Government of Karnataka

Department of Information

Saturday 14/11/2015

State News 10-11-2015

Date : Tuesday, November 10th, 2015

ನಾಡಿನ ರಕ್ಷಣೆಗಾಗಿ ಹೆತ್ತಮಕ್ಕಳನ್ನು ಅಡವಿಟ್ಟ ಟಿಪ್ಪು-ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು, ನವೆಂಬರ್ 10 (ಕರ್ನಾಟಕ ವಾರ್ತೆ) :- ಬ್ರಿಟೀಷರ ವಿರುದ್ಧ ಟಿಪ್ಪು ಸುಲ್ತಾನ್ ಯುದ್ಧ ಮಾಡುವ ಸಂದರ್ಭದಲ್ಲಿ ಸೋತಾಗ ಬ್ರಿಟಿಷರಿಗೆ ದಂಡವಾಗಿ 3.30 ಲಕ್ಷ ಜೊತೆಗೆ ತನ್ನೆರಡು ಗಂಡುಮಕ್ಕಳನ್ನು ದೇಶದ, ನಾಡಿನ ಜನರ ರಕ್ಷಣೆಗೋಸ್ಕರ ಅಡವಿಟ್ಟಿದ್ದರು. ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡುವ ಅಗತ್ಯವಿರಲಿಲ್ಲ. ಬ್ರಿಟಿಷರ ಜೊತೆ ಷಾಮೀಲಾಗಿ ಎಲ್ಲ ರಾಜರ ರೀತಿ ಬದುಕಬಹುದಾಗಿತ್ತು. ಆದರೆ ಟಿಪ್ಪು ಸುಲ್ತಾನ್ ಆ ರೀತಿ ಮಾಡದೆ ದೇಶದ ರಕ್ಷಣೆಗೋಸ್ಕರ ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳನ್ನು ಮಾಡಿ ಜನರ ನೆಮ್ಮದಿ ಹಾಗೂ ಸುಖಕ್ಕಾಗಿ ಯುದ್ಧಭೂಮಿಯಲ್ಲೇ ಹೋರಾಡುತ್ತಾ ವೀರ ಮರಣ ಹೊಂದಿದ ಅಪ್ರತಿಮ ವೀರ ಟಿಪ್ಪು ಸುಲ್ತಾನ್ ಎಂದು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ತಿಳಿಸಿದರು.

ಇಂದು ಟಿಪ್ಪು ಸುಲ್ತಾನ್ ಅವರ ಜನ್ಮ ದಿನದ ಜಯಂತಿಯ ಅಂಗವಾಗಿ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಒಬ್ಬ ದೇಶಭಕ್ತ, ಜಾತ್ಯಾತೀತ ಮನೋಭಾವವುಳ್ಳವನು, ನಾಡಿಗಾಗಿ ಹೋರಾಟ ಮಾಡಿದವರು ಹಾಗೂ ಯಾವುದೇ ಜಾತಿ-ಮತ-ಧರ್ಮಕ್ಕೆ ಸೇರಿದವರ ಜನಾಂಗದ ಅಭಿವೃದ್ಧಿಗೆ ಶ್ರೀಮಿಸದೆ ಎಲ್ಲಾ ಮನು ಜಾತಿಯ ಅಭಿವೃದ್ಧಿಗೆ ಶ್ರಮಿಸಿದ ವೀರ ಎಂದು ಬಣ್ಣಿಸಿದರು.

