Government of Karnataka

Department of Information

Wednesday 11/01/2017

State News 03-10-2016

Date : Monday, October 3rd, 2016

ನದಿ ಹಕ್ಕಿಗೆ ಗೌರವಿಸಿದ್ದಲ್ಲಿ ನದಿ ನಮಗೆ ಗೌರವಿಸುತ್ತದೆ – ರಾಜೇಂದ್ರ ಸಿಂಗ್

ಬೆಂಗಳೂರು, ಅಕ್ಟೋಬರ್ 3 (ಕರ್ನಾಟಕ ವಾರ್ತೆ): ಮಾನವರ ಹಕ್ಕಿನ ರೀತಿಯೇ ನದಿಗಳಿಗೂ ಹಕ್ಕಿದೆ, ಅದಕ್ಕೆ ಗೌರವ ನೀಡಿದಾಗ ಮಾತ್ರ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಭಾರತದ ನೀರಿನ ಮನುಜ ಎಂದೇ ಖ್ಯಾತರಾಗಿರುವ ಅಂತರರಾಷ್ಟ್ರೀಯ ನೀರು ಸದ್ಬಳಕೆ ತಜ್ಞ ರಾಜೇಂದ್ರ ಸಿಂಗ್ ಹೇಳಿದರು.
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾವೇರಿ ನದಿ ನೀರಿನ ಸುಸ್ಥಿರ ಬಳಕೆ:ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದರು.

ನದಿ ನೀರು ಎನ್ನುವುದು ಹಂಚಿಕೊಳ್ಳುವ ಮತ್ತು ಮಾರುವ ವಸ್ತುವಲ್ಲ, ಕಾವೇರಿ ನದಿಗೆ ಸ್ವಾತಂತ್ರ್ಯ ಕೊಟ್ಟರೆ ಕಾವೇರಿ ನಮಗೆ ಬೇಕಾಗಿದನ್ನೆಲ್ಲ ನೀಡುತ್ತಾಳೆ. ನದಿಗೂ ಹಕ್ಕಿದೆ ಮತ್ತು ಸ್ವಾತಂತ್ರ್ಯವಿದೆ ಎಂಬುದನ್ನು ಮೊದಲು ನಾವು ಅರಿಯಬೇಕಾಗಿದೆ.

ಇವತ್ತಿನ ಸ್ಥಿತಿಯಲ್ಲಿ ಅನೇಕ ದೇಶಗಳು ಮತ್ತು ರಾಜ್ಯಗಳು ನೀರಿನ ವಿವಾದಗಳಿಂದ ತುಂಬಿ ತುಳುಕುತ್ತಿವೆ. ನದಿ ನೀರಿಗೆ ನಮ್ಮ ಹಕ್ಕಿನ ಕಣ್ಣಿನಿಂದ ನೋಡಿ ನ್ಯಾಯಾಲಯಗಳು ನ್ಯಾಯ ಒದಗಿಸುವುದು ಕ್ಲೀಷೆಯಾಗಿದೆ, ಪ್ರಕೃತಿಯ ಕಣ್ಣಿನಿಂದ ನೋಡಿದಾಗ ಮಾತ್ರ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಸಾಧ್ಯ.
ಕಾವೇರಿ ನದಿ ನೀರಿನ ಹಂಚಿಕೆಯ ವಿವಾದ ಮದ್ರಾಸ್ ಸರ್ಕಾರದ ಸಮಯದಿಂದಲೂ ಬಗೆಹರಿಯದೇ ರಾಜಕೀಯ ಮತ್ತು ನ್ಯಾಯಾಲಯಗಳ ಮೆಟ್ಟಿಲುಗಳ ನಡುವೆ ಸಿಲುಕಿ ಕಾವೇರಿ ಜಲ ಮೂಲದ ಅರಿವಿಲ್ಲದೇ ಎರಡು ರಾಜ್ಯಗಳ ವ್ಯಾಜ್ಯವಾಗಿ ಉಳಿದಿದೆ.

