Government of Karnataka

Department of Information

Tuesday 12/07/2016

State News 05-07-2016

Date : Tuesday, July 5th, 2016
ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ &  ಸಮಯ ಕಾರ್ಯಕ್ರಮ ನಡೆಯುವ ಸ್ಥಳ
1. ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ರವರ 30 ನೇ ಪುಣ್ಯ ಸ್ಮರಣೆ. ಪ್ರತಿಮೆಗೆ ಮಾಲಾರ್ಪಣೆ: ಸಿದ್ದರಾಮಯ್ಯ,  ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಪ್ರತಿಮೆಗೆ ಪುಷ್ಪಾಂಜಲಿ: ಹೆಚ್. ಆಂಜನೇಯ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. 06-07-2016 ಬುಧವಾರ ಬೆಳಿಗ್ಗೆ
10-00 ಗಂಟೆಗೆ
ವಿಧಾನಸೌಧದ ಪಶ್ಚಿಮ ದ್ವಾರ, ವಿಧಾನಸೌಧ, ಬೆಂಗಳೂರು.

ಪತ್ರಿಕಾ ಪ್ರಕಟಣೆ

ರಾಜ್ಯದಲ್ಲಿನ ರೈತರ ಆತ್ಮಹತ್ಯೆ ಪ್ರಕರಣಗಳ ವಿವರ

ಬೆಂಗಳೂರು, ಜುಲೈ 5 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ 2014-15 ರಲ್ಲಿ ಒಟ್ಟು 122 ರೈತರ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 95 ಪ್ರಕರಣಗಳು ಸಾಲದ ಭಾದೆಯಿಂದ ಆತ್ಮಹತ್ಯೆಯಾಗಿವೆ ಮತ್ತು 2015-16 ರಲ್ಲಿ 1407 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 817 ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಇಂದು ವಿಧಾನ ಪರಿಷತ್ತಿನಲ್ಲಿ ಐವನ್ ಡಿ’ಸೋಜಾ ಅವರ ಪ್ರಶ್ನೆಗೆ ಉತ್ತರಿಸುತ್ತಾ ಪ್ರತಿ ಅರ್ಹ ಪ್ರಕರಣಗಳಿಗೆ 2015-16 ರಲ್ಲಿ ರೂ. 5.00 ಲಕ್ಷದಂತೆ ಒಟ್ಟು 4085 ಲಕ್ಷ ರೂ.ಗಳನ್ನು ಹಾಗೂ 2016-17 ನೇ ಸಾಲಿನ 33 ಅರ್ಹ ಪ್ರಕರಣಗಳಿಗೆ ರೂ. 5 ಲಕ್ಷದಂತೆ ಒಟ್ಟು ರೂ. 165 ಲಕ್ಷಗಳನ್ನು ಪರಿಹಾರ ಧನವಾಗಿ ವಿತರಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೃತ ರೈತರ ಪತ್ನಿಯರಿಗೆ 500 ರೂ ವಿಧವಾ ಮಾಸಾಶನವನ್ನು 2000 ರೂ. ಗೆ ಹೆಚ್ಚಿಸಿ ನೀಡಲಾಗುತ್ತಿದೆ ಮತ್ತು “ವಾಜಪೇಯಿ ಆರೋಗ್ಯಶ್ರೀ” ಯೋಜನೆಯಡಿ ಏಳು ಗಂಭೀರ ಖಾಯಿಲೆಗಳಿಗೆ ಸರ್ಕಾರಿ ಹಾಗೂ ನೋಂದಾಯಿತ ಅತ್ಯುತ್ತಮ ದರ್ಜೆಯ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮತ್ತು ಆರೈಕೆಯ ಸೌಲಭ್ಯವನ್ನು “ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್” ಮೂಲಕ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಆತ್ಮಹತ್ಯೆ  ಮಾಡಿಕೊಂಡ ರೈತರ ಮಕ್ಕಳಿಗೆ ಸ್ನಾತಕೋತ್ತರ ಪದವಿಯ ಹಂತದವರೆಗೆ ಶಿಕ್ಷಣವನ್ನು ಮುಂದುವರಿಸಲು ಅನುವಾಗುವಂತೆ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ ಎಂದು ಸದಸ್ಯರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಶಕ್ತಿನಗರದಲ್ಲಿ ಪ್ರತಿದಿನ 28.75 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ

ಬೆಂಗಳೂರು, ಜುಲೈ 5 (ಕರ್ನಾಟಕ ವಾರ್ತೆ); ರಾಯಚೂರು ಜಿಲ್ಲೆ ಶಕ್ತಿನಗರದಲ್ಲಿ ಪ್ರತಿದಿನ ಸರಾಸರಿ 28.75 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಡಿ. ಕೆ. ಶಿವಕುಮಾರ್ ತಿಳಿಸಿದರು.

