Government of Karnataka

Department of Information

Sunday 10/07/2016

State News 03-07-2016

Date : Monday, July 4th, 2016

ಮುಖ್ಯಮಂತ್ರಿಗಳಿಂದ ಕನಕದಾಸರ 23 ಪುಸ್ತಕಗಳ ಲೋಕಾರ್ಪಣೆ

ಬೆಂಗಳೂರು, ಜುಲೈ 3 (ಕರ್ನಾಟಕ ವಾರ್ತೆ) : ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಸಂತ ಕವಿ ಕನಕದಾಸರನ್ನು ಕುರಿತು 23 ಪುಸ್ತಕಗಳ ಲೋಕಾರ್ಪಣೆಯನ್ನು ನೆರವೇರಿಸಿದರು.

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ, ಕರ್ನಾಟಕ ತುಳು, ಕೊಂಕಣಿ, ಬ್ಯಾರಿ ಮತ್ತು ಉರ್ದು ಅಕಾಡೆಮಿ, ಇವುಗಳ ಸಹಯೋಗದಲ್ಲಿ ಇಂದು ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಈ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

ಡಾ ಕೆ.ಎಸ್. ಸುಮಿತ್ರ ರವರ ಕನಕದಾಸರ ಕಾವ್ಯ.ಮತ್ತು ಸಂಗೀತ, ಡಾ. ಸುರೇಶ ನಾಗಲಮಡಿಕೆ ಅವರ ಜನಪದ ಲೋಕದೃಷ್ಠಿಯ ಮೂಲಕ ಕನಕದಾಸ ಸಾಹಿತ್ಯ ಅಧ್ಯಯನ, ಡಾ. ಕಬ್ಬಿನಾಲೆ ವಸಂತ ಭಾರದ್ವಜ್ ಅವರ ಕನಕ ವದೂಟಿ, ಪ್ರೊ ಹೆಚ್. ಸಿದ್ದಲಿಂಗಯ್ಯ ಅವರ ಕನಕಕಾವ್ಯ ಸಂಪುಟ, ಕಾ ತ ಚಿಕ್ಕಣ್ಣ ಅವರ ಸಂಪಾದನೆ ಕನಕ ಓದು, ಡಾ ಚಂದ್ರಶೇಖರ ಮಠಪತಿ ಅವರ ಬಯಲು ಆಲಯದೊಳಗೊ, ಹೆಚ್.ದಂಡಪ್ಪ ಸಂಪಾದನೆಯ ಕನಕಲೋಕ, ಜೋಳದರಾಶಿ ದೊಡ್ಡನಗೌಡ ಅವರ ಕನಕದಾಸರು ನಾಟಕ, ಲೋಕಾರ್ಪಣೆಗೊಂಡವು.