ಸುಪ್ರೀಂಕೋರ್ಟ್ ನದಿಯ ಆತ್ಮ ಮತ್ತು ಮನುಷ್ಯರ ಆತ್ಮವನ್ನು ಗೌರವಿಸಿ ತೀರ್ಪು ನೀಡಿದಾಗ ಮಾತ್ರ ಅದಕ್ಕೆ ಪ್ರತಿಯೊಬ್ಬರಿಂದಲೂ ಗೌರವ ಸಿಗುತ್ತದೆ. ರಾಜ್ಯಗಳು ಹಂಚಿಕೆ ಬಗ್ಗೆ ಚಿಂತಿಸುವ ಮತ್ತು ಹೋರಾಡುವ ರೀತಿಯಲ್ಲಿ ನದಿಯ ಉಳಿವಿಗಾಗಿ ಸಹ ಚಿಂತಿಸಬೇಕಾಗಿದೆ.

ಕರ್ನಾಟಕ ಮತ್ತು ತಮಿಳುನಾಡು ಬೇರೆ ಬೇರೆ ರಾಜ್ಯಗಳಾಗಿದ್ದರೂ ಸಹ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು. ಅದಕ್ಕಿಂತ ಮಿಗಿಲಾಗಿ ಎರಡು ರಾಜ್ಯಗಳ ಜನರು ಕಾವೇರಿ ಎಂಬ ನದಿ ರಾಜ್ಯದವರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ವಿವಾದವನ್ನು ಬಗೆಹರಿಸಲು ಮತ್ತು ಕಾವೇರಿ ನೀರಿನ ಸದ್ಭಳಕೆ ಕುರಿತು ತುರ್ತಾಗಿ ‘ಕಾವೇರಿ ನದಿ ಜಲಾನಯನ ಪ್ರದೇಶ ಒಕ್ಕೂಟ’ ವನ್ನು ಸ್ಥಾಪಿಸಬೇಕು. ಅದರಲ್ಲಿ ಮುಖ್ಯವಾಗಿ ಎರಡು ರಾಜ್ಯದ ರೈತರು, ಜನಪ್ರತಿನಿಧಿಗಳು, ಶಾಸಕಾಂಗ ಭಾಗಿಯಾಗಿರಬೇಕು. ಆಯಾ ಕಾಲಕ್ಕೆ ಉದ್ಭವಿಸುವ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯಬೇಕು ಮತ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಪದ್ಮಭೂಷಣ ಕೃಷಿ ತಜ್ಞ ಎಂದ ಮಹದೇವಪ್ಪ, ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್, ರೈತ ಮುಖಂಡರಾದ ಕುರುಬೂರ ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಬೆಂಗಳೂರು ಅಧ್ಯಕ್ಷರಾದ ಡಾ. ಎ. ರವೀಂದ್ರ ಅವರು ಸೇರಿದಂತೆ ಎರಡೂ ರಾಜ್ಯದ ಪ್ರಗತಿಪರ ರೈತರು, ಚಿಂತಕರು ಹಾಗೂ ಕೃಷಿ ತಜ್ಞರು ಜಲ ಸದ್ಬಳಕೆ ತಜ್ಞರು ಭಾಗವಹಿಸಿದ್ದರು.

2-state-news-03-10-2016

ಅರ್ಹ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ

ಬೆಂಗಳೂರು, ಅಕ್ಟೋಬರ್ 3 (ಕರ್ನಾಟಕ ವಾರ್ತೆ): ಕರ್ನಾಟಕ ಲೋಕ ಸೇವಾ ಆಯೋಗವು ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರ 127+23 (ಹೈ.ಕ)-150 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಅಕ್ಟೋಬರ್ 7 ರಂದು ಬೆಳಿಗ್ಗೆ 10.00 ಗಂಟೆಗೆ ಮತ್ತು ಮಧ್ಯಾಹ್ನ 2.30 ಗಂಟೆಗೆ ಆಯೋಗದ ಕೇಂದ್ರ ಕಚೇರಿ, ಉದ್ಯೋಗ ಸೌಧ, ಬೆಂಗಳೂರು ಇಲ್ಲಿ ನಡೆಸಲಾಗುವುದು.

ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ. ಆಹ್ವಾನಿಸಲಾದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿದ್ದು, ಸಂಬಂಧಿತರಿಗೆ ಎಸ್.ಎಂ.ಎಸ್/ಇ-ಮೇಲ್/ಮೂಲಕವೂ ಮಾಹಿತಿ ನೀಡಲಾಗಿದೆ. ಸದರಿ ಪಟ್ಟಿಯನ್ನು ವೆಬ್‍ಸೈಟ್ “http://kpsc.kar.nic.in” ನಲ್ಲಿ ನೋಡಬಹುದು. ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರ ತಲುಪದೇ ಇದ್ದಲ್ಲಿ ಮೂಲ ದಾಖಲಾತಿಗಳ ಪರಿಶೀಲನೆಯ ದಿನಾಂಕಕ್ಕೆ ಮುನ್ನ ಆಯೋಗದ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು.

ಹಿಂದುಳಿದ ವರ್ಗಗಳ ಆಯೋಗದ ಬಹಿರಂಗ ವಿಚಾರಣೆ

ಬೆಂಗಳೂರು, ಅಕ್ಟೋಬರ್ 3 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ವಿವಿಧ ಜಾತಿ, ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ, ಪ್ರವರ್ಗ ಬದಲಾವಣೆ ಮಾಡುವ, ಪರ್ಯಾಯ ಪದ ಸೇರ್ಪಡೆ ಮತ್ತು ಕಾಗುಣಿತ ದೋಷ ತಿದ್ದುಪಡಿ ಕುರಿತಂತೆ ವಸಂತನಗರದ ದೇವರಾಜ ಅರಸು ಭವನದ ಸಭಾಂಗಣದಲ್ಲಿಂದು “ಬಹಿರಂಗ ವಿಚಾರಣೆ” ಯನ್ನು ನಡೆಸಿತು.

ಸಮಾಜದ ನಾನಾ ಜಾತಿ, ಪಂಗಡಗಳ ಮುಖಂಡರು ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಎಚ್. ಕಾಂತರಾಜು ಅವರ ಮುಂದೆ ತಮ್ಮ ಮನವಿಯನ್ನು ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ವಿವರಿಸಿದರು.

ಹಿಂದುಳಿದ ‘ಗೋಂಧಳಿ’ ಸಮಾಜದವರನ್ನು ಹಿಂದಿನ ಹಾವನೂರು ಮತ್ತು ಚನ್ನಪ್ಪ ರೆಡ್ಡಿ ಆಯೋಗವು ಅಲೆಮಾರಿ ಮತ್ತು ಅರೆ ಅಲೆಮಾರಿ ಎಂದು ಪರಿಗಣಿಸಿ ಈ ವರ್ಗಕ್ಕೆ ಸೇರಿಸಿರುತ್ತಾರೆ. ಈ ಜನಾಂಗವು ಎಲ್ಲಾ ಸವಲತ್ತುಗಳಿಂದ ವಂಚಿತರಾಗಿ ಸಮಾಜವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುತ್ರದೆ. ಅದಕಾರಣ ಗೋಂಧಳಿ ಸಮಾಜದವರನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸಬೇಕೆಂದು ಈ ಸಮಾಜದ ಮುಖಂಡರು ಅಧ್ಯಕ್ಷರಲ್ಲಿ ಮನವಿ ಮಾಡಿದರು. ಅಂತೆಯೇ ‘ಬುಡುಬುಡುಕಿ’ ಜಾತಿಯೆಂದು ನಮೂದಾಗಿರುವ ಸಂದರ್ಭದಲ್ಲೆಲ್ಲಾ ಅದನ್ನು ‘ಗೋಂಧಳಿ’ಯೆಂದು ತಿದ್ದುಪಡಿ ಮಾಡುವಂತೆ ಮನವಿ ಮಾಡಲಾಯಿತು.

