District News 01-03-3012

ಶುಕ್ರವಾರ, ಮಾರ್ಚ 2nd, 2012

ಅಕ್ರಮ ಮಾದಕ ವಸ್ತುಗಳ ಸಂಗ್ರಹ; ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ

ಚಿತ್ರದುರ್ಗ,ಮಾರ್ಚ್.01-ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮದ ರಂಗಸ್ವಾಮಿ ತಮ್ಮ ತೋಟದ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿದ ಆರೋಪದ ಮೇರೆಗೆ ನ್ಯಾಯಾಲಯವು ಇವರಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂ.ಗಳ ದಂಡವನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಶ್ರೀನಿವಾಸ ಹರೀಶ್ಕುಮಾರ್ರವರು ತೀರ್ಪು ನೀಡಿರುತ್ತಾರೆ.
ಅಬಕಾರಿ ಇಲಾಖೆ ಅಧಿಕಾರಿಗಳು 2009 ರ ಸೆಪ್ಟೆಂಬರ್ 24 ರಂದು ತಾಳವಟ್ಟಿಯಲ್ಲಿರುವ ರಂಗಸ್ವಾಮಿ ಲೇಟ್ ಅನಂತರೆಡ್ಡಿಯವರ ತೋಟದ ಮೆನೆಯ ಮೇಲೆ ದಾಳಿ ನಡೆಸಿ 31.5 ಕೆ.ಜಿ. ಹಸಿಗಾಂಜಾ ಹಾಗೂ 48 ಕೆ.ಜಿ.ಒಣಗಾಂಜಾ ಸೇರಿ ಒಟ್ಟು 79.5 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು ಇವರ ಮೇಲೆ ಮಾದಕ ವಸ್ತುಗಳ ತಡೆ ಕಾಯಿದೆ 1985 ರ ಕಲಂ 8 (ಸಿ) ರನ್ವಯ ಇವರ ಮೇಲೆ ಪ್ರಕರಣ ದಾಖಲಿಸಿದ್ದರು.
ಆರೋಪಿಯಾದ ರಂಗಸ್ವಾಮಿಯವರು ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು ದಾಸ್ತಾನು ಮಾಡಿರುವುದು ನ್ಯಾಯಾಲಯದಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇವರಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂ.ಗಳ ದಂಡವನ್ನು ವಿಧಿಸಿದ್ದು ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಸಾದಾ ಶಿಕ್ಷೆ ವಿಧಿಸಿ ಫೆಬ್ರವರಿ 29 ರಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿರುತ್ತದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಜಯರಾಮ್ರವರು ವಾದ ಮಂಡಿಸಿದ್ದರು. ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಉಪ ಅಧೀಕ್ಷಕರಾದ ಮುರುಡೇಶ್ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಎನ್.ರಾಮಚಂದ್ರಯ್ಯ ತಿಳಿಸಿದ್ದಾರೆ.

ಜಲಸಂಪನ್ಮೂಲ ಸಚಿವರ ಪ್ರವಾಸ ಕಾರ್ಯಕ್ರಮ

ಹಾವೇರಿ:ಮಾ.1: ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ ಬಸವರಾಜ ಬೊಮ್ಮಾಯಿ ಅವರು ಮಾರ್ಚ 3 ರಂದು ಧಾರವಾಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಾಯಂಕಾಲ 5.30ಕ್ಕೆ ಶಿಗ್ಗಾಂವ ತಾಲೂಕ ಶಿಶುವಿನಹಾಳಕ್ಕೆ ಆಗಮಿಸಿ, ಸಂತ ಶಿಶುನಾಳ ಶರೀಫ ಹಾಗೂ ಗುರುಗೋವಿಂದ ಮಹಾಶಿವಯೋಗಿ ಶ್ರೀಗಳ ಜಾತ್ರಾ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 7.30ಕ್ಕೆ ಸವಣೂರಿಗೆ ತೆರಳಿ ಸಾರ್ವಜನಿಕರ ಭೇಟಿ ನಡೆಸುವರು. ನಂತರ ಹುಬ್ಬಳ್ಳಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಮಾ.4 ರಂದು ಬೆಳಿಗ್ಗೆ 10ಕ್ಕೆ ಹುಬ್ಬಳ್ಳಿಯಿಂದ ಹೊರಟು, 11ಕ್ಕೆ ಶಿಗ್ಗಾಂವ ತಾಲೂಕ ಶೀಲವಂತ ಸೋಮಾಪುರಕ್ಕೆ ಆಗಮಿಸಿ, ಶ್ಯಾಡಂಬಿ, ಮಡ್ಲಿ, ಶೀಲವಂತಸೋಮಾಪುರ ರಸ್ತೆ ಸುಧಾರಣೆಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಭಗವಾನ್ ಶ್ರೀ 1008 ಶ್ರೀ ಆದಿನಾಥ ತೀರ್ಥಂಕರ ಜೈನ್ ಮಂದಿರದ ಪಂಚಕಲ್ಯಾಣ ಪ್ರತಿಷ್ಠಾನ ಮಹಾಮಹೋತ್ಸವ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ 2.30ಕ್ಕೆ ಹಾನಗಲ್ಲ ತಾಲೂಕ ತಿಳವಳ್ಳಿಗೆ ತೆರಳಿ, ವಿಶೇಶ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿಗಳ ರಸ್ತೆ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ನಂತರ ಸಾಯಂಕಾಲ 4 ಗಂಟೆಗೆ ಹಾವೇರಿ ತಾಲೂಕ ದೇವಿಹೊಸೂರಿಗೆ ಆಗಮಿಸಿ, ಜಲಸಂಪನ್ಮೂಲ ಇಲಾಖೆ ಏರ್ಪಡಿಸಿದ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿಗಳ ರಸ್ತೆ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಅಲ್ಲಿಂದ ಸಂಜೆ 6 ಕ್ಕೆ ಹುಬ್ಬಳ್ಳಿಗೆ ತೆರಳಿ, ವಾಸ್ತವ್ಯ ಮಾಡುವರು. ಮಾರ್ಚ 5 ರಂದು ಬೆಳಿಗ್ಗೆ 9.15ಕ್ಕೆ ವಿಮಾನ ಮೂಲಕ ಬೆಂಗಳೂರಿಗೆ ತೆರಳುವರು.