ಇಂದು ಸರ್ಕಾರದ ವತಿಯಿಂದ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಇಂಥಃ ವೀರನ ನೆನಪಿಗಾಗಿ, ಅವರು ಮಾಡಿದ ಸೇವೆಗಾಗಿ ಸ್ಮರಣೆಗೋಸ್ಕರ ಈ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಟಿಪ್ಪು ಸುಲ್ತಾನ್ ಕನ್ನಡಿಗ, ಹಿಂದು ವಿರೋದಿಯಲ್ಲ. ಯಾವುದೇ ಹಿಂದುಗಳನ್ನು ಮತಾಂತರ ಮಾಡಿಲ್ಲ. ಇದಕ್ಕೆ ಯಾವುದೇ ಪುರಾವೆಗಳಾಗಲೀ, ಆಧಾರಗಳಾಗಲೀ ಇಲ್ಲ. ಮತ್ತು ಯಾವುದೇ ಹಿಂದೂ ದೇವಾಲಯಗಳಿಗೆ ಹಾನಿಯುಂಟುಮಾಡಿಲ್ಲ. ಇನ್ನೂ ಹಿಂದೂ ದೇವಾಲಯಗಳನ್ನು ರಕ್ಷಿಸಿದ್ದಾರೆ. ಉದಾಹರಣೆಗೆ ಶೃಂಗೇರಿ ಶಾರದಾ ಪೀಠ, ನಂಜನಗೂಡಿನ ದೇವಾಲಯ, ಮೇಲುಕೋಟೆ ದೇವಾಲಯ ಇತ್ಯಾದಿ.

ಕರ್ನಾಟಕದಲ್ಲಿ ರೇಷ್ಮೆ ಉದ್ಯಮ ಮೊದಲನೇ ಸ್ಥಾನದಲ್ಲಿ ಇರುವುದಕ್ಕೆ ಮುಖ್ಯ ಕಾರಣಕರ್ತ ಟಿಪ್ಪು ಸುಲ್ತಾನ್. ಕೈಗಾರಿಕೆ, ಗುಡಿಕೈಗಾರಿಕೆ, ಕೃಷಿ ಈ ರೀತಿಯ ಕೆಲಸಗಳಿಗೆ ಆದ್ಯತೆ ನೀಡಿ ದೇಶದ ಅಬಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ನಮ್ಮ ನಾಡಿನಲ್ಲಿ ಹಿಂದೂ, ಮುಸ್ಲಿಂ ಎನ್ನದೆ ನಾವೆಲ್ಲರೂ ಮನುಷ್ಯರಂತೆ ಬದುಕಬೇಕು ಎಂದು ಕುವೆಂಪು ಅವರು ಹೇಳಿದಂತಹ “ಸರ್ವ ಜನಾಂಗದ ಶಾಂತಿಯ ತೋಟ” ಎಂಬುದಾಗಿ ಭಾವಿಸಿ ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ವಕ್ಫ್ ಹಾಗೂ ಪೌರಾಡಳಿತ ಸಚಿವರಾದ ಶ್ರೀ ಕಮರುಲ್ ಇಸ್ಲಾಂ ಅವರು ಟಿಪ್ಪು ಸುಲ್ತಾನ್ ಕೇವಲ ದೊರೆ ಅಥವಾ ಸಾಮಂತನೊಬ್ಬನ ಹೆಸರು ಮಾತ್ರವಲ್ಲ ಅದು ಅಖಂಡ ಭಾರತದ ಕನಸಿನ, ಶೌರ್ಯದ, ಧರ್ಮದ ಸಹಿಷ್ಣುತೆಯ ಮಾದರಿ ಆಡಳಿತದ ರುವಾರಿ ಎಂದು ಬಣ್ಣಿಸಿದರು.

ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಮೈಸೂರು ಸೇನೆಗೆ ತಮ್ಮ ಯುದ್ಧ ತಂತ್ರ ಹಾಗೂ ಸಂಘಟನಾ ಚಾತುರ್ಯದಿಂದ ಹೈದರಾಲಿ ಮತ್ತು ಆತನ ಪುತ್ರ ಟಿಪ್ಪು ಸುಲ್ತಾನ್ ಇಬ್ಬರೂ ಜಾಗತಿಕ ಮನ್ನಣೆ ದೊರಕಿಸಿಕೊಟ್ಟವರು ಎಂದರು.