ಕೇಂದ್ರ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ‘ಶಾಲಿಯ’ ಜಾತಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುತ್ತದೆ. ಆದರೆ ಇದುವರೆಗೂ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿಗಾಗಿ ಸೇರ್ಪಡೆಯಾಗಿಲ್ಲ. ಶಾಲಿಯ ಕೇರಳದ ಕಾಸರಗೋಡಿನ ಭಾಗದಲ್ಲಿ ವಾಸಿಸುತ್ತಿರುವ ಕನ್ನಡಿಗರ ಜಾತಿಯಾಗಿದ್ದು, ಕರ್ನಾಟಕದಲ್ಲಿ ಈ ಸಮುದಾಯದವರನ್ನು ದೇವಾಂಗ ಜನಾಂಗದವರೆಂದು ಕರೆಯಲ್ಪಡಲಾಗುತ್ತಿದೆ. ಆದರೆ ವಿಧ್ಯಾಭ್ಯಾಸ ಮತ್ತಿತರ ಕಾರಣಗಳಿಂದಾಗಿ ಕರ್ನಾಟಕದಲ್ಲಿ ವಾಸಿಸುತ್ತಿರುವ ಶಾಲಿಯ ಜನಾಂಗದವರನ್ನು ದೇವಾಂಗ ಜಾತಿಗೆ ಸೇರಿಸಿ ಪ್ರವರ್ಗ -2ಎ ಅಡಿಯಲ್ಲಿ ಸೇರ್ಪಡೆ ಮಾಡುವಂತೆ ಈ ಸಮುದಾಯದ ಮುಖಂಡರು ಮನವಿ ಮಾಡಿದರು.

ಶಾಲಿಯ ಜಾತಿ ರಾಜ್ಯದ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವುದರಿಂದ ಮೀಸಲಾತಿಯ ಯಾವುದೇ ಸೌಲಭ್ಯವು ಈ ಜನಾಂಗದವರಿಗೆ ಸಿಗುತ್ತಿಲ್ಲ. ಕೇರಳದಿಂದ ಕರ್ನಾಟಕಕ್ಕೆ ಬಂದಂತಹವರನ್ನು ಶಾಲಿಯ, ಚಾಲಿಯ ಜಾತಿ ಎಂದು ಕರೆಯಲಾಗುತ್ತಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಜನಾಂಗದವರನ್ನು ದೇವಾಂಗ ಎಂದು ಪ್ರವರ್ಗ-2ಎ ರಡಿ ದಾಖಲೆ ಮಾಡುವಂತೆ ಕೋರಲಾಯಿತು.

“ಹಠಗಾರ” ಸಮುದಾಯದವರಾದ ನಮ್ಮ ಜನಾಂಗದ ಕೆಲವರ ಶಾಲಾ ದಾಖಲಾತಿಗಳಲ್ಲಿ ಹಿಂದು ವೀರಶೈವ ಲಿಂಗಾಯತ ಎಂದು ಪ್ರವರ್ಗ -3ಬಿ ರಲ್ಲಿ ಸೇರಿಸಲಾಗಿರುತ್ತದೆ. ಇದು ತಪ್ಪು, ಹಿಂದು ವೀರಶೈವ ಲಿಂಗಾಯಿತ ಎಂಬುದರ ಬದಲಿಗೆ “ಹಠಗಾರ” ಎಂದು ಸರಿಪಡಿಸಿ ರಾಜ್ಯ ಹಿಂದುಳಿದ ವರ್ಗಗಳ ಪ್ರವರ್ಗ -2ಎ ರಲ್ಲಿ ಸೇರಿಸುವಂತೆ ಹಠಗಾರ ಸಮುದಾಯದ ಜನಾಂಗದವರು ಈ ಸಂದರ್ಭ ಆಯೋಗದ ಮುಂದೆ ಮನವಿ ಮಾಡಿದರು.