ಸಹಾಯವಾಣಿ ಕೇಂದ್ರ ಆರಂಭ

ಹಾವೇರಿ:ಮಾ.1: ಹಾವೇರಿ ತಾಲೂಕಿನ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ತಾಲೂಕು ಕೇಂದ್ರದಲ್ಲಿ ಒಂದು ಸಹಾಯವಾಣಿ ಕೊಠಡಿ ತೆರೆದು, ಅಲ್ಲಿ ಒಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸವರಾಜಪ್ಪ ಡಿ.ಸಿ. ತಿಳಿಸಿದ್ದಾರೆ.
ತಾಲೂಕು ಪಂಚಾಯತಿ ಕಾರ್ಯಾಲಯದ ದೂರವಾಣಿ ಸಂಖ್ಯೆ 08375-232446, ಹೆಚ್.ಸಿ.ದೇಸಳ್ಳಿ, ವ್ಯವಸ್ಥಾಪಕರು( ಮೊ:98801 37291) ಹಾಗೂ ಕೆ.ಆರ್.ದೇಸಾಯಿ , ದ್ವಿತೀಯ ದರ್ಜೆ ಸಹಾಯಕ(ಮೊ:94489 82523) ಸಂಪರ್ಕಿಸಲು ಕೋರಲಾಗಿದೆ.

ಲೋಕೋಪಯೋಗಿ ಸಚಿವ ಪ್ರವಾಸ ಕಾರ್ಯಕ್ರಮ

ಹಾವೇರಿ:ಮಾ.1: ರಾಜ್ಯ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಅವರು ಇಂದು ರಂದು ರಾತ್ರಿ 9.15ಕ್ಕೆ ಬೆಂಗಳೂರಿನಿಂದ ರೈಲಿನ ಮೂಲಕ ಹೊರಟು, ನಾಳೆ ಮಾ.2 ರಂದು ಬೆಳಿಗ್ಗೆ 4.30ಕ್ಕೆ ಹಾವೇರಿಗೆ ಆಗಮಿಸಿ, ನಂತರ 5.30ಕ್ಕೆ ಹಾನಗಲ್ಲಿಗೆ ತೆರಳುವರು.
ಸಚಿವರು ಬೆಳಿಗ್ಗೆ 11ಕ್ಕೆ ಹಾನಗಲ್ಲ ತಾಲೂಕ ಕಿರವಾಡಿಗೆ ಆಗಮಿಸಿ, ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಹಾಗೂ ಮಧ್ಯಾಹ್ನ 12ಕ್ಕೆ ಹುಲಗಡ್ಡಿ ಗ್ರಾಮದಲ್ಲಿ ಕಾಲುವೆ ಸುಧಾರಣೆ ಕಾಮಗಾರಿಗೆ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಆಚಿಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ನಂತರ 4.30ಕ್ಕೆ ಹಾನಗಲ್ಲಿಗೆ ತೆರಳುವರು. ರಾತ್ರಿ9ಕ್ಕೆ ಹಾವೇರಿಗೆ ಆಗಮಿಸಿ, ರೈಲಿನ ಮೂಲಕ ಮೈಸೂರಿಗೆ ತೆರಳುವರು.
ಮಾರ್ಚ 3 ರಂದು ಸಚಿವರು ರಾತ್ರಿ 10ಕ್ಕೆ ಮೈಸೂರಿನಿಂದ ಹೊರಟು, 4 ರಂದು ಬೆಳಿಗ್ಗೆ 6ಕ್ಕೆ ಹಾವೇರಿಗೆ ಆಗಮಿಸಿ, ಹಾನಗಲ್ಲಿಗೆ ತೆರಳಿ, ಬೆಳಿಗ್ಗೆ 10ಕ್ಕೆ ಸಾರ್ವಜನಿಕರ ಭೇಟಿ ಹಾಗೂ ಕುಂದುಕೊರತೆಗಳ ವಿಚಾರಣೆ ನಡೆಸುವರು. ಮಧ್ಯಾಹ್ನ 2ಕ್ಕೆ ತಿಳವಳ್ಳಿಗೆ ಆಗಮಿಸಿ, ವಿಶೇಷ ಘಟಕ ಯೋಜನೆಯಡಿ ಹಾನಗಲ್ಲ ತಾಲೂಕು ತಿಳವಳ್ಳಿ ಹಾಗೂ ಕೊಪ್ಪಗೊಂಡನಹಳ್ಳಿ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸುವರು. ಅಲ್ಲಿಂದ ಸಚಿವರು ಮಧ್ಯಾಹ್ನ 4ಕ್ಕೆ ಹಾವೇರಿ ತಾಲೂಕ ದೇವಿಹೊಸೂರ ಗ್ರಾಮಕ್ಕೆ ಆಗಮಿಸಿ, ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಸಾಯಂಕಾಲ 6.30ಕ್ಕೆ ಹಾನಗಲ್ಲಿಗೆ ತೆರಳುವರು.
ರಾತ್ರಿ 7.30ಕ್ಕೆ ಕಲಕೇರಿಗೆ ತೆರಳಿ, ಅಲ್ಲಿನ ರಂಗ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿಗೆ ಹಾನಗಲ್ಲಿಗೆ ಆಗಮಿಸಿ ವಾಸ್ತವ್ಯಮಾಡುವರು.
ಮಾರ್ಚ 5 ರಂದು ಬೆಳಿಗ್ಗೆ 9ಕ್ಕೆ ಹಾನಗಲ್ಲಿನ ಶಾಸಕರ ಮಾದರಿ ಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜರುಗುವ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 9.30ಕ್ಕೆ ಅಕ್ಕಿಆಲೂರಿಗೆ ತೆರಳಿ, ಗ್ರಾಮದಲ್ಲಿ ಮೂರು ಕೆರೆ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ನಂತರ 10.30ಕ್ಕೆ ತಾಲೂಕಿನ ಮಲಗುಂದ ಗ್ರಾಮದಲ್ಲಿ ಎಎನ್ ಎಂ. ಸೆಂಟರ್ ಕಟ್ಟಡದ ಭೂಮಿಪೂಜೆ ಹಾಗೂ ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಸಾಗರವಳ್ಳಿ ಕೆರೆ ಕಾಮಗಾರಿಗೆ ಅಡಿಗಲ್ಲು ಸಮಾರಂಭ, ಮಧ್ಯಾಹ್ನ 3.30ಕ್ಕೆ ಬಾಳಿಹಳ್ಳಿ ಗ್ರಾಮದಲ್ಲಿ ಎ.ಎನ್. ಎಂ.ಸೆಂಟರ್ ಕಟ್ಟಡ ಹಾಗೂ ಸಭಾ ಭವನ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ಸಾಯಂಕಾಲ 4ಕ್ಕೆ ಹನುಮನಕೊಪ್ಪ ಗ್ರಾಮದಲ್ಲಿ ಸಭಾಭವನ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಸಾಯಂಕಲ 5ಕ್ಕೆ ಸಚಿವರು ಬೆಂಗಳೂರಿಗೆ ತೆರಳುವರು.

