಕೆ ಪರೀಕ್ಷೆಯನ್ನು ದಿನಾಂಕ 15.04.2012ರಂದು ನಡೆಸಲಾಗುತ್ತದೆ.

ಪ್ರವೇಶ ಬಯಸುವವರು ಅರ್ಜಿ ನಮೂನೆಗಳನ್ನು ಸಂಬಂಧಿಸಿದ ತಾಲ್ಲೂಕಿನ ಬಿ.ಇ.ಓ. ಕಚೇರಿ ಹಾಗೂ ಆದರ್ಶವಿದ್ಯಾಲಯದಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 26.03.2012ರಂದು ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ಶ್ರೀ ಬಿ. ಕೆ. ಬಸವರಾಜ, ಉಪನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಸ್ಪಷ್ಠೀಕರಣ

 ಮೈಸೂರು, ಮಾ. 14 (ಕರ್ನಾಟಕ ವಾರ್ತೆ) - ಕೆ.ಆರ್.ನಗರ ತಾಲ್ಲೂಕಿನಲ್ಲಿ 2 ಪಶು ಆಸ್ಪತ್ರೆಗಳು, 12 ಪಶು ಚಿಕಿತ್ಸಾಲಯಗಳು, ಒಂದು ಸಂಚಾರಿ ಪಶು ಚಿಕಿತ್ಸಾಲಯ, 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಮತ್ತು ಒಂದು ಪಾಲಿಕ್ಲಿನಿಕ್ ಕಾರ್ಯನಿರ್ವಹಿಸುತ್ತಿವೆ. ಅಂತೆಯೇ 2 ಪಶು ಆಸ್ಪತ್ರೆಗಳಲ್ಲಿ ಇಬ್ಬರು ಸಹಾಯಕ ನಿರ್ದೇಶಕರು ಹಾಗೂ 12 ಪಶು ಚಿಕಿತ್ಸಾಲಯಗಳ ಪೈಕಿ 7ರಲ್ಲಿ ಪಶುವೈದ್ಯಾಧಿಕಾರಿಗಳಿದ್ದು, 5 ಪಶು ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇರುತ್ತದೆ ಮತ್ತು 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ 9 ಜನ ಹಿರಿಯ ಪಶು ಪರೀಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಲಿ ಇರುವ ಪಶು ವೈದ್ಯಾಧಿಕಾರಿಗಳ ಹುದ್ದೆಯನ್ನು ಭರ್ತಿ ಮಾಡುವಂತೆ ಆಯುಕ್ತರು, ಪಶುಪಾನಾ ಇಲಾಖೆ, ಬೆಂಗಳೂರು ಇವರಿಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ ಪಶುವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇರುವ ಪಶುಚಿಕಿತ್ಸಾಲಯಗಳಲ್ಲಿ ಅರೆತಾಂತ್ರಿಕ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಿದ್ದು, ರೈತರ ಜಾನುವಾರುಗಳ ಚಿಕಿತ್ಸೆಗೆ ಯಾವುದೇ ರೀತಿಯ ಕುಂದುಂಟಾಗಿರುವುದಿಲ್ಲ.

ಕೆ.ಆರ್. ನಗರ ಪಶು ಆಸ್ಪತ್ರೆ ಆವರಣದಲ್ಲಿರುವ ಪಾಲಿಕ್ಲಿನಿಕ್‌ಗೆ ಕ್ಷ-ಕಿರಣ ಯಂತ್ರ ಸೇರಿದಂತೆ ಅಗತ್ಯವಿರುವ  ಉಪಕರಣಗಳನ್ನು 2011-12ನೇ ಸಾಲಿನ ಆರ್ಥಿಕ ವರ್ಷದಲ್ಲಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ.

ಮುಂದುವರೆದು ಹನಸೋಗೆ, ಪಶುಪತಿ ಮತ್ತು ಮಿರ್ಲೆ ಪಶುವೈದ್ಯ ಸಂಸ್ಥೆಗಳಿಗೆ ಹೊಸದಾಗಿ ಕಟ್ಟಡವನ್ನು ನಿರ್ಮಿಸಲು 2012-13ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಲಾಗಿದೆ ಎಂದು ಉಪನಿರ್ದೇಶಕರು, ಪಶುಪಾಲನಾ ಇಲಾಖೆ, ಮೈಸೂರು ಇವರು ಸ್ಪಷ್ಠೀಕರಣ ನೀಡಿದ್ದಾರೆ.

 ಸರ್ಕಾರಿ ಪ್ರೌಢಶಾಲೆ: ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ವೇಳಾಪಟ್ಟಿ

ಮೈಸೂರು, ಮಾ. 14 (ಕರ್ನಾಟಕ ವಾರ್ತೆ) - ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಹೆಚ್ಚುವರಿ ಶಿಕ್ಷಕರ ಹೆಚ್ಚುವರಿ ಖಾಲಿ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ವೇಳಾಪಟ್ಟಿಯನ್ನು ಸಾರ್ವಜನಿಕರ ಶಿಕ್ಷಣ ಇಲಾಖೆ ಉಪನಿರ್ದೇಶಕರು ಈ ಕೆಳಕಂಡಂತೆ ತಿಳಿಸಿದ್ದಾರೆ.

ಹೆಚ್ಚುವರಿ ಹುದ್ದೆ / ಶಿಕ್ಷಕರ ಪಟ್ಟಿಗೆ ಆಕ್ಷೇಪಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡುವ ದಿನಾಂಕ 16.3.2012ರ ಸಂಜೆ 5 ಗಂಟೆ (ಕ್ರಮ - ಕ್ಷೇತ್ರ ಶಿಕ್ಷಣಾಧಿಕಾರಿಗಳು).

ಅಂತಿಮಗೊಳಿಸಲಾದ ಹೆಚ್ಚುವರಿ ಹುದ್ದೆ / ಶಿಕ್ಷಕರ ಪಟ್ಟಿಯನ್ನು ಶಿಕ್ಷಕರುಗಳಿಂದ ಪಡೆದು ಸರಿಪಡಿಸಿ ದೃಢೀಕರಿಸಿ ಈ ಕಚೇರಿಗೆ ನೀಡುವ ದಿನಾಂಕ 17.3.2012ರ ಸಂಜೆ 5 ಗಂಟೆ (ಕ್ರಮ - ಕ್ಷೇತ್ರ ಶಿಕ್ಷಣಾಧಿಕಾರಿಗಳು).

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

ಬಹಿರಂಗ ಹರಾಜು

 ಮೈಸೂರು, ಮಾ. 14 (ಕರ್ನಾಟಕ ವಾರ್ತೆ) - ಮೈಸೂರು ಜಿಲ್ಲಾ ಪೋಲೀಸ್ ಘಟಕಕ್ಕೆ ಸೇರಿದ ಅನುಪಯುಕ್ತವಾದ ವಿವಿಧ ಗಾತ್ರದ 154 ಟೈರು ಮತ್ತು 154 ಟ್ಯೂಬುಗಳು, ಅಂದಾಜು 400 ಕೆಜಿ ಹಳೆಯ ಬಿಡಿಭಾಗಗಳು, ಅಂದಾಜು 210 ಲೀಟರ್ ಬರ್ನಿಂಗ್ ಆಯಿಲ್ ಮತ್ತು 15 ಪ್ಲಾಪ್‌ಗಳನ್ನು ಟೆಂಡರ್ ಕಂ ಬಹಿರಂಗ ಹರಾಜಿನ ಮೂಲಕ ದಿನಾಂಕ 20.03.2012ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣ, ಜ್ಯೋತಿನಗರ, ಮೈಸೂರು ಇಲ್ಲಿ ವಿಲೇವಾರಿ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಪೋಲೀಸ್ ಅಧೀಕ್ಷಕರ ಕಚೇರಿ, ಮೈಸೂರು ಜಿಲ್ಲೆ, ಮೈಸೂರು ಇಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ.

 ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಒಂದು ವರ್ಷ ಕಠಿಣ ಸಜೆ

ಮೈಸೂರು, ಮಾ. 14 (ಕರ್ನಾಟಕ ವಾರ್ತೆ) -  ದಿನಾಂಕ 22.8.2008ರಂದು ಬೆಳಿಗ್ಗೆ 10.45 ಗಂಟೆ ಸಮಯಕ್ಕೆ ಫಿರ್‍ಯಾದುದಾರರಾದ ಶ್ರೀ ಎನ್. ಬಸವರಾಜು, ರೇಷ್ಮೆ ಪ್ರವರ್ತಕರು, ನಂಜನಗೂಡು ಅವರು ಮೈಸೂರು ಲೋಕಾಯುಕ್ತ ಪೋಲೀಸ್ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ನೀಡಿದ್ದು, ದೂರಿನಲ್ಲಿ ಫಿರ್‍ಯಾದುದಾರರು ರೇಷ್ಮೆ ಕೃಷಿ ಕ್ಷೇತ್ರ ನಂಜನಗೂಡಿನಲ್ಲಿ ರೇಷ್ಮೆ ಪ್ರವರ್ತಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಹುದ್ದೆಯು ಸಂಖ್ಯಾರಿಕ್ತ ಹುದ್ದೆಯಾಗಿದ್ದರಿಂದ ಅವರನ್ನು ಅಬಕಾರಿ ಇಲಾಖೆಗೆ ನೇಮಕಾತಿ ಮಾಡಿ ದಿನಾಂಕ 23.05.2008ರಂದು ಕಾರ್ಯ ವಿಮುಕ್ತಿಗೊಳಿಸಿರುತ್ತಾರೆ. ಆದರೆ ಅವರ ಸೇವಾವಹಿಯನ್ನು ಕಳುಹಿಸದೇ ಇರುವ ಕಾರಣ ಅವರಿಗೆ ಚಾಮರಾಜನಗರದಲ್ಲಿ ವರದಿ ಮಾಡಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆ ಸಂಬಂಧ ಫಿರ್‍ಯಾದುದಾರರು ಆರೋಪಿತರಾದ ಶ್ರೀ ಬಿ.ಎನ್. ಶಾಂತಮಲ್ಲೇಶಪ್ಪ, ರೇಷ್ಮೆ ಸಹಾಯಕ ನಿರ್ದೇಶಕರು, ನಂಜನಗೂಡು ಉಪವಿಭಾಗ, ನಂಜನಗೂಡು ಇವರನ್ನು ಭೇಟಿ ಮಾಡಿ ತಮ್ಮ ಸೇವಾವಹಿಯನ್ನು ಕಳುಹಿಸಿಕೊಡುವಂತೆ ಹಾಗೂ 5ನೇ ವೇತನ ಆಯೋಗದ ಬಾಕಿ ಹಣ ಹಾಗೂ 2007-08ರ ಗಳಿಕೆ ರಜೆ ನಗದೀಕರಣಕ್ಕೆ ಸಂಬಂಧಿಸಿದ ಒಟ್ಟು 57181 ರೂ.ಗಳನ್ನು ಮಂಜೂರು ಮಾಡಿಕೊಡುವಂತೆ ಕೋರಿದ್ದು, ಆರೋಪಿತರು ಯಾವುದೇ ಕ್ರಮ ಕೈಗೊಂಡಿಲ್ಲ. ದಿನಾಂಕ 14.08.2008ರಂದು ಫಿರ್‍ಯಾದುದಾರರು ಆರೋಪಿತರನ್ನು ಭೇಟಿ ಮಾಡಿದಾಗ ಆರೋಪಿತರು ಕೆಲಸ ಮಾಡಿಕೊಡಲು ರೂ.3000 ಹಣ ಕೊಡುವಂತೆ ಹೇಳಿ ಅದೇದಿನ ಹಣವನ್ನು ಪಡೆದುಕೊಂಡಿರುತ್ತಾರೆ. ನಂತರ ಕೂಡ ಆರೋಪಿತರು ಕೆಲಸ ಮಾಡಿಕೊಡದೇ ಇದ್ದುದರಿಂದ ದಿನಾಂಕ 21.08.2008ರಂದು ಫಿರ್‍ಯಾದುದಾರರು ಆರೋಪಿತರನ್ನು ಭೇಟಿ ಮಾಡಿದಾಗ ಆರೋಪಿತರು ಹಣದ ಮೊತ್ತ ಜಾಸ್ತಿ ಇರುವುದರಿಂದ 3000ರೂ. ಸಾಲುವುದಿಲ್ಲ. ಇನ್ನೂ 2000 ರು. ಕೊಟ್ಟರೆ ಕೆಲಸ ಮಾಡಿಕೊಡುತ್ತೇನೆಂದು, ಹಣವನ್ನು ದಿನಾಂಕ 28.08.2008ರಂದು ತಂದುಕೊಡಲು ಒತ್ತಾಯಿಸಿರುತ್ತಾರೆ ಎಂದು ರೂ.2000ದೊಂದಿಗೆ ದೂರನ್ನು ನೀಡಿರುತ್ತಾರೆ.

ಸದರಿ ದೂರಿನ ಮೇರೆಗೆ ಶ್ರೀ ಡಿ. ಜಯರಾಮು, ಪೋಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮೈಸೂರು ಇವರು ಮೈಸೂರು ಲೋಕಾಯುಕ್ತ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 11/2008 ಕಲಂ 7 ಪಿಸಿ ಕಾಯಿದೆ 1988 ರೀತ್ಯಾ ಪ್ರಕರಣ ದಾಖಲು ಮಾಡಿ, ತನಿಖೆ ಕೈಗೊಂಡು ಆರೋಪಿತರಾದ ಶ್ರೀ ಬಿ.ಎನ್. ಶಾಂತಮಲ್ಲೇಶಪ್ಪ, ರೇಷ್ಮೆ ಸಹಾಯಕ ನಿರ್ದೇಶಕರು ಅವರು ದಿನಾಂಕ 23.08.2008ರಂದು ಫಿರ್‍ಯಾದಿಯವರಿಂದ ರೂ.2000ಗಳನ್ನು ಪಡೆದುಕೊಂಡಾಗ ದಸ್ತಗೀರು ಮಾಡಿರುತ್ತಾರೆ.

ತನಿಖೆಯನ್ನು ಪೂರೈಸಿದ ತನಿಖಾಧಿಕಾರಿಯವರು ಮೈಸೂರಿನ ಗೌರವಾನ್ವಿತ 3ನೇ ಅಪರ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯಕ್ಕೆ ಆರೋಪಿತರಾದ ಶ್ರೀ ಬಿ.ಎನ್. ಶಾಂತಮಲ್ಲೇಶಪ್ಪ, ರೇಷ್ಮೆ ಸಹಾಯಕ ನಿರ್ದೇಶಕರು, ನಂಜನಗೂಡು ಉಪವಿಭಾಗ, ನಂಜನಗೂಡು (ಹಾಲಿ ಸಹಾಯಕ ನಿರ್ದೇಶಕರು, ರೇಷ್ಮೆ ಕೃಷಿ ನಿರ್ದೇಶನಾಲಯ, ಲಕ್ಷ್ಮೀಪುರಂ, ಮೈಸೂರು) ಇವರನ್ನು ದೋಷಿ ಎಂದು ತೀರ್ಮಾನಿಸಿ 1 ವರ್ಷ ಕಠಿಣ ಸಜೆ, 15 ಸಾವಿರ ರೂ. ದಂಡ. ದಂಡವನ್ನು ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ ವಿಧಿಸಿ ಆದೇಶ ಹೊರಡಿಸಿರುತ್ತೆ.

ಈ ಪ್ರಕರಣದಲ್ಲಿ ಮೈಸೂರು ವಿಶೇಷ ಅಭಿಯೋಜಕರಾದ ಶ್ರೀ ವೃಷಬೇಂದ್ರಪ್ಪರವರು ವಾದವನ್ನು ಮಂಡಿಸಿರುತ್ತಾರೆ ಎಂದು ಕರ್ನಾಟಕ ಲೋಕಾಯುಕ್ತ  ಪೋಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ತಾಲೂಕು ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಗದಗ(ಕರ್ನಾಟಕ ವಾರ್ತೆ) ಮಾರ್ಚ 14:  ದಿ: 8-3-2012 ರಂದು ತಾಲೂಕು ಪಂಚಾಯತ್ ಸಭಾಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ತಾಲೂಕು ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಸದರಿ ಕಾರ್‍ಯಕ್ರಮವನ್ನು ಜರುಗಿಸಲಾಯಿತು.  ಕಾರ್‍ಯಕ್ರಮವನ್ನು  ಶ್ರೀಮತಿ ವಿಜಯಲಕ್ಷ್ಮೀ ತಮ್ಮನಗೌಡ್ರ ಸದಸ್ಯರು ತಾಲೂಕು ಪಂಚಾಯತ್ ಗದಗ  ಇವರು ಉದ್ಘಾಟಸಿದರು.    ಶ್ರೀ ಎಸ್.ಎಮ್. ಪಿಡಶೆಟ್ಟಿ ಕಾರ್‍ಯನಿರ್ವಾಹಕಾಧಿಕಾರಿಗಳು, ತಾಲೂಕು ಪಂಚಾಯತ್, ಗದಗ ಶ್ರೀ ಎಸ್.ಟಿ. ಆನಂದಿ ಸಿ.ಡಿ.ಪಿ.ಓ , ಶ್ರೀ ಸಿ.ಬಿ. ಪಲ್ಲೇದ ಅಧ್ಯಕ್ಷರು ಸ್ಪಂದನ ಸಂಸ್ಥೆ ಕಳಸಾಪುರ, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು ಉದ್ಘಾಟನೆ ಸಂದರ್ಭದಲ್ಲಿ ಹಾಜರಿದ್ದರು.

           ಉದ್ಘ್ಗಾಟನೆಯಾದ ನಂತರ ವಿವಿಧ ವಿಷಯ ತಜ್ಞರಿಂದ ತಾಲೂಕಿನಿಂದ ಆಗಮಿಸಿದ ಅಂದಾಜು 100 ಜನ ಪ್ರತಿನಿಧಿಗಳಿಗೆ ಮಹಿಳೆಯರಿಗೆ ಸಂಬಂಧಪಟ್ಟ   ಆರೋಗ್ಯ, ಶಿಕ್ಷಣ, ಪೌಷ್ಟಿಕಾಂಶ, ಸಬಲೀಕರಣ, ನಾಯಕತ್ವ ಹಾಗೂ ಕಾನೂನು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ನಂತರ ಕಾರ್‍ಯಕ್ರಮದ ಕೊನೆಯಲ್ಲಿ ಸಮಾರೋಪದೊಂದಿಗೆ ಮುಕ್ತಾಯಗೊಂಡಿತು. 

ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿ

ಗದಗ(ಕರ್ನಾಟಕ ವಾರ್ತೆ) ಮಾರ್ಚ 14:  ಪದವಿ ಪೂರ್ವ ಶಿಕ್ಷಣ ಇಲಾಖೆಯು 2012 ರ ಮಾರ್ಚ ತಿಂಗಳಿನಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯನ್ನು ದಿನಾಂಕ 15-3-2012 ರಿಂದ 31-3-2012 ರವರೆಗೆ ಬೆಳಿಗ್ಗೆ 9.00 ಗಂಟೆಯಿಂದ ಸಾಯಂಕಾಲ 5.15 ಗಂಟೆಯವರಗೆ ನಡೆಸಲಿದೆ.  ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗದಗ ಜಿಲ್ಲೆಯ 21  ಪರೀಕ್ಷಾ ಕೇಂದ್ರಗಳಲ್ಲಿ  200 ಮೀಟರ್ ಪರಿಮಿತಿಯೊಳಗೆ ದಿನಾಂಕ 15-3-2012 ರಿಂದ 31-3-2012 ರವರೆಗೆ ಬೆಳಿಗ್ಗೆ 8.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ  ನಿಷೇಧಿತ ಪ್ರದೇಶವೆಂದು ಘೋಷಿಸಿದೆ.  ಸದರಿ ಅವಧಿಯಲ್ಲಿ ಪರೀಕ್ಷಾರ್ಥಿಗಳು ಮತ್ತು ಪರೀಕ್ಷೆಯಲ್ಲಿ ಕಾರ್‍ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಇತರ ಯಾವದೇ ವ್ಯಕ್ತಿ ಅಥವಾ ಐದು ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

              ನಿಷೇಧಿತ  ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ ಅಂಗಡಿ, ಬುಕ್ ಸ್ಟಾಲ್ , ಫೋಟೋ ಕಾಪಿಯರ್‌ಗಳನ್ನು ಬಂದ್ ಮಾಡಲು ಆದೇಶಿಸಿದೆ.  ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜಿಲ್ಲಾ ಮಟ್ಟದ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಗದಗ(ಕರ್ನಾಟಕ ವಾರ್ತೆ) ಮಾರ್ಚ 14:  ಅಭಿವೃದ್ಧಿ ಆಯುಕ್ತರು (ಕೈಮಗ್ಗ)  ಜವಳಿ ಮಂತ್ರಾಲಯ, ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ  ಕೈಮಗ್ಗ ಮತ್ತು ಜವಳಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ    ಯುಗಾದಿ  ಹಬ್ಬದ ಪ್ರಯುಕ್ತ ದಿ: 15-3-2012 ರಿಂದ 20-3-2012ರವರೆಗೆ   ಜಿಲ್ಲಾ ಮಟ್ಟದ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ   ವಸ್ತ್ರಸಿರಿ-2012 ವನ್ನು ಏರ್ಪಡಿಸಲಾಗುತ್ತಿದ್ದು,  ಸದರಿ ಮೇಳವು ಗದಗನ   ಶ್ರೀ ತೋಂಟದಾರ್‍ಯ ಮಠದ ಆವರಣದಲ್ಲಿ   ನಡೆಸಲಾಗುತ್ತಿದೆ.

            ಈ ಜಿಲ್ಲಾ ಮಟ್ಟದ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭವನ್ನು ದಿನಾಂಕ 15-3-2012 ರಂದು ಮುಂಜಾನೆ 11-00 ಗಂಟೆಗೆ ಜಿ.ಪಂ. ಅಧ್ಯಕ್ಷೆ  ಶ್ರೀಮತಿ ಬಸವರಾಜೇಶ್ವರಿ ಚ ಪಾಟೀಲ ಉದ್ಘಾಟಿಸುವರು.  ಮುಖ್ಯ ಅತಿಥಿಗಳಾಗಿ  ಜಿ.ಪಂ. ಉಪಾಧ್ಯಕ್ಷರಾದ ಶ್ರೀಮತಿ ಶಾಂತವ್ವ ದಂಡಿನ, ಜಿ.ಪಂ. ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಶ್ರೀ ವೀರಣ್ಣ ತುರಮರಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಝರೆಪ್ಪ ಜಿ ಮೊಳಕೇರಿ,   ನೇಕಾರರ ಸೇವಾ ಕೇಂದ್ರದ ಉಪನಿರ್ದೇಶಕರಾದ ಶ್ರೀ ಸುಂದರ್ ಲಾಲ್  ಆಗಮಿಸುವರು. 

          ದಿ: 15-3-2012 ರಿಂದ 20-3-2012 ರವರೆಗೆ ನಡೆಯಲಿರುವ ಜಿಲ್ಲಾ ಮಟ್ಟದ ಕೈಮಗ್ಗ ಮತ್ತು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ವಿವಿಧ ಜಿಲ್ಲೆಗಳ ಕೈಮಗ್ಗ ನೇಕಾರ ಸಹಕಾರಿ ಸಂಘಗಳು ಭಾಗವಹಿಸುತ್ತಿದ್ದು, ಉತ್ತಮ ಗುಣಮಟ್ಟದ ಕೈಮಗ್ಗ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದ್ದು ಸಾರ್ವಜನಿಕರಿಗೆ ಒಂದೇ ಸೂರಿನಡಿ ವಿವಿಧ ವಿನ್ಯಾಸದ ಹತ್ತಿ ಬಟ್ಟೆಗಳು , ರೇಷ್ಮೆ ಸೀರೆಗಳು , ಉಣ್ಣೆ ಬಟ್ಟೆಗಳು, ಇಳಕಲ್ ಸೀರೆಗಳು, ಹತ್ತಿ ಪಂಜೆ, ಬೆಡ್ ಶೀಟ್ಸ್, ಟವಲ್ಸ್ , ಲುಂಗಿ , ಜಮಖಾನ ಮತ್ತು ಉಣ್ಣೆ ಕಂಬಳಿಗಳು ಲಭ್ಯವಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ವೀರೇಶ ಢವಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                    

ಸಾರ್ವಜನಿಕ ಕುಂದುಕೊರತೆ ಸಭೆ

 ಗದಗ(ಕರ್ನಾಟಕ ವಾರ್ತೆ) ಮಾರ್ಚ 14 :  ಸಾರ್ವಜನಿಕ ಕುಂದುಕೊರತೆ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಸರಕಾರದ ಆಹಾರ ಭದ್ರತೆ ಯೋಜನೆಯಡಿ ಸಾರ್ವಜನಿಕ ವಿತರಣಾ ಪದ್ಧತಿ, ಸಮಗ್ರ ಮಕ್ಕಳ ಅಬಿವೃದ್ಧಿ ಯೋಜನೆ ಹಾಗೂ ಮಧ್ಯಾಹ್ನದ ಬಿಸಿ ಊಟ  ವಿಷಯಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿ: 17-3-2012 ರಂದು    ಜಿಲ್ಲಾಧಿಕಾರಿಗಳ ಕಾರ್‍ಯಾಲಯದಲ್ಲಿ ಬೆಳಿಗ್ಗೆ 10-30 ಗಂಟೆಗೆ ಸಭೆ ಜರುಗಿಸಲಾಗುವುದು.  ಪ್ರತಿ ಮಾಹೆಯ 01 ನೇ ಮತ್ತು 03 ನೇ ಶನಿವಾರ ರಂದು ದೂರು ಸ್ವೀಕರಿಸಿ ವಿಚಾರಣೆ ನಡೆಸಲಾಗುವುದು.  ಕಾರಣ ಜಿಲ್ಲೆಯ ಸಾರ್ವಜನಿಕರು ಈ ದಿಸೆಯಲ್ಲಿ ಮೇಲ್ಕಾಣಿಸಿದ ಆಹಾರ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳು ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.  ಸಾರ್ವಜನಿಕರು ಮನವಿ ಸಲ್ಲಿಸಿದಲ್ಲಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತ ಮಹಿಳೆ ವಿಜ್ಞಾನಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮಾ.14.(ಕ.ವಾ.)-ಹೈದರಾಬಾದ-ಕರ್ನಾಟಕ ಭಾಗದ ರೈತರ ಒಡನಾಡಿ ಎನಿಸಿಕೊಂಡಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯವು 2011-12ನೇ ಸಾಲಿನಿಂದ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ತಮ್ಮಲ್ಲಿರುವ ಕೃಷಿಜ್ಞಾನ ಮತ್ತು ಅಪಾರ ಅನುಭವದಿಂದ ಅತ್ಯುತ್ತಮ ಸಾಧನೆಗೈದು ಇತರ ರೈತರಿಗೆ ಮಾದರಿಯಾಗಿರುವಂತಹ ರೈತರು ಮತ್ತು ರೈತಮಹಿಳೆಯರಿಗೆ ರೈತ ವಿಜ್ಞಾನಿ/ರೈತ ಮಹಿಳೆ ವಿಜ್ಞಾನಿ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದೆ.  ಬೀದರ, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ರೈತ ಬಾಂಧವರು ಈ ಪ್ರಶಸ್ತಿಗೆ ಅರ್ಹರಾಗಿದ್ದು, 2012ನೇ ಏಪ್ರಿಲ್ 3ನೇ ವಾರದಲ್ಲಿ ಜರುಗುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.  ಸದರಿ ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ ನಗದು 50,000 ರೂ.ಗಳ ಬಹುಮಾನವನ್ನು ಒಳಗೊಂಡಿರುತ್ತದೆ. 

