Government of Karnataka

Department of Information

Friday 19/01/2018

School Textbooks on Kanaja Website

Date : Thursday, May 26th, 2016

ಬೆಂಗಳೂರು, ಮೇ 26 ( ಕರ್ನಾಟಕ ವಾರ್ತೆ) : ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗಿನ ಕನ್ನಡ ಮಾಧ್ಯಮದ ಪಠ್ಯ ಪುಸ್ತಕಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ದೊರಕಿಸಿಕೊಡುವಲ್ಲಿ ಮುಂದಾಗಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಈ ಎಲ್ಲಾ ತರಗತಿಗಳ ಪಠ್ಯ ಪುಸ್ತಕಗಳನ್ನು ಕಣಜ ಅಂತರ್ಜಾಲ ಕನ್ನಡ ಜ್ಞಾನಕೋಶದಲ್ಲಿ ಅಳವಡಿಸಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘದ ಮೂಲಕ ಸಿದ್ದಪಡಿಸಿರುವ ಕನ್ನಡ ಮಾಧ್ಯಮದ ಶಾಲಾ ಪಠ್ಯ ಪುಸ್ತಕಗಳನ್ನು ಸಕಾಲಕ್ಕೆ ಒದಗಿಸುವಲ್ಲಿ ತಂತ್ರಜ್ಞಾನದ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಕಣಜ ಅಂತರ್ಜಾಲ ಕನ್ನಡ ಜ್ಞಾನಕೋಶದಲ್ಲಿ ಪಠ್ಯ ಪುಸ್ತಕಗಳನ್ನು ಅಳವಡಿಸಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಸರ್ಕಾರದ ಬಹುದಿನಗಳ ಆಶಯವನ್ನು ಸಾಕಾರಗೊಳಿಸಿದೆ. ಕಳೆದ ಹದಿನೈದು ದಿನಗಳಿಂದ ಕಣಜ ವೆಬ್‍ಸೈಟ್ ಮೂಲಕ ಪ್ರಾಯೋಗಿಕವಾಗಿ ಅಳವಡಿಸಲಾಗಿರುವ ಈ ಪಠ್ಯ ಪುಸ್ತಕಗಳು ವಿವಿಧ ಹಂತಗಳ ಪರಿಶೀಲನೆಯ ನಂತರ ಸಧ್ಯದಲ್ಲಿಯೇ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ಕಣಜ ತಂಡವು ಪ್ರಾಯೋಗಿಕವಾಗಿ ಪಠ್ಯಗಳನ್ನು ಬಹು ಮಾಧ್ಯಮಗಳ (ಮಲ್ಟಿ ಮೀಡಿಯಾ) ಸಾಧ್ಯತೆಗಳನ್ನು ಸಮರ್ಥವಾಗಿ ಬಳಸುವ ಮೂಲಕ ಹೆಚ್ಚಿನ ಓದಿನ ಸಾಧ್ಯತೆಗಳನ್ನು ರೂಪಿಸಿದೆ. ವೆಬ್‍ಸೈಟ್‍ನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಅಳವಡಿಸಿರುವ ಪಠ್ಯ ಪುಸ್ತಕಗಳನ್ನು ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು,ಅಧ್ಯಯನ ಹಾಗೂ ಬೋಧನೆಗೆ ಬಳಸಬಹುದಾಗಿದೆ. ಪಠ್ಯಗಳ ಬಗ್ಗೆ ಅಧ್ಯಾಪಕರು, ತಂತ್ರಜ್ಞರು, ಪೂರಕ ಪಠ್ಯಮಾಹಿತಿಗಳನ್ನು ರೂಪಿಸಿ ಒದಗಿಸಿಕೊಟ್ಟಲ್ಲಿ ಅದನ್ನೂ ಕೂಡಾ ಸಾರ್ವಜನಿಕ ಬಳಕೆಗೆ ಒದಗಿಸಲು ಸಿದ್ದವಿರುವುದಾಗಿ ತಿಳಿಸಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಸಾರ್ವಜನಿಕ ಸಹಭಾಗಿತ್ವದ ಈ ಯೋಜನೆಯಲ್ಲಿ ತಂತ್ರಜ್ಞಾನ ಕ್ಷೇತ್ರದ ಪರಿಣಿತರು, ಶಿಕ್ಷಕರು, ವಿಷಯ ತಜ್ಞರನ್ನು ಪಾಲ್ಗೊಳ್ಳಲು ಆಹ್ವಾನಿಸಿದೆ.

ಸರ್ಕಾರದ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳು ಪ್ರಕಟಿಸುವ ನಿಯತಕಾಲಿಕೆಗಳನ್ನು ಅಳವಡಿಸಲು ಯೋಜಿಸಿರುವ ಕಣಜ ಅಂತರ್ಜಾಲದಲ್ಲಿ ಮೊದಲ ಹಂತದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಪದ ಸಂಚಿಕೆಯನ್ನು ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನ ಮಾಧ್ಯಮಗಳ ಮೂಲಕ ನಿರಂತರವಾಗಿ ಹೊಸ ಹೊಸ ಮಾಹಿತಿಗಳನ್ನು ಒದಗಿಸಲು ಬದ್ಧವಾಗಿರುವ ಕಣಜ ಅಂತರ್ಜಾಲ ಕನ್ನಡ ಜ್ಞಾನಕೋಶವು ಮುಂದಿನ ದಿನಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನಿಕೇತನ, ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಲೋಕ, ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ಸಂಚಿಕೆಗಳನ್ನು ಅಳವಡಿಸಲು ಯೋಜಿಸಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಕೆ. ಎ. ದಯಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.