ಮುಸ್ಲಿಂ “ಮಹದಾವಿಯ” ಸಮುದಾಯದವರನ್ನು ಇಂದಿಗೂ ಸಹ ಅಸ್ಪಶೃರಂತೆ ಸಮಾಜದಲ್ಲಿ ನೋಡಲಾಗುತ್ತಿದೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಮಹದಾವಿಯ ಸಮುದಾಯದವರನ್ನು ಹಿಂದುಳಿದ ವರ್ಗದ ಪ್ರವರ್ಗ – 1 ರ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಮುಸ್ಲಿಂ ಮುಖಂಡರು ತಮ್ಮ ಅಹವಾಲು ಸಲ್ಲಿಸಿದರು.

ಈ ಮೇಲಿನಂತೆಯೇ ವಿವಿಧ ಜನಾಂಗಗಳ ಮುಖಂಡರು ತಮ್ಮ ಜಾತಿಗೆ ಸಂಬಂಧಿಸಿದಂತೆ ಮಾರ್ಪಾಡುಗಳನ್ನು ಆಯೋಗದ ಅಧ್ಯಕ್ಷರ ಮುಂದೆ ಮಂಡಿಸಿ, ಆಯೋಗಕ್ಕೆ ಶಿಫಾರಸ್ಸು ಮಾಡುವಂತೆ ಕೋರಿದರು.

ಹಿಂದುಳಿದ ವರ್ಗದ ಆಯೋಗದ ಸದಸ್ಯರುಗಳಾದ ಜಿ.ಡಿ. ಗೋಪಾಲ್, ಎನ್.ಪಿ. ಧರ್ಮರಾಜ್, ಶರಣಪ್ಪ ಡಿ. ಮಾನೇಗಾರ್, ಕೆ.ಎನ್. ಲಿಂಗಪ್ಪ, ಎಂ. ಗುರುಲಿಂಗಯ್ಯ ಅವರುಗಳು ಸಹ ಬಹಿರಂಗ ವಿಚಾರಣೆ ಕಾರ್ಯಕ್ರದಲ್ಲಿ ಭಾಗಹಿಸಿದ್ದರು.

ಸಚಿವರ ಪ್ರವಾಸ

ಬೆಂಗಳೂರು, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು ಅಕ್ಟೋಬರ್ 4 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಅಕ್ಟೋಬರ್ 5 ರಂದು ನಗರಕ್ಕೆ ಹಿಂದಿರುಗಲಿದ್ದಾರೆ.

ಅಧಿಕಾರ ಸ್ವೀಕಾರ

ಬೆಂಗಳೂರು, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಧಾರವಾಡ ಐಐಟಿ ನಿರ್ದೇಶಕರಾಗಿ ಪ್ರೊ. ಎಸ್.ಸಿ. ಶರ್ಮ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಅವರು ಆರ್.ವಿ. ಕಾಲೇಜಿನ ಉಪ ಕುಲಪತಿಯಾಗಿ, ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರು 30 ಕ್ಕೂ ಹೆಚ್ಚು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಾನೂನು ಆಯೋಗದ ಸದಸ್ಯರಾಗಿ ನ್ಯಾ: ಪ್ರದೀಪ್ ಡಿ. ವೈಂಗಣಕರ

ಬೆಂಗಳೂರು, ಅಕ್ಟೋಬರ್ 3 (ಕರ್ನಾಟಕ ವಾರ್ತೆ): ನ್ಯಾಯಮೂರ್ತಿ ಪ್ರದೀಪ್ ಡಿ. ವೈಂಗಣಕರ ಇವರು ಕರ್ನಾಟಕ ಕಾನೂನು ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಬ್ಯಾಕ್‍ಲಾಗ್ ಹುದ್ದೆ : ಅರ್ಹತಾ ಪಟ್ಟಿ ಪ್ರಕಟ