ಕ್ಷಿಪಣಿಯ ಜನಕ ಟಿಪ್ಪು :- ಟಿಪ್ಪು ಸುಲ್ತಾನ್‍ಗೆ ಬಾಲ್ಯದಿಂದಲೂ ರಾಕೆಟ್ ತಂತ್ರಜ್ಞಾನದಲ್ಲಿ ಬಹಳ ಆಸಕ್ತಿ ಇತ್ತು. ಮುಂದೆ ಇದರಲ್ಲಿ ಪರಿಣತಿ ಸಾಧಿಸಿ ಯುದ್ಧದಲ್ಲೂ ರಾಕೆಟ್‍ಗಳನ್ನು ಬಳಕೆ ಮಾಡಿದರು. ಚಿಕ್ಕ ವಯಸ್ಸಿನಲ್ಲೇ ಟಿಪ್ಪು ರಾಕೆಟ್ ತಂತ್ರಜ್ಞಾನದಲ್ಲಿ ಪರಿಣಿತಿ ಸಾಧಿಸಿದರು. ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಬ್ರಿಟಿಷರ ತುಕಡಿಗಳ ಮೇಲೆ ರಾಕೆಟ್ ದಾಳಿ ನಡೆಸಿದರು. ಈ ದಾಳಿಯಿಂದಾಗಿ ಬ್ರಿಟಿಷರ ಸೇನೆ ಕಂಗೆಟ್ಟಿತು ಎಂದು ಅವರು ತಿಳಿಸಿದರು.

ಟಿಪ್ಪು ಸುಲ್ತಾನ್ ಕುರಿತು ಉಪನ್ಯಾಸ ನೀಡಿದ ಶ್ರೀ ಗಿರೀಶ್ ಕರ್ನಾಡ್ ರವರು, 300 ವರ್ಷದಲ್ಲಿ ಟಿಪ್ಪುವಿಗೆ ಸಾಟಿಯಾದ ವ್ಯಕ್ತಿ ಬೇರೊಬ್ಬರಿಲ್ಲ, ಕರ್ನಾಟಕವನ್ನು ಒಗ್ಗೂಡಿಸಿ, ಯಾವುದೆ ಹಿಂದೂ-ಮುಸ್ಲಿಂ ಬೇದಭಾವವಿಲ್ಲದೆ ಕರ್ನಾಟಕದ ಅಬಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು. ಬ್ರಿಟಿಷರು ಹೇಳಿದಂತೆ ಕೇಳದೆ, ನಾಡಿನ ಉದ್ದಾರಕ್ಕೋಸ್ಕರ ತನ್ನದೇ ಆದ ಒಂದು ಆರ್ಥಿಕ ಸಾಮ್ರಾಜ್ಯವನ್ನು ಕಟ್ಟಿ, ಬಡವರಿಗೆ, ಮಹಿಳೆಯರಿಗೆ, ದೀನ ದಲಿತರ ಏಳಿಗೆಗೆ ಶ್ರಮಿಸಿದವರು ಎಂದರು.

ಟಿಪ್ಪು ಸುಲ್ತಾನ್ ಒಬ್ಬ ಸ್ವತಂತ್ರ್ಯ ಹೋರಾಟಗಾರ, ದೇಶಪ್ರೇಮಿ ಮತ್ತು ಕೃಷಿಗೆ ಆದ್ಯತೆ ನೀಡಿ ನಾಡನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಇತಿಹಾಸ ತಜ್ಞ ಶ್ರೀ ಕೊ. ಚನ್ನಬಸಪ್ಪ ಅವರು ಮಾತನಾಡಿ 1799 ರಲ್ಲಿ ಟಿಪ್ಪು ಮರಣಿಸಿದ ನಂತರ ಬರೀ ಶ್ರೀರಂಗಪಟ್ಟಣಕ್ಕೆ ಕತ್ತಲಾಗಲಿಲ್ಲ, ಬದಲಿಗೆ ಇಡೀ ದೇಶಕ್ಕೇ ಕತ್ತಲಾಯಿತು. ಇಂದು ದೀಪಾವಳಿ ಹಬ್ಬದ ದಿನ ಕರ್ನಾಟಕ ರಾಜ್ಯ ಸರ್ಕಾರ ಟಿಪ್ಪುಸುಲ್ತಾನ್ ಜಯಂತಿಯನ್ನು ಆಚರಿಸಿದ್ದರಿಂದ ಮತ್ತೆ ನಾಡಿಗೆ ಬೆಳಕು ಮೂಡಿದೆ ಎಂದು ಅಭಿಪ್ರಾಯಿಸಿದರು.

ಕೆಚ್ಚದೆಯ ಕನ್ನಡಿಗನ ಜಯಂತಿಯನ್ನು ಕರ್ನಾಟಕ ಸರ್ಕಾರ ಆಚರಿಸುತ್ತಿರುವುದಕ್ಕೆ ತಮ್ಮ ಅಭಿನಂದನೆಗಳು ತಿಳಿಸಿದ ಅವರು, ದೇಶಭಕ್ತನಾದ ಟಿಪ್ಪು ಸುಲ್ತಾನ್ ಭರತ ಖಂಡದಲ್ಲಿ ದಾಸರಾಗಿದ್ದ ಎಲ್ಲರ ವಿರುದ್ಧ ನಿಂತು ಬಡವರ ರಕ್ಷಣೆಗೆ ಶ್ರಮಿಸಿದರು ಎಂದರು.

ಸಾಹಿತಿಗಳಾದ ಶ್ರೀ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ ಟಿಪ್ಪು ಸುಲ್ತಾನ್ ಅವರ ಜಯಂತಿ ಯಾವುದೇ ಪಕ್ಷದ ಗುತ್ತಿಗೆ ಅಲ್ಲ, ಜಗತ್ತಿಗೆ ಸೇರಿದಂತಹ ಒಂದು ಕಾರ್ಯಕ್ರಮ, ಈ ಕಾರ್ಯಕ್ರಮಗಳ ಮುಖಾಂತರ ಮಹನೀಯರು ಮಾಡಿದ ಒಳ್ಳೆಯ ಕೆಲಸಗಳನ್ನು ಪಕ್ಷ, ಧರ್ಮ, ಜಾತಿ ಇವೆಲ್ಲವನ್ನು ಮರೆತು ಜ್ಞಾಪಿಸಿಕೊಂಡು, ಮುಂದಿನ ದಿನಗಳಲ್ಲಿ ಒಳ್ಳೆಯ ರೀತಿಯ ಬೆಳವಣಿಗೆಗೆ ಅವಕಾಶ ಮಾಡಿಕೊಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ಮೂಲಸೌಕರ್ಯಾಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವರಾದ ಶ್ರೀ ಆರ್.ರೋಷನ್ ಬೇಗ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವರಾದ ಶ್ರೀ ಹೆಚ್.ಸಿ.ಮಹದೇವಪ್ಪ, ಬೆಂಗಳೂರು ಮಹಾನಗರ ಪಾಲಿಕೆ ಮೆಯರ್ ಶ್ರೀ ಡಿ.ಎನ್.ಮಂಜುನಾಥ ರೆಡ್ಡಿ, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷರಾದ ಶ್ರೀ ಸಿ.ಎಂ.ಇಬ್ರಾಹಿಂ. ಲೋಕಸಭಾ ಸದಸ್ಯರಾದ ಶ್ರೀ ಎಂ.ವೀರಪ್ಪಮೊಯ್ಲಿ, ರಾಜ್ಯಸಭಾ ಸದಸ್ಯರಾದ ಶ್ರೀ ರೆಹಮಾನ್‍ಖಾನ್, ಶ್ರೀ ವಾಟಾಳ್ ನಾಗರಾಜ್ ಇತರೆ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.