ಅಲ್ಲದೇ, ‘ಸಂತ ಕನಕದಾಸರು’ ಪುಸ್ತಕವು 15 ಭಾಷೆಗಳಿಗೆ ಅನುವಾದಗೊಂಡಿದ್ದು, ಹಿಂದಿಗೆ - ಡಾ|| ಎಚ್.ಎಂ.ಕುಮಾರಸ್ವಾಮಿ, ಇಂಗ್ಲೀಷ್‍ಗೆ-ಡಾ. ಡಿ.ಎ.ಶಂಕರ್, ತಮಿಳಿಗೆ - ಡಾ.ಸಂಕರಿ, ತೆಲುಗಿಗೆ - ಡಾ ಜಿ.ಸದಾನಂದ ಶಾಸ್ತ್ರಿ, ಮಲೆಯಾಳಂಗೆ- ಸುಧಾಕರ್ ರಮನ್ ತಾಲಿ, ಮರಾಠಿಗೆ - ಡಾ ಗೋಪಾಲಮಹಾಮುನಿ, ಕೊಡವಕ್ಕೆ - ಡಾ ಎಂ.ಪಿ. ರೇಖಾ, ಅಸ್ಸಾಮಿಗೆ - ಭಗೀರಥಿಬಾಯಿ ಕದಂ, ಬಂಗಾಲಿಗೆ - ಡಾ ಮೀರಾ ಚಕ್ರವರ್ತಿ, ಪಂಜಾಬಿಗೆ - ಡಾ ಮಧು ಧದನ್, ತುಳುಗೆ - ಆತ್ರಾಡಿ ಅಮೃತಾ ಶೆಟ್ಟಿ, ಬ್ಯಾರಿಗೆ - ಬಿ.ಎಂ.ಹನೀಫ್, ಉರ್ದುಗೆ - ಮಹೇರ್ ಮನ್ಸೂರ್, ಸಂಸ್ಕøತಕ್ಕೆ - ಜಾಹ್ನವಿ, ಕೊಂಕಣಿಗೆ - ಡಾ ಗೀತಾ ಶೆಣೈ ಅನುವಾದಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ವಾಗ್ಮಿಗಳು, ಸಂತರು ಹಾಗೂ ಕವಿಗಳೂ ಆಗಿದ್ದ ಕನಕದಾಸರು ಇಂದಿನ ಸಮಾಜಕ್ಕೆ ಸಹ ಪ್ರಸ್ತುತವೆನಿಸಿದ್ದಾರೆ. 300ಕ್ಕೂ ಹೆಚ್ಚಿನ ಕೀರ್ತನೆಗಳನ್ನು ರಚಿಸಿರುವ ಇವರು ವರ್ಣ, ಜಾತಿ, ಬೇಧವನ್ನು ಮೆಟ್ಟಿ ನಿಂತವರು. ಅವರ ಕೀರ್ತನೆಗಳಲ್ಲಿ ನೋವಿನ ಭಾವ ವ್ಯಕ್ತವಾಗಿದೆ. ತಲ್ಲಣಿಸಿದರು ಕಂಡ್ಯ, ಬಾಗಿಲನು ತೆರೆದು, ದೀನ ನಾನು ಸಮಸ್ತ ಲೋಕಕ್ಕೆ ದಾನಿ ನೀನು, ಮುಂತಾದವುಗಳು ಅವರ ಭಕ್ತಿ, ಭಾವಗಳಿಗೆ ಉದಾಹರಣೆಗಳಾಗಿವೆ. ಚಿಕ್ಕಮಗಳೂರು ಗಣೇಶ್ ಅವರ ಸಂತಕವಿ ಕನಕದಾಸ ಪುಸ್ತಕ 15 ಭಾಷೆಗಳಿಗೆ ಅನುವಾದಗೊಂಡಿದ್ದು, ಈ ಕೃತಿಯ ಅನುವಾದ ಕನಕದಾಸರನ್ನು ರಾಷ್ಟ್ರದ ಜನರಿಗೆ ಪರಿಚಯಿಸಲು ಸಾಧ್ಯವಾಗಿದೆ. ಶಾಂತಿದೂತರಾಗಿದ್ದ ಕನಕದಾಸರು ವಾಸ್ತವಿಕ ನೆಲೆಯಲ್ಲಿ ಕೃತಿಯನ್ನು ರಚಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಭಂಜಗೆರೆ ಜಯಪ್ರಕಾಶ್ ಅವರು ಜಿಲ್ಲೆಗೊಂದರಂತೆ ಒಂದು ಪುಸ್ತಕ ಮಾರಾಟ ಮೇಳ ಮಳಿಗೆಗಳನ್ನು ಪ್ರಾಧಿಕಾರದಿಂದ ಹೊರತರಬೇಕು, ಅಲೆಮಾರಿ ಸಂಸ್ಕøತಿಯ ಜನರ ಪರಿಚಯಾತ್ಮಕ ಪುಸ್ತಕ ತರಬೇಕು, ಪದವಿ ಕಾಲೇಜುಗಳಲ್ಲಿ ಪುಸ್ತಕ ಪ್ರೇಮ ಹೆಚ್ಚಿಸಬೇಕು, ಅಲ್ಲದೇ ಯುವಜನರಿಗೆ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಇತರೆ ಸಾಹಿತ್ಯಕ ಪುಸ್ತಕಗಳ ಓದಿಗೆ ಸಹ ಪ್ರೋತ್ಸಾಹಿಸಬೇಕು ಎಂದರಲ್ಲದೆ ಜಾತಿಯನ್ನು ಮೆಟ್ಟಿನಿಂತ ಕನಕದಾಸರನ್ನು ಭಾರತದ ಎಲ್ಲಾ ಭಾಷೆಗಳಲ್ಲೂ ಪರಿಚಯಿಸುವ ಕಾರ್ಯ ಇಂದು ನೆರವೇರಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ ಅವರು ಯಾವುದೇ ವಿಶ್ವವಿದ್ಯಾನಿಲಯ ಮಾಡದಂತಹ ಕೆಲಸವನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮಾಡಿದೆ. ಕನಕದಾಸರು ರಚಿಸಿರುವ ನಾಲ್ಕು ಕೃತಿಗಳು ಇಂದಿಗೂ ಸಹ ಅಧ್ಯಯನಕ್ಕೆ ಸೂಕ್ತವಾಗಿವೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಡಾ ಜಯದೇವಿ ಜಂಗಮಶೆಟ್ಟು  ಮತ್ತು ತಂಡದವರಿಂದ ಕನಕ ಕೀರ್ತನೆ ಗಾಯನ ಜನರನ್ನು ರಂಜಿಸಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರಾದ ಆರ್. ರೋಷನ್‍ಬೇಗ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಕೆ.ಎ. ದಯಾನಂದ್, ಸಂಸ್ಕøತ ವಿದ್ಯಾನಿಲಯದ ಉಪಕುಲಪತಿಗಳಾದ ಪದ್ಮಾಶೇಖರ್, ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯ ಅಧಿಕಾರಿಗಳಾದ ಕಾ ತ ಚಿಕ್ಕಣ್ಣ ಅವರುಗಳು ಉಪಸ್ಥಿತರಿದ್ದರು.