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ಹಾವೇರಿ:ಮಾ.1: ಹಾನಗಲ್ಲ ತಾಲೂಕಿನ ಹುಲಗಡ್ಡಿ ಗ್ರಾಮಮದಲ್ಲಿ ವೀರಭದ್ರೇಶ್ವರ ಹಾಗೂ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಮಾರ್ಚ 2 ರಂದು ಜರುಗಲಿವೆ. ರಾಜ್ಯ ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವರು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಜಿ.ಟಿ.ಚಂದ್ರೇಶಖರಪ್ಪನವರು, ಸಂಸದ ಶಿವಕುಮಾರ ಉದಾಸಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಮಗದ ಅಧ್ಯಕ್ಷ ಭೋಜರಾಜ ಕರೂದಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶಿವರಾಜ ಸಜ್ಜನ, ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ, ಜಿ.ಪಂ.ಅಧ್ಯಕ್ಷೆ ಶ್ರೀಮರಿ ಗದಿಗೆವ್ವ ಬಸನಗೌಡ್ರ, ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಜಿಲ್ಲಾಧಿಕಾರಿ ಹೆಚ್.ಜಿ.ಶ್ರೀವರ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ವಿಧಾನಸಭೆ ಮಾಜಿ ಉಪಸಭಾಪತಿ ಮನೋಹರ ತಹಶೀಲ್ದಾರ, ಹಾನಗಲ್ಲ ತಾ.ಪಂ.ಆಧ್ಯಕ್ಷೆ ಲಲಿತಾ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಜಿ.ಪಂ.ಸದಸ್ಯ ಬಸವರಾಜ ಹಾದಿಮನಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಪರಿಶಿಷ್ಟರಿಗಾಗಿ ನಾಟಕ ಶಿಬಿರ ಮತ್ತು ನಾಟಕ ಪ್ರದರ್ಶನ ನಡೆಸಲು ಅರ್ಜಿ ಆಹ್ವಾನ