ಈ ರೈತ ವಿಜ್ಞಾನಿ/ರೈತ ಮಹಿಳೆ ವಿಜ್ಞಾನಿ ಪ್ರಶಸ್ತಿಗೆ ಅರ್ಹರೆನಿಸಿಕೊಂಡಿರುವ ರೈತರು/ರೈತ ಮಹಿಳೆಯರು ಅರ್ಜಿ ನಮೂನೆಗಳನ್ನು ಕೃಷಿ ವಿಜ್ಞಾನ ಕೇಂದ್ರ, ಬೀದರ-9480696318, ಗುಲ್ಬರ್ಗಾ-9480696315, ರದ್ದೇವಾಡಗಿ-9480696348, ರಾಯಚೂರು-9480696314, ಗಂಗಾವತಿ-9480696316,ಹಗರಿ-9480696317 ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಭೀಮರಾಯನಗುಡಿ-9480696335, ಲಿಂಗಸೂಗುರು-9480696334, ಕೊಪ್ಪಳ-9480696319 ಹಾಗೂ ಹಡಗಲಿ-9480696336 ಕಚೇರಿಗಳಿಂದ ದಿನಾಂಕ 25.3.2012ರೊಳಗೆ ಪಡೆದು, ಅದನ್ನು ಭರ್ತಿಮಾಡಿ ದಿನಾಂಕ 30.3.2012ರ ಸಾಯಂಕಾಲ 5 ಗಂಟೆಯೊಳಗೆ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ರಾಯಚೂರು-584102 ವಿಳಾಸಕ್ಕೆ ತಲುಪಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ಕಾಣಿಸಿದ ಸಂಸ್ಥೆಗಳ ಮುಖ್ಯಸ್ಥರುಗಳನ್ನು ಅಥವಾ ವಿಸ್ತರಣಾ ನಿರ್ದೇಶಕರನ್ನು(9480696313) ಸಂಪರ್ಕಿಸಹುದು. 

ಕೇಂದ್ರೀಯ ಪೊಲೀಸ್ ಪಡೆ : ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮಾ.14.(ಕ.ವಾ.)-ಕೇಂದ್ರ ಲೋಕಸೇವಾ ಆಯೋಗವು ಕೇಂದ್ರೀಯ ಪೊಲೀಸ್ ಪಡೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಮತ್ತು ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್  ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.  ಅರ್ಜಿ ಸಲ್ಲಿಸಲು 16-03-2012 ಕೊನೆಯ ದಿನವಾಗಿದೆ. ಯಾವುದೇ ಪದವಿ ಪಡೆದ 20-25 ವಯಸ್ಸು ಹೊಂದಿರುವ (16-03-2012ರವರೆಗೆ) ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಯಾವುದಾದರೂ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು.  ಒಟ್ಟು 2200 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಯನ್ನು ಎಂಪ್ಲಾಯಿಮೆಂಟ್ ನ್ಯೂಸ್ ದಿ: 18-02-2012 ಅಥವಾ ವೆಬ್‌ಸೈಟ್ ವಿಳಾಸ http//ssckkr.kar.nic.in ದಿಂದ ಪಡೆಯಬಹುದು. ಇದಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಬೆಳಗಿನ 10ರಿಂದ ಸಾಯಂಕಾಲ 5 ಗಂಟೆಯವರೆಗೆ ದೂರವಾಣಿ ಸಂಖ್ಯೆ 9483862010 ಮತ್ತು 9483862020 ಸಂಪರ್ಕಿಬಹುದು.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಗುಲಬರ್ಗಾ,ಮಾ.14.(ಕ.ವಾ.)-ಗುಲಬರ್ಗಾ ಜೆಸ್ಕಾಂ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ ಅಫಜಲಪೂರ ತಾಲೂಕಿನ 33/11 ಕೆ.ವಿ. ಗುಡೂರ ಉಪವಿತರಣಾ ಕೇಂದ್ರದಲ್ಲಿ ಸುಧಾರಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಯುಕ್ತ ದಿನಾಂಕ: 15-3-2012ರಂದು ಈ ಮುಂದೆ ತೋರಿಸಿರುವ ಗ್ರಾಮಗಳಲ್ಲಿ ಬೆಳಗಿನ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗುಡೂರ, ಸ್ಟೇಶನ್ ಗಾಣಗಾಪೂರ, ನೀಲೂರ, ಭೈರಾಮಡಗಿ, ಕೊಗನೂರ, ಗೌಡಗಾಂವ, ದಿಕ್ಕಸಂಗಾ, ಮದರಾ(ಬಿ), ಮದರಾ(ಕೆ) ಮತ್ತು ಕಾರಬೋಸಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳು.

                        ಅದರಂತೆ ದಿನಾಂಕ: 16-03-2012 ರಂದು ಆಳಂದ ತಾಲೂಕಿನ 33/11 ಕೆ.ವಿ. ಗುಡೂರ ಉಪವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಸರಸಂಬಾ, ಸಾವಳೇಶ್ವರ, ಹೀರೋಳ್ಳಿ, ಪಡಸಾವಳಗಿ ಮತ್ತು ನೀರಗುಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಮಾರ್ಚ್ 20ರಿಂದ ಮುಟ್ಟುಗೋಲು ವಾಹನಗಳ ಬಹಿರಂಗ ಹರಾಜು

ಗುಲಬರ್ಗಾ,ಮಾ.14.(ಕ.ವಾ.)-ಅಬಕಾರಿ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಂಡಿರುವ ದ್ವಿಚಕ್ರ ವಾಹನಗಳ ಬಹಿರಂಗ ಹರಾಜನ್ನು ಈ ಮುಂದೆ ತೋರಿಸಿರುವ ತಾಲೂಕುಗಳ ಅಬಕಾರಿ ಇಲಾಖೆಯ ಕಚೇರಿಗಳಲ್ಲಿ  ನಿಗದಿತ ದಿನಗಳಂದು ಬೆಳಗಿನ 11 ಗಂಟೆಗೆ ನಡೆಸಲಾಗುವುದು. ಆಳಂದ ಮತ್ತು ಚಿತ್ತಾಪುರ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ 2012ರ ಮಾರ್ಚ್ 20 ರಂದು; ಜೇವರ್ಗಿ ಮತ್ತು ಸೇಡಂ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ ಮಾರ್ಚ್ 21ರಂದು   ಹಾಗೂ ಚಿಂಚೋಳಿ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ ಮಾರ್ಚ್ 22  ರಂದು ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಹಾಕಲಾಗುವುದು. ಗುಲಬರ್ಗಾ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಕಚೇರಿಯನ್ನು ಸಂಪರ್ಕಿಸಿ ಷರತ್ತು ಹಾಗೂ ವಾಹನಗಳ ವಿವರವನ್ನು ಪಡೆಯಲು ಕೋರಲಾಗಿದೆ.

ವಾಹನ ಚಾಲಕರ ನೇಮಕಕ್ಕಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮಾ.14.(ಕ.ವಾ.)-ಗುಲಬರ್ಗಾ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಕಚೇರಿಯಲ್ಲಿ 10 ಜನ ವಾಹನ ಚಾಲಕರನ್ನು ಬಾಹ್ಯ ಮೂಲಗಳ ಮೂಲಕ ಒಪ್ಪಂದದ ಮೇರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಷರತ್ತು, ವಿದ್ಯಾರ್ಹತೆ, ಮತ್ತಿತರ ಹೆಚ್ಚಿನ ವಿವರಗಳಿಗಾಗಿ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

            ಆಸಕ್ತಿ ಹೊಂದಿರುವ ಏಜೆನ್ಸಿಗಳು ಅಗತ್ಯ ಮಾಹಿತಿಯೊಂದಿಗೆ ಕೋಟೇಷನ್‌ಗಳನ್ನು ಮೋಹರ ಮಾಡಿದ ಲಕೋಟೆಯನ್ನು ಸದರಿ ಕಚೇರಿಯ ಮ್ಯಾನೇಜರ್ ಅವರಿಗೆ ದಿನಾಂಕ: 20-03-2012ರ ಸಾಯಂಕಾಲ 5-30 ಗಂಟೆಯೊಳಗೆ ಸಲ್ಲಿಸಬೇಕು.

ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಗುಲಬರ್ಗಾ,ಮಾ.14.(ಕ.ವಾ.)-ಗುಲಬರ್ಗಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರೊಸೆಸ್ ಜಾರಿಕಾರ ಸಂತೋಷ ಮನೋಹರ ಜಾಧವ ಅವರು 2011ರ ಜೂನ್ 4, 9 ಮತ್ತು ಈವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, 15 ದಿನದೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳು ಅಂತಿಮ ಹಾಜರಾತಿ ಹುಕುಮನ್ನು 2012ರ ಮಾರ್ಚ್ 13ರಂದು ಜಾರಿಗೊಳಿಸಿದ್ದಾರೆ. ಈ ಹಿಂದೆ ಸದರಿ ನೌಕರರಿಗೆ ಕರ್ತವ್ಯಕ್ಕೆ  ಗೈರು ಹಾಜರಾಗಿರುವುದನ್ನು ಅನಧಿಕೃತ ಗೈರು ಹಾಜರಿಯೆಂದು ಪರಿಗಣಿಸುವ ಬಗ್ಗೆ ನೀಡಿದ ನೋಟೀಸಿಗೆ ವೈದ್ಯಕೀಯ ಕಾರಣ ನೀಡಿ ರಜೆ ಕೋರಿದ್ದರು. ರಜೆಯ ಅವಧಿ 2011ರ ಸೆಪ್ಟೆಂಬರ್ 19ಕ್ಕೆ ಮುಗಿದರೂ ಈವರೆಗೆ ಕರ್ತವ್ಯಕ್ಕೆ ಹಾಜರಾಗಿಲ್ಲ ಹಾಗೂ ಸ್ಥಳೀಯ ಮತ್ತು ಬೇರೆ ನ್ಯಾಯಾಲಯಗಳಿಂದ ಜಾರಿಯಾದ ಒಟ್ಟು 12 ಸಮನ್ಸ್ ನೋಟೀಸು ಜಾರಿಗೊಳಿಸಲು ಆದೇಶಿಸಲಾಗಿತ್ತು. ಆದರೂ ಅವುಗಳನ್ನು ಸಹ ಹಿಂದಿರುಗಿಸದೆ ಗೈರು ಹಾಜರಾಗಿ ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ತೊಂದರೆ ಉಂಟು ಮಾಡಿದ್ದಾರೆ. ಶ್ರೀಯುತರಿಗೆ 2011ರ ನವೆಂಬರ್ 16 ಮತ್ತು ಡಿಸೆಂಬರ್ 30ರಂದು ಕರ್ತವ್ಯಕ್ಕೆ ಹಾಜರಾಗುವಂತೆ ನೋಟೀಸು ಜಾರಿಗೊಳಿಸಲಾಗಿತ್ತು ಹಾಗೂ ಸಮನ್ಸ್‌ಗಳನ್ನು ಹಿಂದಿರುಗಿಸಲು ತಿಳಿಸಲಾಗಿತ್ತು. ಸದರಿ ನೌಕರರು ಹಾಜರಾತಿ ಹುಕುಂ (ಸೈಟೇಶನ್) ಪ್ರಕಟಿಸಿದ 15 ದಿನದೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ನೌಕರರ ವಿರುದ್ಧ ಕರ್ನಾಟಕ ಸರ್ಕಾರಿ ಸೇವೆ (ಪ್ರೋಬೇಷನ್) ನಿಯಮಗಳು 1977ರ ನಿಯಮ^(1)ರ ಅನ್ವಯ ಕ್ರಮ ಕೈಗೊಂಡು ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದೆಂದು ತಿಳಸಿದ್ದಾರೆ.