ಇಂದು ವಿಧಾನ ಪರಿಷತ್ ಸದಸ್ಯ ಬಸವರಾಜು ಪಾಟೀಲ್ ಇಟಗಿ ಅವರು ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ವಿದ್ಯುತ್ ಘಟಕಗಳಿಂದ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಘಟಕಗಳ ನವೀಕರಣ ಮತ್ತು ಆಧುನೀಕರಣವನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಸದನಕ್ಕೆ ತಿಳಿಸಿದರು.

ನೂತನ ವಿಧಾನ ಸಭಾಧ್ಯಕ್ಷರಾಗಿ ಕೋಳಿವಾಡ್ ಅವಿರೋದ ಆಯ್ಕೆ

ಬೆಂಗಳೂರು, ಜುಲೈ 5 (ಕರ್ನಾಟಕ ವಾರ್ತೆ) : ಕರ್ನಾಟಕ ವಿಧಾನ ಸಭೆಯ ನೂತನ ಸಭಾಧ್ಯಕ್ಷರಾಗಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಬಿ. ಕೋಳಿವಾಡ್ ಅವರು ವಿಧಾನ ಸಭೆಯಲ್ಲಿಂದು ಅವಿರೋಧವಾಗಿ ಆಯ್ಕೆಯಾದರು.

ಇಂದು ಮುಂಜಾನೆ ವಿಧಾನ ಸಭೆಯ ಎರಡನೇ ದಿನದ ಕಾರ್ಯಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಹಂಗಾಮಿ ಸಭಾಧ್ಯಕ್ಷ ಎನ್. ಹೆಚ್. ಶಿವಶಂಕರರೆಡ್ಡಿ ವಿಧಾನ ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಸಭಾ ಅಧ್ಯಕ್ಷರ ಸ್ಥಾನಕ್ಕೆ ಕೆ. ಬಿ. ಕೋಳಿವಾಡ್ ಅವರ ಹೆಸರನ್ನು ಸೂಚಿಸಿದರು. ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ. ಬಿ. ಜಯಚಂದ್ರ ಅವರು ಕೆ.ಬಿ. ಕೋಳಿವಾಡ್ ಅವರ ಹೆಸರನ್ನು ಅನುಮೋದಿಸಿದರು.

ನಂತರ ಹಂಗಾಮಿ ಸಭಾಧ್ಯಕ್ಷ ಎನ್. ಹೆಚ್. ಶಿವಶಂಕರರೆಡ್ಡಿ ಅವರು ಕೆ. ಬಿ. ಕೋಳಿವಾಡ್ ಅವರು ವಿಧಾನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು.

ವಿಧಾನ ಪರಿಷತ್ ಕಲಾಪ ವರದಿ: ಸತತ ಏಳನೇ ಬಾರಿಗೆ ವಿಧಾನ ಪರಿಷತ್ತಿಗೆ ಆಯ್ಕೆ: ದಾಖಲೆ ಬರೆದ ಬಸವರಾಜ ಹೊರಟ್ಟಿ

ಕರ್ನಾಟಕ ವಾರ್ತೆ: ಬೆಂಗಳೂರು ಜುಲೈ 5: ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಏಳನೇ ಬಾರಿಗೆ ವಿಧಾನ ಪರಿಷತ್‍ಗೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಬಸವರಾಜ ಹೊರಟ್ಟಿ ಅವರು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆಂದು ವಿಧಾನ ಪರಿಷತ್ ಸಭಾಧ್ಯಕ್ಷರಾದ ಡಿ.ಹೆಚ್. ಶಂಕರಮೂರ್ತಿ ವಿಧಾನ ಪರಿಷತ್ತಿನಲ್ಲಿಂದು ಪ್ರಕಟಿಸಿದರು.

