Government of Karnataka

Department of Information

Sunday 10/07/2016

Ramzan: Chief Minister greets people of the State

Date : Tuesday, July 5th, 2016

ಬೆಂಗಳೂರು, ಜುಲೈ 5 (ಕರ್ನಾಟಕ ವಾರ್ತೆ):
ರಂಜಾನ್ ಹಬ್ಬ ಎಂದೇ ಜನಪ್ರಿಯವಾಗಿರುವ ಈದ್-ಉಲ್-ಫಿತರ್ ಹಬ್ಬದ ಸುಸಂದರ್ಭದಲ್ಲಿ ರಾಜ್ಯದ ಜನತೆಗೆ, ವಿಶೇಷವಾಗಿ ರಾಜ್ಯದ ಎಲ್ಲಾ ಮುಸಲ್ಮಾನ ಬಾಂಧವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದ್ದಾರೆ.

ಪವಿತ್ರ ರಂಜಾನ್ ಮಾಸದ ಗಮನಾರ್ಹ ಆಚರಣೆಗಳಲ್ಲಿ ಉಪವಾಸ ವ್ರತಕ್ಕೆ ಪ್ರಥಮಾಧ್ಯತೆ ಹಾಗೂ ಪರಮಾಧ್ಯತೆ. ಉಪವಾಸ ವ್ರತವು ವ್ಯಕ್ತಿಯ ಮನಃಶುದ್ಧಿ ಹಾಗೂ ದೇಹ ಶುದ್ಧಿಗೆ ವಿಶೇಷ ಅವಕಾಶವನ್ನು ಒದಗಿಸುತ್ತದೆ.

ಅಂತೆಯೇ, ಝಖಾ ಅಥವಾ ಝಖಾತ್ ಎಂಬುದು ಇಸ್ಲಾಂ ಧರ್ಮದ ಸರ್ವಶ್ರೇಷ್ಠ ಪರಿಕಲ್ಪನೆಗಳಲ್ಲೊಂದು. ಉಳ್ಳವರು ಇಲ್ಲದವರೊಂದಿಗೆ ಸಂಪತ್ತನ್ನು ಹಂಚಿಕೊಂಡು ಪರಿಶುದ್ಧರಾಗಲು ಅನುವುಮಾಡಿಕೊಡುವ ಝಖಾ ಅಥವಾ ಝಖಾತ್, ಧರ್ಮದಲ್ಲಿ ಕೊಡುಗೆ ಅಥವಾ ದಾನದ ಮಹತ್ವವನ್ನು ಸಾರುತ್ತದೆ. ಅಲ್ಲದೆ, ಉಳ್ಳವರು ಹಾಗೂ ಇಲ್ಲದವರ ನಡುವಿನ ಅಂತರವನ್ನು ಕಡಿಮೆ ಮಾಡಲು ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ.

ಸಮಾಜದಲ್ಲಿ ಸೋದರತೆ ಹಾಗೂ ಸೌಹಾರ್ಧತೆಯ ಜೊತೆ ಜೊತೆಗೆ ಮಾನವೀಯ ಸ್ಪರ್ಶವನ್ನು ಮೂಡಿಸುವ ರಂಜಾನ್ ಹಬ್ಬವು ಭಾವನಾತ್ಮಕ ಸಂಬಂಧಗಳೊಂದಿಗೆ ಭಾವೈಕ್ಯತೆಯ ಬೆಸುಗೆಯನ್ನೂ ಬೆಸೆದು ಸದೃಢ ಹಾಗೂ ಬಲಿಷ್ಠ ಭಾರತವನ್ನು ನಿರ್ಮಿಸಲು ಪ್ರೇರಣೆ ಹಾಗೂ ಸ್ಪೂರ್ತಿಯನ್ನೀಯಲಿ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.