Government of Karnataka

Department of Information

Sunday 12/06/2016

Police withdraw mass leave, Says Dr. G. Parameshwar

Date : Friday, June 3rd, 2016

ಬೆಂಗಳೂರು, ಜೂನ್ 3 (ಕರ್ನಾಟಕ ವಾರ್ತೆ) : ಬೇಡಿಕೆಯ ಈಡೇರಿಕೆಗಾಗಿ ಸಾಮೂಹಿಕ ರಜೆ ಹಾಕಿದ್ದ ಪೊಲೀಸ್ ಸಿಬ್ಬಂದಿ ತಮ್ಮ ರಜಾ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಜೂನ್ 4 ರಂದು ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಯೋಜಿಸಿದ್ದ ಪ್ರಯತ್ನವನ್ನು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯ ಮನವೊಲಿಸಿದ ಹಿನ್ನೆಲೆಯಲ್ಲಿ, ತಾವು ಈಗಾಗಲೇ ಸಲ್ಲಿಸಿದ್ದ ರಜಾ ಅರ್ಜಿಗಳನ್ನು ಪೊಲೀಸ್ ಸಿಬ್ಬಂದಿ ವಾಪಸ್ ಪಡೆದಿದ್ದಾರೆ ಎಂದು ಸಚಿವರು ತಿಳಿಸಿದರು.

ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ. ಪೊಲೀಸರ ಮನವಿಯನ್ನು ಮುಖ್ಯಮಂತ್ರಿಯವರನ್ನು ಒಳಗೊಂಡಂತೆ ತಾವೂ ಕೂಡಾ ಮುಕ್ತ ಮನಸ್ಸಿನಿಂದ ಪರಿಗಣಿಸಿದ್ದೇವೆ. ರಾಜ್ಯ ಸರ್ಕಾರದ ಮನವಿಯನ್ನು ಎಲ್ಲಾ ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ಸ್ಪಂದಿಸಿ ರಜಾ ಅರ್ಜಿಗಳನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಹೇಳಿದರು.

ಪರೇಡ್ ಕಡ್ಡಾಯ, ವಾರಕ್ಕೊಮ್ಮೆ ರಜೆ

ಇನ್ನು ಮುಂದೆ ರಾಜ್ಯದ ಎಲ್ಲಾ ಠಾಣೆಗಳಲ್ಲಿ ಪರೇಡ್ ಕಡ್ಡಾಯ. ಪರೇಡ್ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಮುಕ್ತವಾಗಿ ಸಿಬ್ಬಂದಿಯೊಂದಿಗೆ ಮಾತನಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಇಂದು ರಾಜ್ಯಾದ್ಯಂತ ನಡೆದ ಪರೇಡ್‍ನಲ್ಲಿ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರದ ಭರವಸೆಯನ್ನು ಪೊಲೀಸ್ ಸಿಬ್ಬಂದಿಗೆ ವಿವರಿಸಿದ ಹಿನ್ನೆಲೆಯಲ್ಲಿ, ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜಾ ಅರ್ಜಿಗಳನ್ನು ವಾಪಸ್ ಪಡೆದಿದ್ದಾರೆ. ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಾರದಲ್ಲಿ ಒಂದು ದಿನ ರಜೆ ಮಂಜೂರು ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಕಠಿಣ ಕ್ರಮ

ಕೆಲವು ಸಂಘಟನೆಗಳು ಅನುಕಂಪ ತೋರುವ ನೆಪದಲ್ಲಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಅಂತಹ ಸಂಘಟನೆಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಪ್ರತಿಭಟನೆಗೆ ರಾಜಕೀಯ ಪಕ್ಷಗಳೂ ಕೂಡಾ ಪ್ರಚೋದನೆ ನೀಡಿದರೆ, ಅಂತಹ ಪಕ್ಷಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಪೊಲೀಸ್ ಇಲಾಖೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ, ಕೆಲವು ಬಾಹ್ಯ ಸಂಘಟನೆಗಳು ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡುತ್ತಿವೆ. ಅಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಮನೆ ಖಾಲಿ !

ಪೊಲೀಸರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪೊಲೀಸ್ ಸಂಘಟನೆ ಎಂದು ಬಣ್ಣಿಸಿಕೊಂಡಿದ್ದ ನೋಂದಣಿ ಇಲ್ಲದ ಹಾಗೂ ಮಾನ್ಯತೆ ಪಡೆಯದ ಸಂಘದ ಪರವಾಗಿ ವಕೀಲ ಅಮೃತೇಶ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ತಿಸ್ಕರಿಸಿದೆ. ಪೊಲೀಸರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಪೊಲೀಸ್ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದಾಗಿ ಸರ್ಕಾರ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಮೀರಿ ಪೊಲೀಸ್ ಸಿಬ್ಬಂದಿಯ ಬದಲಾಗಿ ಅವರ ಕುಟುಂಬ ವರ್ಗದವರನ್ನು ಪ್ರತಿಭಟನೆಗೆ ಪ್ರಚೋದಿಸಿದಲ್ಲಿ, ಕುಟುಂಬದವರ ವಿರುದ್ಧವೂ ಕ್ರಮ ಜರುಗಿಸುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ. ಒಂದು ವೇಳೆ ಕುಟುಂಬದವರು ಪೊಲೀಸ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದರೆ, ಮನೆ ಖಾಲಿ ಮಾಡಿಸುವುದಾಗಿಯೂ ಸಚಿವರು ಎಚ್ಚರಿಸಿದರು.

ಪರ್ಯಾಯ ವ್ಯವಸ್ಥೆ

ಒಂದು ವೇಳೆ ಶನಿವಾರದಂದು ಪೊಲೀಸ್ ಸಿಬ್ಬಂದಿ ಮುಷ್ಕರ ನಡೆಸಲು ಮುಂದಾದಲ್ಲಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ.

ಕೇಂದ್ರ ಸರ್ಕಾರದಿಂದ ಗಡಿ ಭದ್ರತಾ ಪಡೆ, ಕೇಂದ್ರ ಕಾಯ್ದಿಟ್ಟ ಮೀಸಲು ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಇಂಡೋ ಟಿಬೇಟನ್ ಬಾರ್ಡರ್ ಪೊಲೀಸ್ ಪಡೆಯ ಒಟ್ಟು 13 ಕಂಪನಿಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಕೇಂದ್ರ ಮಹಿಳಾ ಪೊಲೀಸ್ ಪಡೆ ಹಾಗೂ 11,000 ಕ್ಕೂ ಹೆಚ್ಚು ಗೃಹ ರಕ್ಷಕ ದಳ ಸಿಬ್ಬಂದಿಯನ್ನೂ ಕಾಯ್ದಿರಿಸಲಾಗಿದೆ ಎಂದರು.

ಸಿಬ್ಬಂದಿ ನೇಮಕ

ಪೊಲೀಸ್ ಇಲಾಖೆಯನ್ನು ಅಗತ್ಯ ಸೇವಾ ಕಾಯ್ದೆಯ ವ್ಯಾಪ್ತಿಗೆ ತಂದಿರುವುದರಿಂದ ಇನ್ನು ಮುಂದೆ ಪೊಲೀಸ್ ಸಿಬ್ಬಂದಿಯ ನೇಮಕಾತಿಗಳಿಗೆ ಆರ್ಥಿಕ ಇಲಾಖೆಯ ಅನುಮತಿ ಅನಗತ್ಯ. ಇನ್ನೆರಡು ವರ್ಷಗಳಲ್ಲಿ 15,000 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಕಳೆದ ಮೂರು ವರ್ಷಗಳಲ್ಲಿ 364 ಸಬ್ ಇನ್ಸ್‍ಪೆಕ್ಟರ್‍ಗಳ ನೇಮಕಾತಿಯಾಗಿದೆ. ಅಲ್ಲದೆ, 215 ಸಬ್ ಇನ್ಸ್‍ಪೆಕ್ಟರ್‍ಗಳು ತರಬೇತಿಯಲ್ಲಿದ್ದಾರೆ. ಜೊತೆಗೆ, 7,642 ಪೊಲೀಸ್ ಕಾನ್ಸ್‍ಟೇಬಲ್‍ಗಳ ನೇಮಕಾತಿಯಾಗಿದ್ದಾರೆ. ಅಂತೆಯೇ, 6,389 ಕಾನ್ಸ್‍ಟೇಬಲ್‍ಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ವಿವರಿಸಿದರು.

ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡಾಗ ಕೆಳಸ್ಥರದ ಪೊಲೀಸರ ಮೇಲಿನ ಒತ್ತಡ ಸಂಪೂರ್ಣ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದರು.

ವೇತನ ಪರಿಷ್ಕರಣೆ, ತಾರತಮ್ಯಗಳ ನಿವಾರಣೆ

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿಗೆ ವೇತನ ಕಡಿಮೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ವೇತನ ಪರಿಷ್ಕರಣೆಯಾಗಿದೆ. ನಮ್ಮ ರಾಜ್ಯದಲ್ಲಿ ವೇತನ ಪರಿಷ್ಕರಣಾ ಹಂತದಲ್ಲಿದೆ. ಪರಿಷ್ಕರಣೆಯ ಸಂದರ್ಭದಲ್ಲಿ ಎಲ್ಲಾ ತಾರತಮ್ಯಗಳನ್ನು ನಿವಾರಣೆ ಮಾಡಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.

ಪೊಲೀಸರಿಗೆ ವಸತಿ

ಪೊಲೀಸ್ ಸಿಬ್ಬಂದಿಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸಲು ತಲಾ 15 ಲಕ್ಷ ರೂ ವೆಚ್ಚದಲ್ಲಿ ರಾಜ್ಯ ಸರ್ಕಾರ ಈವರೆಗೆ 659 ಕೋಟಿ ರೂ ವೆಚ್ಚದಲ್ಲಿ 4,316 ಮನೆಗಳನ್ನು ನಿರ್ಮಿಸಿದೆ. ಒಟ್ಟು 11,000 ಮನೆಗಳ ನಿರ್ಮಾಣಕ್ಕೆ ಉದ್ದೇಶಿಸಿ, ಇದಕ್ಕಾಗಿ 1,818 ಕೋಟಿ ರೂ ಅನುದಾನ ಮೀಸಲಿರಿಸಲಾಗಿದೆ. ಮುಂದಿನ ಹತ್ತು ತಿಂಗಳಲ್ಲಿ ಪೊಲೀಸರ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಬ್ರಾಂಡೆಡ್ ಷೂ ! ಬ್ರಾಂಡೆಡ್ ಸಮವಸ್ತ್ರ !!

ರಾಜ್ಯದ ಎಲ್ಲಾ ಪೊಲೀಸ್ ಕಾನ್ಸ್‍ಟೇಬಲ್‍ಗಳಿಗೂ ಗುಣಮಟ್ಟದ ಸಮವಸ್ತ್ರ ಒದಗಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ ಬ್ರಾಂಡೆಡ್ ಕಂಪನಿಗಳ ಷೂ ಮತ್ತು ಸಮವಸ್ತ್ರವನ್ನು ಒದಗಿಸುತ್ತಿದೆ. ಲಿಬರ್ಟಿ ಕಂಪನಿಯ ಷೂ ಹಾಗೂ ಸಮವಸ್ತ್ರಕ್ಕೆ ಎಸ್ ಕುಮಾರ್ ಕಂಪನಿಯ ಬಟ್ಟೆಯನ್ನು ನೀಡುತ್ತಿದೆ ಎಂದರು.

ಗೃಹ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.