ನಂತರ ಬಸವರಾಜ ಹೊರಟ್ಟಿ ಅವರು ಸೇರಿದಂತೆ ನೂತನವಾಗಿ ಪರಿಷತ್ತಿಗೆ ಆಯ್ಕೆಯಾದÀ ಹಣಮಂತಪ್ಪ ರುದ್ರಪ್ಪ ನಿರಾಣೆ ಮತ್ತು ಅರುಣ್ ಷಹಾಪುರ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದು ಬಸವರಾಜ ಹೊರಟ್ಟಿ ಮತ್ತು ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಆನ್‍ಲೈನ್‍ನಲ್ಲಿ ಕೃಷಿ ಉಪಕರಣ ಬಾಡಿಗೆ ಒದಗಿಸಲು ಚಿಂತನೆ

ಕರ್ನಾಟಕ ವಾರ್ತೆ: ಬೆಂಗಳೂರು ಜುಲೈ 5: ಸಾರ್ವಜನಿಕರಿಗೆ ಟ್ಯಾಕ್ಸಿ ಸೇವೆ ಒದಗಿಸುವ ಒಲಾ ಮಾದರಿಯಲ್ಲಿ ರೈತರಿಗೆ ಆನ್ ಲೈನ್ ಮೂಲಕ ಕೃಷಿ ಉಪಕರಣಗಳನ್ನು ಬಾಡಿಗೆಗೆ ಒದಗಿಸಲು ಚಿಂತಿಸಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿಂದು ರಾಮಚಂದ್ರಗೌಡ ಅವರು ಪ್ರಶ್ನೋತ್ತರ ವೇಳೆಯಲ್ಲಿ ಎಷ್ಟು ಕೃಷಿ ಯಂತ್ರಗಳು ಬಾಡಿಗೆಗೆ ದೊರೆಯಲಿವೆ ಮತ್ತು ಎಲ್ಲೆಲ್ಲಿ ದೊರೆಯಲಿವೆ ಎಂಬ ಮಾಹಿತಿಯನ್ನು ರೈತರಿಗೆ ಅಂತರ್ ಜಾಲಗಳ ಮುಖಾಂತರ ತಿಳಿಸಿದಲ್ಲಿ ಅವರಿಗೆ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಸಚಿವರು ಆನ್‍ಲೈನ್ ವ್ಯವಸ್ಥೆಯ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.

ರೈತರು ತಮ್ಮ ಆದಾಯದಲ್ಲಿ ಅರ್ಧದಷ್ಟುನ್ನು ಕೂಲಿಗೆ ವೆಚ್ಚಮಾಡುತ್ತಿದ್ದಾರೆ. ಆದರೆ ರೈತರು ಬೆಳೆಯನ್ನು ನಾಟಿ ಮಾಡಲು ಹಾಗೂ ಕಟಾವು ಮಾಡಲು ಯಂತ್ರಗಳನ್ನು ಬಳಸಿದರೆ ಶೇಕಡ 30 ರಷ್ಟು ಹಣ ಉಳಿತಾಯ ಮಾಡಬಹುದು.

ಇದನ್ನು ಮನಗಂಡ ನಮ್ಮ ಸರ್ಕಾರವು ಹೊಬಳಿ ಮಟ್ಟದಲ್ಲಿ ರಾಜ್ಯದಾದ್ಯಂತ 171 ಕೃಷಿ ಯಂತ್ರ ಧಾರೆ ಕೇಂದ್ರಗಳನ್ನು ತೆರೆದಿದ್ದು, ಈ ಕೇಂದ್ರದಲ್ಲಿ ಕೃಷಿಗೆ ಬೇಕಾಗುವ ವಿವಿಧ ಯಂತ್ರಗಳನ್ನು ಮಾರುಕಟ್ಟೆ ದರಕ್ಕಿಂತ ಶೇಕಡ 25 ರಿಂದ 30 ರಷ್ಟು ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದಲ್ಲದೆ ರಾಗಿ ಮತ್ತು ಬಿಳಿ ಜೋಳದ ಬಿತ್ತನೆ ಬೀಜಕ್ಕೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದ್ದು, ಜೊತೆಗೆ ರೈತರು ಬೆಳೆದ ರಾಗಿ ಮತ್ತು ಜೋಳದ ಬೆಳೆಯನ್ನು ಸಹ ನೇರವಾಗಿ ಸರ್ಕಾರವೇ ಉತ್ತಮ ಬೆಲೆಗೆ ಖರೀದಿಮಾಡುತ್ತಿದೆ. ಆದರೆ ಮಳೆಯ ಅಭಾವದಿಂದಾಗಿ 2015-16 ನೇ ಸಾಲಿನಲ್ಲಿ ರಾಗಿ ಮತ್ತು ಭತ್ತದ ಬೆಳೆಯ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದರು.

