Government of Karnataka

Department of Information

Friday 16/09/2016

More than 335 persons arrested responsible for riots, says Dr G Parameshwar

Date : Tuesday, September 13th, 2016

ಬೆಂಗಳೂರು, ಸೆಪ್ಟೆಂಬರ್ 13 (ಕರ್ನಾಟಕ ವಾರ್ತೆ):
ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿದಿನವೂ 12,000 ಕ್ಯೂಸೆಕ್ಸ್ ನೀರು ಬಿಡಬೇಕು ಎಂಬ ಭಾರತದ ಸರ್ವೋಚ್ಛ ನ್ಯಾಯಾಲಯದ ಮಾರ್ಪಡಿತ ಆದೇಶದ ನಂತರ ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಹೊರವಲಯದಲ್ಲಿ ಉಂಟಾದ ಗಲಭೆಗೆ ಕಾರಣರಾದ 335 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವೀಡಿಯೋ ದೃಶ್ಯಾವಳಿಗಳಲ್ಲಿನ ಸಾಕ್ಷ್ಯಗಳನ್ನು ಆಧರಿಸಿ ಮತ್ತಷ್ಟು ವ್ಯಕ್ತಿಗಳನ್ನು ಬಂಧಿಸುವ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ತಿಳಿಸಿದರು.

ತುರ್ತು ಮಂತ್ರಿ ಪರಿಷತ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಮವಾರ ನಡೆದ ಘಟನೆಗಳನ್ನು ದುರಾದೃಷ್ಠಕರ ಎಂದು ಬಣ್ಣಿಸಿದಲ್ಲದೆ, ಈ ಗಲಭೆಗಳಲ್ಲಿ ಒಟ್ಟು 97 ವಾಹನಗಳು ಭಸ್ಮವಾಗಿದೆ. ಅಲ್ಲದೆ, 103 ವಾಹನಗಳು ಭಾಗಶಃ ಹಾನಿಯಾಗಿದೆ. ಇಂದು ಮಧ್ಯಾಹ್ನದ ನಂತರ ಬೆಂಗಳೂರಿನ ಯಾವುದೇ ಭಾಗದಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ.

ಭದ್ರತಾ ವ್ಯವಸ್ಥೆಗೆ ನೆರವಾಗಲು ಈಗಾಗಲೇ ಬಂದಿರುವ ಕೇಂದ್ರದ 10 ಕಂಪನಿಗಳ ಜೊತೆಗೆ ಹೆಚ್ಚುವರಿಯಾಗಿ ಮತ್ತೂ 10 ಕಂಪನಿಗಳು ರಾಜ್ಯಕ್ಕೆ ಆಗಮಿಸಿವೆ. ಅವುಗಳನ್ನು ನಗರದ ಕಾನೂನು ಮತ್ತು ಸುವ್ಯವಸ್ಥೆಗೆ ನೆರವಾಗಲು ನಿಯೋಜನೆ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಸೋಮವಾರ ನಡೆದ ಘಟನೆಯ ಹಿನ್ನೆಲೆಯಲ್ಲಿ ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಪ್ರ್ಯೂ ಮುಂದುವರೆಸಲಾಗಿದೆ. ಪರಿಸ್ಥಿತಿ ತಿಳಿಯಾದಂತೆ ಕಪ್ರ್ಯೂ ಹಿಂದಕ್ಕೆ ಪಡೆಯಲು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ 13 ಕಡೆ ಲಾಠಿ ಪ್ರಹಾರ ಹಾಗೂ 19 ಕಡೆ ಆಶ್ರು ವಾಯು ಸಿಡಿಸಿ ಜನರನ್ನು ಚದುರಿಸಲಾಗಿದೆ ಎಂದು ಅವರು ವಿವರ ನೀಡಿದರು.

ಯಾರೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಗೃಹ ಸಚಿವರು ಮನವಿ ಮಾಡಿ ನೆರೆಯ ರಾಜ್ಯದ ತಮಿಳು ಭಾಷಿಗರನ್ನು ಪೊಲೀಸ್ ಬೆಂಗಾವಲಿನಲ್ಲಿ 300 ವಾಹನಗಳಲ್ಲಿ ತಮಿಳುನಾಡು ಗಡಿ ಪ್ರದೇಶಕ್ಕೆ ಸುರಕ್ಷಿತವಾಗಿ ಕಳುಹಿಸಲಾಗಿದೆ. ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯಲ್ಲಿ ತೆರೆಯಲಾಗಿದೆ ಎಂದು ಡಾ ಪರಮೇಶ್ವರ್ ಅವರು ಹೇಳಿದರು.