ಬೆಂಗಳೂರು, ಅಕ್ಟೋಬರ್ 3 (ಕರ್ನಾಟಕ ವಾರ್ತೆ) : ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆ, ಸಂಪರ್ಕ ಮತ್ತು ಕಟ್ಟಡಗಳು, ಬೆಂಗಳೂರುನಲ್ಲಿನ ದ್ವಿತೀಯ ದರ್ಜೆ ಸಹಾಯಕರ 65 ಪರಿಶಿಷ್ಟ ಜಾತಿಯ ಬ್ಯಾಕ್‍ಲಾಗ್ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯ ಶೇಖಡಾವಾರು ಅಂಕಗಳು/ಬ್ಯಾಕ್‍ಲಾಗ್ ಹುದ್ದೆಗಳ ವಯೋಮಿತಿ/ಮೀಸಲಾತಿಗಳಿಗೆ ಅನುಗುಣವಾಗಿ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ಅಂತರ್ಜಾಲ “”http://kpsc.kar.nic.in”” ನಲ್ಲಿ ಪ್ರಕಟಿಸಲಾಗಿದೆ.

ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಅಕ್ಟೋಬರ್ 13 ರಂದು ಬೆಳಿಗ್ಗೆ 10.00 ಗಂಟೆಗೆ ಆಯೋಗದ ಕೇಂದ್ರ ಕಚೇರಿ, “ಉದ್ಯೋಗ ಸೌಧ”, ಬೆಂಗಳೂರು ಇಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

ಭಾರತೀಯ ಪನೋರಮಾ -2016 ರ ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಿ ನೇಮಕ

ಬೆಂಗಳೂರು, ಅಕ್ಟೋಬರ್ 3 (ಕರ್ನಾಟಕ ವಾರ್ತೆ): ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ರಾಜೇಂದ್ರ ಸಿಂಗ್ ಬಾಬು ಅವರನ್ನು ಭಾರತ ಸರ್ಕಾರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರ ನಿರ್ದೇಶನಾಲಯವು ಪ್ರತಿಷ್ಠಿತ ಭಾರತೀಯ ಪನೋರಮಾ- 2016 ರ ಚಲನಚಿತ್ರ ವಿಭಾಗದ ತೀರ್ಪುಗಾರರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.

ಭಾರತದ ಎಲ್ಲ ಭಾಷೆಗಳ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಭಾರತ ಮತ್ತು ಇತರ ದೇಶಗಳ ನಡುವೆ ಸಂಸ್ಕøತಿ, ವಿಚಾರಗಳ ವಿನಿಮಯಕ್ಕೆ ಭಾರತೀಯ ಪನೋರಮಾ ವೇದಿಕೆಯಾಗಿದೆ. ಭಾರತೀಯ ಸಿನಿಮಾಕ್ಕೆ ವಾಣಿಜ್ಯ ಅವಕಾಶಗಳನ್ನು ತೆರೆಯುವ ಮೂಲಕ ಜಾಗತಿಕ ಚಿತ್ರಗಳ ಪ್ರವೃತ್ತಿಗಳ ಕುರಿತು ಸಹ ಭಾರತೀಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಭಾರತೀಯ ಪನೋರಮಾ, ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ಕಾರ್ಯಕ್ರಮವಾಗಿದೆ.

Rajendra Singh Babu Nominated as Chairperson of Jury for Indian Panorama-2016

Bangalore, October 3 (Karnataka Information); Directorate of Information and Broadcasting, Ministry of Information and Broadcasting, Government of India has nominated Rajendra Singh Babu, Chairperson, Karnataka Chalanachitra Academy, as Chairperson of Jury for the prestigious Indian Panorama-2016, in Feature Films category.

Indian panorama is a flagship activity of International Film Festival of India. It also provides  a unique platform for an exchange of ideas culture, and experiences between India and other countries in the field of cinema. It also provides a powerful platform for Indian cinema and open commercial opportunities within the country and the latest trends in global cinema are accessible.