ಹಾವೇರಿ:ಮಾ.1: ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳ ಅಡಿಯಲ್ಲಿ 20 ಜನರಿಗಾಗಿ 20 ದಿನಗಳ ಅವಧಿಯ ನಾಟಕ ಶಿಬಿರಗಳನ್ನು ನಡೆಸಲು ಅನುಭವೀ ಸಂಘಸಂಸ್ಥೆ ಹಾಗೂ ನುರಿತ ರಂಗ ಶಿಬಿರ ನಿರ್ದೇಶಕರುಗಳಿಂದ 21-3-2012ರೊಳಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಆಸಕ್ತ ರಂಗ ನಿರ್ದೇಶಕರು ಬೆಂಗಳೂರಿನ ನಾಡಕ ಅಕಾಡೆಮಿ ಕಚೇರಿ (ಕನ್ನಡ ಭವನ) ಅಥವಾ ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಿಂದ ಉಚಿತವಾಗಿ ಪಡೆದು ಭರ್ತಿಮಾಡಿ ಸಕಾಲಕ್ಕೆ ಸಲ್ಲಿಸಬೇಕೆಂದು ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.
ಈ ನಾಟಕ ಶಿಬಿರದ ಶಿಬಿರಾರ್ಥಿಗಳು ಪರಿಶಿಷ್ಟ ಜಾತಿ, ವರ್ಗದವರು ಮಾತ್ರ ಆಗಿರಬೇಕು. ರಂಗ ಶಿಬಿರದ ನಿರ್ದೇಶಕರಾಗಿ ಈ ಪಂಗಡದವರು ಲಭ್ಯವಿಲ್ಲದಿದ್ದರೆ ಮಾತ್ರ ಇತರೆ ಪಂಗಡದವನ್ನು ಪರಿಗಣಿಸಲಾಗುವುದು. ಆದ್ದರಿಂದ ಈ ಶಿಬಿರ ನಡೆಸಲು ಆಸಕ್ತರಾದ ಇತರರೂ ಅರ್ಜಿಸಲ್ಲಿಸಬಹುದಾಗಿದೆ.
ಶಿಬಿರ ನಿರ್ದೇಶಕರಾಗಿ ಅರ್ಜಿ ಸಲ್ಲಿಸುವವರು ವಿಶೇಷ ಘಟಕಯೋಜನೆಯಡಿ ನಾಟಕ ಶಿಬಿರ ಹಾಗೂ ಪ್ರದರ್ಶನ ನಡೆಸಬೇಕಾದರೆ ಶಿಬಿರದಲ್ಲಿ 15 ವರ್ಷ ಮೇಲ್ಪಟ್ಟವರು ಮಾತ್ರ ಶಿಬಿರಾರ್ಥಿಗಳಿರಬೇಕು. ಅದರಂತೆ ಗಿರಿಜನ ಉಪಯೋಜನೆಯ ಶಿಬಿರದಲ್ಲಿ ಪರಿಶಿಷ್ಟ ವರ್ಗದ ಶಿಬಿರಾರ್ಥಿಗಳು ಮಾತ್ರ ಇರುವುದು ಕಡ್ಡಾಯವಾಗಿದೆ. ಶಿಬಿರದಲ್ಲಿ ತರಬೇತಿಗೆ ಆಗಮಿಸುವವರು ತಮ್ಮ ಜಾತಿ ಪ್ರಮಾಣಪತ್ರಗಳನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಡನೆ ನೀಡಬೇಕು. ಈ ಸಂದರ್ಭದಲ್ಲಿ ಸ್ಥಳೀಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು. 20 ದಿನಗಳ ಶಿಬಿರದಲ್ಲಿ 20 ಶಿಬಿರಾರ್ಥಿಗಳಿದ್ದು, ಇವರಿಗೆ ನಟನೆ, ನಿರ್ದೇಶನ, ರಂಗ ಸಜ್ಜಿಕೆ, ಪ್ರಸಾಧನ, ಬೆಳಕು ವಿನ್ಯಾಸ ಮುಂತಾದ ವಿಷಯ ಬೋಧಿಸಿ, ನಾಟಕ ತಾಲೀಮು ನಡೆಸಿ, ಶಿಬಿರ ಸಮಾರೋಪ ಸಂದರ್ಭದಲ್ಲಿ ಶಿಬಿರದಲ್ಲಿ ಸಿದ್ಧಗೊಳಿಸಿದ ನಾಟಕವನ್ನು ಪ್ರದರ್ಶಿಸಬೇಕು.
ಹೆಚ್ಚಿನ ವಿವರಗಳಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-2(ದೂರವಾಣಿ:0808-22237484) ಅಥವಾ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸವಂತೆ ಅಕಾಡೆಮಿಯ ರಿಜಿಸ್ಟಾರ್ ಕೋರಿದ್ದಾರೆ.

ಕಲಾಭವನ ನವೀಕರಣ ಎಂಟು ತಿಂಗಳಲ್ಲಿ ಪೂರ್ಣ

ಧಾರವಾಡ (ಕರ್ನಾಟಕ ವಾರ್ತೆ) ಮಾ 01: ನಗರದ ಡಾ|| ಮಲ್ಲಿಕಾರ್ಜುನ ಮನಸೂರ ಕಲಾಭವನ ನವೀಕರಣದಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಮುಂಬರುವ ಎಂಟು ತಿಂಗಳಲ್ಲಿ ನವೀಕರಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದೆಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಜಗದೀಶ ಶೆಟ್ಟರ್ ತಿಳಿಸಿದರು. ಅವರು ಇಂದು (ದಿನಾಂಕ: 01) ಸುಮಾರು 2.50 ಕೋಟಿ ರೂ.ಗಳ ಮೊತ್ತದಲ್ಲಿ ನವೀಕರಣಗೊಳ್ಳುತ್ತಿರುವ ಕಲಾಭವನದ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಈ ಮೇಲಿನಂತೆ ತಿಳಿಸಿದರು. ಈ ಕಲಾಭವನದ ಪೂರ್ಣ ಅಭಿವೃದ್ಧಿಗೆ ಸುಮಾರು 7.50 ಕೋಟಿ ರೂ.ಗಳ ಅನುದಾನದ ಅವಶ್ಯಕತೆ ಇದ್ದು, ಮುಂದಿನ ಬಡ್ಜೆಟ್ನಲ್ಲಿ ಹೆಚ್ಚಿನ ಅನುದಾನ ಪಡೆದುಕೊಂಡು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು. ಅನುದಾನದ ಕೊರತೆಯಿಂದಾಗಿ ನವೀಕರಣ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ನವೀಕರಣಗೊಳಿಸಿದ ನಂತರ ಈ ಕಲಾಭವನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸೂಕ್ತ ಬೆಲೆಯನ್ನು ನಿಗದಿ ಪಡಿಸಲು ಉದ್ದೇಶಿಸಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಶ್ರೀ ದರ್ಪಣ ಜೈನ್ ಅವರು ನವೀಕರಣದಲ್ಲಿ ತೆಗೆದುಕೊಂಡ ಕಾಮಗಾರಿಗಳ ವಿವರವನ್ನು ನೀಡಿದರು. ಸಚಿವರ ಜೊತೆಯಲ್ಲಿ ಸಂಸದ ಶ್ರೀ ಪ್ರಲ್ಹಾದ ಜೋಶಿ, ಶಾಸಕರುಗಳಾದ ಶ್ರೀ ಚಂದ್ರಕಾಂತ ಬೆಲ್ಲದ, ಶ್ರೀಮತಿ ಸೀಮಾ ಮಸೂತಿ, ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಶ್ರೀ ಮಹೇಶ್ ತೆಂಗಿನಕಾಯಿ, ಹುಡಾ ಅಧ್ಯಕ್ಷ ಶ್ರೀ ದತ್ತಾ ಡೋರ್ಲೆ, ಜಿಲ್ಲಾಧಿಕಾರಿ ಶ್ರೀ ದರ್ಪಣ ಜೈನ್, ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

