Government of Karnataka

Department of Information

Friday 16/09/2016

Likely to get time to meet the Prime Minister on Wednesday: Siddaramaiah

Date : Tuesday, September 13th, 2016

ಬೆಂಗಳೂರು, ಸೆಪ್ಟೆಂಬರ್ 13 (ಕರ್ನಾಟಕ ವಾರ್ತೆ):
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಒಳಗೊಂಡಂತೆ ಹಲವು ವಿಚಾರಗಳ ಬಗ್ಗೆ ಮುಖಾಮುಖಿ ಚರ್ಚೆಗೆ ವೇದಿಕೆ ಕಲ್ಪಿಸುವಂತೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರು ಪ್ರಧಾನ ಮಂತ್ರಿ ಕಚೇರಿಯನ್ನು ಸಂಪರ್ಕಿಸಿದ್ದು, ಪ್ರಧಾನಿ ಭೇಟಿಗೆ ತಮಗೆ ಬುಧವಾರ ಕಾಲಾವಕಾಶ ಲಭಿಸುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಹಿರಿಯ ಧುರೀಣರು ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷರ ಸಭೆ ಹಾಗೂ ತುರ್ತು ಮಂತ್ರಿ ಪರಿಷತ್ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಪ್ರಧಾನಿ ಕಚೇರಿಯಿಂದ ಈ ಬಗ್ಗೆ ಖಚಿತ ಮಾಹಿತಿ ದೊರೆತ ಕೂಡಲೇ ನವದೆಹಲಿಗೆ ತೆರಳುವುದಾಗಿ ತಿಳಿಸಿದರು.

ನೀರು ಬಿಡುಗಡೆ ಅನಿವಾರ್ಯ
ಕಾವೇರಿ ಜಲ ವಿವಾದ ಕುರಿತಂತೆ ಸೆಪ್ಟೆಂಬರ್ 5 ರಂದು ಭಾರತ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪು ಹಾಗೂ ಸೆಪ್ಟೆಂಬರ್ 12 ರಂದು ಹೊರಡಿಸಿದ ಮಾರ್ಪಡಿತ ಆದೇಶಗಳ ಪಾಲನೆ ಕಷ್ಟಕರವಾದರೂ ಒಕ್ಕೂಟದ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ನಾವು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸೆಪ್ಟೆಂಬರ್ 20 ರ ವರೆಗೆ ರಾಜ್ಯದ ಗಡಿಯಲ್ಲಿರುವ ಬಿಳಿಗುಂಡ್ಲು ಮಾಪನಾ ಕೇಂದ್ರಕ್ಕೆ ಪ್ರತಿ ದಿನ 12,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವುದು ಅನಿವಾರ್ಯವಾಗಿದೆ. ಸಂವಿಧಾನಾತ್ಮಕವಾಗಿ ರಚನೆಯಾದ ಯಾವುದೇ ಸರ್ಕಾರವು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವಂತಿಲ್ಲ ಅಥವಾ ತಿರಸ್ಕರಿಸುವಂತಿಲ್ಲ. ಈ ಎಲ್ಲಾ ವಿಷಯಗಳನ್ನು ಕುರಿತು ಮಂತ್ರಿಪರಿಷತ್ ಸಭೆಯಲ್ಲಿ ಸಂವಿಧಾನಾತ್ಮಕ, ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ಅವರು ವಿವರಿಸಿದರು.