ಮಾರ್ಚ್ ಮಾಹೆಯ ಅಂತ್ಯದೊಳಗೆ ಹೊರಗುತ್ತಿಗೆ ಪೌರ ಕಾರ್ಮಿಕರ ನೇಮಕಾತಿ ರದ್ದು

ಕರ್ನಾಟಕ ವಾರ್ತೆ: ಬೆಂಗಳೂರು ಜುಲೈ 5: ರಾಜ್ಯದಾದ್ಯಂತ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ನೇಮಕಾತಿಯನ್ನು 2017ರ ಮಾರ್ಚ್ ಮಾಹೆಯ ಅಂತ್ಯದೊಳಗೆ ರದ್ದು ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಬಿ. ಖಂಡ್ರೆ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕೆ. ಪ್ರತಾಪಚಂದ್ರಶೆಟ್ಟೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರ ಸೇವೆಯನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಶ್ರೀಮತಿ ಉಪಾದೇವಿರವರ ಪ್ರಕರಣದಲ್ಲಿ ವಿಧಿಸಲಾದ 4 ಷರತ್ತುಗಳನ್ನು ಪೂರೈಸಿದ ನೌಕರರ ಸೇವಿಯನ್ನು ಸಕ್ರಮ ಮಾಡಲು 9 ತಿಂಗಳ ಕಾಲಾವಕಾಶ ನೀಡಲಾಗಿದ್ದು, ಸಕ್ರಮಾತಿ ಪ್ರಕ್ರಿಯಿಯು ಪ್ರಗತಿಯಲ್ಲಿದೆ ಎಂದರು.

ಹೊರಗುತ್ತಿಗೆ ಪೌರಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಒದಗಿಸಲಾಗಿದ್ದು, ಅವರ ಹೆಸರಿಗೆ ಬ್ಯಾಂಕ್‍ನಲ್ಲಿ ತೆರೆಯಲಾಗಿರುವ ಎಸ್‍ಕಾರ್ಟ್ ಖಾತೆಗೆ ಮುಂಗಡವಾಗಿ ಎರಡು ತಿಂಗಳ ವೇತನವನ್ನು ಹಾಗೂ 3 ಸಾವಿರ ರೂ ಸಂಕಷ್ಟ ಭತ್ಯೆಯನ್ನು ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಪಾವತಿಸಲಾಗುತ್ತಿದೆ. ಅಲ್ಲದೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ ಸದರಿ ನಿಯಮಗಳಡಿಯಲ್ಲಿ ಹೊರ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ರತಿ ತಾಲ್ಲೂಕುಗಳಿಗೆ ಪಶುವೈದ್ಯಕೀಯ ಆಂಬುಲೆನ್ಸ್

ಕರ್ನಾಟಕ ವಾರ್ತೆ: ಬೆಂಗಳೂರು ಜುಲೈ 5: ಪ್ರತಿ ತಾಲ್ಲೂಕುಗಳಿಗೆ ತಲಾ ಒಂದೊಂದು ಪಶುವೈದ್ಯಕೀಯ ಆಂಬುಲೆನ್ಸ್ ಗಳನ್ನು ಮಂಜೂರು ಮಾಡಲಾಗುತ್ತಿದ್ದು, 2015-16 ನೇ ಸಾಲಿನಲ್ಲಿ ಪ್ರಥಮ ಹಂತವಾಗಿ 18 ಜಿಲ್ಲೆಗಳ 33 ತಾಲ್ಲೂಕುಗಳಿಗೆ ಒಂದು ವಾಹನದಂತೆ 33 ಸಂಚಾರಿ ಪಶುವೈದ್ಯಕೀಯ ಆಂಬುಲೆನ್ಸ್ ವಾಹನಗಳನ್ನು ಮಂಜೂರು ಮಾಡಲಾಗಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಎ ಮಂಜು ಅವರು ತಿಳಿಸಿದರು.

ಸದಸ್ಯ ಅಮರನಾಥ ಪಾಟೀಲ ಅವರು ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ಆರೋಗ್ಯ ಇಲಾಖೆಯ 108 ಮಾದರಿಯಂತೆ ಪಶುಸಂಗೋಪನಾ ಇಲಾಖೆಯಲ್ಲಿ “ಧನ್ವಂತ್ರಿ” ಎಂಬ ನೂತನ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಸೇವೆಯನ್ನು ಯಾವುದೇ ಏಜೆನ್ಸಿಗೆ ನೀಡೆದೇ ಹೊರಗುತ್ತಿಗೆ ವಾಹನ ಚಾಲಕರ ಸೇವೆಯೊಂದಿಗೆ ಇಲಾಖೆಯಿಂದಲೇ ತಾಲ್ಲೂಕು ಪಶು ಆಸ್ಪತ್ರೆಯನ್ನು ಕೇಂದ್ರವನ್ನಾಗಿಸಿಕೊಂಡು ಸೇವೆ ಒದಗಿಸಲು ಕ್ರಮವಹಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.