ಛಾಯಾಚಿತ್ರ ತಲೆ ಬರಹ:ಮನ್ಸೂರ ಕಲಾಭವನದ ನವೀಕರಣ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಜಗದೀಶ ಶೆಟ್ಟರ್ ಅವರು ವೀಕ್ಷಿಸುತ್ತಿರುವರು. ಚಿತ್ರದಲ್ಲಿ ಲೋಕಸಭಾ ಸದಸ್ಯ ಶ್ರೀ ಪ್ರಲ್ಹಾದ್ ಜೋಶಿ, ಶಾಸಕರುಗಳಾದ ಶ್ರೀ ಚಂದ್ರಕಾಂತ ಬೆಲ್ಲದ, ಶ್ರೀಮತಿ ಸೀಮಾ ಮಸೂತಿ, ಜಿಲ್ಲಾಧಿಕಾರಿ ಶ್ರೀ ದರ್ಪಣ ಜೈನ್ ಅವರನ್ನು ಚಿತ್ರದಲ್ಲಿ ಕಾಣಬಹುದು.

*****

ಬರುವ ಡಿಸೆಂಬರ್ ಕ್ಕೆ ಧಾರವಾಡ ರಾಮನಗರ ರಸ್ತೆ ಕಾಮಗಾರಿ ಪೂರ್ಣ

ಧಾರವಾಡ (ಕರ್ನಾಟಕ ವಾರ್ತೆ) ಮಾ 01: ಧಾರವಾಡ-ರಾಮನಗರ ಮಧ್ಯದ 61 ಕಿ.ಮೀ. ಅಭಿವೃದ್ಧಿ ಕಾರ್ಯವನ್ನು ಬರುವ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ ಸುಗಮ ಸಾರಿಗೆಗೆ ಅನುಕೂಲ ಮಾಡಿಕೊಡಲಾಗುವುದೆಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಜಗದೀಶ ಶೆಟ್ಟರ್ ತಿಳಿಸಿದರು.

ಅವರು ಇಂದು (ದಿನಾಂಕ:1) 237 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಂಡ ಧಾರವಾಡ-ರಾಮನಗರ ರಸ್ತೆ ಅಭಿವೃದ್ಧಿ ಕೆಲಸವನ್ನು ವೀಕ್ಷಿಸಿ ಮಾತನಾಡುತ್ತಿದ್ದರು. ಈ ರಸ್ತೆಯ ಮಧ್ಯೆ ಬರುವ ಅರಣ್ಯ ಭೂಮಿಯ ಹಿನ್ನೆಲೆಯಲ್ಲಿ ಈ ಕೆಲಸದಲ್ಲಿ ಸ್ವಲ್ಪ ವಿಳಂಬವಾಗಿದ್ದು, ಈಗ ಆ ಸಮಸ್ಯೆ ಬಗೆಹರಿದಿದ್ದು, ನಿಗದಿತ ಅವಧಿಯಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದೆಂದು ಅವರು ಹೇಳಿದರು. ಈ ರಸ್ತೆ ನಿರ್ಮಾಣದ ಮಧ್ಯೆ ಎರಡು ರೈಲ್ವೆ ಮೇಲಸೇತುವೆಗಳನ್ನು ಸಹ ನಿರ್ಮಿಸಲಾಗುವುದೆಂದು ಅವರು ಹೇಳಿದರು. ನಿರ್ಮಾಣ, ನಿರ್ವಹಣೆ ಹಾಗೂ ವರ್ಗಾವಣೆ (ಬಿಓಟಿ) ಆಧಾರದ ಮೇಲೆ ಈ ರಸ್ತೆ ಅಭಿವೃದ್ಧಿ ಕಾರ್ಯ ದಡೆದಿದ್ದು, 25 ವರ್ಷಗಳವರೆಗೆ ಕೆಲಸ ತೆಗೆದುಕೊಂಡ ಗುತ್ತಿಗೆದಾರರು ಇದರ ನಿರ್ವಹಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಸಚಿವರ ಜೊತೆಯಲ್ಲಿ ಸಂಸದ ಶ್ರೀ ಪ್ರಲ್ಹಾದ ಜೋಶಿ, ಶಾಸಕರುಗಳಾದ ಶ್ರೀ ಚಂದ್ರಕಾಂತ ಬೆಲ್ಲದ, ಶ್ರೀಮತಿ ಸೀಮಾ ಮಸೂತಿ, ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಶ್ರೀ ಮಹೇಶ್ ತೆಂಗಿನಕಾಯಿ, ಮಾಜಿ ಶಾಸಕ ಶ್ರೀ ಶಿವಾನಂದ ಅಂಬಡಗಟ್ಟಿ, ಜಿಲ್ಲಾಧಿಕಾರಿ ಶ್ರೀ ದರ್ಪಣ ಜೈನ್, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಇಂಜನೀಯರ್ ಶ್ರೀ ಎಲ್.ಸಿ. ಗಾಣಿಗೇರ ಉಪಸ್ಥಿತರಿದ್ದರು.