ಅಕ್ಟೋಬರ್ 18 ರಂದು ವಿಶೇಷ ಮೇಲ್ಮನವಿ ವಿಚಾರಣೆಗೆ
ಕಾವೇರಿ ನ್ಯಾಯಾಧಿಕರಣದ ಐ-ತೀರ್ಪಿನ ಮೇಲೆ ರಾಜ್ಯ ಸರ್ಕಾರವು ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೂಲ ವಿಶೇಷ ಮೇಲ್ಮನವಿಯು ಅಕ್ಟೋಬರ್ 18 ರಂದು ವಿಚಾರಣೆಗೆ ಬರಲಿದೆ. ಈ ವಿಷಯವನ್ನು ಗಮನದಲ್ಲಿರಿಸಿಕೊಂಡು ಸಾಧಕ-ಬಾಧಕಗಳನ್ನು ತುಲನೆ ಮಾಡಿ, ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಆದರೆ, ಈ ವಿಷಯವು ರಾಜ್ಯದ ಕಾವೇರಿ ಕಣಿವೆಯ ಜನರ ಆವೇಶ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ಎಲ್ಲಾ ಕಠಿಣ ಕ್ರಮಗಳನ್ನು ಜರುಗಿಸಲು ತುರ್ತು ಮಂತ್ರಿ ಪರಿಷತ್ ಸಭೆಯು ನಿರ್ಧರಿಸಿದೆ. ಯಾರೇ ಆಗಲೀ, ಕಾನೂನು ಕೈಗೆತ್ತಿ ಕೊಂಡು, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಬಾರದು. ಒಂದು ವೇಳೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದಲ್ಲಿ, ಅಂತಹವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಮೃತ ಉಮೇಶ್ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ
ಸೋಮವಾರ ನಗರದಲ್ಲಿ ನಡೆದ ಗೋಲೀಬಾರ್‍ನಲ್ಲಿ ಮೃತಪಟ್ಟ ಉಮೇಶ್ ಕುಟುಂಬಕ್ಕೆ ಈಗಾಗಲೇ 10 ಲಕ್ಷ ರೂ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ನಗರದ ಜನತೆಗೆ ಭರವಸೆ
ನಗರದ ನಾಗರೀಕರು, ವಿಶೇಷವಾಗಿ ಭಾಷಾ ಅಲ್ಪಸಂಖ್ಯಾತರು ಹಾಗೂ ಹೊರ ರಾಜ್ಯಗಳಿಂದ ಬಂದವರಿಗೆ, ಇನ್ನು ಮುಂದೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ. ಅಲ್ಲದೆ, ಅವರ ಆಸ್ತಿ-ಪಾಸ್ತಿಗಳನ್ನು ರಕ್ಷಣೆ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ನಗರದ ಜನತೆಗೆ ಮುಖ್ಯಮಂತ್ರಿ ಭರವಸೆ ನೀಡಿದರು. ಅಂತೆಯೇ, ರಾಜ್ಯದಲ್ಲಿ ತಮಿಳು ಭಾಷಿಕರ ಆಸ್ತಿ-ಪಾಸ್ತಿ ಹಾಗೂ ಜೀವ ರಕ್ಷಣೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಛರಿಸಿದ ಸಿದ್ದರಾಮಯ್ಯ ಅವರು ಅದೇ ರೀತಿ ತಮಿಳುನಾಡಿನಲ್ಲಿರುವ ಕನ್ನಡಿಗರ ಹಿತವನ್ನೂ ಅಲ್ಲಿನ ಸರ್ಕಾರ ಕಾಯ್ದುಕೊಳ್ಳಬೇಕು. ಈ ಬಗ್ಗೆ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ ಎಂದರು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರವೂ ಹಿರಿದು. ರಾಜ್ಯದ ಹಿತಕಾಯಲು ಮಾಧ್ಯಮಗಳು ಸರ್ಕಾರದ ಜೊತೆ ಕೈಜೋಡಿಸಬೇಕು. ಅಲ್ಲದೆ, ಯಾವುದೇ ಪ್ರಚೋದನಾತ್ಮಕ ದೃಶ್ಯಗಳನ್ನು ಪದೇ ಪದೇ ಬಿತ್ತರಿಸಬಾರದು ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ಮನವಿ ಮಾಡಿದರು. ಬೆಂಗಳೂರು ನಗರ ಕೇವಲ ಕರ್ನಾಟಕದ ರಾಜಧಾನಿ ಮಾತ್ರವಲ್ಲ. ಅಂತಾರಾಷ್ಟ್ರಮಟ್ಟದ ನಗರವಾಗಿದೆ. ಬೆಂಗಳೂರಿಗೆ ತನ್ನದೇ ಆದ ವರ್ಚಸ್ಸಿದೆ. ಆ ವರ್ಚಸ್ಸಿಗೆ ಧಕ್ಕೆ ಬಾರದಂತೆ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು.