Government of Karnataka

Department of Information

Thursday 30/06/2016

District News 21-04-2016

Date : Thursday, April 21st, 2016

ಹಸಿರು ವಲಯದಲ್ಲಿ ಲೇಔಟ್ ನಿರ್ಮಾಣಕ್ಕೆ ನಿರ್ಧಾಕ್ಷಣ್ಯ

ಬೆಂಗಳೂರು, ಏಪ್ರಿಲ್ 21: ಬೆಂಗಳೂರು ಸುತ್ತಮುತ್ತಲಿನ ಹಸಿರು ವಲಯಗಳಲ್ಲಿ ಅನಧಿಕೃತ ಲೇಔಟ್ ತಲೆಎತ್ತಲು ಕಾರಣರಾದವರ ವಿರುದ್ಧ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಮನಿರ್ದೇಶನ ಸದಸ್ಯ ಶ್ರೀ ರಮೇಶ್ ಅವರು ಬೆಂಗಳೂರಿನ ಸುತ್ತಮುತ್ತ ಹಸಿರು ವಲಯಗಳಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಈ ಹಿಂದಿನ ಸಭೆಯ ಗಮನಕ್ಕೆ ತಂದಿದ್ದರೂ ಸಹ ಇದುವರೆವಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಪ್ರಸ್ತಾಪಿಸಿದರು. ಇದೇ ರೀತಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಬೆಟ್ಟದಲಸೂರು, ಜಾಲಹೋಬಳಿ ಹೀಗೆ ಬೆಂಗಳೂರು ನಗರ ಜಿಲ್ಲೆಯ ಸಾಕಷ್ಟು ಕಡೆ ಅನಧಿಕೃತ ಲೇಔಟ್‍ಗಳು ತಲೆ ಎತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಶಾಸಕ ವಿಶ್ವನಾಥ್ ಅವರು ಸಚಿವರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಇಂತಹ ಲೇಔಟ್‍ಗಳಲ್ಲಿ ಬೆಸ್ಕಾಂ ಸಂಸ್ಥೆಯು ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಸಹ ಇಲಾಖಾ ಅಧಿಕಾರಿಗಳ ನಿರ್ಲಕ್ಷತೆಯಾಗಿದ್ದು, ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲೆಯ ಬೆಟ್ಟದಲಸೂರು ಕ್ವಾರೆಯು ಸುಮಾರು 250 ಅಡಿ ಆಳದಲ್ಲಿದ್ದು, 200 ಅಡಿ ಆಳದಲ್ಲಿ ನೀರು ನಿಂತಿರುತ್ತದೆ. ಈ ಕೆರೆಯಲ್ಲಿ ಈಜಲು ಹೋದ ಅನೇಕರು ಪ್ರಾಣ ಕಳೆದುಕೊಂಡಿರುತ್ತಾರೆ. ಈ ಕ್ವಾರೆ ಸುತ್ತ ತಡೆಗೋಡೆಯನ್ನು ನಿರ್ಮಿಸಲು ರೂ. 80.00 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಲ್ಲದೆ ಈ ಕೆರೆಯನ್ನು ನಗರ ಜಿಲ್ಲೆಗೆ ಜಲಸಂಪನ್ಮೂಲವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಸಚಿವರು ಆದೇಶ ನೀಡಿದರು. ಇಂತಹ 79 ಅಪಾಯಕಾರಿ ಕೆರೆಗಳಿದ್ದು, ಅಂತಹ ಕೆರೆಗಳಿಗೆ ಮುಳ್ಳುತಂತಿ ನಿರ್ಮಿಸಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರು ಸಚಿವರ ಗಮನಕ್ಕೆ ತಂದರು.

ಪಾಪನಹಳ್ಳಿ ಗ್ರಾಮದಲ್ಲಿ ರಾಜ್ಯಕ್ಕೆ ಮಾದರಿಯಾದ ಶಾಲೆ ಇದ್ದು, ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಕೂಡಲೇ ನೇಮಕಾತಿ ಮಾಡಬೇಕೆಂದು ಆಗ್ರಹಪಡಿಸಿದ ಸದಸ್ಯರು ಈ ಶಾಲೆಯನ್ನು ಸುಮಾರು 4.5 ಕೋಟಿ ವೆಚ್ಚದಲ್ಲಿ ದಾನಿಗಳು ನೀಡಿದ್ದು, ಇಂತಹ ಶಾಲೆಗೆ ಶಿಕ್ಷಕರು ಇಲ್ಲದಿರುವುದು ದಾನಿಗಳಿಗೆ ನೀಡಿದ ಅಗೌರವ. ಆದ್ದರಿಂದ ನೇಮಕಾತಿ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಬೇಕೆಂದು ಸಚಿವರಿಗೆ ತಿಳಿಸಿದರು. ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀ ಮಂಜುನಾಥ್ ಅವರು ಆರ್.ಟಿ.ಇ. ನೇಮಕಾತಿ ಶೇಕಡಾ 99 ರಷ್ಟು ಮುಗಿದಿದೆ. ಆನ್‍ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದೇ ಏಪ್ರಿಲ್ ಮಾಹೆಯಲ್ಲಿ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ನಗರ ಜಿಲ್ಲೆಯಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿದ್ದು, ಅದಕ್ಕೆ ಪೂರಕವಾಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. 5 ತಿಂಗಳಿಂದ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಿಂದ ಯಾವುದೇ ಬೋರ್‍ವೆಲ್ ಕೊರೆದಿರುವುದಿಲ್ಲ ಎಂದು ಶಾಸಕ ಶ್ರೀ ವಿಶ್ವನಾಥ್ ಅವರು ಆಕ್ಷೇಪಣೆ ವ್ಯಕ್ತಪಡಿಸಿದರು. ಪ್ರಸಕ್ತ ವರ್ಷದಲ್ಲಿ ರೂ. 60.25 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ನೀರಿನ ಸಮಸ್ಯೆ ಇರುವ 25 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಬೋರ್‍ವೆಲ್‍ಗಾಗಿ 117 ಅರ್ಜಿಗಳಿಗೆ ಶಾಸಕರು ಒಪ್ಪಿಗೆ ನೀಡಿದ್ದಾರೆ. ಇದಕ್ಕಾಗಿ ರೂ. 3.00 ಕೋಟಿ ಹಣವನ್ನು ಒದಗಿಸಲಾಗಿದೆ ಎಂದು ಕಾರ್ಯಪಾಲಕ ಇಂಜಿನಿಯರ್ ಅವರು ಮಾಹಿತಿ ನೀಡಿದರು. ಕಳೆದ ವರ್ಷ ಬೋರ್‍ವೆಲ್ ದುರಸ್ತಿಗಾಗಿ ಜಿಲ್ಲೆಗೆ ರೂ. 6.5 ಕೋಟಿ ಬಿಡುಗಡೆ ಮಾಡಲಾಗಿದ್ದು, ಈ ವರ್ಷ ರೂ. 7.00 ಕೋಟಿ ಬಿಡುಗಡೆ ಮಾಡಲು ಸರ್ಕಾರವನ್ನು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರು ಹೇಳಿದರು.

ದಕ್ಷಿಣ ಪೀನಾಕ್ಷಿಯಿಂದ ಆನೇಕಲ್ ತಾಲ್ಲೂಕಿನ 62 ಕೆರೆಗಳಿಗೆ ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸಲು ಯೋಜನೆ ಸಿದ್ಧವಾಗಿದ್ದು, ಆಯವ್ಯಯದಲ್ಲಿ ರೂ. 240 ಕೋಟಿ ಅನುದಾನ ಒದಗಿಸಲಾಗಿದೆ. ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಾರ್ಯಾರಂಭ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಅನಧಿಕೃತವಾಗಿ ಬಂಡೆಗಳನ್ನು ಸ್ಪೋಟಿಸುವುದರಿಂದ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗುತ್ತಿದೆ. ಇವರ ವಿರದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಶ್ರೀ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದಾಗ ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಡೆ ದಾಳಿ ಮಾಡಿ ಅವರ ವಿರುದ್ಧ ಎಫ್‍ಐಅರ್ ಹಾಕಿದೆ ಎಂದು ಉಪವಿಭಾಗಾಧಿಕಾರಿ ಶ್ರೀ ನಾಗರಾಜು ಅವರು ಹೇಳಿದರು.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಜಿಲ್ಲೆಯಲ್ಲಿ ರೂ. 43.84 ಕೋಟಿ ವೆಚ್ಚದಲ್ಲಿ 71.47 ಕಿ.ಮೀ. ಕಳಪೆ ರಸ್ತೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕಾರಣರಾದ ಕಂಟ್ರಾಕ್ಟರ್‍ಗಳನ್ನು ಕಪ್ಪುಪಟ್ಟಿಗೆ ಸೇರಿಸಿ, ಇನ್ನು ಮುಂದೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಸ್.ಟಿ. ಸೋಮಶೇಖರ್ ಅವರು ಒತ್ತಾಯಿಸಿದರು.

2015-16ನೇ ಸಾಲಿಗೆ ಬೆಂಗಳೂರು ನಗರ ಜಿಲ್ಲೆಗೆ ಜಿಲ್ಲಾ ವಲಯ ಕಾರ್ಯಕ್ರಮಗಳಿಗೆ ರೂ. 323.33 ಕೋಟಿ ಹಾಗೂ ಯೋಜನೇತರ ಕಾರ್ಯಕ್ರಮಗಳಿಗೆ 740.37 ಕೋಟಿ ಸೇರಿ ಒಟ್ಟು 1063.70 ಕೋಟಿ ನಿಗದಿಯಾಗಿದ್ದು, ಮಾರ್ಚ್ ಅಂತ್ಯಕ್ಕೆ ರೂ. 1031.91 ಕೋಟಿ ವೆಚ್ಚ ಮಾಡಿ ಶೇಕಡಾ 97 ರಷ್ಟು ಪ್ರಗತಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಮಾರಿ ಮಂಜುಶ್ರೀ ಅವರು ಸಭೆಗೆ ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ರಾಷ್ಟ್ರ ಪ್ರಶಸ್ತಿ ಗರಿಮೆ

ಜಿಲ್ಲಾ ಪಂಚಾಯಿತಿಯ ಹಲವು ಯೋಜನೆಗಳ ಸಾಧನೆಯನ್ನು ಗುರುತಿಸಿ, ರಾಜ್ಯದಲ್ಲಿ ಬೆಂಗಳೂರು ನಗರ ಜಿಲ್ಲೆಯನ್ನು ಉತ್ತಮ ಜಿಲ್ಲಾ ಪಂಚಾಯಿತಿ ಎಂದು ಕೇಂದ್ರ ಸರ್ಕಾರ ರಾಷ್ಟ್ರ ಪ್ರಶಸ್ತಿ ನೀಡಿದೆ. ಇದಕ್ಕಾಗಿ ರೂ. 50 ಲಕ್ಷ ನಗದು ಬಹುಮಾನ ಘೋಷಿಸಿದೆ. ರಾಷ್ಟ್ರ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದಿನಾಂಕ: 24-4-2016 ರಂದು ರಾಷ್ಟ್ರಪತಿಯವರಿಂದ ಸ್ವೀಕರಿಸುವರು. ಜಿಲ್ಲೆಯ ಪೂರ್ವ ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳನ್ನು ಉತ್ತಮ ಗ್ರಾಮ ಪಂಚಾಯಿತಿಗಳೆಂದು ಪುರಸ್ಕರಿಸಿ ನಗದು ಬಹುಮಾನ ಘೋಷಿಸಲಾಗಿದೆ.

ಸಭೆಯಲ್ಲಿ ಶಾಸಕರಾದ ವಿಶ್ವನಾಥ್ ಶ್ರೀ ಎಸ್.ಟಿ.ಸೋಮಶೇಖರ್, ಆನೇಕಲ್ ಶಾಸಕ ಶ್ರೀ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಶ್ರೀ ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ಅಂಜುಂ ಪರ್ವೇಜ್ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.