ಶಿಕಾರಿಪುರ ಉತ್ಸವಕ್ಕೆ ಪೂರ್ವಭಾವಿ ಸಭೆ

ಶಿಕಾರಿಪುರ, ಮಾರ್ಚ್, 01 (ಕರ್ನಾಟಕ ವಾರ್ತೆ)- ಏಪ್ರಿಲ್ ತಿಂಗಳಿನಲ್ಲಿ ಶಿಕಾರಿಪುರ ಉತ್ಸವ ಕಾರ್ಯಕ್ರಮ ಆಚರಿಸುವ ಕುರಿತು ಜಿಲ್ಲಾಧಿಕಾರಿ ಶ್ರೀ ಎಂ.ವಿ.ವೇಧಮೂರ್ತಿ ನೇತೃತ್ವದಲ್ಲಿ ಗುರುವಾರ ಶಿಕಾರಿಪುರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕಳೆದ ವರ್ಷ ಮೂರು ದಿನಗಳ ಕಾಲ ಶಿಕಾರಿಪುರ ಉತ್ಸವ ಅದ್ದೂರಿಯಾಗಿ ನಡೆಸಲಾಗಿತ್ತು ಈ ವರ್ಷವೂ ಅದೇ ರೀತಿ ಆಚರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಏಪ್ರಿಲ್ ಹೊತ್ತಿಗೆ ಶಿಕಾರಿಪುರದಲ್ಲಿ ವಿವಿಧ ಇಲಾಖೆಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹಾಗೂ ಆ ಹೊತ್ತಿಗೆ ಉದ್ಘಾಟನೆಗೆ ಸಿದ್ಧವಾಗುವ ಅಥವಾ ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವ ಕುರಿತ ಸಿದ್ಧತೆಗಳಿದ್ದರೆ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಅಥವಾ ತಾಲೂಕು ತಹಸೀಲ್ದಾರ್ ಅವರಿಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ತಾಲೂಕು ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಎಲ್ಲ ಅನುದಾನವನ್ನು ಖರ್ಚು ಮಾಡಬೇಕು, ಯಾವುದೇ ಅನುದಾನವನ್ನು ಬಾಕಿ ಉಳಿಸಿಕೊಳ್ಳಬಾರದು ಎಂದರು.
ಶಿಕಾರಿಪುರ ಉತ್ಸವ ಆಚರಣೆ ಕುರಿತು ಮತ್ತೊಂದು ಸಭೆ ನಡೆಸುವ ಅಗತ್ಯವಿದ್ದು ಈ ಸಂಬಂಧ ಕನ್ನಡ ಮತ್ತು ಸಂಸಕೃತಿ ಇಲಾಖೆ ಅಧಿಕಾರಿ ಮತ್ತು ತಾಲೂಕಿ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರ್ವ ಸಿದ್ಧತೆಗಳು ನಡೆಸುವಂತೆ ತಿಳಿಸಿದರು.
ಏಪ್ರಿಲ್ 5 ಮತ್ತು 6 ರಂದು ಎರಡು ದಿನಗಳು ಉತ್ಸವ ನಡೆಸಲು ತೀರ್ಮಾನಿಸಿದರೂ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಮೂರು ದಿನಗಳ ಉತ್ಸವಕ್ಕೆ ತೀರ್ಮಾಸಲಾಗಿದೆ. ಸಂಸದ ಶ್ರೀ ಬಿ.ವೈ.ರಾಘವೇಂದ್ರ, ಮುಖಂಡರಾದ ಶ್ರೀ ಭದ್ರಾಪುರ ಹಾಲಪ್ಪ, ಶ್ರೀ ವಸಂತಗೌಡ, ಕೆ.ಎಸ್.ಗುರುಮೂರ್ತಿ ಹಾಗೂ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