ನೀರು ಸರಬರಾಜಿನಲ್ಲಿ ವ್ಯತ್ಯಯ

ಗುಲಬರ್ಗಾ,ಮಾ.14.(ಕ.ವಾ.)-ಗುಲಬರ್ಗಾ ನಗರಕ್ಕೆ ನೀರು ಸರಬರಾಜು ಮಾಡುವ ಬೆಣ್ಣೆತೋರಾ ನದಿಯ 600 ಎಂ.ಎಂ. ಮುಖ್ಯ ಕೊಳವೆ ಮಾರ್ಗ ಹೆಚ್ಚಿನ ಪ್ರಮಾಣದಲ್ಲಿ ನೀರು ಸೋರುತ್ತಿರುವ ಕಾರಣ ತುರ್ತಾಗಿ ದುರಸ್ತಿಯ ಕಾರ್ಯ ಕೈಗೊಳ್ಳಲಾಗಿದೆ. ಈ ಪ್ರಯುಕ್ತ ಕೆಳಕಂಡ ಬಡಾವಣೆಗಳಿಗೆ 2012ರ ಮಾರ್ಚ್ 17ರಿಂದ 19ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ. ಬಡಾವಣೆಗಳ ವಿವರ: ಗಾಜೀಪೂರ, ಜಗತ್, ಮಕ್ತಂಪೂರ, ಮೋಮಿನಪೂರ ಎ ಮತ್ತು ಬಿ, ಗಂಜ್‌ಕಾಲನಿ, ಶಿವಾಜಿನಗರ, ಭವಾನಿನಗರ, ತಾಜನಗರ, ಶಿವಶಕ್ತಿನಗರ, ತಾಂಡಾ ಬಡಾವಣೆ, ಶಹಾಬಜಾರ, ಮಿಜಗುರಿ, ಸದರ ಮೊಹಲ್ಲಾ, ಮಹಡಿ ಮೊಹಲ್ಲಾ, ಸಂದಲಗಲ್ಲಿ, ಸುಂದರನಗರ, ಬಾಪುನಗರ, ಐವಾನ್-ಎ-ಶಾಹಿ ಭಾಗಶ:, ಗುಲ್ಲಾಬಾವಡಿ, ಪೊಲೀಸ್ ಕಾಲೋನಿ, ಕುವೆಂಪುನಗರ, ಸಂಜೀವನಗರ ಮತ್ತು ಆರ್ಯನಗರ.

ಬ್ಯಾಂಕಿಂಗ್ ಲೋಕಪಾಲ ಕುರಿತು ಸಂವಾದ ಕಾರ್ಯಕ್ರಮ

ಗುಲಬರ್ಗಾ,ಮಾ.14.(ಕ.ವಾ.)-ಗುಲಬರ್ಗಾ ಹಾಗೂ ಜೇವರ್ಗಿ ನಗರ ಮತ್ತು ಸುತ್ತಮುತ್ತಲಿನ ಜನತೆಗೆ ಕರ್ನಾಟಕ ಬ್ಯಾಂಕಿಂಗ್ ಲೋಕಪಾಲ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ನೀಡಲು ಗುಲಬರ್ಗಾ  ಭಾರತೀಯ ಸ್ಟೇಟ್ ಬ್ಯಾಂಕ್ 2012ರ ಮಾರ್ಚ್ 16 ಮತ್ತು 17ರಂದು ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.

           ಗುಲಬರ್ಗಾ ಜಿಲ್ಲಾ ನ್ಯಾಯಾಲಯದೆದುರು ಇರುವ  ಇಂಜಿನಿಯರಿಂಗ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಆವರಣದಲ್ಲಿ ದಿನಾಂಕ: 16-3-2012ರಂದು ಬೆಳಗಿನ 10-30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಜೇವರ್ಗಿಯ ಸಜ್ಜನಶೆಟ್ಟಿ ಕಲ್ಯಾಣ ಮಂಟಪ ಭೂತನಾಳ ರೋಡ ಬಸ್‌ಸ್ಟ್ಯಾಂಡ್ ಹಿಂದುಗಡೆ ದಿನಾಂಕ: 17-03-2012 ರಂದು ಬೆಳಗಿನ 10-30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಂ. ಪಳನಿಸ್ವಾಮಿ ಅವರು ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಬ್ಯಾಂಕಿಂಗ್ ಲೋಕಪಾಲ ವ್ಯವಸ್ಥೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಬ್ಯಾಂಕ್ ವ್ಯವಹಾರಗಳಲ್ಲಿ ಸಾರ್ವಜನಿಕರು ಎದುರಿಸುವ ಕುಂದು-ಕೊರತೆಗಳ ಬಗ್ಗೆ ಅಹವಾಲುಗಳನ್ನು ಆಲಿಸುವುದು ಈ ಸಂವಾದದ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಇದರು ಸದುಪಯೋಗ ಪಡೆಯಲು ಭಾರತೀಯ ಸ್ಟೇಟ್ ಬ್ಯಾಂಕ್ ಕೋರಿದೆ.

ಗುಲಬರ್ಗಾದಲ್ಲಿ ನಾಗರಿಕ ಸೇವಾ ಖಾತರಿ ಅಧಿನಿಯಮದ ತರಬೇತಿ ಕಾರ್ಯಕ್ರಮ

ಗುಲಬರ್ಗಾ,ಮಾ.14.(ಕ.ವಾ)-ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಕರ್ನಾಟಕ ನಾಗರಿಕ ಸೇವಾ ಖಾತರಿ ಯೋಜನೆ ಅಧಿನಿಯಮ -2011 ಅಡಿಯಲ್ಲಿ ಗುಲಬರ್ಗಾ ಜಿಲ್ಲೆಯ   ವಿವಿಧ ಇಲಾಖೆಗಳ  ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗಾಗಿ ಅರಿವು ಮೂಡಿಸಲು 2012ರ ಮಾರ್ಚ್ 15ಮತ್ತು 16 ರಂದು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ತರಬೇತಿಯು ಜಿಲ್ಲಾ ಪಂಚಾಯಿತಿಯ ಹಳೆಯ ಸಭಾಂಗಣದಲ್ಲಿ  ಜರುಗಲಿದ್ದು, ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಮಾರ್ಚ್ 15 ರಂದು  ಬೆಳಗಿನ 10 ಗಂಟೆಗೆ  ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ. ವಿಜಯಕುಮಾರ ಅವರು ತಿಳಿಸಿದ್ದಾರೆ.      

ಏ.1ರಿಂದ ನಾಗರಿಕ ಸನ್ನದು ಕಾಯ್ದೆ ಜಾರಿ; ಪೂರ್ವ ಸಿದ್ಧತೆ ಮಾಡಿಕೊಳ್ಳಲು ಡಿಸಿ ಸೂಚನೆ

ಮಡಿಕೇರಿ ಮಾ.14(ಕರ್ನಾಟಕ ವಾರ್ತೆ):-ಸರ್ಕಾರದ ಸೌಲಭ್ಯ ಹಾಗೂ ಪ್ರಮಾಣ ಪತ್ರಗಳನ್ನು ನಿಗಧಿತ ಕಾಲಮಿತಿಯೊಳಗೆ ತಲುಪಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಇದೇ ಏಪ್ರಿಲ್ 1 ರಿಂದ ಜಿಲ್ಲೆಯಲ್ಲಿ ನಾಗರಿಕ ಸನ್ನದು ಕಾಯ್ದೆ ಜಾರಿಯಾಗುತ್ತಿದ್ದು ನಾನಾ ಇಲಾಖೆ ಅಧಿಕಾರಿಗಳು ಈಗಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ನಿರ್ದೇಶನ ನೀಡಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಬಾಂಗಣದಲ್ಲಿಂದು ನಾಗರಿಕ ಸನ್ನದು ಕಾಯ್ದೆ ಅನುಷ್ಠಾನ, ಮಳೆಹಾನಿ ಪರಿಹಾರ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಮತ್ತು ನಗರ ಪ್ರದೇಶದ ರೈತರು, ಕೂಲಿ ಕಾರ್ಮಿಕರು ಹಾಗೂ ಇತರೆ ಎಲ್ಲಾ ಜನರಿಗೆ ಸಕಾಲದಲ್ಲಿ ಆರ್.ಟಿ.ಸಿ, ವಾಸಸ್ಥಳ, ಆದಾಯ, ಜಾತಿ ಮತ್ತಿತರ ಪ್ರಮಾಣ ಪತ್ರಗಳನ್ನು ಕಾಲಮಿತಿಯೊಳಗೆ ಒದಗಿಸಬೇಕು, ಇಲ್ಲದಿದ್ದರೆ ಅಧಿಕಾರಿಗಳು ದಂಡ ತೆರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದರು.

ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಇದೇ 19 ಮತ್ತು 20ರಂದು ಆಡಳಿತ ತರಬೇತಿ ಸಂಸ್ಥೆಯಿಂದ ನಾಗರಿಕ ಸನ್ನದು ಕಾಯ್ದೆಗೆ ಕುರಿತು ಮಡಿಕೇರಿಯಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಸರ್ಕಾರದ ನಿರ್ದೇಶನದಂತೆ ಆಯಾಯ ಇಲಾಖೆ ವ್ಯಾಪ್ತಿಯಲ್ಲಿ ಶ್ರೀಸಾಮಾನ್ಯರಿಗೆ ಸಕಾಲದಲ್ಲಿ ಮಾಹಿತಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಅವರು ಹೇಳಿದರು.

ನಾಗರಿಕ ಸೇವಾ ಕಾಯ್ದೆಯು ಈಗಾಗಲೇ ಕೆಲವು ಆಯ್ದ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು ಏಪ್ರಿಲ್ 1 ರಿಂದ ರಾಜ್ಯದ 176 ತಾಲ್ಲೂಕುಗಳಲ್ಲಿಯೂ ಈ ಕಾಯ್ದೆ ಜಾರಿಗೆ ಬರಲಿದೆ. ದೇಶದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡಬೇಕು ಎಂಬ ದೂರದೃಷ್ಟಿಯಿಂದ ಸರ್ಕಾರ ನಾಗರಿಕ ಸನ್ನದು ಕಾಯ್ದೆಯನ್ನು ಜಾರಿಗೊಳಿಸುತ್ತಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಎನ್.ಕೃಷ್ಣಪ್ಪ ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಮಾತನಾಡಿ ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ಹಾಗೂ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ತಕ್ಷಣವೇ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಕಚೇರಿ ಕೈಪಿಡಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಯಾವುದೇ ಅರ್ಜಿ ಅಥವಾ ಮಾಹಿತಿಗಾಗಿ ಬಂದ ದಾಖಲೆಗಳನ್ನು ಸ್ವೀಕರಿಸಿದ ಮತ್ತು ರವಾನೆ ಮಾಡಿದ ವಹಿಯನ್ನು ನಿಖರವಾಗಿ ಪುಸ್ತಕದಲ್ಲಿ ದಾಖಲಿಸಿರಬೇಕು ಎಂದು ಅವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಇಲಾಖೆಗಳಿಗೆ ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ಅರ್ಜಿಗಳು ವಿಲೇವಾರಿಯಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿಯವರು ಪಡೆದರು.

ಮಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ನಿಗಧಿತ ಅವಧಿಯೊಳಗೆ ಪಡೆದು ಪರಿಹಾರ ವಿತರಿಸುವಂತಾಗಬೇಕು. ಯಾವುದೇ ಕಾರಣಕ್ಕೂ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ವಿಸ್ತರಿಸಬಾರದು ಎಂದು ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೃಷಿ ಇಲಾಖೆಯ ಪ್ರಭಾರ ಅಧಿಕಾರಿ ದಿವಾಕರ ಅವರು ಬೆಳೆ ಹಾನಿಗೆ ಸಂಬಂಧಿಸಿದಂತೆ 343 ಅರ್ಜಿಗಳು ಬಂದಿದ್ದು ಕಂದಾಯ ಇಲಾಖೆ ಜೊತೆ ಸರ್ವೆ ಮಾಡಿ ತಾಲ್ಲೂಕು ಕಚೇರಿಗೆ ಕಳುಹಿಸಿಕೊಡಲಾಗಿದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿನ ಬೇಡಿಕೆಗೆ ತಕ್ಕಂತೆ ರಸಗೊಬ್ಬರವನ್ನು ಸಂಗ್ರಹಣೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಬೇಕು ಮತ್ತು ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆಯಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಿವಮೂರ್ತಿ ಅವರು ಮಳೆಹಾನಿಗೊಳಗಾದ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ನೀಡಲಾಗುತ್ತಿದ್ದು ಮಾರ್ಚ್ ಅಂತ್ಯದೊಳಗೆ ಪರಿಹಾರ ವಿತರಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ಗಿರಿಜನ ಕುಟುಂಬಗಳಿಗೆ ವೈಯಕ್ತಿಕ ಮತ್ತು ಸಮುದಾಯದ ಹಕ್ಕು ಪತ್ರಗಳನ್ನು ಕಾಲ ಕಾಲಕ್ಕೆ ವಿತರಣೆ ಮಾಡಬೇಕು. ಪ್ರತಿ ತಿಂಗಳು ಇಂತಿಷ್ಟು ಹಕ್ಕುಪತ್ರ ವಿತರಣೆ ಮಾಡಬೇಕು ಎಂಬ ಗುರಿಯನ್ನಿಟ್ಟುಕೊಂಡು ಕೆಲಸ  ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿಯವರಿಗೆ ಸೂಚನೆ ನೀಡಿದರು.

ಸರ್ಕಾರ ಜೇನು ಕುರುಬ ಸಮುದಾಯಕ್ಕೆ ಪೌಷ್ಠಿಕ ಆಹಾರ ವಿತರಿಸುತ್ತಿದ್ದು ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆಯೇ ಎಂದು ಜಿಲ್ಲಾಧಿಕಾರಿಯವರು ಐಟಿಡಿಪಿ ಅಧಿಕಾರಿಯವರಿಂದ ಮಾಹಿತಿ ಪಡೆದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಎಷ್ಟು ಬಾಂಡ್ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ಪಡೆದರು.

ಇದಕ್ಕೆ ಉತ್ತರಿಸಿದ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಈಗಾಗಲೇ ಹಣ ಪಾವತಿಸಲಾಗಿದ್ದು ಇನ್ನೆರಡು-ಮೂರು ತಿಂಗಳಲ್ಲಿ ಬಾಂಡ್ ನೀಡಲಾಗುತ್ತದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.

 ಜಿಲ್ಲೆಯ 3 ತಾಲ್ಲೂಕಿನ ಹೋಬಳಿ ಮಟ್ಟದಲ್ಲಿ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ ಅವರು ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶದವರಿಗೆ ನಿವೇಶನ ಹಂಚಿಕೆಯನ್ನು ಕಾಲಮಿತಿಯೊಳಗೆ ಮಾಡಬೇಕಿದ್ದು ತಹಶೀಲ್ದಾರರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಖು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಅವರು ಜಿಲ್ಲೆಯಲ್ಲಿ ನಿವೇಶನ ವಿತರಣಾ ಪ್ರಗತಿ ನಿಧಾನಗತಿಯಲ್ಲಿದೆ. ಈಗಾಗಲೇ ಗ್ರಾಮೀಣ ಬಡವರಿಗೆ, ನಿರ್ಗತಿಕರಿಗೆ ನಿವೇಶನಕ್ಕೆ ಸಂಬಂಧಿಸಿದಂತೆ ಗ್ರಾ.ಪಂ.ಗಳ ಮೂಲಕ ಪಟ್ಟಿ ಸಂಗ್ರಹಿಸಿ ತಾ.ಪಂ.ನಿಂದ ತಹಶೀಲ್ದಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಜಿಲ್ಲೆಯಲ್ಲಿನ ನೆಮ್ಮದಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಮಾಹಿತಿ ನೀಡಬೇಕು. ಅರ್ಜಿ ಸಲ್ಲಿಸಿದವರ ಮೊಬೈಲ್ ನಂಬರಿಗೆ ಸಂದೇಶ ರವಾನಿಸಿ ದಾಖಲೆಗಳನ್ನು ಅಥವಾ ಪತ್ರಗಳನ್ನು ಪಡೆದುಕೊಳ್ಳಲು ಸೂಚಿಸಬೇಕು. 15 ದಿನಗಳೊಳಗೆ ಪಡೆದುಕೊಳ್ಳದಿದ್ದರೆ ರದ್ದುಪಡಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಆರ್‌ಟಿ.ಸಿ.ಕಾಲಂನಲ್ಲಿ ಬೆಳೆಯನ್ನು ಸಮರ್ಪಕವಾಗಿ ನಮೂದಿಸಬೇಕು. ತಹಶೀಲ್ದಾರರು ಈ ಬಗ್ಗೆ ಪರಿಶೀಲನೆ ಮಾಡಬೇಕು. ಸಾರ್ವಜನಿಕರನ್ನು ಅಲೆಸದೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕ್ರೈಸ್ತರಲ್ಲಿ ಮನವಿ

ಮಡಿಕೇರಿ ಮಾ.14(ಕರ್ನಾಟಕ ವಾರ್ತೆ):-ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಪ್ರಥಮ ಬಾರಿಗೆ 50 ಕೋಟಿ ರೂ. ಮೀಸಲಿರಿಸಿದ್ದು, ಸಮುದಾಯದ ಬಡವರು, ಸಂಘ ಸಂಸ್ಥೆಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಂಟೋನಿ ಮಂಡೋನಸ್ ಅವರು ಕರೆ ನೀಡಿದ್ದಾರೆ.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ವೈ.ಎಂ.ಸಿ.ಎ ಕೊಡಗು ವಿಭಾಗ ಮತ್ತು ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘ ಇವರ ಸಹಯೋಗದಲ್ಲಿ ನಗರದ ಡಿ. ದೇವರಾಜ ಅರಸು ಭವನದಲ್ಲಿಂದು ನಡೆದ ಕ್ರೈಸ್ತ ಸಮುದಾಯದ ವಿವಿಧ ಯೋಜನೆಗಳ ‘ಅರಿವು’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೈಸ್ತ ಸಮುದಾಯದವರಲ್ಲಿ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಜೊತೆಗೆ ತಿಳಿದವರು ಬಳಸಿಕೊಳ್ಳಲು ಹಿಂಜರಿಕೆ ಪಡುತ್ತಾರೆ ಎಂದು ಅವರು ಕ್ರೈಸ್ತರು ತಮ್ಮ ಹಕ್ಕು ಮತ್ತು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಇತರರಂತೆ ಬದುಕು ಕಟ್ಟಿಕೊಳ್ಳಬೇಕು ಎಂದರು.

ಕ್ರೈಸ್ತ ಸಮುದಾಯದ ಬಹಳಷ್ಟು ಮಂದಿ ಸರ್ಕಾರಿ ಸೇವೆಗೆ ಸೇರುವುದಿಲ್ಲ. ಕರ್ನಾಟಕ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಲಹೆ ಮಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಸರ್ಕಾರ 9 ಹೊಸ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು ಮನೆ ಇಲ್ಲದವರಿಗೆ ವಸತಿ ಕಲ್ಪಿಸುವುದು, ವೃದ್ಧರವನ್ನು ಆಶ್ರಯಿಸುವಂತಾಗಲು ವೃದ್ಧಾಶ್ರಮ ತೆರೆಯಲು ಕ್ರೈಸ್ತ ಸಂಘ ಸಂಸ್ಥೆಗಳಿಗೆ ಸಹಾಯಧನ, ಚರ್ಚ್ ದುರಸ್ತಿ ಹೀಗೆ ಹತ್ತಾರು ಕಾರ್ಯಕ್ರಮಗಳಿದ್ದು ಇವುಗಳನ್ನು ಸದುಪೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಪುಟ್ಟರಾಜು ಅವರು ಕ್ರಿಶ್ಚಿಯನ್ ಸಮುದಾಯಗಳ ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ಅನುದಾನಿತ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಅನುದಾನದ ರೂಪದಲ್ಲಿ ಕನಿಷ್ಠ ರೂ. 1 ಲಕ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ ಎಂದರು.

ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜಿ.ಎನ್.ಎಂ. ಮತ್ತು ಬಿಎಸ್ಸಿ ನರ್ಸಿಂಗ್ ತರಬೇತಿಯನ್ನು ಸರ್ಕಾರಿ ಖೋಟಾದಡಿಯಲ್ಲಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಅರ್ಹ ತರಬೇತಿದಾರರಿಗೆ ವಾರ್ಷಿಕ ರೂ. 5000/-ಗಳನ್ನು ಕೋರ್ಸಿನ ವೆಚ್ಚವನ್ನಾಗಿ ಪಾವತಿಸುವುದರೊಂದಿಗೆ ಮಾಹೆಯಾನ ರೂ. 1000/-ಗಳ ತರಬೇತಿ ಭತ್ಯೆಯನ್ನು ಪಾವತಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಹಶೀಲ್ದಾರರಿಂದ ಪಡೆದ ವಾರ್ಷಿಕ ಆದಾಯ ದೃಢೀಕರಣ ಪತ್ರ ಹಾಗೂ ಹಿಂದಿನ ಕೋರ್ಸಿನಲ್ಲಿ ಉತ್ತೀರ್ಣರಾದ ಬಗ್ಗೆ ಅಂಕ ಪಟ್ಟಿ, ಪಾಸ್ ಪೋರ್ಟ್ ಸೈಜ್‌ನ ಇತ್ತೀಚಿನ ಭಾವಚಿತ್ರ, ಸಂಬಂಧಪಟ್ಟ ಪ್ರಾಂಶುಪಾಲರಿಂದ ದೃಢೀಕರಣ ಲಗತ್ತಿಸಿರಬೇಕು. ಕ್ರಿಶ್ಚಿಯನ್ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರಿಶ್ಚಿಯನ್ ಸಮುದಾಯದವರು ನಿರ್ಮಿಸುವ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ. 10 ಲಕ್ಷ ಸಹಾಯಧನ ನೀಡಲಾಗುವುದು ಎಂದರು.

ಕ್ರಿಶ್ಚಿಯನ್ ಸಮುದಾಯದ ಚರ್ಚ್‌ಗಳ ದುರಸ್ಥಿ, ಜೀರ್ಣೋದ್ದಾರ ಹಾಗೂ ಕಾಂಪೌಂಡು ಗೋಡೆ ನಿರ್ಮಿಸಲು ರೂ. 10 ಲಕ್ಷಗಳ ಸಹಾಯಧನವನ್ನು ಮಂಜೂರು ಮಾಡಲಾಗುವುದು. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸವನ್ನು ಮುಂದುವರಿಸಲು ಎಸ್.ಎಸ್.ಎಲ್.ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 3000, ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 3000 ಹಾಗೂ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 4000ಗಳ ಪ್ರೋತ್ಸಾಹಧನ ನೀಡಲಾಗುವುದು ಎಂದು ಪುಟ್ಟರಾಜು ಅವರು ತಿಳಿಸಿದರು.

ಕೊಡಗು ಜಿಲ್ಲಾ ಕೈಸ್ತರ ಸೇವಾ ಸಂಘದ ಅಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರೈಸ್ತ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸುವಂತಾಗಬೇಕು. ಹಾಗೆಯೇ ಸರ್ಕಾರದ ಮಟ್ಟದಲ್ಲಿ ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಎಂದು ಅವರು ಮನವಿ ಮಾಡಿದರು.

 ಕ್ರೈಸ್ತ ಸಮುದಾಯ ಮಾಹಿತಿ ಕೊರತೆಯಿಂದ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಬಿಪಿಎಲ್ ಕುಟುಂಬಕ್ಕೆ 11 ಸಾವಿರ ರೂ ಮತ್ತು ಎಪಿಎಲ್ ಕುಟುಂಬಕ್ಕೆ 22 ಸಾವಿರ ರೂ ಆದಾಯ ಮಿತಿ ಇರುವುದರಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ 1.50 ಲಕ್ಷದಿಂದ 2 ಲಕ್ಷದವರೆಗೆ ಆದಾಯ ಮಿತಿಗೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಸುಂಟಿಕೊಪ್ಪದ ಸಂತ ಅಂತೋಣಿ ಚರ್ಚ್‌ನ ಧರ್ಮ ಗುರುಗಳಾದ ಡೆನ್ನಿಸ್ ನೊರೋಹ್ನ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಎಂ.ಜಿ. ಕಲಿಂವುಲ್ಲ  ಬೇಗ್, ವೈ.ಎಂ.ಸಿ.ಎ. ಗೌರವ ಕಾರ್ಯದರ್ಶಿಯವರಾದ ಎ. ಜಯರಾಜ್, ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘದ ಗೌರವ ಕಾರ್ಯದರ್ಶಿ ಲ್ಯಾನ್ಲಿ ಫರ್ನಾಂಡಿಸ್, ಮಡಿಕೇರಿ ಸಿಎಸ್‌ಐ ಶಾಂತಿ ಚರ್ಚ್‌ನ ಎಲಿಸ್ ಕುಮಾರ್,  ಓ.ಡಿ.ಪಿ ಜಿಲ್ಲಾ ಸಂಯೋಜಕಿ ಜೋಯ್ಸಿ ಮೆನೇಜಸ್ ಮತ್ತಿತರರು ಇದ್ದರು.         

ಪಶುಪಾಲನಾ ಇಲಾಖೆ ಉಪ ನಿರ್ದೇಶಕರಿಗೆ ಆತ್ಮೀಯ ಸನ್ಮಾನ

        ಮಡಿಕೇರಿ ಮಾ.14(ಕರ್ನಾಟಕ ವಾರ್ತೆ):-ಇದೇ ಮಾರ್ಚ್ 31ಕ್ಕೆ ನಿವೃತ್ತಿಯಾಗಲಿರುವ ಪಶುಪಾಲನ ಇಲಾಖೆಯ ಉಪ ನಿರ್ದೇಶಕರಾದ ಡಾ ಕೆ.ಸಿ.ಕೃಷ್ಣಮೂರ್ತಿ ಅವರನ್ನು ಜಿಲ್ಲಾಡಳಿತ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.

        ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಕೃಷ್ಣಮೂರ್ತಿ ಅವರಿಗೆ ಶಾಲು, ಫಲ ತಾಂಬೂಲ ನೀಡಿ ಸನ್ಮಾನಿಸಿದರು.

       ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಕೃಷ್ಣಮೂರ್ತಿಯವರ ಶ್ರದ್ಧೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮೆಚ್ಚುವಂತಹದ್ದು. ಇಂತಹ ಹಿರಿಯರ ಸೇವೆ ಹೊಸದಾಗಿ ಸರ್ಕಾರಿ ನೌಕರರಿಗೆ ಸೇರುವ ಯುವಕರಿಗೆ ಮಾದರಿ ಎಂದು ಗುಣಗಾಣ ಮಾಡಿದರು.

        ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಪಶುಪಾಲನಾ ಇಲಾಖೆಯಲ್ಲಿ ಬಹಳಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

        ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಮಾತನಾಡಿ ಜಿಲ್ಲಾಡಳಿತ ವತಿಯಿಂದ ವಹಿಸಿದ ಕೆಲಸವನ್ನು ಕೃಷ್ಣಮೂರ್ತಿ ಅವರು ನಿಷ್ಠೆಯಿಂದ ನಿರ್ವಹಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

        ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೆ.ಸಿ.ಕೃಷ್ಣಮೂರ್ತಿ ಅವರು 1976ರಲ್ಲಿ ಕೆಲಸಕ್ಕೆ ಸೇರಿ ಸುಮಾರು 36 ವರ್ಷಗಳ ಕಾಲ ಪಶುಪಾಲನಾ ಇಲಾಖೆಯಲ್ಲಿ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಜನ ಮೆಚ್ಚುವಹಾಗೆ  ಸೇವೆ ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಮಾ.19ರಂದು ಶಾಸಕರಿಂದ ಗ್ರಾಮ ವಾಸ್ತವ್ಯ

        ಮಡಿಕೇರಿ ಮಾ.14(ಕರ್ನಾಟಕ ವಾರ್ತೆ):- ಬೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಭಂಡಾರ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾರ್ಚ್, 19ರಂದು ವಾಸ್ತವ್ಯ ಹೂಡಲಿದ್ದಾರೆ ಎಂದು ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಮಾ.17ರಂದು ಸಮುದಾಯ ಆರೋಗ್ಯ ದಿನಾಚರಣೆ

           ಮಡಿಕೇರಿ ಮಾ.14(ಕರ್ನಾಟಕ ವಾರ್ತೆ):-ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಕೊಡಗು ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಂಪಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸುಳ್ಯ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಸಂಪಾಜೆ, ಚೆಂಬು, ಪೆರಾಜೆ, ಮದೆ, ಗಾಳಿಬೀಡುವಿನ ಗ್ರಾಮ ಪಂಚಾಯತ್ ಮತ್ತು ಸಂಪಾಜೆ ಲಯನ್ಸ್ ಕ್ಲಬ್ ಇದರ ಆಶ್ರಯದಲ್ಲಿ ಮಾರ್ಚ್, 17ರಂದು ಬೆಳಗ್ಗೆ 10.30ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ವಠಾರದಲ್ಲಿ ಸಮುದಾಯ ಆರೋಗ್ಯ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

       ಸಂಪಾಜೆ ಗ್ರಾ.ಪಂ. ಅಧ್ಯಕ್ಷರಾದ ಬಾಲಚಂದ್ರ ಕಳಗಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪಾಜೆ ಕ್ಷೇತ್ರ ಜಿ.ಪಂ. ಸದಸ್ಯರಾದ ಬಬ್ಬೀರ ಸರಸ್ವತಿ ಅವರು ಉದ್ಘಾಟಿಸಲಿದ್ದಾರೆ.

ಏಪ್ರಿಲ್‌ನಲ್ಲಿ ಪತ್ರಕರ್ತರ ಸಂಘದ ಪ್ರಶಸ್ತಿ ವಿತರಣೆ

     ಮಡಿಕೇರಿ,ಮಾ.14; ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಅತ್ಯುತ್ತಮ ವರದಿಗಳಿಗಾಗಿ ನೀಡಲಾಗುವ ಪ್ರಶಸ್ತಿ ವಿತರಣೆ ಹಾಗೂ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮವನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

    ತಾ.13ರಂದು ಕಕ್ಕಬೆ ಬಳಿಯ ಕಬ್ಬಿನಕಾಡುವಿನ  ಹಸಿರು ಪರಿಸರದ ನಡುವೆ ಇರುವ ತಾಮರ ರೆಸಾರ್ಟ್‌ನಲ್ಲಿ ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕ್ಯಗೊಳ್ಳಲಾಯಿತು. ಸಂಘದ ಅಧ್ಯಕ್ಷ ಶ್ರಿಧರ್ ನೆಲ್ಲಿತ್ತಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಏಪ್ರಿಲ್ ತಿಂಗಳ 15ರಂದು ಕಾರ್ಯಕ್ರಮ ಏರ್ಪಡಿಸಿ ವಿತರಣೆ ಹಾಗೂ ಸನ್ಮಾನ ಮಾಡಲು ತೀರ್ಮಾನಿಸಲಾಯಿತು. ಇದರೊಂದಿಗೆ ರಾಜ್ಯ ಸಂಘದಿಂದ ಗುರುತಿನ ಚೀಟಿ ಏಪ್ರಿಲ್‌ನಲ್ಲಿ ದೊರಕಲಿದ್ದು, ಅದನ್ನು ಕೂಡ ಅಂದೇ ವಿತರಣೆ ಮಾಡುವಂತೆ ತೀರ್ಮಾನಿಸಲಾಯಿತು. ಸಂಘದ ಎಲ್ಲ ಸದಸ್ಯರುಗಳು ಖುದ್ದಾಗಿ ಸಹಿ ಮಾಡಿ ಗುರುತಿನ ಚೀಟಿ ಪಡೆದುಕೊಳ್ಳುವಂತೆ ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಭೆಗಳಿಗೆ ಗೈರು ಹಾಜರಾಗುವ ನಿರ್ದೇಶಕರುಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆಯೂ ತೀರ್ಮಾನಿಸಲಾಯಿತು. ಸಂಘದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ರೆಸಾರ್ಟ್‌ನ ವ್ಯವಸ್ಥಾಪಕ ಉತ್ತಪ್ಪ ಹಾಗೂ ಎಫ್ ಅಂಡ್ ಬಿ ವಿಭಾಗದ ವ್ಯವಸ್ಥಾಪಕ ಜಾನ್ ಅವರುಗಳು ಸಭಾಂಗಣ ಹಾಗೂ ಭೋಜನದ ವ್ಯವಸ್ಥೆ ಕಲ್ಪಿಸಿದ್ದರು. ಸಂಘದ ಖಜಾಂಚಿ ಅಜ್ಜಾಮಾಡ ಕುಟ್ಟಪ್ಪ, ಕಾರ್ಯದರ್ಶಿ ಲೋಕೇಶ್ ಸಾಗರ್ ಸೇರಿದಂತೆ ನಿರ್ದೇಶಕರುಗಳು ಹಾಜರಿದ್ದರು. ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಸ್ವಾಗತಿಸಿದರೆ, ಉಪಾಧ್ಯಕ್ಷ ಚೆಟ್ಟಂಗಡ ರವಿಸುಬ್ಬಯ್ಯ ವಂದಿಸಿದರು.

 ಪತ್ರಕರ್ತರ ಸಂಘಕ್ಕೆ ಆಯ್ಕೆ

       ಮಡಿಕೇರಿ,ಮಾ14; ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರನ್ನಾಗಿ ವೀರಾಜಪೇಟೆ ವಿಭಾಗದಿಂದ ಪಳೆಯಂಡ ಪಾರ್ಥ ಚಿಣ್ಣಪ್ಪ ಅವರನ್ನು ನೇಮಕ ಮಾಡಲಾಗಿದೆ. ನಿನ್ನೆ ಕಕ್ಕಬೆ ಬಳಿಯ ಕಬ್ಬಿನಕಾಡುವಿನ ತಾಮರ ರೆಸಾರ್ಟ್‌ನಲ್ಲಿ ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಪಾರ್ಥ ಅವರು, ಸಂಘದ ಕ್ಷೇಮಾಭಿವೃದ್ಧಿ ನಿಧಿ ಸಮಿತಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಅದೇ ರೀತಿ ಸಂಘದ ನಿರ್ದೇಶಕರಾಗಿ ಸಿದ್ದಾಪುರ ವಿಭಾಗದ ಎಸ್.ಎಂ.ಮುಬಾರಕ್ ಅವರನ್ನು ನೇಮಕ ಮಾಡಲಾಗಿದೆ. ಕ್ಷೇಮಾಭಿವೃದ್ಧಿ ನಿಧಿಗೆ ಸದಸ್ಯರನ್ನಾಗಿ ಅರುಣ್ ಕೂರ್ಗ್ ಅವರನ್ನು ನೇಮಕ ಮಾಡಲಾಗಿದೆ. ಆಡಳಿತ ಮಂಡಳಿಯಲ್ಲಿ ತೆರವಾಗಿದ್ದ ಈ ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

 ಮಾರ್ಚ್, 15ರ ಕಾರ್ಯಕ್ರಮ

ಮಾ.15ರಂದು ವಿಶ್ವ ಗ್ರಾಹಕರ ದಿನಾಚರಣೆ

            ಮಡಿಕೇರಿ ಮಾ.14(ಕರ್ನಾಟಕ ವಾರ್ತೆ):-ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಾರ್ಚ್, 15ರಂದು ಬೆಳಗ್ಗೆ 10 ಗಂಟೆಗೆ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

         ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಶೋಕ್ ಜಿ. ನಿಜಗಣ್ಣವರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮಹಿಳಾ ಸದಸ್ಯರಾದ ಎ.ಎಸ್. ಹೇಮಲತಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.         ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಅವರು ಪಾಲ್ಗೊಳ್ಳಲಿದ್ದಾರೆ.