‘ಸಕಾಲ’ ಸೇವೆಗೆ ಸೇವಾ ಖಾತ್ರಿ ಮಸೂದೆ: ಯೋಗೀಶ್ ಭಟ್

ಮಂಗಳೂರು,ಮಾರ್ಚ್.01 (ಕರ್ನಾಟಕ ವಾರ್ತೆ):-ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಕ್ಕಿಗೆ ಆದ್ಯತೆ ಮತ್ತು ಅಧಿಕಾರಿಗಳು ಸಕಾಲದಲ್ಲಿ ಕರ್ತವ್ಯ ನಿರ್ವಹಿಸಲು ಪೂರಕವಾಗಿ ಜನಸ್ನೇಹಿ ವ್ಯವಸ್ಥೆಯ ಇನ್ನೊಂದು ಹೆಜ್ಜೆಯಾಗಿ ನಾಗರೀಕ ಸೇವಾ ಖಾತ್ರಿ ಮಸೂದೆ ಜಾರಿಯಾಗಿದೆ ಎಂದು ವಿಧಾನಸಭಾ ಉಪಸಭಾಧ್ಯಕ್ಷರಾದ ಶ್ರೀ ಎನ್ ಯೋಗೀಶ್ ಭಟ್ ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುರಸಭಾ ಸಭಾಂಗಣದಲ್ಲಿ ಕಾಯ್ದೆಯ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. 11 ಸರ್ಕಾರಿ ಇಲಾಖೆಗಳು 151 ಸೇವೆಗಳನ್ನು ನೀಡುವ ವಾಗ್ದಾನವನ್ನು ಸರ್ಕಾರ ಪ್ರಥಮ ಹಂತದಲ್ಲಿ ಜನರಿಗೆ ನೀಡಿದ್ದು, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಆಡಳಿತ ಕಾಲಮಿತಿಯೊಳಗೆ ಜನಸಾಮಾನ್ಯರಿಗೆ ಲಭಿಸುವಂತೆ ರೂಪಿಸಲಾಗಿದೆಯಲ್ಲದೆ, ಈ ಕಾಯಿದೆಯನ್ನು ಕಾನೂನು ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪ್ರಥಮ ಹಂತದಲ್ಲಿ ರಾಜ್ಯದ ದಕ್ಷಿಣ ಕನ್ನಡದಿಂದ ಪುತ್ತೂರು, ಬೀದರ್ ನಿಂದ ಔರಾದ್ ಮತ್ತು ಚಿತ್ರದುರ್ಗದಿಂದ ಚಿತ್ರದುರ್ಗ ತಾಲೂಕು ಮತ್ತು ಧಾರವಾಡದಿಂದ ಧಾರವಾಡ ತಾಲೂಕುಗಳನ್ನು ಆರಿಸಲಾಗಿದ್ದು, ಜನಸೇವೆ ಮತ್ತು ಕರ್ತವ್ಯಪ್ರಜ್ಞೆ ಮೆರೆಯಲು ಆಡಳಿತಕ್ಕೆ ಉತ್ತಮ ಅವಕಾಶ ಎಂದರು.
ಲಾಂಛನ ಮತ್ತು ಧ್ಯೇಯವಾಕ್ಯಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು, ಸೇವೆಗೆ ಸಿದ್ಧ, ಕಾಲಕ್ಕೆ ಬದ್ಧಎಂಬ ಘೋಷವಾಕ್ಯ ಅನುಷ್ಠಾನಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಜನರಿಗೆ ಇದುವರೆಗೆ ಆಗುತ್ತಿದ್ದ ತೊಂದರೆಗಳಿಂದ ಮುಕ್ತಿ ಸಿಗಲಿದೆ ಎಂದರು. ಜನಪರ ನೂತನ ಅಧಿನಿಯಮವನ್ನು ರೂಪಿಸಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಸಂಸದರು, ಮುಂದಿನ ದಿನಗಳಲ್ಲಿ ಈ ಕಾಯಿದೆಯಿಂದ ಜನರು ನೆರವನ್ನು ಪಡೆಯಲಿ ಎಂದು ಹಾರೈಸಿದರು. ಯಾವಗಲೂ ಜನರೊಂದಿಗೆ ಇದ್ದ ಮುಖ್ಯಮಂತ್ರಿಗಳಿಗೆ ಜನರ ನೋವು ನಲಿವುಗಳ ಅರಿವಿದ್ದು ಅವರ ಸಮಸ್ಯೆಗಳಿಗೆ ತಕ್ಕಮಟ್ಟಿಗೆ ಇತಿಶ್ರೀ ಹಾಡಲು ಈ ಕಾಯಿದೆಗೆ ಸಾಧ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಅವರು, ಈ ಕಾಯಿದೆಯಿಂದ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಉಪಯೋಗವಾಗಲಿದೆ; ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಇದು ಸೂಕ್ತ ಕಾಯಿದೆ ಎಂದ ಅವರು, ಜನರ ದೂರು ದುಮ್ಮಾನಕ್ಕೆ ಉತ್ತರ ಕೊಡಲೇ ಬೇಕಾದ ಈ ಕಾಯಿದೆಯಿಂದ ಗ್ರಾಮೀಣರಿಗೆ ನೆರವಾಗಲಿದೆ. ಪುತ್ತೂರು ತಾಲೂಕಿನ ಆಯ್ಕೆ ಸೂಕ್ತವಾಗಿದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.
ಕರ್ನಾಟಕ ನಾಗರಿಕ ಸೇವಾ ಖಾತ್ರಿ ಮಸೂದೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಭಾರ ಜಿಲ್ಲಾಧಿಕಾರಿ ಶ್ರೀ ಕೆ ಎ ದಯಾನಂದ ಅವರು, ಕಾಯಿದೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಹಾಗೂ ಸೂಕ್ತ ತರಬೇತಿ ನೀಡಲಾಗುವುದು ಎಂದರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಪೈಲಟ್ ಯೋಜನೆಯಡಿ ಆಯ್ಕೆಗೊಂಡ ತಾಲೂಕು ಹಾಗೂ ಏಪ್ರಿಲ್ ನಿಂದ ಎಲ್ಲ ಜಿಲ್ಲೆಗಳಲ್ಲಿ ಆರಂಭವಾಗುವ ಯೋಜನೆಯನ್ನು ರಾಜ್ಯಕ್ಕೇ ಮಾದರಿಯಾಗಿ ದಕ್ಷಿಣ ಕನ್ನಡದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶೈಲಜಾ ಭಟ್, ಪುರಸಭೆ ಅಧ್ಯಕ್ಷರಾದ ಶ್ರೀಮತಿ ಕಮಲಾ ಆನಂದ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಡಿ ಶಂಭು ಭಟ್, ಪೂಡಾ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಜಿ,ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ ಕೆ ಎನ್ ವಿಜಯಪ್ರಕಾಶ್, ಸಹಾಯಕ ಪೊಲೀಸ್ ಅಧೀಕ್ಷಕರಾದ ಎ ಎನ್ ಅನುಚೇತ್ ಉಪಸ್ಥಿತರಿದ್ದರು. ಪುತ್ತೂರು ತಹಸೀಲ್ದಾರ್ ಡಾ ಎಂ ದಾಸೇಗೌಡ ಸ್ವಾಗತಿಸಿದರು. ಶಿವಲಿಂಗ ಕೊಂಡಕುಳಿ ವಂದನಾರ್ಪಣೆ ಮಾಡಿದರು. ಕಾರ್ಮಿಕ ಇಲಾಖೆಯ ಶ್ರೀ ಚಿದಾನಂದ ಕಾರ್ಯಕ್ರಮ ನಿರೂಪಿಸಿದರು.

ಮಹಿಳೆ ನಾಪತ್ತೆ

ಚಿಕ್ಕಮಗಳೂರು, ಮಾ.01: ಚಿಕ್ಕಮಗಳೂರು ತಾಲ್ಲೂಕಿನ ನರಗನಹಳ್ಳಿ ಗ್ರಾಮದ ಗೌರಮ್ಮ (53 ವರ್ಷ) ಎಂಬ ಮಹಿಳೆ ಫೆ.19ರಂದು ನಾಪತ್ತೆಯಾಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಅಂಗಳದಲ್ಲಿ ಮಗುವನ್ನು ಆಡಿಸುತ್ತಿದ್ದ ಗೌರಮ್ಮ, ಬಳಿಕ ಮಗುವನ್ನು ಅಲ್ಲಿಯೇ ಬಿಟ್ಟು ಕಾಣೆಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಟ್ಟಡ ಅವಶೇಷ ಸುರಿದರೆ ಕ್ರಿಮಿನಲ್ ಮೊಕದ್ದಮೆ

ಚಿಕ್ಕಮಗಳೂರು, ಮಾ.01: ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಹಳೆಯ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿರುವ ಮಾಲೀಕರು ಕಟ್ಟಡಗಳನ್ನು ತೆರವುಗೊಳಿಸಿದ ನಂತರ ಅವಶೇಷಗಳನ್ನು ನಗರದ ರಸ್ತೆಗಳ ಬದಿಗಳಲ್ಲಿ, ನಗರದ ಹೊರವಲಯಗಳಲ್ಲಿ (ಗವನಹಳ್ಳಿ ರಸ್ತೆ, ಕೋಟೆಕೆರೆ, ದಂಟರಮಕ್ಕಿ ಕೆರೆ ಏರಿ, ಕಣಿವೆ ಕ್ರಾಸ್) ಹಾಗೂ ಉದ್ಯಾನವನಗಳಲ್ಲಿ ಸುರಿಯುತ್ತಿರುವುದು ಕಂಡುಬಂದಿರುತ್ತದೆ. ಇದರಿಂದ ನಗರದ ಸೌಂದರ್ಯ ಮತ್ತು ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕಟ್ಟಡ ನಿರ್ಮಿಸುತ್ತಿರುವ ಮಾಲೀಕರು ಕಟ್ಟಡಗಳ ಅವಶೇಷಗಳನ್ನು ಚಿಕ್ಕಮಗಳೂರು ನಗರಸಭೆಯ ಘನತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ಇಂದಾವರ ಗ್ರಾಮದ ನೆಲಭರ್ತಿ ಸ್ಥಳದಲ್ಲಿ(ಲ್ಯಾಂಡ್ಫಿಲ್ ಸೈಟ್) ಹಾಗೂ ಗೌರಿಕಾಲುವೆ ಸ.ನಂ.34ರ ಪಕ್ಕದಲ್ಲಿರುವ ಕರಾಬು ಜಾಗದಲ್ಲಿರುವ ಗುಂಡಿಗೆ ಸುರಿಯಬೇಕು. ಈ ಎರಡು ಸ್ಥಳಗಳನ್ನು ಹೊರತುಪಡಿಸಿ ನಗರವ್ಯಾಪ್ತಿಯ ಬೇರೆ ಯಾವುದೇ ಸ್ಥಳದಲ್ಲಿ ಕಟ್ಟಡ ಅವಶೇಷಗಳನ್ನು ಅಥವಾ ಇನ್ನಾವುದೇ ತ್ಯಾಜ್ಯಗಳನ್ನು ಸುರಿಯುವುದು ಕಂಡುಬಂದಲ್ಲಿ ಅಂತಹ ಮಾಲೀಕರ ಮೇಲೆ ಹಾಗೂ ವಾಹನಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ರೂ.10000/-ದಂಡ ವಿಧಿಸಲಾಗುವುದು.
ಸಾರ್ವಜನಿಕರು ತ್ಯಾಜ್ಯ ಸುರಿಯುವ ವಾಹನಗಳು ಕಂಡುಬಂದಲ್ಲಿ ವಾಹನ ಸಂಖ್ಯೆಯೊಂದಿಗೆ ದೂರವಾಣಿ ಸಂಖ್ಯೆ.232222 ಗೆ ಕರೆ ಮಾಡಿ ದೂರು ದಾಖಲಿಸಿ ನಗರದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಪೌರಾಯುಕ್ತ ಹೆಚ್.ಜಿ.ಪ್ರಭಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ನಾಮಪತ್ರಗಳು ತಿರಸ್ಕೃತ

ಚಿಕ್ಕಮಗಳೂರು, ಮಾ.1: ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆದು, ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ಪಕೇತರರಾಗಿ ನಾಮಪತ್ರ ಸಲ್ಲಿಸಿದ್ದ ಮುನಿಯಾ ಭೋವಿ ಹಾಗೂ ಮಂಚೇಗೌಡ ಎಂಬವರ ನಾಮಪತ್ರಗಳು ತಿರಸ್ಕೃತಗೊಂಡಿವೆ. ಉಳಿದ 21 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. 2012ರ ಮಾರ್ಚ್ 3ರಂದು ನಾಮಪತ್ರ ಹಿಂದೆ ಪಡೆಯಲು ಅಂತಿಮ ದಿನವಾಗಿರುತ್ತದೆ. ಮತದಾನವು 2012ರ ಮಾರ್ಚ್ 18 ರಂದು ನಡೆಯಲಿದೆಯೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ. ಎಂ.ಟಿ.ರೇಜು ತಿಳಿಸಿರುತ್ತಾರೆ.

ದುಪಯೋಗ ಪಡೆದುಕೊಳ್ಳಲು ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಕೋರಿದ್ದಾರೆ.